Home Blog Page 17

ಹೈಕೋರ್ಟ್ ಆದೇಶದ ಬಳಿಕ ರೆಗ್ಯುಲರ್ ಬೇಲ್: ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ ರಿಲೀಫ್

0

ದಾವಣಗೆರೆ: ಹರಿಹರ ಪೀಠದ ವಚನಾನಂದ ಸ್ವಾಮೀಜಿಗೆ ಸಂಬಂಧಿಸಿದ ಪೋಕ್ಸೋ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ನಿಯಮಿತ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿದ ಬಳಿಕ ಕಾನೂನು ಪ್ರಕ್ರಿಯೆಯಂತೆ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಲಯ ಅನುಮೋದನೆ ನೀಡಿದೆ.

ಮಠದಲ್ಲಿದ್ದ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಮೊದಲಿಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್‌ಐಆರ್ ದಾಖಲಿಸಲಾಗಿದ್ದು, ನಂತರ ತನಿಖೆಯ ಹೊಣೆಗಾರಿಕೆಯನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.

ಪ್ರಕರಣದಲ್ಲಿ ಮುಂಚಿತವಾಗಿ ಪಡೆದಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸುವಂತೆ ಸಂತ್ರಸ್ತ ಬಾಲಕನ ತಾಯಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜೂನ್ 25ರಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿ, ಮೂರು ವಾರಗಳೊಳಗೆ ನಿಯಮಿತ ಜಾಮೀನು ಪಡೆಯಲು ಅವಕಾಶ ಕಲ್ಪಿಸಿತ್ತು.

ಈ ಹಿನ್ನೆಲೆಯಲ್ಲಿ ಜೂನ್ 27ರಂದು ವಚನಾನಂದ ಸ್ವಾಮೀಜಿ ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ನಿಯಮಿತ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಆದೇಶ ಹೊರಬಿದ್ದ ಬೆನ್ನಲ್ಲೇ ಸ್ವಾಮೀಜಿಯ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ರೈತರ ಹಿತ, ಕುಡಿಯುವ ನೀರಿನ ಪೂರೈಕೆ ಮತ್ತು ಕೋರ್ಟ್ ಆದೇಶ ಪಾಲನೆಗೆ ಸರ್ಕಾರ ಬದ್ಧ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ಕಾವೇರಿ ವಿಚಾರದಲ್ಲಿ ನಾವು ರೈತರನ್ನು ಬದುಕಿಸಬೇಕು. ಕುಡಿಯುವ ನೀರನ್ನು ಪೂರೈಸಬೇಕು, ತಮಿಳುನಾಡು ಪಾಲಿನ ನೀರು ಹರಿಸುವ ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು. 15ರಂದು ಕಾವೇರಿ ಮಂಡಳಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ನಮ್ಮ ರಾಜ್ಯದ ವಾದ ಮಂಡಿಸುತ್ತೇವೆ. ನಂತರ ತೀರ್ಮಾನವನ್ನು ತಿಳಿಸುತ್ತೇವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು. ಮಂಡ್ಯ ಶಾಸಕರು ಕಾವೇರಿ ನೀರು ಬಿಡುವಂತೆ ಮನವಿ ಮಾಡಿರುವ ಬಗ್ಗೆ ಕೇಳಿದಾಗ, “ಮಂಡ್ಯದವರು, ಶ್ರೀರಂಗಪಟ್ಟಣದವರು, ಜಿಲ್ಲಾ ಸಚಿವರು ಬಂದು ಭೇಟಿ ಮಾಡಿದ್ದರು. ಸಭೆ ಬಳಿಕ ತೀರ್ಮಾನ ತಿಳಿಸುತ್ತೇವೆ” ಎಂದು ಹೇಳಿದರು.

ಕೆಪಿಎಸ್ ಸಿ ಅಧ್ಯಕ್ಷರ ಅಮಾನತ್ತಿನ ಬಗ್ಗೆ ಕೇಳಿದಾಗ, “ರಾಜ್ಯಪಾಲರು ಈ ಆದೇಶ ಮಾಡಿದ್ದಾರೆ. ಅವರ ನಂತರ ಯಾರು ಹಿರಿಯರು ಇದ್ದಾರೋ ಅವರಿಗೆ ಜವಾಬ್ದಾರಿ ನೀಡುವಂತೆ ನಿರ್ದೇಶನ ನೀಡಿದ್ದೇನೆ” ಎಂದರು.

ತಿರುಪತಿಯಲ್ಲಿ ಆಗುವ ಮೊದಲ ಆರತಿ ರಾಜ್ಯದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ

ತಿರುಪತಿಯಲ್ಲಿ ಮೊದಲ ಆರತಿ ಕರ್ನಾಟಕ ರಾಜ್ಯದವರಿಗೆ ಎಂಬ ತೀರ್ಮಾನದ ಬಗ್ಗೆ ಕೇಳಿದಾಗ, “ತಿರುಪತಿಯಲ್ಲಿ ಮಹಾರಾಜರ ಕಾಲದಿಂದಲೂ ಮೊದಲ ಆರತಿ ಕರ್ನಾಟಕದ್ದಾಗಿದೆ. ಅಲ್ಲಿ ಪ್ರತಿದಿ‌ನ ಅಧಿಕಾರಿಯೊಬ್ಬರು ಆರತಿ ಪಡೆಯುತ್ತಾರೆ. ಆ ಅಧಿಕಾರಿ ಬದಲಿಗೆ ಇಲ್ಲಿಂದ ದರ್ಶನಕ್ಕೆ ಹೋಗುವ ಜನಪ್ರತಿನಿಧಿಗಳು, ನ್ಯಾಯಾಧೀಶರು, ಅಧಿಕಾರಿಗಳಿಗೆ, ಸಂಸದರು, ಮೇಯರ್, ತಹಶೀಲ್ದಾರ್ ಸೇರಿದಂತೆ ನಮ್ಮ ರಾಜ್ಯದವರಿಗೆ ಅವಕಾಶ ನೀಡಲಾಗುವುದು.

