Home Blog Page 2

ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ ನಿಲ್ಲಿಸಿ; ಸಿಎಂ ಡಿಕೆಶಿಗೆ ಹೆಚ್.ಡಿ. ಕುಮಾರಸ್ವಾಮಿ ಪತ್ರ!

0

ಬೆಂಗಳೂರು: ನೈಸ್ ರಸ್ತೆಯಲ್ಲಿ ನಡೆಯುತ್ತಿರುವ ಟೋಲ್ ಸಂಗ್ರಹವನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ನೈಸ್ ಸಂಸ್ಥೆ ಅನಧಿಕೃತವಾಗಿ ಟೋಲ್ ಸಂಗ್ರಹಿಸುತ್ತಿದೆ ಎಂದು ಆರೋಪಿಸಿರುವ ಅವರು, ನೈಸ್ ಯೋಜನೆಯನ್ನು ರಾಜ್ಯ ಸರ್ಕಾರದ ವಶಕ್ಕೆ ಪಡೆದು ಟೋಲ್ ಸಂಗ್ರಹವನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್‌ ಯೋಜನೆ (BMICP) ಅನುಷ್ಠಾನದಲ್ಲಿ ಅಕ್ರಮಗಳು ನಡೆದಿವೆ ಎಂದು ಕುಮಾರಸ್ವಾಮಿ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ. ನೈಸ್ ಸಂಸ್ಥೆಯು ಕಾನೂನು ಹಾಗೂ ಫ್ರೇಮ್‌ವರ್ಕ್ ಅಗ್ರಿಮೆಂಟ್ (FWA) ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅವರು ದೂರಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆ ನಡೆದು ಸುಮಾರು 23 ವರ್ಷಗಳು ಕಳೆದರೂ, ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಸೂಕ್ತ ಪರಿಹಾರ ದೊರೆತಿಲ್ಲ. ಇದರಿಂದ ಅನೇಕ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಕುಮಾರಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳು, ವಿಧಾನಸಭೆಯ ಸದನ ಸಮಿತಿ ಹಾಗೂ ಸಚಿವ ಸಂಪುಟದ ಉಪ ಸಮಿತಿಗಳ ಶಿಫಾರಸುಗಳಲ್ಲಿರುವ ಅಂಶಗಳನ್ನು ಕೂಡ ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ.

BMICP ಯೋಜನೆ ಅನುಷ್ಠಾನದಲ್ಲಿ ಫ್ರೇಮ್‌ವರ್ಕ್ ಅಗ್ರಿಮೆಂಟ್ (FWA) ಮತ್ತು ಪ್ರಾಜೆಕ್ಟ್ ಟೆಕ್ನಿಕಲ್ ಅಗ್ರಿಮೆಂಟ್ (PTA)**ನಲ್ಲಿರುವ ಹಲವು ನಿಯಮಗಳು ಹಾಗೂ ಷರತ್ತುಗಳನ್ನು ನೈಸ್ ಸಂಸ್ಥೆ ಉಲ್ಲಂಘಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೈಸ್ ಸಂಸ್ಥೆ ಸಂಗ್ರಹಿಸುತ್ತಿರುವ ಟೋಲ್ ಅನ್ನು ತಕ್ಷಣದಿಂದಲೇ ನಿಷೇಧಿಸಬೇಕು. ಅಲ್ಲದೆ, ಸೂಕ್ತ ಶಾಸನ ರೂಪಿಸುವ ಮೂಲಕ ನೈಸ್ ರಸ್ತೆ ಯೋಜನೆಯನ್ನು ರಾಜ್ಯ ಸರ್ಕಾರವೇ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ಹನೂರು ಶೂಟೌಟ್‌ ವಿವಾದ: ‘ಅರಣ್ಯ ಸಿಬ್ಬಂದಿ ನಾಪತ್ತೆ’, ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ 10 ಲಕ್ಷ ಪರಿಹಾರ – ಶಾಸಕ ಮಂಜುನಾಥ್

0

ಚಾಮರಾಜನಗರ: ಹನೂರು ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಡೆದ ಶೂಟೌಟ್‌ ಪ್ರಕರಣದ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಕರ್ತವ್ಯ ಸ್ಥಳದಲ್ಲಿ ಇಲ್ಲ ಎಂದು ಹನೂರು ಜೆಡಿಎಸ್ ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿರುವ ಸ್ಥಳೀಯರೊಂದಿಗೆ ಮಾತನಾಡಿದ ಅವರು, ಮೃತಪಟ್ಟವರ ಕುಟುಂಬಗಳಿಗೆ ತಲಾ ₹15 ಲಕ್ಷ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ರಾಜ್ಯ ಸರ್ಕಾರ ಈಗಾಗಲೇ ತಲಾ ₹5 ಲಕ್ಷ ಪರಿಹಾರ ಘೋಷಿಸಿದೆ. ವೈಯಕ್ತಿಕವಾಗಿ ತಾವು ತಲಾ ₹10 ಲಕ್ಷ ನೆರವು ನೀಡಲಿದ್ದು, ಒಟ್ಟಾರೆ ಪ್ರತಿ ಕುಟುಂಬಕ್ಕೂ ₹15 ಲಕ್ಷ ತಲುಪುವ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಹೇಳಿದರು.

ಗುಂಡು ಹಾರಿಸಿದ ಅರಣ್ಯ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆತರಬೇಕು ಎಂಬ ಪ್ರತಿಭಟನಾಕಾರರ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಈಗಲೇ ಅವರನ್ನು ಇಲ್ಲಿ ಕರೆತರಲು ಸಾಧ್ಯವಿಲ್ಲ. ಅವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಸಂಬಂಧಪಟ್ಟ ಸಿಬ್ಬಂದಿಯನ್ನು ತಕ್ಷಣ ಅಮಾನತುಗೊಳಿಸಿ, ಕಾನೂನು ಪ್ರಕಾರ ಸಮಗ್ರ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.

ಪ್ರದೇಶದಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸ್ಥಳೀಯರೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಪ್ರತಿಭಟನೆ ಕೈಬಿಡುವಂತೆ ಮನವೊಲಿಸುವ ಪ್ರಯತ್ನಗಳು ಮುಂದುವರಿದಿವೆ ಎಂದು ಶಾಸಕ ಮಂಜುನಾಥ್ ತಿಳಿಸಿದ್ದಾರೆ.

