Home Blog Page 183

ಸುಪ್ರೀಂ ಕೋರ್ಟ್ ಆದೇಶದಂತೆ ಜಿಬಿಎ ಪಾಲಿಕೆ ಚುನಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

0

ಬೆಂಗಳೂರು:“ಸುಪ್ರೀಂ ಕೋರ್ಟ್ ಆದೇಶದ ಅನುಸಾರ ನಿಗದಿತ ದಿನಾಂಕದ ಒಳಗೆ ಜಿಬಿಎ ಪಾಲಿಕೆಗಳ ಚುನಾವಣೆ ನಡೆಸಲಾಗುವುದು. ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ನಿರ್ದೇಶನ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಅರಮನೆ ಮೈದಾನ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಪಾಲಿಕೆಗಳ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಗಡುವು ನೀಡಿರುವ ಬಗ್ಗೆ ಕೇಳಿದಾಗ, “ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸಿದ್ದು, ಅದು ಅವರಿಗೆ ಬಿಟ್ಟ ವಿಚಾರ. ಸರ್ಕಾರ ಎಲ್ಲಾ ರೀತಿಯ ಆದೇಶ ನೀಡಲಿದೆ. ನಮಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ನಡೆಯಬೇಕು. ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ಅನುಸಾರ ಏನೆಲ್ಲಾ ತೀರ್ಮಾನ ಮಾಡಬೇಕೋ ಅದನ್ನು ಮಾಡಲಿದೆ” ಎಂದು ತಿಳಿಸಿದರು.

ತಾಂತ್ರಿಕ ಆಕ್ಷೇಪಣೆಗಳ ಬಗ್ಗೆ ಕೇಳಿದಾಗ, “ಕೆಲವರು ಆಕ್ಷೇಪಣೆ ಸಲ್ಲಿಸುತ್ತಾರೆ. ಅದಕ್ಕೆ ಸಮಿತಿ ರಚಿಸಲಾಗಿದ್ದು, ಅದು ತೀರ್ಮಾನ ಮಾಡಲಿದೆ. ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸಲಿದ್ದು, ಅವರಿಗೆ ಏನು ನಿರ್ದೇಶನ ನೀಡಬೇಕೋ ನೀಡುತ್ತೇವೆ.

ಮೀಸಲಾತಿ ವಿಚಾರವಾಗಿ ಮಹಿಳೆಯರಿಗೆ ಕಡಿಮೆಯಾಗಿದೆ ಎಂಬ ಮಾತು ಕೇಳಿಬಂದಿವೆ. ಇದನ್ನು ನಾನು ಗಮನಿಸಿಲ್ಲ. ಇದನ್ನು ಪರಿಶೀಲಿಸಿ ತಪ್ಪಾಗಿದ್ದರೆ ಸರಿಪಡಿಸಲು ಅವರಿಗೆ ಸೂಚಿಸಲಾಗುವುದು. ನಾವು ಯಾವುದರಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ತಿಳಿಸಿದರು.ಚುನಾವಣೆ ನಡೆಸಲು ನ್ಯಾಯಾಲಯದ ಬಳಿ ಕಾಲಾವಕಾಶ ಕೇಳುತ್ತೀರಾ ಎಂದು ಕೇಳಿದಾಗ, “ಇಲ್ಲ, ನಾವು ಯಾವುದೇ ಕಾಲಾವಕಾಶ ಕೇಳುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಕಲಬುರಗಿ ಸೆಂಟ್ರಲ್ ಜೈಲಿಗೆ ನಿಷೇಧಿತ ವಸ್ತು ಎಸೆಯಲು ಯತ್ನ: ಮೂವರ ಬಂಧನ

0

ಕಲಬುರಗಿ: ಕಲಬುರಗಿ ಸೆಂಟ್ರಲ್ ಜೈಲಿನೊಳಗೆ ಅಕ್ರಮವಾಗಿ ಬೀಡಿ, ಸಿಗರೇಟ್ ಸೇರಿದಂತೆ ನಿಷೇಧಿತ ವಸ್ತುಗಳನ್ನು ಎಸೆಯಲು ಯತ್ನಿಸಿದ ಮೂವರನ್ನು ಜೈಲು ಭದ್ರತಾ ಪಡೆ ರೆಡ್‌ಹ್ಯಾಂಡ್ ಆಗಿ ಬಂಧಿಸಿರುವ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.

