ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನಿಂಗ್ ವ್ಯವಸ್ಥೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ 13 ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸಂಬಂಧಿತ ತೊಂದರೆ ಉಂಟಾಗಿದೆ. ಈಗಾಗಲೇ ಎಲ್ಲೆಡೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರೊಸೆಸರ್ ಸಮಸ್ಯೆ ಇಂದೇ ಪರಿಹಾರವಾಗಲಿದೆ. ಎಂಆರ್‌ಐ ಮತ್ತು ಸಿಟಿ ಸ್ಕ್ಯಾನಿಂಗ್ ಸೇವೆಗಳು ನಿರಂತರವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಸಂಬಂಧಿತ ಕಂಪನಿ 140 ಕೋಟಿ ರೂಪಾಯಿ ಪಾವತಿಸಬೇಕೆಂದು ಕೇಳಿದೆ. ಆದರೆ ಸರ್ಕಾರದ ಲೆಕ್ಕಾಚಾರ ಪ್ರಕಾರ 10ರಿಂದ 15 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. ನ್ಯಾಯಸಮ್ಮತ ಹಣವನ್ನು ಮಾತ್ರ ಪಾವತಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ವಿಪಕ್ಷ ನಾಯಕರು ಖಾಸಗಿ ಕಂಪನಿಗೆ ಬೇಕಾದಷ್ಟು ಹಣ ನೀಡಬೇಕು ಎಂದು ಹೇಳುವುದು ಸರಿಯಲ್ಲ. ಅಶೋಕ್ ಹಾಗೂ ಬಿಜೆಪಿ-ಜೆಡಿಎಸ್ ಯಾರ ಪರ ಇದ್ದಾರೆ ಎಂದು ಸ್ಪಷ್ಟಪಡಿಸಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಭಾಗದ ಹೋಂಸ್ಟೇ ದುರಂತ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಐಟಿ ಉದ್ಯೋಗಿ ರಂಜಿತಾ ಸಾವಿಗೆ ಸಂಬಂಧಿಸಿ ನಾಲ್ಕು ತಿಂಗಳ ಬಳಿಕ ಮಾಲೀಕ ಸುಧಾಕರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಕ್ಟೋಬರ್ 25ರಂದು ಸ್ನೇಹಿತೆಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಂಜಿತಾ, ಹೋಂಸ್ಟೇ ಬಾತ್‌ರೂಮ್‌ನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಆಕೆಯ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ.
ಪೋಸ್ಟ್‌ಮಾರ್ಟಮ್ ವರದಿಯಲ್ಲಿ ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮೋನಾಕ್ಸೈಡ್ ಅನಿಲ ಸೋರಿಕೆಯೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಬಾತ್‌ರೂಮ್‌ನಲ್ಲಿ ಸೂಕ್ತ ಗಾಳಿ ಹರಿವು ವ್ಯವಸ್ಥೆ ಇಲ್ಲದಿರುವುದು ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಕುಟುಂಬಸ್ಥರ ಒತ್ತಾಯದ ಹಿನ್ನೆಲೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಹೋಂಸ್ಟೇ ಸುರಕ್ಷತಾ ನಿಯಮಗಳ ಉಲ್ಲಂಘನೆ ಬಗ್ಗೆ ಪೊಲೀಸರು ಸವಿಸ್ತಾರ ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು: ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭರವಸೆ ನೀಡಿದ್ದಾರೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ‘ಬಹಳ ಸಂತೋಷ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾ ಪ್ರತಿಕ್ರಿಯೆ ನೀಡಿದರು. ಇನ್ನು ಸಿಎಂ ಅವರ ಲೇಖನ ಹಾಗೂ ಟ್ವಿಟರ್ ಪೋಸ್ಟ್ ಬಗ್ಗೆ ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದರು.
