Home Blog Page 18

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್ ಹಾವಳಿ – ವೈರಲ್ ವಿಡಿಯೋ ಬೆನ್ನಲ್ಲೇ ಅಧಿಕಾರಿಗಳ ಕ್ರಮ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೆ ಭದ್ರತಾ ಲೋಪ ಬಹಿರಂಗವಾಗಿದ್ದು, ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ.

ಇತ್ತೀಚೆಗೆ ಡಿಜಿಪಿ ಅಲೋಕ್ ಕುಮಾರ್ ಅವರ ಕಟ್ಟುನಿಟ್ಟಿನ ಕ್ರಮಗಳಿಂದ ಜೈಲಿನೊಳಗಿನ ಅಕ್ರಮಗಳಿಗೆ ಕಡಿವಾಣ ಬೀಳುವ ನಿರೀಕ್ಷೆಯಿದ್ದರೂ, ಈ ಘಟನೆ ಮತ್ತೆ ಆತಂಕ ಹುಟ್ಟಿಸಿದೆ. ವೈರಲ್ ವಿಡಿಯೋದಲ್ಲಿ ಜೈಲಿನೊಳಗೆ ಮೊಬೈಲ್, ಟಿವಿ ಹಾಗೂ ನೆಟ್‌ಫ್ಲಿಕ್ಸ್ ಸೌಲಭ್ಯಗಳಿರುವುದಾಗಿ ಹೇಳಲಾಗಿದೆ.

ವಿಡಿಯೋ ವೈರಲ್ ಆದ ತಕ್ಷಣ ಅಧಿಕಾರಿಗಳು ಜೈಲಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, 9ನೇ ಬ್ಯಾರಕ್‌ನ ಡ್ರೈನೇಜ್ ಮಾರ್ಗದಲ್ಲಿ ಹಾಲಿನ ಪ್ಯಾಕೆಟ್‌ಗಳಲ್ಲಿ ಅಡಗಿಸಿಡಲಾಗಿದ್ದ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿದ್ದಾರೆ.

ತನಿಖೆಯಲ್ಲಿ ದರ್ಶನ್, ಅಭಿಷೇಕ್ ಮತ್ತು ಎಂಡ್ರೋಸ್ ಎಂಬ ವಿಚಾರಣಾಧೀನ ಕೈದಿಗಳು ವಿಡಿಯೋ ಚಿತ್ರೀಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಇವರು ಬೇರೆ ಬ್ಯಾರಕ್‌ಗೆ ಸ್ಥಳಾಂತರ ಮಾಡಿದ ಹಿನ್ನೆಲೆಯಲ್ಲಿ ಅಸಮಾಧಾನದಿಂದ ಉದ್ದೇಶಪೂರ್ವಕವಾಗಿ ಡಿಜಿಪಿ ಹೆಸರನ್ನು ಬಳಸಿಕೊಂಡು ವಿಡಿಯೋ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನೂ ಕ್ವಾರಂಟೈನ್ ಸೆಲ್‌ಗೆ ಸ್ಥಳಾಂತರಿಸಲಾಗಿದೆ.

ಘಟನೆ ಬೆನ್ನಲ್ಲೇ ವಾರ್ಡರ್‌ಗಳಾದ ಶಿವಾನಂದ ಕರ್ಲಬಟ್ಟಿ, ನಿರಂಜನ ಎ. ಕಾಮತ್ ಮತ್ತು ಹನುಮಂತಪ್ಪ ಹಡಪದ್ ಅವರನ್ನು ಅಮಾನತು ಮಾಡಲಾಗಿದೆ. ಜೊತೆಗೆ ಜೈಲರ್ ವಿರುದ್ಧವೂ ಶಿಸ್ತು ಕ್ರಮಕ್ಕೆ ಸೂಚನೆ ನೀಡಲಾಗಿದೆ.

ಕಾರ್ಕಳ-ಶಿರ್ವದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಗ್ಯಾಂಗ್ ಬಯಲು – ಪೊಲೀಸರ ಮೇಲೆಯೇ ದಾಳಿ ಯತ್ನ

ಉಡುಪಿ: ಕಾರ್ಕಳ ಮತ್ತು ಶಿರ್ವ ಪ್ರದೇಶಗಳಲ್ಲಿ ನಡೆದ ಎರಡು ವಿಭಿನ್ನ ಘಟನೆಗಳಲ್ಲಿ ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿದ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿ ತೊಡಗಿದ್ದ ಐವರನ್ನು ಬಂಧಿಸುವ ಮೂಲಕ ದೊಡ್ಡ ಜಾಲವನ್ನು ಪೊಲೀಸರು ಬಯಲು ಮಾಡಿದ್ದಾರೆ.

