Home Blog Page 174

ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ – ದಿವ್ಯಜ್ಯೋತಿ ದರ್ಶನಕ್ಕಾಗಿ ಕಾಯುತ್ತಿರುವ ಭಕ್ತರು

0

ತಿರುವನಂತಪುರಂ: ಮಕರ ಸಂಕ್ರಾಂತಿ ಎಂದರೆ ದೇಶಾದ್ಯಂತ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಘೋಷಣೆಗಳ ಪ್ರತಿಧ್ವನಿ. ಮಾಲಾಧಾರಿಗಳಾಗಿ ಇಡುಮುರಿ ಕಟ್ಟಿಕೊಂಡು, ಕಠಿಣ ವೃತಗಳನ್ನು ಪಾಲಿಸಿ, ಶಬರಿಮಲೆಗೆ ಹೊರಡುವ ಲಕ್ಷಾಂತರ ಭಕ್ತರ ದೃಶ್ಯವೇ ಒಂದು ಭಕ್ತಿ ಹಬ್ಬ.

ಇಂದು ಮಕರ ಸಂಕ್ರಾಂತಿ. ಪೊನ್ನಂಬಲಮೇಡು ಬೆಟ್ಟದಲ್ಲಿ ಮೂಡುವ ಪವಿತ್ರ ಮಕರ ಜ್ಯೋತಿ ದರ್ಶನಕ್ಕಾಗಿ ಕೋಟ್ಯಂತರ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಶಬರಿಮಲೆಯಲ್ಲಿ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದು, ಇನ್ನೂ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

ಅಯ್ಯಪ್ಪನ ತತ್ವವೇ “ತತ್ವಮಸಿ” — ನೀನೇ ಆ ದೇವರು ಎಂಬ ವೇದ ಮಹಾವಾಕ್ಯದ ಸಾರ. ಅಜ್ಞಾನದಿಂದ ಜ್ಞಾನಕ್ಕೆ ದಾರಿ ತೋರಿಸುವ ಈ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಲಕ್ಷಾಂತರ ಭಕ್ತರು ಮಾಲೆ ಧರಿಸಿ ವೃತಾಚರಣೆ ನಡೆಸುತ್ತಾರೆ. ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಪಡೆದು ಪುನೀತರಾಗುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಭಕ್ತರ ಸಂಖ್ಯೆಯ ಭಾರೀ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಆಡಳಿತ ವ್ಯವಸ್ಥೆ ಭಾರೀ ಮುನ್ನೆಚ್ಚರಿಕೆ ವಹಿಸಿದೆ.  1,000ಕ್ಕೂ ಹೆಚ್ಚು ವಿಶೇಷ ಸಾರಿಗೆ ವ್ಯವಸ್ಥೆ, ಬಿಗಿ ಪೊಲೀಸ್ ಬಂದೋಬಸ್ತ್, ಆರೋಗ್ಯ ಮತ್ತು ತುರ್ತು ಸೇವೆಗಳ ವ್ಯವಸ್ಥೆ

ಆದರೆ ಈ ಭಕ್ತಿ ಸಂಭ್ರಮದ ನಡುವೆ, ಕೇರಳದಲ್ಲಿ ವಿವಾದವೂ ಭುಗಿಲೆದ್ದಿದೆ. ಎರೆಮಲೆಯಲ್ಲಿ ಮಾಲಾಧಾರಿಗಳ ವಾಹನಗಳನ್ನು ನಿಲ್ಲಿಸಿ, “ಖಾಸಗಿ ವಾಹನ ಬಿಡುವುದಿಲ್ಲ, ಕೇರಳ ಸರ್ಕಾರಿ ಬಸ್‌ಲ್ಲೇ ಹೋಗಬೇಕು” ಎಂದು ಪೊಲೀಸರು ಒತ್ತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

“ನಾವು ಈಗಾಗಲೇ ವಾಹನ ಬಾಡಿಗೆ ಮಾಡಿಕೊಂಡು ಬಂದಿದ್ದೇವೆ. ಈಗ ಮತ್ತೆ ಸರ್ಕಾರಿ ಬಸ್‌ಗೆ ಹಣ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಇದು ನಮ್ಮ ಭಕ್ತಿ ಮತ್ತು ಶ್ರದ್ಧೆಗೆ ಅವಮಾನ” ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳ ಸರ್ಕಾರ ಭಕ್ತರ ಮೇಲೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ.

