Home Blog Page 21

ಭಕ್ತರ ಕಾಣಿಕೆಯಲ್ಲೇ ನಕಲಿ ಬೆಳ್ಳಿ? ವೈಷ್ಣೋದೇವಿ ದೇಗುಲದಲ್ಲಿ ಭಾರಿ ಅಕ್ರಮ ಶಂಕೆ!

0

ಶ್ರೀನಗರ: ಅಯೋಧ್ಯೆ ರಾಮಮಂದಿರ ಹಾಗೂ ಬದರಿನಾಥ ದೇಗುಲದ ದೇಣಿಗೆ ಅಕ್ರಮದ ಚರ್ಚೆಗಳ ಬೆನ್ನಲ್ಲೇ ಇದೀಗ ಜಮ್ಮುವಿನ ಕಟ್ರಾದಲ್ಲಿರುವ ಪ್ರಸಿದ್ಧ ವೈಷ್ಣೋದೇವಿ ದೇಗುಲದ ಬೆಳ್ಳಿ ಕಾಣಿಕೆ ವಿಚಾರದಲ್ಲಿ ಅಕ್ರಮದ ಆರೋಪ ಕೇಳಿಬಂದಿದೆ.

ಭಕ್ತರು ದೇಗುಲಕ್ಕೆ ಅರ್ಪಿಸಿದ ಸುಮಾರು 530 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ದೇಗುಲ ಮಂಡಳಿ ಪರೀಕ್ಷೆಗಾಗಿ ಸರ್ಕಾರಿ ಟಂಕಸಾಲೆಗೆ ಕಳುಹಿಸಿದ್ದ 20 ಟನ್ ಬೆಳ್ಳಿಯ ಪೈಕಿ ಬಹುತೇಕ ಪ್ರಮಾಣ ನಕಲಿ ಲೋಹ ಮಿಶ್ರಿತವಾಗಿದೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಪರೀಕ್ಷೆಗೆ ಒಳಪಡಿಸಿದ ಬೆಳ್ಳಿಯಲ್ಲಿ ಶೇ.95ರಷ್ಟು ನಕಲಿ ಲೋಹದ ಮಿಶ್ರಣ ಕಂಡುಬಂದಿದ್ದು, ಕೇವಲ ಶೇ.5 ರಿಂದ 6ರಷ್ಟು ಮಾತ್ರ ಶುದ್ಧ ಬೆಳ್ಳಿ ಇತ್ತು ಎಂದು ತಿಳಿದುಬಂದಿದೆ.

ಇದಲ್ಲದೆ ಬೆಳ್ಳಿಯಲ್ಲಿ ಕ್ಯಾಡ್ಮಿಯಂ, ಕಬ್ಬಿಣ ಸೇರಿದಂತೆ ಇತರ ಲೋಹಗಳ ಮಿಶ್ರಣ ಪತ್ತೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಈ ಪ್ರಕರಣದ ತನಿಖೆಯಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕ್ರೈಂ ಬ್ರಾಂಚ್ ಅಧಿಕಾರಿಗಳಿಗೆ ಸಮನ್ಸ್ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಸಲ್ಲಿಸುವಂತೆ ಜಮ್ಮು ನ್ಯಾಯಾಲಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಪ್ರಕರಣದಲ್ಲಿ ಭಕ್ತರು ಅರ್ಪಿಸಿದ ಬೆಳ್ಳಿಯೇ ನಕಲಿಯಾಗಿತ್ತೇ ಅಥವಾ ದೇಗುಲ ಟ್ರಸ್ಟ್‌ನಲ್ಲಿಯೇ ಯಾವುದೇ ಅಕ್ರಮ ನಡೆದಿದೆಯೇ ಎಂಬುದು ಈಗ ತನಿಖೆಯ ಪ್ರಮುಖ ಅಂಶವಾಗಿದೆ.

ವೈಷ್ಣೋದೇವಿ ದೇಗುಲ ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿ ಭೇಟಿ ನೀಡಿ ಕಾಣಿಕೆ ಸಲ್ಲಿಸುತ್ತಾರೆ. ಇಂತಹ ದೇಗುಲದಲ್ಲಿ ಕಾಣಿಕೆ ರೂಪದಲ್ಲಿ ಬಂದ ಬೆಳ್ಳಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿರುವುದು ಚರ್ಚೆಗೆ ಕಾರಣವಾಗಿದೆ.

ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಸಂಪೂರ್ಣ ಸತ್ಯ ತನಿಖೆಯ ಬಳಿಕವೇ ಬಹಿರಂಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ಕೊರತೆ ಎಫೆಕ್ಟ್: ಕರ್ನಾಟಕದಲ್ಲಿ ಅಕ್ಕಿ, ಬೇಳೆ ಸೇರಿದಂತೆ ದಿನಸಿ ಬೆಲೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಪರಿಣಾಮ ಕೃಷಿ ಚಟುವಟಿಕೆಗಳಿಗೆ ತೀವ್ರ ಹೊಡೆತ ಬಿದ್ದಿದೆ.

ಮಳೆಯ ಅಭಾವದಿಂದ ಹಲವು ಪ್ರಮುಖ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದ್ದು, ಉತ್ಪಾದನೆ ಕಡಿಮೆಯಾಗುವ ಆತಂಕ ಎದುರಾಗಿದೆ. ಇದರ ನೇರ ಪರಿಣಾಮ ಇದೀಗ ಮಾರುಕಟ್ಟೆಯ ಮೇಲೂ ಬೀಳುತ್ತಿದ್ದು, ಅಕ್ಕಿ, ಬೇಳೆ ಸೇರಿದಂತೆ ಹಲವು ದಿನಸಿ ವಸ್ತುಗಳ ಬೆಲೆ ಏರಿಕೆಯಾಗಿದೆ.

