Home Blog Page 13

ಇಂದು ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ: 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​! ಗದಗದಲ್ಲೂ ಮಳೆ ನಿರೀಕ್ಷೆ

ಬೆಂಗಳೂರು: ಕಳೆದ ಎರಡು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಉಷ್ಣತೆಯ ತೀವ್ರತೆ ಕಡಿಮೆಯಾದಂತಾಗಿದೆ.

ಇಂದೂ ಸಹ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಕಲಬುರ್ಗಿ, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಬೀದರ್, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಸೇರಿದಂತೆ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ವಿಜಯಪುರ, ಕಲಬುರ್ಗಿ, ಬೀದರ್, ಗದಗ, ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಗಂಟೆಗೆ 30–40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.

ಉಳಿದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಒಣ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜನಸಂದಣಿ ಮಧ್ಯೆ ಕಳ್ಳತನ: ಯುವತಿಯ ಮುಖ್ಯ ದಾಖಲೆಗಳಿದ್ದ ಬ್ಯಾಗ್ ಕಳುವು!

0

ಕೋಲ್ಕತ್ತಾ: ಸಾಮಾನ್ಯವಾಗಿ ರೈಲ್ವೆ ನಿಲ್ದಾಣಗಳ ಸುತ್ತಮುತ್ತ 24 ಗಂಟೆಯೂ ಜನ ಸಂಚಾರ ಜೋರಾಗಿರುತ್ತದೆ. ಆದರೂ, ಜನಸಂದಣಿ ನಡುವೆಯೇ ಕಳ್ಳತನದ ಘಟನೆ ನಡೆದಿದೆ.

ಕೋಲ್ಕತ್ತಾದ ಶಾಲಿಮರ್ ರೈಲ್ವೆ ನಿಲ್ದಾಣದ ಬಳಿ ಅಕ್ಕ-ತಂಗಿ ಲಗೇಜ್ ಹಿಡಿದು ನಿಂತಿದ್ದ ವೇಳೆ, ಬೈಕ್‌ನಲ್ಲಿ ಬಂದ ಕಳ್ಳನೊಬ್ಬ ಯುವತಿಯ ಕೈಯಿಂದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾನೆ.

ಯುವತಿಯ ಬ್ಯಾಗ್‌ನಲ್ಲಿ ಪ್ರಮುಖ ದಾಖಲೆಗಳು ಇದ್ದವು ಎಂದು ತಿಳಿದುಬಂದಿದೆ. ಈ ಸಂಬಂಧ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಉಳುವ ಎತ್ತಿಗೆ ಮತ ಹಾಕಿ, ಕಳ್ಳೆತ್ತುಗೆ ವೋಟು ಹಾಕಬೇಡಿ: ಸಿಎಂ ಸಿದ್ದರಾಮಯ್ಯ!

ಬಾಗಲಕೋಟೆ: ಉಪಚುನಾವಣೆಯ ಪ್ರಚಾರಕ್ಕೆ ವೇಗ ನೀಡಿರುವ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ  ಪರ ಮತಯಾಚನೆ ನಡೆಸಿದರು.

ನಾಯನಗಲಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ಕಳ್ಳೆತ್ತುಗೆ ವೋಟು ಹಾಕಬೇಡಿ, ಉಳುವ ಎತ್ತಿಗೆ ಮತ ಹಾಕಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ” ಎಂದು ಜನರಿಗೆ ಮನವಿ ಮಾಡಿದರು. ಬಿಜೆಪಿಯವರು ಕಳ್ಳೆತ್ತುಗಳು, ಅವರಿಗೆ ಮತ ಹಾಕಬಾರದು. ನಾನು ಸಿಎಂ ಆಗಿ ಇಲ್ಲಿಗೆ ಬಂದಿಲ್ಲ, ಪಕ್ಷದ ಕಾರ್ಯಕರ್ತನಾಗಿ ಬಂದಿದ್ದೇನೆ. ಮೇಟಿ ಅವರ ಅಪೂರ್ಣ ಕೆಲಸಗಳನ್ನು ಮುಂದುವರಿಸಲು ಉಮೇಶ್ ಮೇಟಿಗೆ ಮತ ನೀಡಿ ಗೆಲ್ಲಿಸಬೇಕು” ಎಂದು ಕರೆ ನೀಡಿದರು.

