Home Blog Page 182

ಕೇವಲ ಎರಡು ನಿಮಿಷದಲ್ಲಿ ರಾಜಕೀಯ ಚರ್ಚೆ ಇಲ್ಲದೇ ಮುಕ್ತಾಯವಾಯ್ತು ಸಿದ್ದು–ಡಿಕೆಶಿ–ರಾಹುಲ್ ಭೇಟಿ

0

ಮೈಸೂರು: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದರೂ, ಈ ಭೇಟಿ ಸಂಪೂರ್ಣವಾಗಿ ತುರ್ತು ಸಂಚಾರದಂತೆಯೇ ಮುಗಿದುಹೋಯಿತು. ಕೇವಲ 15 ನಿಮಿಷಗಳ ಕಾಲ ಮಾತ್ರ ಏರ್‌ಪೋರ್ಟ್‌ನಲ್ಲಿ ಉಳಿದ ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡಲು ಸಿಕ್ಕ ಸಮಯ ಕೇವಲ ಎರಡು ನಿಮಿಷ ಮಾತ್ರ.

ಇಂದು ಮಧ್ಯಾಹ್ನ 2:20ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ರಾಹುಲ್ ಗಾಂಧಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಆಗಿದರು. 2:35ಕ್ಕೆ ಹೆಲಿಕಾಪ್ಟರ್ ಮೂಲಕ ತಮಿಳುನಾಡಿನ ಗುಡ್ಲುರಿಗೆ ಹೊರಟರು. ಸಂಜೆ 5:45ಕ್ಕೆ ಮತ್ತೆ ಮೈಸೂರಿಗೆ ವಾಪಸ್ ಆಗಿ, ಸಂಜೆ 6 ಗಂಟೆಗೆ ದೆಹಲಿಗೆ ವಿಶೇಷ ವಿಮಾನದಲ್ಲಿ ಮರಳಲಿದ್ದಾರೆ.

ಸಿಎಂ ಮತ್ತು ಡಿಸಿಎಂ ರಾಹುಲ್ ಗಾಂಧಿಯನ್ನು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಆದರೆ ಅಧಿಕಾರ ಹಂಚಿಕೆ ಗೊಂದಲ ಆರಂಭವಾದ ಬಳಿಕ ಮೊದಲ ಬಾರಿಗೆ ಮೂವರು ನಾಯಕರು ಒಂದೇ ವೇದಿಕೆಯಲ್ಲಿ ಭೇಟಿಯಾದರೂ, ಈ ಭೇಟಿಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಉಭಯ ಕುಶಲೋಪರಿಗಷ್ಟೇ ಮಾತುಕತೆ ಸೀಮಿತವಾಯಿತು.

ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ, ಮೈಸೂರಿನಲ್ಲಿ ಡಿಕೆಶಿ ಸಂಪೂರ್ಣವಾಗಿ ಏಕಾಂಗಿಯಾಗಿ ಸಂಚರಿಸಿದರು. ರಾಹುಲ್ ಗಾಂಧಿಯನ್ನು ಹೆಲಿಕಾಪ್ಟರ್ ಹತ್ತಿಸಿದ ಬಳಿಕ ಸಿಎಂ ಮತ್ತು ಡಿಸಿಎಂ ಒಟ್ಟಿಗೆ ಹೊರಟಿಲ್ಲ. ಸಿಎಂ ಜೊತೆ ಸೇರದೆ, ಡಿಕೆಶಿ ದೂರ ನಡೆದು ಪ್ರತ್ಯೇಕವಾಗಿ ಕಾರ್ ಹತ್ತಿ ಹೊರಟ ದೃಶ್ಯಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಈ ನಡುವೆ ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ಮೈಸೂರು ಅರಮನೆ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು. ಸಚಿವ ಕೆ.ಜೆ. ಜಾರ್ಜ್ ಆನೆ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು.

ಬೀದಿ ನಾಯಿಗಳ ಕಡಿತದ ಸಾವು–ಗಾಯ ಪ್ರಕರಣಗಳಿಗೆ ಸರ್ಕಾರವೇ ಪರಿಹಾರ ನೀಡಬೇಕು: ಸುಪ್ರೀಂ

0

ನವದೆಹಲಿ: ಬೀದಿನಾಯಿಗಳ ಕಡಿತದಿಂದ ಜೀವ ಕಳೆದುಕೊಂಡವರ ಕುಟುಂಬಗಳಿಗೆ ಹಾಗೂ ಗಾಯಗೊಂಡವರಿಗೆ ಸರ್ಕಾರವೇ ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಮಕ್ಕಳು ಮತ್ತು ವೃದ್ಧರು ಬೀದಿನಾಯಿಗಳ ದಾಳಿಯಿಂದ ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ಯಾರು ಹೊಣೆಗಾರರು ಎಂಬ ಗಂಭೀರ ಪ್ರಶ್ನೆಯನ್ನು ನ್ಯಾಯಾಲಯ ಎತ್ತಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿ, 9 ವರ್ಷದ ಮಗುವಿನ ಸಾವನ್ನು ಉಲ್ಲೇಖಿಸಿ, “ನಾಯಿ ಪ್ರಿಯರ ಸಂಘಟನೆಗಳು ಪೋಷಿಸುವ ಬೀದಿನಾಯಿಗಳಿಂದ ಮಗು ಸಾವನ್ನಪ್ಪಿದರೆ ಹೊಣೆ ಯಾರದ್ದು?” ಎಂದು ಪ್ರಶ್ನಿಸಿತು. “ನ್ಯಾಯಾಲಯ ಕಣ್ಣು ಮುಚ್ಚಿ ಎಲ್ಲವೂ ನಡೆಯಲು ಬಿಡಬೇಕೇ?” ಎಂದು ಪೀಠ ಕಠಿಣವಾಗಿ ಕೇಳಿತು.

