Home Blog Page 22

ಒಂದೆಡೆ ಪ್ರವಾಹ ಭೀತಿ, ಮತ್ತೊಂದೆಡೆ ಬರದ ಆತಂಕ; ಮಳೆಗಾಗಿ ಕಾದು ಕುಳಿತ ಅನ್ನದಾತರು!

ಬೆಂಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಅಬ್ಬರಿಸುತ್ತಿದ್ದರೆ, ಇನ್ನೂ ಹಲವು ಜಿಲ್ಲೆಗಳಲ್ಲಿ ರೈತರು ಮಳೆಗಾಗಿ ಎದುರು ನೋಡುತ್ತಿದ್ದಾರೆ.

ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಕಾಡು ಪ್ರಾಣಿಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ನಿರ್ಮಾಣವಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದಲ್ಲಿ ನೀರಿನ ಅಭಾವದ ಪರಿಸ್ಥಿತಿ ಎದುರಾಗಿದೆ. ಕಳೆದ ವರ್ಷವೂ ಇದೇ ಸಮಸ್ಯೆ ಎದುರಾಗಿದ್ದರಿಂದ ಅಧಿಕಾರಿಗಳು ಕಾಡು ಪ್ರಾಣಿಗಳಿಗಾಗಿ ಸಣ್ಣ ಟ್ಯಾಂಕ್‌ಗಳನ್ನು ನಿರ್ಮಿಸಿದ್ದರು. ಆದರೆ ಇದೀಗ ಆ ಟ್ಯಾಂಕ್‌ಗಳಲ್ಲಿನ ನೀರಿನ ಪ್ರಮಾಣವೂ ಕಡಿಮೆಯಾಗುತ್ತಿದೆ.

ಮೇ ತಿಂಗಳಲ್ಲಿ ಸುರಿದ ಅಲ್ಪ ಮಳೆಯಿಂದ ಕೆಲವು ಕೆರೆಗಳು ಭಾಗಶಃ ತುಂಬಿದ್ದರೂ, ಹಲವು ಕೆರೆಗಳು ಸಂಪೂರ್ಣ ಖಾಲಿಯಾಗಿವೆ. ಮಳೆ ಮುಂದುವರಿಯದಿದ್ದರೆ ವನ್ಯಜೀವಿಗಳಿಗೂ ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.

ಚಿತ್ರದುರ್ಗದಲ್ಲಿ ಬೆಳೆಗಳಿಗೆ ಬರದ ಹೊಡೆತ:

ಕೋಟೆನಾಡು ಚಿತ್ರದುರ್ಗದಲ್ಲೂ ಮಳೆಯ ಕೊರತೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಸೂರ್ಯಕಾಂತಿ ಬಿತ್ತನೆಗೂ ಮುನ್ನ ಉತ್ತಮ ಮಳೆಯಾಗಿದ್ದರೂ, ಕಳೆದ ಎರಡು ತಿಂಗಳಿಂದ ಮಳೆ ಬಾರದ ಪರಿಣಾಮ ತೊಗರಿ ಮತ್ತು ಮೆಕ್ಕೆಜೋಳ ಬೆಳೆಗಳು ಒಣಗುತ್ತಿವೆ.

ಚಿತ್ರದುರ್ಗ ತಾಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ರೈತರು ಎಕರೆಗೆ 50ರಿಂದ 60 ಸಾವಿರ ರೂ. ಖರ್ಚು ಮಾಡಿ ಬೆಳೆ ಬೆಳೆದಿದ್ದು, ಫಸಲು ಬರುವ ಮುನ್ನವೇ ಬೆಳೆಗಳು ಹಾಳಾಗುತ್ತಿರುವುದರಿಂದ ಆತಂಕಗೊಂಡಿದ್ದಾರೆ.

ವಿಜಯಪುರದಲ್ಲೂ ರೈತರ ಸಂಕಷ್ಟ:

ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಜೂನ್ ಮೊದಲ ವಾರದಲ್ಲಿ ಅಲ್ಪ ಮಳೆಯಾದ ಹಿನ್ನೆಲೆಯಲ್ಲಿ ಶೇ.20ರಷ್ಟು ರೈತರು ಬಿತ್ತನೆ ಮಾಡಿದ್ದಾರೆ. ಉಳಿದ ರೈತರು ಮಳೆಗಾಗಿ ಕಾಯುತ್ತಿದ್ದು, ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕಾಗಿ ಮಾಡಿರುವ ಸಾಲದ ಚಿಂತೆಯಲ್ಲಿ ಸಿಲುಕಿದ್ದಾರೆ.

ಜುಲೈ ಬಂದರೂ ನಿರೀಕ್ಷಿತ ಮಳೆ ಬಾರದ ಕಾರಣ ರೈತರು ಸರ್ಕಾರದಿಂದ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಕೊಡಗಿನಲ್ಲಿ ಮಳೆ ಕಡಿಮೆಯಾದರೂ ಸಮಸ್ಯೆ ಮುಂದುವರಿಕೆ:

ಇತ್ತ ಕೊಡಗು ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಭಾರಿ ಮಳೆಗೆ ಉಂಟಾದ ಸಮಸ್ಯೆಗಳು ಇನ್ನೂ ಮುಂದುವರಿದಿವೆ. ಭಾಗಮಂಡಲ ಹಾಗೂ ಚೆಟ್ಟಿಮಾನಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನರು ಕತ್ತಲಿನಲ್ಲಿ ದಿನ ಕಳೆಯುವಂತಾಗಿದೆ.