ಕಾರ್ಕಳದ ಹಂಚಿಕಟ್ಟೆ ಸಮೀಪ ಸಂಶಯಾಸ್ಪದ ಕಾರನ್ನು ತಡೆಹಿಡಿಯಲು ಯತ್ನಿಸಿದ ವೇಳೆ, ಆರೋಪಿಗಳು ವಾಹನವನ್ನು ನಿಲ್ಲಿಸದೆ ಪೊಲೀಸರ ಮೇಲೆಯೇ ಹರಿಸಲು ಯತ್ನಿಸಿದ್ದು ಗಂಭೀರ ಆರೋಪವಾಗಿದೆ.

ನಂತರ ಶಿರ್ವ ಪ್ರದೇಶದಲ್ಲಿ ಅದೇ ಕಾರನ್ನು ತಡೆಹಿಡಿಯಲು ಪೊಲೀಸರು ಪ್ರಯತ್ನಿಸಿದಾಗ ಚಾಲಕ ಅಧಿಕಾರಿಯನ್ನು ತಳ್ಳಿ ಪರಾರಿಯಾಗಲು ಯತ್ನಿಸಿದ್ದಾನೆ. ಕೊನೆಗೆ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸುಧರ್ಷನ್ ಶೆಟ್ಟಿ (29), ಕಾರ್ತವ್ಯ ಶೆಟ್ಟಿ (27), ಅರುಣ್ ಶೆಟ್ಟಿ (29), ತೇಜಸ್ (28) ಮತ್ತು ಪ್ರಜ್ವಲ್ ಶೆಟ್ಟಿ (29) ಎಂದು ಗುರುತಿಸಲಾಗಿದೆ. ತನಿಖೆಯಲ್ಲಿ ಇವರು ಸಂಘಟಿತ ಕ್ರಿಕೆಟ್ ಬೆಟ್ಟಿಂಗ್ ಮೂಲಕ ಜನರನ್ನು ವಂಚಿಸುತ್ತಿದ್ದ ಅಂಶ ಬಹಿರಂಗವಾಗಿದೆ.

ಈ ಪ್ರಕರಣವು ಅಕ್ರಮ ಬೆಟ್ಟಿಂಗ್ ಜಾಲದ ವಿರುದ್ಧ ಪೊಲೀಸರ ಕಠಿಣ ಕ್ರಮಕ್ಕೆ ಉದಾಹರಣೆಯಾಗಿದೆ.

ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣದಲ್ಲಿ ಉಗ್ರ ಚಟುವಟಿಕೆ ಬಯಲು: ತಪ್ಪೊಪ್ಪಿಕೊಂಡ ಪ್ರಮುಖ ಆರೋಪಿ ಶಾರೀಕ್!

ಮಂಗಳೂರು: ಕಳೆದ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿ ಮೊಹಮ್ಮದ್ ಶಾರೀಕ್ ತನ್ನ ತಪ್ಪನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಎನ್‌ಐಎ ವಿಶೇಷ ನ್ಯಾಯಾಲಯವು ಆತನ ತಪ್ಪೊಪ್ಪಿಗೆ ಅರ್ಜಿಯನ್ನು ಅಂಗೀಕರಿಸಿದೆ.

2022ರ ನವೆಂಬರ್ 19ರಂದು ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ ಪ್ರೆಶರ್ ಕುಕ್ಕರ್ ಬಾಂಬ್ ಟೈಮರ್ ದೋಷದಿಂದ ಶಾರೀಕ್ ಮಡಿಲಲ್ಲೇ ಸ್ಫೋಟಗೊಂಡಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದ. ಈ ಘಟನೆಯಲ್ಲಿ ಆಟೋ ಚಾಲಕನಿಗೂ ಗಾಯಗಳಾಗಿದ್ದವು.

ಮೊದಲಿಗೆ ತನ್ನ ನಿರಪರಾಧಿತ್ವವನ್ನು ಹೇಳಿದ್ದ ಶಾರೀಕ್, ಬಳಿಕ ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 229 ಅಡಿಯಲ್ಲಿ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿ, “ನಾನು ಐಇಡಿ ಬಳಸಿ ಸ್ಫೋಟ ಮಾಡಿದ್ದೇನೆ” ಎಂದು ಒಪ್ಪಿಕೊಂಡಿದ್ದಾನೆ.

