Home Blog Page 227

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ʼಗೆ ರವಿಚಂದ್ರನ್ ಅಶ್ವಿನ್ ಆಯ್ಕೆ ಮಾಡಿದ ಬಲಿಷ್ಠ ತಂಡ ಹೀಗಿದೆ..!

0

ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 15ರಿಂದ ಗಾಲೆಯಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯವು 2025–27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿ ದೃಷ್ಟಿಯಿಂದ ಟೀಮ್ ಇಂಡಿಯಾಗೆ ಅತ್ಯಂತ ಮಹತ್ವದ್ದಾಗಿದೆ.

ಈ ಹಿನ್ನೆಲೆಯಲ್ಲಿ ಭಾರತ ತಂಡದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೊದಲ ಟೆಸ್ಟ್‌ಗೆ ತಮ್ಮ ಸಂಭಾವ್ಯ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದು, ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಲಹೆ ಭಾರೀ ಚರ್ಚೆಗೆ ಕಾರಣವಾಗಿದೆ.

ಶ್ರೀಲಂಕಾದ ಪಿಚ್‌ಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಬೇಕು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ರವೀಂದ್ರ ಜಡೇಜಾ, ಮಾನವ್ ಸುತಾರ್, ಸಾರಾನ್ಶ್ ಜೈನ್ ಹಾಗೂ ಕುಲ್ದೀಪ್ ಯಾದವ್ ಅವರನ್ನು ಒಂದೇ ತಂಡದಲ್ಲಿ ಆಡಿಸಿದರೆ, ಅವರ ವಿಭಿನ್ನ ಬೌಲಿಂಗ್ ಶೈಲಿಗೆ ಶ್ರೀಲಂಕಾ ಬ್ಯಾಟರ್‌ಗಳು ಹೊಂದಿಕೊಳ್ಳುವುದು ಕಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.

ಅಶ್ವಿನ್ ಪ್ರಕಾರ, ರವೀಂದ್ರ ಜಡೇಜಾ ಕೇವಲ ಪ್ರಮುಖ ಸ್ಪಿನ್ನರ್ ಮಾತ್ರವಲ್ಲ, ಪರಿಣಿತ ಬ್ಯಾಟರ್‌ನ ಪಾತ್ರವನ್ನೂ ಯಶಸ್ವಿಯಾಗಿ ನಿಭಾಯಿಸಬಲ್ಲ ಆಟಗಾರ. ಮತ್ತೊಂದೆಡೆ ದೇಶೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಸಾರಾನ್ಶ್ ಜೈನ್ ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಅವರಿಗೆ ಏಳನೇ ಕ್ರಮಾಂಕದಲ್ಲಿ ಅವಕಾಶ ನೀಡಬಹುದು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಮಾನವ್ ಸುತಾರ್ ಕಳೆದ ಟೆಸ್ಟ್‌ನಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ಕಾರಣ ಅವರಿಗೆ ತಂಡದಲ್ಲಿ ಸ್ಥಾನ ಖಚಿತ ಎಂದು ಅಶ್ವಿನ್ ಹೇಳಿದ್ದಾರೆ. ತಜ್ಞ ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯಲಿದ್ದು, ಸ್ಪಿನ್ ವಿಭಾಗವನ್ನು ನಾಲ್ವರು ಬೌಲರ್‌ಗಳು ಮುನ್ನಡೆಸಬಹುದು ಎಂದು ಅವರು ವಿವರಿಸಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್. ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಅಥವಾ ದೇವದತ್ ಪಡಿಕ್ಕಲ್‌ಗೆ ಅವಕಾಶ ಸಿಗಬಹುದು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ನಾಯಕ ಶುಭ್‌ಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ, ರಿಷಭ್ ಪಂತ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ.

ವೇಗದ ಬೌಲಿಂಗ್ ವಿಭಾಗದಲ್ಲಿ ಭಾರತ ತಂಡದಲ್ಲಿ ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ನಡುವೆ ಪೈಪೋಟಿ ಇದೆ. ಈ ಮೂವರಲ್ಲಿ ಇಬ್ಬರಿಗೆ ಅವಕಾಶ ನೀಡುವ ಮೂಲಕ ಜಸ್‌ಪ್ರೀತ್ ಬುಮ್ರಾಗೆ ಮೊದಲ ಟೆಸ್ಟ್‌ನಲ್ಲಿ ವಿಶ್ರಾಂತಿ ನೀಡುವುದು ಸೂಕ್ತ ಎಂದು ಅಶ್ವಿನ್ ಸಲಹೆ ನೀಡಿದ್ದಾರೆ. ಸರಣಿಯ ಉದ್ದ ಹಾಗೂ ಬುಮ್ರಾ ಅವರ ಫಿಟ್‌ನೆಸ್ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಉತ್ತಮವಾಗಿರಬಹುದು ಎಂಬುದು ಅವರ ಅಭಿಪ್ರಾಯ.

