Home Blog Page 22

ಅಂಬೇಡ್ಕರ್–ಬುದ್ಧ–ಬಸವಣ್ಣ ಅವಹೇಳನ ಖಂಡಿಸಿ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣನವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪದ ಹಿನ್ನೆಲೆಯಲ್ಲಿ ವೇದಮೂರ್ತಿ ಎಂಬುವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ–ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ದೊಡ್ಡಯಾಚೆನಹಳ್ಳಿಯ ವೇದಮೂರ್ತಿ ಅವರು ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಮೀಸಲಾತಿ ಸೇರಿದಂತೆ ಸಂವಿಧಾನಾತ್ಮಕ ವಿಚಾರಗಳ ಬಗ್ಗೆಯೂ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದಲ್ಲದೆ, ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆಯಿದೆ. ಹೀಗಾಗಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಪೌರಕಾರ್ಮಿಕರು ಭೇಟಿ ಮಾಡಿ, ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಮನವಿ ಮಾಡಿದಾಗ ಸಚಿವರು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಏರಿಕೆಯ ಸಂದರ್ಭದಲ್ಲಿ ಕನಿಷ್ಠ ವೇತನದಲ್ಲಿ ಕುಟುಂಬ ನಿರ್ವಹಿಸುವುದು ಕಷ್ಟವಾಗಿದ್ದು, ಪೌರಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಚಿವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಹಾಗೂ ಅವರ ವಿರುದ್ಧ ಕ್ರಮ ಜರುಗಿಸಿ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದರು.

ವಕೀಲ ಎಂ.ಬಿ. ನದಾಫ, ಪರವೀನಬಾನು ಹವಾಲ್ದಾರ, ಶರಣಪ್ಪ ಸೂಡಿ, ಇಬ್ರಾಹಿಂ ಮುಲ್ಲಾ, ಮೆಹಬೂಬಸಾಬ ಬಳ್ಳಾರಿ, ಪುಷ್ಪಾ ಬಿಜಾಪುರ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಸಾಕ್ರುಬಾಯಿ ಗೋಸಾವಿ, ಮಕ್ತುಮಸಾಬ ಮುಲ್ಲಾನವರ, ಅಫ್ರೋಜಾ ಗುಳಗುಂದಿ, ಗೌಸಸಾಬ ಅಕ್ಕಿ, ರವಿ ಗೋಸಾವಿ, ಮಾಲಾ ಗೋಸಾವಿ ಸೇರಿದಂತೆ ವಿವಿಧ ಸ್ಲಂ ಪ್ರದೇಶಗಳ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅವಹೇಳನಕಾರಿ ಹೇಳಿಕೆ ನೀಡಿರುವ ವೇದಮೂರ್ತಿ ವಿರುದ್ಧ ಕಠಿಣ ಕ್ರಮ ಜರುಗಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು. ಪೌರಕಾರ್ಮಿಕರನ್ನು ಅವಮಾನಿಸಿದ ಸಚಿವ ಕೃಷ್ಣ ಬೈರೇಗೌಡ ಅವರೂ ಕ್ಷಮೆ ಕೇಳಬೇಕು.

— ಇಮ್ತಿಯಾಜ್ ಆರ್. ಮಾನ್ವಿ, ಸ್ಲಂ ಸಮಿತಿ ಅಧ್ಯಕ್ಷ

ಬರದ ನಡುವೆಯೇ ಜಾನುವಾರುಗಳಿಗೆ ‘ಅಜೋಲಾ’ ಪೌಷ್ಟಿಕ ಮೇವು!

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು/ಗದಗ: ಮಳೆಯ ಅಭಾವ, ಹಸಿರು ಮೇವಿನ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದ ಜಾನುವಾರು ಸಾಕಣೆದಾರರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ, ಜಾನುವಾರುಗಳಿಗೆ ಸ್ಥಳೀಯವಾಗಿಯೇ ಪೌಷ್ಟಿಕ ಪೂರಕ ಮೇವು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ರಾಜ್ಯದಾದ್ಯಂತ ₹3.78 ಕೋಟಿ ವೆಚ್ಚದಲ್ಲಿ 12,000 ಅಜೋಲಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ.

ಜಾನುವಾರುಗಳಿಗೆ, ಅದರಲ್ಲೂ ಹಾಲು ನೀಡುವ ದನ-ಕರುಗಳಿಗೆ ಅಗತ್ಯವಾದ ಪ್ರೋಟೀನ್, ಖನಿಜಾಂಶ ಸೇರಿದಂತೆ ಹಲವು ಪೌಷ್ಟಿಕಾಂಶಗಳನ್ನು ಹೊಂದಿರುವ ಅಜೋಲಾವನ್ನು ಪೂರಕ ಆಹಾರವಾಗಿ ಬಳಸಬಹುದಾಗಿದೆ. ಹಸಿರು ಮೇವಿನ ಕೊರತೆಯ ಸಂದರ್ಭದಲ್ಲಿ ರೈತರಿಗೆ ಕಡಿಮೆ ವೆಚ್ಚದಲ್ಲಿ ಲಭ್ಯವಾಗುವ ಪರ್ಯಾಯ ಪೌಷ್ಟಿಕ ಮೇವಾಗಿ ಅಜೋಲಾ ನೆರವಾಗಲಿದೆ.

ರಾಜ್ಯದ 31 ಜಿಲ್ಲೆಗಳ 240 ತಾಲ್ಲೂಕುಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ಜಿಲ್ಲಾವಾರು ಭೌತಿಕ ಮತ್ತು ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. ಪ್ರತಿ ಅಜೋಲಾ ಘಟಕಕ್ಕೆ ಗರಿಷ್ಠ ₹3,150 ವೆಚ್ಚ ಅಂದಾಜಿಸಲಾಗಿದೆ.

ಬಾಗಲಕೋಟೆ ಮತ್ತು ತುಮಕೂರು ಜಿಲ್ಲೆಗಳಿಗೆ ತಲಾ 500, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಗಳಿಗೆ ತಲಾ 450 ಘಟಕಗಳನ್ನು ಹಂಚಿಕೆ ಮಾಡಲಾಗಿದೆ. ಬೀದರ್, ಚಿಕ್ಕಬಳ್ಳಾಪುರ, ಧಾರವಾಡ, ಹಾಸನ, ಹಾವೇರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ತಲಾ 400 ಘಟಕಗಳು; ಕೊಪ್ಪಳ, ಮಂಡ್ಯ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಿಗೆ ತಲಾ 350 ಘಟಕಗಳನ್ನು ನಿಗದಿಪಡಿಸಲಾಗಿದೆ.

ಚಿತ್ರದುರ್ಗ, ದಾವಣಗೆರೆ, ಕೋಲಾರ, ವಿಜಯನಗರ ಹಾಗೂ ಯಾದಗಿರಿ ಜಿಲ್ಲೆಗಳಿಗೆ ತಲಾ 300; ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ಕೊಡಗು ಹಾಗೂ ರಾಮನಗರ ಜಿಲ್ಲೆಗಳಿಗೆ ತಲಾ 250 ಘಟಕಗಳ ಗುರಿ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 200 ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ಕಡಿಮೆ ಜಾಗ, ಕಡಿಮೆ ವೆಚ್ಚದಲ್ಲೇ ಘಟಕ

ಅಜೋಲಾ ಘಟಕಗಳನ್ನು ರೈತರ ಮನೆ ಅಥವಾ ಕೊಟ್ಟಿಗೆಯ ಸಮೀಪವೇ ಕಡಿಮೆ ಜಾಗದಲ್ಲಿ ನಿರ್ಮಿಸಬಹುದಾಗಿದೆ. ಸುಮಾರು 10 ಅಡಿ ಉದ್ದ, 4 ಅಡಿ ಅಗಲ ಹಾಗೂ 1 ಅಡಿ ಆಳದ ಘಟಕವನ್ನು ನಿರ್ಮಿಸಲಾಗುತ್ತದೆ.

