Home Blog Page 101

ಖಾಸಗಿ ದ್ವಿಚಕ್ರ ವಾಹನ ಮಾಲೀಕರಿಗೆ ಬೈಕ್ ಟ್ಯಾಕ್ಸಿ ನಡೆಸಲು ಅವಕಾಶ ನೀಡಿ; ರಾಜ್ಯಗಳಿಗೆ ಗಡ್ಕರಿ ಮನವಿ!

0

ನವದೆಹಲಿ: ಖಾಸಗಿ ದ್ವಿಚಕ್ರ ವಾಹನ ಮಾಲೀಕರಿಗೆ ಬೈಕ್ ಟ್ಯಾಕ್ಸಿ ಸೇವೆ ನಿರ್ವಹಿಸಲು ಅವಕಾಶ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.

ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಖಾಸಗಿ ದ್ವಿಚಕ್ರ ವಾಹನಗಳ ಮೂಲಕ ಪ್ರಯಾಣಿಕರನ್ನು ಸಾಗಿಸುವ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಲಾಗಿದೆಯಾದರೂ, ಕೆಲ ರಾಜ್ಯಗಳಲ್ಲಿ ಇಂತಹ ಸೇವೆಗಳಿಗೆ ಇನ್ನೂ ಅವಕಾಶ ನೀಡಿಲ್ಲ ಎಂದು ಗಡ್ಕರಿ ತಿಳಿಸಿದ್ದಾರೆ. ಸಾರಿಗೆ ಸೌಲಭ್ಯ ರಾಜ್ಯಗಳ ವ್ಯಾಪ್ತಿಗೆ ಬರುವ ವಿಷಯವಾಗಿರುವುದರಿಂದ, ತಮ್ಮ ತಮ್ಮ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ಜಾರಿಗೆ ತರಬೇಕೇ ಅಥವಾ ಬೇಡವೇ ಎಂಬುದನ್ನು ರಾಜ್ಯ ಸರ್ಕಾರಗಳೇ ನಿರ್ಧರಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಸೀಮಿತವಾಗಿರುವ ಹಿನ್ನೆಲೆಯಲ್ಲಿ, ಬೈಕ್ ಟ್ಯಾಕ್ಸಿ ಸೇವೆ ಜನರಿಗೆ ಹೊಸ ಆದಾಯದ ಮೂಲವಾಗಬಹುದೆಂದೂ, ಖಾಸಗಿ ದ್ವಿಚಕ್ರ ವಾಹನಗಳನ್ನು ಬಳಸಿಕೊಂಡು ಜನರು ಹೆಚ್ಚುವರಿ ಆದಾಯ ಗಳಿಸಲು ಇದು ಸಹಕಾರಿಯಾಗಲಿದೆಯೆಂದೂ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ಬೈಕ್ ಟ್ಯಾಕ್ಸಿ ಸೇವೆಗಳನ್ನು ಉತ್ತೇಜಿಸುವುದರಿಂದ ಸುಮಾರು 8 ಕೋಟಿ ಜನರಿಗೆ ಉದ್ಯೋಗ ಸಿಗುವ ಸಾಧ್ಯತೆಯಿದೆಯೆಂದೂ, ಉದ್ಯೋಗಾವಕಾಶಗಳು ಕಡಿಮೆ ಇರುವ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆಯೆಂದೂ ಅವರು ಸಲಹೆ ನೀಡಿದ್ದಾರೆ.

ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಲು ಅಗತ್ಯವಿರುವ ಪರವಾನಗಿ, ವಿಮೆ ಹಾಗೂ ಇತರ ನಿಯಮಗಳು ಆಯಾ ರಾಜ್ಯಗಳ ಕಾನೂನು ಮತ್ತು ನಿಯಮಾವಳಿಗಳ ಮೇಲೆ ಅವಲಂಬಿತವಾಗಿರುವುದರಿಂದ, ಕೇಂದ್ರ ಸಚಿವರ ಹೇಳಿಕೆಯ ಆಧಾರದ ಮೇಲೆ ದೇಶದ ಎಲ್ಲ ರಾಜ್ಯಗಳಲ್ಲೂ ತಕ್ಷಣವೇ ಬೈಕ್ ಟ್ಯಾಕ್ಸಿಗೆ ಅನುಮತಿ ದೊರೆಯುತ್ತದೆ ಎಂದು ಭಾವಿಸುವುದು ಸರಿಯಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಮುಂದುವರಿದು ಮಾತನಾಡಿದ ಗಡ್ಕರಿ, ಸಂಚಾರ ನಿಯಮಗಳನ್ನು ಪದೇಪದೇ ಉಲ್ಲಂಘಿಸುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. ಚಾಲಕರಿಗೆ ಸುರಕ್ಷಿತ ವಾಹನ ಚಾಲನೆಯ ಕುರಿತು ಸೂಕ್ತ ಶಿಕ್ಷಣ ಮತ್ತು ತರಬೇತಿ ನೀಡುವ ಅಗತ್ಯವಿದೆಯೆಂದೂ, ವಿಶೇಷವಾಗಿ ಭಾರಿ ವಾಹನಗಳು ಹಾಗೂ ನಿರ್ಮಾಣ ಕಾಮಗಾರಿಗಳಲ್ಲಿ ಬಳಸುವ ಉಪಕರಣಗಳ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಸ್ತುತ ಸಮರ್ಪಕ ತರಬೇತಿ ವ್ಯವಸ್ಥೆ ಇಲ್ಲ ಎಂದೂ ಕೇಂದ್ರ ಸಚಿವರು ಒತ್ತಿ ಹೇಳಿದ್ದಾರೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ನೀರಿನಡಿ ಅಡಗಿದ ರೌಡಿಶೀಟರ್ ಬಂಧನ

