Home Blog Page 116

ತಾಯಿ, 5 ಮಕ್ಕಳ ಸಾವಿನ ಹಿಂದೆ ಕೌಟುಂಬಿಕ ಕಲಹ? ಭೂತನಾಳ ಕೆರೆ ಪ್ರಕರಣದಲ್ಲಿ ಪತಿ ವಿರುದ್ಧ ಕುಟುಂಬಸ್ಥರ ಆರೋಪ

0

ವಿಜಯಪುರ: ಭೂತನಾಳ ಕೆರೆಯಲ್ಲಿ ತಾಯಿ ಸೇರಿದಂತೆ ಐವರು ಮಕ್ಕಳ ಮೃತದೇಹ ಪತ್ತೆಯಾದ ಪ್ರಕರಣ ತೀವ್ರ ಕುತೂಹಲ ಮೂಡಿಸಿದ್ದು, ತನಿಖೆಯಲ್ಲಿ ಕೌಟುಂಬಿಕ ಕಲಹದ ಆಯಾಮ ಪ್ರಮುಖವಾಗಿ ಹೊರಹೊಮ್ಮಿದೆ. ಮೃತರನ್ನು ಶೋಭಾ ಜಾಲಗೇರಿ (45), ವಿದ್ಯಾ (16), ಸುವರ್ಣ (14), ಗೌಡೇಶ್ ಉರ್ಫ್ ತಿಪ್ಪರಾಯ (10), ವಿಕಾಸ (5) ಮತ್ತು ಸಾನಿಕಾ (7) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಆಗಸ್ಟ್ 23ರ ರಾತ್ರಿ ಶೋಭಾ ಹಾಗೂ ಪತಿ ಮಲಕಾರಿ ನಡುವೆ ಜಗಳ ನಡೆದಿತ್ತು. ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಪೂಜೆಗೆ ನೈವೇದ್ಯ ಸಿದ್ಧಪಡಿಸುವುದು ಹಾಗೂ ಕೂಲಿ ಕೆಲಸಕ್ಕೆ ತೆರಳಲು ಬುತ್ತಿ ಮಾಡಿಕೊಡುವ ವಿಚಾರದಲ್ಲಿ ದಂಪತಿ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಬಳಿಕ ಶೋಭಾ ಮಕ್ಕಳೊಂದಿಗೆ ಮನೆಯಿಂದ ಹೊರಹೋಗಿದ್ದರು.

ಅವರು ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮಲಕಾರಿ ಗ್ರಾಮ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದ. ಸುಳಿವು ಸಿಗದ ಹಿನ್ನೆಲೆಯಲ್ಲಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದ. ನಂತರ ಭೂತನಾಳ ಕೆರೆಯಲ್ಲಿ ಆರು ಮಂದಿಯ ಶವಗಳು ಪತ್ತೆಯಾಗಿವೆ.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಬಿಎಲ್‌ಡಿಇ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವಿನ ನಿಖರ ಕಾರಣ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ ಎಂದು ಎಸ್‌ಪಿ ಲಕ್ಷ್ಮಣ ಬಿ. ನಿಂಬರಗಿ ತಿಳಿಸಿದ್ದಾರೆ.

ಇತ್ತ ಶೋಭಾ ಕುಟುಂಬಸ್ಥರು ಮಲಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಮದ್ಯಪಾನ ಮಾಡಿ ಹಲ್ಲೆ ನಡೆಸುತ್ತಿದ್ದ ಹಾಗೂ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಶೋಭಾಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

ಆದರ್ಶ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೌಟುಂಬಿಕ ಕಲಹ ಸೇರಿದಂತೆ ಸಾವಿಗೆ ಕಾರಣವಾಗಬಹುದಾದ ಎಲ್ಲ ಸಾಧ್ಯತೆಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

ಭೀಕರ ರಸ್ತೆ ಅಪಘಾತ; ನರಗುಂದದ ಮೂವರು ಯುವಕರು ಸ್ಥಳದಲ್ಲೇ ಸಾವು

ಗದಗ/ಕೊಪ್ಪಳ: ಕೊಪ್ಪಳದಲ್ಲಿ ನಡೆಯಲಿರುವ ಈದ್ ಮಿಲಾದ್ ಹಬ್ಬದ ಮೆರವಣಿಗೆ ವೀಕ್ಷಿಸಲು ನರಗುಂದದಿಂದ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ಯುವಕರು ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕೊಪ್ಪಳ ಜಿಲ್ಲೆಯ ಬನ್ನಿಕೊಪ್ಪ ಗ್ರಾಮದ ಬಳಿ ನಡೆದಿದೆ.