ಇದೇ ವೇಳೆ ಹಿಂದಿನ ಬಿಜೆಪಿ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, B. S. ಯಡಿಯೂರಪ್ಪ, ಬೊಮ್ಮಾಯಿ ಆಡಳಿತದಲ್ಲಿ ಅಭಿವೃದ್ಧಿಗಿಂತ ಲೂಟಿಯೇ ನಡೆದಿದ್ದು, ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಆರೋಪಿಸಿದರು.

ಆಲಮಟ್ಟಿ ಜಲಾಶಯದ ಎತ್ತರವನ್ನು 519ರಿಂದ 524 ಮೀಟರ್‌ವರೆಗೆ ಹೆಚ್ಚಿಸುವ ಅಗತ್ಯವಿದ್ದು, ಬಿಜೆಪಿ ಅಧಿಕಾರದಲ್ಲಿದ್ದಾಗ ಈ ಕಾರ್ಯ ಕೈಗೊಂಡಿಲ್ಲ ಎಂದು ಟೀಕಿಸಿದರು. ಬಾಗಲಕೋಟೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಕುರಿತ ಕನಸನ್ನೂ ಅವರು ಪ್ರಸ್ತಾಪಿಸಿ, ಈ ವಿಷಯದಲ್ಲಿ ಹಿಂದಿನ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯವರು ಈಗ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹವರಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದು ಸಿಎಂ ವಾಗ್ದಾಳಿ ನಡೆಸಿದರು.

ದಾಂಪತ್ಯ ಕಲಹ ದುರಂತ ಅಂತ್ಯ: ಮದ್ವೆಯಾದ ತಿಂಗಳಲ್ಲೇ ಉದ್ಯಮಿ ಆತ್ಮಹತ್ಯೆ!

ಉಡುಪಿ: ಮದುವೆಯಾಗಿ ಕೇವಲ ಒಂದೇ ತಿಂಗಳಲ್ಲಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.

ಮೂಲತಃ ನೆಲ್ಯಾಡಿ ನಿವಾಸಿಯಾದ ಸುದೀಪ್ ಶೆಟ್ಟಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕಳೆದ ಫೆಬ್ರವರಿ 17ರಂದು ಪುತ್ತೂರಿನಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದ ಸುದೀಪ್ ಶೆಟ್ಟಿ, ಮಾರ್ಚ್ 17ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆಯಾದರೂ, ಹತ್ತಾರು ದಿನಗಳ ಜೀವ-ಮರಣ ಹೋರಾಟದ ಬಳಿಕ ಮಾರ್ಚ್ 29ರಂದು ಅವರು ಕೊನೆಯುಸಿರೆಳೆದಿದ್ದಾರೆ.

ಈ ಪ್ರಕರಣದಲ್ಲಿ ಸುದೀಪ್ ತಂದೆ ದಾಮೋದರ್ ಅವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸುದೀಪ್ ಪತ್ನಿ ಸೌಮ್ಯ ಶೆಟ್ಟಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ. ಸುದೀಪ್ ಹಾಗೂ ಸೌಮ್ಯ ನಡುವೆ ನಡೆದ ವಿವಾಹಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆ, ಮದುವೆಯ ಬಳಿಕವೇ ದಾಂಪತ್ಯದಲ್ಲಿ ಕಲಹ ಉಂಟಾಗಿತ್ತು ಎನ್ನಲಾಗಿದೆ.

ಮಾರ್ಚ್ 17ರಂದು ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ಇದ್ದ ಸುದೀಪ್ ಬಳಿ ಸೌಮ್ಯ ಹೋಗಿ ಬೆದರಿಕೆ ಹಾಕಿದ್ದಾಳೆ ಎಂಬ ಆರೋಪವೂ ಕೇಳಿಬಂದಿದೆ. ಬಳಿಕ ಮಾರ್ಚ್ 22ರಂದು ವಿಷ ಸೇವಿಸಿದ ವಿಷಯ ತಿಳಿದುಬಂದಿದ್ದು, ಮೊದಲಿಗೆ ನಿಟ್ಟೆಯ ಗಜಾರಿಯ ಆಸ್ಪತ್ರೆಗೆ ಸೇರಿಸಿ ನಂತರ ಉಡುಪಿ ಹಾಗೂ ಮಂಗಳೂರು ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆ ನೀಡಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುದೀಪ್ ಸಾವನ್ನಪ್ಪಿದ್ದು, ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾರ್ಕಳ ನಗರ ಪೊಲೀಸರು ತಿಳಿಸಿದ್ದಾರೆ.

