Home Blog Page 105

ಧರ್ಮಗಳ ನಡುವೆ ದ್ವೇಷ ಬೇಡ… ಸಂವಾದ ಬೇಕು: ರಂಭಾಪುರಿ ಶ್ರೀ

0

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಜವಾಬ್ದಾರಿಯುತ ಸ್ಥಾನದಲ್ಲಿರುವ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಧರ್ಮದಂತಹ ಸೂಕ್ಷ್ಮ ವಿಷಯಗಳ ಕುರಿತು ಹೆಚ್ಚು ಸಂಯಮದಿಂದ ಮಾತನಾಡಬೇಕಿತ್ತು ಎಂದು ವೀರಶೈವ ಪಂಚಪೀಠಗಳ ಒಕ್ಕೂಟ ವ್ಯವಸ್ಥೆಯ ಸಂಚಾಲಕರಾದ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ವಿಷಾದ ಹಾಗೂ ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಹಿಂದೂ ಸಂಸ್ಕೃತಿ ಹಾಗೂ ಇಸ್ಲಾಂ ಧರ್ಮದ ಕುರಿತು ಸಚಿವರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ, ಬುಧವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಮಾಸದ ಧರ್ಮ ಸಮಾರಂಭದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಯಾವುದೇ ಧರ್ಮವನ್ನು ಗೌರವಿಸುವುದು ತಪ್ಪಲ್ಲ. ಆದರೆ, ಒಂದು ಧರ್ಮವನ್ನು ಮತ್ತೊಂದು ಧರ್ಮದೊಂದಿಗೆ ಹೋಲಿಸಿ ಶ್ರೇಷ್ಠತೆಯ ಮಾನದಂಡದಲ್ಲಿ ಮಾತನಾಡುವುದು ಸಮಾಜದಲ್ಲಿ ಅನಗತ್ಯ ಭಾವನಾತ್ಮಕ ಗೊಂದಲಕ್ಕೆ ಕಾರಣವಾಗಬಹುದು ಎಂದು ಹೇಳಿದರು.

ಭಾರತದ ವೈಶಿಷ್ಟ್ಯವೇ ಸರ್ವಧರ್ಮ ಸಮಭಾವ, ಪರಸ್ಪರ ಗೌರವ ಮತ್ತು ಸಹಬಾಳ್ವೆಯಾಗಿದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ವಿಶಾಲ ಮಾನವೀಯ ದೃಷ್ಟಿಕೋನವನ್ನು ನಮ್ಮ ಸಂಸ್ಕೃತಿ ಪ್ರತಿಪಾದಿಸಿದೆ ಎಂದು ತಿಳಿಸಿದರು.

ಸಚಿವರ ಹೇಳಿಕೆಯನ್ನು ವಿರೋಧಿಸುವ ನೆಪದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಕೂಡ ಸರಿಯಲ್ಲ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಸ್ಪಷ್ಟಪಡಿಸಿದರು.

ವಿರೋಧ ಇರಬೇಕಾದುದು ವ್ಯಕ್ತಿಯ ಹೇಳಿಕೆಯ ವಿರುದ್ಧವೇ ಹೊರತು ಯಾವುದೇ ಸಮುದಾಯದ ವಿರುದ್ಧ ಅಲ್ಲ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ಗೌರವ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ ಅವರು ವಿದ್ಯಾರ್ಥಿಗಳು ಹಾಗೂ ಯುವಜನಾಂಗಕ್ಕೆ ಮಾರ್ಗದರ್ಶನ ನೀಡುವ ಮಹತ್ವದ ಸ್ಥಾನದಲ್ಲಿದ್ದಾರೆ. ಆದ್ದರಿಂದ ಅವರ ಸಾರ್ವಜನಿಕ ಹೇಳಿಕೆಗಳು ಸಮಾಜದಲ್ಲಿ ಏಕತೆ, ಶಾಂತಿ ಮತ್ತು ಪರಸ್ಪರ ಗೌರವವನ್ನು ಬೆಳೆಸುವಂತಿರಬೇಕು ಎಂದು ಅಭಿಪ್ರಾಯಪಟ್ಟರು.

ಯಾವುದೇ ಧರ್ಮವನ್ನು ಮತ್ತೊಂದು ಧರ್ಮಕ್ಕಿಂತ ಮೇಲು ಅಥವಾ ಕೀಳು ಎಂದು ನೋಡುವ ಬದಲು ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡುವ ನಿಲುವು ಸ್ಪಷ್ಟವಾಗಬೇಕು. ಅವರವರ ಧರ್ಮ ಅವರಿಗೆ ಶ್ರೇಷ್ಠವಾಗಿದೆ ಎಂದು ಹೇಳಿದರು.

