Home Blog Page 19

ಜಿಬಿಎ ಚುನಾವಣೆ ಟಿಕೆಟ್ ಆಕಾಂಕ್ಷಿ ಸೋಮಶೇಖರ್ ರೆಡ್ಡಿಗೆ ಚಾಕು ಇರಿತ!

ಬೆಂಗಳೂರು: ಜಿಬಿಎ ಚುನಾವಣೆ ಘೋಷಣೆಯಾಗಿರುವ ಸಂದರ್ಭದಲ್ಲೇ ಜಯನಗರದಲ್ಲಿ ಬಿಜೆಪಿ ಮುಖಂಡ ಸೋಮಶೇಖರ್ ರೆಡ್ಡಿ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಜೂನ್ 24ರ ಸಂಜೆ ಜಯನಗರ 9ನೇ ಬ್ಲಾಕ್‌ನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಬಳಿ ಈ ಘಟನೆ ನಡೆದಿದ್ದು, ಸೋಮಶೇಖರ್ ರೆಡ್ಡಿ ಕೆಲಸ ಸಂಬಂಧ ಸ್ಥಳಕ್ಕೆ ಬಂದಿದ್ದ ವೇಳೆ ಆಟೋದಲ್ಲಿ ಆಗಮಿಸಿದ ಐವರ ಗುಂಪು ಅವರೊಂದಿಗೆ ಗಲಾಟೆ ನಡೆಸಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಆರೋಪಿಗಳು ಚಾಕುವಿನಿಂದ ಹೊಟ್ಟೆ, ಎದೆ ಹಾಗೂ ಬೆನ್ನಿಗೆ ಇರಿದಿದ್ದಾರೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡ ಅವರನ್ನು ಸ್ಥಳೀಯರು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರವಿ, ಬಾಲು, ಪುಲಿ, ವಿಷ್ಣು ಹಾಗೂ ಶಂಕರ್ ಎಂಬ ಐವರನ್ನು ಬಂಧಿಸಿದ್ದಾರೆ.

ಸೋಮಶೇಖರ್ ರೆಡ್ಡಿ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದು, ಮುಂಬರುವ ಜಿಬಿಎ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಹಲ್ಲೆಯ ಹಿಂದೆ ರಾಜಕೀಯ ಕಾರಣಗಳ ಶಂಕೆಯೂ ವ್ಯಕ್ತವಾಗಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಎಚ್‌.ಕೆ.ಪಿಗೆ ಸಚಿವ ಸ್ಥಾನ: ಹೊಳಲಮ್ಮದೇವಿಗೆ 125 ಇಡುಗಾಯಿಗಳ ಹರಕೆ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಎಚ್‌.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ಶಿರಹಟ್ಟಿ ತಾಲೂಕಿನ ಶ್ರೀಮಂತಗಡದ ಶ್ರೀ ಹೊಳಲಮ್ಮದೇವಿ ದೇವಸ್ಥಾನದಲ್ಲಿ 125 ಇಡುಗಾಯಿಗಳನ್ನು ಒಡೆದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ವಿಶೇಷ ಪೂಜೆಯ ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಗುರುನಾಥ ದಾನಪ್ಪನವರ, ಎಚ್‌.ಕೆ. ಪಾಟೀಲ ಅವರು ಹಲವು ದಶಕಗಳಿಂದ ಪ್ರಾಮಾಣಿಕ ರಾಜಕಾರಣ ಹಾಗೂ ಜನಸೇವೆಯ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಿದ್ದಾರೆ. ಶಿರಹಟ್ಟಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ರಸ್ತೆ, ಸೇತುವೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಜನರ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದಿದ್ದಾರೆ ಎಂದು ಹೇಳಿದರು.