0

ಶಿವಮೊಗ್ಗ: ಪೊಲೀಸರಿಂದ ತಪ್ಪಿಸಿಕೊಳ್ಳಲು ರೌಡಿಶೀಟರ್‌ ಒಬ್ಬ ಹಳ್ಳದ ನೀರಿನಲ್ಲಿ ಸುಮಾರು ಅರ್ಧಗಂಟೆ ಮುಳುಗಿ ಅಡಗಿದ್ದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಮಹಾಭಾರತದ ಯುದ್ಧದ ಕೊನೆಯ ದಿನ ಪಾಂಡವರಿಂದ ತಪ್ಪಿಸಿಕೊಳ್ಳಲು ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಅಡಗಿದ್ದ ಪ್ರಸಂಗವನ್ನು ನೆನಪಿಸುವಂತಿರುವ ಈ ಘಟನೆ ಇದೀಗ ಗಮನ ಸೆಳೆದಿದೆ.

ಭದ್ರಾವತಿಯ ರೌಡಿಶೀಟರ್‌ ದಿಲೀಪ್ ಅಲಿಯಾಸ್ ಕರಿಯಾ ನೀರಿನಲ್ಲಿ ಅಡಗಿದ್ದ ವ್ಯಕ್ತಿ. ಈತನ ವಿರುದ್ಧ ಕಳ್ಳತನ, ಕೊಲೆ ಯತ್ನ ಸೇರಿದಂತೆ 16 ಪ್ರಕರಣಗಳಿವೆ. ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಮೂರು ಬಾರಿ ವಾರಂಟ್ ಜಾರಿಯಾಗಿತ್ತು. ಹೀಗಾಗಿ ಸೆಪ್ಟೆಂಬರ್ 2ರಂದು ನ್ಯೂ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ಆತನ ಬಂಧನಕ್ಕೆ ತೆರಳಿದ್ದರು.

ಪೊಲೀಸರು ಬರುತ್ತಿರುವ ಮಾಹಿತಿ ತಿಳಿದ ದಿಲೀಪ್ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಭಂಡಾರಹಳ್ಳಿಯ ಹಳ್ಳದ ಬಳಿ ಆತ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದರೂ ದಿಲೀಪ್ ಪತ್ತೆಯಾಗಿರಲಿಲ್ಲ.

ಈ ವೇಳೆ ಹಳ್ಳದಲ್ಲಿ ಕಳೆ ಸರಿದಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಅನುಮಾನಗೊಂಡ ನ್ಯೂ ಟೌನ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ರಮೇಶ್ ಹಾಗೂ ಸಿಬ್ಬಂದಿ ಪ್ರಸನ್ನ ಹಳ್ಳಕ್ಕೆ ಇಳಿದು ಪರಿಶೀಲನೆ ನಡೆಸಿದ್ದಾರೆ. ನೀರಿನ ಅಡಿಯಿಂದ ಗುಳ್ಳೆಗಳು ಬರುತ್ತಿರುವುದು ಗಮನಕ್ಕೆ ಬಂದಿದ್ದು, ಪೊಲೀಸರು ಸುತ್ತುವರಿದು ದಿಲೀಪ್ ಅಲಿಯಾಸ್ ಕರಿಯಾನನ್ನು ಹಿಡಿದಿದ್ದಾರೆ.

ಬಳಿಕ ಹಳ್ಳದಲ್ಲೇ ಆತನ ಕೈಗೆ ಕೋಳ ತೊಡಿಸಿ ದಂಡೆಯ ಮೇಲೆ ಕರೆತರಲಾಗಿದೆ. ನ್ಯೂ ಟೌನ್ ಠಾಣೆ ಪೊಲೀಸರ ಕಾರ್ಯಾಚರಣೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ನನ್ನ ಬಗ್ಗೆ ಮಾತನಾಡಲು ಕುಮಾರಸ್ವಾಮಿಗೆ ಏನೂ ಇಲ್ಲ, ಅವರ ಬಗ್ಗೆ ಹೇಳಲು ಸಾವಿರ ಇದೆ: ಚೆಲುವರಾಯಸ್ವಾಮಿ

