Home Blog Page 115

ಕಡ್ಲಿಗಡಬ ಹುಣ್ಣಿಮೆ: ಮಲ್ಲೆಮ್ಮತಾಯಿಗೆ ವಿಶೇಷ ಪೂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕಡ್ಲಿಗಡಬ ಹುಣ್ಣಿಮೆ ಹಾಗೂ ಗುರುಪೌರ್ಣಿಮೆ ಅಂಗವಾಗಿ ನಭಾಪೂರ ಹದ್ದಿನಲ್ಲಿರುವ ಶ್ರೀ ಮಲ್ಲೆಮ್ಮತಾಯಿ ದೇವಸ್ಥಾನದಲ್ಲಿ ಬುಧವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ಈ ಪ್ರಯುಕ್ತ ಬೆಳಿಗ್ಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ವಿಜೃಂಭಣೆಯಿಂದ ನಡೆಯಿತು. ಬೆಳಧಡಿ ಗ್ರಾಮದ ಕೃಷ್ಣಪ್ಪ ಶಿವಪ್ಪ ತೋಟದ ಕುಟುಂಬದವರು ಅಭಿಷೇಕ ಸೇವೆಯನ್ನು ನೆರವೇರಿಸಿ ದೇವಿಯ ಕೃಪೆಗೆ ಪಾತ್ರರಾದರು.

ಪೂಜಾ ವಿಧಿವಿಧಾನಗಳನ್ನು ಅರ್ಚಕ ಮಲ್ಲಯ್ಯಸ್ವಾಮಿ ಅಂಗಡಿ ಹಿರೇಮಠ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ತಾಯಂದಿರು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಲ್ಲೆಮ್ಮತಾಯಿಯ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗವಹಿಸಿದರು.

ಪೂಜೆ ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಗಿದ್ದು, ತೋಟದ ಕುಟುಂಬದವರು ಪ್ರಸಾದ ಸೇವೆಯ ವ್ಯವಸ್ಥೆ ಮಾಡಿದರು. ಭಕ್ತರು ದೇವಿಯ ಆಶೀರ್ವಾದ ಪಡೆದು ಧನ್ಯತೆ ಮೆರೆದರು.

ನಾಳೆ ಚನ್ನಮ್ಮ ದೇವೇಗೌಡರ ಉತ್ತರ ಕ್ರಿಯೆ! 2 ಲಕ್ಷಕ್ಕೂ ಹೆಚ್ಚು ಜನ ಭಾಗಿ ನಿರೀಕ್ಷೆ

ಹಾಸನ: ಇತ್ತೀಚೆಗೆ ನಿಧನರಾದ ಶ್ರೀಮತಿ ಚನ್ನಮ್ಮ ಅವರ ಉತ್ತರ ಕ್ರಿಯೆಯ ವಿಧಿ ವಿಧಾನಗಳು ಗುರುವಾರ ಹರದನಹಳ್ಳಿಯ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಅವರ ಸಮಾಧಿ ಸ್ಥಳದಲ್ಲಿ ನಡೆಯಲಿವೆ.

ಉತ್ತರ ಕ್ರಿಯೆಯ ಹಿಂದಿನ ದಿನವಾದ ಬುಧವಾರ, ಸಮಾಧಿ ಸ್ಥಳದಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸಹೋದರ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರೊಂದಿಗೆ ಪರಿಶೀಲಿಸಿದರು.

ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ ಐದು ಹೆಲಿಪ್ಯಾಡ್‌ಗಳನ್ನು ಸಿದ್ಧವಾಗಿಡಲಾಗಿದೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದ್ದು, ಈ ಹಿನ್ನೆಲೆಯಲ್ಲಿ ವ್ಯಾಪಕ ವ್ಯವಸ್ಥೆ ಮಾಡಲಾಗಿದೆ. ಸುಮಾರು ಆರು ಲಕ್ಷಕ್ಕೂ ಹೆಚ್ಚು ಆಹ್ವಾನ ಪತ್ರಿಕೆಗಳನ್ನು ಮನೆಮನೆಗೂ ತಲುಪಿಸಲಾಗಿದೆ ಎಂದು ತಿಳಿಸಲಾಗಿದೆ.

ಚನ್ನಮ್ಮ ಅವರ ಸಮಾಧಿ ದರ್ಶನ ಹಾಗೂ ಪ್ರಸಾದ ಸ್ವೀಕಾರಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಒಂದು ಪಂಕ್ತಿಯಲ್ಲಿ 22 ಸಾವಿರ ಜನರು ಕುಳಿತು ಪ್ರಸಾದ ಸ್ವೀಕರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಮಳೆಯ ಸಾಧ್ಯತೆ ಹಿನ್ನೆಲೆಯಲ್ಲಿ 15 ಬೃಹತ್ ಜರ್ಮನ್ ಟೆಂಟ್‌ಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ಮೂರು ವಿಭಾಗಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಗಣ್ಯರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಚನ್ನಮ್ಮ ಅವರ ಸಮಾಧಿ ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಯಾವುದೇ ಭೇದಭಾವವಿಲ್ಲದೆ ಒಂದೇ ರೀತಿಯ ಪ್ರಸಾದ ವಿತರಿಸಲಾಗುತ್ತದೆ. ಪ್ರಸಾದದಲ್ಲಿ 20ಕ್ಕೂ ಹೆಚ್ಚು ಪದಾರ್ಥಗಳು ಇರಲಿದ್ದು, ಚನ್ನಮ್ಮ ಅವರಿಗೆ ಇಷ್ಟವಾದ ಆಹಾರ ಪದಾರ್ಥಗಳನ್ನೂ ಸೇರಿಸಲಾಗಿದೆ.