ಬಾಗಲಕೋಟೆ ಗಲಭೆ ಬಗ್ಗೆ ಕೇಳಿದಾಗ, “ನಿರಂತರ ಸಭೆಗಳ ಬಳಿಕ ಅಸ್ಸಾಂನಿಂದ ನಿನ್ನೆ ತಡ ರಾತ್ರಿ ನಾನು ಬೆಂಗಳೂರಿಗೆ ಮರಳಿದ್ದೇನೆ. ಬಹಳ ಆಯಾಸವಾಗಿದೆ. ಈ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ” ಎಂದು ಹೇಳಿದರು.
ಕಾಂಗ್ರೆಸ್ ನಿಯೋಗ ಭೇಟಿ ನೀಡಿದ್ದು, ಪರಿಹಾರ ನೀಡಲಾಗುವುದೇ ಎಂದು ಕೇಳಿದಾಗ, “ಈ ಬಗ್ಗೆ ಅಧಿಕಾರಿಗಳು ನಮಗೆ ವರದಿ ನೀಡಲಿದ್ದು, ನಂತರ ತೀರ್ಮಾನ ಮಾಡುತ್ತೇವೆ” ಎಂದರು. ಘನತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ನಾನು ಒಂದು ರೂ. ಅನುದಾನ ಕೇಳಿಲ್ಲ ಎಂಬ ಶಾಸಕ ಧೀರಜ್ ಮುನಿರಾಜು ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ಬಗ್ಗೆ ಮುಂದೆ ಮಾತನಾಡೋಣ” ಎಂದರು.
ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕಿನ ಚೆನ್ನಹಳ್ಳಿ ತಾಂಡಾ ಬಳಿ ವಿಚಿತ್ರ ಪ್ರೇಮ ಪ್ರಕರಣವೊಂದು ಅಪಘಾತದ ಮೂಲಕ ಹೊಸ ತಿರುವು ಪಡೆದುಕೊಂಡಿದೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಇರ್ಫಾನ್ ಮತ್ತು ಹಿರೇಕೆರೂರು ಮೂಲದ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಲು ತೀರ್ಮಾನಿಸಿದ್ದರು. ಯುವತಿ ಜಾತ್ರೆಗಾಗಿ ಊರಿಗೆ ಬಂದಿದ್ದ ಸಂದರ್ಭದಲ್ಲಿ, ಇರ್ಫಾನ್ ತನ್ನ ಸ್ನೇಹಿತರೊಂದಿಗೆ ಬಾಡಿಗೆ ಕಾರಿನಲ್ಲಿ ತೆರಳಿ ಆಕೆಯನ್ನು ಕರೆದುಕೊಂಡು ಹೋಗಲು ಮುಂದಾಗಿದ್ದ.
ಬೆಂಗಳೂರು ಕಡೆ ಪ್ರಯಾಣಿಸುವಾಗ ಕಾರು ವೇಗವಾಗಿ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ ಇರ್ಫಾನ್ ಹಾಗೂ ಇಬ್ಬರು ಸ್ನೇಹಿತರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ಯುವತಿ ಮಾತ್ರ ಗಾಯಗಳಿಲ್ಲದೆ ಪಾರಾಗಿ, ಸ್ಥಳದಲ್ಲಿದ್ದ ಜನರಿಂದ ಲಿಫ್ಟ್ ಪಡೆದು ಬಳಿಕ ಬಸ್ ಮೂಲಕ ಬೆಂಗಳೂರಿಗೆ ತೆರಳಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆ ಕುರಿತು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಗದಗ: ಲೋಕಾಯುಕ್ತ ಅಧಿಕಾರಿಗಳು 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಸೇರಿದ ಎಂದು ಹೇಳಲಾಗಿರುವ ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಈ ದಾಳಿ ನಡೆದಿದೆ.