ಬೆಂಗಳೂರು: ಎಚ್.ಡಿ. ಕುಮಾರಸ್ವಾಮಿಗೆ ಗುಂಡಿಗೆ ಇದ್ದರೆ ಯಾರ ಮನೆ ಬಾಗಿಲನ್ನು ಯಾರು ಬಡಿದರು ಎಂಬ ಚರ್ಚೆಗೆ ತಮ್ಮ ಜೊತೆ ಬರುವಂತೆ ಸಚಿವ ಚೆಲುವರಾಯಸ್ವಾಮಿ ಸವಾಲು ಹಾಕಿದ್ದಾರೆ. ರಾತ್ರಿ 9 ಗಂಟೆಗೆ ಹೋಗಿ ಯಾರ ಮನೆ ಬಾಗಿಲು ಬಡಿದರು ಎಂಬ ಕುಮಾರಸ್ವಾಮಿ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಚೆಲುವರಾಯಸ್ವಾಮಿ, ಕುಮಾರಸ್ವಾಮಿಗೆ ಗುಂಡಿಗೆ ಇದ್ದರೆ ತಮ್ಮ ಜೊತೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಎರಡು ದಿನ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದ ಅವರು,

ಆ ಸಂದರ್ಭದಲ್ಲಿ ದೇವೇಗೌಡರು ಅಧಿವೇಶನ ಆರಂಭಕ್ಕೂ ಮುನ್ನ ಬೆಳಗ್ಗೆ 10 ಗಂಟೆ ಒಳಗೆ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಬರುವಂತೆ ತಮಗೆ ಜವಾಬ್ದಾರಿ ವಹಿಸಿದ್ದರೆಂದೂ, ಆ ಸಂದರ್ಭದಲ್ಲಿ ತಾವೇ ಕುಮಾರಸ್ವಾಮಿ ಅವರ ಮನೆ ಬಾಗಿಲು ಬಡಿದಿದ್ದಾಗಿಯೂ ತಿಳಿಸಿದರು. ಅದು ತಪ್ಪಾಗಿದ್ದರೆ ಕುಮಾರಸ್ವಾಮಿ ಸ್ಪಷ್ಟನೆ ನೀಡಲಿ, ಆ ಎರಡು ದಿನ ಅವರು ಎಲ್ಲಿ ಕಾಣೆಯಾಗಿದ್ದರು ಎಂದು ಚೆಲುವರಾಯಸ್ವಾಮಿ ಪ್ರಶ್ನಿಸಿದರು.

ತಮ್ಮ ಬಗ್ಗೆ ಮಾತನಾಡಲು ಕುಮಾರಸ್ವಾಮಿ ಬಳಿ ಏನೂ ಇಲ್ಲವೆಂದೂ, ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಲು ತಮ್ಮ ಬಳಿ ಸಾಕಷ್ಟಿದೆಯೆಂದೂ ಹೇಳಿದ ಚೆಲುವರಾಯಸ್ವಾಮಿ, ಧೈರ್ಯವಿದ್ದರೆ ವಿಧಾನಸೌಧದಲ್ಲಿ ಅಥವಾ ಅವರು ಸೂಚಿಸುವ ಟಿವಿ ಚಾನೆಲ್‌ನಲ್ಲಿ ಚರ್ಚೆಗೆ ಬರುವಂತೆ ಸವಾಲು ಹಾಕಿದರು. ತಾವು ದೆಹಲಿಗೆ ತೆರಳಿದ್ದು ನೀರಾವರಿ ಯೋಜನೆ ಮತ್ತು ಕುಡಿಯುವ ನೀರಿನ ಕುರಿತು ಜಲಶಕ್ತಿ ಸಚಿವರು ನಡೆಸಿದ ಸಭೆಗಾಗಿ ಎಂದು ಸ್ಪಷ್ಟಪಡಿಸಿದ ಅವರು,

ಈ ಸಭೆಯನ್ನು ಪ್ರಧಾನಮಂತ್ರಿಗಳೇ ಉದ್ದೇಶಿಸಿ ಮಾತನಾಡಿದ್ದರೆಂದೂ, ಈ ವಿಷಯ ಕ್ಯಾಬಿನೆಟ್ ಸಚಿವರಿಗೂ ಗೊತ್ತಿಲ್ಲವೆಂದೂ ಹೇಳಿದರು. ವಾರಕ್ಕೆ ಮೂರು ದಿನ ರಾಜ್ಯದಲ್ಲೇ ಇರುತ್ತೇನೆಂದೂ, ನೀರು ಬಿಡಿಸಲು ದೆಹಲಿಗೆ ಹೋಗಿಲ್ಲವೆಂದೂ ಸ್ಪಷ್ಟಪಡಿಸಿದ ಚೆಲುವರಾಯಸ್ವಾಮಿ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ದೆಹಲಿಯಲ್ಲಿ ಕುಳಿತು ನೀರು ಬಿಡಿಸುತ್ತಿದ್ದುದರಿಂದಲೇ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿ, ಮಾಜಿ ಸಿಎಂ ಆದವರು ಮಾತನಾಡುವ ರೀತಿ ಹೀಗಿರಬಾರದು ಎಂದು ಕಿಡಿಕಾರಿದರು.