ಪ್ರತಿ ಘಟಕದ ₹3,150 ವೆಚ್ಚದಲ್ಲಿ ಯುವಿ-ಸ್ಟೆಬಿಲೈಸ್ಡ್ ಎಚ್‌ಡಿಪಿಇ ಶೀಟ್‌ಗೆ ₹1,350, ನೆರಳು ಬಲೆ ಹಾಗೂ ಬಿದಿರು/ಜಿಐ ಫ್ರೇಮ್‌ಗೆ ₹650, ಫಲವತ್ತಾದ ಮಣ್ಣು, ಸಗಣಿ ಮತ್ತು ಸೂಪರ್ ಫಾಸ್ಫೇಟ್ ಮಿಶ್ರಣಕ್ಕೆ ₹250 ಹಾಗೂ ಎರಡು ಕೆ.ಜಿ. ಅಜೋಲಾ ತಳಿ/ಬೀಜಕ್ಕೆ ₹200 ವೆಚ್ಚವಾಗಲಿದೆ. ಸಾಮಗ್ರಿಗಳಿಗೆ ₹2,450 ಹಾಗೂ ಸ್ಥಳ ಸಿದ್ಧತೆ, ತೊಟ್ಟಿ ಅಳವಡಿಕೆ, ಸಂರಕ್ಷಣೆ ಮತ್ತು ಬೀಜ ಬಿತ್ತನೆಗೆ ಎರಡು ಮಾನವ ದಿನಗಳ ಕೂಲಿ ವೆಚ್ಚವಾಗಿ ₹700 ನಿಗದಿಪಡಿಸಲಾಗಿದೆ.

ಸ್ವಚ್ಛ ನೀರಿರುವ ಸ್ಥಳಕ್ಕಷ್ಟೇ ಆದ್ಯತೆ

ಜಿಲ್ಲೆಗೆ ನಿಗದಿಪಡಿಸಿದ ಗುರಿಯನ್ನು ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿವಾರು ಹಂಚಿಕೆ ಮಾಡಿ, ಸೂಕ್ತ ಸ್ಥಳ ಮತ್ತು ನೀರಿನ ಲಭ್ಯತೆ ಹೊಂದಿರುವ ಜಾನುವಾರು ಸಾಕಣೆದಾರರನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಲಾಗುತ್ತದೆ. ಕಲುಷಿತ ನೀರಿನಲ್ಲಿ ಅಜೋಲಾ ಬೆಳೆಸುವುದರಿಂದ ಮಾಲಿನ್ಯಕಾರಕಗಳ ಅಪಾಯ ಇರುವ ಹಿನ್ನೆಲೆಯಲ್ಲಿ ಸ್ವಚ್ಛ ನೀರಿನ ಲಭ್ಯತೆ ಇರುವ ಸ್ಥಳಗಳನ್ನಷ್ಟೇ ಆಯ್ಕೆ ಮಾಡಲಾಗುತ್ತದೆ.

ಫಲಾನುಭವಿಗಳಿಗೆ ಅಜೋಲಾ ಉತ್ಪಾದನೆ, ಕೊಯ್ಲು, ಸ್ವಚ್ಛತೆ, ಸಂಸ್ಕರಣೆ ಹಾಗೂ ಜಾನುವಾರುಗಳಿಗೆ ನೀಡುವ ವಿಧಾನ ಕುರಿತು ತಾಂತ್ರಿಕ ತರಬೇತಿ ನೀಡಲಾಗುತ್ತದೆ. ಯೋಜನೆಯನ್ನು VB-G RAM G ಮಾರ್ಗಸೂಚಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗೆ ಒಳಪಟ್ಟು ಅನುಷ್ಠಾನಗೊಳಿಸಲಾಗುತ್ತದೆ.

ಪ್ರತಿ ಘಟಕದ ಫಲಾನುಭವಿಯ ವಿವರ, ಆಧಾರ್, ಜಿಪಿಎಸ್ ಸ್ಥಳ ಹಾಗೂ ಘಟಕದ ಕಾರ್ಯನಿರ್ವಹಣೆಯ ಮೊದಲು ಮತ್ತು ನಂತರದ ಛಾಯಾಚಿತ್ರಗಳನ್ನು ಕಡ್ಡಾಯವಾಗಿ ದಾಖಲಿಸಲಾಗುತ್ತದೆ. ಜಿಲ್ಲಾ ಉಪನಿರ್ದೇಶಕರು ಮಾಸಿಕ ವೇಳಾಪಟ್ಟಿ ಸಿದ್ಧಪಡಿಸಿ ಯೋಜನೆ ಅನುಷ್ಠಾನಗೊಳಿಸಲಿದ್ದು, ಪ್ರತಿ ತಿಂಗಳ 5ರೊಳಗೆ ಪ್ರಗತಿ ವರದಿಯನ್ನು ರಾಜ್ಯ ಕಚೇರಿಗೆ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.

ಅಜೋಲಾ ಯೋಜನೆಯ ಪ್ರಮುಖ ಅಂಶಗಳು

  • ಒಟ್ಟು ವೆಚ್ಚ: ₹3.78 ಕೋಟಿ
  • ಒಟ್ಟು ಘಟಕಗಳು: 12,000
  • ಜಿಲ್ಲೆಗಳು: 31
  • ತಾಲ್ಲೂಕುಗಳು: 240
  • ಪ್ರತಿ ಘಟಕದ ವೆಚ್ಚ: ₹3,150
  • ಗದಗ ಜಿಲ್ಲೆಯ ಗುರಿ: 350 ಘಟಕ
  • ಗದಗಕ್ಕೆ ಅನುದಾನ: ₹11.02 ಲಕ್ಷ
  • ಘಟಕದ ಗಾತ್ರ: 10 × 4 × 1 ಅಡಿ

ಗದಗ ಜಿಲ್ಲೆಗೆ 350 ಘಟಕ

ಗದಗ ಜಿಲ್ಲೆಯ ಏಳು ತಾಲ್ಲೂಕುಗಳಿಗೆ 350 ಅಜೋಲಾ ಘಟಕಗಳ ಗುರಿ ನೀಡಲಾಗಿದ್ದು, ಇದಕ್ಕಾಗಿ ₹11.02 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. ಇದೇ ರೀತಿ ಬೆಳಗಾವಿ ಜಿಲ್ಲೆಗೆ 750, ವಿಜಯಪುರಕ್ಕೆ 650, ಉತ್ತರ ಕನ್ನಡಕ್ಕೆ 600 ಹಾಗೂ ಕಲಬುರಗಿಗೆ 550 ಘಟಕಗಳ ಗುರಿ ನೀಡಲಾಗಿದೆ.

ರಾತ್ರಿ ಪದೇಪದೇ ಎಚ್ಚರವಾಗುವುದನ್ನು ನಿರ್ಲಕ್ಷಿಸಬೇಡಿ; ಕಾರಣ ಹೀಗಿರಬಹುದು!

0

ರಾತ್ರಿ ಮಲಗಿದ ಬಳಿಕ ಒಮ್ಮೆ ಎಚ್ಚರವಾಗುವುದು ಸಾಮಾನ್ಯ. ಆದರೆ ಪ್ರತಿದಿನ ಅಥವಾ ಪದೇಪದೇ ನಿದ್ರೆ ಭಂಗವಾಗಿ, ಎಚ್ಚರವಾದ ಬಳಿಕ ಮತ್ತೆ ನಿದ್ರೆ ಬರದೆ ಪರದಾಡುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು.

