Home Blog Page 22

ಶಕ್ತಿ ಯೋಜನೆ: ಮಹಿಳೆಯರ ಚಲನವಲನಕ್ಕೆ ಹೊಸ ಶಕ್ತಿ

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆ ರಾಜ್ಯದ ಮಹಿಳೆಯರ ಬದುಕಿನಲ್ಲಿ ಸ್ಪಷ್ಟವಾದ ಬದಲಾವಣೆಯನ್ನು ತರಲು ಕಾರಣವಾಗಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಈ ಯೋಜನೆ, ಕೇವಲ ಸಾರಿಗೆ ಸೌಲಭ್ಯವಷ್ಟೇ ಅಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಶಕ್ತಿ ಯೋಜನೆ ಜಾರಿಯಾದ ನಂತರ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಹಿಳೆಯರ ಸಂಚಾರ ಸ್ವಾತಂತ್ರ್ಯ ಹೆಚ್ಚಾಗಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ ಸೇವೆಗಳು ಹಾಗೂ ಸ್ವ-ಉದ್ಯಮಗಳಿಗಾಗಿ ಮಹಿಳೆಯರು ಈಗ ಹೆಚ್ಚು ಆತ್ಮವಿಶ್ವಾಸದಿಂದ ಪ್ರಯಾಣಿಸುತ್ತಿದ್ದಾರೆ. ಹಿಂದೆ ಪ್ರಯಾಣ ವೆಚ್ಚದ ಕಾರಣದಿಂದ ನಿರ್ಬಂಧಿತವಾಗಿದ್ದ ಅನೇಕ ಅವಕಾಶಗಳು ಈಗ ಮಹಿಳೆಯರಿಗೆ ಸುಲಭವಾಗಿ ಲಭ್ಯವಾಗುತ್ತಿವೆ.

ಈ ಯೋಜನೆಯ ದೊಡ್ಡ ಪರಿಣಾಮ ಕುಟುಂಬದ ಆರ್ಥಿಕ ಸ್ಥಿತಿಯ ಮೇಲೆ ಕಂಡುಬಂದಿದೆ. ದಿನನಿತ್ಯದ ಪ್ರಯಾಣ ವೆಚ್ಚ ಉಳಿದಿರುವುದರಿಂದ ಕುಟುಂಬಗಳ ಉಳಿತಾಯ ಹೆಚ್ಚಾಗಿದೆ. ವಿಶೇಷವಾಗಿ ಕಾರ್ಮಿಕ ವರ್ಗದ ಮಹಿಳೆಯರಿಗೆ ಇದು ಮಹತ್ತರ ನೆರವಾಗಿದೆ. ಕೆಲಸದ ಸ್ಥಳಗಳಿಗೆ ನಿರಂತರವಾಗಿ ಹೋಗಲು ಸಾಧ್ಯವಾಗುತ್ತಿರುವುದರಿಂದ ಅವರ ಆದಾಯ ಸ್ಥಿರವಾಗಿದೆ.

ಶಕ್ತಿ ಯೋಜನೆ ಮಹಿಳಾ ಶಿಕ್ಷಣಕ್ಕೂ ಉತ್ತೇಜನ ನೀಡಿದೆ. ಕಾಲೇಜು ಮತ್ತು ತರಬೇತಿ ಕೇಂದ್ರಗಳಿಗೆ ಹೋಗುವ ವಿದ್ಯಾರ್ಥಿನಿಯರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ದೂರದ ಊರುಗಳಿಂದ ನಗರಗಳಿಗೆ ಶಿಕ್ಷಣಕ್ಕಾಗಿ ಪ್ರಯಾಣಿಸುವ ವಿದ್ಯಾರ್ಥಿನಿಯರಿಗೆ ಈ ಯೋಜನೆ ಆಶಾಕಿರಣವಾಗಿದೆ.

ಸಾಮಾಜಿಕವಾಗಿ ನೋಡಿದರೆ, ಈ ಯೋಜನೆ ಮಹಿಳೆಯರ ಭಾಗವಹಿಸುವಿಕೆಯನ್ನು ಸಾರ್ವಜನಿಕ ಬದುಕಿನಲ್ಲಿ ಹೆಚ್ಚಿಸಿದೆ. ಸ್ವಸಹಾಯ ಸಂಘಗಳು, ಮಾರುಕಟ್ಟೆ ಚಟುವಟಿಕೆಗಳು, ಸರ್ಕಾರಿ ಕಚೇರಿಗಳ ಸಂಪರ್ಕ ಎಲ್ಲವೂ ಸುಲಭವಾಗಿದೆ. ಮಹಿಳೆಯರ ಚಲನವಲನ ಹೆಚ್ಚಿದಂತೆ ಅವರ ಧ್ವನಿ ಮತ್ತು ಹಕ್ಕುಗಳ ಅರಿವು ಕೂಡ ವಿಸ್ತರಿಸಿದೆ.

ಸಾರಿಗೆ ಇಲಾಖೆಯ ದೃಷ್ಟಿಯಿಂದಲೂ ಶಕ್ತಿ ಯೋಜನೆ ಒಂದು ದೊಡ್ಡ ಕಾರ್ಯಾಚರಣೆ. ಹೆಚ್ಚಿದ ಪ್ರಯಾಣಿಕರ ಸಂಖ್ಯೆಯನ್ನು ನಿರ್ವಹಿಸಲು ಬಸ್‌ಗಳ ಸಂಖ್ಯೆ, ವೇಳಾಪಟ್ಟಿ ಹಾಗೂ ಸೇವಾ ಗುಣಮಟ್ಟವನ್ನು ಸುಧಾರಿಸುವ ಅಗತ್ಯ ಮೂಡಿದೆ. ಇದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಗೆ ಕಾರಣವಾಗಿದೆ.