ಭಾರಿ ಗಾಳಿ ಮಳೆಯಿಂದ 16ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಮಳೆಯ ಚಿತ್ರಣ ವಿಭಿನ್ನವಾಗಿದೆ. ಕೆಲವೆಡೆ ಮಳೆ ಅಬ್ಬರಿಸುತ್ತಿದ್ದರೆ, ಮತ್ತೊಂದೆಡೆ ರೈತರು ಹಾಗೂ ವನ್ಯಜೀವಿಗಳು ನೀರಿಗಾಗಿ ಮಳೆರಾಯನ ನಿರೀಕ್ಷೆಯಲ್ಲಿವೆ.

KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು: ತನಿಖೆಗೆ ರಾಜ್ಯಪಾಲರಿಂದ ಅಧಿಕೃತ ಆದೇಶ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ರಾಜ್ಯಪಾಲರ ಆದೇಶದಂತೆ, ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಲು ಶಿಫಾರಸು ಮಾಡಲಾಗಿದೆ. ಅಲ್ಲದೆ, ಭಾರತೀಯ ಸಂವಿಧಾನದ 317(1)ನೇ ವಿಧಿಯ ಅನ್ವಯ ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸುವ ಸಂಬಂಧ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಅಥವಾ ಮುಂದಿನ ಆದೇಶ ಹೊರಬೀಳುವವರೆಗೆ ಕೆಪಿಎಸ್‌ಸಿಯ ಹಿರಿಯ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿರುವ ಆರೋಪಗಳು ಕೇಳಿಬಂದಿವೆ. ಈ ಕುರಿತು ಸಲ್ಲಿಕೆಯಾಗಿದ್ದ ದೂರುಗಳ ಆಧಾರದ ಮೇಲೆ ರಾಜ್ಯಪಾಲರು ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಸುಮಾ ಎಸ್. ಸಾಹುಕಾರ್ ವಿರುದ್ಧವೂ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ವೇಳೆ ನಕಲಿ ಆದಾಯ ಹಾಗೂ ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿ ಮೀಸಲಾತಿಯ ಸೌಲಭ್ಯ ಪಡೆದಿರುವ ಆರೋಪ ಕೇಳಿಬಂದಿತ್ತು. ದಾಖಲೆಗಳ ಪರಿಶೀಲನೆ ವೇಳೆ ಈ ಅಕ್ರಮ ಬೆಳಕಿಗೆ ಬಂದಿರುವುದಾಗಿ ತನಿಖಾ ಮೂಲಗಳು ತಿಳಿಸಿವೆ.

ರಾಜ್ಯಪಾಲರ ಆದೇಶಕ್ಕೆ ಸಂಬಂಧಿಸಿದಂತೆ ಲೋಕಭವನ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ಶಿವಶಂಕರಪ್ಪ ಸಾಹುಕಾರ್ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿರುವುದರಿಂದ ಅವುಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದು ಅಗತ್ಯವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇದೇ ಕಾರಣಕ್ಕೆ ಸಂವಿಧಾನದ 317(1)ನೇ ವಿಧಿಯ ಅನ್ವಯ ಪ್ರಕರಣವನ್ನು ರಾಷ್ಟ್ರಪತಿಗಳಿಗೆ ಉಲ್ಲೇಖಿಸಲು ಶಿಫಾರಸು ಮಾಡಲಾಗಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Milk vs Curd: ತೂಕ ಕಡಿಮೆ ಮಾಡಲು ಯಾವುದು ಉತ್ತಮ? ಹಾಲು ಅಥವಾ ಮೊಸರು?

0

ಹಾಲು ಮತ್ತು ಮೊಸರು ಭಾರತೀಯ ಆಹಾರ ಪದ್ಧತಿಯ ಪ್ರಮುಖ ಭಾಗವಾಗಿವೆ.

ಬೆಳಗಿನ ಚಹಾದಿಂದ ಹಿಡಿದು ಊಟದವರೆಗೂ ಇವುಗಳ ಬಳಕೆ ಸಾಮಾನ್ಯವಾಗಿದೆ. ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುವ ಹಾಲು ಮತ್ತು ಮೊಸರು ದೇಹದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತವೆ.

ಪೋಷಕಾಂಶ ತಜ್ಞರ ಪ್ರಕಾರ, ತೂಕ ಇಳಿಕೆ ಹಾಗೂ ಜೀರ್ಣಕ್ರಿಯೆಯ ವಿಚಾರದಲ್ಲಿ ಹಾಲು ಮತ್ತು ಮೊಸರು ವಿಭಿನ್ನ ರೀತಿಯಲ್ಲಿ ಕೆಲಸ ಮಾಡುತ್ತವೆ. ಹಾಲು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡಿದರೆ, ಮೊಸರು ನೈಸರ್ಗಿಕ ಪ್ರೋಬಯಾಟಿಕ್ ಆಗಿ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.

ಹಾಲು ಮತ್ತು ಮೊಸರಿನ ಪೋಷಕಾಂಶಗಳಲ್ಲಿ ವ್ಯತ್ಯಾಸ:

ಹಾಲು ಮತ್ತು ಮೊಸರು ಎರಡೂ ಹಾಲಿನಿಂದ ತಯಾರಾಗುತ್ತವೆ. ಆದರೆ ಮೊಸರನ್ನು ಹುದುಗಿಸುವ ಪ್ರಕ್ರಿಯೆಯಿಂದ ಅದರ ಗುಣಗಳಲ್ಲಿ ಬದಲಾವಣೆ ಆಗುತ್ತದೆ.