ಇಂದು ಮುಂಜಾನೆ ನರಗುಂದದಿಂದ ಕೊಪ್ಪಳದತ್ತ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ನರಗುಂದ ಪಟ್ಟಣದ ಹೊರಕೆರೆ ಓಣಿಯ ಶಾನುಸಾಬ ತಂದೆ ಮಕ್ತುಮಸಾಬ ಬಸಾಪೂರ (15) ಮಾಬುಸಾಬ ತಂದೆ ಬುಡನಸಾಬ ಮಟಗೇರಿ (17) ಹಾಗೂ ಹೊಸೂರ ಓಣಿಯ ಫಕ್ರುಸಾಬ್ ತಂದೆ ಹಸನಸಾಬ ಮಟಗೇರಿ (18) ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಯುವಕರು ಈದ್ ಮಿಲಾದ್ ಹಬ್ಬದ ಮೆರವಣಿಗೆ ವೀಕ್ಷಿಸಲು ಕೊಪ್ಪಳಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದ್ದು, ನರಗುಂದದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ವಿಷಯ ತಿಳಿದು ಕುಕನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ನೇಪಾಳದಲ್ಲಿ ಭೀಕರ ಪ್ರವಾಹ: 16 ಸಾವು, 400 ಮಂದಿ ನಾಪತ್ತೆ; 105 ಭಾರತೀಯ ಪ್ರವಾಸಿಗರಿಗಾಗಿ ತೀವ್ರ ಶೋಧ

0

ಕಠ್ಮಂಡು: ನೇಪಾಳದ ರಸುವಾ ಪ್ರದೇಶದಲ್ಲಿ ಭೋಟೆ ಕೋಶಿ ನದಿಯಲ್ಲಿ ದಿಢೀರ್ ಉಂಟಾದ ಭೀಕರ ಪ್ರವಾಹ ಭಾರೀ ಅವಾಂತರ ಸೃಷ್ಟಿಸಿದೆ. ಪ್ರವಾಹದಲ್ಲಿ ಇದುವರೆಗೆ 16 ಮಂದಿ ಮೃತಪಟ್ಟಿದ್ದು, ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಕಾರ ಸುಮಾರು 400 ಮಂದಿ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದವರಲ್ಲಿ 291 ಮಂದಿ ವಿದೇಶಿ ಪ್ರಜೆಗಳಾಗಿದ್ದು, ಕನಿಷ್ಠ 105 ಭಾರತೀಯ ಪ್ರವಾಸಿಗರು ಸೇರಿದ್ದಾರೆ. ನಾಪತ್ತೆಯಾದ ವಿದೇಶಿಯರಲ್ಲಿ ಅಮೆರಿಕದ ಮೂವರು, ಮಲೇಷ್ಯಾದ 17, ಬ್ರಿಟನ್‌ನ 12, ದಕ್ಷಿಣ ಆಫ್ರಿಕಾದ ನಾಲ್ವರು, ಆಸ್ಟ್ರೇಲಿಯಾದ ಒಬ್ಬರು ಹಾಗೂ ನೆದರ್ಲೆಂಡ್ಸ್‌ನ ಒಬ್ಬರು ಸೇರಿದ್ದಾರೆ. ಮತ್ತೂ 103 ಮಂದಿಯ ಪೌರತ್ವ ಇನ್ನೂ ದೃಢಪಟ್ಟಿಲ್ಲ.

ಟಿಬೆಟ್ ಗಡಿಗೆ ಹೊಂದಿಕೊಂಡಿರುವ ಮಧ್ಯ ನೇಪಾಳದ ರಸುವಾ ಮತ್ತು ಧಾಡಿಂಗ್ ಜಿಲ್ಲೆಗಳು ಸೇರಿದಂತೆ ನುವಾಕೋಟ್ ಜಿಲ್ಲೆಯ ಮೇಲೂ ಪ್ರವಾಹದ ತೀವ್ರ ಪರಿಣಾಮ ಬೀರಿದೆ. ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಟಿಬೆಟ್ ಕಡೆಯಿಂದ ಭೋಟೆ ಕೋಶಿ ನದಿಗೆ ಹಠಾತ್ ಭಾರೀ ಪ್ರಮಾಣದಲ್ಲಿ ನೀರು ಹರಿದುಬಂದಿದ್ದು, ನದಿ ತೀರದ ಜನವಸತಿ ಪ್ರದೇಶಗಳು ನಲುಗಿ ಹೋಗಿವೆ.

ರಸುವಾ ಜಿಲ್ಲೆಯ ತಿಮುರೆ ಮತ್ತು ಸ್ಯಾಫ್ರುಬೆಸಿ ಪ್ರದೇಶಗಳಲ್ಲಿ ವ್ಯಾಪಕ ಹಾನಿಯಾಗಿದ್ದು, ವಾಹನಗಳು, ವಸ್ತುಗಳು ಹಾಗೂ ಆಸ್ತಿಪಾಸ್ತಿಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ.