ಹನೂರು ಶೂಟೌಟ್‌ ಪ್ರಕರಣ: 7 ದಿನದಲ್ಲಿ ವರದಿ ನೀಡಲು ಡಿಸಿ ಆದೇಶ, ಮ್ಯಾಜಿಸ್ಟ್ರೇಟ್ ತನಿಖೆ ಆರಂಭ

0

ಚಾಮರಾಜನಗರ: ಹನೂರು ಸಮೀಪ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾಧಿಕಾರಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ.

ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, 7 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಹನೂರಿನಲ್ಲಿ ಮಾತನಾಡಿದ ಎಸಿ ದಿನೇಶ್ ಕುಮಾರ್ ಮೀನಾ, ಜಿಲ್ಲಾಧಿಕಾರಿಗಳ ಆದೇಶದಂತೆ ತನಿಖೆ ಈಗಾಗಲೇ ಆರಂಭವಾಗಿದ್ದು, ಸ್ಥಳ ಮಹಜರು ಪೂರ್ಣಗೊಂಡಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಹನೂರಿನಲ್ಲಿ ಉದ್ವಿಗ್ನ ಪ್ರತಿಭಟನೆ:

ಮೂವರ ಸಾವಿನ ವಿರುದ್ಧ ಹನೂರಿನಲ್ಲಿ ಪ್ರತಿಭಟನೆಗಳು ಮುಂದುವರಿದಿವೆ. ಪ್ರತಿಭಟನಾಕಾರರು ದಿಢೀರ್ ರಸ್ತೆ ತಡೆ ನಡೆಸಿದ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಹನೂರು ಪೊಲೀಸ್ ಠಾಣೆ ಎದುರು ಕೂಡ ಪ್ರತಿಭಟನೆ ನಡೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಅರಣ್ಯ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕೆ.ಆರ್. ಆಸ್ಪತ್ರೆಯಲ್ಲಿ ಪಂಚನಾಮೆಗೆ ಸಿದ್ಧತೆ:

ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲಿ ಮೂವರು ಮೃತರ ಪಂಚನಾಮೆಗೆ ಸಿದ್ಧತೆ ನಡೆಸಲಾಗಿದೆ. ಈ ಕಾರ್ಯಕ್ಕಾಗಿ ಮೂವರು ತಹಶೀಲ್ದಾರರಿಗೆ ಪ್ರತ್ಯೇಕ ಜವಾಬ್ದಾರಿ ನೀಡಲಾಗಿದೆ.

  • ಕೊಳ್ಳೇಗಾಲ ತಹಶೀಲ್ದಾರ್ ಬಸವರಾಜು ಅವರಿಗೆ ಸೆಬಾಸ್ಟಿಯನ್ ಡೇವಿಡ್ ಕುಮಾರ್ ಅವರ ಜವಾಬ್ದಾರಿ

  • ಯಳಂದೂರು ತಹಶೀಲ್ದಾರ್ ನಯನಾ ಅವರಿಗೆ ಆಂಥೋಣಿ ಅವರ ಜವಾಬ್ದಾರಿ

  • ಚಾಮರಾಜನಗರ ತಹಶೀಲ್ದಾರ್ ಗಿರಿಜಾ ಅವರಿಗೆ ಪೀಟರ್ ಅವರ ಜವಾಬ್ದಾರಿ ವಹಿಸಲಾಗಿದೆ

ಪೀಟರ್ ಅವರ ಕುಟುಂಬಸ್ಥರು ಇನ್ನೂ ಶವಾಗಾರಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.

ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ ಅವರು ಹನೂರಿನ ಪ್ರವಾಸಿ ಮಂದಿರದಲ್ಲಿ ಮೊಕ್ಕಾಂ ಹೂಡಿದ್ದು, ತನಿಖಾಧಿಕಾರಿ ದಿನೇಶ್ ಕುಮಾರ್ ಮೀನಾ, ಚಾಮರಾಜನಗರ ಎಸ್‌ಪಿ ಮುತ್ತುರಾಜ್ ಹಾಗೂ ಮೈಸೂರು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರೊಂದಿಗೆ ಸಭೆ ನಡೆಸಿ ಪ್ರಕರಣದ ಮಾಹಿತಿ ಕಲೆಹಾಕುತ್ತಿದ್ದಾರೆ.

ವಾರಾಂತ್ಯದಲ್ಲಿ ಗೋಲ್ಡ್ ಬೆಲೆ ಏರಿಕೆ; ಖರೀದಿಗೂ ಮುನ್ನ ಇಂದಿನ ರೇಟ್ ಚೆಕ್ ಮಾಡಿ!

0

ನವದೆಹಲಿ: ಈ ವಾರ ಏರಿಳಿತ ಕಂಡಿದ್ದ ಚಿನ್ನದ ಬೆಲೆ ವಾರಾಂತ್ಯದಲ್ಲಿ ಮತ್ತೆ ಏರಿಕೆಯಾಗಿದೆ.

ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹205 ಏರಿಕೆಯಾಗಿದ್ದು, 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ₹1,42,200ಕ್ಕೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಾಗಿದೆ.

ಅಂತರರಾಷ್ಟ್ರೀಯ ಸ್ಪಾಟ್ ಗೋಲ್ಡ್ ಬೆಲೆ 139 ಡಾಲರ್‌ನಿಂದ 140 ಡಾಲರ್‌ಗೆ ಏರಿಕೆಯಾಗಿದೆ. ಮತ್ತೊಂದೆಡೆ ಬೆಳ್ಳಿ ಬೆಲೆಯಲ್ಲಿ ತುಸು ಇಳಿಕೆಯಾಗಿದ್ದು, ಭಾರತದಲ್ಲಿ ಪ್ರತಿ ಗ್ರಾಂಗೆ ₹5 ಇಳಿಕೆಯಾಗಿದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,513
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,220
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,635
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ
  • ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ:
    • ಬೆಂಗಳೂರು: 14,220 ರೂ
    • ಚೆನ್ನೈ: 14,220 ರೂ
    • ಮುಂಬೈ: 14,220 ರೂ
    • ದೆಹಲಿ: 14,235
    • ಕೋಲ್ಕತಾ: 14,220 ರೂ
    • ಕೇರಳ: 14,220 ರೂ
    • ಅಹ್ಮದಾಬಾದ್: 14,225 ರೂ
    • ಜೈಪುರ್: 14,235
    • ಲಕ್ನೋ: 14,235
    • ಭುವನೇಶ್ವರ್: 14,220 ರೂ.

