Home Blog Page 116

ಮೆಟ್ರೋ ಪಿಲ್ಲರ್‌ಗೆ ಲೈಟಿಂಗ್ ಅಳವಡಿಸುವಾಗ ವಿದ್ಯುತ್ ಶಾಕ್: ಕಾರ್ಮಿಕ ಸಾವು!

ಬೆಂಗಳೂರು: ನಮ್ಮ ಮೆಟ್ರೋ ಪಿಲ್ಲರ್‌ಗೆ ಲೈಟಿಂಗ್ ಅಳವಡಿಸುವ ಕಾಮಗಾರಿ ವೇಳೆ ವಿದ್ಯುತ್ ಪ್ರವಹಿಸಿ ಕಾರ್ಮಿಕನೊಬ್ಬ ಮೃತಪಟ್ಟಿರುವ ದುರ್ಘಟನೆ ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಸಮೀಪ ಸಂಭವಿಸಿದೆ.

ಮೃತ ಕಾರ್ಮಿಕನನ್ನು ಗುರಪ್ಪ (70) ಎಂದು ಗುರುತಿಸಲಾಗಿದೆ. ವೈಟ್‌ಫೀಲ್ಡ್–ಚಲ್ಲಘಟ್ಟ ನೇರಳೆ ಮಾರ್ಗದ ಟ್ರಿನಿಟಿ ಮೆಟ್ರೋ ನಿಲ್ದಾಣದ 153ನೇ ಪಿಲ್ಲರ್ ಸಮೀಪ ಈ ಅವಘಡ ನಡೆದಿದೆ.

ಬಿಎಂಆರ್‌ಸಿಎಲ್‌ನಿಂದ ಲೈಟಿಂಗ್ ಅಳವಡಿಸುವ ಕಾಮಗಾರಿಯ ಗುತ್ತಿಗೆಯನ್ನು ಎಂಆರ್ ಎಲೆಕ್ಟ್ರಿಕಲ್ಸ್ ಸಂಸ್ಥೆ ಪಡೆದಿತ್ತು. ಅದರಂತೆ ಗುರಪ್ಪ ಅವರು ಪಿಲ್ಲರ್‌ಗೆ ಲೈಟಿಂಗ್ ಅಳವಡಿಸುವ ಕೆಲಸದಲ್ಲಿ ನಿರತರಾಗಿದ್ದರು.

ಲೈಟಿಂಗ್ ವ್ಯವಸ್ಥೆಗಾಗಿ ಅರ್ಥಿಂಗ್ ಗುಂಡಿ ಅಗೆಯುವ ವೇಳೆ ಡ್ರಿಲ್ಲಿಂಗ್ ಯಂತ್ರವು ನೆಲದಡಿಯಲ್ಲಿದ್ದ ವಿದ್ಯುತ್ ಕೇಬಲ್‌ಗೆ ತಾಗಿದ ಪರಿಣಾಮ ವಿದ್ಯುತ್ ಪ್ರವಹಿಸಿ ಗುರಪ್ಪ ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ.

ಸ್ಥಳದಲ್ಲಿದ್ದವರು ತಕ್ಷಣ ಅವರನ್ನು ನಗರದ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನೆ ಗುರುವಾರ ಸಂಜೆ ಸುಮಾರು 4 ಗಂಟೆ ಸುಮಾರಿಗೆ ನಡೆದಿದ್ದು, ಪ್ರಕರಣ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವಘಡದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೊಹರಂ ಕಾರಣಿಕದಲ್ಲಿ ಮೊಳಗಿದ ವರ್ಷದ ನುಡಿ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆಯೊಂದಿಗೆ ಆಚರಿಸಲಾಗುವ ಮೊಹರಂ ಹಬ್ಬದ ಅಂಗವಾಗಿ ನಡೆದ ಕಾರಣಿಕೋತ್ಸವದಲ್ಲಿ ಈ ವರ್ಷದ ಕಾರಣಿಕ ನುಡಿ ಮೊಳಗಿತು. ಗ್ರಾಮದ ಶ್ರೀ ಚೌಡದಾಪುರ ಸ್ವಾಮಿಯ ಸೇವಕ ಬಿಲ್ಲನ್ನೇರಿ, “ಮಳೆ ಬೆಳೆ ಕಷ್ಟದಿಂದ ಸಂಪಾಯಿತಲೇ ಸಂತೋಷದ ದಿನ್” ಎಂದು 2026ನೇ ಸಾಲಿನ ಕಾರಣಿಕ ನುಡಿಯನ್ನು ಘೋಷಿಸಿದರು.