ಬೆಳಗ್ಗೆ ಎದ್ದಾಗ ದಣಿವು, ಹಗಲಿನಲ್ಲಿ ನಿದ್ರೆ, ಕಿರಿಕಿರಿ ಅಥವಾ ಏಕಾಗ್ರತೆ ಕಡಿಮೆಯಾಗುತ್ತಿದ್ದರೆ ನಿದ್ರೆಗೆ ಅಡ್ಡಿಯಾಗುತ್ತಿರುವ ಕಾರಣವನ್ನು ಪತ್ತೆಹಚ್ಚುವುದು ಅಗತ್ಯ.

ರಾತ್ರಿ ಪದೇಪದೇ ಎಚ್ಚರವಾಗಲು ಒತ್ತಡ, ಆತಂಕ, ಮಲಗುವ ಕೋಣೆಯಲ್ಲಿ ಹೆಚ್ಚು ಬೆಳಕು ಅಥವಾ ಶಬ್ದ, ಅತಿಯಾದ ಬಿಸಿ ಅಥವಾ ಚಳಿ ಹಾಗೂ ಅಸೌಕರ್ಯದ ಹಾಸಿಗೆ ಅಥವಾ ದಿಂಬು ಕಾರಣವಾಗಬಹುದು.

ಇದರ ಜೊತೆಗೆ ಸಂಜೆ ಅಥವಾ ರಾತ್ರಿ ಹೆಚ್ಚು ಚಹಾ, ಕಾಫಿ ಸೇರಿದಂತೆ ಕೆಫೀನ್‌ಯುಕ್ತ ಪಾನೀಯ ಸೇವಿಸುವುದರಿಂದ ಕೆಲವರ ನಿದ್ರೆಗೆ ತೊಂದರೆಯಾಗಬಹುದು. ಆಲ್ಕೋಹಾಲ್ ಸೇವನೆಯೂ ನಿದ್ರೆಯ ನಿರಂತರತೆಯ ಮೇಲೆ ಪರಿಣಾಮ ಬೀರಬಹುದು. ಪದೇಪದೇ ಮೂತ್ರವಿಸರ್ಜನೆ, ನೋವು, ಕೆಲವು ಔಷಧಿಗಳು ಹಾಗೂ ಇತರ ಆರೋಗ್ಯ ಸಮಸ್ಯೆಗಳೂ ರಾತ್ರಿ ನಿದ್ರೆ ಭಂಗಕ್ಕೆ ಕಾರಣವಾಗಬಹುದು.

ಇನ್ಸೋಮ್ನಿಯಾ ಅಥವಾ ನಿದ್ರಾಹೀನತೆ ಎಂದರೆ ನಿದ್ರೆ ಬರಲು ಕಷ್ಟವಾಗುವುದು ಮಾತ್ರವಲ್ಲ. ರಾತ್ರಿ ಪದೇಪದೇ ಎಚ್ಚರವಾಗುವುದು, ಎಚ್ಚರವಾದ ಬಳಿಕ ಮತ್ತೆ ನಿದ್ರೆ ಬಾರದಿರುವುದು ಅಥವಾ ಬೆಳಗಿನ ಜಾವ ಬೇಗ ಎಚ್ಚರವಾಗಿ ಮತ್ತೆ ನಿದ್ರೆ ಮಾಡಲು ಸಾಧ್ಯವಾಗದಿರುವುದೂ ಇದರ ಲಕ್ಷಣಗಳಾಗಬಹುದು.

ಈ ಸಮಸ್ಯೆ ನಿರಂತರವಾದರೆ ಹಗಲಿನಲ್ಲಿ ದಣಿವು, ಕಿರಿಕಿರಿ, ನೆನಪಿನ ಶಕ್ತಿ ಹಾಗೂ ಏಕಾಗ್ರತೆಯಲ್ಲಿ ತೊಂದರೆ ಉಂಟಾಗಬಹುದು.

ರಾತ್ರಿ ಮಲಗುವಾಗ ಜೋರಾಗಿ ಗೊರಕೆ ಹೊಡೆಯುವುದು, ನಿದ್ರೆಯಲ್ಲಿ ಉಸಿರಾಟ ನಿಂತಂತೆ ಕಾಣಿಸುವುದು, ಏಕಾಏಕಿ ಉಸಿರಿಗಾಗಿ ಎಚ್ಚರವಾಗುವುದು, ಬೆಳಗ್ಗೆ ತಲೆನೋವು ಹಾಗೂ ಹಗಲಿನಲ್ಲಿ ಅತಿಯಾದ ನಿದ್ರೆ ಸ್ಲೀಪ್ ಅಪ್ನಿಯಾದ ಸೂಚನೆಗಳಾಗಿರಬಹುದು.

ಸ್ಲೀಪ್ ಅಪ್ನಿಯಾದಲ್ಲಿ ನಿದ್ರೆಯ ಸಮಯದಲ್ಲಿ ಉಸಿರಾಟ ಪದೇಪದೇ ಅಡ್ಡಿಯಾಗುತ್ತದೆ. ಕೆಲವೊಮ್ಮೆ ವ್ಯಕ್ತಿಗಿಂತ ಅವರ ಕುಟುಂಬದ ಸದಸ್ಯರೇ ಈ ಲಕ್ಷಣಗಳನ್ನು ಮೊದಲು ಗಮನಿಸುತ್ತಾರೆ.

ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಒಂದೇ ಸಮಯಕ್ಕೆ ಏಳುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ. ಹಗಲಿನಲ್ಲಿ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಮಲಗುವ ಮುನ್ನ ಮೊಬೈಲ್, ಟಿವಿ ಹಾಗೂ ಲ್ಯಾಪ್‌ಟಾಪ್ ಬಳಕೆಯನ್ನು ಕಡಿಮೆ ಮಾಡಿ.

ಸಂಜೆಯ ಬಳಿಕ ಕೆಫೀನ್ ಸೇವನೆಯನ್ನು ಮಿತಿಗೊಳಿಸಿ. ಮಲಗುವ ಕೋಣೆ ಶಾಂತ, ಕತ್ತಲೆ ಹಾಗೂ ಆರಾಮದಾಯಕ ತಾಪಮಾನ ಹೊಂದಿರುವಂತೆ ನೋಡಿಕೊಳ್ಳಿ.

ನಿದ್ರೆಯ ಸಮಸ್ಯೆ ನಿರಂತರವಾಗಿ ಮುಂದುವರಿದು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ ಸ್ವಯಂ ನಿದ್ರೆ ಮಾತ್ರೆಗಳನ್ನು ಸೇವಿಸದೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ವಿಶೇಷವಾಗಿ ಗೊರಕೆಯೊಂದಿಗೆ ಉಸಿರಾಟ ನಿಲ್ಲುವುದು ಅಥವಾ ಹಗಲಿನಲ್ಲಿ ತೀವ್ರ ನಿದ್ರೆ ಕಾಣಿಸಿಕೊಳ್ಳುತ್ತಿದ್ದರೆ ಸ್ಲೀಪ್ ಅಪ್ನಿಯಾ ಪರೀಕ್ಷೆ ಅಗತ್ಯವಿದೆಯೇ ಎಂಬುದನ್ನು ವೈದ್ಯರಿಂದ ತಿಳಿದುಕೊಳ್ಳುವುದು ಉತ್ತಮ.

