Home Blog Page 205

ಗಾಳಿ-ಮಳೆಗೆ ನೆಲಕಚ್ಚಿದ ಮಾವಿನ ಬೆಳೆ..!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಸುರಿದ ಗಾಳಿ-ಮಳೆಗೆ ತೋಟಗಾರಿಕೆ ಬೆಳೆಗಳು ಭಾರೀ ಹಾನಿಗೀಡಾಗಿದ್ದು, ಮಾವು, ಬಾಳೆ ಸೇರಿದಂತೆ ಹಲವು ಬೆಳೆಗಳ ನಷ್ಟವನ್ನು ಹಿರಿಯ ತೋಟಗಾರಿಕಾ ಇಲಾಖೆ ನಿರ್ದೇಶಕ ಪ್ರಶಾಂತ ಕುಲಕರ್ಣಿ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಲಕ್ಷ್ಮೇಶ್ವರದ ಮಾವು ಬೆಳೆಗಾರ ನಿಂಗಪ್ಪ ಪೂಜಾರ ಹಾಗೂ ಸಹೋದರರ ಮಾವಿನ ತೋಟಕ್ಕೆ ಭೇಟಿ ನೀಡಿದ ವೇಳೆ, ಫಲಭರಿತ ಗಿಡಗಳಲ್ಲಿದ್ದ ಮಾವಿನ ಹಣ್ಣುಗಳು ಗಾಳಿಯ ಅಬ್ಬರಕ್ಕೆ ನೆಲಕ್ಕುರುಳಿದ ದೃಶ್ಯ ಕಂಡು ಅಧಿಕಾರಿಗಳು ಪರಿಶೀಲನೆ ನಡೆಸಿದರು. ಕಂದಾಯ ಇಲಾಖೆಯ ಸಿಬ್ಬಂದಿಯೂ ಸ್ಥಳದಲ್ಲೇ ಹಾನಿಯ ಪ್ರಮಾಣದ ಮಾಹಿತಿ ಸಂಗ್ರಹಿಸಿದರು.

ಈ ವೇಳೆ ತಮ್ಮ ಅಳಲನ್ನು ತೋಡಿಕೊಂಡ ರೈತ ನಿಂಗಪ್ಪ ಪೂಜಾರ, “ಈ ವರ್ಷದ ತೀವ್ರ ಬಿಸಿಲಿನ ನಡುವೆಯೂ ಅತ್ಯಂತ ಕಾಳಜಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾವಿನ ತೋಟ ಬೆಳೆಸಿದ್ದೇವೆ. ಆದರೆ ಗಾಳಿ-ಮಳೆಗೆ ಗಿಡದಲ್ಲಿದ್ದ ಫಸಲೆಲ್ಲ ನೆಲಕ್ಕುರುಳಿದೆ. ಮೊದಲೇ ಉತ್ತಮ ಗುಣಮಟ್ಟದ ಹಣ್ಣಿನ ದರ ಕುಸಿದಿದ್ದು, ಈಗ ನೆಲಕ್ಕೆ ಬಿದ್ದ ಹಣ್ಣನ್ನು ಕೇಳುವವರೇ ಇಲ್ಲ. ಬದುಕಿಗೆ ಆಸರೆಯಾಗಿದ್ದ ಬೆಳೆಯೇ ಹಾಳಾಗಿದ್ದು ದಿಕ್ಕು ತೋಚದಂತಾಗಿದೆ” ಎಂದು ಕಣ್ಣೀರಿಟ್ಟರು.

ಪರಿಶೀಲನೆ ಬಳಿಕ ಮಾತನಾಡಿದ ಹಿರಿಯ ತೋಟಗಾರಿಕಾ ಇಲಾಖೆ ನಿರ್ದೇಶಕ ಪ್ರಶಾಂತ ಕುಲಕರ್ಣಿ, “ಲಕ್ಷ್ಮೇಶ್ವರ ಸೇರಿದಂತೆ ತಾಲೂಕಿನ ಕೆಲ ಗ್ರಾಮೀಣ ಭಾಗಗಳಲ್ಲಿ ತೋಟಗಾರಿಕೆ ಬೆಳೆಗಳು ಗಾಳಿ-ಮಳೆಯಿಂದ ಹಾನಿಗೀಡಾಗಿರುವ ಮಾಹಿತಿ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಕಂದಾಯ ಹಾಗೂ ತೋಟಗಾರಿಕಾ ಇಲಾಖೆಯಿಂದ ಹಾನಿಯ ಪ್ರಮಾಣ ಆಧರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಒದಗಿಸುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿ ಶಂಭುಲಿಂಗಪ್ಪ ನೆಗಳೂರು, ಕಂದಾಯ ಇಲಾಖೆಯ ಸಿಬ್ಬಂದಿ ಶ್ರೀಕಾಂತ ನವಲೆ ಉಪಸ್ಥಿತರಿದ್ದರು.