ಒಟ್ಟಿನಲ್ಲಿ, ಶಕ್ತಿ ಯೋಜನೆ ಕೇವಲ ಉಚಿತ ಪ್ರಯಾಣ ಸೌಲಭ್ಯವಲ್ಲ; ಅದು ಮಹಿಳೆಯರ ಜೀವನಮಟ್ಟವನ್ನು ಸುಧಾರಿಸುವ ಸಾಮಾಜಿಕ ಚಳುವಳಿಯಂತಾಗಿದೆ. ಆರ್ಥಿಕ ಉಳಿತಾಯ, ಶಿಕ್ಷಣದ ಅವಕಾಶ, ಉದ್ಯೋಗದ ಪ್ರವೇಶ ಹಾಗೂ ಸ್ವಾವಲಂಬನೆಯ ದಿಕ್ಕಿನಲ್ಲಿ ಈ ಯೋಜನೆ ನಿಜವಾದ ಶಕ್ತಿಯಾಗಿ ಪರಿಣಮಿಸಿದೆ. ಮಹಿಳೆಯರ ಸಬಲೀಕರಣವೇ ರಾಜ್ಯದ ಪ್ರಗತಿಯ ಆಧಾರ ಎಂಬುದನ್ನು ಈ ಯೋಜನೆ ಸ್ಪಷ್ಟವಾಗಿ ತೋರಿಸಿದೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆ ಮಹಿಳೆಯರ ದೈನಂದಿನ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದಿದೆ. ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಮೂಲಕ ಅವರ ಸಂಚಾರ ಸ್ವಾತಂತ್ರ್ಯವನ್ನು ವಿಸ್ತರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಒಟ್ಟಿನಲ್ಲಿ ಶಕ್ತಿ ಯೋಜನೆ ಮಹಿಳೆಯರ ಸಬಲೀಕರಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಅವರ ಆತ್ಮವಿಶ್ವಾಸ ಹಾಗೂ ಸಾಮಾಜಿಕ ಭಾಗವಹಿಸುವಿಕೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಸಾಧನವಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಹಿಳೆಯರ ಸಕ್ರಿಯ ಪಾತ್ರ ಅಗತ್ಯವೆಂಬುದನ್ನು ಈ ಯೋಜನೆ ಮತ್ತೊಮ್ಮೆ ಸಾಬೀತುಪಡಿಸಿದೆ.

ಬಾಕ್ಸ್

ಶಕ್ತಿ ಯೋಜನೆ ಮುಖ್ಯಮಂತ್ರಿ ಸಿದ್ಧರಾಮಯ್ಯನ ನೇತೃತ್ವದಲ್ಲಿ 11 ಜೂನ್ 2023ರಿಂದ ಜಾರಿಗೆ ಬಂದಿದೆ. ಮಹಿಳೆಯರಿಗೆ ಉಚಿತ ಸಾರ್ವಜನಿಕ ಬಸ್ ಪ್ರಯಾಣದ ಮೂಲಕ ಯಶಸ್ವಿಯಾಗಿ 500 ಕೋಟಿಗೂ ಅಧಿಕ ಉಚಿತ ಪ್ರಯಾಣಗಳು ಹಾಗೂ 12,500 ಕೋಟಿಗೂ ಹೆಚ್ಚು ಟಿಕೆಟ್ ಮೌಲ್ಯಗಳನ್ನು ರಾಜ್ಯದ ಮಹಿಳೆಯರು ಪಡೆದಿದ್ದಾರೆ. ದೈನಂದಿನ ಪ್ರಯಾಣದ ಸಂಖ್ಯೆಯಲ್ಲಿ ಸಹ ಪರಿಣಾಮಕಾರಿ ಏರಿಕೆ ಕಂಡುಬಂದಿದೆ ಮತ್ತು ಸಮಗ್ರವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಪ್ರಯಾಣದ ನಿರ್ಬಂಧ ಇಲ್ಲದೇ ಅವಕಾಶ ಸುಲಭವಾಗಿದೆ.

ಜಿಲ್ಲೆಯಲ್ಲಿ ಶಕ್ತಿ ಯೋಜನೆಯ ಪ್ರಗತಿ
ಶಕ್ತಿ ಯೋಜನೆ ಆರಂಭದ ದಿನಾಂಕ 11-6-2023ರಿಂದ 31-1-2026ರವರೆಗೆ ಗದಗ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 25.54 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು 863.57 ಕೋಟಿ ರೂ.ಗಳ ಶೂನ್ಯ ಟಿಕೇಟ್ ವಿತರಿಸಿದೆ. ಆ ಪೈಕಿ ತಾಲೂಕಾವಾರು ಶೂನ್ಯ ಟಿಕೇಟ್ ನೀಡಿದ ಮೊತ್ತದ ವಿವರ ಇಂತಿದೆ (ಕೋಟಿ ರೂ.ಗಳಲ್ಲಿ) :ಗದಗ-128.46, ರೋಣ-58.81,ಲಕ್ಷ್ಮೇಶ್ವರ-67.75, ನರಗುಂದ-60.78, ಮುಂಡರಗಿ-51.67, ಗಜೇಂದ್ರಗಡ-20.86, ಶಿರಹಟ್ಟಿ- 475.20.

  • ಹನುಮಂತ ಬೆಂತೂರ.
    ಅಪ್ರೆಂಟಿಸ್, ವಾರ್ತಾ ಮತ್ತು ಸಾ.ಸಂ. ಇಲಾಖೆ, ಗದಗ.

ಜೀವನ ಸಂಧ್ಯೆಯ ಆರ್ಥಿಕ ಸುರಕ್ಷತೆ

ಅಸಂಘಟಿತ ಕಾರ್ಮಿಕರಿಗೆ ಅವರ ಜೀವನ ಸಂಧ್ಯಾಕಾಲದಲ್ಲಿ ದುಡಿದು ತಮ್ಮನ್ನು ಪೋಷಿಸಿಕೊಳ್ಳಲು ಆರ್ಥಿಕ ಮೂಲಗಳು ಇರುವುದಿಲ್ಲ. ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವೃದ್ಧಾಪ್ಯದ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕಾರವು ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ (ಪಿಎಂ-ಎಸ್‌ವೈಎಂ)ಎಂಬ ಮಹತ್ವಾಕಾಂಕ್ಷಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಅಸಂಘಟಿತ ಕಾರ್ಮಿಕರಿಗೆ ಜಾರಿಗೆ ತಂದಿದೆ.