ಎನ್‌ಐಎ ತನಿಖೆ ಶಾರೀಕ್ ಐಸಿಸ್ ಪ್ರೇರಿತ ಮಾಡ್ಯೂಲ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬುದನ್ನು ಬಹಿರಂಗಪಡಿಸಿದೆ. 2020ರಿಂದಲೇ ಆತ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು, ಶಿವಮೊಗ್ಗ ಐಇಡಿ ಪರೀಕ್ಷೆ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಇದಲ್ಲದೆ, ಬೆಂಗಳೂರಿನ ರಾಮೇಶ್ವರಂ ಕಫೆ ಬಾಂಬ್ ಸ್ಫೋಟ ಪ್ರಕರಣದಲ್ಲೂ ಆತನ ಸಂಪರ್ಕದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯಕ್ಕೆ ಆತ ಕುಕ್ಕರ್ ಬಾಂಬ್ ಪ್ರಕರಣದಲ್ಲಷ್ಟೇ ತಪ್ಪೊಪ್ಪಿಕೊಂಡಿದ್ದಾನೆ.

ಗದಗ|ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ-ಕುಟುಂಬಸ್ಥರ ಆಕ್ರಂದನ

ಮಂಗಳವಾರ ನಾಪತ್ತೆಯಾಗಿದ್ದ ಯುವಕ-ಶನಿವಾರ ಸುಟ್ಟ ಸ್ಥಿತಿಯಲ್ಲಿ  ಪತ್ತೆ!

ಗದಗ: ಜಿಲ್ಲೆಯ ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಯುವಕನೊಬ್ಬನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

27 ವರ್ಷದ ಚಂದ್ರು ಕುರಿ ಎಂಬ ಯುವಕ ಮಂಗಳವಾರ ರಾತ್ರಿ ಮನೆಯಿಂದ ಹೊರಟಿದ್ದಾನೆ. ಆದರೆ, ಮುಂದಿನ ದಿನ ಗ್ರಾಮ ಹೊರವಲಯದ ಬ್ರಿಡ್ಜ್ ಕೆಳಗೆ ಅವನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆಯು ಕುಟುಂಬಸ್ಥರನ್ನು ದುಃಖದ ಸಾಗರಕ್ಕೆ ತಳ್ಳಿದೆ.

ಕುಟುಂಬಸ್ಥರ ಆರೋಪ – ಕೊಲೆ ಮಾಡಿ ಸುಟ್ಟಿದ್ದಾರೆ

ಮೃತನ ಕುಟುಂಬದವರು ಇದೊಂದು ಪೂರ್ವ ಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ. ಎದುರು ಮನೆಯ ಕುಟುಂಬದವರ ಮೇಲೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ.

ಚಂದ್ರು ಎದುರು ಮನೆಯ ಹೆಣ್ಣುಮಕ್ಕಳನ್ನು ನೋಡುತ್ತಿದ್ದನೆಂಬ ಅನುಮಾನದಿಂದಾಗಿ ಹಿಂದಿನಿಂದಲೂ ಜಗಳಗಳು ನಡೆದಿದ್ದವು ಎಂದು ಕುಟುಂಬಸ್ಥರು ಹೇಳಿದ್ದಾರೆ. ಕೆಲವೊಮ್ಮೆ ಬೈಕ್ ಹತ್ತಿಸಲು ಪ್ರಯತ್ನಿಸಿದ ಘಟನೆಗಳೂ ನಡೆದಿದ್ದವು ಎಂದು ಆರೋಪಿಸಲಾಗಿದೆ. ಇದೇ ಕಾರಣಕ್ಕೆ ಆ ಕುಟುಂಬದವರೇ ಕೊಲೆ ಮಾಡಿ ನಂತರ ಶವವನ್ನು ಸುಟ್ಟಿದ್ದಾರೆ ಎಂದು ಮೃತನ ಕುಟುಂಬದವರು ದೂರಿದ್ದಾರೆ.