ಲಾಲ್‌ಬಾಗ್ ಉಳಿಸಿ: ಸುರಂಗ ರಸ್ತೆ ಯೋಜನೆ ವಿರುದ್ಧ ಬಂಡೆ ತಬ್ಬಿಕೊಂಡು ವಾಕರ್ಸ್‌ ಪ್ರತಿಭಟನೆ!

0

ಬೆಂಗಳೂರು: ಸುರಂಗ ರಸ್ತೆ ಯೋಜನೆಗೆ ವಿರೋಧ ವ್ಯಕ್ತಪಡಿಸಿ ವಾಕರ್ಸ್ ಅಸೋಸಿಯೇಷನ್ ಸದಸ್ಯರು ಲಾಲ್‌ಬಾಗ್‌ನಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದರು.

‘ಬಂಡೆಯನ್ನು ತಬ್ಬಿಕೊಳ್ಳಿ’ ಅಭಿಯಾನದಡಿ ಲಾಲ್‌ಬಾಗ್‌ನಲ್ಲಿರುವ ಬಂಡೆಯನ್ನು ತಬ್ಬಿಕೊಂಡು ‘ಲಾಲ್‌ಬಾಗ್ ಉಳಿಸಿ’ ಎಂದು ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸುರಂಗ ರಸ್ತೆ ಯೋಜನೆಯಿಂದ ಲಾಲ್‌ಬಾಗ್‌ಗೆ ಹಾನಿಯಾಗುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ಐತಿಹಾಸಿಕ ಉದ್ಯಾನವನಕ್ಕೆ ಧಕ್ಕೆ ಆಗಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ವೇಳೆ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಲು ಅವಕಾಶ ಇಲ್ಲ ಎಂದು ಪೊಲೀಸರು ತಿಳಿಸಿ ಪ್ರತಿಭಟನಾಕಾರರನ್ನು ಸ್ಥಳದಿಂದ ತೆರಳುವಂತೆ ಸೂಚಿಸಿದರು. ಬಳಿಕ ಮುಂದಿನ ದಿನಗಳಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿ ವಾಕರ್ಸ್ ಸ್ಥಳದಿಂದ ತೆರಳಿದರು.

ಈ ಹಿಂದೆ ಇದೇ ವಿಚಾರವಾಗಿ ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ವಾಕರ್ಸ್, ಮತ್ತೊಮ್ಮೆ ಲಾಲ್‌ಬಾಗ್ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

4ನೇ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು; ಸಾವು-ಬದುಕಿನ ನಡುವೆ ಹೋರಾಟ!

0

ಬೆಂಗಳೂರು: ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕ ಆಡುಗೋಡಿಯಲ್ಲಿ ಒಂದೂವರೆ ವರ್ಷದ ಮಗು 4ನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಆಗಸ್ಟ್ 15ರಂದು ಬೆಳಗ್ಗೆ 10.50ರ ಸುಮಾರಿಗೆ ಈ ಅವಘಡ ಸಂಭವಿಸಿದೆ.

ತಂದೆ-ತಾಯಿ ಮಗುವನ್ನು ಮನೆಯ ಮುಂದೆ ಆಟವಾಡಲು ಬಿಟ್ಟಿದ್ದ ವೇಳೆ, ಮಗು ಗ್ರಿಲ್ ಮೇಲೆ ಹತ್ತಿದೆ. ಈ ವೇಳೆ ಆಯತಪ್ಪಿ 4ನೇ ಮಹಡಿಯಿಂದ ಕೆಳಗೆ ಬಿದ್ದಿದೆ. ಕೆಳಗೆ ಬೀಳುವ ವೇಳೆ ಮಗು ಬೌನ್ಸ್ ಆಗಿ ಮತ್ತೆ ನೆಲಕ್ಕೆ ಅಪ್ಪಳಿಸಿದ್ದರಿಂದ ಗಂಭೀರ ಗಾಯಗಳಾಗಿವೆ.

ಘಟನೆಯನ್ನು ಕಣ್ಣಾರೆ ಕಂಡ ಸ್ಥಳೀಯರು ತಕ್ಷಣ ಮಗುವಿನ ರಕ್ಷಣೆಗೆ ಧಾವಿಸಿ, ಬೈಕ್‌ನಲ್ಲಿ ಕೋರಮಂಗಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಸದ್ಯ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.

ಮಗು 4ನೇ ಮಹಡಿಯಿಂದ ಕೆಳಗೆ ಬೀಳುವ ಭಯಾನಕ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಕರಣ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಸ್ವಾತಂತ್ರ್ಯೋತ್ಸವದ ಸಂಭ್ರಮ: ಆಕರ್ಷಕ ಪಥಸಂಚಲನ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಉನ್ನತ ಶಿಕ್ಷಣ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಸಾರ್ವಜನಿಕವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿವಿಧ ಪಡೆಗಳ ಪಥಸಂಚಲನ ವೀಕ್ಷಿಸಿದರು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಗಣ್ಯರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಶಾಸಕ ಡಾ. ಎಚ್.ಕೆ. ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿ, ಪೊಲೀಸ್ ಹಾಗೂ ಭದ್ರತಾ ಪಡೆಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಶಿಸ್ತುಬದ್ಧ ಪಥಸಂಚಲನದಲ್ಲಿ ಪಾಲ್ಗೊಂಡರು.

ಶಾಲಾ ವಿಭಾಗದಲ್ಲಿ ಯಾರಿಗೆ ಯಾವ ಸ್ಥಾನ?

ಪಥಸಂಚಲನದ ಶಾಲಾ ವಿಭಾಗದಲ್ಲಿ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆ, ಎಸ್.ಎಂ.ಕೆ. ನಗರ, ಗದಗ ಪ್ರಥಮ ಸ್ಥಾನ ಪಡೆದರೆ, ಸಿ.ಎಸ್. ಪಾಟೀಲ ಬಾಲಕಿಯರ ಪ್ರೌಢಶಾಲೆ, ಗದಗ ದ್ವಿತೀಯ ಹಾಗೂ ಅಕ್ಷರ ಟೆಕ್ನೋ ಬಾಲಕಿಯರ ಪ್ರೌಢಶಾಲೆ, ಗದಗ ತೃತೀಯ ಸ್ಥಾನ ಪಡೆದುಕೊಂಡವು.