ಶ್ರೀ ಹೊಳಲಮ್ಮದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೂ ಸುಮಾರು ₹2 ಕೋಟಿ ಅನುದಾನ ನೀಡುವ ಮೂಲಕ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಅನುಭವ ಮತ್ತು ಅಭಿವೃದ್ಧಿ ದೃಷ್ಟಿಕೋನವನ್ನು ಪರಿಗಣಿಸಿ ಪಕ್ಷದ ಹೈಕಮಾಂಡ್ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಯುವ ಮುಖಂಡ ಪಕ್ಕೀರೇಶ ಮ್ಯಾಟಣ್ಣವರ ಮಾತನಾಡಿ, ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಯಲ್ಲಿ ಎಚ್‌.ಕೆ. ಪಾಟೀಲ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಯೂ ಇದೇ ಆಗಿದ್ದು, ಅವರಿಗೆ ಸಚಿವ ಸ್ಥಾನ ನೀಡಿದರೆ ಈ ಭಾಗದ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಚನ್ನಪ್ಪ ಜಗಲಿ, ಧ್ರುವರಾಜ ಹೊನ್ನಪ್ಪನವರ, ತಿಪ್ಪಣ್ಣ ಸಂಶಿ, ಫಕೀರೇಶ ನಡುವಿನಕೇರಿ, ಹಮೀದ ಸನದಿ, ರಘು ಶೆಟ್ರಡ್ಡಿ, ನಾಗರಾಜ ಪೋತರಾಜ, ಪ್ರಕಾಶ ಹೋರಿ, ಚಂದ್ರು ಪೋತರಾಜ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರು ಹುಣ್ಣಿಮೆಯಲ್ಲಿ ರಂಗೇರಿದ ಹೋರಿಕರ ಓಟ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣದಲ್ಲಿ ಕಾರು ಹುಣ್ಣಿಮೆ ಅಂಗವಾಗಿ ಗ್ರಾಮೀಣ ಸಂಸ್ಕೃತಿ ಹಾಗೂ ಕೃಷಿ ಪರಂಪರೆಯ ಪ್ರತೀಕವಾಗಿರುವ ಸಾಂಪ್ರದಾಯಿಕ ಹೋರಿಕರ ಎತ್ತುಗಳ ಓಟದ ಸ್ಪರ್ಧೆ ಅದ್ಧೂರಿಯಾಗಿ ನಡೆಯಿತು.

ಸ್ಪರ್ಧೆಯಲ್ಲಿ 100ಕ್ಕೂ ಹೆಚ್ಚು ರೈತರು ತಮ್ಮ ಹೋರಿಕರೊಂದಿಗೆ ಭಾಗವಹಿಸಿದ್ದರು. ಸುಮಾರು 500 ಮೀಟರ್ ದೂರದ ಓಟದಲ್ಲಿ ಹೋರಿಕರು ತಮ್ಮ ವೇಗ, ಸಾಮರ್ಥ್ಯ ಹಾಗೂ ತರಬೇತಿಯನ್ನು ಪ್ರದರ್ಶಿಸಿ ನೆರೆದಿದ್ದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಸ್ಪರ್ಧೆಯಲ್ಲಿ ಚಿಂತಪಳ್ಳಿ ಪಾಂಡು ಅವರ ಹೋರಿಕರ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಂಡಿತು.

ಈ ಸಂದರ್ಭದಲ್ಲಿ ಕಾಳೇ ವಾದನ ಹೇಮಣ್ಣ, ಬಾರಿಕರ್ ಗಂಗಪ್ಪ, ತಳವಾರ್ ಹುಲುಗಪ್ಪ, ಚಿಂತಪಳ್ಳಿ ಬಸಪ್ಪ, ಎನ್. ನಾಗರಾಜ್, ಬಿ. ನಾಗರಾಜ್, ವಿಎಸ್‌ಎಸ್‌ಎನ್ ಅಧ್ಯಕ್ಷ ಹುಲುಗಪ್ಪ ಹಾಗೂ ಎಚ್. ಭೀಮಪ್ಪ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಸ್ಪರ್ಧೆಯನ್ನು ವೀಕ್ಷಿಸಲು ಹಂಪಾಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು, ಯುವಕರು ಹಾಗೂ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ದೇಶೀ ಹೋರಿಕರ ಸಂರಕ್ಷಣೆ, ರೈತರಲ್ಲಿ ಬಾಂಧವ್ಯ ವೃದ್ಧಿ ಹಾಗೂ ಗ್ರಾಮೀಣ ಕ್ರೀಡೆ ಮತ್ತು ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಾರು ಹುಣ್ಣಿಮೆ ಅಂಗವಾಗಿ ಈ ಸ್ಪರ್ಧೆಯನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಕಾರಹುಣ್ಣಿಮೆ ಸಂಭ್ರಮದಲ್ಲಿ ಕರಿ ಹರಿದ ಬಿಳಿ ಎತ್ತು