ಇದು ನಿರ್ದಿಷ್ಟ ಪಕ್ಷಕ್ಕೆ ಎಂದು ಸೀಮಿತವಲ್ಲ. ಯಾವುದೇ ಪಕ್ಷದ ಜನಪ್ರತಿನಿಧಿಗಳು ಹೋದರು ಈ ಅವಕಾಶ ಅವರಿಗೆ ಸಿಗಬೇಕು. ಇದಕ್ಕೆ ನಿರ್ದಿಷ್ಟ ಮಾರ್ಗಸೂಚಿಗಳಿದ್ದು, ಅದರಂತೆಯೇ ಈ ಅವಕಾಶ ನೀಡಲಾಗುವುದು. ನಮ್ಮ ತೀರ್ಮಾನ ಕೇವಲ ಆರತಿ ವಿಚಾರಕ್ಕೆ ಮಾತ್ರ. ಉಳಿದಂತೆ ಎಲ್ಲಾ ಮಾರ್ಗಸೂಚಿಗಳು ತಿರುಪತಿ ಆಡಳಿತ ಮಂಡಳಿಯಂತೆ ಇರಲಿದೆ. ಅವರ ಮಾರ್ಗಸೂಚಿಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ” ಎಂದು ತಿಳಿಸಿದರು.

ಆಗಸ್ಟ್ 6ರಿಂದ ಮುಂಗಾರು ಅಧಿವೇಶನ

“ಸಚಿವ ಸಂಪುಟ ಸಭೆ ಯಾವಾಗ, ದೆಹಲಿಗೆ ಹೋಗುವುದು ಯಾವಾಗ ಎಂದು ಕೇಳಿದಾಗ, “ಆಗಸ್ಟ್ 6ರಿಂದ ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ. ನಾನು ಒಂದು ದಿನ ಕೆಲಸದ ಮೇಲೆ ದೆಹಲಿಗೆ ಹೋಗಿ ಬರುತ್ತೇನೆ. ನಂತರ ನಮ್ಮ ನಾಯಕರು ಮೂರ್ನಾಲ್ಕು ದಿನಗಳಲ್ಲಿ ದಿನಾಂಕ ನಿಗದಿ ಮಾಡುತ್ತಾರೆ. ನಂತರ ನಾನು ದೆಹಲಿಗೆ ಹೋಗುವೆ” ಎಂದು ಮಾಹಿತಿ ನೀಡಿದರು.

“ಮಾಜಿ ಸಂಸದರಾದ ಹೆಚ್ ಹನುಮಂತಪ್ಪ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದಿ. ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿದ್ದರು. ರೈಲ್ವೇ ಆಯೋಗಕ್ಕೆ ಅಧ್ಯಕ್ಷರಾಗಿದ್ದರು. 45 ವರ್ಷಗಳಿಂದ ನನಗೆ ಆತ್ಮೀಯರಾಗಿದ್ದರು. ನಮ್ಮ ಪಕ್ಷದ ಉಪಾಧ್ಯಕ್ಷರಾಗಿ, ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ನಾನು, ಕೆಪಿಸಿಸಿ ಅದ್ಯಕ್ಷರಾದ ಬಿ ಕೆ ಹರಿಪ್ರಸಾದ್, ಡಿಸಿಎಂ ಪರಮೇಶ್ವರ್, ಸಚಿವರಾದ ಮುನಿಯಪ್ಪ ಅವರು ಅವರಿಗೆ ಅಂತಿಮ ನಮನ ಸಲ್ಲಿಸಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ರಾಜ್ಯ ಹಾಗೂ ರಾಷ್ಟ್ರದ ಸಮಸ್ಯೆಗಳಿಗೆ ಮಾರ್ಗದರ್ಶನ ಕೊಟ್ಟ ಹಿರಿಯ ನಾಯಕರು. ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ” ಎಂದು ತಿಳಿಸಿದರು.

ರಾಜ್ಯದ ದೇವಾಲಯಗಳ ಹುಂಡಿ ಹಣಕ್ಕೆ ಹೈಟೆಕ್ ಭದ್ರತೆ: ದುರ್ಬಳಕೆ ತಡೆಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆ ಹಣ ಕಳ್ಳತನ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಹುಂಡಿ ಹಣದ ಭದ್ರತೆ ಹಾಗೂ ಎಣಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕ ಮತ್ತು ಸುರಕ್ಷಿತಗೊಳಿಸಲು ಸಮಗ್ರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

ಸರ್ಕಾರದ ಮಾರ್ಗಸೂಚಿಯಂತೆ, ದೇವಾಲಯಗಳಲ್ಲಿ ಹುಂಡಿಗಳನ್ನು ಎಲ್ಲರಿಗೂ ಗೋಚರಿಸುವ ಸುರಕ್ಷಿತ ಸ್ಥಳಗಳಲ್ಲಿ ಅಳವಡಿಸಬೇಕು. ಪ್ರತಿಯೊಂದು ಹುಂಡಿಯೂ ನಾಲ್ಕು ದಿಕ್ಕಿನಿಂದ ಸ್ಪಷ್ಟವಾಗಿ ಗೋಚರಿಸುವಂತೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಅದರ ದೃಶ್ಯಾವಳಿಯನ್ನು ಸರ್ವರ್‌ನಲ್ಲಿ ಸಂರಕ್ಷಿಸಬೇಕು. ಜಿಲ್ಲಾಧಿಕಾರಿ ಕಚೇರಿಯ ಮುಜರಾಯಿ ವಿಭಾಗದಿಂದ ಈ ಕ್ಯಾಮೆರಾಗಳ ಮೇಲ್ವಿಚಾರಣೆ ನಡೆಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.

ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸುವುದು ಅಥವಾ ಕರ್ಪೂರದ ಹೊಗೆಯಿಂದ ಕ್ಯಾಮೆರಾ ಲೆನ್ಸ್ ಮಸುಕಾಗಿಸಿ ಕಳ್ಳತನ ನಡೆಸುವ ಪ್ರಯತ್ನಗಳನ್ನು ತಡೆಯಲು ವೆಬ್ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಪ್ರತ್ಯೇಕ ಸರ್ವರ್ ಸ್ಥಾಪಿಸಿ, ರಾಜ್ಯದ ಎಲ್ಲಾ ಪ್ರಮುಖ ದೇವಾಲಯಗಳ ಕ್ಯಾಮೆರಾಗಳನ್ನು ಕೇಂದ್ರ ಮಟ್ಟದಲ್ಲೇ ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ಜಾರಿಗೊಳ್ಳಲಿದೆ.

ಭದ್ರತೆಯ ದೃಷ್ಟಿಯಿಂದ ದೇವಾಲಯಗಳ ಸಿಸಿಟಿವಿ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಕಚೇರಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳೊಂದಿಗೆ ಸಂಪರ್ಕ ಕಲ್ಪಿಸಿ, ಸಂಚಾರ ನಿಯಂತ್ರಣ ಕೊಠಡಿಗಳಲ್ಲಿಯೂ ನೇರ ವೀಕ್ಷಣೆ ಸಾಧ್ಯವಾಗುವಂತೆ ಡ್ಯಾಶ್‌ಬೋರ್ಡ್ ವ್ಯವಸ್ಥೆ ರೂಪಿಸಲಾಗುತ್ತದೆ.

ದೇವಾಲಯಗಳಲ್ಲಿ ಡಿಜಿಟಲ್ ದೇಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹುಂಡಿಗಳಿರುವ ಸ್ಥಳದಲ್ಲೇ ಕ್ಯೂಆರ್ ಕೋಡ್ ಅಳವಡಿಸಲು ಸೂಚಿಸಲಾಗಿದೆ. ಯುಪಿಐ, ಭೀಮ್ ಸೇರಿದಂತೆ ವಿವಿಧ ನಗದುರಹಿತ ಪಾವತಿ ವ್ಯವಸ್ಥೆಗಳ ಮೂಲಕ ಭಕ್ತರು ದೇಣಿಗೆ, ಪ್ರಸಾದ, ಸೇವಾ ಟಿಕೆಟ್ ಸೇರಿದಂತೆ ಇತರ ಸೇವೆಗಳ ಹಣ ಪಾವತಿಸಲು ಅವಕಾಶ ಕಲ್ಪಿಸಬೇಕು. ಕ್ಯೂಆರ್ ಕೋಡ್ ದುರುಪಯೋಗವಾಗದಂತೆ ದೇವಾಲಯದ ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕೆಂದು ಸೂಚಿಸಲಾಗಿದೆ.

ಹುಂಡಿ ಎಣಿಕೆಗೆ ಮುಂಚಿತವಾಗಿ ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಎಣಿಕೆ ದಿನಗಳನ್ನು ನಿಗದಿಪಡಿಸಬೇಕು. ಹೆಚ್ಚಿನ ಕಾಣಿಕೆ ಬರುವ ದೇವಾಲಯಗಳಲ್ಲಿ ವಾರಕ್ಕೊಮ್ಮೆ ಹಾಗೂ ಸಾಮಾನ್ಯ ದೇವಾಲಯಗಳಲ್ಲಿ ಎರಡು ವಾರಕ್ಕೊಮ್ಮೆ ಕಡ್ಡಾಯವಾಗಿ ಹುಂಡಿ ಎಣಿಕೆ ನಡೆಸಬೇಕು. ಈ ಪ್ರಕ್ರಿಯೆ ತಹಶೀಲ್ದಾರ್ ಅವರ ಮೇಲ್ವಿಚಾರಣೆಯಲ್ಲಿಯೇ ನಡೆಯಬೇಕು.

ಹುಂಡಿ ಎಣಿಕೆ ವೇಳೆ ದೊರೆಯುವ ಚಿನ್ನ, ಬೆಳ್ಳಿ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಅದೇ ದಿನ ಮೌಲ್ಯಮಾಪನ ಮಾಡಿ ಸಂಬಂಧಿತ ಜಿಲ್ಲಾ ಉಪಖಜಾನೆಗೆ ಜಮಾ ಮಾಡಬೇಕು. ಎಣಿಕೆಯಲ್ಲಿ ಭಾಗವಹಿಸುವ ಸಿಬ್ಬಂದಿ ಮತ್ತು ಅಧಿಕಾರಿಗಳ ಹಾಜರಾತಿಯನ್ನು ಫೇಸ್ ರಿಕಗ್ನಿಷನ್ ಮೂಲಕ ದಾಖಲಿಸುವುದರ ಜೊತೆಗೆ, ಎಣಿಕೆ ಸ್ಥಳಕ್ಕೆ ಪ್ರವೇಶಿಸುವ ಮುನ್ನ ತಮ್ಮ ಬಳಿ ಇರುವ ನಗದು ಮೊತ್ತವನ್ನು ಘೋಷಿಸುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ.