ತಂದೆಯ ಆಕ್ರೋಶ – “ಕೊಲೆ ಮಾಡಿದವರನ್ನು ಬಿಡಲ್ಲ”

ಮೃತ ಚಂದ್ರುವಿನ ತಂದೆ ಬಸವರಾಜ್ ದುಃಖ ಮತ್ತು ಆಕ್ರೋಶದಲ್ಲಿ ಮಾತನಾಡಿ, “ನನ್ನ ಮಗ ಒಳ್ಳೆಯ ಹುಡುಗ. ಯಾರ ಜೊತೆಗೂ ತಕರಾರು ಮಾಡಲಿಲ್ಲ. ದಿನವೂ ಕೆಲಸಕ್ಕೆ ಹೋಗುವಾಗ 100 ರೂಪಾಯಿ ಕೇಳುತ್ತಿದ್ದ. ಅಂತಹ ಮಗನನ್ನು ಕಳೆದುಕೊಂಡಿದ್ದೇನೆ. ಕೊಲೆ ಮಾಡಿದವರನ್ನು ಬಿಡುವುದಿಲ್ಲ, ಸೇಡು ತೀರಿಸಿಕೊಳ್ಳುತ್ತೇನೆ” ಎಂದು ಕಣ್ಣೀರಿನಲ್ಲಿ ಪ್ರತಿಜ್ಞೆ ಮಾಡಿದ್ದಾರೆ.

ಇನ್ನೂ ಅವರು, “ನನ್ನ ಬಳಿ ಮೂರು ಎಕರೆ ಹೊಲ ಇದೆ. ಅದು ಹೋದರೂ ಪರವಾಗಿಲ್ಲ, ಆದರೆ ನನ್ನ ಮಗನ ಸಾವಿಗೆ ನ್ಯಾಯ ತರುತ್ತೇನೆ” ಎಂದು ಹೇಳಿದ್ದಾರೆ.

ಮದುವೆ ಕನಸು ನುಚ್ಚುನೂರು!

ಚಂದ್ರು ಮನೆಯ ಹಿರಿಯ ಮಗನಾಗಿದ್ದು, ಅವನ ಮದುವೆಗೆ ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದರು. ಬೀಳಲಿಂಗೇಶ್ವರ ಜಾತ್ರೆಯ ಬಳಿಕ ಹುಡುಗಿ ನೋಡಿ ಮದುವೆ ಮಾಡಲು ಯೋಜನೆ ಹಾಕಿಕೊಂಡಿದ್ದರು. ಆದರೆ ಈ ದುರ್ಘಟನೆ ಅವರ ಕನಸುಗಳನ್ನು ಭಗ್ನಗೊಳಿಸಿದೆ.

ಪೊಲೀಸರ ತನಿಖೆ ಆರಂಭ

 

ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಗಳ ವಿಚಾರಣೆ ನಡೆಯುತ್ತಿದೆ.
ಸಮಗ್ರ ತನಿಖೆಯ ಬಳಿಕವೇ ನಿಜಾಂಶ ಹೊರಬರುವ ನಿರೀಕ್ಷೆ ಇದೆ.

IPL 2026: ನಮ್ಮ ಸಿಂಹಗಳ ದಿನ ಬಂತು! ಪಂದ್ಯಕ್ಕೂ ಮುನ್ನ RCBಗೆ ವಿಶ್‌ ಮಾಡಿದ ವಿಜಯ್‌ ಮಲ್ಯ!

0

ಬೆಂಗಳೂರು: ಐಪಿಎಲ್ 2026ರ ಸೀಸನ್‌ಗೆ ಇಂದು ಚಾಲನೆ ದೊರೆಯುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ.

ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಮಾಡಿದ ಟ್ವೀಟ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬಿದೆ. ಮಲ್ಯ ಅವರು ಆರ್‌ಸಿಬಿ ತಂಡಕ್ಕೆ ಶುಭಹಾರೈಸಿ, “ಬೆಂಗಳೂರಿನ ನಮ್ಮ ಸಿಂಹಗಳಿಗೆ ಆ ದಿನ ಬಂದಿದೆ… ನಮ್ಮ ಸಿಂಹಗಳು ಐಪಿಎಲ್ ಚಾಂಪಿಯನ್ಸ್ ಆಗಲಿ. ಗುಡ್ ಲಕ್, ಪ್ಲೇ ಬೋಲ್ಡ್… ಧೈರ್ಯದಿಂದ ಆಟವಾಡಿ” ಎಂದು ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.