ಹಿಂದೂ ಸಂಸ್ಕೃತಿಯ ಗೌರವವನ್ನು ಎತ್ತಿಹಿಡಿಯುವುದು ಮತ್ತೊಂದು ಧರ್ಮದ ವಿರೋಧವಲ್ಲ. ಅದೇ ರೀತಿ ಇತರ ಧರ್ಮಗಳನ್ನು ಗೌರವಿಸುವುದು ಹಿಂದೂ ಸಂಸ್ಕೃತಿಯನ್ನು ಕೀಳಾಗಿ ಕಾಣುವುದೂ ಅಲ್ಲ ಎಂದು ತಿಳಿಸಿದರು. ಶ್ರೀ ಉಜ್ಜಯಿನಿ, ಶ್ರೀ ಕೇದಾರ, ಶ್ರೀಶೈಲ ಹಾಗೂ ಶ್ರೀ ಕಾಶಿ ಜಗದ್ಗುರುಗಳ ಪರವಾಗಿಯೂ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದ್ದಾರೆ.

ಧರ್ಮಗಳ ನಡುವೆ ಸಂಘರ್ಷವಲ್ಲ, ಸಂವಾದ ಬೇಕು. ಸಮುದಾಯಗಳ ನಡುವೆ ದ್ವೇಷವಲ್ಲ, ಪರಸ್ಪರ ಗೌರವ ಬೇಕು. ಸಚಿವರಿಂದ ವಿಭಜನೆಯ ಮಾತಲ್ಲ, ಸಮಾಜವನ್ನು ಒಗ್ಗೂಡಿಸುವ ಮಾತುಗಳನ್ನು ನಿರೀಕ್ಷಿಸುತ್ತೇವೆ.

— ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು

ಶಾಲೆಯ ಮೇಲ್ಛಾವಣಿ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ!

0

ಬಾಗಲಕೋಟೆ: ತರಗತಿ ನಡೆಯುತ್ತಿದ್ದ ವೇಳೆ ಸರ್ಕಾರಿ ಶಾಲೆಯ ಮೇಲ್ಛಾವಣಿಯ ಕಾಂಕ್ರೀಟ್ ಕುಸಿದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದಲ್ಲಿ ನಡೆದಿದೆ.

ದಿನನಿತ್ಯದಂತೆ ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದ ವೇಳೆ ಮೇಲ್ಛಾವಣಿಯ ಪ್ಲಾಸ್ಟರಿಂಗ್ ಹಾಗೂ ಕಾಂಕ್ರೀಟ್ ಚೂರುಗಳು ಏಕಾಏಕಿ ಮಕ್ಕಳ ಮೇಲೆ ಬಿದ್ದಿವೆ. ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಗಾಯಗೊಂಡ ಮಕ್ಕಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಶಾಲಾ ಕಟ್ಟಡವು ಸಂಪೂರ್ಣ ಶಿಥಿಲಗೊಂಡಿದ್ದು, ಮೇಲ್ಛಾವಣಿಯ ಕಾಂಕ್ರೀಟ್ ಕಿತ್ತುಬಂದಿರುವ ಪರಿಣಾಮ ಒಳಭಾಗದ ಕಬ್ಬಿಣದ ಸರಳುಗಳು ಕಾಣಿಸುತ್ತಿವೆ. ಇಂತಹ ಅಪಾಯಕಾರಿ ಕಟ್ಟಡದಲ್ಲೇ ಮಕ್ಕಳು ಪ್ರತಿನಿತ್ಯ ತರಗತಿಗೆ ಹಾಜರಾಗಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಟ್ಟಡದ ದುಸ್ಥಿತಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲಾ ಕಟ್ಟಡವನ್ನು ನವೀಕರಿಸಬೇಕು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಹಪಾಠಿಗಳ ಜೊತೆ ಬಿಸಿಯೂಟ ಮಾಡುತ್ತಿದ್ದಾಗಲೇ 14ರ ಬಾಲಕ ಕುಸಿದುಬಿದ್ದು ಸಾವು!

0

ಮಂಡ್ಯ: ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದ ವೇಳೆ 9ನೇ ತರಗತಿ ವಿದ್ಯಾರ್ಥಿಯೊಬ್ಬ ಏಕಾಏಕಿ ಕುಸಿದುಬಿದ್ದು, ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಸೋಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ 14 ವರ್ಷದ ವೀರಮಣಿ ಎಂದು ಗುರುತಿಸಲಾಗಿದೆ. ಎಂದಿನಂತೆ ಮಧ್ಯಾಹ್ನ ಇತರ ಸಹಪಾಠಿಗಳೊಂದಿಗೆ ಶಾಲೆಯಲ್ಲಿ ಬಿಸಿಯೂಟ ಸೇವಿಸುತ್ತಿದ್ದ ವೇಳೆ ವೀರಮಣಿ ಏಕಾಏಕಿ ಮೂರ್ಛೆಹೋಗಿ ಕೆಳಗೆ ಬಿದ್ದಿದ್ದಾನೆ.