ಕೊಡಲಿಯಿಂದ ಕೊಚ್ಚಿ ಮಹಿಳೆ ಹತ್ಯೆ ಪ್ರಕರಣ: ಕೊಲೆ ಆರೋಪಿ ಆತ್ಮಹತ್ಯೆಗೆ ಶರಣು

0

ಬೆಂಗಳೂರು ಗ್ರಾಮಾಂತರ: ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ.

ಆರೋಪಿ ವೀರಭದ್ರಪ್ಪ ಜನವರಿ 12 ರಂದು ಬೆಂಗಳೂರು ಉತ್ತರ ತಾಲೂಕಿನ ಕುದುರೆಗೆರೆ ಗ್ರಾಮದಲ್ಲಿ 55 ವರ್ಷದ ದ್ರಾಕ್ಷಾಯಿಣಿ ಎಂಬ ಮಹಿಳೆಯನ್ನು ಹಾಡಹಗಲೇ ಕೊಲೆ ಮಾಡಿದ್ದ. ಈ ಕೃತ್ಯದ ನಂತರ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ.

ತಡರಾತ್ರಿ ತನ್ನೂರಿನ ಮನೆಯಲ್ಲಿ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು ಶವಾಗಾರಕ್ಕೆ ರವಾನೆ ಮಾಡಿದ್ದಾರೆ.

ಈ ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಹೃದಯಾಘಾತದಿಂದ ಮಂಡ್ಯದ ಯೋಧ ಸಾವು: ಪೊಲೀಸರಿಂದ ಗೌರವ ಸಮರ್ಪಣೆ

0

ಮಂಡ್ಯ: ಕರ್ತವ್ಯದಲ್ಲಿದ್ದ ವೇಳೆ ಹೃದಯಾಘಾತದಿಂದ ಗಡಿ ಭದ್ರತಾ ಪಡೆ (BSF) ಯೋಧನೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯೋಧರನ್ನು ಮಂಡ್ಯ ನಗರದ ತಾವರೆಗೆರೆ ಬಡಾವಣೆ ನಿವಾಸಿ ಎಂ.ಬಿ. ಮಾದೇಗೌಡ (44) ಎಂದು ಗುರುತಿಸಲಾಗಿದೆ.

ಮೃತ ಯೋಧ ಮಹಾರಾಷ್ಟ್ರ ರಾಜ್ಯದ ಲಾತೂರ್ ಜಿಲ್ಲೆಯ ಚಾಕೋರುದಲ್ಲಿರುವ BSF ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 2000ರಲ್ಲಿ ಮೈಸೂರಿನಲ್ಲಿ ನಡೆದ BSF ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಆಯ್ಕೆಯಾಗಿ BSF ಸೇರಿದ್ದ ಮಾದೇಗೌಡ, ಕಳೆದ 25 ವರ್ಷಗಳಿಂದ ದೇಶದ ಹಲವೆಡೆ ಸೇವೆ ಸಲ್ಲಿಸಿದ್ದರು.

ಮೃತ ಯೋಧರಿಗೆ ಪತ್ನಿ ಎಸ್. ಶಿಲ್ಪಾ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಮೃತ ಯೋಧರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲಾಗಿದ್ದು, ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಮೈದಾನದಲ್ಲಿ ಪೊಲೀಸ್ ಇಲಾಖೆಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಗಣಿಗ ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಪುಷ್ಪಗುಚ್ಛ ಇಟ್ಟು ಗೌರವ ನಮನ ಸಲ್ಲಿಸಿದರು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹುತಾತ್ಮ ಯೋಧರಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ಬಳಿಕ ಜಿಲ್ಲಾಡಳಿತದ ವತಿಯಿಂದ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಇದೇ ವೇಳೆ ಶಾಸಕ ಗಣಿಗ ರವಿಕುಮಾರ್, ಡಿಸಿ ಡಾ.ಕುಮಾರ ಹಾಗೂ ಎಸ್ಪಿ ಶೋಭಾರಾಣಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮಧ್ಯಾಹ್ನದ ನಂತರ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

Lakkundi-ಲಕ್ಕುಂಡಿಯ ಭರಮಪ್ಪನ ಕಟ್ಟೆ ಕೆಳಗೆ ಏಳು ಕೊಪ್ಪರಿಗೆ ಚಿನ್ನ ಇದೆಯಂತೆ..? ಘಟಸರ್ಪ ಕಾಯುತ್ತಿದೆಯಂತೆ- 25 ವರ್ಷಗಳ ಹಿಂದಿನ ಭಯಾನಕ ದೃಶ್ಯ ಬಿಚ್ಚಿಟ್ಟ ಬಸಪ್ಪ ಬಡಿಗೇರ!

