Home Blog Page 107

ಜನತಾ ದರ್ಶನ ಬಡವರ ಪಾಲಿನ ಆಶಾಕಿರಣ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವು ಜನಸಾಮಾನ್ಯರ ಪಾಲಿಗೆ ನಿಜವಾದ ಆಶಾಕಿರಣವಾಗಿ ಪರಿಣಮಿಸಿತು. ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸಚಿವರು ಹಾಗೂ ಅಧಿಕಾರಿಗಳ ಮುಂದಿಡುವ ಮೂಲಕ ತ್ವರಿತ ಪರಿಹಾರ ಕೋರಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಿರಹಟ್ಟಿ ತಾಲೂಕಿನ ವಡವಿ ಹೊಸೂರು ಗ್ರಾಮದ ಪ್ರಭುಗೌಡ ಪಾಟೀಲ್, ತಮ್ಮ ಹೊಲದ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಹವಾಲು ಸಲ್ಲಿಸಿ, ಜನತಾ ದರ್ಶನ ಕಾರ್ಯಕ್ರಮದಿಂದ ಬಡವರಿಗೆ ಮತ್ತು ರೈತರಿಗೆ ಬಹಳ ಅನುಕೂಲವಾಗಿದೆ. ಸರ್ಕಾರದ ದಿಟ್ಟ ಹೆಜ್ಜೆಯಿಂದ ಸಾಮಾನ್ಯರಿಗೆ ನ್ಯಾಯ ಸಿಗುವ ವೇದಿಕೆ ಸಿಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅದೇ ಗ್ರಾಮದ ನರಸಿಂಹಗೌಡ ಪಾಟೀಲರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗ್ರೂಪ್-ಡಿ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನೀಡುವಂತೆ ಅರ್ಜಿ ಸಲ್ಲಿಸಿ, ಜನತಾ ದರ್ಶನದ ಮೂಲಕ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಕೇಳಿ ತ್ವರಿತವಾಗಿ ಸ್ಪಂದಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ನೇರ ಪರಿಹಾರ ದೊರೆಯುತ್ತಿದೆ ಎಂದರು.

ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದ ಬಸವರೆಡ್ಡಿ ಕೆ.ನಾಗನೂರು ಅವರು ತಮ್ಮ ಜಮೀನಿನಲ್ಲಿ ನೀರಿನ ಪೂರೈಕೆಯಿಂದ ಸುತ್ತಮುತ್ತಲಿನ ರೈತರಿಗೆ ಉಂಟಾಗಿರುವ ತೊಂದರೆ ಪರಿಹರಿಸಲು 25 ವೋಲ್ಟ್ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಅನ್ನು 63 ವೋಲ್ಟ್ ಸಾಮರ್ಥ್ಯಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದರು. ರೈತರ ಸಮಸ್ಯೆಗಳಿಗೆ ಇಂತಹ ಕಾರ್ಯಕ್ರಮಗಳು ಸ್ಪೂರ್ತಿಯಾಗುತ್ತವೆ. ಕುಂದುಕೊರತೆಗಳನ್ನು ಬಗೆಹರಿಸಿದರೆ ಗ್ರಾಮೀಣ ಜನರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ಹೇಳಿದರು.

ಮುಂಡರಗಿ ತಾಲೂಕಿನ ಹೆಸರೂರು ಗ್ರಾಮದ ಮಂಜುನಾಥಯ್ಯ ಹಳ್ಳಿ ಅವರು ಭೂಸ್ವಾಧೀನ ಕುರಿತ ಅಹವಾಲು ಸಲ್ಲಿಸಿ, ಜನತಾ ದರ್ಶನ ಕಾರ್ಯಕ್ರಮದಿಂದ ಜನಸಾಮಾನ್ಯರಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಇಂತಹ ಕಾರ್ಯಕ್ರಮಗಳು ತಾಲೂಕು ಮಟ್ಟದಲ್ಲಿಯೂ ನಡೆಯಬೇಕು ಎಂದು ಸಲಹೆ ನೀಡಿದರು.

ಲಕ್ಷೆö್ಮÃಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದ ಮಲ್ಲಿಕಾರ್ಜುನ ವಿ.ದೊಡ್ಡಮನಿ ಅವರು ರೇಷ್ಮೆ ಇಲಾಖೆಯಿಂದ ರೈತರಿಗೆ ಸಹಾಯಧನ ಒದಗಿಸುವಂತೆ ಮನವಿ ಸಲ್ಲಿಸಿದರೆ, ರೋಣ ಗ್ರಾಮದ ಮೆಹಬೂಬ್ ಬಾಬು ಸಾಬ್ ಅವರು ಪಡಿತರ ಚೀಟಿಯಲ್ಲಿ ನೌಕರರ ಹೆಸರು ಇರುವ ಕಾರಣ ವಿಧಿಸಲಾದ 86 ಸಾವಿರ ರೂ. ದಂಡ ರದ್ದುಪಡಿಸುವಂತೆ ಕೋರಿದರು.