ಕಾರಣಿಕೋತ್ಸವಕ್ಕೂ ಮುನ್ನ ಗಂಗೆ ಪೂಜೆ, ನೀರಿನಲ್ಲಿ ದೀಪ ಹಚ್ಚುವುದು, ಅರಿಕೆಯ ಸಕ್ಕರೆ ದಾನ, ಪಟಾಕ್ಷಿಯ ಹರಾಜು, ಸ್ವಾಮಿಯ ಕಿಚ್ಚು ಹಾಯಿಸುವುದು, ಕಾರಣಿಕ ನುಡಿಯುವುದು ಹಾಗೂ ಹುಡಿ ತುಂಬುವ ಸಂಪ್ರದಾಯಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಬಳಿಕ ಶ್ರೀ ಸ್ವಾಮಿಯ ಅಲಾಯಿ ಕುಣಿತವೂ ಗಮನ ಸೆಳೆಯಿತು.

ಮೊಹರಂ ಹಬ್ಬದ ಪ್ರಯುಕ್ತ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ರಿವಾಯತ್ ಜಾನಪದ ಕಲಾವಿದ ಬಡೇಸಾಬ್ ತಂಡ ತ್ಯಾಗ, ವೀರತೆ ಹಾಗೂ ಬಲಿದಾನದ ಸಂದೇಶ ಸಾರುವ ರಿವಾಯತ್ ಸವಾಲ್ ಪದಗಳನ್ನು ಹಾಡಿ ನೆರೆದಿದ್ದ ಭಕ್ತರನ್ನು ರಂಜಿಸಿತು.

ಕಾರ್ಯಕ್ರಮದಲ್ಲಿ ಹಂಪಾಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದರು.

ಮೊಹರಂ ಸಂಭ್ರಮಕ್ಕೆ ರಂಗೇರಿಸಿದ ಕುಸ್ತಿ ಕಾಳಗ!

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಬಲ್ಲಾಹುಣ್ಸಿ ಗ್ರಾಮದಲ್ಲಿ ಮೊಹರಂ ಹಬ್ಬದ ಅಂಗವಾಗಿ ಆಯೋಜಿಸಿದ್ದ ವಾರ್ಷಿಕ ಕುಸ್ತಿ ಪಂದ್ಯಾವಳಿಗೆ ಪುರಸಭೆ ಸದಸ್ಯ ಪವಾಡಿ ಹನುಮಂತಪ್ಪ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಸ್ತಿ ಕೇವಲ ಕ್ರೀಡೆಯಲ್ಲ, ಅದು ಗ್ರಾಮೀಣ ಸಂಸ್ಕೃತಿ, ದೈಹಿಕ ಸಾಮರ್ಥ್ಯ ಹಾಗೂ ಶಿಸ್ತಿನ ಪ್ರತೀಕವಾಗಿದೆ. ಯುವಕರಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವಲ್ಲಿ ಕುಸ್ತಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ದಾವಣಗೆರೆ, ಹಾವೇರಿ, ಹೊಸಪೇಟೆ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪೈಲ್ವಾನರು ಸುಮಾರು 15ರಿಂದ 20 ಕುಸ್ತಿಗಳಲ್ಲಿ ಸೆಣಸಾಡಿ ಪ್ರೇಕ್ಷಕರ ಮನರಂಜಿಸಿದರು. ಪರ್ಸಿ ಪೈಕಿ ಫೈನಲ್ ಕುಸ್ತಿಯಲ್ಲಿ ಶರತ್ (ರಾಣೆಬೆನ್ನೂರು) ಹಾಗೂ ವಿಜಯ (ಹರಿಹರ) ನಡುವಿನ ಸೆಣಸಾಟ ಸಮಬಲದಲ್ಲಿ ಅಂತ್ಯಗೊಂಡ ಕಾರಣ ಬೆಳ್ಳಿ ಗದೆ ಪ್ರಶಸ್ತಿ ಈ ಬಾರಿ ನೀಡಲಾಗಲಿಲ್ಲ.

ಕುಸ್ತಿ ಸ್ಪರ್ಧೆ ವೀಕ್ಷಿಸಲು ಸಾವಿರಾರು ಜನರು ಸೇರಿದ್ದು, ಕುಸ್ತಿ ಕಣ ರೋಚಕ ಪೈಪೋಟಿಗೆ ಸಾಕ್ಷಿಯಾಯಿತು. ಪ್ರತಿವರ್ಷ ಕುಸ್ತಿಪಟುಗಳಿಗೆ ಧನಸಹಾಯ ಹಾಗೂ ಸಾರಿಗೆ ಭತ್ಯೆ ನೀಡಿ ಪ್ರೋತ್ಸಾಹಿಸುತ್ತಿರುವ ಗ್ರಾಮಸ್ಥರ ಸೇವೆಯನ್ನು ಅವರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕೆ. ಮೈಲಾರಪ್ಪ, ದೊಡ್ಡ ಬಸಪ್ಪ, ಡಿಶ್ ಮಂಜುನಾಥ್, ಶಿಖಂದರ್, ಇಮ್ತಿಯಾಜ್, ಪೈಂಟರ್ ಬಾಬು, ಕೆ. ಹುಚ್ಚಪ್ಪ, ಬಲ್ಲಾಹುಣ್ಸಿ ರಾಮಣ್ಣ, ಸಾಹಿರಾಬಾನು, ಎಣ್ಣೆ ದಾದು ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಿರ್ಣಾಯಕರಾಗಿ ಫಾಜಿಲ್ ಸಾಬ್, ಶಾನುಭೋಗರ ತಿಪ್ಪಣ್ಣ, ಶಾನುಭೋಗರ ನಾಗರಾಜ್, ಬಿಸ್ನಳ್ಳಿ ಕರೀಂಸಾಬ್ ಹಾಗೂ ಪೂಜಾರ್ ಮಂಜುನಾಥ್ ಕಾರ್ಯನಿರ್ವಹಿಸಿದರು.