ಗುತ್ತಿಗೆದಾರ ಗದಗ ತಾಲೂಕಿನ ಚಿಂಚಲಿ ಗ್ರಾಮದ ವಿಜಯ ತಂದೆ ಸಣ್ಣಹನಮಪ್ಪ ಪೂಜಾರ ಅವರಿಂದ 5 ಲಕ್ಷ ರೂಪಾಯಿ ಹಣ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಂಚ ಬೇಡಿಕೆ ಆರೋಪ
ಗುತ್ತಿಗೆದಾರ ವಿಜಯ್ ತಂದೆ ಸಣ್ಣಹನಮಂತಪ್ಪ ಪೂಜಾರ (ವಯಸ್ಸು 35, ಚಿಂಚಲಿ, ತಾ. ಗದಗ) ಅವರಿಗೆ ಶಿರಹಟ್ಟಿ ತಾಲೂಕಿನ ದೇವಿಹಾಳ ಗ್ರಾಮದ ಹಳ್ಳದ 2-ಚೆಕ್ ಡ್ಯಾಂ ಹಾಗೂ ತಡೆಗೋಡೆ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರತಿ ಕಾಮಗಾರಿಗೆ ₹48 ಲಕ್ಷ ಮೌಲ್ಯದಂತೆ 12% ಹಣ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಒಟ್ಟು ₹1 ಕೋಟಿ ಅನುದಾನದಲ್ಲಿ ನಡೆಯುವ ಈ ಕಾಮಗಾರಿಗೆ ಮುಂಗಡವಾಗಿ ₹5 ಲಕ್ಷ ನೀಡಲು ಹೋದಾಗ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದರೆಂದು ತಿಳಿದು ಬಂದಿದೆ. ದಾಳಿಯ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಶಾಸಕರ ಖಾಸಗಿ ಆಪ್ತ ಕಾರ್ಯದರ್ಶಿ ಗುರು ಲಮಾಣಿ ಹಾಗೂ ಸರಕಾರಿ ಆಪ್ತ ಕಾರ್ಯದರ್ಶಿ ಮಂಜುನಾಥ್ ವಾಲ್ಮೀಕಿ ಇವರು ಸ್ಥಳದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಮಂಜೂರಾದ ಕಾಮಗಾರಿ ವಿವರ
ಈ ಕಾಮಗಾರಿ ಧಾರವಾಡದ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾಗಿದ್ದು, ₹1 ಕೋಟಿ ರೂ. ಅನುದಾನದಲ್ಲಿ ಕಾರ್ಯನಿರ್ವಹಣೆಯಾಗುತ್ತಿದೆ.
ದಾಳಿಯಲ್ಲಿ ಧಾರವಾಡ ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ , ಗದಗ ಲೋಕಾಯುಕ್ತ ಡಿವೈಎಸ್ಪಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.ಈ ಘಟನೆ ಶಿರಹಟ್ಟಿ ಕ್ಷೇತ್ರದಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ತನಿಖೆಯ ಬಳಿಕ ಹೆಚ್ಚಿನ ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ.
