Home Blog Page 113

ಕಳಸಾಪುರ–ನಾಗಾವಿಯಲ್ಲಿ ಅಕ್ರಮ ಗಣಿಗಾರಿಕೆ ಅಬ್ಬರ: ಕಡಿವಾಣಕ್ಕೆ ಜೈ ಭೀಮ್ ಸಂಘರ್ಷ ಸಮಿತಿ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಕಳಸಾಪುರ ಹಾಗೂ ನಾಗಾವಿ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಮೊರಂ ಲೂಟಿಯನ್ನು ತಕ್ಷಣ ತಡೆಗಟ್ಟುವಂತೆ ಆಗ್ರಹಿಸಿ ಜೈ ಭೀಮ್ ರಾಜ್ಯ ಸಂಘರ್ಷ ಸಮಿತಿ ವತಿಯಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳಿಗೆ ಮನವಿ ಸಲ್ಲಿಸಲಾಯಿತು.

ಕಳಸಾಪುರ–ನಾಗಾವಿ ಭಾಗದಲ್ಲಿ ರಾಜಾರೋಷವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ನೈಸರ್ಗಿಕ ಸಂಪತ್ತು ನಾಶವಾಗುವುದರ ಜತೆಗೆ ವನ್ಯಜೀವಿಗಳ ಆವಾಸಸ್ಥಾನಕ್ಕೂ ಧಕ್ಕೆಯಾಗುತ್ತಿದೆ. ಹಗಲು-ರಾತ್ರಿ ಭಾರಿ ವಾಹನಗಳು ಅತಿವೇಗ ಹಾಗೂ ಕರ್ಕಶ ಶಬ್ದದೊಂದಿಗೆ ಸಂಚರಿಸುತ್ತಿರುವುದರಿಂದ ಧೂಳಿನ ಮಾಲಿನ್ಯ ಉಂಟಾಗಿ ಮಕ್ಕಳು, ವೃದ್ಧರು ಸೇರಿದಂತೆ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಸಮಿತಿ ಆರೋಪಿಸಿದೆ.

ಅಕ್ರಮ ಗಣಿಗಾರಿಕೆ ಕುರಿತು ಮಾಹಿತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೆಲ ಅಧಿಕಾರಿಗಳು ಹಾಗೂ ಹೊರಗುತ್ತಿಗೆ ಸಿಬ್ಬಂದಿ ದಂಧೆಕೋರರೊಂದಿಗೆ ಶಾಮೀಲಾಗಿರುವ ಶಂಕೆಯಿದ್ದು, ಅಕ್ರಮವಾಗಿ ಸಂಚರಿಸುವ ವಾಹನಗಳಿಗೆ ನಾಮಕಾವಸ್ಥೆ ದಂಡ ವಿಧಿಸಿ ಬಿಡಲಾಗುತ್ತಿದೆ ಎಂದು ಸಮಿತಿ ದೂರಿದೆ.

ಕಳಸಾಪುರ–ನಾಗಾವಿ ಸುತ್ತಮುತ್ತಲಿನ ಅಕ್ರಮ ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. ಕರ್ತವ್ಯಲೋಪ ಎಸಗಿದ ಹಾಗೂ ಅಕ್ರಮಕ್ಕೆ ಸಾಥ್ ನೀಡಿದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಅಕ್ರಮ ಗಣಿಗಾರಿಕೆಗೆ ಬಳಸುತ್ತಿರುವ ಜೆಸಿಬಿ, ಹಿಟಾಚಿ ಹಾಗೂ ಟಿಪ್ಪರ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅಕ್ರಮದಲ್ಲಿ ತೊಡಗಿರುವ ವ್ಯಕ್ತಿಗಳು, ಜಮೀನು ಹಾಗೂ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸಮಿತಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಮಂಜುನಾಥ ಎಫ್. ತೌಜಲ್, ರೋಣ ತಾಲೂಕು ಅಧ್ಯಕ್ಷ ಬಸವರಾಜ ಬದಾಮಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ರಾಷ್ಟ್ರಿನ್ ಜೋಸೆಫ್, ರಾಜೇಶ ವಿ. ಶೆಟ್ಟರ್, ಇಮಾಮಹುಸೇನ್ ಕುನ್ನಿಬಾವಿ, ಸಮೀರಅಹ್ಮದ್ ಕುನ್ನಿಬಾವಿ, ಬಾಬು ಬಳ್ಳಾರಿ, ಮಂಜುನಾಥ ಸಂದಿಮನಿ, ಪ್ರೇಮಕುಮಾರ ಹುಬ್ಬಳ್ಳಿ, ಮಂಜುನಾಥ ಸುಂಕದ, ಶ್ರೀಕಾಂತ ಹಲವಾಗಲಿ, ಹೇಮಂತ ಹುಬ್ಬಳ್ಳಿ, ವಿರುಪಾಕ್ಷ ಗೌಡರ, ಗಿರೀಶ ಚಳಗೇರಿ, ರಫೀಕ ನವಲಗುಂದ, ಫರದೀನ ಕಾಟಾಪುರ ಹಾಗೂ ಮಲ್ಲೇಶ ಮೇಳದಾಳಮಠ ಉಪಸ್ಥಿತರಿದ್ದರು.

“ಅಕ್ರಮ ಗಣಿಗಾರಿಕೆಗೆ ಕೂಡಲೇ ಕಡಿವಾಣ ಹಾಕಬೇಕು. ಇಲ್ಲವಾದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸೇರಿದಂತೆ ಉಗ್ರ ಹೋರಾಟ ನಡೆಸಲಾಗುವುದು.”