0

ಗದಗ: ಲಕ್ಕುಂಡಿ ಗ್ರಾಮದ ಶಾವಿಗಿ ಭರಮಪ್ಪನ ಕಟ್ಟೆ ಬಳಿ ಹೆಡೆ ಎತ್ತಿ ಕುಳಿತ ಘಟಸರ್ಪವನ್ನು 25 ವರ್ಷಗಳ ಹಿಂದೆ ಕಣ್ಣಾರೆ ಕಂಡಿದ್ದೇನೆ ಎಂದು ಬಸಪ್ಪ ಬಡಿಗೇರ ಹೇಳಿದ್ದಾರೆ. ಈ ಭಯಾನಕ ದೃಶ್ಯ ಇಂದಿಗೂ ನನ್ನನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ.

ಆಲದ ಮರದ ಕೆಳಗೆ, ಬೀಸುಕಲ್ಲಿನ ಆಕಾರದಲ್ಲಿ ಹೆಡೆ ಎತ್ತಿ ಕುಳಿತಿದ್ದ ಘಟಸರ್ಪವನ್ನು ಕಂಡು ಕೈಯಲ್ಲಿದ್ದ ಚೆಂಬನ್ನು ಬಿಟ್ಟು ಭಯದಿಂದ ಓಡಿ ಮನೆಗೆ ಹೋಗಿದ್ದೆ ಎಂದು ಬಸಪ್ಪ ವಿವರಿಸಿದ್ದಾರೆ.

ಘಟಸರ್ಪವು ಸುಮಾರು ಆರು ಅಡಿ ಉದ್ದವಿತ್ತು. ಆ ದೃಶ್ಯ ನೋಡಿ ‘ಶಿವ ಶಿವ ಪರಮಾತ್ಮ’ ಎಂದು ಹೇಳಿಕೊಂಡು ಅಲ್ಲಿಂದ ಓಡಿ ಬಂದೆ ಎಂದು ನೆನಪಿಸಿಕೊಂಡಿದ್ದಾರೆ.

ಶಾವಿಗಿ ಭರಮಪ್ಪನ ಕಟ್ಟೆಯ ಕೆಳಗೆ ಏಳು ಕೊಪ್ಪರಿಗೆ ಚಿನ್ನ ಇರುವುದು ಸತ್ಯ ಎಂದು ಹೇಳಿರುವ ಬಸಪ್ಪ, ನಿಧಿಯ ಕಾವಲಿಗಾಗಿ ಅಲ್ಲಿ ಎರಡು ಕೋಣಗಳು ಹಾಗೂ ಒಂದು ಘಟಸರ್ಪ ಇರುವುದಾಗಿ ಗ್ರಾಮಸ್ಥರಲ್ಲಿ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ನಿಧಿ ತೆಗೆಯಲು ಬಂದಾಗ ಮೊದಲು ಎರಡು ಕೋಣಗಳು, ನಂತರ ಘಟಸರ್ಪ ಕಾಣಿಸಿಕೊಳ್ಳುತ್ತದೆ ಎಂಬ ಮಾತುಗಳು ಹರಡಿವೆ.

ಇಂತಹ ನಿಧಿಯನ್ನು ತೆಗೆಯಲು ತಾಕತ್ತಿರುವ ಮಂತ್ರವಾದಿಯ ಅಗತ್ಯವಿದೆ ಎನ್ನುವ ನಂಬಿಕೆ ಇದೆ. ಸ್ವಾತಂತ್ರ್ಯ ನಂತರವೂ ನಿಧಿ ತೆಗೆಯಲು ಪ್ರಯತ್ನ ನಡೆದಿದ್ದು, ಆ ವೇಳೆ ಒಬ್ಬ ರಕ್ತಕಾರಿ ಮೃತಪಟ್ಟಿದ್ದಾನೆ ಎಂಬ ವದಂತಿಯೂ ಇದೆ. ಈ ಕಾರಣದಿಂದ ನಿಧಿ ತೆಗೆಯುವ ಪ್ರಯತ್ನ ವಿಫಲವಾಗಿ ಎಲ್ಲರೂ ಓಡಿ ಹೋಗಿದ್ದಾರೆ ಎಂದು ಬಸಪ್ಪ ಹೇಳಿದ್ದಾರೆ.ಲಕ್ಕುಂಡಿಯಲ್ಲಿ ಎಲ್ಲಿ ಅಗೆದರೂ ಬಂಗಾರ ಸಿಗುತ್ತದೆ ಎನ್ನುವ ಮಾತುಗಳು ಇಂದಿಗೂ ಗ್ರಾಮದಲ್ಲಿ ಕೇಳಿ ಬರುತ್ತಿವೆ.

ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ವಿಜಯನಗರ – ಚಾಲುಕ್ಯರ ಕಾಲದ ಒಡವೆಗಳಾಗಿರುವ ಸಾಧ್ಯತೆ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ಗದಗ: ಲಕ್ಕುಂಡಿಯಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ನಿಧಿಯಲ್ಲಿನ ಒಡವೆಗಳು ವಿಜಯನಗರ ಸಾಮ್ರಾಜ್ಯ ಅಥವಾ ಚಾಲುಕ್ಯರ ಕಾಲಕ್ಕೆ ಸೇರಿದವುಗಳಾಗಿರುವ ಸಾಧ್ಯತೆ ಇದೆ ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾಹಿತಿ ನೀಡಿದ್ದಾರೆ.

ಪತ್ತೆಯಾದ ಒಡವೆಗಳು ಕನಿಷ್ಠ 300 ವರ್ಷಗಳಿಗಿಂತಲೂ ಹಳೆಯದಾಗಿದ್ದು, ಬ್ರಿಟಿಷ್ ಕಾಲಕ್ಕೂ ಮೊದಲುಗಿನವುಗಳಾಗಿವೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಒಡವೆಗಳನ್ನು ಈಗಾಗಲೇ ಪರಿಶೀಲನೆ ನಡೆಸಲಾಗಿದ್ದು, ಕೇಂದ್ರ ಪುರಾತತ್ವ ಇಲಾಖೆ ನಾಲ್ಕು ಮಂದಿ ಅಧಿಕಾರಿಗಳ ತಂಡ ಹಾಗೂ ರಾಜ್ಯ ಪುರಾತತ್ವ ಇಲಾಖೆಯ ನಾಲ್ವರು ಅಧಿಕಾರಿಗಳ ತಂಡದಿಂದ ಪರಿಶೀಲನೆ ಮಾಡಲಾಗಿದೆ.

ಪೊಲೀಸ್ ಇಲಾಖೆಯ ಕಣ್ಗಾವಲಿನಲ್ಲಿಯೇ ಸಂಪೂರ್ಣ ವಿಡಿಯೋ ಚಿತ್ರೀಕರಣದ ಮೂಲಕ ಈ ಪರಿಶೀಲನೆ ಪ್ರಕ್ರಿಯೆ ನಡೆಸಲಾಗಿದೆ. ಒಡವೆಗಳ ಕುರಿತು ಸಂಪೂರ್ಣ ವರದಿ ಬರಲು ಮೂರು ದಿನಗಳ ಕಾಲ ಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ನೋಡಿದಾಗ ಈ ಒಡವೆಗಳು ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದವುಗಳೆಂದು ತೋರುತ್ತಿದೆ. ಒಡವೆಗಳ ಗಾತ್ರವನ್ನು ಗಮನಿಸಿದರೆ, ದಷ್ಟಪುಷ್ಟ ವ್ಯಕ್ತಿಗಳು ಧರಿಸುತ್ತಿದ್ದ ಆಭರಣಗಳಾಗಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಶೇಷವಾಗಿ ಕೈಕಡಗ, ಕಿವಿಯ ಓಲೆಗಳ ವಿನ್ಯಾಸವನ್ನು ಆಧರಿಸಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ವರದಿ ಬಂದ ಬಳಿಕ ನಿಖರವಾದ ಕಾಲಘಟ್ಟ ಹಾಗೂ ಇತಿಹಾಸಿಕ ಹಿನ್ನೆಲೆ ಸ್ಪಷ್ಟವಾಗಲಿದೆ ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾಹಿತಿ ನೀಡಿದ್ದಾರೆ.

