Home Blog Page 20

ವಿಜಯ್ ಕುಟುಂಬದಲ್ಲಿ ಹೊಸ ಅಧ್ಯಾಯ! ಮಗನ ಮೊದಲ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್

ತಮಿಳು ಚಿತ್ರರಂಗದಲ್ಲಿ ದಳಪತಿ ವಿಜಯ್ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಚರ್ಚೆ ನಡೆಯುತ್ತಿರುವ ನಡುವೆಯೇ, ಅವರ ಪುತ್ರ ಜೇಸನ್ ಸಂಜಯ್ ಅವರ ಮೊದಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆದರೆ ತಂದೆಯಂತೆ ನಟನಾಗಿ ಅಲ್ಲ, ನಿರ್ದೇಶಕರಾಗಿ ಅವರು ಚಿತ್ರರಂಗ ಪ್ರವೇಶಿಸುತ್ತಿರುವುದು ವಿಶೇಷವಾಗಿದೆ.

ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಚಿತ್ರ ‘ಸಿಗ್ಮ’ ಜುಲೈ 31ರಂದು ತೆರೆಗೆ ಬರಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಯುವಜನತೆಯ ಮನಸ್ಸಿಗೆ ಹತ್ತಿರವಾಗುವ ಆಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದೆ.

ಸಂದೀಪ್ ಕೃಷ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರದಲ್ಲಿ ಫಾರಿಯಾ ಅಬ್ದುಲ್ಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸಂಪತ್ ರಾಜ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶಕ ಎಸ್. ತಮನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಚಿತ್ರದ ಟೀಸರ್ ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಹೊಸ ತಲೆಮಾರಿನ ನಿರ್ದೇಶಕರಾಗಿ ಜೇಸನ್ ಸಂಜಯ್ ಗಮನ ಸೆಳೆದಿದ್ದಾರೆ. ಹಲವು ವರ್ಷಗಳಿಂದ ಜೇಸನ್ ನಟನಾಗಿ ಎಂಟ್ರಿ ಕೊಡುತ್ತಾರೆ ಎಂಬ ಊಹಾಪೋಹಗಳು ಕೇಳಿಬಂದಿದ್ದರೂ, ಅವರು ನಿರ್ದೇಶನ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನ ಆರಂಭಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದೇ ವೇಳೆ ವಿಜಯ್ ಅವರ ಕುಟುಂಬದ ಬೆಳವಣಿಗೆಗಳೂ ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸುದ್ದಿಗಳ ನಡುವೆಯೇ ಮಗನ ಮೊದಲ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷ. ಇದೀಗ ‘ಸಿಗ್ಮ’ ಬಿಡುಗಡೆಯ ವೇಳೆ ವಿಜಯ್ ಸಾರ್ವಜನಿಕವಾಗಿ ಮಗನ ಸಿನಿಮಾವನ್ನು ಬೆಂಬಲಿಸುತ್ತಾರೆಯೇ ಅಥವಾ ದೂರವೇ ಉಳಿಯುತ್ತಾರೆಯೇ ಎಂಬ ಪ್ರಶ್ನೆ ಸಿನಿ ವಲಯದಲ್ಲಿ ಭಾರಿ ಕುತೂಹಲ ಹುಟ್ಟಿಸಿದೆ.

ಜುಲೈ 31ರಂದು ಬಿಡುಗಡೆಯಾಗಲಿರುವ ‘ಸಿಗ್ಮ’ ಕೇವಲ ಒಂದು ಸಿನಿಮಾ ಮಾತ್ರವಲ್ಲ, ವಿಜಯ್ ಕುಟುಂಬದ ಹೊಸ ಸಿನಿ ಅಧ್ಯಾಯಕ್ಕೆ ಸಾಕ್ಷಿಯಾಗಲಿರುವ ಚಿತ್ರವಾಗಿಯೂ ಗಮನ ಸೆಳೆಯುತ್ತಿದೆ.

ಹಾಡಹಗಲೇ ಬೈಕ್ ಎಗರಿಸಿದ ಕಳ್ಳ! ಸಿಸಿ ಟಿವಿಯಲ್ಲಿ ಕಳ್ಳನ ಕೈಚಳಕ ಸೆರೆ

ಗದಗ: ನಗರದ ಹೃದಯಭಾಗದಲ್ಲೇ ಹಾಡಹಗಲೇ ಖದೀಮನೊಬ್ಬ ಕ್ಷಣಾರ್ಥದಲ್ಲಿ ಬೈಕ್ ಕದ್ದು ಪರಾರಿಯಾದ ಘಟನೆ ಗದಗದಲ್ಲಿ ನಡೆದಿದೆ.