— ಗಣೇಶ್ ಹುಬ್ಬಳ್ಳಿ, ಜೈ ಭೀಮ್ ರಾಜ್ಯ ಸಂಘರ್ಷ ಸಮಿತಿ ಅಧ್ಯಕ್ಷ

ಶ್ರಮಿಕರ ಬದುಕಿಗೆ ಹೊಸ ಬಲ ನೀಡಿದ ಕೆ.ಎಚ್. ಪಾಟೀಲರ ಕನಸು

0

ವಿಜಯಸಾಕ್ಷಿ ಸುದ್ದಿ, ಗದಗ: ರೈತರು, ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗದ ಆರ್ಥಿಕ ಹಾಗೂ ಸಾಮಾಜಿಕ ಉನ್ನತಿಗಾಗಿ ಸದಾ ಚಿಂತಿಸಿದ ದಿ. ಕೆ.ಎಚ್. ಪಾಟೀಲ ಅವರ ಹೆಸರಿನಲ್ಲಿ ಶ್ರಮಿಕರ ದುಡಿಮೆಯ ಸ್ಥಳವಾದ ಅಟೋನಗರ ನಿರ್ಮಾಣಗೊಂಡಿರುವುದು ಸಂತಸದ ಸಂಗತಿ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ಹುಬ್ಬಳ್ಳಿ ರಸ್ತೆಯ ಕೆಇಬಿ ಗ್ರಿಡ್ ಬಳಿಯಲ್ಲಿ ಫೋರ್ ವ್ಹೀಲರ್ ಮೆಕ್ಯಾನಿಕಲ್ ಹಾಗೂ ಬಾಡಿ ವರ್ಕ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ಕೆ.ಎಚ್. ಪಾಟೀಲ ಅಟೋನಗರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಟೋನಗರದ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾವು ನೀಡಿದ ಸಲಹೆ-ಸೂಚನೆಗಳನ್ನು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉತ್ತಮವಾಗಿ ಅನುಷ್ಠಾನಗೊಳಿಸಿದ್ದು, ನಿರ್ಮಿಸಿರುವ ಶೆಡ್‌ಗಳ ಕಾರ್ಯ ತೃಪ್ತಿಕರವಾಗಿದೆ. ಇನ್ನಷ್ಟು ಶ್ರಮಿಕರು ಇಲ್ಲಿ ತಮ್ಮ ಕಾರ್ಯಚಟುವಟಿಕೆ ನಡೆಸಲು ಆಸಕ್ತಿ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಮಾರ್ಚ್ 16ರೊಳಗೆ ಸಂಘಕ್ಕೆ ಮತ್ತಷ್ಟು ಎರಡು ಎಕರೆ ಜಮೀನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಹೆಸ್ಕಾಂ ಅಧ್ಯಕ್ಷ ಶಾಸಕ ಅಜ್ಜಂಪೀರ ಖಾದ್ರಿ ಮಾತನಾಡಿ, ಅಟೋನಗರದಲ್ಲಿ ಆರಂಭವಾಗಲಿರುವ ಕಾರ್ಮಿಕರ ಉದ್ದಿಮೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಾಜಿ ಮಹಾಪೌರ ಅನಿಲಕುಮಾರ ಪಾಟೀಲ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಸಾದಿಕ ನರಗುಂದ, ರಜಾಕ ಡಂಕೇದ, ಬಿ.ಎಂ. ನದ್ದಿಮುಲ್ಲಾ, ನಿಂಗಪ್ಪ ಎಂಬತ್ನಾಳ, ಸಯ್ಯದ ಜಮೀರ ಖಾಜಿ, ಮಹಮ್ಮದ್ ರಫೀಕ ನವಲಗುಂದ, ಮೈನುದ್ದೀನ ನಾಗಡ, ಮಹಮ್ಮದ್ ಅಲಿ ಕಲೆಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಕಾರ್ಮಿಕರ ಅಗತ್ಯಗಳನ್ನು ಗಮನಿಸಿ ಶಾಸಕ ಎಚ್.ಕೆ. ಪಾಟೀಲರು ನೀಡಿದ ಸಹಕಾರ ಹಾಗೂ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳುತ್ತೇವೆ.”

— ಉಸ್ಮಾನ ಮಾಳೆಕೊಪ್ಪ, ಅಸೋಸಿಯೇಶನ್ ಅಧ್ಯಕ್ಷ

ವಿಶೇಷ ಮಕ್ಕಳೊಂದಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆ: ಗದಗ ಛಾಯಾಗ್ರಾಹಕರಿಂದ ಅರ್ಥಪೂರ್ಣ ಸೇವೆ

0

ವಿಜಯಸಾಕ್ಷಿ ಸುದ್ದಿ, ಗದಗ: 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಗದಗ ಜಿಲ್ಲಾ ಛಾಯಾಗ್ರಾಹಕ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ವತಿಯಿಂದ ಬೆಟಗೇರಿಯ ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಯಾಮೆರಾದ ಪಿತಾಮಹ ಲೂಯಿಸ್ ಡಾಗ್ಯುರೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಕ್ಕಳಿಗೆ ಬೆಳಗಿನ ಉಪಹಾರ ವಿತರಿಸಲಾಯಿತು.

ಮಂಜು ಶಿಕ್ಷಣ ಸಂಸ್ಥೆಯ ಚೇರ್ಮನ್ ಶಂಕರ ಸಿಂಗ ರಜಪೂತ ಮಾತನಾಡಿ, ಛಾಯಾಗ್ರಾಹಕರ ಸಂಘದ ವತಿಯಿಂದ ವಿಶೇಷ ಮಕ್ಕಳೊಂದಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಿಸಿರುವುದು ಸಂತಸದ ಸಂಗತಿ ಎಂದರು.