ಭತ್ತ, ಕಬ್ಬು, ಉದ್ದು ಸೇರಿದಂತೆ ಪ್ರಮುಖ ಬೆಳೆಗಳಿಗೆ ಸಮರ್ಪಕ ಮಳೆಯ ಕೊರತೆ ಎದುರಾಗಿದ್ದು, ರೈತರು ಬೆಳೆ ನಷ್ಟದ ಭೀತಿಯಲ್ಲಿದ್ದಾರೆ. ಬೆಳೆ ಪ್ರಮಾಣ ಕಡಿಮೆಯಾದರೆ ಮಾರುಕಟ್ಟೆಗೆ ಬರುವ ಸರಕುಗಳ ಪ್ರಮಾಣವೂ ಇಳಿಕೆಯಾಗಲಿದ್ದು, ಇದರಿಂದ ಬೆಲೆ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಅಕ್ಕಿ, ಬೇಳೆ ಬೆಲೆಯಲ್ಲಿ ಭಾರೀ ಏರಿಕೆ;

ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ದಿನಸಿ ವಸ್ತುಗಳ ದರ ಹೆಚ್ಚಾಗಿದೆ. ಸ್ಟೀಮ್ ಅಕ್ಕಿ ಕೆಜಿಗೆ ಹಿಂದೆ 45 ರೂಪಾಯಿ ಇದ್ದದ್ದು ಈಗ 60 ರೂಪಾಯಿಗೆ ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಸುಮಾರು 70 ರೂಪಾಯಿವರೆಗೆ ಮಾರಾಟವಾಗುತ್ತಿದೆ.

ಕೊಲಂ ರೈಸ್ ದರ 66 ರೂಪಾಯಿಯಿಂದ 80 ರೂಪಾಯಿಗೆ ಏರಿಕೆಯಾಗಿದ್ದು, ಚಿಲ್ಲರೆ ದರ 90 ರೂಪಾಯಿ ತಲುಪಿದೆ. ರಾ ರೈಸ್ ದರವೂ 70 ರೂಪಾಯಿಯಿಂದ 83 ರೂಪಾಯಿಗೆ ಹೆಚ್ಚಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 93 ರೂಪಾಯಿವರೆಗೆ ಮಾರಾಟವಾಗುತ್ತಿದೆ.

ಬೇಳೆಕಾಳುಗಳ ದರದಲ್ಲೂ ಏರಿಕೆ ಕಂಡುಬಂದಿದೆ. ತೊಗರಿ ಬೇಳೆ ಕೆಜಿಗೆ 115 ರೂಪಾಯಿಯಿಂದ 125 ರೂಪಾಯಿಗೆ ಏರಿಕೆಯಾಗಿದ್ದು, ಚಿಲ್ಲರೆ ದರ 140 ರೂಪಾಯಿ ತಲುಪಿದೆ. ಉದ್ದಿನ ಬೇಳೆ 132 ರೂಪಾಯಿಯಿಂದ 150 ರೂಪಾಯಿಗೆ ಏರಿಕೆಯಾಗಿದ್ದು, ಚಿಲ್ಲರೆ ದರ 170 ರೂಪಾಯಿವರೆಗೆ ಹೆಚ್ಚಾಗಿದೆ.

ಹೆಸರು ಬೇಳೆ ದರ 94 ರೂಪಾಯಿಯಿಂದ 105 ರೂಪಾಯಿಗೆ ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 116 ರೂಪಾಯಿಗೆ ಮಾರಾಟವಾಗುತ್ತಿದೆ. ಜೀರಿಗೆ ದರದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಕೆಜಿಗೆ 110 ರೂಪಾಯಿಯಿಂದ 215 ರೂಪಾಯಿಗೆ ಹೆಚ್ಚಾಗಿದೆ. ಚಿಲ್ಲರೆ ದರ 250 ರೂಪಾಯಿ ತಲುಪಿದೆ.

ಮನೆ ಬಜೆಟ್ ಮೇಲೆ ಹೆಚ್ಚಿದ ಹೊರೆ:

ಮಳೆ ಕೊರತೆಯಿಂದ ರೈತರು ಬೆಳೆ ನಷ್ಟದ ಆತಂಕ ಎದುರಿಸುತ್ತಿದ್ದರೆ, ಮತ್ತೊಂದೆಡೆ ಗ್ರಾಹಕರು ಹೆಚ್ಚುತ್ತಿರುವ ದಿನಸಿ ದರಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮನೆಗಳ ಮಾಸಿಕ ಬಜೆಟ್ ಮೇಲೂ ಒತ್ತಡ ಹೆಚ್ಚಾಗಿದೆ.

ಕೃಷಿ ಉತ್ಪಾದನೆ ಹೆಚ್ಚಾದರೆ ಮಾತ್ರ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣ ಸಾಧ್ಯ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಮುಂಗಾರು ಮಳೆ ಇದೇ ರೀತಿ ದುರ್ಬಲವಾದರೆ ಮುಂದಿನ ದಿನಗಳಲ್ಲಿ ಅಕ್ಕಿ, ಬೇಳೆ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ಏರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ರಾಜ್ಯದ ಕೃಷಿ ಮತ್ತು ಮಾರುಕಟ್ಟೆ ವ್ಯವಸ್ಥೆಯ ಮೇಲೆ ಮುಂಗಾರು ಮಳೆಯ ಪರಿಣಾಮ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಉತ್ತಮ ಮಳೆಯೊಂದೇ ಈ ಸಮಸ್ಯೆಗೆ ಪರಿಹಾರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ತೆರವು ಮಾಡಿದ ಫುಟ್‌ಪಾತ್‌ನಲ್ಲಿ ಮತ್ತೆ ಅಂಗಡಿ ಹಾಕಿದರೆ ದಂಡ: ಕೃಷ್ಣಬೈರೇಗೌಡ ಖಡಕ್ ಸೂಚನೆ!

