Home Blog Page 23

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು: ₹262 ಕೋಟಿ ಪರಿಹಾರ ಘೋಷಣೆ

0

ವಾಷಿಂಗ್ಟನ್: ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಸಾವು ಪ್ರಕರಣ ಅಮೆರಿಕದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ₹262 ಕೋಟಿ ಪರಿಹಾರ ಒಪ್ಪಂದದೊಂದಿಗೆ ಈ ಪ್ರಕರಣ ಕಾನೂನು ಮತ್ತು ಪೊಲೀಸ್ ಹೊಣೆಗಾರಿಕೆಯ ದೊಡ್ಡ ಉದಾಹರಣೆಯಾಗಿ ಪರಿಣಮಿಸಿದೆ.

2023ರ ಜನವರಿಯಲ್ಲಿ ನಡೆದ ಈ ದುರ್ಘಟನೆಯಲ್ಲಿ, ಪೊಲೀಸ್ ಅಧಿಕಾರಿ ಕೆವಿನ್ ಡೇವ್ 25 mph ಮಿತಿಯ ಪ್ರದೇಶದಲ್ಲಿ 74 mph ವೇಗದಲ್ಲಿ ಕಾರು ಚಲಾಯಿಸುತ್ತಿದ್ದರು. ವರದಿಗಳ ಪ್ರಕಾರ, ಅವರು ಮಾದಕ ವಸ್ತು ಸೇವನೆ ಮಾಡಿಕೊಂಡಿದ್ದರೆಂಬ ಆರೋಪ ಮತ್ತು ಫೋನ್‌ನಲ್ಲಿ ಮಾತನಾಡುತ್ತಿದ್ದರು ಎಂಬ ವಿಷಯವೂ ಬೆಳಕಿಗೆ ಬಂದಿದೆ.

ಘಟನೆಯ ಬಳಿಕ ಮತ್ತೊಬ್ಬ ಅಧಿಕಾರಿಯ ಬಾಡಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ದೃಶ್ಯಗಳು ಬಹಿರಂಗವಾದಾಗ ಪ್ರಕರಣ ಮತ್ತಷ್ಟು ವಿವಾದಕ್ಕೆ ಕಾರಣವಾಯಿತು. ಸಾರ್ವಜನಿಕ ಆಕ್ರೋಶದ ನಡುವೆ, ಅಧಿಕಾರಿಗೆ $5,000 ದಂಡ ವಿಧಿಸಿ ಸೇವೆಯಿಂದ ವಜಾಗೊಳಿಸಲಾಯಿತು. ಆದರೆ ಗಂಭೀರ ಕ್ರಿಮಿನಲ್ ಆರೋಪಗಳಿಂದ ಅವರು ತಪ್ಪಿಸಿಕೊಂಡರು.

ನಗರ ಅಟಾರ್ನಿ ಎರಿಕಾ ಇವಾನ್ಸ್ ಮಾತನಾಡಿ, “ಜಾಹ್ನವಿ ಕಂದುಲಾ ಅವರ ಸಾವು ಹೃದಯವಿದ್ರಾವಕ. ಈ ಆರ್ಥಿಕ ಇತ್ಯರ್ಥವು ಕುಟುಂಬಕ್ಕೆ ಸ್ವಲ್ಪ ಸಾಂತ್ವನ ನೀಡಬಹುದು” ಎಂದು ಹೇಳಿದ್ದಾರೆ. ಕುಟುಂಬದ ವಕೀಲರು ಈವರೆಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಈ ಪರಿಹಾರ ಮೊತ್ತ ಅಮೆರಿಕದ ಪೊಲೀಸ್ ನಿರ್ಲಕ್ಷ್ಯ ಪ್ರಕರಣಗಳಲ್ಲಿ ಅಪರೂಪದ ದೊಡ್ಡ ಇತ್ಯರ್ಥವೆಂದು ಪರಿಗಣಿಸಲಾಗುತ್ತಿದೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 3.39 ಕೋಟಿ ಮೌಲ್ಯದ ಗಾಂಜಾ ವಶ

0

ಬೆಂಗಳೂರು: ಅಂತರಾಷ್ಟ್ರೀಯ ಮಾರ್ಗದ ಮೂಲಕ ನಡೆಯುತ್ತಿದ್ದ ಮಾದಕ ವಸ್ತುಗಳ ಕಳ್ಳಸಾಗಣೆ ಯತ್ನವನ್ನು ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನ ಬಳಿ ₹3.39 ಕೋಟಿ ಮೌಲ್ಯದ 9.7 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ.

