Home Blog Page 11

ಪ್ರಧಾನಿ ಮೋದಿಯವರು ನೀಟ್ ವಿದ್ಯಾರ್ಥಿಗಳಿಗೆ ಬೇಷರತ್ ಕ್ಷಮೆ ಕೋರಬೇಕು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ವೈದ್ಯಕೀಯ ಕಾಲೇಜುಗಳಿಗೆ ಪರೀಕ್ಷೆ ನಡೆಸುವ ಸಿ ಇ ಟಿ ವ್ಯವಸ್ಥೆಯನ್ನು ನಡೆಸಲು ರಾಜ್ಯಗಳಿಗೇ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು. ಅವರು ಇಂದು ಫ್ರೀಡಂ ಪಾರ್ಕ್ ನಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದರು.

ನೀಟ್ ಪರೀಕ್ಷೆಯ ಪ್ರಶ್ನೆ ಸೋರಿಕೆಯಾಗಿದ್ದು, ಇದಕ್ಕೆ ಜವಾಬ್ದಾರರಾಗಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಾಗಲಿ ಅಥವಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಾಗಲಿ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ. ಧರ್ಮೇಂದ್ರ ಪ್ರಧಾನ್ ಅವರು ನೀಟ್ ಪರೀಕ್ಷೆಗೆ ಮತ್ತೊಂದು ದಿನಾಂಕ ನಿಗದಿ ಮಾಡಿ ಕೈ ತೊಳೆದುಕೊಂಡಿದ್ದು , ಈ ಜವಾಬ್ದಾರಿಯನ್ನು ಧರ್ಮೇಂದ್ರ ಪ್ರಧಾನ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಹೊರಬೇಕು ಎಂದರು.

ಸಿಇ ಟಿ ಪರೀಕ್ಷೆ ಪಾರದರ್ಶಕವಾಗಿತ್ತು

ಕರ್ನಾಟಕ ಮತ್ತಿತರೆ ರಾಜ್ಯಗಳಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಬಯಸುವವರಿಗೆ ಸಿಇ ಟಿ ಪರೀಕ್ಷೆ ಪಾರದರ್ಶಕವಾಗಿ ನಡೆಯುತ್ತಿತ್ತು. ನರೇಂದ್ರ ಮೋದಿಯವರು 2014 ರಲ್ಲಿ ಪ್ರಧಾನಿಗಳಾದ ನಂತರ ಹಿಂದೆ ಇದ್ದ ಪದ್ಧತಿಯನ್ನು ಬದಲಾಯಿಸಿ 2016 ರಲ್ಲಿ ನೀಟ್ ಪರೀಕ್ಷೆಯನ್ನು ಜಾರಿಗೆ ತಂದರು. ಹತ್ತು ವರ್ಷಗಳಲ್ಲಿ ಐದು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.

ನೀಟ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಒಂದು ವರ್ಷದಿಂದ ತಯಾರಿ ಮಾಡಿಕೊಂಡಿರುತ್ತಾರೆ. ಅನೇಕರು ಕೋಚಿಂಗ್ ಸೆಂಟರ್ ಗಳಲ್ಲಿ ತರಬೇತಿ ಪಡೆಯಲು ಸಾವಿರಾರು ರೂ ವೆಚ್ಚ ಮಾಡಿರುತ್ತಾರೆ. ಹಣವಿದ್ದವರು ಕೋಚಿಂಗ್ ಪಡೆಯುತ್ತಾರೆ, ಹಣ ಇಲ್ಲದ ಬಡವರು, ಗ್ರಾಮೀಣ ಪ್ರದೇಶದ ಮಕ್ಕಳು ಕೋಚಿಂಗ್ ಪಡೆಯಲಾಗುವುದಿಲ್ಲ ಎಂದರು.

ಮೋದಿ ಸರ್ಕಾರದಲ್ಲಿ ಬೇಧ ಭಾವ

ಮೋದಿ ಸರ್ಕಾರ ಬಂದ ನಂತರ ಬೇಧಭಾವ ಉಂಟು ಮಾಡುತ್ತಿದ್ದಾರೆ. ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಮಕ್ಕಳ ಬಗ್ಗೆ ಅಲಕ್ಷ್ಯ ಮಾಡುತ್ತಿದ್ದಾರೆ ಎನ್ನಲು ಇದು ಸಾಕ್ಷಿ ಎಂದರು.

ವೈದ್ಯಕೀಯ ಪ್ರವೇಶ ಪರೀಕ್ಷೆ ಕೇಂದ್ರೀಕೃತವಾಗಬಾರದು

ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವ ವಿಷಯ. ಒಕ್ಕೂಟದ ವ್ಯವಸ್ಥೆಯಲ್ಲಿ ಆಯಾ ರಾಜ್ಯಗಳಿಗೆ ಸ್ವಾತಂತ್ರ್ಯ ನೀಡಬೇಕು. ಅದು ಬಿಟ್ಟು ಕೇಂದ್ರೀಕರಿಸುವ ಕೆಲಸ ಮಾಡಬಾರದು ಎಂದರು.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಗಳು ಮರುಕಳಿಸಿವೆ

ಕಳೆದ ಬಿಜೆಪಿ ಸರ್ಕಾರದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ ಇಂಜಿನಿಯರ್, ಸಬ್ ಇನ್ಸ್ಪೆಕ್ಟರ್ ನೇಮಕಾತಿ ಯ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಸಂಬಂಧ ಎಡಿಜಿಪಿಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಜೈಲಿಗೆ ಹೋಗಿರುವುದು ಕರ್ನಾಟಕದ ಇತಿಹಾಸದಲ್ಲಿ ಎಂದಿಗೂ ನಡೆದಿರಲಿಲ್ಲ.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಇಂತಹ ಪ್ರಶ್ನೆ ಪತ್ರಿಕೆ ಸೋರಿಕೆಗಳು ಬಹಳಷ್ಟು ನಡೆದಿವೆ. ಇದರ ಹೊಣೆಗಾರಿಕೆಯನ್ನು ಪ್ರಧಾನಿ ಮೋದಿಯವರು ಹೊರಬೇಕಿದೆ. ಆದರೆ ಅವರು ಪ್ರಸ್ತುತ ಇಟಲಿ ದೇಶಕ್ಕೆ ವಿದೇಶ ಪ್ರವಾಸದಲ್ಲಿದ್ದಾರೆ ಎಂದರು.