‘ಗಿಮಿಕ್’ ಅಲ್ಲ, ‘ಗ್ರೇಟ್ ಜಾಬ್’: ಸಿಎಂ ಎಪಿಎಂಸಿ ಭೇಟಿಗೆ ಹೈಕೋರ್ಟ್‌ ಮೆಚ್ಚುಗೆ

0

ಬೆಂಗಳೂರು: ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದನ್ನು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಪ್ರಶಂಸಿಸಿದ್ದಾರೆ.

ಕಾರ್ಮಿಕ ಪ್ರಕರಣವೊಂದರ ವಿಚಾರಣೆ ವೇಳೆ ಸಿಎಂ ಭೇಟಿಯನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ಯಾರಾದರೂ ಇದನ್ನು ಗಿಮಿಕ್ ಎಂದು ಕರೆಯಬಹುದು. ಆದರೆ ಇದು ‘ಗ್ರೇಟ್ ಜಾಬ್’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ಭೇಟಿ ವೇಳೆ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಶುಂಠಿ ದರಗಳನ್ನು ಪರಿಶೀಲಿಸಿದ್ದರು. ಅಲ್ಲದೆ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರೊಂದಿಗೆ ಮಾತನಾಡಿದ್ದನ್ನು ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಉಲ್ಲೇಖಿಸಿದ್ದಾರೆ.

ಎಪಿಎಂಸಿ ಮಳಿಗೆಗಳು ಕೆಲವರ ಹೆಸರಿನಲ್ಲಿದ್ದು, ಬೇರೆಯವರು ಅಲ್ಲಿ ಬಾಡಿಗೆದಾರರಾಗಿ ವ್ಯವಹಾರ ನಡೆಸುತ್ತಿರುವ ಪರಿಸ್ಥಿತಿಯ ಬಗ್ಗೆಯೂ ನ್ಯಾಯಮೂರ್ತಿಗಳು ಪ್ರಸ್ತಾಪಿಸಿದ್ದಾರೆ.

ದೇವನಹಳ್ಳಿ: ಕಪ್ಪು ಪಲ್ಸರ್‌ನಲ್ಲಿ ಬಂದು ಸರಗಳ್ಳತನ; ಖದೀಮರಿಗಾಗಿ ಪೊಲೀಸರ ಶೋಧ!

0

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊರವಲಯದಲ್ಲಿ ಕದ್ದ ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಖದೀಮರು ಸರಣಿ ಸರಗಳ್ಳತನ ನಡೆಸಿದ್ದಾರೆ.

ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಖದೀಮರು ನೆಲಮಂಗಲದಲ್ಲಿ ಕಪ್ಪು ಬಣ್ಣದ ಪಲ್ಸರ್ ಬೈಕ್ ಕಳವು ಮಾಡಿ ಅದೇ ಬೈಕ್‌ನಲ್ಲಿ ಸರಗಳ್ಳತನ ನಡೆಸಿದ್ದಾರೆ. ಹೊಸಕೋಟೆ ಹಾಗೂ ದೇವನಹಳ್ಳಿ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದು, ನಂದಗುಡಿ, ಸೂಲಿಬೆಲೆ ಹಾಗೂ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ.

ಮಾಲೂರು ಹಾಗೂ ದೇವನಹಳ್ಳಿ ಭಾಗದಲ್ಲೂ ಸರಗಳ್ಳತನಕ್ಕೆ ಖದೀಮರು ಯತ್ನಿಸಿದ್ದಾರೆ. ಆದರೆ ಈ ಎರಡೂ ಕಡೆ ಕೃತ್ಯ ವಿಫಲವಾಗಿದೆ.

ಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು, ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಪೀಣ್ಯ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಬಂದ ಖದೀಮರು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಆರೋಪಿಗಳು ಏಕಾಏಕಿ ದಾಳಿ ನಡೆಸಿ ನೆಲಕ್ಕೆ ಬೀಳಿಸಿ ಮಾಂಗಲ್ಯ ಸರ ಕಿತ್ತುಕೊಂಡಿದ್ದರು. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಿಮ್ಮ ದೇಹದಲ್ಲಿ ಮ್ಯಾಗ್ನೀಷಿಯಂ ಕಡಿಮೆಯಾಗಿದೆಯೇ? ಈ ಸೂಚನೆಗಳನ್ನು ನಿರ್ಲಕ್ಷಿಸಬೇಡಿ

0

ದೇಹದ ಆರೋಗ್ಯಕ್ಕೆ ವಿಟಮಿನ್‌ಗಳಷ್ಟೇ ಅಲ್ಲ, ವಿವಿಧ ಖನಿಜಾಂಶಗಳೂ ಅಗತ್ಯ. ಅವುಗಳಲ್ಲಿ ಮ್ಯಾಗ್ನೀಷಿಯಂ ಪ್ರಮುಖವಾದದ್ದು. ಸ್ನಾಯು ಮತ್ತು ನರಗಳ ಕಾರ್ಯ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ರಕ್ತದೊತ್ತಡದ ನಿರ್ವಹಣೆ, ಶಕ್ತಿ ಉತ್ಪಾದನೆ ಹಾಗೂ ಮೂಳೆಗಳ ಆರೋಗ್ಯದಲ್ಲಿ ಮ್ಯಾಗ್ನೀಷಿಯಂ ಪ್ರಮುಖ ಪಾತ್ರ ವಹಿಸುತ್ತದೆ.

ಮ್ಯಾಗ್ನೀಷಿಯಂ ಕೊರತೆಯಾದರೆ ಏನಾಗುತ್ತದೆ?

ಮ್ಯಾಗ್ನೀಷಿಯಂ ಕೊರತೆ ಆರಂಭಿಕ ಹಂತದಲ್ಲಿ ಸ್ಪಷ್ಟವಾಗಿ ಗೋಚರಿಸದೇ ಇರಬಹುದು. ಆದರೆ ಕೆಲವರಲ್ಲಿ ನಿರಂತರ ದಣಿವು, ದೌರ್ಬಲ್ಯ, ಹಸಿವು ಕಡಿಮೆಯಾಗುವುದು, ವಾಕರಿಕೆ, ಸ್ನಾಯು ಸೆಳೆತ ಹಾಗೂ ಕಾಲುಗಳಲ್ಲಿ ಮರಗಟ್ಟಿದ ಅನುಭವ ಕಾಣಿಸಿಕೊಳ್ಳಬಹುದು.

ಕೊರತೆ ತೀವ್ರವಾದರೆ ಕೈ-ಕಾಲುಗಳಲ್ಲಿ ಜುಮ್ಮೆನಿಸುವುದು, ಸ್ನಾಯುಗಳ ಅಸಹಜ ಸೆಳೆತ ಹಾಗೂ ಹೃದಯ ಬಡಿತದಲ್ಲಿ ಅಸಹಜತೆ ಸೇರಿದಂತೆ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇಂತಹ ಸಮಸ್ಯೆಗಳು ನಿರಂತರವಾಗಿ ಕಂಡುಬಂದರೆ ಸ್ವಯಂ ಔಷಧಿ ಸೇವಿಸುವ ಬದಲು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.

ಮ್ಯಾಗ್ನೀಷಿಯಂ ಕೊರತೆಯಿಂದ ಕ್ಯಾನ್ಸರ್ ಬರುತ್ತದೆಯೇ?