ಶಾಸಕ ಡಾ. ಚಂದ್ರು ಲಮಾಣಿ ಸರ್ಕಾರಿ ಪಿಎ ಮಂಜುನಾಥ ವಾಲ್ಮೀಕಿ ಹಾಗೂ ಖಾಸಗಿ ಪಿಎ ಗುರು ಲಮಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
4.5 ಲಕ್ಷ ರೂ. ಪತ್ತೆ
ಶಾಸಕರಿಗೆ ಸೇರಿದ್ದೆಂದು ತಿಳಿದುಬಂದ ಬಾಲಾಜಿ ಆಸ್ಪತ್ರೆಯ ಕೆಳಮಹಡಿಯಲ್ಲಿ 4.5 ಲಕ್ಷ ರೂ. ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
50 ಸಾವಿರ ರೂ. ಕಾಗದ ಬಂಡಲ್‌ನಲ್ಲಿ ಎಸೆದ ಪಿಎ
ದಾಳಿಯ ಸಂದರ್ಭದಲ್ಲಿ ಶಾಸಕರ ಪಿಎ 50 ಸಾವಿರ ರೂ. ಹಣವನ್ನು ಕಾಗದದ ಬಂಡಲ್‌ನಲ್ಲಿ ಹಾಕಿ ಸಮೀಪದ ಖಾಸಗಿ ಶಾಲೆ ಬಳಿ ಎಸೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಲೋಕಾಯುಕ್ತ ಅಧಿಕಾರಿಗಳು ಪಿಎ ಎಸೆದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಬಾಲಾಜಿ ಆಸ್ಪತ್ರೆ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು,
3 ಸಿಪಿಐ
3 ಪಿಎಸ್ಐ
1 ಡಿಆರ್ ತುಕಡಿ
ಸೇರಿ 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದ್ದು, ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರ ಗ್ರಾಮದಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾನ್ಸ್‌ಟೇಬಲ್‌ನ ಕಿರುಕುಳಕ್ಕೆ ಬೇಸತ್ತು ಈ ದುರ್ಘಟನೆ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.
ಮಹಿಳೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಆಕೆಗೆ ನಿರಂತರವಾಗಿ ತೊಂದರೆ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಮೃತಳ ತಾಯಿ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಕಾನ್ಸ್‌ಟೇಬಲ್ ಮೋಹನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಫೇಸ್‌ಬುಕ್ ಹಾಗೂ ಮೆಸೇಂಜರ್ ಮೂಲಕ ನಿರಂತರ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದನೆಂದು, ಬ್ಲಾಕ್ ಮಾಡಿದ ಬಳಿಕವೂ ಬೇರೆ ಖಾತೆಗಳಿಂದ ಸಂಪರ್ಕಿಸುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.ಮೃತದೇಹದ ಮರಣೋತ್ತರ ಪರೀಕ್ಷೆ ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಪೂರ್ಣಗೊಂಡಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲು ವಿಶೇಷ ಪೊಲೀಸ್ ತಂಡ ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಬೆಂಗಳೂರು: ವರ್ತೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಯೋಗಾನಂದ್ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ರೌಡಿಶೀಟರ್ ಗ್ಯಾಂಗ್ ಜೊತೆ ಶಾಮೀಲಾಗಿ ಕೊಲೆ ಪ್ರಕರಣದ ತನಿಖೆಗೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪದಡಿ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
2024ರ ಸೆಪ್ಟೆಂಬರ್ 18ರಂದು ತಮಿಳುನಾಡಿನ ಬಾಗಲೂರಿನಲ್ಲಿ ನಡೆದ ರೇವಂತ್ ಹತ್ಯೆ ಪ್ರಕರಣದಲ್ಲಿ ಈ ಆರೋಪಗಳು ಕೇಳಿಬಂದಿವೆ. 24 ವರ್ಷದ ಎಲ್ ಎಲ್ ಬಿ ವಿದ್ಯಾರ್ಥಿ ರೇವಂತ್ ಅವರನ್ನು ರೌಡಿಶೀಟರ್ ರೇವಾ ಮತ್ತು ಗ್ಯಾಂಗ್ ಸದಸ್ಯರು ಭೀಕರವಾಗಿ ಹತ್ಯೆ ಮಾಡಿದ್ದರು.
ರೇವಂತ್ ತನ್ನ ಸ್ನೇಹಿತ ಸ್ಟಾಲಿನ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ದೂರು ದಾಖಲಿಸಲು ಸಹಕರಿಸಿದ್ದ. ಇದರಿಂದ ಕೋಪಗೊಂಡ ರೌಡಿಶೀಟರ್ ಗ್ಯಾಂಗ್, ರಾಜಿ ಮಾತುಕತೆ ನೆಪದಲ್ಲಿ ಕರೆಸಿ ಚಿಕ್ಕಪ್ಪನ ಎದುರೇ ರೇವಂತ್ ಅನ್ನು ಹತ್ಯೆ ಮಾಡಿತ್ತು ಎಂದು ಆರೋಪಿಸಲಾಗಿದೆ.
