Home Blog Page 114

ಧರ್ಮಸ್ಥಳಕ್ಕೆ ಉಪರಾಷ್ಟ್ರಪತಿ ಭೇಟಿ; ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ

ಬೆಳ್ತಂಗಡಿ: ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯಕ್ಕೆ ಆಗಮಿಸಿದ ಉಪರಾಷ್ಟ್ರಪತಿಗಳು, ದೇವರ ಆಶೀರ್ವಾದ ಪಡೆದು ಕೆಲಕಾಲ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಬಳಿಕ ಅನ್ನಪೂರ್ಣ ಛತ್ರಕ್ಕೆ ಭೇಟಿ ನೀಡಿ, ಭಕ್ತರಿಗೆ ನೀಡಲಾಗುತ್ತಿರುವ ಅನ್ನದಾನ ಸೇವೆ ಹಾಗೂ ಅಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅನಂತರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಕ್ಷೇತ್ರದಲ್ಲಿ ನಡೆಯುತ್ತಿರುವ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಆರೋಗ್ಯ ಸೇವಾ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದರು.

ಧರ್ಮಸ್ಥಳದ ಮೂಲಕ ಸಮಾಜದ ವಿವಿಧ ವರ್ಗಗಳಿಗೆ ನೀಡಲಾಗುತ್ತಿರುವ ಸೇವೆಗಳು ಮಾದರಿಯಾಗಿವೆ ಎಂದು ಶ್ಲಾಘಿಸಿದ ಉಪರಾಷ್ಟ್ರಪತಿಗಳು, ಕ್ಷೇತ್ರದ ಜನಪರ ಕಾರ್ಯಗಳನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ಹೆಗ್ಗಡೆ ಕುಟುಂಬದ ಸದಸ್ಯರು ಹಾಗೂ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.

ಬಿಟ್ ಕಾಯಿನ್ ಹಗರಣ: ಮೊಹಮ್ಮದ್ ನಲಪಾಡ್ʼಗೆ ಮತ್ತೆ ಇಡಿ ಸಮನ್ಸ್

ಬೆಂಗಳೂರು: ಬಹುಕೋಟಿ ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ಹಗರಣ ಪ್ರಕರಣದಲ್ಲಿ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಗೆ ಜಾರಿ ನಿರ್ದೇಶನಾಲಯ (ಇಡಿ) ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಿದೆ. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚನೆ ನೀಡಿದ್ದು, ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.

ಈ ಹಿಂದೆ ಕಳೆದ ಶುಕ್ರವಾರವೇ ನಲಪಾಡ್ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿತ್ತು. ಆದರೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆ ಅವರಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿತ್ತು. ಇದೀಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಹೊಸ ಸಮನ್ಸ್ ಜಾರಿಯಾಗಿದೆ.

ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಿರುವ ಇಡಿ, ಪ್ರಕರಣದ ವಿವಿಧ ಆಯಾಮಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಲಪಾಡ್ ಅವರಿಂದಲೂ ಮಹತ್ವದ ಮಾಹಿತಿ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಬೆಂಗಳೂರಿನ ಅಶೋಕನಗರದಲ್ಲಿರುವ ಮೊಹಮ್ಮದ್ ನಲಪಾಡ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಸತತ 21 ಗಂಟೆಗಳ ಕಾಲ ಶೋಧ ಕಾರ್ಯ ಕೈಗೊಂಡಿದ್ದರು. ಶೋಧದ ವೇಳೆ ಹಾರ್ಡ್‌ಡಿಸ್ಕ್‌ಗಳು, ವಿದೇಶಿ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಬ್ಯಾಂಕ್ ದಾಖಲೆಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ಬಿಟ್‌ಕಾಯಿನ್ ಹಗರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣದಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಹೆಸರುಗಳು ಕೇಳಿಬಂದಿದ್ದವು. ಹಗರಣದ ಪ್ರಮುಖ ಆರೋಪಿ ಹಾಗೂ ಅಂತಾರಾಷ್ಟ್ರೀಯ ಹ್ಯಾಕರ್ ಎಂದು ಗುರುತಿಸಲ್ಪಟ್ಟಿದ್ದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಪ್ರಸ್ತುತ ಇಡಿ ತನಿಖೆಯನ್ನು ಮುಂದುವರಿಸಿದ್ದು, ಸೋಮವಾರ ನಡೆಯಲಿರುವ ನಲಪಾಡ್ ವಿಚಾರಣೆ ಪ್ರಕರಣದಲ್ಲಿ ಹೊಸ ಬೆಳವಣಿಗೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ಹಾಸನ ಲಾಡ್ಜ್ ನಲ್ಲಿ ಉಪತಹಶೀಲ್ದಾರ್ ಆತ್ಮಹತ್ಯೆ: 4 ಪುಟಗಳ ಡೆತ್ ನೋಟ್ ಪತ್ತೆ!

