Home Blog Page 132

ಗದಗ–ಹರಪನಹಳ್ಳಿ ರೈಲು ಮಾರ್ಗಕ್ಕೆ ಆಗ್ರಹಿಸಿ ಜುಲೈ 31ರಿಂದ ಅನಿರ್ದಿಷ್ಟಾವಧಿ ಧರಣಿ

ವಿಜಯಸಾಕ್ಷಿ ಸುದ್ದಿ, ಗದಗ: ಗದಗ–ಹರಪನಹಳ್ಳಿ ರೈಲ್ವೆ ಮಾರ್ಗ ಕಾಮಗಾರಿ ವಿಳಂಬವನ್ನು ಖಂಡಿಸಿ ಜುಲೈ 31ರಂದು ಬೆಳಿಗ್ಗೆ 11 ಗಂಟೆಯಿಂದ ನಗರದ ರೈಲ್ವೆ ನಿಲ್ದಾಣದ ಎದುರು ಜನಕಲ್ಯಾಣ ಯಾತ್ರೆ, ಅಸಹಕಾರ ಚಳವಳಿ ಹಾಗೂ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ತಿಳಿಸಿದರು.

ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ–ಹರಪನಹಳ್ಳಿ ರೈಲು ಮಾರ್ಗ ರಚನೆಯ ಜಂಟಿ ಕ್ರಿಯಾ ಸಮಿತಿ ಹಾಗೂ ಅದ್ವಿಕ್ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಪ್ರತಿಭಟನೆ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಗದಗ–ಮುಂಡರಗಿ–ಹೂವಿನಹಡಗಲಿ–ಹರಪನಹಳ್ಳಿ ರೈಲು ಮಾರ್ಗ ಯೋಜನೆ ಮಂಜೂರಾಗಿ 12 ವರ್ಷಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಯೋಜನೆ ಜಾರಿಗೆ ಆಗ್ರಹಿಸಿ ನವದೆಹಲಿಯ ಜಂತರ್‌ಮಂತರ್‌ ಸೇರಿದಂತೆ ಗದಗದಲ್ಲಿಯೂ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಇದರ ಪರಿಣಾಮವಾಗಿ 2015ರಲ್ಲಿ 94 ಕಿಲೋಮೀಟರ್‌ವರೆಗೆ ಸರ್ವೆ ನಡೆಸಲಾಗಿತ್ತು ಎಂದು ಹೇಳಿದರು.

ರೈಲ್ವೆ ಮಂಡಳಿಗೆ ಈ ಯೋಜನೆಯಿಂದ ಶೇ.78ರಷ್ಟು ನಷ್ಟವಾಗುತ್ತದೆ ಎಂಬ ಅವೈಜ್ಞಾನಿಕ ವರದಿ ಸಲ್ಲಿಕೆಯಾಗಿದ್ದರಿಂದ ಯೋಜನೆ ಸ್ಥಗಿತಗೊಂಡಿದೆ ಎಂದು ಆರೋಪಿಸಿದ ಅವರು, ನಿರಂತರ ಹೋರಾಟದ ಫಲವಾಗಿ 2016–17ರ ಕೇಂದ್ರ ಬಜೆಟ್‌ನಲ್ಲಿ ಮರುಸರ್ವೆಗೆ ₹9 ಲಕ್ಷ ಅನುದಾನ ಮಂಜೂರಾದರೂ, ರೈಲ್ವೆ ಮಂಡಳಿ ಇನ್ನೂ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಗದಗ–ಹರಪನಹಳ್ಳಿ ರೈಲು ಮಾರ್ಗ ರಚನೆಯ ಜಂಟಿ ಕ್ರಿಯಾ ಸಮಿತಿಯ ಮುಂಡರಗಿ ತಾಲೂಕು ಘಟಕದ ಅಧ್ಯಕ್ಷ ಧ್ರುವಕುಮಾರ ಹೂಗಾರ, ವಿಜಯಕುಮಾರ, ಉಪಾಧ್ಯಕ್ಷ ರವಿಗೌಡ ಪಾಟೀಲ, ಸಾರ್ವಜನಿಕ ಹೋರಾಟ ವೇದಿಕೆ ಸದಸ್ಯ ಬಸಪ್ಪ ವಡ್ಡರ ಹಾಗೂ ರಿಯಾಜ್ ಹೊಸಪೇಟೆ ಉಪಸ್ಥಿತರಿದ್ದರು.

ಶಿರಹಟ್ಟಿ ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಶಿರಹಟ್ಟಿ ಪೊಲೀಸ್ ಠಾಣೆಯ ಪಿಎಸ್‌ಐ ಈರಪ್ಪ ರಿತ್ತಿ ಅವರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಸೂಕ್ತ ಇಲಾಖಾ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಮಿತ್ರ ಮಂಡಳಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ದಲಿತ ಮಿತ್ರ ಮಂಡಳಿಯ ಅಧ್ಯಕ್ಷ ಕುಮಾರ ನಡಗೇರಿ, ಕನಕವಾಡ ಗ್ರಾಮದ ದಾದೇಗೌಡ ಪಾಟೀಲ ಅವರನ್ನು ಜುಲೈ 23ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುವ ವೇಳೆ ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಇತರರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಈ ಘಟನೆಯಲ್ಲಿ ದಾದೇಗೌಡ ಪಾಟೀಲ ಅವರ ಎದೆ ಹಾಗೂ ತುಟಿಗೆ ಗಾಯಗಳಾಗಿದ್ದು, ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ದಾಖಲಾಗಿರುವುದಾಗಿ ಅವರು ತಿಳಿಸಿದರು.

