Home Blog Page 156

ಕೊಟ್ಟಿಗೆಪಾಳ್ಯದಲ್ಲಿ ಕಸದ ರಾಶಿಗೆ ಬೆಂಕಿ, ನೀಲಗಿರಿ ತೋಪಿಗೆ ವ್ಯಾಪಿಸಿದ ಅಗ್ನಿ ಜ್ವಾಲೆ!

0

ಬೆಂಗಳೂರು:- ಮಾಗಡಿ ರೋಡ್–ಮಾಲಗಾಳ ರಸ್ತೆಯ ಕೊಟ್ಟಿಗೆಪಾಳ್ಯದಲ್ಲಿ ಕಸದ ರಾಶಿಗೆ ಬೆಂಕಿ ಬಿದ್ದು, ಪಕ್ಕದಲ್ಲಿದ್ದ ನೀಲಗಿರಿ ತೋಪಿಗೆ ಬೆಂಕಿ ವ್ಯಾಪಿಸಿದ ಘಟನೆ ನಡೆದಿದೆ.

ನೀಲಗಿರಿ ತೋಪಿನ ಸಮೀಪದಲ್ಲೇ ಇದ್ದ ಕಸದ ರಾಶಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಗಾಳಿಯ ತೀವ್ರತೆಯಿಂದ ಬೆಂಕಿಯ ಜ್ವಾಲೆ ಹೆಚ್ಚಾಗಿ ತೋಪಿಗೂ ಹರಡಿತು. ಇದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು. ವಿಷಯ ತಿಳಿದ ತಕ್ಷಣ ಕೊಟ್ಟಿಗೆಪಾಳ್ಯದ ಸ್ಥಳೀಯರು ಸ್ವಯಂಪ್ರೇರಿತವಾಗಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿ, ಅಗ್ನಿ ಅವಘಡವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದ್ದಾರೆ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಅಕ್ರಮವಾಗಿ ನೀರಿನ ಬಾಟಲ್ ಮಾರಾಟ; ರೈಲಿನಲ್ಲೇ ಯುವಕನ ಮೇಲೆ ಹಲ್ಲೆ! Video Viral

0

ಬೆಂಗಳೂರು:- ನೀರಿನ ಬಾಟಲ್ ಮಾರಾಟ ವಿಚಾರಕ್ಕೆ ರೈಲಿನಲ್ಲಿ ಯುವಕನ ಮೇಲೆಯೇ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಹಾಸನ ಮಾರ್ಗದ ರೈಲಿನಲ್ಲಿ ಈ ಅಮಾನವೀಯ ಘಟನೆ ಜರುಗಿದೆ. ಗೊಮ್ಮಟೇಶ್ವರ ರೈಲು ನಿಲ್ದಾಣದಲ್ಲಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಬಾಟಲ್ ಗಳನ್ನ ಅಕ್ರಮವಾಗಿ ಕೊಡ್ತಾನೆ ಎಂಬ ವಿಚಾರಕ್ಕೆ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ರೈಲಿನ ಗುತ್ತಿಗೆ ಪುಡ್ ರಿಲವರಿ ಸಿಬ್ಬಂದಿಯಿಂದ ಈ ಹಲ್ಲೆ ನಡೆದಿದೆ. ಅಲ್ಲದೇ ಎಲ್ಲಾ ನೀರಿನ ಬಾಟಲಿಗಳನ್ನು ಹೊರಗೆ ಎಸೆಯುವಂತೆ ಧಮ್ಕಿ ಹಾಕಿದ್ದಾನೆ.

ಸ್ಥಳೀಯ ಹಾಗೂ ಆರ್ ಪಿಎಫ್ ಸಿಬ್ಬಂದಿಯ ಗಮನಕ್ಕೆ ತರದೆ ಗುತ್ತಿಗೆ ಸಿಬ್ಬಂದಿಯಿಂದ ಹಲ್ಲೆ ನಡೆಸಲಾಗಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರು| ಕುಡಿದ ಮತ್ತಿನಲ್ಲಿ ಪಾನಿಪುರಿ ಅಂಗಡಿಗೆ ಕಾರು ನುಗ್ಗಿಸಿದ ಚಾಲಕ!