ಗದಗ ಜಿಲ್ಲಾ ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಪವನ್ ಕೆ. ಮೆಹರವಾಡೆ ಮಾತನಾಡಿ, ಹುಟ್ಟುಹಬ್ಬ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಿಗೆ ಅನಗತ್ಯವಾಗಿ ಹಣ ಖರ್ಚು ಮಾಡುವ ಬದಲು ಇಂತಹ ಸಂಸ್ಥೆಗಳಿಗೆ ಭೇಟಿ ನೀಡಿ ವಿಶೇಷ ಮಕ್ಕಳಿಗೆ ಕೈಲಾದಷ್ಟು ನೆರವು ನೀಡಬೇಕು. ಉಪಹಾರ ಅಥವಾ ಊಟದ ವ್ಯವಸ್ಥೆ ಮಾಡುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸದಸ್ಯರಿಗೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪವನ್ ಕೆ. ಮೆಹರವಾಡೆ ಅವರ ಪುತ್ರಿಯ ಹುಟ್ಟುಹಬ್ಬವನ್ನು ಸಹ ಮಕ್ಕಳೊಂದಿಗೆ ಆಚರಿಸಲಾಯಿತು. ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ವೈಜನಾಥ ಕೌತಾಳ, ಗೌರವಾಧ್ಯಕ್ಷ ರಂಜಿತ್ ಬೇವಿನಕಟ್ಟಿ, ಕಾರ್ಯದರ್ಶಿ ಮಾದೇಗೌಡ ಸಂಕನಗೌಡ್ರು, ಕೆಪಿಎ ನಿರ್ದೇಶಕ ಮಂಜುನಾಥ ಲಕ್ಷಟ್ಟಿ ಹಾಗೂ ಸದಸ್ಯರಾದ ಸುರೇಶ್ ಮಿಸ್ಕಿನ್, ರಾಮು ಕಠಾರೆ, ರಾಜು ಬಾಕಳೆ, ಶಂಕರ್ ಬಾಕಳೆ, ಬಿಲಾಲ, ವೀರೇಶ್ ಗೌಡರ, ರವೀಂದ್ರ ಕೊಳ್ಳಿ, ಮಲ್ಲಿಕಾರ್ಜುನ ಬ್ಯಾಹಟ್ಟಿ, ದೀಪಕ್ ಬಾಕಳೆ, ನಾಗರಾಜ್ ಶಿದ್ಲಿಂಗ, ರವಿ ಬಳಿಗೇರ, ಬಾಬಣ್ಣ ಶಿದ್ಲಿಂಗ, ವಾದಿರಾಜ ಕುಲಕರ್ಣಿ, ಹನುಮಂತ, ಪ್ರಕಾಶ, ಚಿದಾನಂದ, ಮಂಜುನಾಥ ಮೆಹರವಾಡೆ, ತುಕಾರಾಂ ಪಾಂಡ್ರೆ, ಕೃಷ್ಣಾ ಪವಾರ ಹಾಗೂ ಶ್ರೀಧರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

೨೧ನೇ ಶತಮಾನದಲ್ಲೂ ಅಸಮಾನತೆ, ಮೌಢ್ಯ ಆಚರಣೆಗಳಿರುವುದು ವಿಷಾದನೀಯ: ಡಾ. ತೋಂಟದ ಶ್ರೀ

0

ವಿಜಯಸಾಕ್ಷಿ ಸುದ್ದಿ, ಗದಗ: ವಿಜ್ಞಾನ, ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಸಾಧಿಸಿದ್ದರೂ, ಆಧುನಿಕ ಯುಗದಲ್ಲಿಯೂ ಅಸಮಾನತೆ ಮತ್ತು ಮೌಢ್ಯ ಆಚರಣೆಗಳು ಸಮಾಜದಲ್ಲಿ ಬೇರೂರಿವೆ. ೨೧ನೇ ಶತಮಾನದಲ್ಲಿಯೂ ಸಮಾನತೆ ಸಾಧಿಸುವಲ್ಲಿ ನಾವು ವಿಫಲರಾಗಿರುವುದು ವಿಷಾದನೀಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ ೨೮೧೧ನೇ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಹಾವೀರ, ಬುದ್ಧ, ಬಸವೇಶ್ವರ, ನಾರಾಯಣ ಗುರು, ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ದಾರ್ಶನಿಕರು ಮನುಷ್ಯರ ಮಧ್ಯೆ ಸಮಾನತೆ ತರಲು ಸಮಾಜೋಧಾರ್ಮಿಕ ಆಂದೋಲನ ನಡೆಸಿದ್ದಾರೆ. ಆದರೂ ಜಾತಿ, ಲಿಂಗ ಹಾಗೂ ವರ್ಣದ ತಾರತಮ್ಯ ಸಂಪೂರ್ಣವಾಗಿ ನಿರ್ಮೂಲನೆಯಾಗದಿರುವುದು ಖೇದಕರ ಎಂದರು.

ಪರುಶುರಾಮ ಎಸ್. ಇಳಿಗೇರ ಅವರು ಬರೆದ ‘ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು’ ಕೃತಿಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಕೃತಿಯ ಪರಿಚಯವನ್ನು ಪರುಶುರಾಮ ಇಳಗೇರ ಮಾಡಿದರು.

‘ಶರಣರು ಕಂಡ ಅನಾದಿ ಬಸವಣ್ಣ’ ವಿಷಯ ಕುರಿತು ಪ್ರವಚನ ನೀಡಿದ ಶರಣೆ ಗಿರಿಜಕ್ಕ ಧರ್ಮರೆಡ್ಡಿ, ಬಸವಣ್ಣನವರು ಭಕ್ತಿ ಹಾಗೂ ವಿನಯದ ಭಂಡಾರಿಯಾಗಿದ್ದರು. ಸಮಾಜಕ್ಕೆ ನಡೆ-ನುಡಿಯ ಮಾರ್ಗ ತೋರಿದ ಪರಮಾರಾಧ್ಯರಾಗಿದ್ದಾರೆ ಎಂದರು.

