Home Blog Page 207

ಖ್ಯಾತ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ವಿಧಿವಶ!

0

ಖ್ಯಾತ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ (83) ಅವರು ಬುಧವಾರ ರಾತ್ರಿ ಪುಣೆಯಲ್ಲಿ ನಿಧನರಾದರು.

ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಮಾಜಿ ಸದಸ್ಯರಾಗಿದ್ದ ಅವರು, 2010ರಲ್ಲಿ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿಯ ಮುಖ್ಯಸ್ಥರಾಗಿದ್ದು, ಅವರ ಅಧ್ಯಯನ ಆಧಾರಿತ ವರದಿ ‘ಗಾಡ್ಗೀಳ್ ಆಯೋಗದ ವರದಿ’ ಎಂದು ಪ್ರಸಿದ್ಧಿಯಾಯಿತು.

1942ರ ಮೇ 24ರಂದು ಪುಣೆಯಲ್ಲಿ ಜನಿಸಿದ ಡಾ. ಗಾಡ್ಗೀಳ್ ಅವರು ಫರ್ಗುಸನ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದು, ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಮತ್ತು ಪಿಎಚ್‌ಡಿ ಪಡೆದಿದ್ದರು. 1971ರಲ್ಲಿ ಭಾರತಕ್ಕೆ ಮರಳಿ, 1973ರಿಂದ 2004ರವರೆಗೆ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನಲ್ಲಿ ಸುಮಾರು 30 ವರ್ಷ ಸೇವೆ ಸಲ್ಲಿಸಿದ್ದರು. ಜೊತೆಗೆ NCERT, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

ವಿಜ್ಞಾನ ಕ್ಷೇತ್ರದ ಜೊತೆಗೆ ಕ್ರೀಡಾರಂಗದಲ್ಲೂ ಸಾಧನೆ ಮಾಡಿದ್ದ ಅವರು, ಹೈಜಂಪ್‌ನಲ್ಲಿ ಮಹತ್ವದ ದಾಖಲೆಗಳನ್ನು ನಿರ್ಮಿಸಿದ್ದರು ಇದೀಗ ಅವರ ನಿಧನಕ್ಕೆ ಹಲವು ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.

ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನಕ್ಕೆ ಯತ್ನ; ಇಬ್ಬರು ಖದೀಮರು ಅರೆಸ್ಟ್

0

ಮಂಡ್ಯ:-ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನಕ್ಕೆ ಯತ್ನಿಸಿದ ಇಬ್ಬರು ಖದೀಮರು ಸಿಕ್ಕಿ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ಜರುಗಿದೆ.

ಆರೋಪಿಗಳು, ವಿಳಾಸ ಕೇಳುವ ನೆಪದಲ್ಲಿ ಗ್ರಾಮದ ಬಸ್ ನಿಲ್ದಾಣದ ಬಳಿ ನಿಂತಿದ್ದ ಮಹಿಳೆಯ ಬಳಿ ಸರಕಿತ್ತು ಪರಾರಿ ಆಗಲು ಯತ್ನಿಸಿದ್ದಾರೆ. ಈ ವೇಳೆ ಸಾರ್ವಜನಿಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬಳಿಕ ಸ್ಥಳೀಯರು, ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೂಡಲೇ ಬೆಸಗರಹಳ್ಳಿ ಪೋಲೀಸರು, ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸರಗಳ್ಳತನ ಯತ್ನದ ಮಾಹಿತಿ ತಿಳಿದು ಸ್ಥಳಕ್ಕೆ ಎಸ್ಪಿ ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಗದಗ| ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

0

ಗದಗ:- ಜಿಲ್ಲೆಯ ಪಾಪನಾಶಿ ಟೋಲ್ ನಾಕಾ ಬಳಿ ಸರ್ಕಾರಿ ಬಸ್‌ನಲ್ಲಿ ಹತ್ತಿದ್ದ ಬಾಲಕಿಯನ್ನು ಇಳಿಸಿದ್ದಕ್ಕೆ ಕೋಪಗೊಂಡ ತಂದೆ ಹಾಗೂ ಇನ್ನೊಬ್ಬ ವ್ಯಕ್ತಿ ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗದಗ ಜಿಲ್ಲಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಘಟನೆಯು ಜನವರಿ 6, 2026ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ ನಡೆದಿತ್ತು. NWKRTCಗೆ ಸೇರಿದ KA-26 F-0852 ನಂಬರ್ ಬಸ್‌ನ ಮಹಿಳಾ ಕಂಡಕ್ಟರ್ ನೇತ್ರಾವತಿ ಗಂಡ ಮಹಾಂತೇಶ ಪತ್ರಿಮಠ (ವಯಸ್ಸು 46) ಅವರು ಟೋಲ್ ನಾಕಾ ಬಳಿ ಬಸ್ ನಿಲ್ಲಿಸಲು ಅವಕಾಶವಿಲ್ಲದ ಕಾರಣ ವಿದ್ಯಾರ್ಥಿನಿಯೊಬ್ಬಳನ್ನು ಹತ್ತಿಸದೇ ಕೆಳಗಿಳಿಸಿದ್ದರು.