 

ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ: ಹೃದಯಾಘಾತ ತಡೆಯಲು ಪ್ರಮುಖ ಸೂಚನೆಗಳು ಇಲ್ಲಿದೆ!

0

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಸಮಸ್ಯೆ ವಯಸ್ಸಾದವರಲ್ಲಷ್ಟೇ ಅಲ್ಲ, ಯುವಕರಲ್ಲಿಯೂ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ.

ಜೀವನಶೈಲಿ ಬದಲಾವಣೆ, ಅಸ್ವಸ್ಥ ಆಹಾರ ಪದ್ಧತಿ ಮತ್ತು ಹೆಚ್ಚುತ್ತಿರುವ ಮಾನಸಿಕ ಒತ್ತಡ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ದೀರ್ಘಕಾಲ ಕುಳಿತು ಕೆಲಸ ಮಾಡುವವರು, ವ್ಯಾಯಾಮದ ಕೊರತೆ ಇರುವವರು ಹಾಗೂ ಕುಟುಂಬದಲ್ಲಿ ಹೃದಯ ರೋಗ ಇತಿಹಾಸವಿರುವವರು ಹೆಚ್ಚಿನ ಅಪಾಯದಲ್ಲಿದ್ದಾರೆ. ಯುವಕರು ಆರೋಗ್ಯದ ಕಡೆ ನಿರ್ಲಕ್ಷ್ಯ ತೋರದೆ ಮುಂಚಿತವಾಗಿಯೇ ಜಾಗರೂಕರಾಗುವುದು ಅಗತ್ಯ.

ಹೃದಯಾಘಾತಕ್ಕೆ ಪ್ರಮುಖ ಕಾರಣಗಳು:

  • ದೀರ್ಘಕಾಲ ಕುಳಿತುಕೊಳ್ಳುವುದು ಮತ್ತು ವ್ಯಾಯಾಮ ಮಾಡದಿರುವುದು
  • ಜಂಕ್ ಫುಡ್, ಹೆಚ್ಚು ಎಣ್ಣೆಯ ಆಹಾರ ಸೇವನೆ
  • ನಿದ್ರೆಯ ಕೊರತೆ, ರಾತ್ರಿ ತಡವಾಗಿ ಮಲಗುವುದು
  • ನಿರಂತರ ಒತ್ತಡ, ಕೋಪ ಮತ್ತು ಮಾನಸಿಕ ಒತ್ತಡ
  • ಧೂಮಪಾನ ಮತ್ತು ಮದ್ಯಪಾನ

ಹೃದಯಾಘಾತದ ಮುನ್ನ ಕಾಣಿಸಿಕೊಳ್ಳುವ ಲಕ್ಷಣಗಳು:

  • ಎದೆಯಲ್ಲಿ ನೋವು ಅಥವಾ ಒತ್ತಡ
  • ಕೈ, ಕತ್ತು ಅಥವಾ ಬೆನ್ನಿನ ಭಾಗದಲ್ಲಿ ನೋವು
  • ಉಸಿರಾಟದ ತೊಂದರೆ
  • ಅಚಾನಕ್ ಹೆಚ್ಚು ಬೆವರು ಬರುವುದು
  • ತಲೆಸುತ್ತು, ದುರ್ಬಲತೆ
  • ವಾಂತಿ

ಈ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ಆರೋಗ್ಯಕರ ಜೀವನಶೈಲಿ, ನಿಯಮಿತ ವ್ಯಾಯಾಮ ಮತ್ತು ಸಮತೋಲನ ಆಹಾರದಿಂದ ಹೃದಯ ಸಂಬಂಧಿತ ಸಮಸ್ಯೆಗಳನ್ನು ತಡೆಯಬಹುದು.