ನೇಪಾಳ ಸೇನೆಯ ನೆರವಿನೊಂದಿಗೆ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಭರದಿಂದ ಸಾಗಿದೆ. ರಸುವಾ, ನುವಾಕೋಟ್, ಧಾಡಿಂಗ್ ಮತ್ತು ಚಿತ್ವಾನ್ ಸೇರಿದಂತೆ ನದಿ ತಳಪ್ರದೇಶದ ಹಲವು ಜಿಲ್ಲೆಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.

ಭಾರತದಿಂದ ಪರಿಹಾರ ನೆರವು

ಪ್ರವಾಹದಿಂದ ತೀವ್ರ ಹಾನಿಗೊಳಗಾದ ನೇಪಾಳಕ್ಕೆ ಶೀಘ್ರವೇ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಭಾರತ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪ್ರವಾಹಕ್ಕೆ ಕಾರಣವೇನು?

ರಸುವಾದಲ್ಲಿ ಸುರಿದ ಸ್ಥಳೀಯ ಮಳೆಯಿಂದ ಈ ದಿಢೀರ್ ಪ್ರವಾಹ ಸಂಭವಿಸಿಲ್ಲ ಎನ್ನಲಾಗಿದ್ದು, ಟಿಬೆಟ್ ಭಾಗದಲ್ಲಿ ಸುರಿದ ಭಾರಿ ಮಳೆ ಅಥವಾ ಹಿಮಪಾತದಿಂದ ನದಿಯಲ್ಲಿ ಹಠಾತ್ ನೀರಿನ ಪ್ರಮಾಣ ಏರಿಕೆಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ ಪ್ರವಾಹದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಉತ್ತರಾಖಂಡದಲ್ಲಿ ಹಂದಿಜ್ವರ ಆತಂಕ: 49 ಮಂದಿಗೆ ಸೋಂಕು, ಐವರು ಸಾವು

0

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಹಂದಿಜ್ವರ (H1N1) ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆಯಲ್ಲಿ ಆತಂಕ ಮೂಡಿಸಿದೆ. ಆಗಸ್ಟ್‌ 1ರಿಂದ ಈವರೆಗೆ ರಾಜ್ಯದಲ್ಲಿ 49 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ. ಮೃತಪಟ್ಟ ಐವರೂ ಈಗಾಗಲೇ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೆಲವೇ ದಿನಗಳಲ್ಲಿ ಸೋಂಕಿತರ ಸಂಖ್ಯೆ 31ರಿಂದ 49ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 34 ಮಂದಿ ಡೆಹ್ರಾಡೂನ್‌ನವರೇ ಆಗಿದ್ದಾರೆ. ಸೋಂಕು ಪತ್ತೆಯಾದ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ತಪಾಸಣೆಯನ್ನು ತೀವ್ರಗೊಳಿಸಿದ್ದು, ಎಲ್ಲ ಜಿಲ್ಲೆಗಳಲ್ಲೂ ಕ್ಷಿಪ್ರ ಪ್ರತಿಕ್ರಿಯಾ ತಂಡಗಳನ್ನು ನಿಯೋಜಿಸಲಾಗಿದೆ.

ವೈದ್ಯರು ಹಾಗೂ ತಜ್ಞರು ಸೇರಿದಂತೆ ನಾಲ್ವರು ಸಿಬ್ಬಂದಿಯ ತಂಡಗಳು ಸೋಂಕು ಬಾಧಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿವೆ. ಸೋಂಕಿತರ ಕಳೆದ 10ರಿಂದ 15 ದಿನಗಳ ಪ್ರಯಾಣದ ವಿವರ ಹಾಗೂ ಅವರ ಸಂಪರ್ಕಕ್ಕೆ ಬಂದವರ ಮಾಹಿತಿಯನ್ನೂ ಆರೋಗ್ಯ ಇಲಾಖೆ ಸಂಗ್ರಹಿಸುತ್ತಿದೆ. ಸೋಂಕಿತರ ಸಂಪರ್ಕದಲ್ಲಿದ್ದವರಿಗೂ H1N1 ಪರೀಕ್ಷೆ ನಡೆಸಲಾಗುತ್ತಿದೆ.

ಮಧುಮೇಹ, ರಕ್ತದೊತ್ತಡ, ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರ ಮೇಲೆ ವಿಶೇಷ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ ಸಹ-ಅಸ್ವಸ್ಥತೆ ಹೊಂದಿರುವವರಲ್ಲಿ ಸೋಂಕು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸಲಾಗುತ್ತಿದೆ. ಮೃತಪಟ್ಟ ಐವರೂ ಇಂತಹ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು ಎಂದು ಇಲಾಖೆ ತಿಳಿಸಿದೆ.