ಎಲ್ಲಾ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಸಚಿವ ಎಚ್.ಕೆ. ಪಾಟೀಲ, ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿ, ತ್ವರಿತ ಪರಿಹಾರ ಒದಗಿಸುವ ಭರವಸೆ ನೀಡಿದರು.

ಒಟ್ಟಾರೆ, ಜನತಾ ದರ್ಶನ ಕಾರ್ಯಕ್ರಮವು ಜನಸಾಮಾನ್ಯರ ಸಮಸ್ಯೆಗಳಿಗೆ ನೇರ ಸ್ಪಂದನೆ ದೊರಕಿಸುವ ವೇದಿಕೆಯಾಗಿ ರೂಪುಗೊಂಡಿದ್ದು, ಬಡವರು ಮತ್ತು ರೈತರ ಪಾಲಿಗೆ ಆಶಾಕಿರಣವಾಗಿ ಪರಿಣಮಿಸಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಯಿತು.

ಬಾಕ್ಸ್
ಗಜೇಂದ್ರಗಡ ತಾಲೂಕಿನ ನಾಗರಸಕೊಪ್ಪದ ಗ್ರಾಮದ ಶರಣು ಎಸ್.ಸೊಬರದ ಅವರು ಕೇಂದ್ರೀಯ ವಿದ್ಯಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಿ, ಜನತಾ ದರ್ಶನ ಜನರ ಅಹವಾಲುಗಳಿಗೆ ಸ್ಪಂದಿಸುವ ಪರಿಣಾಮಕಾರಿ ವೇದಿಕೆಯಾಗಲಿ ಎಂದು ಆಶಿಸಿದರು. ಅದೇ ಗ್ರಾಮದ ಭಾಗ್ಯಶ್ರೀ ಅಂಗಡಿ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗದಿರುವ ಕುರಿತು ಅಹವಾಲು ನೀಡಿ ತ್ವರಿತ ಪರಿಹಾರ ಕೋರಿದರು.

ಛಬ್ಬಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶುಕ್ರವಾರ ಶಿರಹಟ್ಟಿ ತಾಲೂಕಿನ ಗುಡ್ಡದಪೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಛಬ್ಬಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಗದಗ ಡಯಟ್‌ನ ಉಪನಿರ್ದೇಶಕ (ಅಭಿವೃದ್ಧಿ) ಜಿ.ಎಂ. ಮುಂದಿನಮನಿ, ಮಕ್ಕಳ ಕಲಿಕಾ ಸುಧಾರಣೆಗೆ ಇಲಾಖೆಯು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡು ಎಲ್ಲರೂ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.

ಬಿಇಓ ಎಚ್.ಎನ್. ನಾಯಕ, ಗದಗ ಡಯಟ್‌ನ ಹಿರಿಯ ಉಪನ್ಯಾಸಕ ಎಚ್.ಬಿ. ರಡ್ಡೇರ, ಅರವಟಗಿ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಸ್. ಭಜಂತ್ರಿ, ಇಸಿಓ, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಕ್ಲಸ್ಟರ್ ವ್ಯಾಪ್ತಿಯ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.

ನ್ಯಾಯಾಂಗ ನೌಕರರ ಶ್ರೇಯಸ್ಸಿಗೆ ಸಮರ್ಥ ನಾಯಕತ್ವ ಅಗತ್ಯ: ಸಾಹಿತಿ ಮಕಾನದಾರ

0

ಸರ್ಕಾರಿ ನೌಕರರಲ್ಲಿ ಕರ್ತವ್ಯ ನಿಷ್ಠೆ, ಜವಾಬ್ದಾರಿ, ಸಮಯಪ್ರಜ್ಞೆ, ದಕ್ಷತೆ, ಸಾರ್ವಜನಿಕ ಸೇವೆಯ ಮಹತ್ವ ಮತ್ತು ಹೊಣೆಗಾರಿಕೆ ಪಾರದರ್ಶಕವಾಗಿರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಿಗಿಂತ ನ್ಯಾಯಾಂಗ ಇಲಾಖೆಯೇ ನೌಕರ ಬಂಧುಗಳು. ಕಾರ್ಯದ ಒತ್ತಡ ನಡುವೆಯೂ ಸೇವೆಗೆ ಕಂಕಣ ಬದ್ಧರಾಗಿದ್ದಾರೆ ಎಂಬುದು ದಿಟ.