ತಕ್ಷಣ ಶಿಕ್ಷಕರು ಬಾಲಕನನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಾಲಕನ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ವೀರಮಣಿ ಮೃತಪಟ್ಟಿದ್ದಾನೆ. ವೈದ್ಯರು ತಪಾಸಣೆ ನಡೆಸಿದ ಬಳಿಕ ಬಾಲಕ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಶಾಲಾ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿಯಾಗಿರುವುದು ಸೋಮನಹಳ್ಳಿ ಗ್ರಾಮದಲ್ಲಿ ಆಘಾತ ಮೂಡಿಸಿದೆ. ಬಾಲಕನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಕೋಲಾರ: ಚಲಿಸುತ್ತಿದ್ದ ಟಿಪ್ಪರ್‌ನಲ್ಲಿ ಏಕಾಏಕಿ ಬೆಂಕಿ; ಚಾಲಕ ಪ್ರಾಣಾಪಾಯದಿಂದ ಪಾರು!

0

ಕೋಲಾರ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುತ್ತಿದ್ದ ಟಿಪ್ಪರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಡಿ.ಕೆ.ಹಳ್ಳಿ ಪ್ಲಾಂಟೇಶನ್ ಬಳಿ ನಡೆದಿದೆ.

ಬೆಂಗಳೂರಿನಿಂದ ವಿ.ಕೋಟಗೆ ತೆರಳುತ್ತಿದ್ದ ವೇಳೆ ಟಿಪ್ಪರ್‌ನ ಇಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಚಾಲಕ ಸಂತೋಷ್ ಟಿಪ್ಪರ್ ನಿಲ್ಲಿಸಿ ಕೆಳಗಿಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಯ ತೀವ್ರತೆಗೆ ಟಿಪ್ಪರ್ ಸಂಪೂರ್ಣವಾಗಿ ಸುಟ್ಟುಹೋಗಿದೆ.

ನಂಗಲಿ ಮೂಲದ ಸುರೇಶ್ ಅವರಿಗೆ ಸೇರಿದ ಟಿಪ್ಪರ್ ಇದಾಗಿದೆ ಎಂದು ತಿಳಿದುಬಂದಿದೆ. ಘಟನೆ ಬೆಮೆಲ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.

ನೇಪಾಳದಲ್ಲಿ ವಿನಾಶಕಾರಿ ಪ್ರವಾಹ: ಸಾವಿನ ಸಂಖ್ಯೆ 1,127ಕ್ಕೆ ಏರಿಕೆ!

0

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಸರಣಿ ಭೂಕುಸಿತಗಳಿಂದ ಸಾವನ್ನಪ್ಪಿದವರ ಸಂಖ್ಯೆ 1127ಕ್ಕೆ ಏರಿಕೆಯಾಗಿದೆ.

ಇನ್ನೂ 4 ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ 580ಕ್ಕೂ ಹೆಚ್ಚು ವಿದೇಶಿಗರು ಸೇರಿದ್ದಾರೆ ಎಂದು ವರದಿಯಾಗಿದೆ.

ಪ್ರವಾಹ ಹಾಗೂ ಭೂಕುಸಿತದಿಂದ ಸಂಪರ್ಕ ಕಡಿತಗೊಂಡಿದ್ದ ದುರ್ಗಮ ಪ್ರದೇಶಗಳಿಗೆ ರಕ್ಷಣಾ ಪಡೆಗಳು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ತಲುಪಲಾಗುತ್ತಿದೆ. ಸಂತ್ರಸ್ತರ ರಕ್ಷಣೆ ಹಾಗೂ ಪರಿಹಾರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, ಪ್ರವಾಹ ಪೀಡಿತ ಪ್ರದೇಶಗಳಿಂದ ಒಟ್ಟು 163 ಭಾರತೀಯರನ್ನು ರಕ್ಷಿಸಲಾಗಿದೆ. ಚೀನಾದಲ್ಲಿದ್ದ 151 ಭಾರತೀಯರನ್ನು ಕೂಡ ರಕ್ಷಿಸಲಾಗಿದ್ದು, ಅವರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ.

ರಕ್ಷಣಾ ಕಾರ್ಯಾಚರಣೆ ಹಾಗೂ ತಾಂತ್ರಿಕ ನೆರವಿಗಾಗಿ ಭಾರತವು ತಜ್ಞರ ತಂಡಗಳನ್ನು ನೇಪಾಳಕ್ಕೆ ಕಳುಹಿಸಿದೆ. ಪ್ರವಾಹದಲ್ಲಿ ಮೃತಪಟ್ಟವರ ಗುರುತು ಪತ್ತೆಗಾಗಿ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುವುದು ಸೇರಿದಂತೆ ವಿವಿಧ ರೀತಿಯ ತಾಂತ್ರಿಕ ಸಹಕಾರವನ್ನು ಭಾರತೀಯ ತಂಡಗಳು ನೀಡುತ್ತಿವೆ.