ಸೋಂಕಿತರ ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನು ಅಗತ್ಯವಿದ್ದಲ್ಲಿ ಪ್ರತ್ಯೇಕವಾಗಿರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಉಸಿರಾಟದ ತೊಂದರೆ, ದಿಢೀರ್ ಜ್ವರ, ಚಳಿ, ಕೆಮ್ಮು, ಮೂಗು ಸೋರುವಿಕೆ, ಸ್ನಾಯು ನೋವು, ವಾಂತಿ ಅಥವಾ ತೀವ್ರ ಆಯಾಸ ಕಂಡುಬಂದರೆ ತಡ ಮಾಡದೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಆಸ್ಪತ್ರೆಗಳಿಗೆ ಈಗಾಗಲೇ H1N1 ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಸಿದ್ಧವಾಗಿದೆ ಎಂದು ಉತ್ತರಾಖಂಡ ಆರೋಗ್ಯ ಕಾರ್ಯದರ್ಶಿ ವಿಜಯ್ ಶಂಕರ್ ಪಾಂಡೆ ತಿಳಿಸಿದ್ದಾರೆ.

ಲಕ್ನೋದಿಂದ ಬೆಂಗಳೂರಿಗೆ ಬಂದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆ!

ಲಕ್ನೋ/ಬೆಂಗಳೂರು: ಲಕ್ನೋದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರವೊಂದು ಪತ್ತೆಯಾಗಿದ್ದು, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಇತರ ಭದ್ರತಾ ಏಜೆನ್ಸಿಗಳು ತಕ್ಷಣವೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಇಂಡಿಗೋ ವಿಮಾನ (ಸಂಖ್ಯೆ 6E231)ದಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಇಂದು ಬೆಂಗಳೂರಿಗೆ ಬಂದು ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಬೆದರಿಕೆ ಪತ್ರ ಪತ್ತೆಯಾಗಿದೆ. ಟಿಶ್ಯೂ ಪೇಪರ್‌ನಲ್ಲಿ ಬಾಂಬ್ ಬೆದರಿಕೆ ಬರೆಯಲಾಗಿದ್ದು, ವಿಮಾನ ಪ್ರಯಾಣದ ಕೊನೆಯ ಹಂತದಲ್ಲಿ ಈ ಪತ್ರ ಪತ್ತೆಯಾಗಿದೆ ಎನ್ನಲಾಗಿದೆ.

ಬೆದರಿಕೆ ಪತ್ರ ಪತ್ತೆಯಾದ ಬೆನ್ನಲ್ಲೇ ಭದ್ರತಾ ಏಜೆನ್ಸಿಗಳು ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲು ಮುಂದಾಗಿವೆ. ಬೆದರಿಕೆ ನಿಜವಾಗಿದೆಯೇ ಅಥವಾ ಹುಸಿ ಬೆದರಿಕೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಪಾಸಣೆ ನಡೆಸಲಾಗುತ್ತಿದೆ. ಬೆದರಿಕೆ ಪತ್ರವನ್ನು ಯಾರು ಬರೆದಿದ್ದಾರೆ ಮತ್ತು ಅದು ವಿಮಾನದಲ್ಲಿ ಹೇಗೆ ಪತ್ತೆಯಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ.

ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ: ಶಾಸಕ ಪ್ರಕಾಶ್ ಕೋಳಿವಾಡಗೆ 500 ರೂ. ದಂಡ

0

ಹಾವೇರಿ: ಟ್ರಾಫಿಕ್ ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ರಾಣೇಬೆನ್ನೂರು ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡ ಅವರಿಗೆ ಟ್ರಾಫಿಕ್ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ.

ಆಗಸ್ಟ್ 25ರಂದು ಪ್ರಕಾಶ್ ಕೋಳಿವಾಡ ಹೆಲ್ಮೆಟ್ ಧರಿಸದೇ ಬುಲೆಟ್ ಬೈಕ್ ಚಲಾಯಿಸಿದ್ದರು. ಈ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದಲೂ ಟೀಕೆ ವ್ಯಕ್ತವಾಗಿತ್ತು.

ಸಾಮಾನ್ಯ ಜನರು ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದರೆ ದಂಡ ಹಾಕಲಾಗುತ್ತದೆ, ಆದರೆ ಜನಪ್ರತಿನಿಧಿಗಳಿಗೆ ನಿಯಮ ಅನ್ವಯಿಸುವುದಿಲ್ಲವೇ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ರಾಣೇಬೆನ್ನೂರು ಟ್ರಾಫಿಕ್ ಪೊಲೀಸರು ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದು, ಬಳಿಕ 500 ರೂ. ದಂಡದ ನೋಟಿಸ್ ಶಾಸಕರ ಮನೆಗೆ ತಲುಪಿಸಲಾಗಿದೆ.