ಈ ಪೋಸ್ಟ್ ವೈರಲ್ ಆಗಿದ್ದು, ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಭಾರೀ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. “ಪ್ಲೇ ಬೋಲ್ಡ್, ವಿನ್ ಬಿಗ್” ಎಂದು ಕೆಲವರು ಬರೆದರೆ, “ಇದು ನಮ್ಮ ಸಮಯ” ಎಂದು ಮತ್ತಷ್ಟು ಅಭಿಮಾನಿಗಳು ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು ಮಲ್ಯ ಅವರು ಆರ್‌ಸಿಬಿ ತಂಡದ ಕುರಿತು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು. 2008ರಲ್ಲಿ 450 ಕೋಟಿ ರೂಪಾಯಿಗೆ ತಂಡವನ್ನು ಖರೀದಿಸಿದ ವಿಚಾರವನ್ನು ನೆನಪಿಸಿಕೊಂಡ ಅವರು, ಇಂದು ಅದರ ಮೌಲ್ಯ 16,500 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಹಾಗೇ ವಿರಾಟ್ ಕೊಹ್ಲಿ ಅವರನ್ನು ಯುವಕರಾಗಿದ್ದಾಗಲೇ ತಂಡಕ್ಕೆ ಸೇರಿಸಿಕೊಂಡಿದ್ದೆ ಎಂದು ತಿಳಿಸಿದ್ದಾರೆ. “ಆರ್‌ಸಿಬಿ ಯಾವಾಗಲೂ ನನ್ನ ಡಿಎನ್‌ಎ ಭಾಗವಾಗಿರುತ್ತದೆ” ಎಂದೂ ಹೇಳಿದ್ದಾರೆ.

ಪ್ರಸ್ತುತ ಆರ್‌ಸಿಬಿ ತಂಡದ ಮಾಲೀಕತ್ವವು ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲ್ಯಾಕ್‌ಸ್ಟೋನ್ ಸೇರಿರುವ ಒಕ್ಕೂಟದ ಕೈಯಲ್ಲಿದೆ. ಈ ಒಕ್ಕೂಟವು ತಂಡವನ್ನು ಸುಮಾರು 1.78 ಬಿಲಿಯನ್ ಡಾಲರ್‌ಗೆ ಖರೀದಿಸಿದೆ.

Fake Doctor: ನಕಲಿ ವೈದ್ಯನ ಇಂಜೆಕ್ಷನ್ʼ​ಗೆ​​​​​​​​​​ 9ನೇ ತರಗತಿ ಬಾಲಕಿ ಬಲಿ!

ರಾಯಚೂರು: ನಕಲಿ ವೈದ್ಯ ನೀಡಿದ ಇಂಜೆಕ್ಷನ್ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ 9ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿದ ದುರ್ಘಟನೆ ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಬಿಂದು (14) ಎಂದು ಗುರುತಿಸಲಾಗಿದೆ. ಜ್ವರದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆ, ನಕಲಿ ವೈದ್ಯನ ಬಳಿ ಇಂಜೆಕ್ಷನ್ ಪಡೆದಿದ್ದಳು.

ಇಂಜೆಕ್ಷನ್‌ಗೆ ರಿಯಾಕ್ಷನ್ ಉಂಟಾಗಿ ಆರೋಗ್ಯ ತೀವ್ರವಾಗಿ ಹದಗೆಟ್ಟ ಪರಿಣಾಮ ಬಿಂದು ಮೃತಪಟ್ಟಿದ್ದಾಳೆ. ಘಟನೆಯ ನಂತರ ನಕಲಿ ವೈದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕವಿತಾಳ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಪ್ರಕರಣ ಕವಿತಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊಸ ಅವಕಾಶಗಳು: ಪ್ರಧಾನಿ ಮೋದಿ

0

ನವದೆಹಲಿ: ಉತ್ತರ ಪ್ರದೇಶದ ಜೇವರ್‌ನಲ್ಲಿ ನಿರ್ಮಾಣಗೊಂಡಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಈ ಯೋಜನೆ ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವಿಮಾನ ನಿಲ್ದಾಣವು ಪ್ರಾದೇಶಿಕ ಅಭಿವೃದ್ಧಿ ಮತ್ತು ಸಂಪರ್ಕ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ಭಾರತದ ಹೊಸ ಚೈತನ್ಯದ ಸಂಕೇತವಾಗಿದ್ದು, ಉತ್ತರ ಪ್ರದೇಶದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದು ಹೇಳಿದರು.