ಆಡಳಿತ ಸೇವಕರು ನಿರ್ವಹಣಾತ್ಮಕ ಯಂತ್ರದ ಹೃದಯ ಭಾಗವೆಂದು ಸರ್ದಾರ್ ವಲ್ಲಭ ಭಾಯಿ ಪಟೇಲರು 1947ರಲ್ಲಿ ಹೇಳಿದ ಮಾತು ಸರ್ವಕಾಲಿಕ ಸತ್ಯ. ನೌಕರ ಬಂಧುಗಳ ದೂರದೃಷ್ಟಿತ್ವದ ಫಲವಾಗಿ 25 ವರ್ಷಗಳ ಹಿಂದೆಯೇ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘ ಅಸ್ತಿತ್ವಕ್ಕೆ ಬಂತು. ಸಂಬAಧ ಮಾಸಪತ್ರಿಕೆ ನ್ಯಾಯಿಕ ಮಿತ್ರರ ಮುಖವಾಣಿಯಾಗಿ ಕಾರ್ಯನಿರ್ವಹಿಸಿದೆ. ಸಂಘ ಕಟ್ಟುವಲ್ಲಿ ಅನೇಕ ಹಿರಿಯರ ಶ್ರಮ, ಬೆವರಿನ ಪಾಲು ಕೂಡ ಅಲ್ಲಗಳೆಯುವಂತಿಲ್ಲ. ಬೇರೆ ಇಲಾಖೆ ನೌಕರ ಬಂಧುಗಳ ಒಗ್ಗಟ್ಟಿನ ಮುಂದೆ ನ್ಯಾಯಂಗ ಇಲಾಖೆಯ ಒಗ್ಗಟ್ಟು, ಸಂಘಟನಾ ಶಕ್ತಿ ಸ್ವಲ್ಪ ಕುಂದಿದೆ ಅಂತಲೇ ಹೇಳಬೇಕು.

ಅದಕ್ಕೆಲ್ಲ ಹಲವು ಕಾರಣಗಳಿವೆ. ದಿನಾಂಕ 28ರಂದು ರಾಜ್ಯ ಕಾರ್ಯಕಾರಿ ಸಮಿತಿಯ ಚುನಾವಣೆ ಮಹತ್ವದ ಘಟ್ಟ ತಲುಪಿದೆ. ನಿನ್ನೆಯಾದ ಲೋಪಗಳು ನಾಳೆಗೆ ಮರುಕಳಿಸಬಾರದು. ನೌಕರ ಬಂಧುಗಳ ಶ್ರೇಯಸ್ಸಿಗಾಗಿ ತಪಸ್ಸಿನ ರೀತಿಯಲ್ಲಿ ಹೋರಾಟ ಮಾಡುವ ಸಂಘದ ಸದಸ್ಯರ ಹಿತ ಕಾಯುವ ಪ್ರಾಮಾಣಿಕ ವ್ಯಕ್ತಿಗಳ ಕೈಗೆ ಅಧಿಕಾರದ ಚುಕ್ಕಾಣಿ ಕೊಡಬೇಕಿದೆ. ಹೊಸ ಕನಸುಗಳನ್ನು ನನಸು ಮಾಡಲು ಸಂಕಲ್ಪ ಹೊಂದಿರುವ ಅಭ್ಯರ್ಥಿಗಳ ಆಯ್ಕೆ ಮಾಡಬೇಕಾದರೆ ಜವಾಬ್ದಾರಿ ಕೂಡ ಇದೆ. ಮತದಾರ ಬಂಧುಗಳು ವಿವೇಚನೆಯಿಂದ ಆತ್ಮಸಾಕ್ಷಿಯ ಅನುಗುಣವಾಗಿ ಸಮರ್ಥ ನಾಯಕತ್ವ ಗುಣದ ಅಭ್ಯರ್ಥಿಗಳ ಗೆಲುವಿಗಾಗಿ ಮತದಾನ ಮಾಡಬೇಕಾಗಿದೆ.