ಪೊಲೀಸರ ನೋಟಿಸ್ ಆಧರಿಸಿ ಶಾಸಕ ಪ್ರಕಾಶ್ ಕೋಳಿವಾಡ ದಂಡ ಪಾವತಿಸಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲೂ ಮಾಹಿತಿ ಹಂಚಿಕೊಂಡಿರುವ ಅವರು, ಎಸ್‌ಪಿ ಮೇಡಂ ತಮಗೆ ನೋಟಿಸ್ ನೀಡಿದ್ದಾರೆ, ಅವರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ, ಅದನ್ನು ತಾವು ಗೌರವಿಸುವುದಾಗಿ ತಿಳಿಸಿದ್ದಾರೆ. ಈ ಘಟನೆ ಮೂಲಕ ಜನಪ್ರತಿನಿಧಿಗಳೂ ಸೇರಿದಂತೆ ಎಲ್ಲರೂ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಎಂಬ ಸಂದೇಶ ಮತ್ತೊಮ್ಮೆ ಹೊರಬಂದಿದೆ.

5 ಗ್ರಾಂ ಚಿನ್ನ ಚರಂಡಿಗೆ ಎಸೆದಿದ್ದ ದಂಪತಿ! ಪೊಲೀಸರ ಸಮಯಪ್ರಜ್ಞೆಯಿಂದ ಆಭರಣಗಳು ವಾಪಸ್

0

ವಿಶಾಖಪಟ್ಟಣಂ: ಪೂಜೆ ಮುಗಿದ ನಂತರ ಕಸದ ಜೊತೆಗೆ ತಿಳಿಯದೇ ಚರಂಡಿಗೆ ಎಸೆದಿದ್ದ ಸುಮಾರು 5 ಗ್ರಾಂ ಚಿನ್ನದ ಆಭರಣಗಳು ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಮರಳಿ ಸಿಕ್ಕಿರುವ ರೋಚಕ ಘಟನೆ ವಿಶಾಖಪಟ್ಟಣಂನ ಶ್ರೀನಗರದಲ್ಲಿ ನಡೆದಿದೆ.

ಗಾಜುವಾಕ ಶ್ರೀನಗರದ ನಿವಾಸಿಗಳಾದ ಉಡುಮುಲ ರಮೇಶ್ ಹಾಗೂ ದಿವ್ಯಾ ದಂಪತಿ ಈ ತಿಂಗಳ 21ರಂದು ಶುಕ್ರವಾರ ವರಮಹಾಲಕ್ಷ್ಮಿ ವ್ರತದ ಅಂಗವಾಗಿ ದೇವಿಗೆ ಸುಮಾರು 8 ತೊಲ ಚಿನ್ನದ ಆಭರಣಗಳಿಂದ ಅಲಂಕಾರ ಮಾಡಿದ್ದರು. ಮೂರು ದಿನಗಳ ನಂತರ ರಮೇಶ್ ದೇವಿಯ ಮೇಲಿದ್ದ 3 ತೊಲದ ಹಾರ ಮತ್ತು ಕಾಸನ್ನು ಮಾತ್ರ ತೆಗೆದುಕೊಂಡಿದ್ದು, ಹೂವುಗಳ ನಡುವೆ ಇದ್ದ 1 ಬ್ರೇಸ್‌ಲೆಟ್, 2 ಚೈನ್‌ಗಳು ಹಾಗೂ 3 ಉಂಗುರಗಳು ಸೇರಿದಂತೆ ಉಳಿದ 5 ತೊಲ ಚಿನ್ನದ ಆಭರಣಗಳನ್ನು ಗಮನಿಸದೇ ಪೂಜೆಗೆ ಬಳಸಿದ್ದ ಹೂವು-ಸಾಮಗ್ರಿಗಳ ಜೊತೆಗೆ ಡ್ರೈನೇಜ್‌ಗೆ ಎಸೆದು ಮನೆಗೆ ಮರಳಿದ್ದರು.