ಲಗೇಜ್ ಸ್ಕ್ಯಾನಿಂಗ್ ವೇಳೆ ಅನುಮಾನ ಮೂಡಿದ ಹಿನ್ನೆಲೆ ಅಧಿಕಾರಿಗಳು ಸೂಕ್ಷ್ಮ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಕಳ್ಳಸಾಗಣೆ ಜಾಲದ ಸಂಪರ್ಕಗಳ ಬಗ್ಗೆ ವಿಚಾರಣೆ ಮುಂದುವರಿದಿದೆ.

ಫೆಬ್ರವರಿ 7ರಂದು ಸಹ ಕಸ್ಟಮ್ಸ್ ಇಲಾಖೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು ₹3 ಕೋಟಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿತ್ತು. ಕಳೆದ ಕೆಲ ದಿನಗಳಲ್ಲಿ ನಡೆದ ಈ ಕ್ರಮಗಳು ಅಂತರಾಷ್ಟ್ರೀಯ ಡ್ರಗ್ ಸ್ಮಗ್ಲಿಂಗ್ ಜಾಲಗಳು ಬೆಂಗಳೂರು ಮಾರ್ಗವನ್ನು ಬಳಸುತ್ತಿರುವುದನ್ನು ತೋರಿಸುತ್ತಿವೆ.

ಕಸ್ಟಮ್ಸ್ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ತಪಾಸಣೆ ಇನ್ನಷ್ಟು ಕಠಿಣಗೊಳಿಸಿದ್ದಾರೆ.

ನಟಿ ಸುಧಾರಾಣಿ ನಂದಿನಿ ರಾಯಭಾರಿ: ಬಮೂಲ್‌ನ ಸ್ವತಂತ್ರ ಕ್ರಮಕ್ಕೆ ಕೆಎಂಎಫ್ ಆಕ್ಷೇಪ

ನಂದಿನಿ ಹಾಲು ಉತ್ಪನ್ನಗಳಿಗೆ ಕನ್ನಡ ತಾರೆ ಸುಧಾರಾಣಿ ಹೊಸ ರಾಯಭಾರಿ ಆಗಿ ಆಯ್ಕೆಯಾಗಿರುವುದು ಸದ್ಯ ಸುದ್ದಿಯಾಗಿದೆ. ಕೆಲವರೆ ಪ್ರಮುಖರು ಬಮೂಲ್ನಿಂದ ಪರಭಾಷಾ ನಟಿ ತಮನ್ನಾ ಭಾಟಿಯಾ ನೇಮಕಗೊಂಡಿದ್ದಾಗ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಸುಧಾರಾಣಿ ನೇಮಕದಿಂದ ಮತ್ತೆ ವಿವಾದದ ಅಣುಕು ಬಿದ್ದಿದೆ.

ಸುಧಾರಾಣಿ ತಮ್ಮ ಸಂತೋಷ ವ್ಯಕ್ತಪಡಿಸಿ, “ಬಮೂಲ್ನೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಹೆಮ್ಮೆ. ದೇಸಿ ಹಸುಗಳು, ರೈತರ ಭದ್ರತೆ ಮತ್ತು ಗ್ರಾಹಕರಿಗೆ ಶುದ್ಧ ಉತ್ಪನ್ನ ತಲುಪಿಸುವುದು ನನ್ನ ಮುಖ್ಯ ಉದ್ದೇಶ” ಎಂದು ಹೇಳಿದ್ದಾರೆ. ಅವರು A2 ಹಾಲು, A2 ತುಪ್ಪ ಸೇರಿದಂತೆ ನಂದಿನಿಯ ಹೊಸ ಉತ್ಪನ್ನಗಳನ್ನು ಪ್ರಚಾರ ಮಾಡುವ ಮೂಲಕ ಕನ್ನಡ ಸಂಪ್ರದಾಯ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಗುರಿಯಾಗಿದೆ ಎಂದು ಹೇಳಿದರು.

