Home Blog Page 200

ಬೆಂಗಳೂರು ಗ್ರಾಮಾಂತರದಲ್ಲಿ ಭೀಕರ ಕೊಲೆ: ಕೇವಲ 200 ರೂ. ಸಾಲದ ವಿವಾದಕ್ಕೆ ವ್ಯಕ್ತಿ ಬಲಿ!

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಪ್ಪಕಾರನಹಳ್ಳಿ ಗೇಟ್ ಬಳಿ ಕೇವಲ 200 ರೂ. ಸಾಲದ ವಿಚಾರಕ್ಕೆ ವ್ಯಕ್ತಿಯೊಬ್ಬರನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಭೀಕರ ಘಟನೆ ನಡೆದಿದೆ.

ಮೃತರನ್ನು ದ್ಯಾವಸಂದ್ರ ಗ್ರಾಮದ ನಿವಾಸಿ ಮಂಜುನಾಥ (40) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಅದೇ ಗ್ರಾಮದ ಮುನಿರಾಜ್ (41) ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 12ರಂದು ಅಪ್ಪಕಾರನಹಳ್ಳಿ ಗೇಟ್ ಬಳಿ ಇರುವ ಟೀ ಅಂಗಡಿ ಬಳಿ ಘಟನೆ ನಡೆದಿದ್ದು, ಮುನಿರಾಜ್ ಬೆಳಗ್ಗೆ ಟೀ ಕುಡಿಯಲು ಅಂಗಡಿಗೆ ಬಂದಿದ್ದಾನೆ. ಈ ವೇಳೆ ಹಳೆಯ ಸಾಲದ ವಿಚಾರವಾಗಿ ಮಂಜುನಾಥ್ ಮತ್ತು ಮುನಿರಾಜ್ ನಡುವೆ ಮಾತಿನ ಚಕಮಕಿ ನಡೆದಿದೆ.

ಮುನಿರಾಜ್ ಮತ್ತೆ ಸಾಲದಲ್ಲಿ ಟೀ ಕೊಡುವಂತೆ ಕೇಳಿದ್ದಾನೆ. ಆದರೆ ಮಂಜುನಾಥ್ ಹಳೆಯ ಸಾಲ ವಾಪಸ್ ನೀಡುವಂತೆ ಹೇಳಿದ ಕಾರಣ ಇಬ್ಬರ ನಡುವೆ ಗಲಾಟೆ ಉಂಟಾಗಿದೆ. ಮಾತಿಗೆ ಮಾತು ಬೆಳೆದು ವಾಗ್ವಾದ ತೀವ್ರಗೊಂಡಿದೆ.

ಈ ವೇಳೆ ಸಿಟ್ಟಿಗೆದ್ದ ಮುನಿರಾಜ್, ಪಕ್ಕದಲ್ಲಿದ್ದ ನೀಲಗಿರಿ ಮರದ ದೊಣ್ಣೆಯನ್ನು ತೆಗೆದುಕೊಂಡು ಮಂಜುನಾಥ್ ಅವರ ತಲೆಗೆ ಮನಸೋಯಿಚ್ಚೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಅವರನ್ನು ತಕ್ಷಣವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮಾಹಿತಿಯ ಪ್ರಕಾರ, ಆರೋಪಿಯಾದ ಮುನಿರಾಜ್ ಈ ಹಿಂದೆ ತನ್ನ ಹೆತ್ತ ತಾಯಿಗೆ ಚಾಕು ಹಾಕಿದ ಪ್ರಕರಣದಲ್ಲಿಯೂ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಬಂದು ಈಗ ಈ ಕೊಲೆ ಮಾಡಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಧಾರ್ಮಿಕ ಸೇವೆಯಲ್ಲಿ ರಚಿತಾ ರಾಮ್: ಕೊರಗಜ್ಜ ದೈವಕ್ಕೆ ಹರಕೆ ಕೋಲ ನೀಡಿದ ನಟಿ!

0

ಕನ್ನಡ ಚಿತ್ರರಂಗದ ಜನಪ್ರಿಯ ನಟಿ, “ಡಿಂಪಲ್ ಕ್ವೀನ್” ಎಂದೇ ಖ್ಯಾತರಾಗಿರುವ ರಚಿತಾ ರಾಮ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿರುವ ಕೊರಗಜ್ಜ ದೈವ ಸನ್ನಿಧಿಯಲ್ಲಿ ಹರಕೆ ಕೋಲ ಸೇವೆ ಸಲ್ಲಿಸಿದ್ದಾರೆ.

