Home Blog Page 2

ಕಾರಿನ ಮೇಲೆ ಭಗತ್ ಸಿಂಗ್ ಫೋಟೋ ಅಂಟಿಸಿ ಗಾಂಜಾ ಸಾಗಾಟ! ಪೊಲೀಸರ ಬಲೆಗೆ ಬಿದ್ದ ಇಬ್ಬರು ಆರೋಪಿಗಳು

0

ಬೆಂಗಳೂರು: ಪೊಲೀಸರ ಕಣ್ಣು ತಪ್ಪಿಸಲು ಕಾರಿನ ಮೇಲೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಫೋಟೋ ಅಂಟಿಸಿಕೊಂಡು ಗಾಂಜಾ ಸಾಗಿಸುತ್ತಿದ್ದ ಜಾಲವನ್ನು ಬೆಂಗಳೂರು ಪೊಲೀಸರು ಪತ್ತೆಹಚ್ಚಿದ್ದಾರೆ. ಒಡಿಶಾದಿಂದ ಕೇರಳಕ್ಕೆ ಸಾಗಿಸಲಾಗುತ್ತಿದ್ದ ಬರೋಬ್ಬರಿ 317 ಕೆಜಿ ಗಾಂಜಾವನ್ನು ಕುಂಬಳಗೋಡು ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಒಡಿಶಾದಿಂದ ಟೊಯೋಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ ಭಾರಿ ಪ್ರಮಾಣದ ಗಾಂಜಾವನ್ನು ಕೇರಳಕ್ಕೆ ಸಾಗಿಸಲಾಗುತ್ತಿತ್ತು. ಮಾರ್ಗಮಧ್ಯೆ ಯಾರಿಗೂ ಅನುಮಾನ ಬಾರದಂತೆ ಹಾಗೂ ಪೊಲೀಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಕಾರಿನ ಮೇಲೆ ಭಗತ್ ಸಿಂಗ್ ಅವರ ಫೋಟೋ ಅಂಟಿಸಿಕೊಂಡಿದ್ದರು ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಕಾರಿನ ಸೀಟ್‌ಗಳ ಒಳಗೆ, ಸೀಟ್‌ಗಳ ಕೆಳಗೆ ಹಾಗೂ ಇತರ ಗುಪ್ತ ಜಾಗಗಳಲ್ಲಿ ಗಾಂಜಾದ ಮೂಟೆಗಳನ್ನು ಅಡಗಿಸಿಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕುಂಬಳಗೋಡು ಪೊಲೀಸರು ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಸಾಗಾಟ ಬಯಲಾಗಿದೆ.

ಆರಂಭದಲ್ಲಿ ಕಾರಿನಲ್ಲಿ ಮೂರ್ನಾಲ್ಕು ಕೆಜಿ ಗಾಂಜಾ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದರು. ಆದರೆ ಕಾರಿನ ಒಳಭಾಗವನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಮೂಟೆಗಟ್ಟಲೆ ಗಾಂಜಾ ಪತ್ತೆಯಾಗಿದೆ. ಒಟ್ಟು 317 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ 1.50 ಕೋಟಿ ರೂಪಾಯಿಯಿಂದ 1.70 ಕೋಟಿ ರೂಪಾಯಿವರೆಗೆ ಇರಬಹುದು ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷ್ಣುಮಣಿ (30) ಹಾಗೂ ಚಾನ್ ಪಾಷಾ (31) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಸಲಾಗಿದ್ದ ಇನೋವಾ ಕ್ರಿಸ್ಟಾ ಕಾರನ್ನೂ ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳನ್ನು ಕುಂಬಳಗೋಡು ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಒಡಿಶಾದಿಂದ ಗಾಂಜಾ ಪೂರೈಕೆ ಮಾಡುತ್ತಿದ್ದವರು ಯಾರು? ಕೇರಳದಲ್ಲಿ ಯಾರಿಗೆ ತಲುಪಿಸಲು ಯೋಜಿಸಲಾಗಿತ್ತು? ಈ ಅಕ್ರಮ ಜಾಲದಲ್ಲಿ ಇನ್ನೂ ಯಾರಿದ್ದಾರೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

 

ರಾಜ್ಯದಲ್ಲಿ ಬರದ ಸಂಕಷ್ಟ, ಸರ್ಕಾರಕ್ಕೆ ಸ್ಟಿಂಗ್ ಆಪರೇಷನ್ ಚಿಂತೆ: ಕಾಂಗ್ರೆಸ್ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ!

0

ಬೆಂಗಳೂರು: ರಾಜ್ಯದಲ್ಲಿ ಬರಗಾಲದಿಂದ ರೈತರು ಹಾಗೂ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿರುವಾಗ ಸರ್ಕಾರ ಸ್ಟಿಂಗ್ ಆಪರೇಷನ್ ವಿವಾದದಲ್ಲಿ ಮುಳುಗಿದೆ ಎಂದು ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರ ಸಮಸ್ಯೆಗಳಿಗೆ ಆದ್ಯತೆ ನೀಡುವ ಬದಲು ರಾಜಕೀಯ ಗೊಂದಲಗಳಿಗೆ ಅವಕಾಶ ನೀಡುತ್ತಿರುವುದು ದುರದೃಷ್ಟಕರ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿಯ ಕುರಿತು ಗಂಭೀರ ಚರ್ಚೆ ನಡೆಯಬೇಕಿತ್ತು. ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ಉದ್ಯೋಗ ಅರಸಿ ಗುಳೆ ಹೋಗುತ್ತಿರುವ ಜನರ ಪರಿಸ್ಥಿತಿಯ ಬಗ್ಗೆ ಸರ್ಕಾರ ಅಧ್ಯಯನ ನಡೆಸಬೇಕಿತ್ತು. ಆದರೆ ಈ ಪ್ರಮುಖ ವಿಚಾರಗಳನ್ನು ಬಿಟ್ಟು ಸ್ಟಿಂಗ್ ಆಪರೇಷನ್ ವಿವಾದಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ತಕ್ಷಣವೇ 5 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. ಅಗತ್ಯ ನೆರವು ಪಡೆಯಲು ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಬೇಕು. ಸಂಕಷ್ಟದಲ್ಲಿರುವ ರೈತರು ಹಾಗೂ ಗ್ರಾಮೀಣ ಜನರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜಕೀಯ ನಾಯಕರನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುವ ಪ್ರಯತ್ನಗಳು ನಡೆಯಬಾರದು. ಇಂತಹ ಬೆಳವಣಿಗೆಗಳು ಜನತಂತ್ರ ವ್ಯವಸ್ಥೆಗೆ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಟಿಂಗ್ ಆಪರೇಷನ್ ವಿವಾದದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ಪಡೆಯುವ ಹಂತಕ್ಕೆ ಪರಿಸ್ಥಿತಿ ತಲುಪಿರುವುದು ಬೇಸರದ ಸಂಗತಿ. ರಾಜಕೀಯ ಭಿನ್ನಾಭಿಪ್ರಾಯಗಳು ಈ ಮಟ್ಟಕ್ಕೆ ಹೋಗಬಾರದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸರ್ಕಾರ ಅನಗತ್ಯ ರಾಜಕೀಯ ಗೊಂದಲಗಳಿಗೆ ಅವಕಾಶ ನೀಡದೆ, ಬರ ಪರಿಹಾರ, ಕುಡಿಯುವ ನೀರು ಹಾಗೂ ಜನಜಾನುವಾರುಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