20ಕ್ಕೂ ಹೆಚ್ಚು ಬಗೆಯ ಪ್ರಸಾದ:

ಪ್ರಸಾದದಲ್ಲಿ ಅಕ್ಕಿ ಪಾಯಸ, ಬೂಂದಿ, ಕಾಯಿ ಹೋಳಿಗೆ, ಕಜ್ಜಾಯ, ಬಾದಾಮಿ ಹಲ್ವಾ, ಇಡ್ಲಿ-ಸಾಂಬಾರ್, ದೋಸೆ, ಪುಳಿಯೋಗರೆ, ಬಿಸಿಬೇಳೆ ಬಾತ್, ಮಸಾಲೆ ವಡೆ, ಉದ್ದಿನ ವಡೆ, ಕೋಸಂಬರಿ, ತರಕಾರಿ ಕೂಟು, ಅನ್ನ, ಮಜ್ಜಿಗೆ ಹುಳಿ ಸೇರಿದಂತೆ ಹಲವು ಬಗೆಯ ಖಾದ್ಯಗಳು ಇರಲಿವೆ.

ಪ್ರಸಾದ ತಯಾರಿಕಾ ಕಾರ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಶಾಸ್ತ್ರೋಕ್ತವಾಗಿ ಪ್ರಸಾದ ತಯಾರಿಸಲಾಗುತ್ತಿದ್ದು, ಹಲವು ತಂಡಗಳನ್ನು ರಚಿಸಲಾಗಿದೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, “ನಮ್ಮ ತಾಯಿ ಅನ್ನಪೂರ್ಣಿಯಂತೆ ನಮ್ಮ ಮನೆಯನ್ನು ಸಲುಹಿದ್ದರು. ಮನೆಗೆ ಬಂದ ಪ್ರತಿಯೊಬ್ಬರನ್ನೂ ಪ್ರೀತಿ ಮತ್ತು ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದರು. ಅವರು ಗಳಿಸಿದ ಪ್ರೀತಿಯೇ ಇಂದು ಜನರ ರೂಪದಲ್ಲಿ ಕಾಣಿಸುತ್ತಿದೆ” ಎಂದು ಭಾವುಕರಾದರು.

“ತಾಯಿಯ 11ನೇ ದಿನದ ಕಾರ್ಯಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಿರೀಕ್ಷೆಗೂ ಮೀರಿ ಜನರು ಆಗಮಿಸುವ ಸಾಧ್ಯತೆ ಇದೆ. ಸಮಾಧಿ ದರ್ಶನ ಹಾಗೂ ಪೂಜೆಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಆಗಮಿಸಿ ತಾಯಿಯ ಆತ್ಮಕ್ಕೆ ಶಾಂತಿ ಕೋರಿ” ಎಂದು ಮನವಿ ಮಾಡಿದರು.

ಗುರುವಾರ ಬೆಳಗ್ಗೆ 10 ಗಂಟೆಯಿಂದ ಪೂಜಾ ವಿಧಿ ವಿಧಾನಗಳು ಆರಂಭವಾಗಲಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ಪ್ರಸಾದ ವಿನಿಯೋಗ ನಡೆಯಲಿದೆ.

ಚನ್ನಮ್ಮ ಅವರು ಚಿರನಿದ್ರೆ ಮಾಡುತ್ತಿರುವ ಸ್ಥಳ ತಮ್ಮ ಪಾಲಿಗೆ ಪುಣ್ಯಸ್ಥಳವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಈ ಸ್ಥಳ ಮುಂದಿನ ದಿನಗಳಲ್ಲಿ ದುರ್ಬಲರು ಹಾಗೂ ಅನಾಥರ ಪಾಲಿಗೆ ನೆರವಾಗುವ ಕೇಂದ್ರವಾಗಿ ಬೆಳೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಬಣಜಿಗ ಸಮಾಜಕ್ಕೆ 2ಎ ಮೀಸಲಾತಿ ಜಾರಿಗೊಳಿಸಲು ಒತ್ತಾಯಿಸಿ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು ವತಿಯಿಂದ ಬಣಜಿಗ ಸಮಾಜಕ್ಕೆ 2ಎ ಉದ್ಯೋಗ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ, ಬುಧವಾರ ಗದಗ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ಹೈಕೋರ್ಟ್ ಆದೇಶದಂತೆ ಬಣಜಿಗ ಸಮಾಜವನ್ನು ಪ್ರವರ್ಗ ‘ಡಿ’ಯಿಂದ ಪ್ರವರ್ಗ ‘ಬಿ’ಗೆ ವರ್ಗೀಕರಿಸಿ 2ಎ ಮೀಸಲಾತಿಯ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಮಾಜದ ಬಹುಕಾಲದ ಬೇಡಿಕೆಯನ್ನು ಸರ್ಕಾರ ತ್ವರಿತವಾಗಿ ಈಡೇರಿಸಿ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ನ್ಯಾಯಯುತ ಅವಕಾಶ ಒದಗಿಸಬೇಕೆಂದು ಮನವಿ ಮಾಡಲಾಗಿದೆ.