ಪಿಎಸ್‌ಐ ಈರಪ್ಪ ರಿತ್ತಿ ವಿರುದ್ಧ ಈ ಹಿಂದೆಯೂ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ಆರೋಪಗಳು ಕೇಳಿ ಬಂದಿವೆ ಎಂದು ಆರೋಪಿಸಿದ್ದಾರೆ.

ಇಂತಹ ಆರೋಪಗಳ ಹಿನ್ನೆಲೆಯಲ್ಲಿ ಪಿಎಸ್‌ಐ ಈರಪ್ಪ ರಿತ್ತಿ ಅವರನ್ನು ತಕ್ಷಣ ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು 10 ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಧರಣಿ, ಅಹೋರಾತ್ರಿ ಸತ್ಯಾಗ್ರಹ, ಸರದಿ ಸತ್ಯಾಗ್ರಹ ಹಾಗೂ ಅಮರಣಾಂತಿಕ ಸತ್ಯಾಗ್ರಹ ಸೇರಿದಂತೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನುಬದ್ಧವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದಲಿತ ಮಿತ್ರ ಮಂಡಳಿಯ ಉಪಾಧ್ಯಕ್ಷ ವೆಂಕಟೇಶ ದೊಡ್ಡಮನಿ, ಗೌರವಾಧ್ಯಕ್ಷ ಪಿ.ಎಸ್. ಕಾಳೆ, ಹಿರಿಯ ಮುಖಂಡ ಹುಲಿಗೆಪ್ಪ ವಾಲ್ಮೀಕಿ, ಸದಾನಂದಸಿಂಗ್ ಗುರ್ಲಹೊಸೂರ, ಮಂಜುನಾಥ ಯಮುನಾಳ, ಶಿವು ಬಂಗಾರಿ, ಆನಂದ ಅರಿಕೇರಿ, ಸಂತೋಷ ರಸಾಳಕರ, ಸ್ವರೂಪ ಉಳ್ಳಿಕಾಶಿ, ರಮೇಶ ವಾಲ್ಮೀಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಗಿಲ್ ವಿಜಯೋತ್ಸವ: ವೀರ ಯೋಧರಿಗೆ ಗೌರವ ನಮನ

0

ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಗಡಿಯಲ್ಲಿ ಮಳೆ, ಗಾಳಿ, ಬಿಸಿಲು, ಚಳಿ ಎನ್ನದೆ ದೇಶದ ಭದ್ರತೆಗಾಗಿ ಹಗಲಿರುಳು ಕರ್ತವ್ಯ ನಿರ್ವಹಿಸುವ ಭಾರತೀಯ ಯೋಧರ ಸೇವೆ ಅವಿಸ್ಮರಣೀಯ ಎಂದು ಗದಗ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಆರ್.ಎನ್. ಗೋಡಬೋಲೆ ಹೇಳಿದರು.

ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಭಾನುವಾರ ಗದಗ ಜಿಲ್ಲಾ ಮಾಜಿ ಸೈನಿಕರ ಸಂಘ, ಮಾಜಿ ಹಾಗೂ ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘ ಹಾಗೂ ವೀರನಾರಿಯರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ 27ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ಸೈನಿಕರು ದೇಶದ ಹೆಮ್ಮೆ. ಅವರ ತ್ಯಾಗ, ಸಾಹಸ ಮತ್ತು ದೇಶಭಕ್ತಿಗೆ ಪ್ರತಿಯೊಬ್ಬ ನಾಗರಿಕರೂ ಗೌರವ ಸಲ್ಲಿಸಬೇಕು. ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಯೋಧರ ತ್ಯಾಗವನ್ನು ಎಂದಿಗೂ ಮರೆಯಬಾರದು ಎಂದು ಅವರು ಹೇಳಿದರು.

ಹಾಲಿ ಹಾಗೂ ಮಾಜಿ ಪ್ಯಾರಾಮಿಲಿಟರಿ ಯೋಧರ ಸಂಘದ ಅಧ್ಯಕ್ಷ ನಾಗರಾಜ ಕುಂದರಗಿ ಮಾತನಾಡಿ, ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶದ ಗಡಿಯನ್ನು ಕಾಪಾಡುತ್ತಿದ್ದಾರೆ. ಕಾರ್ಗಿಲ್ ವಿಜಯೋತ್ಸವ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಯೋಧರಿಗೆ ಸರ್ಕಾರ ಹಾಗೂ ಜಿಲ್ಲಾಡಳಿತದಿಂದಲೂ ಅಧಿಕೃತವಾಗಿ ಗೌರವ ಸಲ್ಲಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಒತ್ತಾಯಿಸಿದರು.

ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೂಳಯ್ಯ ಮಾಲಗಿತ್ತಿಮಠ, ಉಪಾಧ್ಯಕ್ಷ ಎಸ್.ಆರ್. ಪಾಟೀಲ ಹಾಗೂ ಎಸ್.ಎಸ್. ಪೆಂಟಾ ಕಾರ್ಗಿಲ್ ಯುದ್ಧದ ಘಟನೆಗಳು ಮತ್ತು ಭಾರತೀಯ ಸೇನೆಯ ಶೌರ್ಯವನ್ನು ಸ್ಮರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥ ಮೌನಾಚರಣೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಬಿ.ವಿ. ಅಬ್ಬಿಗೇರಿ, ಎ.ಎಂ. ತಹಶೀಲ್ದಾರ, ವಿ.ಬಿ. ಬಿಂಗಿ, ವಿಜಯ ಬಡಿಗೇರ, ಜಿ.ಬಿ. ಅರವಟಗಿಮಠ, ಮಹಮ್ಮದ್ ಹನೀಫ್, ಎಸ್.ಎಫ್. ಹೊನ್ನಪ್ಪನವರ, ಮಲ್ಲಿಕಾರ್ಜುನ, ಮಹೇಶ ಆಶಿ, ಕೆ.ಎಸ್. ಹಿರೇಮಠ, ಎಸ್.ಬಿ. ಸರ್ವಿ, ಎಸ್.ಎಸ್. ವಡ್ಡಿನ, ಮಂಗಲೇಶ ವಸ್ತ್ರದ, ಎಫ್.ಎನ್. ಪಾಟೀಲ, ಹಾಲಿ ಹಾಗೂ ಮಾಜಿ ಪ್ಯಾರಾಮಿಲಿಟರಿ ಯೋಧರ ಸಂಘದ ಬಸಯ್ಯ ಹಿರೇಮಠ, ಈಶ್ವರಪ್ಪ ಕರ್ಕಿಕಟ್ಟಿ, ಪ್ರಭಣ್ಣ ಮಾಕಾಪೂರ, ಮುತ್ತಣ್ಣ, ಬಸಪ್ಪ ಸಂದಿಮನಿ, ಮಲ್ಲಯ್ಯ ಕರವೀರಮಠ, ಶಂಭುಲಿಂಗಯ್ಯ ಹಾದಿಮನಿ, ಅಶೋಕ ಷಡಕ್ಷರಿ, ಅಂದಪ್ಪ ಅಬ್ಬಿಗೇರಿ, ಮಲ್ಲಿಕಾರ್ಜುನ ಮೇವುಂಡಿ, ವೀರನಾರಿಯರಾದ ಶಿವಲೀಲಾ ಬಾವಿಕಟ್ಟಿ, ಮೀನಾಕ್ಷಿ ಬಡಿ, ರೇಣುಕಾ ಮರಡಿ, ಗೀತಾ ಪೂಜಾರ, ಶಿವಲೀಲಾ ಚಿಗರಿ, ಇಂದಿರಾ ಹೆಬಸೂರ ಸೇರಿದಂತೆ ಪೊಲೀಸರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

“ಮಳೆ, ಗಾಳಿ, ಬಿಸಿಲು, ಚಳಿ ಎನ್ನದೆ ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಭಾರತೀಯ ಯೋಧರ ಸೇವೆ ಸದಾ ಸ್ಮರಣೀಯ. ಅವರ ತ್ಯಾಗಕ್ಕೆ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು.”

– ಡಾ. ಆರ್.ಎನ್. ಗೋಡಬೋಲೆ, ಸಭಾಪತಿ, ಗದಗ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ

ವಿಬಿಜಿ ರಾಮ್‌ಜೀ ಯೋಜನೆಗೆ ಶಾಸಕ ಡಾ. ಚಂದ್ರು ಲಮಾಣಿ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ವಿಬಿಜಿ ರಾಮ್‌ಜೀ ಯೋಜನೆಗೆ ಶಾಸಕ ಡಾ. ಚಂದ್ರು ಲಮಾಣಿ ಸೋಮವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಯೋಜನೆಯಡಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ವಿಬಿಜಿ ರಾಮ್‌ಜೀ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಮಹತ್ವದ ಯೋಜನೆಯಾಗಿದೆ. ತಾಲೂಕು ಪಂಚಾಯಿತಿಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮನ್ವಯದಿಂದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸ್ಥಳೀಯರಿಗೆ ಉದ್ಯೋಗ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಯೋಜನೆಯಡಿ ಸದ್ಯ ರಸ್ತೆ ಕಾಮಗಾರಿಗಳಿಗೆ ಅವಕಾಶವಿರುವುದರಿಂದ ಶಿಗ್ಲಿ ಗ್ರಾಮದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ ದೊಡ್ಡೂರು–ಶಿಗ್ಲಿ ರಸ್ತೆ ಹಾಗೂ ಲಿಂಗರಾಜ ಸರ್ಕಲ್‌ನಿಂದ ಹಳೆ ಬಸ್ ನಿಲ್ದಾಣದವರೆಗೆ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಗುಣಮಟ್ಟದ ಕಾಮಗಾರಿ ನಡೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ರಾಗಿ, ಬಸಣ್ಣ ಕಳಸದ, ಹನಮಂತಪ್ಪ ತಳವಾರ, ಡಿ.ವೈ. ಹುನಗುಂದ, ರಾಮಣ್ಣ ಲಮಾಣಿ, ಯಲ್ಲಪ್ಪ ತಳವಾರ, ಅಶೋಕ ತೋಟದ, ಅಶೋಕಯ್ಯ ಮುಳಗುಂದಮಠ, ಈರಣ್ಣ ಅಕ್ಕೂರ, ಆನಂದ ತೆವರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳ ಹಕಾರಿ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಕೃಷ್ಣಪ್ಪ ಧರ್ಮರ, ವೀರಣ್ಣ ಅಳ್ಳಳ್ಳಿ, ಪಿಡಿಒ ರವಿ ಕೊರಕನವರ, ಡಿಐಇಸಿ ಎಚ್.ಎಂ. ಮಂಜುನಾಥಸ್ವಾಮಿ, ಶಂಭು ಹುನಗುಂದ, ಸಂಜೀವ ದೇಸಾಯಿ, ಮಂಜುನಾಥ ಸೂರಣಗಿ, ಸಂತೋಷ ತಾಂದಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಂಗನವಾಡಿಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾಪೂರ್ವ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಚ್‌ಡಿಎಫ್‌ಸಿ ಲೈಫ್ (ಮುಂಬೈ) ಹಾಗೂ ಕಲಿಕೆ–ಟಾಟಾ ಟ್ರಸ್ಟ್ಸ್ (ಬೆಂಗಳೂರು) ಸಹಯೋಗದಲ್ಲಿ ನಾಲ್ಕು ವರ್ಷಗಳ ಅವಧಿಯ ಮಹತ್ವದ ಒಡಂಬಡಿಕೆಗೆ ಸಹಿ ಹಾಕಲಾಗಿದೆ.

