Home Blog Page 20

ವೀರೇಶ್ವರ ಪುಣ್ಯಾಶ್ರಮದಿಂದ ಎಸ್‌ಐಆರ್ ಅಭಿಯಾನಕ್ಕೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್–2026) ಪ್ರಕ್ರಿಯೆಯಲ್ಲಿ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ಸಕ್ರಿಯವಾಗಿ ಭಾಗವಹಿಸಿ, ಮತದಾರರ ಪಟ್ಟಿಯನ್ನು ನಿಖರ ಹಾಗೂ ದೋಷರಹಿತಗೊಳಿಸುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕರೆ ನೀಡಿದರು.

ನಗರದ ತ್ರಿವಿಧ ದಾಸೋಹ ಮಠವಾದ ವೀರೇಶ್ವರ ಪುಣ್ಯಾಶ್ರಮದಲ್ಲಿ ಮಂಗಳವಾರ ಕಲ್ಲಯ್ಯಜ್ಜನವರಿಗೆ ಎಸ್‌ಐಆರ್ ಎನ್ಯೂಮರೇಶನ್ ನಮೂನೆಯನ್ನು ವಿತರಿಸುವ ಮೂಲಕ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮನೆ-ಮನೆ ಭೇಟಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಸ್‌ಐಆರ್ (Special Intensive Revision) ಪ್ರಕ್ರಿಯೆಯ ಉದ್ದೇಶ, ಮಹತ್ವ ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು ವಿವರಿಸಿದ ಜಿಲ್ಲಾಧಿಕಾರಿಗಳು, ಮತದಾರರ ಪಟ್ಟಿಯಲ್ಲಿ ಹೆಸರುಗಳ ನಿಖರತೆ ಕಾಪಾಡುವುದು, ಅರ್ಹ ಮತದಾರರ ಹೆಸರು ಸೇರ್ಪಡೆ ಮಾಡುವುದು, ಅನರ್ಹ ಅಥವಾ ಪುನರಾವರ್ತಿತ ಹೆಸರುಗಳನ್ನು ತೆಗೆದುಹಾಕುವುದು ಹಾಗೂ ಅಗತ್ಯ ದಾಖಲೆಗಳ ಆಧಾರದಲ್ಲಿ ತಿದ್ದುಪಡಿ ಮಾಡುವುದು ಈ ಪ್ರಕ್ರಿಯೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿಯು ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ಪ್ರತಿಯೊಬ್ಬ ನಾಗರಿಕರು ತಮ್ಮ ಮಾಹಿತಿಯನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ಎಸ್‌ಐಆರ್ ನಮೂನೆಗಳನ್ನು ಭರ್ತಿ ಮಾಡಿ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬೇಕು. ಇದರಿಂದ ಪಾರದರ್ಶಕ ಹಾಗೂ ವಿಶ್ವಾಸಾರ್ಹ ಮತದಾರರ ಪಟ್ಟಿ ಸಿದ್ಧವಾಗಲಿದೆ ಎಂದು ಹೇಳಿದರು.

ಧಾರ್ಮಿಕ, ಸಾಮಾಜಿಕ ಹಾಗೂ ಸಾರ್ವಜನಿಕ ಸಂಸ್ಥೆಗಳ ಮುಖಂಡರು ಎಸ್‌ಐಆರ್ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕು. ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಮನವಿ ಮಾಡಿದರು.

ಜೂನ್ 30ರಿಂದ ಜುಲೈ 29ರವರೆಗೆ ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ಹಾಗೂ ಪರಿಶೀಲನೆ ನಡೆಸಲಿದ್ದು, ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಆಯೋಗದ ಮಾರ್ಗಸೂಚಿಯಂತೆ 2002ರ ಮತದಾರರ ಪಟ್ಟಿಯನ್ನು ಮಾನದಂಡವಾಗಿಟ್ಟುಕೊಂಡು, ಪ್ರಸ್ತುತ ಇರುವ 2025ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಹಾಗೂ ಮ್ಯಾಪಿಂಗ್ ಪ್ರಕ್ರಿಯೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ.94ಕ್ಕೂ ಅಧಿಕ ನೈಜ ಮತದಾರರನ್ನು ಗುರುತಿಸಿ, ಕುಟುಂಬಗಳ ಲಿಂಕೇಜ್‌ನೊಂದಿಗೆ ಹೊಂದಾಣಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಅಗತ್ಯ ದಾಖಲೆಗಳೊಂದಿಗೆ ಹೆಸರು ಸೇರ್ಪಡೆ

ಕುಟುಂಬದ ಮುಖ್ಯಸ್ಥರ ಹೆಸರು 2002ರ ಮತದಾರರ ಪಟ್ಟಿಯಲ್ಲಿದ್ದರೆ, ಹೊಸದಾಗಿ ಅರ್ಹತೆ ಪಡೆದ ಕುಟುಂಬ ಸದಸ್ಯರ ಹೆಸರು ಸೇರ್ಪಡೆ ಸುಲಭವಾಗಲಿದೆ. ಮದುವೆಯಾಗಿ ಅಥವಾ ವಲಸೆ ಬಂದು ನೆಲೆಸಿರುವವರ ಹೆಸರು ಹಿಂದಿನ ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ, ಅವರು ಈ ಹಿಂದೆ ವಾಸವಾಗಿದ್ದ ಸ್ಥಳದ ಮತದಾರರ ಪಟ್ಟಿಯ ಮಾಹಿತಿಯ ಆಧಾರದ ಮೇಲೆ ಹೆಸರು ಸೇರಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮ್ಯಾಪಿಂಗ್ ಆಗದಿರುವವರು ಮನೆ ಗಣತಿ ನಮೂನೆಯೊಂದಿಗೆ ಚುನಾವಣಾ ಆಯೋಗ ನಿಗದಿಪಡಿಸಿರುವ ದಾಖಲೆಗಳಾದ ಸರ್ಕಾರಿ ಗುರುತಿನ ಚೀಟಿ, ಪಿಂಚಣಿ ದಾಖಲೆ, ಜನನ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರ, ಶಾಶ್ವತ ನಿವಾಸ ಪ್ರಮಾಣ ಪತ್ರ, ಅರಣ್ಯ ಹಕ್ಕು ಪತ್ರ, ಜಾತಿ ಪ್ರಮಾಣ ಪತ್ರ, ಕುಟುಂಬ ನೋಂದಣಿ, ಭೂಮಿ ಅಥವಾ ಮನೆ ಹಂಚಿಕೆ ದಾಖಲೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು. ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ಮಾತ್ರ ಬಳಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಹಸೀಲ್ದಾರ್ ಶ್ರೀನಿವಾಸ್ ಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