ಜೈಲಿನೊಳಗೆ ಬಿಡಿ, ಸಿಗರೇಟ್ ಮತ್ತು ಇತರೆ ಪ್ಯಾಕ್ ಮಾಡಿದ ವಸ್ತುಗಳನ್ನು ಎಸೆಯುವ ಉದ್ದೇಶದಿಂದ ಮೂವರು ವ್ಯಕ್ತಿಗಳು ಜೈಲು ಆವರಣದ ಬಳಿ ಬಂದಿದ್ದರು. ಜೈಲು ಕಾಂಪೌಂಡ್ ಮೇಲಿಂದ ವಸ್ತುಗಳನ್ನು ಎಸೆಯಲು ಯತ್ನಿಸುವಾಗ ಜೈಲು ಭದ್ರತಾ ಪಡೆ ಗಮನಿಸಿ ತಕ್ಷಣ ವಶಕ್ಕೆ ಪಡೆದುಕೊಂಡಿದೆ.

ಬಂಧಿತರನ್ನು ಪಿಂಟು, ಅನಿಲ್ ಹಾಗೂ ವಿಜಯ್ ಜಾಧವ್ ಎಂದು ಗುರುತಿಸಲಾಗಿದೆ. ಮೂವರೂ ಕಲಬುರಗಿ ನಗರದ ಬಸವ ನಗರ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಲು ಭದ್ರತೆಗೆ ನಿಯೋಜನೆಯಲ್ಲಿದ್ದ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಮೂವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ವಿಚಾರಣೆ ನಡೆಸಿದ್ದಾರೆ. ನಂತರ ಬಂಧಿತ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಫರಹತಬಾದ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಫರಹತಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು ಮಹಾತ್ಮಾ ಗಾಂಧಿ ಇಂಡೋರ್ ಸ್ಟೇಡಿಯಂಗೆ ಪರಮೇಶ್ವರ್ ಹೆಸರು!

0

ತುಮಕೂರು: ಜಿಲ್ಲೆಯ ಏಕೈಕ ಜಿಲ್ಲಾ ಮಟ್ಟದ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್  ಹೆಸರು ನಾಮಕರಣ ಮಾಡಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಮಹಾತ್ಮಾ ಗಾಂಧೀಜಿ ಹೆಸರಿನ ಬದಲಿಗೆ ಡಾ.ಜಿ.ಪರಮೇಶ್ವರ ಹೆಸರು ಇಟ್ಟಿರುವುದನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ವಿರೋಧಿಸಿದೆ.

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಈ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗಿದೆ. ಹೊರಾಂಗಣ ಕ್ರೀಡಾಂಗಣದ ಮುಂಭಾಗದಲ್ಲೇ ಒಳಾಂಗಣ ಸ್ಟೇಡಿಯಂ ಇದ್ದು, ಇದುವರೆಗೆ ಪ್ರತ್ಯೇಕ ನಾಮಫಲಕ ಇಲ್ಲದಿದ್ದರೂ ಅದನ್ನು ‘ಮಹಾತ್ಮಾ ಗಾಂಧಿ ಇಂಡೋರ್ ಸ್ಟೇಡಿಯಂ’ ಎಂದೇ ಕರೆಯಲಾಗುತ್ತಿತ್ತು.

ಆದರೆ ಮೂರು ದಿನಗಳ ಹಿಂದೆ ದಿಢೀರ್ ಆಗಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಅವರ ಹೆಸರನ್ನು ‘ಡಾ.ಜಿ.ಪರಮೇಶ್ವರ ಒಳಾಂಗಣ ಕ್ರೀಡಾ ಸಂಕೀರ್ಣ’ ಎಂದು ನಾಮಫಲಕ ಅಳವಡಿಸಲಾಗಿದೆ. ಇದರಿಂದ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶ ಭುಗಿಲೆದ್ದಿದೆ.