ಹಾಸನ: ಉಪತಹಶೀಲ್ದಾರ್‌ರೊಬ್ಬರು ಲಾಡ್ಜ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ. ಮೃತರನ್ನು ತಿಮ್ಮಯ್ಯ (52) ಎಂದು ಗುರುತಿಸಲಾಗಿದ್ದು, ಅವರು ಪ್ರಸ್ತುತ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಉಪತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಖಾಸಗಿ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಮುನ್ನ ತಿಮ್ಮಯ್ಯ ನಾಲ್ಕು ಪುಟಗಳ ಡೆತ್‌ನೋಟ್ ಬರೆದಿಟ್ಟು ಹೋಗಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮೇ 30ರಂದು ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಮೂಲತಃ ಕೊಡಗು ಜಿಲ್ಲೆಯವರಾದ ತಿಮ್ಮಯ್ಯ, ಕುಟುಂಬದೊಂದಿಗೆ ಹಾಸನ ನಗರದ ಚನ್ನಪಟ್ಟಣದ ದ್ಯಾವಮ್ಮ ಬಡಾವಣೆಯಲ್ಲಿ ವಾಸವಾಗಿದ್ದರು. ಅವರು ಮೂರು ವರ್ಷಗಳ ಹಿಂದೆ ಹಾಸನದಲ್ಲಿಯೂ ಸೇವೆ ಸಲ್ಲಿಸಿದ್ದ ಹಿನ್ನೆಲೆ ಹೊಂದಿದ್ದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಡೆತ್‌ನೋಟ್‌ನಲ್ಲಿರುವ ವಿವರಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.

ಈ ಸಂಬಂಧ ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಭೀಕರ ಅಪಘಾತ: ಕಂದಕಕ್ಕೆ ಉರುಳಿದ ಕಾರು, 8 ಮಂದಿ ದುರ್ಮರಣ

ಶಿಮ್ಲಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಚುರಾಹ್ ಉಪವಿಭಾಗದ ಬೈರಗಢ್–ಸಚ್ ಪಾಸ್–ಕಿಲ್ಲರ್ ಮಾರ್ಗದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಕಾರು ನಿಯಂತ್ರಣ ತಪ್ಪಿ ಸುಮಾರು 500 ಮೀಟರ್ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅಧಿಕಾರಿಗಳ ಪ್ರಕಾರ, ಹಿಮದಿಂದ ಆವೃತವಾಗಿರುವ ಸಚ್ ಪಾಸ್ ಪ್ರದೇಶದತ್ತ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿಯ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಪ್ರಾಥಮಿಕ ಮಾಹಿತಿಯಂತೆ, ಬೆಂಗಳೂರಿನಿಂದ ಬಂದಿದ್ದ ಒಂದು ಕುಟುಂಬ ಡಲ್‌ಹೌಸಿ ಪ್ರವಾಸಕ್ಕಾಗಿ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದಿತ್ತು. ಬಳಿಕ ಡಲ್‌ಹೌಸಿಯಲ್ಲಿ ತಂಗಿದ್ದ ಮತ್ತೊಂದು ಪ್ರವಾಸಿ ಕುಟುಂಬದೊಂದಿಗೆ ಸೇರಿ ಸಚ್ ಪಾಸ್‌ನ ಹಿಮಾಚ್ಛಾದಿತ ಪ್ರದೇಶಗಳನ್ನು ವೀಕ್ಷಿಸಲು ತೆರಳಿದ್ದರು. ಚಾಲಕ ಸೇರಿದಂತೆ ವಾಹನದಲ್ಲಿ ಒಟ್ಟು ಒಂಬತ್ತು ಮಂದಿ ಪ್ರಯಾಣಿಸುತ್ತಿದ್ದು, ಅವರಲ್ಲಿ ಇಬ್ಬರು ಮಕ್ಕಳು ಕೂಡ ಇದ್ದರು ಎಂದು ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಭೀಕರ ದೃಶ್ಯ ನಿರ್ಮಾಣವಾಗಿತ್ತು. ಘಟನೆ ನಡೆದ ಪ್ರದೇಶ ದುರ್ಗಮ ಹಾಗೂ ಕಡಿದಾದ ಇಳಿಜಾರುಗಳನ್ನು ಹೊಂದಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸ್ ಹಾಗೂ ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಚಂಬಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಸಕ್ಲಾನಿ ಅಪಘಾತವನ್ನು ದೃಢಪಡಿಸಿದ್ದು, ಮೃತದೇಹಗಳನ್ನು ಹೊರತೆಗೆದು ಗುರುತಿಸುವ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಆರೆಂಜ್ ಕ್ಯಾಪ್ ರೇಸ್ʼನಿಂದ ವಿರಾಟ್ ಕೊಹ್ಲಿ ಔಟ್: ಫೈನಲ್ʼಗೂ ಮುನ್ನ ಮೂವರ ನಡುವೆ ಪೈಪೋಟಿ

