Home Blog Page 22

ಫ್ಲಾಪ್‌ಗಳ ಸುಳಿಯಲ್ಲಿ ಸಿಲುಕಿದ ಪೂಜಾ ಹೆಗ್ಡೆ! ‘ಲಕ್ಕಿ ಹೀರೋಯಿನ್’ ಇಮೇಜ್ ಮರಳಿ ತರುತ್ತಾ ಈ ಸಿನಿಮಾ?

ದಕ್ಷಿಣ ಭಾರತ ಮತ್ತು ಬಾಲಿವುಡ್‌ನಲ್ಲಿ ಹಲವು ವರ್ಷಗಳ ಕಾಲ ಯಶಸ್ಸಿನ ಪರ್ಯಾಯವಾಗಿದ್ದ ನಟಿ ಪೂಜಾ ಹೆಗ್ಡೆ ಇದೀಗ ಸತತ ಸೋಲುಗಳಿಂದ ಸಂಕಷ್ಟದ ಹಾದಿಯಲ್ಲಿ ಸಾಗುತ್ತಿದ್ದಾರೆ. ದೊಡ್ಡ ಸ್ಟಾರ್‌ಗಳ ಜೊತೆ ನಟಿಸಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಅವರ ಬಹುತೇಕ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಗಿವೆ.

‘ರಾಧೆ ಶ್ಯಾಮ್’, ‘ಆಚಾರ್ಯ’, ‘ಬೀಸ್ಟ್’, ‘ಸರ್ಕಸ್’, ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’, ‘ದೇವ’ ಹಾಗೂ ‘ರೆಟ್ರೋ’ ಸೇರಿದಂತೆ ಹಲವು ನಿರೀಕ್ಷಿತ ಸಿನಿಮಾಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿವೆ. ಪರಿಣಾಮ, ಒಮ್ಮೆ ನಿರ್ಮಾಪಕರ ಮೊದಲ ಆಯ್ಕೆಯಾಗಿದ್ದ ಪೂಜಾ ಹೆಗ್ಡೆ ಈಗ ಮತ್ತೊಂದು ದೊಡ್ಡ ಗೆಲುವಿಗಾಗಿ ಕಾಯುವಂತಾಗಿದೆ.

ಈ ಸಂದರ್ಭದಲ್ಲಿ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ನಟಿಯ ಪಾಲಿಗೆ ಟರ್ನಿಂಗ್ ಪಾಯಿಂಟ್ ಆಗುವ ನಿರೀಕ್ಷೆ ಮೂಡಿಸಿದೆ. ಡೇವಿಡ್ ಧವನ್ ನಿರ್ದೇಶನದ ಈ ಚಿತ್ರದಲ್ಲಿ ವರುಣ್ ಧವನ್ ಜೊತೆಗೆ ಪೂಜಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜೂನ್ 5ರಂದು ತೆರೆಗೆ ಬರಲಿರುವ ಈ ಸಿನಿಮಾ ಯಶಸ್ವಿಯಾದರೆ, ಪೂಜಾ ಹೆಗ್ಡೆ ಅವರ ವೃತ್ತಿಜೀವನಕ್ಕೆ ಹೊಸ ಚೈತನ್ಯ ಸಿಗಬಹುದು. ಇಲ್ಲವಾದರೆ, ಸತತ ಸೋಲಿನ ಒತ್ತಡ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಬಾಲಿವುಡ್‌ನಲ್ಲಿ ಎಲ್ಲರ ಕಣ್ಣು ಈ ಚಿತ್ರದ ಫಲಿತಾಂಶದ ಮೇಲೆಯೇ ನೆಟ್ಟಿದೆ.