“ಬೆಳೆ ಹಾನಿಗೆ ತಕ್ಷಣ ಪರಿಹಾರ ನೀಡುವ ಮೂಲಕ ರೈತರ ಬದುಕಿಗೆ ಸರ್ಕಾರ ಆಸರೆಯಾಗಬೇಕು”

ನಿಂಗಪ್ಪ ಪೂಜಾರ ಹಾಗೂ ಸಹೋದರರು ನೀಲಪ್ಪ, ನಾಗಪ್ಪ, ಶಿವಪ್ಪ, ದೇವಪ್ಪ

ಗದಗ ಪೊಲೀಸರ ಸ್ಮಾರ್ಟ್ ಆಪರೇಷನ್..!

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ/ಗದಗ: ಅಪರಾಧ ಪತ್ತೆ, ಸಾರ್ವಜನಿಕ ಸುರಕ್ಷತೆ ಹಾಗೂ ತ್ವರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಗದಗ ಜಿಲ್ಲಾ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿವೆ. ಕಳ್ಳತನ ಪ್ರಕರಣಗಳ ಪತ್ತೆಯಿಂದ ಹಿಡಿದು ಕಳುವಾದ ಚಿನ್ನಾಭರಣ, ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳನ್ನು ಮಾಲೀಕರಿಗೆ ಹಿಂತಿರುಗಿಸುವ ಕಾರ್ಯವರೆಗೆ ಹಲವು ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸುತ್ತಿರುವ ಪೊಲೀಸರು, ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೂ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಜಿಲ್ಲೆಯಾದ್ಯಂತ ಸಿ.ಸಿ. ಕ್ಯಾಮೆರಾ ಕಣ್ಗಾವಲು

ಅಪರಾಧ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪತ್ತೆಹಚ್ಚುವ ಉದ್ದೇಶದಿಂದ ಗದಗ ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲೆಯಾದ್ಯಂತ ನೂರಾರು ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿದೆ. ಪ್ರಮುಖ ರಸ್ತೆ, ವಾಣಿಜ್ಯ ಕೇಂದ್ರ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಮೆರಾ ಕಣ್ಗಾವಲು ಹೆಚ್ಚಿಸಲಾಗಿದ್ದು, ಅಪರಾಧಿಗಳ ಚಲನವಲನಗಳ ಮೇಲೆ ನಿರಂತರ ನಿಗಾ ಇಡಲಾಗಿದೆ.

ಇದರ ಜೊತೆಗೆ ಸೂಕ್ಷ್ಮ ಪ್ರಕರಣಗಳಲ್ಲಿ ಹಾಗೂ ಬಾಂಬ್ ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆಗಳಲ್ಲಿ ಡಾಗ್ ಸ್ಕ್ವಾಡ್ ಸೇವೆಯನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಕ್ರಮದಿಂದ ಹಲವು ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಇಲಾಖೆ ಯಶಸ್ಸು ಸಾಧಿಸಿದೆ.

ಅಪರಾಧ ಚಟುವಟಿಕೆಗಳಿಗೆ ಪೊಲೀಸರ ಬ್ರೇಕ್

ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವುದರ ಜೊತೆಗೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತನ್ನ ಕಾರ್ಯವೈಖರಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ನೇತೃತ್ವದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಹಲವು ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

ಪ್ರತಿ ತಾಲೂಕು ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ಅಧಿಕಾರಿಗಳು, ಪೊಲೀಸ್ ಠಾಣೆಗಳ ಪರಿಶೀಲನೆ ನಡೆಸಿ ಸಿಬ್ಬಂದಿಯ ಅಹವಾಲು ಆಲಿಸುವುದು, ಬಾಕಿ ಪ್ರಕರಣಗಳ ಮಾಹಿತಿ ಪರಿಶೀಲಿಸುವುದು ಹಾಗೂ ಕಾನೂನು ಸುವ್ಯವಸ್ಥೆ ಕುರಿತು ನಿಗಾ ವಹಿಸುವ ಕಾರ್ಯ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಅಭಿಯಾನ

ಗದಗ ಜಿಲ್ಲಾ ಪೊಲೀಸ್ ಇಲಾಖೆ ಪ್ರತಿಯೊಂದು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆ, ಅಪರಾಧ ಪತ್ತೆ, ಕಳ್ಳತನ ಪ್ರಕರಣಗಳ ಭೇದನೆ ಹಾಗೂ ಸಾರ್ವಜನಿಕರಿಗೆ ನೀಡುತ್ತಿರುವ ಸೇವೆಗಳ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ ಮಾಹಿತಿ ಹಂಚಿಕೊಳ್ಳುತ್ತಿದೆ.

