Home Blog Page 144

‘ನಾನು ಎಲ್ಲಿ ಸೈಲೆಂಟ್ ಆಗಿದ್ದೇನೆ?’; ಟೀಕಾಕಾರರಿಗೆ ಸಿದ್ದರಾಮಯ್ಯ ತಿರುಗೇಟು!

0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಸೈಲೆಂಟ್ ಆಗಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಬೆನ್ನಲ್ಲೇ, ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. “ನಾನೀಗ ಮುಖ್ಯಮಂತ್ರಿ ಅಲ್ಲ, ಹಾಗಾಗಿ ಹೆಚ್ಚು ಮಾತನಾಡುತ್ತಿಲ್ಲ ಅಷ್ಟೇ” ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ನಾನು ಎಲ್ಲಿ ಸೈಲೆಂಟ್ ಆಗಿದ್ದೇನೆ? ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ್ದೇನೆ. ನಿನ್ನೆ ಅಧಿವೇಶನದಲ್ಲಿ ಭಾಗಿಯಾಗಿದ್ದೇನೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದೇನೆ. ಆದರೆ ಹೆಚ್ಚು ಮಾತನಾಡುತ್ತಿಲ್ಲ ಅಷ್ಟೇ” ಎಂದು ಹೇಳಿದರು.

“ನಾನೀಗ ಮುಖ್ಯಮಂತ್ರಿ ಅಲ್ಲ. ಹಾಗಾಗಿ ಜವಾಬ್ದಾರಿ ಇಲ್ಲ” ಎಂದು ಹೇಳುವ ಮೂಲಕ ತಾವು ಮೌನವಾಗಿರುವುದಕ್ಕೆ ಕಾರಣವನ್ನು ಸಿದ್ದರಾಮಯ್ಯ ವಿವರಿಸಿದರು.

ಇನ್ನು ಮಹಿಳಾ ಕೋಟಾ ಭರ್ತಿಯಾಗಿಲ್ಲ ಎಂಬ ಬಿಜೆಪಿ ಆರೋಪದ ಬಗ್ಗೆಯೂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. “ಮಹಿಳಾ ಕೋಟಾ ಭರ್ತಿಯಾಗಿಲ್ಲ ಎಂದು ಬಿಜೆಪಿಯವರು ಆರೋಪ ಮಾಡುತ್ತಾರೆ. ಈ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ? ಅವರ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶವನ್ನೇ ನೀಡಿಲ್ಲ” ಎಂದು ಟೀಕಿಸಿದರು.

ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ತಾವು ಹೇಳಿರುವುದಾಗಿ ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.

ಅಹಿಂದ ಚಳುವಳಿ ಕುರಿತು ಮಾತನಾಡಿದ ಸಿದ್ದರಾಮಯ್ಯ, ಅಹಿಂದ ಚಳುವಳಿ ನಡೆಯುತ್ತಿದೆ. ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ 25ನೇ ವರ್ಷದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವುದಾಗಿ ತಿಳಿಸಿದರು.

ಸಾರ್ವಜನಿಕ ಸೇವೆಯನ್ನು ಪ್ರಾಮಾಣಿಕತೆ, ಶ್ರದ್ಧೆಯಿಂದ ನಿರ್ವಹಿಸುವ ಸಂಕಲ್ಪ ಮಾಡೋಣ: ಶ್ರೀಧರ್ ಚಿನಗುಂಡಿ

0

ವಿಜಯಸಾಕ್ಷಿ ಸುದ್ದಿ, ನರಗುಂದ: ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶನಿವಾರ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಸರ್ಕಾರಿ ನೌಕರರಾದ ನಾವು ಸಾರ್ವಜನಿಕ ಸೇವೆಯನ್ನು ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ನಿರ್ವಹಿಸುವುದರ ಜತೆಗೆ ದೀನದಲಿತರು ಹಾಗೂ ದುರ್ಬಲ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಬೇಕು ಎಂದರು.

ಸಹಾಯಕ ನಿರ್ದೇಶಕ (ಅಕ್ಷರ ದಾಸೋಹ) ಎಂ.ಎಸ್. ಅಸುಂಡಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದರು. ಸ್ವಾತಂತ್ರ್ಯಾನಂತರ ದೇಶವನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ ನಾಯಕರ ಕೊಡುಗೆಯನ್ನು ನೆನಪಿಸಿಕೊಂಡು ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು.

