Home Blog Page 17

ಸಾಯಿಬಾಬಾ ತತ್ವಗಳೇ ಬದುಕಿನ ನಿಜವಾದ ಬೆಳಕು: ಪೂಜ್ಯ ಶಿವಶಾಂತವೀರ ಶರಣರು

0

ವಿಜಯಸಾಕ್ಷಿ ಸುದ್ದಿ, ಗದಗ: ಶಿರಡಿ ಸಾಯಿಬಾಬಾ ಅವರು ಮಾನವೀಯತೆ, ಭಕ್ತಿ ಮತ್ತು ಆದರ್ಶ ಜೀವನದ ಸಂದೇಶಗಳನ್ನು ನೀಡಿ ಮನುಕುಲವನ್ನು ಉದ್ಧರಿಸಿದ ಮಹಾನ್ ದೇವಮಾನವರಾಗಿದ್ದಾರೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಬಳಗಾನೂರಿನ ಪೂಜ್ಯ ಶಿವಶಾಂತವೀರ ಶರಣರು ಹೇಳಿದರು.

ಗದಗ-ಬೆಟಗೇರಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸೋಮವಾರ ನಡೆದ ನೂತನ ಶ್ರೀ ಸಾಯಿ ಪ್ರಸಾದ ನಿಲಯ, ವೆಬ್‌ಸೈಟ್ ಹಾಗೂ ಡಾ. ಸಂಗಮನಾಥ ಶೆಟ್ಟರ ಕನ್ನಡಕ್ಕೆ ಅನುವಾದಿಸಿದ ‘ಶ್ರೀ ಶಿರಡಿ ಬಾಬಾ ಮಹಾತ್ಮೆ–ಸಂಕಲ್ಪ ಸಿದ್ಧಿ ವ್ರತ’ ಗ್ರಂಥ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಾಯಿಬಾಬಾ ಅವರ ಉದ್ದೇಶ ಸಾಮಾನ್ಯ ವ್ಯಕ್ತಿಯನ್ನು ಆದರ್ಶ ವ್ಯಕ್ತಿಯನ್ನಾಗಿ ರೂಪಿಸುವುದಾಗಿತ್ತು. ಜ್ಞಾನ, ಭಕ್ತಿ, ಸ್ಮರಣೆ ಹಾಗೂ ಜನೋಪಯೋಗಿ ಕಾರ್ಯಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆಂಬ ಸಂದೇಶವನ್ನು ಅವರು ಸಾರಿದರು. ಸುಖ-ದುಃಖಗಳು ದೇಹಕ್ಕೆ ಮಾತ್ರ ಸಂಬಂಧಿಸಿದ್ದು, ಆತ್ಮ ಸದಾ ಚೈತನ್ಯಸ್ವರೂಪಿಯಾಗಿರುತ್ತದೆ. ಆತ್ಮಚಿಂತನೆಯ ಮೂಲಕ ಬದುಕಿನಲ್ಲಿ ನೆಮ್ಮದಿ ಹಾಗೂ ಆತ್ಮವಿಕಾಸ ಸಾಧ್ಯ ಎಂದು ಹೇಳಿದರು.

ಗದಗಿನ ಸಾಯಿಬಾಬಾ ಮಂದಿರ ಜ್ಞಾನ ದಾಸೋಹ, ಭಕ್ತಿ ದಾಸೋಹ ಹಾಗೂ ಅನ್ನದಾಸೋಹದ ಮೂಲಕ ಸಾಯಿಬಾಬಾ ಅವರ ತತ್ವ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಡಾ. ಸಂಗಮನಾಥ ಶೆಟ್ಟರ ಅವರು ಸಂತಕವಿ ದಾಸಗಣು ಮಹಾರಾಜರ ಮರಾಠಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವುದು ಅಭಿನಂದನೀಯ ಕಾರ್ಯ ಎಂದರು.

ಗ್ರಂಥ ಪರಿಚಯಿಸಿದ ಡಾ. ಸಂಗಮನಾಥ ಶೆಟ್ಟರ, ಸಾಯಿಬಾಬಾ ಅವರ ತತ್ವಗಳಲ್ಲಿ ನಿಸ್ವಾರ್ಥ ಕರ್ತವ್ಯ, ದಾನ, ವಿನಯ ಹಾಗೂ ಆತ್ಮಶುದ್ಧಿಗೆ ವಿಶೇಷ ಮಹತ್ವ ನೀಡಲಾಗಿದೆ. ಭಕ್ತರ ಬೇಡಿಕೆಯ ಮೇರೆಗೆ ಪರಿಷ್ಕೃತ ದ್ವಿತೀಯ ಮುದ್ರಣವನ್ನು ದಾನಿಗಳ ಸಹಕಾರದಿಂದ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ದತ್ತಾ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿರಣ ಪ್ರಕಾಶ ಭೂಮಾ ಮಾತನಾಡಿ, “ಸಬ್ ಕಾ ಮಾಲಿಕ್ ಏಕ್” ಎಂಬ ಸಾಯಿಬಾಬಾ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು, ಜಾತಿ-ಧರ್ಮ ಭೇದ ಮರೆತು ಮಾನವೀಯತೆಯಿಂದ ಬದುಕಬೇಕು ಎಂದು ಹೇಳಿದರು.

ಗದಗ-ಬೆಟಗೇರಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯ ಅಧ್ಯಕ್ಷ ಮಹೇಶಗೌಡ ತಲೆಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಭಕ್ತರ ಸಹಕಾರ ಹಾಗೂ ದಾನಿಗಳ ಕೊಡುಗೆಯಿಂದ ಮಂದಿರದಲ್ಲಿ ಅನೇಕ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಸುಶೀಲಾ ಗಂಗಣ್ಣ ಕೋಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಾನಿಗಳು, ಸೇವಾಕರ್ತರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಕುಮಾರಿ ಕ್ಷೀತಿ ಅಶ್ವಥ್ ಸುಲಾಖೆ ಪ್ರಾರ್ಥಿಸಿದರು. ಡಾ. ಎಸ್.ಡಿ. ಯರಗೇರಿ ಕಾರ್ಯಕ್ರಮ ನಿರೂಪಿಸಿ, ಅಮೃತ ವಾಲಿ ವಂದಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

“ಸಾಯಿಬಾಬಾ ಪವಾಡಗಳನ್ನು ಮಾತ್ರ ಮಾಡಲಿಲ್ಲ; ಮಾನವೀಯತೆ, ಭಕ್ತಿ ಮತ್ತು ಆದರ್ಶ ಜೀವನದ ಮಾರ್ಗವನ್ನೂ ತೋರಿಸಿದರು.”
– ಪೂಜ್ಯ ಶಿವಶಾಂತವೀರ ಶರಣರು

ಗದಗ–ಹರಪನಹಳ್ಳಿ ರೈಲು ಮಾರ್ಗಕ್ಕೆ ವೇಗ ನೀಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ದಶಕಗಳಿಂದ ನಿರೀಕ್ಷೆಯಲ್ಲಿರುವ ಗದಗ–ಹರಪನಹಳ್ಳಿ ನೂತನ ರೈಲು ಮಾರ್ಗದ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಹೂವಿನಹಡಗಲಿ ಶಾಸಕ ಕೃಷ್ಣ ನಾಯಕ ಅವರಿಗೆ ಗದಗ ಜಿಲ್ಲಾ ವಿಕಾಸ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.

ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ನೇತೃತ್ವದ ನಿಯೋಗ ಮನವಿ ಸಲ್ಲಿಸಿ, ಈ ಯೋಜನೆಯು ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದ್ದು, ರೈತರು, ವ್ಯಾಪಾರಸ್ಥರು, ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಬಹಳ ಅನುಕೂಲವಾಗಲಿದೆ ಎಂದು ತಿಳಿಸಿತು.

93 ಕಿಲೋಮೀಟರ್ ಉದ್ದದ ಈ ನೂತನ ರೈಲು ಮಾರ್ಗ ಪೂರ್ಣಗೊಂಡರೆ ಗದಗ ಜಂಕ್ಷನ್ ಮೂಲಕ ವಿಜಯಪುರ ಹಾಗೂ ಮಹಾರಾಷ್ಟ್ರದೊಂದಿಗೆ ಸಂಪರ್ಕ ವಿಸ್ತರಿಸುವುದರ ಜೊತೆಗೆ, ಹೂವಿನಹಡಗಲಿ–ಹರಪನಹಳ್ಳಿ ಭಾಗಕ್ಕೆ ಬೆಂಗಳೂರು, ಮೈಸೂರು ಮತ್ತು ಚೆನ್ನೈ ಮಾರ್ಗಗಳ ಸಂಪರ್ಕವೂ ಸುಲಭವಾಗಲಿದೆ. ಹಿಂದುಳಿದ ಪ್ರದೇಶದ ಜನರಿಗೆ ಇದು ಅಭಿವೃದ್ಧಿಯ ಹೊಸ ಅಧ್ಯಾಯವಾಗಲಿದ್ದು, ಸಂಚಾರ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಮಹತ್ತರ ಉತ್ತೇಜನ ದೊರೆಯಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ನೀವು ಆಡಳಿತ ಪಕ್ಷದ ಶಾಸಕರಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ಈ ವಿಷಯವನ್ನು ತಂದು, ಕಾಮಗಾರಿ ಶೀಘ್ರ ಆರಂಭವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಈ ಯೋಜನೆಯು ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅವರ ಕನಸಿನ ಯೋಜನೆಯಾಗಿದ್ದು, ಅದನ್ನು ಸಾಕಾರಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಆದ್ಯತೆ ನೀಡಬೇಕು ಎಂದು ವೇದಿಕೆ ಒತ್ತಾಯಿಸಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ವೀರಭದ್ರಪ್ಪ ಕಬ್ಬಿಣದ, ಸಿದ್ದಪ್ಪ ಜರತಕನಿ, ವೆಂಕಟೇಶ ಕಬಾಡಿ, ರಜಾಕ್ ನೂರಭಾಷಾ, ನಾಗರಾಜ ಹಂದಿಗೋಳ, ರಫೀಕ್ ಕಿತ್ತೂರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