0

ಬೆಂಗಳೂರು:- ಚಾಲಕನೋರ್ವ ಕುಡಿದ ಮತ್ತಿನಲ್ಲಿ ಪಾನಿಪುರಿ ಅಂಗಡಿಗೆ ಕಾರು ನುಗ್ಗಿಸಿದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಬಿ ಇ ಎಲ್ ಲೇಔಟ್ ನಲ್ಲಿರುವ ಪಾವನಿ ಚಾಟ್ಸ್ ಗೆ ಕಾರು ನುಗ್ಗಿದೆ. KA 03 NE 1782 ನೋಂದಣಿ ಸಂಖ್ಯೆಯ ಕಾರು ಇದಾಗಿದ್ದು, ಕುಡಿದ ಮತ್ತಿನಲ್ಲಿ ಚಾಲಕ ಕಾರು ಚಾಲನೆ ಮಾಡಿರೋ ಆರೋಪ ಕೇಳಿಬಂದಿದೆ. ಕಳೆದ ರಾತ್ರಿ 09 ಗಂಟೆಯ ಸುಮಾರಿಗೆ ಈ ಘಟನೆ ಜರುಗಿದೆ.

ಕಾರು ಗುದ್ದಿದ್ದಲ್ಲದೇ ಚಾಟ್ಸ್ ಮಾಲೀಕರಿಗೆ ಅವಾಜ್ ಹಾಕಿರೋ ಆರೋಪ ಕೇಳಿಬಂದಿದೆ. ಘಟನೆ ಬೆನ್ನಲ್ಲೇ ಕಾಮಾಕ್ಷಿಪಾಳ್ಯ ಸಂಚಾರ ವಿಭಾಗ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು| ಚಲಿಸುತ್ತಿದ್ದ ಕಾರು ನಡುರಸ್ತೆಯಲ್ಲೇ ಬೆಂಕಿಗಾಹುತಿ; ಚಾಲಕ ಪಾರು!

0

ಬೆಂಗಳೂರು:- ನಡು‌ ರಸ್ತೆಯಲ್ಲಿಯೇ ಕಾರೊಂದು ಹೊತ್ತಿ ಉರಿದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.

ಯಶವಂತಪುರ ಕಡೆಯಿಂದ ಮಲ್ಲೇಶ್ವರಂ ನ ಸರ್ಕಲ್ ಮಾರಮ್ಮ ದೇವಸ್ಥಾನದ ಕಡೆಗೆ ಹೋಗುತ್ತಿದ್ದ ಕಾರು, ಇದ್ದಕ್ಕಿದ್ದಂತೆ ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಘಟನೆಗೂ ಮುನ್ನ ಕಾರಿನ ಒಳಬಾಗದಲ್ಲಿ ಹೊಗೆ ಕಾಣಿಸಿ ಕೊಳ್ಳುತ್ತಿದ್ದಂತೆ ಎಚ್ಚೆತ್ತ ಚಾಲಕ, ತಕ್ಷಣ ಕಾರಿನಿಂದ ಕೆಳಗಡೆ ಇಳಿದಿದ್ದಾನೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯವಾಗಿಲ್ಲ. ಸ್ಥಳೀಯರು ಕೂಡಲೇ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಸೀರಿಯಲ್ ಕಳ್ಳನ ಬೇಟೆ: ಗದಗ ಪೊಲೀಸರ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಗೆ ಸಿಕ್ಕಿಬಿದ್ದ ₹3.35 ಲಕ್ಷ ಚಿನ್ನಾಭರಣ

0

ಗದಗ: ಗ್ರಾಮೀಣ ಠಾಣೆಯ ಪೊಲೀಸರು ಮನೆ ಕಳ್ಳತನ ಪ್ರಕರಣವನ್ನು ತ್ವರಿತವಾಗಿ ಭೇದಿಸಿ, ಆರೋಪಿಯನ್ನು ಬಂಧಿಸಿ ₹3.35 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