ಹುಂಡಿ ತೆರೆಯುವುದರಿಂದ ಹಿಡಿದು ಹಣವನ್ನು ಬ್ಯಾಂಕ್‌ಗೆ ಹಸ್ತಾಂತರಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ದಿನಾಂಕ ಮತ್ತು ಸಮಯ ದಾಖಲೆಯಾಗುವಂತೆ ಕಡ್ಡಾಯವಾಗಿ ವಿಡಿಯೋ ಚಿತ್ರೀಕರಿಸಬೇಕು. ಹುಂಡಿಯಿಂದ ಹಣ ಹೊರತೆಗೆಯುವುದು, ಸಿಬ್ಬಂದಿಗೆ ಹಣ ವಿತರಿಸುವುದು ಹಾಗೂ ಮರುಸ್ವೀಕರಿಸುವ ಹಂತಗಳನ್ನೂ ವಿಡಿಯೋದಲ್ಲಿ ದಾಖಲಿಸಬೇಕು.

ಇನ್ನು ಮುಂದೆ ಹುಂಡಿ ಎಣಿಕೆಗೆ ಸಾರ್ವಜನಿಕರ ಸೇವೆ ಪಡೆಯುವಂತಿಲ್ಲ. ಗೃಹ ರಕ್ಷಕದಳದ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಅಥವಾ ಸರ್ಕಾರಿ ನೌಕರರನ್ನೇ ಈ ಕಾರ್ಯಕ್ಕೆ ನಿಯೋಜಿಸಬೇಕು. ಹುಂಡಿ ಎಣಿಕೆ ಅಥವಾ ಹುಂಡಿಗಳಲ್ಲಿ ಕಳ್ಳತನ ನಡೆದರೆ ಸಂಬಂಧಿತ ದೇವಾಲಯದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಪರಿಗಣಿಸಲಾಗುತ್ತದೆ.

ಮಾರ್ಗಸೂಚಿಯ ಭಾಗವಾಗಿ ಸ್ಥಳೀಯ ಪೊಲೀಸರೊಂದಿಗೆ ಸಿಸಿಟಿವಿ ಲೈವ್ ಫೀಡ್ ಏಕೀಕರಣ, ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ, ಅಗ್ನಿ ಸುರಕ್ಷತಾ ಮಾನದಂಡಗಳ ಪಾಲನೆ ಹಾಗೂ ಸಿಸಿಟಿವಿ ವ್ಯವಸ್ಥೆಯ ಕಾರ್ಯನಿರ್ವಹಣೆಯ ನಿಯಮಿತ ಪರಿಶೀಲನೆಗೂ ಆದ್ಯತೆ ನೀಡಲಾಗಿದೆ.

ಸ್ಥಳೀಯ ಕಂದಾಯ, ಪೊಲೀಸ್, ಧಾರ್ಮಿಕ ದತ್ತಿ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕನಿಷ್ಠ 15 ದಿನಗಳಿಗೊಮ್ಮೆ ಜಂಟಿಯಾಗಿ ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪ್ರಮುಖ ‘ಎ’ ಮತ್ತು ‘ಬಿ’ ಪ್ರವರ್ಗದ ದೇವಾಲಯಗಳಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೂರು ತಿಂಗಳಿಗೊಮ್ಮೆ ಜಂಟಿ ಪರಿಶೀಲನೆ ನಡೆಸಿ ಮಾರ್ಗಸೂಚಿಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಬೇಕು.

ಇದಲ್ಲದೆ, ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಅನುಷ್ಠಾನದ ಪ್ರಗತಿ, ಪತ್ತೆಯಾದ ನ್ಯೂನತೆಗಳು, ಕೈಗೊಂಡ ಕ್ರಮಗಳು ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಕ್ರೋಢೀಕೃತ ಅನುಸರಣಾ ವರದಿಯನ್ನು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಮ ಮಂದಿರ ದೇಣಿಗೆ ಅಕ್ರಮ ಆರೋಪ: RSS ಬಹಿರಂಗವಾಗಿ ಕ್ಷಮೆ ಕೇಳಬೇಕು – ಪ್ರಿಯಾಂಕ್ ಖರ್ಗೆ ಆಗ್ರಹ

ಬೆಂಗಳೂರು: ಅಯೋಧ್ಯೆ ರಾಮಮಂದಿರ ದೇಣಿಗೆ ದುರುಪಯೋಗ ಆರೋಪದ ವಿಚಾರದಲ್ಲಿ ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಬೆಂಗಳೂರುದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ದೇಣಿಗೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಆರ್‌ಎಸ್‌ಎಸ್ ವಿಷಾದ ವ್ಯಕ್ತಪಡಿಸಿದೆ ಎಂಬ ವರದಿಗೆ ಪ್ರತಿಕ್ರಿಯೆ ನೀಡಿದರು. “ವಿಷಾದ ವ್ಯಕ್ತಪಡಿಸಿದರೆ ಸಾಕಾಗುವುದಿಲ್ಲ. ಮೊದಲು ತಪ್ಪಾಗಿದೆ ಎಂದು ಒಪ್ಪಿಕೊಳ್ಳಬೇಕು. ನಂತರ ಸಾರ್ವಜನಿಕರ ಮುಂದೆ ಬಂದು ಕ್ಷಮೆ ಕೇಳಬೇಕು. ಕೇವಲ ಪತ್ರಿಕಾ ಪ್ರಕಟಣೆ ನೀಡುವುದರಿಂದ ಜವಾಬ್ದಾರಿ ಮುಗಿಯುವುದಿಲ್ಲ” ಎಂದು ಹೇಳಿದರು.

ವಿಹೆಚ್‌ಪಿ ಮತ್ತು ಆರ್‌ಎಸ್‌ಎಸ್ ನಡುವಿನ ಸಂಬಂಧವನ್ನು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ, “ವಿಹೆಚ್‌ಪಿ ಆರ್‌ಎಸ್‌ಎಸ್‌ನ ಅಂಗ ಸಂಸ್ಥೆ. ಅದನ್ನು ಸ್ಥಾಪಿಸಿರುವುದೂ ಆರ್‌ಎಸ್‌ಎಸ್. ಹೀಗಾಗಿ ಈ ವಿಚಾರದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ. ಆದ್ದರಿಂದ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದರು.