“ಚುನಾವಣಾ ಆಯೋಗದ ಈ ಮಹತ್ವದ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಸಮಾಜದ ಎಲ್ಲ ವರ್ಗದ ಜನರು ತಮ್ಮ ಮತದಾರರ ಮಾಹಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಿ ಕರ್ತವ್ಯ ನಿರ್ವಹಿಸಬೇಕು.”

ಕಲ್ಲಯ್ಯಜ್ಜನವರು, ವೀರೇಶ್ವರ ಪುಣ್ಯಾಶ್ರಮ, ಗದಗ

ಅಕ್ಟೋಬರ್ 7ಕ್ಕೆ ಅಂತಿಮ ಮತದಾರರ ಪಟ್ಟಿ

ಮನೆ ಗಣತಿ ಪೂರ್ಣಗೊಂಡ ಬಳಿಕ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ನಂತರ ಎರಡು ತಿಂಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಅಕ್ಟೋಬರ್ 3ರೊಳಗೆ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಆಕ್ಷೇಪಣೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಆ ಬಳಿಕ ಪರಿಷ್ಕೃತ ಮತದಾರರ ಪಟ್ಟಿಯೇ ಅಧಿಕೃತವಾಗಿ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ತಿಳಿಸಿದರು.

ಮಳೆಗಾಗಿ ದೇವಿಯ ಮೊರೆ ಹೋದ ರೈತರು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆಯ ಕೊರತೆಯಿಂದ ರೈತರು ಆತಂಕದಲ್ಲಿರುವ ಹಿನ್ನೆಲೆಯಲ್ಲಿ, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಜನಜೀವನ ಸುಭಿಕ್ಷವಾಗಲೆಂದು ಲಕ್ಷ್ಮೇಶ್ವರ ಪಟ್ಟಣದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ತಾಲೂಕು ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ವಿಶೇಷ ಪೂಜೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಮುತ್ತೈದೆಯರು ದೇವಿಗೆ ಕುಂಕುಮ, ಹೂವು ಹಾಗೂ ಪೂಜಾ ಸಾಮಗ್ರಿಗಳನ್ನು ಸಮರ್ಪಿಸಿ, ಉತ್ತಮ ಮಳೆ, ಉತ್ತಮ ಬೆಳೆ, ಕುಟುಂಬದ ಸುಖ-ಶಾಂತಿ ಹಾಗೂ ದೇಶದ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಧಾರ್ಮಿಕ ವಾತಾವರಣದಲ್ಲಿ ನಡೆದ ಪೂಜೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ಮಾಗಡಿ, ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಐಕ್ಯತೆ, ವಿಶ್ವಾಸ ಮತ್ತು ರೈತರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತವೆ. ಉತ್ತಮ ಮಳೆಯಾಗಿ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ, ರೈತರ ಬದುಕು ಹಸನಾಗಲಿ ಹಾಗೂ ಲೋಕಕಲ್ಯಾಣವಾಗಲಿ ಎಂಬ ಆಶಯದಿಂದ ರೈತರು ಸಾಮೂಹಿಕವಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಮುಖಂಡರು, ಗುರು-ಹಿರಿಯರು, ತಾಯಂದಿರು, ಯುವಕರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.

ವಚನಗಳ ಆಚರಣೆಯಿಂದ ಸಮಾಜದಲ್ಲಿ ಶಾಂತಿ ಸಾಧ್ಯ: ಶಿಕ್ಷಕ ಬಿ.ಬಿ. ಬಳಿಗಾರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಸವಾದಿ ಶರಣರ ವಚನಗಳಲ್ಲಿ ಅಡಕವಾಗಿರುವ ಮಾನವೀಯ ಮೌಲ್ಯಗಳು, ಕಾಯಕ, ದಾಸೋಹ, ಸಮಾನತೆ ಹಾಗೂ ಸತ್ಯನಿಷ್ಠೆಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶಿಕ್ಷಕ ಬಿ.ಬಿ. ಬಳಿಗಾರ ಹೇಳಿದರು.