ಅಹಮದಾಬಾದ್: ಐಪಿಎಲ್ 2026ರ ಆರೆಂಜ್ ಕ್ಯಾಪ್ ಸ್ಪರ್ಧೆಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬಹುತೇಕ ಹೊರಬಿದ್ದಿದ್ದಾರೆ. ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದರೂ ಈ ಬಾರಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳುವುದು ಕೊಹ್ಲಿಗೆ ಕಷ್ಟಕರವಾಗಿದೆ.

ಈ ಸೀಸನ್‌ನಲ್ಲಿ 15 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿರುವ ವಿರಾಟ್ ಕೊಹ್ಲಿ 600 ರನ್ ಕಲೆಹಾಕಿದ್ದಾರೆ. ಆದರೆ ಪ್ರಸ್ತುತ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್‌ನ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ 776 ರನ್‌ಗಳೊಂದಿಗೆ ಮುಂಚೂಣಿಯಲ್ಲಿದ್ದಾರೆ.

ಹೀಗಾಗಿ ವೈಭವ್ ಅವರನ್ನು ಹಿಂದಿಕ್ಕಲು ಕೊಹ್ಲಿಗೆ ಫೈನಲ್‌ನಲ್ಲಿ 177 ರನ್ ಗಳಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕಾರಣದಿಂದಾಗಿ ಇದೀಗ ಆರೆಂಜ್ ಕ್ಯಾಪ್‌ಗಾಗಿ ಪೈಪೋಟಿ ಮುಖ್ಯವಾಗಿ ಮೂವರು ಆಟಗಾರರ ನಡುವೆ ಸೀಮಿತವಾಗಿದೆ.

1. ವೈಭವ್ ಸೂರ್ಯವಂಶಿ – 776 ರನ್

ರಾಜಸ್ಥಾನ್ ರಾಯಲ್ಸ್ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಈ ಬಾರಿಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 16 ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಹಾಗೂ ಐದು ಅರ್ಧಶತಕಗಳ ನೆರವಿನಿಂದ 776 ರನ್ ಕಲೆಹಾಕಿ ಅಗ್ರಸ್ಥಾನದಲ್ಲಿದ್ದಾರೆ.

2. ಶುಭ್ಮನ್ ಗಿಲ್ – 722 ರನ್

ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 15 ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು ಆರು ಅರ್ಧಶತಕಗಳೊಂದಿಗೆ 722 ರನ್ ಗಳಿಸಿರುವ ಗಿಲ್, ಫೈನಲ್‌ನಲ್ಲಿ ಇನ್ನೂ 55 ರನ್ ಗಳಿಸಿದರೆ ವೈಭವ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಬಹುದು.