ಇದರಿಂದ ಕೋಪಗೊಂಡ ಆಕೆಯ ತಂದೆ ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದ ಪ್ರಕಾಶ ಲಕ್ಷ್ಮಣ ಸಂಕಣ್ಣವರ ಹಾಗೂ ಶಿಂಗಟರಾಯನಕೇರಿಯ ನೀಲಪ್ಪ @ ಮುತ್ತಣ್ಣ ಹುಚ್ಚಪ್ಪ ಜಂತ್ಲಿ ಇಬ್ಬರು, ಮಹಿಳಾ ಕಂಡಕ್ಟರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಹಲ್ಲೆಗೊಳಗಾದ ನೇತ್ರಾವತಿ ಅವರು‌ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಗದಗ ಗ್ರಾಮೀಣ ಪೊಲೀಸರು, ತ್ವರಿತ ಕ್ರಮ ಕೈಗೊಂಡು ಆರೋಪಿಗಳಾದ ಪ್ರಕಾಶ ಸಂಕಣ್ಣವರ ಹಾಗೂ ನೀಲಪ್ಪ ಜಂತ್ಲಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದೇವನಹಳ್ಳಿ ಬ್ರೇಕಿಂಗ್: ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆ!

0

ದೇವನಹಳ್ಳಿ: ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.

ವಿಜಯಪುರ ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಸೀಟ್‌ನ್ನು ಹಿಂದಕ್ಕೆ ಮಡಚಿಕೊಂಡು ಮಲಗಿದ್ದ ಸ್ಥಿತಿಯಲ್ಲಿ ಚಾಲಕನ ಶವ ಪತ್ತೆಯಾಗಿದೆ. ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಎದ್ದಿಲ್ಲವೆಂದು ಅನುಮಾನಗೊಂಡ ಸ್ಥಳೀಯರು ಎಬ್ಬಿಸಲು ಯತ್ನಿಸಿದ್ದಾರೆ. ಆದರೆ ಪ್ರತಿಕ್ರಿಯೆ ಇಲ್ಲದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಕಾರಿನೊಳಗೆ ವ್ಯಕ್ತಿ ಮೃತಪಟ್ಟಿರುವುದು ದೃಢಪಟ್ಟಿದೆ. ಪ್ರಾಥಮಿಕ ತನಿಖೆಯಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮೃತನ ಜೇಬಿನಲ್ಲಿ ಶಿಡ್ಲಘಟ್ಟ ತಾಲೂಕಿನ ತಾಳಹಳ್ಳಿ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದು, ಘಟನೆ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿ ಹತ್ಯೆ ಪ್ರಕರಣ; ಪ್ರಮುಖ ಆರೋಪಿ ʻಶಿಕಾರಿʼ ರಾಜ ಗೋವಿಂದ ಅರೆಸ್ಟ್‌!

0

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದಿದ್ದ ದೈತ್ಯ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2025ರ ಅಕ್ಟೋಬರ್ 3ರಂದು ಹನೂರು ವಲಯದ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ತಲೆ, ಭುಜ ಹಾಗೂ ಮುಂದಿನ ಕಾಲುಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದ ಅರಣ್ಯಾಧಿಕಾರಿಗಳು, ಪ್ರಕರಣದ ಪ್ರಮುಖ ಆರೋಪಿ ಗೋವಿಂದನನ್ನು ಬಂಧಿಸಿದ್ದಾರೆ. ಹುಲಿ ಹತ್ಯೆಯ ಬಳಿಕ ಆರೋಪಿ ಗೋವಿಂದ ತಲೆಮರೆಸಿಕೊಂಡಿದ್ದ. ಆದರೆ ಹಳೆಯ ಪ್ರಕರಣವೊಂದರ ಹಿನ್ನೆಲೆ ಮೈಸೂರು ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದನೆಂಬ ಖಚಿತ ಮಾಹಿತಿ ಅರಣ್ಯಾಧಿಕಾರಿಗಳಿಗೆ ಲಭಿಸಿತ್ತು. ಇದರಿಂದ ಕೋರ್ಟ್ ಆವರಣದಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದರು. ಕೋರ್ಟ್ ಆವರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ರೈಲು ಹತ್ತಿ ಪರಾರಿಯಾಗಲು ಪ್ರಯತ್ನಿಸಿದರೂ, ಅವನನ್ನು ಬೆನ್ನತ್ತಿದ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿ ಬಂಧಿಸಿದ್ದಾರೆ.