ಬಳಿಕ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಕೇಂದ್ರ ಸರ್ಕಾರದ ನಿರ್ದೇಶನದಂತೆ **‘ನಶಾ ಮುಕ್ತ ಭಾರತ’**ಕ್ಕಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಂತೋಷಕುಮಾರ್ ಪಾಟೀಲ್, ಸಹಾಯಕ ನಿರ್ದೇಶಕ (ಅಕ್ಷರ ದಾಸೋಹ) ಎಂ.ಎಸ್. ಅಸುಂಡಿ, ಯೋಜನಾಧಿಕಾರಿ ಎಂ.ಎಂ. ನಿಟ್ಟಾಲಿ, ತಾಲೂಕು ಪಂಚಾಯಿತಿ ಕಚೇರಿ ಸಿಬ್ಬಂದಿ, ವ್ಹಿಬಿಜಿರಾಮ್ ಸಿಬ್ಬಂದಿ, ಎನ್‌ಆರ್‌ಎಂಎಂ ಹಾಗೂ ವಿಆರ್‌ಡಬ್ಲ್ಯೂ ಸಿಬ್ಬಂದಿ ಉಪಸ್ಥಿತರಿದ್ದರು.

ಹಳ್ಳಿಯಿಂದ ದಿಲ್ಲಿವರೆಗೂ ಕೊಂಡಾಡುವ ನಾಯಕ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಹಳ್ಳಿಯಿಂದ ದಿಲ್ಲಿವರೆಗೂ ಪರಿಚಿತರಾಗಿರುವ, ಪ್ರಭಾವಿ ರಾಜಕಾರಣಿ ಹಾಗೂ ಪರಿಶುದ್ಧ ಸೇವಕರೆಂದು ಗುರುತಿಸಿಕೊಂಡಿರುವ ಶಾಸಕ, ಮಾಜಿ ಸಚಿವ ಎಚ್.ಕೆ. ಪಾಟೀಲ ಅವರ 73ನೇ ಜನ್ಮದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ನೋಟು ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಂಜುಮನ್ ಸಂಸ್ಥೆ ಅಧ್ಯಕ್ಷ ತಾಜುದ್ದೀನ್ ಕಿಂಡ್ರಿ, ಇಂದಿರಾ ಗಾಂಧಿ ಅವರ ಕಾಲದಿಂದ ಇಂದಿನ ರಾಹುಲ್ ಗಾಂಧಿ ಅವರವರೆಗೆ ರಾಷ್ಟ್ರ ಮಟ್ಟದ ನಾಯಕರೊಂದಿಗೆ ಪರಿಚಯ ಹೊಂದಿರುವ ಎಚ್.ಕೆ. ಪಾಟೀಲ ಅವರು ಗದಗ ಕ್ಷೇತ್ರ ಮಾತ್ರವಲ್ಲದೆ ರಾಜ್ಯದ ಅಭಿವೃದ್ಧಿಗೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹುಲಕೋಟಿಯ ಹುಲಿ ಎಂದೇ ಖ್ಯಾತರಾಗಿರುವ ಅವರು ಜನಪರ ಕಾಳಜಿ ಹಾಗೂ ಸೇವಾ ಮನೋಭಾವದಿಂದ ರಾಜಕೀಯ ಜೀವನದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದರು.

ಎಚ್.ಕೆ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸುವ ಮೂಲಕ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಮೀದ್ ಮುಜಾವರ್, ಹೈದರಾಲಿ ಖವಾಸ, ಮುನ್ನಾ ಡಾಲಾಯತ್, ದಾವುದ ಜಮಾಲಸಾಬನವರ, ದಾವಲಸಾಬ, ಲಕ್ಷ್ಮೇಶ್ವರದ ಹಿರಿಯರಾದ ಹಸನಸಾಬ್ ಶೇಖ್, ಎ.ಎ. ಖಾಜಿ, ಲಾಲಾಶಪೀರ್ ಮಕಾಂದರ್, ಫಕೃಸಾಬ್ ಅಣ್ಣಿಗೇರಿ, ಖಲಂದರ್ ಗಾಡಿ, ಅಷ್ಪಾಕ್ ನದ್ದಿಮುಲ್ಲಾ, ಜೀಲಾನಿ ಶೇಖ್, ಮಕ್ತುಮಸಾಬ ನದಾಫ್, ಮಾಬುಲಿ ದುರ್ಗಿಗುಡಿ, ದಾವಲ್ ರಾಮಗಿರಿ, ಇಮಾಮಜಾಫರ್, ಲಾಡಸಾಬನವರ ಖಾನ್, ಲಾದಮ್ಮನವರ ಹುಸೇನ್, ಅಕ್ಕಿ ಜಾಫರ್, ಭದ್ರಾಪೂರ್ ಸೇರಿದಂತೆ ಶಾಲಾ ಮುಖ್ಯೋಪಾಧ್ಯಾಯರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ರಾಣಿ ಚೆನ್ನಮ್ಮ ಪಾರ್ಟಿ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ದೇಸಾಯಿ ನಿಧನ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಣಿ ಚೆನ್ನಮ್ಮ ಪಾರ್ಟಿಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಗದುಗಿನ ಹಿರಿಯ ಸಾಮಾಜಿಕ ಧುರೀಣ, ವೀರಶೈವ ಲಿಂಗಾಯತ ಸಮಾಜದ ಮುಖಂಡ ಮಲ್ಲಿಕಾರ್ಜುನ ಬಸಪ್ಪ ದೇಸಾಯಿ (80) ಅವರು ಶನಿವಾರ ಸಂಜೆ 4.30ಕ್ಕೆ ನಿಧನರಾದರು.