ಭೂಕುಸಿತದಿಂದ ಹಲವು ಹೆದ್ದಾರಿಗಳು ಹಾಗೂ ಸೇತುವೆಗಳು ಕೊಚ್ಚಿಹೋಗಿರುವ ಹಿನ್ನೆಲೆಯಲ್ಲಿ ಅನೇಕ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ನೇಪಾಳಿ ಸೇನೆ, ಸಶಸ್ತ್ರ ಪೊಲೀಸ್ ಪಡೆ ಹಾಗೂ ಭಾರತ ಸೇರಿದಂತೆ ವಿವಿಧ ದೇಶಗಳ ರಕ್ಷಣಾ ತಂಡಗಳು ಹೆಲಿಕಾಪ್ಟರ್‌ಗಳ ಮೂಲಕ ದುರ್ಗಮ ಪ್ರದೇಶಗಳಿಗೆ ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಚಿಕ್ಕಬಳ್ಳಾಪುರದಲ್ಲಿ ದುರಂತ: ಪ್ರಥಮ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಪ್ರಶಾಂತನಗರದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಶ್ರೇಯಾ ಎಂದು ಗುರುತಿಸಲಾಗಿದೆ.

ಶ್ರೇಯಾ ಮೂಡಬಿದ್ರೆಯ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಅನಾರೋಗ್ಯದ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ಚಿಕ್ಕಬಳ್ಳಾಪುರದಲ್ಲಿರುವ ತನ್ನ ಮನೆಗೆ ಬಂದಿದ್ದಳು ಎನ್ನಲಾಗಿದೆ.

ಮನೆಯಲ್ಲಿದ್ದವರು ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಶ್ರೇಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಮಗಳ ಸಾವಿನ ಸುದ್ದಿ ತಿಳಿದು ತಾಯಿ ನಾಗಲಕ್ಷ್ಮಿ ಆಘಾತಕ್ಕೊಳಗಾಗಿದ್ದಾರೆ. ಅವರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ದಾದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ ಪಿಡಿಒ ಆಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ಘಟನೆ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್‌ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರತಿದಿನ ಸ್ನಾನ ಮಾಡಬೇಕಾ? ಚರ್ಮದ ಆರೋಗ್ಯಕ್ಕಾಗಿ ತಿಳಿಯಲೇಬೇಕಾದ ವಿಚಾರಗಳು!

0

ಸ್ನಾನ ಮಾಡುವುದು ದೈನಂದಿನ ಸ್ವಚ್ಛತೆಯ ಪ್ರಮುಖ ಭಾಗವಾಗಿದೆ. ಆದರೆ ಪ್ರತಿಯೊಬ್ಬರೂ ಪ್ರತಿದಿನ ಸ್ನಾನ ಮಾಡಲೇಬೇಕು ಎಂಬ ಕಟ್ಟುನಿಟ್ಟಿನ ನಿಯಮವಿಲ್ಲ.

ಎಷ್ಟು ಬಾರಿ ಸ್ನಾನ ಮಾಡಬೇಕು ಎಂಬುದು ಹವಾಮಾನ, ಬೆವರು, ದೈಹಿಕ ಚಟುವಟಿಕೆ ಮತ್ತು ಚರ್ಮದ ಸ್ವಭಾವವನ್ನು ಅವಲಂಬಿಸಿರುತ್ತದೆ.

ಪ್ರತಿದಿನ ಸ್ನಾನ ಅಗತ್ಯವೇ?

ಹೆಚ್ಚು ಬೆವರುವವರು, ನಿಯಮಿತವಾಗಿ ವ್ಯಾಯಾಮ ಮಾಡುವವರು ಹಾಗೂ ಬಿಸಿಯಾದ ಅಥವಾ ತೇವಾಂಶದ ವಾತಾವರಣದಲ್ಲಿ ಇರುವವರು ಪ್ರತಿದಿನ ಸ್ನಾನ ಮಾಡುವುದು ಉತ್ತಮ. ಆದರೆ ಕಡಿಮೆ ಬೆವರು ಬರುವವರು ಅಥವಾ ಚಳಿಯ ವಾತಾವರಣದಲ್ಲಿ ಇರುವವರಿಗೆ ಪ್ರತಿದಿನ ಸ್ನಾನ ಅನಿವಾರ್ಯವಲ್ಲ.

ಒಣ ಅಥವಾ ಸೂಕ್ಷ್ಮ ಚರ್ಮ ಹೊಂದಿರುವವರು ಪದೇಪದೆ ಸ್ನಾನ ಮಾಡಿದರೆ ಚರ್ಮದ ಶುಷ್ಕತೆ ಹೆಚ್ಚಾಗುವ ಸಾಧ್ಯತೆ ಇದೆ.

ಸರಿಯಾದ ರೀತಿಯಲ್ಲಿ ಸ್ನಾನ ಮಾಡುವುದು ಹೇಗೆ?

  • ತುಂಬಾ ಬಿಸಿಯಾದ ನೀರನ್ನು ತಪ್ಪಿಸಿ; ಸಾಧಾರಣ ಅಥವಾ ಸ್ವಲ್ಪ ಬೆಚ್ಚಗಿನ ನೀರು ಉತ್ತಮ.
  • ಸಾಧ್ಯವಾದರೆ 5ರಿಂದ 7 ನಿಮಿಷಗಳಲ್ಲಿ ಸ್ನಾನ ಮುಗಿಸಿ.
  • ಮೃದುವಾದ, ಕಡಿಮೆ ಸುಗಂಧ ಹೊಂದಿರುವ ಸಾಬೂನು ಬಳಸಿ.
  • ಸ್ನಾನದ ನಂತರ ಟವೆಲ್‌ನಿಂದ ಜೋರಾಗಿ ಉಜ್ಜದೆ ನಿಧಾನವಾಗಿ ಒತ್ತಿ ಒಣಗಿಸಿ.
  • ಚರ್ಮದ ತೇವಾಂಶ ಕಾಪಾಡಲು ಮಾಯಿಶ್ಚರೈಸರ್ ಬಳಸಬಹುದು.