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕಾರಹುಣ್ಣಿಮೆ ಅಂಗವಾಗಿ ಮುಳಗುಂದ ಪಟ್ಟಣದಲ್ಲಿ ರೈತರು ಸಂಪ್ರದಾಯಬದ್ಧವಾಗಿ ಎತ್ತುಗಳನ್ನು ಅಲಂಕರಿಸಿ ಪೂಜಿಸಿ, ವಿಶೇಷ ಆಚರಣೆಗಳ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಮುಂಗಾರು ಬಿತ್ತನೆ ಮುಗಿದ ಬಳಿಕ ರೈತರ ಮೊದಲ ಹಬ್ಬವೆಂದೇ ಕರೆಯಲಾಗುವ ಕಾರಹುಣ್ಣಿಮೆ ಹಿನ್ನೆಲೆಯಲ್ಲಿ ಎತ್ತುಗಳ ನಾಲಿಗೆಗೆ ಅರಿಶಿಣ ಹಾಗೂ ಉಪ್ಪಿನ ಮಿಶ್ರಣ ಹಚ್ಚಿ ಸ್ವಚ್ಛಗೊಳಿಸಲಾಯಿತು. ಜವಾರಿ ತತ್ತಿಗಳ ಗೊಟ್ಟ, ಬಣ್ಣಬಣ್ಣದ ಅಲಂಕಾರಗಳಿಂದ ಎತ್ತುಗಳನ್ನು ಶೃಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಂಜೆ ಪಟ್ಟಣದ ಐದು ಮನೆತನಗಳ ಎತ್ತುಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಐದು ಎತ್ತುಗಳನ್ನು ಸಾಲಾಗಿ ನಿಲ್ಲಿಸಿ ಸಂಪ್ರದಾಯದಂತೆ ‘ಕರಿ ಹರಿಯುವ’ ಆಚರಣೆ ನೆರವೇರಿಸಲಾಯಿತು. ಈ ವೇಳೆ ಹಕಾರಿಯವರ ಮನೆತನದ ಬಿಳಿ ಎತ್ತು ಕರಿ ಹರಿಯುವ ಮೂಲಕ ಎಲ್ಲರ ಗಮನ ಸೆಳೆಯಿತು.

ವಾದ್ಯಮೇಳಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ರೈತರು, ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರಹುಣ್ಣಿಮೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.

ಸ್ಕೂಲ್ ಚಂದನದಲ್ಲಿ ನಾರ್ತ್‌ಸೌತ್ ಫೌಂಡೇಶನ್ ಸಂವಾದ: ಕೌಶಲ್ಯ ವೃದ್ಧಿಗೆ ಒತ್ತು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಿದ್ಯಾರ್ಥಿಗಳ ಜ್ಞಾನಮಟ್ಟವನ್ನು ವಿಶ್ವದರ್ಜೆಗೆ ಹೆಚ್ಚಿಸುವ ಉದ್ದೇಶದಿಂದ ನಾರ್ತ್‌ಸೌತ್ ಫೌಂಡೇಶನ್‌ನ ಸ್ಕೂಲ್ ರಿಲೇಶನ್ಸ್ ಹಾಗೂ ಡೇಟಾ ಅನಾಲಿಟಿಕ್ಸ್ ಮ್ಯಾನೇಜರ್ ಕೃಪಕರ್ ಪೂಟ್ಲಪಲ್ಲಿ ಅವರು ಸೋಮವಾರ ಲಕ್ಷ್ಮೇಶ್ವರದ ಪ್ರತಿಷ್ಠಿತ ಸ್ಕೂಲ್ ಚಂದನಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಶಾಲೆಯ ಸಿ.ಎನ್.ಆರ್. ರಾವ್ ಹಾಲ್ ಆಫ್ ಸೈನ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ, ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿ ಹಾಗೂ ಜ್ಞಾನಮಟ್ಟವನ್ನು ಹೆಚ್ಚಿಸಿಕೊಳ್ಳುವ ಕುರಿತು ಮಾಹಿತಿ ನೀಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ತಂತ್ರಜ್ಞಾನ ಕೌಶಲ್ಯ, ಮೂಲಭೂತ ಇಂಗ್ಲಿಷ್ ಮತ್ತು ಗಣಿತ ಜ್ಞಾನ ಅತ್ಯಗತ್ಯವಾಗಿದೆ. ಬಾಯಿಪಾಠಕ್ಕೆ ಸೀಮಿತವಾಗದೆ ವಿಷಯವನ್ನು ಅರ್ಥೈಸಿಕೊಂಡು ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ವಿದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆ, ಉನ್ನತ ಶಿಕ್ಷಣದ ಅವಕಾಶಗಳು ಹಾಗೂ ಭವಿಷ್ಯದ ಕೌಶಲ್ಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಆತ್ಮವಿಶ್ವಾಸದಿಂದ ಗುರಿ ಸಾಧಿಸುವಂತೆ ಪ್ರೇರೇಪಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕರು, ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