 

ಸಿದ್ದರಾಮಯ್ಯಗೆ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್: ಕೋರ್ಟ್ ಮೆಟ್ಟಿಲೇರುವ ಸ್ಥಿತಿಗೆ ತಂದಿದ್ದಾರೆ – ಆರ್.ಅಶೋಕ್ ವಾಗ್ದಾಳಿ

0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಬಳಸಿಕೊಂಡು ಕೈಬಿಟ್ಟಿದೆ. ಬೆನ್ನಿಗೆ ಚೂರಿ ಹಾಕಿ, ನ್ಯಾಯಾಲಯದ ಮೆಟ್ಟಿಲೇರುವ ಪರಿಸ್ಥಿತಿಗೆ ತಂದಿದೆ ಎಂದು ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ಅಶೋಕ್, ಸಿದ್ದರಾಮಯ್ಯ ಅವರ ಬಗ್ಗೆ ಬಹಳ ನೋವಿನಿಂದ ಮಾತನಾಡುತ್ತಿದ್ದೇನೆ. ದೇವರಾಜ ಅರಸು ಅವರ ದಾಖಲೆಯನ್ನು ಮುರಿದ ನಾಯಕ ಸಿದ್ದರಾಮಯ್ಯ. ಅನ್ನರಾಮಯ್ಯ ಎಂದು ಗುರುತಿಸಿಕೊಂಡಿರುವ ಅವರನ್ನು ಇಂದು ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆಹೋಗುವ ಸ್ಥಿತಿಗೆ ತಂದಿರುವುದೇ ಕಾಂಗ್ರೆಸ್ ಎಂದು ಟೀಕಿಸಿದ್ದಾರೆ.

ಕೃತಜ್ಞತೆ ಇಲ್ಲದ ಕಾಂಗ್ರೆಸ್, ಕಪಟ ಕಾಂಗ್ರೆಸ್ ಸಿದ್ದರಾಮಯ್ಯ ಅವರಿಗೆ ದ್ರೋಹ ಮಾಡಿದೆ. ಅವರನ್ನು ಯೂಸ್ ಆಂಡ್ ಥ್ರೋ ಮಾಡಲಾಗಿದೆ ಎಂದು ಆರೋಪಿಸಿದ ಅಶೋಕ್, ಸ್ಟಿಂಗ್ ಆಪರೇಷನ್ ಹಾಗೂ ವಿಡಿಯೋಗಳ ವಿಚಾರದಲ್ಲಿ ಕೂಡಲೇ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಜನರ ಸಮಸ್ಯೆಗಳನ್ನು ಬದಿಗಿಟ್ಟು ಸ್ಟಿಂಗ್ ಆಪರೇಷನ್ ಮತ್ತು ಸಿಡಿ ವಿವಾದದಲ್ಲೇ ಮುಳುಗಿದೆ. ಡಿ.ಕೆ.ಶಿವಕುಮಾರ್ ದೆಹಲಿಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ರಾಜ್ಯದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಬದಲು ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಯಾರು ಎಂಬ ಚರ್ಚೆಯಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅಶೋಕ್, 217 ತಾಲ್ಲೂಕುಗಳಲ್ಲಿ ಬರಗಾಲ ಉಂಟಾಗಿದ್ದು, ಸುಮಾರು ₹46 ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳಿದ್ದಾರೆ. ಇಷ್ಟೊಂದು ನಷ್ಟ ಸಂಭವಿಸಿದ್ದರೂ ಸರ್ಕಾರ ಕೇವಲ ₹1,200 ಕೋಟಿ ನೆರವು ನೀಡಿದೆ ಎಂದು ಆರೋಪಿಸಿದ್ದಾರೆ.

ರೈತರಿಗೆ ₹2,500 ಪರಿಹಾರ ನೀಡುತ್ತಿರುವುದನ್ನೂ ಪ್ರಶ್ನಿಸಿದ ಅವರು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ವಿಫಲವಾಗಿದೆ. ಬರ ಪರಿಸ್ಥಿತಿಯ ನಡುವೆಯೂ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ವಿಶೇಷ ಅಧಿವೇಶನ ನಡೆಸಿದರೂ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ಟೀಕಿಸಿದ್ದಾರೆ. ಬರ ಪರಿಸ್ಥಿತಿ ಹಾಗೂ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ವಿವಿಧೆಡೆ ರೈತರಿಗೆ ಸಾಲ ಮರುಪಾವತಿ ನೋಟಿಸ್‌ಗಳು ಬರುತ್ತಿವೆ. ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮಂಡ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಅಶೋಕ್, ಹೈನುಗಾರರಿಗೆ ವಿಶೇಷ ನೆರವು ನೀಡುವ ಭರವಸೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ. ಕೆಎಂಎಫ್ ಲಾಭದಲ್ಲಿದ್ದರೆ ಹಾಲಿನ ದರ ಏರಿಕೆ ಮಾಡಿರುವುದೇಕೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರೈತರ ಹೆಸರಿನಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ. ರಾಜ್ಯ ಸರ್ಕಾರದ ಆದ್ಯತೆ ಜನರ ಸಮಸ್ಯೆಗಳಿಗಿಂತ ರಿಯಲ್ ಎಸ್ಟೇಟ್ ವ್ಯವಹಾರಗಳತ್ತ ಇದೆ ಎಂದು ಅಶೋಕ್ ಆರೋಪಿಸಿದ್ದಾರೆ.

ಸಚಿವ ಸಂಪುಟ ಸಭೆಗಳಲ್ಲಿಯೂ ಸ್ಟಿಂಗ್ ಆಪರೇಷನ್ ವಿಚಾರವೇ ಚರ್ಚೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂತಹ ವಿಷಯಗಳನ್ನು ಸಚಿವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಬಹುದಿತ್ತು. ಆದರೆ ಕ್ಯಾಬಿನೆಟ್‌ನ ಗೌರವವನ್ನೇ ಹಾಳು ಮಾಡಲಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

 

ಸೆಹ್ವಾಗ್ ಪುತ್ರನ ತಂಡದ ವಿರುದ್ಧ ದ್ರಾವಿಡ್ ಮಗನ ಸಿಡಿಲಬ್ಬರ! 41 ಎಸೆತಗಳಲ್ಲಿ ಅಜೇಯ 85 ರನ್, ಕರ್ನಾಟಕಕ್ಕೆ ಭರ್ಜರಿ ಜಯ