ನಗರದ ಕೆ.ಸಿ. ರಾಣಿ ರಸ್ತೆಯಲ್ಲಿ ನಡೆದ ಈ ಕಳ್ಳತನ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದು, ಕಳ್ಳನ ಚಾಕಚಕ್ಯತೆ ಸಿಸಿ ಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಗಣೇಶ್ ಹುಬ್ಬಳ್ಳಿ ಎಂಬುವರಿಗೆ ಸೇರಿದ KA-26 EB-9527 ನಂಬರ್‌ನ ದ್ವಿಚಕ್ರ ವಾಹನವನ್ನು ಖದೀಮ ಕದ್ದು ಪರಾರಿಯಾಗಿದ್ದಾನೆ. ಬೆಳಿಗ್ಗೆ ವೇಳೆಯಲ್ಲೇ ಸಾರ್ವಜನಿಕರ ಸಂಚಾರ ನಡುವೆ ಆರೋಪಿ ಯಾವುದೇ ಆತಂಕವಿಲ್ಲದೆ ಬೈಕ್ ಎಗರಿಸಿರುವುದು ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ.

ಕಳ್ಳತನದ ಬಳಿಕ ಬೈಕ್ ಅನ್ನು ಕೊಪ್ಪಳ ಮಾರ್ಗವಾಗಿ ಕೊಂಡೊಯ್ಯಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ವಿವಿಧ ಚೆಕ್‌ಪೋಸ್ಟ್‌ಗಳಿಗೆ ವಾಹನದ ಮಾಹಿತಿ ರವಾನಿಸಿದ್ದಾರೆ. ಸಿಸಿ ಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಯ ಪತ್ತೆಗೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

ಅವಳಿ ನಗರದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ವಾಹನ ಕಳ್ಳತನ ಪ್ರಕರಣಗಳು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ಪೊಲೀಸರು ರಾತ್ರಿ ಹಾಗೂ ಬೆಳಗಿನ ಜಾವ ಗಸ್ತು ಹೆಚ್ಚಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ದಿನವೂ 1 ಕಿಲೋಮೀಟರ್ ವಾಕಿಂಗ್ ಮಾಡಿದರೆ ದೇಹಕ್ಕೆ ಏನು ಲಾಭ? ಇಲ್ಲಿದೆ ಸಂಪೂರ್ಣ ಮಾಹಿತಿ

ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹಲವರಿಗೆ ಸವಾಲಾಗಿದೆ. ವ್ಯಾಯಾಮ ಮಾಡಲು ಸಮಯ ಸಿಗುವುದಿಲ್ಲ ಎಂಬ ಕಾರಣದಿಂದ ಅನೇಕರು ದೈಹಿಕ ಚಟುವಟಿಕೆಯಿಂದ ದೂರವಾಗುತ್ತಿದ್ದಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಕೇವಲ 1 ಕಿಲೋಮೀಟರ್ ನಡೆಯುವ ಅಭ್ಯಾಸವೂ ದೇಹದ ಆರೋಗ್ಯದಲ್ಲಿ ಮಹತ್ವದ ಬದಲಾವಣೆ ತರಬಲ್ಲದು.

ತಜ್ಞರ ಮಾಹಿತಿ ಪ್ರಕಾರ, ಸಾಮಾನ್ಯವಾಗಿ 1 ಕಿಲೋಮೀಟರ್ ನಡೆದರೆ ಸುಮಾರು 60ರಿಂದ 100 ಕ್ಯಾಲೊರಿಗಳವರೆಗೆ ಕರಗಿಸಬಹುದು. ಇದು ವ್ಯಕ್ತಿಯ ತೂಕ, ಎತ್ತರ ಹಾಗೂ ನಡೆಯುವ ವೇಗದ ಮೇಲೆ ಅವಲಂಬಿತವಾಗಿರುತ್ತದೆ. ವೇಗವಾಗಿ ನಡೆದಷ್ಟು ಹೆಚ್ಚು ಕ್ಯಾಲೊರಿ ಕರಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ವಾಕಿಂಗ್‌ನ ಪ್ರಮುಖ ಆರೋಗ್ಯ ಲಾಭಗಳು

 ಹೃದಯದ ಆರೋಗ್ಯಕ್ಕೆ ಸಹಕಾರಿ

ಪ್ರತಿದಿನ ನಡೆಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರಲು ನೆರವಾಗುತ್ತದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

ಒತ್ತಡ ಕಡಿಮೆ ಮಾಡಲು ನೆರವು

ವಾಕಿಂಗ್ ಮಾಡುವ ವೇಳೆ ದೇಹದಲ್ಲಿ ‘ಎಂಡಾರ್ಫಿನ್’ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದನ್ನು ‘ಹ್ಯಾಪಿ ಹಾರ್ಮೋನ್’ ಎಂದೂ ಕರೆಯಲಾಗುತ್ತದೆ. ಇದು ಒತ್ತಡ, ಆತಂಕ ಹಾಗೂ ಮಾನಸಿಕ ದೌರ್ಬಲ್ಯವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಜೀರ್ಣಕ್ರಿಯೆ ಸುಧಾರಣೆ

ಪ್ರತಿದಿನ ನಡೆಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮಲಬದ್ಧತೆ ಸಮಸ್ಯೆ ಕಡಿಮೆಯಾಗುವ ಜೊತೆಗೆ ದೇಹದ ಮೆಟಾಬಾಲಿಸಂ ಚುರುಕಾಗುತ್ತದೆ.