ಶೇ. 69 ರಷ್ಟು ಯುವಜನತೆ ನಿರುದ್ಯೋಗಿಗಳಾಗಿದ್ದಾರೆ

ದೇಶದ ಜನರಿಗೆ ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಡೀಸೆಲ್ ಮಿತವ್ಯಯ ಮಾಡಿ, ವಿದೇಶ ಪ್ರವಾಸ ಮಾಡಬೇಡಿ ಎಂದು ಕರೆ ನೀಡಿ, ತಾವು ಮಾತ್ರ ಐದು ದೇಶಗಳ ವಿದೇಶಿ ಪ್ರವಾಸದಲ್ಲಿದ್ದಾರೆ. ದೇಶದಲ್ಲಿ 20 ರಿಂದ 29 ವಯೋಮಾನದ ಯುವಕ ಯುವತಿಯರಲ್ಲಿ ಶೇ. 67 ರಷ್ಟು ಯುವಜನತೆ ನಿರುದ್ಯೋಗಿಗಳಾಗಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಒದಗಿಸುವ ಮೂಲಕ ಕಳೆದ 12 ವರ್ಷಗಳ ಪ್ರಧಾನಿ ಮೋದಿಯವರ ಆಡಳಿತದಲ್ಲಿ 24 ಕೋಟಿ ಉದ್ಯೋಗಗಳು ಸೃಷ್ಠಿಯಾಗಬೇಕಿತ್ತು. ಆದರೆ ಈವರೆಗೆ 2 ಕೋಟಿಯಷ್ಟೂ ಉದ್ಯೋಗವನ್ನು ಕೊಡಲಾಗಲಿಲ್ಲ ಎಂದರು.

ಬಿಜೆಪಿ ಆರ್ ಎಸ್ ಎಸ್ ನವರಿಂದ ದ್ವೇಷ ಹುಟ್ಟುಹಾಕುವ ಹುನ್ನಾರ

ಸಮಾಜದಲ್ಲಿ ಹಿಂದುಮುಸ್ಲಿಂ ನಡುವೆ ದ್ವೇಷ ಹುಟ್ಟುಹಾಕುವ ವ್ಯವಸ್ಥಿತವಾದ ಹುನ್ನಾರವನ್ನು ಬಿಜೆಪಿ, ಆರ್ ಎಸ್ ಎಸ್ ಹಾಗೂ ಎಬಿವಿಪಿ ಮಾಡುತ್ತಿದೆ. ದೇಶದಲ್ಲಿ 2016 ರಿಂದ ಇಲ್ಲಿಯವರೆಗೆ 5 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಆದ್ದರಿಂದ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಕೇವಲ ನೀಟ್ ಪರೀಕ್ಷೆಯನ್ನು ಮುಂದೂಡುವ ಜೊತೆಗೆ ,

ಪ್ರಕರಣದ ಹೊಣೆಹೊತ್ತು ರಾಜೀನಾಮೆಯನ್ನು ಹೊರಬೇಕು. ಆದರೆ ಬಿಜೆಪಿಯವರು ಭಂಡತನ ಪ್ರದರ್ಶಿಸಿ ರಾಜಿನಾಮೆ ಕೊಡಲು ಮನಸ್ಸು ಮಾಡುತ್ತಿಲ್ಲ. ಕೇಂದ್ರ ಶಿಕ್ಷಣ ಸಚಿವರು ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡುವವರೆಗೂ ಇಲ್ಲಿನ ಹೋರಾಟವನ್ನು ಮುಂದುವರೆಸಬೇಕು ಎಂದರು.

ನೀಟ್ ವಿದ್ಯಾರ್ಥಿಗಳ ಆತ್ಮಹತ್ಯೆ- ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ

ಸತತ ಪರಿಶ್ರಮ ನೀಡಿದ್ದ ವಿದ್ಯಾರ್ಥಿಗಳು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಕರಣದಿಂದ ಹತಾಶರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿತ್ತು.

ಅವರು ರಾಜಿನಾಮೆಯನ್ನು ಕೊಡಬೇಕೆಂದು ಒತ್ತಾಯ ಮಾಡಿದರು. ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣರಾದ ಪ್ರಕರಣದ ರೂವಾರಿಗಳನ್ನು ಕೊಲೆಗಾರರೆಂದು ಪರಿಗಣಿಸಿ ಶಿಕ್ಷೆ ನೀಡಬೇಕು. ಪ್ರಧಾನಿ ಮೋದಿಯವರು ತಮ್ಮ ವಿದೇಶಿ ಪ್ರವಾಸವನ್ನು ಮೊಟಕುಗೊಳಿಸಿ, ನೀಟ್ ಪರೀಕ್ಷೆ ಬರೆದ ಯುವಜನರ ಬೇಷರತ್ ಕ್ಷಮೆ ಯಾಚಿಸಬೇಕು ಎಂದರು.