ಮ್ಯಾಗ್ನೀಷಿಯಂ ಕೊರತೆಯೇ ನೇರವಾಗಿ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬುದನ್ನು ಪ್ರಸ್ತುತ ಲಭ್ಯವಿರುವ ಮಾಹಿತಿಯಿಂದ ದೃಢಪಡಿಸಲು ಸಾಧ್ಯವಿಲ್ಲ. ಮ್ಯಾಗ್ನೀಷಿಯಂ ದೇಹದ ಹಲವು ಜೈವಿಕ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರ ವಹಿಸಿದರೂ, ಅದರ ಕೊರತೆ ಮತ್ತು ಕ್ಯಾನ್ಸರ್ ನಡುವೆ ನೇರ ಕಾರಣ-ಪರಿಣಾಮ ಸಂಬಂಧವನ್ನು ದೃಢಪಡಿಸಲು ಇನ್ನಷ್ಟು ಸಂಶೋಧನೆ ಅಗತ್ಯವಿದೆ. ಹೀಗಾಗಿ ಮ್ಯಾಗ್ನೀಷಿಯಂ ಕಡಿಮೆಯಾಗಿದೆ ಎಂದಾಕ್ಷಣ ಕ್ಯಾನ್ಸರ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ.

ಯಾವ ಆಹಾರಗಳಲ್ಲಿ ಮ್ಯಾಗ್ನೀಷಿಯಂ ಸಿಗುತ್ತದೆ?

ಮ್ಯಾಗ್ನೀಷಿಯಂ ಪಡೆಯಲು ದುಬಾರಿ ಆಹಾರಗಳನ್ನೇ ಅವಲಂಬಿಸುವ ಅಗತ್ಯವಿಲ್ಲ. ಬಾದಾಮಿ, ಗೋಡಂಬಿ, ಎಳ್ಳು, ಕುಂಬಳಕಾಯಿ ಬೀಜಗಳು, ಪಾಲಕ್‌ನಂತಹ ಹಸಿರು ಸೊಪ್ಪುಗಳು, ಕಡಲೆ, ರಾಜ್ಮಾ, ಬೇಳೆಕಾಳುಗಳು ಮತ್ತು ಸಂಪೂರ್ಣ ಧಾನ್ಯಗಳು ಉತ್ತಮ ಮೂಲಗಳಾಗಿವೆ.

ಭಾರತೀಯ ಆಹಾರ ಪದ್ಧತಿಯಲ್ಲಿ ರಾಗಿ, ಸಜ್ಜೆ, ಕಡಲೆ, ಬೇಳೆ, ವಿವಿಧ ಬೀಜಗಳು ಹಾಗೂ ಹಸಿರು ಸೊಪ್ಪುಗಳನ್ನು ನಿಯಮಿತವಾಗಿ ಸೇರಿಸಿಕೊಳ್ಳುವುದರಿಂದ ಮ್ಯಾಗ್ನೀಷಿಯಂ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಪಡೆಯಲು ಸಹಾಯವಾಗಬಹುದು.

ಆಹಾರದ ಮೂಲಕ ಪೋಷಕಾಂಶಗಳನ್ನು ಪಡೆಯುವುದು ಸಾಮಾನ್ಯವಾಗಿ ಉತ್ತಮ ವಿಧಾನವಾಗಿದ್ದು, ಮ್ಯಾಗ್ನೀಷಿಯಂ ಸಪ್ಲಿಮೆಂಟ್‌ಗಳನ್ನು ವೈದ್ಯರ ಸಲಹೆಯಿಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು.

37 ವರ್ಷಗಳ ಬಳಿಕ ವಿದ್ಯಾರ್ಥಿ ಸಂಘ ಚುನಾವಣೆ: ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಚುನಾವಣೆ ನಡೆಸಲು ಸರ್ಕಾರ ಅಸ್ತು

0

ಬೆಂಗಳೂರು: ಕರ್ನಾಟಕದಲ್ಲಿ ಬರೋಬ್ಬರಿ 37 ವರ್ಷಗಳ ಬಳಿಕ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ಮರುಜಾರಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿದ್ಯಾರ್ಥಿ ಸಂಘ ಚುನಾವಣೆ ನಡೆಸಲು ಅನುಮೋದನೆ ನೀಡಲಾಗಿದೆ.

ಕಾಲೇಜು ಕ್ಯಾಂಪಸ್‌ಗಳಲ್ಲಿ ಹೆಚ್ಚುತ್ತಿದ್ದ ಹಿಂಸಾಚಾರ, ಗೂಂಡಾಗಿರಿ ಹಾಗೂ ರಾಜಕೀಯ ಹಸ್ತಕ್ಷೇಪದ ಹಿನ್ನೆಲೆಯಲ್ಲಿ 1989ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಇದೀಗ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಆ ನಿಷೇಧವನ್ನು ತೆರವುಗೊಳಿಸಿ ಚುನಾವಣೆಗಳನ್ನು ಮರುಜಾರಿಗೊಳಿಸಲು ಮುಂದಾಗಿದೆ.

ವಿದ್ಯಾರ್ಥಿಗಳಲ್ಲಿ ನಾಯಕತ್ವದ ಹೊಣೆಗಾರಿಕೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಿದ್ಯಾರ್ಥಿ ಸಂಘ ಚುನಾವಣೆ ನಡೆಸಲು ಸರ್ಕಾರ ಅನುಮತಿ ನೀಡಿದೆ. ಆದರೆ, ಚುನಾವಣೆ ನಡೆಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಆಯಾ ಕಾಲೇಜುಗಳ ಆಡಳಿತ ಮಂಡಳಿಗೆ ಬಿಡಲಾಗಿದೆ.

ವಿದ್ಯಾರ್ಥಿ ಸಂಘದಲ್ಲಿ ಓರ್ವ ಅಧ್ಯಕ್ಷ ಹಾಗೂ ಓರ್ವ ಮಹಿಳೆ ಸೇರಿದಂತೆ ಇಬ್ಬರು ಉಪಾಧ್ಯಕ್ಷರು ಇರಲಿದ್ದಾರೆ. ಇದರ ಜೊತೆಗೆ ಓರ್ವ ಕಾರ್ಯದರ್ಶಿ ಹಾಗೂ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಆರು ಮಂದಿ ಜಂಟಿ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗುತ್ತದೆ.

ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಯಾವುದೇ ಮೀಸಲಾತಿ ಇರುವುದಿಲ್ಲ. ಒಂದು ವೇಳೆ ಕಾಲೇಜಿನ ವಿದ್ಯಾರ್ಥಿಗಳೇ ಚುನಾವಣೆ ಬೇಡ ಎಂದು ನಿರ್ಧರಿಸಿದರೆ, ಅಂತಹ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯುವುದಿಲ್ಲ.

ಇನ್ನು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಸೇರಿದ ವಿದ್ಯಾರ್ಥಿ ಸಂಘಟನೆಗಳಿಗೆ ಅವಕಾಶ ಇರುವುದಿಲ್ಲ. ಅಂದರೆ, ರಾಜಕೀಯ ಪಕ್ಷಗಳ ನೇರ ಹಸ್ತಕ್ಷೇಪವಿಲ್ಲದೆ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಈ ವರ್ಷದ ಜೂನ್‌ನಲ್ಲಿ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರಿಸಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ನಿಲ್ಲಿಸಲಾಗಿರುವ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ಈ ವರ್ಷದಿಂದಲೇ ಆರಂಭಿಸಲಾಗುವುದು ಎಂದು ಘೋಷಿಸಿದ್ದರು.

ಇದೀಗ ಸಚಿವ ಸಂಪುಟ ಸಭೆಯಲ್ಲಿ ವಿದ್ಯಾರ್ಥಿ ಸಂಘ ಚುನಾವಣೆ ಮರುಜಾರಿಗೆ ಒಪ್ಪಿಗೆ ನೀಡಿರುವುದರಿಂದ, ರಾಜ್ಯದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಹಲವು ವರ್ಷಗಳ ಬಳಿಕ ವಿದ್ಯಾರ್ಥಿ ನಾಯಕತ್ವದ ಚುನಾವಣಾ ಪ್ರಕ್ರಿಯೆ ಮತ್ತೆ ಆರಂಭವಾಗಲಿದೆ.

ಸಾಲಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡಿದ್ದೀರಿ, ಇನ್ನೂ ಆರ್ಥಿಕ ಅಪರಾಧಿ ಎನ್ನುವುದೇಕೆ?: ಸರ್ಕಾರದ ವಿರುದ್ಧ ವಿಜಯ್ ಮಲ್ಯ ಪ್ರಶ್ನೆ

0

ಲಂಡನ್: ಭಾರತದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂಬ ಆರೋಪವನ್ನು ಉದ್ಯಮಿ ವಿಜಯ್ ಮಲ್ಯ ಮತ್ತೊಮ್ಮೆ ತಳ್ಳಿಹಾಕಿದ್ದಾರೆ. ತಾವು 1992ರಿಂದಲೇ ಬ್ರಿಟನ್‌ನ ಖಾಯಂ ನಿವಾಸಿಯಾಗಿದ್ದು, ಭಾರತದಿಂದ ಪರಾರಿಯಾಗಿಲ್ಲ ಎಂದು ಮಲ್ಯ ಹೇಳಿದ್ದಾರೆ. ಅಲ್ಲದೆ, ತಮ್ಮಿಂದ ವಸೂಲಿ ಮಾಡಿರುವ ಹಣದ ಪ್ರಮಾಣವನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧವೂ ಪ್ರಶ್ನೆಗಳನ್ನು ಎತ್ತಿದ್ದಾರೆ.

ಎಕ್ಸ್ ಖಾತೆಯಲ್ಲಿ ಜಾರಿ ನಿರ್ದೇಶನಾಲಯ (ED) ಸಲ್ಲಿಸಿರುವ ಅಫಿಡವಿಟ್‌ನಲ್ಲಿನ ಮಾಹಿತಿಯನ್ನು ಪ್ರಸ್ತಾಪಿಸಿರುವ ಮಲ್ಯ, 2021ರ ವೇಳೆಗೆ ತಮ್ಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಒಟ್ಟು ₹14,131.60 ಕೋಟಿ ವಸೂಲಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಬ್ಯಾಂಕುಗಳಿಗೆ ಬರಬೇಕಿದ್ದ ಅಸಲು ಸಾಲದ ಮೊತ್ತ ಸುಮಾರು ₹6,203 ಕೋಟಿ ಮಾತ್ರವಾಗಿತ್ತು. ಹೀಗಿರುವಾಗ ಸಾಲಕ್ಕಿಂತ ಹೆಚ್ಚಿನ ಹಣವನ್ನು ಸರ್ಕಾರ ವಸೂಲಿ ಮಾಡಿದೆ. ಆದ್ದರಿಂದ ಹೆಚ್ಚುವರಿ ಮೊತ್ತವನ್ನು ಸರ್ಕಾರವೇ ತನಗೆ ಪಾವತಿಸಬೇಕು ಎಂದು ಮಲ್ಯ ವಾದಿಸಿದ್ದಾರೆ.

ಮಲ್ಯ ಅವರ ಹೇಳಿಕೆಗಳ ನಡುವೆಯೇ ಬಾಂಬೆ ಹೈಕೋರ್ಟ್‌ ಪ್ರಕರಣವೊಂದರಲ್ಲಿ ಅವರು ಉದ್ದೇಶಪೂರ್ವಕವಾಗಿ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದೆ.

ನೌಕರರ ವೇತನ ಪಾವತಿ ವಿಚಾರ

ಕಿಂಗ್‌ಫಿಷರ್ ಏರ್‌ಲೈನ್ಸ್‌ನ ನೌಕರರಿಗೆ ಬಾಕಿ ವೇತನ ಪಾವತಿಸಲು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದ್ದ ನಿಧಿಯಿಂದಲೇ ₹350 ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿದೆ ಎಂದು ಮಲ್ಯ ಹೇಳಿದ್ದಾರೆ.

ತಮ್ಮ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದರಿಂದ ನೌಕರರಿಗೆ ತಾವೇ ಬಾಕಿ ವೇತನ ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

‘ಭಾರತಕ್ಕೆ ಬಾರದಿರುವುದು ಪಲಾಯನವಲ್ಲ’

1992ರಿಂದಲೂ ತಾವು ಯುನೈಟೆಡ್ ಕಿಂಗ್‌ಡಂನ ಖಾಯಂ ನಿವಾಸಿಯಾಗಿದ್ದೇನೆ ಎಂದು ಮಲ್ಯ ಹೇಳಿದ್ದಾರೆ. ಸ್ಥಳೀಯ ಕಾನೂನು ನಿಯಮಗಳ ಕಾರಣದಿಂದ ಬ್ರಿಟನ್‌ ತೊರೆದು ತೆರಳಲು ತಮ್ಮ ಮೇಲೆ ನಿರ್ಬಂಧಗಳಿವೆ. ಹೀಗಾಗಿ ಭಾರತಕ್ಕೆ ಮರಳದೇ ಇರುವುದನ್ನು ಪಲಾಯನ ಎಂದು ಕರೆಯಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಮ್ಮ ವಿರುದ್ಧದ ಆರ್ಥಿಕ ಅಪರಾಧಿ ಎಂಬ ಆರೋಪ ಹಾಗೂ ಭಾರತದಿಂದ ಪರಾರಿಯಾಗಿರುವ ವ್ಯಕ್ತಿ ಎಂಬ ಆರೋಪವನ್ನು ಮಲ್ಯ ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ. ಈ ನಡುವೆ ಅವರ ಆಸ್ತಿಗಳ ಜಪ್ತಿ, ಸಾಲ ವಸೂಲಿ ಹಾಗೂ ಭಾರತಕ್ಕೆ ಹಸ್ತಾಂತರಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.

ಅಪ್ರಾಪ್ತೆಯೊಂದಿಗೆ ಸಮ್ಮತಿಯ ಲೈಂಗಿಕ ಕ್ರಿಯೆಯೂ ಅಪರಾಧ; ತಪ್ಪಿತಸ್ಥನಿಗೆ 20 ವರ್ಷ ಕಠಿಣ ಶಿಕ್ಷೆ, ದಂಡ