ಗದಗ ನಗರಸಭೆ ಮಾಜಿ ಉಪಾಧ್ಯಕ್ಷ ಶಂಕರ ಹಾನಗಲ್ಲ ಮಾತನಾಡಿ, ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀಮಠದಿಂದ ನಾರಾಯಣ ಗುರುಗಳ ಕುರಿತು ಪುರಾಣ ಕಾವ್ಯ ರಚನೆ ಮಾಡಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಸಂಘದ ಮಾಜಿ ಅಧ್ಯಕ್ಷ ಗಂಗಾಧರ ಹಿರೇಮಠ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಲಾಯಿತು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ, ಧರ್ಮಗ್ರಂಥ ಪಠಣವನ್ನು ಜೀವನ ನಟರಾಜ ಯಲ್ಬುರ್ಗಿ, ವಚನ ಚಿಂತನವನ್ನು ಮೇಘಾ ಮುದ್ದಿ ನೆರವೇರಿಸಿದರು. ಕರವೀರಯ್ಯ ಶೇಖರಯ್ಯ ಕೋರಿಮಠ ಪರಿವಾರದವರು ಹಾಗೂ ವಿನಾಯಕ ಮಾನ್ವಿ ದಾಸೋಹ ಸೇವೆ ಸಲ್ಲಿಸಿದರು.

ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ಡಾ. ರಮೇಶ ಕಲ್ಲನಗೌಡರ ನಿರೂಪಿಸಿದರು. ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.

“ಮನುಷ್ಯರ ಮಧ್ಯೆ ಸಮಾನತೆಯನ್ನು ತರಲು ಬಸವಣ್ಣನವರು ಇಷ್ಟಲಿಂಗವನ್ನು ನೀಡಿದರು. ಇಷ್ಟಲಿಂಗಧಾರಿಗಳಲ್ಲಿ ಮೇಲು-ಕೀಳು ಇಲ್ಲ ಎಂದು ಸಾರಿದರು. ಕೇರಳದಲ್ಲಿ ನಾರಾಯಣ ಗುರುಗಳು ಅಸಮಾನತೆಯನ್ನು ತೊಡೆದುಹಾಕಲು ಶ್ರಮಿಸಿ ಮಹಾ ಮಾನವತಾವಾದಿಯಾದರು. ‘ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು’ ಕೃತಿಯನ್ನು ಎಲ್ಲರೂ ಓದಿ, ಅವರ ವಿಚಾರಗಳನ್ನು ಜೀವನದಲ್ಲಿ ಅನುಸರಿಸಬೇಕು.”

— ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

ವಿಜೃಂಭಣೆಯಿಂದ ನಡೆದ ಶ್ರೀ ಚಂಗಳಾದೇವಿ ಮೂರ್ತಿ ಮೆರವಣಿಗೆ

0

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಶ್ರಾವಣ ಮಾಸದ ಪ್ರಯುಕ್ತ ಬೆಟಗೇರಿ ವಾರ್ಡ್ ನಂ.7ರ ಹೆಳವಿ ಓಣಿಯ ಆರಾಧ್ಯ ದೈವ ಶ್ರೀ ಚಂಗಳಾದೇವಿ ಮೂರ್ತಿ ಮೆರವಣಿಗೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಶ್ರೀ ಚಂಗಳಾದೇವಿ ಮೂರ್ತಿಗೆ ಬಣ್ಣ ಹಚ್ಚಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಬಳಿಕ 101 ಪೂರ್ಣಕುಂಭ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಕನ್ಯಾಳ ಅಗಸಿಯ ದೂಳಿಕಟ್ಟಿ ಶ್ರೀ ಮಾರುತಿ ದೇವಸ್ಥಾನದಿಂದ ಮಧ್ಯಾಹ್ನ 12.30ಕ್ಕೆ ಮೆರವಣಿಗೆ ಆರಂಭವಾಯಿತು.

ಮೆರವಣಿಗೆಯು ಗಾರ್ಗಿಪೇಟೆ, ಒಕ್ಕಲಗೇರಿ ಓಣಿ, ಕುರಹಟ್ಟಿ ಪೇಟೆ, ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಬೇಲೇರಿ ಓಣಿ ಮಾರ್ಗವಾಗಿ ಸಾಗಿ ಮರಳಿ ಹೆಳವಿ ಓಣಿಯ ದೈವದ ಮನೆಗೆ ತಲುಪಿ ಮುಕ್ತಾಯಗೊಂಡಿತು.

ಮೆರವಣಿಗೆಯುದ್ದಕ್ಕೂ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಓಣಿಯ ಮಹಿಳೆಯರು, ಯುವಕರು ಹಾಗೂ ಮಕ್ಕಳು ಸೇರಿದಂತೆ ನೂರಾರು ಜನರು ಸಂಭ್ರಮದಿಂದ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಂಗವಾಗಿ ಸಂಜೆ, ಮೆರವಣಿಗೆ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ತನು-ಮನ-ಧನದಿಂದ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಹಾಗೂ ವಾರ್ಡ್ ನಂ.7ರ ನಗರಸಭಾ ಸದಸ್ಯ ರಾಘವೇಂದ್ರ ಯಳವತ್ತಿ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ಓಣಿಯ ಗುರು-ಹಿರಿಯರು, ಯುವಕರು, ಮಹಿಳೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ರಾಷ್ಟ್ರಗೀತೆಗೂ ಮೊದಲು ತಮಿಳು ರಾಜ್ಯಗೀತೆ ಹಾಡಬಹುದು; ಮದ್ರಾಸ್ ಹೈಕೋರ್ಟ್‌ ಸ್ಪಷ್ಟನೆ!