108 ಕುಂಭಗಳಿಂದ ಜಲಾಭಿಷೇಕ; ಮಳೆ-ಬೆಳೆ ಸಮೃದ್ಧಿಗಾಗಿ ವಿಶೇಷ ಪೂಜೆ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಳೆದ 20-25 ದಿನಗಳಿಂದ ಸಮರ್ಪಕ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಗ್ರಾಮದೇವತೆಗೆ 108 ಕುಂಭಗಳಿಂದ ಜಲಾಭಿಷೇಕ ನೆರವೇರಿಸಿ ಉತ್ತಮ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕಾರ ಹುಣ್ಣಿಮೆ ಅಂಗವಾಗಿ ಮುಂಜಾನೆಯಿಂದಲೇ ಶ್ರೀ ರೇಣುಕಾ ಮಂದಿರದಿಂದ ನೂರಾರು ಮಹಿಳೆಯರು ಪೂರ್ಣಕುಂಭಗಳನ್ನು ಹೊತ್ತು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಗ್ರಾಮದೇವಿ ದೇವಸ್ಥಾನಕ್ಕೆ ಆಗಮಿಸಿದರು. ಬಳಿಕ ದೇವಿಯ ಉತ್ಸವ ಮೂರ್ತಿಗೆ 108 ಕುಂಭಗಳ ಜಲಾಭಿಷೇಕ ನೆರವೇರಿಸಿ, ವಿಶೇಷ ಪೂಜೆ ಮತ್ತು ಅಲಂಕಾರ ಮಾಡಲಾಯಿತು. ನಂತರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವೂ ನಡೆಯಿತು.

ಜಾಗೃತ ದೇವತೆಯಾದ ಗ್ರಾಮದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ನೂರಾರು ಮಹಿಳೆಯರು, ಪುರುಷರು, ಯುವಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವರುಣ ದೇವನ ಕೃಪೆಗೆ ಪ್ರಾರ್ಥಿಸಿದರು.

ಬಳಿಕ ಗ್ರಾಮದ ಭಜನಾ ತಂಡಗಳು ದೇವಸ್ಥಾನದ ಆವರಣದಲ್ಲಿ ಸಂಜೆಯವರೆಗೂ ದೇವಿಯ ಸ್ತುತಿಗೀತೆಗಳನ್ನು ಹಾಡಿ ಭಜನೆ ಸಲ್ಲಿಸಿದವು. ಮಧ್ಯೆ ತುಂತುರು ಮಳೆ ಸುರಿದರೂ ಭಜನೆ ನಿರಂತರವಾಗಿ ಮುಂದುವರಿಯಿತು.

ಗ್ರಾಮದ ಮುಖಂಡರು ಹಾಗೂ ಹಿರಿಯರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು. ಉತ್ತಮ ಮಳೆಯಾಗಿ ನಾಡು ಹಸನಾಗಲಿ, ರೈತರ ಬದುಕು ಸಮೃದ್ಧಿಯಾಗಲಿ ಎಂದು ಗ್ರಾಮಸ್ಥರು ಪ್ರಾರ್ಥಿಸಿದರು.