ಇದೇ ವೇಳೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, “ನಾವು ಯಾವುದೇ ವಿಚಾರವನ್ನು ಮುಚ್ಚಿಡುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಈ ಪ್ರಕರಣವನ್ನು ಯಾಕೆ ಮುಚ್ಚಿಟ್ಟಿರಿ? ಸಾರ್ವಜನಿಕರ ಮುಂದೆ ಬಂದು ಸ್ಪಷ್ಟನೆ ನೀಡಬೇಕು” ಎಂದು ಪ್ರಶ್ನಿಸಿದರು.

ಪಾಕಿಸ್ತಾನದೊಂದಿಗೆ ಸಂಬಂಧ ಸುಧಾರಿಸುವ ಕುರಿತು ಆರ್‌ಎಸ್‌ಎಸ್ ವ್ಯಕ್ತಪಡಿಸಿರುವ ಅಭಿಪ್ರಾಯವನ್ನೂ ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, “ಆರ್ಥಿಕತೆ, ಉದ್ಯೋಗ ಸೇರಿದಂತೆ ಹಲವು ರಾಷ್ಟ್ರೀಯ ವಿಚಾರಗಳ ಬಗ್ಗೆ ಆರ್‌ಎಸ್‌ಎಸ್ ಅಭಿಪ್ರಾಯ ವ್ಯಕ್ತಪಡಿಸುತ್ತದೆ. ಹಾಗಿದ್ದರೆ ಈ ಪ್ರಕರಣದಲ್ಲೂ ಸ್ಪಷ್ಟವಾಗಿ ಜನರ ಮುಂದೆ ಬಂದು ಉತ್ತರಿಸಬೇಕು” ಎಂದು ಹೇಳಿದರು.

ಜನಸಂಖ್ಯೆ ನಿಯಂತ್ರಣ ಕುರಿತು ಆರ್‌ಎಸ್‌ಎಸ್ ನೀಡಿರುವ ಹೇಳಿಕೆಗಳ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, “ಜನಸಂಖ್ಯೆ ವಿಚಾರದಲ್ಲಿ ಆರ್‌ಎಸ್‌ಎಸ್ ಮಾತನಾಡುತ್ತದೆ. ಆದರೆ ಅವರ ನಿಲುವುಗಳಲ್ಲಿ ಸಾಕಷ್ಟು ಗೊಂದಲಗಳಿವೆ. ತಮ್ಮದೇ ಸಂಸ್ಥೆಯ ಸಂವಿಧಾನ ಮತ್ತು ಕಾರ್ಯವೈಖರಿಯನ್ನು ಮೊದಲು ಅರ್ಥಮಾಡಿಕೊಳ್ಳಬೇಕು” ಎಂದು ವ್ಯಂಗ್ಯವಾಡಿದರು.

KRS ನೀರಿಗಾಗಿ ರೈತರ ಕಿಡಿ: ಹೆದ್ದಾರಿ ತಡೆ, ಡಿಸಿ ಕಚೇರಿ ಮುತ್ತಿಗೆ ಯತ್ನ

0

ಮಂಡ್ಯ: ಕೆಆರ್‌ಎಸ್ ಡ್ಯಾಂನಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಮಂಡ್ಯದಲ್ಲಿ ರೈತರು ತೀವ್ರ ಹೋರಾಟ ಆರಂಭಿಸಿದ್ದಾರೆ. ಮೈಸೂರು-ಬೆಂಗಳೂರು ಹಳೆಯ ಹೆದ್ದಾರಿಯನ್ನು ತಡೆದು ರಸ್ತೆ ಮಧ್ಯೆ ಧರಣಿ ನಡೆಸಿದ ಪ್ರತಿಭಟನಾಕಾರರು, ಕೆಲವರು ಅರೆಬೆತ್ತಲೆಯಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದ ಸಂಜಯ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು, ಡ್ಯಾಂನಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದರೂ ನಾಲೆಗಳಿಗೆ ನೀರು ಹರಿಸದ ಕಾರಣ ಕಬ್ಬು ಸೇರಿದಂತೆ ಹಲವು ಬೆಳೆಗಳು ಒಣಗುತ್ತಿವೆ ಎಂದು ಆರೋಪಿಸಿದರು. ತಕ್ಷಣವೇ ನೀರು ಬಿಡುಗಡೆ ಮಾಡದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ಇದಾದ ಬಳಿಕ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ರೈತರಿಗೆ ನೀರು ಸಿಗದ ಪರಿಸ್ಥಿತಿಯಲ್ಲಿ 6ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಆದ್ಯತೆ ನೀಡುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಮೊದಲು ರೈತರ ಬೆಳೆ ಉಳಿಸುವ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ಮಂಡ್ಯ ಭಾಗದ ಶಾಸಕರು ಹಾಗೂ ಜಿಲ್ಲಾ ಸಚಿವರು ತಮ್ಮೊಂದಿಗೆ ಚರ್ಚೆ ನಡೆಸಿದ್ದಾರೆ. ರೈತರ ಹಿತಾಸಕ್ತಿ ಮತ್ತು ನ್ಯಾಯಾಲಯದ ಆದೇಶ ಎರಡನ್ನೂ ಗಮನದಲ್ಲಿಟ್ಟುಕೊಂಡು ಜುಲೈ 15ರಂದು ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಶಾಸಕ ರವಿ ಗಣಿಗ ಮಾತನಾಡಿ, ನಾಲೆಗಳಿಗೆ ನೀರು ಹರಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ. ಜುಲೈ 15ರಂದು ಕಾವೇರಿ ನೀರಿನ ವಿಚಾರಣೆ ಪೂರ್ಣಗೊಂಡ ಬಳಿಕ ಜುಲೈ 16ರಿಂದ ನೀರು ಬಿಡುಗಡೆ ಮಾಡುವ ಭರವಸೆ ಸಿಕ್ಕಿದೆ. ರೈತರು ಆತಂಕಪಡುವ ಅಗತ್ಯವಿಲ್ಲ. ಈಗ ಬೆಳೆದಿರುವ ಬೆಳೆಗಳಿಗೆ ನೀರು ಒದಗಿಸುವುದರ ಜೊತೆಗೆ ಕಾವೇರಿ, ಕೃಷ್ಣಾ ಮತ್ತು ಗೋದಾವರಿ ನದಿಗಳ ಜೋಡಣೆ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.