0

ಬೆಂಗಳೂರು: ಅಪ್ರಾಪ್ತ ಬಾಲಕಿಯೊಂದಿಗೆ ಸಮ್ಮತಿಯ ಮೇರೆಗೆ ಲೈಂಗಿಕ ಕ್ರಿಯೆ ನಡೆದಿದೆ ಎಂಬ ಕಾರಣಕ್ಕೆ ಪೋಕ್ಸೋ ಪ್ರಕರಣದ ಆರೋಪಿಯಿಂದ ಕ್ರಿಮಿನಲ್ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಬಾಲಕಿಯ ಸಮ್ಮತಿ ಕಾನೂನಿನ ದೃಷ್ಟಿಯಲ್ಲಿ ಮಾನ್ಯವಾಗುವುದಿಲ್ಲ ಎಂದು ತಿಳಿಸಿರುವ ನ್ಯಾಯಪೀಠ, ಪೋಕ್ಸೋ ಆರೋಪಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ₹1.05 ಲಕ್ಷ ದಂಡ ವಿಧಿಸಿದೆ. ಸಂತ್ರಸ್ತೆಯ ಪೋಷಕರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ಬಿ. ಪ್ರಮೋದ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಸಂತ್ರಸ್ತೆಯ ಜನನ ಪ್ರಮಾಣಪತ್ರ ಹಾಗೂ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯ ಆಧಾರದ ಮೇಲೆ ಘಟನೆ ನಡೆದ ಸಂದರ್ಭದಲ್ಲಿ ಆಕೆಗೆ 16 ವರ್ಷ ವಯಸ್ಸಾಗಿತ್ತು ಎಂಬುದು ಸಾಬೀತಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ಹೀಗಾಗಿ ಪೋಕ್ಸೋ ಕಾಯ್ದೆಯಡಿ ಆಕೆ ಅಪ್ರಾಪ್ತೆಯಾಗಿದ್ದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯ ಸಮ್ಮತಿ ಇದೆಯೇ ಅಥವಾ ಇಲ್ಲವೇ ಎಂಬುದು ಕಾನೂನಿನ ದೃಷ್ಟಿಯಲ್ಲಿ ಮುಖ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಪ್ರಾಪ್ತೆಯ ಸಮ್ಮತಿಯನ್ನು ಆರೋಪಿಯು ತನ್ನ ರಕ್ಷಣೆಯಾಗಿ ಬಳಸಿಕೊಳ್ಳಲು ಯಾವುದೇ ಅವಕಾಶವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ವಿಚಾರಣೆ ವೇಳೆ ಆರೋಪಿ ಹಾಗೂ ಸಂತ್ರಸ್ತೆಯ ರಕ್ತದ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿತ್ತು. DNA ಪರೀಕ್ಷಾ ವರದಿಯು ಗರ್ಭಪಾತಗೊಳಿಸಲಾದ ಭ್ರೂಣಕ್ಕೆ ಆರೋಪಿಯೇ ಜೈವಿಕ ತಂದೆ ಹಾಗೂ ಸಂತ್ರಸ್ತೆಯೇ ಜೈವಿಕ ತಾಯಿ ಎಂಬುದನ್ನು ದೃಢಪಡಿಸಿತ್ತು.

ಆದರೂ ವಿಚಾರಣಾ ನ್ಯಾಯಾಲಯವು ಸಂತ್ರಸ್ತೆಯ ವಯಸ್ಸು ಹಾಗೂ DNA ಸಾಕ್ಷ್ಯಗಳನ್ನು ಸಮರ್ಪಕವಾಗಿ ಪರಿಗಣಿಸದೆ ಆರೋಪಿಯನ್ನು ಖುಲಾಸೆಗೊಳಿಸಿರುವುದು ಕಾನೂನುಬಾಹಿರ ಮತ್ತು ತಪ್ಪಾದ ನಿರ್ಧಾರ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ವಿಚಾರಣಾ ನ್ಯಾಯಾಲಯವು ಸುಪ್ರೀಂ ಕೋರ್ಟ್‌ನ ಹಿಂದಿನ ಕೆಲವು ಆದೇಶಗಳನ್ನು ಪರಿಗಣಿಸಿದ್ದರೂ, ಪೋಕ್ಸೋ ಕಾಯ್ದೆ ಜಾರಿಗೊಳಿಸಿರುವ ಉದ್ದೇಶವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಪೋಕ್ಸೋ ಕಾಯ್ದೆಯ ಸೆಕ್ಷನ್ 6 ಹಾಗೂ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಲಾಗಿದೆ. ಅಪಹರಣ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ₹5 ಸಾವಿರ ದಂಡ ವಿಧಿಸಲಾಗಿದೆ.

ಒಟ್ಟು ₹1.05 ಲಕ್ಷ ದಂಡದ ಮೊತ್ತದಲ್ಲಿ ₹90 ಸಾವಿರವನ್ನು ಸಂತ್ರಸ್ತ ಬಾಲಕಿಗೆ ಪರಿಹಾರವಾಗಿ ನೀಡಬೇಕು. ಉಳಿದ ₹15 ಸಾವಿರವನ್ನು ಸರ್ಕಾರಕ್ಕೆ ಜಮಾ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಅಲ್ಲದೆ, ಆದೇಶದ ಪ್ರತಿ ಲಭ್ಯವಾದ ಒಂದು ವಾರದೊಳಗೆ ಆರೋಪಿ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಬೇಕು. ಆತ ಶರಣಾಗದಿದ್ದರೆ ಕೂಡಲೇ ಬಂಧಿಸಿ ಕಾರಾಗೃಹಕ್ಕೆ ಕಳುಹಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ

ಆದೇಶದಲ್ಲಿರುವ ಮಾಹಿತಿಯ ಪ್ರಕಾರ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಟೀಚರ್ಸ್ ಕಾಲೋನಿ ನಿವಾಸಿಯಾಗಿದ್ದ 26 ವರ್ಷದ ಯುವಕನಿಗೆ 2021ರಲ್ಲಿ ಫೇಸ್‌ಬುಕ್ ಮೂಲಕ 16 ವರ್ಷದ ಬಾಲಕಿಯ ಪರಿಚಯವಾಗಿತ್ತು.

ಬಾಲಕಿಯ ಪೋಷಕರಿಗೆ ತಿಳಿಯದಂತೆ ಆಕೆಯನ್ನು ಕಾರಿನಲ್ಲಿ ಅಪಹರಿಸಿ ವಿವಿಧ ಸ್ಥಳಗಳಿಗೆ ಕರೆದೊಯ್ದು ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದ ಆರೋಪ ಯುವಕನ ಮೇಲಿತ್ತು. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ.

ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354(ಡಿ), 363, 366, 376(2)(ಎನ್) ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 6 ಮತ್ತು 12ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಚಾರಣಾ ನ್ಯಾಯಾಲಯದಲ್ಲಿ ಆರೋಪಿಯ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿ ಆರೋಪಿಯನ್ನು ಖುಲಾಸೆಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತೆಯ ಪೋಷಕರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಆರೋಪಿಯ ಪರ ವಕೀಲರು, ಸಂತ್ರಸ್ತೆಯ ಸಮ್ಮತಿಯ ಮೇರೆಗೆ ಲೈಂಗಿಕ ಕ್ರಿಯೆ ನಡೆದಿದ್ದು, ವಿಚಾರಣಾ ನ್ಯಾಯಾಲಯ ನೀಡಿರುವ ಖುಲಾಸೆ ಆದೇಶ ಸರಿಯಾಗಿದೆ. ಹೀಗಾಗಿ ಮೇಲ್ಮನವಿಯನ್ನು ವಜಾಗೊಳಿಸಬೇಕು ಎಂದು ವಾದಿಸಿದ್ದರು. ಆದರೆ ಈ ವಾದವನ್ನು ಪರಿಗಣಿಸದ ಹೈಕೋರ್ಟ್, ಸಂತ್ರಸ್ತೆ ಅಪ್ರಾಪ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಸಮ್ಮತಿ ಕಾನೂನಿನ ರಕ್ಷಣೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿ ಆರೋಪಿಗೆ ಶಿಕ್ಷೆ ವಿಧಿಸಿದೆ.

