Home Blog Page 19

ವಿದ್ಯಾರ್ಥಿ ಸಂಘಟನೆ ನಿಷೇಧ ಚಿಂತನೆ ಕೈಬಿಡಿ: ಎಂ. ಶಾಂತಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪಿಯು ಹಾಗೂ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘಟನೆಗಳನ್ನು ಕ್ಯಾಂಪಸ್‌ನಿಂದ ದೂರವಿಡಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮವನ್ನು ಎಐಡಿಎಸ್‌ಒ ಗದಗ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.

ಶಿಕ್ಷಣ ವ್ಯವಸ್ಥೆ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಧ್ವನಿಯಾಗುವ ಮತ್ತು ಅವುಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ನಡೆಸುವಲ್ಲಿ ವಿದ್ಯಾರ್ಥಿ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರಾಜಕೀಯ ಪಕ್ಷಗಳಿಗೆ ಕಡಿವಾಣ ಹಾಕುವ ನೆಪದಲ್ಲಿ ವಿದ್ಯಾರ್ಥಿಗಳನ್ನು ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಿಂದ ದೂರವಿಡುವುದು ಸರಿಯಲ್ಲ. ವಿದ್ಯಾರ್ಥಿ ಸಂಘಟನೆಗಳನ್ನೇ ನಿಷೇಧಿಸಿದರೆ ವಿದ್ಯಾರ್ಥಿಗಳ ಸಂಘಟಿತ ಹೋರಾಟಕ್ಕೆ ಹಿನ್ನಡೆಯಾಗಲಿದೆ ಎಂದು ಎಐಡಿಎಸ್‌ಒ ಆತಂಕ ವ್ಯಕ್ತಪಡಿಸಿದೆ.

ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸುವ ಸರ್ಕಾರದ ನಿರ್ಧಾರವನ್ನು ಎಐಡಿಎಸ್‌ಒ ಬೆಂಬಲಿಸಿತ್ತು. ಆದರೆ, ಈಗ ವಿದ್ಯಾರ್ಥಿ ಸಂಘಟನೆಗಳನ್ನು ಕಾಲೇಜು ಕ್ಯಾಂಪಸ್‌ಗೆ ಪ್ರವೇಶಿಸದಂತೆ ತಡೆಯುವ ಚಿಂತನೆ ವಿದ್ಯಾರ್ಥಿ ವಿರೋಧಿ ಕ್ರಮವಾಗಿದೆ ಎಂದು ಸಂಘಟನೆ ಆರೋಪಿಸಿದೆ.

ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಹೋರಾಟ ನಡೆಸುವ ಸಂಘಟನೆಗಳನ್ನು ನಿಷೇಧಿಸುವುದು ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ದಾಳಿಯಾಗಿದೆ. ರಾಜ್ಯ ಸರ್ಕಾರ ಕೂಡಲೇ ಈ ನಿಲುವನ್ನು ಹಿಂಪಡೆದು ವಿದ್ಯಾರ್ಥಿ ಸಂಘಟನೆಗಳಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು.

— ಎಂ. ಶಾಂತಿ, ಜಿಲ್ಲಾ ಸಂಚಾಲಕಿ, ಎಐಡಿಎಸ್‌ಒ ಗದಗ

ಕಾರ್ಮಿಕರ ಹಕ್ಕುಗಳ ಅರಿವಿಗೆ ರೋಜ್‌ಗಾರ್ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಉದ್ಯೋಗದ ಜೊತೆಗೆ ಅವರ ಹಕ್ಕುಗಳು, ಕೂಲಿ ಪಾವತಿ, ಕೆಲಸದ ಸ್ಥಳದಲ್ಲಿನ ಸೌಲಭ್ಯಗಳು ಹಾಗೂ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಬಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ್ರಳ್ಳಿ ತಾಂಡಾದಲ್ಲಿ ಗುರುವಾರ ರೋಜ್‌ಗಾರ್ ದಿನಾಚರಣೆ ನಡೆಯಿತು.

ವಿಬಿಜಿ ರಾಮ್‌ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಹೂಳೆತ್ತುವ ಸಮುದಾಯ ಕಾಮಗಾರಿ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಮಗಾರಿ ಸ್ಥಳಕ್ಕೆ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಧರ್ಮರ ಕೃಷ್ಣಪ್ಪ ಭೇಟಿ ನೀಡಿ, ಕೂಲಿಕಾರರೊಂದಿಗೆ ಸಂವಾದ ನಡೆಸಿದರು.

ಕಾರ್ಮಿಕರು ನಿಗದಿಪಡಿಸಿದ ಅಳತೆಗೆ ಅನುಗುಣವಾಗಿ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು. ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ ಸಮಾನ ಕೂಲಿ ನೀಡಲಾಗುತ್ತಿದ್ದು, ಕೆಲಸಕ್ಕೆ ಹಾಜರಾಗುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ದಾಖಲಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಯಡಿ ಕಾರ್ಮಿಕರಿಗೆ ಯೋಜನೆಯ ಉದ್ದೇಶ, ಉದ್ಯೋಗದ ದಿನಗಳು, ಕೂಲಿ ದರ ಹಾಗೂ ಕಾರ್ಮಿಕರಿಗೆ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ವಿವರವಾಗಿ ಮಾಹಿತಿ ನೀಡಲಾಯಿತು.

