Home Blog Page 21

ಚಿನ್ನಯ್ಯ ಆರೋಪಗಳ ತನಿಖೆಗೆ ಆಗ್ರಹ: ಎಸ್‌ಐಟಿ ಕಚೇರಿಗೆ ಗಿರೀಶ್ ಮಟ್ಟಣ್ಣನವರ್ ದೂರು

0

ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ನಡುವೆ ಚಿನ್ನಯ್ಯ ವಿರುದ್ಧವೇ ಪ್ರತಿದಾಳಿ ಆರಂಭವಾಗಿದ್ದು, ಆತನ ಬ್ರೈನ್ ಮ್ಯಾಪಿಂಗ್ ಸೇರಿದಂತೆ ಎಲ್ಲಾ ಆರೋಪಗಳ ತನಿಖೆಗೆ ಒತ್ತಾಯಿಸಿ ಗಿರೀಶ್ ಮಟ್ಟಣ್ಣನವರ್ ಎಸ್‌ಐಟಿಗೆ ದೂರು ನೀಡಿದ್ದಾರೆ.

ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ ಗಿರೀಶ್ ಮಟ್ಟಣ್ಣನವರ್, ಚಿನ್ನಯ್ಯ ತನ್ನ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿರುವ 200 ಕೋಟಿ ರೂಪಾಯಿ ಫಂಡಿಂಗ್ ಆರೋಪ, ನಟ ಪ್ರಕಾಶ್ ರಾಜ್ ಹೆಸರು ಹಾಗೂ ಇತರ ಗಂಭೀರ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಚಿನ್ನಯ್ಯ ಹೇಳಿಕೆಗಳ ಆಧಾರದ ಮೇಲೆ ಸಂಬಂಧಪಟ್ಟ ಎಲ್ಲರನ್ನೂ ತನಿಖೆಗೆ ಒಳಪಡಿಸಬೇಕು. ಅಗತ್ಯವಿದ್ದರೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ತಮ್ಮ ಬ್ರೈನ್ ಮ್ಯಾಪಿಂಗ್ ನಡೆಸಲು ಕೂಡ ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಗಿರೀಶ್ ಮಟ್ಟಣ್ಣನವರ್, ಚಿನ್ನಯ್ಯ ಬೇಡಿಕೆಯ ಮೇರೆಗೆ ಚಂದ್ರಶೇಖರ ಸ್ವಾಮೀಜಿ ಅವರನ್ನು ಭೇಟಿಯಾಗಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಯಾವುದೇ ಪೊಲೀಸ್ ಅಥವಾ ತನಿಖಾ ಪ್ರಕ್ರಿಯೆಗೆ ಸ್ವಾಮೀಜಿ ಶಿಫಾರಸು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕಾಶ್ ರಾಜ್ ಬೆಂಬಲದ ಕುರಿತು ಪ್ರತಿಕ್ರಿಯಿಸಿದ ಅವರು, ಆ ವಿಚಾರಕ್ಕೆ ಸಂಬಂಧಿಸಿದ ಉತ್ತರವನ್ನು ಪ್ರಕಾಶ್ ರಾಜ್ ಅವರೇ ನೀಡಬೇಕು ಎಂದಿದ್ದಾರೆ. ಜೊತೆಗೆ ಚಿನ್ನಯ್ಯ ತಮ್ಮ ಜೊತೆ ಇದ್ದ ವೇಳೆ ಸ್ವಯಂಪ್ರೇರಿತವಾಗಿ ಕಾಲು ಒತ್ತುತ್ತಿದ್ದ ಎಂಬ ಹೇಳಿಕೆಯನ್ನೂ ನೀಡಿದ್ದಾರೆ.

ಪ್ರಕರಣದ ಹೊಸ ಬೆಳವಣಿಗೆಗಳು ಧರ್ಮಸ್ಥಳ ತನಿಖೆಗೆ ಮತ್ತಷ್ಟು ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿವೆ.