ಈ ವಿಚಾರ ವಿರೋಧಿಸಿ ಸೋಮವಾರ ಸಂಜೆ ಬಿಜೆಪಿಯ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ಕ್ರೀಡಾಂಗಣದ ಬಳಿ ಧರಣಿ ಕುಳಿತರು. ಪರಮೇಶ್ವರ್ ಹೆಸರಿನ ನಾಮಫಲಕ ತೆರವುಗೊಳಿಸಲು ಯತ್ನಿಸಿದ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು. ಬ್ಯಾರಿಕೇಡ್‌ಗಳನ್ನು ತಳ್ಳಿ ಒಳನುಗ್ಗಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಯಿತು. ಬಳಿಕ ಪೊಲೀಸರು ಬಿಜೆಪಿ ಮುಖಂಡರು ಸೇರಿದಂತೆ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಈ ಸಂದರ್ಭ ಬಿಜೆಪಿ ಶಾಸಕ ಸುರೇಶ್ ಗೌಡ ಮಾತನಾಡಿ, ಇದು ಗೃಹ ಸಚಿವರ ಹಿಂಬಾಲಕರನ್ನು ಮೆಚ್ಚಿಸಲು ಮಾಡಿರುವ ಕಾರ್ಯ ಎಂದು ಆರೋಪಿಸಿದರು. ಈ ತಪ್ಪನ್ನು ಪರಮೇಶ್ವರ್ ಅವರೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಸ್ಥಳೀಯ ಸಂಸ್ಥೆ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಠರಾವು ಪಡೆಯದೇ ಹೆಸರು ಬದಲಾವಣೆ ಮಾಡಿರುವುದು ಸರಿಯಲ್ಲ ಎಂದರು.

ಇದೇ ತಿಂಗಳ 16ರಿಂದ ಇದೇ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಒಲಂಪಿಕ್ ಕ್ರೀಡಾಕೂಟ ನಡೆಯಲಿದೆ. ಸರ್ಕಾರದ ಸ್ಪಷ್ಟ ಆದೇಶ ಇಲ್ಲದಿದ್ದರೂ ಅಧಿಕಾರಿಗಳು ಆತುರದಲ್ಲಿ ಮಹಾತ್ಮಾ ಗಾಂಧೀಜಿ ಹೆಸರನ್ನು ಬದಲಿಸಿ ಡಾ.ಜಿ.ಪರಮೇಶ್ವರ ಹೆಸರಿನ ನಾಮಫಲಕ ಅಳವಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೇ ಮಧ್ಯಪ್ರವೇಶಿಸಿ ವಿವಾದಕ್ಕೆ ತೆರೆ ಎಳೆಯಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಕರೂರು ಕಾಲ್ತುಳಿತ ಪ್ರಕರಣ: ಸಿಬಿಐ ಮುಂದೆ 7 ಗಂಟೆ ವಿಚಾರಣೆಗೆ ಹಾಜರಾದ ನಟ ವಿಜಯ್

ನವದೆಹಲಿ: ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಕೆ ಪಕ್ಷದ ಅಧ್ಯಕ್ಷ ಹಾಗೂ ನಟ ದಳಪತಿ ವಿಜಯ್ ಸೋಮವಾರ (ಜ.12) ಸಿಬಿಐ ಮುಂದೆ ವಿಚಾರಣೆಗೆ ಹಾಜರಾದರು. ಈ ವೇಳೆ ಅಧಿಕಾರಿಗಳು ಅವರನ್ನು ಏಳು ಗಂಟೆಗಳಿಗೂ ಅಧಿಕ ಕಾಲ ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ.

ಸಿಬಿಐ ಅಧಿಕಾರಿಗಳು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದು, ವಿಜಯ್ ತಮ್ಮ ಪಕ್ಷ ಹಾಗೂ ಪಕ್ಷದ ಕಾರ್ಯಕರ್ತರು ಘಟನೆಗೆ ಕಾರಣರಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಕಾಲ್ತುಳಿತದ ಬಳಿಕ ನಾನು ಅಲ್ಲಿಯೇ ಉಳಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎಂಬ ಕಾರಣಕ್ಕೆ ಸ್ಥಳದಿಂದ ತೆರಳಿದ್ದೆ ಎಂದು ಅವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ವಿಜಯ್ ನೀಡಿದ ಹೇಳಿಕೆಯನ್ನು ಸಿಬಿಐ ಅಧಿಕೃತವಾಗಿ ದಾಖಲಿಸಿಕೊಂಡಿದೆ.

ವಿಜಯ್ ಆಗಮನದ ಹಿನ್ನೆಲೆಯಲ್ಲಿ ಸಿಬಿಐ ಕಚೇರಿ ಎದುರು ಭಾರಿ ಭದ್ರತೆ ಏರ್ಪಡಿಸಲಾಗಿತ್ತು. ಆದರೂ ಅಭಿಮಾನಿಗಳು ಪ್ರತಿಭಟನೆ ನಡೆಸಿ ಕೆಲಕಾಲ ಗೊಂದಲ ಸೃಷ್ಟಿಯಾಯಿತು. ಸೋಮವಾರ ಬೆಳಿಗ್ಗೆ 10:30ರ ಸುಮಾರಿಗೆ ವಿಜಯ್ ಚಾರ್ಟರ್ಡ್ ವಿಮಾನದಲ್ಲಿ ದೆಹಲಿಗೆ ಆಗಮಿಸಿದ್ದರು.