‘ಘೋಷಣೆ ಬಿಟ್ಟು ಮಕ್ಕಳ ಧ್ವನಿ ಕೇಳಿ’: ಶಾಲಾ ಛಾವಣಿ ಕುಸಿತಕ್ಕೆ ಕಾಂಗ್ರೆಸ್ ವಿರುದ್ಧ ಅಶೋಕ್ ಕಿಡಿ

0

ಬೆಂಗಳೂರು: ಭಾರತಕ್ಕೆ ‘ನ್ಯಾಯ’ದ ಬಗ್ಗೆ ಉಪದೇಶ ನೀಡುವ ಪಕ್ಷಕ್ಕೆ ಒಂದು ಸುರಕ್ಷಿತ ತರಗತಿ ಕೊಠಡಿಯನ್ನೇ ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ಶಾಲಾ ಮೇಲ್ಛಾವಣಿ ಕುಸಿತ ಪ್ರಕರಣ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಶೋಕ್, ಕರ್ನಾಟಕದ ಈ ‘ಖಟಾಖಟ್ ರೂಫ್’ ಶಾಲೆಯಲ್ಲಿ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮ ನಡೆಸುವ ಬಗ್ಗೆ ಏನು ಹೇಳುತ್ತೀರಿ ಎಂದು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ. ನ್ಯಾಯದ ಭಾಷಣ ಮಾಡಿ, ಗ್ಯಾರಂಟಿಗಳನ್ನು ಮಾರಾಟ ಮಾಡಿ, ಖಟಾಖಟ್ ಎಂದು ಕೂಗಿದ ರಾಹುಲ್ ಗಾಂಧಿ ಈಗ ಬಂದು ವಿದ್ಯಾರ್ಥಿಗಳ ಮಾತುಗಳನ್ನು ಕೇಳಬೇಕು ಎಂದು ಆಗ್ರಹಿಸಿದ ಅಶೋಕ್,

ಬಾಗಲಕೋಟೆಯಲ್ಲಿ ಮಕ್ಕಳು ತರಗತಿಯಲ್ಲಿ ಕುಳಿತಿದ್ದಾಗಲೇ ಶಾಲೆಯ ಛಾವಣಿ ಕುಸಿದುಬಿದ್ದಿದೆ ಎಂದು ಆರೋಪಿಸಿದರು. ಇವರೇನೂ ಅಂಕಿ-ಅಂಶಗಳಲ್ಲ, ಪುಟ್ಟ ಮಕ್ಕಳು ಎಂದು ಹೇಳಿದ ಅವರು, ಇದು ಯಾವುದೋ ಮೂರನೇ ಜಗತ್ತಿನ ಮರೆತುಹೋದ ಮೂಲೆಯಲ್ಲ, ಇದು ಕಾಂಗ್ರೆಸ್ ಆಡಳಿತದ ಕರ್ನಾಟಕ ಎಂದು ಟೀಕಿಸಿದರು.

ಭಾರತಕ್ಕೆ ನ್ಯಾಯದ ಬಗ್ಗೆ ಪಾಠ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ವಿದ್ಯಾರ್ಥಿಗಳಿಗೆ ಸುರಕ್ಷಿತ ತರಗತಿ ಕೊಠಡಿ ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದ ಅಶೋಕ್, ಗ್ಯಾರಂಟಿಗಳ ಬಗ್ಗೆ ಮಾತನಾಡುವ ಸರ್ಕಾರಕ್ಕೆ ಮಕ್ಕಳ ತಲೆಯ ಮೇಲಿನ ಶಾಲಾ ಮೇಲ್ಛಾವಣಿಯನ್ನೇ ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ಷೇಪಿಸಿದರು. ರಾಹುಲ್ ಗಾಂಧಿ ಅವರು ವೇದಿಕೆ, ಘೋಷಣೆ ಹಾಗೂ ಸಿದ್ಧಪಡಿಸಿದ ಭಾಷಣಗಳನ್ನು ಬದಿಗಿಟ್ಟು ಕರ್ನಾಟಕಕ್ಕೆ ಬಂದು ಈ ಶಾಲೆಯಲ್ಲಿ ನಿಂತು ಮಕ್ಕಳ ಧ್ವನಿಯನ್ನು ಆಲಿಸಬೇಕು ಎಂದು ಆಗ್ರಹಿಸಿದರು.

ವಿಚ್ಛೇದನದ ಬೆನ್ನಲ್ಲೆ ಅಭಿಮಾನಿಗಳಲ್ಲಿ ಮನವಿ ಮಾಡಿದ ದುನಿಯಾ ವಿಜಯ್

ಬೆಂಗಳೂರು: ದುನಿಯಾ ವಿಜಯ್ ಹಾಗೂ ನಾಗರತ್ನ ಅವರ ದಾಂಪತ್ಯಕ್ಕೆ ನ್ಯಾಯಾಲಯದ ಮೂಲಕ ಅಧಿಕೃತ ಅಂತ್ಯ ಸಿಕ್ಕಿದೆ. ಸುದೀರ್ಘ ಕಾನೂನು ಹೋರಾಟದ ಬಳಿಕ ಹೈಕೋರ್ಟ್ ವಿಭಾಗೀಯ ಪೀಠ ವಿಚ್ಛೇದನ ಮಂಜೂರು ಮಾಡಿದ್ದು, ನಾಗರತ್ನ ಅವರಿಗೆ ₹2 ಕೋಟಿ ಜೀವನಾಂಶ ನೀಡುವಂತೆ ವಿಜಯ್ ಅವರಿಗೆ ಆದೇಶಿಸಿದೆ. ತೀರ್ಪಿನ ಬಳಿಕ ನಟ ದುನಿಯಾ ವಿಜಯ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಭಾವನಾತ್ಮಕ ಹೇಳಿಕೆ ಹಂಚಿಕೊಂಡಿದ್ದಾರೆ.

ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇನೆ ಎಂದು ಹೇಳಿರುವ ವಿಜಯ್, ಆದೇಶಕ್ಕೆ ಶಿರಸಾಷ್ಟಾಂಗ ಪ್ರಣಾಮಗಳೊಂದಿಗೆ ಶರಣಾಗಿದ್ದೇನೆ ಎಂದು ತಿಳಿಸಿದ್ದಾರೆ. ಕಾನೂನಿನ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ ಎಂದಿರುವ ಅವರು, ತಮ್ಮ ಮೇಲಿನ ಮಾನಸಿಕ ಕ್ರೌರ್ಯವನ್ನು ಪರಿಗಣಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಹಾಗೂ ಶಾಂತಿಭೂಷಣ್ ಅವರಿಗೆ ಗೌರವಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.

ತಮ್ಮ ಪರ ವಾದ ಮಂಡಿಸಿದ ಹಿರಿಯ ಕೌನ್ಸಿಲ್ ಶ್ರೀವತ್ಸ ಹಾಗೂ ಯುಕ್ತ ಅನಿಲ್ ಅವರಿಗೂ ವಿಜಯ್ ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಮುಂದೆ ಮಾಧ್ಯಮ ಅಥವಾ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಹೆಣ್ಣುಮಕ್ಕಳು ವಯಸ್ಕರಾಗಿದ್ದು, ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನ ಹೊಂದಿದ್ದಾರೆ. ಅವರಿಗೆ ಯಾವುದೇ ಮುಜುಗರವಾಗಬಾರದು ಎಂಬ ಉದ್ದೇಶದಿಂದ ತಮ್ಮ ವೈಯಕ್ತಿಕ ಸಾಂಸಾರಿಕ ವಿಚಾರಕ್ಕೆ ನ್ಯಾಯಾಲಯ ನೀಡಿರುವ ಆದೇಶವನ್ನು ಆತ್ಮಸಾಕ್ಷಿಯಿಂದ ಸ್ವೀಕರಿಸಿದ್ದೇನೆ ಎಂದು ವಿಜಯ್ ಹೇಳಿದ್ದಾರೆ. ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿರುವುದಾಗಿ ತಿಳಿಸಿರುವ ಅವರು, ಅಭಿಮಾನಿಗಳ ಆಶೀರ್ವಾದ ಹಾಗೂ ಹಾರೈಕೆ ಕೋರಿದ್ದಾರೆ.

1999ರಲ್ಲಿ ನಾಗರತ್ನ ಅವರನ್ನು ವಿವಾಹವಾಗಿದ್ದ ದುನಿಯಾ ವಿಜಯ್ ಅವರಿಗೆ ಮೂವರು ಮಕ್ಕಳಿದ್ದಾರೆ. ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ 2013ರಲ್ಲಿ ಮೊದಲ ಬಾರಿಗೆ ವಿಚ್ಛೇದನ ಅರ್ಜಿ ಸಲ್ಲಿಸಿ, ಬಳಿಕ ಅದನ್ನು ಹಿಂಪಡೆದಿದ್ದರು. 2018ರಲ್ಲಿ ಮಾನಸಿಕ ಕ್ರೌರ್ಯ ಆಧಾರದ ಮೇಲೆ ಮತ್ತೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು.

2024ರಲ್ಲಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ತೀರ್ಪಿನಿಂದಾಗಿ ದುನಿಯಾ ವಿಜಯ್ ಹಾಗೂ ನಾಗರತ್ನ ಅವರ ನಡುವಿನ ಸುದೀರ್ಘ ಕಾನೂನು ಹೋರಾಟ ಅಂತ್ಯಗೊಂಡಿದೆ.

ಸ್ಟಾಲಿನ್ʼಗೆ ಹಿನ್ನಡೆ: TVK ಶಾಸಕ ವಿ.ಎಸ್. ಬಾಬು ಗೆಲುವು ರದ್ದು ಕೋರಿದ್ದ ಅರ್ಜಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್!

0

ಚೆನ್ನೈ: ತಾನು ಪ್ರತಿನಿಧಿಸುತ್ತಿದ್ದ ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಶಾಸಕ ವಿ.ಎಸ್. ಬಾಬು ಅವರ ಗೆಲುವನ್ನು ಅಸಿಂಧುಗೊಳಿಸುವಂತೆ ಕೋರಿ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರಿದ್ದ ಪೀಠ, ಸ್ಟಾಲಿನ್ ಅವರ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು.

ಈಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಾಬು ಅವರು ಸ್ಟಾಲಿನ್ ಅವರನ್ನು 8,795 ಮತಗಳಿಂದ ಸೋಲಿಸಿದ್ದರು. ಬಾಬು 82,997 ಮತಗಳನ್ನು ಗಳಿಸಿದರೆ, ಸ್ಟಾಲಿನ್ 74,202 ಮತಗಳನ್ನು ಗಳಿಸಿದ್ದರು. 2011ರಲ್ಲಿ ಕೊಳತ್ತೂರು ಕ್ಷೇತ್ರ ರಚನೆಯಾದಾಗಿನಿಂದ ಸತತ ಮೂರು ಚುನಾವಣೆಗಳಲ್ಲಿ ಗೆದ್ದಿದ್ದ ಸ್ಟಾಲಿನ್, ಈ ಬಾರಿ ಮುಖಭಂಗ ಅನುಭವಿಸಿದ್ದರು.

ವಿವಿಪ್ಯಾಟ್, ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್‌ಗಳಲ್ಲಿ ದಾಖಲಾದ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳಿವೆಯೆಂದೂ, ಪರಿಶೀಲನೆ ವೇಳೆ ಇವಿಎಂಗಳಲ್ಲಿ ಕಂಡುಬಂದ ತಾಂತ್ರಿಕ ದೋಷಗಳನ್ನು ಚುನಾವಣಾ ಅಧಿಕಾರಿಗಳು ಬಗೆಹರಿಸಿಲ್ಲವೆಂದೂ ಆರೋಪಿಸಿ ಸ್ಟಾಲಿನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು. ಸ್ಟಾಲಿನ್ ಮೇ 7ರಂದು 14 ಇವಿಎಂ ಸೆಟ್‌ಗಳ ಪರಿಶೀಲನೆಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪರಿಶೀಲನಾ ಕಾರ್ಯ ಜುಲೈ 29ರಂದು ಆರಂಭಗೊಂಡು ಆಗಸ್ಟ್ 5ರಂದು ಪೂರ್ಣಗೊಂಡಿತ್ತು. ಚುನಾವಣಾ ಆಯೋಗದ ವಿಳಂಬ, ಚುನಾವಣೆಯನ್ನು ಪ್ರಶ್ನಿಸಲು ನಿಗದಿತ ಅವಧಿಯೊಳಗೆ ಕಾನೂನು ಪರಿಹಾರ ಅನುಸರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ ಎಂದು ಸ್ಟಾಲಿನ್ ವಾದಿಸಿದ್ದರು.

ATMಗೆ ಹಣ ತುಂಬಲು ತೆರಳುತ್ತಿದ್ದ ಬೊಲೆರೋಗೆ KSRTC ಬಸ್ ಡಿಕ್ಕಿ; ಸ್ಥಳದಲ್ಲೇ ವ್ಯಕ್ತಿ ಸಾವು

0

ಹಾಸನ: ಮಂಗಳೂರಿನಿಂದ ಬೆಂಗಳೂರಿನತ್ತ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಎಟಿಎಂಗಳಿಗೆ ಹಣ ತುಂಬಲು ತೆರಳುತ್ತಿದ್ದ ಬೊಲೆರೋ ಪಿಕಪ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪ ನಡೆದ ಅಪಘಾತದಲ್ಲಿ ದಿನೇಶ್ (38) ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಐಸಿಐಸಿಐ ಬ್ಯಾಂಕ್‌ಗೆ ಸೇರಿದ ಬೊಲೆರೋ ಪಿಕಪ್‌ನಲ್ಲಿ ಎಟಿಎಂಗಳಿಗೆ ಹಣ ತುಂಬಲು ತೆರಳಲಾಗುತ್ತಿತ್ತು. ಮಾರನಹಳ್ಳಿ ಬಳಿ ಬಸ್ ಹಾಗೂ ಪಿಕಪ್ ನಡುವೆ ಅಪಘಾತ ಸಂಭವಿಸಿದ್ದು, ವಾಹನದಲ್ಲಿದ್ದ ದಿನೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುಬ್ರಮಣ್ಯ, ವೆಂಕಟರಮಣ, ಜಿತೇಂದ್ರ ಮತ್ತು ದುರ್ಗಾಪ್ರಸಾದ್ ಗಾಯಗೊಂಡಿದ್ದು, ಇವರೆಲ್ಲರೂ ಕೊಡಗು ಹಾಗೂ ಮಂಗಳೂರು ಮೂಲದವರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಫುಟ್ ಪಾತ್ ಪಾದಚಾರಿಗಳಿಗಷ್ಟೇ ಮೀಸಲು; ಅತಿಕ್ರಮಣಕ್ಕೆ ಯಾವುದೇ ಅವಕಾಶವಿಲ್ಲ ಎಂದು ದೆಹಲಿ ಹೈಕೋರ್ಟ್