ಹೀಗಾಗಿ ಪ್ರತಿದಿನ ಸ್ನಾನ ಮಾಡುವುದು ತಪ್ಪಲ್ಲ. ಆದರೆ ನಿಮ್ಮ ದೇಹದ ಅಗತ್ಯ, ಚರ್ಮದ ಸ್ವಭಾವ, ಬೆವರು ಮತ್ತು ಹವಾಮಾನಕ್ಕೆ ಅನುಗುಣವಾಗಿ ಸ್ನಾನದ ಅಭ್ಯಾಸವನ್ನು ರೂಪಿಸಿಕೊಳ್ಳುವುದು ಉತ್ತಮ.

KPSC ಅಕ್ರಮಗಳಿಗೆ NDAಯೇ ಪಿತಾಮಹ: ಬಿಜೆಪಿ ವಿರುದ್ಧ ಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ನಡೆದಿರುವ ಭ್ರಷ್ಟಾಚಾರಗಳಿಗೆ ಎನ್‌ಡಿಎ ಪಿತಾಮಹ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಕೆಪಿಎಸ್‌ಸಿ ಹಗರಣ ಸಂಬಂಧ ಬಿಜೆಪಿಯಿಂದ ಇಂದು ಹಮ್ಮಿಕೊಂಡಿರುವ ಪಾದಯಾತ್ರೆ ಹಾಗೂ ಸರ್ಕಾರದ ವಿರುದ್ಧದ ಹೋರಾಟದ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ಪಕ್ಷ ಸಂಘಟನೆ ಹಾಗೂ ಆಂತರಿಕ ಬಿಕ್ಕಟ್ಟು ಶಮನಗೊಳಿಸುವ ಉದ್ದೇಶದಿಂದಲೇ ಈ ಪಾದಯಾತ್ರೆ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದರು. ತಾವು ಸುಮ್ಮನೆ ಕುಳಿತಿಲ್ಲವೆಂದೂ, ವಿಪಕ್ಷಕ್ಕೆ ಗೌರವ ನೀಡಿದರೂ ಅವರು ಅದನ್ನು ಸ್ವೀಕರಿಸುತ್ತಿಲ್ಲವೆಂದೂ ಹೇಳಿದ ಅವರು, ಈ ಸಂಬಂಧ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದರೂ ಬಿಜೆಪಿಗೆ ತೃಪ್ತಿಯಾಗಿಲ್ಲ ಎಂದು ಹೇಳಿ, ಎಲ್ಲ ವಿಚಾರಗಳಲ್ಲೂ ರಾಜಕಾರಣ ಸಲ್ಲದು ಎಂದು ಪ್ರತಿಕ್ರಿಯಿಸಿದರು.

ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಸಂಬಂಧ ತನಿಖೆ ನಡೆಯುತ್ತಿದ್ದು, ಅಧಿಕಾರಿಗಳಿಗೆ ಹಾಗೂ ಗೃಹ ಸಚಿವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದ ಶಿವಕುಮಾರ್, ತನಿಖೆ ಹಂತದಲ್ಲಿರುವುದರಿಂದ ಹಸ್ತಕ್ಷೇಪ ಮಾಡುವುದಿಲ್ಲವೆಂದೂ, ಈ ಬಗ್ಗೆ ಇನ್ನೂ ವರದಿ ಪಡೆದಿಲ್ಲವೆಂದೂ ತಿಳಿಸಿದರು.

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಸಾಹುಕಾರ್ ಶಿವಶಂಕರಪ್ಪ ಅಕ್ರಮ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಿಎಂ, ಅಕ್ರಮ ಸಂಬಂಧ ಸಚಿವ ಸಂಪುಟ ಸಭೆ ನಡೆಸಿ ಅವರನ್ನು ಅಮಾನತುಗೊಳಿಸಲಾಗಿತ್ತೆಂದೂ, ಬಿಜೆಪಿ ಆಡಳಿತಾವಧಿಯಲ್ಲಿ ಹಗರಣಗಳು ವಿಪರೀತವಾಗಿದ್ದವೆಂದೂ ಆರೋಪಿಸಿದರು. ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ನೇಮಿಸಿದ್ದು ಯಡಿಯೂರಪ್ಪ ಅಲ್ಲವೇ ಎಂದು ಪ್ರಶ್ನಿಸಿದ ಅವರು,

ತಮ್ಮ ಪಕ್ಷದಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದೇ ಬಿಜೆಪಿಗೆ ಗೊತ್ತಿಲ್ಲ ಎಂದು ಟೀಕಿಸಿದರು. ಸಾಹುಕಾರ್ ಅವರನ್ನು ಅಮಾನತುಗೊಳಿಸಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪತ್ರ ಬರೆದಿದ್ದನ್ನು ಸ್ಮರಿಸಿದ ಶಿವಕುಮಾರ್, ಕೆಪಿಎಸ್‌ಸಿ ಅಕ್ರಮಗಳಿಗೆ ಎನ್‌ಡಿಎ ಪಿತಾಮಹ ಎಂದು ಆರೋಪಿಸಿ, ಬಿಜೆಪಿಯಲ್ಲಿ ಆಂತರಿಕ ಕಲಹವಿದೆ ಎಂದು ಹೇಳಿದರು.