ಕಳೆದ ವರ್ಷ ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ಪಕ್ಷ ಆಯೋಜಿಸಿದ್ದ ರ‍್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಒಪ್ಪಿಸಿ ಆದೇಶ ನೀಡಿತ್ತು.

ಈ ನಡುವೆ ‘ಜನನಾಯಗನ್’ ಚಿತ್ರದ ಬಿಡುಗಡೆ ಕುರಿತ ವಿವಾದವೂ ಮುಂದುವರಿದಿದ್ದು, ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ತುರ್ತು ವಿಚಾರಣೆ ನಡೆಸುವಂತೆ ಚಿತ್ರದ ನಿರ್ಮಾಪಕರು ನ್ಯಾಯಾಲಯ ಮೊರೆ ಹೋಗಿದ್ದಾರೆ.

ಸಕಲೇಶಪುರದ ಮೂಗಲಿಯಲ್ಲಿ ಆನೆ ದಾಳಿಗೆ ಮಹಿಳೆ ಸಾವು: ಸಂತಾಪ ಸೂಚಿಸಿದ ಸಚಿವ ಈಶ್ವರ ಖಂಡ್ರೆ

0

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. 40 ವರ್ಷದ ಮಹಿಳೆಯ ಜೀವ ಹೋದ ಸುದ್ದಿ ತಿಳಿದ ಸಚಿವ ಈಶ್ವರ ಖಂಡ್ರೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಅಧಿಕಾರಿಗಳಿಗೆ ತಕ್ಷಣ ಕಾರ್ಯಾಚರಣೆಗೆ ಇಳಿಯುವಂತೆ ಕಠಿಣ ಸೂಚನೆ ನೀಡಿದ್ದಾರೆ.

ಆನೆಯನ್ನು ತಕ್ಷಣವೇ ಮರಳಿ ಕಾಡಿಗೆ ಕಳುಹಿಸುವುದು ಅಥವಾ ಸೆರೆಗೆ ಪಡೆಯುವಂತೆ ವನ್ಯಜೀವಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಸನದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಭಾಯಿಸಬೇಕು ಎಂದು ಆದೇಶಿಸಲಾಗಿದೆ.

“ಹೋದ ಜೀವ ಮರಳಿ ತರಲು ಸಾಧ್ಯವಿಲ್ಲ, ಆದರೆ ಕುಟುಂಬಕ್ಕೆ ಸರ್ಕಾರ ಆಸರೆಯಾಗಬೇಕು” ಎಂದು ಸಚಿವರು ಹೇಳಿದ್ದಾರೆ. ಮೃತರ ಕುಟುಂಬಕ್ಕೆ ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಆನೆ ಕಾರ್ಯಪಡೆ ನಿಯೋಜನೆ, ಎಚ್ಚರಿಕೆ ಸಂದೇಶ ಮತ್ತು ಕಠಿಣ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.

ಬಿಎಂಐಸಿ ಯೋಜನೆ ಮರುಪರಿಶೀಲನೆಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

0

ಬೆಂಗಳೂರು: ಕಳೆದ 25 ವರ್ಷಗಳಲ್ಲಿ ಕೇವಲ ಒಂದು ಕಿಲೋ ಮೀಟರ್ ಮಾತ್ರ ನಿರ್ಮಾಣಗೊಂಡಿರುವ ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್ (ಬಿಎಂಐಸಿ) ಯೋಜನೆಯನ್ನು ಮರುಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ.