ಮನವಿಯನ್ನು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹಾಗೂ ಗದಗ ತಹಸೀಲ್ದಾರರಿಗೆ ಸಲ್ಲಿಸಿ, ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಅಧ್ಯಕ್ಷ ಈಶಣ್ಣ ಮುನವಳ್ಳಿ, ತಾಲೂಕು ಅಧ್ಯಕ್ಷ ನಾಗೇಶಪ್ಪ ಸವಡಿ, ಮಾಜಿ ತಾಲೂಕು ಅಧ್ಯಕ್ಷ ರೇವಣಪ್ಪ ಯಳಮಲಿ, ರಾಜು ಕುರುಡಗಿ, ಬಿ.ಬಿ. ಅಸೂಟಿ, ಸುರೇಶ ನಿಲುಗಲ್, ವಿರೂಪಾಕ್ಷಪ್ಪ ಅಕ್ಕಿ, ಚನ್ನವೀರಪ್ಪ ದುಂದುರ, ಬಸವರಾಜ ರಾಮನಕೊಪ್ಪ, ಶಿವಲೀಲಾ ಅಕ್ಕಿ, ಲಲಿತಾ ಇಂಗಳಳ್ಳಿ, ವೀರಣ್ಣ ಗಡಗಿ, ಸುರೇಶ ಮಾಳವಾಡ, ಎಸ್.ವಿ. ಮೆಣಸಿನಕಾಯಿ, ಎಸ್.ಎಂ. ಅಗಡಿ, ಚೇತನ ಅಂಗಡಿ, ಸುರೇಶ ಅಚ್ಚಳ್ಳಿ, ರವಿ ಪಟ್ಟಣಶೆಟ್ಟರ, ಮಾಂತೇಶ ರಾಮನಕೊಪ್ಪ, ಶಿದ್ದಲಿಂಗಪ್ಪ ಅರಳಿ, ಅಶೋಕ ಅಂಗಡಿ, ಸಂಗಪ್ಪ ಯಳಮಲಿ, ಬಸೆಟ್ಟೆಪ್ಪ ಅಚ್ಚಳ್ಳಿ, ಕೂಡ್ಲೆಪ್ಪ ಅಂಗಡಿ ಸೇರಿದಂತೆ ಜಿಲ್ಲಾ, ತಾಲೂಕು, ಗ್ರಾಮ, ಮಹಿಳಾ ಹಾಗೂ ಯುವ ಘಟಕಗಳ ಪದಾಧಿಕಾರಿಗಳು ಮತ್ತು ಸಮಾಜದ ಗಣ್ಯರು ಉಪಸ್ಥಿತರಿದ್ದರು.

ಸಾಯಿಬಾಬಾ ತತ್ವಗಳೇ ಬದುಕಿನ ನಿಜವಾದ ಬೆಳಕು: ಪೂಜ್ಯ ಶಿವಶಾಂತವೀರ ಶರಣರು

0

ವಿಜಯಸಾಕ್ಷಿ ಸುದ್ದಿ, ಗದಗ: ಶಿರಡಿ ಸಾಯಿಬಾಬಾ ಅವರು ಮಾನವೀಯತೆ, ಭಕ್ತಿ ಮತ್ತು ಆದರ್ಶ ಜೀವನದ ಸಂದೇಶಗಳನ್ನು ನೀಡಿ ಮನುಕುಲವನ್ನು ಉದ್ಧರಿಸಿದ ಮಹಾನ್ ದೇವಮಾನವರಾಗಿದ್ದಾರೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಬಳಗಾನೂರಿನ ಪೂಜ್ಯ ಶಿವಶಾಂತವೀರ ಶರಣರು ಹೇಳಿದರು.

ಗದಗ-ಬೆಟಗೇರಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸೋಮವಾರ ನಡೆದ ನೂತನ ಶ್ರೀ ಸಾಯಿ ಪ್ರಸಾದ ನಿಲಯ, ವೆಬ್‌ಸೈಟ್ ಹಾಗೂ ಡಾ. ಸಂಗಮನಾಥ ಶೆಟ್ಟರ ಕನ್ನಡಕ್ಕೆ ಅನುವಾದಿಸಿದ ‘ಶ್ರೀ ಶಿರಡಿ ಬಾಬಾ ಮಹಾತ್ಮೆ–ಸಂಕಲ್ಪ ಸಿದ್ಧಿ ವ್ರತ’ ಗ್ರಂಥ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಾಯಿಬಾಬಾ ಅವರ ಉದ್ದೇಶ ಸಾಮಾನ್ಯ ವ್ಯಕ್ತಿಯನ್ನು ಆದರ್ಶ ವ್ಯಕ್ತಿಯನ್ನಾಗಿ ರೂಪಿಸುವುದಾಗಿತ್ತು. ಜ್ಞಾನ, ಭಕ್ತಿ, ಸ್ಮರಣೆ ಹಾಗೂ ಜನೋಪಯೋಗಿ ಕಾರ್ಯಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆಂಬ ಸಂದೇಶವನ್ನು ಅವರು ಸಾರಿದರು. ಸುಖ-ದುಃಖಗಳು ದೇಹಕ್ಕೆ ಮಾತ್ರ ಸಂಬಂಧಿಸಿದ್ದು, ಆತ್ಮ ಸದಾ ಚೈತನ್ಯಸ್ವರೂಪಿಯಾಗಿರುತ್ತದೆ. ಆತ್ಮಚಿಂತನೆಯ ಮೂಲಕ ಬದುಕಿನಲ್ಲಿ ನೆಮ್ಮದಿ ಹಾಗೂ ಆತ್ಮವಿಕಾಸ ಸಾಧ್ಯ ಎಂದು ಹೇಳಿದರು.