2025 ಡಿಸೆಂಬರ್ 15ರಂದು ಹುಲಕೋಟಿ ಆಶ್ರಯ ಕಾಲೋನಿಯ ನಿವಾಸಿ ಹುಸೇನಸಾಬ್ ತಂದೆ ಹೊನ್ನೂರಸಾಬ್ ನದಾಪ್ (50) ಅವರು ಮನೆಯನ್ನು ಕೀಲಿ ಹಾಕಿ ಸ್ನೇಹಿತರ ಮನೆಯಲ್ಲಿ ಬೀಗತನ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಕಳ್ಳತನ ನಡೆದಿತ್ತು. ಮಧ್ಯಾಹ್ನ 1.45 ರಿಂದ ಸಂಜೆ 6.30ರ ನಡುವೆ ಕಳ್ಳರು ಮನೆ ಬಾಗಿಲಿನ ಕೀಲಿಯನ್ನು ಬಳಸಿ ಒಳನುಗ್ಗಿ, ಬೆಡ್‌ರೂಮ್‌ನಲ್ಲಿದ್ದ ಟ್ರೆಜರಿ ಚಾವಿಯನ್ನು ಪಡೆದು ಲಾಕರ್ ತೆರೆಯಲಾಗಿದೆ. ಇದರಿಂದ 23 ಗ್ರಾಂ ತೂಕದ ಚಿನ್ನಾಭರಣಗಳು (ಅಂದಾಜು ₹2.30 ಲಕ್ಷ) ಹಾಗೂ ₹61,000 ನಗದು ಹಣ ಕಳವಾಗಿತ್ತು.

ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಗುನ್ನೆ ಸಂಖ್ಯೆ 278/2025 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 331(3), 305 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ IPS ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹಾಂತೇಶ ಸಜ್ಜನ್ ಮತ್ತು ಡಿಎಸ್‌ಪಿ ಮುರ್ತುಜಾ ಖಾದ್ರಿ ಮಾರ್ಗದರ್ಶನದಲ್ಲಿ, ಪಿಐ ಸಿದ್ದರಾಮೇಶ್ವರ ಗಡೇದ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿತು. ತಂಡದಲ್ಲಿ ಪಿಎಸ್‌ಐ ಎಸ್.ಬಿ. ಕವಲೂರ್, ಸಿಬ್ಬಂದಿಗಳಾದ ಗಂಗಾಧರ ಮಜ್ಜಿಗೆ, ಪ್ರಕಾಶ್ ಗಾಣಿಗೇರ, ಮೆಹಬೂಬ್ ವಡ್ಡಟ್ಟಿ, ಅನಿಲ್ ಬನ್ನಿಕೊಪ್ಪ ಹಾಗೂ ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ್ ಬೂದಿಹಾಳ್ ಮತ್ತು ಸಂಜೀವ್ ರವರು ಇದ್ದರು.

ವೈಜ್ಞಾನಿಕ ತನಿಖೆ ಮತ್ತು ತಾಂತ್ರಿಕ ಮಾಹಿತಿ ಆಧಾರದ ಮೇಲೆ ಆರೋಪಿ ವಿ. ಮಹೇಶ್ ತಂದೆ ಗುರುಸ್ವಾಮಿ (32), ಹೊಸಪೇಟೆ ತಾಲ್ಲೂಕಿನ ನಿವಾಸಿಯನ್ನು ಬಂಧಿಸಲಾಗಿದೆ. ವಿಚಾರಣೆಯಲ್ಲಿ ಹುಲಕೋಟಿ ಹಾಗೂ ಲಕ್ಕುಂಡಿಯಲ್ಲಿನ ಇನ್ನೊಂದು ಮನೆ ಕಳ್ಳತನ ಪ್ರಕರಣವನ್ನೂ ಒಪ್ಪಿಕೊಂಡಿದ್ದಾನೆ.