0

ವಿಶಾಖಪಟ್ಟಣ: ವಿನೂ ಮಂಕಡ್ ಟ್ರೋಫಿ ಅಂಡರ್-19 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡದ ನಾಯಕ ಅನ್ವಯ್ ದ್ರಾವಿಡ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ದೆಹಲಿ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 41 ಎಸೆತಗಳಲ್ಲಿ ಅಜೇಯ 85 ರನ್ ಸಿಡಿಸಿದ ಅನ್ವಯ್, ಕರ್ನಾಟಕ ತಂಡದ 198 ರನ್‌ಗಳ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವಿಶಾಖಪಟ್ಟಣದ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಹಾಗೂ ದೆಹಲಿ ತಂಡಗಳು ಮುಖಾಮುಖಿಯಾಗಿದ್ದವು. ವಿಶೇಷವೆಂದರೆ, ಕರ್ನಾಟಕ ತಂಡವನ್ನು ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಮುನ್ನಡೆಸಿದರೆ, ದೆಹಲಿ ತಂಡಕ್ಕೆ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ನಾಯಕತ್ವ ವಹಿಸಿದ್ದರು.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕ ಬ್ಯಾಟರ್‌ಗಳಾದ ರೋಹಿತ್ ರೆಡ್ಡಿ 70 ರನ್ ಹಾಗೂ ನಿತೀಶ್ ಆರ್ಯ 111 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಬಳಿಕ ಕ್ರೀಸ್‌ಗೆ ಬಂದ ಧ್ರುವ್ ಕಿಶನ್ 103 ರನ್‌ಗಳ ಶತಕ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ನಾಯಕ ಅನ್ವಯ್ ದ್ರಾವಿಡ್ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಕೇವಲ 41 ಎಸೆತಗಳನ್ನು ಎದುರಿಸಿದ ಅವರು 5 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ ಅಜೇಯ 85 ರನ್ ಗಳಿಸಿದರು. ಇವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ನಿಗದಿತ 49 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 418 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.

419 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ದೆಹಲಿ ತಂಡ ಕರ್ನಾಟಕದ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿತು. ದೆಹಲಿ ನಾಯಕ ಆರ್ಯವೀರ್ ಸೆಹ್ವಾಗ್ 32 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಉಳಿದ ಬ್ಯಾಟರ್‌ಗಳಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಪರಿಣಾಮ ದೆಹಲಿ ತಂಡ 41.1 ಓವರ್‌ಗಳಲ್ಲಿ 220 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಕರ್ನಾಟಕ 198 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.

ಇತ್ತೀಚೆಗೆ ಭಾರತದ ಅಂಡರ್-19 ತಂಡಕ್ಕೆ ಪದಾರ್ಪಣೆ ಮಾಡಿರುವ ಅನ್ವಯ್ ದ್ರಾವಿಡ್ ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದಾರೆ. ಇದಕ್ಕೂ ಮೊದಲು ಚಂಡೀಗಢ ವಿರುದ್ಧ ಕೇವಲ 62 ಎಸೆತಗಳಲ್ಲಿ 104 ರನ್‌ಗಳ ಶತಕ ಬಾರಿಸಿ ಗಮನ ಸೆಳೆದಿದ್ದರು.

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಅನ್ವಯ್ ದ್ರಾವಿಡ್ ಹಾಗೂ ಆರ್ಯವೀರ್ ಸೆಹ್ವಾಗ್ ಮುಂಬರುವ ಅಂಡರ್-19 ಏಷ್ಯಾ ಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

 

ದರ್ಶನ್ ಕೇಸ್ʼನಲ್ಲಿ ಸಾಕ್ಷಿ ಹೇಳುವಾಗ ತಡಬಡಿಸಿದ ನಟ ಚಿಕ್ಕಣ್ಣ! ಸ್ಟೋನಿಬ್ರೂಕ್ ಪಾರ್ಟಿ ಬಗ್ಗೆ ಯಶಸ್ ಸೂರ್ಯ ಹೇಳಿದ್ದೇನು?

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರಿನ ಸಿಸಿಎಚ್ ನ್ಯಾಯಾಲಯದಲ್ಲಿ ಮುಂದುವರಿದಿದ್ದು, ಪ್ರಮುಖ ಸಾಕ್ಷಿಗಳಾದ ನಟ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನೀಡಿದ್ದಾರೆ. ಘಟನೆ ನಡೆದ ದಿನ ನಟ ದರ್ಶನ್ ಹಾಗೂ ಅವರ ಸ್ನೇಹಿತರೊಂದಿಗೆ ಸ್ಟೋನಿಬ್ರೂಕ್ ರೆಸ್ಟೋರೆಂಟ್‌ನಲ್ಲಿ ಇದ್ದ ಹಿನ್ನೆಲೆಯಲ್ಲಿ ಇಬ್ಬರನ್ನೂ ಪ್ರಕರಣದ ಪ್ರಮುಖ ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ.

ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡುವ ವೇಳೆ ನಟ ಚಿಕ್ಕಣ್ಣ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ನ್ಯಾಯಾಧೀಶರ ಪ್ರಶ್ನೆಗಳಿಗೆ ಉತ್ತರಿಸುವಾಗ ತಡಬಡಿಸಿದ ಅವರು, ಟೆನ್ಷನ್ ಆಗುತ್ತಿದ್ದು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನು ಗಮನಿಸಿದ ನ್ಯಾಯಾಲಯ ಚಿಕ್ಕಣ್ಣ ಅವರಿಗೆ ಕೆಲಕಾಲ ವಿಶ್ರಾಂತಿ ಪಡೆಯಲು ಸೂಚಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಟ ದರ್ಶನ್ ಹಾಗೂ ಪವಿತ್ರಾ ಗೌಡ ವಿಚಾರಣೆಗೆ ಹಾಜರಾಗಿದ್ದ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.

ಚಿಕ್ಕಣ್ಣ ಅವರ ಸಾಕ್ಷ್ಯ ವಿಚಾರಣೆಯ ಬಳಿಕ ನಟ ಯಶಸ್ ಸೂರ್ಯ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ. ದರ್ಶನ್ ಅವರೊಂದಿಗೆ ಹಲವು ವರ್ಷಗಳಿಂದ ಪರಿಚಯವಿದ್ದು, 2010ರಲ್ಲಿ ಬಿಡುಗಡೆಯಾದ ‘ಚಿಂಗಾರಿ’ ಸಿನಿಮಾ ಸೇರಿದಂತೆ ‘ಕುರುಕ್ಷೇತ್ರ’, ‘ಚಕ್ರವರ್ತಿ’, ‘ಒಡೆಯ’ ಹಾಗೂ ‘ಗರಡಿ’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವುದಾಗಿ ತಿಳಿಸಿದ್ದಾರೆ.

ಘಟನೆ ನಡೆದ ದಿನ ಸ್ಟೋನಿಬ್ರೂಕ್ ರೆಸ್ಟೋರೆಂಟ್‌ಗೆ ಊಟಕ್ಕೆ ತೆರಳಿದ್ದಾಗಿ ಯಶಸ್ ಸೂರ್ಯ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಅಲ್ಲಿ ದರ್ಶನ್ ಹಾಗೂ ಇತರರೊಂದಿಗೆ ಊಟ ಮಾಡಿದ್ದು, ಆ ಸಂದರ್ಭದಲ್ಲಿ ಸಿನಿಮಾ ವಿಚಾರಗಳ ಬಗ್ಗೆ ಮಾತ್ರ ಚರ್ಚೆ ನಡೆಸಿದ್ದಾಗಿ ಹೇಳಿದ್ದಾರೆ.