ನೀಟ್ ಪರೀಕ್ಷೆ ನಡೆಸುವ ಅಧಿಕಾರ ರಾಜ್ಯಗಳಿಗೆ ನೀಡಲಿ

ಇನ್ನುಮುಂದೆ ಕೇಂದ್ರಸರ್ಕಾರ ನೀಟ್ ಪರೀಕ್ಷೆಗಳನ್ನು ನಡೆಸದೇ, ಈ ಜವಾಬ್ದಾರಿಯನ್ನು ಆಯಾ ರಾಜ್ಯಗಳಿಗೆ ಪರೀಕ್ಷೆ ನಡೆಸುವ ಅಧಿಕಾರವನ್ನು ಕೊಡಬೇಕೆನ್ನುವ ಒತ್ತಾಯ ಮಾಡುವುದಾಗಿ ತಿಳಿಸಿದರು. ಇಂದು ರಾಜೀವ್ ಗಾಂಧಿಯವರ 35 ಪುಣ್ಯತಿಥಿಯಾಗಿದ್ದು, ಅವರ ಆದರ್ಶಗಳನ್ನು ಎಲ್ಲರೂ ಪಾಲನೆ ಮಾಡಬೇಕಿದೆ ಎಂದರು.

ಎ ಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಕಾರ್ಯದರ್ಶಿ ಅಭಿಷೇಕ್ ದತ್ತಾ, ರಾಷ್ಟ್ರೀಯ ಯುವ ಕಾಂಗ್ರೆಸ್ಸಿನ ಅಧ್ಯಕ್ಷ ಉದಯ ಬಾನು, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ, ಸಚಿವರು, ಶಾಸಕರು, ಉಪಸ್ಥಿತರಿದ್ದರು.

ತುಮಕೂರನ್ನು ಬೆಳೆಸುವ ಉದ್ದೇಶವೇ ಹೊರತು ಇತಿಹಾಸ ಬದಲಿಸುವುದಲ್ಲ: ಬಿಜೆಪಿ ಟೀಕೆಗೆ ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು: ತುಮಕೂರಿನ ಇತಿಹಾಸ ಅಥವಾ ಅಸ್ತಿತ್ವವನ್ನು ಬದಲಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಮಾತ್ರ ತುಮಕೂರನ್ನು ಬೆಂಗಳೂರು ಉತ್ತರ ಭಾಗದೊಂದಿಗೆ ಸಂಪರ್ಕಿಸುವ ಕುರಿತು ಪ್ರಸ್ತಾಪ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ನಗರದ ಸದಾಶಿವನಗರದಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರನ್ನು ಬೆಂಗಳೂರಿಗೆ ಸೇರಿಸುವುದೇ ನಮ್ಮ ಉದ್ದೇಶವಲ್ಲ. ಈ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ತುಮಕೂರು ಜಿಲ್ಲೆಯ ಹೆಸರನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ತುಮಕೂರಿಗೆ ತನ್ನದೇ ಆದ ಇತಿಹಾಸ, ಅಸ್ಮಿತೆ ಮತ್ತು ಭಾವನಾತ್ಮಕ ಸಂಬಂಧವಿದೆ. ಅದನ್ನು ಬದಲಿಸಲು ಯಾರೂ ಹೋಗುವುದಿಲ್ಲ. ಬಂಡವಾಳ ಹೂಡಿಕೆ ಸೇರಿದಂತೆ ಹೆಚ್ಚಿನ ಅಭಿವೃದ್ಧಿ ಅವಕಾಶಗಳು ತುಮಕೂರಿಗೆ ಸಿಗಲಿ ಎಂಬ ಉದ್ದೇಶದಿಂದ ಮಾತ್ರ ಈ ವಿಚಾರ ಪ್ರಸ್ತಾಪವಾಗಿದೆ” ಎಂದು ತಿಳಿಸಿದರು.

ಬಿಜೆಪಿ ನಾಯಕರು ವಿಷಯವನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ ಪರಮೇಶ್ವರ್, “ತುಮಕೂರಿನ ಬಗ್ಗೆ ಎಲ್ಲರಿಗೂ ಇರುವ ಭಾವನೆ ನನಗೂ ಇದೆ. ನಾನು ಹುಟ್ಟಿ ಬೆಳೆದದ್ದೇ ತುಮಕೂರಿನಲ್ಲಿ. ತುಮಕೂರಿನ ಹೆಸರು, ಆಡಳಿತ ವ್ಯವಸ್ಥೆ ಅಥವಾ ಭೌಗೋಳಿಕ ವಿಸ್ತೀರ್ಣ ಯಾವುದೂ ಬದಲಾಗುವುದಿಲ್ಲ” ಎಂದು ಪುನರುಚ್ಚರಿಸಿದರು.

ಬೆಂಗಳೂರಿಗೆ ಹತ್ತಿರ ಇರುವ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ವಲಯದೊಂದಿಗೆ ಅಭಿವೃದ್ಧಿ ದೃಷ್ಟಿಯಿಂದ ಸಂಪರ್ಕಿಸಬೇಕೆಂದು ಕೇಳಲಾಗಿದೆ ಅಷ್ಟೇ ಎಂದು ಹೇಳಿದರು.

ದೆಹಲಿ ಸಮೀಪದ ನೋಯ್ಡಾ ಮಾದರಿಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, “ದೇಶದ ವಿವಿಧ ಭಾಗಗಳಲ್ಲಿ ಅಭಿವೃದ್ಧಿಯನ್ನು ವಿಕೇಂದ್ರೀಕರಿಸುವ ಉದ್ದೇಶದಿಂದ ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ತುಮಕೂರನ್ನೂ ಅಭಿವೃದ್ಧಿಪಡಿಸಬಾರದೆಯೇ?” ಎಂದು ಪ್ರಶ್ನಿಸಿದರು.