ಸಾಲ ಕೊಟ್ಟ 10 ಸಾವಿರ ರೂಪಾಯಿ ಮರಳಲಿಲ್ಲ: ಪರೀಕ್ಷೆ ಬರೆಯಲಾಗದೆ ವಿದ್ಯಾರ್ಥಿನಿ ಆತ್ಮಹತ್ಯೆ

ಕಾರವಾರ: ಕಾಲೇಜು ಶುಲ್ಕಕ್ಕಾಗಿ ತಂದೆ ನೀಡಿದ್ದ ಹಣವನ್ನು ಪರಿಚಯಸ್ಥನಿಗೆ ಸಾಲವಾಗಿ ನೀಡಿದ್ದ ವಿದ್ಯಾರ್ಥಿನಿಯೊಬ್ಬಳು, ಹಣ ಮರಳಿ ಸಿಗದೆ ಪರೀಕ್ಷೆಯಿಂದ ವಂಚಿತಳಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ನಡೆದಿದೆ.

ಗಾಯತ್ರಿ ಎಂಬ ವಿದ್ಯಾರ್ಥಿನಿ ಭಟ್ಕಳದಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದರು. ಕಾಲೇಜು ಶುಲ್ಕ ಪಾವತಿಸಲು ತಂದೆ 10 ಸಾವಿರ ರೂಪಾಯಿ ನೀಡಿದ್ದರು. ಇದೇ ವೇಳೆ ಸಂತೋಷ ಮಾಧೇದ ನಾಯ್ಕ ಎಂಬ ಪರಿಚಯಸ್ಥ ವ್ಯಕ್ತಿ ಹಣದ ಅವಶ್ಯಕತೆ ಇದೆ ಎಂದು ಹೇಳಿ ಆಕೆಯಿಂದ ಹಣ ಪಡೆದುಕೊಂಡಿದ್ದಾನೆ.

ಆದರೆ ಹಲವು ಬಾರಿ ಕೇಳಿದರೂ ಹಣವನ್ನು ಮರಳಿ ನೀಡದ ಕಾರಣ ಗಾಯತ್ರಿಗೆ ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗಿಲ್ಲ. ಪರಿಣಾಮ ಪರೀಕ್ಷೆಯ ಹಾಲ್‌ಟಿಕೆಟ್ ಸಿಗದೆ ಆಕೆ ತೀವ್ರ ನಿರಾಸೆಗೆ ಒಳಗಾಗಿದ್ದಾಳೆ.

ಶುಲ್ಕ ಕಟ್ಟಲು ಸಾಧ್ಯವಾಗದ ನೋವಿನಿಂದ ಮನನೊಂದ ಗಾಯತ್ರಿ ಗ್ರಾಮದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣವಾದ ಎಲ್ಲ ಆಯಾಮಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿ: ಮಗಳನ್ನು ಕಾಲೇಜಿಗೆ ಕರೆದೊಯ್ಯುತ್ತಿದ್ದ ತಾಯಿ ಸಾವು

ಬೆಂಗಳೂರು: ವೈಟ್‌ಫೀಲ್ಡ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಳೆ ಕಾರಣದಿಂದ ಹದಗೆಟ್ಟ ರಸ್ತೆಯ ಗುಂಡಿಗೆ ಸ್ಕಿಡ್ ಆಗಿ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಮಾರತ್ತಹಳ್ಳಿಯಿಂದ ಸಿದ್ದಾಪುರ ಕಡೆಗೆ ತಾಯಿ ಕಾಂತಾ ಮತ್ತು ಮಗಳು ನೇಹಾ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ವಾಹನ ನಿಯಂತ್ರಣ ತಪ್ಪಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ರಸ್ತೆ ಮೇಲಿನ ಗುಂಡಿಗೆ ಸ್ಕಿಡ್ ಆಗಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಕೆಳಗೆ ಬಿದ್ದ ತಾಯಿ ಕಾಂತಾ ಅವರ ಮೇಲೆ ಹಿಂದಿನಿಂದ ಬಂದ ಶಾಲಾ ಬಸ್ ಹರಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಮಗಳು ನೇಹಾ ಸಣ್ಣ ಮಟ್ಟದ ಅಪಾಯದಿಂದ ಪಾರಾಗಿದ್ದಾಳೆ. ಘಟನೆ ಸಂಬಂಧ ವೈಟ್‌ಫೀಲ್ಡ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಬಿಟಿಡಿಎ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ರೈತ!