ತಾವು ಅಂದುಕೊಂಡ ಕೆಲಸಗಳು ನೆರವೇರಿದರೆ ಕೊರಗಜ್ಜ ದೈವಕ್ಕೆ ಕೋಲ ಸೇವೆ ಸಲ್ಲಿಸುವ ಹರಕೆ ಹೊತ್ತಿದ್ದ ರಚಿತಾ ರಾಮ್ ಅವರು ಇದೀಗ ಆ ಹರಕೆಯನ್ನು ಪೂರ್ಣಗೊಳಿಸಿದ್ದಾರೆ. ಭಕ್ತಿಭಾವದ ವಾತಾವರಣದಲ್ಲಿ ಈ ಕಾರ್ಯಕ್ರಮ ನೆರವೇರಿದ್ದು, ಸ್ಥಳೀಯ ಭಕ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದಾರೆ.

ರಚಿತಾ ರಾಮ್ ಕನ್ನಡ ಚಿತ್ರರಂಗದ ಹಲವು ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಅವರು ಧ್ರುವ ಸರ್ಜಾ ಜೊತೆ “ಕ್ರಿಮಿನಲ್” ಹಾಗೂ ನಿನಾಸಂ ಸತೀಶ್ ಜೊತೆ “ಅಯೋಗ್ಯ 2” ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇದಲ್ಲದೆ ತಮಿಳು ಚಿತ್ರರಂಗದ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಜೊತೆ ಮಾತುಕತೆ ನಡೆಯುತ್ತಿದ್ದು, ತೆಲುಗಿನಲ್ಲಿ ಎರಡು ಹೊಸ ಸಿನಿಮಾಗಳು ಶೀಘ್ರದಲ್ಲೇ ಘೋಷಣೆಯಾಗುವ ಸಾಧ್ಯತೆ ಇದೆ.

 

ಮಂಡ್ಯದಲ್ಲಿ ಸಿನಿಮಾಶೈಲಿ ದರೋಡೆ: 26 ಲಕ್ಷ ರೂ. ಹಣ ಕಳವು!

ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದ ಹೊರವಲಯದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಕಾರನ್ನು ದುಷ್ಕರ್ಮಿಗಳ ಗ್ಯಾಂಗ್‌ ಅಡ್ಡಗಟ್ಟಿ 26 ಲಕ್ಷ ರೂ. ದರೋಡೆ ಮಾಡಿದ ಘಟನೆ ನಡೆದಿದೆ.

ಮೈಸೂರಿನ ಖಾಸಗಿ ಕಂಪನಿ ಉದ್ಯೋಗಿ ಗೋವಿಂದರಾಜು ಅವರು ಐ-20 ಕಾರಿನಲ್ಲಿ ಕಂಪನಿಗಳ ನಡುವೆ ಹಣ ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ಐಶ್ವರ್ಯ ಕಾನ್ವೆಂಟ್ ಬಳಿ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅವರ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ್ದಾರೆ.

ನಂತರ ಕಾರಿನ ಗಾಜು ಒಡೆದು, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ ಆರೋಪಿಗಳು 26 ಲಕ್ಷ ರೂ. ನಗದು ಹಣವನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆ ಬಗ್ಗೆ ತಕ್ಷಣ ಮದ್ದೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ವಿ.ಜೆ. ಶೋಭರಾಣಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

ಮಂಗಳೂರಿನಲ್ಲಿ ಲಿಫ್ಟ್ ಕುಸಿದು ಇನ್‌ಸ್ಟಾ ಮಾರ್ಟ್ ಉದ್ಯೋಗಿ ದುರ್ಮರಣ!

ಮಂಗಳೂರು: ನಗರದ ಕುಂಟಿಕಾನ ಪ್ರದೇಶದಲ್ಲಿ ದುರ್ಘಟನೆ ಸಂಭವಿಸಿದ್ದು, ಲಿಫ್ಟ್ ಕುಸಿದು ಇನ್‌ಸ್ಟಾ ಮಾರ್ಟ್ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದಾರೆ.