ಅಖಿಲ ಕರ್ನಾಟಕ ವೀರರಾಣಿ ಕಿತ್ತೂರು ಚೆನ್ನಮ್ಮ ಸರ್ವಧರ್ಮ ಸಮಾಜ ಸೇವಾ ಸಂಸ್ಥೆ (ರಿ.)ಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಎಂ.ಬಿ. ದೇಸಾಯಿ ಅವರು, ಗದಗ ಜಿಲ್ಲೆಯಾದ್ಯಂತ ಸಮಾಜ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಗದುಗಿನಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ವಿಜಯೋತ್ಸವ ಆಚರಣೆ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮಳ ಕಂಚಿನ ಪುತ್ಥಳಿ ಸ್ಥಾಪನೆಗೆ ಮುಂದಾಳತ್ವ ವಹಿಸಿ ಹೋರಾಟ ನಡೆಸಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಆ.16ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ಗೌರಿಬಿದನೂರು ಬಳಿ ಚಲಿಸುತ್ತಿದ್ದ KSRTC ಬಸ್‌ಗೆ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು

0

ಚಿಕ್ಕಬಳ್ಳಾಪುರ: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಸರ್ಕಾರಿ ಬಸ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಎಂ.ಗೊಲ್ಲಹಳ್ಳಿ ಗ್ರಾಮದ ಬಳಿ ನಡೆದಿದೆ.

ಗೌರಿಬಿದನೂರು ಕೆಎಸ್‌ಆರ್‌ಟಿಸಿ ಘಟಕಕ್ಕೆ ಸೇರಿದ ಬಸ್‌ ನಗರದಿಂದ ಮರಿಪಡಿಗು ಗ್ರಾಮದತ್ತ ತೆರಳುತ್ತಿತ್ತು. ಎಂ.ಗೊಲ್ಲಹಳ್ಳಿ ಗ್ರಾಮದ ಸಮೀಪ ಬರುತ್ತಿದ್ದ ವೇಳೆ ಬಸ್‌ನಲ್ಲಿ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಸಮಯಪ್ರಜ್ಞೆ ಮೆರೆದು ತಕ್ಷಣ ಬಸ್‌ ಅನ್ನು ಸುರಕ್ಷಿತವಾಗಿ ನಿಲ್ಲಿಸಿದ್ದಾರೆ. ಬಳಿಕ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಹೀಗಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದ್ದು, ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ನೋಡನೋಡುತ್ತಿದ್ದಂತೆ ಬೆಂಕಿ ಬಸ್‌ನ ವಿವಿಧ ಭಾಗಗಳಿಗೆ ವ್ಯಾಪಿಸಿದ್ದು, ಬಹುತೇಕ ಬಸ್‌ ಸಂಪೂರ್ಣವಾಗಿ ಸುಟ್ಟುಹೋಗಿದೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಬಸ್‌ಗೆ ಭಾರೀ ಪ್ರಮಾಣದ ಹಾನಿಯಾಗಿತ್ತು.

ಘಟನೆಗೆ ನಿಖರ ಕಾರಣ ಏನು ಎಂಬುದರ ಕುರಿತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ತಾಂತ್ರಿಕ ಪರಿಶೀಲನೆ ಬಳಿಕ ಬೆಂಕಿ ಹೊತ್ತಿಕೊಳ್ಳಲು ಕಾರಣ ತಿಳಿದುಬರಬೇಕಿದೆ.

ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಸರ್ಕಾರಿ ಬಸ್‌ಗಳ ತಾಂತ್ರಿಕ ತಪಾಸಣೆ ಹಾಗೂ ನಿರ್ವಹಣೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮೂವರ ಎನ್‌ಕೌಂಟರ್‌ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌; ಅರಣ್ಯಾಧಿಕಾರಿಗಳ ವಿರುದ್ಧ FIR!

0

ಚಾಮರಾಜನಗರ: ಕಾವೇರಿ ವನ್ಯಧಾಮದಲ್ಲಿ ಬೇಟೆಗೆ ಬಂದಿದ್ದ ಆರೋಪದ ಮೇಲೆ ಮೂವರು ಮೃತಪಟ್ಟಿರುವ ಎನ್‌ಕೌಂಟರ್‌ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹನೂರು ಪೊಲೀಸ್ ಠಾಣೆಯಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಮೃತ ಆಥೋಣಿಸಾಮಿ ಅವರ ಪತ್ನಿ ಲೂರ್ದಾಮೇರಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಫ್‌ಐಆರ್‌ನಲ್ಲಿ ನಿರ್ದಿಷ್ಟ ಅಧಿಕಾರಿಗಳ ಹೆಸರುಗಳನ್ನು ನಮೂದಿಸದೆ, ‘ಅರಣ್ಯ ಅಧಿಕಾರಿಗಳು, ಹನೂರು ವಿಭಾಗ’ ಎಂದು ಆರೋಪಿಗಳನ್ನು ಉಲ್ಲೇಖಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS)ಯ **103(1)**ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ದಕ್ಷಿಣ ವಲಯ ಐಜಿ ಬೋರಲಿಂಗಯ್ಯ ಹಾಗೂ ಚಾಮರಾಜನಗರ ಎಸ್‌ಪಿ ಮುತ್ತುರಾಜು ಅವರ ಸಮ್ಮುಖದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಇಬ್ಬರೂ ಬೆಳಗ್ಗೆಯಿಂದ ಹನೂರು ಪೊಲೀಸ್ ಠಾಣೆಯಲ್ಲೇ ಮೊಕ್ಕಾಂ ಹೂಡಿದ್ದಾರೆ.

ದೂರಿನಲ್ಲಿ ಏನಿದೆ?

ಲೂರ್ದಾಮೇರಿ ಅವರು ನೀಡಿರುವ ದೂರಿನ ಪ್ರಕಾರ, ಕುಟುಂಬವು ಹಸುಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದೆ. ನಿನ್ನೆ ಹಸುಗಳು ಮೇಯಲು ಕಾಡಿಗೆ ತೆರಳಿದ್ದು, ಬಳಿಕ ವಾಪಸ್ ಬಂದಿರಲಿಲ್ಲ. ಹಸುಗಳನ್ನು ಹುಡುಕಿಕೊಂಡು ಬರಲು ಸಂಜೆ ವೇಳೆ ಪತಿ ಆಥೋಣಿಸಾಮಿ, ಅವರ ಸಹೋದರ ಕುಮಾರ್, ಮೈದುನ ಪೀಟರ್ ಹಾಗೂ ದೊಡ್ಡಪ್ಪನ ಮಗ ಜೋಸೆಫ್ ಕಾಡಿಗೆ ತೆರಳಿದ್ದರು.

ಬೆಳಗ್ಗೆಯಾದರೂ ನಾಲ್ವರೂ ಮನೆಗೆ ವಾಪಸ್ ಬಂದಿರಲಿಲ್ಲ. ಬಳಿಕ ಜೋಸೆಫ್ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮರಿಯಮಂಗಲ ಗ್ರಾಮದಿಂದ ಸುಮಾರು 4 ಕಿ.ಮೀ. ದೂರದ ಕಾಡಿನಲ್ಲಿ ವಿಶ್ರಾಂತಿ ಪಡೆಯುತ್ತಾ ಮಲಗಿದ್ದ ವೇಳೆ ಬೆಳಗಿನ ಜಾವ ಸುಮಾರು 3ರಿಂದ 5 ಗಂಟೆಯ ನಡುವೆ ಅರಣ್ಯಾಧಿಕಾರಿಗಳು ಏಕಾಏಕಿ ಗುಂಡು ಹಾರಿಸಿದ್ದಾರೆ ಎಂದು ಜೋಸೆಫ್ ತಿಳಿಸಿದ್ದಾಗಿ ಲೂರ್ದಾಮೇರಿ ದೂರಿನಲ್ಲಿ ಹೇಳಿದ್ದಾರೆ.