ಭಾರತ ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಮತ್ತು ಇದೇ ರೀತಿಯ ಇತರೆ ಉದ್ಯೋಗಗಳ ಕೆಲಸಗಾರರು ಅಸಂಘಟಿತ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವುದನ್ನು ಕಾಣುತ್ತಿದ್ದೇವೆ.

ಫಲಾನುಭವಿಗಳಿಗೆ ಇರಬೇಕಾದ ಅಹರ್ತತೆಗಳು: ಯೋಜನೆಗೆ ಒಳಪಡುವ ಕಾರ್ಮಿಕರು ಅಸಂಘಟಿತ ವಲಯದ ಕಾರ್ಮಿಕರಾಗಿದ್ದು, 18ರಿಂದ 40 ವರ್ಷದೊಳಗಿರಬೇಕು. ಅವರ ಮಾಸಿಕ ಆದಾಯ ರೂ. 15 ಸಾವಿರ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಅವರು ಆದಾಯ ತೆರಿಗೆ, ಇ.ಎಸ್.ಐ./ಪಿ.ಎಫ್ /ಎನ್.ಪಿ.ಎಸ್. ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬಾರದು. ಬ್ಯಾಂಕ್ ಉಳಿತಾಯ ಖಾತೆ ಮತ್ತು ಆಧಾರ್ ಸಂಖ್ಯೆ ಹೊಂದಿರಬೇಕು.

ಫಲಾನುಭವಿಗಳು ನೋಂದಣಿ ವಿಧಾನಗಳು: ಅರ್ಹ ಅಸಂಘಟಿತ ಕಾರ್ಮಿಕರು ಹತ್ತಿರದ ಕಾಮನ್ ಸರ್ವಿಸ್ ಸೆಂಟರ್ (ಸಿ.ಎಸ್.ಸಿ)ಗಳಲ್ಲಿ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಬಹುದು. ಸಿ.ಎಸ್.ಸಿ.ಗಳ ವಿವರಗಳನ್ನು ಹತ್ತಿರದ ಎಲ್.ಐ.ಸಿ ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರಕಾರದ ಕಾರ್ಮಿಕ ಇಲಾಖೆ ಇ.ಎಸ್.ಐ ಕಾರ್ಪೊರೇಷನ್ ಹಾಗೂ ಭವಿಷ್ಯ ನಿಧಿ ಸಂಘಟನೆಯ ಕಚೇರಿಗಳು ಹಾಗೂ ಇಲಾಖೆಯ ವೆಬ್ ವಿಳಾಸಗಳು ಹಾಗೂ https://maandhan.in ಗಳಲ್ಲಿ ಪಡೆಯಬಹುದಾಗಿದೆ.

ಕಾರ್ಮಿಕರು ತಮ್ಮೊಂದಿಗೆ ಆರಂಭಿಕ ವಂತಿಕೆ ಮೊತ್ತ, ಆಧಾರ್ ಕಾರ್ಡ್, ಖಾತೆ ಹೊಂದಿರುವ ಬ್ಯಾಂಕಿನ ಐ.ಎಫ್.ಎಸ್.ಸಿ ಕೋಡ್ ವಿವರಗಳೊಂದಿಗೆ ತಮ್ಮ ನಾಮನಿರ್ದೇಶಿತರ ವಿವರಗಳು ಮತ್ತು ಮೊಬೈಲ್‌ನೊಂದಿಗೆ ಕಾಮನ್ ಸರ್ವಿಸ್ ಸೆಂಟರ್‌ಗಳಿಗೆ ತೆರಳಿ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು.

ಯೋಜನೆಯ ಸೌಲಭ್ಯ, ಪ್ರಯೋಜನಗಳು: ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಪಿಂಚಣಿ ಖಾತೆಗೆ ಪಾವತಿಸುತ್ತದೆ. ಫಲಾನುಭವಿಯ ವಯಸ್ಸು 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3000 ರೂ.ಗಳ ಖಚಿತ ಕನಿಷ್ಠ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ. ಚಂದಾದಾರರು ಹತ್ತು ವರ್ಷದೊಳಗಾಗಿ ಯೋಜನೆಯಿಂದ ನಿರ್ಗಮಿಸಿದ್ದಲ್ಲಿ ಅವರು ಪಾವತಿಸಿದ ವಂತಿಕೆಯನ್ನು ಮಾತ್ರ ಆ ಅವಧಿಗೆ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿಯೊಂದಿಗೆ ಹಿಂದಿರುಗಿಸಲಾಗುತ್ತದೆ. 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ನಂತರ ನಿರ್ಗಮಿಸಿದ್ದಲ್ಲಿ ಅವರು ಪಾವತಿಸಿದ ವಂತಿಕೆಯೊಂದಿಗೆ ಪಿಂಚಣಿ ಖಾತೆಗೆ ಜಮೆಯಾಗಿರುವ ಬಡ್ಡಿ ಅಥವಾ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ಪಾವತಿಸಲಾಗುವುದು. ಫಲಾನುಭವಿಯ ನಿರಂತರವಾಗಿ ವಂತಿಕೆಯನ್ನು ಪಾವತಿಸಿದ್ದು, ಅವರು 60 ವರ್ಷದ ಒಳಗಾಗಿ ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗ ನ್ಯೂನತೆಯಿಂದ ವಂತಿಕೆಯನ್ನು ಪಾವತಿಸಲು ಸಾಧ್ಯವಾಗದಿದ್ದಲ್ಲಿ ಅವರ ಸಂಗಾತಿಯು ತದನಂತರ ಈ ಯೋಜನೆಗೆ ಸೇರಬಹುದಾಗಿದ್ದು, ವಂತಿಕೆಯನ್ನು ಪಾವತಿಸಿ ಮುಂದುವರೆಸಬಹುದಾಗಿದೆ ಅಥವಾ ಅವರ ವಂತಿಕೆಯನ್ನು ಬಡ್ಡಿಯೊಂದಿಗೆ ಪಡೆಯಲು ಅರ್ಹರು. ಪಿಂಚಣಿ ಆರಂಭಗೊಂಡ ನಂತರ ಚಂದಾದಾರರು ಮೃತಪಟ್ಟಲ್ಲಿ, ಅವರ ಪತ್ನಿ / ಪತಿ ಮಾತ್ರ ಪಿಂಚಣಿಯ ಶೇ. 50ರಷ್ಟು ಪಿಂಚಣಿಯನ್ನು ಪಡೆಯಲು ಅರ್ಹರು. ಯೋಜನೆಯು ವಿದ್ಯುನ್ಮಾನ ಆಧಾರಿತವಾಗಿದ್ದು, ಎಸ್.ಎಂ.ಎಸ್ ಮೂಲಕ ಎಲ್ಲಾ ವ್ಯವಹಾರಗಳ ಮಾಹಿತಿಯನ್ನು ಫಲಾನುಭವಿಗಳಿಗೆ ಕಾಲ ಕಾಲಕ್ಕೆ ತಿಳಿಸಲಾಗುವುದು.