ಓಪಿಎಸ್ ಜಾರಿಗಾಗಿ ರಾಷ್ಟ್ರವ್ಯಾಪ್ತಿ ಹೋರಾಟ ಮಾಡಿದ್ದು ಇತಿಹಾಸ. ನ್ಯಾಯಾಂಗ ಇಲಾಖೆಯ ಬಂಧುಗಳ ಏಕರೂಪ ವೇತನ, ಇಲಾಖೆ ಬಡ್ತಿ, ಶಿಶುಪಾಲನಾ ರಜೆ, ಖಾಲಿ ಹುದ್ದೆಗಳ ಭರ್ತಿ, ಹಿರಿಯ ಶಿರಸ್ತೇದಾರ ಹುದ್ದೆಗೆ ಪತ್ರಾಂಕಿತ ಸ್ಥಾನಮಾನ, ಅಧೀನ ನ್ಯಾಯಾಲಯಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವುದು, ಅಂತರ್ಜಿಲ್ಲಾ ವರ್ಗಾವಣೆ ಪದೋನ್ನತಿ, ವಾರ್ಷಿಕ ವೈದ್ಯಕೀಯ ತಪಾಸಣೆ, ಪಾರದರ್ಶಕ ಆಡಳಿತ, ಎಫ್‌ಎನ್‌ಜೆಪಿಸಿ ಅನುಷ್ಠಾನದಲ್ಲಿರುವ ಕೆಲ ತಾಂತ್ರಿಕ ತೊಂದರೆಗಳ ನಿವಾರಣೆ, ಅಧೀನ ನ್ಯಾಯಾಲಯಗಳ ಸಿಬ್ಬಂದಿ ಸಮಸ್ಯೆ, ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಲಿಂಗ ತಾರತಮ್ಯ ನಿವಾರಣೆ ಹೀಗೆ ಹಲವಾರು ಸಮಸ್ಯೆಗಳಿಗೆ ನಾಡಿನ ತುಂಬೆಲ್ಲ ಯಾವುದೇ ಮಹಿಳಾ ನೌಕರರ ಕಷ್ಟಗಳಿಗೆ ಸ್ಪಂದಿಸುವ ತಾಯಿಗುಣ ಹೊಂದಿದವರು ಎಂ. ಮಲ್ಲಿಕಾ.

ಇಂತಹ ಅಪರೂಪದ ಸಂಘಟನಾ ಚತುರ ನಾಯಕಿಗೆ ನಮ್ಮ ಬೆಂಬಲ ಅವಶ್ಯವಾಗಿದೆ. ಮಹತ್ವಾಕಾಂಕ್ಷೆಯು ಕಾರ್ಯಕ್ಷಮತೆಯನ್ನು ಮೀರಿಸಿದಾಗ ಅದು ಹತಾಶೆಗೆ ಕಾರಣವಾಗುತ್ತದೆ. ಆದರೆ, ಕಾರ್ಯಕ್ಷಮತೆಯು ಮಹತ್ವಾಕಾಂಕ್ಷಿಯನ್ನು ಮೀರಿಸಿದಾಗ ಅದನ್ನು ಯಶಸ್ಸು ಎಂದು ಕರೆಯುತ್ತಾರೆ. ಇಂತಹ ಯಶಸ್ಸಿಗೆ ಮುನ್ನುಡಿ ಬರೆಯಲು ಎಂ. ಮಲ್ಲಿಕಾ ಅವರ ತಂಡವನ್ನು ಬೆಂಬಲಿಸಿ.

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಉಪಾಧ್ಯಕ್ಷರಾಗಿ, ಎನ್‌ಪಿಎಸ್ ಹೋರಾಟದ ಮುಂಚೂಣಿಯಲ್ಲಿದ್ದು ದೇಶದ ತುಂಬ ತಿರುಗಾಡಿ ನೌಕರರ ಬಂಧುಗಳಲ್ಲಿ ಜಾಗೃತಿ ಮೂಡಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಋತುಚಕ್ರ ರಜೆ ಮಂಜೂರಾತಿಗಾಗಿ ಶ್ರಮಿಸಿ, ಕಳೆದ ಎರಡು ದಶಕಗಳಿಂದ ಹೋರಾಟದ ಹಾದಿಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಹೆಜ್ಜೆ ಹಾಕುತ್ತಿರುವ ಎಂ. ಮಲ್ಲಿಕಾ ಒಬ್ಬ ಸಮರ್ಥ ನಾಯಕತ್ವ ಗುಣದ ಅಭ್ಯರ್ಥಿ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಮಕಾನದಾರ ಅಭಿಪ್ರಾಯಪಟ್ಟಿದ್ದಾರೆ.

  • ಎ.ಎಸ್. ಮಕಾನದಾರ.

ಕೋಟುಮಚಗಿಯಲ್ಲಿ ಅಬಕಾರಿ ದಾಳಿ: 345 ಗ್ರಾಂ ಗಾಂಜಾ ವಶ – ಮಹಿಳೆ ಬಂಧನ

0

ಗದಗ: ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ನಡೆಸಿದ ಮಿಂಚಿನ ದಾಳಿಯಲ್ಲಿ 345 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡು ಮಹಿಳೆಯನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಬೆಳಿಗ್ಗೆ ಗಸ್ತು ಕಾರ್ಯದಲ್ಲಿದ್ದ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ಕೈಗೊಂಡರು. ಅಬಕಾರಿ ಉಪ ಅಧೀಕ್ಷಕ ಭೀಮಣ್ಣ ರಾಠೋಡ್ ನೇತೃತ್ವದಲ್ಲಿ, ವಲಯ ನಿರೀಕ್ಷಕರಾದ ಸುಮಾ ಜಿ.ಎಂ., ಸುವರ್ಣ ಕೋಟೆ ಹಾಗೂ ಉಪ ನಿರೀಕ್ಷಕ ಎನ್.ಆರ್. ಸಾಳುಂಕೆ ಸೇರಿದಂತೆ ಸಿಬ್ಬಂದಿ ಮತ್ತು ಪಂಚರ ಸಮ್ಮುಖದಲ್ಲಿ ಕಿಲ್ಲಾ ಓಣಿಯ ನಿವಾಸಿ ಗಿರಿಜವ್ವ (44) ಅವರ ಮನೆಯಲ್ಲಿ ಶೋಧ ನಡೆಸಲಾಯಿತು.