100 ಮಿ.ಲೀ ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ ಜೊತೆಗೆ ಸುಮಾರು 3.2 ಗ್ರಾಂ ಪ್ರೋಟೀನ್ ಇರುತ್ತದೆ. 100 ಗ್ರಾಂ ಮೊಸರಿನಲ್ಲಿ ಸುಮಾರು 3.5 ಗ್ರಾಂ ಪ್ರೋಟೀನ್ ದೊರೆಯುತ್ತದೆ. ಮೊಸರಿನಲ್ಲಿ ಲ್ಯಾಕ್ಟೋಸ್ ಪ್ರಮಾಣ ಕಡಿಮೆ ಇರುವುದರಿಂದ ಕೆಲವರಿಗೆ ಹಾಲಿಗಿಂತ ಸುಲಭವಾಗಿ ಜೀರ್ಣವಾಗುತ್ತದೆ.

ತೂಕ ಇಳಿಸಲು ಯಾವುದು ಉತ್ತಮ?

ತೂಕ ಇಳಿಸಲು ಹಾಲು ಮತ್ತು ಮೊಸರು ಎರಡೂ ಸಹಾಯಕವಾಗಬಹುದು. ಹಾಲಿನಲ್ಲಿರುವ ಪ್ರೋಟೀನ್ ಹೆಚ್ಚು ಸಮಯ ಹೊಟ್ಟೆ ತುಂಬಿರುವ ಭಾವನೆ ನೀಡುತ್ತದೆ. ಇದರಿಂದ ಅನಗತ್ಯ ಹಸಿವು ಕಡಿಮೆಯಾಗುತ್ತದೆ.

ತೂಕ ಇಳಿಸಲು ಬಯಸುವವರು ಕಡಿಮೆ ಕೊಬ್ಬಿನ ಹಾಲು ಹಾಗೂ ಸಕ್ಕರೆ ಸೇರಿಸದ ಹಾಲನ್ನು ಸೇವಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮೊಸರಿನಲ್ಲಿರುವ ಪ್ರೋಬಯಾಟಿಕ್ಸ್ ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹದ ಚಯಾಪಚಯ ಕ್ರಿಯೆಗೆ ಸಹಾಯ ಮಾಡಬಹುದು.

ಜೀರ್ಣಕ್ರಿಯೆಗೆ ಯಾವುದು ಬೆಸ್ಟ್?

ಹೊಟ್ಟೆಯ ಆರೋಗ್ಯಕ್ಕೆ ಮೊಸರು ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಕರುಳಿನ ಆರೋಗ್ಯವನ್ನು ಕಾಪಾಡುತ್ತವೆ.

ಆದರೆ ಸ್ನಾಯುಗಳನ್ನು ಬಲಪಡಿಸಲು ಹಾಗೂ ವ್ಯಾಯಾಮ ಮಾಡುವವರಿಗೆ ಹಾಲು ಉತ್ತಮ ಪ್ರೋಟೀನ್ ಮೂಲವಾಗಬಹುದು.

ದಿನಕ್ಕೆ ಎಷ್ಟು ಸೇವಿಸಬೇಕು?

ತಜ್ಞರ ಪ್ರಕಾರ, ಸಾಮಾನ್ಯ ವ್ಯಕ್ತಿಯು ದಿನಕ್ಕೆ ಸುಮಾರು 500 ರಿಂದ 600 ಮಿ.ಲೀ ಹಾಲು ಸೇವಿಸಬಹುದು. ಒಂದು ಅಥವಾ ಎರಡು ಕಪ್ ಮೊಸರು ಸೇವಿಸುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು.

ವ್ಯಾಯಾಮದ ನಂತರ ಹಾಲು ಸೇವಿಸುವುದು ಉತ್ತಮ. ಊಟದ ಸಮಯದಲ್ಲಿ ಮೊಸರು ಸೇವಿಸುವುದು ಸಹ ಪ್ರಯೋಜನಕಾರಿ ಎಂದು ತಜ್ಞರು ತಿಳಿಸಿದ್ದಾರೆ.

ಯಾರು ಎಚ್ಚರಿಕೆ ವಹಿಸಬೇಕು?

ಕರುಳಿನ ಆರೋಗ್ಯ ಸುಧಾರಿಸಬೇಕೆಂದರೆ ಮೊಸರು ಉತ್ತಮ. ಸ್ನಾಯುಗಳ ಬೆಳವಣಿಗೆ ಹಾಗೂ ಶಕ್ತಿಗಾಗಿ ಹಾಲು ಸಹಾಯಕ.

ಆದರೆ ಹಾಲು ಅಥವಾ ಮೊಸರು ಸೇವಿಸಿದ ಬಳಿಕ ಅಸ್ವಸ್ಥತೆ ಉಂಟಾಗುವವರು ಅಥವಾ ಲ್ಯಾಕ್ಟೋಸ್ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆಯುವುದು ಉತ್ತಮ.

ಒಟ್ಟಿನಲ್ಲಿ, ತೂಕ ಇಳಿಕೆಗಾಗಿ ಹಾಲು ಮತ್ತು ಮೊಸರು ಎರಡೂ ಸಹಾಯ ಮಾಡಬಹುದು. ನಿಮ್ಮ ದೇಹದ ಅಗತ್ಯಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಮುಖ್ಯ.