ಮನೆಗೆ ಬಂದ ನಂತರ ಚಿನ್ನದ ಆಭರಣಗಳು ಇಲ್ಲದಿರುವುದನ್ನು ಗಮನಿಸಿದ ದಿವ್ಯಾ, ಪತಿಗೆ ತಿಳಿಸಿದ್ದರು. ತಕ್ಷಣವೇ ಕಾಲುವೆ ಬಳಿ ಹೋಗಿ ಹುಡುಕಿದರೂ ಚಿನ್ನ ಸಿಗದ ಕಾರಣ ತೀವ್ರ ಆತಂಕಗೊಂಡ ದಂಪತಿ ಸ್ಟೀಲ್ ಪ್ಲಾಂಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಘಟನೆಯ ಗಂಭೀರತೆ ಅರಿತ ಸಿಐ ಕೇಶವರಾವ್, ತಕ್ಷಣವೇ ಕಾನ್‌ಸ್ಟೇಬಲ್ ಮತ್ತು ಹೋಂ ಗಾರ್ಡ್‌ಗಳನ್ನು ಸ್ಥಳಕ್ಕೆ ಕಳುಹಿಸಿ, ಜೆಸಿಬಿ ಸಹಾಯದಿಂದ ಡ್ರೈನೇಜ್ ನೀರಿನ ಹರಿವನ್ನು ಬೇರೆಡೆಗೆ ತಿರುಗಿಸಿ ತೀವ್ರ ಶೋಧ ನಡೆಸಿದರು.

ನೀರು ಕಡಿಮೆಯಾಗುತ್ತಿದ್ದಂತೆ ಸ್ವಲ್ಪ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆಭರಣಗಳು ಒಂದೊಂದಾಗಿ ಪತ್ತೆಯಾಗಿದ್ದು, ಪೊಲೀಸರು ಎಲ್ಲಾ 5 ಗ್ರಾಂ ಆಭರಣಗಳನ್ನು ಸುರಕ್ಷಿತವಾಗಿ ಹೊರತೆಗೆದು ದಂಪತಿಗೆ ಹಸ್ತಾಂತರಿಸಿದರು. ಹಬ್ಬ ಹಾಗೂ ಪೂಜೆಗಳ ಸಂದರ್ಭದಲ್ಲಿ ಬೆಲೆಬಾಳುವ ಆಭರಣ ಮತ್ತು ವಸ್ತುಗಳ ವಿಷಯದಲ್ಲಿ ಸಾರ್ವಜನಿಕರು ತೀವ್ರ ಎಚ್ಚರಿಕೆಯಿಂದ ಇರಬೇಕು ಎಂದು ಸ್ಟೀಲ್ ಪ್ಲಾಂಟ್ ಪೊಲೀಸ್ ಠಾಣೆ ಸಿಐ ಕೇಶವರಾವ್ ಹೇಳಿದ್ದಾರೆ.

ಕಸ್ತೂರಿ ರಂಗನ್‌ ವರದಿ ಜಾರಿಗೆ ಅವಕಾಶವಿಲ್ಲ: ಮಲೆನಾಡಿನ ರೈತರು ಆತಂಕಪಡಬೇಕಿಲ್ಲ ಎಂದ ಮಧು ಬಂಗಾರಪ್ಪ

0

ಬೆಂಗಳೂರು: ಕಸ್ತೂರಿ ರಂಗನ್ ಸಮಿತಿ ವರದಿ ಜಾರಿ ವಿಚಾರದಲ್ಲಿ ಮಲೆನಾಡಿನ ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಆದರೆ ರಾಜ್ಯ ಸರ್ಕಾರ ಈಗಾಗಲೇ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿ ತನ್ನ ನಿರ್ಧಾರವನ್ನು ಕೇಂದ್ರಕ್ಕೆ ತಿಳಿಸಿದೆ. ಹೀಗಾಗಿ ವರದಿ ಜಾರಿಗೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕೇಂದ್ರದ ಕರಡು ಅಧಿಸೂಚನೆಯಲ್ಲಿ ಕರ್ನಾಟಕದ 1,576 ಗ್ರಾಮಗಳ ವ್ಯಾಪ್ತಿಯ 20,668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ 484 ಗ್ರಾಮಗಳು ಸೇರಿವೆ. ಜನವಸತಿ ಪ್ರದೇಶಗಳು ಹಾಗೂ ಕೃಷಿ ಭೂಮಿಯೂ ಪಟ್ಟಿಯಲ್ಲಿ ಒಳಗೊಂಡಿರುವುದರಿಂದ ಮಲೆನಾಡಿನ ರೈತರಲ್ಲಿ ಆತಂಕ ಮೂಡಿದೆ.

ಆದರೆ ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮಕ್ಕೂ ಸರ್ಕಾರ ಅವಕಾಶ ನೀಡುವುದಿಲ್ಲ. ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರ ವಿರೋಧಿಸಲಿದೆ. ಮಲೆನಾಡಿನ ಜನರು ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ವೈಯಕ್ತಿಕವಾಗಿಯೂ ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳು ಕೂಡ ಕರಡು ಅಧಿಸೂಚನೆಯನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ. ಸರ್ಕಾರ ರೈತರ ಪರವಾಗಿ ನಿಲ್ಲಲಿದೆ ಎಂದು ಸಚಿವರು ಹೇಳಿದ್ದಾರೆ.