ಸಂಪರ್ಕಿಸಬೇಕಾದ ವಿಳಾಸಗಳು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಕಚೇರಿಗಳು, ಶಾಖಾ ಕಚೇರಿಗಳು, ಎಲ್.ಐ.ಸಿಯ ಶಾಖಾ ಕಚೇರಿಗಳು, ಇ.ಪಿ.ಎಫ್.ಒ ಮತ್ತು ಇ.ಎಸ್.ಐ.ಸಿ ಕಚೇರಿಗಳಲ್ಲಿ ಟೋಲ್ ಫ್ರೀ ಕಾಲ್ ಸೆಂಟರ್ ಸಂಖ್ಯೆ: 1800-267-6888, ಎಲ್.ಐ.ಸಿಯ ವೆಬ್‌ಸೈಟ್ ವಿಳಾಸ: https://licindia.in, ಸಮೀಪದ ಸಿ.ಎಸ್.ಸಿ ಸೆಂಟರ್‌ಗಳಿಗಾಗಿ https://maandhan.in ಸಂಪರ್ಕಿಸಬಹುದು. ಅಸಂಘಟಿತ ಕಾರ್ಮಿಕರು ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ ಸಂಖ್ಯೆಗೆ-155214 ಕರೆಮಾಡಿ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.

  • ಯುವರಾಜ್ ಸಿ.ಎಲಿಗಾರ.
    ಪ್ರಶಿಕ್ಷಣಾರ್ಥಿ, ವಾರ್ತಾ ಮತ್ತು ಸಾ.ಸಂ. ಇಲಾಖೆ, ಗದಗ.

ಜಾತ್ರಾ ಮಹೋತ್ಸವವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸೋಣ

0

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಶ್ರೀ ಜಗದ್ಗುರು ತೋಂಟದಾರ್ಯ ಮಠದ 2025ನೇ ಸಾಲಿನ ಜಾತ್ರಾ ಮಹೋತ್ಸವದ ಮಹಾಪ್ರಸಾದ ವಿತರಣೆ ಮತ್ತು 2026ನೇ ಸಾಲಿನ ಜಾತ್ರಾಮಹೋತ್ಸವದ ಪೂರ್ವಭಾವಿ ಸಭೆ ಜರುಗಿತು.

2026ನೇ ಸಾಲಿನ ಜಾತ್ರಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಎಂ.ಸಿ. ಐಲಿ, ಬಾಲಚಂದ್ರ ಭರಮಗೌಡರ, ಎಸ್.ಎಸ್. ಪಟ್ಟಣಶೆಟ್ಟಿ, ಗಂಗಾಧರ ಹಿರೇಮಠ, ಶೇಖಣ್ಣ ಕವಳಿಕಾಯಿ, ವಿರೂಪಣ್ಣ ಬಳ್ಳೋಳ್ಳಿ, ಕೆ.ಎಚ್. ಬೇಲೂರು, ಕೆ.ಎಸ್. ಚೆಟ್ಟಿ, ಎಮ್.ಎಸ್. ಅಂಗಡಿ ಮುಂತಾದವರನ್ನೊಳಗೊಂಡ ಹಿರಿಯ ಭಕ್ತರ ಸಮಿತಿಯು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿನಾಯಕ ಮಾನ್ವಿ ಮಾತನಾಡಿ, ಜಾತ್ರೆಯನ್ನು ಎಲ್ಲ ಭಕ್ತರ ಸಹಕಾರದೊಂದಿಗೆ ಯಶಸ್ವಿಗೊಳಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿ, 2025ನೇ ಸಾಲಿನ ಜಾತ್ರಾ ಮಹೋತ್ಸವದ ಸರ್ವ ಪದಾಧಿಕಾರಿಗಳು ಅತ್ಯಂತ ಕ್ರಿಯಾಶೀಲರಾಗಿ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಅಂತೆಯೇ 2026ನೇ ಸಾಲಿನ ಜಾತ್ರಾ ಮಹೋತ್ಸವವನ್ನು ಸರ್ವ ಸದ್ಭಕ್ತರ ಹಾಗೂ ಪದಾಧಿಕಾರಿಗಳ ಸಹಕಾರದಿಂದ ವೈಶಿಷ್ಟ್ಯಪೂರ್ಣವಾಗಿ ಆಚರಿಸಬೇಕು. ಜಾತ್ರೆಗಳು ಕೇವಲ ಸಾಂಪ್ರದಾಯಿಕ ಹಿನ್ನೆಲೆಯನ್ನು ಹೊಂದಿರದೆ, ಜನಸಾಮಾನ್ಯರ ಜ್ಞಾನದೀವಿಗೆಯನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಪುಸ್ತಕಗಳ ಬಿಡುಗಡೆ, ಕೃಷಿ ಚಟುವಟಿಕೆ, ನಾಡಿನ ಸಾಹಿತಿಗಳಿಂದ ಭಾಷಣ ಹೀಗೆ ಅನೇಕ ಮೌಲಿಕ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಹಾಕಿದ ಬಸವಪಥದಲ್ಲಿಯೇ ಈ ಜಾತ್ರೆಯು ಸಾಗಲಿದ್ದು, ಸಕಲ ಸದ್ಭಕ್ತರು ಜಾತ್ರಾ ಪದಾಧಿಕಾರಿಗಳೊಂದಿಗೆ ಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಕರೆ ನೀಡಿದರು.