ರೆಸ್ಟೋರೆಂಟ್‌ನಲ್ಲಿ ಊಟ ಮುಗಿದ ಬಳಿಕ ತಾವು ಅಲ್ಲಿಂದ ಹೊರಟು ಹೋಗಿದ್ದಾಗಿ ಯಶಸ್ ಸೂರ್ಯ ಸ್ಪಷ್ಟಪಡಿಸಿದ್ದಾರೆ. ಊಟದ ಸಂದರ್ಭದಲ್ಲಿ ಸಿನಿಮಾ ಸಂಬಂಧಿತ ವಿಚಾರಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಸಾಕ್ಷ್ಯ ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳ ವಿರುದ್ಧ ವಿಚಾರಣೆ ಮುಂದುವರಿದಿದ್ದು, ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿಕೊಳ್ಳುತ್ತಿದೆ.

 

ಸ್ಟಿಂಗ್ ಆಪರೇಷನ್ ವಿಷವೃಕ್ಷ ಬೆಳೆಸಿದ್ದೇ ಡಿಕೆ ಶಿವಕುಮಾರ್! ಸಿದ್ದು ಸ್ಟೇ, ಜಾರಕಿಹೊಳಿ ಸಿಡಿ ಪ್ರಸ್ತಾಪಿಸಿ ಕುಮಾರಸ್ವಾಮಿ ವಾಗ್ದಾಳಿ!

0

ಬೆಂಗಳೂರು: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಹಾಗೂ ಸಿಡಿ ವಿವಾದ ತೀವ್ರ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ವಿರುದ್ಧ ಗೂಢಚಾರಿಕೆ ಮತ್ತು ಫೋನ್ ಟ್ಯಾಪಿಂಗ್ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಸಚಿವರು, ವಿರೋಧ ಪಕ್ಷದ ನಾಯಕರು ಹಾಗೂ ತಮ್ಮ ಸಿಬ್ಬಂದಿಯ ದೂರವಾಣಿಗಳ ಮೇಲೂ ನಿಗಾ ಇಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಹಾಗೂ ಕಬ್ಬು ಬೆಳೆಗಾರರ ಸಂಕಷ್ಟಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಸ್ಟಿಂಗ್ ಆಪರೇಷನ್ ಮತ್ತು ಸಿಡಿ ವಿಚಾರಗಳೇ ಮುನ್ನೆಲೆಗೆ ಬಂದಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪ ಮಾಡಿದ ಅವರು, ಸದಾಶಿವನಗರದ ಮನೆಯೊಂದರಲ್ಲಿ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು ಅತ್ಯಾಧುನಿಕ ಉಪಕರಣಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಚಿವರು ಹಾಗೂ ವಿರೋಧ ಪಕ್ಷದ ನಾಯಕರ ಫೋನ್‌ಗಳನ್ನು ಟ್ಯಾಪ್ ಮಾಡಲಾಗುತ್ತಿದೆ. ತಮ್ಮ ಸಿಬ್ಬಂದಿಯ ದೂರವಾಣಿಗಳ ಮೇಲೂ ನಿಗಾ ಇಡಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಎಂಬ ವಿಷವೃಕ್ಷಕ್ಕೆ ನೀರೆರೆದು ಬೆಳೆಸಿದ್ದೇ ಡಿ.ಕೆ. ಶಿವಕುಮಾರ್. ಅವರು ಬೆಳೆಸಿದ ಸಸಿ ಈಗ ಹೆಮ್ಮರವಾಗಿದೆ. ಅದರ ಪರಿಣಾಮವನ್ನು ಈಗ ಅವರೇ ಎದುರಿಸುವಂತಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಇದೇ ವೇಳೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ವಿಚಾರವನ್ನು ಪ್ರಸ್ತಾಪಿಸಿದ ಅವರು, ಸಿದ್ದರಾಮಯ್ಯ ಕೂಡ ಸ್ಟಿಂಗ್ ಆಪರೇಷನ್ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಹಾಸನ ಹಾಗೂ ಮಂಡ್ಯ ಲೋಕಸಭಾ ಚುನಾವಣೆ ವೇಳೆ ನಡೆದ ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ಬಗ್ಗೆಯೂ ಕುಮಾರಸ್ವಾಮಿ ಆರೋಪ ಮಾಡಿದರು. ಚುನಾವಣೆಗೆ ಎರಡು ದಿನಗಳ ಮೊದಲು ಸದಾಶಿವನಗರದ ಮನೆಯೊಂದರಲ್ಲಿ ಪೆನ್‌ಡ್ರೈವ್‌ಗಳನ್ನು ಸಿದ್ಧಪಡಿಸಿ ಹಂಚಲಾಗಿತ್ತು. ದೇವರಾಜೇಗೌಡ ಹಾಗೂ ಶಿವರಾಮೇಗೌಡ ಅವರ ಸಂಭಾಷಣೆಯಲ್ಲಿ ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಉದ್ದೇಶದ ಮಾತುಗಳಿದ್ದವು ಎಂದು ಆರೋಪಿಸಿದರು.

ಪೆನ್‌ಡ್ರೈವ್ ಪ್ರಕರಣದ ವೇಳೆ ತಮ್ಮ ಕುಟುಂಬದ ಮಹಿಳೆಯರನ್ನೂ ಗುರಿಯಾಗಿಸಿ ಸರಣಿ ವರದಿಗಳನ್ನು ಮಾಡಲಾಗಿತ್ತು. ಆದರೂ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯದೆ ಕಾನೂನು ಹೋರಾಟ ನಡೆಸಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸಿಡಿ, ಸ್ಟಿಂಗ್ ಆಪರೇಷನ್ʼಗೆ ರಾಜ್ಯದಲ್ಲಿ ಒಂದೇ ಫ್ಯಾಕ್ಟರಿ: ಸಿದ್ದರಾಮಯ್ಯ ಪ್ರಕರಣದಲ್ಲಿ ಕೆ.ಎನ್. ರಾಜಣ್ಣ ಸ್ಫೋಟಕ ಆರೋಪ!