ದಿನಗೂಲಿ ಮೊತ್ತವನ್ನು ₹370ರಿಂದ ₹382ಕ್ಕೆ ಹೆಚ್ಚಿಸಿರುವುದು ಹಾಗೂ ವಾರ್ಷಿಕ ಮಾನವ ದಿನಗಳ ಮಿತಿಯನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಿರುವುದನ್ನು ತಿಳಿಸಲಾಯಿತು. ಒಂದು ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್ ಮೂಲಕ ವಾರ್ಷಿಕ ₹47,750ರವರೆಗೆ ಕೂಲಿ ಪಡೆಯಲು ಅವಕಾಶವಿದ್ದು, ಕಾರ್ಮಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಲಾಯಿತು.

ನೂತನ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 318 ಬಗೆಯ ಕಾಮಗಾರಿಗಳಿಗೆ ಅವಕಾಶವಿದ್ದು, ಗ್ರಾಮಗಳ ಅಭಿವೃದ್ಧಿಯ ಜತೆಗೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕಾರ್ಮಿಕರಿಗೆ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕು. ಈ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿರುವ ಕುರಿತು ಕಾಯಕ ಬಂಧುಗಳು ನಿಗಾ ವಹಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.

ಕೆರೆ ಹೂಳೆತ್ತುವಂತಹ ಸಮುದಾಯ ಕಾಮಗಾರಿಗಳಿಂದ ಗ್ರಾಮೀಣ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯುವುದರ ಜತೆಗೆ ಜಲಸಂರಕ್ಷಣೆಗೂ ಉತ್ತೇಜನ ದೊರೆಯಲಿದೆ. ಮಳೆ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಮೂಲಕ ಕೃಷಿ ಹಾಗೂ ಗ್ರಾಮೀಣ ಬದುಕಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಇಂತಹ ಕಾಮಗಾರಿಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಪಿಡಿಒ ಹನುಮಂತಪ್ಪ ಲಮಾಣಿ, ತಾಂತ್ರಿಕ ಸಂಯೋಜಕ ಹರೀಶ್ ಸೋಬರದ, ಟಿಐಇಸಿ ಮಂಜುನಾಥ ಸ್ವಾಮಿ ಹಂಜಿಗಿಮಠ, ಟಿಎಇ ಶ್ರೀನಿವಾಸ್ ಕಲಾಲ್, ಕಾರ್ಯದರ್ಶಿ ಸುರೇಶ್ ಹಡಪದ, ಎಸ್‌ಡಿಎ ಯಲ್ಲಪ್ಪ ನಡುವಿನಕೇರಿ, ಬಿಎಫ್‌ಟಿ ಶಿಲ್ಪಾ ಲಮಾಣಿ, ಜಿಕೆಎಂ ಗಂಗಮ್ಮ ಹರಿಜನ, ಟಿಆರ್‌ಎಂ ಭೀಮಪ್ಪ ರಾಥೋಡ್, ಕಾಯಕ ಬಂಧುಗಳು ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 325 ಕೂಲಿಕಾರರು ಭಾಗವಹಿಸಿದ್ದರು.

ಕಾರ್ಮಿಕರು ನಿಗದಿಪಡಿಸಿದ ಅಳತೆಗೆ ಅನುಗುಣವಾಗಿ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು. ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ ಸಮಾನ ಕೂಲಿ ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ದಾಖಲಿಸಬೇಕು.

— ಧರ್ಮರ ಕೃಷ್ಣಪ್ಪ, ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ)

ನಂಬಿಕೆ ಗೆದ್ದವಳೇ ಚಿನ್ನ ಕದ್ದಳು! 12 ವರ್ಷ ಮನೆಕೆಲಸ ಮಾಡುತ್ತಿದ್ದ ಮಹಿಳೆ ಬಂಧನ; 8 ಗಂಟೆಯಲ್ಲಿ ಪತ್ತೆ, ₹14.80 ಲಕ್ಷ ಮೌಲ್ಯದ ಚಿನ್ನ ವಶ

0

ಗದಗ: ಕಳೆದ ಸುಮಾರು 12 ವರ್ಷಗಳಿಂದ ಮನೆಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಅದೇ ಮನೆಯ ಚಿನ್ನಾಭರಣ ಕಳವು ಮಾಡಿರುವ ಪ್ರಕರಣವನ್ನು ಮುಂಡರಗಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ.

ಪ್ರಕರಣ ದಾಖಲಾದ ಕೇವಲ 8 ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಿದ ಮುಂಡರಗಿ ಪೊಲೀಸರು, 21 ಗಂಟೆಗಳೊಳಗೆ ₹14.80 ಲಕ್ಷ ಮೌಲ್ಯದ 185 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮುಂಡರಗಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 26ರಂದು ಮನೆಕಳ್ಳತನ ಪ್ರಕರಣ ದಾಖಲಾಗಿತ್ತು. ಅನ್ನದಾನೇಶ್ವರ ನಗರದ ನಿವಾಸಿ ಹಾಗೂ ಶಿಕ್ಷಣ ಇಲಾಖೆಯ ಎಫ್‌ಡಿಎ ಆಗಿರುವ ವಸಂತ ಮೊರಬ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಮುಂಡರಗಿ ಪೊಲೀಸರು ತನಿಖೆ ಆರಂಭಿಸಿದ್ದರು.