“ಕುಸ್ತಿ ಯುವಕರಲ್ಲಿ ಧೈರ್ಯ, ಶಿಸ್ತು ಮತ್ತು ಆತ್ಮವಿಶ್ವಾಸ ಬೆಳೆಸುವ ಶ್ರೇಷ್ಠ ಕ್ರೀಡೆ. ಗ್ರಾಮೀಣ ಭಾಗದಲ್ಲಿ ಈ ಕ್ರೀಡೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ.”

– ಪವಾಡಿ ಹನುಮಂತಪ್ಪ, ಪುರಸಭೆ ಸದಸ್ಯ, ಹಗರಿಬೊಮ್ಮನಹಳ್ಳಿ

ಕೆಆರ್‌ಪುರ ತ್ರಿವಳಿ ಕೊಲೆ ಪ್ರಕರಣ: ಮೂವರನ್ನು ನಾವೇ ಕೊಂದಿದ್ದೇವೆ ಎಂದು ತಪ್ಪೊಪ್ಪಿಕೊಂಡ ಆರೋಪಿಗಳು!

ಬೆಂಗಳೂರು: ಕೆಆರ್‌ಪುರದ ಸಿಗೇಹಳ್ಳಿಯಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನತ್, ಮೂವರು ಕುಟುಂಬ ಸದಸ್ಯರನ್ನು ತಾವೇ ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಕಳೆದ ಸೋಮವಾರ ಕೌಟುಂಬಿಕ ಕಲಹದ ಹಿನ್ನೆಲೆ ಶ್ವೇತಾ ಹಾಗೂ ಕೆನತ್ ಸೇರಿ, ಶ್ವೇತಾಳ ತಂದೆ ಸೋಮಸುಂದರ್, ತಾಯಿ ಮುತ್ತುಲಕ್ಷ್ಮೀ ಮತ್ತು ಸಹೋದರಿ ಸುಪ್ರಿಯಾ ಅವರನ್ನು ಸಿಗೇಹಳ್ಳಿಯ ಫ್ಲ್ಯಾಟ್‌ನಲ್ಲಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದರು. ಘಟನೆ ಬಳಿಕ ಇಬ್ಬರೂ ಪರಾರಿಯಾಗಿದ್ದು, ಪುದುಚೇರಿಯಲ್ಲಿ ಪೊಲೀಸರು ಬಂಧಿಸಿದ್ದರು.

ಬಂಧನದ ಬಳಿಕ ಕೆಆರ್‌ಪುರ ಪೊಲೀಸರು ಆರೋಪಿಗಳ ಪ್ರಾಥಮಿಕ ವಿಚಾರಣೆ ನಡೆಸಿದ ವೇಳೆ, “ಮೂವರನ್ನು ನಾವೇ ಕೊಲೆ ಮಾಡಿದ್ದೇವೆ” ಎಂದು ಇಬ್ಬರೂ ಒಪ್ಪಿಕೊಂಡಿದ್ದಾರೆ. ಆದರೆ ಕೊಲೆಗೆ ನಿಖರ ಕಾರಣವೇನು ಎಂಬುದರ ಬಗ್ಗೆ ಆರೋಪಿಗಳು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ತಿಳಿದುಬಂದಿದೆ.

ಪ್ರಕರಣದ ಸತ್ಯಾಸತ್ಯತೆ ಹಾಗೂ ಕೊಲೆಯ ಹಿಂದಿನ ಉದ್ದೇಶವನ್ನು ಪತ್ತೆಹಚ್ಚಲು ನ್ಯಾಯಾಲಯದ ಆದೇಶದಂತೆ ಶ್ವೇತಾ ಮತ್ತು ಕೆನತ್ ಅವರನ್ನು ತಲಾ 15 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ತ್ರಿವಳಿ ಕೊಲೆಯ ಹಿಂದಿನ ನಿಜವಾದ ಕಾರಣ ಏನು ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ.