ಶೋಧ ಕಾರ್ಯಾಚರಣೆಯ ವೇಳೆ ಮಾರಾಟ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದ ಎಲೆ, ತೆನೆ ಹಾಗೂ ಬೀಜಗಳಿಂದ ಕೂಡಿದ ಒಣ ಗಾಂಜಾವನ್ನು 41 ಸಣ್ಣ ಪ್ಲಾಸ್ಟಿಕ್ ಪೌಚ್‌ಗಳಲ್ಲಿ ಪತ್ತೆ ಹಚ್ಚಲಾಗಿದೆ. ವಶಪಡಿಸಿಕೊಂಡ ಗಾಂಜಾದ ಒಟ್ಟು ತೂಕ 345 ಗ್ರಾಂ ಆಗಿದ್ದು, ಅಂದಾಜು ಮೌಲ್ಯ ಸುಮಾರು ₹15,000 ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆ 1985ರ ಸೆಕ್ಷನ್ 8(c), 20(b)(ii)(A) ಹಾಗೂ 25ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿತಳನ್ನು ಬಂಧಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.

ಮಾದಕ ವಸ್ತುಗಳ ವಿರುದ್ಧ ಇಲಾಖೆಯ ಕ್ರಮ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಿ ಸೈಬರ್ ಕ್ರೈಂ ಜಾಲ ಭೇದಿಸಿದ ಮಂಗಳೂರು ಪೊಲೀಸರು: 6 ಮಂದಿ ಬಂಧನ

0

ಮಂಗಳೂರು: ವಿದೇಶದಲ್ಲಿರುವ ಸೈಬರ್ ಅಪರಾಧಿಗಳೊಂದಿಗೆ ಕೈಜೋಡಿಸಿ ಆನ್‌ಲೈನ್ ವಂಚನೆ ನಡೆಸುತ್ತಿದ್ದ ಆರು ಮಂದಿಯನ್ನು ಹೈದರಾಬಾದ್ನಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಶೇಖ್ ಕರೀಮುಲ್ಲಾ, ಬುಡಿದಿನ್ನೆ ವಂಶಿ, ಬಡೆ ಶ್ರೀನಿವಾಸ್, ಪಂಡಿತಿ ಕ್ರಾಂತಿ ಕುಮಾರ್, ಇಬ್ರಾಹಿಂ ಪ್ರಾಯ ಹಾಗೂ ಉತ್ಸಲ ಸಂತೋಷ್ ಕೃಷ್ಣ ಎಂದು ಗುರುತಿಸಲಾಗಿದೆ. ಆರೋಪಿಗಳು ಒಂದೇ ದಿನದಲ್ಲಿ ಸುಮಾರು 2 ಕೋಟಿ ರೂಪಾಯಿ ವಹಿವಾಟು ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳು ಬ್ಯಾಂಕ್ ಖಾತೆದಾರರಿಗೆ 4ರಿಂದ ಶೇಕಡಾ 6 ರಷ್ಟು ಕಮಿಷನ್ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತು ನೀಡಿ ಜನರನ್ನು ಸೆಳೆಯುತ್ತಿದ್ದರು. ಈ ಜಾಹಿರಾತನ್ನು ನಂಬಿದವರಿಂದ ಒಟಿಪಿ ಪಡೆದು, ಅದನ್ನು ವಿದೇಶದಲ್ಲಿರುವ ಸೈಬರ್ ಅಪರಾಧಿಗಳಿಗೆ ರವಾನಿಸುತ್ತಿದ್ದರು. ನಂತರ ವಿದೇಶದಲ್ಲಿದ್ದ ಖದೀಮರು ಹಣವನ್ನು ಎಗರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರಿನ ಮೊಹಮ್ಮದ್ ಇಕ್ಬಾಲ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 18 ಮೊಬೈಲ್ ಫೋನ್‌ಗಳು, 12 ಸಿಮ್ ಕಾರ್ಡ್‌ಗಳು, ಒಂದು ಲ್ಯಾಪ್‌ಟಾಪ್, 15 ಚೆಕ್ ಬುಕ್‌ಗಳು, 18 ಡೆಬಿಟ್ ಕಾರ್ಡ್‌ಗಳು ಹಾಗೂ 12 ಬ್ಯಾಂಕ್ ಪಾಸ್‌ಬುಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