2026-27ನೇ ಸಾಲಿನಿಂದ ಜಿಲ್ಲೆಯ ಐದು ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯ 1,248 ಅಂಗನವಾಡಿ ಕೇಂದ್ರಗಳಲ್ಲಿ ಶಾಲಾಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಜಿ. ಮಣ್ಣೂರ, ಶಾಲಾಪೂರ್ವ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಹೆಜ್ಜೆಯಾಗಿದ್ದು, ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಶಿವಕುಮಾರ ಡಿ. ಅವರು ಕಾರ್ಯಕ್ರಮದ ರೂಪರೇಷೆ ಕುರಿತು ವಿವರಿಸಿದರೆ, ಎಚ್‌ಡಿಎಫ್‌ಸಿ ಲೈಫ್‌ನ ಎಸ್‌ವಿಪಿ (ಮಾರ್ಕೆಟಿಂಗ್–ಸಿಎಸ್‌ಆರ್) ರೀನಾ ಭಾತಿರ್ ಯೋಜನೆಗೆ ಅಗತ್ಯವಿರುವ ಅನುದಾನ ಹಾಗೂ ಅನುಷ್ಠಾನದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್. ಶ್ರೀಧರ್, ರೀಜಿನಲ್ ಹೆಡ್ ಸೂರಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಕಲಿಕೆ–ಟಾಟಾ ಟ್ರಸ್ಟ್ಸ್‌ನ ಇಸಿಸಿಇ ಕಾರ್ಯಕ್ರಮ ಅಧಿಕಾರಿ ಕೊಟ್ರೇಶ್ ಎ.ವೈ., ಜಿಲ್ಲಾ ವ್ಯವಸ್ಥಾಪಕ ಅಶೋಕ, ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕಿಯರು ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನೇತ್ರಾ ನಿರೂಪಿಸಿ, ವಂದಿಸಿದರು.

ಮಹಿಳೆಯರ ಶೌಚಗೃಹ ನಿರ್ಮಾಣಕ್ಕೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಸಮೀಪದ ಖಾಲಿ ಜಾಗದಲ್ಲಿ ಮಹಿಳೆಯರಿಗಾಗಿ ಸುಸಜ್ಜಿತ ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕೆಂದು ಆಗ್ರಹಿಸಿ, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಸೋಮವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿದಿನ ನೂರಾರು ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಶಾಲೆ-ಕಾಲೇಜು, ಸರ್ಕಾರಿ ಕಚೇರಿ ಹಾಗೂ ವಿವಿಧ ವ್ಯವಹಾರಗಳ ನಿಮಿತ್ತ ಲಕ್ಷ್ಮೇಶ್ವರಕ್ಕೆ ಆಗಮಿಸುತ್ತಾರೆ. ಆದರೆ ಮಾರುಕಟ್ಟೆ ಪ್ರದೇಶದಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಗೃಹದ ವ್ಯವಸ್ಥೆ ಇಲ್ಲದಿರುವುದರಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮಹಿಳೆಯರ ಸುರಕ್ಷತೆ, ಆರೋಗ್ಯ ಮತ್ತು ಗೌರವದ ದೃಷ್ಟಿಯಿಂದ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಸುಸಜ್ಜಿತ ಸಾರ್ವಜನಿಕ ಶೌಚಗೃಹ ನಿರ್ಮಿಸಿ, ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕೆಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸೀರಾಜ್ ಢಾಲಾಯತ್, ಸೋಮು ಉಪ್ಪಾರ, ಹನಮಂತಪ್ಪ ಜಗದಮನಿ, ಮಂಜುನಾಥ ಬಸ್ಸಾಪೂರ, ಮಾಬುಸಾಬ್ ಅಂಜನವರ, ರಾಜೇಸಾಬ್ ಮುಲ್ಲಾನವರ, ಪ್ರಶಾಂತ ಹುರಕನವರ, ಬಸವರಾಜ ನಡವಳಕೇರಿ, ಚಂದ್ರಣ್ಣ ಗುಡಸಲಮನಿ, ಮಹಾಂತೇಶ ಹಾದಿಮನಿ, ಕಿರಣ ಗುಡಸಲಮನಿ, ಈರಣ್ಣ ಮೆಣಸಿನಕಾಯಿ, ಜಮಾಲ್ ನದಾಫ್, ನಿಸಾರ್ ಜಂಗಾಪೂರಿ, ಮಲ್ಲೇಶ ಅಂಕಲಿ, ನಿಸಾರ್ ಚನ್ನಪಟ್ಟಣ, ಮೃತ್ಯುಂಜಯ ಧಾರವಾಡ, ದಾವಲ್ ಹತ್ತಿಮತ್ತೂರ, ಜಿಲಾನಿ ತಲಿನ್, ಇಬ್ರಾಹಿಂ ಪಟೇಗಾರ, ಶಾಹಿದ್ ಊಳಟ್ಟಿ, ನಿಂಗಪ್ಪ ಮುಳಗುಂದ, ದಾದಾಪೀರ ಸೂರಣಗಿ, ಸುಲೇಮಾನ್ ಆಡೂರ, ಮೊಹಮ್ಮದ್ ಬಿಜಾಪುರ ಸೇರಿದಂತೆ ಸಂಘದ ಅನೇಕ ಸದಸ್ಯರು ಉಪಸ್ಥಿತರಿದ್ದರು.