“ಕೇವಲ ನಾಯಿಗಳ ಮೇಲಷ್ಟೇ ಕನಿಕರವೇಕೆ? ಮಾನವರ ಮೇಲೆ ನಡೆಯುವ ದಾಳಿಗಳ ಬಗ್ಗೆ ಏಕೆ ಮೌನ?” ಎಂದು ಪ್ರಶ್ನಿಸಿದ ನ್ಯಾಯಾಲಯ, ನಾಯಿ ಕಡಿತದಿಂದ ಉಂಟಾಗುವ ಸಾವು–ಗಾಯಗಳಿಗೆ ರಾಜ್ಯ ಸರ್ಕಾರ ಪರಿಹಾರ ಪಾವತಿಸಬೇಕು ಎಂದು ತಿಳಿಸಿದೆ. ಜೊತೆಗೆ, ನಾಯಿ ಮಾಲೀಕರು ಮತ್ತು ಅವುಗಳನ್ನು ಪ್ರತಿನಿಧಿಸುವ ಸಂಸ್ಥೆಗಳ ಮೇಲೂ ಜವಾಬ್ದಾರಿ ನಿಗದಿಪಡಿಸಿ ಪರಿಹಾರ ವಿಧಿಸಲಾಗುತ್ತದೆ ಎಂದು ಹೇಳಿದೆ.

ನಾಯಿಗಳಿಗೆ ಆಹಾರ ನೀಡಲು ಅಥವಾ ಆರೈಕೆ ಮಾಡಲು ಬಯಸುವವರು ತಮ್ಮ ಸ್ವಂತ ಆವರಣದಲ್ಲೇ ಅಥವಾ ಮನೆಯಲ್ಲೇ ಮಾಡಬೇಕು. ಅವುಗಳನ್ನು ಬೀದಿಗಳಲ್ಲಿ ಸುತ್ತಾಡಲು ಬಿಡುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದು ಯಾಕೆ ಎಂಬ ಪ್ರಶ್ನೆಯನ್ನು ಪೀಠ ಮುಂದಿಟ್ಟಿತು.

ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಚಾರಣೆ ವೇಳೆ ಇನ್ನಷ್ಟು ಗಂಭೀರ ಪ್ರಶ್ನೆಗಳನ್ನು ಎತ್ತಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಹಿಂದಿನ ವಿಚಾರಣೆಯಲ್ಲಿ ನಾಯಿಗಳ ಮೇಲಿನ ಕ್ರೌರ್ಯ ವೀಡಿಯೊಗಳನ್ನು ವೀಕ್ಷಿಸಲು ನಿರಾಕರಿಸಿದ್ದನ್ನು ನೆನಪಿಸಿಕೊಂಡ ನ್ಯಾಯಾಲಯ, ಮಕ್ಕಳು ಮತ್ತು ವೃದ್ಧರ ಮೇಲೆ ನಾಯಿಗಳ ದಾಳಿಯನ್ನು ತೋರಿಸುವ ವೀಡಿಯೊಗಳೂ ಇದ್ದವೆ ಎಂಬುದನ್ನು ಗಮನಿಸಿತು.

ಪ್ರಾಂಶುಪಾಲನಿಂದ ದಲಿತ ಉಪನ್ಯಾಸಕಿಗೆ ಕಿರುಕುಳ ಆರೋಪ: 21 ದಿನಗಳಾದರೂ ಕ್ರಮ ಕೈಗೊಳ್ಳದ ಪೊಲೀಸರು!

0

ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ಶಿಕ್ಷಣ ಸಂಸ್ಥೆಯೊಳಗೆ ನಡೆದಿದ್ದ ಘಟನೆ ಇದೀಗ ರಾಜ್ಯಮಟ್ಟದಲ್ಲಿ ಆಕ್ರೋಶ ಹುಟ್ಟುಹಾಕಿದೆ. ಎನ್ಇಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶ್ರೀಪಾದ್ ಹೆಗಡೆ ವಿರುದ್ಧ ದಲಿತ ಅತಿಥಿ ಉಪನ್ಯಾಸಕಿ ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆ ಆರೋಪ ಮಾಡಿದ್ದಾರೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ಥಾಪಿತವಾದ ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆಯಲ್ಲೇ ಈ ರೀತಿಯ ಗಂಭೀರ ಆರೋಪ ಕೇಳಿಬಂದಿರುವುದು ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರಶ್ನಾರ್ಥಕ ಗುರುತು ಮೂಡಿಸಿದೆ.