ಕಳೆದ 2025ನೇ ಸಾಲಿನ ಜಾತ್ರಾ ಸಮಿತಿಯ ಅಧ್ಯಕ್ಷರಾದ ಡಾ. ಧನೇಶ ದೇಸಾಯಿ ಸರ್ವರನ್ನೂ ಸ್ವಾಗತಿಸಿದರು. ಎಂ.ಸಿ. ಐಲಿ ನಿರೂಪಿಸಿದರು. ಪ್ರಕಾಶ ಅಸುಂಡಿ, ಜೆ.ಕೆ. ಜಮಾದಾರ ಪ್ರಾಸ್ತಾವಿಕವಾಗಿ ಜಾತ್ರೆ ನಡೆದು ಬಂದ ಇತಿಹಾಸವನ್ನು ಸಭೆಗೆ ವಿವರಿಸಿದರು.

ಆ ಪ್ರಕಾರ ಈ ವರ್ಷದ ಜಾತ್ರಾ ಸಮಿತಿಯ ಅಧ್ಯಕ್ಷರನ್ನಾಗಿ ವಿನಾಯಕ ಮಾನ್ವಿ, ಉಪಾಧ್ಯಕ್ಷರನ್ನಾಗಿ ಶಿವಯ್ಯ ನಾಲ್ವತ್‌ವಾಡಮಠ, ಸುಭಾಷ ಚನ್ನಪ್ಪನವರ, ಸುಧಾ ಹುಚ್ಚಣ್ಣವರ, ಕೋಶಾಧ್ಯಕ್ಷರಾಗಿ ವಿರೂಪಾಕ್ಷಪ್ಪ ದಲಾಲಿ, ಸಹ ಕೋಶಾಧ್ಯಕ್ಷರಾಗಿ ಈರಣ್ಣ ಗಡಗಿ, ಕಾರ್ಯದರ್ಶಿಗಳಾಗಿ ಚೇತನ ಅಂಗಡಿ, ಸಹ ಕಾರ್ಯದರ್ಶಿಗಳಾಗಿ ಎಮ್.ಎಚ್. ಹೂಗಾರ, ಚಂದ್ರಶೇಖರ ಜಿ.ರಾಜೂರ, ಎಸ್.ಎಂ. ಪವಾಡಿಗೌಡ್ರ, ಸಂಘಟನಾ ಕಾರ್ಯದರ್ಶಿಯಾಗಿ ಉಮೇಶಗೌಡ ಪಾಟೀಲ, ಯಲ್ಲೂಸಾ ಮೋತಿಲಾಲಸಾ ಹಬೀಬ ಆಯ್ಕೆಯಾಗಿದ್ದಾರೆ.

RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲೇ ನಡೆಯಲಿವೆ ಪಂದ್ಯಗಳು; ಸರ್ಕಾರದಿಂದ ಸಿಕ್ತು ಗ್ರೀನ್ ಸಿಗ್ನಲ್

0

ಆರ್ ಸಿಬಿ ಅಭಿಮಾನಿಗಳಿಗೆ ರಾಜ್ಯ ಸರ್ಕಾರವು ಗುಡ್ ನ್ಯೂಸ್ ಕೊಟ್ಟಿದೆ. ಐಪಿಎಲ್ 2026 ಮಾರ್ಚ್ ಅಂತ್ಯದಲ್ಲಿ ಆರಂಭವಾಗಲಿದೆ.

ಆದರೆ ಅದಕ್ಕೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ತವರು ಪಂದ್ಯಗಳನ್ನು ಬೆಂಗಳೂರಿನಲ್ಲಿ ಎಲ್ಲಿ ಆಯೋಜಿಸಬೇಕು ಎಂಬುದು ಸ್ಪಷ್ಟವಾಗಿರಲಿಲ್ಲ. ಕಳೆದ ಕೆಲವು ದಿನಗಳಿಂದ ಈ ವಿಚಾರವು ಅಭಿಮಾನಿಗಳಲ್ಲಿ ಪ್ರಶ್ನಾರ್ಥಕವಾಗಿ ಉಳಿದಿತ್ತು. ಸಮಸ್ಯೆಯು ಆರ್‌ಸಿಬಿ ಫ್ರಾಂಚೈಸಿ ಮತ್ತು ಕರ್ನಾಟಕ ಸರ್ಕಾರದ ನಡುವೆ ಉಂಟಾದ ಗುದ್ದಾಟದಿಂದ ಉದ್ಭವಿಸಿತ್ತು.

ಪ್ರಾರಂಭದಲ್ಲಿ ಫ್ರಾಂಚೈಸಿ ತಮ್ಮ ಬೇಡಿಕೆಗಳನ್ನು ನೀಡಿದರೂ, ಸರ್ಕಾರಿ ಅನುಮತಿ ಇಲ್ಲದ ಕಾರಣ ಸ್ಪಷ್ಟ ನಿರ್ಧಾರ ತಲುಪಲಾಗಿರಲಿಲ್ಲ. ಇದೀಗ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡು, ಸರ್ಕಾರ ಆರ್‌ಸಿಬಿ ತಂಡಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ಮನೆ ಪಂದ್ಯಗಳನ್ನು ಆಡಲು ಅನುಮತಿ ನೀಡಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರದಿಂದ ಆರ್‌ಸಿಬಿ ಅಭಿಮಾನಿಗಳು ಉತ್ಸಾಹದಿಂದ, ಸಂತೋಷದಿಂದ ಹೆಮ್ಮೆಯ ಅನುಭವವನ್ನು ಕಾಣಲು ಸಿದ್ಧರಾಗಿದ್ದಾರೆ. ಟಿಕೆಟ್‌ಗಳು, ಅತಿಥಿ ವ್ಯವಸ್ಥೆ, ಸ್ಥಳೀಯ ಸುರಕ್ಷತಾ ಕ್ರಮಗಳ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವ ನಿರೀಕ್ಷೆ ಇದೆ.

ರಾಯಚೂರು| ಕಾಲುವೆಯಲ್ಲಿ ಬಿದ್ದು ಇಬ್ಬರು ಕೂಲಿ ಮಹಿಳೆಯರು ಸಾವು!