ಎರಡೂ ಪ್ರಕರಣಗಳಿಂದ ಒಟ್ಟು 61 ಗ್ರಾಂ ತೂಕದ ಚಿನ್ನಾಭರಣಗಳು (ಅಂದಾಜು ಮೌಲ್ಯ ₹3,35,000) ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಬಳ್ಳಾರಿ, ಹಾವೇರಿ, ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಗದಗ ಗ್ರಾಮೀಣ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರಮದಿಂದ ಈ ಯಶಸ್ವಿ ಕಾರ್ಯಾಚರಣೆ ಸಾಧ್ಯವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಗೆ ಪೊಲೀಸ್ ತಂಡವನ್ನು ಎಸ್‌ಪಿ ರೋಹನ್ ಜಗದೀಶ್ ಅಭಿನಂದಿಸಿದ್ದಾರೆ. ಸಾರ್ವಜನಿಕರು ಮನೆಯನ್ನು ಖಾಲಿ ಮಾಡುವಾಗ ಹೆಚ್ಚಿನ ಭದ್ರತೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಸಮನ್ವಯತೆಯೊಂದಿಗೆ ಆರೋಗ್ಯಕರ ಜೀವನ ನಡೆಸಿ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಬಳಗಾನೂರ ಶ್ರೀ ಶರಣರ ಮಠದಲ್ಲಿ ಮಹಾತ್ಮರ ಜೀವನ-ದರ್ಶನ ಪ್ರವಚನ ಪ್ರಾರಂಭೋತ್ಸವ ಜರುಗಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಡ್ನೂರ-ರಾಜೂರ-ಗದಗ ಬೃಹನ್ಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮನುಷ್ಯನ ಜೀವನದ ಕೊನೆಯ ಹಂತವೇ ಮರಣವಾಗಿದೆ. ಅವನ ಸಾವಿನ ಜೊತೆಗೆ ಯಾವುದೂ ಬರುವುದಿಲ್ಲ. ಅವನ ದೇಹತ್ಯಾಗದ ನಂತರ ಅವನ ಸನ್ನಡತೆ, ಸದಾಚಾರ, ಪರೋಪಕಾರ, ದಾನ, ಧರ್ಮ ಮಾರ್ಗದ ಬದುಕಿನ ಮೌಲ್ಯಗಳು ಉಳಿಯುತ್ತವೆ. ಆ ದಿಶೆಯಲ್ಲಿ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸರ್ವರಲ್ಲಿ ಸಮಾನತೆ, ಸಮನ್ವಯತೆ ಬೆಳೆಸಿಕೊಂಡು ಆರೋಗ್ಯಕರ ಜೀವನ ನಿರ್ವಹಿಸಬೇಕೆಂದರು.

ನಿವೃತ್ತ ಉಪನಿರ್ದೇಶಕ ಡಿ.ಐ. ಅಸುಂಡಿ ಮಾತನಾಡಿ, ಶ್ರೀ ಚನ್ನವೀರ ಶರಣರ ಪ್ರಭಾವ ಹಾಗೂ ಅವರ ಒಡನಾಟವನ್ನು ಸ್ಮರಿಸಿದರು. ಬಳೂಟಿಗಿಯ ಸಿದ್ದಯ್ಯ ಶಾಸ್ತ್ರಿಗಳಿಂದ ಪ್ರವಚನ ಸೇವೆ ಜರುಗಿತು. ಮುತ್ತು ಗದಗ, ಶರಣು ಕೆ. ಹಿರೇಮಠ, ಸೋಮನಾಳ ಇವರಿಂದ ಸಂಗೀತಸೇವೆ ಜರುಗಿತು.

ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಿ.ಐ. ಅಸುಂಡಿ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಸವಡಿ ಗ್ರಾಮದ ಎಂ.ಬಿ. ಪರಡ್ಡಿ ಕುಟುಂಬ ವರ್ಗದವರಿಂದ ಹಾಗೂ ಸವಡಿ ಗ್ರಾಮದ ಸಮಸ್ತ ಸದ್ಭಕ್ತರಿಂದ ಶ್ರೀ ಶಿವಶಾಂತವೀರ ಶರಣರ ತುಲಾಭಾರದ ಭಕ್ತಿಸೇವೆ ಜರುಗಿತು. ಬಳಗಾನೂರಿನ ವೇದಾ ಶ್ರೀಧರ ಬಡಿಗೇರ, ವಿರಾಜ್ ಶ್ರೀಧರ ಬಡಿಗೇರ ಇವರ ನಾಣ್ಯ ತುಲಾಭಾರ ಹಾಗೂ ತೆಂಗಿನಕಾಯಿ ತುಲಾಭಾರದ ಭಕ್ತಿಸೇವೆಯ ಹಮ್ಮಿನಿಯನ್ನು ಶ್ರೀಶರಣರಿಗೆ ಸಮರ್ಪಿಸಿದರು.

ಸವಡಿಯ ಶ್ರೀಕಾಳಿಕಾ ಭಜನಾ ಸಂಘದವರು ಭಜನಾ ಪದಗಳನ್ನು ಪ್ರಸ್ತುತಪಡಿಸಿದರು. ತಾ.ಪಂ ಮಾಜಿ ಅಧ್ಯಕ್ಷ ವಿ.ಎಸ್. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್. ಪುರಾಣಿಕಮಠ ಸ್ವಾಗತಿಸಿದರು. ಪ್ರಾ. ಪ್ರಕಾಶ ಬರದೂರ, ಶಿವಲಿಂಗಶಾಸ್ತ್ರಿ ಸಿದ್ದಾಪೂರ ನಿರೂಪಿಸಿದರು. ಬಿ.ವಾಯ್. ಡೊಳ್ಳಿನ ವಂದಿಸಿದರು.