3. ಸಾಯಿ ಸುದರ್ಶನ್ – 710 ರನ್

ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಕೂಡ ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಉಳಿದಿದ್ದಾರೆ. 16 ಇನ್ನಿಂಗ್ಸ್‌ಗಳಲ್ಲಿ 710 ರನ್ ಕಲೆಹಾಕಿರುವ ಸುದರ್ಶನ್, ಫೈನಲ್ ಪಂದ್ಯದಲ್ಲಿ 67 ರನ್ ಗಳಿಸಿದರೆ ವೈಭವ್ ಸೂರ್ಯವಂಶಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ.

ಫೈನಲ್ ಪಂದ್ಯದಲ್ಲೇ ನಿರ್ಧಾರ

ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯವು ಕೇವಲ ಚಾಂಪಿಯನ್ ತಂಡವನ್ನು ಮಾತ್ರವಲ್ಲ, ಈ ಬಾರಿಯ ಆರೆಂಜ್ ಕ್ಯಾಪ್ ವಿಜೇತನನ್ನೂ ನಿರ್ಧರಿಸಲಿದೆ. ವೈಭವ್ ಸೂರ್ಯವಂಶಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವುದರಿಂದ, ಗಿಲ್ ಮತ್ತು ಸುದರ್ಶನ್ ಅವರಿಗೆ ಕೊನೆಯ ಪಂದ್ಯದಲ್ಲಿ ಅಗ್ರಸ್ಥಾನ ಕಸಿದುಕೊಳ್ಳುವ ಅವಕಾಶವಿದೆ.

ಹೀಗಾಗಿ ಐಪಿಎಲ್ 2026ರ ಆರೆಂಜ್ ಕ್ಯಾಪ್ ಯಾರ ತಲೆಯ ಮೇಲೆ ಅಲಂಕರಿಸಲಿದೆ ಎಂಬ ಕುತೂಹಲ ಇದೀಗ ಫೈನಲ್ ಪಂದ್ಯದ ಮೇಲೆ ಕೇಂದ್ರೀಕೃತವಾಗಿದೆ.

IPL ಫೈನಲ್ʼಗೆ ವೇದಿಕೆ ಸಜ್ಜು: ಪಿಚ್ ರಿಪೋರ್ಟ್ ಏನು..? RCB-ಗುಜರಾತ್ ಕದನದ ಮೇಲೆ ಎಲ್ಲರ ಕಣ್ಣು

ಅಹಮದಾಬಾದ್: ಐಪಿಎಲ್ 2026ರ ಬಹುನಿರೀಕ್ಷಿತ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಸಂಜೆ 7.30ಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್ ಟೈಟಾನ್ಸ್ (ಜಿಟಿ) ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ತಮ್ಮ ಎರಡನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿವೆ.

ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದಿದ್ದ ಆರ್‌ಸಿಬಿ, ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಇತ್ತ ಗುಜರಾತ್ ಟೈಟಾನ್ಸ್, ಕ್ವಾಲಿಫೈಯರ್-2ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಅಂತಿಮ ಕದನಕ್ಕೆ ಟಿಕೆಟ್ ಪಡೆದುಕೊಂಡಿದೆ.

ಈ ಆವೃತ್ತಿಯಲ್ಲಿ ಉಭಯ ತಂಡಗಳು ನಾಲ್ಕನೇ ಬಾರಿ ಮುಖಾಮುಖಿಯಾಗುತ್ತಿವೆ. ಇದುವರೆಗೆ ನಡೆದ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಎರಡು ಗೆಲುವು ದಾಖಲಿಸಿದ್ದರೆ, ಗುಜರಾತ್ ಟೈಟಾನ್ಸ್ ಒಂದು ಪಂದ್ಯದಲ್ಲಿ ಜಯ ಸಾಧಿಸಿದೆ.