ಪೊಲೀಸರ ಕಾರ್ಯಚಟುವಟಿಕೆಗಳ ವಿಡಿಯೋ, ಫೋಟೋ ಹಾಗೂ ಮಾಹಿತಿ ಸಾರ್ವಜನಿಕರಿಗೆ ತಲುಪುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಕಾರ್ಯದಕ್ಷತೆಗೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

“ಜಿಲ್ಲೆಯಾದ್ಯಂತ ಅಪರಾಧ ಪತ್ತೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ. ಆಯ್ದ ಸ್ಥಳಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.”

ರೋಹನ್ ಜಗದೀಶ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗದಗ

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎಸ್.ಆರ್. ಬಂಡಿ ಅವಿರೋಧ ಆಯ್ಕೆ

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು, ಗದಗ ಗ್ರಾಮೀಣ ಘಟಕದ 2026-2031ನೇ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್.ಆರ್. ಬಂಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಎನ್.ಎಚ್. ಪಾಟೀಲ, ಕೋಶಾಧ್ಯಕ್ಷರಾಗಿ ಎಸ್.ಎಸ್. ಲಕ್ಷಕೊಪ್ಪ, ಉಪಾಧ್ಯಕ್ಷರಾಗಿ ಎಸ್.ಪಿ. ಕುರಿ ಹಾಗೂ ಶ್ರೀಮತಿ ಎಸ್.ಡಿ. ಗುಂಜಳ ಆಯ್ಕೆಯಾಗಿದ್ದಾರೆ.

ಸಹ ಕಾರ್ಯದರ್ಶಿಗಳಾಗಿ ಎಸ್.ಎಂ. ಉಜ್ಜಣ್ಣವರ ಮತ್ತು ಶ್ರೀಮತಿ ಎನ್.ಆರ್. ಶೈಲಾ, ಸಂಘಟನಾ ಕಾರ್ಯದರ್ಶಿಗಳಾಗಿ ಬಿ.ವಾಯ್. ಹುಡೇದಮನಿ ಹಾಗೂ ಶ್ರೀಮತಿ ಎಸ್.ಎನ್. ಅನ್ಸಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗದಗ ಗ್ರಾಮೀಣ ಘಟಕದ ಮುಖ್ಯ ಚುನಾವಣಾಧಿಕಾರಿ ವ್ಹಿ.ಎಂ. ಪಾಟೀಲ ತಿಳಿಸಿದ್ದಾರೆ.

ಅವಿರೋಧವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಗದಗ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದು, ಇವರ ಅಧಿಕಾರದ ಅವಧಿಯಲ್ಲಿ ಸಂಘದ ಅಭಿವೃದ್ಧಿಗೆ ಉತ್ತಮ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದ್ದಾರೆ.

ಬೆಂಗಳೂರಿನಲ್ಲಿ ‘ಮಲ್ಟಿ-ಟಾರ್ಗೆಟ್’ ಕಳ್ಳ ಬಂಧನ: 25 ಬೈಕ್ ಸೇರಿ ಗ್ಯಾಸ್ ಸಿಲಿಂಡರ್, ಬ್ಯಾಟರಿ ಜಪ್ತಿ!

ಬೆಂಗಳೂರು: ಒಬ್ಬನೇ ಕಳ್ಳ, ಆದರೆ ಕಳ್ಳತನದ ವಿಧಾನ ಮಾತ್ರ ವಿಭಿನ್ನ. ಬೈಕ್‌ಗಳಿಂದ ಹಿಡಿದು ಗ್ಯಾಸ್ ಸಿಲಿಂಡರ್, ವಾಹನ ಬ್ಯಾಟರಿವರೆಗೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅಭಿಷೇಕ್ ಎಂದು ಗುರುತಿಸಲಾಗಿದ್ದು, ಆತನಿಂದ 25 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಆರಂಭದಲ್ಲಿ ಬೈಕ್ ಕಳ್ಳತನ ಪ್ರಕರಣದ ಆಧಾರದ ಮೇಲೆ ಬಂಧನಕ್ಕೆ ಒಳಗಾದ ಅಭಿಷೇಕ್‌ನನ್ನು ವಿಚಾರಣೆ ನಡೆಸಿದಾಗ, ಆತ ಹಲವು ಕಳ್ಳತನಗಳಲ್ಲಿ ತೊಡಗಿದ್ದದ್ದು ಬೆಳಕಿಗೆ ಬಂದಿದೆ. ಬೈಕ್‌ಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬಳಿಕ ಅವುಗಳನ್ನು OLX ಹಾಗೂ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಮಾರಾಟ ಮಾಡುತ್ತಿದ್ದ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಇದಲ್ಲದೆ, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನೂ ಕಳ್ಳತನ ಮಾಡುತ್ತಿದ್ದ ಆರೋಪವೂ ಇದ್ದು, ಈ ಸಂಬಂಧ 12 ಸಿಲಿಂಡರ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳ ಬ್ಯಾಟರಿಗಳನ್ನು ಸಹ ಕಳ್ಳತನ ಮಾಡುತ್ತಿದ್ದನೆಂಬ ಮಾಹಿತಿ ಆಧರಿಸಿ ಒಂದು ದೊಡ್ಡ ವಾಹನದ ಬ್ಯಾಟರಿಯನ್ನೂ ವಶಪಡಿಸಿಕೊಂಡಿದ್ದಾರೆ.