ಬೆಳಗಾವಿ: ಹಿಡಕಲ್​ ಡ್ಯಾಮ್​ನ ಹಿನ್ನೀರಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು!

ಬೆಳಗಾವಿ: ಜಿಲ್ಲೆ ಹುಕ್ಕೇರಿ ತಾಲೂಕಿನ ಹಳೆಗುಡಗನಟ್ಟಿ ಗ್ರಾಮದ ಬಳಿಯ ಹಿಡಕಲ್​ ಡ್ಯಾಮ್​ನ ಹಿನ್ನೀರಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾದ ಘಟನೆ ಜರುಗಿದೆ.

14 ವರ್ಷದ ಕೃಷ್ಣಾ ಖಾನಾಪುರಿ, 13 ವರ್ಷದ ಪ್ರಜ್ವಲ್ ಗೋಕಾರ್ ಮೃತ ಬಾಲಕರು.

ಹಿಡಕಲ್ ಜಲಾಶಯ ಹಿನ್ನೀರಿನಲ್ಲಿ ಬಾಲಕರು ಈಜುಲು ತೆರಳಿದ್ದರು. ಈ ವೇಳೆ ಈಜಲು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರ ಶವಗಳನ್ನ ಸ್ಥಳೀಯರು ಮತ್ತು ಪೊಲೀಸರು ಹೊರತೆಗೆದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

ಬೆಂಗಳೂರು ಕ್ರೈಂ ವಿಭಾಗದಲ್ಲಿ ಷರೀಫ್ ಎಂ ಸಾಧನೆಗೆ ಸಿಎಂ ಮೆಡಲ್!

ಬೆಂಗಳೂರು: ಕಡು ಬಡತನದಲ್ಲಿ ಹುಟ್ಟಿ, ಹೋರಾಟದ ಬದುಕಿನ ಮೂಲಕ ಪೊಲೀಸ್ ಇಲಾಖೆಯಲ್ಲಿ ಸಾಧನೆಗೈದು‌ 2025ರ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿರುವ ಷರೀಫ್ ಎಂ ಅವರ ಜೀವನ ಪಥ ಅನೇಕ ಯುವಕರಿಗೆ ಸ್ಪೂರ್ತಿದಾಯಕವಾಗಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಟಂದೇವರ ಕೋಟೆಯಲ್ಲಿ 01-06-1992ರಂದು ಇಮಾಮ್ ಸಾಬ್ ಹಾಗೂ ಇಮಾಂಬಿ ದಂಪತಿಗಳ ಪುತ್ರನಾಗಿ ಜನಿಸಿದ ಷರೀಫ್ ಎಂ ಅವರು, ಬಾಲ್ಯದಲ್ಲೇ ಸಂಕಷ್ಟಗಳನ್ನು ಎದುರಿಸಿದರು. ಬಿಸಿಎಂ ಹಾಸ್ಟೆಲ್‌ಗಳಲ್ಲಿ ವಾಸವಿದ್ದು ಶಿಕ್ಷಣ ಪೂರ್ಣಗೊಳಿಸಿದ ಅವರು, ನಂತರ ತಮ್ಮ ಸಹೋದರಿಯ ನೆರವಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದರು.

ಅವರ ಪರಿಶ್ರಮದ ಫಲವಾಗಿ 10-03-2014ರಂದು ಕೆಎಸ್‌ಐಎಸ್‌ಎಫ್ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾದರು. ಬುನಾದಿ ತರಬೇತಿ ಬಳಿಕ ಆಂತರಿಕ ಭದ್ರತಾ ವಿಭಾಗದ ತಾಂತ್ರಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದರು.

ನಂತರ 2017ರಲ್ಲಿ ಸಿವಿಲ್ ಪೊಲೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಆಗಿ ಸೇವೆ ಪ್ರಾರಂಭಿಸಿದರು.