ಬಿಎಂಐಸಿ ಯೋಜನೆಗಾಗಿ ವಶಪಡಿಸಿಕೊಂಡ ಭೂಮಿಗೆ ಪರಿಹಾರ ವಿತರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರಿನ ಮಾರಪ್ಪ ಗಾರ್ಡನ್ ನಿವಾಸಿ ಚಂದ್ರಿಕಾ ಸಲ್ಲಿಸಿದ್ದ ಅರ್ಜಿಯನ್ನು, ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ. ಅರ್ಜಿದಾರರು ಈಗಾಗಲೇ ಪರಿಹಾರ ಪಡೆದಿರುವುದನ್ನು ಗಮನಿಸಿ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ನ್ಯಾಯಪೀಠ, ಬಿಎಂಐಸಿ ಯೋಜನೆಯಡಿ ಫೆರಿಫೆರಲ್ ರಸ್ತೆಗಳು ಹಾಗೂ ಟೋಲ್ ಪ್ಲಾಜಾಗಳನ್ನು ನಿರ್ಮಿಸಿ ಭಾರಿ ಪ್ರಮಾಣದ ಸುಂಕ ಸಂಗ್ರಹಿಸಲಾಗುತ್ತಿದೆ. ಆದರೆ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಹಾಗೂ ಮೂಲಸೌಕರ್ಯ ಕಾರಿಡಾರ್ ಯೋಜನೆ ಕೇವಲ ಕಾಗದಗಳಲ್ಲೇ ಉಳಿದಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಯೋಜನಾ ನಿರ್ಮಾಣಕಾರರು ದೊಡ್ಡ ಪ್ರಮಾಣದ ಭೂಮಿಯನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದರೂ, ಎಕ್ಸ್‌ಪ್ರೆಸ್‌ವೇ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿಲ್ಲ. ಭವಿಷ್ಯದಲ್ಲಿಯೂ ಅದನ್ನು ಪೂರ್ಣಗೊಳಿಸುವ ಯಾವುದೇ ಸ್ಪಷ್ಟ ಸೂಚನೆ ಇಲ್ಲ. ಭೂಮಿ ಸಮರ್ಪಕವಾಗಿ ಬಳಸಲಾಗದೇ ಇರುವುದೇ ಇದಕ್ಕೆ ಕಾರಣ ಎಂದು ಪೀಠ ಅಭಿಪ್ರಾಯಪಟ್ಟಿದೆ. ಹೀಗಾಗಿ ಯೋಜನೆಯನ್ನು ಮರುಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.

ನಗರದ ಜನದಟ್ಟಣೆ ಕಡಿಮೆ ಮಾಡುವುದು, ಉತ್ತಮ ನಾಗರಿಕ ಸೌಲಭ್ಯಗಳನ್ನು ಒದಗಿಸುವುದು ಮತ್ತು ವ್ಯಾಪಾರ ಹಾಗೂ ವೃತ್ತಿಪರರಿಗೆ ಉತ್ತಮ ಅವಕಾಶ ಕಲ್ಪಿಸುವ ಉದ್ದೇಶದಿಂದ ಬಿಎಂಐಸಿ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಈ ಉದ್ದೇಶಗಳು ಈಡೇರದೇ ದೂರದ ಕನಸಾಗಿಯೇ ಉಳಿದಿವೆ ಎಂದು ಪೀಠ ತಿಳಿಸಿದೆ. ಟೋಲ್ ಪ್ಲಾಜಾ ಮತ್ತು ಫೆರಿಫೆರಲ್ ರಸ್ತೆಗಳ ಹೊರತು, ಸುಮಾರು 25 ವರ್ಷಗಳಲ್ಲಿ ಕೇವಲ ಒಂದು ಕಿಲೋ ಮೀಟರ್ ಎಕ್ಸ್‌ಪ್ರೆಸ್‌ವೇ ಮಾತ್ರ ನಿರ್ಮಾಣವಾಗಿದೆ ಎಂದು ನ್ಯಾಯಪೀಠ ಉಲ್ಲೇಖಿಸಿದೆ.

ಪಿಟಿಆರ್ ಅಡಿಯಲ್ಲಿ ಕಲ್ಪಿಸಲಾದ ನಗರ ದಟ್ಟಣೆ ಕಡಿಮೆ ಮಾಡುವ ಭವಿಷ್ಯಮುಖಿ ಪರಿಕಲ್ಪನೆ ವಿಫಲವಾಗಿದೆ. ಒಪ್ಪಂದವೂ ಯಶಸ್ವಿಯಾಗಿಲ್ಲ. ಇಂತಹ ಸ್ಥಿತಿಯಲ್ಲಿ ಯೋಜನೆಯನ್ನು ಜೀವಂತವಾಗಿಡುವ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ಹೇಳಿದ ಪೀಠ, ನಗರ, ನಾಗರಿಕರು, ಪರಿಸರ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಹಳೆಯ ಯೋಜನೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಅಗತ್ಯವಿದ್ದರೆ ಹಳೆಯ ಯೋಜನೆಯನ್ನು ಕೈಬಿಟ್ಟು ಹೊಸ ಯೋಜನೆ ರೂಪಿಸುವುದೇ ಉತ್ತಮ ಎಂದು ಸರ್ಕಾರಕ್ಕೆ ಸಲಹೆ ನೀಡಿದೆ.