ಸಿದ್ದರಾಮಯ್ಯ–ಖರ್ಗೆ ಆಶೀರ್ವಾದ ಇಲ್ಲದೆ ಕಾಂಗ್ರೆಸ್ ಬೆಳೆಯದು: ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ

ಬೆಂಗಳೂರು: ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ನಾಯಕರ ಆಶೀರ್ವಾದ ಇಲ್ಲದೆ ಕಾಂಗ್ರೆಸ್ ಪಕ್ಷ ಬೆಳೆಯಲು ಸಾಧ್ಯವಿಲ್ಲ ಎಂದು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆಯನ್ನು ಶ್ಲಾಘಿಸಿ, ಮುಂದಿನ ಮುಖ್ಯಮಂತ್ರಿ ಆಗುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಸಿದ್ದರಾಮಯ್ಯ ಹಾಗೂ ಖರ್ಗೆ ಅವರಂತಹ ಹಿರಿಯ ನಾಯಕರ ಮಾರ್ಗದರ್ಶನ ಪಕ್ಷಕ್ಕೆ ಅತ್ಯಗತ್ಯ. ಅವರ ಆಶೀರ್ವಾದವಿಲ್ಲದೆ ಕಾಂಗ್ರೆಸ್ ಪಕ್ಷದ ಬೆಳವಣಿಗೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದ ಅವರು, ಇದು ಹೊಸ ಜವಾಬ್ದಾರಿಯ ಆರಂಭ ಎಂದು ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಅವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಯಾವುದೇ ಗೊಂದಲವಿಲ್ಲದೆ ಅಧಿಕಾರ ಹಸ್ತಾಂತರವಾಗಿದೆ. ವಿರೋಧ ಪಕ್ಷಗಳು ಏನೋ ಆಗುತ್ತದೆ ಎಂದು ನಿರೀಕ್ಷಿಸಿದ್ದವು, ಆದರೆ ಅವರಿಗೆ ನಿರಾಸೆಯಾಗಿದೆ ಎಂದು ಅವರು ಹೇಳಿದರು.

ಡಿಕೆ ಶಿವಕುಮಾರ್ ಪಕ್ಷಕ್ಕಾಗಿ ದೀರ್ಘಕಾಲದಿಂದ ಶ್ರಮಿಸುತ್ತಿದ್ದಾರೆ ಎಂದು ಹೇಳಿದ ಬಾಲಕೃಷ್ಣ, ಕಷ್ಟಗಳನ್ನು ಎದುರಿಸಿದರೂ, ಜೈಲು ಶಿಕ್ಷೆ ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸಿದರೂ ಅವರು ಪಕ್ಷನಿಷ್ಠೆ ಬಿಟ್ಟಿಲ್ಲ, ಎಂದು ಕೊಂಡಾಡಿದರು.

ಅಲ್ಲದೆ, ಹೊಸ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಸೃಷ್ಟಿಯಾಗಬೇಕೆಂಬ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಅವರು, ಅದರ ಕುರಿತು ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಹೈಪ್ರೊಫೈಲ್ ನಿಂದನೆ ಪ್ರಕರಣಕ್ಕೆ ತಾತ್ಕಾಲಿಕ ಬ್ರೇಕ್! ತಿಮರೋಡಿಗೆ ಜಾಮೀನು, ಹೈಕೋರ್ಟ್‌ನಿಂದ ಕಟ್ಟುನಿಟ್ಟಿನ ಷರತ್ತು

0

ಬೆಂಗಳೂರು: ಯಕ್ಷಗಾನ ಕಲಾವಿದ ದಿನೇಶ್ ಕೊಡಪದವು ಅವರ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಗೆ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ರಜಾಕಾಲದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಆರ್. ನಟರಾಜ್ ಅವರು ಅರ್ಜಿಯ ವಿಚಾರಣೆ ನಡೆಸಿ, ಎರಡೂ ಪಕ್ಷಗಳ ವಾದಗಳನ್ನು ಪರಿಶೀಲಿಸಿದ ಬಳಿಕ ಷರತ್ತುಬದ್ಧ ಜಾಮೀನು ನೀಡುವಂತೆ ಆದೇಶಿಸಿದ್ದಾರೆ.