ಗದಗಿನ ಸಾಯಿಬಾಬಾ ಮಂದಿರ ಜ್ಞಾನ ದಾಸೋಹ, ಭಕ್ತಿ ದಾಸೋಹ ಹಾಗೂ ಅನ್ನದಾಸೋಹದ ಮೂಲಕ ಸಾಯಿಬಾಬಾ ಅವರ ತತ್ವ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಡಾ. ಸಂಗಮನಾಥ ಶೆಟ್ಟರ ಅವರು ಸಂತಕವಿ ದಾಸಗಣು ಮಹಾರಾಜರ ಮರಾಠಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವುದು ಅಭಿನಂದನೀಯ ಕಾರ್ಯ ಎಂದರು.

ಗ್ರಂಥ ಪರಿಚಯಿಸಿದ ಡಾ. ಸಂಗಮನಾಥ ಶೆಟ್ಟರ, ಸಾಯಿಬಾಬಾ ಅವರ ತತ್ವಗಳಲ್ಲಿ ನಿಸ್ವಾರ್ಥ ಕರ್ತವ್ಯ, ದಾನ, ವಿನಯ ಹಾಗೂ ಆತ್ಮಶುದ್ಧಿಗೆ ವಿಶೇಷ ಮಹತ್ವ ನೀಡಲಾಗಿದೆ. ಭಕ್ತರ ಬೇಡಿಕೆಯ ಮೇರೆಗೆ ಪರಿಷ್ಕೃತ ದ್ವಿತೀಯ ಮುದ್ರಣವನ್ನು ದಾನಿಗಳ ಸಹಕಾರದಿಂದ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ದತ್ತಾ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿರಣ ಪ್ರಕಾಶ ಭೂಮಾ ಮಾತನಾಡಿ, “ಸಬ್ ಕಾ ಮಾಲಿಕ್ ಏಕ್” ಎಂಬ ಸಾಯಿಬಾಬಾ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು, ಜಾತಿ-ಧರ್ಮ ಭೇದ ಮರೆತು ಮಾನವೀಯತೆಯಿಂದ ಬದುಕಬೇಕು ಎಂದು ಹೇಳಿದರು.

ಗದಗ-ಬೆಟಗೇರಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯ ಅಧ್ಯಕ್ಷ ಮಹೇಶಗೌಡ ತಲೆಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಭಕ್ತರ ಸಹಕಾರ ಹಾಗೂ ದಾನಿಗಳ ಕೊಡುಗೆಯಿಂದ ಮಂದಿರದಲ್ಲಿ ಅನೇಕ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಸುಶೀಲಾ ಗಂಗಣ್ಣ ಕೋಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಾನಿಗಳು, ಸೇವಾಕರ್ತರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಕುಮಾರಿ ಕ್ಷೀತಿ ಅಶ್ವಥ್ ಸುಲಾಖೆ ಪ್ರಾರ್ಥಿಸಿದರು. ಡಾ. ಎಸ್.ಡಿ. ಯರಗೇರಿ ಕಾರ್ಯಕ್ರಮ ನಿರೂಪಿಸಿ, ಅಮೃತ ವಾಲಿ ವಂದಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

“ಸಾಯಿಬಾಬಾ ಪವಾಡಗಳನ್ನು ಮಾತ್ರ ಮಾಡಲಿಲ್ಲ; ಮಾನವೀಯತೆ, ಭಕ್ತಿ ಮತ್ತು ಆದರ್ಶ ಜೀವನದ ಮಾರ್ಗವನ್ನೂ ತೋರಿಸಿದರು.”
– ಪೂಜ್ಯ ಶಿವಶಾಂತವೀರ ಶರಣರು

ಗದಗ–ಹರಪನಹಳ್ಳಿ ರೈಲು ಮಾರ್ಗಕ್ಕೆ ವೇಗ ನೀಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ದಶಕಗಳಿಂದ ನಿರೀಕ್ಷೆಯಲ್ಲಿರುವ ಗದಗ–ಹರಪನಹಳ್ಳಿ ನೂತನ ರೈಲು ಮಾರ್ಗದ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಹೂವಿನಹಡಗಲಿ ಶಾಸಕ ಕೃಷ್ಣ ನಾಯಕ ಅವರಿಗೆ ಗದಗ ಜಿಲ್ಲಾ ವಿಕಾಸ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.

ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ನೇತೃತ್ವದ ನಿಯೋಗ ಮನವಿ ಸಲ್ಲಿಸಿ, ಈ ಯೋಜನೆಯು ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದ್ದು, ರೈತರು, ವ್ಯಾಪಾರಸ್ಥರು, ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಬಹಳ ಅನುಕೂಲವಾಗಲಿದೆ ಎಂದು ತಿಳಿಸಿತು.