ಈ ಪ್ರಕರಣವನ್ನು ಕೆಡಿಪಿ ಸಭೆ ಹಾಗೂ ಅರಣ್ಯ ಸಚಿವರ ನೇತೃತ್ವದ ಸಭೆಯಲ್ಲೂ ಎರಡು ಬಾರಿ ಪ್ರಸ್ತಾಪಿಸಲಾಗಿತ್ತು. ‘ಮಿನಿ ವೀರಪ್ಪನ್’ ಎಂದು ಕರೆಯಲ್ಪಟ್ಟಿದ್ದ ಆರೋಪಿಯನ್ನು ಬಂಧಿಸುವಂತೆ ವ್ಯಾಪಕ ಒತ್ತಾಯವೂ ವ್ಯಕ್ತವಾಗಿತ್ತು. ಇದೀಗ ಪ್ರಮುಖ ಆರೋಪಿಯ ಬಂಧನದಿಂದ ತನಿಖೆಗೆ ಮಹತ್ವದ ಮುನ್ನಡೆ ದೊರೆತಿದೆ. ಆರೋಪಿ ಗೋವಿಂದ ಅರಣ್ಯದಲ್ಲಿ ಗುಂಪು ಕಟ್ಟಿಕೊಂಡು ಶಿಕಾರಿಯಲ್ಲಿ ತೊಡಗುತ್ತಿದ್ದನೆಂಬ ಮಾಹಿತಿ ಲಭ್ಯವಾಗಿದೆ. ಈತನ ವಿರುದ್ಧ ಈಗಾಗಲೇ ಪೊಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಪ್ರಕರಣವನ್ನು ಭೇದಿಸಿದ ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕೋಗಿಲು ಲೇಔಟ್ ಮನೆ ತೆರವು ಕೇಸ್; ಹಣ ಪಡೆದು ಸರ್ಕಾರಿ ಜಾಗ ಕೊಟ್ಟ ನಾಲ್ವರ ವಿರುದ್ಧ ಎಫ್ಐಆರ್ ದಾಖಲು!

0

ಬೆಂಗಳೂರು:- ಕೋಗಿಲು ಲೇಔಟ್ ಮನೆ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಪಡೆದು ಸರ್ಕಾರಿ ಜಾಗ ಕೊಟ್ಟ ನಾಲ್ವರ ವಿರುದ್ಧ ಇದೀಗ FIR ದಾಖಲಾಗಿದೆ.

ಯಲಹಂಕ ಪೊಲೀಸ್ ಠಾಣೆಯಲ್ಲಿ ಸ್ಥಳೀಯರಿಂದ ಹಣ ಪಡೆದು ಮನೆ ನೀಡಿದ ಆರೋಪದಡಿ ಎ1 ವಿಜಯ್, ಎ2 ವಸೀಂ, ಎ3 ಮುನಿ ಆಂಜನಪ್ಪ, ಎ4 ರಾಬೀನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಘನತ್ಯಾಜ್ಯ ನಿರ್ವಹಣಾ ನಿಗಮದ ಅಧಿಕಾರಿ ಸಂತೋಷ್ ಕಡಾಡಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮಂಗಳವಾರ ಸಂಜೆ ಎ1 ವಿಜಯ್ ಹಾಗೂ ಎ2 ವಸೀಂ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದೇ ವೇಳೆ, ಕೋಗಿಲು ಲೇಔಟ್‌ನಲ್ಲಿ ಎರಡನೇ ದಿನವೂ ಅಧಿಕಾರಿಗಳು ದಾಖಲೆ ಪರಿಶೀಲನೆ ಮುಂದುವರಿಸಿದ್ದಾರೆ. ನಿವಾಸಿಗಳನ್ನು ಯಲಹಂಕ ಠಾಣೆಗೆ ಕರೆಸಿ ಎರಡು ತಂಡಗಳಲ್ಲಿ ತಲಾ ಐದು ಮಂದಿಯಂತೆ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಕೋಗಿಲು ಲೇಔಟ್‌ನ ನಿರಾಶ್ರಿತರಿಗೆ ಮನೆ ಹಂಚಿಕೆ ವಿಳಂಬವಾಗುವ ಸಾಧ್ಯತೆ ಇದ್ದು, ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವಸ್ತುಸ್ಥಿತಿಯ ಬಗ್ಗೆ ಚರ್ಚಿಸಿ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಸರ್ಕಾರಿ ಜಾಗದಲ್ಲಿ ಶೆಡ್ ನಿರ್ಮಿಸಿದವರಿಗೆ ಮನೆ ನೀಡುವ ಕುರಿತು ಸಾಧಕ-ಬಾಧಕಗಳನ್ನೂ ಸಭೆಯಲ್ಲಿ ಚರ್ಚಿಸಲಾಗುತ್ತದೆ.

ಈ ನಡುವೆ ವಸತಿ ಇಲಾಖೆ ಅಧಿಕಾರಿಗಳು ಬೈಯಪ್ಪನಹಳ್ಳಿಯ ಅಪಾರ್ಟ್‌ಮೆಂಟ್ ಬಳಿ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸಿದ್ದು, ಸಿಎಂ ಗ್ರೀನ್ ಸಿಗ್ನಲ್ ನೀಡಿದ ಕೂಡಲೇ ಮನೆ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಎಲ್ಲಾ ಪತ್ರಕರ್ತರ ಮಕ್ಕಳೂ ಸಾಧಕರಾಗಬೇಕು