ಉತ್ತಮ ನಿದ್ರೆಗೆ ಸಹಾಯ

ವಾಕಿಂಗ್ ದೇಹಕ್ಕೆ ಸಹಜವಾದ ಶ್ರಮ ನೀಡುವುದರಿಂದ ರಾತ್ರಿ ಗಾಢ ನಿದ್ರೆ ಬರಲು ಸಹಕಾರಿ. ಇದರಿಂದ ನಿದ್ರಾಹೀನತೆ ಸಮಸ್ಯೆಯೂ ಕಡಿಮೆಯಾಗಬಹುದು.

ತೂಕ ಇಳಿಕೆಗೆ ಪರಿಣಾಮಕಾರಿ

ಸರಿಯಾದ ಆಹಾರ ಪದ್ಧತಿಯ ಜೊತೆಗೆ ಪ್ರತಿದಿನ ವಾಕಿಂಗ್ ಮಾಡಿದರೆ ತೂಕ ಇಳಿಕೆಗೆ ಉತ್ತಮ ಫಲಿತಾಂಶ ಸಿಗಬಹುದು. ವಿಶೇಷವಾಗಿ ಹೊಟ್ಟೆ ಸುತ್ತಿನ ಕೊಬ್ಬು ಕಡಿಮೆ ಮಾಡಲು ಇದು ಸಹಾಯಕವಾಗುತ್ತದೆ.

ತಜ್ಞರ ಪ್ರಕಾರ, “ಕೇವಲ 1 ಕಿಲೋಮೀಟರ್” ಎಂದು ನಿರ್ಲಕ್ಷಿಸಬಾರದು. ಈ ಚಿಕ್ಕ ಅಭ್ಯಾಸವನ್ನು ಪ್ರತಿದಿನ ಮುಂದುವರಿಸಿದರೆ ದೀರ್ಘಾವಧಿಯಲ್ಲಿ ಸಾವಿರಾರು ಕ್ಯಾಲೊರಿಗಳನ್ನು ಕರಗಿಸಲು ಸಾಧ್ಯವಾಗುತ್ತದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ವಾಕಿಂಗ್ ಅತ್ಯುತ್ತಮ ಮಾರ್ಗವಾಗಿದೆ.

ಅಹಿಂದ ಧ್ವಜವನ್ನು ಮುಂದೂಡುವೆ: ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಸಾಗುತ್ತೇನೆ ಎಂದ ಸತೀಶ್ ಜಾರಕಿಹೊಳಿ

ಬೆಂಗಳೂರು: ಒಪ್ಪಂದದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ಅಹಿಂದ ಧ್ವಜವನ್ನು ಮುಂದೂಡುವುದಾಗಿ ಹಿರಿಯ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನೂ ಎರಡು ವರ್ಷಗಳ ಬಳಿಕವಾದರೂ ಸಿದ್ದರಾಮಯ್ಯ ಅವರು ಸ್ಥಾನದಿಂದ ಕೆಳಗಿಳಿಯಲೇಬೇಕಿತ್ತು. ಎಲ್ಲಾ ಸಂದರ್ಭಗಳಿಗೂ ನಾವು ಸಿದ್ಧರಾಗಿರಬೇಕು ಎಂದು ಹೇಳಿದರು.

ಅಹಿಂದ ವರ್ಗದಲ್ಲಿ ನೂರಾರು ಜಾತಿಗಳಿದ್ದು, ಆ ವರ್ಗದ ಪರ ಧ್ವಜವನ್ನು ಯಾರಾದರೂ ಒಬ್ಬರು ಮುನ್ನಡೆಸಲೇಬೇಕು ಎಂದು ಹೇಳಿದ ಅವರು, “ನಾನು ಅಹಿಂದ ಧ್ವಜವನ್ನು ಕೊಂಡೊಯ್ಯುತ್ತೇನೆ. ಹೊಸ ಅಹಿಂದ ನಾಯಕ ಉದಯವಾಗಲೇಬೇಕು. ರಾಜ್ಯದಲ್ಲಿ ಆ ವ್ಯವಸ್ಥೆ ಇದೆ” ಎಂದು ತಿಳಿಸಿದರು.

ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ಕುರಿತು ದೆಹಲಿಯಲ್ಲಿ ಈಗಾಗಲೇ ಎಲ್ಲಾ ಮಟ್ಟದ ಮಾತುಕತೆ ನಡೆದಿತ್ತು. ಬೆಂಗಳೂರಿನಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದರು.

ನಮ್ಮನ್ನು ಆಗಲೂ ಯಾರೂ ಕೇಳಿರಲಿಲ್ಲ. ಸಿದ್ದರಾಮಯ್ಯ ಅವರೇ ಸ್ವಯಂಪ್ರೇರಿತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ವಿರುದ್ಧ ಸಹಿ ಸಂಗ್ರಹ ಮಾಡಲಾಗುತ್ತಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಸತೀಶ್ ಜಾರಕಿಹೊಳಿ, “ಇದು ಸಂಪೂರ್ಣ ಸುಳ್ಳು. ಯಾರೋ ಹಾಕಿರುವ ಪೋಸ್ಟ್‌ಗೆ ಮಹತ್ವ ಕೊಡಬೇಕಾಗಿಲ್ಲ. ಯಾವುದೇ ಸಹಿ ಸಂಗ್ರಹ ನಡೆದಿಲ್ಲ” ಎಂದರು.