ನ್ಯಾಯಾಲಯದ ಆದೇಶದಂತೆ, ತಿಮರೋಡಿ ಅವರು ವಾರಕ್ಕೊಮ್ಮೆ ಪುತ್ತೂರು ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು. ತನಿಖಾ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುವುದು ಕಡ್ಡಾಯವಾಗಿದ್ದು, ಯಾವುದೇ ರೀತಿಯಲ್ಲಿ ಸಾಕ್ಷ್ಯ ನಾಶಪಡಿಸುವ ಅಥವಾ ಪ್ರಕರಣದ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

ದೂರುದಾರರು ಹಾಗೂ ಸಾಕ್ಷಿದಾರರಿಗೆ ಬೆದರಿಕೆ ಅಥವಾ ಒತ್ತಡ ಹೇರಿದರೆ ಜಾಮೀನು ಸೌಲಭ್ಯಕ್ಕೆ ಧಕ್ಕೆ ಉಂಟಾಗಬಹುದು ಎಂಬ ಸಂದೇಶವನ್ನೂ ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಕರಾವಳಿ ಭಾಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ಮಧ್ಯಂತರ ರಿಲೀಫ್ ಸದ್ಯ ಪ್ರಕರಣದ ದಿಕ್ಕನ್ನೇ ಬದಲಾಯಿಸಿರುವ ಮಹತ್ವದ ಬೆಳವಣಿಗೆಯಾಗಿ ಕಾಣಲಾಗುತ್ತಿದೆ.

‘ಗೋಲ್ಡನ್ ಅವರ್’ನಲ್ಲಿ ಪೊಲೀಸ್ ಹೀರೋಯಿಸಂ! ಉಸಿರಾಟ ನಿಂತಿದ್ದ ಕಾರ್ಮಿಕನಿಗೆ ಸಿಪಿಆರ್ ನೀಡಿ ಜೀವ ಉಳಿಸಿದ ಕಾನ್‌ಸ್ಟೆಬಲ್

ಹೈದರಾಬಾದ್: ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕನೊಬ್ಬ ಭೀಕರ ವಿದ್ಯುತ್ ಆಘಾತಕ್ಕೆ ಒಳಗಾಗಿ ಪ್ರಜ್ಞಾಹೀನನಾದ ಘಟನೆ ಹೈದರಾಬಾದ್‌ನ ಕಾರ್ವಾನ್ ಪ್ರದೇಶದಲ್ಲಿ ನಡೆದಿದೆ. ಆದರೆ ಸಮಯಪ್ರಜ್ಞೆ ಮೆರೆದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಸ್ಥಳದಲ್ಲೇ ಸಿಪಿಆರ್ ನೀಡಿ ಕಾರ್ಮಿಕನ ಜೀವ ಉಳಿಸುವ ಮೂಲಕ ಮಾನವೀಯತೆಯ ಮಾದರಿಯಾಗಿದ್ದಾರೆ.

ಕಾರ್ವಾನ್‌ನ ಕುಮ್ಮರವಾಡಿ ಹನುಮಾನ್ ದೇವಸ್ಥಾನದ ಸಮೀಪ TGPDCL ಗುತ್ತಿಗೆ ಕಾರ್ಮಿಕನೊಬ್ಬ ವಿದ್ಯುತ್ ದುರಸ್ತಿ ಕಾರ್ಯ ನಡೆಸುತ್ತಿದ್ದ ವೇಳೆ ಶಾಕ್ ತಗುಲಿ ಕೆಳಗೆ ಬಿದ್ದಿದ್ದಾನೆ. ಘಟನೆಯ ವೇಳೆ ಗಸ್ತು ಕರ್ತವ್ಯದಲ್ಲಿದ್ದ ಟಪ್ಪಾಚಬುತ್ರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಬಿ. ಸುರೇಶ್ ಸ್ಥಳಕ್ಕೆ ಧಾವಿಸಿ ಕಾರ್ಮಿಕನ ಸ್ಥಿತಿ ಪರಿಶೀಲಿಸಿದ್ದಾರೆ.