ಪ್ರಕರಣದ ಆರೋಪಿ ಹಾಗೂ ಕಳುವಾದ ಮಾಲು ಪತ್ತೆಗಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರ ಸೂಚನೆಯಂತೆ ವಿಶೇಷ ತಂಡವನ್ನು ರಚಿಸಲಾಗಿತ್ತು. ನರಗುಂದ ಉಪವಿಭಾಗದ ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಯ್ಯನಗೌಡ ವಿ. ಪಾಟೀಲ, ಪಿಎಸ್‌ಐ ಬಿ.ಎನ್. ಯಳವತ್ತಿ ಹಾಗೂ ಅಪರಾಧ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

8 ಗಂಟೆಯಲ್ಲಿ ಆರೋಪಿ ಪತ್ತೆ:

ತನಿಖೆ ವೇಳೆ ಪ್ರಕರಣದ ಆರೋಪಿಯಾಗಿರುವ ಲಲಿತಾ, ಪತಿ ಈರಪ್ಪ ಗೊಂಡಬಾಳ (47), ಎ.ಡಿ. ನಗರ, ಮುಂಡರಗಿ ಅವರನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

ಆರೋಪಿತ ಮಹಿಳೆ ಕೃತ್ಯ ಎಸಗಿರುವ ಕುರಿತು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಪೊಲೀಸರು, ಪ್ರಕರಣ ದಾಖಲಾಗಿದ ಕೇವಲ 8 ಗಂಟೆಗಳಲ್ಲಿಯೇ ಆಕೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬಳಿಕ ಆರೋಪಿತೆಯಿಂದ ಕಳವು ಮಾಡಿದ್ದ 185 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನಾಭರಣಗಳ ಒಟ್ಟು ಮೌಲ್ಯ ₹14.80 ಲಕ್ಷ ಎಂದು ಅಂದಾಜಿಸಲಾಗಿದೆ.

ಪ್ರಕರಣದ ವಿಶೇಷವೆಂದರೆ, ಬಂಧಿತ ಮಹಿಳೆ ಕಳೆದ ಸುಮಾರು 12 ವರ್ಷಗಳಿಂದ ದೂರುದಾರರ ಮನೆಯಲ್ಲಿ ಮನೆಕೆಲಸ ಮಾಡುತ್ತಿದ್ದಳು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಕರಣವನ್ನು ತ್ವರಿತವಾಗಿ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ನರಗುಂದ ಉಪವಿಭಾಗದ ಡಿವೈಎಸ್‌ಪಿ ಪ್ರಭುಗೌಡ ಡಿ.ಕೆ., ಮುಂಡರಗಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಯ್ಯನಗೌಡ ವಿ. ಪಾಟೀಲ, ಪಿಎಸ್‌ಐ ಬಿ.ಎನ್. ಯಳವತ್ತಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಜೆ.ಐ. ಬಚ್ಚೇರಿ, ಅಶೋಕ ಬೂದಿಹಾಳ, ಮಂಜುನಾಥ ಅಗಸಿಮನಿ, ಗಂಗಾಧರ ಮಜ್ಜಗಿ, ಎಚ್.ಕೆ. ನದಾಫ್, ಶರಣಪ್ಪ ಓಜನಹಳ್ಳಿ, ಭಾಗ್ಯ ಪತ್ತಾರ, ಎಂ.ಎ. ಕೊಟಗಿ ಮತ್ತು ಜಿ.ಎಫ್. ಉಪ್ಪಾರ ಅವರು ಶ್ರಮಿಸಿದ್ದಾರೆ.

ಪ್ರಕರಣವನ್ನು ತ್ವರಿತವಾಗಿ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಪ್ರಶಂಸಿಸಿ, ಸೂಕ್ತ ಬಹುಮಾನ ಘೋಷಿಸಿದ್ದಾರೆ.

ಕುಡಿಯುವ ನೀರಿನ ಯೋಜನೆಗಳಿಗೆ ಡಿಜಿಟಲ್ ನಿಗಾ: ‘ಜಲ ಆಸ್ತಿ’ ಆ್ಯಪ್‌ ಬಿಡುಗಡೆ!

0

ಬೆಂಗಳೂರು: ಕರ್ನಾಟಕದ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಗಳಲ್ಲಿ ಪಾರದರ್ಶಕತೆ ಹಾಗೂ ನಿಖರತೆ ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.

ಇಲಾಖೆಯ ವ್ಯಾಪ್ತಿಗೆ ಬರುವ ಸಮಗ್ರ ಮೂಲಸೌಕರ್ಯ ಹಾಗೂ ಆಸ್ತಿಗಳ ನಿರ್ವಹಣೆಗಾಗಿ ರೂಪಿಸಿರುವ ‘ಜಲ ಆಸ್ತಿ’ ವೆಬ್ ಅಪ್ಲಿಕೇಶನ್ ಮತ್ತು ಮೊಬೈಲ್ ಆ್ಯಪ್ ಅನ್ನು ಸಚಿವ ಈಶ್ವರ ಖಂಡ್ರೆ ಅವರು ಗುರುವಾರ ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು.