ಬಿಜೆಪಿ ಪಕ್ಷ ಅಸ್ತಿತ್ವದಲ್ಲೇ ಇರಬಾರದು ಎಂಬ ಉದ್ದೇಶದಿಂದಲೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೋರಾಟ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟೀಕಿಸಿದರು. ನೆಹರೂ ತಾರಾಲಯದ ಬಳಿ ಇಂದು ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ ರೈತರಿಗೆ ನಿವೇಶನ ಹಂಚಿಕೆ ಪತ್ರ ವಿತರಿಸಿದ ಸಿಎಂ, ಕೆಪಿಎಸ್‌ಸಿ ಹಗರಣದಲ್ಲಿ ಸರ್ಕಾರ ಭಾಗಿಯಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿರುವ ಬಗ್ಗೆ ಹಾಗೂ ಅವರ ಮೈತ್ರಿ ನಾಯಕರೇ ಬಂಧನವಾಗುತ್ತಿರುವ ಕುರಿತ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ಕುಮಾರಸ್ವಾಮಿ ತಮ್ಮ ವಿರುದ್ಧ ಅಲ್ಲ, ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತಿದ್ದಾರೆಂದೂ, ಅವರ ಕರ್ತವ್ಯ ಅವರು ಮಾಡಲಿ, ಏನು ಆರೋಪ ಮಾಡುತ್ತಾರೋ ಮಾಡಲಿ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ರಾಮ ಮಂದಿರ ಟ್ರಸ್ಟ್ ಗೆ ನೂತನ ಸಿಇಒ: ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ನೇಮಕ

0

ಲಕ್ನೋ: ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರನ್ನು ನೇಮಿಸಲಾಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಂದರ್ಭದಲ್ಲಿ ಪಶ್ಚಿಮ ವಾಯುಕಮಾಂಡ್ ಮುಖ್ಯಸ್ಥರಾಗಿದ್ದ ಜೀತೇಂದ್ರ ಮಿಶ್ರಾ, ಅನುಭವಿ ಯುದ್ಧ ವಿಮಾನ ಪೈಲಟ್ ಆಗಿಯೂ ಕಾರ್ಯನಿರ್ವಹಿಸಿದವರು.

ಇದಕ್ಕೂ ಮುನ್ನ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೂವರು ಹೊಸ ಟ್ರಸ್ಟಿಗಳನ್ನು ನೇಮಿಸಿತ್ತು. ದೆಹಲಿ ಮೂಲದ ಮಹೇಶ್ ಭಾಗ್‌ಚಂದ್ಕ, ಅಯೋಧ್ಯೆಯ ನಿವಾಸಿ ಮದನ್ ಮೋಹನ್ ಪಾಂಡೆ ಹಾಗೂ ಶಿಕೋಹಾಬಾದ್‌ನ ನಿರ್ಮಲಾ ಯಾದವ್ ಅವರನ್ನು ಹೊಸ ಟ್ರಸ್ಟಿಗಳನ್ನಾಗಿ ನೇಮಿಸಲಾಗಿತ್ತು.

ಮಹೇಶ್ ಭಾಗ್‌ಚಂದ್ಕ ಅವರು ದಿವಂಗತ ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಅವರ ಸಂಬಂಧಿ ಎಂದು ತಿಳಿದುಬಂದಿದೆ. ಮದನ್ ಮೋಹನ್ ಪಾಂಡೆ ಹಾಗೂ ನಿರ್ಮಲಾ ಯಾದವ್ ಅವರ ನೇಮಕಾತಿಯ ಕುರಿತು ರಾಮಮಂದಿರ ಟ್ರಸ್ಟ್‌ನ ಪ್ರಮುಖ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಪ್ರಿಯಾಂಕ್ ಖರ್ಗೆ RDPR ಸಚಿವರಾಗಿದ್ದಾಗ 24 ಜನರಿಗೆ ಆದೇಶ ಪತ್ರ ಹೇಗೆ ಸಿಕ್ತು? KPSC ಹಗರಣದ ಬಗ್ಗೆ HDK ಆರೋಪ

0

ಬೆಂಗಳೂರು: ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿರುವ ಮಧ್ಯೆಯೇ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರ್‌ಡಿಪಿಆರ್ ಇಂಜಿನಿಯರ್‌ಗಳ ನೇಮಕಾತಿ ಅಕ್ರಮ ಪ್ರಕರಣದ ಬಗ್ಗೆ ಹೊಸ ಆರೋಪಗಳನ್ನು ಮಾಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಒಂದೊಂದೇ ಪ್ರಶ್ನೆ ಎತ್ತಿದ್ದಾರೆ.