ಈ ಯೋಜನೆ ಪಶ್ಚಿಮ ಉತ್ತರ ಪ್ರದೇಶದ ರೈತರು ಮತ್ತು ಯುವಜನರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಿದೆ. ಜೊತೆಗೆ, ರಾಜ್ಯದ ಅಭಿವೃದ್ಧಿಗೆ ಹೊಸ ಗುರುತು ತರುವುದಾಗಿ ಮೋದಿ ಹೇಳಿದರು.

ಅಲ್ಲದೆ, ನೋಯ್ಡಾ ವಿಮಾನ ನಿಲ್ದಾಣದಿಂದ ಆಗ್ರಾ, ಮಥುರಾ, ಗಾಜಿಯಾಬಾದ್, ಮೀರತ್, ಇಟಾವಾ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಎಸಿಬಿಯಲ್ಲಿ ಅತ್ಯುತ್ತಮ ಸೇವೆಗೆ ಸಿಎಂ ಪದಕ: ವೀರೇಶ ಜೋಳದ ಸಾಧನೆಗೆ ಅಭಿನಂದನೆಗಳ ಮಹಾಪೂರ!

0

ಗದಗ: ಪ್ರಸ್ತುತ ವಿಜಯನಗರ ಜಿಲ್ಲೆಯ ಮುನಿರಾಬಾದ್‌ನ ಇಂಡಿಯಾ ರಿಸರ್ವ್ ಬಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೀರೇಶ ಎ. ಜೋಳದ ಅವರು, ಈ ಹಿಂದೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಗದಗ ಜಿಲ್ಲಾ ಘಟಕದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ 2025ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ.

ಈ ಹಿಂದೆ ಗದಗ ಎಸಿಬಿ ಘಟಕದಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಅವರು ಭ್ರಷ್ಟಾಚಾರ ಪ್ರಕರಣಗಳ ಪತ್ತೆ ಮತ್ತು ತನಿಖೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ವೈಯಕ್ತಿಕವಾಗಿ 40 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪ್ರಮುಖ ಪಾತ್ರವಹಿಸಿ, ಯಾವುದೇ ಮಾಹಿತಿ ಸೋರಿಕೆಯಾಗದಂತೆ ಟ್ರ್ಯಾಪ್ ದಾಳಿ ಹಾಗೂ ಶೋಧ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಸೂಕ್ಷ್ಮ ಯೋಜನೆ, ನಿಖರ ಕಾರ್ಯಾಚರಣೆ ಮತ್ತು ದೃಢ ಸಾಕ್ಷ್ಯಾಧಾರಗಳೊಂದಿಗೆ ಪ್ರಕರಣಗಳನ್ನು ದಾಖಲಿಸುವಲ್ಲಿ ಅವರು ತೋರಿದ ನಿಪುಣತೆ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ. ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವು ಹೊಂದಿ ಕಾರ್ಯನಿರ್ವಹಿಸಿದ ಅವರು, ಹಲವಾರು ಆರೋಪಿಗಳನ್ನು ಕಾನೂನಿನ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ವೇಳೆ, ಸಾರ್ವಜನಿಕರಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ಮುಂಚೂಣಿಯಲ್ಲಿ ನಿಂತು, ಜನರಲ್ಲಿ ಕಾನೂನು ಅರಿವು ಮತ್ತು ನೈತಿಕತೆ ಬೆಳೆಸಲು ಶ್ರಮಿಸಿದ್ದಾರೆ. ಇದರ ಫಲವಾಗಿ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ಗಳಿಸಿದ್ದಾರೆ.

ದೈನಂದಿನ ಕರ್ತವ್ಯದ ಜೊತೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮೇಘಾಲಯ ರಾಜ್ಯಗಳಲ್ಲಿ ನಡೆದ ಚುನಾವಣಾ ಕರ್ತವ್ಯಗಳನ್ನು ಸಹ ಯಶಸ್ವಿಯಾಗಿ ನಿರ್ವಹಿಸಿರುವುದು ಅವರ ಸೇವಾ ನಿಷ್ಠೆಗೆ ಸಾಕ್ಷಿಯಾಗಿದೆ.