ಎರಡು ತೊಲ ಬಂಗಾರಕ್ಕಾಗಿ ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ: ಚಿಕಿತ್ಸೆ ಫಲಿಸದೆ ಮಹಿಳೆ ಸಾವು

0

ಬೆಂಗಳೂರು: ವರದಕ್ಷಿಣೆ ಹೆಸರಿನಲ್ಲಿ ನಡೆಯುತ್ತಿರುವ ಕಿರುಕುಳಕ್ಕೆ ಮತ್ತೊಂದು ಜೀವ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂರು ತಿಂಗಳ ಗಂಡು ಮಗುವಿಗೆ ಎರಡು ತೊಲ ಚಿನ್ನ ನೀಡಲಿಲ್ಲ ಎಂಬ ಕಾರಣಕ್ಕೆ ಅಳಿಯ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ 45 ವರ್ಷದ ರೋಷನಬಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೂಲತಃ ಯಾದಗಿರಿ ಜಿಲ್ಲೆಯವರಾದ ರೋಷನಬಿ ಅವರ ಕುಟುಂಬ ಕಳೆದ ಏಳು ವರ್ಷಗಳಿಂದ ಬೆಂಗಳೂರಿನ ವಿದ್ಯಾರಣ್ಯಪುರದ ಮೇಡಿ ಅಗ್ರಹಾರ ಪ್ರದೇಶದಲ್ಲಿ ನೆಲೆಸಿತ್ತು. ಆರೋಪಿ ಅಕ್ಬರ್, ಎರಡು ತೊಲ ಚಿನ್ನ ನೀಡುವಂತೆ ನಿರಂತರವಾಗಿ ಪತ್ನಿ ಹಾಗೂ ಆಕೆಯ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಚಿನ್ನ ನೀಡದಿದ್ದರೆ ಕೊಲೆ ಮಾಡುವುದಾಗಿ ಅತ್ತೆಗೆ ಬೆದರಿಕೆ ಹಾಕಿದ್ದ ಆರೋಪವೂ ಕೇಳಿಬಂದಿದೆ.

ಜುಲೈ 10ರಂದು ಅಕ್ಬರ್ ಕೊಡಲಿಯೊಂದಿಗೆ ಮನೆಗೆ ಬಂದು ಯಾವುದೇ ಮಾತುಕತೆಯಿಲ್ಲದೆ ರೋಷನಬಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಘಟನೆ ಕುರಿತು ಮಾತನಾಡಿದ ಮೃತರ ಪುತ್ರಿ ಹಾಗೂ ಆರೋಪಿಯ ಪತ್ನಿ ರಂಜಾನ್, “ಏಳು ವರ್ಷಗಳ ಹಿಂದೆ ನಾವು ಪ್ರೀತಿಸಿ ಮದುವೆಯಾಗಿದ್ದೆವು. ಮದುವೆಯಾದ ದಿನದಿಂದಲೇ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ಎರಡನೇ ಮಗು ಜನಿಸಿದ ಬಳಿಕ ಎರಡು ತೊಲ ಚಿನ್ನ ಕೊಡಿಸಬೇಕೆಂದು ನಿರಂತರವಾಗಿ ಜಗಳ ಮಾಡುತ್ತಿದ್ದ. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಹೇಳಿದರೂ ಕೇಳುತ್ತಿರಲಿಲ್ಲ. ಜುಲೈ 10ರಂದು ಕೊಡಲಿಯೊಂದಿಗೆ ಬಂದು ನನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಒತ್ತಾಯಿಸಿದ್ದಾರೆ.

ಆರೋಪಿ ಅಕ್ಬರ್ ಮತ್ತು ರಂಜಾನ್ ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೋಣಾಳ ಗ್ರಾಮದವರಾದ ಅಕ್ಬರ್, ಶಾಲೆಯಲ್ಲಿ ಓದುತ್ತಿದ್ದ ರಂಜಾನ್ ಅವರನ್ನು ಕರೆದುಕೊಂಡು ಹೋಗಿ ಮದುವೆಯಾಗಿದ್ದ ಎಂದು ತಿಳಿದುಬಂದಿದೆ. ಆರಂಭದಲ್ಲಿ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರೂ, ನಂತರ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದರು. ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗು ಹಾಗೂ ಒಂದು ತಿಂಗಳ ಹಿಂದೆ ಜನಿಸಿದ ಗಂಡು ಮಗು ಇದೆ.

ಮದುವೆಯಾದ ಬಳಿಕದಿಂದಲೇ ಅಕ್ಬರ್ ವರದಕ್ಷಿಣೆಗಾಗಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಹಿಂದೆ ಸೀಮೆಎಣ್ಣೆ ಸುರಿದು ಪತ್ನಿಯನ್ನು ಕೊಲ್ಲಲು ಯತ್ನಿಸಿದ್ದ ಎನ್ನುವ ಆರೋಪವೂ ಇದೆ. ಗಂಡು ಮಗು ಜನಿಸಿದ ಬಳಿಕ ಎರಡು ತೊಲ ಚಿನ್ನ ನೀಡುವಂತೆ ಮತ್ತಷ್ಟು ಒತ್ತಡ ಹೇರುತ್ತಿದ್ದು, ಇದೇ ವಿಚಾರದಲ್ಲಿ ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

 

ಅಮೆರಿಕ-ಇರಾನ್ ಸಂಘರ್ಷ: ಭೀಕರ ದಾಳಿಯ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಶೇ. 4ರಷ್ಟು ಏರಿಕೆ!