37 ಮಂದಿ ಶಾಸಕರು ಸಹಿ ಹಾಕಿದ್ದರೆ ಉಳಿದ 100 ಮಂದಿ ಎಲ್ಲಿಗೆ ಹೋದರು? ಎಂದು ಪ್ರಶ್ನಿಸಿದ ಅವರು, ಒಪ್ಪಂದದ ಪ್ರಕಾರವೇ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದಾರೆ ಎಂದು ಪುನರುಚ್ಚರಿಸಿದರು.

ಹೈಕಮಾಂಡ್ ಹೇಳಿದ ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಮೊದಲೇ ಹೇಳಿದ್ದರು. ಈಗ ಅವರು ಹೇಳಿದ ಹಿನ್ನೆಲೆಯಲ್ಲಿ ಎರಡು ದಿನಗಳಲ್ಲೇ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಈ ಬಗ್ಗೆ ಚರ್ಚೆ ಮಾಡಿಕೊಂಡು ಬರುತ್ತಾರೆ. ಬಳಿಕ ಅವರು ಏನು ತೀರ್ಮಾನಿಸುತ್ತಾರೋ ಅದನ್ನು ಆಧರಿಸಿ ಮುಂದಿನ ನಿರ್ಧಾರವಾಗುತ್ತದೆ ಎಂದರು.

ಕಾಂಗ್ರೆಸ್‌ಗೆ ಮತ್ತೊಂದು ದೊಡ್ಡ ಆಘಾತ! ವೆಂಕಟರಮಣಪ್ಪ ನಿಧನಕ್ಕೆ ಪರಮೇಶ್ವರ್ ಸಂತಾಪ

0

ತುಮಕೂರು: ಪಾವಗಡದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹಾಗೂ ಮಾಜಿ ಶಾಸಕ ವೆಂಕಟರಮಣಪ್ಪ ಅವರ ನಿಧನಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಂಬನಿ ಮಿಡಿದಿದ್ದಾರೆ. ಆಸ್ಪತ್ರೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಅವರು, ಮೃತರ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, “ವೆಂಕಟರಮಣಪ್ಪ ಅವರ ಅಗಲಿಕೆ ಅತ್ಯಂತ ದುಃಖದ ಸಂಗತಿ. ಶೋಷಿತ ವರ್ಗಗಳ ಪರ ಹೋರಾಟ ನಡೆಸಿ ಜನಪ್ರಿಯತೆ ಗಳಿಸಿದ್ದ ಅಪರೂಪದ ನಾಯಕ ಅವರು” ಎಂದು ಹೇಳಿದರು.

ತುಮಕೂರು ಜಿಲ್ಲೆಯ ರಾಜಕೀಯದಲ್ಲಿ ವೆಂಕಟರಮಣಪ್ಪ ಅವರ ಕೊಡುಗೆ ಅಪಾರವಾಗಿದೆ. ಸಚಿವರಾಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ಮತ್ತು ಜನಪರ ಆಡಳಿತಕ್ಕೆ ಆದ್ಯತೆ ನೀಡಿದ್ದರು. ಜನರೊಂದಿಗೆ ಹೊಂದಿದ್ದ ನಿಕಟ ಬಾಂಧವ್ಯವೇ ಅವರನ್ನು ವಿಭಿನ್ನ ನಾಯಕನನ್ನಾಗಿ ಮಾಡಿತ್ತು ಎಂದು ಪರಮೇಶ್ವರ್ ಸ್ಮರಿಸಿದರು.

“ನನಗೂ ಅವರು ಅತ್ಯಂತ ಆತ್ಮೀಯರಾಗಿದ್ದರು. ಅವರ ನಿಧನದಿಂದ ಕಾಂಗ್ರೆಸ್ ಪಕ್ಷ ಒಬ್ಬ ಹಿರಿಯ ಅನುಭವಿ ನಾಯಕರನ್ನು ಕಳೆದುಕೊಂಡಿದೆ. ಈ ನಷ್ಟವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಸ್ಥರಿಗೆ ನೀಡಲಿ” ಎಂದು ಸಂತಾಪ ಸೂಚಿಸಿದರು.

ಸಿದ್ದರಾಮಯ್ಯರನ್ನು ಅವಮಾನ ಮಾಡಿ ಕೆಳಗಿಳಿಸಿದ್ದಾರೆ: ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ವಾಗ್ದಾಳಿ

ಬಳ್ಳಾರಿ: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಅವಮಾನ ಮಾಡಲಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಂಟು ವರ್ಷಗಳ ಕಾಲ ರಾಜ್ಯವನ್ನು ಮುನ್ನಡೆಸಿದ ನಾಯಕರೊಂದಿಗೆ ಗೌರವಯುತವಾಗಿ ವರ್ತಿಸಬೇಕಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡಿ, ನೆಮ್ಮದಿಯಿಂದ ಕೆಲಸ ಮಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.