ಎಸಿಬಿಯಲ್ಲಿ ತೋರಿದ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಸಿಎಂ ಪದಕ ಲಭಿಸಿರುವುದು ಗದಗ ಜಿಲ್ಲೆ ಹಾಗೂ ಹುಟ್ಟೂರು ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮಸ್ಥರಿಗೆ ಹೆಮ್ಮೆಯ ಸಂಗತಿಯಾಗಿದೆ. ಈ ಸಾಧನೆಗೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ನೇಹಿತರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ರಸ್ತೆ ದಾಟುವ ವೇಳೆ ಕಾರು ಡಿಕ್ಕಿ: SSLC ಪರೀಕ್ಷೆ ಬರೆದು ಬಂದಿದ್ದ ವಿದ್ಯಾರ್ಥಿ ಸಾವು!

0

ಹಾಸನ: ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿಯಾದ ಪರಿಣಾಮ ಎಸ್ಎಸ್ಎಲ್ಸಿ ವಿದ್ಯಾರ್ಥಿ ಸಾವನ್ನಪ್ಪಿದ ದುರ್ಘಟನೆ ಹೊಳೆನರಸೀಪುರ ತಾಲೂಕಿನ ಕಾಮಸಮುದ್ರ ಸಮೀಪದ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಚಿರಂತ್ (16) ಎಂದು ಗುರುತಿಸಲಾಗಿದೆ. ಪರೀಕ್ಷೆ ಮುಗಿಸಿಕೊಂಡು ಬಸ್‌ನಲ್ಲಿ ಊರಿಗೆ ಬಂದಿದ್ದ ಚಿರಂತ್ ರಸ್ತೆ ದಾಟುವ ವೇಳೆ ಈ ಅಪಘಾತ ಸಂಭವಿಸಿದೆ.

ಈ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ಬಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮ ಚಿರಂತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಅತಿವೇಗ ಮತ್ತು ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಸಕಲೇಶಪುರದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಫೋಟೋಗ್ರಾಫರ್‌ʼಗಳ ಮೇಲೆ ಹಲ್ಲೆ!

0

ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿದ್ದ ತಂಡದ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಇಂದು ಮುಂಜಾನೆ ಬೆಂಗಳೂರು ಮತ್ತು ಹಾಸನದಿಂದ ಬಂದಿದ್ದ ನಾಲ್ಕು ಫೋಟೋಗ್ರಫಿ ತಂಡಗಳು ದೇವಸ್ಥಾನದ ಆವರಣದಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ವೇಳೆ ಸ್ಥಳೀಯ ಕೆಲವರುದೇವಸ್ಥಾನದ ಪಾವಿತ್ರತೆಗೆ ಧಕ್ಕೆ ತರುತ್ತಿದ್ದೀರಿ ಎಂದು ಆರೋಪಿಸಿ ಗಲಾಟೆ ಆರಂಭಿಸಿದ್ದಾರೆ.

ಫೋಟೋಗ್ರಾಫರ್ಗಳು ಮನವಿ ಮಾಡಿದರೂ ಕೇಳದ ಹಲ್ಲೆಕೋರರು ಚೇತನ್, ಯಶು ಮತ್ತು ಸೋಮಶೇಖರ್ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ಲಕ್ಷಾಂತರ ರೂಪಾಯಿ ಮೌಲ್ಯದ ಕ್ಯಾಮೆರಾ ಮತ್ತು ಮೊಬೈಲ್ಗಳನ್ನು ಜಖಂಗೊಳಿಸಿರುವುದಾಗಿ ತಿಳಿದುಬಂದಿದೆ. ಮೇಕಪ್ ಆರ್ಟಿಸ್ಟ್ಗಳ ಮೇಲೂ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ.

ಘಟನೆ ಬಳಿಕ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದಾಗ, ಪೊಲೀಸರ ಸಮ್ಮುಖದಲ್ಲೇ ಎರಡೂ ಗುಂಪುಗಳ ನಡುವೆ ಮತ್ತೆ ವಾಗ್ವಾದ ನಡೆದು ಹೊಡೆದಾಟ ಸಂಭವಿಸಿದೆ. ಗಾಯಗೊಂಡ ಫೋಟೋಗ್ರಾಫರ್ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೊಂದೆಡೆ, ಸ್ಥಳೀಯರು ಇದು ಪ್ರವಾಸಿ ತಾಣವಲ್ಲ, ಧಾರ್ಮಿಕ ಕೇಂದ್ರವಾಗಿದ್ದು, ಪಾವಿತ್ರತೆ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ. ದೇವಸ್ಥಾನದ ಸುತ್ತಲೂ ಬೇಲಿ ಹಾಕಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!