ತಾಲೂಕಿನ ಶಿಗ್ಲಿ ಗ್ರಾಮದ ಸೇವಾ ಮಂದಿರದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಸೋಮವಾರ ನಡೆದ 356ನೇ ಶಿವಾನುಭವಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗುರುವಿನ ಮಾರ್ಗದರ್ಶನದಂತೆ ಜೀವನ ನಡೆಸಿದಾಗ ಆತ್ಮೋನ್ನತಿಯ ಜೊತೆಗೆ ಸಮಾಜದ ಒಳಿತಿಗೂ ಕಾರಣವಾಗಬಹುದು. ಶಿವಾನುಭವಗೋಷ್ಠಿಗಳು ಕೇವಲ ಧಾರ್ಮಿಕ ಕಾರ್ಯಕ್ರಮಗಳಲ್ಲ; ಬದುಕಿನ ಮೌಲ್ಯಗಳನ್ನು ಅರಿಯುವ ಜ್ಞಾನ ವೇದಿಕೆಗಳಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಇಷ್ಟಲಿಂಗ ಸ್ವಾಮೀಜಿ ಹಾಗೂ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಬಸವಾದಿ ಶರಣರ ವಚನಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣ ಸಂಸ್ಕೃತಿಯ ಮೌಲ್ಯಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಶಿವಾನುಭವಗೋಷ್ಠಿಯನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜು ರಾಜಪೂತ, ಶಶಿಕಾಂತ ಹುಲಗೂರ, ಮನೋಹರ ಪತ್ತಾರ, ಈರಣ್ಣ ಅಕ್ಕೂರ, ಮಂಜುನಾಥ ಶಂಬೋಜಿ, ಶಶಿಧರ ಲೋಹಾರ, ಕುಂದನ್‌ಬಾಬು ಸುಂಕದ, ವಿ.ಕೆ. ನವಲೆ, ಪ್ರವೀಣ ಹುಲಗೂರ, ಚಂದ್ರು ಕರ್ಜಗಿ, ಮೌನೇಶ ಬಡಿಗೇರ, ಸುರೇಶ ಹತ್ತಿಕಾಳ ಸೇರಿದಂತೆ ಅನೇಕ ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕೋಮು ಪ್ರಚೋದಕರ ವಿರುದ್ಧ ಗಡಿಪಾರಿಗೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಕೋಮು ಸೌಹಾರ್ದಕ್ಕೆ ಹೆಸರಾಗಿರುವ ಗದಗ ಜಿಲ್ಲೆಯಲ್ಲಿ ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅಗತ್ಯವಿದ್ದರೆ ಗಡಿಪಾರು ಮಾಡಬೇಕು. ಕೋಮು ಉದ್ವಿಗ್ನತೆ ಸೃಷ್ಟಿಸುವ ಸಂಘಟನೆಗಳನ್ನು ಜಿಲ್ಲಾಡಳಿತ ನಿಷೇಧಿಸಬೇಕು ಎಂದು ಸಾಹಿತಿ ಬಸವರಾಜ ಸೂಳಿಬಾವಿ ಆಗ್ರಹಿಸಿದರು.

ಕೋಮು ಸೌಹಾರ್ದಕ್ಕೆ ಹೆಸರಾಗಿರುವ ಗದಗ ಜಿಲ್ಲೆಯಲ್ಲಿ ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅಗತ್ಯವಿದ್ದರೆ ಗಡಿಪಾರು ಮಾಡಬೇಕು. ಕೋಮು ಉದ್ವಿಗ್ನತೆ ಸೃಷ್ಟಿಸುವ ಸಂಘಟನೆಗಳನ್ನು ಜಿಲ್ಲಾಡಳಿತ ನಿಷೇಧಿಸಬೇಕು ಎಂದು ಸಾಹಿತಿ ಬಸವರಾಜ ಸೂಳಿಬಾವಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಶಕ್ತಿಗಳು ಲಿಂಗಾಯತ ಮಠಗಳು ಹಾಗೂ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿವೆ. ಇಂತಹವರ ವಿರುದ್ಧ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗದಗ ಜಿಲ್ಲೆ ವಿವಿಧ ಧರ್ಮಗಳ ಜನರು ಸೌಹಾರ್ದದಿಂದ ಬದುಕುತ್ತಿರುವ ಜಿಲ್ಲೆಯಾಗಿದ್ದು, ಎಲ್ಲ ಧರ್ಮಗಳ ಧಾರ್ಮಿಕ ಕ್ಷೇತ್ರಗಳಿಗೆ ಒಂದೇ ಸೌಹಾರ್ದ ಸಮಿತಿ ಕಾರ್ಯನಿರ್ವಹಿಸುತ್ತಿರುವುದು ದೇಶಕ್ಕೇ ಮಾದರಿಯಾಗಿದೆ. ಇಂತಹ ಸೌಹಾರ್ದದ ವಾತಾವರಣಕ್ಕೆ ಧಕ್ಕೆ ತರುವ ಪ್ರಯತ್ನಗಳನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು.

ವೀರೇಶ್ವರ ಪುಣ್ಯಾಶ್ರಮದಲ್ಲಿ ಎಲ್ಲ ಸಮುದಾಯಗಳ ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ಆಶ್ರಯ, ಶಿಕ್ಷಣ ಹಾಗೂ ಬದುಕಿನ ದಾರಿ ಕಲ್ಪಿಸಲಾಗಿದೆ. ಇಂತಹ ಆಶ್ರಮದ ಹೆಸರಿಗೆ ಧಕ್ಕೆ ತರುವ ಉದ್ದೇಶದಿಂದ ರಥದ ಚಕ್ರದ ವಿಚಾರವನ್ನು ಮುಂದಿಟ್ಟುಕೊಂಡು ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.

ಎಸ್‌.ಎನ್‌. ಬಳ್ಳಾರಿ ಮಾತನಾಡಿ, ಕೋಮುವಾದಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಹಿಂದೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದೇ ನಿರ್ಲಕ್ಷ್ಯ ಮುಂದುವರಿದರೆ ಜನರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ. ಅದರ ಸಂಪೂರ್ಣ ಜವಾಬ್ದಾರಿ ಆಡಳಿತದ ಮೇಲಿದೆ ಎಂದು ಎಚ್ಚರಿಸಿದರು.

ವೀರೇಶ್ವರ ಪುಣ್ಯಾಶ್ರಮವು ಸಾವಿರಾರು ಅಂಧ, ಅನಾಥ ಹಾಗೂ ನಿರ್ಗತಿಕ ಮಕ್ಕಳಿಗೆ ಆಶ್ರಯ ನೀಡಿದ್ದು, ಅದರ ವಿರುದ್ಧ ಅಪಪ್ರಚಾರ ನಡೆಸುವವರು ಬಹಿರಂಗ ಚರ್ಚೆಗೆ ಬರಲಿ. ಅಗತ್ಯವಿದ್ದರೆ ಇಂತಹವರ ವಿರುದ್ಧ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೂ ಸಿದ್ಧ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಶೋಕ ಬರಗುಂಡಿ, ಶೇಕಣ್ಣ ಕವಳಿಕಾಯಿ, ಬಾಲರಾಜ ಅರಬರ ಹಾಗೂ ಮುತ್ತು ಬಿಳೆಯಲಿ ಉಪಸ್ಥಿತರಿದ್ದರು.