ಅಲ್ಲದೇ, ಆಟೋ ರಿಕ್ಷಾ ಕಳ್ಳತನಕ್ಕೂ ಈತನ ಸಂಪರ್ಕ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಒಂದು ಆಟೋವನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ.

ಸದ್ಯ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಬಾಕಿ ಹಣ ಬಿಡುಗಡೆಗೆ PIL: ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್!

ಬೆಂಗಳೂರು: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಬಾಕಿ ಹಣ ಬಿಡುಗಡೆಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ಬೆಂಗಳೂರಿನ ಕಮಲಾನಗರದ ನಿವಾಸಿ ಆರ್. ಗಂಗಾ ಹಾಗೂ ನಂದಿನಿ ಲೇಔಟ್‌ನ ಜಿ.ಡಿ. ಪವಿತ್ರಾ ಅವರು ಸಲ್ಲಿಸಿದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ನ್ಯಾಯಮೂರ್ತಿಗಳಾದ ಡಾ. ಕೆ. ಮನ್ಮಥ ರಾವ್ ಮತ್ತು ಸೂರಜ್ ಗೋವಿಂದರಾಜ್ ಅವರಿದ್ದ ಪೀಠವು ರಾಜ್ಯ ಹಣಕಾಸು ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಸರ್ಕಾರದ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿದ್ದಾರೆ.

ವರದಿಗಳ ಪ್ರಕಾರ, 2024ರ ಏಪ್ರಿಲ್‌ನಿಂದ 2025ರ ಜನವರಿವರೆಗೆ ನಿರಂತರವಾಗಿ ಹಣ ವಿತರಣೆ ನಡೆದಿದ್ದ ಗೃಹಲಕ್ಷ್ಮಿ ಯೋಜನೆ, ನಂತರದ ತಿಂಗಳಲ್ಲಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಬದಲಾವಣೆಗಳಿಂದ ವ್ಯತ್ಯಯಗೊಂಡಿದೆ. ಇದರ ಪರಿಣಾಮವಾಗಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳು ಫಲಾನುಭವಿಗಳಿಗೆ ಜಮೆಯಾಗದೆ ಬಾಕಿ ಉಳಿದಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

 

ಭಾರೀ ಗಾಳಿ-ಮಳೆಗೆ ಬೆಂಗಳೂರು ಮೆಟ್ರೋ ಸಂಚಾರ ವಿಳಂಬ: ಪ್ರಯಾಣಿಕರಿಗೆ ತೊಂದರೆ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಗಾಳಿ ಹಾಗೂ ಗುಡುಗು ಸಹಿತ ಜಡಿಮಳೆಯಿಂದಾಗಿ ನಮ್ಮ ಮೆಟ್ರೋ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಹಸಿರು ಹಾಗೂ ನೇರಳೆ ಸೇರಿದಂತೆ ಎಲ್ಲಾ ಪ್ರಮುಖ ಮೆಟ್ರೋ ಮಾರ್ಗಗಳಲ್ಲಿ ರೈಲು ಸೇವೆಗಳು ವಿಳಂಬವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ತುರ್ತು ಪ್ರಕಟಣೆ ಹೊರಡಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, ಭಾರೀ ಗಾಳಿ ಮತ್ತು ಮಳೆಯ ಪರಿಣಾಮವಾಗಿ ಮೆಟ್ರೋ ಸೇವೆಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ತಿಳಿಸಿದೆ.