0

ಬೆಂಗಳೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ವಿವಾದಕ್ಕೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ರಾಜ್ಯದಲ್ಲಿ ಸಿಡಿ ಹಾಗೂ ಸ್ಟಿಂಗ್ ಆಪರೇಷನ್‌ಗಳಿಗೆ ಒಂದೇ ಫ್ಯಾಕ್ಟರಿ ಇದೆ. ಆದರೆ ಅದರ ಪಾಲುದಾರರು ಮಾತ್ರ ಬೇರೆ ಬೇರೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಆರೋಪದ ಕುರಿತು ಪ್ರತಿಕ್ರಿಯಿಸಿದ ರಾಜಣ್ಣ, ರಾಜ್ಯದಲ್ಲಿ ಇಂತಹ ಕೃತ್ಯಗಳ ಹಿಂದೆ ಒಂದೇ ಗುಂಪು ಕಾರ್ಯನಿರ್ವಹಿಸುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಸಿಡಿ ಹಾಗೂ ಸ್ಟಿಂಗ್ ಆಪರೇಷನ್‌ಗಳ ಮೂಲಕ ರಾಜಕೀಯ ನಾಯಕರನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿರುವ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಸ್ಟಿಂಗ್ ನಡೆದಿರುವ ಕಾರಣಕ್ಕಾಗಿಯೇ ಸಿಎಂ ತಡೆಯಾಜ್ಞೆ ಪಡೆದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದೆ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಲು ಸ್ಟಿಂಗ್ ಆಪರೇಷನ್ ಬಳಸಲಾಗಿತ್ತೇ ಎಂಬ ಅನುಮಾನವನ್ನೂ ರಾಜಣ್ಣ ವ್ಯಕ್ತಪಡಿಸಿದ್ದಾರೆ. ಅಂತಹ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಹೊಸ ಪ್ರಶ್ನೆ ಎತ್ತಿದ್ದಾರೆ. ಆದರೆ ಈ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ದೃಢವಾದ ಸಾಕ್ಷ್ಯವನ್ನು ಅವರು ಬಹಿರಂಗಪಡಿಸಿರುವ ಮಾಹಿತಿ ಲಭ್ಯವಾಗಿಲ್ಲ.

ತಮ್ಮ ಮೇಲೂ ಹಿಂದೆ ಸ್ಟಿಂಗ್ ಆಪರೇಷನ್ ನಡೆಸಲು ಪ್ರಯತ್ನ ನಡೆದಿತ್ತು ಎಂದು ರಾಜಣ್ಣ ಹೇಳಿಕೊಂಡಿದ್ದಾರೆ. ಸರ್ಕಾರಿ ನಿವಾಸದಲ್ಲಿ ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾಗಳು ಇರುತ್ತವೆ ಎಂದು ಭಾವಿಸಿದ್ದೆ. ಆದರೆ ನಂತರ ಅಲ್ಲಿ ಸಿಸಿಟಿವಿ ಇಲ್ಲದಿರುವುದು ಗೊತ್ತಾಯಿತು ಎಂದು ತಿಳಿಸಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನು ಪ್ರಸ್ತಾಪಿಸಿದ ರಾಜಣ್ಣ, ಆ ಪ್ರಕರಣದ ಹಿಂದೆ ಇದ್ದವರೇ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆರೋಪದ ಹಿಂದೆಯೂ ಇದ್ದಾರೆ ಎಂದು ಆರೋಪಿಸಿದ್ದಾರೆ. ಇಂತಹ ಬೆಳವಣಿಗೆಗಳಿಂದ ಕರ್ನಾಟಕದ ಗೌರವಕ್ಕೆ ಧಕ್ಕೆಯಾಗುತ್ತಿದೆ. ರಾಜಕೀಯ ನಾಯಕರ ವಿರುದ್ಧ ಬ್ಲ್ಯಾಕ್‌ಮೇಲ್ ತಂತ್ರಗಳನ್ನು ಬಳಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳ ಬಳಿ ತನಿಖಾ ಸಂಸ್ಥೆಗಳಿವೆ. ಹೀಗಿರುವಾಗ ತನಿಖೆಗೆ ಆದೇಶಿಸಿ, ಜನರಲ್ಲಿರುವ ಗೊಂದಲವನ್ನು ದೂರ ಮಾಡಬೇಕು ಎಂದು ರಾಜಣ್ಣ ಒತ್ತಾಯಿಸಿದ್ದಾರೆ. ಸಿಎಂ ಅಸಹಾಯಕರಂತೆ ಮಾತನಾಡುವ ಬದಲು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು. ಆಗ ಮಾತ್ರ ಇಂತಹ ಸ್ಟಿಂಗ್ ಆಪರೇಷನ್ ವಿವಾದಗಳಿಗೆ ತೆರೆ ಬೀಳಲಿದೆ ಎಂದು ಹೇಳಿದ್ದಾರೆ.

 

ದಸರಾ ಸಂಭ್ರಮಕ್ಕೆ ರಾಯಲ್ ಟಚ್! ಅರಮನೆ ಆವರಣದಲ್ಲಿ 35ಕ್ಕೂ ಹೆಚ್ಚು ಅಪರೂಪದ ಐಷಾರಾಮಿ ಕಾರುಗಳ ಪ್ರದರ್ಶನ

0

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದಲ್ಲಿ ಈ ಬಾರಿ ರಾಜರ ಕಾಲದ ವೈಭವ ಮರುಕಳಿಸಿದೆ. ಒಂದು ಕಾಲದಲ್ಲಿ ಮಹಾರಾಜರು ಹಾಗೂ ಶ್ರೀಮಂತರ ಪ್ರತಿಷ್ಠೆಯ ಸಂಕೇತವಾಗಿದ್ದ ಐಷಾರಾಮಿ ಕಾರುಗಳು ಮೈಸೂರು ಅರಮನೆ ಮುಂದೆ ಸಾಲುಗಟ್ಟಿ ನಿಂತಿದ್ದು, ಪ್ರವಾಸಿಗರ ಗಮನ ಸೆಳೆಯುತ್ತಿವೆ.

ಮೈಸೂರು ದಸರಾ 2026ರ ಅಂಗವಾಗಿ ಕರ್ನಾಟಕ ವಿಂಟೇಜ್ ಅಂಡ್ ಕ್ಲಾಸಿಕ್ ಕಾರ್ ಕ್ಲಬ್ ವತಿಯಿಂದ ಅರಮನೆ ಮುಂಭಾಗ ಅಪರೂಪದ ವಿಂಟೇಜ್ ಕಾರುಗಳ ಪ್ರದರ್ಶನ ಆಯೋಜಿಸಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿರುವ ಸುಮಾರು 100 ವರ್ಷಗಳಷ್ಟು ಹಳೆಯದಾದ ಕ್ಲಾಸಿಕ್ ವಾಹನಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ.

ಅರಮನೆ ಮುಂದೆ ರಾಜರ ಕಾಲದ ಕಾರುಗಳ ದರ್ಬಾರ್!

ಒಂದು ಕಾಲದಲ್ಲಿ ರಾಜಮನೆತನದವರು ಹಾಗೂ ಆಗರ್ಭ ಶ್ರೀಮಂತರು ಬಳಸುತ್ತಿದ್ದ ಐಷಾರಾಮಿ ವಾಹನಗಳನ್ನು ನೋಡುವ ಅವಕಾಶ ಪ್ರವಾಸಿಗರಿಗೆ ದೊರೆತಿದೆ. ಹಳೆಯ ಕಾಲದ ವಿನ್ಯಾಸ, ವಿಶಿಷ್ಟ ಆಕಾರ ಹಾಗೂ ಆಕರ್ಷಕ ನೋಟ ಹೊಂದಿರುವ ಕಾರುಗಳನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

35ಕ್ಕೂ ಹೆಚ್ಚು ಅಪರೂಪದ ವಿಂಟೇಜ್ ವಾಹನಗಳ ಪ್ರದರ್ಶನ!