ಸಾಧಕರನ್ನು ಗೌರವಿಸಿದ ಅಮ್ಮ ಫೌಂಡೇಶನ್

0

ವಿಜಯಸಾಕ್ಷಿ ಸುದ್ದಿ, ಗದಗ: ಅಮ್ಮ ಫೌಂಡೇಶನ್ (ರಿ.), ಬೆಂಗಳೂರು ವತಿಯಿಂದ ಗದಗ ಜಿಲ್ಲಾ ನೌಕರರ ಭವನದಲ್ಲಿ ತಾಲೂಕು ಮಟ್ಟದ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭ ನಡೆಯಿತು.

ಜಿಲ್ಲೆಯ ಪ್ರತಿಯೊಂದು ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐವರು ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ಸುಮಾರು 300ಕ್ಕೂ ಹೆಚ್ಚು ಸಾಧಕರು ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ಸಾಧಕರಿಗೆ ‘ಬಸವ ಕೃಷಿ ರತ್ನ’, ಮಾಜಿ ಸೈನಿಕರಿಗೆ ‘ಬಸವನಾಡ ರಕ್ಷಕ ಪ್ರಶಸ್ತಿ’, ಶಿಕ್ಷಕರಿಗೆ ‘ಬಸವ ಬೆಳಕು ಪ್ರಶಸ್ತಿ’, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ‘ಬಸವ ಭಾರತಿ ಪ್ರಶಸ್ತಿ’ ಹಾಗೂ ಕಲಾವಿದರಿಗೆ ‘ಬಸವ ಕಲಾಶಿಖರ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಲಕ್ಷ್ಮೇಶ್ವರ ತಾಲೂಕಿನ ಸಂಕದಾಳ ಗ್ರಾಮದ ಪ್ರಗತಿಪರ ರೈತ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ದುರಗಪ್ಪ ಬಸಪ್ಪ ಹರಿಜನ ಅವರ ಕೃಷಿ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ‘ಬಸವ ಕೃಷಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅದೇ ಗ್ರಾಮದ ನೀಲನಗೌಡ ರಾಮನಗೌಡ ಪಾಟೀಲ, ಹಾಲಶಂಕ್ರಪ್ಪ ಮಲ್ಲಪ್ಪ ಸೂರಣಗಿ, ಪಕ್ಕೀರಯ್ಯ ಹಿರೇಮಠ ಹಾಗೂ ಹಾಲನಗೌಡ ಬಸನಗೌಡ ಪಾಟೀಲ ಅವರ ಕೃಷಿ ಸಾಧನೆಯನ್ನು ಗುರುತಿಸಿ ಅವರಿಗೂ ‘ಬಸವ ಕೃಷಿ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಸನ್ಮಾನಿತರಿಗೆ ಅಮ್ಮ ಫೌಂಡೇಶನ್‌ನ ಮಾರ್ಗದರ್ಶಕ ಬಸವರಾಜ ಬಳ್ಳಾರಿ, ಅಧ್ಯಕ್ಷ ಮೈಲಾರಪ್ಪ ಡಿ.ಎಚ್. ವಕೀಲ, ಖಜಾಂಚಿ ಮಾರುತಿ ಜಿ.ಎಚ್., ಕಾರ್ಯದರ್ಶಿ ವಿಶ್ವನಾಥ ದಲಾಲಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಶುಭ ಹಾರೈಸಿದರು

ಮಕ್ಕಳ ಆರೋಗ್ಯವೇ ರಾಷ್ಟ್ರದ ಸಂಪತ್ತು: ಡಾ. ಪಾಂಡುರಂಗಸಾ ಹ. ಕಬಾಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳಿಗೆ ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರಯುತ ಬದುಕು ಕಲ್ಪಿಸುವುದೇ ಸಮಾಜದ ಉಜ್ವಲ ಭವಿಷ್ಯಕ್ಕೆ ಅಡಿಪಾಯವಾಗಿದೆ ಎಂದು ಡಾ. ಕಬಾಡಿ’ಸ್ ಶ್ರೀ ಸಾಯಿ ಹನುಮಾನ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಡಾ. ಪಾಂಡುರಂಗಸಾ ಹ. ಕಬಾಡಿ ಹೇಳಿದರು.