ಆದರೆ, ಕೆಎಂಎಫ್ ತನ್ನ ಆಕ್ಷೇಪ ವ್ಯಕ್ತಪಡಿಸಿದೆ. “ಮೂಲ ಸಂಸ್ಥೆಗೆ ಮಾಹಿತಿ ನೀಡದೆ ರಾಯಭಾರಿ ನೇಮಕ ಮಾಡುವುದೇ ನಿಯಮಕ್ಕೆ ವಿರುದ್ಧ,” ಎಂದು ಅಧಿಕಾರಿಗಳು ಹೇಳಿದ್ದಾರೆ. ನಂದಿನಿಯ ಹಿಂದಿನ ಬ್ರ್ಯಾಂಡ್ ಅಂಬಾಸಿಡರ್‌ಗಳು ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಆಗಿದ್ದು, ಅವರ ಸೇವೆಯನ್ನು ಕೆಎಂಎಫ್ ಅನುಮೋದಿಸಿಕೊಂಡಿತ್ತು.

ಈ ನೇಮಕವು ಬಮೂಲ್ನ ಸ್ವತಂತ್ರ ನಿರ್ಧಾರ, ಹಾಲು ಕ್ಷೇತ್ರದಲ್ಲಿ ಪರಂಪರೆ ಮತ್ತು ನಿಯಮ ಪಾಲನೆ ಕುರಿತು ಹೊಸ ಸಂವಾದಕ್ಕೆ ಕಾರಣವಾಗಿದೆ.

ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

0

ಮೈಸೂರು: ಗಡಿ ಭಾಗದ ಮೂಲಕ ಕೇರಳ ಲಾಟರಿ ಟಿಕೆಟ್‌ಗಳನ್ನು ರಾಜ್ಯಕ್ಕೆ ತರಿಸಿ ಪಿರಿಯಾಪಟ್ಟಣದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮೈಸೂರು ಜಿಲ್ಲಾ ಪೊಲೀಸರ ವಿಶೇಷ ತಂಡ ಭೇದಿಸಿದೆ. ಕಾನೂನು ಉಲ್ಲಂಘನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಟಿಕೆಟ್ ಹಾಗೂ ನಗದು ಜಪ್ತಿ ಮಾಡಲಾಗಿದೆ.

ವೆಂಕಟೇಶ್ವರ ವೇ ಬ್ರಿಡ್ಜ್ ಬಳಿ ಲಾಟರಿ ಮಾರಾಟ ನಡೆಸುತ್ತಿದ್ದ ಅರುಣ್ ಕುಮಾರ್ ಹಾಗೂ ಸಿಂಚನ ಹೋಟೆಲ್‌ನಲ್ಲಿ ವ್ಯವಹಾರ ನಡೆಸುತ್ತಿದ್ದ ಸ್ವಾಮಿ ಬಂಧಿತರಾಗಿದ್ದಾರೆ.

ಪೊಲೀಸರ ದಾಳಿಯಲ್ಲಿ ಒಟ್ಟು ₹55,200 ಮೌಲ್ಯದ ಕೇರಳ ರಾಜ್ಯ ಲಾಟರಿ ಟಿಕೆಟ್‌ಗಳು ಹಾಗೂ ₹22,930 ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ₹78,130 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕರ್ನಾಟಕದಲ್ಲಿ ಲಾಟರಿ ನಿಷೇಧಿತವಾಗಿದ್ದರೂ, ಗಡಿ ಮಾರ್ಗಗಳನ್ನು ಬಳಸಿಕೊಂಡು ಅಕ್ರಮ ವ್ಯವಹಾರ ನಡೆಯುತ್ತಿರುವುದು ಈ ದಾಳಿಯಿಂದ ಬಹಿರಂಗವಾಗಿದೆ. ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರ ಮಾರ್ಗದರ್ಶನದಲ್ಲಿ, ಅಡಿಷನಲ್ ಎಸ್‌ಪಿ ಮಲ್ಲಿಕ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಗಡಿ ಭಾಗದ ಅಕ್ರಮ ಜಾಲಗಳಿಗೆ ಎಚ್ಚರಿಕೆಯ ಸಂದೇಶವಾಗಿದೆ.

ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಕಮಲಾಕರ್ ಭಟ್ ಗ್ಯಾಂಗ್ ಕೇಸ್‌ನಲ್ಲಿ ತಿರುವು: 5 ಮಂದಿಗೆ ಜ್ಯುಡಿಷಿಯಲ್ ಕಸ್ಟಡಿ, 3 ಆರೋಪಿಗಳು ಪೊಲೀಸ್ ವಶಕ್ಕೆ

0

ಕಾರವಾರ: ಸಂಚಲನ ಮೂಡಿಸಿದ್ದ ವಸಂತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಗ್ಯಾಂಗ್ ವಿರುದ್ಧದ ತನಿಖೆ ತೀವ್ರಗೊಂಡಿದೆ. ಸಿದ್ದಾಪುರ JMFC ನ್ಯಾಯಾಲಯವು ಕಮಲಾಕರ್ ಭಟ್ ಮತ್ತು ಸುಚಿತ್ರಾ ಸೇರಿ ಐದು ಆರೋಪಿಗಳಿಗೆ ಫೆಬ್ರುವರಿ 21ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ A1 ಸುಚಿತ್ರಾ, A2 ಲೋಕನಾಥ್, A3 ಕಮಲಾಕರ್ ಭಟ್, A4 ಆಕಾಶ ಹಾಗೂ A8 ವಿನಯ್ ಅವರಿಗೆ ಜ್ಯುಡಿಷಿಯಲ್ ಕಸ್ಟಡಿ ಮುಂದುವರಿಸಲಾಗಿದೆ.

ಇನ್ನೂ ಮೂವರು ಆರೋಪಿಗಳಾದ ಮಹ್ಮದ್ ಮೆಹಫೂಪ್, ಮಹ್ಮದ್ ಫೈಸಲ್ ಮತ್ತು ಇರ್ಫಾನ್ ಪೊಲೀಸ್ ವಶದಲ್ಲಿದ್ದು, ಹತ್ಯೆಗೆ ಬಳಸಿದ ಮಾರಕಾಸ್ತ್ರಗಳ ಪತ್ತೆಗಾಗಿ ಮಹಜರು ಪ್ರಕ್ರಿಯೆ ನಡೆಯುತ್ತಿದೆ. ತನಿಖೆ ಭಾಗವಾಗಿ ಅವರನ್ನು ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಫೆಬ್ರುವರಿ 13ರಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ಪ್ರಕರಣದ ಮುಂದಿನ ಹಂತದ ವಿಚಾರಣೆ ಹಾಗೂ ತನಿಖೆಯ ವಿವರಗಳತ್ತ ಎಲ್ಲರ ಕಣ್ಣು ನೆಟ್ಟಿದೆ.

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಬರ್ಬರ ಹತ್ಯೆ!

0

ಢಾಕಾ: ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ಹೊತ್ತಲ್ಲೇ ಹಿಂದೂ ಸಮುದಾಯದ ಮೇಲೆ ಮತ್ತೊಂದು ಭೀಕರ ಹಲ್ಲೆ ನಡೆದಿದೆ.

ಮೌಲ್ವಿಬಜಾರ್ ಜಿಲ್ಲೆಯಲ್ಲಿ 28 ವರ್ಷದ ಹಿಂದೂ ಯುವಕನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದ್ದು, ಅಲ್ಪಸಂಖ್ಯಾತರ ಸುರಕ್ಷತೆ ಕುರಿತು ತೀವ್ರ ಆತಂಕ ಉಂಟಾಗಿದೆ. ಮೃತ ಯುವಕನನ್ನು ರತನ್ ಸಾಹುಕರ್ ಎಂದು ಗುರುತಿಸಲಾಗಿದ್ದು, ಅವರು ಚಂಪಾ ಪ್ರದೇಶದ ಚಹಾ ತೋಟದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.

ಬುಧವಾರ ಬೆಳಗ್ಗೆ ಸುಮಾರು 10 ಗಂಟೆಗೆ ರತನ್ ಅವರ ಶವ ಪತ್ತೆಯಾಗಿದ್ದು, ಕೈ-ಕಾಲುಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿತ್ತು. ದೇಹದ ಮೇಲೆ ತೀವ್ರ ಗಾಯಗಳಿದ್ದು, ಹೆಚ್ಚಿನ ರಕ್ತಸ್ರಾವವಾಗಿರುವುದು ಕಂಡುಬಂದಿದೆ. ರತನ್ ಜೊತೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಇದು ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಕೈ-ಕಾಲುಗಳನ್ನು ಕಟ್ಟಿರುವ ವಿಧಾನ ಹಾಗೂ ಗಾಯಗಳ ಸ್ವರೂಪವೇ ಇದೊಂದು ಪಿತೂರಿಯ ಕೃತ್ಯ ಎಂಬುದನ್ನು ಸೂಚಿಸುತ್ತವೆ ಎಂದು ಅವರು ಹೇಳಿದ್ದಾರೆ.

ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಈ ಹತ್ಯೆ ಚುನಾವಣೆಗೆ ಸಂಬಂಧಿತವೇ ಅಥವಾ ಬೇರೆ ಉದ್ದೇಶವಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

ಚೀಲ ಬದಲಾಯಿಸಿ ಕೇರಳಕ್ಕೆ ಯೂರಿಯಾ ಸಾಗಾಟ: ಬಳ್ಳಾರಿಯಲ್ಲಿ ಅಕ್ರಮ ಜಾಲ ಬಯಲು-7 ಮಂದಿ ಬಂಧನ

0

ಬಳ್ಳಾರಿ: ರೈತರಿಗೆ ಸಬ್ಸಿಡಿ ದರದಲ್ಲಿ ಸಿಗಬೇಕಿದ್ದ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ, ಚೀಲ ಬದಲಾಯಿಸಿ ಅನ್ಯ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ ದಂಧೆ ಬಳ್ಳಾರಿಯಲ್ಲಿ ಬಯಲಾಗಿದೆ. ಇಂಡಸ್ಟ್ರೀಸ್ ಏರಿಯಾದ ಗೋಡೌನ್‌ನಲ್ಲಿ 3,575 ಚೀಲ ಯೂರಿಯಾ ಜಪ್ತಿ ಮಾಡಲಾಗಿದೆ.

ಕೇಂದ್ರ ಸರ್ಕಾರದಿಂದ ರೈತರಿಗೆ ನೀಡುವ ಯೂರಿಯಾವನ್ನು ಮಾರುಕಟ್ಟೆಯಿಂದ ವಿಲೇವಾರಿ ಮಾಡಿ, ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಟೆಕ್ನಿಕಲ್ ಗ್ರೇಡ್ ಯೂರಿಯಾ ಎಂದು ಲೇಬಲ್ ಬದಲಾಯಿಸಿ ಕಾರ್ಖಾನೆಗಳಿಗೆ ಪೂರೈಕೆ ಮಾಡಲಾಗುತ್ತಿತ್ತು.

ಈ ಪ್ರಕರಣದಲ್ಲಿ ಕೇರಳ ಮೂಲದ ವಿಪಿನ್ ಅಲಿಯಾಸ್ ಕಾರ್ತಿಕ್ ಸಿಂಗ್ ಸೇರಿದಂತೆ ಏಳು ಮಂದಿ ಬಂಧಿತರಾಗಿದ್ದಾರೆ. ಬಂಧಿತರಲ್ಲಿ ಇಬ್ಬರು ಗೊಬ್ಬರ ವ್ಯಾಪಾರಿಗಳಿದ್ದಾರೆ.

ಮುಂಗಾರು ಮತ್ತು ಹಿಂಗಾರು ಬಿತ್ತನೆ ಸಮಯದಲ್ಲಿ ರೈತರು ಗೊಬ್ಬರದ ಕೊರತೆಯಿಂದ ಪರದಾಡಿದ್ದ ಹಿನ್ನೆಲೆ ಈ ಅಕ್ರಮ ಜಾಲ ಗಂಭೀರತೆ ಹೆಚ್ಚಿಸಿದೆ. ಕೃಷಿ ಇಲಾಖೆ ಅಧಿಕಾರಿಗಳ ಪಾತ್ರದ ಕುರಿತೂ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಬೂಸ್ಟ್ ತುಂಬಿದ ಕೇಕ್ ಮಾರಾಟ ಆರೋಪ: ಶಿರೋಳ ಬೇಕರಿ ವಿರುದ್ಧ ಗಂಭೀರ ದೂರು, ಫುಡ್ ಇಲಾಖೆ ಮೌನ?