“ಗದಗ–ಹರಪನಹಳ್ಳಿ ರೈಲು ಮಾರ್ಗ ಈ ಭಾಗದ ಅಭಿವೃದ್ಧಿಗೆ ಹೊಸ ಅಧ್ಯಾಯ ಬರೆಯಲಿದೆ. ಕಾಮಗಾರಿ ವಿಳಂಬವಾಗದಂತೆ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.”
– ವಿಶ್ವನಾಥ ಖಾನಾಪೂರ, ಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ

ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅಮ್ಮ ಫೌಂಡೇಶನ್ (ರಿ), ಬೆಂಗಳೂರು ವತಿಯಿಂದ ಲಕ್ಷ್ಮೇಶ್ವರ ತಾಲೂಕಿನ ಸಂಕದಾಳ ಮತ್ತು ಕೊಂಡಿಕೊಪ್ಪ ಗ್ರಾಮಗಳ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್, ನೋಟ್‌ಬುಕ್ ಹಾಗೂ ಪೆನ್‌ಗಳನ್ನು ವಿತರಿಸಲಾಯಿತು.

ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳಾರಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವನ್ನು ಅಮ್ಮ ಫೌಂಡೇಶನ್ ಅಧ್ಯಕ್ಷ ಹಾಗೂ ವಕೀಲ ಮೈಲಾರಪ್ಪ ಡಿ.ಎಚ್. ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ, ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಅಮ್ಮ ಫೌಂಡೇಶನ್ ನೀಡುತ್ತಿರುವ ಬೆಂಬಲ ಶ್ಲಾಘನೀಯವಾಗಿದೆ. ಇಂತಹ ದಾನಿಗಳ ಸಹಕಾರದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮತ್ತಷ್ಟು ಬಲ ಸಿಗಲಿದೆ ಎಂದು ಹೇಳಿದರು. ಇದೇ ವೇಳೆ ಶಾಲೆಗೆ ಡಿಜಿಟಲ್ ಸ್ಮಾರ್ಟ್ ಬೋರ್ಡ್ ಒದಗಿಸುವಂತೆ ಮನವಿ ಮಾಡಿದರು.

ಮನವಿಗೆ ತಕ್ಷಣ ಸ್ಪಂದಿಸಿದ ಮೈಲಾರಪ್ಪ ಡಿ.ಎಚ್., ತಾವು ಕಲಿತು ಬೆಳೆದ ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಗದಗ ಜಿಲ್ಲೆಯ ಇನ್ನಷ್ಟು ಸರ್ಕಾರಿ ಶಾಲೆಗಳಲ್ಲಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಜೊತೆಗೆ ಸಂಕದಾಳ ಶಾಲೆಗೆ ಶೀಘ್ರದಲ್ಲೇ ಡಿಜಿಟಲ್ ಸ್ಮಾರ್ಟ್ ಬೋರ್ಡ್ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ನಿವೃತ್ತ ಸೈನಿಕ ಬಸವರಾಜ ಸೂರಣಗಿ, ಗ್ರಾಮದ ಹಿರಿಯ ಹಾಲಪ್ಪ ಸೂರಣಗಿ, ಎಸ್‌ಡಿಎಂಸಿ ಅಧ್ಯಕ್ಷ ರವಿ ಹರಿಜನ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ದುರಗಪ್ಪ ಹರಿಜನ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಮ್ಮ ಫೌಂಡೇಶನ್ ಕೈಗೊಂಡಿರುವ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಮಂಜುನಾಥ ವಾರದ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ನಿರ್ದೇಶಕ ಶರಣು ಸೋಗಿ, ಜಿಲ್ಲಾ ಉಪಾಧ್ಯಕ್ಷ ಎಂ.ಎಸ್. ಹಿರೇಮಠ, ಶ್ರೀಮತಿ ನಂದಣ್ಣವರ್ ದಂಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಾಲೆಯ ಪ್ರಧಾನಗುರು ಎಸ್.ಎಸ್. ಉಪ್ಪಿನ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕ ವೈ.ಎಸ್. ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣಪ್ರೇಮಿಗಳು, ಗ್ರಾಮದ ಹಿರಿಯರು, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರ‍್ಯಾಪಿಡ್ ಮತ್ತು ವಿದ್ಯಾಪೋಷಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ನಗರದ ಕೆ.ಎಚ್. ಕಬ್ಬೂರ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್, ಜೆಎಸ್‌ಎಸ್ ಕಾಲೇಜು ಕ್ಯಾಂಪಸ್‌ನ ಪ್ರೇರಣಾ ಹಾಲ್‌ನಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಐಐಟಿ ಪ್ರಾಧ್ಯಾಪಕ ಹಾಗೂ ಮೈಂಡ್ ವೇವ್ ಎಜುಕೇಶನ್ ಹಬ್‌ನ ಪ್ರಮುಖರಾದ ಪ್ರೊ. ಎಸ್.ಎಂ. ಶಿವಪ್ರಸಾದ್ ಹಾಗೂ ವಿದ್ಯಾಪೋಷಕ ಸಂಸ್ಥೆಯ ಸಿಇಒ ಡಾ. ಶರತ್ ಐರಣಿ ಅವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಣವೇ ಉತ್ತಮ ಭವಿಷ್ಯದ ಅಡಿಪಾಯವಾಗಿದ್ದು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ರ‍್ಯಾಪಿಡ್ ಸಂಸ್ಥೆಯ ವಾಣಿಶ್ರೀ ಪುರೋಹಿತ ಮಾತನಾಡಿ, ಆರ್ಥಿಕ ನೆರವು ವಿದ್ಯಾರ್ಥಿನಿಯರ ಶೈಕ್ಷಣಿಕ ಕನಸುಗಳಿಗೆ ಹೊಸ ಬಲ ನೀಡುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ 81 ವಿದ್ಯಾರ್ಥಿನಿಯರಿಗೆ ಒಟ್ಟು ₹7.77 ಲಕ್ಷ ವಿದ್ಯಾರ್ಥಿವೇತನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ವಿಕಸನದ ಕುರಿತು ಪ್ರಸಿದ್ಧ ಪ್ರೇರಣಾದಾಯಕ ವಾಗ್ಮಿ ಹಾಗೂ ಸಂಪನ್ಮೂಲ ವ್ಯಕ್ತಿ ಪ್ರವೀಣ ಗುಡಿ ಅವರು “Stop Impressing, Start Inspiring” ವಿಷಯದ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ವಿದ್ಯಾಪೋಷಕ ಸಂಸ್ಥೆಯ ರತ್ನಾ ಹಿಪ್ಪರಗಿ, ಸಂಸ್ಥೆಯ ಸಿಬ್ಬಂದಿ, ರ‍್ಯಾಪಿಡ್ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಗುರುವಿನ ಕೃಪೆಯೇ ಬದುಕಿನ ನಿಜವಾದ ಸಂಪತ್ತು: ಡಾ. ವೀರಸೋಮೇಶ್ವರ ಜಗದ್ಗುರುಗಳು