ಅಕ್ರಮವನ್ನು ಪ್ರಿಯಾಂಕ್ ಖರ್ಗೆ ಮಾಡಿದ್ದಾರೆ ಎಂದು ಹೇಳುವುದಿಲ್ಲ ಎಂದ ಕುಮಾರಸ್ವಾಮಿ, ಆರ್‌ಡಿಪಿಆರ್ ಅಧಿಕಾರಿಗಳು ಏನು ಮಾಡಿದ್ದರು, ಆ ಇಲಾಖೆಯ ಸಚಿವರು ಪ್ರಿಯಾಂಕ್ ಖರ್ಗೆ ಆಗಿರಲಿಲ್ಲವೇ ಎಂದು ಪ್ರಶ್ನಿಸಿದರು. ಪರೀಕ್ಷೆ ನಡೆಸುವುದು ಕೆಪಿಎಸ್‌ಸಿಯಾದರೂ ಆದೇಶ ಹೊರಡಿಸುವುದು ಸರ್ಕಾರ ಎಂದು ಪ್ರತಿಪಾದಿಸಿದ ಅವರು, ಸಚಿವರಿಗೆ ತಿಳಿಯದೇ 24 ಮಂದಿಗೆ ನೇಮಕಾತಿ ಪತ್ರ ಹೇಗೆ ನೀಡಲು ಸಾಧ್ಯ, ಆದೇಶ ಪತ್ರ ನೀಡಿದ್ದು ಅವರ ಇಲಾಖೆಯೇ ಅಲ್ಲವೇ, ಇದನ್ನು ಪತ್ತೆ ಹಚ್ಚಲು ಒಂದೂವರೆ ವರ್ಷ ಬೇಕೇ ಎಂದು ವಾಗ್ದಾಳಿ ನಡೆಸಿದರು.

ದೃಷ್ಟಿದೋಷ ಹೊಂದಿದ್ದ ವ್ಯಕ್ತಿಯೊಬ್ಬರು ಪರೀಕ್ಷೆ ಬರೆದು ತಹಶೀಲ್ದಾರ್ ಆಗಿದ್ದರೆಂದೂ, ಆ ಹುದ್ದೆಯನ್ನು ಸರ್ಕಾರ ರದ್ದುಗೊಳಿಸಿತ್ತೆಂದೂ, ಇದೇ ಸಂಬಂಧ ದೇವೇಗೌಡರು ಪತ್ರ ಬರೆದಿದ್ದರೆಂದೂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ತಮ್ಮ ಸಂಬಂಧಿಕರ ಬಗ್ಗೆ ನೋಡಿಕೊಳ್ಳಿ ಎಂದು ಆ ಪತ್ರದಲ್ಲಿ ಬರೆದಿರಲಿಲ್ಲ ಎಂದ ಅವರು, ಕೆಪಿಎಸ್‌ಸಿ ಮಾಜಿ ಅಧ್ಯಕ್ಷರನ್ನು ಜೈಲಿನಲ್ಲಿ ಭೇಟಿ ಮಾಡಿದ್ದು ನಿಜವೆಂದೂ,

ಆ ವೇಳೆ ಅವರು ಅಧ್ಯಕ್ಷ ಸ್ಥಾನದಲ್ಲಿ ಇರಲಿಲ್ಲವೆಂದೂ ಸ್ಪಷ್ಟಪಡಿಸಿದರು. ಆ ಅಧ್ಯಕ್ಷರ ಅವಧಿಯಲ್ಲಿ 13 ಸಾವಿರ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಾಗಿತ್ತೆಂದೂ, ಯಾವುದೇ ಭ್ರಷ್ಟಾಚಾರ ನಡೆದಿರಲಿಲ್ಲವೆಂದೂ ಪ್ರತಿಪಾದಿಸಿದ ಕುಮಾರಸ್ವಾಮಿ, ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಮನೆಗೆ ತೆರಳಿ ಮಾಜಿ ಅಧ್ಯಕ್ಷರ ಬಗ್ಗೆ ದ್ವೇಷ ಬೇಡ ಎಂದು ಹೇಳಿದ್ದಾಗಿ ತಿಳಿಸಿದರು. ಅಧ್ಯಕ್ಷರ ಆಯ್ಕೆ ಹೇಗಾಯಿತು ಎಂಬುದನ್ನು ತಮ್ಮ ತಂದೆಯವರಿಂದಲೇ ಕೇಳಿ ತಿಳಿದುಕೊಳ್ಳುವಂತೆ ಖರ್ಗೆ ಅವರಿಗೆ ಅವರು ತಿರುಗೇಟು ನೀಡಿದರು.