ಶ್ರೀ ನೀಲಕಂಠೇಶ್ವರ ಸಮುದಾಯ ಭವನಕ್ಕೆ ₹75 ಲಕ್ಷ ಅನುದಾನ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ಹಳೆ ಊರಿನ ಕುರುಹಿನ ಶೆಟ್ಟಿ ಸಮಾಜದ ಶ್ರೀ ನೀಲಕಂಠೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ₹75 ಲಕ್ಷ ಅನುದಾನ ನೀಡುವುದಾಗಿ ಶಾಸಕ ಕೆ. ನೇಮಿರಾಜ್ ನಾಯ್ಕ್ ಘೋಷಿಸಿದರು.

ಮಂಗಳವಾರ ಸಮಾಜದ ಮುಖಂಡರು ಶಾಸಕರನ್ನು ಭೇಟಿ ಮಾಡಿ, ಸಮುದಾಯ ಭವನ ನಿರ್ಮಾಣಕ್ಕೆ ₹1 ಕೋಟಿ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕರು, ಈಗಾಗಲೇ ವಿವಿಧ ಸಮಾಜಗಳ ಭವನಗಳಿಗೆ ಅನುದಾನ ನೀಡಲಾಗಿದ್ದು, ಕುರುಹಿನ ಶೆಟ್ಟಿ ಸಮಾಜಕ್ಕೂ ಇದೀಗ ₹75 ಲಕ್ಷ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಮಾಲವಿ ಮಲ್ಲಿಕಾರ್ಜುನ, ಉಪಾಧ್ಯಕ್ಷ ಸಮಗಂಡಿ ನಾಗರಾಜ, ಕಾರ್ಯದರ್ಶಿ ಹಿರಾಳು ವಾಸಣ್ಣ, ಖಜಾಂಚಿ ಮಾಚಾಲಿ ನಾರಾಯಣಪ್ಪ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಕರಿ ಹರಿದ ಸಂಭ್ರಮಕ್ಕೆ ಮಳೆರಾಯನ ಸಾಥ್..!

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಆರಂಭದ ರೈತರ ಮೊದಲ ಹಬ್ಬವಾದ ಕಾರ ಹುಣ್ಣಿಮೆಯನ್ನು ಸೋಮವಾರ ಲಕ್ಷ್ಮೇಶ್ವರ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಂಭ್ರಮ, ಸಡಗರ ಮತ್ತು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು. ಉತ್ತಮ ಮುಂಗಾರು ಮಳೆ ಮತ್ತು ಸಮೃದ್ಧ ಬೆಳೆಗಾಗಿ ರೈತ ಸಮುದಾಯ ಆಚರಿಸುವ ಈ ಹಬ್ಬದಲ್ಲಿ ಕರಿ ಹರಿಯುವ ಸಂಪ್ರದಾಯ ವಿಶೇಷ ಆಕರ್ಷಣೆಯಾಗಿತ್ತು.

ಮುಂಗಾರು ಆರಂಭದ ರೈತರ ಮೊದಲ ಹಬ್ಬವಾದ ಕಾರ ಹುಣ್ಣಿಮೆಯನ್ನು ಸೋಮವಾರ ಲಕ್ಷ್ಮೇಶ್ವರ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಂಭ್ರಮ, ಸಡಗರ ಮತ್ತು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು. ಉತ್ತಮ ಮುಂಗಾರು ಮಳೆ ಮತ್ತು ಸಮೃದ್ಧ ಬೆಳೆಗಾಗಿ ರೈತ ಸಮುದಾಯ ಆಚರಿಸುವ ಈ ಹಬ್ಬದಲ್ಲಿ ಕರಿ ಹರಿಯುವ ಸಂಪ್ರದಾಯ ವಿಶೇಷ ಆಕರ್ಷಣೆಯಾಗಿತ್ತು.

ಸಂಪ್ರದಾಯದಂತೆ ಹುಲಗೇರಿಬಣದಲ್ಲಿ ಪಾಟೀಲಕುಲಕರ್ಣಿ ಮನೆತನದವರು ನಂದೆಣ್ಣವರ ಕುಟುಂಬಕ್ಕೆ ಕರಿ ಕಟ್ಟಲು ನೀಡಿ, ಸೊಪ್ಪಿನಕೇರಿ ಓಣಿಯ ಹಿರಿಯರು ಕರಿ ಹರಿಯುವ ಆಚರಣೆಗೆ ಚಾಲನೆ ನೀಡಿದರು.

ಬೆಳಗ್ಗೆಯೇ ರೈತರು ತಮ್ಮ ಎತ್ತುಗಳಿಗೆ ಸ್ನಾನ ಮಾಡಿಸಿ, ಎಳ್ಳೆಣ್ಣೆ, ಮಜ್ಜಿಗೆ, ಅರಿಶಿಣ, ಉಪ್ಪು ಹಾಗೂ ತತ್ತಿಯನ್ನು ಹಚ್ಚಿ, ರೋಗರುಜಿನಗಳಿಂದ ರಕ್ಷಣೆ ಸಿಗಲಿ ಎಂಬ ನಂಬಿಕೆಯಿಂದ ಪೂಜೆ ಸಲ್ಲಿಸಿದರು. ಬಳಿಕ ಕೋಡಿನ ತುದಿಗೆ ತಾಮ್ರದ ಕೊಂಬೆಣಸು ಅಳವಡಿಸಿ, ರಿಬ್ಬನ್, ಬಲೂನ್ ಹಾಗೂ ಗಜ್ಜೆಪಟ್ಟಿಗಳಿಂದ ಎತ್ತುಗಳನ್ನು ಅಲಂಕರಿಸಿದರು.