ವನ್ಯಜೀವಿ ದಾಳಿ ಹೆಚ್ಚಳಕ್ಕೆ ಸರ್ಕಾರದ ಕಠಿಣ ಕ್ರಮ: ಓಪನ್ ಜೀಪ್ ಸಫಾರಿಗೆ ಬ್ರೇಕ್- ಪನ್ಸೋಲಿ ಆನೆ ಬಿಡಾರಕ್ಕೆ ಪ್ರವೇಶ ನಿರ್ಬಂಧ

ಬೆಂಗಳೂರು/ಕಾರವಾರ, ಮೇ 21: ರಾಜ್ಯದಲ್ಲಿ ವನ್ಯಜೀವಿ ದಾಳಿ ಪ್ರಕರಣಗಳು ಸರಣಿ ರೂಪದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದ್ದು, ಇನ್ನುಮುಂದೆ ಓಪನ್ ಜೀಪ್ ಸಫಾರಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಪ್ರವಾಸಿಗರಿಗೆ ಕೇವಲ ಬಸ್ ಸಫಾರಿಗೆ ಮಾತ್ರ ಅವಕಾಶ ನೀಡಲು ಸರ್ಕಾರ ಮುಂದಾಗಿದೆ.

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ನಡೆದ ಭೀಕರ ದುರಂತ, ನಾಗಮಲೆ ಭಾಗದಲ್ಲಿ ಚಿರತೆ ದಾಳಿಗೆ 10 ವರ್ಷದ ಬಾಲಕ ಬಲಿಯಾದ ಘಟನೆ ಹಾಗೂ ಬಂಡೀಪುರ-ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದ್ದ ಹುಲಿ ದಾಳಿಗಳ ಸರಣಿ ಪ್ರಕರಣಗಳು ಸರ್ಕಾರವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿವೆ.

ದುಬಾರೆ ಶಿಬಿರದಲ್ಲಿ ಮೇ 18ರಂದು ಮದವೇರಿದ್ದ ಕಂಜನ್ ಆನೆ ಮಾರ್ತಾಂಡ ಆನೆ ಮೇಲೆ ದಾಳಿ ನಡೆಸಿದ ಪರಿಣಾಮ ನಿಯಂತ್ರಣ ತಪ್ಪಿದ ಮಾರ್ತಾಂಡ ಪ್ರವಾಸಿಗರ ಮೇಲೆ ಬಿದ್ದಿತ್ತು. ಘಟನೆಯಲ್ಲಿ ಚೆನ್ನೈ ಮೂಲದ ಮಹಿಳೆ ತುಳಸಿ ಸಾವನ್ನಪ್ಪಿದ್ದರೆ, ಮಾರ್ತಾಂಡ ಆನೆಯೂ ಗಂಭೀರ ಗಾಯಗಳಿಂದ ಬಳಿಕ ಮೃತಪಟ್ಟಿತ್ತು. ಈ ಘಟನೆ ರಾಜ್ಯಾದ್ಯಂತ ಭಾರೀ ಆತಂಕ ಸೃಷ್ಟಿಸಿತ್ತು.

ಇದರ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪನ್ಸೋಲಿ ಆನೆ ಬಿಡಾರಕ್ಕೂ ಸಾರ್ವಜನಿಕರ ಪ್ರವೇಶ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ರಾಜ್ಯದ ವಿವಿಧ ಆನೆ ಶಿಬಿರಗಳು ಹಾಗೂ ಸಫಾರಿ ಕೇಂದ್ರಗಳಲ್ಲಿ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅರಣ್ಯ ಇಲಾಖೆ ಮುಂದಾಗಿದೆ.

ಹೊಸ ಎಸ್‌ಒಪಿ ಪ್ರಕಾರ, ಈಗಾಗಲೇ ಬಳಕೆಯಲ್ಲಿರುವ ಓಪನ್ ಜೀಪ್‌ಗಳಲ್ಲಿ ಸಫಾರಿ ನಡೆಸಬೇಕಾದರೆ ಕಡ್ಡಾಯವಾಗಿ ಒಡೆಯದ ಗ್ಲಾಸ್ ಅಥವಾ ಕಬ್ಬಿಣದ ಮೆಶ್ ಅಳವಡಿಸಬೇಕು ಎಂದು ಸೂಚಿಸಲಾಗಿದೆ. ಪ್ರವಾಸಿಗರು ಮತ್ತು ವನ್ಯಜೀವಿಗಳ ನಡುವೆ ಸುರಕ್ಷಿತ ಅಂತರ ಕಾಪಾಡುವುದು, ನಿಯಂತ್ರಿತ ಪ್ರವಾಸ ವ್ಯವಸ್ಥೆ ರೂಪಿಸುವುದು ಹಾಗೂ ಅಪಾಯದ ಪ್ರದೇಶಗಳಲ್ಲಿ ಮಾನವ ಚಟುವಟಿಕೆ ಕಡಿಮೆ ಮಾಡುವುದು ಸರ್ಕಾರದ ಮುಂದಿನ ಗುರಿಯಾಗಿದೆ.

ರಾಜ್ಯದ ಎಲ್ಲಾ ವನ್ಯಜೀವಿ ಪ್ರವಾಸಿ ತಾಣಗಳಲ್ಲಿ ಹೆಚ್ಚುವರಿ ಭದ್ರತಾ ಮಾನದಂಡ ಜಾರಿಗೆ ತರಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಸಮಗ್ರ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆ ಇದೆ.

ಆಸ್ಪತ್ರೆ ವಿವಾದ ಮರೆತ ಸಲ್ಲು ಭಾಯ್: ಒಂದೇ ದಿನದಲ್ಲಿ ಪಾಪರಾಜಿಗಳನ್ನು ಕ್ಷಮಿಸಿದ ನಟ

ಮುಂಬೈ: ಆಸ್ಪತ್ರೆ ಆವರಣದಲ್ಲಿ ಪಾಪರಾಜಿಗಳ ವರ್ತನೆಗೆ ಸಿಟ್ಟುಗೊಂಡು ತರಾಟೆಗೆ ತೆಗೆದುಕೊಂಡಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಇದೀಗ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಆಸ್ಪತ್ರೆ ವಿವಾದದ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಅವರು, ಫೋಟೋಗ್ರಾಫರ್‌ಗಳ ಕ್ಷಮೆಯನ್ನು ಸ್ವೀಕರಿಸಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಮುಂಬೈನಲ್ಲಿ ನಡೆದ ‘ರಾಜಾ ಶಿವಾಜಿ’ ಚಿತ್ರದ ಸಕ್ಸಸ್ ಪಾರ್ಟಿಗೆ ಆಗಮಿಸಿದ್ದ ಸಲ್ಮಾನ್ ಖಾನ್ ಅವರನ್ನು ಕಂಡ ಪಾಪರಾಜಿಗಳು, ‘ಸಾರಿ ಭಾಯ್’ ಎಂದು ಒಟ್ಟಾಗಿ ಕ್ಷಮೆಯಾಚಿಸಿದರು. ಸಲ್ಮಾನ್ ಕೂಡ ಯಾವುದೇ ಅಸಮಾಧಾನ ತೋರದೆ, ನಗುಮುಖದಲ್ಲೇ ಪ್ರತಿಕ್ರಿಯಿಸಿದರು.

ಭದ್ರತಾ ಸಿಬ್ಬಂದಿ ಫೋಟೋಗ್ರಾಫರ್‌ಗಳನ್ನು ತಡೆಯಲು ಯತ್ನಿಸಿದಾಗ, ಸಲ್ಮಾನ್ ಸ್ವತಃ ಅವರನ್ನು ಹತ್ತಿರ ಬರಲು ಅವಕಾಶ ಮಾಡಿಕೊಟ್ಟರು. ಬಳಿಕ ‘ಏನಾಯ್ತು?’ ಎಂದು ಕೇಳಿದ ಅವರಿಗೆ ಪಾಪರಾಜಿಗಳು ಮತ್ತೆ ಕ್ಷಮೆ ಕೇಳಿದರು. ತಕ್ಷಣವೇ ‘ಎಲ್ಲವೂ ಸರಿ’ ಎಂಬಂತೆ ಕೈ ಸನ್ನೆ ಮಾಡಿದ ಸಲ್ಮಾನ್ ವಾತಾವರಣವನ್ನು ಸಾಮಾನ್ಯಗೊಳಿಸಿದರು.

ಈ ಸಂದರ್ಭ ಫೋಟೋಗ್ರಾಫರ್ ಒಬ್ಬ ‘ಲವ್ ಯೂ ಭಾಯ್’ ಎಂದು ಕೂಗಿದಾಗ, ಸಲ್ಮಾನ್ ನಗುತ್ತಾ ಪ್ರತಿಕ್ರಿಯಿಸಿದ ವಿಡಿಯೋ ಈಗ ವೈರಲ್ ಆಗಿದೆ. ಬಳಿಕ ‘ಸ್ವಲ್ಪ ಜೋರಾಗಿ ಹೇಳಿ… ಕೇಳಿಸಲಿಲ್ಲ’ ಎಂದು ತಮಾಷೆ ಮಾಡಿದ್ದೂ ಅಭಿಮಾನಿಗಳ ಗಮನ ಸೆಳೆದಿದೆ.

ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ, ಪಾಪರಾಜಿಗಳು ಆಸ್ಪತ್ರೆ ಹೊರಗಡೆ ಗದ್ದಲ ಸೃಷ್ಟಿಸಿ ‘ಮಾತೃಭೂಮಿ’ ಚಿತ್ರದ ಹೆಸರನ್ನು ಜೋರಾಗಿ ಕೂಗಿದ್ದರು. ಇದರಿಂದ ಕೋಪಗೊಂಡ ಸಲ್ಮಾನ್, ‘ನಿಮಗೆ ತಲೆ ಕೆಟ್ಟಿದೆಯಾ?’ ಎಂದು ಪ್ರಶ್ನಿಸಿ ಖಾಸಗಿತನದ ಮಹತ್ವದ ಬಗ್ಗೆ ಕಿಡಿಕಾರಿದ್ದರು.