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: “ಆಧ್ಯಾತ್ಮದ ಅಮರ ಸಂಪತ್ತನ್ನು ಕರುಣಿಸಿ, ಬದುಕಿಗೆ ಸತ್ಯದ ಬೆಳಕು ತೋರಿಸುವವನೇ ನಿಜವಾದ ಗುರು” ಎಂದು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಪೀಠಾಧಿಪತಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಬುಧವಾರ ರಂಭಾಪುರಿ ಪೀಠದಲ್ಲಿ ನಡೆದ ಗುರುಪೌರ್ಣಿಮೆ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜಗತ್ತಿನ ಶ್ರೇಷ್ಠ ಜ್ಞಾನಿಗಳು ಮತ್ತು ಅನುಭಾವಿಗಳು ಕಂಡ ಸತ್ಯದ ಬೆಳಕನ್ನು ಸಮಾಜಕ್ಕೆ ತೋರಿಸಿ ಜನರ ಉದ್ಧಾರ ಮಾಡಿದ್ದಾರೆ. ಅಲೌಕಿಕ ಇಚ್ಛೆಗಳನ್ನು ಈಡೇರಿಸುವುದರ ಜೊತೆಗೆ ಆಧ್ಯಾತ್ಮಿಕ ಬದುಕಿನತ್ತ ಕರೆದೊಯ್ಯುವವನೇ ನಿಜವಾದ ಗುರು ಎಂದು ತಿಳಿಸಿದರು.

ಸತ್ಸಂಗವು ಮನುಷ್ಯನಲ್ಲಿರುವ ಜಾತಿ, ಮತ, ಸ್ಥಾನಮಾನಗಳ ಭೇದವನ್ನು ದೂರ ಮಾಡುತ್ತದೆ. ‘ನಾನು’ ಎಂಬ ಅಹಂಕಾರವನ್ನು ತೊರೆದು ಭವಬಂಧನದಿಂದ ಮುಕ್ತಿಗೊಳಿಸುವ ಶಕ್ತಿ ಗುರುವಿನಲ್ಲಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಶ್ವಬಂಧುತ್ವ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕರು ಎಂದು ಅವರು ಹೇಳಿದರು.

ಗುರುಪೌರ್ಣಿಮೆ ಅಂಗವಾಗಿ ಭಕ್ತರು ಜಗದ್ಗುರುಗಳಿಗೆ ಪಾದಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಹುಡುಗಿ ಸೋಮೇಶ್ವರ ಶಿವಾಚಾರ್ಯರು, ಬೇರುಗಂಡಿ ರೇಣುಕ ಮಹಾಂತ ಶಿವಾಚಾರ್ಯರು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು, ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯರು, ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ತಾವರೆಕೆರೆ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ಸೇರಿದಂತೆ ಅನೇಕ ಮಠಾಧೀಶರು, ಗಣ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.

ಹುಬ್ಬಳ್ಳಿಯ ಆರ್.ಎಂ. ಹಿರೇಮಠ ಹಾಗೂ ಅವರ ಕುಟುಂಬದವರು ಗುರುಪಾದ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ಶ್ರೀಪೀಠದ ವಿವಿಧ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

“ಪ್ರಾಪಂಚಿಕ ಸಂಪತ್ತು ಬದುಕನ್ನು ವೈಭವಪೂರ್ಣಗೊಳಿಸಿದರೆ, ಪಾರಮಾರ್ಥಿಕ ಸಂಪತ್ತು ಬದುಕನ್ನು ಅನುಭಾವಪೂರ್ಣಗೊಳಿಸುತ್ತದೆ. ಆ ಅನುಭಾವದ ಅಮೃತವನ್ನು ತುಂಬುವವನೇ ಶ್ರೀಗುರು.”
– ಡಾ. ವೀರಸೋಮೇಶ್ವರ ಜಗದ್ಗುರುಗಳು

ಕುಡಿಯುವ ನೀರಿನಿಂದ ಕಾರು ತೊಳೆಯುತ್ತಿದ್ದವರಿಗೆ ಶಾಕ್; ಬೆಂಗಳೂರಿನಲ್ಲಿ 692 ಮಂದಿಗೆ ದಂಡದ ಬಿಸಿ ಮುಟ್ಟಿಸಿದ ಜಲಮಂಡಳಿ!