ಅಶ್ವಿನ್ ಆಯ್ಕೆ ಮಾಡಿದ ಭಾರತ ಸಂಭಾವ್ಯ ಪ್ಲೇಯಿಂಗ್ XI:

  • ಯಶಸ್ವಿ ಜೈಸ್ವಾಲ್
  • ಕೆ.ಎಲ್. ರಾಹುಲ್
  • ಸಾಯಿ ಸುದರ್ಶನ್ / ದೇವದತ್ ಪಡಿಕ್ಕಲ್
  • ಶುಭ್‌ಮನ್ ಗಿಲ್ (ನಾಯಕ)
  • ರಿಷಭ್ ಪಂತ್ (ವಿಕೆಟ್ ಕೀಪರ್)
  • ರವೀಂದ್ರ ಜಡೇಜಾ
  • ಸಾರಾನ್ಶ್ ಜೈನ್
  • ಮಾನವ್ ಸುತಾರ್
  • ಕುಲ್ದೀಪ್ ಯಾದವ್
  • ಗುರ್ನೂರ್ ಬ್ರಾರ್
  • ಮೊಹಮ್ಮದ್ ಸಿರಾಜ್ / ಪ್ರಸಿದ್ಧ್ ಕೃಷ್ಣ

ಅಶ್ವಿನ್ ಅವರ ಈ ಸಂಭಾವ್ಯ ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳಿಗೆ ಅವಕಾಶ ನೀಡಿರುವುದು ಹಾಗೂ ಜಸ್‌ಪ್ರೀತ್ ಬುಮ್ರಾ ಅವರನ್ನು ಹೊರಗಿಟ್ಟು ವಿಶ್ರಾಂತಿ ನೀಡುವ ಸಲಹೆ ಇದೀಗ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮೊದಲ ಟೆಸ್ಟ್‌ಗೆ ಭಾರತ ತಂಡದ ಅಂತಿಮ ಆಡುವ ಹನ್ನೊಂದರಲ್ಲಿ ಯಾವ ಆಟಗಾರರಿಗೆ ಅವಕಾಶ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಡಿಸಿಸಿ ಬ್ಯಾಂಕ್‌ನಲ್ಲಿ ಮತ್ತೊಂದು ಭಾರೀ ವಂಚನೆ! ₹65 ಲಕ್ಷ ಎಗರಿಸಿ ಮ್ಯಾನೇಜರ್ ಪರಾರಿ

0

ಬಾಗಲಕೋಟೆ, ಜು.29: ಜಿಲ್ಲೆಯ ಡಿಸಿಸಿ ಬ್ಯಾಂಕ್‌ನಲ್ಲಿ ಮತ್ತೊಮ್ಮೆ ಭಾರೀ ಹಣಕಾಸು ಅಕ್ರಮ ಬೆಳಕಿಗೆ ಬಂದಿದೆ. ಲೋಕಾಪುರ ಶಾಖೆಯ ಬ್ರಾಂಚ್ ಮ್ಯಾನೇಜರ್ ಗುರುರಾಜ್ ಶಿವರಾಜ್ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ₹65 ಲಕ್ಷವನ್ನು ತಮ್ಮ ವೈಯಕ್ತಿಕ ಖಾತೆಗೆ ಅಕ್ರಮವಾಗಿ ವರ್ಗಾಯಿಸಿಕೊಂಡು ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ತನಿಖೆ ಪ್ರಕಾರ, ಕಳೆದ 12 ವರ್ಷಗಳಿಂದ ಲೋಕಾಪುರ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಮ್ಯಾನೇಜರ್ ಆಗಿದ್ದ ಗುರುರಾಜ್ ಶಿವರಾಜ್, ಮಾರ್ಚ್ 31ರಂದು ಬ್ಯಾಂಕ್‌ನ ಎಸ್‌ಬಿಐ ಖಾತೆಯಿಂದ ತಮ್ಮ ಐಡಿಎಫ್‌ಸಿ ಬ್ಯಾಂಕ್ ವೈಯಕ್ತಿಕ ಖಾತೆಗೆ ₹65 ಲಕ್ಷ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ದೀರ್ಘ ರಜೆಯ ಹಿನ್ನೆಲೆಯಲ್ಲಿ ಹೊಸ ಮ್ಯಾನೇಜರ್ ಅಧಿಕಾರ ಸ್ವೀಕರಿಸಿದ ವೇಳೆ ಲೆಕ್ಕಪತ್ರ ಪರಿಶೀಲನೆಯಲ್ಲಿ ಈ ಅಕ್ರಮ ಬಹಿರಂಗವಾಗಿದೆ.