ತಾಂತ್ರಿಕವಾಗಿ ನಿಪುಣರಾದ ಷರೀಫ್ ಎಂ ಅವರು ಕಾಲ್ ಡಿಟೇಲ್ ರೆಕಾರ್ಡ್‌ಗಳ (CDR) ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿದ್ದು, ಅಪರಾಧ ಪ್ರಕರಣಗಳ ತನಿಖೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಕೊಲೆ, ದರೋಡೆ, ಮನೆ ಕಳ್ಳತನ, ದ್ವಿಚಕ್ರ ವಾಹನ ಕಳವು ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ಅಲ್ಪ ಸಮಯದಲ್ಲಿ ಭೇದಿಸುವಲ್ಲಿ ಅವರ ಕೊಡುಗೆ ಗಮನಾರ್ಹವಾಗಿದೆ.

ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಮಾಹಿತಿ ಸಂಗ್ರಹಣೆ, ತಾಂತ್ರಿಕ ಸಹಾಯ ಮತ್ತು ವೈಜ್ಞಾನಿಕ ವಿಧಾನಗಳನ್ನು ಪರಿಣಾಮಕಾರಿಯಾಗಿ ಬಳಸಿರುವುದರಿಂದ ಬೆಂಗಳೂರು ಅಪರಾಧ ವಿಭಾಗದಲ್ಲಿ ಅವರು ವಿಶ್ವಾಸಾರ್ಹ ಪೊಲೀಸ್ ಎಂದು ಗುರುತಿಸಿಕೊಂಡಿದ್ದಾರೆ.

ಇವರ ನಿಷ್ಠೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಹಾಗೂ ಅವಿಶ್ರಾಂತ ಶ್ರಮವನ್ನು ಪರಿಗಣಿಸಿ, 2025ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗಿದೆ.

“ಬಡತನ ನನ್ನನ್ನು ತಡೆಯಲಿಲ್ಲ… ಪರಿಶ್ರಮವೇ ನನ್ನನ್ನು ಈ ಮಟ್ಟಕ್ಕೆ ತಂದಿದೆ. ಸೇವೆಯೇ ನನ್ನ ಧ್ಯೇಯ.” – ಷರೀಫ್ ಎಂ, ಸಿಎಂ ಪದಕಕ್ಕೆ ಭಾಜನರಾದವರು.

50 ಲಕ್ಷ ಮೌಲ್ಯದ ನಕಲಿ ಸಿಗರೇಟ್ ಸೀಜ್: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಐವರು ಅರೆಸ್ಟ್

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 50 ಲಕ್ಷ ರೂ. ಮೌಲ್ಯದ ನಕಲಿ ಸಿಗರೇಟ್ ಬಾಕ್ಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದು, ಐದು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಬ್ದುಲ್ ಬಷೀದ್, ಅವರ ಮಗ ಮೊಹಮದ್ ಅಶೀಕ್ ಸೇರಿದಂತೆ ಮಹಮದ್ ಅನ್ಸರ್, ಮಹಮದ್ ಅನ್ಸಾರಿ ಹಾಗೂ ಗುಲಾಮ್ ಹುಸೇನ್ ಖಾನ್ ಎಂದು ಗುರುತಿಸಲಾಗಿದೆ.

ನಕಲಿ ಸಿಗರೇಟ್ ಜಾಲದ ಬಗ್ಗೆ ಅನ್ವೇಷ್ ಐಪಿಆರ್ ಸಂಸ್ಥೆ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆರೋಪಿಗಳು ಐಟಿಸಿ ಹಾಗೂ ಎಸ್ಸೆ ಸಂಸ್ಥೆಗಳ ನಕಲಿ ಸಿಗರೇಟ್‌ಗಳನ್ನು ವಿದೇಶಗಳಿಂದ ತರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸದ್ಯ ಐವರನ್ನ ಬಂಧಿಸಿರುವ ಪೊಲೀಸರು, ವಶಪಡಿಸಿಕೊಂಡ ನಕಲಿ ಸಿಗರೇಟ್‌ಗಳ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬಿಜೆಪಿ ರೋಡ್ ಶೋ ವೇಳೆ ‘ಕೈ’ ಕಾರ್ಯಕರ್ತರ ಹೈಡ್ರಾಮಾ: ನೂಕಾಟ-ತಳ್ಳಾಟ! ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು

ಬಾಗಲಕೋಟೆ: ಬಿಜೆಪಿ ರೋಡ್ ಶೋ ವೇಳೆ ಕಾಂಗ್ರೆಸ್ ಧ್ವಜ ಹಿಡಿದು ‘ಕೈ’ ಕಾರ್ಯಕರ್ತರು ಭಾರೀ ಹೈಡ್ರಾಮಾ ನಡೆಸಿರುವ ಘಟನೆ ಬಾಗಲಕೋಟೆಯಲ್ಲಿ ಜರುಗಿದೆ.