“2023ರಲ್ಲಿ ಮುಖ್ಯಮಂತ್ರಿ ಆದ ದಿನದಿಂದಲೇ ಅವರನ್ನು ಗುರಿಯಾಗಿಸಿಕೊಂಡು ಒಳಗೊಳಗೆ ರಾಜಕೀಯ ನಡೆಯುತ್ತಿತ್ತು. ಕೊನೆಗೆ ಕ್ಲೈಮ್ಯಾಕ್ಸ್ ಹಂತದಲ್ಲಿ ರಾಜೀನಾಮೆ ಕೊಡಿಸಲಾಯಿತು. ಸಿದ್ದರಾಮಯ್ಯ ಅವರ ಮುಖದಲ್ಲಿದ್ದ ನೋವು ನೋಡಿದಾಗ ನನಗೂ ಬೇಸರವಾಯಿತು” ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪರೋಕ್ಷವಾಗಿ ಟೀಕಿಸಿದ ಶ್ರೀರಾಮುಲು, “ಒಂದು ಕಡೆ ಡಿ.ಕೆ. ಶಿವಕುಮಾರ್ ಕಾಲೆಳೆದರೆ, ಮತ್ತೊಂದು ಕಡೆ ಖರ್ಗೆ ಕಾಲೆಳೆದರು. ಮುಖ್ಯಮಂತ್ರಿ ಕುರ್ಚಿಯನ್ನು ಎಳೆದಾಡಿ ಸಿದ್ದರಾಮಯ್ಯರಿಂದ ಕಸಿದುಕೊಂಡಿದ್ದಾರೆ” ಎಂದು ಆರೋಪಿಸಿದರು.

“ಹಿಂದುಳಿದ ವರ್ಗದ ನಾಯಕನಿಗೆ ಕಾಂಗ್ರೆಸ್ ಪಕ್ಷವೇ ನೋವುಂಟು ಮಾಡಿದೆ. ರಾಹುಲ್ ಗಾಂಧಿ ಸದಾ ಒಬಿಸಿ ನಾಯಕರ ಬೆಂಬಲದ ಬಗ್ಗೆ ಮಾತನಾಡುತ್ತಾರೆ. ಆದರೆ ದೇಶದಲ್ಲೇ ಕಾಂಗ್ರೆಸ್ ಆಡಳಿತದಲ್ಲಿರುವ ಪ್ರಮುಖ ರಾಜ್ಯದ ಒಬಿಸಿ ನಾಯಕನನ್ನು ಕೆಳಗಿಳಿಸಿರುವುದಕ್ಕೆ ಏನು ಉತ್ತರ ಕೊಡುತ್ತಾರೆ?” ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ದೊಡ್ಡ ಮಟ್ಟದ ಬೆಂಬಲವಿದೆ ಎಂದು ಹೇಳಿದ ಅವರು, “ಸಿದ್ದರಾಮಯ್ಯ ಫೋಟೋ ಇಟ್ಟುಕೊಂಡೇ ಹಲವರು ಶಾಸಕರಾಗಿ ಗೆದ್ದಿದ್ದಾರೆ. ಅವರ ಹೆಸರಿನಿಂದಲೇ ಕಾಂಗ್ರೆಸ್ ಈ ಹಂತಕ್ಕೆ ಬಂದಿದೆ. ಆದರೆ ಈಗ ಅದೇ ನಾಯಕರು ಡಿ.ಕೆ. ಶಿವಕುಮಾರ್ ಮನೆ ಮುಂದೆ ನಿಂತಿದ್ದಾರೆ” ಎಂದು ಟೀಕಿಸಿದರು.

“ಸಚಿವರು ಈಗ ತ್ಯಾಗಕ್ಕೆ ಸಿದ್ಧರಾಗಲಿ!”; ಹೊಸ ಸಂಪುಟಕ್ಕೂ ಮುನ್ನ ತನ್ವೀರ್ ಸೇಠ್ ಬಿಗ್ ಸ್ಟೇಟ್‌ಮೆಂಟ್