0

ರಾಯಚೂರು: ಲಿಂಗಸುಗೂರು ತಾಲ್ಲೂಕಿನ ಆನೆಹೊಸೂರು ಬಳಿ ಭತ್ತ ಹಚ್ಚುವ ಕೆಲಸ ಮುಗಿಸಿದ ಇಬ್ಬರು ಮಹಿಳೆಯರು ಕೈಕಾಲು ತೊಳೆದುಕೊಳ್ಳಲು ಹೋಗುವ ವೇಳೆ ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.

ಮಸ್ಕಿ ತಾಲೂಕಿನ ನಂಜಲದಿನ್ನಿ ಗ್ರಾಮದ ಈರಮ್ಮ (35) ಮತ್ತು ದೇವಮ್ಮ (30) ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಲಿಂಗಸುಗೂರು ಪೊಲೀಸ್ ಮತ್ತು ಅಗ್ನಿಶಾಮಕ ದಳ ಭೇಟಿ ನೀಡಿ ಶೋಧ ಕಾರ್ಯ ನಡೆಸಿ ಶವಗಳನ್ನು ಹೊರತೆಗೆದಿದ್ದಾರೆ. ಸದ್ಯ ಮೃತದೇಹಗಳನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಘಟನೆ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಿಕ್ಲು ಶಿವು ಕೊಲೆ ಪ್ರಕರಣ| ಏರ್ ಪೋರ್ಟ್ ನಲ್ಲಿ ಸಿಕ್ಕಿಬಿದ್ದ ಬಿಜೆಪಿ MLA ಬೈರತಿ ಬಸವರಾಜ್!

0

ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಅಲಿಯಾಸ್ ವಿ.ಜಿ.ಶಿವಪ್ರಕಾಶ್ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ ನಂತರ, ಬಿಜೆಪಿ ಶಾಸಕ ಭೈರತಿ ಬಸವರಾಜ್​​ ನನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪರಾರಿಯಾಗಿದ್ದ ಬಸವರಾಜ್​​ನ ಅಹಮದಾಬಾದ್​ನಿಂದ ಬೆಂಗಳೂರಿಗೆ ಆಗಮನದ ಮಾಹಿತಿ ಸಿಐಡಿ ಅಧಿಕಾರಿಗಳಿಗೆ ಲಭ್ಯವಾಯಿತು. ಸಂಜೆ 7 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಆದ ನಂತರ, ಸಿಐಡಿ ತಂಡವು ಅವರನ್ನು ಟರ್ಮಿನಲ್ ಒಳಗಡೆಯೇ ವಶಕ್ಕೆ ಪಡೆದಿದೆ.

ಈ ವೇಳೆ, ಭೈರತಿ ಬಸವರಾಜ್​​ನನ್ನು ನೇರವಾಗಿ ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದು, ವೈದ್ಯಕೀಯ ಪರಿಶೀಲನೆ ನಂತರ ಶೀಘ್ರವೇ ಜಡ್ಜ್ ಎದುರು ಹಾಜರಾತಿ ನಡೆಯಲಿದೆ. ಸಿಐಡಿ ಜಡ್ಜ್​​ ಮುಂದಿನ ರಿಮ್ಯಾಂಡ್ ಅರ್ಜಿಯನ್ನು ಸಲ್ಲಿಸಲಿದೆ.

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಶವ ಪ್ಯಾಕ್‌ ಮಾಡಲೂ ಲಂಚ; ಐವರು ಸಿಬ್ಬಂದಿ ಸಸ್ಪೆಂಡ್

0

ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆಯಲ್ಲಿ ಶವ ಪ್ಯಾಕ್‌ ಮಾಡುವ ಸಂದರ್ಭದಲ್ಲಿ ಲಂಚ ವಸೂಲಾತಿ ಪ್ರಕರಣ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಐವರು ಹೊರ ಗುತ್ತಿಗೆ (ಡಿ ಗ್ರೂಪ್) ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ರಾಯಚೂರು ಜಿಲ್ಲೆಯ ಲಿಂಗಸಗೂರು ನಿವಾಸಿ ಗದ್ದೆಮ್ಮಾ (52) ಪಿತ್ತಕೋಶದ ಕಲ್ಲುಗಳಿಂದ ಅಸ್ವಸ್ಥರಾಗಿದ್ದರು. ಹೀಗಾಗಿ ಜ.31ರಂದು ಅವರನ್ನು ಹುಬ್ಬಳ್ಳಿ ಕಿಮ್ಸ್​​ಗೆ ದಾಖಲು ಮಾಡಲಾಗಿತ್ತು. ದುರಾದೃಷ್ಟವಶಾತ್ ಶಸ್ತ್ರಚಿಕಿತ್ಸೆ ನಂತರ ಗದ್ದೆಮ್ಮಾ ಮೃತಪಟ್ಟಿದ್ದರು.

ಆದರೆ ಮಹಿಳೆಯ ಶವವನ್ನು ಪ್ಯಾಕ್ ಮಾಡಿ ವಾಹನಕ್ಕೆ ಹಾಕಲು ಐವರು ಡ್ರಿ ಗ್ರೂಪ್ ಸಿಬ್ಬಂದಿ ಹಣ ವಸೂಲಾತಿ ಮಾಡಿಕೊಂಡಿದ್ದರು. ಆರಂಭದಲ್ಲಿ 200 ರೂಪಾಯಿ ಪಡೆದ ಬಳಿಕ, ಶವವನ್ನು ವಾಹನಕ್ಕೆ ಹಾಕಿದ ಮೇಲೆ ಮತ್ತಷ್ಟು 200 ರೂಪಾಯಿ ಕೇಳಿದ್ದರಿಂದ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಈ ಘಟನೆಯನ್ನು ವಿಡಿಯೋ ಮಾಡಿ ಅವರು ಸಾರ್ವಜನಿಕರಿಗೆ ತೋರಿಸಿದ್ದರು. ಲಂಚಾವತಾರ ಬಯಲಾದ ಬಳಿಕ ಹಣ ವಸೂಲಿ ಮಾಡಿದ ಐವರು ಡಿ ಗ್ರೂಪ್‌ ನೌಕರರನ್ನು ಅಮಾನತು ಮಾಡಲಾಗಿದೆ

ಮೈಸೂರು| ಫೆಬ್ರವರಿ 16ರಂದು ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ; ಇಲ್ಲಿದೆ ಸಂಪೂರ್ಣ ಮಾಹಿತಿ!