ನೇತೃತ್ವ ವಹಿಸಿದ್ದ ಶ್ರೀ ಶಿವಶಾಂತವೀರ ಶರಣರು ಮಾತನಾಡಿ, ಮನುಷ್ಯ ಜನ್ಮ ಶ್ರೇಷ್ಠವಾದದ್ದು. ಮನುಷ್ಯ ಮಹಾತ್ಮರ, ದಾರ್ಶನಿಕರ ದಾರಿಯಲ್ಲಿ ಸಾಗಿ ನಮ್ಮಲ್ಲಿಯ ಅಜ್ಞಾನ ದೂರೀಕರಿಸಿ ಸುಜ್ಞಾನದ ಬೆಳಕನ್ನು ಹೊಂದುವುದೇ ಸತ್ಸಂಗದ ಉದ್ದೇಶವಾಗಿದೆ. ಶರಣರ ಪುಣ್ಯಸ್ಮರಣೆ, ಶ್ರೀಮಠದ ಜಾತ್ರೆ ಎನ್ನುವುದು ನೆಪ ಮಾತ್ರ. ಅದರಡಿಯಲ್ಲಿ ಆಧ್ಯಾತ್ಮಿಕ ಶರಣರ ಸಂದೇಶಗಳನ್ನು ಜನರಲ್ಲಿ ತರುವುದಾಗಿದೆ ಎಂದರು.

ಕಲಾವಿದರನ್ನು ಬೆಳೆಸಿ, ಕಲೆಯನ್ನು ಉಳಿಸಿ: ನಟಿ ಭಾರತಿ ವಿಷ್ಣುವರ್ಧನ್

0

ವಿಜಯಸಾಕ್ಷಿ ಸುದ್ದಿ, ಬಾಗಲಕೋಟ: ಕಲಾವಿದರನ್ನು ಬೆಳೆಸಿದಾಗ ಕಲೆಯೂ ಉಳಿಯುತ್ತದೆ. ಧಾರ್ಮಿಕ, ಆಧ್ಯಾತ್ಮಿಕ ತಾಣದಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ಸಂತಸವಾಗಿದೆ. ನನ್ನೆಲ್ಲ ಸಾಧನೆಗೆ ವಿಷ್ಣುವರ್ಧನ ಕಾರಣ. ಅವರಿಗೆ ಈ ಪ್ರಶಸ್ತಿ ಸಲ್ಲಬೇಕು ಎಂದು ಬಹುಭಾಷಾ ಹಿರಿಯ ಚಲನಚಿತ್ರ ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು.

ಅವರು ಸಿದ್ಧನಕೊಳ್ಳದಲ್ಲಿ ಮೂರು ದಿನಗಳ ಕಾಲ ನಡೆದ ಶ್ರೀ ಸಿದ್ದಶ್ರೀ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2026ರ ಕಾರ್ಯಕ್ರಮದ 2ನೇ ದಿನ `ಶ್ರೀ ಸಿದ್ಧಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಸಿದ್ದನಕೊಳ್ಳದ ಶ್ರೀಮಠವು ನಾಡಿನಾದ್ಯಂತ ಯುವ ಕಲಾವಿದರನ್ನು ಬೆಳೆಸಿ ಪೋಷಿಸುತ್ತಿದೆ. ಅದರಲ್ಲೂ ಉತ್ತರಕರ್ನಾಟಕದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಹಿರಿಯ ರಂಗಭೂಮಿ ಕಲಾವಿದೆ ಮಾಲತಿ ಸುಧೀರ್ ಅವರಿಗೆ ರಾಜ್ಯ ಪ್ರಶಸ್ತಿಯನ್ನು ಶ್ರೀಮಠದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಜಾತ್ರಾ ಮಹೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರು, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಡಾ. ವಿಜಯಾನಂದ ಕಾಶಪ್ಪನವರ ಪ್ರದಾನ ಮಾಡಿದರು.