ತಂದೆ ಮಾತು ಮೀರಿ ಎಲ್ಲೋ ಇದ್ದ ಈ ಕೊಚ್ಚೆಗೆ ಸೀಟ್ ಕೊಟ್ಟೆ: ಶಾಸಕ ಶಿವಲಿಂಗೇಗೌಡ ವಿರುದ್ಧ ಹೆಚ್‌ಡಿ ರೇವಣ್ಣ ಗರಂ

0

ಹಾಸನ: ಜಿಲ್ಲೆಯ ರಾಜಕೀಯ ಮತ್ತೆ ಕುದಿಯತೊಡಗಿದೆ. ಅರಸೀಕೆರೆಯಿಂದ ಸ್ಪರ್ಧೆ ಮಾಡುವಂತೆ ಶಾಸಕ ಶಿವಲಿಂಗೇಗೌಡ ನೀಡಿದ ಪಂಥಾಹ್ವಾನಕ್ಕೆ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಭಾರೀ ಪ್ರತಿಕ್ರಿಯೆ ನೀಡಿದ್ದು, ವೇದಿಕೆಯಲ್ಲೇ ಸ್ಫೋಟಕ ವಾಗ್ದಾಳಿ ನಡೆಸಿದ್ದಾರೆ.

ಆಲೂರು ತಾಲ್ಲೂಕಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರೇವಣ್ಣ,
“ಈ ಗಿರಾಕಿ ಎಲ್ಲಿದ್ದ? ಇಷ್ಟು ಮಾತನಾಡ್ತಾನಾ? ಅವನಿಗೆ ತಾಕತ್ ಇದ್ಯಾ?” ಎಂದು ನೇರವಾಗಿ ಪ್ರಶ್ನೆ ಎಸೆದಿದ್ದಾರೆ.

“ಆ ಸಮಾಜದ ಹೆಸರಿನಲ್ಲಿ ಇಪ್ಪತ್ತು ವರ್ಷ ರಾಜಕೀಯ ಮಾಡಿಕೊಂಡಿದ್ದಾನೆ. ಅರಸೀಕೆರೆಯಲ್ಲಿ ಏನು ನಡೆಯುತ್ತಿದೆ ಅನ್ನೋದನ್ನ ನಾನು ಚೆನ್ನಾಗಿ ಗೊತ್ತಿದೆ. ಇದು ಇಲ್ಲಿಗೆ ಮುಗಿಯುವುದಿಲ್ಲ” ಎಂದು ಎಚ್ಚರಿಕೆ ಶೈಲಿಯಲ್ಲಿ ಹೇಳಿದ್ದಾರೆ.

“ನಾನು ಸವಾಲು ಸ್ವೀಕರಿಸುತ್ತೇನೆ. ಆದರೆ ನಿರ್ಧಾರ ಹೈಕಮಾಂಡ್ ಕೈಯಲ್ಲಿದೆ. ಅವನು ಈ ಮಟ್ಟಕ್ಕೆ ಬರಲು ನಾವು ಏನೇನು ಮಾಡಿದ್ದೇವೆ ಎಂಬುದು ನನಗೆ ಸ್ಪಷ್ಟವಾಗಿದೆ” ಎಂದು ತಮ್ಮ ಕೊಡುಗೆಗಳನ್ನು ನೆನಪಿಸಿದರು.

ಹಿಂದಿನ ರಾಜಕೀಯ ಹಿನ್ನೆಲೆಯ ಬಗ್ಗೆ ಮಾತನಾಡಿದ ರೇವಣ್ಣ, “ನಮ್ಮ ಸಮಾಜ ಒಕ್ಕಲಿಗರಿಗೆ ಟಿಕೆಟ್ ನೀಡಿ ಎಂದಿತ್ತು. ಆದರೂ ನಾನು ಕುರುಬ ಸಮುದಾಯದ ಬಿಳಿ ಚೌಡಯ್ಯರನ್ನು ಜಿಪಂ ಉಪಾಧ್ಯಕ್ಷನನ್ನಾಗಿ ಮಾಡಿದೆ. ನಾಲ್ಕು ಬಾರಿ ಗೆಲ್ಲಿಸಿದವರು ಯಾರು?” ಎಂದು ಪ್ರಶ್ನಿಸಿದರು.

“ಚುನಾವಣೆಯಲ್ಲಿ ಸೋತ ದಿನ ಅವನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿದೆ. ನನ್ನ ತಂದೆ ಲಿಂಗಾಯಿತರಿಗೆ ಕ್ಷೇತ್ರ ಕೊಡಬೇಕು ಎಂದಿದ್ದರು. ಆದರೆ ಅವರ ಮಾತು ಮೀರಿ ಎಲ್ಲೋ ಇದ್ದ ಈ ಕೊಚ್ಚೆಗೆ ಸೀಟ್ ಕೊಟ್ಟೆ” ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ತಾನು ಮತ್ತು ಕುಮಾರಸ್ವಾಮಿ ಸಹಿ ಹಾಕಿದ ವಿಚಾರ ಉಲ್ಲೇಖಿಸಿ, “ನಮ್ಮ ಸಮಾಜದವರೇ ಪ್ರಶ್ನೆ ಮಾಡಿದರೂ ನಾವು ಸಹಿ ಹಾಕಿದೆವು” ಎಂದರು.