ಇಂದಿನ ಬೆಂಗಳೂರು ನಗರದ ಜನಸಂಖ್ಯೆ 1.40 ಕೋಟಿಗೂ ಅಧಿಕವಾಗಿದೆ. ದಿನನಿತ್ಯದ ಸಂಚಾರ ದಟ್ಟಣೆ, ಮೂಲಸೌಕರ್ಯಗಳ ಕುಸಿತ ಹಾಗೂ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಗಮನಿಸಿದರೆ, ರಾಜ್ಯ ಸರ್ಕಾರವು ನಗರದ ಜೀವನ ಪರಿಸ್ಥಿತಿಗಳನ್ನು ಸುಧಾರಿಸಲು ಹೊಸ ಮತ್ತು ಪರಿಣಾಮಕಾರಿ ಯೋಜನೆಗಳ ಬಗ್ಗೆ ತಕ್ಷಣ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

Lakkundi: ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಮುತ್ತು, ಹವಳ ಸೇರಿ ಪುರಾತನ ವಸ್ತುಗಳು ಪತ್ತೆ!

0

ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ಕಾಲಕ್ಕೆ ಸೇರಿದ ವಸ್ತುಗಳು ಪತ್ತೆಯಾಗಿವೆ. ಈ ಪತ್ತೆಯಿಂದ ಗ್ರಾಮದಲ್ಲಿ ಹಾಗೂ ಇತಿಹಾಸಾಸಕ್ತರಲ್ಲಿ ಭಾರೀ ಕುತೂಹಲ ಮೂಡಿದೆ. ಲಕ್ಕುಂಡಿ ಗ್ರಾಮದ ಬಸಪ್ಪ ಬಡಿಗೇರ ಅವರಿಗೆ ಶೋಧ ಕಾರ್ಯದ ವೇಳೆ ಹಲವು ಪುರಾತನ ವಸ್ತುಗಳು ಸಿಕ್ಕಿವೆ. ನಿಧಿ ಸಿಕ್ಕ ಬೆನ್ನಲ್ಲೇ ಈ ಪುರಾತನ ವಸ್ತುಗಳು ಪತ್ತೆಯಾಗಿದ್ದು, ಇವುಗಳು ಐತಿಹಾಸಿಕ ಮಹತ್ವ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

ಪತ್ತೆಯಾದ ವಸ್ತುಗಳಲ್ಲಿ ಮುತ್ತು, ಹವಳ, ಬಿಳಿ ಹವಳ, ನೀಲಮಣಿ, ಸ್ಪಟಿಕ, ಕರಿಪುಕ್ಕಾ ಸೇರಿದಂತೆ ಹಲವು ಪುರಾತನ ಕಾಲದ ವಸ್ತುಗಳು ಸೇರಿವೆ. ಇವುಗಳು ಪ್ರಾಚೀನ ಕಾಲದ ಆಭರಣಗಳು ಅಥವಾ ವಾಣಿಜ್ಯ ವಸ್ತುಗಳಾಗಿರಬಹುದೆಂದು ಊಹಿಸಲಾಗಿದೆ. ಬಸಪ್ಪ ಬಡಿಗೇರ ಅವರು ಹಲವು ವರ್ಷಗಳಿಂದ ಲಕ್ಕುಂಡಿ ಗ್ರಾಮದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮಳೆ ಬಂದ ನಂತರ ಗ್ರಾಮದಲ್ಲಿ ಶೋಧ ಕಾರ್ಯ ನಡೆಸುವುದು ಅವರ ರೂಢಿ. ಈ ಹಿಂದೆ ಕೂಡ ಅವರಿಗೆ ಸಾಕಷ್ಟು ಪುರಾತನ ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದರು. ಲಕ್ಕುಂಡಿ ಗ್ರಾಮದಲ್ಲಿ ಅಪಾರ ಪ್ರಮಾಣದ ಚಿನ್ನ ಮತ್ತು ಪುರಾತನ ನಿಧಿ ಅಡಗಿದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ಪತ್ತೆಗಳು ಲಕ್ಕುಂಡಿಯ ಪುರಾತನ ವೈಭವದ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿವೆ.