ರಾಷ್ಟ್ರ ಪ್ರಶಸ್ತಿಯು ರೂ.50 ಸಾವಿರ ನಗದು, ರಾಜ್ಯ ಪ್ರಶಸ್ತಿಯು ರೂ.25 ಸಾವಿರ ನಗದು, ಪ್ರಶಸ್ತಿ ಫಲಕ ಹೊಂದಿದೆ. ಈ ಸಂದರ್ಭದಲ್ಲಿ ಕೀರ್ತಿ ಅನಿರುದ್ಧ, ಅಪ್ಪಾಸಾಹೇಬ ನಾಡಗೌಡ, ಶಿವಾನಂದ ಮುತ್ತನವರ, ಡಿವೈಎಸ್ಪಿ ಸಂತೋಷ ಬನ್ನಟ್ಟಿ, ಸಂಗಮೇಶ ಹುದ್ದಾರ, ಚಲನಚಿತ್ರೋತ್ಸವ ಸಂಚಾಲಕ ಡಾ. ಪ್ರಭು ಗಂಜಿಹಾಳ, ಚಲನಚಿತ್ರೋತ್ಸವ ಸಮಿತಿಯ ವೀರೇಶ ಹಂಡಿಗಿ, ಸುನಂದಾ ಕಲಬುರ್ಗಿ, ಲೋಕೇಶ ವಿದ್ಯಾಧರ, ವೀರೇಶ ಪುರವಂತರ, ಸಂಗನಗೌಡ ಕುರುಡಗಿ ಸೇರಿದಂತೆ ಅನೇಕ ಗಣ್ಯರು, ಕಲಾವಿದರು ಇದ್ದರು. ಐಹೊಳೆಯ ಕಲಾವಿದ ವೀರೇಶ ಪುರವಂತರ ಸಹೋದರರು ನಿರ್ಮಿಸಿದ ವೇದಿಕೆಯಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಉಚಿತವಾಗಿ ಒಟ್ಟು 28 ಹೊಸ ಚಲನಚಿತ್ರಗಳ ಟೀಸರ್, ಟ್ರೇಲರ್, ಪೋಸ್ಟರ್ ಬಿಡುಗಡೆ ಮಾಡಿ, ತಂಡದ ಕಲಾವಿದರನ್ನು ಗೌರವಿಸಲಾಯಿತು.

ಮುತ್ತಣ್ಣ ಪಲ್ಲೇದಗೆ `ಸೇವಾರತ್ನ’ ಪುರಸ್ಕಾರ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮೂಲತಃ ಜಕ್ಕಲಿ ಗ್ರಾಮದವರೂ, ನರೇಗಲ್ಲದ ಗಣ್ಯ ವರ್ತಕರೂ ಆಗಿರುವ ಮುತ್ತಣ್ಣ ಪಲ್ಲೇದ ಅವರಿಗೆ ಕರ್ನಾಟಕ ಸೇವಾ ರತ್ನ ರಾಜ್ಯ ಮಟ್ಟದ ಪುರಸ್ಕಾರ ದೊರೆತಿದೆ.

ವೀರಶೈವ ಪಂಚಮಸಾಲಿ ಸಮಾಜದ ಹೋಬಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರ ಸಮಾಜ ಕಾರ್ಯ ವೈಖರಿಯನ್ನು ಗುರುತಿಸಿ ಬೆಂಗಳೂರಿನ ಕರ್ನಾಟಕ ಪ್ರೆಸ್ ಕ್ಲಬ್ ಈ ಪ್ರಶಸ್ತಿಯನ್ನು ಕೊಡಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಈಚೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ಜರುಗಿತು. ಅಧ್ಯಕ್ಷ ಎಸ್. ರಾಮಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ರಮೇಶ ಎಸ್.ಜಿ ಅವರೊಂದಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ರಾಮಸ್ವಾಮಿ ಮುತ್ತಣ್ಣ ಪಲ್ಲೇದ, ನರೇಗಲ್ಲದಂತಹ ಗ್ರಾಮೀಣ ಭಾಗದಲ್ಲಿ ಭೀಮಾಂಬಿಕಾ ಟ್ರೇಡರ್ಸ್ ರೈತ ಸಂಪರ್ಕ ಕೇಂದ್ರವನ್ನು ತೆರೆದು ಆ ಮೂಲಕ ರೈತರ ಅಭಿವೃದ್ಧಿಗಾಗಿ ಮಾಡುತ್ತಿರುವ ಸೇವೆಯನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದರು.