0

ನವದೆಹಲಿ: ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರು ನಡೆದುಹೋಗಲು ಮಾತ್ರ ನಿರ್ಮಿಸಲಾಗಿದ್ದು, ಅವುಗಳನ್ನು ಯಾವುದೇ ರೀತಿಯಲ್ಲಿ ಅತಿಕ್ರಮಿಸಲು ಅವಕಾಶವಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ದೆಹಲಿಯ ಬಸ್ತಿ ನಿವಾಸಿಗಳ ಗುಂಪಾದ ಲೋಹರ್ ಬಸ್ತಿ ಲಾಲ್ ಬಾಗ್ ಆಜಾದ್‌ಪುರ್ ವಿಕಾಸ್ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ಪೀಠ ಇತ್ತೀಚೆಗೆ ನಡೆಸಿತ್ತು. ಸಾರ್ವಜನಿಕ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ನಿರ್ಮಿಸಲಾಗಿದೆ ಎಂದು ಗುರುತಿಸಲಾದ ಕೆಲವು ಜೋಪಡಿಗಳ ತೆರವು ಕಾರ್ಯಾಚರಣೆಗೆ ತಡೆ ನೀಡಲು ನಿರಾಕರಿಸಿದ ಕೋರ್ಟ್, ಈ ಅಭಿಪ್ರಾಯ ವ್ಯಕ್ತಪಡಿಸಿತು.

ಜೋಪಡಿಗಳನ್ನು ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದ ಡೆಮಾಲಿಷನ್ ನೋಟಿಸ್ ಪ್ರಶ್ನಿಸಿ ವಿಕಾಸ್ ಸಮಿತಿ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ ಅರ್ಜಿದಾರರೇ ಪಾದಚಾರಿ ಮಾರ್ಗದ ಮೇಲೆ ಬಸ್ತಿಗಳನ್ನು ನಿರ್ಮಿಸಿರುವುದನ್ನು ಗಮನಿಸಿದ ಕೋರ್ಟ್, ತಕ್ಷಣದ ಪರಿಹಾರ ನೀಡಲು ನಿರಾಕರಿಸಿತಲ್ಲದೆ, ಪಾದಚಾರಿ ಮಾರ್ಗ ಪಾದಚಾರಿಗಳಿಗಷ್ಟೇ ಸೀಮಿತ ಎಂದು ಸ್ಪಷ್ಟಪಡಿಸಿತು.

ಪಾದಚಾರಿ ಮಾರ್ಗಗಳನ್ನು ವಾಹನ ಸಂಚಾರದಿಂದ ದೂರವಾಗಿ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕಾಗಿ ನಿರ್ಮಿಸಲಾಗುತ್ತದೆಯೇ ಹೊರತು ಅತಿಕ್ರಮಿಸಲು ಅಲ್ಲ ಎಂದು ಹೇಳಿದ ಕೋರ್ಟ್, ಈ ಕಾರಣಗಳಿಂದ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದಿತು.

ಆಗಸ್ಟ್ 7ರಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಹೊರಡಿಸಿದ್ದ ತೆರವು ನೋಟಿಸ್ ರದ್ದುಪಡಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು. ಜೋಪಡಿ ನಿವಾಸಿಗಳು ಸರ್ಕಾರಿ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿ ಜೋಪಡಿಗಳನ್ನು ನಿರ್ಮಿಸಿದ್ದಲ್ಲದೆ, ವಿವಿಧ ವ್ಯಾಪಾರ ಚಟುವಟಿಕೆಗಳನ್ನೂ ನಡೆಸುತ್ತಿದ್ದಾರೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಅದೇ ವೇಳೆ, ಬಸ್ತಿಯ ನಿವಾಸಿಗಳ ಸಮೀಕ್ಷೆ ನಡೆಸಿ, ಪುನರ್ವಸತಿಗೆ ಯಾರು ಅರ್ಹರು ಎಂಬುದನ್ನು ನಿರ್ಧರಿಸುವಂತೆ ಹಾಗೂ ಆ ಕ್ರಮಗಳನ್ನು ಕೈಗೊಳ್ಳುವವರೆಗೆ ತೆರವು ನೋಟಿಸ್ ಜಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಅರ್ಜಿದಾರರು ಮಧ್ಯಂತರ ನಿರ್ದೇಶನ ಕೋರಿದ್ದರು. ಆದರೆ ತೆರವು ನೋಟಿಸ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತು. ಆದಾಗ್ಯೂ, ಪುನರ್ವಸತಿ ಕುರಿತ ಅರ್ಜಿದಾರರ ಮನವಿಯನ್ನು 4 ವಾರಗಳೊಳಗೆ ಪರಿಗಣಿಸಿ ನಿರ್ಧಾರ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ನ್ಯಾಯಾಲಯ ನಿರ್ದೇಶನ ನೀಡಿತು. ಇದರ ಹೊರತಾಗಿ ಯಾವುದೇ ಪರಿಹಾರ ಅಥವಾ ಇತರೆ ಆದೇಶ ಪಡೆಯಲು ಅರ್ಜಿದಾರರು ಅರ್ಹರಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