93 ಕಿಲೋಮೀಟರ್ ಉದ್ದದ ಈ ನೂತನ ರೈಲು ಮಾರ್ಗ ಪೂರ್ಣಗೊಂಡರೆ ಗದಗ ಜಂಕ್ಷನ್ ಮೂಲಕ ವಿಜಯಪುರ ಹಾಗೂ ಮಹಾರಾಷ್ಟ್ರದೊಂದಿಗೆ ಸಂಪರ್ಕ ವಿಸ್ತರಿಸುವುದರ ಜೊತೆಗೆ, ಹೂವಿನಹಡಗಲಿ–ಹರಪನಹಳ್ಳಿ ಭಾಗಕ್ಕೆ ಬೆಂಗಳೂರು, ಮೈಸೂರು ಮತ್ತು ಚೆನ್ನೈ ಮಾರ್ಗಗಳ ಸಂಪರ್ಕವೂ ಸುಲಭವಾಗಲಿದೆ. ಹಿಂದುಳಿದ ಪ್ರದೇಶದ ಜನರಿಗೆ ಇದು ಅಭಿವೃದ್ಧಿಯ ಹೊಸ ಅಧ್ಯಾಯವಾಗಲಿದ್ದು, ಸಂಚಾರ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಮಹತ್ತರ ಉತ್ತೇಜನ ದೊರೆಯಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ನೀವು ಆಡಳಿತ ಪಕ್ಷದ ಶಾಸಕರಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ಈ ವಿಷಯವನ್ನು ತಂದು, ಕಾಮಗಾರಿ ಶೀಘ್ರ ಆರಂಭವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಈ ಯೋಜನೆಯು ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅವರ ಕನಸಿನ ಯೋಜನೆಯಾಗಿದ್ದು, ಅದನ್ನು ಸಾಕಾರಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಆದ್ಯತೆ ನೀಡಬೇಕು ಎಂದು ವೇದಿಕೆ ಒತ್ತಾಯಿಸಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ವೀರಭದ್ರಪ್ಪ ಕಬ್ಬಿಣದ, ಸಿದ್ದಪ್ಪ ಜರತಕನಿ, ವೆಂಕಟೇಶ ಕಬಾಡಿ, ರಜಾಕ್ ನೂರಭಾಷಾ, ನಾಗರಾಜ ಹಂದಿಗೋಳ, ರಫೀಕ್ ಕಿತ್ತೂರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

“ಗದಗ–ಹರಪನಹಳ್ಳಿ ರೈಲು ಮಾರ್ಗ ಈ ಭಾಗದ ಅಭಿವೃದ್ಧಿಗೆ ಹೊಸ ಅಧ್ಯಾಯ ಬರೆಯಲಿದೆ. ಕಾಮಗಾರಿ ವಿಳಂಬವಾಗದಂತೆ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.”
– ವಿಶ್ವನಾಥ ಖಾನಾಪೂರ, ಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ

ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅಮ್ಮ ಫೌಂಡೇಶನ್ (ರಿ), ಬೆಂಗಳೂರು ವತಿಯಿಂದ ಲಕ್ಷ್ಮೇಶ್ವರ ತಾಲೂಕಿನ ಸಂಕದಾಳ ಮತ್ತು ಕೊಂಡಿಕೊಪ್ಪ ಗ್ರಾಮಗಳ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್, ನೋಟ್‌ಬುಕ್ ಹಾಗೂ ಪೆನ್‌ಗಳನ್ನು ವಿತರಿಸಲಾಯಿತು.

ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳಾರಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವನ್ನು ಅಮ್ಮ ಫೌಂಡೇಶನ್ ಅಧ್ಯಕ್ಷ ಹಾಗೂ ವಕೀಲ ಮೈಲಾರಪ್ಪ ಡಿ.ಎಚ್. ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ, ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಅಮ್ಮ ಫೌಂಡೇಶನ್ ನೀಡುತ್ತಿರುವ ಬೆಂಬಲ ಶ್ಲಾಘನೀಯವಾಗಿದೆ. ಇಂತಹ ದಾನಿಗಳ ಸಹಕಾರದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮತ್ತಷ್ಟು ಬಲ ಸಿಗಲಿದೆ ಎಂದು ಹೇಳಿದರು. ಇದೇ ವೇಳೆ ಶಾಲೆಗೆ ಡಿಜಿಟಲ್ ಸ್ಮಾರ್ಟ್ ಬೋರ್ಡ್ ಒದಗಿಸುವಂತೆ ಮನವಿ ಮಾಡಿದರು.