ಬೆಳ್ತಂಗಡಿ ತಾಲೂಕಿನ ಬೆಳಲು ನಿವಾಸಿ ನೌಫಾಲ್ (28) ಮೃತ ದುರ್ದೈವಿ. ಇನ್‌ಸ್ಟಾ ಮಾರ್ಟ್ ಸಪ್ಲೈ ಪಾಯಿಂಟ್‌ನಲ್ಲಿ ದಿನಸಿ ವಸ್ತುಗಳನ್ನು ಲಿಫ್ಟ್ ಮೂಲಕ ಸಾಗಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ವಸ್ತುಗಳನ್ನು ಮೇಲ್ಮಹಡಿಗೆ ಸಾಗಿಸುತ್ತಿದ್ದಾಗ ಏಕಾಏಕಿ ಲಿಫ್ಟ್ ಕುಸಿದಿದ್ದು, ಅದರೊಳಗೆ ಸಿಲುಕಿದ ನೌಫಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸ್ಥಳದ ಸಿಸಿ ಕ್ಯಾಮೆರಾದಲ್ಲಿ ದುರಂತದ ದೃಶ್ಯಗಳು ಸೆರೆಯಾಗಿವೆ.

ಘಟನೆ ತಿಳಿಯುತ್ತಿದ್ದಂತೆ ಕದ್ರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಿಫ್ಟ್ ದುರಂತದ ನಿಖರ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಭದ್ರಾ ಜಲಾಶಯದಿಂದ ನೀರು ಬಿಡುಗಡೆಗೆ ತೀರ್ಮಾನ: ನದಿ ತೀರದ ಜನರಿಗೆ ಎಚ್ಚರಿಕೆ!

ಶಿವಮೊಗ್ಗ: ಹಾವೇರಿ, ರಾಣೇಬೆನ್ನೂರು, ಬ್ಯಾಡಗಿ ಹಾಗೂ ಹಿರೇಕೆರೂರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ಬಹುಗ್ರಾಮ ನದಿ ನೀರು ಯೋಜನೆಯಡಿ ತುಂಗಭದ್ರಾ ನದಿಯ ನೀರನ್ನು ಅವಲಂಬಿಸಿರುವ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಮೇ 18ರಿಂದ 23ರವರೆಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರನ್ನು ಭದ್ರಾವತಿ ಸಮೀಪದ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಹರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನದಿ ತೀರದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಸೂಚನೆ ನೀಡಲಾಗಿದೆ. ನದಿಯ ಕೆಳಭಾಗದಲ್ಲಿ ಸಾರ್ವಜನಿಕರು ಅನಗತ್ಯವಾಗಿ ತಿರುಗಾಡುವುದು, ದನಕರುಗಳನ್ನು ಮೇಯಿಸುವುದು ಹಾಗೂ ತೋಟಗಾರಿಕೆ ಚಟುವಟಿಕೆ ನಡೆಸುವುದನ್ನು ತಪ್ಪಿಸಬೇಕು ಎಂದು ಎಚ್ಚರಿಸಲಾಗಿದೆ.

ಇದೇ ವೇಳೆ ರೈತರು ನದಿ ದಂಡೆಯಲ್ಲಿ ಅಳವಡಿಸಿರುವ ಪಂಪ್‌ಸೆಟ್‌ಗಳ ಮೂಲಕ ನೀರನ್ನು ಎತ್ತುವುದನ್ನೂ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಸೊಳ್ಳೆ ಅಗರಬತ್ತಿ ಸುರಕ್ಷಿತವೇ? ಹೊಸ ಸಮೀಕ್ಷೆಯಿಂದ ಆತಂಕಕಾರಿ ಮಾಹಿತಿ ರಿವಿಲ್!

ಮನೆಗಳಲ್ಲಿ ಸೊಳ್ಳೆಗಳಿಂದ ರಕ್ಷಣೆಗಾಗಿ ಬಳಸಲಾಗುವ ಅಗರಬತ್ತಿ, ಕಾಯಿಲ್ ಹಾಗೂ ವಿವಿಧ ಮಸ್ಕಿಟೋ ರಿಪೆಲೆಂಟ್‌ಗಳು ಕೆಲವೊಮ್ಮೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಇತ್ತೀಚಿನ ಸಮೀಕ್ಷೆ ಎಚ್ಚರಿಕೆ ನೀಡಿದೆ.