ಭೀಮಣ್ಣ ಖಂಡ್ರೆ ಆರೋಗ್ಯ ಸ್ಥಿರ – ಸೋಶಿಯಲ್ ಮೀಡಿಯಾದ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ ಈಶ್ವರ್ ಖಂಡ್ರೆ

0

ಬೀದರ್: ಲಿಂಗೈಕ್ಯ ಚನ್ನಬಸವಪಟ್ಟದ್ದೇವರಿಂದ ‘ಲೋಕನಾಯಕ’ ಎಂಬ ಬಿರುದು ಪಡೆದಿದ್ದ ಶತಾಯುಷಿ ಭೀಮಣ್ಣ ಖಂಡ್ರೆ ಅವರ ಆರೋಗ್ಯ ಸ್ಥಿರವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸಚಿವ ಈಶ್ವರ್ ಬಿ. ಖಂಡ್ರೆ ಸ್ಪಷ್ಟವಾಗಿ ಹೇಳಿದ್ದಾರೆ.

ಕಳೆದ ಒಂದು ವಾರದಿಂದ ವಯೋಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಭೀಮಣ್ಣ ಖಂಡ್ರೆ ಅವರನ್ನು ಬೀದರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರನ್ನು ಮನೆಗೆ ಕಳುಹಿಸಲಾಗಿದ್ದು, ಮನೆಯಲ್ಲಿಯೇ ಚಿಕಿತ್ಸೆ ಮುಂದುವರಿಯುತ್ತಿದೆ. ವೈದ್ಯರ ಪ್ರಕಾರ ಅವರ ಆರೋಗ್ಯ ಸ್ಥಿರವಾಗಿದೆ.

ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ನೋವು ತಂದಿದೆ ಎಂದು ಈಶ್ವರ್ ಖಂಡ್ರೆ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ವದಂತಿಗಳಿಗೆ ಯಾರು ಕಿವಿಗೊಡಬಾರದು, ಬದಲಾಗಿ ತಮ್ಮ ತಂದೆಯವರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ರಾಹುಲ್‌ಗಾಂಧಿ ಕೇವಲ 15 ನಿಮಿಷ: ಸಿಎಂ–ಡಿಸಿಎಂ ಭೇಟಿಗೆ ಸಮಯವೇ ಇಲ್ಲ

0

ಮೈಸೂರು: ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಮೈಸೂರಿಗೆ ಬರುತ್ತಿದ್ದರೂ, ಈ ಭೇಟಿ ಸಂಪೂರ್ಣವಾಗಿ ‘ಟಚ್ ಅಂಡ್ ಗೋ’ ಆಗಿದೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಕೇವಲ 15 ನಿಮಿಷ ಮಾತ್ರ ಉಳಿಯಲಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಗಂಭೀರ ಚರ್ಚೆಗೆ ಅವಕಾಶವೇ ಇಲ್ಲದಂತಾಗಿದೆ.

ಮಧ್ಯಾಹ್ನ 2:20ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಲ್ಯಾಂಡ್ ಆಗಲಿರುವ ರಾಹುಲ್, ತಕ್ಷಣವೇ ಹೆಲಿಕಾಪ್ಟರ್ ಮೂಲಕ ತಮಿಳುನಾಡಿನ ಗುಡ್ಲುರಿಗೆ ತೆರಳಲಿದ್ದಾರೆ. ಅಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಸಂಜೆ 5:45ಕ್ಕೆ ಮತ್ತೆ ಮೈಸೂರಿಗೆ ಮರಳಿ, ಸಂಜೆ 6 ಗಂಟೆಗೆ ದೆಹಲಿಗೆ ಹಾರಾಟ ನಡೆಸಲಿದ್ದಾರೆ.

ಇಡೀ ವೇಳಾಪಟ್ಟಿ ನೋಡಿದರೆ, ಮೈಸೂರು ಭೇಟಿ ಸಂಪೂರ್ಣವಾಗಿ ತಾಂತ್ರಿಕ ನಿಲ್ದಾಣದಂತೆ ಮಾತ್ರ ಸೀಮಿತವಾಗಿದ್ದು, ಕಾಂಗ್ರೆಸ್ ಒಳಾಂಗಣ ರಾಜಕೀಯ, ರಾಜ್ಯದ ಮಹತ್ವದ ವಿಚಾರಗಳ ಬಗ್ಗೆ ಯಾವುದೇ ಚರ್ಚೆ ನಡೆಯುವ ಸಾಧ್ಯತೆ ಇಲ್ಲ ಎನ್ನುವುದು ಸ್ಪಷ್ಟವಾಗಿದೆ.