ಗುಂಡಿನ ದಾಳಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ತಾನು ತಪ್ಪಿಸಿಕೊಂಡು ಬಂದಿರುವುದಾಗಿ ಜೋಸೆಫ್ ತಿಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳೇ ತಮ್ಮ ಪತಿಯನ್ನು ಸೇರಿದಂತೆ ಮೂವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಲೂರ್ದಾಮೇರಿ ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದು, ಎನ್‌ಕೌಂಟರ್‌ ಪ್ರಕರಣದ ತನಿಖೆ ಮತ್ತಷ್ಟು ಕುತೂಹಲ ಕೆರಳಿಸಿದೆ.

ಹಾಸಿಗೆಯಲ್ಲಿ ಗಂಟೆಗಟ್ಟಲೆ ಮಲಗಿದರೂ ನಿದ್ರೆ ಬರ್ತಿಲ್ವಾ? ಇಲ್ಲಿವೆ ಸುಲಭ ಪರಿಹಾರಗಳು!

0

ಇಂದಿನ ಬ್ಯುಸಿ ಜೀವನಶೈಲಿ, ತಡರಾತ್ರಿವರೆಗೆ ಮೊಬೈಲ್ ಬಳಕೆ, ಅನಿಯಮಿತ ಆಹಾರ ಪದ್ಧತಿ ಹಾಗೂ ಒತ್ತಡದ ಕಾರಣದಿಂದ ಅನೇಕರು ನಿದ್ರೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಉತ್ತಮ ನಿದ್ರೆ ಕೇವಲ ಆಯಾಸವನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ಮನಸ್ಥಿತಿ, ಏಕಾಗ್ರತೆ ಹಾಗೂ ದೈನಂದಿನ ಕಾರ್ಯಕ್ಷಮತೆಯ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಹೀಗಾಗಿ ಉತ್ತಮ ನಿದ್ರೆಗಾಗಿ ಈ 8 ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಸಹಾಯಕವಾಗಬಹುದು.

ಉತ್ತಮ ನಿದ್ರೆಗಾಗಿ ಈ ಅಭ್ಯಾಸಗಳನ್ನು ಪಾಲಿಸಿ:

  • ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಏಳಿ: ನಿಯಮಿತ ನಿದ್ರೆಯ ಸಮಯ ದೇಹದ ನೈಸರ್ಗಿಕ ಬಾಡಿ ಕ್ಲಾಕ್ ಸಮತೋಲನದಲ್ಲಿರಲು ಸಹಾಯ ಮಾಡುತ್ತದೆ.

  • ಮಲಗುವ ಮುನ್ನ ಮೊಬೈಲ್ ಬಳಕೆ ಕಡಿಮೆ ಮಾಡಿ: ಮಲಗುವ 30–60 ನಿಮಿಷಗಳ ಮೊದಲು ಮೊಬೈಲ್, ಟಿವಿ ಮತ್ತು ಲ್ಯಾಪ್‌ಟಾಪ್ ಬಳಕೆ ಕಡಿಮೆ ಮಾಡುವುದು ಉತ್ತಮ.

  • ರಾತ್ರಿ ಹಗುರವಾದ ಆಹಾರ ಸೇವಿಸಿ: ಮಲಗುವ ಮುನ್ನ ಅತಿಯಾಗಿ ಅಥವಾ ಭಾರವಾದ ಆಹಾರ ಸೇವಿಸುವುದನ್ನು ತಪ್ಪಿಸಿ.

  • ಸಂಜೆಯ ಬಳಿಕ ಚಹಾ-ಕಾಫಿ ಕಡಿಮೆ ಮಾಡಿ: ಕ್ಯಾಫೀನ್ ಕೆಲವರಲ್ಲಿ ನಿದ್ರೆಯನ್ನು ತಡಮಾಡಬಹುದು.

  • ಹಗಲಿನಲ್ಲಿ ವ್ಯಾಯಾಮ ಮಾಡಿ: ನಿಯಮಿತ ವಾಕಿಂಗ್ ಅಥವಾ ವ್ಯಾಯಾಮ ನಿದ್ರೆಯ ಗುಣಮಟ್ಟ ಸುಧಾರಿಸಲು ಸಹಾಯ ಮಾಡಬಹುದು.

  • ಮಲಗುವ ಕೋಣೆಯನ್ನು ಆರಾಮದಾಯಕವಾಗಿಡಿ: ಶಾಂತ, ಕತ್ತಲೆ ಮತ್ತು ತಂಪಾದ ವಾತಾವರಣ ಉತ್ತಮ ನಿದ್ರೆಗೆ ನೆರವಾಗುತ್ತದೆ.