ಸಿಐಆರ್ ನೋಂದಣಿ ಇಲ್ಲದ ಉತ್ಪನ್ನಗಳನ್ನು ಬಳಸುವುದರಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಎಚ್‌ಐಸಿಎ ನಡೆಸಿದ ಸಮೀಕ್ಷೆಯ ಪ್ರಕಾರ, ದೇಶದ 12 ನಗರಗಳಲ್ಲಿ 1,264 ಕುಟುಂಬಗಳು ಹಾಗೂ 405 ವೈದ್ಯರನ್ನು ಒಳಗೊಂಡ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಸುಮಾರು 70 ಶೇಕಡಾ ವೈದ್ಯರು ಅನಧಿಕೃತ ಸೊಳ್ಳೆ ಅಗರಬತ್ತಿಗಳ ಹೊಗೆ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅದೇ ರೀತಿ 67 ಶೇಕಡಾ ವೈದ್ಯರು ಕೆಲವು ಅಗರಬತ್ತಿಗಳ ಹೊಗೆ ಸಿಗರೇಟ್ ಹೊಗೆಯಷ್ಟೇ ಹಾನಿಕಾರಕವಾಗಬಹುದು ಎಂದು ತಿಳಿಸಿದ್ದಾರೆ. ನಿರಂತರವಾಗಿ ಸೊಳ್ಳೆ ಅಗರಬತ್ತಿ ಅಥವಾ ಕಾಯಿಲ್ ಬಳಸುವುದರಿಂದ ಕೆಮ್ಮು, ಗಂಟಲು ಕೆರೆತ, ಎದೆ ಉರಿ, ತಲೆನೋವು ಹಾಗೂ ಅಲರ್ಜಿ ಸಮಸ್ಯೆಗಳು ಕಾಣಿಸಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ವಿಶೇಷವಾಗಿ ಆಸ್ತಮಾ, ಸಿಒಪಿಡಿ ಮತ್ತು ಅಲರ್ಜಿ ಇರುವವರಿಗೆ ಇದು ಹೆಚ್ಚು ಅಪಾಯಕಾರಿಯಾಗಿದೆ ಎಂದು ತಿಳಿಸಲಾಗಿದೆ. ಮಕ್ಕಳ ಮತ್ತು ಹಿರಿಯರ ಶ್ವಾಸಕೋಶಗಳು ಹೆಚ್ಚು ಸಂವೇದನಾಶೀಲವಾಗಿರುವುದರಿಂದ ಅವರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ.

ತಜ್ಞರ ಪ್ರಕಾರ, ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಖರೀದಿಸುವಾಗ ಸಿಐಆರ್ ನೋಂದಣಿ ಸಂಖ್ಯೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಅನಧಿಕೃತ ಉತ್ಪನ್ನಗಳನ್ನು ತಪ್ಪಿಸುವುದು, ಕೊಠಡಿಯಲ್ಲಿ ಸರಿಯಾದ ಗಾಳಿಯ ಹರಿವು ಇರಿಸುವುದು ಹಾಗೂ ಮಕ್ಕಳ ಕೋಣೆಯಲ್ಲಿ ಹೊಗೆ ಬಳಕೆಯನ್ನು ಕಡಿಮೆ ಮಾಡುವುದು ಮುಖ್ಯ ಎಂದು ಸಲಹೆ ನೀಡಲಾಗಿದೆ. ಮಸ್ಕಿಟೋ ನೆಟ್ ಹಾಗೂ ಕಿಟಕಿ ಜಾಲಿಗಳಂತಹ ಸುರಕ್ಷಿತ ಪರ್ಯಾಯಗಳನ್ನು ಬಳಸುವುದು ಉತ್ತಮ ಎಂದು ವೈದ್ಯರು ತಿಳಿಸಿದ್ದಾರೆ.

ಹಿಟ್ ಅಂಡ್ ರನ್ ಕೇಸ್‌ಗೆ ಕ್ಲೈಮ್ಯಾಕ್ಸ್..!