ಇದೇ ವೇಳೆ, ವಿಪಕ್ಷ ನಾಯಕರು ಕೇಂದ್ರದ ಕರಡು ಅಧಿಸೂಚನೆಯನ್ನು ಖಂಡಿಸುವ ಬದಲು ಮಲೆನಾಡಿನ ರೈತರಲ್ಲಿ ಗೊಂದಲ ಮೂಡಿಸುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಆರೋಪಿಸಿದ್ದಾರೆ. ವಿಧಾನಸಭೆಯಲ್ಲಿ ಈ ಮಹತ್ವದ ವಿಚಾರದ ಕುರಿತು ಚರ್ಚಿಸುವ ಬದಲು ಗದ್ದಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ತಂದೆ ಎಸ್. ಬಂಗಾರಪ್ಪ ಅವರು ಸದಾ ರೈತರು ಹಾಗೂ ಜನಸಾಮಾನ್ಯರ ಪರವಾಗಿ ನಿಂತಿದ್ದರು. ಅವರ ಆಶಯದಂತೆ ತಾವು ಕೂಡ ರೈತರ ಪರವಾಗಿ ಕೆಲಸ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

ನೇಪಾಳದಲ್ಲಿ ರಣಭೀಕರ ಪ್ರವಾಹ: 8 ಮಂದಿ ಸಾವು, 41 ಭದ್ರತಾ ಸಿಬ್ಬಂದಿ ಸೇರಿ ನೂರಾರು ಮಂದಿ ನಾಪತ್ತೆ

ಕಠ್ಮಂಡು: ನೇಪಾಳದಲ್ಲಿ ಭೋಟೆ ಕೋಶಿ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹ ಭಾರೀ ಅನಾಹುತ ಸೃಷ್ಟಿಸಿದೆ. ಪ್ರವಾಹದಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 41 ಭದ್ರತಾ ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ನಾಪತ್ತೆಯಾಗಿರುವ 41 ಭದ್ರತಾ ಸಿಬ್ಬಂದಿಯಲ್ಲಿ 32 ಮಂದಿ ನೇಪಾಳ ಪೊಲೀಸರು ಹಾಗೂ 9 ಮಂದಿ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿ ಸೇರಿದ್ದಾರೆ. ಈವರೆಗೆ 8 ಮೃತದೇಹಗಳನ್ನು ಪತ್ತೆಹಚ್ಚಲಾಗಿದ್ದು, ನಾಪತ್ತೆಯಾಗಿರುವವರಿಗಾಗಿ ರಕ್ಷಣಾ ತಂಡಗಳು ಭರದಿಂದ ಶೋಧ ಕಾರ್ಯ ನಡೆಸುತ್ತಿವೆ.

ಸ್ಥಳೀಯ ಕಾಲಮಾನ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಭೋಟೆ ಕೋಶಿ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ನದಿ ದಂಡೆಯಲ್ಲಿರುವ ಜನರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ನದಿಯುದ್ದಕ್ಕೂ ವಾಸಿಸುವ ನಿವಾಸಿಗಳು ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ.

ನೇಪಾಳ-ಟಿಬೆಟ್ ಗಡಿಯ ಸಮೀಪದ ರಸುವಾ ಜಿಲ್ಲೆಯಲ್ಲಿ ಪ್ರವಾಹದ ರಭಸಕ್ಕೆ ಇಡೀ ಗ್ರಾಮವೇ ಕೊಚ್ಚಿಹೋಗಿದೆ ಎಂದು ವರದಿಯಾಗಿದೆ. ಪ್ರಾಥಮಿಕ ಮಾಹಿತಿಯಂತೆ ಸುಮಾರು 1,000 ಮಂದಿ ಪ್ರವಾಹದಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಖ್ಯೆ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.

ರಸುವಾ ಜಿಲ್ಲೆಯ ಸಯಾಪ್ರು ಬೆಸಿ ಹಾಗೂ ತಿಮುರೆ ಪ್ರದೇಶಗಳು ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾಗಿವೆ. ಹಲವು ಗ್ರಾಮಗಳು ಹಾಗೂ ನಿರ್ಮಾಣ ಹಂತದಲ್ಲಿದ್ದ ಯೋಜನಾ ಪ್ರದೇಶಗಳು ನೀರಿನ ರಭಸಕ್ಕೆ ಕೊಚ್ಚಿಹೋಗಿವೆ ಎನ್ನಲಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿದ್ದು, ನಾಪತ್ತೆಯಾದವರಿಗಾಗಿ ಭದ್ರತಾ ಪಡೆಗಳು ಹಾಗೂ ರಕ್ಷಣಾ ತಂಡಗಳು ಯುದ್ಧೋಪಾದಿಯಲ್ಲಿ ಶೋಧ ನಡೆಸುತ್ತಿವೆ. ಸದ್ಯ ಪರಿಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ.