ಗಾಂಧಿ ಭವನ ಸ್ವಚ್ಛತೆಗೆ ನಿವೃತ್ತ ಸೈನಿಕರ ಒತ್ತಾಯ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ನಿರ್ಮಿಸಲಾದ ಗಾಂಧಿ ಭವನವು ಖಾಸಗಿ ವಾಹನಗಳ ನಿಲ್ದಾಣ ಹಾಗೂ ದನಗಳನ್ನು ಕಟ್ಟುವ ಸ್ಥಳವಾಗಿ ಮಾರ್ಪಟ್ಟಿದ್ದು, ತಕ್ಷಣ ಸ್ವಚ್ಛತೆ ಕಾಪಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ವಾತಾವರಣ ಕಲ್ಪಿಸಬೇಕು ಎಂದು ನಿವೃತ್ತ ಸೈನಿಕರ ಸಂಘ ಆಗ್ರಹಿಸಿದೆ.

ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ಅವರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ, ಗಾಂಧಿ ಭವನದ ಸುತ್ತಮುತ್ತ ದನಕರುಗಳ ಸಗಣಿ ಹಾಗೂ ಸಾರ್ವಜನಿಕರ ಮಲ-ಮೂತ್ರ ವಿಸರ್ಜನೆಯಿಂದ ದುರ್ವಾಸನೆ ಹರಡುತ್ತಿದ್ದು, ಅಲ್ಲಿಯೇ ಸಂಘದ ಕಚೇರಿ ಕಾರ್ಯನಿರ್ವಹಿಸುವುದರಿಂದ ಮಾಸಿಕ ಸಭೆ ನಡೆಸಲು ತೀವ್ರ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಭವನಕ್ಕೆ ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಿಸಿ, ಕಿಟಕಿಗಳು ಹಾಗೂ ಮುಖ್ಯ ದ್ವಾರ ಅಳವಡಿಸಿದರೆ ಜನರು ಮತ್ತು ಜಾನುವಾರುಗಳ ಹಾವಳಿ ತಡೆಯಲು ಸಾಧ್ಯವಾಗುತ್ತದೆ. ಇದರಿಂದ ಭವನದ ಸ್ವಚ್ಛತೆ ಕಾಪಾಡಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬಹುದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಜುಲೈ 26ರಂದು ಗಾಂಧಿ ಭವನದಲ್ಲೇ ಕಾರ್ಗಿಲ್ ವಿಜಯೋತ್ಸವ ಆಚರಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ಅಗತ್ಯ ಮೂಲಸೌಕರ್ಯ ಹಾಗೂ ಸ್ವಚ್ಛತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಘ ಒತ್ತಾಯಿಸಿದೆ.

ಈ ಮನವಿಗೆ ನಿವೃತ್ತ ಸೈನಿಕರ ಸಂಘದ ಸದಸ್ಯರು ಸಹಿ ಹಾಕಿದ್ದು, ಪಟ್ಟಣ ಪಂಚಾಯಿತಿ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ನಿವೃತ್ತ ಸೈನಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬರುವ ಜುಲೈ ತಿಂಗಳ ಮಾಸಿಕ ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರಥಮ ಪರೀಕ್ಷೆಯಲ್ಲಿ ಶೇ.85ಕ್ಕೂ ಹೆಚ್ಚು ಅಂಕ ಪಡೆದ ನಿವೃತ್ತ ಸೈನಿಕರು ಹಾಗೂ ಪ್ಯಾರಾ ಮಿಲಿಟರಿ ಯೋಧರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ಹೇಳಿದರು.

ನಿವೃತ್ತ ಸೈನಿಕರು ಮತ್ತು ಪ್ಯಾರಾ ಮಿಲಿಟರಿ ಯೋಧರ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಿವೃತ್ತ ಸೈನಿಕರು ತಮ್ಮ ಪಿಂಚಣಿ ಹಾಗೂ ಇತರ ಸೌಲಭ್ಯಗಳಿಗಾಗಿ ಸಮೀಪದ ಎಸ್‌ಬಿಐ ಶಾಖೆಯಲ್ಲಿ ಬ್ಯಾಂಕ್ ಖಾತೆ ಹೊಂದುವಂತೆ ಸಲಹೆ ನೀಡಿದರು.

ಜುಲೈ 26ರಂದು ನಡೆಯಲಿರುವ ಕಾರ್ಗಿಲ್ ವಿಜಯೋತ್ಸವವನ್ನು ಎಲ್ಲರೂ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಚರಿಸಬೇಕು ಎಂದು ಕರೆ ನೀಡಿದರು.