ಪ್ರದರ್ಶನದಲ್ಲಿ ಮರ್ಸಿಡಿಸ್ ಬೆಂಜ್ ಡಬ್ಲ್ಯು123, ವಿಲ್ಲೀಸ್ ಜೀಪ್, ಸ್ಟೂಡೆಬೇಕರ್, ವೋಕ್ಸ್‌ವ್ಯಾಗನ್ ಮೈಕ್ರೋಬಸ್, ಮೋರಿಸ್ ಹಾಗೂ ಪ್ಲೈಮೌತ್ ಸೇರಿದಂತೆ ವಿವಿಧ ಮಾದರಿಯ 35ಕ್ಕೂ ಹೆಚ್ಚು ಹಳೆಯ ವಾಹನಗಳನ್ನು ಪ್ರದರ್ಶಿಸಲಾಗಿದೆ.

ಪ್ರತಿಯೊಂದು ಕಾರು ತನ್ನದೇ ಆದ ಇತಿಹಾಸ ಹಾಗೂ ವಿಶಿಷ್ಟ ವಿನ್ಯಾಸವನ್ನು ಹೊಂದಿದ್ದು, ವಾಹನಪ್ರಿಯರು ಮತ್ತು ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಮೈಸೂರು ರಸ್ತೆಗಳಲ್ಲೂ ವಿಂಟೇಜ್ ಕಾರುಗಳ ಸವಾರಿ!

ಅರಮನೆ ಆವರಣದಲ್ಲಿ ಪ್ರದರ್ಶನಗೊಂಡಿರುವ ಈ ಅಪರೂಪದ ವಾಹನಗಳು ಬುಧವಾರ ಮೈಸೂರಿನ ವಿವಿಧ ರಸ್ತೆಗಳಲ್ಲಿ ಸಂಚರಿಸಲಿವೆ. ಇದರಿಂದ ನಗರದ ಜನತೆಗೆ ಹಳೆಯ ಕಾಲದ ಕಾರುಗಳ ಸಂಚಾರವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.

ಒಟ್ಟಿನಲ್ಲಿ ಮೈಸೂರು ದಸರಾ ಸಂಭ್ರಮಕ್ಕೆ ವಿಂಟೇಜ್ ಕಾರುಗಳ ಪ್ರದರ್ಶನ ಮತ್ತಷ್ಟು ಮೆರುಗು ನೀಡಿದ್ದು, ರಾಜರ ಕಾಲದ ವಾಹನ ವೈಭವ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

 

21ನೇ ಶತಮಾನದಲ್ಲಿ ತಂತ್ರಜ್ಞಾನವೇ ನಿಜವಾದ ಶಕ್ತಿ: ಬ್ಲೂಮ್ ಬರ್ಗ್ ಫೋರಂನಲ್ಲಿ ಭಾರತದ ಡಿಜಿಟಲ್ ಕ್ರಾಂತಿ ವಿವರಿಸಿದ ಮೋದಿ!

0

ನವದೆಹಲಿ: 21ನೇ ಶತಮಾನದಲ್ಲಿ ಶಕ್ತಿಯ ಅರ್ಥವೇ ಬದಲಾಗುತ್ತಿದೆ. ಇಂದು ತಂತ್ರಜ್ಞಾನ, ದತ್ತಾಂಶ, ಜ್ಞಾನ ಮತ್ತು ನಾವೀನ್ಯತೆಯೇ ಜಗತ್ತಿನ ಹೊಸ ಶಕ್ತಿಗಳಾಗಿವೆ. ಆದರೆ ಶಕ್ತಿ ಎಂದರೆ ಕೇವಲ ತಾವು ಮುಂದೆ ಸಾಗುವುದಲ್ಲ, ಇತರರನ್ನೂ ಮುಂದೆ ಕೊಂಡೊಯ್ಯುವ ಸಾಮರ್ಥ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಬ್ಲೂಮ್‌ಬರ್ಗ್ ನ್ಯೂ ಎಕಾನಮಿ ಫೋರಂ 2026ರಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಕೆಲವರಿಗೆ ಮಾತ್ರ ಸೀಮಿತವಾಗದೆ ಕೋಟ್ಯಂತರ ಜನರ ಸಬಲೀಕರಣಕ್ಕೆ ನೆರವಾಗಬೇಕು ಎಂದು ಪ್ರತಿಪಾದಿಸಿದರು.

ಶಕ್ತಿ ಯಾರ ಕೈಯಲ್ಲಿದೆ ಎನ್ನುವುದಕ್ಕಿಂತ ಬಳಕೆ ಹೇಗಿದೆ ಎಂಬುದೇ ಮುಖ್ಯ!

ಈ ಬಾರಿಯ ಫೋರಂನಲ್ಲಿ ‘ಉದಯೋನ್ಮುಖ ಶಕ್ತಿಗಳು’ ಎಂಬ ವಿಷಯಕ್ಕೆ ಆದ್ಯತೆ ನೀಡಲಾಗಿದೆ. ಈ ಕುರಿತು ಮಾತನಾಡಿದ ಮೋದಿ, ಜಗತ್ತು ದೊಡ್ಡ ಬದಲಾವಣೆಯ ಹಂತದಲ್ಲಿದೆ. ತಂತ್ರಜ್ಞಾನ ಮತ್ತು ನಾವೀನ್ಯತೆ ಅಭಿವೃದ್ಧಿಯ ಪ್ರಮುಖ ಸಾಧನಗಳಾಗಿವೆ. ಆದರೆ ಅವುಗಳ ಪ್ರಯೋಜನ ಸಮಾಜದ ಎಲ್ಲ ವರ್ಗಗಳಿಗೂ ತಲುಪಬೇಕು ಎಂದು ಹೇಳಿದರು.

ಶಕ್ತಿಯನ್ನು ಯಾರು ಹೊಂದಿದ್ದಾರೆ ಎನ್ನುವುದಕ್ಕಿಂತ ಅದನ್ನು ಹೇಗೆ ಬಳಸುತ್ತಾರೆ ಎಂಬುದೇ ಮುಖ್ಯ. ಇತರರನ್ನು ಸಬಲರನ್ನಾಗಿಸುವ ಶಕ್ತಿಯೇ ನಿಜವಾದ ಶಕ್ತಿ ಎಂಬುದು ಭಾರತದ ಚಿಂತನೆಯಾಗಿದೆ ಎಂದು ವಿವರಿಸಿದರು.

ಭಾರತದ ಡಿಜಿಟಲ್ ಶಕ್ತಿ ಬಗ್ಗೆ ಮೋದಿ ಮಾತು!

ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಬಣ್ಣಿಸಿದ ಪ್ರಧಾನಿ, ದೇಶದಲ್ಲಿ ವಿವಿಧ ಭಾಷೆ, ಸಂಸ್ಕೃತಿ ಮತ್ತು ಅಭಿಪ್ರಾಯಗಳಿಗೆ ಅವಕಾಶವಿದೆ ಎಂದರು. ಭಾರತದಲ್ಲಿ ನೂರಾರು ಭಾಷೆಗಳು, ಸುಮಾರು 80 ಸಾವಿರ ನೋಂದಾಯಿತ ಪತ್ರಿಕೆಗಳು ಹಾಗೂ ಮುದ್ರಣ ಸಂಸ್ಥೆಗಳಿವೆ. ಸುಮಾರು 50 ಕೋಟಿ ಯೂಟ್ಯೂಬ್ ಬಳಕೆದಾರರು ಮತ್ತು 50 ಕೋಟಿಗೂ ಅಧಿಕ ಇನ್‌ಸ್ಟಾಗ್ರಾಮ್ ಬಳಕೆದಾರರಿದ್ದಾರೆ ಎಂಬ ಅಂಕಿಅಂಶಗಳನ್ನು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಡಿಜಿಟಲ್ ತಂತ್ರಜ್ಞಾನದಿಂದ ಜನರು ಪರಸ್ಪರ ಸಂಪರ್ಕ ಸಾಧಿಸಲು, ಅಭಿಪ್ರಾಯ ಹಂಚಿಕೊಳ್ಳಲು ಹಾಗೂ ಸಾರ್ವಜನಿಕ ವಿಚಾರಗಳಲ್ಲಿ ಭಾಗವಹಿಸಲು ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಿವೆ ಎಂದು ಹೇಳಿದರು.

ಜಗತ್ತಿನ ಅಭಿವೃದ್ಧಿಗೆ ಭಾರತದ ಕೊಡುಗೆ!

ಅಂತಾರಾಷ್ಟ್ರೀಯ ಸೌರ ಒಕ್ಕೂಟ, ಇಂಟರ್‌ನ್ಯಾಷನಲ್ ಬಿಗ್ ಕ್ಯಾಟ್ ಅಲಯನ್ಸ್, ಜಾಗತಿಕ ಜೈವಿಕ ಇಂಧನ ಒಕ್ಕೂಟ, ಮಿಷನ್ ಲೈಫ್ ಹಾಗೂ ಭಾರತ–ಮಧ್ಯಪ್ರಾಚ್ಯ–ಯುರೋಪ್ ಆರ್ಥಿಕ ಕಾರಿಡಾರ್‌ನಂತಹ ಉಪಕ್ರಮಗಳನ್ನು ಮೋದಿ ಪ್ರಸ್ತಾಪಿಸಿದರು.

‘ಒಂದು ಸೂರ್ಯ, ಒಂದು ವಿಶ್ವ, ಒಂದು ಗ್ರಿಡ್’ ಎಂಬ ಆಶಯದ ಮೂಲಕ ಜಾಗತಿಕ ಇಂಧನ ಸಂಪರ್ಕವನ್ನು ಬಲಪಡಿಸುವುದು ಭಾರತದ ಉದ್ದೇಶವಾಗಿದೆ. ವಿಶ್ವವನ್ನು ಸಂಪರ್ಕಿಸುವುದರ ಜೊತೆಗೆ ಇತರ ರಾಷ್ಟ್ರಗಳ ಸಬಲೀಕರಣಕ್ಕೂ ಭಾರತ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.

ಜನ್‌ಧನ್‌ನಿಂದ ಜಿಎಸ್‌ಟಿವರೆಗೆ ಭಾರತದ ಸುಧಾರಣೆಗಳ ಪ್ರಸ್ತಾಪ!

ಭಾರತದಲ್ಲಿ ಜಾರಿಗೆ ತಂದಿರುವ ಜನ್‌ಧನ್–ಆಧಾರ್–ಮೊಬೈಲ್ (JAM) ವ್ಯವಸ್ಥೆ, ಸರಕು ಮತ್ತು ಸೇವಾ ತೆರಿಗೆ (GST) ಹಾಗೂ ದಿವಾಳಿತನ ಪರಿಹಾರ ವ್ಯವಸ್ಥೆಯಂತಹ ಸುಧಾರಣೆಗಳನ್ನೂ ಮೋದಿ ವಿವರಿಸಿದರು.

ಈ ಕ್ರಮಗಳು ಆಡಳಿತ ವ್ಯವಸ್ಥೆಯನ್ನು ಸುಧಾರಿಸುವುದು, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಹಾಗೂ ಜನರಿಗೆ ವಿವಿಧ ಸೇವೆಗಳನ್ನು ತಲುಪಿಸುವ ಉದ್ದೇಶ ಹೊಂದಿವೆ ಎಂದು ಹೇಳಿದರು.

ದೆಹಲಿಯಲ್ಲಿ ಮೂರು ದಿನಗಳ ಜಾಗತಿಕ ಆರ್ಥಿಕ ಸಮಾವೇಶ!

ಅಕ್ಟೋಬರ್ 13ರಿಂದ 15ರವರೆಗೆ ದೆಹಲಿಯಲ್ಲಿ ಬ್ಲೂಮ್‌ಬರ್ಗ್ ನ್ಯೂ ಎಕಾನಮಿ ಫೋರಂ ಆಯೋಜಿಸಲಾಗಿದೆ. ಮೂರು ದಿನಗಳ ಈ ಸಮಾವೇಶದಲ್ಲಿ ಜಾಗತಿಕ ಆರ್ಥಿಕತೆ, ತಂತ್ರಜ್ಞಾನ, ಹೂಡಿಕೆ, ನಾವೀನ್ಯತೆ ಮತ್ತು ಭವಿಷ್ಯದ ಅಭಿವೃದ್ಧಿ ಕುರಿತು ವಿವಿಧ ಚರ್ಚೆಗಳು ನಡೆಯಲಿವೆ.

ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್, ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್, ನಂದನ್ ನಿಲೇಕಣಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಉದಯ್ ಕೋಟಕ್, ಕಿರಣ್ ಮಜುಂದಾರ್ ಶಾ, ಅಶ್ವಿನಿ ವೈಷ್ಣವ್, ಪಿಯೂಷ್ ಗೋಯಲ್ ಸೇರಿದಂತೆ ಹಲವು ಗಣ್ಯರು ಸಮಾವೇಶದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಒಟ್ಟಿನಲ್ಲಿ, ತಂತ್ರಜ್ಞಾನ ಮತ್ತು ಆರ್ಥಿಕ ಶಕ್ತಿಯನ್ನು ಕೆಲವರ ಅಭಿವೃದ್ಧಿಗೆ ಮಾತ್ರ ಬಳಸದೆ, ಸಮಾಜದ ಎಲ್ಲ ವರ್ಗಗಳ ಪ್ರಗತಿಗೆ ಬಳಸಬೇಕು ಎಂಬ ಸಂದೇಶವನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ನೀಡಿದ್ದಾರೆ.