ನಟೋರಿಯಸ್ ರಾಬರಿ ಗ್ಯಾಂಗ್ ಬಂಧನ: 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪಡ್ಡೆ ಹುಡುಗರು

0

ಬೆಂಗಳೂರು: ಅಪ್ರಾಪ್ತ ವಯಸ್ಸಿನಲ್ಲೇ 30ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪಡ್ಡೆ ಹುಡುಗರ ನಟೋರಿಯಸ್ ರಾಬರಿ ಗ್ಯಾಂಗ್‌ನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಜುವೆನಿಲ್ ಹೌಸ್‌ನಿಂದ ಹೊರಬಂದ ಬಳಿಕ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಈ ಗ್ಯಾಂಗ್‌ನಿಂದ ಜನರಲ್ಲಿ ಭೀತಿ ಮೂಡಿತ್ತು.

ಬಂಧಿತ ಆರೋಪಿಗಳನ್ನು ಸುರೇಶ್ @ ಸೂರಿ, ಶಶಿಕುಮಾರ್ ಮತ್ತು ಅಕಿಲ್ @ ಕೋಜ ಎಂದು ಗುರುತಿಸಲಾಗಿದೆ. ಅಪ್ರಾಪ್ತ ವಯಸ್ಸಿನಲ್ಲಿದ್ದಾಗಲೇ ಹಲವಾರು ರಾಬರಿ ಪ್ರಕರಣಗಳಲ್ಲಿ ಬಂಧಿತರಾಗಿ ಜುವೆನಿಲ್ ಹೌಸ್‌ಗೆ ಕಳುಹಿಸಲ್ಪಟ್ಟಿದ್ದ ಆರೋಪಿಗಳು, ಮೇಜರ್ ಆದ ಬಳಿಕ ಮತ್ತೆ ಗ್ಯಾಂಗ್ ಕಟ್ಟಿಕೊಂಡು ಅಪರಾಧಗಳಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಹೊಸ ವರ್ಷದ ಹಿಂದಿನ ದಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಚಾಕು ಚೂರಿ ತೋರಿಸಿ ಸುಮಾರು ಒಂದು ಲಕ್ಷ ರೂಪಾಯಿ ದರೋಡೆ ಮಾಡಲಾಗಿದೆ. ಹಣ ನೀಡದಿದ್ದರೆ ಚಾಕುವಿನಿಂದ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಈ ಹಿಂದೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿ ಚಾಲಕನನ್ನು ಅಡ್ಡಗಟ್ಟಿ ಹಣ ಕೇಳಿ, ಹಣ ನೀಡದ ಹಿನ್ನೆಲೆಯಲ್ಲಿ ಕಾರಿನ ಗ್ಲಾಸ್ ಒಡೆದು ಚಾಕುವಿನಿಂದ ಇರಿತ ನಡೆಸಿದ್ದ ಆರೋಪವೂ ಈ ಗ್ಯಾಂಗ್ ಮೇಲೆ ಇದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಜುವೆನಿಲ್ ಹೌಸ್‌ಗೆ ಕಳುಹಿಸಲಾಗಿತ್ತು.

ಆರೋಪಿಗಳು ಸೂರ್ಯ ಸಿಟಿ, ಮಾದನಾಯಕನಹಳ್ಳಿ, ಹೆಬ್ಬಗೋಡಿ, ಬ್ಯಾಡರಹಳ್ಳಿ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಕನಿಷ್ಠ ಏಳು ಕಡೆಗಳಲ್ಲಿ ರಾತ್ರಿ ವೇಳೆ ರಾಬರಿ ನಡೆಸಿದ್ದಾರೆ. ಮಾದನಾಯಕನಹಳ್ಳಿಯಲ್ಲಿ ವಕೀಲನೊಬ್ಬರನ್ನು ಹಾಗೂ ಬ್ಯಾಡರಹಳ್ಳಿಯಲ್ಲಿ ಲಾರಿ ಚಾಲಕನನ್ನು ರಾಬರಿ ಮಾಡಿರುವ ಆರೋಪವಿದೆ.

ಇದರ ಜೊತೆಗೆ ಮಹದೇಶ್ವರ ಬೆಟ್ಟಕ್ಕೆ ಪ್ರವಾಸಕ್ಕೆ ತೆರಳಿದ್ದ ಪ್ರೇಮಿಗಳನ್ನೂ ರಾಬರಿ ಮಾಡಿದ್ದ ಆರೋಪ ಎದುರಿಸುತ್ತಿದ್ದಾರೆ.ಹೊಸ ವರ್ಷದ ರಾಬರಿ ಪ್ರಕರಣದ ತನಿಖೆ ನಡೆಸಿದ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ನಟೋರಿಯಸ್ ರಾಬರಿಕೋರರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!