ವಿವಿಧ ಪಡೆಗಳ ವಿಭಾಗದಲ್ಲಿ ಅರಣ್ಯ ಘಟಕ ಪ್ರಥಮ, ಗೃಹರಕ್ಷಕ ದಳ ದ್ವಿತೀಯ ಹಾಗೂ ಎನ್‌ಸಿಸಿ ಸೀನಿಯರ್ ಬಾಯ್ಸ್ ತೃತೀಯ ಸ್ಥಾನ ಗಳಿಸಿದವು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಲೆ, ಸಾಹಿತ್ಯ, ಸಂಗೀತ, ಆಡಳಿತ, ಕೃಷಿ, ಸಮಾಜಸೇವೆ, ಶಿಕ್ಷಣ, ಆರೋಗ್ಯ, ಪತ್ರಿಕೋದ್ಯಮ, ಎನ್‌ಸಿಸಿ, ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

ಕಲೆ, ಸಾಹಿತ್ಯ, ಸಂಗೀತ, ಆಡಳಿತ, ಕೃಷಿ ಹಾಗೂ ಸಮಾಜಸೇವೆ ವಿಭಾಗದಲ್ಲಿ ಮಾರುತಿ ಜೋಗದಂಡಕರ, ವಿಶ್ವನಾಥ ಬಡಿಗೇರ, ಮಂಜುನಾಥ ಬಂಡಿಹಾಳ, ಜಾಫರ್ ಬಚೇರಿ, ಕಾಶಿಮಸಾಬ ಮುಜಾವರ, ಭಾಗ್ಯಶ್ರೀ ಹಳ್ಳಿಕೇರಿಮಠ, ಬ್ರಹ್ಮಕುಮಾರಿ ಡಾ. ಪ್ರಭಾವತಿ ಅಕ್ಕನವರು, ವೇ. ಚನ್ನವೀರಯ್ಯ ಹಿರೇಮಠ, ಶಿವಾಜಿ ಚವ್ಹಾಣ, ಬಸಪ್ಪ ಮುಸಕಿನ ಬಾವಿ ಹಾಗೂ ವಿರುಪಾಕ್ಷಪ್ಪ ಅಕ್ಕಿ ಅವರನ್ನು ಗೌರವಿಸಲಾಯಿತು.

ಶಿಕ್ಷಣ ಮತ್ತು ಆರೋಗ್ಯ ವಿಭಾಗದಲ್ಲಿ ಕಾಶಿನಾಥ ಶಿರಬಡಗಿ, ಕಳಕಪ್ಪ ಮುದ್ಲಾಪುರ, ಅಂದಾನಪ್ಪ ಬರಡಿ, ಡಾ. ವೆಂಕಟೇಶ ರಾಠೋಡ, ದೇವೇಂದ್ರ ಕಳಸಾಪುರ ಹಾಗೂ ಡಾ. ಪ್ಯಾರ್ ಅಲಿ ನೂರಾನಿ ಅವರನ್ನು ಸನ್ಮಾನಿಸಲಾಯಿತು.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಆನಂದ ಸಾಲಿಗ್ರಾಮ, ಲಿಂಗನಗೌಡ ಹನುಮನಗೌಡರ, ಫಾರೂಕ್ ಮಕಾನದಾರ, ನಾಗರಾಜ ಕಟ್ಟಿಮನಿ ಹಾಗೂ ಎಚ್.ಎಂ. ಶರೀಫನವರ ಅವರಿಗೆ ಸನ್ಮಾನ ದೊರೆಯಿತು.

ಎನ್‌ಸಿಸಿ, ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿಯೂ ಹಲವು ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಯಲ್ಲಮ್ಮ ಜಾಧವ, ಆಕಾಶಗೌಡ ಮರಿಗೌಡರ, ಅಕ್ಷತಾ ಹುಚ್ಚನಗೌಡ್ರ, ಸಮೃದ್ಧಿ ಸಿದ್ಧಲಿಂಗ, ಪ್ರಜ್ವಲಕುಮಾರ್ ಪೂಜಾರ, ಸಂಧ್ಯಾ ಲಮಾಣಿ, ಸಾರಂಗಮಠ, ಪ್ರವೀಣಕುಮಾರ್ ಸೊಬಗಿನ, ಸುಷ್ಮಾ ನಾಯಕ, ಪದ್ಮಾವತಿ ಶಾಬಾದಿ, ಸ್ನೇಹಾ ಕರ್ಜಗಿ, ಕಾರ್ತಿಕ ರೆಡ್ಡಿ ಕಾಮರೆಡ್ಡಿ, ಹರ್ಷಿಯಾ ಷಹಾಮುಲ್ಲಾ, ಅಲಿಯಾ ಮುಕ್ತುಂಸಾಬ, ಅರ್ಪಿನಬಾನು ಗುಡಿಸಲಮನಿ, ತನುಜಾ ಗೋಪೆಣ್ಣವರ, ಕೀರ್ತನಾ ಅವರೆಡ್ಡಿ, ಪವಿತ್ರಾ ದಪ್ಪರದಾರ, ಗೀತಾ ಉಪ್ಪಾರ, ಶೈಲಾಪವಾಡಿ, ಅಕ್ಷತಾ ಮಂಡಲಗೇರಿ, ರಾಹುಲ ಕಾರಭಾರಿ, ಮಾಲತಿ ಇನಾಮತಿ, ರಿಯಾಜ ಬನಿ, ದೇವಮ್ಮ, ಆನಂದ ಬೇಂದ್ರೆ, ಸೋಮಶೇಖರ ಬಿಚಗಲ್, ಚೇತನಕುಮಾರ್ ಅಮ್ರದ, ಮಹಾಂತೇಶ ಬೇವೂರ, ಚಂದ್ರಪ್ಪ ಬರಮಣ್ಣವರ, ನಾಶಿರುದ್ದೀನ ಮಕಾನದಾರ, ಮನೀಶಾ ಕಬ್ಬೂರ, ಪ್ರಿಯಾಂಕಾ ಲಮಾಣಿ, ಭಾಗ್ಯಾ ಮೇಲ್ಮನಿ ಹಾಗೂ ರಿಯಾನ ಅಹ್ಮದ ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ್ ಕೆ., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು ಹಾಗೂ ಅಪಾರ ಸಂಖ್ಯೆಯ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆಕರ್ಷಿಸಿದ ಪಥಸಂಚಲನ

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶಂಕರಗೌಡ ಚೌದ್ರಿ ಅವರ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ನೇತೃತ್ವವನ್ನು ಆರ್‌ಎಸ್‌ಐ ಬಿಷ್ಠಪ್ಪ ತಳವಾರ, ನಾಗರಿಕ ಪೊಲೀಸ್ ಪಡೆಯ ನೇತೃತ್ವವನ್ನು ಸುಭಾಷ ಪಾಟೀಲ, ಗೃಹರಕ್ಷಕ ದಳದ ನೇತೃತ್ವವನ್ನು ಎಂ.ಎನ್. ವಸ್ತ್ರದ ಹಾಗೂ ಅಗ್ನಿಶಾಮಕ ಪಡೆಯ ನೇತೃತ್ವವನ್ನು ಲೋಕೇಶ ಜಿ.ಕೆ. ವಹಿಸಿದ್ದರು.