ಪ್ರಕರಣವನ್ನು ತಮಿಳುನಾಡು ಪೊಲೀಸರು ವರ್ಗಾವಣೆ ಮಾಡಿದ ಬಳಿಕ ತನಿಖೆ ನಡೆಸಿದ ವರ್ತೂರು ಪೊಲೀಸರು 90 ದಿನಗಳೊಳಗೆ ಚಾರ್ಜ್‌ಶೀಟ್ ಸಲ್ಲಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಪರಿಣಾಮವಾಗಿ ಜೈಲಿನಲ್ಲಿದ್ದ ಏಳು ಆರೋಪಿಗಳು ಸುಲಭವಾಗಿ ಜಾಮೀನು ಪಡೆದು ಹೊರಬಂದಿದ್ದಾರೆ.
ಜಾಮೀನಿನ ಷರತ್ತಿನಂತೆ ರೇವಾ ಪ್ರತಿದಿನ ಠಾಣೆಗೆ ಹಾಜರಾಗಿ ಸಹಿ ಹಾಕಬೇಕಿತ್ತು. ಆದರೆ, ಇನ್ಸ್‌ಪೆಕ್ಟರ್ ಪ್ರಭಾವದಿಂದ ಪೊಲೀಸರೇ ಅಪಾರ್ಟ್‌ಮೆಂಟ್‌ಗೆ ತೆರಳಿ ಸಹಿ ಪಡೆಯುತ್ತಿದ್ದಾರೆ ಎಂಬ ಆರೋಪ ಸಂತ್ರಸ್ತ ಕುಟುಂಬ ಮಾಡಿದೆ. ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಗೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮಾನನಷ್ಟ ಪ್ರಕರಣದಲ್ಲಿ ಹಿನ್ನಡೆ ಉಂಟಾಗಿದೆ. ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ದಾಖಲಿಸಿದ್ದ ಖಾಸಗಿ ದೂರು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ರೂಪಾ ಮೌದ್ಗಿಲ್ ಅವರು, ರೋಹಿಣಿ ಸಿಂಧೂರಿ ಮಾಧ್ಯಮಗಳ ಮುಂದೆ ತಮ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ 7ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಈ ಖಾಸಗಿ ದೂರು ರದ್ದುಪಡಿಸುವಂತೆ ಕೋರಿ ರೋಹಿಣಿ ಸಿಂಧೂರಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಪ್ರಕರಣದ ವಿಚಾರಣೆ ಮುಂದುವರಿಯಲಿದೆ.
ಇದಕ್ಕೂ ಮೊದಲು ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ನಂತರ ಪ್ರಕರಣ ಸುಪ್ರೀಂ ಕೋರ್ಟ್ ತನಕ ತೆರಳಿ, ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ವಾಪಸ್ ಕಳುಹಿಸಲಾಗಿತ್ತು. 2023ರ ಫೆಬ್ರವರಿ 19ರಂದು ನೀಡಿದ ಹೇಳಿಕೆಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಆರೋಪಗಳಿವೆ ಎಂದು ರೂಪಾ ದೂರಿನಲ್ಲಿ ಉಲ್ಲೇಖಿಸಿದ್ದರು.
ಆ ಹೇಳಿಕೆಯನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದು, ಸುಮಾರು 1.8 ಲಕ್ಷ ಮಂದಿ ವೀಕ್ಷಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹೇಳಿಕೆಯ ಪರಿಣಾಮವಾಗಿ ತಮಗೆ ವರ್ಗಾವಣೆ ಆಗಿದ್ದು, ಆರು ತಿಂಗಳ ಕಾಲ ಹುದ್ದೆ ರಹಿತ ಸ್ಥಿತಿ ಉಂಟಾಯಿತು ಹಾಗೂ ಕುಟುಂಬ ಸದಸ್ಯರು ಮಾನಸಿಕ ಯಾತನೆ ಅನುಭವಿಸಿದ್ದಾರೆ ಎಂದು ಆರೋಪಿಸಿ ಮಾನನಷ್ಟ ಪ್ರಕರಣ ದಾಖಲಿಸಲಾಗಿತ್ತು.
ಬೆಂಗಳೂರು: ವೈದ್ಯಕೇತರ ಸಿಬ್ಬಂದಿಗಳೂ ವೈದ್ಯರಷ್ಟೇ ಪ್ರಮುಖರು. ಆರೋಗ್ಯ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ಜಾತಿಧರ್ಮಗಳ ಬೇಧಗಳನ್ನು ಮೀರಿ,ಮಾನವೀಯತೆಯಿಂದ ಸೇವೆ ಸಲ್ಲಿಸುವುದು ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಅಭಯ ಹಸ್ತ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ವೃಂದಗಳ ನೇಮಕಾತಿ ಆದೇಶಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜೀವ ಉಳಿಸುವ ಸಾರ್ಥಕ ವೃತ್ತಿ
ಇಂದು 1000 ಜನರಿಗೆ ನೇಮಕಾತಿ ಆದೇಶಗಳನ್ನು ಪಡೆದು ಆರೋಗ್ಯ ಇಲಾಖೆಗೆ ಸೇರ್ಪಡೆಯಾಗಿರುವುದು ಸಂತೋಷದ ವಿಷಯ. ಇದು ಕೇವಲ ವೃತ್ತಿಯಲ್ಲ, ಜೀವ ಉಳಿಸುವ ಹಾಗೂ ರೋಗ ತಡೆಯುವ ಸಾರ್ಥಕ ಕಾರ್ಯವನ್ನೊಳಗೊಂಡಿದೆ ಎಂದರು.
ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ
ನಮ್ಮ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ಖಾಲಿ ಹುದ್ದೇಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುತ್ತಿದೆ. ನೇಮಕಾತಿಯಲ್ಲಿದ್ದ ಹಲವು ಸಮಸ್ಯೆಗಳನ್ನು ಬಗೆಹರಿಸಿ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆ ಅತ್ಯಂತ ಅವಶ್ಯಕವಾಗಿದ್ದು,
ಇಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಆದ್ಯತೆ ನೀಡುತ್ತದೆ. 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿದ್ದು, ಇವುಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದರು.
ಭ್ರಷ್ಠಾಚಾರ ತಡೆಯಲು ಕೌನ್ಸೆಲಿಂಗ್ ಪ್ರಕ್ರಿಯೆ
ಈ ಎಲ್ಲ ನೇಮಕಾತಿಗಳನ್ನು ಕೌನ್ಸೆಲಿಂಗ್ ಮೂಲಕ ಮಾಡುತ್ತಿದ್ದು, ಭ್ರಷ್ಠಚಾರ ತಡೆಯಲು ಸಾಧ್ಯವಾಗುತ್ತಿದೆ. 5700 ಹುದ್ದೆಗಳನ್ನು ವೈದ್ಯರನ್ನು ಸೇರಿದಂತೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ಭ್ರಷ್ಠಾಚಾರವನ್ನು ತಡೆಯುವುದು ಸರ್ಕಾರದ ಆಶಯ. ವರ್ಗಾವಣೆ ಏಜೆಂಟ್ ಗಳ ಹಾವಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ನೌಕರರು ಇದಕ್ಕೆ ಬಲಿಯಾಗಬಾರದು ಎಂದರು.