0

ಮೈಸೂರು: ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮಹತ್ವದ ಸಂದೇಶ ರವಾನಿಸಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದವರು ಈಗ ಅಧಿಕಾರ ತ್ಯಾಗದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳುವ ಮೂಲಕ ಹೊಸ ಮುಖಗಳಿಗೆ ಅವಕಾಶ ನೀಡುವಂತೆ ಪರೋಕ್ಷವಾಗಿ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಹೊಸಬರಿಗೆ ಸಚಿವ ಸ್ಥಾನ ಸಿಗುವ ವಾತಾವರಣ ನಿರ್ಮಾಣವಾಗಬೇಕು. ಪಕ್ಷದಲ್ಲಿ ಹಲವು ನಾಯಕರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಹೊಸ ತಲೆಮಾರಿಗೆ ಅವಕಾಶ ನೀಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ತಮ್ಮ ಸಚಿವ ಸ್ಥಾನದ ಸಾಧ್ಯತೆ ಕುರಿತೂ ಮಾತನಾಡಿದ ತನ್ವೀರ್ ಸೇಠ್, ಕಳೆದ ಬಾರಿ ತಮಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ ಪಕ್ಷದ ವರಿಷ್ಠರು ತಮ್ಮನ್ನು ಪರಿಗಣಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಇದೇ ವೇಳೆ ತಾವು ಯಾವತ್ತೂ ಸಿದ್ದರಾಮಯ್ಯ ವಿರೋಧಿ ಬಣದಲ್ಲಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಯಾರ ವಿರುದ್ಧವೂ ರಾಜಕೀಯವಾಗಿ ನಿಂತಿಲ್ಲ. ಕೆಲವು ಸಂದರ್ಭಗಳಲ್ಲಿ ಅವಕಾಶ ಕೈ ತಪ್ಪಿತ್ತು ಅಷ್ಟೇ ಎಂದು ಹೇಳಿದರು.

ಡೀಸೆಲ್–ಪೆಟ್ರೋಲ್ ಬೆಲೆ ಏರಿಕೆ: ಜನ ಸಾಮಾನ್ಯರ ಮೇಲೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ AAP ಪ್ರತಿಭಟನೆ

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪದೇ ಪದೇ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ (ಎಎಪಿ) ನಗರದಲ್ಲಿ ತೀವ್ರ ಪ್ರತಿಭಟನೆ ನಡೆಸಿತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಳವಾಗುತ್ತಿದ್ದು, ಅದರ ಪರಿಣಾಮವಾಗಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ ಎಂದು ಆರೋಪಿಸಿದರು.

“ರೈತರು ಕೃಷಿ ಚಟುವಟಿಕೆಗಳಿಗೆ ಬಳಸುವ ಡೀಸೆಲ್ ದುಬಾರಿಯಾಗುವುದರಿಂದ ಕೃಷಿ ವೆಚ್ಚ ಹೆಚ್ಚಲಿದೆ. ಮಧ್ಯಮ ವರ್ಗ, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಹಾಗೂ ಆಟೋ ಮತ್ತು ಟ್ಯಾಕ್ಸಿ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ” ಎಂದು ಅವರು ಹೇಳಿದರು.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದಿದ್ದರೂ ದೇಶದಲ್ಲಿ ಅದರ ಪ್ರಯೋಜನ ಜನರಿಗೆ ಸಿಗುತ್ತಿಲ್ಲ ಎಂದು ಆರೋಪಿಸಿದ ಅವರು, “ಎಕ್ಸೈಸ್ ಸುಂಕದ ಹೆಸರಿನಲ್ಲಿ ಕೇಂದ್ರ ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿ ಸಂಗ್ರಹಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಲೆಕ್ಕವನ್ನು ದೇಶದ ಜನರ ಮುಂದೆ ಬಹಿರಂಗಪಡಿಸಬೇಕು” ಎಂದು ಆಗ್ರಹಿಸಿದರು.

ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಸೀತಾರಾಮ್ ಗುಂಡಪ್ಪ, ಜನರ ಸಮಸ್ಯೆಗಳ ಬಗ್ಗೆ ಸರ್ಕಾರ ಯಾವುದೇ ಕಾಳಜಿ ತೋರಿಸುತ್ತಿಲ್ಲ ಎಂದು ಟೀಕಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಮಾತನಾಡಿ, “ಅಚ್ಛೇ ದಿನ್ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇಂದು ಜನರನ್ನು ಬೆಲೆ ಏರಿಕೆಯ ಬೆಂಕಿಗೆ ತಳ್ಳಿದೆ” ಎಂದು ವಾಗ್ದಾಳಿ ನಡೆಸಿದರು.

ನಿರುದ್ಯೋಗ, ತೆರಿಗೆ ಭಾರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಜೀವನ ದುಸ್ತರವಾಗಿದ್ದರೂ, ಸರ್ಕಾರ ಕಾರ್ಪೊರೇಟ್ ಪರ ನೀತಿಗಳಲ್ಲೇ ತೊಡಗಿದೆ ಎಂದು ಆರೋಪಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ತಕ್ಷಣ ಕಡಿತಗೊಳಿಸಿ, ಇಂಧನ ದರ ಏರಿಕೆಯನ್ನು ಹಿಂಪಡೆಯಬೇಕು. ಜೊತೆಗೆ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಲಕ್ಷ್ಮಿಕಾಂತ್ ರಾವ್, ಜಗದೀಶ್ ಚಂದ್ರ, ಶಶಿಧರ್ ಆರಾಧ್ಯ, ಅಶೋಕ್ ಮೃತ್ಯುಂಜಯ, ಪುಟ್ಟಣ್ಣ ಗೌಡ, ಮಧುಮಿತಾ, ಪ್ರಭಾವತಿ, ಪುಷ್ಪ ಕೇಶವ್, ಶುಭ ಗುತ್ತೇದಾರ, ಇರ್ಷಾದ್ ಖಾನ್, ಅಣ್ಣ ನಾಯಕ್, ಉಮೇಶ್ ಯಾದವ್, ದಿಲೀಪ್ ಕುಮಾರ್ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