ಬೆಂಗಳೂರು: ಫುಟ್‌ಪಾತ್‌ಗಳನ್ನು ತೆರವುಗೊಳಿಸಿದ ಬಳಿಕ ಮತ್ತೆ ಅತಿಕ್ರಮಣ ಮಾಡಿ ಅಂಗಡಿ ಆರಂಭಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಬರೋಬ್ಬರಿ 490 ಕಿಲೋಮೀಟರ್‌ ಉದ್ದದ ಫುಟ್‌ಪಾತ್‌ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಫುಟ್‌ಪಾತ್‌ಗಳ ಮೇಲಿನ ಅಕ್ರಮ ಅಂಗಡಿಗಳು ಮತ್ತು ಒತ್ತುವರಿಗಳನ್ನು ತೆರವು ಮಾಡಲಾಗಿತ್ತು.

ಆದರೆ ಕಾರ್ಯಾಚರಣೆ ಮುಗಿದು ಕೆಲವೇ ದಿನಗಳಲ್ಲಿ ನಗರದ ಪ್ರಮುಖ ಪ್ರದೇಶಗಳಾದ ಕೆ.ಆರ್. ಮಾರ್ಕೆಟ್ ರಸ್ತೆ ಹಾಗೂ ವಿಕ್ಟೋರಿಯಾ ಆಸ್ಪತ್ರೆ ರಸ್ತೆಗಳ ಫುಟ್‌ಪಾತ್‌ಗಳಲ್ಲಿ ಮತ್ತೆ ವ್ಯಾಪಾರಿಗಳು ಅಕ್ರಮವಾಗಿ ಅಂಗಡಿಗಳನ್ನು ಹಾಕಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಈ ವಿಚಾರ ಸಚಿವ ಕೃಷ್ಣಬೈರೇಗೌಡ ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಕೇವಲ ತೆರವು ಕಾರ್ಯಾಚರಣೆ ನಡೆಸಿ ಕೈಬಿಡದೆ, ನಿರಂತರವಾಗಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದ್ದಾರೆ.

ಒಮ್ಮೆ ತೆರವುಗೊಳಿಸಿದ ಸ್ಥಳದಲ್ಲಿ ಮತ್ತೆ ಅಕ್ರಮವಾಗಿ ಅಂಗಡಿ ಆರಂಭಿಸುವವರಿಗೆ ಸ್ಥಳದಲ್ಲೇ ಭಾರಿ ಪ್ರಮಾಣದ ದಂಡ ವಿಧಿಸಬೇಕು. ಪಾದಚಾರಿಗಳ ಸಂಚಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಮುಂದಿನ ದಿನಗಳಲ್ಲಿ ಫುಟ್‌ಪಾತ್‌ಗಳ ಮೇಲಿನ ಅತಿಕ್ರಮಣ ತಡೆಯಲು ಬಿಬಿಎಂಪಿ ಫುಟ್‌ಪಾತ್ ಸ್ಕ್ವಾಡ್‌ನ ಕಣ್ಗಾವಲು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ತಿಳಿಸಲಾಗಿದೆ. ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗದಂತೆ ಫುಟ್‌ಪಾತ್‌ಗಳನ್ನು ಮುಕ್ತವಾಗಿಡಲು ಪಾಲಿಕೆ ಕ್ರಮ ಕೈಗೊಳ್ಳಲಿದೆ.

E20 Ethanol Controversy: ನಿತಿನ್ ಗಡ್ಕರಿ ಹೆಸರು ದುರ್ಬಳಕೆ ಆರೋಪ; ನಾಲ್ವರು ಯೂಟ್ಯೂಬರ್‌ಗಳ ವಿರುದ್ಧ FIR

0

ಮುಂಬೈ: ಇ20 ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿ ಕುರಿತು ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ನಾಲ್ವರು ಯೂಟ್ಯೂಬರ್‌ಗಳ ವಿರುದ್ಧ ನಾಗ್ಪುರ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲಬುರ್ಗಿ ಜೈಲಿನಿಂದ ಎಸ್ಕೇಪ್ ಆಗಿದ್ದ ಆರೋಪಿಗೆ ಗುಂಡು ಹಾರಿಸಿ ಅರೆಸ್ಟ್! ಇನ್ನಿಬ್ಬರಿಗಾಗಿ ಶೋಧ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅವರ ಪ್ರತಿಷ್ಠೆಗೆ ಧಕ್ಕೆ ತರಲು ಯತ್ನಿಸಲಾಗಿದೆ ಎಂಬ ಆರೋಪದ ಮೇರೆಗೆ ಪ್ರಕರಣ ದಾಖಲಾಗಿದೆ.