ರಾಮನಗರ–ನಾಣಿಕೇರಿಯಲ್ಲಿ ದೇವಾಲಯಗಳಿಗೆ ಜಲಾಭಿಷೇಕ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರ ಹಾಗೂ ನಾಣಿಕೇರಿ ಗ್ರಾಮದ ರೈತರು ಉತ್ತಮ ಮಳೆಗಾಗಿ ದೇವರಿಗೆ ವಿಶೇಷ ಜಲಾಭಿಷೇಕ ನೆರವೇರಿಸಿ ಹರಕೆ ತೀರಿಸಿದರು.

ರಾಜ್ಯದಾದ್ಯಂತ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ ಕಾರಣ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ರೈತರು ಬಿತ್ತನೆ ಮಾಡಿದ ಹೊಲಗಳು ಒಣಗುತ್ತಿವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರೈತರು ವರುಣ ದೇವನ ಮೊರೆ ಹೋಗಿದ್ದಾರೆ.

ಮಂಗಳವಾರ ರಾಮನಗರ ಹಾಗೂ ನಾಣಿಕೇರಿ ರೈತಾಪಿ ವರ್ಗದವರು ಗ್ರಾಮದ ನರೇಗಾಲ್ ದುರ್ಗಮ್ಮ, ಗಾಳಿ ದುರ್ಗಮ್ಮ, ಗುರುಭವನದ ಆಂಜನೇಯ, ಹಗರಿ ಆಂಜನೇಯ, ಈಶ್ವರ ದೇವಸ್ಥಾನ ಹಾಗೂ ಶ್ರೀ ಪತ್ರಿ ಬಸವೇಶ್ವರ ದೇವಸ್ಥಾನಗಳಿಗೆ ಜಲಾಭಿಷೇಕ ನೆರವೇರಿಸಿ, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಳೆಗಾಗಿ ಕಪ್ಪೆಗಳಿಗೆ ಮದುವೆ, ಕತ್ತೆಗಳಿಗೆ ಮದುವೆ, ಗುರ್ಜಿ ಹೊರಿಸುವುದು, ಜಲಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸುವುದು ಗ್ರಾಮೀಣ ಭಾಗದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಈ ಬಾರಿ ಸಹ ಮಳೆಗಾಗಿ ದೇವರಲ್ಲಿ ವಿಶೇಷ ಹರಕೆ ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ಕುರುಬರ ಬಸವರಾಜ್, ಚಿಗರಿ ಅಜ್ಜಯ್ಯ, ಕುರುಬರ ರಾಘವೇಂದ್ರ, ಜೋಗಪ್ಪನವರ ಯಮನೂರಿ, ಕುರುಬರ ಕಾರ್ತೀಕ್, ಜೋಗಿ ಅಕ್ಷಯ್, ಕಾಗಿ ಉಮೇಶ, ಸರ್ದಾರ್ ಮನು, ರಾಜು, ಬಂಟರ್ ಪ್ರಕಾಶ್, ಗಂಗಾಮತ ಸಮಾಜದ ಮುಖಂಡ ಸೆರಗಾರ್ ಹುಚ್ಚಪ್ಪ, ಪತ್ರಕರ್ತ ಸರ್ದಾರ್ ಯಮನೂರಪ್ಪ, ಕಾಟರ್ ಗಾಳಪ್ಪ, ಮಡಿವಾಳರ ಅಶೋಕ್, ಮಡಿವಾಳರ ಹನುಮೇಶ್, ಉಪ್ಪಾರ್ ಪ್ರಕಾಶ್ ಹಾಗೂ ಹುಗ್ಗಿ ಹುಲುಗಪ್ಪ ಸೇರಿದಂತೆ ರೈತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪರಿಶಿಷ್ಟ ಸಮುದಾಯಗಳಿಗೆ ಸೌಲಭ್ಯ ತಲುಪಿಸುವಲ್ಲಿ ನಿರ್ಲಕ್ಷ್ಯ ಬೇಡ: ಅಧಿಕಾರಿಗಳಿಗೆ ಡಿಸಿ ಶ್ರೀಧರ್ ಖಡಕ್ ಸೂಚನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ನಿಯಂತ್ರಣವು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಸಮಾಜದ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜಾಗೃತ ಮತ್ತು ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಪಡೆದಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶೇಷ ಗಮನಹರಿಸಬೇಕು ಎಂದು ಸೂಚಿಸಿದರು.