ನರೇಗಲ್ಲ ಸಿನಿಮಾ ಮಂದಿರದಿಂದ ಕೋಡಿಕೊಪ್ಪದವರೆಗೆ ನಿರ್ಮಿಸಿರುವ ಜೋಡು ರಸ್ತೆ ಅವೈಜ್ಞಾನಿಕವಾಗಿದ್ದು, ನಾಲ್ಕು ಕಡೆಯ ಎತ್ತರದಿಂದ ಅಪಘಾತಗಳು ಸಂಭವಿಸುತ್ತಿವೆ. ಉಳಿದ ಮೂರು ಕಡೆಗಳಲ್ಲಿ ರಸ್ತೆ ಇಳಿಜಾರು ಮಾಡದಿದ್ದರೆ ಒಂದು ವಾರದೊಳಗೆ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಸೇವಾ ನಿವೃತ್ತಿ ಪಡೆದ ಚಂದ್ರಶೇಖರಪ್ಪ ಹರ್ತಿ ಅವರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಮಲ್ಲನಗೌಡ್ರ, ಶಿವಪ್ಪ ಶಿವಾಪೂರ, ಮಂದಾಲಪ್ಪ ಸಂಗನಾಳ, ಬಸವೇಶ್ವರ ಚಿಕ್ಕೊಪ್ಪದ, ಸಂಗಪ್ಪ ಕುಷ್ಟಗಿ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

“ನಿವೃತ್ತ ಸೈನಿಕರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಇನ್ನಷ್ಟು ಸಾಧನೆಗೆ ಪ್ರೇರೇಪಿಸಲಾಗುವುದು.”

– ಶಿವಪುತ್ರಪ್ಪ ಸಂಗನಾಳ, ಅಧ್ಯಕ್ಷರು, ನಿವೃತ್ತ ಸೈನಿಕರ ಸಂಘ

ದರ್ವೇಶಿ ಪದ್ಯ’ಕ್ಕೆ ಪುಸ್ತಕ ಸೊಗಸು ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ವತಿಯಿಂದ 2025ನೇ ಸಾಲಿನ ‘ಪುಸ್ತಕ ಸೊಗಸು–ಮುದ್ರಣ ಸೊಗಸು’ ಯೋಜನೆಯಡಿ ಆಯ್ಕೆಯಾದ ಕೃತಿಗಳ ಪೈಕಿ ಹಿರಿಯ ಕವಿ ಹಾಗೂ ಪ್ರಕಾಶಕ ಎ.ಎಸ್. ಮಕಾನದಾರ ಅವರ ‘ದರ್ವೇಶಿ ಪದ್ಯ’ ಕವನ ಸಂಕಲನದ ಮುಖಪುಟ ವಿನ್ಯಾಸಕ್ಕೆ ₹10 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ಲಭಿಸಿದೆ.

ಈ ಕುರಿತು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎ.ಎಸ್. ಮಕಾನದಾರ ಅವರ ಅಕ್ಕಡಿ ಸಾಲು ಹಾಗೂ ಪ್ಯಾರಿ ಪದ್ಯ ಕವನ ಸಂಕಲನಗಳು ಆರು ಭಾಷೆಗಳಿಗೆ ಅನುವಾದಗೊಂಡಿದ್ದು, ಕುವೆಂಪು ವಿಶ್ವವಿದ್ಯಾಲಯ, ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಮಹಾರಾಷ್ಟ್ರದ ಶಿವಾಜಿ ವಿಶ್ವವಿದ್ಯಾಲಯ ಹಾಗೂ ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳ್ಕರ್ ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲೂ ಸ್ಥಾನ ಪಡೆದಿವೆ.

‘ದರ್ವೇಶಿ ಪದ್ಯ’ ಕೃತಿಯ ಮುಖಪುಟವನ್ನು ಚಿತ್ರಕಲಾವಿದ ಈಶ್ವರ ಬಡಿಗೇರ್ ವಿನ್ಯಾಸಗೊಳಿಸಿದ್ದು, ನಿರಂತರ ಪ್ರಕಾಶನ ಪ್ರಕಟಿಸಿದೆ. ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಸಾಹಿತಿ ಎ.ಎಸ್. ಮಕಾನದಾರ ಹಾಗೂ ಚಿತ್ರಕಲಾವಿದ ಈಶ್ವರ ಬಡಿಗೇರ್ ಅವರಿಗೆ ಗದಗ ಜಿಲ್ಲೆಯ ಸಾಹಿತ್ಯಾಸಕ್ತರು ಹಾಗೂ ಸಾರಸ್ವತ ವಲಯದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ವಿಷಮುಕ್ತ ಆಹಾರಕ್ಕೆ ಕೈತೋಟವೇ ಪರಿಹಾರ: ಡಾ. ಸತೀಶ ಆರ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಜೀವನಶೈಲಿಯಲ್ಲಿ ಮಾನಸಿಕ ಒತ್ತಡ, ಆರೋಗ್ಯ ಸಮಸ್ಯೆಗಳು ಹಾಗೂ ವಿಷಕಾರಿ ಆಹಾರದ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯ ಪ್ರಾಂಗಣದಲ್ಲಿ ಕೈತೋಟ ನಿರ್ಮಿಸಿ ವಿಷಮುಕ್ತ ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಸಿಕೊಳ್ಳಬೇಕು ಎಂದು ಬಾಗಲಕೋಟೆಯ ತೋಟಗಾರಿಕಾ ಮಹಾವಿದ್ಯಾಲಯದ ಮುಖ್ಯ ಪ್ರಾಧ್ಯಾಪಕರು ಹಾಗೂ ವಿಶೇಷಾಧಿಕಾರಿ ಡಾ. ಸತೀಶ ಆರ್. ಪಾಟೀಲ ಹೇಳಿದರು.

ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕ ಹಾಗೂ ಅಕ್ಕನ ಬಳಗ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಮನೆಯ ಪ್ರಾಂಗಣದಲ್ಲಿ ಕೈತೋಟ ನಿರ್ಮಾಣ’ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾರುಕಟ್ಟೆಯಲ್ಲಿ ದೊರೆಯುವ ಅನೇಕ ತರಕಾರಿ, ಸೊಪ್ಪು ಮತ್ತು ಹಣ್ಣುಗಳಲ್ಲಿ ಅಧಿಕ ಪ್ರಮಾಣದ ಕೀಟನಾಶಕ ಹಾಗೂ ರಾಸಾಯನಿಕಗಳ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಮನೆಯ ಮೇಲ್ಛಾವಣಿ, ಖಾಲಿ ಜಾಗ ಅಥವಾ ಗ್ರೋ ಬ್ಯಾಗ್‌ಗಳಲ್ಲಿ ಸುಲಭವಾಗಿ ತರಕಾರಿ ಬೆಳೆಸಬಹುದು. ಬೇವಿನ ಎಣ್ಣೆ, ಮೆಣಸಿನಕಾಯಿ–ಬೆಳ್ಳುಳ್ಳಿ ಕಷಾಯ ಸೇರಿದಂತೆ ಜೈವಿಕ ಕೀಟನಾಶಕಗಳ ಬಳಕೆಯಿಂದ ರಾಸಾಯನಿಕ ಅವಲಂಬನೆ ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಬಾಗಲಕೋಟೆಯ ತೋಟಗಾರಿಕಾ ಮಹಾವಿದ್ಯಾಲಯದ ತರಕಾರಿ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಎಚ್.ಪಿ. ಹಾದಿಮನಿ ಮಾತನಾಡಿ, ಋತುವಿಗೆ ಅನುಗುಣವಾಗಿ ಬೆಂಡೆಕಾಯಿ, ಪಾಲಕ್, ಮೆಂತೆ, ಕೊತ್ತಂಬರಿ ಸೇರಿದಂತೆ ವಿವಿಧ ತರಕಾರಿಗಳನ್ನು ಮನೆಯಲ್ಲೇ ಬೆಳೆಸಿಕೊಳ್ಳುವುದರಿಂದ ಕುಟುಂಬದ ಆರೋಗ್ಯ ಮತ್ತು ಆಹಾರ ಭದ್ರತೆ ಕಾಪಾಡಬಹುದು ಎಂದರು.

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹಾಗೂ ಗೌರವ ಕಾರ್ಯದರ್ಶಿ ಚನ್ನವೀರಪ್ಪ ಹುಣಸಿಕಟ್ಟಿ ಮಾತನಾಡಿ, ರಾಸಾಯನಿಕಯುಕ್ತ ಆಹಾರದ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಸಾವಯವ ಕೃಷಿ ಮತ್ತು ಸಾವಯವ ಆಹಾರದತ್ತ ಜನರು ಒಲವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಅಕ್ಕನ ಬಳಗದ ಟ್ರಸ್ಟಿ ಅಧ್ಯಕ್ಷೆ ಕಸ್ತೂರಿ ಹಿರೇಗೌಡ್ರ ಮಾತನಾಡಿ, ಪರಿಸರ ಸಂರಕ್ಷಣೆ ಒಂದು ದಿನಕ್ಕೆ ಸೀಮಿತವಾಗದೆ ಜೀವನದ ಭಾಗವಾಗಬೇಕು ಎಂದರು. ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ದಾನಪ್ಪಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಮನೆಯಲ್ಲೇ ಕೈತೋಟ ನಿರ್ಮಾಣದ ಅಗತ್ಯತೆಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಅಧ್ಯಕ್ಷೆ ಜಯಶ್ರೀ ಹುಬ್ಬಳ್ಳಿ, ಕಾರ್ಯದರ್ಶಿ ಜಯಶ್ರೀ ಪಾಟೀಲ, ಸುವರ್ಣಾ ಮದರಿಮಠ, ಸುವರ್ಣಾ ವಸ್ತ್ರದ, ನಾಗರತ್ನ ಹುಬ್ಬಳ್ಳಿಮಠ, ಅನ್ನಪೂರ್ಣ ಮಾಳೆಕೊಪ್ಪಮಠ, ಸುವರ್ಣಾ ಹೊಸಂಗಡಿ, ಪೂರ್ಣಿಮಾ ಆಟದ ಸೇರಿದಂತೆ ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಅಕ್ಕನ ಬಳಗದ ಟ್ರಸ್ಟಿಗಳು ಉಪಸ್ಥಿತರಿದ್ದರು.