ಅರಣ್ಯ ರಕ್ಷಕ ಪಡೆಯನ್ನು ಆರ್‌ಎಫ್‌ಒ ಸಚಿನ ಬಿಸನಳ್ಳಿ, ಎನ್‌ಸಿಸಿ ಸೀನಿಯರ್ ಬಾಯ್ಸ್ ವಿಭಾಗದಲ್ಲಿ 38 ಕೆಎಆರ್‌ ಬಟಾಲಿಯನ್‌ನ ಕುಮಾರ ವೆಂಕಟೇಶ ಹೊಸಮನಿ ಹಾಗೂ ಎನ್‌ಸಿಸಿ ಸೀನಿಯರ್ ಗರ್ಲ್ಸ್ ವಿಭಾಗದಲ್ಲಿ ಕುಮಾರಿ ರೇಷ್ಮಾ ಕಾರಭಾರಿ ಮುನ್ನಡೆಸಿದರು.

ಗೈಡ್ಸ್, ಸ್ಕೌಟ್ಸ್, ಸೇವಾದಳ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಭಾಗವಹಿಸಿ ಗಮನ ಸೆಳೆದರು.

ಕಲಾ ಮಹರ್ಷಿ ಟಿ.ಪಿ. ಅಕ್ಕಿಯವರ ಬೆವರಿನ ಕುರುಹು ವಿಜಯ ಕಲಾ ಮಂದಿರ

0

ವಿಜಯಸಾಕ್ಷಿ ಸುದ್ದಿ, ಗದಗ: ಕಲೆ ಎಂದರೆ ಕೇವಲ ಭಾವನೆಗಳ ಅಭಿವ್ಯಕ್ತಿಯಲ್ಲ; ಅದು ಸೃಜನಶೀಲ ತಪಸ್ಸು. ಮಾನವನಲ್ಲಿ ಮಾನವೀಯ ಮೌಲ್ಯ, ಆತ್ಮಸ್ಥೈರ್ಯ ಹಾಗೂ ಸಾಮಾಜಿಕ ಬಾಂಧವ್ಯವನ್ನು ಬೆಳೆಸುವ ಶಕ್ತಿ ಕಲೆಗೆ ಇದೆ. ಇಂತಹ ಕಲೆಯನ್ನೇ ಬದುಕಿನ ಉಸಿರಾಗಿಸಿಕೊಂಡು, ಹಲವು ಕಷ್ಟ-ಸವಾಲುಗಳನ್ನು ಎದುರಿಸಿ ಕಲಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು ಕಲಾ ಮಹರ್ಷಿ ಟಿ.ಪಿ. ಅಕ್ಕಿಯವರು.

ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ವಿಜಯ ಕಲಾ ಮಂದಿರ ಸಂಸ್ಥೆಯನ್ನು ಸ್ಥಾಪಿಸಿ, ನೂರಾರು ಕಲಾ ವಿದ್ಯಾರ್ಥಿಗಳಿಗೆ ದಾರಿದೀಪವಾದ ಟಿ.ಪಿ. ಅಕ್ಕಿಯವರ ಕಲಾ ಸೇವೆಯ ಕುರುಹುಗಳು ಇಂದಿಗೂ ವಿಜಯ ಕಲಾ ಮಂದಿರದಲ್ಲಿ ಜೀವಂತವಾಗಿವೆ. ಕಲೆಯನ್ನು ಉಳಿಸಿ ಬೆಳೆಸುವುದರ ಜತೆಗೆ ಕಲಾವಿದರನ್ನು ರೂಪಿಸುವ ಮಹತ್ವದ ಕಾರ್ಯವನ್ನು ಅವರು ಕೈಗೊಂಡಿದ್ದರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾವಿದರೊಂದಿಗೆ ಸಂಪರ್ಕ ಬೆಳೆಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಕಲಾ ಶಿಕ್ಷಣ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಇಂದಿನ ಉದ್ಯೋಗಕೇಂದ್ರಿತ ಶಿಕ್ಷಣದ ನಡುವೆ ವಿದ್ಯಾರ್ಥಿಗಳಲ್ಲಿ ಕಲಾಸಕ್ತಿ ಬೆಳೆಸುವುದು ಸವಾಲಿನ ಕೆಲಸ. ಅದರಲ್ಲೂ ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ತಂತ್ರಜ್ಞಾನದ ವೇಗದ ಬೆಳವಣಿಗೆಯ ನಡುವೆಯೂ ಕಲೆಯ ಮಹತ್ವ ಕುಗ್ಗಿಲ್ಲ. ಮಾನವನ ಭಾವನೆ, ಅನುಭವ ಹಾಗೂ ಸೃಜನಶೀಲತೆಯಿಂದ ಹುಟ್ಟುವ ಕಲಾಕೃತಿಗೆ ತನ್ನದೇ ಆದ ಜೀವಂತಿಕೆ ಇದೆ. ಹೀಗಾಗಿ ಕಲಾವಿದರನ್ನು ರೂಪಿಸುವ ಕಾರ್ಯ ನಾಡಿನ ಸಾಂಸ್ಕೃತಿಕ ಆಸ್ತಿಯನ್ನು ಉಳಿಸುವ ಕೆಲಸವಾಗಿದೆ.

ಪ್ರಸ್ತುತ ಪ್ರಾ. ವಸಂತ ಅಕ್ಕಿ, ಪ್ರೊ. ಅಶೋಕ, ಶ್ರೀಮತಿ ಶಾರದಾ ಅಕ್ಕಿ ಹಾಗೂ ಪ್ರಕಾಶ ಅಕ್ಕಿ ಅವರ ಶ್ರಮದಿಂದ ವಿಜಯ ಕಲಾ ಮಂದಿರ ತನ್ನ ಕಲಾ ಪರಂಪರೆಯನ್ನು ಮುಂದುವರಿಸುತ್ತಿದೆ. ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಅಕ್ಕಿ ಅವರ ಶಿಸ್ತು, ಸರಳತೆ ಹಾಗೂ ಸಮಾಜಮುಖಿ ಚಟುವಟಿಕೆಗಳು ಗಮನ ಸೆಳೆಯುತ್ತವೆ. ಕಲಾ ಮಹರ್ಷಿ ಟಿ.ಪಿ. ಅಕ್ಕಿಯವರ ಹೆಸರಿನ ಆರ್ಟ್ ಗ್ಯಾಲರಿಯಲ್ಲಿ ಕಲಾಕೃತಿಗಳನ್ನು ಅಚ್ಚುಕಟ್ಟಾಗಿ ಪ್ರದರ್ಶಿಸುವ ಮೂಲಕ ಕಲಾಸಕ್ತರಿಗೆ ಸುಂದರ ವಾತಾವರಣ ಕಲ್ಪಿಸಲಾಗಿದೆ.