ಮನವಿಗೆ ತಕ್ಷಣ ಸ್ಪಂದಿಸಿದ ಮೈಲಾರಪ್ಪ ಡಿ.ಎಚ್., ತಾವು ಕಲಿತು ಬೆಳೆದ ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಗದಗ ಜಿಲ್ಲೆಯ ಇನ್ನಷ್ಟು ಸರ್ಕಾರಿ ಶಾಲೆಗಳಲ್ಲಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಜೊತೆಗೆ ಸಂಕದಾಳ ಶಾಲೆಗೆ ಶೀಘ್ರದಲ್ಲೇ ಡಿಜಿಟಲ್ ಸ್ಮಾರ್ಟ್ ಬೋರ್ಡ್ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ನಿವೃತ್ತ ಸೈನಿಕ ಬಸವರಾಜ ಸೂರಣಗಿ, ಗ್ರಾಮದ ಹಿರಿಯ ಹಾಲಪ್ಪ ಸೂರಣಗಿ, ಎಸ್‌ಡಿಎಂಸಿ ಅಧ್ಯಕ್ಷ ರವಿ ಹರಿಜನ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ದುರಗಪ್ಪ ಹರಿಜನ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಮ್ಮ ಫೌಂಡೇಶನ್ ಕೈಗೊಂಡಿರುವ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಮಂಜುನಾಥ ವಾರದ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ನಿರ್ದೇಶಕ ಶರಣು ಸೋಗಿ, ಜಿಲ್ಲಾ ಉಪಾಧ್ಯಕ್ಷ ಎಂ.ಎಸ್. ಹಿರೇಮಠ, ಶ್ರೀಮತಿ ನಂದಣ್ಣವರ್ ದಂಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಾಲೆಯ ಪ್ರಧಾನಗುರು ಎಸ್.ಎಸ್. ಉಪ್ಪಿನ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕ ವೈ.ಎಸ್. ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣಪ್ರೇಮಿಗಳು, ಗ್ರಾಮದ ಹಿರಿಯರು, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರ‍್ಯಾಪಿಡ್ ಮತ್ತು ವಿದ್ಯಾಪೋಷಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ನಗರದ ಕೆ.ಎಚ್. ಕಬ್ಬೂರ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್, ಜೆಎಸ್‌ಎಸ್ ಕಾಲೇಜು ಕ್ಯಾಂಪಸ್‌ನ ಪ್ರೇರಣಾ ಹಾಲ್‌ನಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಐಐಟಿ ಪ್ರಾಧ್ಯಾಪಕ ಹಾಗೂ ಮೈಂಡ್ ವೇವ್ ಎಜುಕೇಶನ್ ಹಬ್‌ನ ಪ್ರಮುಖರಾದ ಪ್ರೊ. ಎಸ್.ಎಂ. ಶಿವಪ್ರಸಾದ್ ಹಾಗೂ ವಿದ್ಯಾಪೋಷಕ ಸಂಸ್ಥೆಯ ಸಿಇಒ ಡಾ. ಶರತ್ ಐರಣಿ ಅವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಣವೇ ಉತ್ತಮ ಭವಿಷ್ಯದ ಅಡಿಪಾಯವಾಗಿದ್ದು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ರ‍್ಯಾಪಿಡ್ ಸಂಸ್ಥೆಯ ವಾಣಿಶ್ರೀ ಪುರೋಹಿತ ಮಾತನಾಡಿ, ಆರ್ಥಿಕ ನೆರವು ವಿದ್ಯಾರ್ಥಿನಿಯರ ಶೈಕ್ಷಣಿಕ ಕನಸುಗಳಿಗೆ ಹೊಸ ಬಲ ನೀಡುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ 81 ವಿದ್ಯಾರ್ಥಿನಿಯರಿಗೆ ಒಟ್ಟು ₹7.77 ಲಕ್ಷ ವಿದ್ಯಾರ್ಥಿವೇತನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ವಿಕಸನದ ಕುರಿತು ಪ್ರಸಿದ್ಧ ಪ್ರೇರಣಾದಾಯಕ ವಾಗ್ಮಿ ಹಾಗೂ ಸಂಪನ್ಮೂಲ ವ್ಯಕ್ತಿ ಪ್ರವೀಣ ಗುಡಿ ಅವರು “Stop Impressing, Start Inspiring” ವಿಷಯದ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ವಿದ್ಯಾಪೋಷಕ ಸಂಸ್ಥೆಯ ರತ್ನಾ ಹಿಪ್ಪರಗಿ, ಸಂಸ್ಥೆಯ ಸಿಬ್ಬಂದಿ, ರ‍್ಯಾಪಿಡ್ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಗುರುವಿನ ಕೃಪೆಯೇ ಬದುಕಿನ ನಿಜವಾದ ಸಂಪತ್ತು: ಡಾ. ವೀರಸೋಮೇಶ್ವರ ಜಗದ್ಗುರುಗಳು

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: “ಆಧ್ಯಾತ್ಮದ ಅಮರ ಸಂಪತ್ತನ್ನು ಕರುಣಿಸಿ, ಬದುಕಿಗೆ ಸತ್ಯದ ಬೆಳಕು ತೋರಿಸುವವನೇ ನಿಜವಾದ ಗುರು” ಎಂದು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಪೀಠಾಧಿಪತಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಬುಧವಾರ ರಂಭಾಪುರಿ ಪೀಠದಲ್ಲಿ ನಡೆದ ಗುರುಪೌರ್ಣಿಮೆ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜಗತ್ತಿನ ಶ್ರೇಷ್ಠ ಜ್ಞಾನಿಗಳು ಮತ್ತು ಅನುಭಾವಿಗಳು ಕಂಡ ಸತ್ಯದ ಬೆಳಕನ್ನು ಸಮಾಜಕ್ಕೆ ತೋರಿಸಿ ಜನರ ಉದ್ಧಾರ ಮಾಡಿದ್ದಾರೆ. ಅಲೌಕಿಕ ಇಚ್ಛೆಗಳನ್ನು ಈಡೇರಿಸುವುದರ ಜೊತೆಗೆ ಆಧ್ಯಾತ್ಮಿಕ ಬದುಕಿನತ್ತ ಕರೆದೊಯ್ಯುವವನೇ ನಿಜವಾದ ಗುರು ಎಂದು ತಿಳಿಸಿದರು.