ಸತತ ಎರಡನೇ ಬಾರಿ ಫೈನಲ್‌ಗೆ ಆತಿಥ್ಯ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸತತ ಎರಡನೇ ವರ್ಷ ಐಪಿಎಲ್ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ಕಳೆದ ಆವೃತ್ತಿಯ ಫೈನಲ್ ಪಂದ್ಯದಲ್ಲೂ ಇದೇ ಮೈದಾನದಲ್ಲಿ ಆರ್‌ಸಿಬಿ ಪ್ರಶಸ್ತಿ ಜಯಿಸಿ ಇತಿಹಾಸ ನಿರ್ಮಿಸಿತ್ತು. ಇದೀಗ ಅದೇ ಮೈದಾನದಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಸವಾಲಿನೊಂದಿಗೆ ಬೆಂಗಳೂರು ತಂಡ ಕಣಕ್ಕಿಳಿಯುತ್ತಿದೆ.

ಮತ್ತೊಂದೆಡೆ, ತವರು ಮೈದಾನದಲ್ಲಿ ಆಡಲಿರುವ ಗುಜರಾತ್ ಟೈಟಾನ್ಸ್ ತಂಡಕ್ಕೆ ಅಭಿಮಾನಿಗಳ ಬೆಂಬಲ ಹೆಚ್ಚುವರಿ ಬಲ ನೀಡುವ ನಿರೀಕ್ಷೆಯಿದೆ.

ಪಿಚ್ ರಿಪೋರ್ಟ್

ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾದ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿದೆ. ಈ ಸೀಸನ್‌ನಲ್ಲೂ ಇಲ್ಲಿ ಹಲವು ಹೈ-ಸ್ಕೋರಿಂಗ್ ಪಂದ್ಯಗಳು ನಡೆದಿವೆ.

ಪಂದ್ಯದ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಸ್ವಲ್ಪ ಬೌನ್ಸ್ ಮತ್ತು ಸ್ವಿಂಗ್ ದೊರೆಯುವ ಸಾಧ್ಯತೆ ಇದೆ. ಆದರೆ ಪಂದ್ಯ ಮುಂದುವರಿದಂತೆ ಬ್ಯಾಟರ್‌ಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ. ದೊಡ್ಡ ಬೌಂಡರಿಗಳ ಕಾರಣ ಮಧ್ಯದ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಕೂಡ ಪರಿಣಾಮಕಾರಿಯಾಗಿ ಕಾಣಿಸಿಕೊಳ್ಳಬಹುದು.

ಸಂಜೆ ವೇಳೆಗೆ ಇಬ್ಬನಿ (ಡ್ಯೂ) ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಹೆಚ್ಚಿರುವುದರಿಂದ, ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಅನುಕೂಲವಾಗಬಹುದು. ಹೀಗಾಗಿ ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.

ಹವಾಮಾನ ಹೇಗಿರಲಿದೆ?

ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಎಂದರೆ, ಫೈನಲ್ ಪಂದ್ಯದ ವೇಳೆ ಮಳೆಯ ಭೀತಿ ಇಲ್ಲ. ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಅಹಮದಾಬಾದ್‌ನಲ್ಲಿ ಇಂದು ಸ್ಪಷ್ಟ ಆಕಾಶವಿದ್ದು, ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ.

ಮಳೆ ಬೀಳುವ ಸಾಧ್ಯತೆ ಅತ್ಯಂತ ಕಡಿಮೆ ಇರುವುದರಿಂದ ಪಂದ್ಯ ಯಾವುದೇ ಅಡಚಣೆ ಇಲ್ಲದೆ ಸಂಪೂರ್ಣವಾಗಿ ನಡೆಯುವ ನಿರೀಕ್ಷೆಯಿದೆ. ಇದರಿಂದ ಅಭಿಮಾನಿಗಳು ಹೈವೋಲ್ಟೇಜ್ ಫೈನಲ್ ಕದನವನ್ನು ನಿರಾಳವಾಗಿ ಆಸ್ವಾದಿಸಬಹುದಾಗಿದೆ.

ಒಟ್ಟಾರೆ, ಬ್ಯಾಟಿಂಗ್ ಸ್ನೇಹಿ ಪಿಚ್, ಇಬ್ಬನಿಯ ಪ್ರಭಾವ ಮತ್ತು ಮಳೆಯ ಅಡ್ಡಿಯಿಲ್ಲದ ವಾತಾವರಣದ ನಡುವೆ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

ತಿಪ್ಪಣ್ಣ ಕಮಕನೂರ್‌ಗೆ ಸಚಿವ ಸ್ಥಾನ ನೀಡಿ!

