ಬೆಂಗಳೂರು: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ.
ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಹಿಳಾ ಮೀಸಲಾತಿ ಯಾರೊಬ್ಬರ ಆಸ್ತಿಯಲ್ಲ ಎಂದು ಹೇಳಿರುವ ಡಿಕೆ ಶಿವಕುಮಾರ್, “ಮಹಿಳಾ ಮೀಸಲಾತಿ ವಿರೋಧಿಗಳು ಅವರು. ಸೋಲುವ ಭಯ ಇದ್ದರೂ ಮಸೂದೆ ತಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಾವು ಎಲ್ಲರೂ ಪ್ರತಿನಿಧಿಗಳೇ ಅಲ್ಲವಾ?” ಎಂದು ಪ್ರಶ್ನಿಸಿದ್ದಾರೆ.
“ನಮ್ಮನ್ನ ಕರೆದು ಮಾತಾಡದೇ ನಿರ್ಧಾರ ತೆಗೆದುಕೊಂಡಿದ್ದಾರೆ. ಉತ್ತರ ಭಾರತದಲ್ಲಿ ಕ್ಷೇತ್ರಗಳನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ದಕ್ಷಿಣ ಭಾರತದ ಕ್ಷೇತ್ರಗಳನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದಾರೆ. ಇದನ್ನು ಯಾರೂ ಸಹಿಸಲು ಸಾಧ್ಯವಿಲ್ಲ” ಎಂದು ಆರೋಪಿಸಿದ್ದಾರೆ.
ಮಸೂದೆ ಕುರಿತು ಎಲ್ಲ ಪಕ್ಷಗಳೊಂದಿಗೆ ಚರ್ಚೆ ನಡೆಸಬೇಕಾಗಿತ್ತು ಎಂದು ಹೇಳಿರುವ ಅವರು, “ನಾವು ಈಗಾಗಲೇ 240 ಮಂದಿ ಗೆದ್ದಿಲ್ಲವೇ? ನಮ್ಮ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳಬೇಕಿತ್ತು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಮಹಿಳಾ ಮೀಸಲಾತಿ ವಿಚಾರ ಇದೀಗ ರಾಷ್ಟ್ರ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