0

ಚೆನ್ನೈ: ತಮಿಳುನಾಡಿನ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗೆ ಮೊದಲು ತಮಿಳು ರಾಜ್ಯಗೀತೆ ಹಾಡಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ.

ಕೇಂದ್ರ ಗೃಹ ಸಚಿವಾಲಯದ ಸುತ್ತೋಲೆಯಲ್ಲಿ ರಾಜ್ಯಗೀತೆಯನ್ನು ಕೊನೆಯ ಸ್ಥಾನಕ್ಕೆ ತಳ್ಳುವ ಯಾವುದೇ ಉದ್ದೇಶವಿಲ್ಲ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಲಾಗಿದೆ.

ಚೆನ್ನೈನ ಅನ್ಯಾ ರಾಧಾಕೃಷ್ಣನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ವಿಚಾರ ಸ್ಪಷ್ಟವಾಗಿದೆ. ತಮಿಳುನಾಡಿನಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ರಾಜ್ಯಗೀತೆಯೊಂದಿಗೆ ಆರಂಭಿಸಿ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸುವುದು ದೀರ್ಘಕಾಲದ ಸಂಪ್ರದಾಯವಾಗಿದೆ.

ಜನವರಿ 28ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಸುತ್ತೋಲೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ‘ವಂದೇ ಮಾತರಂ’ನೊಂದಿಗೆ ಆರಂಭಿಸಬೇಕು ಎಂದು ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿ, ಸುತ್ತೋಲೆಯನ್ನು ರದ್ದುಗೊಳಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು ಜುಲೈ 9ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಹೊಸ ಅಧಿಸೂಚನೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು. ಈ ಅಧಿಸೂಚನೆಯಂತೆ ‘ವಂದೇ ಮಾತರಂ’ ಮತ್ತು ರಾಷ್ಟ್ರಗೀತೆಯನ್ನು ಕ್ರಮವಾಗಿ ಹಾಡಬೇಕು ಹಾಗೂ ‘ವಂದೇ ಮಾತರಂ’ ರಾಷ್ಟ್ರಗೀತೆಗೆ ಮೊದಲು ಇರಬೇಕು ಎಂದು ತಿಳಿಸಲಾಗಿದೆ.

ಆದರೆ, ಹೊಸ ಅಧಿಸೂಚನೆಯಲ್ಲಿ ರಾಜ್ಯಗೀತೆಗಳ ಕುರಿತು ಯಾವುದೇ ನಿರ್ಬಂಧವಿಲ್ಲ. ರಾಜ್ಯಗೀತೆಯನ್ನು ಕೊನೆಯಲ್ಲಿ ಹಾಡಬೇಕು ಎಂಬ ಸೂಚನೆಯೂ ಇಲ್ಲ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಸ್ಪಷ್ಟಪಡಿಸಿದರು.

ಹೀಗಾಗಿ ತಮಿಳುನಾಡಿನ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲು ತಮಿಳು ರಾಜ್ಯಗೀತೆ, ಬಳಿಕ ರಾಷ್ಟ್ರಗೀತೆ ಹಾಡುವ ಸಂಪ್ರದಾಯ ಮುಂದುವರಿಸಲು ಅವಕಾಶವಿದೆ ಎಂಬುದು ಸ್ಪಷ್ಟವಾಗಿದೆ.

Delhi CNG Station Blast: ಸಿಎನ್‌ಜಿ ಸ್ಟೇಷನ್‌ನಲ್ಲಿ ಭೀಕರ ಸ್ಫೋಟ; ಮೂವರು ಸಾವು, ಮೂವರಿಗೆ ಗಾಯ

0

ನವದೆಹಲಿ: ದೆಹಲಿಯ ಹೊರವಲಯದ ಟಿಕ್ರಿ ಕಲಾನ್ ಮೆಟ್ರೋ ನಿಲ್ದಾಣದ ಸಮೀಪದ ಸಿಎನ್‌ಜಿ ಸ್ಟೇಷನ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಮಧ್ಯಾಹ್ನ 3.37ರ ಸುಮಾರಿಗೆ ಸಿಎನ್‌ಜಿ ಪಂಪ್‌ ಸ್ಟೇಷನ್‌ನಲ್ಲಿ ಬಸ್‌ಗೆ ಇಂಧನ ತುಂಬಿಸುವ ವೇಳೆ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಸ್ಫೋಟದ ತೀವ್ರತೆಗೆ ಸಿಎನ್‌ಜಿ ಸ್ಟೇಷನ್‌ನಲ್ಲಿ ಬೆಂಕಿಯ ಜ್ವಾಲೆಗಳು ಮುಗಿಲೆತ್ತರಕ್ಕೆ ಚಿಮ್ಮಿದ್ದು, ದಟ್ಟ ಹೊಗೆ ಆವರಿಸಿತ್ತು. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮೃತರಲ್ಲಿ ಬಾಬಾ ಹರಿದಾಸ್ ಕಾಲೋನಿ ನಿವಾಸಿ ಮನೀಶ್ (25) ಎಂಬುವರನ್ನು ಗುರುತಿಸಲಾಗಿದೆ. ಬಸ್‌ಗೆ ಸಿಎನ್‌ಜಿ ತುಂಬಿಸುವ ವೇಳೆ ಸ್ಫೋಟ ಸಂಭವಿಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಘಟನೆಯ ಕುರಿತು ತನಿಖೆ ಕೈಗೊಂಡಿದ್ದಾರೆ.