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆಯ ಹಿಂದುಳಿದ ವರ್ಗಗಳ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಅವರ ವಿಧಾನ ಪರಿಷತ್ ಸದಸ್ಯತ್ವ ಅವಧಿಯನ್ನು ಮುಂದಿನ ಆರು ವರ್ಷಗಳಿಗೆ ವಿಸ್ತರಿಸಬೇಕು ಎಂದು ವಿಜಯನಗರ ಜಿಲ್ಲಾ ಗಂಗಾಮತ ಬೆಸ್ತ ಸಮಾಜ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯನಗರ ಜಿಲ್ಲಾ ಗಂಗಾಮತ ಬೆಸ್ತ ಸಮಾಜದ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ್, “ಗಂಗಾಮತ, ಬೆಸ್ತ, ಕೋಲಿ ಹಾಗೂ ಕಬ್ಬಲಿಗ ಸಮಾಜದ ಪ್ರತಿನಿಧಿಯಾಗಿ ತಿಪ್ಪಣ್ಣ ಕಮಕನೂರ್ ಅವರು ಹಲವು ವರ್ಷಗಳಿಂದ ಸಾಮಾಜಿಕ ಹೋರಾಟ ನಡೆಸಿದ್ದಾರೆ. ಆಡಳಿತದ ಅನುಭವ ಹೊಂದಿರುವ ಅವರು ಜನಪರ ಕಾಳಜಿಯ ನಾಯಕ” ಎಂದು ಹೇಳಿದರು.
ಜೂನ್ 2026ಕ್ಕೆ ತಿಪ್ಪಣ್ಣ ಕಮಕನೂರ್ ಅವರ ನಾಲ್ಕು ವರ್ಷದ ಸದಸ್ಯತ್ವ ಅವಧಿ ಪೂರ್ಣಗೊಳ್ಳಲಿದ್ದು, ಅವರ ಅನುಭವ ಹಾಗೂ ಸಮಾಜಪರ ಸೇವೆಯನ್ನು ಗಮನಿಸಿ ಮುಂದಿನ ಆರು ವರ್ಷಗಳಿಗೂ ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ತಿಪ್ಪಣ್ಣ ಕಮಕನೂರ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಹಿಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ಮಾಡುತ್ತಿರುವ ನಾಯಕರಿಗೆ ಸರ್ಕಾರ ಸೂಕ್ತ ಗೌರವ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ದಾರ್ ಯಮನೂರಪ್ಪ, ಬಾರಿಕರ ಪರಶುರಾಮ್, ಸೂರ್ಯ ನಾರಾಯಣಪ್ಪ, ಸರ್ದಾರ್ ಜೀವಪ್ಪ, ಎಲ್ಐಸಿ ಪರಶುರಾಮ್, ಸರ್ದಾರ ಸಿದ್ದಪ್ಪ, ವೆಂಕಟೇಶ್ ವಲ್ಲಭಾಪುರ, ಪೂಜಾರ್ ಶ್ರೀನಿವಾಸ್, ಅಂಬಿಗರ ಮಂಜುನಾಥ, ಅಕಾರಿ ಸುನಿಲ್, ಅಂಬಿಗರ ಪುನೀತ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಬೀದಿ ನಾಯಿ ದಾಳಿಗೆ ಏಳು ಜನ ಗಾಯ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಬೀದಿ ನಾಯಿಯೊಂದು ಸರಣಿ ದಾಳಿ ನಡೆಸಿ ಏಳು ಮಂದಿಗೆ ಗಾಯಪಡಿಸಿದ ಘಟನೆ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.
ಗುರುವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಗ್ರಾಮದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರ ಮೇಲೆ ಏಕಾಏಕಿ ದಾಳಿ ನಡೆಸಿದ ನಾಯಿ, ಮೂವರಿಗೆ ಕಚ್ಚಿ ಗಾಯಪಡಿಸಿದೆ. ಬಳಿಕ ಅದೇ ರಾತ್ರಿ ಇನ್ನೂ ಮೂವರ ಮೇಲೆ ದಾಳಿ ನಡೆಸಿದ್ದು, ಶುಕ್ರವಾರ ಮುಂಜಾನೆ ಮತ್ತೊಬ್ಬ ಯುವಕನಿಗೂ ನಾಯಿ ಕಚ್ಚಿರುವುದಾಗಿ ತಿಳಿದು ಬಂದಿದೆ.