  • ಮಲಗುವ ಮುನ್ನ ಮನಸ್ಸನ್ನು ಶಾಂತಗೊಳಿಸಿ: ಪುಸ್ತಕ ಓದುವುದು ಅಥವಾ ನಿಧಾನವಾದ ಸಂಗೀತ ಕೇಳುವುದು ಒತ್ತಡ ಕಡಿಮೆ ಮಾಡಲು ಸಹಾಯ ಮಾಡಬಹುದು.

  • ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ರೆ ಮಾಡಬೇಡಿ: ದೀರ್ಘ ಹಗಲಿನ ನಿದ್ರೆ ರಾತ್ರಿ ನಿದ್ರೆಗೆ ಅಡ್ಡಿಯಾಗಬಹುದು.

    ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ನಿರಂತರವಾಗಿ ನಿದ್ರೆ ಬರದಿರುವುದು, ರಾತ್ರಿ ಪದೇಪದೇ ಎಚ್ಚರವಾಗುವುದು, ಜೋರಾಗಿ ಗೊರಕೆ ಹೊಡೆಯುವುದು, ಉಸಿರಾಟದಲ್ಲಿ ತೊಂದರೆ ಉಂಟಾಗುವುದು ಅಥವಾ ಹಗಲಿನಲ್ಲಿ ಅತಿಯಾದ ನಿದ್ರೆ ಹಾಗೂ ಆಯಾಸ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಗುರು ರಾಘವೇಂದ್ರ ಸ್ವಾಮಿ ಪವಾಡ? 7 ತಿಂಗಳ ಬಳಿಕ ಮತ್ತೆ ಎದ್ದು ನಡೆದಾಡಿದ MBBS ವಿದ್ಯಾರ್ಥಿನಿ!

0

ಹಾವೇರಿ: ಕಳೆದ ಏಳು ತಿಂಗಳಿಂದ ಅಪರೂಪದ ಆಟೋ ಇಮ್ಯೂನ್ ಸಮಸ್ಯೆಯಿಂದ ಕೈಕಾಲುಗಳ ಸ್ವಾಧೀನ ಕಳೆದುಕೊಂಡು ವೀಲ್‌ಚೇರ್‌ಗೆ ಸೀಮಿತವಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬರು ಇದೀಗ ಮತ್ತೆ ನಡೆದಾಡುತ್ತಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ಗಮನ ಸೆಳೆದಿದೆ.

ಕುಟುಂಬಸ್ಥರು ಇದನ್ನು ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹವೆಂದು ನಂಬಿದ್ದು, ವೈದ್ಯಕೀಯ ಚಿಕಿತ್ಸೆ ಕೂಡ ಈ ಅವಧಿಯಲ್ಲಿ ಮುಂದುವರಿದಿತ್ತು.

ಹಾವೇರಿ ತಾಲೂಕಿನ ನೆಗಳೂರು ಗ್ರಾಮದ 22 ವರ್ಷದ ನಿವೇದಿತಾ ಶಿವಪ್ಪ ನೆಗಳೂರು ಈ ವಿದ್ಯಾರ್ಥಿನಿ. ಕೆಲವು ತಿಂಗಳ ಹಿಂದೆ ಅವರಿಗೆ ಪದೇ ಪದೇ ಮೂರ್ಚೆ ಹೋಗುವ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ಆರೋಗ್ಯ ಸ್ಥಿತಿ ಹದಗೆಟ್ಟು ಕೈಕಾಲುಗಳ ಸ್ವಾಧೀನ ಕಳೆದುಕೊಂಡು ವೀಲ್‌ಚೇರ್ ಬಳಸುವ ಪರಿಸ್ಥಿತಿ ಎದುರಾಗಿತ್ತು.

ವೈದ್ಯಕೀಯ ಪರೀಕ್ಷೆ ವೇಳೆ ಆಟೋ ಇಮ್ಯೂನ್ ಸಮಸ್ಯೆಯಿಂದ ಉಂಟಾದ ಪ್ರತಿಕಾಯಗಳು (ಆ್ಯಂಟಿಬಾಡಿ) ಮೆದುಳಿನ ಮೇಲೆ ಪರಿಣಾಮ ಬೀರುತ್ತಿರುವುದು ಪತ್ತೆಯಾಗಿತ್ತು. ಕುಟುಂಬಸ್ಥರು ಹಾವೇರಿ ಹಾಗೂ ಹುಬ್ಬಳ್ಳಿಯ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದು, ಸುಮಾರು ಐದರಿಂದ ಆರು ಲಕ್ಷ ರೂಪಾಯಿ ವೆಚ್ಚ ಮಾಡಿದ್ದರು. ವೈದ್ಯರ ಸಲಹೆಯಂತೆ ಚಿಕಿತ್ಸೆ ಮುಂದುವರಿದಿದ್ದರೂ ಆರಂಭದಲ್ಲಿ ನಿರೀಕ್ಷಿತ ಚೇತರಿಕೆ ಕಾಣಿಸಿರಲಿಲ್ಲ.