ಪರಿಶಿಷ್ಟ ಸಮುದಾಯಗಳ ಕಾಲೋನಿಗಳಲ್ಲಿ ರಸ್ತೆ, ವಿದ್ಯುತ್, ಸಮರ್ಪಕ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಕಲ್ಪಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಅರ್ಹ ಸಂತ್ರಸ್ತರಿಗೆ ಪರಿಹಾರಧನ ವಿತರಣೆಯಲ್ಲಿ ಯಾವುದೇ ವಿಳಂಬವಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಸತಿ, ವೈದ್ಯಕೀಯ, ಶಿಕ್ಷಣ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳು ಸಕಾಲದಲ್ಲಿ ತಲುಪುವಂತೆ ನೋಡಿಕೊಳ್ಳಬೇಕು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಬೇಕು. ಯಾವುದೇ ಕಾರಣಕ್ಕೂ ಸೌಲಭ್ಯಗಳ ವಿತರಣೆಯಲ್ಲಿ ದುರುಪಯೋಗಕ್ಕೆ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಅವರು ಕಟ್ಟುನಿಟ್ಟಾಗಿ ಸೂಚಿಸಿದರು.

ಸಭೆಯ ಆರಂಭದಲ್ಲಿ ಹಿಂದಿನ ಸಭೆಯ ಅನುಪಾಲನಾ ವರದಿಯನ್ನು ಮಂಡಿಸಿ ಚರ್ಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಡಿವೈಎಸ್‌ಪಿ ಮಹಾಂತೇಶ ಸಜ್ಜನ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಡಿಡಿಪಿಐ ಆರ್.ಎಸ್. ಬುರುಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ರಾಧಾ ಮಣ್ಣೂರ, ನಾಮನಿರ್ದೇಶಿತ ಸದಸ್ಯರಾದ ಶರೀಫ್ ಬಿಳೆಯಲಿ, ಸುರೇಶ ನಡುವಿನಮನಿ, ವಿನಾಯಕ ಬಳ್ಳಾರಿ, ತುಕ್ಕಪ್ಪ ಪೂಜಾರ, ಶ್ರೀನಿವಾಸ ದ್ಯಾವನೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ನಂದಾ ಹಣಬರಟ್ಟಿ ಅವರು ಸಭೆಗೆ ಸ್ವಾಗತಿಸಿ ವಂದಿಸಿದರು.

“ಸಾಮಾಜಿಕ ನ್ಯಾಯ ಸಾಕಾರವಾಗಬೇಕಾದರೆ ದೌರ್ಜನ್ಯ ತಡೆ ಜೊತೆಗೆ ಸರ್ಕಾರಿ ಸೌಲಭ್ಯಗಳು ಅರ್ಹರಿಗೆ ಸಕಾಲದಲ್ಲಿ ತಲುಪುವುದು ಅತ್ಯಗತ್ಯ.” –

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

ಎಸ್‌ಐಆರ್–2026 ಜಾಗೃತಿಗೆ ಗದಗ ಜಿಲ್ಲಾಡಳಿತದ ವಿನೂತನ ಹೆಜ್ಜೆ; ಮತದಾನದ ಮಹತ್ವ ಸಾರಿದ ಚಿತ್ರಕಲಾ ಪ್ರದರ್ಶನ