ಜಾಮೀನು ಆದೇಶ ಅದೇ ದಿನ ಪ್ರಕಟಿಸಬೇಕು: ದೇಶದ ಎಲ್ಲಾ ಹೈಕೋರ್ಟ್‌ ಗಳಿಗೆ ಸುಪ್ರೀಂ ಮಹತ್ವದ ಸೂಚನೆ

ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪುಗಳು ಹಾಗೂ ಜಾಮೀನು ಆದೇಶಗಳು ವಿಳಂಬವಾಗುತ್ತಿರುವ ವಿಚಾರಕ್ಕೆ ಗಂಭೀರವಾಗಿ ಸ್ಪಂದಿಸಿರುವ ಸುಪ್ರೀಂಕೋರ್ಟ್, ಎಲ್ಲಾ ಹೈಕೋರ್ಟ್‌ಗಳಿಗೆ ಮಹತ್ವದ ನಿರ್ದೇಶನಗಳನ್ನು ನೀಡಿದೆ. ತೀರ್ಪು ವಿಳಂಬವಾದರೆ ದಾವೆದಾರರಿಗೆ ತುಂಬಲಾರದ ನಷ್ಟ ಉಂಟಾಗುತ್ತದೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಸಂವಿಧಾನದ 142ನೇ ವಿಧಿಯಡಿ ವಿಶೇಷ ಅಧಿಕಾರ ಬಳಸಿ ಈ ಆದೇಶ ಹೊರಡಿಸಿದೆ.

ಮೂರು ತಿಂಗಳೊಳಗೆ ತೀರ್ಪು ಪ್ರಕಟ ಕಡ್ಡಾಯ

ಯಾವುದೇ ಪ್ರಕರಣದ ವಿಚಾರಣೆ ಪೂರ್ಣಗೊಂಡು ಆದೇಶ ಕಾಯ್ದಿರಿಸಿದ ದಿನಾಂಕದಿಂದ ಗರಿಷ್ಠ ಮೂರು ತಿಂಗಳೊಳಗೆ ಅಂತಿಮ ತೀರ್ಪು ಪ್ರಕಟಿಸಬೇಕು ಎಂದು ಹೈಕೋರ್ಟ್‌ಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

ಜಾಮೀನು ಅರ್ಜಿಗಳಿಗೆ ತ್ವರಿತ ನಿರ್ಧಾರ

ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಜಾಮೀನು ಅರ್ಜಿಗಳ ವಿಚಾರದಲ್ಲಿ ವಿಳಂಬವಾಗಬಾರದು ಎಂದು ಕೋರ್ಟ್ ತಿಳಿಸಿದೆ. ಜಾಮೀನು ಆದೇಶಗಳನ್ನು ಸಾಧ್ಯವಾದರೆ ಅದೇ ದಿನ ಪ್ರಕಟಿಸಬೇಕು. ಒಂದು ವೇಳೆ ಆದೇಶ ಕಾಯ್ದಿರಿಸಿದರೆ ಮರುದಿನವೇ ಪ್ರಕಟಿಸಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಜೈಲಿನಿಂದ ತಕ್ಷಣ ಬಿಡುಗಡೆಗೆ ಸೂಚನೆ

ಜಾಮೀನು ಅಥವಾ ಶಿಕ್ಷೆ ಅಮಾನತು ಆದೇಶ ಹೊರಬಿದ್ದ ಕೂಡಲೇ ಅದರ ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ತಲುಪಿಸಬೇಕು. ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿ ಕೈದಿಗಳನ್ನು ಅದೇ ದಿನ ಅಥವಾ ಗರಿಷ್ಠ ಮರುದಿನ ಬಿಡುಗಡೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

24 ಗಂಟೆಯೊಳಗೆ ತೀರ್ಪು ವೆಬ್‌ಸೈಟ್‌ಗೆ ಅಪ್‌ಲೋಡ್

ಹೈಕೋರ್ಟ್‌ಗಳು ನೀಡುವ ಎಲ್ಲಾ ತೀರ್ಪುಗಳನ್ನು ಪ್ರಕಟಿಸಿದ 24 ಗಂಟೆಯೊಳಗೆ ಅಧಿಕೃತ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವುದು ಕಡ್ಡಾಯ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಜಾರ್ಖಂಡ್ ಹೈಕೋರ್ಟ್ ಪ್ರಕರಣದ ವೇಳೆ ಆದೇಶ

ಜಾರ್ಖಂಡ್ ಹೈಕೋರ್ಟ್‌ನಲ್ಲಿ ತೀರ್ಪುಗಳು ದೀರ್ಘಕಾಲ ವಿಳಂಬವಾಗುತ್ತಿರುವ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ.