ಸಂತ್ರಸ್ತೆಯ ಪ್ರಕಾರ, ಕಾರಿನಲ್ಲಿ ಕರೆದುಕೊಂಡು ಹೋಗುವ ಸಂದರ್ಭದಲ್ಲೇ ಪ್ರಾಂಶುಪಾಲ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದು, ಜಾತಿಯನ್ನು ಉಲ್ಲೇಖಿಸಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಇದೇ ಸಂಸ್ಥೆಯ ಇಬ್ಬರು ಮಹಿಳಾ ಸಿಬ್ಬಂದಿಗಳ ಮೇಲೂ ಜಾತಿ ನಿಂದನೆಯ ಆರೋಪವನ್ನು ಅವರು ಮಾಡಿದ್ದಾರೆ.

ಘಟನೆ ಬಗ್ಗೆ ದೂರು ದಾಖಲಿಸಿ 21 ದಿನಗಳು ಕಳೆದರೂ ಆರೋಪಿ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ. ಪ್ರಾಂಶುಪಾಲನ ಬಂಧನವಾಗಿಲ್ಲ, ಆಡಳಿತ ಮಂಡಳಿ ಮೌನವಾಗಿದೆ. ಇನ್ನೊಂದು ಕಡೆ, ಸಂಸ್ಥೆಯೇ ಸಂತ್ರಸ್ತೆಯನ್ನು ಕೆಲಸದಿಂದ ವಜಾಗೊಳಿಸಿದ್ದು, ನ್ಯಾಯಕ್ಕಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿಗೆ ಅವಳನ್ನು ತಳ್ಳಿದೆ.

ಆರೋಪಿಯ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತೆ ಆಗ್ರಹಿಸಿದ್ದಾರೆ.

ಜ.17ರಂದು ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ: ಪಾದಯಾತ್ರೆ ಕುರಿತು ಹೈಕಮಾಂಡ್ ಜತೆ ಚರ್ಚೆ – ವಿಜಯೇಂದ್ರ

0

ಬೆಂಗಳೂರು:.17ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಪಾದಯಾತ್ರೆ ನಡೆಸುವ ಅಪೇಕ್ಷೆಯೂ ಇದ್ದು, ಕುರಿತು ಮುಂದಿನ ದಿನಗಳಲ್ಲಿ ಹೈಕಮಾಂಡ್ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕ ಗೂಂಡಾವರ್ತನೆ ತೋರಿದ್ದು, ಭೀತಿಯ ವಾತಾವರಣ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು. “ಅವರ ಅಂಗರಕ್ಷಕರೇ ಅವರ ಕಾರ್ಯಕರ್ತನನ್ನು ಕೊಂದಿದ್ದಾರೆ. ಸುಳಿವು ಬಿಟ್ಟುಬಿಡದಿರಲು ರಾಜಶೇಖರ್ ಶವವನ್ನು ಸುಡಲಾಗಿದೆ. ಇದಕ್ಕೆ ವಿರೋಧವಾಗಿ .17ರಂದು ಬಳ್ಳಾರಿಯಲ್ಲಿ ಬೃಹತ್ ಹೋರಾಟ ನಡೆಸುತ್ತೇವೆಎಂದು ಹೇಳಿದರು.

ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅವರು ಪಾದಯಾತ್ರೆ ನಡೆಸುವ ಆಸೆ ವ್ಯಕ್ತಪಡಿಸಿದ್ದು, ಅದನ್ನು ಹೈಕಮಾಂಡ್ಗಮನಕ್ಕೆ ತಂದಿದ್ದೇನೆ ಎಂದರು. “ಪಾದಯಾತ್ರೆ ಮಾಡಬಾರದು ಎಂಬ ನಿರ್ಬಂಧ ಇಲ್ಲ. ನಮಗೂ ಆಸೆ ಇದೆ. ಹೈಕಮಾಂಡ್ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆಎಂದು ಹೇಳಿದರು.

ಇದೇ ವೇಳೆ, ಕಳೆದ 5 ದಿನಗಳಿಂದ ವಿವಿಧ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿದ್ದು, 39 ಸಂಘಟನಾತ್ಮಕ ಜಿಲ್ಲೆಗಳ ಸರಣಿ ಸಭೆಗಳಲ್ಲಿ ಜಿಲ್ಲೆಯ ರಾಜಕೀಯ ಸ್ಥಿತಿಗತಿ, ಚುನಾವಣಾ ತಯಾರಿ ಹಾಗೂ ಪಕ್ಷ ಸಂಘಟನೆ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಕೇಂದ್ರ ಚುನಾವಣಾ ಆಯೋಗ ತೀರ್ಮಾನ ಕೈಗೊಂಡಿದ್ದು, ಬೋಗಸ್ ಮತದಾರರನ್ನು ಕೈಬಿಡುವ ಪ್ರಕ್ರಿಯೆಯನ್ನು ವಿಧಾನಸಭಾ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ವಿಜಯೇಂದ್ರ ಹೇಳಿದರು.