ಸತ್ಸಂಗವು ಮನುಷ್ಯನಲ್ಲಿರುವ ಜಾತಿ, ಮತ, ಸ್ಥಾನಮಾನಗಳ ಭೇದವನ್ನು ದೂರ ಮಾಡುತ್ತದೆ. ‘ನಾನು’ ಎಂಬ ಅಹಂಕಾರವನ್ನು ತೊರೆದು ಭವಬಂಧನದಿಂದ ಮುಕ್ತಿಗೊಳಿಸುವ ಶಕ್ತಿ ಗುರುವಿನಲ್ಲಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಶ್ವಬಂಧುತ್ವ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕರು ಎಂದು ಅವರು ಹೇಳಿದರು.

ಗುರುಪೌರ್ಣಿಮೆ ಅಂಗವಾಗಿ ಭಕ್ತರು ಜಗದ್ಗುರುಗಳಿಗೆ ಪಾದಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಹುಡುಗಿ ಸೋಮೇಶ್ವರ ಶಿವಾಚಾರ್ಯರು, ಬೇರುಗಂಡಿ ರೇಣುಕ ಮಹಾಂತ ಶಿವಾಚಾರ್ಯರು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು, ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯರು, ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ತಾವರೆಕೆರೆ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ಸೇರಿದಂತೆ ಅನೇಕ ಮಠಾಧೀಶರು, ಗಣ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.

ಹುಬ್ಬಳ್ಳಿಯ ಆರ್.ಎಂ. ಹಿರೇಮಠ ಹಾಗೂ ಅವರ ಕುಟುಂಬದವರು ಗುರುಪಾದ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ಶ್ರೀಪೀಠದ ವಿವಿಧ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

“ಪ್ರಾಪಂಚಿಕ ಸಂಪತ್ತು ಬದುಕನ್ನು ವೈಭವಪೂರ್ಣಗೊಳಿಸಿದರೆ, ಪಾರಮಾರ್ಥಿಕ ಸಂಪತ್ತು ಬದುಕನ್ನು ಅನುಭಾವಪೂರ್ಣಗೊಳಿಸುತ್ತದೆ. ಆ ಅನುಭಾವದ ಅಮೃತವನ್ನು ತುಂಬುವವನೇ ಶ್ರೀಗುರು.”
– ಡಾ. ವೀರಸೋಮೇಶ್ವರ ಜಗದ್ಗುರುಗಳು

ಕುಡಿಯುವ ನೀರಿನಿಂದ ಕಾರು ತೊಳೆಯುತ್ತಿದ್ದವರಿಗೆ ಶಾಕ್; ಬೆಂಗಳೂರಿನಲ್ಲಿ 692 ಮಂದಿಗೆ ದಂಡದ ಬಿಸಿ ಮುಟ್ಟಿಸಿದ ಜಲಮಂಡಳಿ!

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ಕುಡಿಯುವ ನೀರನ್ನು ಅನಗತ್ಯವಾಗಿ ದುರ್ಬಳಕೆ ಮಾಡಿದವರ ವಿರುದ್ಧ ಬೆಂಗಳೂರು ಜಲಮಂಡಳಿ ಕ್ರಮ ಕೈಗೊಂಡಿದೆ.

ನಗರದಲ್ಲಿ ವಾಹನ ತೊಳೆಯಲು ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕುಡಿಯುವ ಕಾವೇರಿ ನೀರನ್ನು ಬಳಸಿದ 692 ಮಂದಿಗೆ ತಲಾ 5 ಸಾವಿರ ರೂ. ದಂಡ ವಿಧಿಸಲಾಗಿದ್ದು, ಒಟ್ಟು 34.60 ಲಕ್ಷ ರೂ. ದಂಡವನ್ನು ವಸೂಲಿ ಮಾಡಲಾಗಿದೆ.

ಬೆಂಗಳೂರು ಜಲಮಂಡಳಿ ಅಧಿಕಾರಿಗಳು ನಗರದ ವಿವಿಧ ವಲಯಗಳಲ್ಲಿ ಪರಿಶೀಲನೆ ನಡೆಸಿ ನೀರು ದುರ್ಬಳಕೆ ಮಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ದಕ್ಷಿಣ ವಲಯದಲ್ಲಿ ಅತಿ ಹೆಚ್ಚು 206 ಮಂದಿಗೆ ದಂಡ ವಿಧಿಸಲಾಗಿದೆ. ಪಶ್ಚಿಮ ವಲಯದಲ್ಲಿ 165, ಕೇಂದ್ರ ವಲಯದಲ್ಲಿ 135, ಪೂರ್ವ ವಲಯದಲ್ಲಿ 100 ಹಾಗೂ ಉತ್ತರ ವಲಯದಲ್ಲಿ 86 ಮಂದಿಯಿಂದ ದಂಡ ವಸೂಲಿ ಮಾಡಲಾಗಿದೆ.