0

ಬಾಗಲಕೋಟೆ: ಬಿಟಿಡಿಎ ಕಚೇರಿಯಲ್ಲಿ ಸಾರ್ವಜನಿಕ ಸೇವಾ ವಿಳಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತನೊಬ್ಬ ನೌಕರನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ನವನಗರದಲ್ಲಿ ನಡೆದಿದೆ.

ಸಫಾಯಿ ಕರ್ಮಚಾರಿಗಳಿಗೆ ಪ್ಲಾಟ್ ಹಂಚಿಕೆ ಮಾಡದ ಹಿನ್ನೆಲೆ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಮುಖಂಡರು ಬಿಟಿಡಿಎ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ನಡುವೆ ರೈತ ಬಸಪ್ಪ ದೊಡಮನಿ ಕಚೇರಿಗೆ ಆಗಮಿಸಿ ತಮ್ಮ ಭೂ ಪರಿಹಾರ ಸಮಸ್ಯೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲ್ಕು ವರ್ಷಗಳಿಂದ ಮುಳುಗಡೆ ಭೂಮಿಗೆ ಪರಿಹಾರ ಸಿಗದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರೈತ ಬಸಪ್ಪ ಮತ್ತು ಟೈಪಿಸ್ಟ್ ನೀಲಕಂಠ ಅಂಕದ್ ನಡುವೆ ವಾಗ್ವಾದ ಉಂಟಾಗಿದೆ. ವಾಗ್ವಾದ ತೀವ್ರಗೊಂಡು ಪರಿಸ್ಥಿತಿ ನಿಯಂತ್ರಣ ತಪ್ಪಿದೆ.

ಈ ವೇಳೆ ಕೋಪಗೊಂಡ ರೈತ ಬಸಪ್ಪ ಚಪ್ಪಲಿಯಿಂದ ನೌಕರನಿಗೆ ಹೊಡೆದಿದ್ದು, ಕಚೇರಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಬಳಿಕ ಸ್ಥಳಕ್ಕೆ ಸಂಬಂಧಿಸಿದವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಪ್ರಕರಣ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪತ್ನಿಯಿಂದಲೇ ಮಾಜಿ ಸೈನಿಕನ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್‌:‌ ಪ್ರಿಯಕರನ ಸ್ಫೋಟಕ ಹೇಳಿಕೆ

0

ಚಿಕ್ಕೋಡಿ: ಮಾಜಿ ಸೈನಿಕ ಸಂದೀಪ್ ಹತ್ಯೆ ಪ್ರಕರಣದಲ್ಲಿ 2 ಕೋಟಿ ರೂಪಾಯಿ ವಿಮೆ ಹಣದ ಲಾಭಕ್ಕಾಗಿ ನಡೆದ ಸಂಚು ಎಂಬ ಅನುಮಾನಕ್ಕೆ ಮತ್ತಷ್ಟು ಬಲ ಸಿಕ್ಕಿದೆ. ಪ್ರಕರಣದಲ್ಲಿ ಬಂಧಿತರಾದ ಸುಮಾ ಮಂಜರಗಿ ಮತ್ತು ಅವರ ಪ್ರಿಯಕರ ಪುಂಡಲೀಕ ದೊಂಬರ್ ನಡುವಿನ ಸಂಬಂಧ ಇದೀಗ ತನಿಖೆಯಲ್ಲಿ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ.