0

ವಿಜಯಸಾಕ್ಷಿ ಸುದ್ದಿ, ಗದಗ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್–2026) ಅಂಗವಾಗಿ ಸಾರ್ವಜನಿಕರಲ್ಲಿ ಮತದಾನದ ಹಕ್ಕು, ಜವಾಬ್ದಾರಿ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ವಿಶೇಷ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ “ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಪ್ರತಿಯೊಬ್ಬ ಮತದಾರನ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ” ಎಂಬ ಸಂದೇಶವನ್ನು ಕಲಾಕೃತಿಗಳ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಹಾಗೂ 65-ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಡಾ. ನಂದಾ ಹಣಬರಟ್ಟಿ ಅವರು ಸ್ವತಃ ರಚಿಸಿದ ಸಾಮಾಜಿಕ ಜಾಗೃತಿ ಮತ್ತು ಮತದಾನದ ಮಹತ್ವ ಸಾರುವ ಚಿತ್ರಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದವು. ಎಸ್‌ಐಆರ್ ಪ್ರಕ್ರಿಯೆ, ಮತದಾರರ ನೋಂದಣಿ, ಮತದಾನದ ಹಕ್ಕಿನ ಮಹತ್ವ ಹಾಗೂ ಜಾಗೃತ ನಾಗರಿಕನ ಕರ್ತವ್ಯವನ್ನು ಪ್ರತಿಬಿಂಬಿಸುವ ಕಲಾಕೃತಿಗಳು ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಾರ್ವಜನಿಕರು ಹಾಗೂ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾದವು.

ಪ್ರದರ್ಶನವನ್ನು ವೀಕ್ಷಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು, ಸಮಾಜಕ್ಕೆ ಜಾಗೃತಿ ಮೂಡಿಸುವಲ್ಲಿ ಚಿತ್ರಕಲೆಯಂತಹ ಸೃಜನಾತ್ಮಕ ಮಾಧ್ಯಮಗಳು ಅತ್ಯಂತ ಪರಿಣಾಮಕಾರಿ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳು ಕೈಗೊಂಡಿರುವ ಈ ವಿನೂತನ ಪ್ರಯತ್ನವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಎಸ್‌ಐಆರ್–2026ರ ಯಶಸ್ವಿ ಅನುಷ್ಠಾನಕ್ಕಾಗಿ ಸಾರ್ವಜನಿಕರು ಜೂನ್ 30ರಿಂದ ಜುಲೈ 29ರವರೆಗೆ ನಡೆಯುವ ಪರಿಷ್ಕರಣೆ ಅವಧಿಯಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಿ, ಅಗತ್ಯ ಮಾಹಿತಿಯನ್ನು ಸಲ್ಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದು ಅಧಿಕಾರಿಗಳು ಕರೆ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ದುರಗೇಶ್ ಕೆ.ಆರ್., ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಜಿಲ್ಲಾ ಪಂಚಾಯತ್ ಪಿಡಿ ಎಂ.ವಿ. ಚಳಗೇರಿ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಒಂದು ರಂಗೋಲಿ… ಪ್ರಜಾಪ್ರಭುತ್ವದ ಸಾವಿರ ಸಂದೇಶಗಳು

ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆದ ರಂಗೋಲಿ, ಎಸ್‌ಐಆರ್–2026 ಅಭಿಯಾನದ ಉದ್ದೇಶವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಿತು.

ರಂಗೋಲಿಯ ಮಧ್ಯಭಾಗದಲ್ಲಿದ್ದ “SIR – Special Intensive Revision” ಎಂಬ ಅಕ್ಷರಗಳು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನದ ಮಹತ್ವವನ್ನು ಸಾರಿದರೆ, ಅದರ ಸುತ್ತಲಿನ ವಿವಿಧ ಬಣ್ಣಗಳ ಮಾನವ ಆಕೃತಿಗಳು ಜಾತಿ, ಧರ್ಮ, ಭಾಷೆ, ಲಿಂಗ ಹಾಗೂ ವರ್ಗಭೇದಗಳನ್ನು ಮೀರಿ ಎಲ್ಲ ಮತದಾರರೂ ಸಮಾನರು ಎಂಬ ಸಂವಿಧಾನದ ಮೌಲ್ಯವನ್ನು ಪ್ರತಿಬಿಂಬಿಸಿದವು.

ಮತದಾರರ ಗುರುತಿನ ಚೀಟಿ, ಮತದಾರರ ಪಟ್ಟಿ, ಮಸಿ ಗುರುತು ಇರುವ ಬೆರಳು ಹಾಗೂ ಮತಪೆಟ್ಟಿಗೆಯ ಚಿತ್ರಣಗಳ ಮೂಲಕ “ಮತದಾನವು ಹಕ್ಕಿನ ಜೊತೆಗೆ ಪವಿತ್ರ ಕರ್ತವ್ಯವೂ ಹೌದು” ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರಲಾಯಿತು.