187 ಕೋಟಿ ಹಗರಣ, ಅಧಿಕಾರದ ಮದ: ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದ ವಿಜಯೇಂದ್ರ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಹಗರಣದ ಆರೋಪಿ ಸಚಿವ ನಾಗೇಂದ್ರ ಅವರು ತನಿಖೆಯ ಬಳಿಕ ನಿರಪರಾಧಿ ಎಂದು ಸಾಬೀತಾದರೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸವಾಲು ಹಾಕಿದ್ದಾರೆ.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಇ.ಡಿ. ಚಾರ್ಜ್‌ಶೀಟ್‌ನಲ್ಲೂ ನಾಗೇಂದ್ರ ಹೆಸರು ಉಲ್ಲೇಖವಾಗಿದೆ ಎಂದರು. ಶಿವಮೊಗ್ಗದಲ್ಲಿ ಪ್ರಾಮಾಣಿಕ ಅಧಿಕಾರಿ, ಬೋವಿ ಸಮಾಜದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಡೆತ್ ನೋಟಿನಲ್ಲೂ ಅಂದಿನ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶದ ಮೇರೆಗೆ ಹಣವನ್ನು ತೆಲಂಗಾಣ ರಾಜ್ಯಕ್ಕೆ ವರ್ಗಾಯಿಸಿದ್ದಾಗಿ ತಿಳಿಸಿದ್ದರು ಎಂದು ಗಮನ ಸೆಳೆದರು.

ಬಿಜೆಪಿ ಎತ್ತಿದ ಪ್ರಶ್ನೆ ಗಂಭೀರವಾಗಿದ್ದು, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ಸಿನವರು ಕೊಳ್ಳೆ ಹೊಡೆದಿದ್ದಾರೆ ಎಂದ ವಿಜಯೇಂದ್ರ, ಇಂಥ ಭ್ರಷ್ಟರನ್ನು ಯಾವುದೇ ಕಾರಣಕ್ಕೂ ಮುಂದುವರೆಸಬಾರದು, ಸಚಿವ ಸ್ಥಾನದಿಂದ ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು. ಅಧಿವೇಶನ ಆರಂಭಕ್ಕೂ ಮೊದಲೇ ಇದನ್ನು ಹೇಳಲಾಗಿತ್ತು ಎಂದ ಅವರು, ಉತ್ತರ ಕರ್ನಾಟಕದ ಸಮಸ್ಯೆಗಳು, ಬರಗಾಲ, ನೀರಾವರಿ ಯೋಜನೆಗಳು, ಕೆಪಿಎಸ್‌ಸಿ ಹಗರಣದ ಕುರಿತು ಅಧಿವೇಶನದಲ್ಲಿ ಚರ್ಚೆ ಆಗಬೇಕಿದೆ ಎಂದರು.

ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿದರೆ ಅವರು ಭಂಡತನದಿಂದ ಮೆರೆಯುತ್ತಿದ್ದಾರೆ ಎಂದ ವಿಜಯೇಂದ್ರ, ಅಧಿಕಾರದ ಮದದಿಂದ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದ್ದು, ಈ ಮದವನ್ನು ಇಳಿಸುವ ಶಕ್ತಿ ಬಿಜೆಪಿಗೆ ಇದೆ ಎಂದು ಎಚ್ಚರಿಸಿದರು. ಸದನದಲ್ಲಿ ಹೋರಾಟ ಮಾಡುತ್ತಿದ್ದರೆ ತಮ್ಮನ್ನು ಗೂಂಡಾಗಳೆಂದು ಕರೆಯಲಾಗಿದೆ ಎಂದೂ, ದಲಿತರ ಪರವಾಗಿ ಧ್ವನಿ ಎತ್ತಿದ ಬಿಜೆಪಿ-ಜೆಡಿಎಸ್‌ನವರನ್ನು ಗೂಂಡಾಗಳೆಂದು ಕರೆಯುವುದೇ ಎಂದು ಪ್ರಶ್ನಿಸಿದರು.

187 ಕೋಟಿ ರೂ. ಹಣ ಲೂಟಿಯಾಗಿದ್ದು, ದಲಿತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಆ ಹಣ ವಾಪಸ್ ಬಂದು ಆ ಸಮುದಾಯದ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು ತಿಳಿಸಿದ ವಿಜಯೇಂದ್ರ, ಎಲ್ಲಿಯವರೆಗೆ ಬೇಕೋ ಅಲ್ಲಿಯವರೆಗೆ ಹೋರಾಟಕ್ಕೆ ಸಿದ್ಧ ಎಂದು ಪ್ರಕಟಿಸಿದರು.