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರನ್ನು ಬಲಿ ಪಡೆದು ಪರಾರಿಯಾಗಿದ್ದ ವಾಹನವನ್ನು ಹಗರಿಬೊಮ್ಮನಹಳ್ಳಿ ಪೊಲೀಸರು ಪತ್ತೆ ಹಚ್ಚಿ ಹಿಟ್ ಅಂಡ್ ರನ್ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೇ 7ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ವಲ್ಲಭಾಪುರ ಗ್ರಾಮದ ಸಮೀಪ ಹಳೆ ಹಗರಿಬೊಮ್ಮನಹಳ್ಳಿ ನಿವಾಸಿ ಮುಂಡರಗಿ ನಾಗರಾಜ್ ಅವರಿಗೆ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿತ್ತು. ಅಪಘಾತದ ತೀವ್ರತೆಗೆ ನಾಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದರು.

ಪ್ರಕರಣ ದಾಖಲಿಸಿಕೊಂಡ ಹಗರಿಬೊಮ್ಮನಹಳ್ಳಿ ಪೊಲೀಸರು ಆರೋಪಿತ ವಾಹನಕ್ಕಾಗಿ ಬಲೆ ಬೀಸಿದ್ದರು. ವೃತ್ತ ನಿರೀಕ್ಷಕ ವಿಕಾಸ್ ಪಿ. ಲಮಾಣಿ ಮಾರ್ಗದರ್ಶನದಲ್ಲಿ ಪಿಎಸ್ಐ ಉಮಾಪತಿ ನಾಯ್ಕ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಮುಖ್ಯ ಪೇದೆಗಳಾದ ಮಲ್ಲೇಶ್ ನಾಯ್ಕ, ಸಿದ್ದೇಶ್, ಶಂಕರ್ ನಾಯ್ಕ, ಭೋಜ್ಯ ನಾಯ್ಕ, ಪರಶುರಾಮ್ ವೈ., ದೊಡ್ಡ ಬಸವರಾಜ್ ಹಾಗೂ ಯಮುನಪ್ಪ ಬಂಡೆ ಸತತ ತನಿಖೆ ನಡೆಸಿ ಕೊನೆಗೆ ಅಪಘಾತ ಎಸಗಿದ ವಾಹನವನ್ನು ಬಳ್ಳಾರಿಯಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.

ಪ್ರಕರಣ ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೊಸಪೇಟೆ ಹಾಗೂ ಕೂಡ್ಲಿಗಿ ಡಿವೈಎಸ್ಪಿ ಶ್ಲಾಘಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ಸಾರ್ವಜನಿಕರೂ ಪೊಲೀಸರ ಕಾರ್ಯಕ್ಷಮತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ಸೆಲ್ಫಿಗೆ ಸೀಮಿತ’ ಕಮ್ಯೂನಿಟಿ ಮೊಬಿಲೈಜರ್‌ಗಳು..?

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಗರಗಳು ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿಡಲು ಹಾಗೂ ಸಾರ್ವಜನಿಕರಲ್ಲಿ ಕಸ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನೇಮಕ ಮಾಡಿರುವ ಕಮ್ಯೂನಿಟಿ ಮೊಬಿಲೈಜರ್ ಹುದ್ದೆಗಳ ಕಾರ್ಯಕ್ಷಮತೆ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ಸ್ವಚ್ಛ ಭಾರತ ಮಿಷನ್ 2.0 ಅಡಿಯಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ರಾಜ್ಯಾದ್ಯಂತ 2605 ಕಮ್ಯೂನಿಟಿ ಮೊಬಿಲೈಜರ್‌ಗಳನ್ನು ಜುಲೈ 2025ರಿಂದ ಗೌರವಧನ ಆಧಾರದ ಮೇಲೆ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.

ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆ ಆಧಾರದ ಮೇಲೆ ನೇಮಕಾತಿ ಮಾಡಲಾಗಿದ್ದು, ಅವರಿಗೆ ಮಾಸಿಕ ₹17 ಸಾವಿರದಿಂದ ₹18 ಸಾವಿರಕ್ಕೂ ಹೆಚ್ಚು ಗೌರವಧನ ನಿಗದಿಪಡಿಸಲಾಗಿದೆ.

ಕಮ್ಯೂನಿಟಿ ಮೊಬಿಲೈಜರ್‌ಗಳ ಮುಖ್ಯ ಕರ್ತವ್ಯ ಮನೆ ಮನೆಗೆ ತೆರಳಿ ಹಸಿ-ಒಣ ಕಸ ವಿಂಗಡಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಸ್ವಚ್ಛತಾ ವಾಹನಗಳ ಕಾರ್ಯ ಪರಿಶೀಲಿಸುವುದು ಹಾಗೂ ಕಸ ವಿಲೇವಾರಿ ಕುರಿತು ಮಾಹಿತಿ ಸಂಗ್ರಹಿಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿದೆ.