‘ದುನಿಯಾ’ ವಿಜಯ್ – ನಾಗರತ್ನ ದಾಂಪತ್ಯ ಅಂತ್ಯ: 2 ಕೋಟಿ ರೂ. ಜೀವನಾಂಶ ನೀಡಲು ಕೋರ್ಟ್ ಆದೇಶ

ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ದುನಿಯಾ’ ವಿಜಯ್ ಹಾಗೂ ನಾಗರತ್ನ ಅವರ ನಡುವಿನ ಸುದೀರ್ಘ ವೈವಾಹಿಕ ವಿವಾದಕ್ಕೆ ಕರ್ನಾಟಕ ಹೈಕೋರ್ಟ್ ಅಂತಿಮ ತೀರ್ಪು ನೀಡಿದೆ. ಹೈಕೋರ್ಟ್ ವಿಭಾಗೀಯ ಪೀಠ ದಂಪತಿಗೆ ವಿಚ್ಛೇದನ ಮಂಜೂರು ಮಾಡಿದ್ದು, ನಾಗರತ್ನ ಅವರಿಗೆ ₹2 ಕೋಟಿ ಜೀವನಾಂಶ ನೀಡುವಂತೆ ನಟ ವಿಜಯ್ ಅವರಿಗೆ ಆದೇಶಿಸಿದೆ.

ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಹಲವು ವರ್ಷಗಳ ಕಾನೂನು ಹೋರಾಟಕ್ಕೆ ತೆರೆ ಎಳೆಯಲಾಗಿದೆ. ವಿಚಾರಣೆ ವೇಳೆ ಪತ್ನಿ ಹಾಗೂ ಮೂವರು ಮಕ್ಕಳ ಭವಿಷ್ಯವನ್ನು ನ್ಯಾಯಾಲಯ ಪ್ರಮುಖವಾಗಿ ಪರಿಗಣಿಸಿದೆ.

ವಿಜಯ್ ಅವರ ಪ್ರಸ್ತುತ ಸಾಮಾಜಿಕ ಸ್ಥಾನಮಾನ, ವೃತ್ತಿಜೀವನದಿಂದ ಬರುವ ಆದಾಯ ಹಾಗೂ ಹಣಕಾಸಿನ ಪರಿಸ್ಥಿತಿಯನ್ನು ಪರಿಶೀಲಿಸಿ ಜೀವನಾಂಶದ ಮೊತ್ತವನ್ನು ₹2 ಕೋಟಿಗೆ ನಿಗದಿಪಡಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

‘ದುನಿಯಾ’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ ವಿಜಯ್ ಅವರ ವೈಯಕ್ತಿಕ ಜೀವನದ ಈ ವಿವಾದ ದೀರ್ಘಕಾಲದಿಂದ ಕಾನೂನು ಹೋರಾಟದ ಹಂತದಲ್ಲಿತ್ತು. ಇದೀಗ ಹೈಕೋರ್ಟ್ ಆದೇಶದೊಂದಿಗೆ ದಾಂಪತ್ಯ ಸಂಬಂಧ ಅಧಿಕೃತವಾಗಿ ಅಂತ್ಯಗೊಂಡಿದೆ.

1999ರಲ್ಲಿ ನಾಗರತ್ನ ಅವರನ್ನು ವಿವಾಹವಾಗಿದ್ದ ದುನಿಯಾ ವಿಜಯ್, ಬಳಿಕ ವಿಚ್ಛೇದನ ಕೋರಿ 2013ರಲ್ಲಿ ಅರ್ಜಿ ಸಲ್ಲಿಸಿದ್ದರು. ಹಲವು ವರ್ಷಗಳ ವಿಚಾರಣೆ ಮತ್ತು ಕಾನೂನು ಹೋರಾಟದ ಬಳಿಕ ಇದೀಗ ವಿಚ್ಛೇದನ ಮಂಜೂರಾಗಿದೆ.

KPSC ಹಗರಣ: ಗ್ಯಾನೇಂದ್ರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕೇಸ್ ದಾಖಲು!

0

ಬೆಂಗಳೂರು: ಕೆಪಿಎಸ್‌ಸಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ ಅವರಿಗೆ ಮತ್ತೊಂದು ಹಿನ್ನಡೆ ಎದುರಾಗಿದೆ. ಸರ್ಕಾರಿ ಹುದ್ದೆ ಮತ್ತು ಕಚೇರಿಯ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಹಣದ ಆಮಿಷಕ್ಕೆ ಒಳಗಾಗಿ ಸರ್ಕಾರಿ ಹುದ್ದೆಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ಎಫ್‌ಐಆರ್‌ನಲ್ಲಿ ಸಂಬಂಧಿತ ಸೆಕ್ಷನ್‌ಗಳನ್ನು ಸೇರಿಸಲಾಗಿದೆ. ಕೆಪಿಎಸ್‌ಸಿ ಕಚೇರಿಯಲ್ಲಿ ಸಿಐಡಿ ಅಧಿಕಾರಿಗಳು ಇಂದು (ಸೆಪ್ಟೆಂಬರ್ 3) ಮಹಜರು ನಡೆಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದ ಹಿನ್ನೆಲೆಯಲ್ಲಿ ಗ್ಯಾನೇಂದ್ರ ಅವರ ಕೊಠಡಿಯಲ್ಲಿ ಈ ಮಹಜರು ನಡೆದಿದ್ದು, ಬಳಿಕ ಸಿಐಡಿ ಅಧಿಕಾರಿಗಳು ಗ್ಯಾನೇಂದ್ರ ಅವರನ್ನು ಕರೆದೊಯ್ದಿದ್ದಾರೆ.