ನಾಗ್ಪುರದ ಬಿಜೆಪಿ ಸೋಶಿಯಲ್ ಮೀಡಿಯಾ ಸೆಲ್ ಅಧ್ಯಕ್ಷ ಶಿಶಿರ್ ತ್ರಿಪಾಠಿ ನೀಡಿದ ದೂರಿನ ಆಧಾರದ ಮೇಲೆ ಬಿಹಾರದ ಯೂಟ್ಯೂಬರ್ ಮನೀಶ್ ಕಶ್ಯಪ್, ದೇಸಿ ಬಾಯ್ಸ್, ಹರ್ಷಿತ್ ರಾಠಿ ಹಾಗೂ ಅಂಕಲೇಶ್ ಇನ್ವಾತೆ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಇ20 ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳ ಇಂಜಿನ್ ಹಾಳಾಗುತ್ತಿದೆ ಎಂಬ ಚರ್ಚೆಗಳು ಇತ್ತೀಚೆಗೆ ಜೋರಾಗಿದ್ದವು. ಇದೇ ವೇಳೆ ಯೂಟ್ಯೂಬರ್ ಮನೀಶ್ ಕಶ್ಯಪ್ ಅವರು ತಮ್ಮ ಟೊಯೋಟಾ ಕಾರಿನ ಇಂಜಿನ್ ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಹಾಳಾಗಿದೆ ಎಂದು ಆರೋಪಿಸಿ ಪೆಟ್ರೋಲ್ ಪಂಪ್‌ನಲ್ಲಿ ಗಲಾಟೆ ನಡೆಸಿದ ವಿಡಿಯೋ ವೈರಲ್ ಆಗಿತ್ತು.

ಈ ವಿಡಿಯೋಗಳು ಸಾರ್ವಜನಿಕರಲ್ಲಿ ಗೊಂದಲ ಮತ್ತು ತಪ್ಪು ಮಾಹಿತಿ ಮೂಡಿಸುತ್ತಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಎಥೆನಾಲ್ ನೀತಿಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿ, ಕೇಂದ್ರ ಸರ್ಕಾರದ ನೀತಿಯನ್ನು ತಪ್ಪಾಗಿ ಬಿಂಬಿಸಲಾಗಿದೆ ಹಾಗೂ ಸಚಿವ ನಿತಿನ್ ಗಡ್ಕರಿ ಅವರ ಹೆಸರನ್ನು ಅನಗತ್ಯವಾಗಿ ಜೋಡಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನೊಂದೆಡೆ ಟೊಯೋಟಾ ಕಂಪನಿಯ ತಜ್ಞರ ತಂಡವು ಮನೀಶ್ ಕಶ್ಯಪ್ ಅವರ ವಾಹನವನ್ನು ಪರಿಶೀಲಿಸಿದ್ದು, ಎಥೆನಾಲ್‌ನಿಂದ ಇಂಜಿನ್ ಹಾಳಾಗಿದೆ ಎಂಬ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ತಿಳಿಸಿದೆ. ಈ ಸಂಬಂಧ ಕಂಪನಿಯೂ ದೂರು ನೀಡಿದೆ.

ಆರೋಪಗಳನ್ನು ತಳ್ಳಿಹಾಕಿರುವ ಸಚಿವ ನಿತಿನ್ ಗಡ್ಕರಿ, “ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಒಂದೇ ಒಂದು ವಾಹನದ ಇಂಜಿನ್ ಹಾಳಾಗಿದೆ ಎಂಬುದನ್ನು ಸಾಬೀತುಪಡಿಸಿ” ಎಂದು ಸವಾಲು ಹಾಕಿದ್ದಾರೆ.

ಈ ಪ್ರಕರಣದಲ್ಲಿ ವಿಡಿಯೋಗಳಲ್ಲಿ ಸಚಿವರ ಹೆಸರನ್ನು ಬಳಸಲಾಗಿದೆ ಹೊರತು, ನಿತಿನ್ ಗಡ್ಕರಿ ಅವರಿಗೆ ನೇರ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಆಂಧ್ರದಲ್ಲಿ ಕೋವಿಡ್ ಹೆಚ್ಚಳ; ಕರ್ನಾಟಕದಲ್ಲೂ 32 ಮಂದಿಗೆ ಸೋಂಕು ಪತ್ತೆ!

ಬೆಂಗಳೂರು: ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕಲಬುರ್ಗಿ ಜೈಲಿನಿಂದ ಎಸ್ಕೇಪ್ ಆಗಿದ್ದ ಆರೋಪಿಗೆ ಗುಂಡು ಹಾರಿಸಿ ಅರೆಸ್ಟ್! ಇನ್ನಿಬ್ಬರಿಗಾಗಿ ಶೋಧ

ರಾಜ್ಯದಲ್ಲಿ ಈವರೆಗೆ 32ಕ್ಕೂ ಹೆಚ್ಚು ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಆಂಧ್ರಪ್ರದೇಶದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೇ ಕರ್ನಾಟಕದಲ್ಲೂ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ಸದ್ಯ ರಾಜ್ಯದಲ್ಲಿ ದಾಖಲಾಗಿರುವ ಪ್ರಕರಣಗಳು ಗಂಭೀರ ಸ್ವರೂಪದಲ್ಲಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಜೂನ್ ತಿಂಗಳಲ್ಲಿ ರಾಜ್ಯದಲ್ಲಿ ಕೇವಲ 14 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಆದರೆ ಜುಲೈ ತಿಂಗಳ ಮೊದಲ 10 ದಿನಗಳಲ್ಲೇ ಈ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಒಟ್ಟು 193 ಶಂಕಿತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 32 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಇಲಾಖೆಯ ಆಯುಕ್ತ ಗುರುದತ್ ಹೆಗಡೆ, ಆಂಧ್ರಪ್ರದೇಶದ ಕಡಪಾದಲ್ಲಿ ವರದಿಯಾಗಿರುವ ಸಾವುಗಳು ಸದ್ಯಕ್ಕೆ ಶಂಕಿತ ಪ್ರಕರಣಗಳಾಗಿವೆ. ಈ ಬಗ್ಗೆ ಅಲ್ಲಿನ ಸರ್ಕಾರದೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಪತ್ತೆಯಾಗಿರುವ ಕೋವಿಡ್ ಪ್ರಕರಣಗಳು ಸದ್ಯಕ್ಕೆ ತೀವ್ರ ಸ್ವರೂಪದಲ್ಲಿಲ್ಲ. ಯಾವುದೇ ಲಕ್ಷಣಗಳಿಲ್ಲದ ಸೋಂಕುಗಳು ಕೂಡ ಶಸ್ತ್ರಚಿಕಿತ್ಸೆಗೂ ಮುನ್ನ ನಡೆಸುವ ಕಡ್ಡಾಯ ಪರೀಕ್ಷೆ ವೇಳೆ ಪತ್ತೆಯಾಗುತ್ತಿವೆ ಎಂದು ಹೇಳಿದ್ದಾರೆ.

ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಸಾರ್ವಜನಿಕರು ಅನಗತ್ಯವಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಬರದ ಆತಂಕ; ಕೇಂದ್ರ ತಂಡ ಕಳುಹಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಡಿಕೆಶಿ ಪತ್ರ

ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಬರದ ಆತಂಕ ಎದುರಾಗಿದೆ.

ರಾಜ್ಯದ ಬರ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರದ ತಂಡ ಕಳುಹಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ತೀವ್ರವಾಗಿ ಕಡಿಮೆಯಾಗಿದೆ. ವಾಡಿಕೆ ಮಳೆಗಿಂತ ಶೇ.30ರಷ್ಟು ಕಡಿಮೆ ಮಳೆಯಾಗಿದ್ದು, 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಮಳೆ ಕೊರತೆ ಕಂಡುಬಂದಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯದ 141 ತಾಲೂಕುಗಳಲ್ಲಿ ಮಳೆ ಕೊರತೆ ಎದುರಾಗಿದೆ. ಮಳೆ ಕೈಕೊಟ್ಟ ಪರಿಣಾಮ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯವೂ ಕುಂಠಿತವಾಗಿದೆ. ಈವರೆಗೆ ರಾಜ್ಯದಲ್ಲಿ ಶೇ.34ರಷ್ಟು ಮಾತ್ರ ಬಿತ್ತನೆ ನಡೆದಿದೆ.

ಇದೇ ವೇಳೆ ರಾಜ್ಯದ 14 ಪ್ರಮುಖ ಜಲಾಶಯಗಳಲ್ಲೂ ನೀರಿನ ಸಂಗ್ರಹ ಕಡಿಮೆಯಾಗಿದೆ. ಜಲಾಶಯಗಳಲ್ಲಿ ಕೇವಲ ಶೇ.34ರಷ್ಟು ನೀರು ಲಭ್ಯವಿದೆ ಎಂದು ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ತಂಡ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಬೇಕು. ಇದರಿಂದ ಬರದ ತೀವ್ರತೆಯನ್ನು ಸರಿಯಾಗಿ ಅಂದಾಜಿಸಲು ಸಾಧ್ಯವಾಗಲಿದೆ. ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ರೈತರ ಜೊತೆಗಿದೆ ಎಂಬ ಭರವಸೆಯೂ ಮೂಡಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕರ್ನಾಟಕದಲ್ಲಿ 10 ಕೃಷಿ ಹವಾಮಾನ ವಲಯಗಳಿವೆ. ರಾಜ್ಯದ ಸುಮಾರು ಶೇ.77ರಷ್ಟು ಪ್ರದೇಶ ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶವಾಗಿದೆ. ಸುಮಾರು 84.79 ಲಕ್ಷ ಹೆಕ್ಟೇರ್ ಮಳೆ ಆಶ್ರಿತ ಕೃಷಿ ಭೂಮಿಯನ್ನು ರಾಜ್ಯ ಹೊಂದಿದ್ದು, ರಾಜಸ್ಥಾನದ ನಂತರ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.

ಹೀಗಾಗಿ ರಾಜ್ಯದ ಕೃಷಿ ಚಟುವಟಿಕೆಗಳು ಹೆಚ್ಚಾಗಿ ಮುಂಗಾರು ಮಳೆಯನ್ನೇ ಅವಲಂಬಿಸಿವೆ. ಮಳೆ ಕೊರತೆಯಾದರೆ ಕೃಷಿ ಉತ್ಪಾದನೆಯ ಮೇಲೂ ನೇರ ಪರಿಣಾಮ ಬೀರುತ್ತದೆ.

ಜುಲೈ 11ರವರೆಗಿನ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ವಾಡಿಕೆಯಂತೆ 292 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 203 ಮಿ.ಮೀ. ಮಳೆಯಾಗಿದೆ. ರಾಜ್ಯದಲ್ಲಿ ಮಳೆ ಕೊರತೆ ಗಂಭೀರವಾಗುತ್ತಿರುವ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ಮೋದಿ ಅವರ ಗಮನ ಸೆಳೆದಿದ್ದಾರೆ.

ಕಲಬುರ್ಗಿ ಜೈಲಿನಿಂದ ಎಸ್ಕೇಪ್ ಆಗಿದ್ದ ಆರೋಪಿಗೆ ಗುಂಡು ಹಾರಿಸಿ ಅರೆಸ್ಟ್! ಇನ್ನಿಬ್ಬರಿಗಾಗಿ ಶೋಧ

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಸಜಾ ಕೈದಿಗಳ ಪೈಕಿ ಒಬ್ಬನನ್ನು ಪೊಲೀಸರು ಸಿನಿಮೀಯ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಆಂಧ್ರದಲ್ಲಿ ಕೋವಿಡ್ ಹೆಚ್ಚಳ; ಕರ್ನಾಟಕದಲ್ಲೂ 32 ಮಂದಿಗೆ ಸೋಂಕು ಪತ್ತೆ!

ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಯ ಕಾಲಿಗೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ.

ಬಂಧಿತ ಕೈದಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಮಂಗಳವಾರ ತಡರಾತ್ರಿ ಕೇಂದ್ರ ಕಾರಾಗೃಹದ ಕಾಂಪೌಂಡ್ ಗೋಡೆ ಹಾರಿ ಸಂತೋಷ್, ಮಸ್ತಾನ್ ಹಾಗೂ ಸಾಗರ್ ಪರಾರಿಯಾಗಿದ್ದರು. ಮೂವರ ಬಂಧನಕ್ಕಾಗಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು.

ಕಪನೂರು ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾಚರಣೆ:

ಕಲಬುರಗಿಯ ಕಪನೂರು ಕೈಗಾರಿಕಾ ಪ್ರದೇಶದಲ್ಲಿ ಸಂತೋಷ್ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧನಕ್ಕೆ ತೆರಳಿದ್ದರು. ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಸಂತೋಷ್‌ನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೂ ಗಾಯಗಳಾಗಿವೆ. ಗಾಯಾಳು ಪೊಲೀಸರು ಹಾಗೂ ಸಂತೋಷ್‌ನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಕಮಿಷನರ್ ಡಾ. ಶರಣಪ್ಪ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದಾರೆ.

ಟವೆಲ್, ಹಾಸಿಗೆ ಬಳಸಿ ಜೈಲಿನಿಂದ ಪರಾರಿ:

ಸುಮಾರು 15ರಿಂದ 20 ಅಡಿ ಎತ್ತರದ ಕಾರಾಗೃಹದ ಕಾಂಪೌಂಡ್ ಗೋಡೆಯನ್ನು ಟವೆಲ್ ಮತ್ತು ಹಾಸಿಗೆ ಬಳಸಿ ಮೂವರು ಕೈದಿಗಳು ಹಾರಿ ಪರಾರಿಯಾಗಿದ್ದರು. ಬಳಿಕ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ತಪ್ಪಿಸಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಘಟನೆ ಕಾರಾಗೃಹದ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಇದೀಗ ಪರಾರಿಯಾಗಿದ್ದ ಮೂವರ ಪೈಕಿ ಸಂತೋಷ್ ಪೊಲೀಸರ ಬಲೆಗೆ ಬಿದ್ದಿದ್ದು, ಉಳಿದ ಕೈದಿಗಳಾದ ಮಸ್ತಾನ್ ಮತ್ತು ಸಾಗರ್ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

12 ವರ್ಷಗಳ ಬಳಿಕ ದ್ಯಾಮಮ್ಮ–ದುರ್ಗಮ್ಮ ಹರಿಜಾತ್ರೆ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಗ್ರಾಮದೇವತೆಗಳಾದ ಶ್ರೀ ದ್ಯಾಮಮ್ಮ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರೆಯನ್ನು 12 ವರ್ಷಗಳ ಬಳಿಕ ಈ ಬಾರಿ ಅದ್ಧೂರಿಯಾಗಿ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಆಚರಿಸಲು ಭಕ್ತರು ನಿರ್ಧರಿಸಿದ್ದಾರೆ.

ನಗರದ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಭಕ್ತರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಗದಗ ನಗರದ 64 ವಿವಿಧ ಸಮಾಜಗಳ ಮುಖಂಡರು ಜಾತ್ರೆಯ ಯಶಸ್ವಿ ಆಯೋಜನೆ ಕುರಿತು ಚರ್ಚಿಸಿದರು.

ಜಾತ್ರೆಯು ಆಗಸ್ಟ್‌ 18ರಿಂದ 28ರವರೆಗೆ ಒಕ್ಕಲಗೇರಿ ಓಣಿಯ ದ್ಯಾಮಮ್ಮನ ಕಟ್ಟೆ ಹಾಗೂ ಜೋಡ ಮಾರುತಿ ದೇವಸ್ಥಾನದ ಎದುರಿನ ದ್ಯಾಮಮ್ಮ–ದುರ್ಗಮ್ಮ ದೇವಸ್ಥಾನದಲ್ಲಿ ನಡೆಯಲಿದೆ.

ಆಗಸ್ಟ್‌ 18ರಂದು ದೇವಿಯರ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಜಾತ್ರೆಗೆ ಚಾಲನೆ ದೊರೆಯಲಿದೆ. ಬಳಿಕ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಆಗಸ್ಟ್‌ 24ರಂದು ಮಹಾ ಅನ್ನಸಂತರ್ಪಣೆ, ಆಗಸ್ಟ್‌ 25ರಂದು ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ನಗರದ ವಿವಿಧ ದೇವಸ್ಥಾನಗಳಿಗೆ ಉಡಿ ತುಂಬುವ ಮತ್ತು ಕಾಯಿ ಒಡೆಯುವ ಸಂಪ್ರದಾಯಗಳು ಜರುಗಲಿವೆ.