ಪ್ರಯಾಣಿಕರ ಸುರಕ್ಷತೆಯೇ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿರುವ BMRCL, ಈ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ. ಸುರಕ್ಷಿತ ಕಾರ್ಯಾಚರಣೆಗೆ ಆದ್ಯತೆ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ವಿಳಂಬವಾಗಿದೆ. ಪರಿಸ್ಥಿತಿ ಸಹಜವಾಗುವವರೆಗೆ ಪ್ರಯಾಣಿಕರು ಸಿಬ್ಬಂದಿಗಳೊಂದಿಗೆ ಸಹಕರಿಸಬೇಕಾಗಿ ಮನವಿ ಮಾಡಲಾಗಿದೆ.

ಐಪಿಎಲ್ ನಿಯಮ ಉಲ್ಲಂಘನೆ: ಹಾರ್ದಿಕ್ ಪಾಂಡ್ಯಗೆ 1 ಡಿಮೆರಿಟ್ ಪಾಯಿಂಟ್!

ಕೋಲ್ಕತ್ತಾ: ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಬಿಸಿಸಿಐ ಅವರ ಮೇಲೆ ಶಿಸ್ತು ಕ್ರಮ ಕೈಗೊಂಡಿದೆ.

ಪಂದ್ಯದ ವೇಳೆ ಕೋಪದ ಕ್ಷಣದಲ್ಲಿ ವಿಕೆಟ್‌ನ ಬೇಲ್ಸ್‌ಗಳನ್ನು ಬಾಲ್‌ನಿಂದ ಹೊಡೆದು ಕೆಡವಿದ ಹಾರ್ದಿಕ್ ಪಾಂಡ್ಯ ಅವರ ಈ ವರ್ತನೆಯನ್ನು ನೀತಿ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ, ಪಾಂಡ್ಯ ಅವರಿಗೆ ಪಂದ್ಯ ಶುಲ್ಕದ ಶೇ.10 ರಷ್ಟು ದಂಡ ವಿಧಿಸಿದ್ದು, ಜೊತೆಗೆ 1 ಡಿಮೆರಿಟ್ ಅಂಕ ನೀಡಿದೆ.

ಘಟನೆ 10ನೇ ಓವರ್‌ನ 4ನೇ ಎಸೆತದ ವೇಳೆಯಲ್ಲಿ ನಡೆದಿದ್ದು, ಫೀಲ್ಡಿಂಗ್ ವೇಳೆ ರೋವಮನ್ ಪೊವೆಲ್‌ಗೆ ಜೀವದಾನ ಸಿಕ್ಕ ಬಳಿಕ ಪಾಂಡ್ಯ ಅಸಮಾಧಾನಗೊಂಡಿದ್ದರು ಎಂದು ತಿಳಿದುಬಂದಿದೆ. ಈ ಪಂದ್ಯದಲ್ಲಿ ದೀಪಕ್ ಚಹಾರ್ ಹಾಗೂ ರಾಬಿನ್ ಮಿಂಜ್ ಬೌಂಡರಿ ಲೈನ್‌ನಲ್ಲಿ ಕ್ಯಾಚ್ ಕೈಚೆಲ್ಲಿದ ಬಳಿಕ ಪೊವೆಲ್ ಮತ್ತೊಮ್ಮೆ ಅವಕಾಶ ಪಡೆದುಕೊಂಡಿದ್ದರು.

ಪೊವೆಲ್ ಅಂತಿಮವಾಗಿ 30 ಎಸೆತಗಳಲ್ಲಿ 40 ರನ್ ಗಳಿಸಿದರೆ, ಮನೀಷ್ ಪಾಂಡೆ 33 ಎಸೆತಗಳಲ್ಲಿ 45 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ ತಂಡವು 148 ರನ್ ಗುರಿಯನ್ನು 18.5 ಓವರ್‌ಗಳಲ್ಲಿ ತಲುಪಿ 4 ವಿಕೆಟ್ ಜಯ ದಾಖಲಿಸಿತು.

ಮುಂಬೈ ಇಂಡಿಯನ್ಸ್ ಸೋಲಿನೊಂದಿಗೆ ಅಂತ್ಯಗೊಂಡ ಈ ಪಂದ್ಯದಲ್ಲಿ ಪಾಂಡ್ಯ ಅವರ ವರ್ತನೆ ಚರ್ಚೆಗೆ ಕಾರಣವಾಗಿದ್ದು, ಐಪಿಎಲ್ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಮತ್ತೊಮ್ಮೆ ಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಮ್ಮಲ್ಲಿ ಈ ಗುಣಗಳಿದೆಯಾ? ಹಾಗಿದ್ರೆ ಜನ ನಿಮ್ಮನ್ನು ಸುಲಭವಾಗಿ ಕಂಟ್ರೋಲ್ ಮಾಡ್ತಾರೆ!