ಪುಂಡಲೀಕ ದೊಂಬರ್ ತನ್ನ ಸ್ವಯಂ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಮೃತ ಸಂದೀಪ್ ಜೊತೆಗೆ ತನ್ನ ಸಂಪರ್ಕ ಹೇಗೆ ಆರಂಭವಾಯಿತು ಮತ್ತು ನಂತರ ಸುಮಾ ಜೊತೆಗಿನ ಸಂಬಂಧ ಹೇಗೆ ಬೆಳೆಯಿತು ಎಂಬುದನ್ನು ವಿವರಿಸಿದ್ದಾನೆ. ಜೊತೆಗೆ ವಿಮೆ ಹಣದ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರ ನಡುವೆ ಗಂಭೀರ ಗಲಾಟೆ ನಡೆದಿರುವುದಾಗಿ ಹೇಳಿದ್ದಾನೆ.

ತನಿಖಾ ದಾಖಲೆಗಳ ಪ್ರಕಾರ, ಪ್ರಕರಣದ ಬಳಿಕ ಹಣ ಹಂಚಿಕೆ ಸಂಬಂಧ ಪುಂಡಲೀಕ ಹಾಗೂ ಸುಮಾ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಬೆದರಿಕೆಗಳ ಮಟ್ಟಕ್ಕೂ ವಿಷಯ ಹೋಗಿದ್ದುದಾಗಿ ತಿಳಿದುಬಂದಿದೆ. ಈ ಮಧ್ಯೆ ಯಮಕನಮರಡಿ ಪೊಲೀಸರ ಮುಂದೆ ನೀಡಿದ ಹೇಳಿಕೆಗಳ ಆಧಾರದ ಮೇಲೆ ಇಬ್ಬರ ಪಾತ್ರದ ಬಗ್ಗೆ ಸಂಶಯಗಳು ಮತ್ತಷ್ಟು ಹೆಚ್ಚಿವೆ.

ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಶವವನ್ನು ಮರು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಫ್‌ಎಸ್‌ಎಲ್ ವರದಿ ನಿರೀಕ್ಷೆಯಲ್ಲಿದೆ. ತನಿಖೆ ತೀವ್ರಗೊಳಿಸಿರುವ ಪೊಲೀಸರು ಸುಮಾ ಮಂಜರಗಿ ಹಾಗೂ ಪುಂಡಲೀಕ ದೊಂಬರ್ ಅವರನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

0

ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಡುಪಿ ಜಿಲ್ಲಾ ಪ್ರವಾಸದ ಅಂಗವಾಗಿ ಕಾಪು ತಾಲೂಕಿನ ಖ್ಯಾತ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದರು.

ಈ ವೇಳೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಅರ್ಚಕರು ಸಚಿವೆಗೆ ಸಾಂಪ್ರದಾಯಿಕ ಸ್ವಾಗತ ಕೋರಿದರು. ಕ್ಷೇತ್ರದ ಅಭಿವೃದ್ಧಿ, ಧಾರ್ಮಿಕ ಪರಂಪರೆ ಹಾಗೂ ಇತಿಹಾಸದ ಕುರಿತು ಮಾಹಿತಿ ಪಡೆದ ನಿರ್ಮಲಾ ಸೀತಾರಾಮನ್, ದೇವಿಯ ಆಶೀರ್ವಾದ ಪಡೆದು ಮುಂದಿನ ಕಾರ್ಯಕ್ರಮಗಳತ್ತ ತೆರಳಿದರು.

ಉಡುಪಿಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಜಿಲ್ಲಾ ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಲಿರುವ ಅವರು, ಮಾರಿಗುಡಿ ಭೇಟಿಯ ನಂತರ ಉಡುಪಿ ಶ್ರೀಕೃಷ್ಣ ಮಠಕ್ಕೂ ಭೇಟಿ ನೀಡಿ ದರ್ಶನ ಪಡೆದರು. ಕೇಂದ್ರ ಸಚಿವೆಯ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಕೆಆರ್‌ಎಸ್ ಹಿನ್ನೀರಿನಿಂದ ಹೊರಬಂದ ಐತಿಹಾಸಿಕ ದೇವಸ್ಥಾನ: ಫೋಟೋಶೂಟ್‌ಗೆ ಮುಗಿಬಿದ್ದ ಜನ

0

ಮಂಡ್ಯ: ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿದ ಪರಿಣಾಮ ಹಿನ್ನೀರಿನಲ್ಲಿ ಮುಳುಗಿದ್ದ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ ಮತ್ತೆ ಗೋಚರಿಸಿದ್ದು, ಪ್ರವಾಸಿಗರ ಹೊಸ ಆಕರ್ಷಣೆಯಾಗಿ ಪರಿಣಮಿಸಿದೆ.