ಹೂವಿನ ದಳಗಳ ವಿನ್ಯಾಸ ಏಕತೆ, ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದ್ದರೆ, ಹಸಿರು, ನೀಲಿ, ಕಿತ್ತಳೆ ಮತ್ತು ನೇರಳೆ ಬಣ್ಣಗಳ ಸಂಯೋಜನೆ “ವೈವಿಧ್ಯತೆಯಲ್ಲಿ ಏಕತೆ” ಎಂಬ ಭಾರತದ ಪ್ರಜಾಪ್ರಭುತ್ವದ ಶ್ರೇಷ್ಠ ಮೌಲ್ಯವನ್ನು ಅನಾವರಣಗೊಳಿಸಿತು.

“ಜೂನ್ 30 ರಿಂದ ಜುಲೈ 29, 2026” ಎಂಬ ಅಭಿಯಾನದ ಅವಧಿಯನ್ನು ರಂಗೋಲಿಯಲ್ಲಿ ಉಲ್ಲೇಖಿಸುವ ಮೂಲಕ, ಪ್ರತಿಯೊಬ್ಬ ಅರ್ಹ ಮತದಾರರು ಈ ಅವಧಿಯಲ್ಲಿ ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಲಾಯಿತು.

ಗಣ್ಯರಿಗೆ ನಮೂನೆ ವಿತರಿಸಿ ಎಸ್‌ಐಆರ್‌ಗೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್–2026) ಎನ್ಯೂಮರೇಶನ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಮಂಗಳವಾರ ವಿವಿಧ ಕ್ಷೇತ್ರಗಳ ಗಣ್ಯರಿಗೆ ಎಸ್‌ಐಆರ್ ಎನ್ಯೂಮರೇಶನ್ ನಮೂನೆಗಳನ್ನು ವಿತರಿಸುವ ಮೂಲಕ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಿವಾನಂದ ಮಠದ ಪೂಜ್ಯ ಶಿವಾನಂದ ಶ್ರೀಗಳು, ಅಂತಾರಾಷ್ಟ್ರೀಯ ಕುಸ್ತಿಪಟು ಕು. ಪ್ರೇಮಾ ಹುಚ್ಚಣ್ಣನವರ ಹಾಗೂ ಪ್ರಮುಖರಾದ ಅಬೂಬಕರ ಕಟ್ಟಿಮನಿ ಅವರಿಗೆ ಜಿಲ್ಲಾಧಿಕಾರಿಗಳು ಎಸ್‌ಐಆರ್ ಎನ್ಯೂಮರೇಶನ್ ನಮೂನೆಗಳನ್ನು ವಿತರಿಸಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬ ಅರ್ಹ ಮತದಾರರು ಎಸ್‌ಐಆರ್ ಎನ್ಯೂಮರೇಶನ್ ನಮೂನೆಯನ್ನು ಸಮರ್ಪಕವಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಸಲ್ಲಿಸುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಸಮರ್ಪಕವಾಗಿಸಲು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಈ ಅಭಿಯಾನದಲ್ಲಿ ಭಾಗವಹಿಸುವುದರಿಂದ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ.) ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಹಾಗೂ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 2002ರ ಮತದಾರರ ಪಟ್ಟಿಯನ್ನು ಮಾನದಂಡವಾಗಿಟ್ಟುಕೊಂಡು, ಪ್ರಸ್ತುತ ಇರುವ 2025ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಹಾಗೂ ಮ್ಯಾಪಿಂಗ್ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಹಸೀಲ್ದಾರ್ ಶ್ರೀನಿವಾಸ್ ಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

“ಪ್ರತಿಯೊಬ್ಬ ಅರ್ಹ ಮತದಾರರು ಎಸ್‌ಐಆರ್ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದಾಗ ಮಾತ್ರ ಮತದಾರರ ಪಟ್ಟಿ ಮತ್ತಷ್ಟು ನಿಖರ ಹಾಗೂ ವಿಶ್ವಾಸಾರ್ಹವಾಗಲಿದೆ.”

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್