0

ವಿಜಯಸಾಕ್ಷಿ ಸುದ್ದಿ, ಗದಗ: ಹಿರಿಯ ಪತ್ರಕರ್ತ ಅನಂತ ಕಾರ್ಕಳ ಪುತ್ರಿ ಸಹನಾ ಎಲ್‌ಎಲ್‌ಎಂನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಗೋಲ್ಡ್ ಮೆಡಲ್ ಪಡೆದ ಹಿನ್ನೆಲೆಯಲ್ಲಿ ಗದಗ ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದಿಂದ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾನಿಪ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜ್ಯ ರಾಜು ಹೆಬ್ಬಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹನಾ ಅವರ ಸಾಧನೆ ಇಡೀ ಪತ್ರಕರ್ತ ಬಳಗಕ್ಕೆ ಸಂತಸ ತಂದಿದೆ. ಸಹನಾ ನಮ್ಮ ಮನೆ ಮಗಳಾಗಿ ಈ ಸಾಧನೆ ಮಾಡಿದ್ದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹನಾ ಅನಂತ ಕಾರ್ಕಳ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನ ಸ್ವೀಕರಿಸುತ್ತಿರುವುದು ಖುಷಿ ತಂದಿದೆ. ಎಲ್ಲಾ ಪತ್ರಕರ್ತರ ಮಕ್ಕಳೂ ಸಾಧನೆ ಮಾಡಬೇಕು, ಪ್ರತಿ ವರ್ಷ ಸಾಧನೆ ಮಾಡಿದ ಎಲ್ಲರಿಗೂ ಸನ್ಮಾನ ಮಾಡಬೇಕೆಂದರು.

ಹಿರಿಯ ಪತ್ರಕರ್ತ ಜಗದೀಶ ಕುಲಕರ್ಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹನಾ ತಾಯಿ ಮಂಗಳಾ ಅನಂತ ಕಾರ್ಕಳ, ನ್ಯಾಯವಾದಿ ಟಿ.ಎನ್. ಭಾಂಡಗೆ, ಹಿರಿಯ ಪತ್ರಕರ್ತರಾದ ಆನಂದ ಸಾಲಿಗ್ರಾಮ, ಎಚ್.ಎಂ. ಶರೀಫನವರ, ಗಣೇಶ ಪೈ, ಸಂಜೀವಕುಮಾರ ಪಾಂಡ್ರೆ, ಪತ್ರಕರ್ತರಾದ ಸಂತೋಷ ಕೊಣ್ಣೂರ, ಸುರೇಶ ಕಡ್ಲಿಮಟ್ಟಿ, ನಿಂಗನಗೌಡ, ಕ್ಯಾಮರಾಮನ್ ವಿಜಯ್ ಕಾಗನೂರಮಠ, ಮಂಜುನಾಥ ಸಾಳೇರ, ಗಣೇಶ ದೊಡ್ಡಮನಿ ಮುಂತಾದವರಿದ್ದರು.

ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ ಸ್ವಾಗತಿಸಿದರು. ಹಿರಿಯ ಪತ್ರಕರ್ತ, ಕಾನಿಪ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಆನಂದಯ್ಯ ವಿರಕ್ತಮಠ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅರುಣಕುಮಾರ ಹಿರೇಮಠ ವಂದಿಸಿದರು.

ಹಿರಿಯ ಪತ್ರಕರ್ತ ಅನಂತ ಕಾರ್ಕಳ ಮಾತನಾಡಿ, ಎಲ್‌ಎಲ್‌ಬಿ ಪಾಸಾಗುವುದೇ ಇಂದಿನ ದಿನದಲ್ಲಿ ಕಷ್ಟಕರವಾಗಿರುವಾಗ, ಎಲ್‌ಎಲ್‌ಎಂನಲ್ಲಿ ನನ್ನ ಮಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಗೋಲ್ಡ್ ಮೆಡಲ್ ಪಡೆದಿರುವುದು ನಿಜಕ್ಕೂ ಸಾಧನೆಯೇ ಸರಿ. ಇಂತಹ ಸಾಧನೆ ಮಾಡಿದ ಪುತ್ರಿ ಸಹನಾಗೆ ಕಾನಿಪದಿಂದ ಸನ್ಮಾನ ಸಮಾರಂಭ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಪತ್ರಕರ್ತರ ಮಕ್ಕಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾದರಿಯಾಗಿದೆ ಎಂದರು.

ಸಹನಾ ಕಾರ್ಕಳರದ್ದು ದಾಖಲೆಯ ಸಾಧನೆ: ಡಾ. ಬಸವರಾಜ ಬಳ್ಳಾರಿ 

0

ವಿಜಯಸಾಕ್ಷಿ ಸುದ್ದಿ, ಗದಗ: ಐಐ.ಒ ಸ್ನಾತಕೋತ್ತರ ಪದವಿಯಲ್ಲಿ ಗೋಲ್ಡ್ ಮೆಡಲ್‌ನೊಂದಿಗೆ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದು ಗದಗಿನ ಶಿಕ್ಷಣ ಕ್ಷೇತ್ರದ ಗರಿಮೆಯನ್ನು ಹೆಚ್ಚಿಸಿರುವ ಸಹನಾ ಅನಂತ ಕಾರ್ಕಳವರ ದಾಖಲೆಯ ಸಾಧನೆ ನಮಗೆಲ್ಲ ಹೆಮ್ಮೆ ತಂದಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಪ್ರಶಂಸೆ ವ್ಯಕ್ತಪಡಿಸಿದರು.