0

ಮೈಸೂರು: ಹಬ್ಬನಘಟ್ಟ ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ನಡೆಯುತ್ತಿರುವ ಕಾಲುವೆ ಕ್ರಾಸಿಂಗ್ ಕಾಮಗಾರಿ ಕಾರಣ, ಫೆಬ್ರವರಿ 16ರ ಸೋಮವಾರ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಅರಸೀಕೆರೆ–ಮೈಸೂರು ಪ್ಯಾಸೆಂಜರ್, ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ಮತ್ತು ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ರೈಲುಗಳು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಮೈಸೂರು–ಅರಸೀಕೆರೆ ಮಾರ್ಗದಲ್ಲಿ ಭಾಗಶಃ ರದ್ದು ಮಾಡಲಾಗಿದ್ದು, ಅರಸೀಕೆರೆಯಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭವಾಗಲಿದೆ. ಇತರ ರೈಲುಗಳಲ್ಲಿ ಮೈಸೂರು–ಅರಸೀಕೆರೆ ಪ್ಯಾಸೆಂಜರ್ 110 ನಿಮಿಷ ಮತ್ತು ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ 100 ನಿಮಿಷ ಮಾರ್ಗ ಮಧ್ಯೆ ನಿಯಂತ್ರಣಕ್ಕೆ ಒಳಗಾಗಲಿದೆ.

ಅರಸೀಕೆರೆ–ಮೈಸೂರು ಪ್ಯಾಸೆಂಜರ್ ಮತ್ತು ಮೈಸೂರು–ಎಸ್‌ಎಂವಿಟಿ ಬೆಂಗಳೂರು ಪ್ಯಾಸೆಂಜರ್ ವಿಶೇಷ ರೈಲುಗಳು 100 ನಿಮಿಷ ವಿಳಂಬದಿಂದ ಸಂಚಾರ ನಡೆಸಲಿವೆ. ಪ್ರಯಾಣಿಕರು ತಮ್ಮ ಪ್ರಯಾಣದ ವೇಳೆಯನ್ನು ಪರಿಶೀಲಿಸುವಂತೆ ರೈಲ್ವೆ ಇಲಾಖೆ ಸೂಚಿಸಿದೆ.

ಬೆಂಗಳೂರಿನಲ್ಲಿ ಮುಂದುವರೆದ ಪವರ್ ಕಟ್; ಶುಕ್ರವಾರವೂ ಈ ಏರಿಯಾದಲ್ಲಿ ಇರೋದಿಲ್ಲ ಕರೆಂಟ್

0

ಬೆಂಗಳೂರು:- ಕಳೆದ ಕೆಲವು ದಿನಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪವರ್ ಸಮಸ್ಯೆ ಬಿಟ್ಟು ಬಿಡದೇ ಕಾಡುತ್ತಿದ್ದು, ಸಿಟಿ ಮಂದಿ ಕಂಗಾಲಾಗಿದ್ದಾರೆ.

ಅದರಂತೆ ಶುಕ್ರವಾರವೂ ನಗರದ ವಿವಿಧ ಭಾಗಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಕೆವಿಎ ಮಾನ್ಯತಾ ಟೆಕ್ ಪಾರ್ಕ್ ಉಪಕೇಂದ್ರ ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

“ಫಿಡೆಲಿಟಿ, ಫಿಲಿಪ್ಸ್, ಇಂಕ್ಯುಬೇಟರ್, ಐಬಿಎಂ D1, D2, D3 ಮತ್ತು D4 ಬ್ಲಾಕ್ಗಳು, F2 ಬ್ಲಾಕ್, L5 ನೋಕಿಯಾ ಬ್ಲಾಕ್, L6 ಸಿಮೆನ್ಸ್ ಬ್ಲಾಕ್, G1 ಬ್ಲಾಕ್, ಎಎನ್ಜೆಡ್ H ಬ್ಲಾಕ್, C4 ಬ್ಲಾಕ್, ಮನ್ಯತಾ ರೆಸಿಡೆನ್ಸಿ, ಬಿ.ಟಿ.ಎಸ್. ಲೇಔಟ್, ಗೋದ್ರೆಜ್ ಅಪಾರ್ಟ್ಮೆಂಟ್ಸ್, ಹೆಬ್ಬಾಳ ಕೆಂಪಾಪುರ, ವಿನಾಯಕ ಲೇಔಟ್, ಚಿರಂಜೀವಿ ಲೇಔಟ್, ವೆಂಕಟೇಗೌಡ ಲೇಔಟ್, ಜೆಎನ್ಸಿ, ಎಂಎಫ್ಎಆರ್, ಮಧುವನ M2 ಬ್ಲಾಕ್ ಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಹಾಗೆಯೇ, ರಾಚೇನಹಳ್ಳಿ, ಶ್ರೀರಾಮಪುರ, ಚಾಮುಂಡೇಶ್ವರಿ ಲೇಔಟ್, ರಾಯಲ್ ಎನ್ಕ್ಲೇವ್, ಮೇಸ್ತ್ರಿ ಪಾಳ್ಯ, ತನಿಸಂದ್ರ, ಎಸ್ಎನ್ಎನ್ ಕ್ಲರ್ಮಾಂಟ್ ಅಪಾರ್ಟ್ಮೆಂಟ್ಸ್, ಕಾರ್ಲೆ ಟೌನ್ ಸೆಂಟರ್, ಬಿ. ನಾರಾಯಣಪುರ ಕ್ರಾಸ್, ಬಿಡಿಎಸ್ ಲೇಔಟ್, ಮಂತ್ರಿ ಲಿಥೋಸ್, ಕಾಫಿ ಬೋರ್ಡ್ ಲೇಔಟ್, ಫಾತಿಮಾ ಲೇಔಟ್, ಅಮರ್ಜ್ಯೋತಿ ಲೇಔಟ್, ಮರಿಯಣ್ಣಪಾಳ್ಯ, ಉಮಿಯಾ ವೆಲಾಸಿಟಿ, ಬ್ರಿಗೇಡ್ ಕ್ಯಾಲಾಡಿಯಂ ಏರಿಯಾದಲ್ಲಿ ವಿದ್ಯುತ್ ಕಟ್ ಆಗಲಿದೆ.