ಚಿಕ್ಕಮಗಳೂರು ಸಹ್ಯಾದ್ರಿ ಕಾಲೇಜು ಬಸ್‌ನಲ್ಲಿ ನೈತಿಕ ಪೊಲೀಸ್‌ಗಿರಿ: ವಿದ್ಯಾರ್ಥಿಗಳ ಮೇಲೆ ಹಲ್ಲೆ

0

ಚಿಕ್ಕಮಗಳೂರು: ಚಿಕ್ಕಮಗಳೂರು ನಗರದಲ್ಲಿ ಮತ್ತೆ ನೈತಿಕ ಪೊಲೀಸ್‌ಗಿರಿ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ಸಹ್ಯಾದ್ರಿ ಕಾಲೇಜು ಬಸ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯ ಪಕ್ಕದಲ್ಲಿ ಕುಳಿತಿದ್ದ ಕಾರಣಕ್ಕೆ ಇಬ್ಬರು ಹಿಂದೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಇಂದು ಬೆಳಗ್ಗೆ ಕಾಲೇಜಿಗೆ ತೆರಳುವ ವೇಳೆ ಯೋಗೇಶ್ ಹಾಗೂ ಜಯಂತ್ ಎಂಬ ವಿದ್ಯಾರ್ಥಿಗಳು ತಮ್ಮ ಸಹಪಾಠಿ ಮುಸ್ಲಿಂ ವಿದ್ಯಾರ್ಥಿನಿಯೊಂದಿಗೆ ಒಂದೇ ಸೀಟಿನಲ್ಲಿ ಕುಳಿತಿದ್ದರು. ಇದನ್ನು ಪ್ರಶ್ನಿಸಿದ ಸಾಲಿದ್ ಮತ್ತು ರಶೀದ್ ಎಂಬ ವಿದ್ಯಾರ್ಥಿಗಳು, ಯೋಗೇಶ್ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಂಡಿದ್ದಾರೆ. ಜಗಳ ತಡೆಯಲು ಮುಂದಾದ ಜಯಂತ್ ಮೇಲೂ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.

ಎಲ್ಲರೂ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಸ್ನೇಹದ ನೆಲೆಯಲ್ಲಿ ಒಟ್ಟಿಗೆ ಕುಳಿತದ್ದೇ ಗಲಾಟೆಗೆ ಕಾರಣವಾಗಿದೆ. ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕಾಲೇಜು ಆಡಳಿತ ಮಂಡಳಿ ಬಸವನಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಸಂಬಂಧಪಟ್ಟ ವಿದ್ಯಾರ್ಥಿಗಳನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಒಂದೇ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ನಡುವಿನ ಸ್ನೇಹವನ್ನು ತಪ್ಪಾಗಿ ಅರ್ಥೈಸಿ ಹಲ್ಲೆಗೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಟಿ20 ವಿಶ್ವಕಪ್ ಬಳಿಕ ಐಪಿಎಲ್ ಸಂಭ್ರಮ: ಈ ದಿನದಿಂದ 19ನೇ ಸೀಸನ್ ಆರಂಭ!

0

2026ರ ಟಿ20 ವಿಶ್ವಕಪ್ ಮುಕ್ತಾಯದ ಹಂತದಲ್ಲಿದ್ದು, ಮಾರ್ಚ್ 8ರಂದು ಫೈನಲ್ ಪಂದ್ಯ ನಡೆಯಲಿದೆ.

ವಿಶ್ವಕಪ್ ಅಂತ್ಯಗೊಂಡ ತಕ್ಷಣವೇ ದೇಶದ ಜನಪ್ರಿಯ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ 19ನೇ ಆವೃತ್ತಿಗೆ ಚಾಲನೆ ಸಿಗಲಿದೆ. 2026ರ ಐಪಿಎಲ್ ಪೂರ್ಣ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಆದರೆ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಪಂದ್ಯಾವಳಿ ಆರಂಭವಾಗುವುದು ಖಚಿತವಾಗಿದೆ.

ಮೊದಲಿಗೆ ಮಾರ್ಚ್ 26ರಿಂದ ಐಪಿಎಲ್ ಆರಂಭವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮಾರ್ಚ್ 28ರಿಂದ ಟೂರ್ನಿ ಆರಂಭಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಆರಂಭದ ದಿನಾಂಕದಲ್ಲಿ ಬದಲಾವಣೆ ಇದ್ದರೂ, ಫೈನಲ್ ಪಂದ್ಯ ಮಾತ್ರ ಮೇ 31ರಂದು ನಡೆಯಲಿದೆ. ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಐಪಿಎಲ್ ಆಡಳಿತ ಮಂಡಳಿ ಮುಂದಿನ ವಾರ ಸಭೆ ನಡೆಸಿ ವೇಳಾಪಟ್ಟಿಗೆ ಅಧಿಕೃತ ಅನುಮೋದನೆ ನೀಡಲಿದೆ ಎನ್ನಲಾಗಿದೆ.