ಮಂಡ್ಯ ಜಿಲ್ಲೆಯ ಬೋರೆಆನಂದೂರು ಸಮೀಪ ಇರುವ ಈ ಪುರಾತನ ದೇವಾಲಯ ಹಲವು ವರ್ಷಗಳಿಂದ ಜಲಾಶಯದ ನೀರಿನ ಅಡಿಯಲ್ಲಿ ಇತ್ತು. ಇದೀಗ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 81 ಅಡಿಗೆ ಇಳಿದಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಕಟ್ಟಡ ಸಂಪೂರ್ಣವಾಗಿ ಕಾಣಿಸಿಕೊಂಡಿದೆ.

ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ದೇವಾಲಯದ ಮೂರ್ತಿಯನ್ನು ಸುರಕ್ಷಿತವಾಗಿ ಮಜ್ಜಿಗೆಪುರಕ್ಕೆ ಸ್ಥಳಾಂತರಿಸಲಾಗಿದ್ದರೂ, ಮೂಲ ಕಟ್ಟಡವನ್ನು ಸ್ಥಳಾಂತರಿಸಿರಲಿಲ್ಲ. ಹೀಗಾಗಿ ನೀರಿನ ಮಟ್ಟ ಇಳಿದಾಗಲೆಲ್ಲ ಈ ದೇವಾಲಯ ಮತ್ತೆ ಕಾಣಿಸಿಕೊಳ್ಳುತ್ತದೆ.

ದೇವಸ್ಥಾನ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಫೋಟೋಶೂಟ್ ಹಾಗೂ ವಿಡಿಯೋ ಚಿತ್ರೀಕರಣವೂ ಜೋರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಥಳದ ದೃಶ್ಯಗಳು ವೈರಲ್ ಆಗುತ್ತಿರುವುದರಿಂದ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

‘AK64’ಗೆ ಅಡ್ಡಿಯಾದ ಸಂಭಾವನೆ! ಅಜಿತ್‌ಗೆ ₹150 ಕೋಟಿ ನೀಡಲು ನಿರ್ಮಾಪಕರ ಹಿಂದೇಟು

ಚೆನ್ನೈ: ‘AK64’ ಸಿನಿಮಾ ಆರಂಭಕ್ಕೂ ಮುನ್ನವೇ ನಟ ಅಜಿತ್ ಕುಮಾರ್ ಅವರ ಸಂಭಾವನೆ ವಿಚಾರ ತಮಿಳು ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಲವು ಸೋಲುಗಳ ಬಳಿಕ ಅಜಿತ್ ತಮ್ಮ ಸಂಭಾವನೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದರೂ, ನಿರ್ಮಾಪಕರು ಮತ್ತು ನಟರ ನಡುವೆ ಇನ್ನೂ ಒಪ್ಪಂದ ಅಂತಿಮಗೊಂಡಿಲ್ಲ.