ಆ್ಯಪ್ ಬಿಡುಗಡೆ ಬಳಿಕ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ‘ಜಲಜೀವನ್ ಮಿಷನ್’ ಸೇರಿದಂತೆ ಸುಮಾರು ₹37 ಸಾವಿರ ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಈ ಯೋಜನೆಗಳಡಿ ನಿರ್ಮಾಣವಾಗುವ ಆಸ್ತಿಗಳು ದೀರ್ಘಕಾಲ ಜನರಿಗೆ ಸೇವೆ ನೀಡಬೇಕಾದರೆ ಅವುಗಳ ಸಮಗ್ರ ದಾಖಲೀಕರಣ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ವ್ಯಾಪ್ತಿಯಲ್ಲಿರುವ ಸುಮಾರು 3 ಲಕ್ಷ ಜಲ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಈಗಾಗಲೇ ಮೊದಲ ಹಂತದ ಪರಿಶೀಲನೆಯಲ್ಲಿ 70 ಸಾವಿರಕ್ಕೂ ಅಧಿಕ ಜಲ ಸ್ವತ್ತುಗಳ ದಾಖಲೀಕರಣ ಪೂರ್ಣಗೊಂಡಿದೆ ಎಂದು ಹೇಳಿದರು.

ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ:

ಬೋರ್‌ವೆಲ್‌ಗಳು, ಪೈಪ್‌ಲೈನ್‌ಗಳು, ನೀರಿನ ಟ್ಯಾಂಕ್‌ಗಳು, ಅವುಗಳ ಪ್ರಸ್ತುತ ಕಾರ್ಯಕ್ಷಮತೆ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ಹಂತ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನೂ ‘ಜಲ ಆಸ್ತಿ’ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ.

ಸಹಾಯಕ ಎಂಜಿನಿಯರ್‌ಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಯನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ವ್ಯವಸ್ಥೆಯ ಮೂಲಕ ಯಾವುದೇ ಲೋಪವಾಗದಂತೆ ನಿಗಾ ವಹಿಸಿ, ಹಳ್ಳಿಗಾಡಿನ ಕಟ್ಟಕಡೆಯ ಮನೆಗೂ ನಿರಂತರ ಕುಡಿಯುವ ನೀರು ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ರಕ್ಷಾಬಂಧನಕ್ಕೆ ಮಹಿಳೆಯರಷ್ಟೇ ಅಲ್ಲ, ಪುರುಷರಿಗೂ ರಜೆ: ಹಿಮಾಚಲ ಸರ್ಕಾರದ ಮಹತ್ವದ ಘೋಷಣೆ

0

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ರಕ್ಷಾಬಂಧನದ ಪ್ರಯುಕ್ತ ಈ ಬಾರಿ ಸರ್ಕಾರ ಮಹಿಳೆಯರಲ್ಲದೆ ಪುರುಷರಿಗೂ ಸಾರ್ವಜನಿಕ ರಜೆ ಘೋಷಿಸಿದೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಗುರುವಾರ ಆಗಸ್ಟ್ 28 (ಶುಕ್ರವಾರ) ರಾಜ್ಯಾದ್ಯಂತ ರಜೆ ಘೋಷಿಸಿದೆ. ಮೊದಲು ರಕ್ಷಾಬಂಧನದಂದು ಮಹಿಳೆಯರಿಗೆ ಮಾತ್ರ ರಜೆ ನೀಡಲಾಗುತ್ತಿತ್ತು, ಆದರೆ ಈ ಬಾರಿ ಪುರುಷರಿಗೂ ರಜೆ ಘೋಷಿಸಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಮಾಹಿತಿ ಹಂಚಿಕೊಂಡ ಮುಖ್ಯಮಂತ್ರಿ ಸುಖು, ರಕ್ಷಾಬಂಧನ ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ವಾತ್ಸಲ್ಯವನ್ನು ಆಚರಿಸುವ ಪವಿತ್ರ ಹಬ್ಬ ಎಂದರು. ಬಾಲ್ಯದ ಚೇಷ್ಟೆಯಿಂದ ಹಿಡಿದು ಜೀವನದ ಪ್ರತಿಯೊಂದು ಹಂತದಲ್ಲೂ ಪರಸ್ಪರ ಬೆಂಬಲವಾಗಿ ನಿಲ್ಲುವವರೆಗೆ ಈ ಬಂಧ ವಿಶೇಷ ಎಂದ ಅವರು, ಸಹೋದರ-ಸಹೋದರಿಯರು ರಕ್ಷಾಬಂಧನವನ್ನು ಒಟ್ಟಿಗೆ ಆಚರಿಸಲು ಹಾಗೂ ಕುಟುಂಬಗಳೊಂದಿಗೆ ಸಂತೋಷ ಹಂಚಿಕೊಳ್ಳಲು ಅನುವು ಮಾಡಿಕೊಡಲು ಶುಕ್ರವಾರ ರಾಜ್ಯಾದ್ಯಂತ ಒಂದು ದಿನದ ಸಾರ್ವಜನಿಕ ರಜೆ ಘೋಷಿಸುವುದಾಗಿ ತಿಳಿಸಿದರು.

ಉತ್ತರ ಪ್ರದೇಶದಲ್ಲಿ, ಆಗಸ್ಟ್ 28ರಂದು ರಕ್ಷಾಬಂಧನದ ಸಂದರ್ಭದಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್‌ಗಳಲ್ಲಿ ಆಗಸ್ಟ್ 27ರಂದು ಬೆಳಿಗ್ಗೆ 6 ಗಂಟೆಯಿಂದ ಆಗಸ್ಟ್ 29ರ ಮಧ್ಯರಾತ್ರಿಯವರೆಗೆ ಉಚಿತ ಪ್ರಯಾಣ ಲಭ್ಯವಿರಲಿದೆ. ಈ ವರ್ಷ ರಕ್ಷಾಬಂಧನವನ್ನು ಆಗಸ್ಟ್ 28 (ಶುಕ್ರವಾರ) ರಂದು ಆಚರಿಸಲಾಗುತ್ತಿದ್ದು, ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಹರಿಯಾಣ, ಉತ್ತರಾಖಂಡ ಮತ್ತು ಗುಜರಾತ್‌ನಂತಹ ಹಲವಾರು ರಾಜ್ಯಗಳು ಶಾಲಾ ರಜೆ ಘೋಷಿಸಿವೆ.