ಕಾವೇರಿ ನೀರು ಬಿಡುಗಡೆ ಆದೇಶ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ಕಿಡಿ

0

ಬೆಂಗಳೂರು: ಪ್ರತಿದಿನ 6 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ನೀಡಿರುವ ನಿರ್ದೇಶನ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಕರ್ನಾಟಕದ ಕಾವೇರಿ ಕಣಿವೆ ಜಲಾಶಯಗಳ ವಾಸ್ತವ ಸ್ಥಿತಿ, ಕುಡಿಯುವ ನೀರಿನ ಅಗತ್ಯ, ರೈತರ ಪರಿಸ್ಥಿತಿ ಹಾಗೂ ಮುಂದಿನ ದಿನಗಳಲ್ಲಿ ನೀರಿನ ಲಭ್ಯತೆ ಕುರಿತು ವೈಜ್ಞಾನಿಕ ಅಂಕಿ-ಅಂಶಗಳೊಂದಿಗೆ ಪ್ರಾಧಿಕಾರದ ಮುಂದೆ ಸಮರ್ಥವಾಗಿ ವಾದ ಮಂಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಇದು ಕೇವಲ ಆಡಳಿತಾತ್ಮಕ ಲೋಪವಲ್ಲ. ಕರ್ನಾಟಕದ ಜಲ ಹಕ್ಕುಗಳನ್ನು ರಕ್ಷಿಸುವಲ್ಲಿ ಸರ್ಕಾರ ತೋರಿರುವ ಗಂಭೀರ ನಿರ್ಲಕ್ಷ್ಯ ಎಂದು ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

15 ದಿನಗಳ ಕಾಲ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದರೆ ಒಟ್ಟು 7.5 ಟಿಎಂಸಿ ನೀರು ರಾಜ್ಯದಿಂದ ಹೊರಹೋಗಲಿದೆ. ರಾಜ್ಯವೇ ನೀರಿನ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಇಷ್ಟು ಪ್ರಮಾಣದ ನೀರು ಬಿಡುಗಡೆ ಮಾಡುವುದು ಅಸಾಧ್ಯ. ಹೀಗಾಗಿ ಸರ್ಕಾರ ತಕ್ಷಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಸದ್ಯ ನೀರು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಈ ವೈಫಲ್ಯದ ಹೊಣೆ ಹೊತ್ತು ರಾಜ್ಯದ ಜನರಿಗೆ ಉತ್ತರ ನೀಡಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ. ಪ್ರಾಧಿಕಾರದ ಮುಂದೆ ಕರ್ನಾಟಕದ ಪರವಾಗಿ ಯಾವೆಲ್ಲಾ ಅಂಶಗಳನ್ನು ಮಂಡಿಸಲಾಗಿತ್ತು? ರಾಜ್ಯದ ಜಲಾಶಯಗಳ ನೈಜ ಸ್ಥಿತಿಯ ವರದಿಯನ್ನು ಸಲ್ಲಿಸಲಾಗಿತ್ತೇ? ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದರೆ ಬೆಂಗಳೂರಿನ ಕುಡಿಯುವ ನೀರು ಹಾಗೂ ಕರ್ನಾಟಕದ ರೈತರ ಮೇಲೆ ಉಂಟಾಗುವ ಪರಿಣಾಮವನ್ನು ಸಮರ್ಪಕವಾಗಿ ವಿವರಿಸಲಾಗಿತ್ತೇ? ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಹೇಳಿದ್ದಾರೆ.

ರಾಜ್ಯದ ಹಿತಾಸಕ್ತಿ ಕಾಪಾಡಲು ಪ್ರಾಧಿಕಾರದ ಮುಂದೆ ಸರ್ಕಾರ ಮಂಡಿಸಿರುವ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು. ಜಲಾಶಯಗಳ ಲೈವ್ ಸ್ಟೋರೇಜ್, ಒಳಹರಿವು ಹಾಗೂ ಮುಂದಿನ ತಿಂಗಳ ನೀರಿನ ಅಗತ್ಯಕ್ಕೆ ಸಂಬಂಧಿಸಿದ ವೈಜ್ಞಾನಿಕ ಲೆಕ್ಕಾಚಾರವನ್ನು ಏಕೆ ಪರಿಣಾಮಕಾರಿಯಾಗಿ ಮಂಡಿಸಲಿಲ್ಲ ಎಂಬುದಕ್ಕೂ ಸರ್ಕಾರ ಉತ್ತರಿಸಬೇಕು ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಕುಡಿಯುವ ನೀರಿನ ಅಗತ್ಯ ಹಾಗೂ ರೈತರ ಬೆಳೆಗಳಿಗೆ ಬೇಕಾಗುವ ನೀರಿನ ಪ್ರಮಾಣವನ್ನು ಪರಿಗಣಿಸಿ ರಾಜ್ಯದಲ್ಲಿನ ನೀರಿನ ಕೊರತೆಯ ವಾಸ್ತವಾಂಶವನ್ನು ಏಕೆ ಸಮರ್ಪಕವಾಗಿ ಮನವರಿಕೆ ಮಾಡಿಕೊಡಲಿಲ್ಲ ಎಂಬುದನ್ನೂ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಪರವಾಗಿ ವಾದ ಮಂಡಿಸಿದ ತಾಂತ್ರಿಕ ಹಾಗೂ ಕಾನೂನು ತಂಡದ ಕಾರ್ಯವೈಖರಿ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಕರ್ನಾಟಕದ ಹಿತಾಸಕ್ತಿಯನ್ನು ಸಮರ್ಪಕವಾಗಿ ಮಂಡಿಸುವಲ್ಲಿ ಯಾರಿಂದ ಲೋಪವಾಗಿದೆ ಎಂಬುದನ್ನು ಗುರುತಿಸಿ, ಹೊಣೆಗಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ದಿನಗಳಲ್ಲಿ ಯಾವುದೇ ನೀರು ಬಿಡುಗಡೆ ಆದೇಶ ಬರುವ ಮುನ್ನವೇ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಮಂಡಿಸಲು ಶಾಶ್ವತ ಕಾವೇರಿ ತಾಂತ್ರಿಕ-ಕಾನೂನು ಕಾರ್ಯತಂತ್ರ ರೂಪಿಸಬೇಕು ಎಂದು ಅಶೋಕ್ ಹೇಳಿದ್ದಾರೆ. “ನೀರು ಬಿಡುವುದು, ಆದೇಶ ಬಂದ ನಂತರ ಕಣ್ಣೀರು ಹಾಕುವುದು—ಇದು ರಾಜ್ಯ ಸರ್ಕಾರದ ಕಾವೇರಿ ನೀತಿ ಆಗಬಾರದು” ಎಂದು ಅವರು ತೀವ್ರವಾಗಿ ಟೀಕಿಸಿದ್ದಾರೆ.

ಕಾವೇರಿ ನೀರು ಕರ್ನಾಟಕದ ರೈತರ ಬದುಕು, ಬೆಂಗಳೂರಿನ ಕುಡಿಯುವ ನೀರು ಹಾಗೂ ರಾಜ್ಯದ ಭವಿಷ್ಯದ ಜಲ ಭದ್ರತೆಯ ಪ್ರಶ್ನೆಯಾಗಿದೆ. ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟು ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಬಿಜೆಪಿ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಅಶೋಕ್ ಹೇಳಿದ್ದಾರೆ.

ಸರ್ಕಾರ ಕೂಡಲೇ ಪ್ರಾಧಿಕಾರದ ಮುಂದೆ ಮರುಪರಿಶೀಲನೆಗೆ ಒತ್ತಾಯಿಸಬೇಕು. ಅಗತ್ಯವಿದ್ದರೆ ಕಾನೂನು ಹೋರಾಟಕ್ಕೂ ಮುಂದಾಗಬೇಕು. ಕರ್ನಾಟಕದ ನೀರಿನ ಮೇಲೆ ಮೊದಲ ಹಕ್ಕು ಕರ್ನಾಟಕದ ಜನರದು ಎಂಬ ನಿಲುವನ್ನು ಸರ್ಕಾರ ಸ್ಪಷ್ಟವಾಗಿ ಹಾಗೂ ನಿರ್ದಾಕ್ಷಿಣ್ಯವಾಗಿ ಪ್ರತಿಪಾದಿಸಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.