ಕುಟುಂಬಸ್ಥರು ನಿವೇದಿತಾಳನ್ನು ಹೊಸರಿತ್ತಿ ರಾಯರ ಮಠಕ್ಕೆ ಕರೆದೊಯ್ದಿದ್ದರು. ಅಲ್ಲಿ ನಡೆದ 100ನೇ ಸುಶೀಲೇಂದ್ರ ತೀರ್ಥ ಆರಾಧನೆಯ ಸಂದರ್ಭದಲ್ಲಿ ಸುಭುದೇಂದ್ರ ತೀರ್ಥ ಸ್ವಾಮೀಜಿಗಳು ಮಂತ್ರಾಕ್ಷತೆ ಮತ್ತು ರಾಯರ ಭಾವಚಿತ್ರ ನೀಡಿ ಐದು ವಾರಗಳ ಕಾಲ ರಾಯರ ಮಠಕ್ಕೆ ನಡೆದುಕೊಳ್ಳುವಂತೆ ಸಲಹೆ ನೀಡಿದ್ದರು.

ಕುಟುಂಬದ ಹೇಳಿಕೆಯ ಪ್ರಕಾರ, ಮೂರು ವಾರಗಳಲ್ಲೇ ನಿವೇದಿತಾಳ ಆರೋಗ್ಯದಲ್ಲಿ ಸುಧಾರಣೆ ಕಾಣಿಸಿಕೊಂಡಿದ್ದು, ಐದು ವಾರಗಳ ಹರಕೆಯ ಬಳಿಕ ಅವರು ಸ್ವತಃ ನಡೆಯುವ ಮಟ್ಟಿಗೆ ಚೇತರಿಸಿಕೊಂಡಿದ್ದಾರೆ.

ಮಗಳ ಆರೋಗ್ಯದಲ್ಲಿ ಕಂಡುಬಂದ ಬದಲಾವಣೆಯಿಂದ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದು, ಇದನ್ನು ಗುರು ರಾಘವೇಂದ್ರ ಸ್ವಾಮಿಗಳ ಕೃಪೆ ಮತ್ತು ಆಶೀರ್ವಾದವೆಂದು ನಂಬಿದ್ದಾರೆ. ಚಿಕಿತ್ಸೆ ಮತ್ತು ಚೇತರಿಕೆಯ ಬಳಿಕ ಅವರು ಮಂತ್ರಾಲಯಕ್ಕೂ ಭೇಟಿ ನೀಡುವಂತೆ ಸೂಚನೆ ದೊರೆತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಜನರ ಸಮಸ್ಯೆಗೆ ಸ್ಪಂದಿಸದಿದ್ದರೆ ಸಹಿಸುವುದಿಲ್ಲ: ಕೊಪ್ಪಳದಲ್ಲಿ ಅಧಿಕಾರಿಗಳಿಗೆ ಸಚಿವ ತಂಗಡಗಿ ತರಾಟೆ

0

ಕೊಪ್ಪಳ: ಗ್ರಾಮೀಣ ಜನತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡದಿದ್ದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕನಕಗಿರಿ ಶಾಸಕ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದರು.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬೊಮ್ಮಾಸಾಗರ ತಾಂಡದಲ್ಲಿ ವಿಬಿ-ಜಿ ರಾಮ್-ಜಿ ಯೋಜನೆಯಡಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದ ಅವರು, ಮಳೆ ಕೊರತೆಯ ಈ ಸಂದರ್ಭದಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವುದು ಅಧಿಕಾರಿಗಳ ಮೊದಲ ಆದ್ಯತೆಯಾಗಬೇಕು ಎಂದು ಸೂಚಿಸಿದರು.

ವಿಬಿ-ಜಿ ರಾಮ್-ಜಿ ಯೋಜನೆಯಡಿ ಲಭ್ಯವಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿ ಹೆಚ್ಚಿನ ಜನರಿಗೆ ಉದ್ಯೋಗ ಒದಗಿಸುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು. ಉದ್ಯೋಗದ ಕೊರತೆಯಿಂದ ಗ್ರಾಮೀಣ ಜನರು ಗುಳೆ ಹೋಗುವ ಪರಿಸ್ಥಿತಿ ಬರಬಾರದು ಎಂದು ಹೇಳಿದರು.