ವ್ಯಕ್ತಿಯ ಕೆಲವೊಂದು ದೌರ್ಬಲ್ಯಗಳು ಮತ್ತು ಅಭ್ಯಾಸಗಳೇ ಇತರರಿಗೆ ನಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಅವಕಾಶ ಮಾಡಿಕೊಡುತ್ತವೆ ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಎಚ್ಚರಿಸಿದ್ದಾರೆ.

ಆತ್ಮವಿಶ್ವಾಸದ ಕೊರತೆ, ಭಯ, ಎಲ್ಲರನ್ನೂ ಮೆಚ್ಚಿಸುವ ಸ್ವಭಾವ ಮತ್ತು ತಪ್ಪು ಸಹವಾಸ ಇವುಗಳು ವ್ಯಕ್ತಿಯನ್ನು ಮಾನಸಿಕವಾಗಿ ದುರ್ಬಲಗೊಳಿಸಿ, ಇತರರ ನಿಯಂತ್ರಣಕ್ಕೆ ಒಳಪಡಿಸುವ ಪ್ರಮುಖ ಕಾರಣಗಳಾಗಿವೆ ಎಂದು ಅವರು ಹೇಳಿದ್ದಾರೆ.

ಆಚಾರ್ಯ ಚಾಣಕ್ಯರ ಪ್ರಕಾರ, ಆತ್ಮವಿಶ್ವಾಸದ ಕೊರತೆಯಿರುವ ವ್ಯಕ್ತಿಗಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಸಣ್ಣ ವಿಚಾರದಿಂದ ದೊಡ್ಡ ನಿರ್ಧಾರಗಳವರೆಗೆ ಇತರರ ಸಲಹೆ ಮತ್ತು ಬೆಂಬಲವನ್ನು ಅವಲಂಬಿಸುವುದರಿಂದ, ಕ್ರಮೇಣ ಇತರರು ಅವರ ದೌರ್ಬಲ್ಯವನ್ನು ಬಳಸಿಕೊಳ್ಳಲು ಆರಂಭಿಸುತ್ತಾರೆ. ಇದರಿಂದ ವ್ಯಕ್ತಿಯ ಸ್ವತಂತ್ರ ಚಿಂತನೆ ಮತ್ತು ನಿರ್ಧಾರ ಸಾಮರ್ಥ್ಯ ಕುಗ್ಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇನ್ನೂ ಕೆಲವರು ಎಲ್ಲರನ್ನೂ ಸಂತೋಷಪಡಿಸುವ ಉದ್ದೇಶದಿಂದ ಬದುಕುತ್ತಾರೆ. ಯಾರಿಗೂ ‘ಇಲ್ಲ’ ಎಂದು ಹೇಳದೆ, ಇತರರ ಅಭಿಪ್ರಾಯ ಮತ್ತು ಅಗತ್ಯಗಳಿಗೆ ಮಾತ್ರ ಮಹತ್ವ ನೀಡುತ್ತಾರೆ. ಈ ಸ್ವಭಾವದಿಂದ ವ್ಯಕ್ತಿ ತನ್ನ ಸ್ವಂತ ಆಸೆ, ಗುರಿ ಮತ್ತು ಸಂತೋಷವನ್ನು ಕಡೆಗಣಿಸಲು ಆರಂಭಿಸುತ್ತಾನೆ. ಇಂತಹವರನ್ನು ಇತರರು ಸುಲಭವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ ಎಂದು ಚಾಣಕ್ಯರು ಹೇಳಿದ್ದಾರೆ.

ಭಯ ಮತ್ತು ಅಭದ್ರತೆಯ ಭಾವನೆಗಳು ಕೂಡ ವ್ಯಕ್ತಿಯನ್ನು ಇತರರ ನಿಯಂತ್ರಣಕ್ಕೆ ತಳ್ಳುತ್ತವೆ. ವೈಫಲ್ಯದ ಭಯ, ಒಂಟಿತನ ಅಥವಾ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಆತಂಕದಿಂದ ಕೆಲವರು ಇತರರು ಹೇಳಿದಂತೆ ನಡೆಯಲು ಆರಂಭಿಸುತ್ತಾರೆ. ಹೀಗೆ ನಿರಂತರ ಭಯದಲ್ಲಿರುವ ವ್ಯಕ್ತಿಗಳು ತಮ್ಮ ಹಕ್ಕುಗಳ ಪರ ಧ್ವನಿ ಎತ್ತಲು ಸಾಧ್ಯವಾಗುವುದಿಲ್ಲ ಎಂದು ಚಾಣಕ್ಯರು ಅಭಿಪ್ರಾಯಪಟ್ಟಿದ್ದಾರೆ.