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ಕುಡಿಯುವ ನೀರನ್ನು ಅನಗತ್ಯವಾಗಿ ದುರ್ಬಳಕೆ ಮಾಡಿದವರ ವಿರುದ್ಧ ಬೆಂಗಳೂರು ಜಲಮಂಡಳಿ ಕ್ರಮ ಕೈಗೊಂಡಿದೆ.

ನಗರದಲ್ಲಿ ವಾಹನ ತೊಳೆಯಲು ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕುಡಿಯುವ ಕಾವೇರಿ ನೀರನ್ನು ಬಳಸಿದ 692 ಮಂದಿಗೆ ತಲಾ 5 ಸಾವಿರ ರೂ. ದಂಡ ವಿಧಿಸಲಾಗಿದ್ದು, ಒಟ್ಟು 34.60 ಲಕ್ಷ ರೂ. ದಂಡವನ್ನು ವಸೂಲಿ ಮಾಡಲಾಗಿದೆ.

ಬೆಂಗಳೂರು ಜಲಮಂಡಳಿ ಅಧಿಕಾರಿಗಳು ನಗರದ ವಿವಿಧ ವಲಯಗಳಲ್ಲಿ ಪರಿಶೀಲನೆ ನಡೆಸಿ ನೀರು ದುರ್ಬಳಕೆ ಮಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ದಕ್ಷಿಣ ವಲಯದಲ್ಲಿ ಅತಿ ಹೆಚ್ಚು 206 ಮಂದಿಗೆ ದಂಡ ವಿಧಿಸಲಾಗಿದೆ. ಪಶ್ಚಿಮ ವಲಯದಲ್ಲಿ 165, ಕೇಂದ್ರ ವಲಯದಲ್ಲಿ 135, ಪೂರ್ವ ವಲಯದಲ್ಲಿ 100 ಹಾಗೂ ಉತ್ತರ ವಲಯದಲ್ಲಿ 86 ಮಂದಿಯಿಂದ ದಂಡ ವಸೂಲಿ ಮಾಡಲಾಗಿದೆ.

ಇದೇ ವೇಳೆ, ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಪ್ರತಿದಿನ 3500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸೂಚಿಸಿರುವುದು ರಾಜ್ಯದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕುಡಿಯುವ ನೀರಿನ ಅಗತ್ಯತೆ ಇರುವ ಸಂದರ್ಭದಲ್ಲಿ ನೀರು ಬಿಡುಗಡೆ ಮಾಡುವ ಆದೇಶದ ಬಗ್ಗೆ ರೈತ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ಜುಲೈ 31ರಂದು ಬೆಂಗಳೂರಿನಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ:

ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜುಲೈ 31ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಗರದ ಕೆಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಜಲರೇಚಕ ಯಂತ್ರಾಗಾರಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಹೀಗಾಗಿ ಸಾರ್ವಜನಿಕರು ಅಗತ್ಯವಿರುವಷ್ಟು ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಂಡು, ನೀರನ್ನು ಮಿತವಾಗಿ ಬಳಸುವಂತೆ ಜಲಮಂಡಳಿ ಮನವಿ ಮಾಡಿದೆ.

ನಗರಕ್ಕೆ ನಿರಂತರ ಹಾಗೂ ವಿಶ್ವಾಸಾರ್ಹ ನೀರು ಪೂರೈಕೆ ಕಲ್ಪಿಸುವ ಉದ್ದೇಶದಿಂದ ಈ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಅಧಿಕಾರಿಗಳು ಕೋರಿದ್ದಾರೆ.

ಚಿಲ್ಲರೆ ಇಲ್ಲವೆಂದು ಸಚಿವರನ್ನೇ ಬಸ್‌ನಿಂದ ಇಳಿಸಿದ್ದ ನಿರ್ವಾಹಕನಿಗೆ ಬಿಗ್ ರಿಲೀಫ್; ಅಮಾನತು ತೆರವು!

ಬೆಂಗಳೂರು: ಚಿಲ್ಲರೆ ಹಣ ಇಲ್ಲದ ಕಾರಣಕ್ಕೆ ಸಚಿವರನ್ನೇ ಬಿಎಂಟಿಸಿ ಬಸ್‌ನಿಂದ ಕೆಳಗಿಳಿಸಿದ್ದ ನಿರ್ವಾಹಕನ ಅಮಾನತು ಆದೇಶವನ್ನು ಸಾರಿಗೆ ಸಚಿವ ಬೈರತಿ ಸುರೇಶ್ ರದ್ದುಪಡಿಸಿದ್ದಾರೆ.