ಇದೇ ಗ್ಯಾಲರಿಯಲ್ಲಿ ವಿಜಯ ಕಲಾ ಮಂದಿರ ಚಿತ್ರಕಲಾ ಮಹಾವಿದ್ಯಾಲಯದ ಬಿ.ವಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳ ಸಮೂಹ ಚಿತ್ರಕಲಾ ಪ್ರದರ್ಶನ ಹಾಗೂ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ. ಅನ್ನಪೂರ್ಣ ಮಡ್ಡಿ, ಬಸವರಾಜ ಅಕ್ಕಿ, ವಿನಾಯಕ ಪಾಟೀಲ, ನಿವೇದಿತಾ ಪಟ್ಟೇದ ಹಾಗೂ ಶಂಕರ ಮುಡಿಯಜ್ಜನವರ ಕಲಾಕೃತಿಗಳು ಪ್ರದರ್ಶನದಲ್ಲಿವೆ.

ಅನ್ನಪೂರ್ಣ ಮಡ್ಡಿಯವರ ಮೈಸೂರ ಶೈಲಿಯ ಗೋಲ್ಡಲೀಫ್ ಸಾಂಪ್ರದಾಯಿಕ ಕಲಾಕೃತಿಗಳು, ಯಕ್ಷಗಾನದ ರಚನೆಗಳು, ಲಕ್ಷ್ಮೇಶ್ವರದ ಸೋಮೇಶ್ವರ ಮೂರ್ತಿ ಹಾಗೂ ಗಣೇಶನ ಚಿತ್ರಗಳು ಗಮನ ಸೆಳೆಯುತ್ತವೆ. ವಿನಾಯಕ ಪಾಟೀಲರ ‘ಮೀನು ಮತ್ತು ಗಾಳ’ ಕಲಾಕೃತಿಯಲ್ಲಿ ಪೋಸ್ಟ್ ಇಂಪ್ರೆಷನಿಸಂನ ಪ್ರಭಾವ ಕಂಡುಬರುತ್ತದೆ. ಶಿವಶಂಕರರ ‘ರೈತ’ ಕಲಾಕೃತಿ ರೈತನ ಬದುಕು, ಶ್ರಮ ಹಾಗೂ ಚೈತನ್ಯವನ್ನು ಬಿಂಬಿಸುತ್ತದೆ. ಸಾಂಪ್ರದಾಯಿಕ, ನವ್ಯ, ನೈಜ, ನಿಸರ್ಗ ಹಾಗೂ ಸಂಯೋಜನಾ ಶೈಲಿಯ ಹಲವು ಕಲಾಕೃತಿಗಳು ಪ್ರದರ್ಶನದಲ್ಲಿವೆ.

ಕಾರ್ಯಕ್ರಮವನ್ನು ಡಾ. ಸಿ.ಟಿ. ಗುರುಪ್ರಸಾದ, ಕುಲಸಚಿವರು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ ಉದ್ಘಾಟಿಸಲಿದ್ದಾರೆ. ಮಂಜುನಾಥ ಬಿ. ಅಬ್ಬಿಗೇರಿ, ಎಸ್.ಎಚ್. ಶಿವನಗೌಡರ ಹಾಗೂ ಶ್ರೀಮತಿ ಶಾರದಾ ವಿ. ಅಕ್ಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಹಜಾನ ಮುದಕವಿ ಹಾಗೂ ಪ್ರೊ. ಎಸ್. ಗುಂಜಾಳ ಅವರನ್ನು ಸನ್ಮಾನಿಸಲಾಗುವುದು.

ಕಲಾ ಮಹರ್ಷಿ ಟಿ.ಪಿ. ಅಕ್ಕಿಯವರ ಬೆವರಿನಿಂದ ಬೆಳೆದ ವಿಜಯ ಕಲಾ ಮಂದಿರ ಇಂದು ಹೊಸ ತಲೆಮಾರಿನ ಕಲಾವಿದರಿಗೆ ಆಶಾಕಿರಣವಾಗಿದೆ. ಎಐ ಯುಗದಲ್ಲೂ ಮಾನವ ಸೃಜನಶೀಲತೆಯ ಶಕ್ತಿ ಅಜೇಯವಾಗಿದ್ದು, ಕಲೆಯನ್ನು ಉಳಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬ ಕಲಾಸಕ್ತನ ಮೇಲಿದೆ.

ಬಸವರಾಜ ನೆಲಜೇರಿ, ಗದಗ

ಗದಗಕ್ಕೆ ‘ಲೋಕಲ್ ಟು ಗ್ಲೋಬಲ್’ ಟಚ್

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗದ ನಿಜವಾದ ಸಂಪತ್ತು ಇಲ್ಲಿನ ಜನರು. ಉದ್ಯಮಶೀಲತೆ, ಕೃಷಿ, ಕೌಶಲ್ಯ ಹಾಗೂ ಸಂಪನ್ಮೂಲಗಳಿರುವ ಗದಗ ಜಿಲ್ಲೆಯನ್ನು ಸ್ಥಳೀಯ ಮಾರುಕಟ್ಟೆಗೆ ಸೀಮಿತಗೊಳಿಸದೆ ರಫ್ತು ಆಧಾರಿತ ಅಗ್ರಿಟೆಕ್ ಹಬ್ ಆಗಿ ರೂಪಿಸಿ ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುವ ಸಂಕಲ್ಪ ಮಾಡಬೇಕು ಎಂದು ವಿಜಯನಗರದ ಜೆಎಸ್‌ಡಬ್ಲ್ಯು ಸ್ಟೀಲ್‌ನ ಉಪಾಧ್ಯಕ್ಷ ಹಾಗೂ ಹಿರಿಯ ಉದ್ಯಮಿ ಸಂಜಯ್ ಆಲಮೇಲಕರ್ ಕರೆ ನೀಡಿದರು.