ತಪ್ಪು ಸಹವಾಸವೂ ವ್ಯಕ್ತಿತ್ವದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಕುತಂತ್ರಿ ಹಾಗೂ ಸ್ವಾರ್ಥಪರ ವ್ಯಕ್ತಿಗಳು ಮಾನಸಿಕವಾಗಿ ದುರ್ಬಲರಾಗಿರುವವರನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.

ತಮ್ಮ ಕನಸುಗಳು, ಆಸೆಗಳು ಮತ್ತು ಸ್ವಾಭಿಮಾನಕ್ಕಿಂತ ಇತರರ ಅಭಿಪ್ರಾಯಕ್ಕೆ ಹೆಚ್ಚು ಮಹತ್ವ ನೀಡುವವರು ಕ್ರಮೇಣ ತಮ್ಮದೇ ಗುರುತನ್ನು ಕಳೆದುಕೊಳ್ಳುತ್ತಾರೆ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಗಳ ಮೇಲೆ ನಂಬಿಕೆ ಇಟ್ಟು, ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯರು ಸಲಹೆ ನೀಡಿದ್ದಾರೆ.

ವಿಜಯಪುರದಲ್ಲಿ ನೀರಿನ ತುರ್ತು ಪರಿಸ್ಥಿತಿ ಭೀತಿ: ಆಲಮಟ್ಟಿಯಲ್ಲಿ 9 ಟಿಎಂಸಿ ನೀರು ಮಾತ್ರ

ವಿಜಯಪುರ: ಕೃಷ್ಣಾ ನದಿಯ ಮೇಲೆ ಅವಲಂಬಿತವಾಗಿರುವ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಗಂಭೀರ ಸಂಕಷ್ಟ ಎದುರಾಗುವ ಭೀತಿ ಹೆಚ್ಚಾಗಿದೆ. ಆಲಮಟ್ಟಿ ಜಲಾಶಯದಲ್ಲಿ ಸದ್ಯ ಕೇವಲ 9 ಟಿಎಂಸಿ ಬಳಕೆಯ ನೀರು ಮಾತ್ರ ಉಳಿದಿದ್ದು, ಮುಂದಿನ ಮಳೆಗಾಲ ಆರಂಭವಾಗುವವರೆಗೂ ಇದೇ ನೀರಿನ ಮೇಲೆ ಲಕ್ಷಾಂತರ ಜನರು ಮತ್ತು ಜಾನುವಾರುಗಳು ಬದುಕು ಸಾಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ನೀರಿನ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಕೆಲವು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಮಾತ್ರ ನೀರು ಬಿಡಲಾಗುತ್ತಿದ್ದು, ಹಲವೆಡೆ 15 ದಿನಗಳಿಗೊಮ್ಮೆ ನೀರು ಪೂರೈಕೆ ನಡೆಯುತ್ತಿದೆ. ಬೇಸಿಗೆ ತೀವ್ರಗೊಂಡಿರುವ ಹಿನ್ನೆಲೆ ಜಲಾಶಯಗಳಲ್ಲಿ ಬಾಷ್ಪೀಕರಣ ಪ್ರಮಾಣವೂ ಹೆಚ್ಚಿದ್ದು, ಲಭ್ಯವಿರುವ ನೀರಿನ ಪ್ರಮಾಣ ವೇಗವಾಗಿ ಕುಸಿಯುತ್ತಿದೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜೂನ್ ಮಧ್ಯಭಾಗದ ಬಳಿಕವೇ ಸಮರ್ಪಕ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಒಂದು ತಿಂಗಳು ನೀರಿನ ನಿರ್ವಹಣೆ ಸರ್ಕಾರ ಮತ್ತು ಸ್ಥಳೀಯ ಆಡಳಿತಕ್ಕೆ ದೊಡ್ಡ ಸವಾಲಾಗಿದೆ. ಕೃಷ್ಣಾ ನದಿಗೆ ಪೂರಕವಾಗಿದ್ದ ಭೀಮಾ ನದಿಯೂ ಸಂಪೂರ್ಣ ಖಾಲಿಯಾಗಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಒಂದು ವೇಳೆ ಜೂನ್ ತಿಂಗಳಲ್ಲೂ ಮಳೆ ಕೈಕೊಟ್ಟರೆ, ವಿಜಯಪುರ-ಬಾಗಲಕೋಟೆ ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂಬ ಆತಂಕ ಸಾರ್ವಜನಿಕರಲ್ಲಿ ಹೆಚ್ಚಾಗಿದೆ.