0

ಲಂಡನ್: ಅಮೆರಿಕ ಮತ್ತು ಇರಾನ್ ನಡುವಿನ ಕ್ಷಿಪಣಿ ಹಾಗೂ ವೈಮಾನಿಕ ದಾಳಿಗಳು ತೀವ್ರಗೊಂಡಿರುವ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಬೆಲೆಗಳು ಶೇ. 4ಕ್ಕೂ ಅಧಿಕ ಏರಿಕೆ ಕಂಡಿವೆ. ವಿಶ್ವದ ಇಂಧನ ಸರಬರಾಜಿಗೆ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಭದ್ರತೆ ಕುರಿತು ಆತಂಕ ಹೆಚ್ಚಾಗಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 4.28ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 79.26 ಡಾಲರ್‌ (ಸುಮಾರು ₹7,570) ತಲುಪಿದೆ. ಅದೇ ವೇಳೆ, ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆ ಶೇ. 4.37ರಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್‌ಗೆ 74.53 ಡಾಲರ್‌ (ಸುಮಾರು ₹7,125) ದಾಖಲಾಗಿದೆ.

ವಾರಾಂತ್ಯದಲ್ಲಿ ಇರಾನ್ ತನ್ನ ಮಿಲಿಟರಿ ಕಾರ್ಯಾಚರಣೆಯ ವ್ಯಾಪ್ತಿಯನ್ನು ಕತಾರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‌ವರೆಗೂ ವಿಸ್ತರಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಇರಾನ್‌ನ ಹಲವು ಮಿಲಿಟರಿ ನೆಲೆಗಳ ಮೇಲೆ ಮತ್ತೊಂದು ಸುತ್ತಿನ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಇದರ ನಡುವೆ, ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದ ಬಳಿಕ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದಾಗಿ ಇರಾನ್ ಘೋಷಿಸಿದೆ. ಹಡಗುಗಳ ಸಂಚಾರವನ್ನು ಮೇಲ್ವಿಚಾರಣೆ ಮಾಡುವ ಕೆಪ್ಲರ್ ಸಂಸ್ಥೆಯ ಮಾಹಿತಿಯ ಪ್ರಕಾರ, ಭಾನುವಾರ ಈ ಜಲಸಂಧಿಯ ಮೂಲಕ ಕೇವಲ ಆರು ಹಡಗುಗಳು ಮಾತ್ರ ಸಂಚರಿಸಿವೆ. ಕಳೆದ ಐದು ವಾರಗಳಲ್ಲಿ ದಾಖಲಾಗಿರುವ ಅತ್ಯಂತ ಕಡಿಮೆ ಸಂಚಾರ ಇದಾಗಿದೆ.

ಕಳೆದ ತಿಂಗಳು ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ತಗ್ಗಿಸುವ ಉದ್ದೇಶದಿಂದ ಅಮೆರಿಕ ಮತ್ತು ಇರಾನ್ ನಡುವೆ ನಡೆದಿದ್ದ ತಾತ್ಕಾಲಿಕ ಶಾಂತಿ ಒಪ್ಪಂದ ಹಾಗೂ ಮಾತುಕತೆಗಳು ಇತ್ತೀಚಿನ ದಾಳಿಗಳ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಅಮೆರಿಕದ ದಾಳಿಯನ್ನು ಇರಾನ್ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಈ ಕ್ರಮವು ವಿಶ್ವಸಂಸ್ಥೆಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಇರಾನ್, ತನ್ನ ವಿರುದ್ಧದ ಯಾವುದೇ ಮಿಲಿಟರಿ ಕಾರ್ಯಾಚರಣೆಗೆ ಅಮೆರಿಕಕ್ಕೆ ತಮ್ಮ ಭೂಭಾಗ ಅಥವಾ ಸೇನಾ ನೆಲೆಗಳನ್ನು ಬಳಸಲು ಅವಕಾಶ ನೀಡುವ ದೇಶಗಳನ್ನು ಶತ್ರು ರಾಷ್ಟ್ರಗಳೆಂದು ಪರಿಗಣಿಸಿ ಅಗತ್ಯ ಪ್ರತಿದಾಳಿ ನಡೆಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದೆ.

ಧರ್ಮಸ್ಥಳ-ಕುಕ್ಕೆ ಸುಬ್ರಹ್ಮಣ್ಯ ಪ್ರವಾಸಕ್ಕೆ KSTDC ಭರ್ಜರಿ ಪ್ಯಾಕೇಜ್; ಬೆಂಗಳೂರಿನಿಂದ 2 ದಿನಗಳ ಯಾತ್ರೆಗೆ ಅವಕಾಶ!

ಬೆಂಗಳೂರು: ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ಬಯಸುವ ಪ್ರವಾಸಿಗರಿಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವಿಶೇಷ ಅವಕಾಶ ನೀಡಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ 2 ದಿನಗಳ ‘ಪ್ರೀಮಿಯಂ ಪ್ರವಾಸ ಪ್ಯಾಕೇಜ್’ ಅನ್ನು ಘೋಷಿಸಿದೆ.