ನರೇಗಾ ಬಚಾವೋ ಆಂದೋಲನ ಜನಾಂದೋಲನ ಆಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು: MNREGA ಕಾಯ್ದೆ ಪುನ:ಸ್ಥಾಪನೆ ಆಗಿ ವಿಬಿಜಿ ರಾಮ್ ಜಿ ಕಾಯ್ದೆ ರದ್ದಾಗುವವರೆಗೆ ನಮ್ಮ ಹೋರಾಟವನ್ನು ಮುಂದುವರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು ಕೆಪಿಸಿಸಿ ವತಿಯಿಂದ ಗಾಯತ್ರಿ ವಿಹಾರದಲ್ಲಿ ಆಯೋಜಿಸಲಾಗಿದ್ದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಸಂಗ್ರಾಮ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಇದು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಆಗುವ ಆಂದೋಲನ. ಉತ್ತರ ಭಾರತದಲ್ಲಿ ಕಾಯ್ದೆಗಳ ಬದಲಾವಣೆಗೆ ರೈತರು ಹೋರಾಡಿದಂತೆ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಕಳೆದ ತಿಂಗಳು ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ನಡೆದಿದೆ. MNREGA ರದ್ದು ಮಾಡಿರುವುದನ್ನು ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಸರ್ಕಾರ MNREGA ರದ್ದು ಮಾಡಿ ವಿಬಿ ಜಿ ರಾಮ್ ಜಿ ಎಂಬ ಹೊಸ ಕಾಯ್ದೆಯನ್ನು ರೂಪಿಸಿದೆ. ಮಹಾತ್ಮ ಗಾಂಧಿ ಹೆಸರು ಎಂದರೆ ಅವರಿಗೆ ಅಲರ್ಜಿ ಎಂದರು.

ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾಗ MNREGA ಕಾಯ್ದೆಯನ್ನು ಗ್ರಾಮೀಣ ಪ್ರದೇಶದ ಬಡವರಿಗೆ ಕೆಲಸದ ಹಕ್ಕು ನೀಡಲೆಂದು ಮೂಲಭೂತ ಹಕ್ಕನ್ನಾಗಿದ್ದರು. ನಿರುದ್ಯೋಗ, ಆಹಾರ, ಮಾಹಿತಿ, ಕಾಡಿನಲ್ಲಿ ವಾಸಿಸುವ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡಿದರು.

ಆಹಾರ ಭದ್ರತಾ ಕಾಯ್ದೆ, ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು, ಅರಣ್ಯ ವಾಸಿಗಳ ಹಕ್ಕು ಒದಗಿಸುವ ಕಾಯ್ದೆಗಳನ್ನು ರೂಪಿಸಿದರು ಎಂದರು. 20 ವರ್ಷಗಳಿಂದ ಜಾರಿಯಲ್ಲಿದ್ದ ಕಾಯ್ದೆಯಡಿ 12.16 ಕೋಟಿ ಕಾರ್ಮಿಕರು ದೇಶದಲ್ಲಿ ಕೆಲಸ ಮಾಡುತ್ತಿದ್ದು, 6.21ಕೋಟಿ ಮಹಿಳೆಯರು ಕೆಲಸಮಾಡುತ್ತಿದ್ದಾರೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ 365 ದಿನಗಳ ಕಾಲ ಕೆಲಸ ಕೇಳಬಹುದಾಗಿತ್ತು. ಕಾರ್ಮಿಕರು ಅವರ ಊರಿನಲ್ಲಿ, ಅವರ ಜಮೀನಿನಲ್ಲಿಯೇ ಕೆಲಸ ಮಾಡಬಹುದಾಗಿತ್ತು. ಇದನ್ನು ಬದಲಾಯಿಸಿ ಮೋದಿ ಸರ್ಕಾರ ವಿಬಿಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿದೆ. ದಶರಥ ರಾಮ, ಸೀತಾ ರಾಮ ಅಥವಾ ಕೌಶಲ್ಯ ರಾಮನಲ್ಲ. ಮಹಾತ್ಮಾ ಗಾಂಧಿ ಕೊಂದ ನಾಥೂರಾಮ ಇದು. ಗಾಂಧಿಯವರನ್ನು ಮೊತ್ತೊಮ್ಮೆ ಕೊಲ್ಲುತ್ತಿದ್ದಾರೆ.ಕಾಯ್ದೆಯಡಿ ಕೆಲಸ ಕೊಡಲಿಲ್ಲ ಎಂದು ನ್ಯಾಯಾಲಯಕ್ಕೆ ಕೂಡ ಹೋಗಬಹುದಿತ್ತು ಎಂದರು.

ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ: ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು

0

ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೋಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಶೋಭಾ (40) ಎಂದು ಗುರುತಿಸಲಾಗಿದ್ದು, ಈ ಘಟನೆ ಜಿಲ್ಲೆಯಲ್ಲಿ ಮಾನವ–ಕಾಡಾನೆ ಸಂಘರ್ಷ ಮತ್ತೊಮ್ಮೆ ತೀವ್ರಗೊಂಡಿರುವುದನ್ನು ತೋರಿಸಿದೆ.

ಮಂಗಳವಾರ ಮುಂಜಾನೆ ಶೋಭಾ ತಮ್ಮ ಪುತ್ರಿಯರಾದ ರಾಜಮ್ಮ ಮತ್ತು ರಾಗಿಣಿ ಜತೆ ಕಾಫಿ ತೋಟಕ್ಕೆ ಸುಣ್ಣ ಹಚ್ಚುವ ಕೆಲಸಕ್ಕೆ ತೆರಳಿದ್ದರು. ಕೆಲಸದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಕಾಡಾನೆಯಿಂದ ತಪ್ಪಿಸಿಕೊಳ್ಳಲು ಮೂವರು ಓಡಿದರೂ, ಶೋಭಾರನ್ನು ಬೆನ್ನಟ್ಟಿದ ಸಲಗ ಆಕೆಯನ್ನು ತುಳಿದು ಸ್ಥಳದಲ್ಲೇ ಸಾವಿಗೆ ಕಾರಣವಾಗಿದೆ.