ಆ ಘಟನೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಹಾಕಿದ್ದ ಅವರು, ‘ನನ್ನ ನೋವಿನಿಂದ ಹಣ ಮಾಡಬೇಡಿ’ ಎಂದು ಪಾಪರಾಜಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆದರೆ ಈಗ ಅದೇ ಪಾಪರಾಜಿಗಳೊಂದಿಗೆ ಸ್ನೇಹಪೂರ್ಣವಾಗಿ ವರ್ತಿಸಿರುವ ಸಲ್ಮಾನ್ ಖಾನ್ ಅವರ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಕನಿಷ್ಠ ವೇತನ ಹೆಚ್ಚಳದ ಹೊರೆ ಗುತ್ತಿಗೆದಾರರ ಮೇಲೆ ಹಾಕಲು ಸಾಧ್ಯವಿಲ್ಲ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು

ಬೆಂಗಳೂರು: ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆ ಮಾಡಿದ ಬಳಿಕ, ಚಾಲ್ತಿಯಲ್ಲಿರುವ ಗುತ್ತಿಗೆ ಒಪ್ಪಂದವನ್ನು ನೆಪವೊಡ್ಡಿ ಕಾರ್ಮಿಕರಿಗೆ ಹೆಚ್ಚುವರಿ ವೇತನ ಪಾವತಿಸಲು ಗುತ್ತಿಗೆದಾರರಿಗೆ ಹಣ ನೀಡುವುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಬೆಂಗಳೂರಿನ ಏಷ್ಯನ್ ಸೆಕ್ಯೂರಿಟಿ ಆ್ಯಂಡ್ ಪರ್ಸನಲ್ ಅರೇಂಜ್‌ಮೆಂಟ್ಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಭದ್ರತಾ ಸಿಬ್ಬಂದಿ ಮತ್ತು ಹೌಸ್‌ಕೀಪಿಂಗ್ ಸಿಬ್ಬಂದಿ ಪೂರೈಸಿದ ಸಂಸ್ಥೆಗೆ ಬಾಕಿಯಾಗಿರುವ ₹3.5 ಕೋಟಿ ಮೊತ್ತವನ್ನು ಶೇ.12ರಷ್ಟು ಬಡ್ಡಿಯೊಂದಿಗೆ ಪಾವತಿಸುವಂತೆ ಕರ್ನಾಟಕ ವಿಧಾನಸಭಾ ಸಚಿವಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಕನಿಷ್ಠ ವೇತನವನ್ನು ಸರ್ಕಾರವೇ ಪರಿಷ್ಕರಿಸಿದ ನಂತರ, ಗುತ್ತಿಗೆದಾರರಿಗೆ ಉಂಟಾಗುವ ಹೆಚ್ಚುವರಿ ವೆಚ್ಚವನ್ನು ಭರಿಸಲು ನಿರಾಕರಿಸುವುದು ಅಸಂಬದ್ಧ, ತರ್ಕಹೀನ ಹಾಗೂ ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

“ರಾಜ್ಯ ಸರ್ಕಾರ ಮಾಡಿಕೊಂಡ ಯಾವುದೇ ಖಾಸಗಿ ಅಥವಾ ವಾಣಿಜ್ಯ ಗುತ್ತಿಗೆ ಒಪ್ಪಂದಗಳು ದೇಶದ ಶಾಸನಬದ್ಧ ಕಾನೂನುಗಳನ್ನು ಮೀರುವಂತಿಲ್ಲ. ಹಳೆಯ ದರಗಳ ಆಧಾರದ ಮೇಲೆ ಒಪ್ಪಂದವಾಗಿದೆ ಎಂಬ ಕಾರಣಕ್ಕೆ ಸರ್ಕಾರ ಅಧಿಸೂಚನೆ ಮೂಲಕ ಹೆಚ್ಚಿಸಿರುವ ಕನಿಷ್ಠ ವೇತನವನ್ನು ತಪ್ಪಿಸಲು ಸಾಧ್ಯವಿಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.

ಅರ್ಜಿದಾರ ಸಂಸ್ಥೆ ಹಾಗೂ ಸರ್ಕಾರದ ನಡುವೆ ನಡೆದ ಒಪ್ಪಂದದಲ್ಲಿ ವೇತನ ಪರಿಷ್ಕರಣೆ ಕುರಿತು ಯಾವುದೇ ಸ್ಪಷ್ಟ ಉಲ್ಲೇಖ ಇರಲಿಲ್ಲ. ಹೆಚ್ಚುವರಿ ವೇತನದ ಹೊರೆ ಗುತ್ತಿಗೆದಾರರೇ ಭರಿಸಬೇಕು ಎಂಬ ಷರತ್ತು ಇದ್ದರೂ, ಸಂವಿಧಾನದ ವಿಧಿ 12ರ ಅಡಿಯಲ್ಲಿ ಬರುವ ಸರ್ಕಾರ ಹಾಗೂ ಅದರ ಅಂಗ ಸಂಸ್ಥೆಗಳು ಖಾಸಗಿ ಕಂಪನಿಗಳಂತೆ ಲಾಭದ ದೃಷ್ಟಿಯಿಂದ ಮಾತ್ರ ವರ್ತಿಸಬಾರದು ಎಂದು ನ್ಯಾಯಾಲಯ ಹೇಳಿದೆ.