ಗೋಧೂಳಿ ವೇಳೆಯಲ್ಲಿ ವಿಶೇಷವಾಗಿ ಸಿಂಗರಿಸಿದ ಎತ್ತು ಹಾಗೂ ಹೋರಿಗಳನ್ನು ಊರ ಅಗಸಿ ರಸ್ತೆಯಲ್ಲಿ ಓಡಿಸಲಾಯಿತು. ಮೊದಲು ಕೊಬ್ಬರಿ ಸರವನ್ನು ಹರಿದು ಮುಂದೆ ಸಾಗುವ ಎತ್ತನ್ನೇ “ಕರಿ ಹರಿದ ಎತ್ತು” ಎಂದು ಪರಿಗಣಿಸುವ ಸಂಪ್ರದಾಯವಿದೆ. ಬಿಳಿ ಎತ್ತು ಕರಿ ಹರಿದರೆ ಹಿಂಗಾರು ಉತ್ತಮ, ಕರಿ ಎತ್ತು ಕರಿ ಹರಿದರೆ ಮುಂಗಾರು ಉತ್ತಮವಾಗಲಿದೆ ಎಂಬ ನಂಬಿಕೆ ರೈತರಲ್ಲಿದೆ.

ಪಟ್ಟಣದ ದೇಸಾಯಿಬಣ, ಹುಲಗೇರಿ ಬಣ, ಪೇಠಬಣ ಹಾಗೂ ಹಿರೇಬಣ ಅಗಸಿ ಬಾಗಿಲುಗಳಲ್ಲಿ ಕರಿ ಹರಿಯುವ ಸಂಪ್ರದಾಯ ನೆರವೇರಿತು. ರೈತರು ತಮ್ಮ ಎತ್ತುಗಳ ಮೈಮೇಲೆ “ರಾಮಧೂತ”, “ಭೂಮಿತಾಯಿ ಚೊಚ್ಚಲ ಮಗ”, “ಪುಣ್ಯಕೋಟಿ”, “ಮನೆದೇವ್ರು”, “ರಾಜಕುಮಾರ”, “ಒಡಹುಟ್ಟಿದವರು”, “ಮುಂಗಾರು ಮಳೆ”, “ನಮ್ಮ ಬಸವ” ಮೊದಲಾದ ಬರಹಗಳನ್ನು ಬರೆದು ಪ್ರೀತಿ ವ್ಯಕ್ತಪಡಿಸಿದರು.

ಬಳಿಕ ಪಟ್ಟಣದ ಆರಾಧ್ಯದೈವ ಸೋಮೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಗಿರೀಶ ಅಣ್ಣಿಗೇರಿಯವರ ಎತ್ತುಗಳು ಕರಿ ಹರಿದವು. ಎತ್ತುಗಳ ಓಟವನ್ನು ಕಣ್ತುಂಬಿಕೊಳ್ಳಲು ಸಾವಿರಾರು ರೈತರು, ಯುವಕರು ಹಾಗೂ ಮಕ್ಕಳು ಸೇರಿದ್ದರು. ನಂತರ ಕರಿ ಹರಿದ ಎತ್ತುಗಳೊಂದಿಗೆ ನೂರಾರು ಎತ್ತುಗಳ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವದೊಂದಿಗೆ ನಡೆಯಿತು. ಇದೇ ವೇಳೆ ಸುರಿದ ಮಳೆ ಹಬ್ಬದ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಿತು.

ಈ ಸಂದರ್ಭದಲ್ಲಿ ಗುರುರಾಜ ಪಾಟೀಲಕುಲಕರ್ಣಿ, ಚನ್ನಪ್ಪ ಜಗಲಿ, ಶಿವಯೋಗಿ ಅಂಕಲಕೋಟಿ, ಚಂದ್ರಣ್ಣ ಮೆಕ್ಕಿ, ಚನ್ನಪ್ಪ ಚಿಂಚಲಿ, ಬಸವರಾಜ ಮೆಣಸಿನಕಾಯಿ, ವಿರುಪಾಕ್ಷ ಆದಿ, ಅಪ್ಪಣ್ಣ ಮುಳಗುಂದ, ಮಯೂರಗೌಡ ಪಾಟೀಲ, ನಂದೀಶ ಬಂಡಿವಾಡ, ರಾಮಣ್ಣ ಗೌರಿ, ಸೋಮಣ್ಣ ಸುತಾರ, ಸುರೇಶ ಚೌಕನವರ, ಸೋಮಣ್ಣ ಉಮಚಗಿ, ಸುರೇಶ ರಾಚನಾಯ್ಕರ, ಮುತ್ತಣ್ಣ ಕಟ್ಟಿಗೌಡ್ರ, ಗಂಗಪ್ಪ ಮೇವುಂಡಿ, ಈರಪ್ಪ ಗುಡಗೇರಿ, ಬಸವರಾಜ ಅಣ್ಣಿಗೇರಿ, ಬಸವರಾಜ ಆದಿ, ರಮೇಶ ಹೆಬ್ಬಾಳ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.

ಏಕೆ ಆಚರಿಸುತ್ತಾರೆ ಕಾರ ಹುಣ್ಣಿಮೆ?

ಮುಂಗಾರು ಉತ್ತಮವಾಗಲಿ, ಜಾನುವಾರುಗಳು ಆರೋಗ್ಯವಾಗಿರಲಿ ಹಾಗೂ ಸಮೃದ್ಧ ಬೆಳೆ ಬರಲಿ ಎಂಬ ಆಶಯದಿಂದ ರೈತರು ಕಾರ ಹುಣ್ಣಿಮೆಯನ್ನು ಆಚರಿಸುತ್ತಾರೆ. ಕರಿ ಹರಿಯುವ ಸಂಪ್ರದಾಯವು ಪ್ರಕೃತಿ, ಕೃಷಿ ಮತ್ತು ರೈತನ ಬದುಕಿನ ನಡುವಿನ ಅವಿನಾಭಾವ ಸಂಬಂಧದ ಸಂಕೇತವಾಗಿದೆ.