ಹಾಸನ ಕ್ಷೇತ್ರದ ರಾಜಕೀಯದ ಬಗ್ಗೆ ಮಾತನಾಡುತ್ತಾ, “ಐವತ್ತು ಸಾವಿರ ಮತಗಳ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂದರು. ಆಗ ನನ್ನ ಪತ್ನಿಯನ್ನು ಪ್ರಚಾರಕ್ಕೆ ಕಳುಹಿಸಿದೆ. ಸಾಮಾನ್ಯ ಕಾರ್ಯಕರ್ತ ಸ್ವರೂಪ್‌ಪ್ರಕಾಶ್ ಅವರನ್ನು ನಿಲ್ಲಿಸಿದೆ” ಎಂದು ಹೇಳುವ ಮೂಲಕ ಪ್ರೀತಂ ಗೌಡ ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದರು.

ಅರಸೀಕೆರೆ ವ್ಯಾಪಾರಿಯ ಅಕಾಲಿಕ ಮರಣ: ಗ್ರಾಹಕರಿಗೆ ವಸ್ತು ಕೊಡುತ್ತಲೇ ನೆಲಕ್ಕುರುಳಿ ಸಾವು

0

ಹಾಸನ: ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ನಡೆದ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಅಂಗಡಿಯಲ್ಲಿ ವ್ಯವಹಾರದಲ್ಲಿ ನಿರತರಾಗಿದ್ದ ವ್ಯಕ್ತಿ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಜೀವ ಕಳೆದುಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.

ಮೃತ ವ್ಯಕ್ತಿ ದುಮ್ಮೇನಹಳ್ಳಿ ಗ್ರಾಮದ ನಿವಾಸಿ ಪ್ರವೀಣ್ (45). ಅವರು ಅರಸೀಕೆರೆ ಪಟ್ಟಣದಲ್ಲಿ ಅಟೊಮೊಬೈಲ್ ಅಂಗಡಿ ನಡೆಸುತ್ತಿದ್ದರು. ಜ.12ರ ಸಂಜೆ ಅಂಗಡಿಯಲ್ಲಿ ಗ್ರಾಹಕರಿಗೆ ವಸ್ತುಗಳನ್ನು ನೀಡುತ್ತಿದ್ದ ಸಂದರ್ಭದಲ್ಲೇ ಪ್ರವೀಣ್ ಏಕಾಏಕಿ ನೆಲಕ್ಕುರುಳಿದ್ದಾರೆ.

ಸ್ಥಳದಲ್ಲಿದ್ದ ಅವರ ಪುತ್ರ ತಕ್ಷಣ ಸ್ಪಂದಿಸಿ ತಂದೆಗೆ ಪ್ರಥಮ ಚಿಕಿತ್ಸೆಯಾಗಿ ಎದೆ ಒತ್ತುವ ಪ್ರಯತ್ನ ಮಾಡಿದ್ದಾನೆ. ಆದರೆ ಯಾವುದೇ ಪ್ರಯೋಜನವಾಗದೆ, ಪ್ರವೀಣ್ ಅಂಗಡಿಯಲ್ಲೇ ಮೃತಪಟ್ಟಿದ್ದಾರೆ.

ಈ ಪ್ರಕರಣ ಮತ್ತಷ್ಟು ನೋವು ತಂದಿರುವುದು ಕುಟುಂಬ ಹಿನ್ನೆಲೆಯಿಂದ. ಕೊರೊನಾ ಸಮಯದಲ್ಲಿ ಪ್ರವೀಣ್ ಅವರ ಪತ್ನಿ ಸಾವನ್ನಪ್ಪಿದ್ದು, ಇದೀಗ ತಂದೆಯನ್ನೂ ಕಳೆದುಕೊಂಡ ಮಗ ಒಬ್ಬನೇ ಅನಾಥನಾಗಿ ಉಳಿದಿದ್ದಾನೆ.

ಘಟನೆಯ ಸಂಪೂರ್ಣ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ನೋಡಿದವರು ಕಣ್ಣೀರಿಡುವಂತಾಗಿದೆ.

ಬೆಂಗಳೂರಿನಲ್ಲಿ‌ ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ ಆರೋಪಿ ಅರೆಸ್ಟ್.!