ಕಾರ್ಮಿಕನ ನಾಡಿಮಿಡಿತ ಮತ್ತು ಉಸಿರಾಟ ಸ್ಥಗಿತಗೊಂಡಿರುವುದನ್ನು ಗಮನಿಸಿದ ಸುರೇಶ್ ಯಾವುದೇ ವಿಳಂಬ ಮಾಡದೆ ಸ್ಥಳದಲ್ಲೇ ಸಿಪಿಆರ್ ನೀಡಲು ಆರಂಭಿಸಿದ್ದಾರೆ. ಕೆಲ ನಿಮಿಷಗಳ ನಿರಂತರ ಪ್ರಯತ್ನದ ಬಳಿಕ ಕಾರ್ಮಿಕನ ಉಸಿರಾಟ ಹಾಗೂ ನಾಡಿಮಿಡಿತ ಪುನಃ ಆರಂಭವಾಗಿದೆ.

ಬಳಿಕ ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಡಿಕೆಶಿ ಪ್ರಮಾಣವಚನದ ದಿನಾಂಕದತ್ತ ರಾಜ್ಯದ ಕಣ್ಣು: ಎಲ್ಲಿ? ಯಾವಾಗ

ಬೆಂಗಳೂರು: ರಾಜ್ಯ ರಾಜಕೀಯದ ಅತ್ಯಂತ ಮಹತ್ವದ ಬೆಳವಣಿಗೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದು, ಹೊಸ ಸರ್ಕಾರ ರಚನೆಗೆ ದಾರಿ ಸುಗಮವಾಗಿದೆ. ಈಗ ರಾಜ್ಯದ ಗಮನ ಸಂಪೂರ್ಣವಾಗಿ ಮುಂದಿನ ಮುಖ್ಯಮಂತ್ರಿ ಹಾಗೂ ಪ್ರಮಾಣವಚನ ಸಮಾರಂಭದತ್ತ ನೆಟ್ಟಿದೆ.

ಕಾಂಗ್ರೆಸ್ ನಾಯಕತ್ವದಿಂದ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಬಹುತೇಕ ಖಚಿತ ಎನ್ನುವ ವಾತಾವರಣ ಪಕ್ಷದೊಳಗೆ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಎಐಸಿಸಿ ನಾಯಕರೊಂದಿಗೆ ನಿರ್ಣಾಯಕ ಸಭೆ ನಡೆಸಲಿದ್ದಾರೆ.

ಸಚಿವ ಸಂಪುಟದ ಸ್ವರೂಪ, ಸಚಿವ ಸ್ಥಾನಗಳ ಹಂಚಿಕೆ, ಪ್ರಾದೇಶಿಕ ಹಾಗೂ ಜಾತಿ ಸಮೀಕರಣ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಅಂತಿಮ ಚರ್ಚೆಗಳು ನಡೆಯಲಿವೆ. ಈ ಸಭೆಯ ಬಳಿಕವೇ ಮುಖ್ಯಮಂತ್ರಿ ಹಾಗೂ ಸಂಪುಟದ ಅಧಿಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.

ಇದೇ ವೇಳೆ, ಪ್ರಮಾಣವಚನ ಕಾರ್ಯಕ್ರಮಕ್ಕೆ ಸೂಕ್ತ ಮುಹೂರ್ತದ ಹುಡುಕಾಟವೂ ಜೋರಾಗಿದೆ. ಡಿ.ಕೆ. ಶಿವಕುಮಾರ್ ಜ್ಯೋತಿಷಿಗಳ ಸಲಹೆ ಪಡೆದಿದ್ದು, ಶುಭ ಸಮಯದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಭಾಗವಹಿಸುವಂತೆ ವೇಳಾಪಟ್ಟಿ ರೂಪಿಸಲಾಗುತ್ತಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಸೇರಿದಂತೆ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ದೆಹಲಿಯಲ್ಲಿ ನಡೆಯುವ ಇಂದಿನ ಸಭೆಯ ಬಳಿಕ ಕರ್ನಾಟಕದ ಮುಂದಿನ ರಾಜಕೀಯ ಅಧ್ಯಾಯಕ್ಕೆ ಅಧಿಕೃತ ಚಾಲನೆ ಸಿಗುವ ಸಾಧ್ಯತೆ ಹೆಚ್ಚಾಗಿದೆ.