ಐಪಿಎಲ್ ವೇಳಾಪಟ್ಟಿ ಪ್ರಕಟಣೆಯಲ್ಲಿ ವಿಳಂಬವಾಗಲು ನಾಲ್ಕು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಪ್ರಮುಖ ಕಾರಣವಾಗಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇರಳದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ದಿನಾಂಕ ಪ್ರಕಟಣೆಗೆ ಬಿಸಿಸಿಐ ಕಾಯುತ್ತಿದೆ. ಈ ಕಾರಣದಿಂದಲೇ 2026ರ ಐಪಿಎಲ್ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ.

ಇನ್ನು ಪಂದ್ಯಾವಳಿಯ ಮೊದಲ ಪಂದ್ಯ ಎಲ್ಲಿ ನಡೆಯಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಹಿಂದಿನ ಆವೃತ್ತಿಯ ಚಾಂಪಿಯನ್ ತಂಡದ ತವರು ಮೈದಾನದಲ್ಲೇ ಉದ್ಘಾಟನಾ ಪಂದ್ಯ ನಡೆಯುತ್ತದೆ. ಆದರೆ ಕಳೆದ ಆವೃತ್ತಿಯ ಚಾಂಪಿಯನ್ ತಂಡದ ತವರು ಮೈದಾನದಲ್ಲಿ ಉಂಟಾದ ಅವಘಡದ ಹಿನ್ನೆಲೆ, ಅಲ್ಲಿ ಪಂದ್ಯ ನಡೆಯುವ ಕುರಿತು ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿಲ್ಲ.

ದೆಹಲಿಯಲ್ಲಿ ಬಿಜೆಪಿ ಗೆದ್ದರೆ ರಾಜಕೀಯ ತ್ಯಜಿಸುವೆ: ಕೇಜ್ರಿವಾಲ್ ಸವಾಲ್

0

ನವದೆಹಲಿ: ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತಮಗೆ, ಮನೀಶ್ ಸಿಸೋಡಿಯಾ ಹಾಗೂ ಇತರರಿಗೆ ನ್ಯಾಯಾಲಯ ಖುಲಾಸೆ ನೀಡಿದ ಹಿನ್ನೆಲೆ ಮಾತನಾಡಿದ ಅವರು, ನರೇಂದ್ರ ಮೋದಿ ಮತ್ತು ಅಮಿತ್ ಶಾ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ನ್ಯಾಯಾಲಯ ಪ್ರಕರಣವನ್ನು ನಕಲಿ ಮತ್ತು ವಿಚಾರಣೆಗೆ ಅನರ್ಹವೆಂದು ಹೇಳಿರುವುದಾಗಿ ಉಲ್ಲೇಖಿಸಿದ ಕೇಜ್ರಿವಾಲ್, ತಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ ಎಂದು ಆರೋಪಿಸಿದರು.

ದೆಹಲಿಯಲ್ಲಿ ಚುನಾವಣೆ ನಡೆಸಿ ಫಲಿತಾಂಶ ನೋಡೋಣ ಎಂದು ಸವಾಲು ಹಾಕಿದ ಅವರು, ಬಿಜೆಪಿ ಹತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ರಾಜಕೀಯ ತ್ಯಜಿಸುವುದಾಗಿ ಘೋಷಿಸಿದರು. 2021–22ರ ಅಬಕಾರಿ ನೀತಿ ರೂಪಿಸುವ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಆರೋಪಿಸಿತ್ತು. ಆದರೆ ನ್ಯಾಯಾಲಯ ಪ್ರಾಸಿಕ್ಯೂಷನ್ ಪುರಾವೆಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ತೀರ್ಪು ನೀಡಿದೆ.

ಮದುವೆಗೆ ನಿರಾಕರಣೆ: ಪ್ರೇಯಸಿಯಿಂದ ಜಿಮ್ ಟ್ರೈನರ್​​ಗೆ ಚಾಕು ಇರಿತ!

0

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿಯಲ್ಲಿ ಪ್ರೇಮ ಕಲಹ ಭೀಕರ ತಿರುವು ಪಡೆದಿದೆ.