ಎಸಿ ಡಿಲಕ್ಸ್ ಕೋಚ್ ಮೂಲಕ ನಡೆಯುವ ಈ ಪ್ರವಾಸದಲ್ಲಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ವಿಶೇಷ ದರ್ಶನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಆದಿ ಸುಬ್ರಹ್ಮಣ್ಯ, ಸೌತಡ್ಕ ಮಹಾಗಣಪತಿ ದೇವಸ್ಥಾನ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಪ್ರವಾಸದ ಪ್ರಮುಖ ಸ್ಥಳಗಳು:

  • ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ (ವಿಐಪಿ ವಿಶೇಷ ದರ್ಶನ)
  • ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ
  • ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಆದಿ ಸುಬ್ರಹ್ಮಣ್ಯ
  • ಆದಿಚುಂಚನಗಿರಿ ಕ್ಷೇತ್ರ
  • ಐತಿಹಾಸಿಕ ಮಂಜರಾಬಾದ್ ಕೋಟೆ
  • ರಾಮ ಕ್ಷೇತ್ರ
  • ಸೂರ್ಯನಾರಾಯಣ ದೇವಸ್ಥಾನ
  • ಶ್ರೀ ಶಿಶಿಲೇಶ್ವರ ದೇವಸ್ಥಾನ

ಪ್ರವಾಸದ ವೇಳಾಪಟ್ಟಿ:

ಮೊದಲ ದಿನ ಬೆಳಗ್ಗೆ 7.30ಕ್ಕೆ ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಟಿಟಿಎಂಸಿ ಬಳಿಯ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ಎಸಿ ಬಸ್ ಪ್ರಯಾಣ ಆರಂಭವಾಗಲಿದೆ. ಮಾರ್ಗಮಧ್ಯೆ ಆದಿಚುಂಚನಗಿರಿ ದೇವಸ್ಥಾನ ಹಾಗೂ ಮಂಜರಾಬಾದ್ ಕೋಟೆ ವೀಕ್ಷಣೆ ಬಳಿಕ ಸಂಜೆ ಧರ್ಮಸ್ಥಳ ತಲುಪಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಎರಡನೇ ದಿನ ಬೆಳಗ್ಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ವಿಶೇಷ ದರ್ಶನದ ಬಳಿಕ ರಾಮ ಕ್ಷೇತ್ರ, ಸೂರ್ಯನಾರಾಯಣ ದೇವಸ್ಥಾನ, ಶಿಶಿಲೇಶ್ವರ ದೇವಸ್ಥಾನ ಹಾಗೂ ಸೌತಡ್ಕ ಗಣಪತಿ ದೇವಸ್ಥಾನಗಳಿಗೆ ಭೇಟಿ ನೀಡಲಾಗುತ್ತದೆ. ಸಂಜೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ದರ್ಶನ ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಆರಂಭಿಸಲಾಗುತ್ತದೆ.

ಪ್ಯಾಕೇಜ್‌ನಲ್ಲಿ ಸೌಲಭ್ಯಗಳು:

  • ಎಸಿ ಡಿಲಕ್ಸ್ ಬಸ್ ಪ್ರಯಾಣ
  • ದೇವಸ್ಥಾನಗಳ ವಿಶೇಷ ದರ್ಶನ ಟಿಕೆಟ್
  • ಧರ್ಮಸ್ಥಳದಲ್ಲಿ ವಸತಿ ವ್ಯವಸ್ಥೆ
  • ಎರಡನೇ ದಿನದ ಬೆಳಗಿನ ಉಪಾಹಾರ

ಪ್ಯಾಕೇಜ್‌ನಲ್ಲಿ ಸೇರಿರದ ವೆಚ್ಚಗಳು:

  • ಮಧ್ಯಾಹ್ನ ಹಾಗೂ ರಾತ್ರಿ ಊಟದ ವೆಚ್ಚ
  • ವೈಯಕ್ತಿಕ ಖರೀದಿ ಮತ್ತು ಇತರೆ ಖರ್ಚು
  • ವೇಳಾಪಟ್ಟಿಯಲ್ಲಿ ಇಲ್ಲದ ಹೆಚ್ಚುವರಿ ಸ್ಥಳಗಳ ಭೇಟಿ

ಪ್ರವಾಸಿಗರು ಮಾನ್ಯ ಗುರುತಿನ ಚೀಟಿ ಕಡ್ಡಾಯವಾಗಿ ಕೊಂಡೊಯ್ಯಬೇಕು. ದೇವಸ್ಥಾನಗಳಿಗೆ ಭೇಟಿ ನೀಡುವಾಗ ಸಾಂಪ್ರದಾಯಿಕ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು KSTDC ಸೂಚಿಸಿದೆ. ಭಕ್ತರ ದಟ್ಟಣೆ ಹಾಗೂ ಸಂಚಾರ ಪರಿಸ್ಥಿತಿಗೆ ಅನುಗುಣವಾಗಿ ಸಮಯದಲ್ಲಿ ಬದಲಾವಣೆ ಸಾಧ್ಯ ಎಂದು ತಿಳಿಸಿದೆ.

ಮಧುಮೇಹ ನಿಯಂತ್ರಣದಿಂದ ತೂಕ ಇಳಿಕೆಗೆವರೆಗೆ..! ತುಳಸಿ ಬೀಜಗಳನ್ನು ಸೇವಿಸುವುದರಿಂದ ಸಿಗುವ ಆರೋಗ್ಯಕರ ಲಾಭಗಳೇನು?

0

ಹಿಂದೂ ಸಂಪ್ರದಾಯದಲ್ಲಿ ಪವಿತ್ರ ಸ್ಥಾನ ಪಡೆದಿರುವ ತುಳಸಿ ಗಿಡಕ್ಕೆ ಆಯುರ್ವೇದದಲ್ಲಿಯೂ ವಿಶೇಷ ಮಹತ್ವವಿದೆ. ತುಳಸಿ ಎಲೆಗಳು ಶೀತ, ಕೆಮ್ಮು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಉಪಯುಕ್ತವೆಂದು ಪರಿಗಣಿಸಲಾಗುತ್ತದೆ.