ಐಐ.ಒದಲ್ಲಿ ಗೋಲ್ಡ್ ಮೆಡಲ್‌ನೊಂದಿಗೆ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿರುವ ಸಹನಾ ಅನಂತ ಕಾರ್ಕಳ ಅವರನ್ನು ರಾಜ್ಯ ಸರಕಾರಿ ನೌಕರರ ಸಂಘದ ಪರವಾಗಿ ಸಂಘದ ಕಚೇರಿಯಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರಿ ನೌಕರರ ಸಂಘದ ನಿಕಟಪೂರ್ವ ಉಪಾಧ್ಯಕ್ಷ ಡಾ. ರವಿ ಎಲ್. ಗುಂಜೀಕರ ಮಾತನಾಡಿ, ಸಹನಾ ಅನಂತ ಕಾರ್ಕಳ ಕಾನೂನು ಪದವೀಧರ ಕಲಿಕಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ವೇದಿಕೆಯ ಮೇಲಿದ್ದ ಜಿಲ್ಲಾ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಡಿ.ಎಸ್. ದುರ್ಗಣ್ಣವರ, ರಾಜು ಕಂಟೆಗಣ್ಣನವರ, ಹಿರಿಯ ಪತ್ರಕರ್ತ ಜಗದೀಶ ಕುಲಕರ್ಣಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅರುಣಕುಮಾರ ಹಿರೇಮಠ, ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಆನಂದಯ್ಯ ವಿರಕ್ತಮಠ, ನ್ಯಾಯವಾದಿ ಟಿ.ಎನ್. ಭಾಂಡಗೆ, ಪತ್ರಕರ್ತ ಆನಂದ ಸಾಲಿಗ್ರಾಮ, ಹಿರಿಯ ಪತ್ರಕರ್ತ ಅನಂತ ಎಸ್. ಕಾರ್ಕಳ, ಏಪಿಎಂಸಿ ಡೆಪ್ಯೂಟಿ ಮ್ಯಾನೇಜರ್ ಮಂಗಳಾ ಅನಂತ ಕಾರ್ಕಳ, ನಿವೃತ್ತ ನೌಕರರಾದ ಮಕಾನಾದರ ಮುಂತಾದವರು ಶುಭ ಹಾರೈಸಿದರು.

ಸಮಾರಂಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ಅರುಣಕುಮಾರ ಹಿರೇಮಠ, ಆನಂದಯ್ಯ ವಿರಕ್ತಮಠ, ಆನಂದ ಸಾಲಿಗ್ರಾಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಸಂಜೀವಕುಮಾರ ಕುಂದಗೋಳ ಸ್ವಾಗತಿಸಿದರು. ಕಾರ್ಯದರ್ಶಿ ಮುತ್ತು ಮಲಕಶೆಟ್ಟಿ ನಿರೂಪಿಸಿದರು. ಕಚೇರಿ ವ್ಯವಸ್ಥಾಪಕ ಕರೀಮಸಾಬ ಸುಣಗಾರ ವಂದಿಸಿದರು.

ಸಹನಾ ಅನಂತ ಕಾರ್ಕಳ ರಾಜ್ಯ ಸರಕಾರಿ ನೌಕರರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಷ್ಟಪಟ್ಟು ಕಲಿತರೆ ಯಾವುದೂ ಕಷ್ಟವಾಗಲಾರದು. ಸಾಧನೆ ಯಾರ ಸ್ವತ್ತಲ್ಲ. ಸಾಧಿಸುವ ಛಲ ಇರಬೇಕೆಂದರಲ್ಲದೆ, ಪ್ರತಿಭೆಗಳನ್ನು ಹುಡುಕಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ತಮ್ಮ ಸಾಧನೆಯನ್ನು ಗುರುತಿಸಿದ ರಾಜ್ಯ ಸರಕಾರಿ ನೌಕರರ ಸಂಘ ತಮಗೆ ಸನ್ಮಾನಿಸಿ ಗೌರವಿಸಿದ್ದಕ್ಕೆ ನಾನು ಋಣಿಯಾಗಿದ್ದೇನೆ ಎಂದರು.