ಮುಡಾ 50:50 ಬದಲಿ ನಿವೇಶನ ಹಂಚಿಕೆ ರದ್ದು; ₹2,000 ಕೋಟಿ ಮೌಲ್ಯದ ಸೈಟ್‌ಗಳಿಗೆ ಕುತ್ತು!

0

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮ ಉಲ್ಲಂಘಿಸಿ ಹಂಚಿಕೆ ಮಾಡಲಾಗಿದ್ದ 50:50 ಅನುಪಾತದ ಬದಲಿ ನಿವೇಶನಗಳ ಹಂಚಿಕೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿ ಆದೇಶ ಹೊರಡಿಸಿದೆ.

ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸು ಹಾಗೂ ಉನ್ನತ ಮಟ್ಟದ ತಾಂತ್ರಿಕ ಸಮಿತಿ ಸಲ್ಲಿಸಿರುವ ವರದಿಯನ್ನು ಆಧರಿಸಿ ಸರ್ಕಾರ ಈ ಕ್ರಮ ಕೈಗೊಂಡಿದೆ. 2023ರ ಮಾರ್ಚ್ 14ರಂದು ನೀಡಿದ್ದ ನಿರ್ದೇಶನಗಳನ್ನು ಉಲ್ಲಂಘಿಸಿ ಮಾಡಲಾಗಿರುವ ಎಲ್ಲಾ 50:50 ಬದಲಿ ನಿವೇಶನಗಳ ಹಂಚಿಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

ಈಗಾಗಲೇ ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿರುವ ನಿಯಮಬಾಹಿರ ಬದಲಿ ನಿವೇಶನಗಳ ಕ್ರಯಪತ್ರಗಳನ್ನು ರದ್ದುಪಡಿಸಲು ಸಿವಿಲ್ ನ್ಯಾಯಾಲಯದಲ್ಲಿ ತಕ್ಷಣವೇ ದಾವೆ ಹೂಡುವಂತೆ ಸರ್ಕಾರ ಸೂಚಿಸಿದೆ.

ಇನ್ನೂ ಕ್ರಯಪತ್ರ ನೋಂದಣಿಯಾಗದ ಪ್ರಕರಣಗಳಲ್ಲಿ ಸರ್ಕಾರದಿಂದ ಸ್ಪಷ್ಟ ಮಾರ್ಗಸೂಚಿ ಹಾಗೂ ಮುಂದಿನ ನಿರ್ದೇಶನ ಹೊರಬರುವವರೆಗೆ ಯಾವುದೇ ಕ್ರಯಪತ್ರ ನೀಡದಂತೆ ಮುಡಾಗೆ ಸೂಚಿಸಲಾಗಿದೆ.

ಈಗಾಗಲೇ ನೋಂದಣಿಯಾಗಿರುವ ನಿವೇಶನಗಳಿಗೆ ಖಾತಾ ಮಾಡಿಕೊಡುವುದನ್ನೂ ತಡೆಹಿಡಿಯುವಂತೆ ಮೈಸೂರು ಮಹಾನಗರ ಪಾಲಿಕೆ, ಸಂಬಂಧಪಟ್ಟ ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಲು ಸೂಚಿಸಲಾಗಿದೆ.

ಒಂದು ವೇಳೆ ಈಗಾಗಲೇ ಖಾತಾ ಮಾಡಿಕೊಟ್ಟಿದ್ದರೆ, ಕರ್ನಾಟಕ ನಗರ ಪಾಲಿಕೆಗಳ ಕಾಯ್ದೆ 1976, ಕರ್ನಾಟಕ ಮುನಿಸಿಪಲ್ ಕಾಯ್ದೆ 1961 ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಅಡಿಯಲ್ಲಿ ನಿಯಮಾನುಸಾರ ಖಾತಾ ರದ್ದುಪಡಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಸರ್ಕಾರದ ಆದೇಶದನ್ವಯ ಕೈಗೊಂಡಿರುವ ಕ್ರಮಗಳ ಕುರಿತು ಅನುಪಾಲನಾ ವರದಿಯನ್ನು ತಕ್ಷಣ ಸರ್ಕಾರಕ್ಕೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ಆದೇಶ ಪಾಲನೆಯಲ್ಲಿ ವಿಫಲವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

ಮುಡಾದಲ್ಲಿ ಸುಮಾರು 1,100 50:50 ಬದಲಿ ನಿವೇಶನಗಳ ಹಂಚಿಕೆ ರದ್ದುಗೊಳಿಸಲು ಸರ್ಕಾರ ನಿರ್ದೇಶನ ನೀಡಿದ್ದು, ಈ ನಿವೇಶನಗಳ ಒಟ್ಟು ಮೌಲ್ಯ ಸುಮಾರು ₹2,000 ಕೋಟಿ ಎಂದು ಅಂದಾಜಿಸಲಾಗಿದೆ.

ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಕೇಂದ್ರ; ಸೆಪ್ಟೆಂಬರ್‌ನಲ್ಲಿ ಕರ್ನಾಟಕಕ್ಕೆ ಶಿವರಾಜ್ ಸಿಂಗ್ ಚೌಹಾಣ್ ಭೇಟಿ!