ಘಟನೆಯ ಮಾಹಿತಿ ಪಡೆದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಕಾಡಾನೆ ದಾಳಿಯಿಂದ ಮಹಿಳೆ ಮೃತಪಟ್ಟಿರುವುದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಮೃತದೇಹವನ್ನು ಸ್ಥಳದಲ್ಲೇ ಇಟ್ಟು ಶವ ಮೇಲಕ್ಕೆತ್ತಲು ಬಿಡದೆ ಧರಣಿ ನಡೆಸಿದರು.

ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿದ ಗ್ರಾಮಸ್ಥರು, ಕಾಡಾನೆಗಳ ಸಂಚಾರದ ಬಗ್ಗೆ ಮುಂಚಿತ ಎಚ್ಚರಿಕೆ ನೀಡುತ್ತಿಲ್ಲ, ಪುಂಡಾನೆಗಳನ್ನು ಸೆರೆಹಿಡಿಯುವಲ್ಲಿ ವಿಫಲರಾಗಿದ್ದಾರೆ ಹಾಗೂ ರೇಡಿಯೋ ಕಾಲರ್ ಅಳವಡಿಸುವಲ್ಲೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾನವ ಜೀವ ರಕ್ಷಣೆಗಾಗಿ ತಕ್ಷಣ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಬೆಂಗಳೂರು: ಮಹದೇವಪುರದಲ್ಲಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು!

0

ಬೆಂಗಳೂರು: ನಗರದ ಮಹದೇವಪುರ ಪ್ರದೇಶದ ಗರುಡಚಾರ್ಯ ಪಾಳ್ಯದಲ್ಲಿ ನಿನ್ನೆ ರಾತ್ರಿ ನಡುರಸ್ತೆಯಲ್ಲೇ ಕಾರೊಂದು ಅಚಾನಕ್‌ ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ. ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವೇಳೆ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಕಾರಿನ ಮುಂಭಾಗದಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ತಕ್ಷಣವೇ ಕಾರನ್ನು ನಿಲ್ಲಿಸಿ ಪರಿಶೀಲನೆ ನಡೆಸಲು ಮುಂದಾದಾಗ, ಕ್ಷಣಾರ್ಧದಲ್ಲಿ ಬೆಂಕಿ ಸಂಪೂರ್ಣ ಕಾರಿಗೆ ವ್ಯಾಪಿಸಿದೆ ಎನ್ನಲಾಗಿದೆ.

ಘಟನೆಯ ಸಮಯದಲ್ಲಿ ಕಾರಿನಲ್ಲಿದ್ದವರು ಸಮಯಕ್ಕೆ ಸರಿಯಾಗಿ ಹೊರಬಂದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಬೆಂಕಿಗೆ ಆಹುತಿಯಾದ ಕಾರು ಲೋಕೇಶ್ ಎಂಬುವರಿಗೆ ಸೇರಿದ್ದು, KA-03 AL-5589 ನೋಂದಣಿ ಸಂಖ್ಯೆಯ ಸ್ವಿಫ್ಟ್ ಡಿಜೈರ್ ಕಾರು ಎಂದು ತಿಳಿದುಬಂದಿದೆ. ಈ ಕಾರನ್ನು ಸುಮಾರು ಎರಡು ವರ್ಷಗಳ ಹಿಂದೆ ಖರೀದಿಸಲಾಗಿತ್ತು ಎನ್ನಲಾಗಿದೆ.

ಘಟನೆಯ ಸಂಬಂಧ ಮಹದೇವಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯಶ್ ಬರ್ತಡೇ ಸಂಭ್ರಮಕ್ಕೆ ಕಾನೂನು ತಿರುಗುಬಾಣ: ಬ್ಯಾನರ್ ವಿವಾದದಲ್ಲಿ ವೇಣು ಕ್ರಿಯೇಶನ್ ವಿರುದ್ಧ ಎಫ್‌ಐಆರ್

ಬೆಂಗಳೂರು: ನಟ ಯಶ್ ಹುಟ್ಟುಹಬ್ಬದ ಸಂಭ್ರಮ ಇದೀಗ ಕಾನೂನು ವಿವಾದವಾಗಿ ತಿರುಗಿದೆ. ರಸ್ತೆಯಲ್ಲಿ ಅನಧಿಕೃತವಾಗಿ ಬ್ಯಾನರ್ ಹಾಕಿದ ಪ್ರಕರಣದಲ್ಲಿ ವೇಣು ಕ್ರಿಯೇಶನ್ ವಿರುದ್ಧ ಪೊಲೀಸ್ ಎಫ್‌ಐಆರ್ ದಾಖಲಾಗಿದೆ.