ವರದಿಗಳ ಪ್ರಕಾರ, ಅಜಿತ್ ತಮ್ಮ ಮುಂದಿನ ಚಿತ್ರದಿಗಾಗಿ ಸುಮಾರು 150 ಕೋಟಿ ರೂ. ಸಂಭಾವನೆ ಕೇಳಿದ್ದಾರೆ. ಆದರೆ ಪ್ರಮುಖ ನಿರ್ಮಾಣ ಸಂಸ್ಥೆಗಳು ಈ ಮೊತ್ತಕ್ಕೆ ಒಪ್ಪದ ಕಾರಣ ಮಾತುಕತೆ ಸ್ಥಗಿತಗೊಂಡಿದೆ. ಒಂದು ಪ್ರಮುಖ ಬ್ಯಾನರ್ 90 ಕೋಟಿ ರೂ.ಗಿಂತ ಹೆಚ್ಚು ನೀಡಲು ಸಿದ್ಧವಿಲ್ಲ ಎಂದು ಹೇಳಲಾಗಿದ್ದು, ಮತ್ತೊಂದು ಸಂಸ್ಥೆ 110 ಕೋಟಿ ರೂ.ವರೆಗೆ ಆಫರ್ ನೀಡಿದೆ ಎನ್ನಲಾಗಿದೆ.

ಈ ಹಿಂದೆ ಅಜಿತ್ ಅವರ ಸಂಭಾವನೆ 170-200 ಕೋಟಿ ರೂ. ನಡುವೆಯಿತ್ತು ಎನ್ನಲಾಗುತ್ತಿದೆ. ಆದರೆ ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಸಿಗದ ಹಿನ್ನೆಲೆಯಲ್ಲಿ ಮಾರುಕಟ್ಟೆ ಲೆಕ್ಕಾಚಾರಗಳು ಬದಲಾಗಿವೆ.

ಇದೀಗ ನಿರ್ದೇಶಕ ಅಧಿಕ್ ರವಿಚಂದ್ರನ್ ಜೊತೆ ಮತ್ತೊಂದು ಸಿನಿಮಾ ಹಾಗೂ ನಿರ್ದೇಶಕ ಸಿರುತೈ ಶಿವ ಜೊತೆ ಹೊಸ ಪ್ರಾಜೆಕ್ಟ್ ಮಾಡುವ ಸಾಧ್ಯತೆಗಳಿವೆ. ಆದರೆ ಸಂಭಾವನೆ ಗೊಂದಲ ಬಗೆಹರಿಯುವವರೆಗೆ ‘AK64’ ಕುರಿತು ಯಾವುದೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಕಾಣಿಸುತ್ತಿಲ್ಲ.

ಮೈಸೂರಿನಲ್ಲಿ ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು, ತಾಯಿ ಆತ್ಮಹತ್ಯೆ ಯತ್ನ!

0

ಮೈಸೂರು: ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಜವರೇಗೌಡನ ಕೊಪ್ಪಲು ಗ್ರಾಮದಲ್ಲಿ ತಾಯಿ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಗ್ರಾಮದ ಅನಿಲ್ ಕುಮಾರ್ ಅವರ ಪತ್ನಿ ಪ್ರಿಯಾಂಕಾ (26) ಅವರು ತಮ್ಮ ಮೂರು ವರ್ಷದ ಹಾಗೂ ಒಂದೂವರೆ ವರ್ಷದ ಇಬ್ಬರು ಮಕ್ಕಳನ್ನು ಸುತ್ತಲಿದಾರದಿಂದ ಬಿಗಿದು ಕೊಲೆ ಮಾಡಿದ ಬಳಿಕ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಕುಟುಂಬಸ್ಥರು ಪ್ರಿಯಾಂಕಾ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನೊಂದೆಡೆ, ಮೃತಪಟ್ಟ ಇಬ್ಬರು ಮಕ್ಕಳ ಮೃತದೇಹಗಳನ್ನು ಮೈಸೂರಿನ ಕೃಷ್ಣರಾಜ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಶನಿವಾರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಅನಿಲ್ ಕುಮಾರ್ ಮತ್ತು ಪ್ರಿಯಾಂಕಾ ದಂಪತಿಗೆ ಮದುವೆಯಾಗಿ ಸುಮಾರು ಆರು ವರ್ಷಗಳಾಗಿದ್ದು, ಈ ದುರ್ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಕುಟುಂಬ ಕಲಹ, ಮಾನಸಿಕ ಒತ್ತಡ ಅಥವಾ ಇತರೆ ಕಾರಣಗಳ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಸಂಪೂರ್ಣ ಮಾಹಿತಿ ಕಲೆಹಾಕುವ ಕಾರ್ಯ ಮುಂದುವರಿದಿದೆ. ತಾಯಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವುದರಿಂದ ಹೆಚ್ಚಿನ ಮಾಹಿತಿ ಅವರ ಚೇತರಿಕೆಯ ನಂತರವೇ ಲಭ್ಯವಾಗುವ ಸಾಧ್ಯತೆಯಿದೆ.