ಆದರೆ, ನೆಲಮಟ್ಟದಲ್ಲಿ ಈ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಪ್ರತಿದಿನ ಬೆಳಿಗ್ಗೆ ಪೌರಕಾರ್ಮಿಕರು ನಡೆಸುವ ಸ್ವಚ್ಛತಾ ಕಾರ್ಯದ ಬಳಿ ಹೋಗಿ ಸೆಲ್ಫಿ ತೆಗೆದು ಗ್ರೂಪ್‌ಗೆ ಹಾಕುವುದೇ ಕಮ್ಯೂನಿಟಿ ಮೊಬಿಲೈಜರ್ ಕೆಲಸ ಎಂಬಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನರೇಗಲ್ಲ ಪಟ್ಟಣದ ಕೈಗಾ–ಇಲಕಲ್ಲ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಕಸದ ರಾಶಿಗಳು ಬಿದ್ದಿರುವುದು ಸ್ವಚ್ಛತಾ ಕಾರ್ಯದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಪಟ್ಟಣದ ಜನರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು, ಆರೋಗ್ಯ ನಿರೀಕ್ಷಕರೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ಬೆಳಿಗ್ಗೆ 6 ಗಂಟೆಯಿಂದ ಪೌರಕಾರ್ಮಿಕರ ಕಾರ್ಯವನ್ನು ಮೇಲ್ವಿಚಾರಣೆ ಮಾಡುವುದು ಕಮ್ಯೂನಿಟಿ ಮೊಬಿಲೈಜರ್‌ಗಳ ಜವಾಬ್ದಾರಿಯಾಗಿತ್ತು. ಆದರೆ ಆ ಕೆಲಸಗಳು ನಡೆಯುತ್ತಿಲ್ಲ ಎಂದು ಆರೋಪಿಸಲಾಗಿದೆ.

“ಪೌರಕಾರ್ಮಿಕರೇ ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಕಮ್ಯೂನಿಟಿ ಮೊಬಿಲೈಜರ್‌ಗಳಿಗಿಂತ ಪೌರಕಾರ್ಮಿಕರ ಸಂಬಳ ಹೆಚ್ಚಿಸಿ ಅವರಿಗೆ ಪ್ರೋತ್ಸಾಹ ನೀಡುವುದು ಸೂಕ್ತ.”

ಜ್ಯೋತಿ ಪಾಯಪ್ಪಗೌಡ್ರ,

ಮಾಜಿ ಸದಸ್ಯೆ, ಪಟ್ಟಣ ಪಂಚಾಯಿತಿ ನರೇಗಲ್ಲ

ಜಮೀನಿನಲ್ಲಿ ಸಿಡಿಲು ಬಡಿದು ಮಹಿಳೆ ಸೇರಿ ಎರಡು ಹಸುಗಳು ಸಾವು!

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಆಲನಹಳ್ಳಿ ನಿವಾಸಿ ವಿನೋದಾ ಮೃತ ರೈತ ಮಹಿಳೆ.

ಇಂದು ಸಂಜೆ ಜಮೀನಿನಲ್ಲಿ ಕಟ್ಟಿಹಾಕಿದ್ದ ಹಸುಗಳನ್ನು ಮಳೆಯ ಕಾರಣದಿಂದ ಮನೆಗೆ ಕರೆತರಲು ಹೋದ ಸಂದರ್ಭದಲ್ಲೇ ಸಿಡಿಲು ಬಡಿತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸಿಡಿಲಿನ ತೀವ್ರತೆಗೆ ವಿನೋದಾ ಮಾತ್ರವಲ್ಲದೆ ಅವರಿಗೆ ಸೇರಿದ ಎರಡು ಹಸುಗಳು ಕೂಡ ಸ್ಥಳದಲ್ಲೇ ಸಾವನ್ನಪ್ಪಿವೆ.

ಘಟನೆ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳೀಯರು ಆಘಾತ ವ್ಯಕ್ತಪಡಿಸಿದ್ದಾರೆ.