 

KPSC ನೇಮಕಾತಿ ಹಗರಣದಲ್ಲಿ ಮತ್ತೊಂದು ಸ್ಫೋಟಕ ಅಕ್ರಮ ಬಯಲು: ಮೆರಿಟ್ ಲಿಸ್ಟ್ ಮಾಹಿತಿ ಬಳಸಿಕೊಂಡೇ ಲಕ್ಷ ಲಕ್ಷ ವಸೂಲಿ ಆರೋಪ!

0

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಮತ್ತೊಂದು ಆಘಾತಕಾರಿ ಅಕ್ರಮದ ಆರೋಪ ಬೆಳಕಿಗೆ ಬಂದಿದೆ. ಸ್ವಂತ ಪ್ರತಿಭೆಯಿಂದಲೇ ಸರ್ಕಾರಿ ಉದ್ಯೋಗ ಪಡೆಯುವ ಅರ್ಹತೆ ಹೊಂದಿದ್ದ ಅಭ್ಯರ್ಥಿಗಳಿಂದಲೂ ಲಕ್ಷಾಂತರ ರೂಪಾಯಿ ವಸೂಲಿ ಮಾಡಲಾಗುತ್ತಿತ್ತು ಎಂಬ ಮಾಹಿತಿ ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆಯಲ್ಲಿ ಬಹಿರಂಗವಾಗಿದೆ ಎನ್ನಲಾಗಿದೆ. ಅಭ್ಯರ್ಥಿಗಳ ಮೆರಿಟ್ ಲಿಸ್ಟ್‌ನ ಗೌಪ್ಯ ಮಾಹಿತಿಯನ್ನೇ ಹಣ ಸಂಪಾದನೆಯ ಮಾರ್ಗವನ್ನಾಗಿ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ.

ಮೆರಿಟ್ ಲಿಸ್ಟ್‌ನ ಗೌಪ್ಯ ಮಾಹಿತಿಯೇ ಹಣ ವಸೂಲಿಗೆ ಅಸ್ತ್ರ!

ಕೆಪಿಎಸ್‌ಸಿ ಪರೀಕ್ಷೆ ಮುಗಿದ ಬಳಿಕ 1:3 ಅನುಪಾತದಲ್ಲಿ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಲಾಗುತ್ತಿತ್ತು. ಈ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಅಂಕಗಳು ಹಾಗೂ ಅಂತಿಮ ಆಯ್ಕೆಯ ಸಾಧ್ಯತೆಯ ಮಾಹಿತಿಯನ್ನು ಗೌಪ್ಯವಾಗಿಡಬೇಕಿತ್ತು. ಆದರೆ, ಕೆಲವು ಅಧಿಕಾರಿಗಳು ಮತ್ತು ಸದಸ್ಯರು ಈ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ.

ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಅವರನ್ನು ಸಂಪರ್ಕಿಸಿ, ಯಾವ ಅಭ್ಯರ್ಥಿಗೆ ಎಷ್ಟು ಅಂಕಗಳಿವೆ ಹಾಗೂ ಯಾರಿಗೆ ಉದ್ಯೋಗ ಸಿಗುವ ಸಾಧ್ಯತೆಯಿದೆ ಎಂಬ ಮಾಹಿತಿ ಪಡೆಯಲಾಗುತ್ತಿತ್ತು ಎಂಬ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.

ಪ್ರತಿಭೆಯಿಂದ ಕೆಲಸ ಸಿಕ್ಕರೂ ನಮ್ಮಿಂದಲೇ ಆಯ್ಕೆ ಎಂದು ಹಣಕ್ಕೆ ಬೇಡಿಕೆ!

ಈ ಪ್ರಕರಣದಲ್ಲಿ ಅತ್ಯಂತ ಗಮನಾರ್ಹ ಸಂಗತಿಯೆಂದರೆ, ಕೆಲವು ಅಭ್ಯರ್ಥಿಗಳು ತಮ್ಮ ಸ್ವಂತ ಸಾಮರ್ಥ್ಯದಿಂದಲೇ ಅಂತಿಮ ಆಯ್ಕೆಯಾಗುವ ಸಾಧ್ಯತೆ ಹೊಂದಿದ್ದರು. ಆದರೆ, ಈ ವಿಷಯವನ್ನು ಮೊದಲೇ ತಿಳಿದುಕೊಂಡಿದ್ದ ಕೆಲವರು, ‘ನಮ್ಮ ಪ್ರಭಾವದಿಂದಲೇ ನಿಮಗೆ ಸರ್ಕಾರಿ ಉದ್ಯೋಗ ಸಿಗುತ್ತಿದೆ’ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು ಎಂಬ ಆರೋಪವಿದೆ.

ಕೆಪಿಎಸ್‌ಸಿಯ ಹಲವು ವಿಭಾಗಗಳ ಮೇಲೂ ಅನುಮಾನ!

ಮೆರಿಟ್ ಲಿಸ್ಟ್ ಅನ್ನು ಕೆಪಿಎಸ್‌ಸಿಯ ಕಂಪ್ಯೂಟರ್ ವಿಭಾಗ, ಸಿ-3 ವಿಭಾಗ ಹಾಗೂ ಕಾರ್ಯದರ್ಶಿಗಳ ಕಚೇರಿಗೆ ಕಳುಹಿಸಲಾಗುತ್ತಿತ್ತು. ಈ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲ ಅಧಿಕಾರಿಗಳಿಂದಲೂ ಗೌಪ್ಯ ಮಾಹಿತಿ ಸೋರಿಕೆಯಾಗಿರುವ ಅನುಮಾನ ವ್ಯಕ್ತವಾಗಿದೆ.

ಅಭ್ಯರ್ಥಿಗಳ ಅಂತಿಮ ಆಯ್ಕೆಯ ಸಾಧ್ಯತೆಯ ಮಾಹಿತಿಯನ್ನು ಕೆಪಿಎಸ್‌ಸಿಯ ಕೆಲವು ಸದಸ್ಯರಿಗೆ ಹಾಗೂ ಹಣ ನೀಡಿದ್ದ ಅಭ್ಯರ್ಥಿಗಳಿಗೆ ಹಂಚಿಕೊಳ್ಳಲಾಗುತ್ತಿತ್ತು ಎಂಬ ಆರೋಪವೂ ತನಿಖೆಯಲ್ಲಿ ಕೇಳಿಬಂದಿದೆ.

ಒಟ್ಟಿನಲ್ಲಿ, ಸರ್ಕಾರಿ ಉದ್ಯೋಗದ ಕನಸು ಕಂಡ ಅಭ್ಯರ್ಥಿಗಳ ಮೆರಿಟ್ ಮಾಹಿತಿಯನ್ನೇ ದುರುಪಯೋಗಪಡಿಸಿಕೊಂಡು ಹಣ ವಸೂಲಿ ಮಾಡಿರುವ ಆರೋಪ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಆರೋಪಗಳಲ್ಲಿ ಯಾರ ಪಾತ್ರವಿದೆ ಎಂಬುದು ಮುಂದಿನ ತನಿಖೆಯಿಂದ ಸ್ಪಷ್ಟವಾಗಬೇಕಿದೆ.