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ನಡೆದ ಗದಗ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳು ಭಾಗವಹಿಸಿ ವಿಜೇತರಾಗಿದ್ದು, ಸಿಬ್ಬಂದಿಗಳಿಗೆ ಇಲಾಖೆಯ ಉಪನಿರ್ದೇಶಕರಾದ ಡಾ. ನಂದಾ ಹಣಬರಟ್ಟಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಡಾ. ನಂದಾ ಹಣಬರಟ್ಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಇವರ ಸ್ವರಚಿತ ನಾಟಕ ಗೌಡನ ಮಗಳು-ಪಾತ್ರದಾರಿಗಳು ನಂದಾ ಹಣಬರಟ್ಟಿ, ಸಿಬ್ಬಂದಿಗಳಾದ ಬಿ.ಎಸ್. ಗುಡಿ, ದೀಪಾ ಶೆಟ್ಟರ್, ಶ್ರೀಕಾಂತ, ವಸಂತಾ, ವಿದ್ಯಾ, ಸುಜಾತಾ, ರೋಹನ, ಪಾಪಣ್ಣವರ, ಧರ್ಮರಾಜ, ಪ್ರವೀಣ ಗಾಯಕರ, ಕಸ್ತೂರಿ ನರ್ತಿ ಇವರುಗಳು ಕಿರುನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಡಾ. ನಂದಾ ಹಣಬರಟ್ಟಿ ಮತ್ತು ಇಲಾಖೆಯ ಸಿಬ್ಬಂದಿಗಳಾದ ಸುಜಾತಾ ಪಾಟೀಲ, ದೀಪಾ ಶೆಟ್ಟರ್, ಕಸ್ತೂರಿ ನರ್ತಿ, ಶ್ರೀಕಾಂತ ಅರಹುಣಸಿ, ಬಿ.ಎಸ್. ಗುಡಿ, ಮುತ್ತಣ್ಣ ಸಂಕನೂರ, ಎಂ.ಎಂ. ಪಾಪಣ್ಣವರ ಇವರುಗಳು ಜಾನಪದ ಸಮೂಹ ಗೀತೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಶ್ರೀಕಾಂತ ಅರಹುಣಸಿ ಭಾವಗೀತೆ ಸ್ಪರ್ಧೆಯಲ್ಲಿ ದ್ವಿತೀಯ, ಸಿದ್ದಲಿಂಗೇಶ ಯಚ್ಚಲಗಾರ ಪುರುಷರ 800 ಮೀ ಓಟದಲ್ಲಿ ದ್ವಿತೀಯ, ಸಿದ್ಧಲಿಂಗೇಶ ಯಚ್ಚಲಗಾರ ಪುರುಷರ 100 ಮೀ ಓಟದಲ್ಲಿ ತೃತೀಯ, ಪ್ರಶಾಂತ ಸಂಗ್ರೇಶಿ ಪುರುಷರ 110 ಮೀ ಅಡೆತಡೆ ಓಟದಲ್ಲಿ ಪ್ರಥಮ, ಸಿದ್ದಪ್ಪ ಮಾದರ ಪುರುಷರ 64 ಕೆಜಿ ವೇಟ್ ಲಿಫ್ಟಿಂಗ್‌ದಲ್ಲಿ ದ್ವಿತೀಯ, ಮಂಜುನಾಥ ಮಾದರ ಪುರುಷರ 67 ಕೆಜಿ ಕುಸ್ತಿಯಲ್ಲಿ ದ್ವಿತೀಯ, ಶಿವಗಂಗವ್ವ ಕಬ್ಬೇರಹಳ್ಳಿ ಮಹಿಳೆಯರ 800 ಮೀ ಓಟದಲ್ಲಿ ತೃತೀಯ, ಮಾಬುಸಾಬ ಕರಣಿ ಪುರುಷರ 83 ಕೆಜಿ ವೇಟ್ ಲಿಫ್ಟಿಂಗ್‌ನಲ್ಲಿ ದ್ವಿತೀಯ, ಸದಾಶಿಬ ಬುದ್ನಿ ಪುರುಷರ 87 ಕೆಜಿ ಕುಸ್ತಿಯಲ್ಲಿ ಪ್ರಥಮ, ವಿಶಾಲ ಹಾದಿಮನಿ, ಬಿ.ವಿ. ಬಸವರೆಡ್ಡಿಯವರ, ನವೀನ ಕುಮಾರ ಹರಿಜನ, ಪ್ರಶಾಂತ ಸಂಗ್ರೇಶಿ, ನೀಲಕಂಠಯ್ಯ ಎಸ್, ಮಹಮ್ಮದರಫಿ ನದಾಫ್ ಅವರು ಪುರುಷರ ಫುಟ್ಬಾಲ್‌ನಲ್ಲಿ ಪ್ರಥಮ, ಬಿ.ವಿ. ಬಸವರೆಡ್ಡಿಯವರ ಪುರುಷರ ಬಾಸ್ಕೆಟ್ ಬಾಲ್‌ನಲ್ಲಿ ಪ್ರಥಮ, ಮಂಜುಳಾ ಅರಳಿಗಿಡದ ಮಹಿಳೆಯರ ಥ್ರೋಬಾಲ್‌ನಲ್ಲಿ ಪ್ರಥಮ, ರಾಘವೇಂದ್ರ ಗೋಕಾಕ್ ಪುರುಷರ ಹಾಕಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಶೈಕ್ಷಣಿಕ ಕ್ರಾಂತಿಗೆ ಸಾವಿತ್ರಿಬಾಯಿ ಮುನ್ನುಡಿ: ಡಾ. ಚೈತ್ರಾ