ಅಕ್ರಮ ಬೆಳಕಿಗೆ ಬರುತ್ತಿದ್ದಂತೆಯೇ ಗುರುರಾಜ್ ಬ್ಯಾಂಕ್‌ಗೆ ಗೈರಾಗಿದ್ದು, ಕಳೆದ ನಾಲ್ಕು ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಲೋಕಾಪುರ ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಗಮನಾರ್ಹವಾಗಿ, ಇದೇ ಡಿಸಿಸಿ ಬ್ಯಾಂಕ್‌ನ ಅಮೀನಗಢ ಹಾಗೂ ಕಮತಗಿ ಶಾಖೆಗಳಲ್ಲಿ ಈ ಹಿಂದೆ ₹12 ಕೋಟಿ ವಂಚನೆ ಪ್ರಕರಣ ನಡೆದಿತ್ತು. ಇದೀಗ ಮತ್ತೊಮ್ಮೆ ಬ್ಯಾಂಕ್ ಅಧಿಕಾರಿಯೇ ಕೋಟ್ಯಂತರದ ಹಣಕಾಸು ಅಕ್ರಮದಲ್ಲಿ ಸಿಲುಕಿರುವುದು ಬ್ಯಾಂಕ್ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಅವಧಿ ಮೀರಿದ ಔಷಧಿ ನೀಡಿದ ಆರೋಪ: ದಾವಣಗೆರೆಯಲ್ಲಿ 11 ತಿಂಗಳ ಮಗು ಸಾವು.! ಪೋಷಕರ ಆಕ್ರೋಶ

0

ದಾವಣಗೆರೆ: ಹೊನ್ನಾಳಿ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಅವಧಿ ಮುಗಿದ ಔಷಧಿ ನೀಡಿದ ಪರಿಣಾಮ 11 ತಿಂಗಳ ಮಗು ಮೃತಪಟ್ಟಿದೆ ಎಂಬ ಆರೋಪ ಕೇಳಿಬಂದಿದೆ.

ಹೊನ್ನಾಳಿ ತಾಲೂಕಿನ ಹನುಮನಹಳ್ಳಿ ಗ್ರಾಮದ ವಸುಂಧರ ಮತ್ತು ಲೋಕೇಶ್ ದಂಪತಿಯ ಪುತ್ರಿ ಪೂರ್ವಿಕ ಮೃತಪಟ್ಟ ಮಗು.

ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾಸ್ವೆಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ನೀಡಿದ ಔಷಧಿ ಹಾಕಿದ ಬಳಿಕ ಮಗುವಿನ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಔಷಧಿ ನೀಡಿದ ಕೆಲವೇ ಸಮಯದಲ್ಲಿ ಮಗು ಮೃತಪಟ್ಟಿದ್ದು, ಅವಧಿ ಮುಗಿದ ಔಷಧಿ ನೀಡಿರುವುದೇ ಸಾವಿಗೆ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ: ಡಿಕೆ ಶಿವಕುಮಾರ್ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಬೆಂಗಳೂರು: 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನಗಳು 50ರಿಂದ 60ಕ್ಕೆ ಇಳಿಯಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರ ಈ ನಿರ್ಧಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಭಾರಿ ಹಿನ್ನಡೆಯಾಗಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮುಂದೆ ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲರು ಹಾಗೂ ನ್ಯಾಯವಾದಿಗಳು ರಾಜ್ಯದ ನೀರಿನ ಲಭ್ಯತೆ ಕುರಿತು ಸಮಗ್ರ ಮಾಹಿತಿಯನ್ನು ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.

“ಕರ್ನಾಟಕದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕಾವೇರಿ ಕೊಳ್ಳದ ರೈತರು ಮಳೆಯ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು CWRC ಸೂಚನೆಗೂ ಮುನ್ನವೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದೆ” ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

CWRC ಆದೇಶದ ಹಿನ್ನೆಲೆಯಲ್ಲಿ ರಾಜ್ಯವು ಇನ್ನಷ್ಟು ನೀರು ಹರಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಇದರಿಂದ ಕಾವೇರಿ ಜಲಾನಯನ ಪ್ರದೇಶದ ರೈತರು ಕುಡಿಯುವ ನೀರಿಗೂ ಸಮಸ್ಯೆ ಎದುರಿಸುವ ಆತಂಕವಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ವಾಸ್ತವ ಪರಿಸ್ಥಿತಿ, ಜಲಾಶಯಗಳಲ್ಲಿನ ನೀರಿನ ಪ್ರಮಾಣ ಹಾಗೂ ರೈತರ ಸಂಕಷ್ಟದ ಬಗ್ಗೆ ಸರ್ಕಾರವು CWRC ಮುಂದೆ ಸಮರ್ಪಕವಾಗಿ ಮಾಹಿತಿ ನೀಡಬೇಕಿತ್ತು ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

ರೈತರಿಗೆ ಬಿಗ್ ರಿಲೀಫ್: ಭೂಸ್ವಾಧೀನ ಅಧಿಸೂಚನೆ ರದ್ದು ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್!