ದಯಾಮರಣ ಕೋರಿದ್ದ ಮಹಿಳೆ ಮಕ್ಕಳೊಂದಿಗೆ ಸಾವು: ನಿವೇಶನ ಸಿಕ್ಕರೂ ಏಕೆ ಈ ಆತ್ಮಹತ್ಯೆ?

ತುಮಕೂರು: ದಯಾಮರಣ ಕೋರಿದ್ದ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ಶಿರಾ ನಗರದ ಹೊರವಲಯದಲ್ಲಿ ನಡೆದಿದೆ.

ತಾಯಿ ರಾಬಿಯಾ ಪಾಷಾ (39), ಮಗಳು ತಮನ್ನಾ (9), ಮಗ ಸಿಮ್ರಾನ್ (5) ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್‌ಪಿ ಅಶೋಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

2025ರಲ್ಲಿ ತುಮಕೂರಿನಲ್ಲಿ ನಡೆದ ಸರ್ಕಾರದ ವಿವಿಧ ಸವಲತ್ತು ವಿತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದಿದ್ದ ಅಂದಿನ ಸಿಎಂ ಸಿದ್ದರಾಮಯ್ಯ ಅವರ ಬಳಿ ರಾಬಿಯಾ ತಮ್ಮ ಮನವಿ ಆಲಿಸುವಂತೆ ಹೋರಾಟ ನಡೆಸಿದ್ದರು. ಮನವಿಗೆ ಸ್ಪಂದಿಸಿ ಸಿಎಂ ಸಿದ್ದರಾಮಯ್ಯ 20/30 ನಿವೇಶನ ಮಂಜೂರು ಮಾಡಿದ್ದರು. ಆದೇಶ ನೀಡಿ ಒಂದೂವರೆ ವರ್ಷ ಕಳೆದರೂ ನಿವೇಶನ ನೀಡದೆ ಅಧಿಕಾರಿಗಳು ವಿಳಂಬ ಮಾಡಿದ್ದರು.

ಇದರಿಂದ ರೋಸಿಹೋದ ರಾಬಿಯಾ, ಅಂದಿನ ಗೃಹಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆದ ಜನಸ್ಪಂದನ ಸಭೆಯಲ್ಲೂ ಪ್ರತಿಭಟಿಸಿ, ಸಿಎಂ ಆದೇಶ ಮಾಡಿದ್ದರೂ ನಿವೇಶನ ಸಿಕ್ಕಿಲ್ಲ ಎಂದು ದಯಾಮರಣ ಕೋರಿ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದರು. ಆಗ ಮಹಿಳೆಯನ್ನು ಕರೆಸಿ ಸಮಸ್ಯೆ ಆಲಿಸಿದ್ದ ಗೃಹಸಚಿವರು, ಶಿರಾ ನಗರದ ಹೊರವಲಯದಲ್ಲಿ ಸರ್ಕಾರದಿಂದ ಒಂದು ನಿವೇಶನ ನೀಡಿದ್ದರು.

ಸರ್ಕಾರ ಜಾಗ ಕೊಟ್ಟು ಮನೆ ಕಟ್ಟಿಸಿಕೊಡುತ್ತಿದ್ದರೂ ಮಹಿಳೆ ಮಕ್ಕಳೊಂದಿಗೆ ಈ ಕೃತ್ಯಕ್ಕೆ ಮುಂದಾಗಲು ಕಾರಣವೇನು ಎಂಬುದು ಸದ್ಯ ಅನುಮಾನ ಹುಟ್ಟುಹಾಕಿದೆ.

ಯಾರನ್ನೇ ಸೇರಿಸಬೇಕು, ತೆಗೆಯಬೇಕು ಅಂದ್ರೂ ಸಂಪುಟ ಬದಲಾವಣೆ ಫೈಲ್ ನನ್ನ ಬಳಿಯೇ ಬರಬೇಕು: ಖರ್ಗೆ

0

ಬೆಂಗಳೂರು: ಯಾವುದೇ ಫೈಲ್ ತನ್ನ ಬಳಿ ಬರದೇ ಹೋಗುವುದಿಲ್ಲ, ಯಾರನ್ನೇ ಸೇರಿಸಬೇಕಿದ್ದರೂ ಅಥವಾ ತೆಗೆಯಬೇಕಿದ್ದರೂ ತನ್ನ ಬಳಿಯೇ ಬರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಸಚಿವ ಸಂಪುಟ ಬದಲಾವಣೆ ವಿಚಾರವಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ ಸಂಬಂಧ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಖರ್ಗೆ, ನಿಮಗೇನಾದರೂ ಗೊತ್ತಿದ್ದರೆ ಹೇಳಿ, ತನಗೇನೂ ಗೊತ್ತಿಲ್ಲ ಎಂದರು. ತಾವು ಕಲಬುರಗಿಯಲ್ಲಿ ಇರುವುದಾಗಿಯೂ, ಏನಾದರೂ ಬರಬೇಕಾದರೆ ತಮ್ಮ ಬಳಿಯೇ ಬರಬೇಕು ಎಂದರು.