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ: ಪಿಒಕೆ ಕಚೇರಿಯೊಳಗೆ ನುಗ್ಗಿ ಗುಂಡಿನ ದಾಳಿ

ಇಸ್ಲಾಮಾಬಾದ್/ನವದೆಹಲಿ: 2019ರ ಪುಲ್ವಾಮಾ ಉಗ್ರ ದಾಳಿಯ ಪ್ರಮುಖ ಸಂಚುಕೋರ ಹಾಗೂ ಅಲ್-ಬದರ್ ಉಗ್ರ ಸಂಘಟನೆಯ ಕಮಾಂಡರ್ ಹಮ್ಜಾ ಬುರ್ಹಾನ್ ಅಲಿಯಾಸ್ ‘ಡಾಕ್ಟರ್’ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ. ಮುಜಾಫರಾಬಾದ್‌ನಲ್ಲಿದ್ದ ಆತನ ಕಚೇರಿಯೊಳಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಹಮ್ಜಾ ಮೇಲೆ ಏಕಾಏಕಿ ಗುಂಡಿನ ಮಳೆಗರೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತ ಬಳಿಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಹಮ್ಜಾ ಬುರ್ಹಾನ್‌ನ ನಿಜವಾದ ಹೆಸರು ಅರ್ಜುಮಂಡ್ ಗುಲ್ಜಾರ್ ದಾರ್. ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರತ್ನಿಪೋರಾ ಮೂಲದ ಈತ, ಹಲವು ವರ್ಷಗಳ ಹಿಂದೆ ಗಡಿ ದಾಟಿ ಪಾಕಿಸ್ತಾನ ಸೇರಿಕೊಂಡಿದ್ದನು. ಬಳಿಕ ಪಾಕಿಸ್ತಾನ ಬೆಂಬಲಿತ ಅಲ್-ಬದರ್ ಉಗ್ರ ಸಂಘಟನೆಯಲ್ಲಿ ಪ್ರಮುಖ ಕಮಾಂಡರ್ ಆಗಿ ಬೆಳೆದಿದ್ದ.

2019ರ ಫೆಬ್ರವರಿ 14ರಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ಯೋಧರ ವಾಹನದ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಹಿಂದೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಭಾರತ ಆರೋಪಿಸಿತ್ತು. ಹಮ್ಜಾ ಬುರ್ಹಾನ್ ದಾಳಿಯ ಪ್ರಮುಖ ಓವರ್ ಗ್ರೌಂಡ್ ವರ್ಕರ್ ಆಗಿ ಕಾರ್ಯನಿರ್ವಹಿಸಿದ್ದ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ದಕ್ಷಿಣ ಕಾಶ್ಮೀರದಲ್ಲಿ ಯುವಕರನ್ನು ಉಗ್ರ ಸಂಘಟನೆಗಳಿಗೆ ಸೇರ್ಪಡೆ ಮಾಡುವುದು, ಹಣಕಾಸು ನೆರವು ಒದಗಿಸುವುದು ಹಾಗೂ ಉಗ್ರ ಚಟುವಟಿಕೆಗಳಿಗೆ ಲಾಜಿಸ್ಟಿಕ್ ಬೆಂಬಲ ನೀಡುವುದು ಹಮ್ಜಾ ಪ್ರಮುಖ ಕೆಲಸವಾಗಿತ್ತು. ಈ ಹಿನ್ನೆಲೆ ಭಾರತ ಸರ್ಕಾರದ ಗೃಹ ಸಚಿವಾಲಯವು 2022ರಲ್ಲಿ ಯುಎಪಿಎ ಕಾಯ್ದೆಯಡಿ ಆತನನ್ನು ಅಧಿಕೃತವಾಗಿ ಭಯೋತ್ಪಾದಕ ಎಂದು ಘೋಷಿಸಿತ್ತು.

ಪುಲ್ವಾಮಾ ದಾಳಿಯ ಬಳಿಕ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ಉಗ್ರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಇದೀಗ ಪಾಕಿಸ್ತಾನ ಮತ್ತು ಪಿಒಕೆ ಪ್ರದೇಶಗಳಲ್ಲಿ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಮೇಲೆ ನಡೆಯುತ್ತಿರುವ ಸರಣಿ ಟಾರ್ಗೆಟ್ ಕಿಲ್ಲಿಂಗ್‌ಗಳಲ್ಲಿ ಹಮ್ಜಾ ಬುರ್ಹಾನ್ ಹತ್ಯೆಯೂ ಪ್ರಮುಖ ಘಟನೆಯಾಗಿ ಗುರುತಿಸಲಾಗಿದೆ.