0

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಇದೀಗ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಸರ ಕಿತ್ತು ಎಸ್ಕೇಪ್ ಆರೋಪಿಯನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಯಶವಂತ್(26) ಬಂಧಿತ ಆರೋಪಿಯಾಗಿದ್ದು,  ಡಿಸೆಂಬರ್ 24 ರಂದು ಈ ಘಟನೆ ಸಂಭವಿಸಿತ್ತು. ಧನಲಕ್ಷೀ ಎಂಬ ಮಹಿಳೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ, ಹೊಂಚು ಹಾಕಿ ಕುಳಿತಿದ್ದ ಆರೋಪಿ ದ್ವಿಚಕ್ರ ವಾಹನದಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ.

ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ವೇಳೆ ಸರಗಳ್ಳನ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದೇ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ಯಶವಂತ್‌ನಿಂದ ಸುಮಾರು 7 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯಶವಂತ್ ಈ ಹಿಂದೆ ಮೈಸೂರಿನ ಎರಡು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ ಚೈನ್ ಸ್ನಾಚಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಝೈದ್ ಖಾನ್ ನೋಡಲು ಬಂದ ಅಭಿಮಾನಿಗೆ ಅಪಘಾತ: ಆಸ್ಪತ್ರೆಗೆ ದಾಖಲು

ಕಲ್ಟ್ ಚಿತ್ರದ ಪ್ರಮೋಷನ್ ಶೋ ಸಂಭ್ರಮವಾಗಿ ಆರಂಭವಾದರೂ, ಕೊನೆಯಲ್ಲಿ ಅದು ಆತಂಕದ ಕ್ಷಣಗಳಿಗೆ ಕಾರಣವಾಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದ ಕಾರ್ಯಕ್ರಮದ ವೇಳೆ ಝೈದ್ ಖಾನ್ ಅಭಿಮಾನಿಗೆ ಅಪಘಾತ ಸಂಭವಿಸಿ, ಗಂಭೀರ ಗಾಯಗಳಾಗಿವೆ.

ಕಾರ್ಯಕ್ರಮದಲ್ಲಿ ನಾಯಕ ನಟ ಝೈದ್ ಖಾನ್ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಆಗಮಿಸುತ್ತಿದ್ದರು. ಅಭಿಮಾನಿಗಳ ಭಾರೀ ಜನಸಂದಣಿ ಮಧ್ಯೆ, ಅವರನ್ನು ಹತ್ತಿರದಿಂದ ನೋಡಲು ಮುಂದಾದ ಶಫೀಹುಲ್ಲಾ ಎಂಬ ಯುವಕ ಕಾಲು ಜಾರಿ ನೆಲಕ್ಕುರುಳಿದ್ದಾನೆ. ಪರಿಣಾಮವಾಗಿ ಅವನ ಕಾಲು ಮುರಿದಿದೆ ಎನ್ನಲಾಗಿದೆ.

ಈ ಭರ್ಜರಿ ಕಾರ್ಯಕ್ರಮವನ್ನು ಸ್ಥಳೀಯ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ನೆಹರೂ ಕ್ರೀಡಾಂಗಣದಲ್ಲಿ ಚಿತ್ರತಂಡ, ಕಾರ್ಯಕರ್ತರು ಮತ್ತು ಅಪಾರ ಅಭಿಮಾನಿಗಳು ಸೇರಿದ್ದರು. ಜನಸಂದಣಿ ಹೆಚ್ಚಾಗಿದ್ದ ಕಾರಣ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆ ನಡೆದ ತಕ್ಷಣವೇ ಅಲ್ಲಿದ್ದ ಕಾರ್ಯಕರ್ತರು ತಕ್ಷಣ ಸ್ಪಂದಿಸಿ, ಶಫೀಹುಲ್ಲಾರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಅಭಿಮಾನಿಗಳ ಸಂಭ್ರಮದ ನಡುವೆ ನಡೆದ ಈ ಅವಘಡ, ಕಾರ್ಯಕ್ರಮಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದಂತಾಯಿತು.