ತಾನು ಪ್ರೀತಿಸಿದ್ದ ಯುವಕ ಮದುವೆಗೆ ನಿರಾಕರಿಸಿ ದೂರವಾಗುತ್ತಿದ್ದಾನೆಂಬ ಆಕ್ರೋಶದಿಂದ 30 ವರ್ಷದ ಸುಧಾ ತನ್ನ ಪ್ರಿಯಕರ 27 ವರ್ಷದ ವೇಣುಗೋಪಾಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ. ಜಿಮ್‌ನಲ್ಲಿ ಪರಿಚಯವಾಗಿ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಇವರ ಸಂಬಂಧದಲ್ಲಿ ಕಳೆದ ನಾಲ್ಕು ತಿಂಗಳಿಂದ ಅಂತರ ಉಂಟಾಗಿತ್ತು ಎನ್ನಲಾಗಿದೆ.

ನಿನ್ನೆ ಸಂಜೆ ಮಾತನಾಡಬೇಕೆಂದು ಮನೆ ಹೊರಗೆ ಕರೆಸಿಕೊಂಡ ಸುಧಾ, ಕೆಲಕಾಲ ವಾಗ್ವಾದದ ಬಳಿಕ ವೇಣುಗೋಪಾಲ್‌ನ ಎದೆ, ಹೊಟ್ಟೆ ಮತ್ತು ಕೈ ಭಾಗಗಳಿಗೆ ಚಾಕು ಇರಿದು ಪರಾರಿಯಾಗಿದ್ದಾಳೆ. ರಕ್ತದ ಮಡುವಿನಲ್ಲಿದ್ದ ವೇಣು, ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಕಠ್ಮಂಡುವಿನಲ್ಲಿ ಇಳಿಯಲು ಅನುಮತಿ ಇಲ್ಲ: ಎರಡು ದಿನ ವಿಮಾನದಲ್ಲೇ ಉಳಿದ ಕನ್ನಡಿಗರು

0

ಬೆಂಗಳೂರು: ಬೆಂಗಳೂರಿನಿಂದ ನೇಪಾಳದ ಕಠ್ಮಂಡುಗೆ ತೆರಳುತ್ತಿದ್ದ ಕನ್ನಡಿಗರು ಭಾರೀ ಸಂಕಷ್ಟ ಅನುಭವಿಸಿದ ಘಟನೆ ನಡೆದಿದೆ. ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಕಠ್ಮಂಡುವಿನಲ್ಲಿ ವಿಮಾನ ಇಳಿಯಲು ಅನುಮತಿ ಸಿಗದೆ, ಪ್ರಯಾಣಿಕರು ಎರಡು ದಿನಗಳ ಕಾಲ ವಿಮಾನದಲ್ಲೇ ಉಳಿಯುವಂತಾಯಿತು.

ಫೆಬ್ರವರಿ 26ರಂದು ಬೆಳಗ್ಗೆ ಬೆಂಗಳೂರಿನಿಂದ ಕಠ್ಮಂಡುಗೆ ಪ್ರಯಾಣ ಆರಂಭಿಸಿದ್ದ ವಿಮಾನವು, ಲ್ಯಾಂಡಿಂಗ್ ಅನುಮತಿ ಸಿಗದ ಕಾರಣ ದಿನಪೂರ್ತಿ ಆಕಾಶದಲ್ಲೇ ಸುತ್ತಾಡಿತು. ಬಳಿಕ ರಾತ್ರಿ ಮತ್ತೆ ಬೆಂಗಳೂರಿಗೆ ಮರಳಿತು. ಇದರಿಂದ ಪ್ರವಾಸಕ್ಕೆಂದು ತೆರಳಿದ್ದ ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾದರು.

ಪ್ರಯಾಣಿಕರ ಆರೋಪದಂತೆ, ವಿಮಾನದಲ್ಲಿದ್ದ ಅವಧಿಯಲ್ಲಿ ಸರಿಯಾದ ಆಹಾರ ಹಾಗೂ ಕುಡಿಯುವ ನೀರು ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದಾಗಿ ಮಕ್ಕಳು, ವೃದ್ಧರು ಸೇರಿ ಹಲವರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.

ನಂತರ ಫೆಬ್ರವರಿ 27ರ ಬೆಳಗ್ಗೆ ಮತ್ತೆ ಅದೇ ವಿಮಾನದಲ್ಲಿ ಸುಮಾರು 170 ಪ್ರಯಾಣಿಕರನ್ನು ಕಠ್ಮಂಡುಗೆ ಕರೆದೊಯ್ಯಲಾಗಿದೆ. ಈ ಅವಾಂತರದಿಂದಾಗಿ ಪ್ರಯಾಣಿಕರಲ್ಲಿ ಆತಂಕ ಹಾಗೂ ಆಕ್ರೋಶ ವ್ಯಕ್ತವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ವಿಮಾನ ಸಂಸ್ಥೆ ಹಾಗೂ ಅಧಿಕಾರಿಗಳಿಂದ ಸ್ಪಷ್ಟನೆ ನಿರೀಕ್ಷಿಸಲಾಗಿದೆ.

error: Content is protected !!