ಜ.8ರಂದು ಯಶ್ ಜನ್ಮದಿನದ ಹಿನ್ನೆಲೆಯಲ್ಲಿ ಗಾಲ್ಫ್ ಕ್ಲಬ್ ಎದುರು, ಅವರ ಮನೆ ಬಳಿಯ ರಸ್ತೆಯಲ್ಲಿ ಹುಟ್ಟುಹಬ್ಬ ಶುಭಾಶಯ ಕೋರಿ ಹಲವು ಫ್ಲೆಕ್ಸ್‌ಗಳು ಮತ್ತು ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಇಲ್ಲದೆ ಬ್ಯಾನರ್ ಹಾಕಲಾಗಿದೆ ಎಂಬ ಆರೋಪದ ಮೇರೆಗೆ ಜಿಬಿಎ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ವೇಣು ಕ್ರಿಯೇಶನ್ ಅವರನ್ನು ಆರೋಪಿಯಾಗಿ ಉಲ್ಲೇಖಿಸಲಾಗಿದೆ. ದೂರಿನ ಆಧಾರದ ಮೇಲೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ ದಾಖಲಾಗಿದೆ.

ಕ್ರೀಡಾಪಟುಗಳು ಸೇರಿ ನನ್ನ ಹೆಸರು ಇಟ್ಟರೆ ನಿಮಗೆ ಯಾಕೆ ಹೊಟ್ಟೆ ಉರಿ?: ಪರಮೇಶ್ವರ್ ಪ್ರಶ್ನೆ

0

ತುಮಕೂರು: ಒಳಾಂಗಣ ಕ್ರೀಡಾಂಗಣಕ್ಕೆ ಡಾ.ಜಿ. ಪರಮೇಶ್ವರ್ ಹೆಸರು ಇಟ್ಟಿರುವುದರ ಬಗ್ಗೆ ರಾಜಕೀಯ ಚರ್ಚೆ ತೀವ್ರವಾಗಿರುವ ನಡುವೆಯೇ, ಗೃಹಸಚಿವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
“ನಾನು ಕ್ರೀಡಾಪಟು. ತುಮಕೂರಿಗೆ ಕೀರ್ತಿ ತಂದಿದ್ದೇನೆ. ಕ್ರೀಡಾಪಟುಗಳೇ ಸೇರಿ ನನ್ನ ಹೆಸರು ಇಟ್ಟಿದ್ದಾರೆ. ಇದಕ್ಕೆ ಯಾಕೆ ಕೆಲವರಿಗೆ ಹೊಟ್ಟೆ ಉರಿ?” ಎಂದು ಅವರು ಪ್ರಶ್ನಿಸಿದರು.

ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಜಿ. ಪರಮೇಶ್ವರ್ ಹೆಸರಿನ ನಾಮಫಲಕ ಅನಾವರಣಗೊಂಡಿತು. ಈ ಕಾರ್ಯಕ್ರಮವನ್ನು ತುಮಕೂರು ಜಿಲ್ಲಾಡಳಿತ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯೋಜಿಸಿತ್ತು. ಕರ್ನಾಟಕ ಒಲಂಪಿಕ್ ಅಧ್ಯಕ್ಷ ಗೋವಿಂದರಾಜು ನಾಮಫಲಕ ಅನಾವರಣಗೊಳಿಸಿದರು. ಆಯುಕ್ತ ಚೇತನ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಅಶೋಕ್ ಕೆ.ವಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಪತ್ರಕರ್ತರೊಂದಿಗೆ ಮಾತನಾಡಿದ ಪರಮೇಶ್ವರ್,
“ನಾನು ಹೆಸರು ಇಡಲು ಯಾರಿಗೂ ಕೇಳಿಕೊಂಡಿಲ್ಲ. ಕ್ರೀಡಾಪಟುಗಳು ಸೇರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ನನಗೆ ಗೊತ್ತೇ ಇಲ್ಲದೆ ಈ ನಿರ್ಧಾರ ಆಗಿದೆ. ಒಂದು ಶೆಡ್‌ಗೆ ನನ್ನ ಹೆಸರು ಇಟ್ಟಿದ್ದರೂ ಅದನ್ನು ಸಹಿಸಲ್ಲಾ ಅಂದರೆ, ಎಂಥಾ ಜನ ನೀವು?” ಎಂದು ಬೇಸರ ವ್ಯಕ್ತಪಡಿಸಿದರು.

ಅವರು ತುಮಕೂರಿನ ಕ್ರೀಡಾ ಅಭಿವೃದ್ಧಿ ಕುರಿತು ಮಾತನಾಡುತ್ತ, ಜನವರಿ 16ರಿಂದ 22ರವರೆಗೆ ಕ್ರೀಡಾ ಕೂಟ ನಡೆಯಲಿದ್ದು, 16ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ, 22ರಂದು ರಾಜ್ಯಪಾಲರು ಸಮಾರೋಪಕ್ಕೆ ಬರಲಿದ್ದಾರೆ ಎಂದರು. ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ 27 ಕ್ರೀಡೆಗಳು ನಡೆಯಲಿದ್ದು, ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.

ಇನ್ನೊಂದು ಮಹತ್ವದ ಘೋಷಣೆಯಲ್ಲಿ, ತುಮಕೂರಿನಲ್ಲಿ 40 ಎಕರೆ ಭೂಮಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗುತ್ತಿದ್ದು, ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಜೊತೆಗೆ, “ತುಮಕೂರಿಗೆ ಮೆಟ್ರೋ ತರಬೇಕೆಂಬ ಸಂಕಲ್ಪ ನನ್ನದು” ಎಂದು ಹೇಳಿದರು.