ರೋಗತಡೆಗಟ್ಟುವಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು
ವೈದ್ಯಕೇತರ ಸಿಬ್ಬಂದಿಗಳೂ ವೈದ್ಯರಷ್ಟೇ ಪ್ರಮುಖರು. ಆರೋಗ್ಯ ಇಲಾಖೆಯ ಕೆಲಸ ಕಾರ್ಯಗಳಲ್ಲಿ ಜಾತಿಧರ್ಮಗಳ ಬೇಧಗಳನ್ನು ಮೀರಿ,ಮಾನವೀಯತೆಯಿಂದ ಸೇವೆ ಸಲ್ಲಿಸುವುದು ಮುಖ್ಯ. ರೋಗಿಗಳಿಗೆ ಚಿಕಿತ್ಸೆಯ ಸಂದರ್ಭದಲ್ಲಿ ಬೇಕಾಗುವ ರಕ್ತವನ್ನು ಪಡೆಯಲು ಯಾವುದೇ ಜಾತಿಧರ್ಮಗಳನ್ನು ಪರಿಗಣಿಸುವುದಿಲ್ಲ.
ಆದರೆ ಜನರು ಗುಣಮುಖರಾದಂತಹ ತಕ್ಷಣ ಪುನ: ಜಾತಿಧರ್ಮಗಳ ಸುಳಿಯಲ್ಲಿ ಬೀಳುತ್ತಾರೆ. ರೋಗ ತಡೆಗಟ್ಟುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ದಿಸೆಯಲ್ಲಿ ಆರೋಗ್ಯ ಇಲಾಖೆ ಕಾರ್ಯತತ್ಪರರಾಗಬೇಕು. ರಾಜ್ಯದ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಸರ್ಕಾರ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.
ಕಲಬುರಗಿ: ಜಿಲ್ಲೆಯ ರಾವೂರ್ ಗ್ರಾಮದಲ್ಲಿ ಶಿವಾಜಿ ಜಯಂತಿ ಆಚರಣೆ ವೇಳೆ ಉದ್ವಿಗ್ನತೆ ತಲೆದೋರಿದ್ದು, ಎರಡು ಸಮುದಾಯಗಳ ನಡುವೆ ಗುದ್ದಾಟ ನಡೆದಿದೆ.
ಗೋಕುಲ ನಗರದಲ್ಲಿನ ಗಣೇಶ್ ಕಟ್ಟೆಯ ಮೇಲೆ ಶಿವಾಜಿ ಮಹಾರಾಜರ ಭಾವಚಿತ್ರ ಇಟ್ಟು ಸಂಭ್ರಮಾಚರಣೆ ನಡೆಯುತ್ತಿತ್ತು. ಡಿಜೆ ಸೌಂಡ್ ಜೋರಾಗಿದ್ದ ಹಿನ್ನೆಲೆಯಲ್ಲಿ ಮತ್ತೊಂದು ಸಮುದಾಯ ಆಕ್ಷೇಪ ವ್ಯಕ್ತಪಡಿಸಿದೆ. ಮಾತಿನ ಚಕಮಕಿ ಕಲ್ಲು-ಕಟ್ಟಿಗೆ ದಾಳಿಗೆ ತಿರುಗಿ, ಮೂರ್ನಾಲ್ಕು ಮಂದಿ ಗಾಯಗೊಂಡಿದ್ದಾರೆ.
ಘಟನೆ ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಬಳಿಕ ಹಿರಿಯರ ಮಧ್ಯಸ್ಥಿಕೆಯಲ್ಲಿ ಎರಡು ಸಮುದಾಯಗಳ ನಡುವೆ ಸಂಧಾನ ನಡೆದಿದ್ದು, ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.
ಘಟನೆ ಗ್ರಾಮದಲ್ಲಿ ಕ್ಷಣಿಕ ಉದ್ವಿಗ್ನತೆಯನ್ನು ಉಂಟುಮಾಡಿದರೂ, ಇದೀಗ ಪರಿಸ್ಥಿತಿ ಶಾಂತಿಯುತವಾಗಿದೆ.