‘40 ದಿನಗಳ ಸಂಕಲ್ಪ’ ಫಲಿಸಿತೇ? ಮುಕ್ತಿಮಂದಿರ ಭೇಟಿ ಬಳಿಕ ಡಿಕೆಶಿಗೆ ಸಿಎಂ ಪಟ್ಟ

ಲಕ್ಷ್ಮೇಶ್ವರ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದರ ಬೆನ್ನಲ್ಲೇ ಗದಗ ಜಿಲ್ಲೆಯ ಐತಿಹಾಸಿಕ ಪುಣ್ಯಕ್ಷೇತ್ರ ಮುಕ್ತಿಮಂದಿರ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. ಉಪಮುಖ್ಯಮಂತ್ರಿಯಾಗಿದ್ದ ವೇಳೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರು ಈ ಕ್ಷೇತ್ರಕ್ಕೆ ರಹಸ್ಯ ಭೇಟಿ ನೀಡಿ ವಿಶೇಷ ಸಂಕಲ್ಪ ಮಾಡಿದ್ದರು ಎಂಬ ಮಾಹಿತಿ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಏಪ್ರಿಲ್ 19ರಂದು ಯಾವುದೇ ರಾಜಕೀಯ ಪ್ರಚಾರವಿಲ್ಲದೆ, ತಮ್ಮ ಆಪ್ತರಿಗೂ ಮಾಹಿತಿ ನೀಡದೇ ಮುಕ್ತಿಮಂದಿರಕ್ಕೆ ಆಗಮಿಸಿದ್ದ ಡಿಕೆ ಶಿವಕುಮಾರ್, ಲಿಂಗೈಕ್ಯ ವೀರ ಗಂಗಾಧರ ಮಹಾಸ್ವಾಮಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಕಟ್ಟುನಿಟ್ಟಿನ ಭದ್ರತೆಯ ನಡುವೆ ನಡೆದ ಈ ಭೇಟಿ ವೇಳೆ ಗರ್ಭಗುಡಿಗೆ ಮಾಧ್ಯಮಗಳು ಹಾಗೂ ಸ್ಥಳೀಯ ಮುಖಂಡರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಮುಕ್ತಿಮಂದಿರದ ಪೀಠಾಧಿಪತಿಗಳಾದ ಶ್ರೀ ವಿಮಲರೇಣುಕಾ ವೀರಮುಕ್ತಿ ಮುನಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ಡಿಕೆಶಿ ವಿಶೇಷ ಪೂಜೆ, ಜಪ ಮತ್ತು ಧ್ಯಾನದಲ್ಲಿ ತೊಡಗಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ರಾಜ್ಯದ ಉನ್ನತ ಹುದ್ದೆ ಪ್ರಾಪ್ತಿಗಾಗಿ ಅವರು ಸಂಕಲ್ಪ ಮಾಡಿದ್ದರು ಎನ್ನುವ ಮಾತುಗಳು ಇದೀಗ ಮತ್ತೆ ಮುನ್ನೆಲೆಗೆ ಬಂದಿವೆ.

ಈ ಭೇಟಿಯ ನಂತರ ಕೇವಲ 40 ದಿನಗಳೊಳಗೆ ರಾಜ್ಯ ರಾಜಕೀಯದಲ್ಲಿ ನಡೆದ ಬೆಳವಣಿಗೆಗಳ ಪರಿಣಾಮವಾಗಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವುದು ಕ್ಷೇತ್ರದ ಭಕ್ತರು ಮತ್ತು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇದರಿಂದ ಮುಕ್ತಿಮಂದಿರದ ಆಧ್ಯಾತ್ಮಿಕ ಪ್ರಭಾವ ಹಾಗೂ ಕ್ಷೇತ್ರದ ಮಹಿಮೆಯ ಬಗ್ಗೆ ಹೊಸ ಚರ್ಚೆಗಳು ಆರಂಭವಾಗಿವೆ.

‘ಕಾಲ ಹತ್ತಿರ ಬಂದಿದೆ’… ಡಿಕೆಶಿ ಸಿಎಂ ಆಗುವ ಕುರಿತು ಇಕ್ಬಾಲ್ ಹುಸೇನ್ ರಹಸ್ಯ ಸಂಕೇತ!