ಬೆಂಗಳೂರು: ನೈಸ್ (ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್) ರಸ್ತೆ ಯೋಜನೆಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ವಶಪಡಿಸಿಕೊಳ್ಳಲಾಗಿದ್ದ ಜಮೀನಿನ ಭೂಸ್ವಾಧೀನ ಅಧಿಸೂಚನೆ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಎತ್ತಿಹಿಡಿದಿದೆ.

ಈ ಆದೇಶದಿಂದ ನೈಸ್ ರಸ್ತೆ ಯೋಜನೆಗಾಗಿ ಜಮೀನು ಕಳೆದುಕೊಂಡಿದ್ದ ರೈತರಿಗೆ ಸದ್ಯ ನಿರಾಳತೆ ಸಿಕ್ಕಿದೆ. ಭೂಸ್ವಾಧೀನ ಅಧಿಸೂಚನೆ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ನೈಸ್ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ನೇತೃತ್ವದ ವಿಭಾಗೀಯ ಪೀಠ, ಮೇಲ್ಮನವಿಯನ್ನು ವಜಾಗೊಳಿಸಿ ಆದೇಶ ನೀಡಿದೆ.

ನೈಸ್ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಕೆರೆಗಳು ಹಾಗೂ ಖಾಸಗಿ ಜಮೀನುಗಳನ್ನು ಅತಿಕ್ರಮಿಸಲಾಗಿದೆ ಎಂಬ ಆರೋಪಗಳಿದ್ದು, ಈ ಎಲ್ಲಾ ವಿಚಾರಗಳ ಕುರಿತು ಉನ್ನತ ಮಟ್ಟದ ತನಿಖೆ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ರಸ್ತೆ ಬಳಕೆದಾರರಿಂದ ದೊಡ್ಡ ಪ್ರಮಾಣದಲ್ಲಿ ಟೋಲ್ ಶುಲ್ಕ ಸಂಗ್ರಹಿಸಲಾಗಿದ್ದರೂ, ಭೂಮಿ ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರ ನೀಡದೆ ಜಮೀನು ವಶಪಡಿಸಿಕೊಳ್ಳಲಾಗಿದೆ ಎಂಬ ಆರೋಪಗಳನ್ನೂ ನ್ಯಾಯಾಲಯ ಗಮನಿಸಿದೆ.

ನೈಸ್ ಸಂಸ್ಥೆಯ ಅಕ್ರಮಗಳ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಪ್ರಕ್ರಿಯೆ ಕುರಿತು ಸ್ವತಂತ್ರ ತನಿಖೆ ಹಾಗೂ ಫೊರೆನ್ಸಿಕ್ ಆಡಿಟ್ ನಡೆಸುವ ಅಗತ್ಯವಿದೆ ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಭೂಸ್ವಾಧೀನ ರದ್ದುಪಡಿಸಿರುವ ಆದೇಶವನ್ನು ಪ್ರಶ್ನಿಸಿ ನೈಸ್ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಭಾಗೀಯ ಪೀಠ ತಿರಸ್ಕರಿಸಿದೆ. ಹೈಕೋರ್ಟ್‌ನ ಈ ಆದೇಶವು ನೈಸ್ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ.

‘ರಾಮಾಯಣ’ ಟ್ರೈಲರ್ ಲೀಕ್ : ರಾವಣನಾಗಿ ಯಶ್ ರೌದ್ರಾವತಾರ

ಅಧಿಕೃತ ಬಿಡುಗಡೆಗೂ ಮುನ್ನವೇ ‘ರಾಮಾಯಣ’ ಟ್ರೈಲರ್ ಲೀಕ್ ಆಗಿದ್ದು, ಸಿನಿಮಾ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ಪ್ರದರ್ಶಿಸಲಾದ ಟ್ರೈಲರ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಿಗೆ ಸೋರಿಕೆಯಾಗಿದ್ದು, ರಾವಣನಾಗಿ ಯಶ್ ಅವರ ರೌದ್ರ ಎಂಟ್ರಿಯೇ ಟ್ರೈಲರ್‌ನ ಹೈಲೈಟ್ ಆಗಿದೆ.

ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿರುವ ಕಾರಣ ವಿಡಿಯೋ ಗುಣಮಟ್ಟ ಕಡಿಮೆಯಿದ್ದರೂ, ಚಿತ್ರದ ದೃಶ್ಯ ವೈಭವ ಮತ್ತು ನಿರ್ಮಾಣ ಮೌಲ್ಯಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಘರ್ಜಿಸುತ್ತಿರುವ ಸಿಂಹದ ಎದುರು ನಿಂತು ಅದನ್ನೇ ತನ್ನ ಪ್ರಭಾವದಿಂದ ಮೌನಗೊಳಿಸುವ ರಾವಣನ ದೃಶ್ಯ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಜೊತೆಗೆ ಬಾಹುಗಳನ್ನು ಚಾಚಿ ಸಂಭಾಷಣೆ ಹೇಳುವ ಯಶ್ ಅವರ ಮಾಸ್ ಅವತಾರವೂ ಭಾರೀ ಮೆಚ್ಚುಗೆ ಪಡೆಯುತ್ತಿದೆ.

ಟ್ರೈಲರ್‌ನಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಶೂರ್ಪಣಖಿಯಾಗಿ ರಕುಲ್ ಪ್ರೀತ್ ಸಿಂಗ್, ಹನುಮಂತ ಸೇರಿದಂತೆ ಹಲವು ಪ್ರಮುಖ ಪಾತ್ರಗಳ ಝಲಕ್ ನೀಡಲಾಗಿದೆ. ರಾಮನ ವನವಾಸ, ಸೀತಾ ಕಲ್ಯಾಣ, ಶೂರ್ಪಣಖಿಯ ಮೂಗು ಕತ್ತರಿಸುವ ಪ್ರಸಂಗ, ದಶರಥ-ರಾಮ ಭಾವನಾತ್ಮಕ ಕ್ಷಣಗಳು ಸೇರಿದಂತೆ ಮಹಾಕಾವ್ಯದ ಪ್ರಮುಖ ಅಧ್ಯಾಯಗಳನ್ನು ಚಿತ್ರತಂಡ ಟ್ರೈಲರ್‌ನಲ್ಲಿ ಅನಾವರಣಗೊಳಿಸಿದೆ.

ಚಿತ್ರತಂಡ ಜುಲೈ 30ರಂದು ಬೆಳಿಗ್ಗೆ 4:15ಕ್ಕೆ ಅಧಿಕೃತ ಟ್ರೈಲರ್ ಬಿಡುಗಡೆ ಮಾಡಲಿದ್ದು, ಲೀಕ್ ವಿಡಿಯೋ ಬಳಿಕ ಅದರ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಸುಮಾರು ₹2,000 ಕೋಟಿ ವೆಚ್ಚದಲ್ಲಿ ಎರಡು ಭಾಗಗಳಾಗಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಚಿತ್ರಕ್ಕೆ ನಿತೇಶ್ ತಿವಾರಿ ನಿರ್ದೇಶನವಿದ್ದು, ನಮಿತ್ ಮಲ್ಹೋತ್ರಾ ನಿರ್ಮಾಪಕರಾಗಿದ್ದಾರೆ. ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್ ಹಾಗೂ ಕಾಜಲ್ ಅಗರ್ವಾಲ್ ಅಭಿನಯಿಸಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಇದೇ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗ ಮುಂದಿನ ವರ್ಷದ ನವೆಂಬರ್‌ನಲ್ಲಿ ತೆರೆಗೆ ಬರಲಿದೆ.