0

ವಿಜಯಸಾಕ್ಷಿ ಸುದ್ದಿ, ಗದಗ: ಸಾಮಾಜಿಕ ಸಮಸ್ಯೆಗಳಿಗೆ ಶಿಕ್ಷಣವೊಂದೇ ಪರಿಹಾರ ಎಂಬುದನ್ನು ಅರಿತು ಜ್ಯೋತಿಬಾ ಫುಲೆ ಅವರ ಸಹಕಾರದೊಂದಿಗೆ ಶಾಲೆಗಳನ್ನು ಸ್ಥಾಪಿಸುವ ಮೂಲಕ ಮಹಿಳೆಯರಿಗೆ ಮತ್ತು ಕೆಳವರ್ಗದ ಜನರಿಗೆ ಶಿಕ್ಷಣವನ್ನು ನೀಡಿ ಶೈಕ್ಷಣಿಕ ಕ್ರಾಂತಿಗೆ ಸಾವಿತ್ರಿಬಾಯಿ ಫುಲೆ ಮುನ್ನುಡಿ ಬರೆದರು ಎಂದು ಎಂ.ಜಿ.ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ. ಚೈತ್ರಾ ತಿಳಿಸಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನದಲ್ಲಿ ಮೈಲಾರಪ್ಪ ಮೆಣಸಗಿ ಸ್ಮರಣಾರ್ಥ ಜರುಗಿದ ಕುಮಾರವ್ಯಾಸ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಸ್ಪೃಶ್ಯತೆ, ಬಾಲ್ಯವಿವಾಹ, ಸತಿ ಸಹಗಮನ, ಕೇಶಮುಂಡನದಂತಹ ಅನಿಷ್ಠ ಆಚರಣೆಗಳ ವಿರುದ್ಧ ಹೋರಾಟವನ್ನು ಮಾಡಿದರು. ಮಹಿಳಾ ಸಬಲೀಕರಣಕ್ಕೆ ಸಾವಿತ್ರಿಬಾಯಿ ಫುಲೆ ಕೊಡುಗೆ ಅಪಾರವಾದುದು ಎಂದು ತಿಳಿಸಿದರು.

ಮೈಲಾರಪ್ಪ ಮೆಣಸಗಿಅವರ ಸಂಸ್ಮರಣೆ ಮಾಡಿದ ಕಾರ್ಯದರ್ಶಿ ಡಾ. ದತ್ತಪ್ರಸನ್ನ ಪಾಟೀಲ, ಶ್ರಮ ಸಂಸ್ಕೃತಿಯ ಮೂಲಕ ಪ್ರಕಾಶನ ಕ್ಷೇತ್ರದಲ್ಲಿ ಅಪೂರ್ವ ಸಾಧನೆಯನ್ನು ಮಾಡಿ ಕಾನೂನು ಹಾಗೂ ಶೈಕ್ಷಣಿಕ ಪುಸ್ತಕಗಳನ್ನು ಪ್ರಕಟಿಸಿ ನಾಡಿನ ಶಿಕ್ಷಣ ಕ್ಷೇತ್ರವನ್ನು ವಿಸ್ತರಿಸಿ ಕೀರ್ತಿ ವಿದ್ಯಾನಿಧಿ ಪ್ರಕಾಶನದ ಮೈಲಾರಪ್ಪ ಮೆಣಸಗಿ ಅವರಿಗೆ ಸಲ್ಲುತ್ತದೆ ಎಂದರು.

ದತ್ತಿದಾನಿ ಜಯದೇವ ಮೆಣಸಗಿ ಮಾತನಾಡಿ, ಗದಗ ಜಿಲ್ಲಾ ಕಸಾಪ ರಾಜ್ಯದಲ್ಲಿಯೇ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈಗಿರುವ ದತ್ತಿ ನಿಧಿಯನ್ನು ಹೆಚ್ಚಿಸಿ ತಮ್ಮ ತಂದೆಯವರ ಹೆಸರಿನಲ್ಲಿ ಮುಂದಿನ ವರ್ಷದಿಂದ ನಾಡಿನ ಪ್ರಕಾಶಕರೊಬ್ಬರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡುವ ದಿಸೆಯಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಕುಮಾರವ್ಯಾಸ ಜಯಂತಿ ಅಂಗವಾಗಿ ಹೆಸರಾಂತ ಗಮಕಿಗಳಾದ ವಾಸುದೇವಾಚಾರ್ಯ ಹೂಲಿ ಹಾಗೂ ಐಶ್ವರ್ಯ ಹೂಲಿ ಕುಮಾರವ್ಯಾಸ ಭಾರತದ ಪ್ರಸಂಗಗಳ ವಾಚನ ಮತ್ತು ವ್ಯಾಖ್ಯಾನ ನಡೆಸಿಕೊಟ್ಟರು. ಮಂಜುಳಾ ವೆಂಕಟೇಶಯ್ಯ ಸಾವಿತ್ರಿಬಾಯಿ ಫುಲೆ ಕುರಿತು ಕವನ ವಾಚಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ವಿ.ಎಸ್. ದಲಾಲಿ ಅವರನ್ನು ಸನ್ಮಾನಿಸಲಾಯಿತು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಅಮರೇಶರಾಂಪೂರ ವಂದಿಸಿದರು.