ನಗರದ ಕಳಸಾಪುರ ರಸ್ತೆಯ ಶ್ರೀ ಸಾಯಿ ಬಾಪೂಜಿ ನಗರದಲ್ಲಿರುವ ಶ್ರೀ ಸಾಯಿ ಹನುಮಾನ್ ಆರೋಗ್ಯ ದಾಸೋಹ ಕೇಂದ್ರದಲ್ಲಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಉಚಿತ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಅನ್ನದಿಂದ ಆರೋಗ್ಯ, ಆರೋಗ್ಯದಿಂದ ಶಿಕ್ಷಣ, ಶಿಕ್ಷಣದಿಂದ ಜ್ಞಾನ ಹಾಗೂ ಆ ಜ್ಞಾನದ ಮೂಲಕ ದೇಶಸೇವೆ ಎಂಬ ಪಂಚದಾಸೋಹದ ಆಶಯವನ್ನು ಟ್ರಸ್ಟ್ ಹೊಂದಿದ್ದು, ಅದನ್ನು ಸಾಕಾರಗೊಳಿಸಲು ಸಮಾಜದ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಶಿಬಿರದಲ್ಲಿ ಸುಮಾರು 75 ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಅಗತ್ಯವಿರುವವರಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು. ಅಲ್ಲದೆ 51 ಅಪೌಷ್ಟಿಕ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ನೀಡಲಾಯಿತು.

ಮಕ್ಕಳ ತಜ್ಞ ಡಾ. ಈರಣ್ಣ ಹಳೆಮನಿ ಮಾತನಾಡಿ, ಮಕ್ಕಳ ಆರೋಗ್ಯದಲ್ಲಿನ ನ್ಯೂನತೆಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚಿದರೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಪೌಷ್ಟಿಕ ಆಹಾರದ ಕೊರತೆಯೇ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದರಿಂದ ಪೋಷಕರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು. ಇಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಟ್ರಸ್ಟ್‌ನ ಕಾರ್ಯವನ್ನು ಅವರು ಶ್ಲಾಘಿಸಿದರು.

ಅತಿಥಿಯಾಗಿ ಭಾಗವಹಿಸಿದ್ದ ಕಲಾವತಿ ಆನಂದ ಅಲ್ಬೂರ್, ಮಕ್ಕಳಿಗೆ ಮನೆಯಲ್ಲೇ ತಯಾರಿಸಿದ ಪೌಷ್ಟಿಕ ಆಹಾರವನ್ನೇ ನೀಡಬೇಕು. ಹೊರಗಿನ ಜಂಕ್ ಫುಡ್ ಹಾಗೂ ಪ್ಯಾಕೆಟ್ ಆಹಾರಗಳಿಂದ ಸಾಧ್ಯವಾದಷ್ಟು ದೂರವಿಡಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಎಸ್‌ಕೆ ಪಂಚ್ ಟ್ರಸ್ಟ್ ಕಮಿಟಿ ಅಧ್ಯಕ್ಷ ಫಕ್ಕೀರಸಾ ಬಾಬಾಸಾ ಭಾಂಡಗೆ ಮಾತನಾಡಿ, ಮಕ್ಕಳನ್ನು ಮೊಬೈಲ್ ವ್ಯಸನದಿಂದ ದೂರವಿಟ್ಟು ಉತ್ತಮ ಸಂಸ್ಕಾರ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವುದು ಪೋಷಕರ ಹೊಣೆಗಾರಿಕೆಯಾಗಿದೆ ಎಂದರು.

ವೇದಿಕೆಯಲ್ಲಿ ರತ್ನಾ ಬಸಪ್ಪ ಯಳಮಲಿ ಹಾಗೂ ದುರ್ಗೇಶ್ ವಿಭೂತಿ ಉಪಸ್ಥಿತರಿದ್ದರು.