“ಪ್ರತಿಯೊಂದು ಮನೆಯಲ್ಲೂ ಒಂದು ಕೈತೋಟ ನಿರ್ಮಿಸಿದರೆ ಕುಟುಂಬಕ್ಕೆ ವಿಷಮುಕ್ತ ಆಹಾರ ದೊರೆಯುವುದರ ಜೊತೆಗೆ ಆರೋಗ್ಯಕರ ಜೀವನಶೈಲಿಯೂ ರೂಢಿಯಾಗುತ್ತದೆ.”

ಡಾ. ಸತೀಶ ಆರ್. ಪಾಟೀಲ, ಮುಖ್ಯ ಪ್ರಾಧ್ಯಾಪಕರು ಮತ್ತು ವಿಶೇಷಾಧಿಕಾರಿ, ತೋಟಗಾರಿಕಾ ಮಹಾವಿದ್ಯಾಲಯ, ಬಾಗಲಕೋಟೆ

ಮಲೇರಿಯಾ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರ ಅಗತ್ಯ: ಡಾ. ಬಿ.ಎಸ್. ಭಜಂತ್ರಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಲೇರಿಯಾ ನಿರ್ಮೂಲನೆಯ ಗುರಿ ಸಮೀಪಿಸುತ್ತಿದ್ದು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಮಲೇರಿಯಾ ಸೇರಿದಂತೆ ಸೊಳ್ಳೆಜನ್ಯ ರೋಗಗಳನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಎಸ್. ಭಜಂತ್ರಿ ಹೇಳಿದರು.

ಸಮೀಪದ ಅಬ್ಬಿಗೇರಿ ಗ್ರಾಮದ ಶ್ರೀ ಅನ್ನದಾನೇಶ್ವರ ವಿಜಯ ಪ್ರೌಢಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಘಟಕ, ಜಿಲ್ಲಾ ಐಇಸಿ ವಿಭಾಗ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಅಬ್ಬಿಗೇರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಳೆಗಾಲದಲ್ಲಿ ನಿಂತ ನೀರಿನಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುವುದರಿಂದ ಮಲೇರಿಯಾ, ಡೆಂಗ್ಯೂ ಹಾಗೂ ಚಿಕುನ್‌ಗುನ್ಯಾ ರೋಗಗಳ ಹರಡುವಿಕೆ ಹೆಚ್ಚಾಗುತ್ತದೆ. ಆದ್ದರಿಂದ ಮನೆ ಮತ್ತು ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಪರಿಸರ ಸ್ವಚ್ಛತೆ ಕಾಪಾಡುವುದು ಹಾಗೂ ಸೊಳ್ಳೆಮುಕ್ತ ವಾತಾವರಣ ನಿರ್ಮಿಸುವುದು ಅತ್ಯಗತ್ಯ ಎಂದು ತಿಳಿಸಿದರು.

ಮುಖ್ಯ ಉಪನ್ಯಾಸಕಿ ಜಿಲ್ಲಾ ಕೀಟಶಾಸ್ತ್ರಜ್ಞೆ ಅನ್ನಪೂರ್ಣ ಶೆಟ್ಟರ ಮಾತನಾಡಿ, ವೈಯಕ್ತಿಕ ರಕ್ಷಣಾ ಕ್ರಮಗಳು, ಜೈವಿಕ ಹಾಗೂ ರಾಸಾಯನಿಕ ನಿಯಂತ್ರಣ ವಿಧಾನಗಳ ಮೂಲಕ ಸೊಳ್ಳೆಗಳ ನಿಯಂತ್ರಣ ಸಾಧ್ಯ. ಆರೋಗ್ಯ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಲೇರಿಯಾ ನಿರ್ಮೂಲನೆ ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಆರ್.ಬಿ. ಬಸವರೆಡ್ಡಿ ಆರೋಗ್ಯ ಇಲಾಖೆಯ ಸಲಹೆಗಳನ್ನು ಪಾಲಿಸಿ ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರು, ವೈದ್ಯಾಧಿಕಾರಿಗಳಾದ ಡಾ. ಪ್ರಕಾಶ ಕಮತೆ, ಡಾ. ಮಹೇಶ್ ಹೊಸಕೇರಿ, ಡಾ. ನಾಗರಾಜ ಸತ್ತಿಗೇರಿ, ಶಿಕ್ಷಣ ಇಲಾಖೆಯ ಈಶ್ವರ ಕುರಿ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಲೇರಿಯಾ ಹರಡುವಿಕೆ, ಮುಂಜಾಗ್ರತಾ ಕ್ರಮಗಳು ಹಾಗೂ ಸ್ವಚ್ಛತೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಯಿತು.

“ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡು ನೀರು ನಿಲ್ಲದಂತೆ ನೋಡಿಕೊಂಡರೆ ಮಲೇರಿಯಾ ಸೇರಿದಂತೆ ಸೊಳ್ಳೆಜನ್ಯ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.”

ಡಾ. ಬಿ.ಎಸ್. ಭಜಂತ್ರಿ, ತಾಲೂಕು ಆರೋಗ್ಯಾಧಿಕಾರಿ

ರೈತರ ಮಕ್ಕಳಿಗೆ ಶಿಕ್ಷಣವೇ ದೊಡ್ಡ ಆಸ್ತಿ: ರವಿಕಾಂತ ಅಂಗಡಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರೈತರು ದೇಶದ ಬೆನ್ನೆಲುಬಾಗಿದ್ದು, ಅವರ ಅಭಿವೃದ್ಧಿಯೇ ದೇಶದ ಪ್ರಗತಿಗೆ ಮೂಲವಾಗಿದೆ. ವಿಶೇಷವಾಗಿ ಬಡ ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ಹೋರಾಟಗಾರ ರವಿಕಾಂತ ಅಂಗಡಿ ಹೇಳಿದರು.

ತಾಲೂಕಿನ ಕಡಕೋಳ ಗ್ರಾಮದಲ್ಲಿ ಬಗರ್ ಹುಕುಂ ರೈತರ ಸಮಸ್ಯೆಗಳ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಹಲವು ವರ್ಷಗಳಿಂದ ಭೂಮಿ ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ ರೈತರು ತಮ್ಮ ಜಮೀನಿನ ಹಕ್ಕುಪತ್ರ ಪಡೆಯಲು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಸರ್ಕಾರದ ಮಾರ್ಗಸೂಚಿಯಂತೆ ಸಂಬಂಧಿತ ಇಲಾಖೆಗೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಸಮರ್ಪಕವಾಗಿ ಸಂರಕ್ಷಿಸಬೇಕು. ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ಪಡೆದು, ತಮ್ಮ ಹಕ್ಕುಗಳಿಗಾಗಿ ಕಾನೂನಾತ್ಮಕ ಹೋರಾಟ ನಡೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ರೈತರ ಅಹವಾಲುಗಳನ್ನು ಆಲಿಸಿದ ಅವರು, ಬಗರ್ ಹುಕುಂ ರೈತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ನಿರಂತರ ಹೋರಾಟ ನಡೆಸುವುದಾಗಿ ಭರವಸೆ ನೀಡಿದರು. ಉತ್ತರ ಕರ್ನಾಟಕದ ರೈತರು ನೀರಾವರಿ, ಭೂ ಹಕ್ಕು ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳಿಗೆ ಶಾಶ್ವತ ಪರಿಹಾರ ದೊರಕಬೇಕಾಗಿದೆ ಎಂದು ಹೇಳಿದರು.

ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ ಅವರು, ಆರ್ಥಿಕ ಸಂಕಷ್ಟಗಳ ನಡುವೆಯೂ ರೈತರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬಾರದು. ಗ್ರಾಮೀಣ ಭಾಗದ ಮಕ್ಕಳು ವೈದ್ಯರು, ಇಂಜಿನಿಯರ್‌ಗಳು, ಆಡಳಿತಾಧಿಕಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರೈತರು ಭೂ ಹಕ್ಕು, ಹಕ್ಕುಪತ್ರ, ಬೆಳೆಸಾಲ ಹಾಗೂ ಸರ್ಕಾರಿ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ರವಿಕಾಂತ ಅಂಗಡಿ ತಿಳಿಸಿದರು.

ಸಭೆಯಲ್ಲಿ ಮಂಜುನಾಥ ಅರೆಪಳ್ಳಿ, ನಾಮದೇವ ಮಾಂಡ್ರೆ, ಅಂದಾನಪ್ಪ ಮುಳಗುಂದ, ಈಶ್ವರಗೌಡ ಗೌಡ್ರ, ಈಶ್ವರ ಹಿರೇಮಠ ಸೇರಿದಂತೆ ಸುಮಾರು 40ರಿಂದ 50 ರೈತರು ಭಾಗವಹಿಸಿದ್ದರು.

“ರೈತರ ಅಭಿವೃದ್ಧಿಯೊಂದಿಗೆ ಅವರ ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಶಿಕ್ಷಣವೇ ಬಡ ರೈತರ ಕುಟುಂಬಗಳ ಭವಿಷ್ಯವನ್ನು ಬದಲಾಯಿಸುವ ದೊಡ್ಡ ಶಕ್ತಿಯಾಗಿದೆ.”

ರವಿಕಾಂತ ಅಂಗಡಿ, ರಾಜ್ಯಾಧ್ಯಕ್ಷರು, ಉತ್ತರ ಕರ್ನಾಟಕ ಮಹಾಸಭಾ