ನಿರ್ವಾಹಕ ಟಿ.ಜಿ. ರಾಮಕೃಷ್ಣ ಅವರಿಗೆ ಮತ್ತೆ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜುಲೈ 11ರ ರಾತ್ರಿ ಸಾರಿಗೆ ಸಚಿವರು ದಿಢೀರ್‌ ಆಗಿ ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಪ್ರಯಾಣಿಸಿದ್ದರು. ಕೆಂಪೇಗೌಡ ಬಸ್ ನಿಲ್ದಾಣದಿಂದ ನಾಗಶೆಟ್ಟಿಹಳ್ಳಿಗೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುವ ವೇಳೆ, ಚಿಲ್ಲರೆ ಹಣ ಇಲ್ಲ ಎಂಬ ಕಾರಣಕ್ಕೆ ನಿರ್ವಾಹಕ ರಾಮಕೃಷ್ಣ ಅವರು ಸಚಿವರನ್ನು ಬಸ್‌ನಿಂದ ಕೆಳಗಿಳಿಸಿದ್ದರು.

ಈ ಘಟನೆ ಬಳಿಕ ಬಿಎಂಟಿಸಿ ಸಂಸ್ಥೆಯು ನಿರ್ವಾಹಕನನ್ನು ಅಮಾನತುಗೊಳಿಸಿತ್ತು. ಇದೀಗ ಸಚಿವರನ್ನು ಭೇಟಿಯಾದ ರಾಮಕೃಷ್ಣ ಅವರು ತಮ್ಮ ತಪ್ಪಿನ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಇದನ್ನು ಪರಿಗಣಿಸಿದ ಸಚಿವರು, ಎಚ್ಚರಿಕೆ ನೀಡಿ ಅಮಾನತು ಆದೇಶವನ್ನು ತೆರವುಗೊಳಿಸಿದ್ದಾರೆ.

ಚಿಲ್ಲರೆ ಹಣದ ವಿಚಾರದಲ್ಲಿ ಯಾವುದೇ ಪ್ರಯಾಣಿಕರಿಗೆ ತೊಂದರೆ ನೀಡಬಾರದು ಎಂದು ಸಚಿವ ಬೈರತಿ ಸುರೇಶ್ ಬಿಎಂಟಿಸಿ ಸೇರಿದಂತೆ ಎಲ್ಲ ಸಾರಿಗೆ ನಿಗಮಗಳ ಚಾಲಕರು ಮತ್ತು ನಿರ್ವಾಹಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಚಿಲ್ಲರೆ ಇಲ್ಲ ಎಂಬ ನೆಪದಲ್ಲಿ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿ ಇಳಿಸುವುದು ಅಮಾನವೀಯ. ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಇಂತಹ ಘಟನೆಗಳು ಮರುಕಳಿಸಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳೆಯರು ಸೇರಿದಂತೆ ಎಲ್ಲ ಪ್ರಯಾಣಿಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹೋಟೆಲ್‌ಗಳ ಬಾತ್‌ರೂಮ್ ಗಾಜಿನಿಂದಲೇ ಏಕೆ ನಿರ್ಮಿಸುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ!

0

ರೆಸಾರ್ಟ್‌, ಫೈವ್ ಸ್ಟಾರ್ ಅಥವಾ ಐಷಾರಾಮಿ ಹೋಟೆಲ್‌ಗಳಿಗೆ ಭೇಟಿ ನೀಡಿದಾಗ ಗಾಜಿನಿಂದ ನಿರ್ಮಿಸಲಾದ ಬಾತ್‌ರೂಮ್‌ಗಳು ಗಮನ ಸೆಳೆಯುವುದು ಸಾಮಾನ್ಯ.

ಮೊದಲ ನೋಟಕ್ಕೆ ಇವು ಕೇವಲ ಕೊಠಡಿಯ ಅಂದವನ್ನು ಹೆಚ್ಚಿಸಲು ಮಾಡಿರುವ ವಿನ್ಯಾಸ ಎಂದು ಅನಿಸಿದರೂ, ಇದರ ಹಿಂದೆ ಹಲವು ಪ್ರಾಯೋಗಿಕ ಹಾಗೂ ತಾಂತ್ರಿಕ ಕಾರಣಗಳಿವೆ.

ಆಧುನಿಕ ಒಳಾಂಗಣ ವಿನ್ಯಾಸದಲ್ಲಿ ಗಾಜಿನ ಬಳಕೆ ಹೆಚ್ಚಾಗಿದ್ದು, ಫ್ರೇಮ್‌ಲೆಸ್ ಗ್ಲಾಸ್, ಫ್ರಾಸ್ಟೆಡ್ ಗ್ಲಾಸ್ ಹಾಗೂ ಟಿಂಟೆಡ್ ಗ್ಲಾಸ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇವು ಬಾತ್‌ರೂಮ್‌ಗೆ ಆಕರ್ಷಕ ನೋಟ ನೀಡುವುದರ ಜೊತೆಗೆ ಅತಿಥಿಗಳ ಗೌಪ್ಯತೆಯನ್ನೂ ಕಾಪಾಡುವಂತೆ ವಿನ್ಯಾಸಗೊಳಿಸಲಾಗುತ್ತದೆ.