ಫಾರ್ಮಸಿಸ್ಟ್ ದೀಪಕ್ ಖಟವಟೆ ವೈದ್ಯರು ಸೂಚಿಸಿದ ಔಷಧಿಗಳನ್ನು ಮಕ್ಕಳಿಗೆ ವಿತರಿಸಿದರು. ಡಾ. ದಯಾನಂದ ಕಬಾಡಿ, ಡಾ. ಸೂರಜ್ ಕಾಟಿಗೇರ ಹಾಗೂ ಲ್ಯಾಬ್ ಟೆಕ್ನಿಷಿಯನ್ ಪ್ರಕಾಶ್ ಬಿದರಿ ಶಿಬಿರದಲ್ಲಿ ಸೇವೆ ಸಲ್ಲಿಸಿದರು. ಅನ್ನಪೂರ್ಣಾ ಹಬೀಬ್, ಅಂಗನವಾಡಿ ಕಾರ್ಯಕರ್ತೆಯರಾದ ರಮೀಜಾ ಸೋಲಾಪುರ, ದೀಪಾ ವಿಭೂತಿ, ವೀಣಾ ಗಣಚಾರ ಹಾಗೂ ಆಶಾ ಕಾರ್ಯಕರ್ತೆ ಭಾರತಿ ಬಾರಕೇರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಟ್ರಸ್ಟ್‌ನ ಟ್ರಸ್ಟಿ ಸ್ನೇಹಲತಾ ಕಬಾಡಿ ಮನೆಯಲ್ಲಿಯೇ ಪೌಷ್ಟಿಕ ಆಹಾರ ತಯಾರಿಸುವ ಕುರಿತು ಮಾಹಿತಿ ನೀಡಿ, ಕಾರ್ಯಕ್ರಮಕ್ಕೆ ಸಹಕರಿಸಿದ ವೈದ್ಯರು, ಅತಿಥಿಗಳು, ಸಿಬ್ಬಂದಿ, ತಾಯಂದಿರು ಹಾಗೂ ಮಕ್ಕಳಿಗೆ ಕೃತಜ್ಞತೆ ಸಲ್ಲಿಸಿದರು.

“ಅನ್ನದಿಂದ ಆರೋಗ್ಯ, ಆರೋಗ್ಯದಿಂದ ಶಿಕ್ಷಣ, ಶಿಕ್ಷಣದಿಂದ ಜ್ಞಾನ ಮತ್ತು ಜ್ಞಾನದಿಂದ ದೇಶಸೇವೆ ಎಂಬುದು ನಮ್ಮ ಪಂಚದಾಸೋಹದ ಪರಿಕಲ್ಪನೆ.”

– ಡಾ. ಪಾಂಡುರಂಗಸಾ ಹ. ಕಬಾಡಿ

ಅಂಗವಿಕಲರಿಗೆ ಮಾಸಾಶನ, ಉಚಿತ ಪ್ರಯಾಣಕ್ಕೆ ಒತ್ತಾಯ

0

ವಿಜಯಸಾಕ್ಷಿ ಸುದ್ದಿ, ಗದಗ: ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಮಾಸಾಶನ ವಿತರಿಸಬೇಕು ಹಾಗೂ ಅದಕ್ಕೆ ಆದಾಯ ಮಿತಿಯನ್ನು ವಿಧಿಸಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವಿಕಲಚೇತನರ ಘಟಕದ ಅಧ್ಯಕ್ಷ ರಾಘವೇಂದ್ರ ಮಿಶೆನ್ನವರ ಆಗ್ರಹಿಸಿದರು.

ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗವಿಕಲರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಬೇಕು. ಬಸ್‌ಗಳಲ್ಲಿ ಮೀಸಲು ಆಸನ ವ್ಯವಸ್ಥೆ ಮಾಡಬೇಕು. ಎಲ್ಲ ಸರ್ಕಾರಿ ಇಲಾಖೆಗಳ ಹೊರಗುತ್ತಿಗೆ ನೇಮಕಾತಿಯಲ್ಲಿ ಅಂಗವಿಕಲರಿಗೆ ಆದ್ಯತೆ ನೀಡಬೇಕು ಹಾಗೂ ಅವರಿಗಾಗಿ ಮೀಸಲಿರುವ ಶೇ.5ರಷ್ಟು ಅನುದಾನವನ್ನು ಸಮರ್ಪಕವಾಗಿ ಬಳಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ವಾಣಿಜ್ಯ ಮಳಿಗೆಗಳಲ್ಲಿ ಅಂಗವಿಕಲರಿಗೆ ಆದ್ಯತೆ ನೀಡಬೇಕು. ವಸತಿ ಸೌಲಭ್ಯ ಕಲ್ಪಿಸಬೇಕು. ಶೇ.40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರಿಗೆ ಯಂತ್ರಚಾಲಿತ ವಾಹನ ವಿತರಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಲಿಫ್ಟ್ ಆಪರೇಟರ್ ಹುದ್ದೆಗಳಿಗೆ ಅಂಗವಿಕಲರನ್ನೇ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಅಂಗವಿಕಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶೀಘ್ರದಲ್ಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಘಟಕದ ಅಧ್ಯಕ್ಷ ಪರಶುರಾಮ ಆರ್. ಬೆಟಗೇರಿ, ಕೊಟ್ರೇಶ್ ಹೊನಗುಡಿ, ಪಾಂಡುರಂಗ ಹೆಬ್ವಾರ, ಮಂಜುನಾಥ ಜಾಲಗಾರ, ದುರ್ಗಪ್ಪ ಸಂಕನಕಲ್, ವೆಂಕಪ್ಪ, ಖಾಜಾ ಹುಸೇನ್ ಕಾತರಕಿ ಹಾಗೂ ಕೃಷ್ಣ ಜಾದವ್ ಉಪಸ್ಥಿತರಿದ್ದರು.