ಯಾವುದೇ ಫೈಲ್ ತನ್ನ ಬಳಿ ಬರದೇ ಹೋಗುವುದಿಲ್ಲ ಎಂದ ಖರ್ಗೆ, ಯಾರನ್ನೇ ಸೇರಿಸಬೇಕು ಅಥವಾ ತೆಗೆಯಬೇಕಾದರೂ ತನ್ನ ಬಳಿಯೇ ಬರಬೇಕು ಎಂದೂ, ಹಾಗೆ ಫೈಲ್ ಬಂದಾಗ ಮಾಧ್ಯಮಗಳಿಗೆ ತಿಳಿಸುವುದಾಗಿಯೂ ಹೇಳಿದರು.

ನೇಪಾಳ ಪ್ರವಾಹದಲ್ಲಿ ಭಾರತೀಯರು ನಾಪತ್ತೆಯಾಗಿರುವ ಬಗ್ಗೆಯೂ ಮಾತನಾಡಿದ ಖರ್ಗೆ, ನೇಪಾಳ ಪ್ರವಾಹದಲ್ಲಿ ಕರ್ನಾಟಕ ಮಾತ್ರವಲ್ಲ, ದೇಶದ ಸಾಕಷ್ಟು ಜನ ಸಿಲುಕಿದ್ದಾರೆಂದೂ, ನೂರಾರು ಜನ ಕೊಚ್ಚಿಹೋಗಿದ್ದಾರೆಂದೂ ತಿಳಿಸಿ, ಅವರೆಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸುವುದಾಗಿ ಹೇಳಿದರು. ಇದೇ ವೇಳೆ ಪ್ರಧಾನಿಗೆ ಪತ್ರ ಬರೆದಿರುವುದಾಗಿಯೂ, ಕರ್ನಾಟಕ ಮಾತ್ರವಲ್ಲದೆ ದೇಶದ ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೋ ಅವರಿಗೆ ಪರಿಹಾರ ಒದಗಿಸಬೇಕು ಹಾಗೂ ನೇಪಾಳದ ಜೊತೆಗೆ ನಿಲ್ಲುವಂತೆಯೂ ಪತ್ರದಲ್ಲಿ ಕೋರಿರುವುದಾಗಿ ಖರ್ಗೆ ತಿಳಿಸಿದ್ದಾರೆ.

ಖಾಸಗಿ ಕೃಷಿ ಜಮೀನಲ್ಲೂ ಅಪಘಾತವಾದ್ರೆ ವಿಮಾ ಕಂಪನಿ ಪರಿಹಾರ ಕೊಡಲೇಬೇಕು: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಸಾರ್ವಜನಿಕರಿಗೆ ಪ್ರವೇಶಾವಕಾಶವಿರುವ ಖಾಸಗಿ ಕೃಷಿ ಜಮೀನನ್ನು ಕೂಡ ಮೋಟಾರು ವಾಹನ ಕಾಯ್ದೆಯಡಿ ‘ಸಾರ್ವಜನಿಕ ಸ್ಥಳ’ ಎಂದು ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಖಾಸಗಿ ಜಮೀನಿನಲ್ಲಿ ಅಪಘಾತ ಸಂಭವಿಸಿದೆ ಎಂಬ ಕಾರಣಕ್ಕೆ ವಿಮಾ ಕಂಪನಿ ಪರಿಹಾರ ನೀಡುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಬಳಿಯ ತಲಕಾಯಲ ಬೆಟ್ಟದಲ್ಲಿ 2019ರ ನವೆಂಬರ್‌ 28ರಂದು ಸಂಭವಿಸಿದ್ದ ಅಪಘಾತಕ್ಕೆ ಸಂಬಂಧಿಸಿದಂತೆ ಮೃತ ಕೃಷ್ಣಪ್ಪ ಅವರ ಪತ್ನಿ ರಾಮಕ್ಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 2(34)ರ ಅನ್ವಯ ಸಾರ್ವಜನಿಕರಿಗೆ ಪ್ರವೇಶವಿರುವ ಖಾಸಗಿ ಜಮೀನು ಕೂಡ ‘ಸಾರ್ವಜನಿಕ ಸ್ಥಳ’ದ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಪೀಠ ಹೇಳಿದೆ. ಕೃಷಿ ಜಮೀನಿಗೆ ಸಾರ್ವಜನಿಕರು ಹಾಗೂ ಕಾರ್ಮಿಕರು ಕೆಲಸದ ನಿಮಿತ್ತ ಪ್ರವೇಶಿಸಬಹುದಾದ್ದರಿಂದ, ಅಲ್ಲಿ ಸಂಭವಿಸಿದ ಅಪಘಾತಕ್ಕೂ ವಿಮಾ ಕಂಪನಿ ಪರಿಹಾರ ನೀಡುವ ಹೊಣೆಗಾರಿಕೆ ಹೊಂದಿರುತ್ತದೆ ಎಂದು ತಿಳಿಸಿದೆ.