ಹೀಗೆ ಎರಡು ದಿನಗಳ ಅವಧಿಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡ ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಆಸ್ಪತ್ರೆಗೆ ರವಾನಿಸಲಾಗಿದೆ.
ನಾಯಿಯ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಸ್ಥಳೀಯರು ನಾಯಿಯನ್ನು ಓಡಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಭಗೀರಥನ ಓಣಿಯಲ್ಲೇ ನೀರಿನ ಬರ!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿದ್ದು, ತುಂಗಭದ್ರ ನೀರು ಪೂರೈಕೆಯಾಗುತ್ತಿದ್ದರೂ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಜನರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ ಎಂಬ ಆರೋಪಗಳು ಹೆಚ್ಚುತ್ತಿವೆ.
ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯ ನಿವಾಸಿಗಳು ಶನಿವಾರ ಸಾರ್ವಜನಿಕ ನಲ್ಲಿಗಳ ಬಳಿ ನೀರಿಗಾಗಿ ಗಂಟೆಗಟ್ಟಲೆ ಕಾಯ್ದು ನಿಂತ ದೃಶ್ಯ ಕಂಡು ಬಂದಿತು. ಕಳೆದ 20ರಿಂದ 30 ದಿನಗಳಿಂದ ಈ ಭಾಗಕ್ಕೆ ತುಂಗಭದ್ರ ಕುಡಿಯುವ ನೀರು ಪೂರೈಕೆಯಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕ ನಲ್ಲಿಗಳಲ್ಲೂ ಸಮರ್ಪಕ ನೀರು ಬಾರದ ಹಿನ್ನೆಲೆಯಲ್ಲಿ ಜನರು ಪುರಸಭೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದೇ ಭಾಗದಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಜಾರಿಗೆ ತರುವಲ್ಲಿ ಶ್ರಮಿಸಿದ ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ ಅವರ ನಿವಾಸವಿದ್ದು, “ನೀರು ತಂದ ಭಗೀರಥನ ಓಣಿಯಲ್ಲೇ ಈಗ ನೀರಿನ ಬರ ಎದುರಾಗಿದೆ” ಎಂದು ನಿವಾಸಿಗಳು ವ್ಯಂಗ್ಯವಾಡುತ್ತಿದ್ದಾರೆ.
ನೀರಿನ ಸಮಸ್ಯೆ ಕುರಿತು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಸ್ಪಂದಿಸುತ್ತಿಲ್ಲ. ಪಟ್ಟಣದ ಬಹುತೇಕ ಭಾಗಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ದೂರಿದರು.
ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಪುರಸಭೆ ಕಚೇರಿ ಎದುರು ಕೊಡಗಳನ್ನು ಇಟ್ಟು ಪ್ರತಿಭಟನೆ ನಡೆಸುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಉಮಾ ಮುತಗೊಂಡ, ಮುರಗಯ್ಯ ಅಕಳಂಡಸ್ವಾಮಿಮಠ, ಶಿವಯೋಗಿ ಗಡ್ಡದೇವರಮಠ, ಜ್ಯೋತಿ ಕೂಸನೂರುಮಠ, ಶೈಲಾ ಗಡ್ಡದೇವರಮಠ, ಮಲ್ಲಯ್ಯ ಗಡ್ಡದೇವರಮಠ, ಬಸನಗೌಡ ಮನ್ನಂಗಿ, ಕೊಟ್ರೆಶ್ ಕೆಸರಳ್ಳಿಮಠ, ಮಂಜುಳಾ ಕೂಸನೂರುಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
“ತುಂಗಭದ್ರ ನೀರು ಬರುತ್ತಿದೆ ಎನ್ನುವ ಮಾತು ಮಾತ್ರ ಇದೆ; ಆದರೆ ಕಳೆದ 30 ದಿನಗಳಿಂದ ನಮ್ಮ ಮನೆಗಳಿಗೆ ಒಂದು ಹನಿ ನೀರೂ ಬಂದಿಲ್ಲ”
ಸ್ಥಳೀಯ ನಿವಾಸಿಗಳು