ಸಿಎಂ ವಿಜಯ್ ಸರ್ಕಾರದ ನಿರ್ಧಾರಕ್ಕೆ ಹಿನ್ನಡೆ: ಕರೂರು ಕಾಲ್ತುಳಿತ ಸಂತ್ರಸ್ತರ ಉದ್ಯೋಗ ಆದೇಶ ರದ್ದು!

0

ಚೆನ್ನೈ: ಕರೂರು ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡುವ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.

ಸಂತ್ರಸ್ತ ಕುಟುಂಬಗಳಿಗೆ ಕರುಣಾಳು ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವ ನಿರ್ಧಾರವು ಇತರರು ಕೂಡ ಇದೇ ರೀತಿಯ ಬೇಡಿಕೆ ಮುಂದಿಡಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸರ್ಕಾರದ ಈ ನಿರ್ಧಾರವು ಸಂವಿಧಾನದ ಆರ್ಟಿಕಲ್ 14 (ಸಮಾನತೆಯ ಹಕ್ಕು) ಹಾಗೂ ಆರ್ಟಿಕಲ್ 16 (ಸರ್ಕಾರಿ ಉದ್ಯೋಗದಲ್ಲಿ ಸಮಾನ ಅವಕಾಶ) ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಕರೂರು ಕಾಲ್ತುಳಿತ ಸಂತ್ರಸ್ತರ ಕುಟುಂಬಗಳಿಗೆ ಉದ್ಯೋಗ ನೀಡುವ ಸಂಬಂಧ ಮುಖ್ಯಮಂತ್ರಿ ವಿಜಯ್ ಅವರು ಇತ್ತೀಚೆಗೆ ಕರೂರಿಗೆ ಭೇಟಿ ನೀಡಿದ್ದರು. ಈ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ 41 ಕುಟುಂಬಗಳ ಪೈಕಿ 32 ಕುಟುಂಬಗಳಿಗೆ ಕರುಣಾಳು ಆಧಾರದ ಸರ್ಕಾರಿ ಉದ್ಯೋಗದ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿದ್ದರು.

ಆದರೆ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹಿರಿಯ ಎಐಎಡಿಎಂಕೆ ನಾಯಕ ಆರ್.ಬಿ. ಉದಯಕುಮಾರ್, ತಮಿಳುನಾಡಿನಲ್ಲಿ ಸರ್ಕಾರಿ ನೇಮಕಾತಿಗಳು ತಮಿಳುನಾಡು ಸಾರ್ವಜನಿಕ ಸೇವಾ ಆಯೋಗ (ಟಿಎನ್‌ಪಿಎಸ್‌ಸಿ) ಮೂಲಕ ನಿಯಮಾನುಸಾರ ನಡೆಯಬೇಕು ಎಂದು ಹೇಳಿದ್ದರು.

ರಾಜಕೀಯ ಕಾರಣಗಳಿಗಾಗಿ ನಿಯಮಗಳನ್ನು ಬದಿಗೊತ್ತಿ ಸರ್ಕಾರಿ ಉದ್ಯೋಗವನ್ನು ಪರಿಹಾರವಾಗಿ ನೀಡುವುದು ಸರಿಯಲ್ಲ. ಇದರಿಂದ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಕರೂರು ಕಾಲ್ತುಳಿತ ಪ್ರಕರಣ:

2025ರ ಸೆಪ್ಟೆಂಬರ್‌ನಲ್ಲಿ ಡಿಎಂಕೆ ಆಡಳಿತದಲ್ಲಿದ್ದ ವೇಳೆ ನಟ ಹಾಗೂ ಟಿವಿಕೆ ಪಕ್ಷದ ನಾಯಕ ವಿಜಯ್ ಭಾಗವಹಿಸಿದ್ದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ ಮಕ್ಕಳು ಸೇರಿದಂತೆ 41 ಮಂದಿ ಮೃತಪಟ್ಟಿದ್ದರು.

ವಿಜಯ್ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಅಲ್ಲದೇ ರ‍್ಯಾಲಿ ಸ್ಥಳದಲ್ಲಿ ಕುಡಿಯುವ ನೀರು, ಆಹಾರ ಹಾಗೂ ಶೌಚಾಲಯದಂತಹ ಮೂಲ ಸೌಲಭ್ಯಗಳ ಕೊರತೆಯೂ ಇತ್ತು ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಆರೋಪಗಳನ್ನು ಟಿವಿಕೆ ಪಕ್ಷ ತಳ್ಳಿಹಾಕಿದ್ದು, ಪೊಲೀಸರ ವೈಫಲ್ಯ ಹಾಗೂ ಮಾಜಿ ಡಿಎಂಕೆ ಸಚಿವ ಸೆಂಥಿಲ್ ಬಾಲಾಜಿ ಅವರ ಪಿತೂರಿಯಿಂದ ಘಟನೆ ನಡೆದಿದೆ ಎಂದು ಆರೋಪಿಸಿತ್ತು.

ನಂತರ ಸುಪ್ರೀಂ ಕೋರ್ಟ್ ಪ್ರಕರಣದ ತನಿಖೆಯನ್ನು ರಾಜ್ಯ ಮಟ್ಟದ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿತ್ತು. ಪ್ರಕರಣದ ತನಿಖೆಯನ್ನು ಸದ್ಯ ಸಿಬಿಐ ಮುಂದುವರಿಸುತ್ತಿದೆ.