ಇದು ನಮ್ಮ ಜೀವನ, ನಮ್ಮ ಖಾಸಗಿ ವಿಷಯ. ಇದನ್ನು ವಿವರಿಸುವ ಅಗತ್ಯ ನನಗೆ ಇಲ್ಲ: ನಟಿ ಹೇಮಾಮಾಲಿನಿ

ಬಾಲಿವುಡ್ ಲೆಜೆಂಡ್ ಧರ್ಮೇಂದ್ರ ಅವರ ನಿಧನದ ಬಳಿಕ ಡಿಯೋಲ್ ಕುಟುಂಬ ಮೌನ ನೋವಿನಲ್ಲಿ ಮುಳುಗಿದೆ. ಆದರೆ ಇದೀಗ ಹೇಮಾ ಮಾಲಿನಿ ತಮ್ಮ ನೋವನ್ನು ಮೊದಲ ಭಾರಿಗೆ ತೆರೆದಿಟ್ಟಿದ್ದಾರೆ.

ಸಂದರ್ಶನದಲ್ಲಿ ಭಾವುಕರಾಗಿ ಮಾತನಾಡಿದ ಹೇಮಾ ಮಾಲಿನಿ, “ಧರ್ಮೇಂದ್ರ ಅವರ ಸಾವು ನನ್ನ ಜೀವನದ ಅತಿದೊಡ್ಡ ಶೂನ್ಯ. ಆ ನೋವು ಇನ್ನೂ ನನ್ನ ಮನಸ್ಸನ್ನು ಕಾಡುತ್ತಿದೆ. ಎಲ್ಲರೂ ನಾನು ಬಲಶಾಲಿ ಎನ್ನುತ್ತಾರೆ. ಹೌದು, ನಾನು ಬಲಶಾಲಿ… ಆದರೆ ಕೆಲ ಕ್ಷಣಗಳಲ್ಲಿ ಆ ನೋವು ಮಿತಿ ಮೀರುತ್ತದೆ” ಎಂದು ಹೇಳಿದ್ದಾರೆ.

ಧರ್ಮೇಂದ್ರ ಅವರ ಕೊನೆಯ ದಿನಗಳ ನೆನಪನ್ನು ಹಂಚಿಕೊಂಡ ಅವರು, “ಅವರ ಆರೋಗ್ಯ ಸ್ವಲ್ಪ ಹದಗೆಟ್ಟಾಗ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಮನೆಗೆ ತಂದಾಗ ಅವರು ಚೆನ್ನಾಗಿಯೇ ಇದ್ದರು. ಅವರು ಇನ್ನೂ ನಮ್ಮ ಜೊತೆ ಇರುತ್ತಾರೆ ಎಂದು ನಂಬಿದ್ದೆವು. ಹಿಂದೆಯೂ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರೂ ಅವರು ನಗುತ್ತಾ ವಾಪಸ್ ಬಂದಿದ್ದರು. ಈ ಬಾರಿ ಕೂಡ ಅದೇ ಆಗಬಹುದು ಎಂದು ಭಾವಿಸಿದ್ದೆವು. ಆದರೆ ಅದು ಆಗಲಿಲ್ಲ” ಎಂದು ನೋವಿನಿಂದ ಹೇಳಿದರು.

ಇನ್ನು ಕುಟುಂಬ ಸಂಬಂಧದ ಬಗ್ಗೆ ಹರಡುತ್ತಿರುವ ಗಾಸಿಪ್‌ಗಳ ಬಗ್ಗೆ ಕಠಿಣವಾಗಿ ಪ್ರತಿಕ್ರಿಯಿಸಿದ ಅವರು, “ಜನರಿಗೆ ಗಾಸಿಪ್ ಬೇಕು. ನಮ್ಮ ನಡುವೆ ಏನೋ ಸಮಸ್ಯೆ ಇದೆ ಎಂದು ಜನರು ಯಾಕೆ ಭಾವಿಸುತ್ತಾರೆ ಗೊತ್ತಿಲ್ಲ. ಇದು ನಮ್ಮ ಜೀವನ, ನಮ್ಮ ಖಾಸಗಿ ವಿಷಯ. ಇದನ್ನು ವಿವರಿಸುವ ಅಗತ್ಯ ನನಗೆ ಇಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಧರ್ಮೇಂದ್ರ ಅವರ ಜೀವನದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಹೇಮಾ ಮಾಲಿನಿ, “ಅವರು ಬಯಸಿದ್ದ ಎಲ್ಲವನ್ನೂ ಜೀವನದಲ್ಲಿ ಪಡೆದರು. ಲಕ್ಷಾಂತರ ಜನರು ಅವರನ್ನು ಪ್ರೀತಿಸುತ್ತಾರೆ. ಇದು ಅವರ ಜೀವನದ ದೊಡ್ಡ ಸಾಧನೆ” ಎಂದು ಹೇಳಿದ್ದಾರೆ.

error: Content is protected !!