ರಾಮನಗರ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ರಾಜಕೀಯ ಬೆಳವಣಿಗೆಗಳ ನಡುವೆ ಶಾಸಕ ಇಕ್ಬಾಲ್ ಹುಸೇನ್ ನೀಡಿರುವ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ದೊರೆಯುವ ಕುರಿತು ಮಾತನಾಡಿದ ಅವರು, ಬಹುಕಾಲದ ನಿರೀಕ್ಷೆ ಈಡೇರುವ ಹಂತಕ್ಕೆ ಬಂದಿದೆ ಎಂದು ಸೂಚನೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಇಕ್ಬಾಲ್ ಹುಸೇನ್, “ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಗರ ಬಹುಕಾಲದ ಆಸೆ ಒಂದಿತ್ತು. ಆ ಆಸೆಯನ್ನು ಭಗವಂತ ಈಡೇರಿಸುವ ಕೆಲಸ ಮಾಡುತ್ತಿದ್ದಾನೆ. ನಾನು ಈ ಹಿಂದೆ ಬಹಿರಂಗವಾಗಿ ಹೇಳಿದ್ದೆ. ಇನ್ನು ಕೆಲವರು ಮೌನವಾಗಿ ಪ್ರಾರ್ಥನೆ ಮಾಡಿದ್ದರು. ಆ ಪ್ರಾರ್ಥನೆ ನೆರವೇರುವ ಸಮಯ ಈಗ ಸಮೀಪಿಸಿದೆ” ಎಂದು ಹೇಳಿದ್ದಾರೆ.

“ನಮ್ಮ ನಾಯಕರಿಗೆ ಅವಕಾಶ ಸಿಗುತ್ತಿರುವುದರಿಂದ ಭಗವಂತನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಇಂದು ಬಕ್ರೀದ್ ಹಬ್ಬದ ದಿನವಾಗಿರುವುದರಿಂದ ರಾಜಕೀಯ ಚರ್ಚೆಗಳನ್ನು ಹೆಚ್ಚಿಸಲು ಇಷ್ಟಪಡುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.

ಪರಮೇಶ್ವರ್ ಅವರ ಮುಖ್ಯಮಂತ್ರಿ ಹುದ್ದೆ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಅವರು ನಮ್ಮ ಹಿರಿಯ ನಾಯಕರು. ಅವಕಾಶ ಕೇಳುವುದು ಅವರ ಹಕ್ಕು. ಅವರು ಪಕ್ಷಕ್ಕಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಆದರೆ ನಮ್ಮ ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ಸಿಗಬೇಕು ಎಂಬುದು ನಮ್ಮ ಜಿಲ್ಲೆಯ ಜನರ ಹಾಗೂ ಬೆಂಬಲಿಗರ ಅಭಿಲಾಷೆ” ಎಂದು ಹೇಳಿದ್ದಾರೆ.

ಈ ಹೇಳಿಕೆಗಳ ಮೂಲಕ ಕಾಂಗ್ರೆಸ್‌ನ ಮುಂದಿನ ನಾಯಕತ್ವದ ಕುರಿತು ಮತ್ತೆ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.

ಮುಂಬೈ ಇಂಡಿಯನ್ಸ್‌ಗೆ ಮೇಜರ್ ಸರ್ಜರಿ?: ಹಾರ್ದಿಕ್ ಪಾಂಡ್ಯ ನಾಯಕತ್ವಕ್ಕೆ ಕತ್ತರಿ ಸಾಧ್ಯತೆ

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಾರೀ ಬದಲಾವಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ..

ಅದರ ಮೊದಲ ಹೆಜ್ಜೆಯಾಗಿ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ವರದಿಗಳ ಪ್ರಕಾರ, ಕಳೆದ ಮೂರು ಸೀಸನ್‌ಗಳಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಈ ಅವಧಿಯಲ್ಲಿ ಪಾಂಡ್ಯ 38 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಅದರಲ್ಲಿ ಕೇವಲ 15 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. ಉಳಿದ 23 ಪಂದ್ಯಗಳಲ್ಲಿ ಎಂಐ ಸೋಲು ಕಂಡಿದೆ.