ನಗರದ ಎಪಿಎಂಸಿ ಯಾರ್ಡ್‌ನ ಸ್ವಾಮಿ ವಿವೇಕಾನಂದ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಆ.14ರಿಂದ 18ರವರೆಗೆ ನಡೆಯುತ್ತಿರುವ ‘ಗದಗ ಉತ್ಸವ-2026’ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗದಗದ ಸಾಮರ್ಥ್ಯವನ್ನು ಸ್ಥಳೀಯ ಮಾರುಕಟ್ಟೆಗೆ ಸೀಮಿತಗೊಳಿಸಬಾರದು. ‘ಲೋಕಲ್ ಟು ಗ್ಲೋಬಲ್’ ಪರಿಕಲ್ಪನೆಯೊಂದಿಗೆ ಜಿಲ್ಲೆಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಸೃಷ್ಟಿಸಬೇಕು ಎಂದರು.

ಗುಜರಾತ್, ಆಂಧ್ರಪ್ರದೇಶ ಸೇರಿದಂತೆ ಹೊರರಾಜ್ಯಗಳ ಹೂಡಿಕೆದಾರರನ್ನು ಗದಗಕ್ಕೆ ಕರೆತಂದು ಅಗತ್ಯ ಕಚ್ಚಾ ವಸ್ತು, ತಂತ್ರಜ್ಞಾನ ಹಾಗೂ ಸಹಕಾರ ಒದಗಿಸಲು ಸಿದ್ಧವಿರುವುದಾಗಿ ಆಲಮೇಲಕರ್ ತಿಳಿಸಿದರು.

ಜೆಎಸ್‌ಡಬ್ಲ್ಯು ವತಿಯಿಂದ ಸ್ಥಳೀಯ ಉದ್ಯಮಿಗಳಿಗೆ ತಾಂತ್ರಿಕ, ಮೆಟೀರಿಯಲ್ ಹಾಗೂ ಮಾರುಕಟ್ಟೆ ನೆರವು ನೀಡುವ ಸಾಧ್ಯತೆಗಳನ್ನೂ ಅವರು ಪ್ರಸ್ತಾಪಿಸಿದರು.

ದೇಶದ ಜಿಡಿಪಿಗೆ ಶೇ.30 ಹಾಗೂ ರಫ್ತಿಗೆ ಶೇ.45ರಷ್ಟು ಕೊಡುಗೆ ನೀಡುತ್ತಿರುವುದು ಎಂಎಸ್‌ಎಂಇ ವಲಯ. ಕರ್ನಾಟಕದಲ್ಲಿ 26 ಲಕ್ಷಕ್ಕೂ ಅಧಿಕ ಎಂಎಸ್‌ಎಂಇಗಳಿದ್ದು, ಸ್ಥಳೀಯವಾಗಿ ನೋಂದಣಿಯಾಗುವ ಎಂಎಸ್‌ಎಂಇಗಳಿಗೆ ಕಂಪನಿ ವತಿಯಿಂದ ₹45 ಲಕ್ಷದವರೆಗೆ ಆರ್ಥಿಕ ಪ್ರೋತ್ಸಾಹ ನೀಡುವ ಯೋಜನೆ ಜಾರಿಯಲ್ಲಿದೆ ಎಂದರು.

ಒಂದು ಕಾಲದಲ್ಲಿ ಹತ್ತಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದ ಗದಗದಲ್ಲಿ ಹತ್ತಿ ಉದ್ಯಮವನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ. ರೈಲ್ವೆ ಬೋಗಿಗಳ ಬಿಡಿಭಾಗಗಳನ್ನು ಪಶ್ಚಿಮ ಬಂಗಾಳದಿಂದ ತರಿಸುವ ಬದಲು ಗದಗದಲ್ಲೇ ಉತ್ಪಾದಿಸಲು ಅಪಾರ ಅವಕಾಶವಿದೆ. ಈ ಕುರಿತು ನೈಋತ್ಯ ರೈಲ್ವೆ ಮಹಾಪ್ರಬಂಧಕರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ಅಗ್ರಿಟೆಕ್ ಹಬ್‌ಗೆ ಪಂಚಸೂತ್ರ

ಆಲಮೇಲಕರ್ ಸೂಚಿಸಿದ ಪಂಚಸೂತ್ರಗಳಲ್ಲಿ ಅಗ್ರಿಟೆಕ್ ಹಬ್, ಸೀಡ್ ಇನ್ನೋವೇಶನ್ ಸೆಂಟರ್, ಫುಡ್ ಪ್ರೊಸೆಸಿಂಗ್ ಡೆಸ್ಟಿನೇಷನ್, ಸ್ಟೀಲ್-ಇಂಜಿನಿಯರಿಂಗ್ ಕ್ಲಸ್ಟರ್ ಹಾಗೂ ರಫ್ತು ಆಧಾರಿತ ಜಿಲ್ಲೆ ಪ್ರಮುಖವಾಗಿವೆ.

ಯುವಕರು ಉದ್ಯೋಗ ಬೇಡುವವರಾಗದೆ ಉದ್ಯೋಗ ನೀಡುವವರಾಗಬೇಕು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಿ, ಉತ್ಸವದ ಎಲ್ಲ ಮಳಿಗೆಗಳಿಗೆ ಅವರನ್ನು ಕರೆತರಬೇಕು. ಗದಗದಲ್ಲಿ ಸ್ಟಾರ್ಟ್‌ಅಪ್ ಫೆಸಿಲಿಟೇಶನ್ ಸೆಂಟರ್, ಎಂಎಸ್‌ಎಂಇ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಯಾಗಬೇಕು. ಉದ್ಯಮ-ಶಿಕ್ಷಣ ಸಂಸ್ಥೆಗಳ ನಡುವೆ ಕೊಂಡಿ ಬೆಸೆಯಲು ಹಾಗೂ ಉತ್ತರ ಕರ್ನಾಟಕಕ್ಕೆ ಸಿಎಸ್‌ಆರ್ ನಿಧಿ ತರಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.

ಮೈಂಡ್‌ಸೆಟ್ ಕೋಚ್ ಹಾಗೂ ಕಾರ್ಪೊರೇಟ್ ಟ್ರೇನರ್ ಮಹೇಶ ಮಾಶ್ಯಾಳ ಮಾತನಾಡಿ, 2030-32ರ ವೇಳೆಗೆ ತಂತ್ರಜ್ಞಾನದಿಂದ ಜಗತ್ತಿನಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಎಐ ಸೇರಿದಂತೆ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳದ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಎಚ್ಚರಿಸಿದರು. ಆನ್‌ಲೈನ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದು, ಗ್ರಾಹಕರ ಮನಸ್ಥಿತಿಯೂ ಬದಲಾಗಿದೆ ಎಂದರು.