0

ನವದೆಹಲಿ: ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಉಂಟಾಗಿರುವ ಕೃಷಿ ಸಮಸ್ಯೆಗಳು ಹಾಗೂ ರೈತರ ಸಂಕಷ್ಟಗಳ ಕುರಿತು ಕೃಷಿ ಸಚಿವ ನರೇಂದ್ರಸ್ವಾಮಿ ಅವರು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ದೆಹಲಿಯಲ್ಲಿ ನಡೆದ ಭೇಟಿಯಲ್ಲಿ ಕರ್ನಾಟಕದಲ್ಲಿ ಬರ ಪರಿಸ್ಥಿತಿಯಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪ್ರಧಾನ ಮಂತ್ರಿ ಫಸಲ್ ಭೀಮಾ ವಿಮಾ ಯೋಜನೆಗೆ ನೋಂದಣಿ ಅವಧಿಯನ್ನು ಆಗಸ್ಟ್ ಅಂತ್ಯದವರೆಗೆ ವಿಸ್ತರಿಸುವಂತೆ ಮನವಿ ಮಾಡಲಾಯಿತು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ವಿಮಾ ಯೋಜನೆಯ ನೋಂದಣಿ ಅವಧಿ ವಿಸ್ತರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದನ್ನು ನರೇಂದ್ರಸ್ವಾಮಿ ಅವರು ಕೇಂದ್ರ ಸಚಿವರ ಗಮನಕ್ಕೆ ತಂದರು.

ಮನವಿಗೆ ಸ್ಪಂದಿಸಿದ ಶಿವರಾಜ್ ಸಿಂಗ್ ಚೌಹಾಣ್, ಸೆಪ್ಟೆಂಬರ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿ ಯಾವುದಾದರೊಂದು ಬರಪೀಡಿತ ಜಿಲ್ಲೆಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಮಳೆಯ ಕೊರತೆಯಿಂದ ರಾಜ್ಯದಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಸ್ಪಂದಿಸುವುದಾಗಿಯೂ ತಿಳಿಸಿದ್ದಾರೆ.

ಭೇಟಿ ಬಳಿಕ ಮಾತನಾಡಿದ ನರೇಂದ್ರಸ್ವಾಮಿ, ಕೃಷಿ ವಿಮಾ ನೋಂದಣಿ ಅವಧಿ ಮುಕ್ತಾಯದ ಹಂತದಲ್ಲಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ 666 ಕೃಷಿ ವಿಮಾ ಘಟಕಗಳಲ್ಲಿ ಮಧ್ಯಂತರ ಪರಿಹಾರ ನೀಡಲು ಈಗಾಗಲೇ ಆದೇಶಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಪುರಸ್ಕೃತ ಯೋಜನೆಗಳನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದ್ದು, ರೈತರ ಹಿತ ಕಾಪಾಡಲು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಅವರು ತಿಳಿಸಿದರು.

ಇನ್ನು ತಮಿಳುನಾಡಿಗೆ ಕಾವೇರಿ ನೀರು ಬಿಡುವುದರ ಜೊತೆಗೆ ರಾಜ್ಯದ ರೈತರ ಬೆಳೆಗಳಿಗೆ ನೀರು ಬಿಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೆಆರ್‌ಎಸ್ ಜಲಾಶಯದಲ್ಲಿ ಪ್ರಸ್ತುತ ಕೇವಲ 109 ಅಡಿ ನೀರು ಇದೆ. ಇದು ರಾಜ್ಯದ ರೈತರಿಗೆ ಒಂದು ಬೆಳೆ ಬೆಳೆಯಲು ಕೂಡ ಸಾಕಾಗುವುದಿಲ್ಲ ಎಂದು ಹೇಳಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡಬೇಕಾದ ಪರಿಸ್ಥಿತಿ ಎದುರಾಗಿದೆ. ಸದ್ಯ ಈ ಸಮಸ್ಯೆಗೆ ಮಳೆಯೇ ಪರಿಹಾರವಾಗಿದ್ದು, ಕೃಷಿ ಚಟುವಟಿಕೆಗಳಿಗೆ ನೀರು ಬಿಡುವುದು ಕಷ್ಟಕರವಾಗಿದೆ ಎಂದು ನರೇಂದ್ರಸ್ವಾಮಿ ಹೇಳಿದರು.

ಲಭ್ಯವಿರುವ ನೀರಿನ ಪ್ರಮಾಣವನ್ನು ಆಧರಿಸಿ ರೈತರ ಕೃಷಿ ಚಟುವಟಿಕೆಗಳಿಗೆ ನೀರು ಬಿಡುವ ಕುರಿತು ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ತಮಿಳುನಾಡಿಗೆ ಕಾವೇರಿ ನೀರು: 12 ಸಾವಿರ ಕ್ಯೂಸೆಕ್ ಆದೇಶ ಮರುಪರಿಶೀಲನೆಗೆ ಕರ್ನಾಟಕ ಮೇಲ್ಮನವಿ

0

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಮರುಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

ಪ್ರಸ್ತುತ ದಿನಕ್ಕೆ 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನೀಡಿರುವ ಆದೇಶವನ್ನು 6 ಸಾವಿರ ಕ್ಯೂಸೆಕ್‌ಗೆ ಇಳಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.

ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಮುಂದುವರಿಯದಿರುವುದು, ಜಲಾಶಯಗಳ ಒಳಹರಿವು ಗಣನೀಯವಾಗಿ ಕುಸಿದಿರುವುದು ಹಾಗೂ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ನೀರಾವರಿಗೆ ಎದುರಾಗಬಹುದಾದ ಸಂಕಷ್ಟವನ್ನು ಕರ್ನಾಟಕ ಸರ್ಕಾರ ತನ್ನ ಮೇಲ್ಮನವಿಯಲ್ಲಿ ಉಲ್ಲೇಖಿಸಿದೆ.