‘ಈ ಬಂಗಾರ ನಮ್ಮದಲ್ಲ’ ಎಂದ 14 ವರ್ಷದ ಬಾಲಕ… ಲಕ್ಕುಂಡಿಯಲ್ಲಿ ಪ್ರಾಮಾಣಿಕತೆ ಇತಿಹಾಸ, ಸರ್ಕಾರದಿಂದ ಮನೆ–ಜಾಬ್ ಭರವಸೆ

0

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದ ನಿಧಿ ಪತ್ತೆ ಪ್ರಕರಣವನ್ನು ಸಚಿವ ಎಚ್.ಕೆ. ಪಾಟೀಲ್ ‘ದೊಡ್ಡ ಇತಿಹಾಸ ಸೃಷ್ಟಿ’ ಎಂದು ಬಣ್ಣಿಸಿದ್ದಾರೆ.

ಲಕ್ಕುಂಡಿ ರಾಷ್ಟ್ರಕೂಟರು ಮತ್ತು ಚಾಲುಕ್ಯರ ಆಳ್ವಿಕೆಗೆ ಒಳಪಟ್ಟ ಐತಿಹಾಸಿಕ ನಾಡಾಗಿದ್ದು, ಇಲ್ಲಿ ಅನೇಕ ಅದ್ಭುತ ಘಟನೆಗಳು ನಡೆದಿವೆ ಎಂದು ಅವರು ಹೇಳಿದ್ದಾರೆ. ಲಕ್ಕುಂಡಿಯಲ್ಲಿ ಪ್ರತೀ ಮಳೆಗಾಲದಲ್ಲಿ ಮುತ್ತು, ರತ್ನ, ಹವಳಗಳು ಸಿಗುವಷ್ಟು ಶ್ರೀಮಂತ ಪರಂಪರೆ ಇದೆ. ಈ ಹಿನ್ನೆಲೆ ಲಕ್ಕುಂಡಿಯನ್ನು ವಿಶ್ವಪಾರಂಪರ್ಯ ಪಟ್ಟಿಗೆ ಸೇರಿಸಲು ಪ್ರಯತ್ನ ನಡೆಯುತ್ತಿದ್ದು, ಅದಕ್ಕೆ ಅಗತ್ಯವಿರುವ ಎಲ್ಲಾ ಸಾಮರ್ಥ್ಯವೂ ಲಕ್ಕುಂಡಿಗೆ ಇದೆ ಎಂದು ಅವರು ಸ್ಪಷ್ಟಪಡಿಸಿದರು.

ಎರಡು ದಿನಗಳ ಹಿಂದೆ ಲಕ್ಕುಂಡಿಯಲ್ಲಿ 466 ಗ್ರಾಂ ಬಂಗಾರ ಹಾಗೂ 634 ಗ್ರಾಂ ತಾಮ್ರದ ತಂಬಿಗೆ ಪತ್ತೆಯಾಗಿದ್ದು, ಅದನ್ನು ಜಿಲ್ಲಾಡಳಿತಕ್ಕೆ ಕಾನೂನುಬದ್ಧವಾಗಿ ಒಪ್ಪಿಸಲಾಗಿದೆ. 14 ವರ್ಷದ ಪ್ರಜ್ವಲ್ ರಿತ್ತಿ ಎಂಬ ಬಾಲಕ ಮನೆ ನಿರ್ಮಾಣದ ಸಂದರ್ಭದಲ್ಲಿ ತಂಬಿಗೆ ಕಂಡು ತಕ್ಷಣ ತಾಯಿಗೆ ಮಾಹಿತಿ ನೀಡಿದ್ದು, ನಂತರ ಸಿದ್ದು ಪಾಟೀಲ್ ಮೂಲಕ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಆ ಬಾಲಕ ತಂಬಿಗೆಯನ್ನು ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಇಟ್ಟು ಬೀಗ ಹಾಕಿ ಕಾಯ್ದುಕೊಂಡಿದ್ದನು. ನಂತರ ಜಿಲ್ಲಾಡಳಿತ ಕಾನೂನು ಪ್ರಕಾರ ಅದನ್ನು ವಶಕ್ಕೆ ಪಡೆದಿದೆ.

ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತಂದಾಗ, ಬಾಲಕ “ಸರ್ಕಾರಕ್ಕೆ ಕೊಡುತ್ತೇನೆ” ಎಂದು ಹೇಳಿದ ಗುಣವೇ ನಿಧಿಗಿಂತ ದೊಡ್ಡ ಮೌಲ್ಯ ಎಂದು ಮುಖ್ಯಮಂತ್ರಿ ಪ್ರಶಂಸಿಸಿದ್ದಾರೆ. ಪ್ರಜ್ವಲ್ ಈ ಮೂಲಕ ಗದಗ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ ಎಂದು ಸಚಿವರು ಹೇಳಿದರು.