ಜ.ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ, ಗ್ರಾಮೀಣ ಪ್ರದೇಶಗಳಿಂದ ಯುವಕರ ವಲಸೆ ತಡೆಯಲು ಅಲ್ಲಿಯೇ ಉದ್ಯೋಗ ಸೃಷ್ಟಿಸಬೇಕು. ಕೈಗಾರಿಕೆಗಳ ವಿಕೇಂದ್ರೀಕರಣದಿಂದ ಮಾತ್ರ ಹಳ್ಳಿಗಳ ಅಭಿವೃದ್ಧಿ ಸಾಧ್ಯ ಎಂದರು.

ಆಝಾದ್ ಬ್ಯಾಂಕ್ ಅಧ್ಯಕ್ಷ ಸರ್ಫರಾಜ ಉಮಚಗಿ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿದರು. ಉತ್ಸವ ಸಮಿತಿ ಅಧ್ಯಕ್ಷ ಮಧುಸೂಧನ ಪುಣೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಚೇಂಬರ್ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಅಧ್ಯಕ್ಷತೆ ವಹಿಸಿದ್ದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಬಬರ್ಚಿ, ಚೇಂಬರ್ ಪದಾಧಿಕಾರಿಗಳು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕ್ಷಿತಿ ಅಶ್ವಥ್ ಸುಲಾಖೆ ಪ್ರಾರ್ಥಿಸಿದರು. ಶಿವಬಸಯ್ಯ ಗಡ್ಡದಮಠ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಚಂದ್ರು ಬಾಳಿಹಳ್ಳಿಮಠ ಹಾಗೂ ಮುರುಗೇಶ ಬಡ್ನಿ ನಿರೂಪಿಸಿದರು. ಚೇಂಬರ್ ಕಾರ್ಯದರ್ಶಿ ಚನ್ನವೀರಪ್ಪ ಹುಣಶಿಕಟ್ಟಿ ವಂದಿಸಿದರು.

“ಗದಗದ ಸಾಮರ್ಥ್ಯವನ್ನು ಸ್ಥಳೀಯ ಮಾರುಕಟ್ಟೆಗೆ ಸೀಮಿತಗೊಳಿಸಬಾರದು. ‘ಲೋಕಲ್ ಟು ಗ್ಲೋಬಲ್’ ಪರಿಕಲ್ಪನೆಯೊಂದಿಗೆ ಜಿಲ್ಲೆಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಸೃಷ್ಟಿಸಬೇಕು.”
ಸಂಜಯ್ ಆಲಮೇಲಕರ್, ಹಿರಿಯ ಉದ್ಯಮಿ ಹಾಗೂ ಜೆಎಸ್‌ಡಬ್ಲ್ಯು ಸ್ಟೀಲ್ ಉಪಾಧ್ಯಕ್ಷ

ವರ್ಗಾವಣೆ ದಂಧೆಯಾಗಿ ಬದಲಾಗಿದೆ: ಸಚಿವ ಬಸವರಾಜ ರಾಯರೆಡ್ಡಿ

0
ವಿಜಯಸಾಕ್ಷಿ ಸುದ್ದಿ, ಗದಗ: ಕೆಲ ಅಧಿಕಾರಿಗಳು, ಶಾಸಕರು ಹಾಗೂ ಸಚಿವರ ಮೂಲಕ ಆಯಕಟ್ಟಿನ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿರುವುದರಿಂದ ವರ್ಗಾವಣೆ ವ್ಯವಸ್ಥೆಯೇ ದಂಧೆಯಾಗಿ ಮಾರ್ಪಟ್ಟಿದೆ ಎಂದು ಉನ್ನತ ಶಿಕ್ಷಣ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ದಂಧೆಗೆ ಕಡಿವಾಣ ಹಾಕಲು ಕೆಲ ಇಲಾಖೆಗಳಲ್ಲಿ ಈಗಾಗಲೇ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಇಲಾಖೆಗಳಲ್ಲೂ ಕೌನ್ಸೆಲಿಂಗ್‌ ಮೂಲಕವೇ ವರ್ಗಾವಣೆ ಜಾರಿಗೊಳಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಇದರಿಂದ ವರ್ಗಾವಣೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂಬ ನಿರೀಕ್ಷೆಯಿದೆ ಎಂದರು.
ರಾಜ್ಯದಲ್ಲಿ 3,000 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ. ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 180ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವ ಸಾಧ್ಯತೆ ಇದೆ. ಬರ ಪರಿಹಾರ ಹಾಗೂ ಉದ್ಯೋಗ ಭರವಸೆ ಕಾರ್ಯಗಳಿಗೆ ಪ್ರತಿ ಜಿಲ್ಲೆಗೆ ಸುಮಾರು ₹500 ಕೋಟಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ರಾಜ್ಯದಿಂದ ಕೇಂದ್ರ ಸರ್ಕಾರ ಸುಮಾರು ₹4.50 ಲಕ್ಷ ಕೋಟಿ ತೆರಿಗೆ ಪಡೆಯುತ್ತಿದ್ದು, ರಾಜ್ಯಕ್ಕೆ ಕೇವಲ ₹68 ಸಾವಿರ ಕೋಟಿಯಷ್ಟು ಮಾತ್ರ ವಾಪಸ್ ನೀಡುತ್ತಿದೆ. ಬರದಂತಹ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರವು ರಾಜ್ಯಕ್ಕೆ ಅಗತ್ಯ ನೆರವು ನೀಡಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಲ್ಲ ಅಧಿಕಾರವೂ ಇರುವುದಿಲ್ಲ. ಶಾಸಕ ಎಚ್‌.ಕೆ. ಪಾಟೀಲ, ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳ ಸಲಹೆ ಪಡೆದು ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಲು ಈವರೆಗೆ ಕಡಿಮೆ ಸಮಯ ಸಿಕ್ಕಿದೆ. ಆಗಸ್ಟ್‌ 30ರ ನಂತರ ಇಡೀ ದಿನ ಇಲಾಖಾವಾರು ಅಧಿಕಾರಿಗಳ ಸಭೆ ನಡೆಸಿ, ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.