ಪರೀಕ್ಷೆ ವೇಳೆ ಬಾಗಿಲು ಲಾಕ್, ಮೊಬೈಲ್ ಬಳಕೆ! ಗದಗ ಕೇಂದ್ರದ ವಿರುದ್ಧ ಗಂಭೀರ ಆರೋಪ

0

ಗದಗ: ಸೀನಿಯರ್ ಸೆಕೆಂಡರಿ ನೇರ ಪರೀಕ್ಷೆಯ ಹೆಸರಿನಲ್ಲಿ ಗದಗ ನಗರದ ಪರೀಕ್ಷಾ ಕೇಂದ್ರವೊಂದರಲ್ಲಿ ಭಾರೀ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದ್ದು, ಪರೀಕ್ಷಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಅಭ್ಯರ್ಥಿಗಳಿಂದ ಹಣ ಪಡೆದು ಪರೀಕ್ಷೆ ನಡೆಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಬೆಂಗಳೂರು ಮೂಲದ ಭಾರತ್ ಇನ್ಸ್ಟಿಟ್ಯೂಟ್ ಆಫ್ ಸ್ಕೂಲಿಂಗ್ ಎಜುಕೇಷನ್ ಮಂಡಳಿ ನಡೆಸುತ್ತಿರುವ ಪರೀಕ್ಷೆಗೆ ಕಳಸಾಪುರ ರಸ್ತೆಯ ಆರ್ಯಭಟ ಸ್ವತಂತ್ರ ಪದವಿ ಪೂರ್ವ ಕಾಲೇಜು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಪರೀಕ್ಷಾ ವ್ಯವಸ್ಥೆ ಪ್ರಶ್ನಾರ್ಹವಾಗಿದ್ದು, ಅಭ್ಯರ್ಥಿಗಳನ್ನು ಚಿಕ್ಕ ಕೊಠಡಿಗಳಲ್ಲಿ ಕಿಕ್ಕಿರಿದು ಕೂರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಒಂದೇ ಕೊಠಡಿಯಲ್ಲಿ ಸುಮಾರು 48 ಅಭ್ಯರ್ಥಿಗಳನ್ನು ಕೂರಿಸಿ ಪರೀಕ್ಷೆ ನಡೆಸಲಾಗಿದ್ದು, ಒಟ್ಟು ಐದು ಕೊಠಡಿಗಳಲ್ಲಿ ಸುಮಾರು 240 ಮಂದಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ನಡೆಯುತ್ತಿದ್ದ ವೇಳೆ ಕೊಠಡಿಗಳ ಬಾಗಿಲುಗಳನ್ನು ಹೊರಗಿನಿಂದಲೇ ಲಾಕ್ ಮಾಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.

ಇಂಗ್ಲಿಷ್ ಪರೀಕ್ಷೆಯ ವೇಳೆ ಮೇಲ್ವಿಚಾರಕರು ಪರೀಕ್ಷಾ ಕೊಠಡಿಯೊಳಗೇ ಮೊಬೈಲ್ ಫೋನ್ ಬಳಸುತ್ತಿದ್ದರು ಎನ್ನಲಾಗಿದ್ದು, ಇದು ಪರೀಕ್ಷಾ ನಿಯಮಗಳಿಗೆ ವಿರುದ್ಧವಾಗಿದೆ. ಅಭ್ಯರ್ಥಿಗಳಿಂದ ಹಣ ಪಡೆದು ಮನಬಂದಂತೆ ಪರೀಕ್ಷೆ ನಡೆಸಲಾಗಿದೆ ಎಂಬ ಆರೋಪವೂ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಘಟನೆ ಕುರಿತು ಮಾಹಿತಿ ತಿಳಿದು ಮಾಧ್ಯಮದವರು ಸ್ಥಳಕ್ಕೆ ತೆರಳಿದಾಗ ಸಿಬ್ಬಂದಿ ಚಿತ್ರೀಕರಣಕ್ಕೆ ಅಡ್ಡಿಪಡಿಸಿ, “ಇಲ್ಲಿ ಬರಬೇಡಿ, 100 ಮೀಟರ್ ದೂರ ನಿಲ್ಲಿ” ಎಂದು ವಾಗ್ವಾದ ನಡೆಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರವೇ ಪರೀಕ್ಷಾ ಕೊಠಡಿಗಳ ಬಾಗಿಲು ತೆರೆಯಲಾಯಿತು.

ಬಾಗಿಲು ತೆರೆದ ಬಳಿಕ ಪರೀಕ್ಷಾ ಕೇಂದ್ರದ ಒಳಗಿನ ವ್ಯವಸ್ಥೆ ಬಹಿರಂಗವಾಗಿದ್ದು, ನಿಯಮ ಉಲ್ಲಂಘನೆಯ ಹಲವು ಆರೋಪಗಳು ಮತ್ತಷ್ಟು ಬಲಗೊಂಡಿವೆ. ಈ ಕುರಿತು ಪ್ರಶ್ನಿಸಿದಾಗ, “ನಮಗೆ ಯಾವುದೇ ಅಧಿಕಾರಿಗಳು ಸಂಬಂಧಿಸುವುದಿಲ್ಲ. ನಾವು ಮತ್ತು ನಮ್ಮ ಇನ್‌ಸ್ಟಿಟ್ಯೂಟ್‌ವೇ ಇಲ್ಲಿ ಸುಪ್ರೀಂ” ಎಂದು ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದ್ದು, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹ ಕೇಳಿಬರುತ್ತಿದೆ.

ಖ್ಯಾತ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಇನ್ನಿಲ್ಲ: ಕಲಾ ಲೋಕಕ್ಕೆ ಭಾರೀ ನಷ್ಟ!