ಆದರೆ ತುಳಸಿ ಎಲೆಗಳಷ್ಟೇ ಅಲ್ಲ, ಅದರ ಬೀಜಗಳಲ್ಲಿಯೂ ಹಲವು ಪೌಷ್ಟಿಕಾಂಶಗಳು ಮತ್ತು ಔಷಧೀಯ ಗುಣಗಳಿದ್ದು, ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಸಹಕಾರಿಯಾಗಬಹುದು ಎಂದು ತಜ್ಞರು ತಿಳಿಸುತ್ತಾರೆ.

ತುಳಸಿ ಬೀಜಗಳನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದು, ಜೀರ್ಣಕ್ರಿಯೆ ಸುಧಾರಿಸುವುದು ಹಾಗೂ ತೂಕ ನಿಯಂತ್ರಣಕ್ಕೆ ನೆರವಾಗುವುದು ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯಬಹುದು.

ತುಳಸಿ ಬೀಜಗಳಿಂದ ಸಿಗುವ ಪ್ರಮುಖ ಆರೋಗ್ಯ ಪ್ರಯೋಜನಗಳು

ರೋಗನಿರೋಧಕ ಶಕ್ತಿ ಹೆಚ್ಚಿಸಲು ನೆರವು:
ತುಳಸಿ ಬೀಜಗಳಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುವ ಅಂಶಗಳಿವೆ ಎಂದು ಹೇಳಲಾಗುತ್ತದೆ. ತುಳಸಿ ಬೀಜಗಳಿಂದ ತಯಾರಿಸಿದ ಕಷಾಯ ಅಥವಾ ಪಾನೀಯವನ್ನು ಸೇವಿಸುವುದರಿಂದ ಸೋಂಕುಗಳ ವಿರುದ್ಧ ದೇಹದ ಪ್ರತಿರೋಧ ಸಾಮರ್ಥ್ಯಕ್ಕೆ ನೆರವಾಗಬಹುದು.

ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ:
ಕೆಲವು ಅಧ್ಯಯನಗಳ ಪ್ರಕಾರ, ತುಳಸಿ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗಬಹುದು. ಆದಾಗ್ಯೂ, ಮಧುಮೇಹ ಇರುವವರು ವೈದ್ಯರ ಸಲಹೆಯೊಂದಿಗೆ ಮಾತ್ರ ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳುವುದು ಸೂಕ್ತ.

ಜೀರ್ಣಕ್ರಿಯೆ ಸುಧಾರಿಸುತ್ತದೆ:
ತುಳಸಿ ಬೀಜಗಳು ಫೈಬರ್‌ ಸಮೃದ್ಧವಾಗಿರುವುದರಿಂದ ಜೀರ್ಣಾಂಗದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡಬಹುದು. ಬೆಳಿಗ್ಗೆ ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆ ಕಡಿಮೆಯಾಗಲು ನೆರವಾಗಬಹುದು.

ತೂಕ ನಿಯಂತ್ರಣಕ್ಕೆ ಸಹಾಯ:
ತುಳಸಿ ಬೀಜಗಳಲ್ಲಿ ಫೈಬರ್ ಅಧಿಕವಾಗಿದ್ದು, ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಇವು ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚು ಸಮಯ ನೀಡುವುದರಿಂದ ಅತಿಯಾಗಿ ಆಹಾರ ಸೇವಿಸುವುದನ್ನು ನಿಯಂತ್ರಿಸಿ ತೂಕ ಇಳಿಕೆಗೆ ಸಹಕಾರಿಯಾಗಬಹುದು.

ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ:
ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳನ್ನು ಕಡಿಮೆ ಮಾಡಲು ತುಳಸಿ ಬೀಜಗಳು ಸಹಕಾರಿಯಾಗಬಹುದು. ಒಂದು ಚಮಚ ತುಳಸಿ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿ, ಅವು ಉಬ್ಬಿದ ಬಳಿಕ ಸೇವಿಸಿದರೆ ಜೀರ್ಣಕ್ರಿಯೆಗೆ ನೆರವಾಗುತ್ತದೆ ಎಂದು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ.

ಸೇವಿಸುವಾಗ ಗಮನಿಸಬೇಕಾದ ವಿಷಯ

ತುಳಸಿ ಬೀಜಗಳನ್ನು ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಮಧುಮೇಹ, ರಕ್ತದೊತ್ತಡ ಅಥವಾ ಇತರ ಆರೋಗ್ಯ ಸಮಸ್ಯೆಗಳಿಗೆ ಔಷಧಿ ಸೇವಿಸುತ್ತಿರುವವರು ಹಾಗೂ ಗರ್ಭಿಣಿಯರು ವೈದ್ಯರ ಸಲಹೆ ಪಡೆದ ಬಳಿಕವೇ ತುಳಸಿ ಬೀಜಗಳನ್ನು ನಿಯಮಿತ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.