ಗಾಜಿನ ಬಾತ್‌ರೂಮ್‌ಗಳ ಪ್ರಮುಖ ಉದ್ದೇಶಗಳಲ್ಲಿ ಒಂದು ಕೊಠಡಿಯನ್ನು ಹೆಚ್ಚು ವಿಶಾಲವಾಗಿ ಕಾಣುವಂತೆ ಮಾಡುವುದು. ಸಾಮಾನ್ಯ ಗೋಡೆಗಳ ಬದಲಿಗೆ ಗಾಜಿನ ವಿಭಜನೆ ಬಳಸಿದಾಗ ಕೊಠಡಿಯೊಳಗೆ ತೆರೆದ ವಾತಾವರಣದ ಅನುಭವ ಸಿಗುತ್ತದೆ. ಇದರಿಂದ ಕೊಠಡಿ ಚಿಕ್ಕದಾಗಿದ್ದರೂ ದೊಡ್ಡದಾಗಿ ಕಾಣುತ್ತದೆ.

ಇದಲ್ಲದೆ, ಗಾಜಿನ ಮೂಲಕ ನೈಸರ್ಗಿಕ ಬೆಳಕು ಬಾತ್‌ರೂಮ್‌ಗೆ ಸುಲಭವಾಗಿ ಪ್ರವೇಶಿಸುತ್ತದೆ. ಹಗಲಿನ ವೇಳೆಯಲ್ಲಿ ಕೃತಕ ಬೆಳಕಿನ ಅವಶ್ಯಕತೆ ಕಡಿಮೆಯಾಗುವುದರಿಂದ ವಿದ್ಯುತ್ ಬಳಕೆಯೂ ಇಳಿಕೆಯಾಗುತ್ತದೆ. ಪರಿಸರ ಸ್ನೇಹಿ ವಿನ್ಯಾಸಗಳನ್ನು ಅಳವಡಿಸಿಕೊಳ್ಳಲು ಬಯಸುವ ಅನೇಕ ಐಷಾರಾಮಿ ಹೋಟೆಲ್‌ಗಳು ಈ ಕಾರಣಕ್ಕೂ ಗಾಜಿನ ಬಾತ್‌ರೂಮ್‌ಗೆ ಆದ್ಯತೆ ನೀಡುತ್ತವೆ.

ಸ್ವಚ್ಛತೆಯ ದೃಷ್ಟಿಯಿಂದಲೂ ಗಾಜಿನ ಬಾತ್‌ರೂಮ್‌ಗಳು ಅನುಕೂಲಕರವಾಗಿವೆ. ಸಾಮಾನ್ಯ ಟೈಲ್ಸ್ ಅಥವಾ ಗೋಡೆಗಳಿಗೆ ಹೋಲಿಸಿದರೆ ಗಾಜಿನ ಮೇಲ್ಮೈಯನ್ನು ಸ್ವಚ್ಛಗೊಳಿಸುವುದು ಸುಲಭ. ತೇವಾಂಶ ಹೆಚ್ಚು ಕಾಲ ಉಳಿಯದೆ ಬೇಗ ಒಣಗುವುದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಬೆಳೆಯುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಹೀಗಾಗಿ ಉತ್ತಮ ನೈರ್ಮಲ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಅನೇಕ ಹೋಟೆಲ್‌ಗಳು ಗಾಜಿನ ಬಾತ್‌ರೂಮ್‌ಗಳಲ್ಲಿ ಸ್ಲೈಡಿಂಗ್ ಬಾಗಿಲು, ವಿಶೇಷ ಲೇಪನ ಹೊಂದಿರುವ ಗಾಜು ಹಾಗೂ ಅಗತ್ಯವಿದ್ದಾಗ ಅಪಾರದರ್ಶಕವಾಗುವ ಸ್ಮಾರ್ಟ್ ಗ್ಲಾಸ್‌ಗಳಂತಹ ಆಧುನಿಕ ತಂತ್ರಜ್ಞಾನಗಳನ್ನೂ ಅಳವಡಿಸುತ್ತಿವೆ. ಇದರಿಂದ ಅತಿಥಿಗಳಿಗೆ ಹೆಚ್ಚಿನ ಅನುಕೂಲತೆ ಮತ್ತು ಖಾಸಗಿತನವೂ ದೊರೆಯುತ್ತದೆ.

ಒಟ್ಟಾರೆ, ಫೈವ್ ಸ್ಟಾರ್ ಹಾಗೂ ಐಷಾರಾಮಿ ಹೋಟೆಲ್‌ಗಳಲ್ಲಿ ಗಾಜಿನ ಬಾತ್‌ರೂಮ್‌ಗಳನ್ನು ಅಳವಡಿಸುವುದು ಕೇವಲ ಸ್ಟೈಲಿಶ್ ಲುಕ್‌ಗಾಗಿ ಮಾತ್ರವಲ್ಲ. ವಿಶಾಲತೆಯ ಅನುಭವ, ನೈಸರ್ಗಿಕ ಬೆಳಕಿನ ಬಳಕೆ, ವಿದ್ಯುತ್ ಉಳಿತಾಯ, ಸುಲಭ ನಿರ್ವಹಣೆ, ಉತ್ತಮ ಸ್ವಚ್ಛತೆ ಹಾಗೂ ಆಧುನಿಕ ವಿನ್ಯಾಸದ ಅನುಭವವನ್ನು ಅತಿಥಿಗಳಿಗೆ ನೀಡುವ ಉದ್ದೇಶದಿಂದ ಈ ರೀತಿಯ ಬಾತ್‌ರೂಮ್‌ಗಳನ್ನು ನಿರ್ಮಿಸಲಾಗುತ್ತದೆ.