ಆಹಾರ ನಿಗಮದ ಗೋದಾಮುಗಳಿಗೆ ಲೋಕಾಯುಕ್ತ ಶಾಕ್: ಬಡವರ ಅಕ್ಕಿ ಲೂಟಿ ಕಳ್ಳಾಟ ಬಯಲು

ಬೆಂಗಳೂರು: ನಗರದಲ್ಲಿ ಪಡಿತರ ಅಕ್ಕಿ ಹಾಗೂ ಆಹಾರ ಧಾನ್ಯಗಳ ವಿತರಣೆಯಲ್ಲಿ ನಡೆಯುತ್ತಿದ್ದ ಭಾರಿ ಅಕ್ರಮ ಮತ್ತು ಅವ್ಯವಹಾರವನ್ನು ಲೋಕಾಯುಕ್ತ ಪೊಲೀಸರು ಬಯಲಿಗೆಳೆದಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹಾಗೂ ಉಪಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಒಟ್ಟು 27 ಆಹಾರ ಸರಬರಾಜು ನಿಗಮದ ಗೋದಾಮುಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಬೆಂಗಳೂರು ನಗರದ 22 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 5 ಗೋದಾಮುಗಳಲ್ಲಿ ನಡೆದ ಪರಿಶೀಲನೆ ವೇಳೆ ದಾಖಲೆಗಳು ಮತ್ತು ದಾಸ್ತಾನು ಪ್ರಮಾಣದಲ್ಲಿ ಗಂಭೀರ ವ್ಯತ್ಯಾಸಗಳು ಕಂಡುಬಂದಿವೆ. ಹಲವು ಗೋದಾಮುಗಳಲ್ಲಿ ಲೆಕ್ಕಕ್ಕೆ ತಕ್ಕಷ್ಟು ಅಕ್ಕಿ ಮತ್ತು ಆಹಾರ ಧಾನ್ಯಗಳು ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಶಾಂತಿನಗರ ಗೋದಾಮಿನಲ್ಲಿ ನಡೆದ ಪರಿಶೀಲನೆ ವೇಳೆ ದಾಖಲೆಗಳಲ್ಲಿರುವ ಮಾಹಿತಿಗೂ ದಾಸ್ತಾನಿಗೂ ಯಾವುದೇ ಹೊಂದಾಣಿಕೆ ಇಲ್ಲದಿರುವುದು ಪತ್ತೆಯಾಗಿದೆ. ಸುಮಾರು 50 ಕೆ.ಜಿ. ತೂಕದ 1,130 ಅಕ್ಕಿ ಮೂಟೆಗಳ ಲೆಕ್ಕ ಸಿಗದೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.

ಈ ಕುರಿತು ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಸಮರ್ಪಕ ಉತ್ತರ ದೊರಕಿಲ್ಲ. ಅಲ್ಲದೆ, ಗೋದಾಮಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐದು ಹಮಾಲಿ ಕಾರ್ಮಿಕರಿಗೆ ಯಾವುದೇ ಜೀವ ವಿಮೆ ಸೌಲಭ್ಯ ಕಲ್ಪಿಸದಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು ದಕ್ಷಿಣದ ಬೊಬ್ಬನಹಳ್ಳಿ ಗೋದಾಮಿನಲ್ಲಿ ದಾಳಿ ನಡೆಸಿದ ವೇಳೆ ಉಸ್ತುವಾರಿ ಅಧಿಕಾರಿ ಅಚ್ಯುತ್ ಯಾವುದೇ ಮಾಹಿತಿ ನೀಡದೆ ಗೈರುಹಾಜರಾಗಿದ್ದರು. ಸ್ಥಳದಲ್ಲಿದ್ದ ಸಿಬ್ಬಂದಿ ಶಿವಲಿಂಗಯ್ಯ ಕೂಡ ಸ್ವೀಕರಿಸಿದ ಅಕ್ಕಿ ಮೂಟೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ವಿಫಲರಾಗಿದ್ದಾರೆ.