ಪಿಣರಾಯಿ ಮನೆ ಮೇಲೆ ಇ.ಡಿ ದಾಳಿ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕರಾದ ಪಿಣರಾಯಿ ವಿಜಯನ್ ಅವರ ನಿವಾಸದ ಮೇಲೆ ನಡೆದ ಇ.ಡಿ ದಾಳಿಯನ್ನು ಖಂಡಿಸಿ ಸಿಪಿಐ(ಎಂ) ಪಕ್ಷದ ತಾಲೂಕು ಸಮಿತಿಯಿಂದ ಶನಿವಾರ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಭಾರಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. “ಇ.ಡಿ ದಾಳಿ ಎಂಬುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯ ಪ್ರತೀಕಾರದ ಭಾಗ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಒಂದೇ ತಿಂಗಳೊಳಗೆ ಪಿಣರಾಯಿ ವಿಜಯನ್ ನಿವಾಸದ ಮೇಲೆ ದಾಳಿ ನಡೆಸಿರುವುದು ವಿರೋಧ ಪಕ್ಷದ ನಾಯಕರನ್ನು ಬೆದರಿಸುವ ಉದ್ದೇಶವನ್ನೇ ಸ್ಪಷ್ಟಪಡಿಸುತ್ತದೆ” ಎಂದು ಆರೋಪಿಸಿದರು.
ಎಕ್ಸಲಾಜಿಕ್ ಪ್ರಕರಣಕ್ಕೂ ಪಿಣರಾಯಿ ವಿಜಯನ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯಗಳು ಹಲವು ಬಾರಿ ಗಮನಿಸಿದರೂ, ರಾಜಕೀಯ ಬೇಟೆ ಮಾತ್ರ ನಿರಂತರವಾಗಿ ಮುಂದುವರಿಯುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ದೆಹಲಿಯಲ್ಲಿ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ ತಕ್ಷಣವೇ ಈ ದಾಳಿ ನಡೆದಿರುವುದು ಹಲವು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ ಎಂದು ಮುಖಂಡರು ಆರೋಪಿಸಿದರು.
ರಾಜ್ಯದಲ್ಲಿ ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಇಂತಹ ಕ್ರಮಗಳು ಜರುಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆ. ಕೇರಳದಲ್ಲಿ ಜನರು ಈಗಾಗಲೇ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ದೇಶದಾದ್ಯಂತ ಇದರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಜನವಿರೋಧಿ, ನವ ಉದಾರವಾದಿ ಹಾಗೂ ದಮನಕಾರಿ ನೀತಿಗಳ ವಿರುದ್ಧ ಜನಸಾಮಾನ್ಯರ ಧ್ವನಿಯನ್ನು ಸಿಪಿಐ(ಎಂ) ಪಕ್ಷ ಸದಾ ರಕ್ಷಿಸಲಿದೆ. ಜನಪರ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಘೋಷಿಸಿದರು.
ಪ್ರತಿಭಟನೆಯ ನೇತೃತ್ವವನ್ನು ತಾಲೂಕು ಕಾರ್ಯದರ್ಶಿ ಬಿ. ಮಾಳಮ್ಮ ವಹಿಸಿದ್ದರು. ತಾಲೂಕು ಸಮಿತಿ ಮುಖಂಡರಾದ ಎಸ್. ಜಗನ್ನಾಥ, ಕೆ. ರಮೇಶ್, ಜಿ. ರಮೇಶ್, ಕೆ. ರಾಮಣ್ಣ, ಸರ್ದಾರ್ ಹುಲಿಗೆಮ್ಮ, ಬಿ. ಮೈಲಮ್ಮ, ತಟ್ನಮ್ಮ, ರಂಗಪ್ಪ ದಾಸರ, ಕೂಟಗಿ ಮಲ್ಲಿಕಾರ್ಜುನ, ದುರುಗಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.
“ರಾಜಕೀಯ ವಿರೋಧಿಗಳನ್ನು ಮಣಿಸಲು ತನಿಖಾ ಸಂಸ್ಥೆಗಳನ್ನು ಬಳಸುವುದು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ನೇರ ದಾಳಿ”
ಬಿ. ಮಾಳಮ್ಮ
error: Content is protected !!