ಆಗಸ್ಟ್‌ನಲ್ಲಿ 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನೀಡಿದ್ದ ಆದೇಶವು ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಉತ್ತಮ ಮುಂಗಾರು ಮಳೆಯಾಗಲಿದೆ ಎಂಬ ನಿರೀಕ್ಷೆಯನ್ನು ಆಧರಿಸಿತ್ತು. ಆದರೆ ಸೂಪರ್ ಎಲ್ ನಿನೊ ಪರಿಣಾಮದಿಂದ ಮುಂಗಾರು ದುರ್ಬಲಗೊಂಡಿದ್ದು, ಜಲಾಶಯಗಳಿಗೆ ಹರಿದುಬರುವ ನೀರಿನ ಪ್ರಮಾಣ ತೀವ್ರವಾಗಿ ಇಳಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

ಆಗಸ್ಟ್ 18ರ ವೇಳೆಗೆ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಒಟ್ಟು 77.907 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಜೂನ್ 1ರಿಂದ ಆಗಸ್ಟ್ 18ರವರೆಗೆ ನಾಲ್ಕು ಪ್ರಮುಖ ಜಲಾಶಯಗಳಿಗೆ 88.662 ಟಿಎಂಸಿ ನೀರು ಒಳಹರಿವು ಬಂದಿದೆ. ದೀರ್ಘಾವಧಿಯ ಸರಾಸರಿ 169.452 ಟಿಎಂಸಿಗೆ ಹೋಲಿಸಿದರೆ ಶೇ.47.68ರಷ್ಟು ಕೊರತೆ ಉಂಟಾಗಿದೆ.

ಇನ್ನು ಜಲಾಶಯಗಳ ಒಳಹರಿವು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಆಗಸ್ಟ್ 10ರಂದು 25,964 ಕ್ಯೂಸೆಕ್ ಇದ್ದ ಒಳಹರಿವು ಆಗಸ್ಟ್ 14ರಂದು 15,060 ಕ್ಯೂಸೆಕ್‌ಗೆ ಹಾಗೂ ಆಗಸ್ಟ್ 18ರಂದು 13,141 ಕ್ಯೂಸೆಕ್‌ಗೆ ಇಳಿಕೆಯಾಗಿದೆ.

ಬಿಳಿಗುಂಡ್ಲುವಿನಲ್ಲಿ 12 ಸಾವಿರ ಕ್ಯೂಸೆಕ್ ನೀರು ಖಚಿತಪಡಿಸಲು ಜಲಾಶಯಗಳಿಂದ ಸುಮಾರು 15 ಸಾವಿರ ಕ್ಯೂಸೆಕ್ ಹೊರಹರಿವು ಮಾಡಬೇಕಾಗುತ್ತದೆ. ಇದರಿಂದ ಕರ್ನಾಟಕದ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಮತ್ತಷ್ಟು ಕುಸಿಯಲಿದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಕಬಿನಿ ಜಲಾಶಯದ ಒಳಹರಿವು ಕೂಡ ಆಗಸ್ಟ್ 17ರಂದು 7,747 ಕ್ಯೂಸೆಕ್‌ನಿಂದ ಆಗಸ್ಟ್ 18ರಂದು 6,457 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಳಿಗುಂಡ್ಲುವಿಗೆ 12 ಸಾವಿರ ಕ್ಯೂಸೆಕ್ ನೀರು ತಲುಪಿಸಲು ಕೆಆರ್‌ಎಸ್‌ನಿಂದಲೂ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಬೇಕಾಗಬಹುದು ಎಂದು ಸರ್ಕಾರ ಹೇಳಿದೆ.

ಕೆಆರ್‌ಎಸ್ ಜಲಾಶಯದಲ್ಲಿ ಪ್ರಸ್ತುತ 26.602 ಟಿಎಂಸಿ ಲೈವ್ ಸ್ಟೋರೇಜ್ ಇದ್ದು, ಜಲಾಶಯದ ಒಟ್ಟು ವಿನ್ಯಾಸ ಸಾಮರ್ಥ್ಯ 45.051 ಟಿಎಂಸಿಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದರೆ ಸುಮಾರು 1.959 ಲಕ್ಷ ಎಕರೆ ನೀರಾವರಿ ಪ್ರದೇಶ ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಪೂರೈಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.

ರಾಜ್ಯದ ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳಿಗೆ ಸುಮಾರು 144 ಟಿಎಂಸಿ ಹಾಗೂ ಪರಿಸರ ಹರಿವಿಗೆ ಸುಮಾರು 10 ಟಿಎಂಸಿ ಸೇರಿದಂತೆ ಒಟ್ಟು 155 ಟಿಎಂಸಿ ನೀರು ಅಗತ್ಯವಿದೆ. ಆದರೆ ಸದ್ಯ ಜಲಾಶಯಗಳಲ್ಲಿ 77.907 ಟಿಎಂಸಿ ನೀರು ಮಾತ್ರ ಲಭ್ಯವಿದೆ.

ಮತ್ತೊಂದೆಡೆ, ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಸುಮಾರು 45 ಟಿಎಂಸಿ ನೀರು ಸಂಗ್ರಹವಿದೆ ಎಂದು ಕರ್ನಾಟಕ ಸರ್ಕಾರ ತನ್ನ ಮೇಲ್ಮನವಿಯಲ್ಲಿ ಉಲ್ಲೇಖಿಸಿದೆ. ಬರ ಪರಿಸ್ಥಿತಿಯಿಂದ ಸಾಂಬಾ ಭತ್ತದ ಬಿತ್ತನೆ ಪ್ರದೇಶವೂ ಸಾಮಾನ್ಯ ವರ್ಷಗಳಿಗಿಂತ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಕರ್ನಾಟಕದ ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳಿಗೆ ನೀರು ಉಳಿಸುವ ನಿಟ್ಟಿನಲ್ಲಿ ಆಗಸ್ಟ್ 11ರಂದು ನೀಡಿರುವ ದಿನಕ್ಕೆ 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಆದೇಶವನ್ನು ಮರುಪರಿಶೀಲಿಸಿ, ಅದನ್ನು 6 ಸಾವಿರ ಕ್ಯೂಸೆಕ್‌ಗೆ ಇಳಿಸುವಂತೆ CWMAಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.