ಚೆನ್ನೈ: ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಕ್ರಾಂತಿ ಮೂಡಿಸಿದ್ದ ಖ್ಯಾತ ನಿರ್ದೇಶಕ, ನಟ ಭಾರತಿ ರಾಜ (86) ಅವರು ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ವೃದ್ಧಾಪ್ಯ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಗ್ರಾಮೀಣ ಬದುಕಿನ ಸೊಗಡನ್ನು ಬೆಳ್ಳಿತೆರೆಯಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಭಾರತಿ ರಾಜ, 1977ರ ‘16 ವಯತಿನಿಲೆ’ ಚಿತ್ರದ ಮೂಲಕ ನಿರ್ದೇಶಕರಾಗಿ ಭಾರೀ ಯಶಸ್ಸು ಕಂಡಿದ್ದರು. ನಂತರ ‘ಕಿಲಕ್ಕೆ ಪೋಗುಂ ರೈಲು’, ‘ಸಿಗಪ್ಪು ರೋಜಕ್ಕಲ್’, ‘ಅಲೈಗಲ್ ಓಯಿವತಿಲ್ಲೈ’, ‘ಕಾದಲ್ ಓವಿಯಂ’ ಹಾಗೂ ‘ಮುದಲ್ ಮರಿಯಾಥೈ’ ಚಿತ್ರಗಳ ಮೂಲಕ ತಮಿಳು ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದರು.
ಚಿತ್ರರಂಗದ ಪಯಣ ಆರಂಭಿಸುವ ಮುನ್ನ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಭಾರತಿ ರಾಜ, ಅಲ್ಲಿಯೇ ನಿರ್ದೇಶನದ ಸೂಕ್ಷ್ಮತೆಗಳನ್ನು ಕಲಿತಿದ್ದರು. ಕನ್ನಡದಲ್ಲಿ ಸಿನಿಮಾ ಮಾಡದಿದ್ದರೂ ಕನ್ನಡಿಗರೊಂದಿಗೆ ವಿಶೇಷ ನಂಟು ಹೊಂದಿದ್ದರು.
ತೆಲುಗಿನಲ್ಲಿ ‘ಸೀತಕೋಕ ಚಿಲುಕ’, ‘ಆರಾಧನಾ’, ‘ಜಮದಗ್ನಿ’, ‘ಈ ತರಂ ಇಲ್ಲು’, ‘ಎರ್ರಾ ಗುಲಾಬಿಲು’, ‘ಟಿಕ್ ಟಿಕ್ ಟಿಕ್’, ‘ಕೊತ್ತ ಜೀವನಲು’ ಹಾಗೂ ‘ಯುವತರಂ ಪಿಲಿಚಿಂಡಿ’ ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿ ಅಪಾರ ಮೆಚ್ಚುಗೆ ಗಳಿಸಿದ್ದರು.
2020ರಲ್ಲಿ ಬಿಡುಗಡೆಯಾದ ‘ಮೀಂದುಮ್ ಒರು ಮರಿಯಾಥೈ’ ಅವರ ಕೊನೆಯ ನಿರ್ದೇಶನದ ಸಿನಿಮಾ. ಬಳಿಕ ಅವರು ಯಾವುದೇ ಚಿತ್ರ ನಿರ್ದೇಶಿಸಿರಲಿಲ್ಲ. ನಟನಾಗಿಯೂ ಯಶಸ್ವಿ ವೃತ್ತಿಜೀವನ ಕಟ್ಟಿಕೊಂಡಿದ್ದ ಅವರು, ಅನೇಕ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದರು.
ಕಳೆದ ವರ್ಷ ಪುತ್ರ ಹಾಗೂ ನಟ-ನಿರ್ದೇಶಕ ಮನೋಜ್ ಭಾರತಿರಾಜ ಅವರ ನಿಧನದಿಂದ ಭಾರತಿ ರಾಜ ತೀವ್ರವಾಗಿ ಮನನೊಂದಿದ್ದರು. ಆ ದುಃಖದಿಂದ ಹೊರಬರಲು ಕುಟುಂಬದೊಂದಿಗೆ ಕೆಲಕಾಲ ವಿದೇಶದಲ್ಲಿ ಕಾಲ ಕಳೆದಿದ್ದರು. ಇದೀಗ ಅವರ ಅಗಲಿಕೆಯಿಂದ ಭಾರತೀಯ ಸಿನಿರಂಗದ ದಿಗ್ಗಜರ ಪೀಳಿಗೆಯ ಮತ್ತೊಂದು ಕೊಂಡಿ ಕಳಚಿದಂತಾಗಿದೆ. ಚಿತ್ರರಂಗದ ಗಣ್ಯರು, ಅಭಿಮಾನಿಗಳು ಹಾಗೂ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