“ಸರ್ಕಾರವು ಮಾದರಿ ಉದ್ಯೋಗದಾತವಾಗಬೇಕು. ಗುತ್ತಿಗೆಯ ಕಟ್ಟುನಿಟ್ಟಿನ ಷರತ್ತುಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಕಲ್ಯಾಣ ಕಾಯ್ದೆಗಳ ಉಲ್ಲಂಘನೆಗೆ ಪರೋಕ್ಷವಾಗಿ ಕಾರಣವಾಗಬಾರದು” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಕನಿಷ್ಠ ವೇತನ ಪಾವತಿಸುವುದು ಕೇವಲ ಒಪ್ಪಂದದ ವಿಷಯವಲ್ಲ; ಅದು ಶಾಸನಬದ್ಧ ಹಾಗೂ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಕನಿಷ್ಠ ವೇತನಕ್ಕಿಂತ ಕಡಿಮೆ ಸಂಬಳ ನೀಡುವುದು ಸಂವಿಧಾನದ 23ನೇ ವಿಧಿಯ ಅಡಿಯಲ್ಲಿ ಬಲವಂತದ ದುಡಿಮೆಗೆ ಸಮಾನವಾಗುತ್ತದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ ಕುರಿತು ಹೇಳುವುದಾದರೆ, ಅರ್ಜಿದಾರ ಸಂಸ್ಥೆ ಕರ್ನಾಟಕ ವಿಧಾನಸಭಾ ಸಚಿವಾಲಯಕ್ಕೆ ಹೌಸ್‌ಕೀಪಿಂಗ್ ಹಾಗೂ ಭದ್ರತಾ ಸಿಬ್ಬಂದಿ ಒದಗಿಸುತ್ತಿತ್ತು. 2016ರಲ್ಲಿ ರಾಜ್ಯ ಸರ್ಕಾರ ಕನಿಷ್ಠ ವೇತನ ಹೆಚ್ಚಿಸಿ ಅಧಿಸೂಚನೆ ಹೊರಡಿಸಿದ ಬಳಿಕ, ಸಂಸ್ಥೆ ಕಾರ್ಮಿಕರಿಗೆ ಹೆಚ್ಚಿದ ವೇತನ ಪಾವತಿಸಿತ್ತು.

ಈ ಹೆಚ್ಚುವರಿ ವೆಚ್ಚದ ₹3.5 ಕೋಟಿ ಮೊತ್ತವನ್ನು ಪಾವತಿಸುವಂತೆ ವಿಧಾನಸಭಾ ಸಚಿವಾಲಯಕ್ಕೆ ಬಿಲ್ ಸಲ್ಲಿಸಲಾಗಿತ್ತು. ಆದರೆ ಗುತ್ತಿಗೆ ಹಳೆಯ ದರಗಳ ಆಧಾರದ ಮೇಲೆ ಇರುವುದರಿಂದ ಹೆಚ್ಚುವರಿ ವೆಚ್ಚವನ್ನು ಗುತ್ತಿಗೆದಾರರೇ ಭರಿಸಬೇಕು ಎಂದು ಹೇಳಿ ಸರ್ಕಾರ 2024ರಲ್ಲಿ ಬಿಲ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿತ್ತು.

ಲಾಡ್ಜ್ ನಲ್ಲಿ ತಂಗಿದ್ದ ತಮಿಳುನಾಡು ಮೂಲದ ವ್ಯಕ್ತಿಗೆ ಹೃದಯಾಘಾತ! ಸ್ಥಳದಲ್ಲೇ ಸಾವು

ಬೆಂಗಳೂರು: ನಗರದ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್ೊಂದರಲ್ಲಿ ತಂಗಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಮುರುಗನ್ ಮಧು (35) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪುಳಿಯಂಪಟ್ಟಿ ನಿವಾಸಿಯಾಗಿದ್ದ ಮಧು, ಬುಧವಾರ ಮಡಿವಾಳದ ಗೋಲ್ಡನ್ ನೆಕ್ಸ್ ಲಾಡ್ಜ್‌ನಲ್ಲಿ ತಂಗಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಲಾಡ್ಜ್ ಮಾಲೀಕರು ನೀಡಿದ ದೂರಿನ ಮೇರೆಗೆ ಮಡಿವಾಳ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಮಧು ಅವಿವಾಹಿತರಾಗಿದ್ದು ತಾಯಿಯೊಂದಿಗೆ ವಾಸಿಸುತ್ತಿದ್ದರು. ಅವರು ಕಿಡ್ನಿ ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಈ ಹಿಂದೆ ಎರಡು ಬಾರಿ ಲಘು ಹೃದಯಾಘಾತಕ್ಕೂ ಒಳಗಾಗಿದ್ದರು ಎನ್ನಲಾಗಿದೆ.

ಮೇ 18ರಂದು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳುತ್ತಿರುವುದಾಗಿ ತಾಯಿಗೆ ತಿಳಿಸಿ ಮನೆಯಿಂದ ಹೊರಟಿದ್ದ ಮಧು, ಬಳಿಕ ಮಡಿವಾಳದ ಗೋಲ್ಡನ್ ನೆಕ್ಸ್ ಲಾಡ್ಜ್‌ಗೆ ಬಂದಿದ್ದರು ಎಂದು ತಿಳಿದುಬಂದಿದೆ.

ಫಜಿ ಉಲ್ಲಾ ಖಾನ್ ಹೆಸರಿನಲ್ಲಿ ಬುಕ್ ಮಾಡಲಾಗಿದ್ದ ಕೊಠಡಿಯಲ್ಲಿ ಮಧು ತಂಗಿದ್ದರು. ಬುಧವಾರ ಹೃದಯಾಘಾತದಿಂದ ಮೃತಪಟ್ಟಿರುವುದು ಪತ್ತೆಯಾಗಿದ್ದು, ಆರೋಗ್ಯ ಸಮಸ್ಯೆಯೇ ಸಾವಿಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಬಾಲಿಷ ಹೇಳಿಕೆ ಸಹಿಸುವುದಿಲ್ಲ: ಪ್ರಧಾನಿ ಮೋದಿ ಕುರಿತು ರಾಹುಲ್ ಹೇಳಿಕೆಗೆ ವಿಜಯೇಂದ್ರ ಕಿಡಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ, ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವುದನ್ನು ರಾಹುಲ್ ಗಾಂಧಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಆರೋಪಿಸಿದರು.

“ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮಟ್ಟದ ನಾಯಕರು ಈ ರೀತಿಯ ಬಾಲಿಷ ಹೇಳಿಕೆಗಳನ್ನು ನೀಡಬಾರದು. ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುವುದು ಸರಿಯಲ್ಲ” ಎಂದು ವಿಜಯೇಂದ್ರ ಹೇಳಿದರು.