ಹಾಸನ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ, ಗ್ರಾಮೀಣ ಸೊಗಡು ಮತ್ತು ಆಧುನಿಕ ಕಲೆಯನ್ನು ಸಮನ್ವಯಗೊಳಿಸಿದ ಖ್ಯಾತ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಅವರು ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

1947ರಲ್ಲಿ ಕೊಡಗಿನ ಮಡಿಕೇರಿ ತಾಲೂಕಿನ ಬಡ ಕೃಷಿ ಕುಟುಂಬದಲ್ಲಿ ಜನಿಸಿದ ಶಿವಪ್ರಸಾದ್, ಬಾಲ್ಯದಿಂದಲೇ ಚಿತ್ರಕಲೆಯತ್ತ ಅಪಾರ ಆಸಕ್ತಿ ಹೊಂದಿದ್ದರು. ಕುಟುಂಬದ ಒತ್ತಾಯದ ಕಾರಣ ಇಂಜಿನಿಯರಿಂಗ್ ಓದಿಗೆ ಸೇರಿದ್ದರೂ, ಬಳಿಕ ಕಲೆಯ ಮೇಲಿನ ಒಲವಿನಿಂದ ಮುಂಬೈನ ಪ್ರತಿಷ್ಠಿತ ‘ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್’ನಲ್ಲಿ ಅಧ್ಯಯನ ಮಾಡಿ 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದಿದ್ದರು.

ತಮ್ಮ ಕಲಾಕೃತಿಗಳ ಮೂಲಕ ಶೋಷಿತರು, ರೈತರು ಹಾಗೂ ಗ್ರಾಮೀಣ ಜನರ ಬದುಕನ್ನು ಚಿತ್ರಿಸಿದ ಅವರು, ಸಾಮಾಜಿಕ ಚಳವಳಿಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ಅವರ ಚಿತ್ರಕಲೆಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮೆಚ್ಚುಗೆ ದೊರೆತಿತ್ತು. ಬ್ರಿಟನ್‌ನ ಪ್ರಸಿದ್ಧ ಕಲಾವಿದ ಲುಸಿಯನ್ ಫ್ರಾಯ್ಡ್ ಅವರಿಗೆ ಹೋಲಿಸಲ್ಪಟ್ಟಿದ್ದರು.

ಬೆಂಗಳೂರು, ಮೈಸೂರು, ಮುಂಬೈ ಹಾಗೂ ನವದೆಹಲಿಯಲ್ಲಿ ನಡೆದ ಅನೇಕ ಏಕವ್ಯಕ್ತಿ ಹಾಗೂ ಸಮೂಹ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದ ಅವರ ಕೃತಿಗಳು ಜಹಾಂಗೀರ್ ಆರ್ಟ್ ಗ್ಯಾಲರಿ, ಸಾಕ್ಷಿ ಗ್ಯಾಲರಿ ಸೇರಿದಂತೆ ಹಲವು ಪ್ರಮುಖ ಕಲಾ ಕೇಂದ್ರಗಳಲ್ಲಿ ಪ್ರದರ್ಶನಗೊಂಡಿದ್ದವು.

ಕಲಾ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು 2001ರಲ್ಲಿ ಅವರಿಗೆ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಅವರ ನಿಧನದಿಂದ ಭಾರತೀಯ ಕಲಾ ಲೋಕದಲ್ಲಿ ದೊಡ್ಡ ಶೂನ್ಯ ಉಂಟಾಗಿದೆ.

ಕುಂಚದ ಮೂಲಕ ಕ್ರಾಂತಿ ಬರೆದ ಕಲಾ ದಿಗ್ಗಜ ಕೆ.ಟಿ. ಶಿವಪ್ರಸಾದ್ ನಿಧನ: ರೈತರ ಧ್ವನಿಯಾಗಿದ್ದ ಚಿತ್ರಕಲಾವಿದ ಇನ್ನು ನೆನಪು ಮಾತ್ರ

0

ಹಾಸನ: ಕರ್ನಾಟಕದ ಹೆಮ್ಮೆಯ ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಅವರು ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಗ್ರಾಮೀಣ ಬದುಕು, ರೈತರ ಸಂಕಷ್ಟ, ತಳಸಮುದಾಯಗಳ ಹೋರಾಟ ಹಾಗೂ ಸಾಮಾಜಿಕ ಅಸಮಾನತೆಯನ್ನು ತಮ್ಮ ಕಲೆಯ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರತಿಬಿಂಬಿಸಿದ್ದ ಈ ಮಹಾನ್ ಕಲಾವಿದರ ಅಗಲಿಕೆ ಭಾರತೀಯ ಚಿತ್ರಕಲಾ ಕ್ಷೇತ್ರಕ್ಕೆ ಭಾರೀ ಆಘಾತ ತಂದಿದೆ.

ಕೊಡಗಿನ ಮಡಿಕೇರಿ ತಾಲೂಕಿನ ಕೃಷಿಕ ಕುಟುಂಬದಲ್ಲಿ 1947ರಲ್ಲಿ ಜನಿಸಿದ್ದ ಶಿವಪ್ರಸಾದ್, ಬಾಲ್ಯದಲ್ಲೇ ಚಿತ್ರಕಲೆಯತ್ತ ಒಲವು ಬೆಳೆಸಿಕೊಂಡಿದ್ದರು. ಕುಟುಂಬದ ಆಶಯದಂತೆ ಇಂಜಿನಿಯರಿಂಗ್ ಶಿಕ್ಷಣ ಆರಂಭಿಸಿದರೂ, ಕಲೆಯ ಕರೆಗೆ ಸ್ಪಂದಿಸಿ ವ್ಯಾಸಂಗವನ್ನು ಅರ್ಧದಲ್ಲೇ ತೊರೆದು ಮುಂಬೈನ ಪ್ರತಿಷ್ಠಿತ ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ನಲ್ಲಿ ಶಿಕ್ಷಣ ಪಡೆದು 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದರು. ಅಲ್ಲಿಂದ ಆರಂಭವಾದ ಅವರ ಕಲಾ ಪಯಣ ಅಂತಾರಾಷ್ಟ್ರೀಯ ಮಟ್ಟದ ಗುರುತಿನವರೆಗೆ ಸಾಗಿತು.