ಇದೇ ವೇಳೆ, ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಪ್ರತಿದಿನ 3500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸೂಚಿಸಿರುವುದು ರಾಜ್ಯದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕುಡಿಯುವ ನೀರಿನ ಅಗತ್ಯತೆ ಇರುವ ಸಂದರ್ಭದಲ್ಲಿ ನೀರು ಬಿಡುಗಡೆ ಮಾಡುವ ಆದೇಶದ ಬಗ್ಗೆ ರೈತ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ಜುಲೈ 31ರಂದು ಬೆಂಗಳೂರಿನಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ:

ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜುಲೈ 31ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಗರದ ಕೆಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಜಲರೇಚಕ ಯಂತ್ರಾಗಾರಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಹೀಗಾಗಿ ಸಾರ್ವಜನಿಕರು ಅಗತ್ಯವಿರುವಷ್ಟು ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಂಡು, ನೀರನ್ನು ಮಿತವಾಗಿ ಬಳಸುವಂತೆ ಜಲಮಂಡಳಿ ಮನವಿ ಮಾಡಿದೆ.

ನಗರಕ್ಕೆ ನಿರಂತರ ಹಾಗೂ ವಿಶ್ವಾಸಾರ್ಹ ನೀರು ಪೂರೈಕೆ ಕಲ್ಪಿಸುವ ಉದ್ದೇಶದಿಂದ ಈ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಅಧಿಕಾರಿಗಳು ಕೋರಿದ್ದಾರೆ.

ಚಿಲ್ಲರೆ ಇಲ್ಲವೆಂದು ಸಚಿವರನ್ನೇ ಬಸ್‌ನಿಂದ ಇಳಿಸಿದ್ದ ನಿರ್ವಾಹಕನಿಗೆ ಬಿಗ್ ರಿಲೀಫ್; ಅಮಾನತು ತೆರವು!

ಬೆಂಗಳೂರು: ಚಿಲ್ಲರೆ ಹಣ ಇಲ್ಲದ ಕಾರಣಕ್ಕೆ ಸಚಿವರನ್ನೇ ಬಿಎಂಟಿಸಿ ಬಸ್‌ನಿಂದ ಕೆಳಗಿಳಿಸಿದ್ದ ನಿರ್ವಾಹಕನ ಅಮಾನತು ಆದೇಶವನ್ನು ಸಾರಿಗೆ ಸಚಿವ ಬೈರತಿ ಸುರೇಶ್ ರದ್ದುಪಡಿಸಿದ್ದಾರೆ.

ನಿರ್ವಾಹಕ ಟಿ.ಜಿ. ರಾಮಕೃಷ್ಣ ಅವರಿಗೆ ಮತ್ತೆ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜುಲೈ 11ರ ರಾತ್ರಿ ಸಾರಿಗೆ ಸಚಿವರು ದಿಢೀರ್‌ ಆಗಿ ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಪ್ರಯಾಣಿಸಿದ್ದರು. ಕೆಂಪೇಗೌಡ ಬಸ್ ನಿಲ್ದಾಣದಿಂದ ನಾಗಶೆಟ್ಟಿಹಳ್ಳಿಗೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುವ ವೇಳೆ, ಚಿಲ್ಲರೆ ಹಣ ಇಲ್ಲ ಎಂಬ ಕಾರಣಕ್ಕೆ ನಿರ್ವಾಹಕ ರಾಮಕೃಷ್ಣ ಅವರು ಸಚಿವರನ್ನು ಬಸ್‌ನಿಂದ ಕೆಳಗಿಳಿಸಿದ್ದರು.

ಈ ಘಟನೆ ಬಳಿಕ ಬಿಎಂಟಿಸಿ ಸಂಸ್ಥೆಯು ನಿರ್ವಾಹಕನನ್ನು ಅಮಾನತುಗೊಳಿಸಿತ್ತು. ಇದೀಗ ಸಚಿವರನ್ನು ಭೇಟಿಯಾದ ರಾಮಕೃಷ್ಣ ಅವರು ತಮ್ಮ ತಪ್ಪಿನ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಇದನ್ನು ಪರಿಗಣಿಸಿದ ಸಚಿವರು, ಎಚ್ಚರಿಕೆ ನೀಡಿ ಅಮಾನತು ಆದೇಶವನ್ನು ತೆರವುಗೊಳಿಸಿದ್ದಾರೆ.

ಚಿಲ್ಲರೆ ಹಣದ ವಿಚಾರದಲ್ಲಿ ಯಾವುದೇ ಪ್ರಯಾಣಿಕರಿಗೆ ತೊಂದರೆ ನೀಡಬಾರದು ಎಂದು ಸಚಿವ ಬೈರತಿ ಸುರೇಶ್ ಬಿಎಂಟಿಸಿ ಸೇರಿದಂತೆ ಎಲ್ಲ ಸಾರಿಗೆ ನಿಗಮಗಳ ಚಾಲಕರು ಮತ್ತು ನಿರ್ವಾಹಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಚಿಲ್ಲರೆ ಇಲ್ಲ ಎಂಬ ನೆಪದಲ್ಲಿ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿ ಇಳಿಸುವುದು ಅಮಾನವೀಯ. ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಇಂತಹ ಘಟನೆಗಳು ಮರುಕಳಿಸಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳೆಯರು ಸೇರಿದಂತೆ ಎಲ್ಲ ಪ್ರಯಾಣಿಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.