ಆರ್. ಬಿ.ಐ ಲೇಔಟ್, ಕೊತ್ತನೂರು, ಜೆ.ಪಿ.ನಗರ, 5ನೇ ಹಂತ, ಶ್ರೇಯಸ್ ಕಾಲೋನಿ, ಗೌರವ್ ನಗರ, ನಟರಾಜ ಲೇಔಟ್, ನೃಪತುಂಗ ನಗರ, ಜಂಬುಸವಾರಿ ದಿಣ್ಣೆ, ಚುಂಚಗಟ್ಟ, ಬ್ರೀಗೆಡ್ ಮಿಲೇನಿಯಮ್ ಮತ್ತು ಬ್ರೀಗೆಡ್ ಗರ‍್ಡೇನಿಯ ಅಪರ‍್ಟ್ಮೆಂಟ್, ರಿಚ್ ಮಂಡ್ ಸರ್ಕಲ್, ಜಾನ್ಸನ್ ಮಾರ್ಕೆಟ್, ನಾರೀಸ್ ರಸ್ತೇ, ಅರಬ್ ಲ್ಯೇನ್, ವೆಲ್ಂಗ್ಟನ್ ಸ್ಡೀಟ್ ರ‍್ಲಿ ಸ್ಡೀಟ್, ಲಿಯೋನಾರ್ಡ್ ಸ್ಡೀಟ್, ರಿನಿಯಸ್ ಸ್ಡೀಟ್ ಮತ್ತು ವಿಲ್ಸನ್ ಗರ‍್ಡನ್, ಹೊಂಬೆಗೌಡ ನಗರ, ಸಂಪಂಗಿರಾಮ ನಗರ, ಜೆ.ಸಿ. ರಸ್ತೆ, ಶಾಂತಿನಗರ, ಬಿಟಿಎಸ್ ರಸ್ತೆ, ರಿಚ್ ಮಂಡ್ ರ‍್ಕಲ್, ರೆಸಿಡೆನ್ಸಿ ರೋಡ್, ಸುದಾಮನಗರ, ಕೆ.ಎಚ್. ರಸ್ತೆ, ಶಾಂತಿನಗರ, ವಿಲ್ಸನ್ ಗರ‍್ಡನ್, ಡಬಲ್ ರೋಡ್, ಸುಬ್ಬಯ್ಯ ರ‍್ಕಲ್ ಸಿದ್ದಯ್ಯ ರಸ್ತೆ, ಲಾಲ್ ಬಾಗ್ ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.

₹14.38 ಕೋಟಿ ಆಸ್ತಿ ಪತ್ತೆ ಪ್ರಕರಣ: ಐಟಿ ಘೋಷಣೆ ವಿಚಾರಕ್ಕೆ ಹೈಕೋರ್ಟ್ ಸ್ಪಷ್ಟನೆ ಕೇಳಿ ತನಿಖೆ ಸ್ಥಗಿತ

0

ಬೆಂಗಳೂರು: ಸರ್ದಾರ್ ಸರ್ಫರಾಜ್ ಖಾನ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹೈಕೋರ್ಟ್ ತನಿಖೆಗೆ ತಾತ್ಕಾಲಿಕ ತಡೆ ನೀಡಿದ್ದು, ಐಟಿ ಘೋಷಣೆಗಳ ಬಗ್ಗೆ ಸ್ಪಷ್ಟನೆ ಕೇಳಿದೆ.

ಲೋಕಾಯುಕ್ತ ಅಧಿಕಾರಿಗಳು ಡಿಸೆಂಬರ್ 24ರಂದು ಬೆಳಿಗ್ಗೆ 50ಕ್ಕೂ ಹೆಚ್ಚು ಅಧಿಕಾರಿಗಳೊಂದಿಗೆ 13 ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಬೆಂಗಳೂರಿನ ಹಲಸೂರು ನಿವಾಸ ಸೇರಿದಂತೆ ಒಟ್ಟು 7 ಮನೆಗಳು, ಕೊಡಗಿನಲ್ಲಿ 2 ಕಾಫಿ ಎಸ್ಟೇಟ್‌ಗಳು, ಹೆಚ್.ಡಿ.ಕೋಟೆಯಲ್ಲಿನ ರೆಸಾರ್ಟ್ ಹಾಗೂ 35 ಎಕರೆ ಕೃಷಿ ಜಮೀನು ದಾಖಲೆಗಳು ಪತ್ತೆಯಾಗಿದ್ದವು.

ದಾಳಿಯಲ್ಲಿ ₹66,500 ನಗದು, ₹2.99 ಲಕ್ಷ ಮೌಲ್ಯದ ಚಿನ್ನ, ₹1.29 ಕೋಟಿ ಮೌಲ್ಯದ ಎಫ್‌ಡಿ ಸೇರಿ ಒಟ್ಟು ₹14.38 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಹೇಳಿತ್ತು.

ಲೋಕಾಯುಕ್ತ ವಾದ ಪ್ರಕಾರ, ಶೇ.131ರಷ್ಟು ಆದಾಯ ಮೀರಿದ ಆಸ್ತಿ ಗಳಿಕೆ ಕಂಡುಬಂದಿದೆ. ಆದರೆ ಅರ್ಜಿದಾರರ ಪರ, ಎಲ್ಲ ಆಸ್ತಿಗಳ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಘೋಷಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಫೆ.27ರವರೆಗೆ ತನಿಖೆಗೆ ತಾತ್ಕಾಲಿಕ ತಡೆ ನೀಡಿ, ಐಟಿ ಇಲಾಖೆಯಿಂದ ವಿವರ ಸಲ್ಲಿಸಲು ಸೂಚಿಸಿದೆ. ಪ್ರಕರಣದ ಮುಂದಿನ ಹಂತದ ಬೆಳವಣಿಗೆಗಳತ್ತ ರಾಜಕೀಯ ಹಾಗೂ ಆಡಳಿತ ವಲಯದ ಕಣ್ಣು ನೆಟ್ಟಿದೆ.

error: Content is protected !!