ಕೆಪಿಎಸ್‌ಸಿ ಸಂಸ್ಥೆ ಉತ್ತಮ ಉದ್ದೇಶದಿಂದ ಆರಂಭವಾಗಿತ್ತಾದರೂ, ಈಗ ಬೇರೆಯದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ರಾಜ್ಯ ಸರ್ಕಾರದಿಂದ ಕಾರ್ಯದರ್ಶಿ ಹಾಗೂ ಪರೀಕ್ಷೆ ನಡೆಸಲು ಕಂಟ್ರೋಲರ್ ನೇಮಕವಾಗುತ್ತಿದೆಯೆಂದೂ, ರೆಸಾರ್ಟ್‌ಗಳಲ್ಲಿ ಪರೀಕ್ಷೆ ಬರೆಸಲಾಗುತ್ತಿದೆಯೆಂದೂ ಆರೋಪಿಸಿದರು. ಈ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಅವರು ಮಾಜಿ ಕೆಪಿಎಸ್‌ಸಿ ಅಧ್ಯಕ್ಷರ ಜೈಲು ಭೇಟಿ ಹಾಗೂ 2011ರ ಕೆಪಿಎಸ್‌ಸಿ ಬ್ಯಾಚ್ ಕುರಿತು ಮಾತನಾಡಿದ್ದರೆಂದೂ, ಆ ಸಂದರ್ಭದಲ್ಲಿ ಸರ್ಕಾರ ತಡೆಹಿಡಿದ ಆದೇಶ ರದ್ದುಪಡಿಸಲು ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರೆಂದೂ, 362 ಪರೀಕ್ಷಾರ್ಥಿಗಳು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಅದು ರಾಜ್ಯದಾದ್ಯಂತ ಸುದ್ದಿಯಾಗಿತ್ತೆಂದೂ ಅವರು ಸ್ಮರಿಸಿದರು.

ಆಹಾರ ಇಲಾಖೆಯಲ್ಲಿ ಜ್ಞಾನೇಂದ್ರ ಇದ್ದ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳ ಮಕ್ಕಳನ್ನು ಆಯ್ಕೆ ಮಾಡಲು ರೆಸಾರ್ಟ್‌ನಲ್ಲಿ ಪರೀಕ್ಷೆ ಬರೆಸಲಾಗಿತ್ತು ಎಂದು ಆರೋಪಿಸಿದ ಕುಮಾರಸ್ವಾಮಿ, ಇತ್ತೀಚೆಗೆ ನಡೆದ ಕೆಎಎಸ್ ಪರೀಕ್ಷೆ ಕುರಿತ ಸಿಐಡಿ ತನಿಖೆಯನ್ನು ನ್ಯಾಯಯುತವಾಗಿ ನಡೆಸಬೇಕೇ ಹೊರತು ತೋರಿಕೆಗೆ ಮುಚ್ಚಿಹಾಕಬಾರದು ಎಂದು ಒತ್ತಾಯಿಸಿದರು. 2011ರ ಕೆಎಎಸ್ ಪರೀಕ್ಷೆಯನ್ನು ಯಾವ ಆಧಾರದ ಮೇಲೆ ರದ್ದುಗೊಳಿಸಲಾಯಿತು, ಸಿಐಡಿ ತನಿಖಾ ವರದಿ ಹಾಗೂ ಮಧ್ಯಂತರ ವರದಿಯಲ್ಲಿ ಏನಿತ್ತು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದ ಅವರು, ಅಕ್ರಮ ನಡೆದಿದೆ ಎಂದು ತಾವು ಹೇಳುತ್ತಿಲ್ಲ, ಮಾಧ್ಯಮ ವರದಿಗಳೇ ಅದನ್ನು ಹೇಳುತ್ತಿವೆ ಎಂದರು.

ಪ್ರಿಯಾಂಕ್ ಖರ್ಗೆ ಭಾಗಿಯಾಗಿದ್ದಾರೋ ಇಲ್ಲವೋ ಎಂಬುದು ತಮಗೆ ಗೊತ್ತಿಲ್ಲವಾದರೂ, ಸಚಿವರಾಗಿ ಅವರ ಜವಾಬ್ದಾರಿ ಏನಿತ್ತು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ತಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದೂ, ಆದೇಶ ಪ್ರತಿ ನೀಡಿದ್ದು ಖರ್ಗೆ ಅವರ ಇಲಾಖೆಯೇ ಎಂದೂ ಸ್ಪಷ್ಟಪಡಿಸಿದರು. ಇಷ್ಟೆಲ್ಲಾ ಆದ ಮೇಲೂ ರಾಜೀನಾಮೆ ಕೇಳಬೇಕೋ ಬೇಡವೋ ಎಂದು ಪ್ರಶ್ನಿಸಿದ ಅವರು, ತಪ್ಪಾಗಿದೆ ಎಂಬ ಕಾರಣಕ್ಕೇ ಷರತ್ತುಬದ್ಧ ಆದೇಶ ನೀಡಲಾಗಿತ್ತಾದರೂ ಅದರ ತನಿಖೆ ಏಕೆ ನಡೆದಿಲ್ಲ ಎಂದು ಪ್ರಶ್ನಿಸಿದರು.