ಸಾಮಾಜಿಕ ಬದ್ಧತೆಯೇ ಅವರ ಕಲೆಯ ಜೀವಾಳವಾಗಿತ್ತು. ರೈತರು, ಕಾರ್ಮಿಕರು, ದಲಿತರು ಹಾಗೂ ಶೋಷಿತರ ಬದುಕನ್ನು ತಮ್ಮ ಚಿತ್ರಗಳಲ್ಲಿ ಜೀವಂತಗೊಳಿಸಿದ ಅವರು, ಕಲೆಯನ್ನು ಸಮಾಜ ಪರಿವರ್ತನೆಯ ಸಾಧನವನ್ನಾಗಿ ಬಳಸಿದರು. ದಲಿತ, ರೈತ ಹಾಗೂ ಸೋಷಿಯಲಿಸ್ಟ್ ಚಳವಳಿಗಳೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಅವರು, ಕುಂಚದ ಮೂಲಕವೇ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡಿದರು.

ಅವರ ಕಲಾಕೃತಿಗಳು ಬ್ರಿಟನ್‌ನ ಖ್ಯಾತ ಕಲಾವಿದ ಲುಸಿಯನ್ ಫ್ರಾಯ್ಡ್ ಅವರ ಶೈಲಿಗೆ ಹೋಲಿಕೆ ಪಡೆಯುವಷ್ಟು ಪ್ರಭಾವ ಬೀರಿದ್ದವು. ಬೆಂಗಳೂರು, ಮೈಸೂರು, ಮುಂಬೈ, ನವದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನು ಆಯೋಜಿಸಿದ್ದ ಅವರು, ಜಹಾಂಗೀರ್ ಆರ್ಟ್ ಗ್ಯಾಲರಿ, ಸಾಕ್ಷಿ ಗ್ಯಾಲರಿ, ಆರ್ಟ್ ಟುಡೇ ಸೇರಿದಂತೆ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಕಲೆಯನ್ನು ಅನಾವರಣಗೊಳಿಸಿದ್ದರು. ಭೋಪಾಲ್ ಬಿನ್ನಾಲೆ, ಬಾಂಬೆ ಆರ್ಟ್ ಸೊಸೈಟಿ ಶತಮಾನೋತ್ಸವ ಪ್ರದರ್ಶನ ಹಾಗೂ ಹಾಂಗ್‌ಕಾಂಗ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲೂ ಭಾಗವಹಿಸಿ ಜಾಗತಿಕ ಮನ್ನಣೆ ಗಳಿಸಿದ್ದರು.

ಚಿತ್ರಕಲೆಯ ಜೊತೆಗೆ ಛಾಯಾಗ್ರಾಹಕ ಹಾಗೂ ಆರ್ಕಿಟೆಕ್ಚರಲ್ ಕನ್ಸಲ್ಟೆಂಟ್ ಆಗಿಯೂ ಗುರುತಿಸಿಕೊಂಡಿದ್ದ ಶಿವಪ್ರಸಾದ್ ಅವರ ಸೇವೆಯನ್ನು ಗೌರವಿಸಿ ಕರ್ನಾಟಕ ಸರ್ಕಾರ 2001ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು. ಸಾಮಾಜಿಕ ಕಳಕಳಿ, ಕಲಾತ್ಮಕ ವೈಶಿಷ್ಟ್ಯ ಹಾಗೂ ಜಾಗತಿಕ ಮನ್ನಣೆಯ ಮೂಲಕ ಕನ್ನಡ ನಾಡಿನ ಹೆಸರನ್ನು ವಿಶ್ವದಾದ್ಯಂತ ಪಸರಿಸಿದ್ದ ಈ ಮಹಾನ್ ಕಲಾವಿದರ ಅಗಲಿಕೆ ಕಲಾ ಲೋಕಕ್ಕೆ ಎಂದಿಗೂ ತುಂಬಲಾರದ ನಷ್ಟವಾಗಿದೆ.

ಶಿವಮೊಗ್ಗದಲ್ಲಿ ದುರಂತ: ಮದುವೆಯಾದ 2 ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ

ಶಿವಮೊಗ್ಗ: ಮದುವೆಯಾದ ಕೇವಲ ಎರಡು ತಿಂಗಳಲ್ಲೇ ನವವಿವಾಹಿತೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಣಜಿ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಸ್ವಾತಿ (24) ಎಂದು ಗುರುತಿಸಲಾಗಿದೆ. ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಸ್ವರೂಪ್ ಅವರನ್ನು ಸ್ವಾತಿ ಮದುವೆಯಾಗಿದ್ದರು.

ಮೂಲಗಳ ಪ್ರಕಾರ, ಸ್ವಾತಿಗೆ ಗರ್ಭಧಾರಣೆ ಹಿನ್ನೆಲೆಯಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗಿದ್ದವು. ಕಳೆದ 20 ದಿನಗಳ ಹಿಂದೆ ಅವರು ತವರು ಮನೆ ಹಣಜಿ ಗ್ರಾಮಕ್ಕೆ ಬಂದಿದ್ದರು. ಘಟನೆ ನಡೆದ ವೇಳೆ ಪೋಷಕರು ಜಮೀನಿನ ಕೆಲಸಕ್ಕೆ ತೆರಳಿದ್ದಾಗ, ಸ್ವಾತಿ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ.

ಸ್ಥಳೀಯರು ಇದನ್ನು ಗಮನಿಸಿ ಕುಟುಂಬದವರಿಗೆ ಮಾಹಿತಿ ನೀಡಿದ್ದು, ಬಳಿಕ ಬಾಗಿಲು ಮುರಿದು ಅವರನ್ನು ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸ್ವಾತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಸೊರಬ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕುಟುಂಬದವರ ಪ್ರಕಾರ, ಸ್ವಾತಿಗೆ ತೀವ್ರ ವಾಂತಿ ಮತ್ತು ಆರೋಗ್ಯ ಸಮಸ್ಯೆ ಇದ್ದು, ಸರಿಯಾಗಿ ಆಹಾರ ಸೇವಿಸದ ಸ್ಥಿತಿಯಲ್ಲಿದ್ದರು. ಇದೇ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.