ಆಗಸ್ಟ್‌ 26ರಂದು ದೇವಿಯರ ಮೂರ್ತಿಗಳನ್ನು ಮಂಗಳ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಕಿಲ್ಲಾದ ದೇವಸ್ಥಾನಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಲಾಗುವುದು. ಆಗಸ್ಟ್‌ 28ರಂದು ಮಹಾಹೋಮ, ಅನ್ನಸಂತರ್ಪಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ಕೀರ್ತನಕಾರ ಕಲ್ಲಿನಾಥ ಶಾಸ್ತ್ರಿಗಳು ದೇವಿಯರ ಮಹಿಮೆ ಹಾಗೂ ಹರಿಜಾತ್ರೆಯ ಮಹತ್ವದ ಕುರಿತು ಉಪನ್ಯಾಸ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ ಸಮಿತಿ ಅಧ್ಯಕ್ಷ ಕೊಟ್ರಪ್ಪ ಕಮತರ ವಹಿಸಿದ್ದರು. ವಿವಿಧ ಸಮಾಜಗಳ ಮುಖಂಡರು, ಪದಾಧಿಕಾರಿಗಳು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.

ಜಾತ್ರೆಯ ಪ್ರಮುಖ ಕಾರ್ಯಕ್ರಮಗಳು

  • ಆಗಸ್ಟ್‌ 18: ದೇವಿಯರ ಮೂರ್ತಿ ಪ್ರತಿಷ್ಠಾಪನೆ
  • ಆಗಸ್ಟ್‌ 18–25: ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು
  • ಆಗಸ್ಟ್‌ 24: ಮಹಾ ಅನ್ನಸಂತರ್ಪಣೆ
  • ಆಗಸ್ಟ್‌ 25: ಮುತೈದೆಯರಿಗೆ ಉಡಿ ತುಂಬುವ ಹಾಗೂ ಕಾಯಿ ಒಡೆಯುವ ಕಾರ್ಯಕ್ರಮ
  • ಆಗಸ್ಟ್‌ 26: ದ್ಯಾಮಮ್ಮ–ದುರ್ಗಮ್ಮ ದೇವಿಯರ ಭವ್ಯ ಮೆರವಣಿಗೆ ಮತ್ತು ಮೂರ್ತಿ ಪ್ರತಿಷ್ಠಾಪನೆ
  • ಆಗಸ್ಟ್‌ 28: ಮಹಾಹೋಮ, ಅನ್ನಸಂತರ್ಪಣೆ ಹಾಗೂ ಸಮಾರೋಪ

64 ಸಮಾಜಗಳ ಭಕ್ತರ ಸಾಥ್

ಹಲವು ವರ್ಷಗಳ ಬಳಿಕ ನಡೆಯುತ್ತಿರುವ ಹರಿಜಾತ್ರೆಯನ್ನು ಯಶಸ್ವಿಗೊಳಿಸಲು ಗದಗ ನಗರದ 64 ವಿವಿಧ ಸಮಾಜಗಳ ಮುಖಂಡರು ತನು-ಮನ-ಧನದಿಂದ ಸಹಕರಿಸುವುದಾಗಿ ಸಭೆಯಲ್ಲಿ ಸಂಕಲ್ಪ ಕೈಗೊಂಡರು. ಜಾತ್ರೆಯನ್ನು ಐತಿಹಾಸಿಕವಾಗಿ ಆಚರಿಸಲು ಎಲ್ಲ ಸಮಾಜಗಳ ಸಕ್ರಿಯ ಭಾಗವಹಿಸುವಿಕೆಗೆ ಕರೆ ನೀಡಲಾಯಿತು.

ರಾಜ್ಯ ಮಟ್ಟದಲ್ಲಿ ಮಿಂಚಿದ ಶಿಗ್ಲಿ ಶಾಲೆ ವಿದ್ಯಾರ್ಥಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದ ಎಸ್.ಎಸ್. ಕೂಡ್ಲಮಠ ಮಾಧ್ಯಮಿಕ ಶಾಲೆಯ 20 ಸ್ಕೌಟ್ಸ್ ಹಾಗೂ 6 ಗೈಡ್ಸ್ ವಿದ್ಯಾರ್ಥಿಗಳು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬೆಂಗಳೂರಿನ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಿಂದ ರಾಜ್ಯ ಪುರಸ್ಕಾರ ಪ್ರಶಸ್ತಿ ಸ್ವೀಕರಿಸಿದರು.

ಶನಿವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸಾಧನೆ ಮೆರೆದಿದ್ದು, ತರಬೇತುದಾರ ಶಿಕ್ಷಕರಾದ ಕೆ.ಆರ್. ಲಮಾಣಿ ಹಾಗೂ ಪಿ.ಸಿ. ಹಿರೇಮಠ ಅವರ ವಿಶೇಷ ತರಬೇತಿ ಈ ಯಶಸ್ಸಿಗೆ ಕಾರಣವಾಗಿದೆ.