ಕರ್ನಾಟಕ ಸೇವಾರತ್ನ ಪ್ರಶಸ್ತಿ ಪುರಸ್ಕೃತರಾದ ಮುತ್ತಣ್ಣ ಪಲ್ಲೇದರವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಹಾಲಕೆರೆ ಶ್ರೀಮಠದ ಶ್ರೀ ಮುಪ್ಪಿನ ಬಸವಲಿಂಗಸ್ವಾಮೀಜಿ, ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ನರೇಗಲ್ಲ ಹೋಬಳಿ ವೀರಶೈವ ಪಂಚಮಸಾಲಿ ಸಮಾಜದ ಪದಾಧಿಕಾರಿಗಳು, ಸದಸ್ಯರು, ಚನ್ನು ಪಾಟೀಲ ಫೌಂಡೇಷನ್‌ನ ಉಮೇಶ ಪಾಟೀಲ ಮತ್ತು ಸದಸ್ಯರು, ಬೀಚಿ ಬಳಗದ ಅಧ್ಯಕ್ಷ ಶಿವಯೋಗಿ ಜಕ್ಕಲಿ ಮತ್ತು ಸದಸ್ಯರು ಮುತ್ತಣ್ಣನವರಿಗೆ ಶುಭ ಹಾರೈಸಿದ್ದಾರೆ.

ಸುಮಿತ್ರಾ ಮೆಣಸಿನಕಾಯಿಗೆ ರಾಜ್ಯ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಯುವ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತೋತ್ಸವದ ನಿಮಿತ್ತ ಜ. 18ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಗ್ರಾಮದಲ್ಲಿ 2025-26ನೇ ಸಾಲಿನ ರಾಜ್ಯ ಯುವ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಗದಗ ಜಿಲ್ಲೆಯಿಂದ ಸುಮಿತ್ರಾ ಮೆಣಸಿನಕಾಯಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ತಾಲೂಕಿನ ಬೆಟಗೇರಿಯ ನಿವಾಸಿಯಾಗಿರುವ ಇವರು ಪ್ರಸ್ತುತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ ಗಂಗಾವತಿ ತಾಲೂಕು ಪಂಚಾಯಿತಿಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಹಿಳಾ ಸಬಲೀಕರಣ, ಯುವ ಸಬಲೀಕರಣ, ಆರೋಗ್ಯ, ವಿಶೇಷವಾಗಿ ಹೆಣ್ಣು ಮಕ್ಕಳ ಆರೋಗ್ಯ ಮತ್ತು ನೈರ್ಮಲ್ಯ, ಶಿಕ್ಷಣ, ಜಾಗೃತಿ ಕಾರ್ಯಕ್ರಮಗಳು, ಸ್ವಚ್ಛತೆ ಮತ್ತು ನೈರ್ಮಲ್ಯ, ಮಹಿಳೆಯರಿಗೆ ತರಬೇತಿ ಕಾರ್ಯಕ್ರಮಗಳು, ಗ್ರಾಮೀಣಾಭಿವೃದ್ಧಿ ಮಾಡುವ ನಿಟ್ಟಿನಲ್ಲಿ, ಕೆಲಸಗಳನ್ನು ಸಾಮಾನ್ಯರಿಗೆ ತಲುಪಿಸುವ ಅಂಶಗಳನ್ನು ಗುರುತಿಸಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಒಕ್ಕೂಟಗಳ ರಾಜ್ಯಾಧ್ಯಕ್ಷ ಎಸ್. ಬಾಲಾಜಿ ತಿಳಿಸಿದ್ದಾರೆ.

ಮಕ್ಕಳಲ್ಲಿ ಹುದುಗಿರುವ ಕಲೆಗಳನ್ನು ಪ್ರೋತ್ಸಾಹಿಸಿ: ಸಚಿವ ಡಾ. ಎಂ.ಸಿ. ಸುಧಾಕರ

0

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಅಭಿಪ್ರಾಯಪಟ್ಟರು.

ನಗರದ ಭೂಮರೆಡ್ಡಿ ಸರ್ಕಲ್ ಹತ್ತಿರದ ಜಗದ್ಗುರು ತೋಂಟದಾರ್ಯ ಪ್ರೌಢಶಾಲೆಯಲ್ಲಿ ಶನಿವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.