ಕೊಡಗಿನಲ್ಲಿ ಭೀಕರ ದುರಂತ: ಕಾಫಿ ತೋಟದಲ್ಲಿ ಮರ ಬಿದ್ದು ಇಬ್ಬರು ಮಹಿಳಾ ಕಾರ್ಮಿಕರ ಸಾವು!

ಕೊಡಗು: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ಇಬ್ಬರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಾಪುರ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ನಡೆದಿದೆ.

ಬಿಳಿಗೇರಿ ಗ್ರಾಮದ ಟಾಟಾ ಕಾಫಿ ತೋಟದಲ್ಲಿ ದಿನನಿತ್ಯದ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರ ಮೇಲೆ ಏಕಾಏಕಿ ಬೃಹತ್ ಮರ ಉರುಳಿ ಬಿದ್ದಿದೆ. ಪರಿಣಾಮ ಅಸ್ಸಾಂ ಮೂಲದ ಪರ್ಬಿನಾ ಖಾತುನ್ (29) ಹಾಗೂ ಅಲೆಮನ್ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಅವರೊಂದಿಗೆ ಕೆಲಸ ಮಾಡುತ್ತಿದ್ದ ಇನ್ನಿಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸೋಮವಾರಪೇಟೆ ಪೊಲೀಸರು ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಳೆಗಾಲದ ಹಿನ್ನೆಲೆಯಲ್ಲಿ ಮರಗಳು ದುರ್ಬಲಗೊಂಡಿರುವ ಸಾಧ್ಯತೆಯಿಂದ ಈ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

CWRC ಆದೇಶಕ್ಕೆ JDS ವಿರೋಧ: ತಮಿಳುನಾಡಿಗೆ ಒಂದು ಹನಿ ನೀರೂ ಬಿಡಬೇಡಿ ಎಂದು ಸರ್ಕಾರಕ್ಕೆ ಆಗ್ರಹ!

ಬೆಂಗಳೂರು: ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಶಿಫಾರಸಿಗೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ರಾಜ್ಯ ಸರ್ಕಾರವನ್ನು ಪಕ್ಷ ಆಗ್ರಹಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಣೆ ನೀಡಿರುವ ಜೆಡಿಎಸ್, CWRC ನಿರ್ಧಾರವು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದ್ದು, ರಾಜ್ಯಕ್ಕೆ ಘೋರ ಅನ್ಯಾಯವಾಗಿದೆ ಎಂದು ಆರೋಪಿಸಿದೆ.

ಜೂನ್ ತಿಂಗಳಿನಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಮರ್ಪಕ ಮಳೆಯಾಗಿಲ್ಲ. ಪರಿಣಾಮವಾಗಿ ಕೆಆರ್‌ಎಸ್ ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದೆ. ಇಂತಹ ತೀವ್ರ ಬರ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ 15 ದಿನಗಳಲ್ಲಿ 4 ಟಿಎಂಸಿ ನೀರು ಹರಿಸುವುದು ಸಾಧ್ಯವಿಲ್ಲ ಎಂದು ಜೆಡಿಎಸ್ ತಿಳಿಸಿದೆ.

ಈಗಾಗಲೇ ಮಳೆಯ ಕೊರತೆಯಿಂದ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನೀರು ಬಿಡುಗಡೆ ಮಾಡಿದರೆ ಮುಂದಿನ ದಿನಗಳಲ್ಲಿ ಬೆಂಗಳೂರು, ಮಂಡ್ಯ ಸೇರಿದಂತೆ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗುವ ಸಾಧ್ಯತೆ ಇದೆ ಎಂದು ಪಕ್ಷ ಎಚ್ಚರಿಕೆ ನೀಡಿದೆ.

ಕುಡಿಯುವ ನೀರಿನ ಮೇಲೂ ಪರಿಣಾಮ ಬೀರುವ CWRC ನಿರ್ಧಾರವನ್ನು ಕನ್ನಡಿಗರು ಒಪ್ಪುವುದಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಒಂದು ಹನಿ ನೀರನ್ನೂ ಬಿಡುಗಡೆ ಮಾಡಬಾರದು ಎಂದು ಜೆಡಿಎಸ್ ಆಗ್ರಹಿಸಿದೆ.

ಜತೆಗೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)ದ ಮುಂದೆ ರಾಜ್ಯ ಸರ್ಕಾರವು ಪ್ರಬಲವಾಗಿ ಮೇಲ್ಮನವಿ ಸಲ್ಲಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಕರ್ನಾಟಕದ ಪರವಾಗಿ ದೃಢವಾಗಿ ವಾದ ಮಂಡಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೂ ಕರ್ನಾಟಕದಲ್ಲಿನ ಬರ ಪರಿಸ್ಥಿತಿ ಹಾಗೂ ಜಲಾಶಯಗಳ ನೈಜ ಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ರೈತರ ಮತ್ತು ರಾಜ್ಯದ ಜನರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ತಕ್ಷಣವೇ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.