ತೀರ್ಪಿನ ಕಾರ್ಯಕಾರಿ ಭಾಗ ಪ್ರಕಟಿಸುವ ದಿನಾಂಕವನ್ನೇ ಅಧಿಕೃತ ತೀರ್ಪಿನ ದಿನಾಂಕ ಎಂದು ಪರಿಗಣಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.

ನ್ಯಾಯದಾನ ವೇಗಗೊಳಿಸುವ ಉದ್ದೇಶ

“ಹೈಕೋರ್ಟ್‌ಗಳು ಸಾವಿರಾರು ಜನರಿಗೆ ನ್ಯಾಯದ ನಿರೀಕ್ಷೆಯ ಕೇಂದ್ರಗಳಾಗಿವೆ. ಸಮಯಕ್ಕೆ ಸರಿಯಾಗಿ ತೀರ್ಪು ನೀಡುವುದು ಅತ್ಯಂತ ಅಗತ್ಯ. ಈ ನಿಯಮಗಳು ಯಾರನ್ನೂ ಗುರಿಯಾಗಿಸಿಕೊಂಡಿಲ್ಲ. ನ್ಯಾಯದಾನ ಪ್ರಕ್ರಿಯೆ ಇನ್ನಷ್ಟು ವೇಗವಾಗಿ ನಡೆಯಬೇಕೆಂಬ ಉದ್ದೇಶದಿಂದ ತರಲಾಗಿದೆ” ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ಕೆಳ ನ್ಯಾಯಾಲಯಗಳ ಜಾಮೀನು ಆದೇಶಗಳ ಮಾಹಿತಿಯನ್ನು ಕೂಡ ತಕ್ಷಣ ಸಂಬಂಧಿತ ಅಧಿಕಾರಿಗಳಿಗೆ ತಲುಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೋರ್ಟ್ ಸೂಚಿಸಿದೆ.

 

ಮನೆಯಲ್ಲಿ ಅಳವಡಿಸಿದ್ದ ಎಸಿ ಸ್ಫೋಟ; ಭಾರತೀಯ ಸ್ಪರ್ಧಾ ಆಯೋಗದ ಮೊದಲ ಅಧ್ಯಕ್ಷ ಧನೇಂದ್ರ ಕುಮಾರ್ ಸಾವು.!

ನವದೆಹಲಿ: ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಭಾರತೀಯ ಸ್ಪರ್ಧಾ ಆಯೋಗದ ಮೊದಲ ಅಧ್ಯಕ್ಷ ಧನೇಂದ್ರ ಕುಮಾರ್, ದೆಹಲಿಯ ತಮ್ಮ ನಿವಾಸದಲ್ಲಿ ಸಂಭವಿಸಿದ ಎಸಿ ಸ್ಫೋಟ ದುರಂತದಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅವರ ಪುತ್ರನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿರುವ ಧನೇಂದ್ರ ಕುಮಾರ್ ಅವರ ಮನೆಯಲ್ಲಿ ಗುರುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಪೊಲೀಸರ ಮಾಹಿತಿ ಪ್ರಕಾರ, ರಾತ್ರಿ ಸುಮಾರು 11:18ರ ವೇಳೆಗೆ ಮನೆಯಲ್ಲಿದ್ದ ಎಸಿ ಯಂತ್ರದಲ್ಲಿ ಸ್ಫೋಟ ಸಂಭವಿಸಿದ್ದು, ಬಳಿಕ ಬೆಂಕಿ ವೇಗವಾಗಿ ವ್ಯಾಪಿಸಿದೆ.

ಅವಘಡ ಸಂಭವಿಸಿದ ವೇಳೆ ಕುಟುಂಬ ಸದಸ್ಯರು ಹಾಗೂ ಮನೆ ಕೆಲಸದವರು ಸೇರಿ ಒಟ್ಟು ಐವರು ಮನೆಯೊಳಗಿದ್ದರು ಎನ್ನಲಾಗಿದೆ. ಘಟನೆ ತಿಳಿದ ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಬೆಂಕಿಯಿಂದ ಗಾಯಗೊಂಡಿದ್ದ ಧನೇಂದ್ರ ಕುಮಾರ್ ಹಾಗೂ ಅವರ ಪುತ್ರನನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಧನೇಂದ್ರ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

ಅವರ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಮನೆಯಲ್ಲಿ ಅಳವಡಿಸಿದ್ದ ಎಸಿ ಯಂತ್ರದ ಒಳಭಾಗದಲ್ಲಿ ಸ್ಫೋಟ ಸಂಭವಿಸಿರುವುದೇ ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ಸ್ಫೋಟದ ಪರಿಣಾಮ ಮನೆ ಒಳಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಟ್ಟೆಗಳು, ಸೂಟ್ಕೇಸ್‌ಗಳು ಸೇರಿದಂತೆ ಹಲವು ವಸ್ತುಗಳು ಸುಟ್ಟು ಕರಕಲಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪಿತೂರಿ ಅಥವಾ ಅನುಮಾನಾಸ್ಪದ ಅಂಶಗಳು ಕಂಡುಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

error: Content is protected !!