ಗದಗ ಜಿಲ್ಲೆಯ ಪ್ರತಿನಿಧಿಯಾಗಿ ಶಾಲೆಯ ವಿದ್ಯಾರ್ಥಿ ಮಲ್ಲಿಕಾರ್ಜುನ ಕಾಳಪ್ಪನವರ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿದರು. ತರಬೇತಿ ನೀಡಿದ ಶಿಕ್ಷಕರಾದ ಕೆ.ಆರ್. ಲಮಾಣಿ ಮತ್ತು ಪಿ.ಸಿ. ಹಿರೇಮಠ ಅವರೂ ವಿದ್ಯಾರ್ಥಿಗಳೊಂದಿಗೆ ಸಮಾರಂಭದಲ್ಲಿ ಭಾಗವಹಿಸಿ ಗೌರವ ಸ್ವೀಕರಿಸಿದರು.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಬಳಿಗಾರ, ಕಾರ್ಯದರ್ಶಿ ಸಿ.ಎಂ. ರಾಗಿ, ಮುಖ್ಯೋಪಾಧ್ಯಾಯ ಸಿ.ಬಿ. ಮೊಗಲಿ, ಶಿಕ್ಷಕ ವೃಂದ, ಆಡಳಿತ ಮಂಡಳಿ, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ಬೆಳೆ ವಿಮೆ ಗೊಂದಲಕ್ಕೆ ಬೇಸತ್ತ ರೈತರು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಹೊಸ ನಿಯಮಗಳಿಂದ ರೈತರಲ್ಲಿ ಉಂಟಾಗಿರುವ ಗೊಂದಲ ನಿವಾರಿಸಿ, ಬೆಳೆ ವಿಮೆ ಕಂತು ಪಾವತಿಸಲು ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸಿ ಲಕ್ಷ್ಮೇಶ್ವರ ತಾಲೂಕು ಸಮಗ್ರ ರೈತ ಹೋರಾಟ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಜಂಟಿ ಕೃಷಿ ನಿರ್ದೇಶಕರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ವಿವಿಧ ಬ್ಯಾಂಕ್‌ಗಳ ಪ್ರಾದೇಶಿಕ ವ್ಯವಸ್ಥಾಪಕರೊಂದಿಗೆ ರೈತರು ಸಭೆ ನಡೆಸಿ, ಬೆಳೆ ವಿಮೆ ಸಮಸ್ಯೆ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದು ಸೇರಿದಂತೆ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿದರು.

ಮನವಿಯಲ್ಲಿ, ಕಳೆದ ಹಲವು ವರ್ಷಗಳಿಂದ ರೈತರು ಬೆಳೆ ವಿಮೆ ಕಂತು ಪಾವತಿಸುತ್ತಿದ್ದರೂ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ. ದಲ್ಲಾಳಿಗಳ ಹಾವಳಿಯಿಂದ ಬಹುತೇಕ ರೈತರು ವಂಚಿತರಾಗಿದ್ದು, ಕೆಲವೇ ರೈತರಿಗೆ ಅಲ್ಪ ಪ್ರಮಾಣದ ಪರಿಹಾರ ಸಿಕ್ಕಿದೆ ಎಂದು ಆರೋಪಿಸಲಾಗಿದೆ.

ಹೊಸ ನಿಯಮದಂತೆ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರು ಬೆಳೆ ಬದಲಾವಣೆ ದೃಢೀಕರಣ ಪತ್ರದೊಂದಿಗೆ ವಿಮೆ ಪಾವತಿಸಬೇಕಿದ್ದು, ಹತ್ತಿ ಹಾಗೂ ಹೆಸರು ಬೆಳೆಗಳಿಗೆ ಜುಲೈ 15 ಕೊನೆಯ ದಿನವಾಗಿರುವುದರಿಂದ ಅನೇಕ ರೈತರು ವಿಮೆ ಪಾವತಿಯಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಸಾಲ ಪಡೆಯದ ರೈತರಿಗೆ ಸ್ವಘೋಷಣಾ ಪತ್ರದ ಮೂಲಕ ಕರ್ನಾಟಕ ಒನ್ ಹಾಗೂ ಸಿಎಸ್‌ಸಿ ಕೇಂದ್ರಗಳಲ್ಲಿ ವಿಮೆ ಪಾವತಿಸಲು ಅವಕಾಶ ನೀಡಲಾಗಿದ್ದರೂ, ಸರ್ವರ್ ಸಮಸ್ಯೆ, ತಾಂತ್ರಿಕ ತೊಂದರೆ, ದಾಖಲೆಗಳ ಗೊಂದಲ ಹಾಗೂ ಬ್ಯಾಂಕ್‌ಗಳಲ್ಲಿ ಕನ್ನಡ ಬಲ್ಲ ಸಿಬ್ಬಂದಿ ಕೊರತೆಯಿಂದ ರೈತರು ಪರದಾಡುವಂತಾಗಿದೆ ಎಂದು ದೂರಿದರು.

ಅಲ್ಲದೆ, ಅತಿವೃಷ್ಟಿ, ಮಳೆ ಕೊರತೆ ಹಾಗೂ ರೋಗಬಾಧೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಪಾವತಿಸಲು ಅವಕಾಶ ಕಲ್ಪಿಸಬೇಕು. ವಿಮೆ ಪಾವತಿಗೆ ಇನ್ನಷ್ಟು ಕಾಲಾವಕಾಶ ನೀಡುವ ಜೊತೆಗೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಸೋಮವಾರ ಬ್ಯಾಂಕ್‌ಗಳು ಹಾಗೂ ಆನ್‌ಲೈನ್ ಕೇಂದ್ರಗಳ ಮುಂದೆ ರೈತರು ದಿನವಿಡೀ ಕಾದರೂ, ಸರ್ವರ್ ಸಮಸ್ಯೆಯಿಂದ ವಿಮೆ ಪಾವತಿಸಲು ಸಾಧ್ಯವಾಗದೆ ನಿರಾಶರಾಗಿ ಹಿಂತಿರುಗಿದ ದೃಶ್ಯಗಳು ಕಂಡುಬಂದವು.

“ಬೆಳೆ ವಿಮೆ ನಿಯಮಗಳ ಗೊಂದಲ ನಿವಾರಿಸಿ, ಪಾವತಿ ಅವಧಿ ವಿಸ್ತರಿಸದಿದ್ದರೆ ಸಾವಿರಾರು ರೈತರು ವಿಮೆ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.”

– ಮಂಜುನಾಥ ಮಾಗಡಿ, ತಾಲೂಕು ಅಧ್ಯಕ್ಷ, ಸಮಗ್ರ ರೈತ ಹೋರಾಟ ಸಂಘಟನೆಗಳ ಒಕ್ಕೂಟ