ಬದರಿನಾಥ ದೇಗುಲದ ಕಾಣಿಕೆ ಕಳ್ಳತನ ಪ್ರಕರಣದಲ್ಲಿ ಓರ್ವನ ಬಂಧನ: SIT ತನಿಖೆ ಮತ್ತಷ್ಟು ಚುರುಕು

0

ಉತ್ತರಾಖಂಡ: ಚಾರ್‌ಧಾಮಗಳಲ್ಲಿ ಒಂದಾದ ಬದರಿನಾಥ ಧಾಮದಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆ ಕಳ್ಳತನ ಪ್ರಕರಣದ ತನಿಖೆ ವೇಗ ಪಡೆದುಕೊಂಡಿದ್ದು, ವಿಶೇಷ ತನಿಖಾ ದಳ (ಎಸ್‌ಐಟಿ) ಪ್ರಮುಖ ಆರೋಪಿ ಹಾಗೂ ಬದರಿ-ಕೇದಾರ ದೇವಾಲಯ ಸಮಿತಿ (ಬಿಕೆಟಿಸಿ)ಯ ಅಮಾನತುಗೊಂಡ ಸಿಬ್ಬಂದಿ ಪ್ರಮೋದ್ ನೌಟಿಯಾಲ್ ಅವರನ್ನು ಬಂಧಿಸಿದೆ.

ಆರೋಪಿ ಪರಾರಿಯಾಗುವ ಸಾಧ್ಯತೆಯನ್ನು ಮನಗಂಡ ಎಸ್‌ಐಟಿ ಅಧಿಕಾರಿಗಳು ಸಾಮಾನ್ಯ ಉಡುಪಿನಲ್ಲಿ ಕಾರ್ಯಾಚರಣೆ ನಡೆಸಿ, ಡೆಹ್ರಾಡೂನ್‌ನಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆದಿದ್ದಾರೆ. ಬಳಿಕ ಅವರನ್ನು ಚಮೋಲಿ ಜಿಲ್ಲೆಗೆ ಕರೆತಂದು ವಿಚಾರಣೆಗೆ ಒಳಪಡಿಸಲಾಗಿದೆ.

ಬಿಕೆಟಿಸಿಯಲ್ಲಿ ಉದ್ಯೋಗಿಯಾಗಿದ್ದ ಪ್ರಮೋದ್ ನೌಟಿಯಾಲ್ ವಿರುದ್ಧ ಭಕ್ತರ ಕಾಣಿಕೆ ಕಳವು ಮಾಡಿರುವ ಗಂಭೀರ ಆರೋಪ ಕೇಳಿಬಂದಿತ್ತು. ಆರೋಪ ಬಹಿರಂಗವಾಗುತ್ತಿದ್ದಂತೆ ದೇವಾಲಯ ಸಮಿತಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು.

ಅಮಾನತು ಕ್ರಮವನ್ನು ಪ್ರಶ್ನಿಸಿ ನೌಟಿಯಾಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಬಿಕೆಟಿಸಿಗೆ ಸೂಚಿಸಿ ಜುಲೈ 16ರಂದು ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ. ಇದರ ನಡುವೆಯೇ ಎಸ್‌ಐಟಿ ಅವರನ್ನು ಬಂಧಿಸಿ ತನಿಖೆ ಮುಂದುವರಿಸಿದೆ.

ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಶೀಘ್ರದಲ್ಲೇ ಮತ್ತಷ್ಟು ಬಂಧನಗಳು ನಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಪ್ರಕರಣವನ್ನು ಮೊದಲ ಬಾರಿಗೆ ಭೈರವ ಸೇನೆಯ ಸಂಸ್ಥಾಪಕ ಸಂದೀಪ್ ಖತ್ರಿ ಬಹಿರಂಗಪಡಿಸಿದ್ದರು. ಬದರಿನಾಥ ದೇವಾಲಯದಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆ ದುರುಪಯೋಗವಾಗುತ್ತಿದೆ ಎಂಬ ಆರೋಪವನ್ನು ಅವರು ಸಾರ್ವಜನಿಕವಾಗಿ ಮಾಡಿದ್ದರು. ಈ ಆರೋಪ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು.

ಬೆಳವಣಿಗೆಯ ನಂತರ ಬದರಿ-ಕೇದಾರ ದೇವಾಲಯ ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ ನಾಲ್ವರು ಸದಸ್ಯರ ಆಂತರಿಕ ತನಿಖಾ ಸಮಿತಿಯನ್ನು ರಚಿಸಿದ್ದರು. ಬಳಿಕ ಪ್ರಕರಣ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಸುದ್ದಿಯಾಗುತ್ತಿದ್ದಂತೆ ಉತ್ತರಾಖಂಡ ಸರ್ಕಾರ ಮೂರು ಸದಸ್ಯರ ಉನ್ನತ ಮಟ್ಟದ ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿತು.

ತನಿಖೆಯ ಮೊದಲ ಹಂತದಲ್ಲೇ ಪ್ರಮೋದ್ ನೌಟಿಯಾಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಬಂಧನ ನಡೆದಿದ್ದು, ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ.

ತಮಿಳುನಾಡಿನಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ

0

ನವದೆಹಲಿ: ತಮಿಳುನಾಡಿನಲ್ಲಿ ಬಕ್ರೀದ್ ಸೇರಿದಂತೆ ಯಾವುದೇ ದಿನ ಗೋವು ಮತ್ತು ಕರುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಮಧ್ಯಂತರ ತಡೆ ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.

ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ವೇಳೆ ಪೀಠ ರಾಜ್ಯ ಸರ್ಕಾರದ ಮನವಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಿದ್ದು, ಹೈಕೋರ್ಟ್ ಆದೇಶದ ಜಾರಿಗೆ ತಾತ್ಕಾಲಿಕ ತಡೆ ನೀಡಿದೆ.

ವಿಚಾರಣೆ ವೇಳೆ ಹೈಕೋರ್ಟ್ ಆದೇಶದ ಕೊನೆಯ ಭಾಗವನ್ನು ಪ್ರಾಥಮಿಕ ಹಂತದಲ್ಲೇ ಮರುಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ತಮಿಳುನಾಡು ಸರ್ಕಾರ ತನ್ನ ಅರ್ಜಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಗೋಹತ್ಯೆಯನ್ನು ನಿಯಂತ್ರಿಸುವುದೇ ಉದ್ದೇಶವಾಗಿದ್ದು, ರಾಜ್ಯದ ಪ್ರಸ್ತುತ ಕಾನೂನು ಸಂಪೂರ್ಣ ನಿಷೇಧಕ್ಕೆ ಅವಕಾಶ ನೀಡುವುದಿಲ್ಲ ಎಂದು ವಾದಿಸಿದೆ. ಹೈಕೋರ್ಟ್ ನೀಡಿರುವ ಆದೇಶವು ರಾಜ್ಯದ ಶಾಸನಬದ್ಧ ಚೌಕಟ್ಟಿಗೆ ವಿರುದ್ಧವಾಗಿದ್ದು, ಕಾನೂನಿನಲ್ಲಿ ನಿಯಂತ್ರಣಕ್ಕೆ ಮಾತ್ರ ಅವಕಾಶವಿದೆ ಹೊರತು ಸಂಪೂರ್ಣ ನಿಷೇಧಕ್ಕೆ ಅವಕಾಶವಿಲ್ಲ ಎಂದು ಸರ್ಕಾರ ತಿಳಿಸಿದೆ.

ಈ ಪ್ರಕರಣವು ಹಿಂದೂ ಮಕ್ಕಳ್ ಕಚ್ಚಿಯ ಪ್ರಧಾನ ಕಾರ್ಯದರ್ಶಿ ಕೆ. ಸೂರ್ಯ ಪ್ರಶಾಂತ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಿಂದ ಆರಂಭವಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ವಿ. ಲಕ್ಷ್ಮಿನಾರಾಯಣ್ ಅವರನ್ನೊಳಗೊಂಡ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠವು ಮೇ 27ರಂದು, ಬಕ್ರೀದ್ ಹಬ್ಬದ ಮುನ್ನಾದಿನ ಈ ಆದೇಶ ನೀಡಿತ್ತು.

ಅರ್ಜಿದಾರರು ತಮ್ಮ ಮನವಿಯಲ್ಲಿ, ಕಾನೂನಿನಲ್ಲಿ ನಿಗದಿಪಡಿಸಿರುವ ವಧಾಸ್ಥಳಗಳಲ್ಲಿ ಮಾತ್ರ ಗೋಹತ್ಯೆ ನಡೆಯುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು. ಆದರೆ ಹೈಕೋರ್ಟ್ ಯಾವುದೇ ದಿನ, ಯಾವುದೇ ಸ್ಥಳದಲ್ಲಿ ಗೋವು ಮತ್ತು ಕರುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಆದೇಶ ಹೊರಡಿಸಿತ್ತು ಎಂದು ತಮಿಳುನಾಡು ಸರ್ಕಾರ ತನ್ನ ಮೇಲ್ಮನವಿಯಲ್ಲಿ ಉಲ್ಲೇಖಿಸಿದೆ.

ಹೈಕೋರ್ಟ್ ತನ್ನ ಆದೇಶದಲ್ಲಿ ಹಾಲು ಉತ್ಪಾದನೆ ಹೆಚ್ಚಿಸುವುದು ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಹೊರಡಿಸಲಾದ ಸರ್ಕಾರಿ ಆದೇಶವನ್ನು ಉಲ್ಲೇಖಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿರುವ ಹಿನ್ನೆಲೆಯಲ್ಲಿ, ಪ್ರಕರಣದ ಮುಂದಿನ ವಿಚಾರಣೆ ಬಳಿಕ ಅಂತಿಮ ತೀರ್ಮಾನ ಹೊರಬೀಳಲಿದೆ.

ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ವಿಚಾರ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ

0

ನವದೆಹಲಿ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ, ಬೆದರಿಕೆ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶದ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಆರೋಪಗಳ ಸ್ವರೂಪವನ್ನು ಬದಲಾಯಿಸಿರುವ ಹೈಕೋರ್ಟ್ ಕ್ರಮದ ಬಗ್ಗೆ ನ್ಯಾಯಪೀಠ ಪ್ರಶ್ನೆ ಎತ್ತಿದೆ.