ಭಾರತ ತಂಡಕ್ಕೆ ಹೊಸ ಫೀಲ್ಡಿಂಗ್ ಬಾಸ್ : ಟಿ. ದಿಲೀಪ್ ಸ್ಥಾನಕ್ಕೆ ಸುಭದೀಪ್ ಘೋಷ್ ಎಂಟ್ರಿ

0

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಫೀಲ್ಡಿಂಗ್ ವಿಭಾಗಕ್ಕೆ ಹೊಸ ಸಾರಥಿ ಸಿಕ್ಕಿದ್ದಾರೆ. ಟಿ. ದಿಲೀಪ್ ಅವರ ಒಪ್ಪಂದವನ್ನು ನವೀಕರಿಸದಿರಲು ಬಿಸಿಸಿಐ ನಿರ್ಧರಿಸಿದ ಬೆನ್ನಲ್ಲೇ, ಅನುಭವಿ ಕೋಚ್ ಸುಭದೀಪ್ ಘೋಷ್ ಅವರನ್ನು ಟೀಮ್ ಇಂಡಿಯಾದ ಹೊಸ ಫೀಲ್ಡಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಗೌತಮ್ ಗಂಭೀರ್ ನೇತೃತ್ವದ ಕೋಚಿಂಗ್ ತಂಡದಲ್ಲಿ ಸೇರ್ಪಡೆಯಾಗಿರುವ ಘೋಷ್, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದಲೇ ಹೊಸ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಕ್ರಿಕೆಟ್ ವಲಯದಲ್ಲಿ ‘ಜಾಯ್’ ಎಂದೇ ಪರಿಚಿತರಾಗಿರುವ ಸುಭದೀಪ್ ಘೋಷ್, ಅಸ್ಸಾಂ ಹಾಗೂ ರೈಲ್ವೇಸ್ ಪರ ದೇಶೀಯ ಕ್ರಿಕೆಟ್ ಆಡಿದ್ದರು. ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ಆಫ್ ಸ್ಪಿನ್ನರ್ ಆಗಿದ್ದ ಅವರು, ತಮ್ಮ ಚುರುಕಿನ ಫೀಲ್ಡಿಂಗ್‌ನಿಂದ ವಿಶೇಷ ಗುರುತಿಸಿಕೊಂಡಿದ್ದರು. 17 ಪ್ರಥಮ ದರ್ಜೆ ಮತ್ತು 17 ಲಿಸ್ಟ್-ಎ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದರು.

ಆಟಗಾರನಾಗಿ ನಿವೃತ್ತಿಯಾದ ಬಳಿಕ ಬಿಸಿಸಿಐ ತರಬೇತಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಿದ ಘೋಷ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಈಗಿನ ಸೆಂಟರ್ ಆಫ್ ಎಕ್ಸಲೆನ್ಸ್)ಯಲ್ಲಿ ಕಳೆದ ಹಲವು ವರ್ಷಗಳಿಂದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2024ರ ಅಂಡರ್-19 ವಿಶ್ವಕಪ್‌ನಲ್ಲಿ ರನ್ನರ್‌ಅಪ್ ಆದ ಭಾರತ ತಂಡ, ಇಂಡಿಯಾ-ಎ ತಂಡಗಳು ಹಾಗೂ ಭಾರತೀಯ ಮಹಿಳಾ ತಂಡದೊಂದಿಗೆ ಅವರು ಕೆಲಸ ಮಾಡಿದ್ದರು.

2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಪುರುಷರ ತಂಡದ ಕೋಚಿಂಗ್ ಸಿಬ್ಬಂದಿಯಲ್ಲೂ ಅವರು ಸ್ಥಾನ ಪಡೆದಿದ್ದರು. ಇತ್ತೀಚೆಗೆ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಭಾರತೀಯ ಯುವ ತಂಡಕ್ಕೂ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

ಐಪಿಎಲ್‌ನಲ್ಲೂ ಅಪಾರ ಅನುಭವ ಹೊಂದಿರುವ ಸುಭದೀಪ್ ಘೋಷ್, 2014ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪ್ರಶಸ್ತಿ ಗೆದ್ದಾಗ ಕೋಚಿಂಗ್ ಸಿಬ್ಬಂದಿಯಲ್ಲಿದ್ದರು. ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೂ ಕೆಲಸ ಮಾಡಿದ್ದರು. ಈಗ ಟೀಮ್ ಇಂಡಿಯಾದ ಫೀಲ್ಡಿಂಗ್ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ಅವರ ಹೆಗಲೇರಿದೆ.

ದೇಶದ ಜನತೆಗೆ ಗುರು ಪೂರ್ಣಿಮೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ: ಗುರುವಿನ ಮಹತ್ವ ಸಾರಿದ ಸಂಸ್ಕೃತ ಶ್ಲೋಕ

0

ನವದೆಹಲಿ: ಗುರು ಪೂರ್ಣಿಮೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯ ಕೋರಿದ್ದಾರೆ. ಗುರುಗಳು ಕೇವಲ ಅಕ್ಷರ ಜ್ಞಾನ ನೀಡುವವರಲ್ಲ, ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಶಕ್ತಿ, ಉತ್ತಮ ಚಿಂತನೆ ಹಾಗೂ ಮೌಲ್ಯಗಳನ್ನು ಬೆಳೆಸಿ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಶಕ್ತಿಯಾಗಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಗುರುವಿನ ಮಹತ್ವವನ್ನು ವಿವರಿಸುವ ಸಂಸ್ಕೃತ ಸುಭಾಷಿತವೊಂದನ್ನು ಉಲ್ಲೇಖಿಸಿದ್ದಾರೆ.