ಕಾರ್ಯಕ್ರಮದ ವೇಳೆ ಗ್ರಾಮಕ್ಕೆ ದಿನಕ್ಕೆ ಒಂದೇ ಬಸ್ ಸಂಚಾರವಿರುವುದರಿಂದ ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಜೊತೆಗೆ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಸಚಿವರ ಗಮನಕ್ಕೆ ತಂದರು.

ಇದರಿಂದ ಅಸಮಾಧಾನಗೊಂಡ ಸಚಿವ ತಂಗಡಗಿ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, “ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಅಧಿಕಾರಿಗಳಾಗಿ ಇಲ್ಲಿ ಏಕೆ ಇರಬೇಕು? ಮತ್ತೆ ಇಂತಹ ದೂರುಗಳು ಬಂದರೆ ಅಮಾನತು ಕ್ರಮ ಕೈಗೊಳ್ಳಲಾಗುವುದು” ಎಂದು ಖಡಕ್ ಎಚ್ಚರಿಕೆ ನೀಡಿದರು.

ಅಧಿಕಾರಿಗಳು ಸ್ಪಂದಿಸದಿದ್ದರೆ ಸಾರ್ವಜನಿಕರು ನೇರವಾಗಿ ತಮ್ಮನ್ನು ಸಂಪರ್ಕಿಸುವಂತೆ ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್, ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸಂತ್ ಗೌಡ, ತಹಸೀಲ್ದಾರ್ ಚಂದ್ರಶೇಖರ್ ಗಾಳಿ ಸೇರಿದಂತೆ ಹಲವು ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ: ಮೃತರ ಸಂಖ್ಯೆ 40ಕ್ಕೆ ಏರಿಕೆ, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

0

ಜಕಾರ್ತಾ: ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿ ಶನಿವಾರ ಮುಂಜಾನೆ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಮೃತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.

ಭೂಕಂಪದ ಪರಿಣಾಮ ಹಲವು ಮನೆಗಳು ಹಾಗೂ ಕಟ್ಟಡಗಳು ಕುಸಿದು ಭಾರೀ ಹಾನಿಯಾಗಿದೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಇಂಡೋನೇಷ್ಯಾ ಸಮಯ ಬೆಳಿಗ್ಗೆ 5:58ಕ್ಕೆ ಫ್ಲೋರ್ಸ್ ಪ್ರದೇಶದಲ್ಲಿ ಭೂಮಿಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.

ಭೂಕಂಪದ ತೀವ್ರತೆಗೆ ಕಟ್ಟಡಗಳು ಕುಸಿಯುತ್ತಿದ್ದಂತೆ ಜನರು ಭಯಭೀತರಾಗಿ ರಸ್ತೆಗಳತ್ತ ಓಡಿ ಜೀವ ಉಳಿಸಿಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಭೂಕಂಪದ ಬಳಿಕ ಇಂಡೋನೇಷ್ಯಾದ ಹವಾಮಾನಶಾಸ್ತ್ರ ಮತ್ತು ಭೂಭೌತಶಾಸ್ತ್ರ ಸಂಸ್ಥೆ (BMKG) ಸುನಾಮಿ ಅಲೆಗಳ ಸಾಧ್ಯತೆಯ ಬಗ್ಗೆ ಮುನ್ನೆಚ್ಚರಿಕೆ ನೀಡಿತ್ತು. ಕರಾವಳಿ ಪ್ರದೇಶದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿತ್ತು. ಬಳಿಕ ಪರಿಸ್ಥಿತಿ ಪರಿಶೀಲಿಸಿದ ಅಧಿಕಾರಿಗಳು ಸುನಾಮಿ ಎಚ್ಚರಿಕೆಯನ್ನು ಹಿಂತೆಗೆದುಕೊಂಡರು.

ಫ್ಲೋರ್ಸ್ ದ್ವೀಪವು ಭೂಕಂಪ ಪೀಡಿತ ಪ್ರದೇಶವಾಗಿದ್ದು, 1992ರಲ್ಲಿ ಇದೇ ಭಾಗದಲ್ಲಿ 7 ತೀವ್ರತೆಯ ಭೂಕಂಪ ಸಂಭವಿಸಿ ಸುಮಾರು 2,500 ಮಂದಿ ಮೃತಪಟ್ಟಿದ್ದರು. ಈಗಿನ ಭೂಕಂಪದ ಬಳಿಕ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಹಾನಿಯ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.