ಕಾರ್ಯಕ್ರಮದಲ್ಲಿ ಸಿ.ಕೆ.ಎಚ್. ಶಾಸ್ತ್ರಿ, ಅರ್ಜುನ ಗೊಳಸಂಗಿ, ದೇವೇಂದ್ರ ನಾಯಕ, ಬಿ.ಬಿ. ಹೊಳಗುಂದಿ, ಜೆ.ಎ. ಪಾಟೀಲ, ಎ.ಎಂ. ಅಂಗಡಿ, ರತ್ನಕ್ಕ ಪಾಟೀಲ, ಸಿ.ಎಂ. ಮಾರನಬಸರಿ, ಜಿ.ಎ. ಪಾಟೀಲ, ಕೆ.ಎಸ್. ಪಲ್ಲೇದ, ಬಸವರಾಜ ನೆಲಜೇರಿ, ಉಮಾ ಕಣವಿ, ನೀಲಮ್ಮ ಅಂಗಡಿ, ರಾಜಶೇಖರ ಕರಡಿ, ಎಂ.ಎಫ್. ಡೋಣಿ, ಎಸ್.ಎಂ. ಗುಳಗುಳಿ, ಎಸ್.ಡಿ. ಗಾಂಜಿ, ಅಶೋಕ ಸತ್ಯರಡ್ಡಿ, ರಾಹುಲ ಗಿಡ್ನಂದಿ, ಎಂ.ಎಚ್. ಕಾಮನಹಳ್ಳಿ, ಸಂತೋಷಕುಮಾರ, ಎಸ್.ಎಂ. ಗುಳಗುಳಿ, ಡಿ.ಜಿ. ಕುಲಕರ್ಣಿ, ಬಸವರಾಜ ಗಣಪ್ಪನವರ, ರವೀಂದ್ರ ಜೋಶಿ, ಶ್ರೀಕಾಂತ ಹೂಲಿ, ಶರಣಪ್ಪ ಹೊಸಂಗಡಿ, ರಾಜಶೇಖರ ದಾನರಡ್ಡಿ, ಎಂ.ಎನ್. ಕಾಗದಗಾರ, ಬಿ.ಬಿ. ಪಾಟೀಲ, ರವಿ ದೇವರಡ್ಡಿ, ಗೋವಿಂದಜಿ, ಸುರೇಶ, ಜಾನ್ ಥಾಮಸ್, ಗಿರೀಶ ಪಂತರ, ಎ.ಸಿ. ಹಿರೇಮಠ, ಅಪ್ಪಣ್ಣ ಮುರಗೋಡ, ಸಿದ್ಧರಾಮ ಪಟ್ಟೇದ, ವಿ.ಕೆ. ದ್ಯಾಮನಗೌಡರ, ಆನಂದ ಹಡಪದ, ಜಗನ್ನಾಥ, ಕೆ.ಎಸ್. ಬಾಳಿಕಾಯಿ, ರತ್ನಾ ಪುರಂತರ, ಪದ್ಮಾ ಮೆಣಸಗಿ, ಹೇಮಾವತಿ ಹೂಲಿ, ರಾಧಿಕಾ ಜೋಶಿ, ಸುಧಾ ಬಳ್ಳಿ, ಅನಸೂಯಾ ಮಿಟ್ಟಿ, ನಾಗಪ್ಪ ಸುರಳಿಕೇರಿ, ಸುಧೀರ ಘೋರ್ಪಡೆ, ಯಶೋಧಾ ಗಿಡ್ನಂದಿ, ಬಸವರಾಜ ನೆಲಜೇರಿ, ಸುಮನ ಪಾಟೀಲ, ರತ್ನಾ ಘಾರ್ಗಿ, ಮಹಾಂತೇಶ ಬಾತಾಖಾನಿ, ರವಿ ಪೂಜಾರ, ಪಿ.ಆರ್. ಇನಾಮದಾರ, ಸತೀಶ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶ್ರೇಣೀಕೃತ ಸಾಮಾಜಿಕ ಸನ್ನಿವೇಶದಲ್ಲಿ ಮಹಿಳೆಯರಿಗೆ ಮತ್ತು ನಿಮ್ನ ವರ್ಗದವರಿಗೆ ಶಿಕ್ಷಣವನ್ನು ನಿರಾಕರಿಸಲಾಗಿತ್ತು. ಶೋಷಣೆಯಿಂದ ಜನ ನಲುಗುತ್ತಿದ್ದ ಸಂದರ್ಭದಲ್ಲಿ ಶಿಕ್ಷಣವನ್ನು ಮಂತ್ರದಂಡವಾಗಿಸಿಕೊಂಡು ಸಮಾನ ಸಮಾಜ ನಿರ್ಮಾಣಕ್ಕೆ ಫುಲೆ ದಂಪತಿಗಳು ಪ್ರಯತ್ನಿಸಿದರು. ಶಾಲೆ ಮತ್ತು ಆಶ್ರಮಗಳನ್ನು ಸ್ಥಾಪಿಸಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮಾಡಿದರು ಎಂದು ತಿಳಿಸಿದರು.

error: Content is protected !!