“ಪ್ರೇರಕಃ ಸೂಚಕಶ್ಚೈವ ವಾಚಕೋ ದರ್ಶಕಸ್ತಥಾ। ಶಿಕ್ಷಕಃ ಬೋಧಕಶ್ಚೈವ ಷಡೇತೇ ಗುರವಃ ಸ್ಮೃತಾಃ”

ಈ ಶ್ಲೋಕದ ಅರ್ಥವನ್ನು ವಿವರಿಸಿರುವ ಪ್ರಧಾನಿ, ಪ್ರೇರಕ ಪ್ರೇರಣೆ ನೀಡುವವನು, ಸೂಚಕ ಸರಿಯಾದ ದಾರಿಯನ್ನು ತೋರಿಸುವವನು, ವಾಚಕ ಜ್ಞಾನವನ್ನು ಹಂಚುವವನು, ದರ್ಶಕ ಸನ್ಮಾರ್ಗದತ್ತ ಮುನ್ನಡೆಸುವವನು, ಶಿಕ್ಷಕ ವಿದ್ಯೆ ಮತ್ತು ಕೌಶಲ್ಯ ಬೋಧಿಸುವವನು ಹಾಗೂ ಬೋಧಕ ಜೀವನದ ಸತ್ಯವನ್ನು ಅರಿವಿಗೆ ತರುವವನು ಎಂದು ಹೇಳಿದ್ದಾರೆ. ಈ ಆರು ರೂಪಗಳೂ ಗುರುವಿನ ಶ್ರೇಷ್ಠ ಸ್ವರೂಪಗಳೆಂದು ಸ್ಮರಿಸಿದ್ದಾರೆ.

ಪ್ರಧಾನಿ ತಮ್ಮ ಸಂದೇಶದಲ್ಲಿ, “ಗುರುವು ಜ್ಞಾನ ಧಾರೆ ಎರೆಯುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತಾರೆ. ಸದುಲೋಚನೆ ಹಾಗೂ ಸಂಸ್ಕಾರಗಳೊಂದಿಗೆ ಅವರನ್ನು ಸುಶಿಕ್ಷಿತರನ್ನಾಗಿ ರೂಪಿಸುತ್ತಾರೆ. ಅಂತಹ ಮಹಾನ್ ಗುರುಗಳ ಆದರ್ಶಗಳನ್ನು ನಮ್ಮ ಬದುಕಿನ ದಾರಿದೀಪವನ್ನಾಗಿ ಮಾಡಿಕೊಳ್ಳೋಣ” ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.

ಪ್ರೇಯಸಿಗೆ ಕೊನೆಯ ಕರೆ ಮಾಡಿ ರೈಲಿಗೆ ತಲೆಕೊಟ್ಟ ಯುವಕ: 400 ಮೀಟರ್ ದೂರದಲ್ಲಿ ಪತ್ತೆಯಾದ ರುಂಡು!

0

ಬೆಂಗಳೂರು: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಬೆಳವಣಿಗೆಯೊಂದು ಬೆಳಕಿಗೆ ಬಂದಿದೆ. ಮೊದಲಿಗೆ ತಲೆಯಿಲ್ಲದ ಮೃತದೇಹ ಮಾತ್ರ ಪತ್ತೆಯಾಗಿದ್ದರೆ, ಇದೀಗ ಘಟನೆಯ ಮರುದಿನ ರುಂಡು ಸುಮಾರು 400 ಮೀಟರ್ ದೂರದ ಮೈದಾನದಲ್ಲಿ ಪತ್ತೆಯಾಗಿದೆ. ಮೃತನನ್ನು ಆಂಧ್ರ ಪ್ರದೇಶ ಮೂಲದ 28 ವರ್ಷದ ವಿಶ್ವನಾಥ್ ಎಂದು ಗುರುತಿಸಲಾಗಿದೆ.

ಆರಂಭದಲ್ಲಿ ತಲೆಯಿಲ್ಲದ ಮೃತದೇಹ ಮಾತ್ರ ಪತ್ತೆಯಾಗಿದ್ದರಿಂದ ರೈಲ್ವೆ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ ಮಂಗಳವಾರ ಸ್ಥಳೀಯರು ಮೈದಾನದಲ್ಲಿ ಮಾನವ ತಲೆ ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಆತ್ಮಹತ್ಯೆ ಮಾಡಿಕೊಂಡಿದ್ದ ವಿಶ್ವನಾಥ್ ಅವರ ರುಂಡು ಎಂಬುದು ದೃಢಪಟ್ಟಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ರೈಲಿಗೆ ತಲೆಕೊಟ್ಟ ಪರಿಣಾಮ ದೇಹ ಮತ್ತು ರುಂಡು ಬೇರ್ಪಟ್ಟಿದ್ದು, ಬಳಿಕ ನಾಯಿಗಳು ರುಂಡನ್ನು ಸುಮಾರು 400 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದ್ದವು ಎಂದು ಶಂಕಿಸಲಾಗಿದೆ. ಪತ್ತೆಯಾದ ರುಂಡನ್ನು ವರ್ತೂರು ಪೊಲೀಸರು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ.