POCSO Case: ಅಪ್ರಾಪ್ತ ಬಾಲಕಿಗೆ ಕಿರುಕುಳ ಆರೋಪ; ಹಿಂದಿ ಕಿರುತೆರೆ ನಟ ರೋಹಿತ್ ಚಂದೇಲ್ ಅರೆಸ್ಟ್

0

ಮುಂಬೈ: ಹಿಂದಿ ಕಿರುತೆರೆಯ ಖ್ಯಾತ ನಟ ರೋಹಿತ್ ಚಂದೇಲ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

16 ವರ್ಷದ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆರೋಪದಡಿ ನಟನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬಾಲಕಿಯನ್ನು ಹಿಂಬಾಲಿಸುವುದು, ಕಿರುಕುಳ ನೀಡುವುದು ಹಾಗೂ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

29 ವರ್ಷದ ರೋಹಿತ್ ಚಂದೇಲ್ ಅವರು ‘ಪಾಂಡ್ಯ ಸ್ಟೋರ್’ ಹಾಗೂ ‘ಕಾಶಿಬಾಯಿ ಬಾಜೀರಾವ್ ಬಲ್ಲಾಳ್’ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿದ್ದರು. ಪಂತ್ ನಗರ ಪೊಲೀಸರು ದಹಿಸರ್‌ನಲ್ಲಿರುವ ಅವರ ನಿವಾಸದಿಂದ ಬಂಧಿಸಿ, ಬಳಿಕ ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯವು ನಟನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ದೂರಿನ ಪ್ರಕಾರ, ನಟ ರೋಹಿತ್ ಅವರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಯಿಂದ ಬಾಲಕಿಗೆ ಪದೇ ಪದೇ ಕರೆ ಮಾಡುತ್ತಿದ್ದರು ಎನ್ನಲಾಗಿದೆ. ಬೇರೆ ಬೇರೆ ಸಂಖ್ಯೆಗಳ ಮೂಲಕವೂ ಸಂಪರ್ಕಿಸಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಜುಲೈ 5ರಂದು ಮುಂಬೈನ ಉಪನಗರ ಪ್ರದೇಶದಲ್ಲಿ ಬಾಲಕಿಯಿದ್ದ ಸ್ಥಳಕ್ಕೆ ಬಂದಿದ್ದ ನಟ, ಆಕೆಯನ್ನು ಹಿಂಬಾಲಿಸಿ ಗಲಾಟೆ ನಡೆಸಿ, ನಿಂದಿಸಿ ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಟ ಮತ್ತು ಬಾಲಕಿಗೆ ಮೊದಲೇ ಪರಿಚಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಶಿರಸಿ ಬಳಿ ದುರಂತ: ಈಜಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲು!

ಕಾರವಾರ: ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಉಂಚಳ್ಳಿ ಸಮೀಪದ ಮಾಸ್ತಿಜಡ್ಡಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಮಾಸ್ತಿಜಡ್ಡಿ ಗ್ರಾಮದ ಮದನ್ ನಾಯ್ಕ (17) ಹಾಗೂ ಹೊನ್ನಾವರದ ಲೋಹಿತ್ ನಾಯ್ಕ (19) ಎಂದು ಗುರುತಿಸಲಾಗಿದೆ.

ಗ್ರಾಮದ ಹಳ್ಳಕ್ಕೆ ನಿರ್ಮಿಸಲಾಗಿದ್ದ ಬಾಂದಾರದಲ್ಲಿ ಈಜಲು ತೆರಳಿದ್ದ ವೇಳೆ ಇಬ್ಬರೂ 15 ಅಡಿ ಆಳದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಶ್ರೀ ಮಾರಿಕಾಂಬ ರೆಸ್ಕ್ಯೂ ಟೀಮ್‌ನ ಗೋಪಾಲ ಗೌಡ ನೇತೃತ್ವದ ತಂಡ ಶೋಧ ಕಾರ್ಯ ನಡೆಸಿ ಇಬ್ಬರ ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದೆ.

ಘಟನಾ ಸ್ಥಳಕ್ಕೆ ಬನವಾಸಿ ಠಾಣೆ ಪಿಎಸ್‌ಐ ಮಹಾಂತಪ್ಪ ಕುಂಬಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶಿರಸಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕೊಪ್ಪಳದಲ್ಲಿ ದುರಂತ: ವ್ಯಸನ ಮುಕ್ತ ಕೇಂದ್ರದಲ್ಲಿದ್ದ ಪೊಲೀಸ್ ಪೇದೆ ನೇಣಿಗೆ ಶರಣು

ಕೊಪ್ಪಳ: ವ್ಯಸನ ಮುಕ್ತ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೊಲೀಸ್ ಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕುಷ್ಟಗಿಯಲ್ಲಿ ನಡೆದಿದೆ.

ಮೃತರನ್ನು ಶರಣಪ್ಪ ಉಪ್ಪಾರ (49) ಎಂದು ಗುರುತಿಸಲಾಗಿದೆ. ಇವರು ಮುನಿರಾಬಾದ್ ಐಆರ್‌ಬಿಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮದ್ಯ ವ್ಯಸನಕ್ಕೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲಿಸಲಾಗಿತ್ತು ಎಂದು ತಿಳಿದುಬಂದಿದೆ.

ಎರಡು ದಿನಗಳ ಹಿಂದೆ ಶರಣಪ್ಪ ಅವರು ವ್ಯಸನ ಮುಕ್ತ ಕೇಂದ್ರದಿಂದ ತಮ್ಮನ್ನು ಮನೆಗೆ ಕರೆದುಕೊಂಡು ಹೋಗುವಂತೆ ಪತ್ನಿಗೆ ಕರೆ ಮಾಡಿದ್ದರು. ಆದರೆ ಮನೆಗೆ ಕರೆದುಕೊಂಡು ಹೋಗದಿದ್ದರಿಂದ ಮನನೊಂದು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಈ ಘಟನೆ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.