0

ಗದಗ: ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿರುವ ಬೆಂಗಳೂರು ಬೇಕರಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬೂಸ್ಟ್ ಪೌಡರ್ ತುಂಬಿದ ಕೇಕ್ ಅನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವ ಆಹಾರ ಪದಾರ್ಥಗಳನ್ನು ಈ ರೀತಿಯಾಗಿ ಮಾರಾಟ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಆಗಿದೆಯೇ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.

ಘಟನೆ ಬೆಳಕಿಗೆ ಬಂದಿದ್ದರೂ ನರಗುಂದ ತಾಲೂಕಿನ ಫುಡ್ ಇಲಾಖೆ ಅಧಿಕಾರಿಗಳು ಇನ್ನೂ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದೆ.
ಆಹಾರ ಸುರಕ್ಷತೆ ಎಂಬುದು ಜನಜೀವನಕ್ಕೆ ಸಂಬಂಧಿಸಿದ ಗಂಭೀರ ವಿಷಯ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಮಾದರಿಗಳನ್ನು ಪರೀಕ್ಷಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಗಾಡಿ ಟಚ್ ಆಗಿದ್ದಕ್ಕೆ ಗಲಾಟೆ: ಬೆಂಗಳೂರಿನಲ್ಲಿ ಕಾರು ಚಾಲಕನ ಹುಚ್ಚಾಟ, ವೈರಲ್ ವಿಡಿಯೋ

0

ಬೆಂಗಳೂರು: ಹೆಚ್‌ಎಎಲ್ ಪ್ರದೇಶದಲ್ಲಿ ನಡೆದ ರೋಡ್ ರೇಜ್ ಪ್ರಕರಣವು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. ಗಾಡಿ ಟಚ್ ಆದ ವಿಚಾರದಲ್ಲಿ ಆರಂಭವಾದ ಗಲಾಟೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಕಾರು ಚಾಲಕ ಗೂಡ್ಸ್ ವಾಹನ ಚಾಲಕನನ್ನು ಕಾರಿನ ಬ್ಯಾನೆಟ್ ಮೇಲೆಯೇ ಎಳೆದುಕೊಂಡು ಹೋಗಿರುವ ಘಟನೆ ಬುಧವಾರ ಮಧ್ಯಾಹ್ನ 12:45ರ ಸುಮಾರಿಗೆ ನಡೆದಿದೆ.

ಕೆಎ 03 ಎನ್‌ಎನ್ 4501 ನೋಂದಣಿಯ ಮಾರುತಿ ಸುಜುಕಿ ಕಾರು ಚಾಲಕ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ವ್ಯಕ್ತಿ ಕಿರುಚಾಡುತ್ತಿದ್ದರೂ ಕಾರು ನಿಲ್ಲಿಸದೆ ಸುಮಾರು ಒಂದು ಕಿಲೋಮೀಟರ್ ದೂರ ಚಲಾಯಿಸಲಾಗಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ರೋಡ್ ರೇಜ್ ಘಟನೆಗಳು ಸಂಚಾರ ಶಿಸ್ತು ಹಾಗೂ ಸಾರ್ವಜನಿಕ ಸುರಕ್ಷತೆ ಕುರಿತು ಮತ್ತೊಮ್ಮೆ ಪ್ರಶ್ನೆ ಎತ್ತಿವೆ.

ರಸ್ತೆ ಅಪಘಾತ| 9 ವರ್ಷದ ಬಾಲಕಿ ಸಾವು!

0

ಚಿಕ್ಕೋಡಿ:- ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 9 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಜರುಗಿದೆ.

ವೈಷ್ಣವಿ ತೇರದಾಳೆ (9) ಮೃತ ಬಾಲಕಿ. ಈಕೆ ಅಳಗವಾಡಿ ಗ್ರಾಮದ ನಿವಾಸಿ ಎನ್ನಲಾಗಿದೆ. ಶಿಕ್ಷಣ ಸಂಯೋಜಕ ವಿಠಲ ತೇರದಾಳೆ ಅವರ ಸುಪುತ್ರಿ ವೈಷ್ಣವಿ ಇತ್ತೀಚೆಗೆ ಅಳಗವಾಡಿ ಗ್ರಾಮದ ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.

ಒಂದು ವಾರಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೆ ಬೆಳಗಾವಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

error: Content is protected !!