ಸಚಿವ ಎಚ್.ಕೆ. ಪಾಟೀಲ್ ಲಕ್ಕುಂಡಿಯ ನಿಧಿ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಸ್ತೂರವ್ವ ರಿತ್ತಿ ಕುಟುಂಬಕ್ಕೆ ಭೇಟಿ ನೀಡಿ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಲಕ್ಕುಂಡಿ ಗ್ರಾಮದ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲಾಡಳಿತದ ವತಿಯಿಂದ ಕಸ್ತೂರವ್ವ ರಿತ್ತಿ ಮತ್ತು ಪ್ರಜ್ವಲ್ ರಿತ್ತಿಗೆ ಸನ್ಮಾನ ನೆರವೇರಿಸಿದ್ದಾರೆ. ಪ್ರಜ್ವಲ್ ಮೇಲೆ ಹೂವಿನ ಸುರಿಮಳೆಗೈದು ಗೌರವ ಸಲ್ಲಿಸಿದ್ದು, ಬಳಿಕ ಕುಟುಂಬವನ್ನು ಪಕ್ಕದಲ್ಲಿ ಕೂರಿಸಿಕೊಂಡು ಸುದ್ದಿಗೋಷ್ಠಿ ನಡೆಸಿದರು.

ಈ ನಿಧಿಯನ್ನು ಕಾನೂನುಬದ್ಧವಾಗಿ ಎಲ್ಲಿ ಇರಿಸಬೇಕು ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಪ್ರಜ್ವಲ್ ಕುಟುಂಬಕ್ಕೆ ವಿಶೇಷ ನೆರವು ನೀಡುವಂತೆ ಗ್ರಾಮದ ಹಿರಿಯರು ಮನವಿ ಸಲ್ಲಿಸಿದ್ದು, ಮನೆ, ಜಾಗ ಹಾಗೂ ತಾಯಿಗೆ ಉದ್ಯೋಗ ನೀಡುವ ಬೇಡಿಕೆ ಇಟ್ಟಿದ್ದಾರೆ. ಈ ಮೂರು ವಿಷಯಗಳನ್ನು ಮುಖ್ಯಮಂತ್ರಿ ಜೊತೆ ಚರ್ಚಿಸಿ, ಸಂಪುಟ ಸಭೆಯಲ್ಲಿ ಮಂಡಿಸಿ ನಾಳೆ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಲಕ್ಕುಂಡಿಯಲ್ಲಿ ಇದುವರೆಗೂ 1100ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಗ್ರಾಮಸ್ಥರು ಸರ್ಕಾರಕ್ಕೆ ನೀಡಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ದಾಖಲೆ ಎಂದು ಸಚಿವರು ಹೇಳಿದರು. ಅದಕ್ಕೆ ಕಿರೀಟವೆಂಬಂತೆ ಈಗ ನಿಧಿಯನ್ನೂ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಉತ್ಖನನ ಕಾರ್ಯ ಆರಂಭವಾಗಲಿದೆ. ಈಗಾಗಲೇ 16 ದೇವಸ್ಥಾನ ಮತ್ತು ಬಾವಿಗಳನ್ನು ರಕ್ಷಿತ ಸ್ಮಾರಕಗಳಾಗಿ ಸರ್ಕಾರ ಘೋಷಿಸಿದೆ. 165 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ದೇವಸ್ಥಾನಗಳ ಅಭಿವೃದ್ಧಿಗೆ 10 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ, ಆರು ದೇವಸ್ಥಾನಗಳ ಅಭಿವೃದ್ಧಿ ಪ್ರಗತಿಯಲ್ಲಿ ಇದೆ ಎಂದು ಮಾಹಿತಿ ನೀಡಿದರು.

ಈ ಪ್ರಕರಣದಲ್ಲಿ ತಪ್ಪು ಮಾಹಿತಿಯಿಂದ ಕೆಲ ಗೊಂದಲ ಉಂಟಾಗಿದ್ದರೂ, ಜಿಲ್ಲಾಧಿಕಾರಿಗಳು ಅದನ್ನು ಬಗೆಹರಿಸಿದ್ದಾರೆ. ಕಾನೂನು ಪ್ರಕಾರ ಕುಟುಂಬಕ್ಕೆ ಯಾವ ನೆರವು ಕೊಡಬೇಕು, ಅದನ್ನೆಲ್ಲ ಮಾಡಲಾಗುತ್ತದೆ. ಪ್ರಾಮಾಣಿಕತೆಗೆ ಗೌರವ ನೀಡುವ ಉದ್ದೇಶದಿಂದ ಮನೆ ಮತ್ತು ಉದ್ಯೋಗ ನೀಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಎಚ್.ಕೆ. ಪಾಟೀಲ್ ಹೇಳಿದರು. ಹೂವಿನ ಹಾರ ಕಟ್ಟಿಕೊಂಡು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದ ಈ ಬಡ ಕುಟುಂಬ, ಇಂತಹ ಸ್ಥಿತಿಯಲ್ಲಿಯೂ ‘ಈ ಬಂಗಾರ ನಮ್ಮದಲ್ಲ’ ಎಂದು ಸರ್ಕಾರಕ್ಕೆ ಒಪ್ಪಿಸಿದ್ದು, ಅವರ ಪ್ರಾಮಾಣಿಕತೆಗೆ ಸಂಪೂರ್ಣ ಗೌರವ ನೀಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.

error: Content is protected !!