ವಿಜಯಸಾಕ್ಷಿ ಸುದ್ದಿ, ನರಗುಂದ: ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶನಿವಾರ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಸರ್ಕಾರಿ ನೌಕರರಾದ ನಾವು ಸಾರ್ವಜನಿಕ ಸೇವೆಯನ್ನು ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ನಿರ್ವಹಿಸುವುದರ ಜತೆಗೆ ದೀನದಲಿತರು ಹಾಗೂ ದುರ್ಬಲ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಬೇಕು ಎಂದರು.
ಸಹಾಯಕ ನಿರ್ದೇಶಕ (ಅಕ್ಷರ ದಾಸೋಹ) ಎಂ.ಎಸ್. ಅಸುಂಡಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದರು. ಸ್ವಾತಂತ್ರ್ಯಾನಂತರ ದೇಶವನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ ನಾಯಕರ ಕೊಡುಗೆಯನ್ನು ನೆನಪಿಸಿಕೊಂಡು ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು.
ಬಳಿಕ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಕೇಂದ್ರ ಸರ್ಕಾರದ ನಿರ್ದೇಶನದಂತೆ **‘ನಶಾ ಮುಕ್ತ ಭಾರತ’**ಕ್ಕಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಂತೋಷಕುಮಾರ್ ಪಾಟೀಲ್, ಸಹಾಯಕ ನಿರ್ದೇಶಕ (ಅಕ್ಷರ ದಾಸೋಹ) ಎಂ.ಎಸ್. ಅಸುಂಡಿ, ಯೋಜನಾಧಿಕಾರಿ ಎಂ.ಎಂ. ನಿಟ್ಟಾಲಿ, ತಾಲೂಕು ಪಂಚಾಯಿತಿ ಕಚೇರಿ ಸಿಬ್ಬಂದಿ, ವ್ಹಿಬಿಜಿರಾಮ್ ಸಿಬ್ಬಂದಿ, ಎನ್‌ಆರ್‌ಎಂಎಂ ಹಾಗೂ ವಿಆರ್‌ಡಬ್ಲ್ಯೂ ಸಿಬ್ಬಂದಿ ಉಪಸ್ಥಿತರಿದ್ದರು.