ಎಚ್.ಡಿ. ರೇವಣ್ಣ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಹೈಕೋರ್ಟ್ ಹಲ್ಲೆ ಆರೋಪಕ್ಕೆ ಸಂಬಂಧಿಸಿದ ವಿಚಾರಣೆಯನ್ನು ರದ್ದುಪಡಿಸಿ, ಲೈಂಗಿಕ ದೌರ್ಜನ್ಯ ಆರೋಪದ ತನಿಖೆಯನ್ನು ಮುಂದುವರಿಸಲು ಅವಕಾಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ನೇತೃತ್ವದ ಪೀಠ, ಹೈಕೋರ್ಟ್ ಆದೇಶದ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಆರೋಪಿಯ ವಿರುದ್ಧದ ಚಾರ್ಜ್‌ಗಳನ್ನು ಬದಲಾಯಿಸಲು ಹೈಕೋರ್ಟ್ ಯಾವ ಆಧಾರದ ಮೇಲೆ ಮುಂದಾಗಿದೆ ಎಂದು ನ್ಯಾಯಪೀಠ ಪ್ರಶ್ನಿಸಿದೆ.

ವಿಚಾರಣೆ ವೇಳೆ, ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರದ ಆರೋಪವಿದ್ದು, ಆ ಪ್ರಕರಣದಲ್ಲಿ ಚಾರ್ಜ್ ಫ್ರೇಮ್ ಆಗಿದೆ. ಆದರೆ ಎಚ್.ಡಿ. ರೇವಣ್ಣ ವಿರುದ್ಧದ ಆರೋಪಗಳು ವಿಭಿನ್ನವಾಗಿವೆ. ಒಂದೇ ಪ್ರಕರಣದ ಹಿನ್ನೆಲೆಯಲ್ಲಿ ತಂದೆಯ ಮೇಲೂ ಅತ್ಯಾಚಾರದ ಆರೋಪವನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮೇಲ್ಮನವಿಯ ಕುರಿತು ಉತ್ತರ ಸಲ್ಲಿಸುವಂತೆ ಎಚ್.ಡಿ. ರೇವಣ್ಣ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಮುಂದೂಡಿದೆ.

ನಗರಸಭೆ ಮೇಲೆ ಲೋಕಾಯುಕ್ತ ದಾಳಿ; ದಾಖಲೆಗಳ ಪರಿಶೀಲನೆ- ದಂಗಾದ ನಗರಸಭೆ ಅಧಿಕಾರಿಗಳು, ಸಿಬ್ಬಂದಿ!

0

ಗದಗ: ಗದಗ-ಬೆಟಗೇರಿ ನಗರಸಭೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.

ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ನಗರಸಭೆ ಕಚೇರಿಗೆ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ಕಂದಾಯ ಹಾಗೂ ಎಂಜಿನಿಯರಿಂಗ್ ವಿಭಾಗಗಳಲ್ಲಿ ದಾಖಲೆಗಳ ಇಂಚಿಂಚು ಪರಿಶೀಲನೆ ನಡೆಸಿದರು. ಅಧಿಕಾರಿಗಳ ಪ್ರಶ್ನೆಗಳಿಗೆ ನಗರಸಭೆ ಸಿಬ್ಬಂದಿ ಉತ್ತರಿಸುವಲ್ಲಿ ತೊಡಗಿದ್ದರು.

ವಾಣಿಜ್ಯ ಕಟ್ಟಡಗಳ ಪರವಾನಗಿ ನೀಡುವಲ್ಲಿ ಅಕ್ರಮ, ನಗರಸಭೆ ಆಸ್ತಿಗಳ ಬಾಡಿಗೆ ಸಂಗ್ರಹದಲ್ಲಿ ಅಕ್ರಮ, ಕುಡಿಯುವ ನೀರಿನ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ದೂರುಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಗದಗ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 6 ಮಂದಿ ಸಿಪಿಐಗಳು ಹಾಗೂ 15ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು. ಗದಗ ಮತ್ತು ಧಾರವಾಡ ಲೋಕಾಯುಕ್ತ ಅಧಿಕಾರಿಗಳು ಸಂಯುಕ್ತವಾಗಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ನಗರಸಭೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ದಾಳಿಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಶೋಧ ಕಾರ್ಯ ಮುಂದುವರಿದಿದ್ದು, ದಾಖಲೆಗಳ ಪರಿಶೀಲನೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ರಾಮ ಮಂದಿರ ದೇಣಿಗೆ ವಿವಾದ: ಟ್ರಸ್ಟ್, UP ಸರ್ಕಾರಕ್ಕೆ ಸುಪ್ರೀಂ ನೋಟಿಸ್ ಜಾರಿ, ವರದಿ ಸಲ್ಲಿಸಲು ಸೂಚನೆ

0

ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಸಂಗ್ರಹಿಸಲಾದ ದೇಣಿಗೆಗಳ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಕೈಗೆತ್ತಿಕೊಂಡಿದೆ.

ಈ ಸಂಬಂಧ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ತನಿಖೆಯ ಪ್ರಗತಿ ಕುರಿತು ಸ್ಥಿತಿಗತಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ. ಜೊತೆಗೆ, ಎಸ್‌ಐಟಿ ರಚನೆಗೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸುವಂತೆಯೂ ಸೂಚಿಸಿದೆ.

ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಎಸ್‌ಐಟಿ ಸಿದ್ಧಪಡಿಸಿರುವ ಸ್ಥಿತಿಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ, ರಾಮ ಮಂದಿರದಲ್ಲಿ ಸಂಗ್ರಹವಾಗಿರುವ ದೇಣಿಗೆಗಳ ನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಕೇಂದ್ರ ತನಿಖಾ ದಳ (ಸಿಬಿಐ) ಮೂಲಕ ತನಿಖೆ, ವಿಧಿವಿಜ್ಞಾನ ಲೆಕ್ಕಪರಿಶೋಧನೆ (Forensic Audit) ಹಾಗೂ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿಯೇ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ.

ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಎಸ್‌ಐಟಿ ತನಿಖೆಗೆ ಆದೇಶಿಸಿದ್ದು, ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆಯ ಭಾಗವಾಗಿ ಹಲವರನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಇದೀಗ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿರುವ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.