ಬೈ ಎಲೆಕ್ಷನ್‌ಗೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ ಉಭಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಈ ವೇಳೆ ಬಿಜೆಪಿ ರೋಡ್ ಶೋ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಧ್ವಜ ಹಿಡಿದು ಪ್ರವೇಶಿಸಿದ್ದರಿಂದ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ ನಡೆದಿದೆ.

ರೋಡ್ ಶೋ ನಡುವೆ ಬಿಜೆಪಿ ಕಾರ್ಯಕರ್ತರ ಮಧ್ಯೆ ಬೈಕ್ ತೆಗೆದುಕೊಂಡು ಹೋಗಲು ಕಾಂಗ್ರೆಸ್ ಕಾರ್ಯಕರ್ತ ಯತ್ನಿಸಿದ ಹಿನ್ನೆಲೆ ವಾಗ್ವಾದ ಉಂಟಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ಬಳಿಕ ತಳ್ಳಾಟ-ಜಗ್ಗಾಟಕ್ಕೂ ಕಾರಣವಾಯಿತು.

ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಸಂಬಂಧಿಸಿದ ಕಾಂಗ್ರೆಸ್ ಕಾರ್ಯಕರ್ತನನ್ನು ಎಳೆದು ಹೊರತೆಗೆದರು. ಈ ವೇಳೆ ಇತರ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಸಂಬಂಧಿಸಿದ ಕಾರ್ಯಕರ್ತನನ್ನು ಸ್ಥಳದಿಂದ ತೆರವುಗೊಳಿಸಿದ ಬಳಿಕ ವಾತಾವರಣ ಶಾಂತಗೊಂಡಿತು.

ಗ್ಯಾಸ್ ರೀಫಿಲ್ ಮಾಡುವಾಗ ಸಿಲಿಂಡರ್​ ಏಕಾಏಕಿ​ ಸ್ಫೋಟ: ನಾಲ್ವರಿಗೆ ಗಂಭೀರ ಗಾಯ!

ಹಾಸನ: ಸಿಲಿಂಡರ್ ಬದಲಿಸುವ ವೇಳೆ ಅನಿಲ ಸೋರಿಕೆಯಿಂದ ಸಂಭವಿಸಿದ ಭೀಕರ ಸ್ಫೋಟದಲ್ಲಿ ನಾಲ್ವರು ಗಾಯಗೊಂಡ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆ. ಅಬ್ಬೂರು ಗ್ರಾಮದಲ್ಲಿ ನಡೆದಿದೆ.

ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಖಾಲಿಯಾಗಿದ್ದರಿಂದ ಹೊಸ ಸಿಲಿಂಡರ್ ಅಳವಡಿಸಲು ಮುಂದಾದಾಗ ಈ ಅವಘಡ ಸಂಭವಿಸಿದೆ. ಗ್ಯಾಸ್ ತುಂಬಿದ್ದ ಸಿಲಿಂಡರ್‌ಗೆ ರೆಗ್ಯುಲೇಟರ್ ಜೋಡಿಸುವ ವೇಳೆ ಅನಿಲ ಸೋರಿಕೆಯಾಗಿ ಏಕಾಏಕಿ ಸ್ಫೋಟ ಸಂಭವಿಸಿದೆ. ಪರಿಣಾಮವಾಗಿ ಮಹಿಳೆ ಹಾಗೂ ಪುತ್ರ ಸೇರಿ ಮನೆಯಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣವೇ ಕೊಣನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುಂದರೇಶ್ ಅವರ ಮನೆಯಲ್ಲಿ ನಡೆದ ಈ ಘಟನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ.

ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!