ಇದೇ ವೇಳೆ ನಿಯಮ ಉಲ್ಲಂಘಿಸಿ ಲಾರಿಯೊಂದಕ್ಕೆ 25 ಟನ್ ಅಕ್ಕಿ ಮೂಟೆಗಳನ್ನು ಲೋಡ್ ಮಾಡಲಾಗುತ್ತಿತ್ತು ಎಂಬುದು ಪತ್ತೆಯಾಗಿದೆ. ಅಲ್ಲಿನ ಹತ್ತು ಹಮಾಲಿ ಕಾರ್ಮಿಕರಿಗೂ ಜೀವ ವಿಮೆ ಸೌಲಭ್ಯ ಒದಗಿಸದಿರುವುದು ಕಂಡುಬಂದಿದೆ.

ಬಸವನಗುಡಿ ಗೋದಾಮಿನಲ್ಲಿ ಅಧಿಕಾರಿಗಳು ನೀಡಿದ ಲಿಖಿತ ಮಾಹಿತಿಗಿಂತ ಕಡಿಮೆ ಪ್ರಮಾಣದ ಅಕ್ಕಿ ದಾಸ್ತಾನು ಇರುವುದನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ದಾಳಿಯ ವೇಳೆ ಅಧಿಕಾರಿಗಳ ಬಳಿ ಪತ್ತೆಯಾದ ನಗದು ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಅಥವಾ ಸಮರ್ಪಕ ಸಮಜಾಯಿಷಿ ದೊರೆತಿಲ್ಲ. ಜೊತೆಗೆ ಕಾರ್ಮಿಕರಿಗೆ ಜೀವ ವಿಮೆ, ಇಎಸ್‌ಐ ಹಾಗೂ ಪಿಎಫ್ ಸೌಲಭ್ಯಗಳನ್ನು ನೀಡದೆ ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ.

ಹನುಮಂತನಗರ ಗೋದಾಮಿನಲ್ಲೂ ಇದೇ ರೀತಿಯ ಅಕ್ರಮ ಪತ್ತೆಯಾಗಿದೆ. ಸರ್ಕಾರಿ ದಾಖಲೆಗಳಲ್ಲಿ ನಮೂದಿಸಲಾಗಿದ್ದ ಅಕ್ಕಿ ಹಾಗೂ ರಾಗಿ ದಾಸ್ತಾನು ಪ್ರಮಾಣ ಮತ್ತು ಗೋದಾಮಿನಲ್ಲಿ ಲಭ್ಯವಿದ್ದ ನೈಜ ದಾಸ್ತಾನು ನಡುವೆ ಭಾರಿ ವ್ಯತ್ಯಾಸ ಕಂಡುಬಂದಿದೆ.

ಈ ಮೂಲಕ ಪಡಿತರ ಧಾನ್ಯಗಳ ದುರುಪಯೋಗ ನಡೆದಿರುವ ಶಂಕೆ ಮತ್ತಷ್ಟು ಬಲಗೊಂಡಿದೆ. ಅಲ್ಲದೆ, ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಹಮಾಲಿ ಕಾರ್ಮಿಕರಿಗೆ ಜೀವ ವಿಮೆ, ಇಎಸ್‌ಐ ಮತ್ತು ಪಿಎಫ್ ಸೌಲಭ್ಯಗಳನ್ನು ನೀಡದೆ ಶೋಷಣೆ ನಡೆಸಲಾಗುತ್ತಿತ್ತು ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.

error: Content is protected !!