ಹಿಂದುಳಿದ ವರ್ಗದ ಸಮುದಾಯದಿಂದ ಬಂದ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಭಾರತವನ್ನು ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿಯನ್ನಾಗಿ ರೂಪಿಸಿರುವ ನಾಯಕತ್ವವನ್ನು ಕಾಂಗ್ರೆಸ್ ಸಹಿಸಿಕೊಳ್ಳುತ್ತಿಲ್ಲ ಎಂದು ಟೀಕಿಸಿದರು.

ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಪಡಿಸುವ ಧೈರ್ಯ ಕಾಂಗ್ರೆಸ್‌ಗೆ ಇರಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಆ ನಿರ್ಧಾರ ಕೈಗೊಳ್ಳಲಾಯಿತು. ದೇಶದಲ್ಲಿ ನಕ್ಸಲಿಸಂ ನಿರ್ಮೂಲನೆ ಮಾಡುವ ದಿಸೆಯಲ್ಲಿಯೂ ಅಮಿತ್ ಶಾ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಪ್ರಧಾನಿ ಮೋದಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ದೇಶದ ಅಭಿವೃದ್ಧಿಯನ್ನು ಸಹಿಸದೇ ರಾಹುಲ್ ಗಾಂಧಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಶೃಂಗೇರಿ ಮರು ಮತ ಎಣಿಕೆ ಕೇಸ್‌ಗೆ ಹೊಸ ಟ್ವಿಸ್ಟ್: ಟಿ.ಡಿ.ರಾಜೇಗೌಡರಿಗೆ ಮತ್ತೆ ಸುಪ್ರೀಂ ಕೋರ್ಟ್ ರಕ್ಷಣೆ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರುಎಣಿಕೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರಿಗೆ ಸುಪ್ರೀಂ ಕೋರ್ಟ್ ಮತ್ತೆ ಮಧ್ಯಂತರ ರಿಲೀಫ್ ನೀಡಿದೆ. ಪ್ರಕರಣದ ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿರುವ ನ್ಯಾಯಾಲಯ, ಅದುವರೆಗೂ ಯಥಾಸ್ಥಿತಿ ಮುಂದುವರಿಯಬೇಕು ಎಂದು ಸ್ಪಷ್ಟ ಸೂಚನೆ ನೀಡಿದೆ.

ಬೈಕ್‌ಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನ: ಇಬ್ಬರು ಯುವಕರ ಸ್ಥಳದಲ್ಲೇ ಸಾವು

0

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಳಗಲಿ ಗ್ರಾಮದ ಬಳಿ ನಡೆದ ಭೀಕರ ಹಿಟ್ ಅಂಡ್ ರನ್ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.

ಗಂಡಸಿ ಹೋಬಳಿಯ ಕಾಲೇನಹಳ್ಳಿ ಗ್ರಾಮದ ನಿವಾಸಿಗಳಾದ ಪ್ರದೀಪ್ (22) ಮತ್ತು ಅರುಣ್ (21) ಮೃತ ದುರ್ದೈವಿಗಳಾಗಿದ್ದಾರೆ.

ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೈಕ್‌ನಲ್ಲಿ ತಮ್ಮ ಗ್ರಾಮಕ್ಕೆ ಮರಳುತ್ತಿದ್ದ ವೇಳೆ ಸೇತುವೆ ಸಮೀಪ ಅಪರಿಚಿತ ವಾಹನ ಅವರ ಬೈಕ್‌ಗೆ ವೇಗವಾಗಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ಇಬ್ಬರೂ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆ ಬಳಿಕ ವಾಹನ ಚಾಲಕ ಯಾವುದೇ ನೆರವು ನೀಡದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಹೀಗಾಗಿ ಪ್ರಕರಣ ಹಿಟ್ ಅಂಡ್ ರನ್ ಆಗಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಸ್ತೆ ಪರಿಶೀಲನೆಗೆ ಬಂದ ಸಿ.ಟಿ.ರವಿ ವಿರುದ್ಧ ಘೇರಾವ್: ಚಿಕ್ಕಮಗಳೂರಲ್ಲಿ ಹೈಡ್ರಾಮಾ

ಚಿಕ್ಕಮಗಳೂರು: ಚಿಕ್ಕಮಗಳೂರು-ಕೆ.ಆರ್.ಪೇಟೆ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆಗೆ ಬಂದಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ರಸ್ತೆ ಕಾಮಗಾರಿಯಲ್ಲಿ ಗುತ್ತಿಗೆ ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ಶಾಸಕ ಎಚ್.ಡಿ.ತಮ್ಮಯ್ಯ ಇತ್ತೀಚೆಗೆ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ, ಕಾಮಗಾರಿಯ ಪ್ರಗತಿ ಪರಿಶೀಲಿಸಲು ಸಿ.ಟಿ.ರವಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದರು.

ರಾಂಪುರ ಸರ್ಕಲ್ ಬಳಿ ಅವರು ವಾಹನದಿಂದ ಇಳಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಸುತ್ತುವರಿದು ಧಿಕ್ಕಾರ ಕೂಗಲು ಆರಂಭಿಸಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ಜೋರಾಗಿ ತಳ್ಳಾಟ-ನೂಕಾಟಕ್ಕೂ ಕಾರಣವಾಯಿತು.

“ಇಪ್ಪತ್ತು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ” ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಎರಡೂ ಬಣಗಳನ್ನು ನಿಯಂತ್ರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

error: Content is protected !!