ಈ ಹಿಂದೆ ಖಾಸಗಿ ಜಮೀನಿನಲ್ಲಿ ಅಪಘಾತ ಸಂಭವಿಸಿದೆ ಹಾಗೂ ವಾಹನಕ್ಕೆ ಕೇವಲ ‘ಆಕ್ಟ್ ಪಾಲಿಸಿ’ ಇದೆ ಎಂಬ ಕಾರಣ ನೀಡಿ ವಿಮಾ ಕಂಪನಿಯನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಿದ್ದ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ವಿಮಾ ಕಂಪನಿಗೆ ಪರಿಹಾರ ಪಾವತಿಸುವಂತೆ ಸೂಚನೆ

ಅಪಘಾತಕ್ಕೆ ಕಾರಣವಾದ ವಾಹನವು ‘ಪ್ಯಾಕೇಜ್ ಪಾಲಿಸಿ’ ಹೊಂದಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ನ್ಯಾಯಪೀಠ ಗಮನಿಸಿದೆ. ಹೀಗಾಗಿ ಮೂರನೇ ವ್ಯಕ್ತಿಯ ಜೀವಹಾನಿಗೆ ವಿಮಾ ಕಂಪನಿಯೇ ಪರಿಹಾರ ನೀಡಬೇಕು ಎಂದು ಹೇಳಿದೆ.

ಈ ಹಿನ್ನೆಲೆಯಲ್ಲಿ ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪನಿಗೆ ಮೃತ ಕೃಷ್ಣಪ್ಪ ಅವರ ಪತ್ನಿ ರಾಮಕ್ಕ ಅವರಿಗೆ ಹೆಚ್ಚುವರಿಯಾಗಿ 4,55,052 ರೂ. ಪರಿಹಾರವನ್ನು ಶೇ.6ರ ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶಿಸಿದೆ.

ಈ ಹಿಂದೆ ನ್ಯಾಯಮಂಡಳಿ 14,35,000 ರೂ. ಪರಿಹಾರ ನಿಗದಿಪಡಿಸಿತ್ತು. ಇದೀಗ ಹೆಚ್ಚುವರಿ 4,55,052 ರೂ. ಸೇರಿಸಿ ಒಟ್ಟು ಪರಿಹಾರ ಮೊತ್ತವನ್ನು 18,90,052 ರೂ.ಗೆ ಹೆಚ್ಚಿಸಲಾಗಿದೆ. ಈ ಮೊತ್ತವನ್ನು ಶೇ.6ರ ಬಡ್ಡಿಯೊಂದಿಗೆ ಆರು ವಾರಗಳೊಳಗೆ ನ್ಯಾಯಮಂಡಳಿಯಲ್ಲಿ ಠೇವಣಿ ಇಡುವಂತೆ ವಿಮಾ ಕಂಪನಿಗೆ ಸೂಚಿಸಲಾಗಿದೆ. ಹೆಚ್ಚುವರಿ ಪರಿಹಾರದ ಸಂಪೂರ್ಣ ಮೊತ್ತವನ್ನು ಮೃತರ ಪತ್ನಿ ರಾಮಕ್ಕ ಅವರಿಗೆ ಬಿಡುಗಡೆ ಮಾಡುವಂತೆಯೂ ನ್ಯಾಯಾಲಯ ನಿರ್ದೇಶಿಸಿದೆ.

ಅಪಘಾತ ನಡೆದಿದ್ದು ಹೇಗೆ?

2019ರ ನವೆಂಬರ್‌ 28ರಂದು ಕೃಷ್ಣಪ್ಪ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಬಳಿಯ ಚಂದ್ರಪ್ಪ ಅವರ ಜಮೀನಿನಲ್ಲಿ ಮರ ಕಡಿಯುವ ಕೆಲಸಕ್ಕೆ ತೆರಳಿದ್ದರು. ಕೆಲಸದ ವೇಳೆ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದಾಗ, ಕತ್ತರಿಸಿದ್ದ ಮರದ ದಿಮ್ಮಿಗಳನ್ನು ತುಂಬಲು ಬಂದಿದ್ದ ಚಾಲಕ ವಾಹನ ಚಲಾಯಿಸುವ ಸಂದರ್ಭದಲ್ಲಿ ಕೃಷ್ಣಪ್ಪ ಅವರಿಗೆ ಡಿಕ್ಕಿ ಹೊಡೆದಿದ್ದ.

ಗಂಭೀರವಾಗಿ ಗಾಯಗೊಂಡ ಕೃಷ್ಣಪ್ಪ ಮೃತಪಟ್ಟಿದ್ದರು. ಬಳಿಕ ಅವರ ಪತ್ನಿ ರಾಮಕ್ಕ ಪರಿಹಾರ ಕೋರಿ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ಆದರೆ, ಅಪಘಾತ ಖಾಸಗಿ ಜಮೀನಿನಲ್ಲಿ ಸಂಭವಿಸಿದೆ ಮತ್ತು ವಾಹನಕ್ಕೆ ‘ಆಕ್ಟ್ ಪಾಲಿಸಿ’ ಮಾತ್ರ ಇದೆ ಎಂದು ಪರಿಗಣಿಸಿದ್ದ ನ್ಯಾಯಮಂಡಳಿ ವಿಮಾ ಕಂಪನಿಯನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಮಕ್ಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ವಿಮಾ ಕಂಪನಿಯೇ ಪರಿಹಾರ ಪಾವತಿಸಬೇಕು ಎಂದು ಸ್ಪಷ್ಟಪಡಿಸಿದೆ.