ಮಕ್ಕಳಲ್ಲಿರುವ ಪ್ರತಿಭೆಯನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಆದರೆ ಪ್ರತಿಭಾ ಕಾರಂಜಿ ಕಾರ್ಯಕ್ರಮದಿಂದ ಮಕ್ಕಳ ಪ್ರತಿಭೆಗಳ ಅನಾವರಣ ಸಾಧ್ಯವಾಗುತ್ತದೆ. ಮಕ್ಕಳ ವಿಚಾರಕ್ಕೆ ಬಂದಾಗ ನಾವು ಬಾಲ್ಯದಲ್ಲಿ ನಡೆದು ಬಂದ ದಾರಿಯನ್ನು ಸ್ಮರಿಸಿಕೊಳ್ಳುತ್ತೇವೆ. ವ್ಯಕ್ತಿಯ ಜೀವನದಲ್ಲಿ ಬಾಲ್ಯಾವಸ್ಥೆ ಅತ್ಯುತ್ತಮ ಕ್ಷಣವಾಗಿರುತ್ತದೆ. ಶಿಕ್ಷಕರ ವೃತ್ತಿ ಪವಿತ್ರವಾಗಿದೆ. ಮಕ್ಕಳು ಶಾಲೆಗೆ ಬಂದಾಗ ಅವರ ಪ್ರತಿಭೆಗಳನ್ನು ಗುರುತಿಸುವವರೇ ಶಿಕ್ಷಕರು. ಬಾಲ್ಯದಲ್ಲಿ ನೃತ್ಯ, ಸಂಗೀತ, ಚಿತ್ರಕಲೆ ಮುಂತಾದ ಕಲೆಗಳನ್ನು ಕಲಿತುಕೊಂಡು ಜೀವನದಲ್ಲಿ ಉಜ್ವಲ ಭವಿಷ್ಯ ನಿರ್ಮಾಣ ಮಾಡಬಹುದು. ಶಿಕ್ಷಕರು ಮಕ್ಕಳಲ್ಲಿ ಅಡಕವಾಗಿರುವ ಕಲೆಗಳನ್ನು ಪ್ರೋತ್ಸಾಹಿಸಬೇಕು. ಪ್ರತಿಭಾ ಕಾರಂಜಿ ಕಾರ್ಯಕ್ರಮದ ಸದುಪಯೋಗವನ್ನು ಮಕ್ಕಳು ಪಡೆದಿಕೊಳ್ಳಬೇಕು. ಮಕ್ಕಳು ವಿದ್ಯಾವಂತರಾಗಿ ಉನ್ನತ ಹುದ್ದೆ ಅಲಂಕರಿಸಿ ಸದೃಢ ದೇಶ ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಡಯಟ್ (ಅಭಿವೃದ್ಧಿ) ಉಪನಿರ್ದೇಶಕ ಜಿ.ಎಂ. ಮುಂದಿನಮನಿ, ಪಿ.ಎಂ ಪೋಷಣ್ ಶಕ್ತಿ ನಿರ್ಮಾಣ ಶಿಕ್ಷಣಾಧಿಕಾರಿ ಸರಸ್ವತಿ ಡಿ.ಕನವಳ್ಳಿ, ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಎಚ್.ಬಿ. ರಡ್ಡೇರ, ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಶೆಟ್ಟೆಪ್ಪನವರ, ಎಸ್.ಎನ್. ಬಳ್ಳಾರಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎಫ್. ಪೂಜಾರ, ಕ.ರಾ.ಪ್ರಾ.ಶಾ.ಶಿ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹಿರೇಮಠ, ಜಿ.ಪಿ.ಟಿ ಸಂಘದ ಜಿಲ್ಲಾಧ್ಯಕ್ಷ ಹಾಲನಗೌಡ ಪಾಟೀಲ, ಪ್ರೌಢಶಾಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಕೆ. ನಿಂಬನಗೌಡ್ರ, ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎ. ಯರಗುಡಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಉನ್ನತ ಶಿಕ್ಷಣ ಸಚಿವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ಹೆಮ್ಮೆಯ ವಿಷಯ. ಪಾಲಕರು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಉತ್ತಮವಾದ ಪ್ರದರ್ಶನ ನೀಡಿ ಮಕ್ಕಳು ಉನ್ನತ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕು. ಶಾಲೆಯಲ್ಲಿನ ಶಿಕ್ಷಕರು ಮಕ್ಕಳಲ್ಲಿನ ಕಲೆಗಳನ್ನು ಪ್ರೋತ್ಸಾಹಿಸಬೇಕು ಎಂದರು.

error: Content is protected !!