ಇದೇ ವೇಳೆ ತನಿಖೆಯಲ್ಲಿ ಮತ್ತೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ. ಆತ್ಮಹತ್ಯೆಗೆ ಮುನ್ನ ವಿಶ್ವನಾಥ್ ತಮ್ಮ ಪ್ರೇಯಸಿಗೆ ಕರೆ ಮಾಡಿ ಮಾತನಾಡಿದ್ದರು. ಆ ಮಾತುಕತೆಯ ಬಳಿಕವೇ ಅವರು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಜೀವ ಅಂತ್ಯಗೊಳಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನೆಗೆ ನಿಖರ ಕಾರಣ ಏನು? ಪ್ರೇಮ ವೈಫಲ್ಯವೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದರ ಕುರಿತು ರೈಲ್ವೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಯುವಜನರ ಧ್ವನಿಯನ್ನು ಗೌರವಿಸಿ: ನೀಟ್ ಪ್ರತಿಭಟನೆ ಕುರಿತು ಕೇಂದ್ರಕ್ಕೆ ರಾಹುಲ್ ಗಾಂಧಿ ಸಲಹೆ

0

ನವದೆಹಲಿ: ಯುವಜನರ ಧ್ವನಿಯನ್ನು ಎಲ್ಲಾ ರಾಜಕೀಯ ಪಕ್ಷಗಳು ಗೌರವಿಸಬೇಕು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026’ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗಳನ್ನು ಸಮರ್ಥಿಸಿಕೊಂಡರು.

ವಿದ್ಯಾರ್ಥಿಗಳ ಪ್ರತಿಭಟನೆ ಯಾವುದೇ ಕೋಪ, ಹಿಂಸೆ ಅಥವಾ ದ್ವೇಷದ ಅಭಿವ್ಯಕ್ತಿಯಲ್ಲ. ಅದು “ಭಾರತದ ಯುವಜನತೆಯ ಭರವಸೆಯ ಅಭಿವ್ಯಕ್ತಿ” ಎಂದು ರಾಹುಲ್ ಗಾಂಧಿ ಹೇಳಿದರು.

ತಮ್ಮ ಆತಂಕ ಹಾಗೂ ದುಗುಡವನ್ನು ವ್ಯಕ್ತಪಡಿಸಲು ಯುವಕರು ಬೀದಿಗಿಳಿದಿರುವುದು ದೇಶದ ಭವಿಷ್ಯದ ಬಗ್ಗೆ ವಿಶ್ವಾಸ ಮೂಡಿಸಿದೆ. ದೇಶದ ಭವಿಷ್ಯವಾಗಿರುವ ಯುವಜನರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವುದನ್ನು ನೋಡಿದಾಗ ನನಗೆ ಸಂತೋಷ ಹಾಗೂ ಭರವಸೆ ಮೂಡಿದೆ ಎಂದು ಅವರು ಹೇಳಿದರು.

ಪ್ರತಿಭಟನೆಗಳು ಮುಂದಿನ ಪೀಳಿಗೆಯ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ ರಾಹುಲ್ ಗಾಂಧಿ, ಇದು ಕೋಪ ಅಥವಾ ಹಿಂಸೆಯ ಸಂಕೇತವಲ್ಲ. ದೇಶದ ಯುವಜನರ ಮತ್ತು ಭವಿಷ್ಯದ ಪೀಳಿಗೆಯ ಧ್ವನಿಯಾಗಿದೆ ಎಂದು ತಿಳಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳು ಸತ್ಯ ಮತ್ತು ಜ್ಞಾನದ ಹುಡುಕಾಟದಲ್ಲಿದ್ದಾರೆ. ಯುವ ಸಮುದಾಯದ ಧ್ವನಿಯನ್ನು ಸರ್ಕಾರ ನಿರ್ಲಕ್ಷಿಸದೆ ಆಲಿಸಬೇಕು ಎಂದು ಹೇಳಿದರು.

ಬಿಜೆಪಿಯಲ್ಲಿರುವ ತಮ್ಮ ಸ್ನೇಹಿತರು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಯುವಜನರ ಅಭಿವ್ಯಕ್ತಿಯನ್ನು ಗೌರವಿಸಬೇಕು. ಯುವಕರ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಒತ್ತಿ ಹೇಳಿದರು.