ನೇಪಾಳದಲ್ಲಿ ಭಾರಿ ಪ್ರವಾಹ; ಧಾರವಾಡ ಮೂಲದ ರಾಕೇಶ್ ನಾಯಕ ನಾಪತ್ತೆ, ಕುಟುಂಬಸ್ಥರಲ್ಲಿ ಆತಂಕ

ಧಾರವಾಡ: ನೇಪಾಳದಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಪ್ರವಾಹದ ಬಳಿಕ ಧಾರವಾಡ ಮೂಲದ ರಾಕೇಶ್ ನಾಯಕ (38) ನಾಪತ್ತೆಯಾಗಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ರಾಕೇಶ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಕಳೆದ ಎಂಟು ವರ್ಷಗಳಿಂದ ರಾಕೇಶ್ ನಾಯಕ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ಪ್ರವಾಸದ ನಿಮಿತ್ತ ಕಳೆದ 12ರಂದು ನೇಪಾಳಕ್ಕೆ ತೆರಳಿದ್ದರು.

ಇಶಾ ಫೌಂಡೇಶನ್ ವತಿಯಿಂದ ಒಟ್ಟು 77 ಮಂದಿ ನೇಪಾಳ ಪ್ರವಾಸಕ್ಕೆ ತೆರಳಿದ್ದರು. ರಾಕೇಶ್ ನಾಯಕ ಅವರು ಇಶಾ ಫೌಂಡೇಶನ್‌ನ ಎಸ್3 ಗುಂಪಿನಲ್ಲಿದ್ದರು ಎನ್ನಲಾಗಿದೆ. ಈ ತಂಡ ನೇಪಾಳದ ಮಾನಸ ಸರೋವರ ಹಾಗೂ ಕೈಲಾಸಕ್ಕೆ ಪ್ರವಾಸ ಕೈಗೊಂಡಿತ್ತು.

ಪ್ರವಾಸ ಮುಗಿಸಿ ನಿನ್ನೆ ವಾಪಸ್ ಆಗಬೇಕಿದ್ದ ರಾಕೇಶ್ ಹಾಗೂ ಅವರ ತಂಡಕ್ಕೆ ನೇಪಾಳದಲ್ಲಿ ಭಾರಿ ಪ್ರವಾಹ ಎದುರಾಗಿದೆ. ಪ್ರವಾಹದ ಬಳಿಕ ರಾಕೇಶ್ ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಅವರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಗುಂಪಿನಲ್ಲಿರುವ ಇತರ ಕೆಲವರೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ.

ಇದರಿಂದ ರಾಕೇಶ್ ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ. ನಾಪತ್ತೆಯಾಗಿರುವ ರಾಕೇಶ್ ಹಾಗೂ ಅವರೊಂದಿಗೆ ತೆರಳಿದ್ದವರ ಪತ್ತೆಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

ನಾಗೇಂದ್ರ ವಿರುದ್ಧ ಸಾಕ್ಷ್ಯವಿಲ್ಲ, ಒತ್ತಡಕ್ಕೆ ಮಣಿಯುವ ಸಮಯ ಬಂದಿಲ್ಲ: ದೆಹಲಿಯಲ್ಲಿ ಡಿಕೆಶಿ ಖಡಕ್ ಮಾತು

ನವದೆಹಲಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಪಕ್ಷಗಳ ಒತ್ತಡಕ್ಕೆ ಮಣಿಯುವ ಸಮಯ ಬಂದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ದೆಹಲಿಯಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, ನಾಗೇಂದ್ರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದರು. ಕೇಂದ್ರ ಸಚಿವರ ಮೇಲೆ ಕೇಸ್‌ಗಳಿಲ್ಲವೇ ಎಂದು ಪ್ರಶ್ನಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚು ಗೆದ್ದಿರುವುದನ್ನು ಸಹಿಸದೆ ಬಿಜೆಪಿ ಈ ರೀತಿ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.

ನಾಗೇಂದ್ರ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಪಕ್ಷನಿಷ್ಠ ನಾಯಕ ಮತ್ತು ಪಕ್ಷಕ್ಕೆ ಆಸ್ತಿಯಾಗಿದ್ದಾರೆ ಎಂದ ಶಿವಕುಮಾರ್, ಪಕ್ಷದ ಹಿತಕ್ಕಾಗಿ ಅವರು ಯಾವುದೇ ತ್ಯಾಗಕ್ಕೂ ಸಿದ್ಧರಿದ್ದಾರೆ ಎಂದರು. ಹೈಕಮಾಂಡ್ ಮುಂದೆ ವಾಸ್ತವಾಂಶಗಳನ್ನು ಮಂಡಿಸಲಾಗಿದ್ದು, ಅಂತಿಮ ನಿರ್ಧಾರವನ್ನು ವರಿಷ್ಠರೇ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಪಾದಯಾತ್ರೆ ಮಾಡುವವರನ್ನು ತಡೆಯಲು ಸಾಧ್ಯವಿಲ್ಲ ಎಂದ ಶಿವಕುಮಾರ್, ವಿಧಾನಸಭೆಯಲ್ಲಿ ಚರ್ಚೆ ಮಾಡಲು ವಿಪಕ್ಷಗಳು ಸಿದ್ಧವಿರಲಿಲ್ಲ ಎಂದೂ, ಭೋವಿ ನಿಗಮದ ಹಗರಣ ಸೇರಿದಂತೆ ಬಿಜೆಪಿ ಅವಧಿಯ ಹಲವು ಹಗರಣಗಳು ಬಯಲಾಗುವ ಭಯದಿಂದಲೇ ವಿಪಕ್ಷಗಳು ಚರ್ಚೆಯಿಂದ ಓಡಿಹೋಗಿವೆ ಎಂದು ವ್ಯಂಗ್ಯವಾಡಿದರು.