ಈ ಲೆಕ್ಕಾಚಾರದಲ್ಲಿ ಹಾರ್ದಿಕ್ ಪಾಂಡ್ಯ ಅವರ ಗೆಲುವಿನ ಶೇಕಡಾವಾರು ಕೇವಲ 39.4% ಮಾತ್ರವಾಗಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ತಂಡವನ್ನು 158 ಪಂದ್ಯಗಳಲ್ಲಿ ಮುನ್ನಡೆಸಿದ್ದ ರೋಹಿತ್ ಶರ್ಮಾ 55.06% ಗೆಲುವಿನ ಸಾಧನೆ ಹೊಂದಿದ್ದರು. ಹೀಗಾಗಿ ಪಾಂಡ್ಯ ನಾಯಕತ್ವದಲ್ಲಿ ತಂಡ ತನ್ನ ಹಳೆಯ ಪ್ರಭಾವ ಕಳೆದುಕೊಂಡಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಇದರಿಂದಾಗಿ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ನಾಯಕತ್ವ ಬದಲಾವಣೆಯತ್ತ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ ಹೊಸ ನಾಯಕ ಯಾರು ಎಂಬುದರ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.

ಹೀಗಾಗಿ ಐಪಿಎಲ್ 2027ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವ ಆಟಗಾರ ಯಾರು ಎಂಬ ಕುತೂಹಲ ಈಗಲೇ ಆರಂಭವಾಗಿದೆ.

ಉತ್ತರ ಪ್ರದೇಶದಲ್ಲಿ ಬಿರುಗಾಳಿ ಅವಾಂತರ: ಸೇತುವೆ ಕುಸಿದು ಐವರು ಸಾವು

ಹಮೀರ್‌ಪುರ: ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ಬೀಸಿದ ಭಾರೀ ಬಿರುಗಾಳಿಗೆ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಕನಿಷ್ಠ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಬೆಟ್ವಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಕಂದೌರ್-ಮೊರಕಂದರ್ ಸೇತುವೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನಿರ್ಮಾಣ ಕಾರ್ಯ ನಡೆಯುತ್ತಿರುವ ವೇಳೆ ಬಲವಾದ ಗಾಳಿ ಬೀಸಿದ ಪರಿಣಾಮ ಸೇತುವೆಯ ಸ್ಲ್ಯಾಬ್ ಹಾಗೂ ಪಿಯರ್ ಭಾಗಗಳು ಸ್ಕ್ಯಾಫೋಲ್ಡಿಂಗ್ ರಚನೆಯೊಂದಿಗೆ ಏಕಾಏಕಿ ಕುಸಿದು ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಕುರಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ತಂಡಗಳು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ಅನಾರೋಗ್ಯದಿಂದ ಮಾಜಿ ಸಚಿವ ವೆಂಕಟರಮಣಪ್ಪ ನಿಧನ!

ತುಮಕೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ ವೆಂಕಟರಮಣಪ್ಪ (80) ಅವರು ಇಂದು ನಿಧನರಾಗಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಅವರು ಕೊನೆಯುಸಿರೆಳೆದಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಪೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರ ಬೆಳಗ್ಗಿನ ಜಾವ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದು, ಪುತ್ರ ಶಾಸಕ ಹೆಚ್‌.ವಿ ವೆಂಕಟೇಶ್‌, ಕುಮಾರಸ್ವಾಮಿ, ಪುತ್ರಿ ಪದ್ಮಾವತಿ ಅವರನ್ನ ಅಗಲಿದ್ದಾರೆ.

ವೆಂಕಟರಮಣಪ್ಪ ಅವರು 2008ರಲ್ಲಿ ರೇಷ್ಮೆ ಮತ್ತು ಸಣ್ಣ ಕೈಗಾರಿಕಾ ಸಚಿವರಾಗಿ, 2018ರಲ್ಲಿ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಮೃತರ ಪಾರ್ಥೀವ ಶರೀರವನ್ನು ತುಮಕೂರಿನ ಗುರುಭವನದಲ್ಲಿ ಮಧ್ಯಾಹ್ನ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

error: Content is protected !!