Home Blog Page 24

ಹೊಸ ವರ್ಷಕ್ಕೆ ದೇಶದ ಜನತೆಗೆ ಶುಭಾಶಯ ಕೋರಿದ ಪಿಎಂ ಮೋದಿ: ಕನ್ನಡಿಗರಿಗೆ ಕನ್ನಡದಲ್ಲೇ ವಿಶ್!

ದೆಹಲಿ: ಯುಗಾದಿ ಮತ್ತು ಹೊಸ ವರ್ಷದ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.

ದೇಶದ ಜನರಿಗೆ ಪತ್ರ ಬರೆದಿರುವ ಅವರು, ವಸಂತ ಋತುವಿನ ಆಗಮನವು ಹೊಸ ಚೈತನ್ಯ ಮತ್ತು ಅವಕಾಶಗಳನ್ನು ತರಲಿ. ಪವಿತ್ರ ಯುಗಾದಿಯ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುಖಮಯ ಹೊಸ ವರ್ಷದ ಶುಭಾಶಯಗಳು” ಎಂದು ಉಲ್ಲೇಖಿಸಿದ್ದಾರೆ.

ಯುಗಾದಿಯು ಹೊಸ ಕೃಷಿ ಚಟುವಟಿಕೆಗಳ ಆರಂಭದ ಕಾಲವಾಗಿರುವುದನ್ನು ಶ್ಲಾಘಿಸಿ, ನಮ್ಮ ದೇಶದ ರೈತರು ಹೊಸ ಆಶಾವಾದದೊಂದಿಗೆ ಮುಂದಿನ ಕೃಷಿ ಚಕ್ರಕ್ಕೆ ಸಜ್ಜಾಗುತ್ತಿರುವುದನ್ನು ಮೋದಿ ಮೆಚ್ಚಿಸಿದ್ದಾರೆ. ಜೀವನದ ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಯುಗಾದಿಯ ಸಾಂಪ್ರದಾಯಿಕ ಸಂದೇಶವನ್ನು ಅವರು ನೆನಪಿಸಿದ್ದಾರೆ. ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಯಶಸ್ಸನ್ನು ಕೃತಜ್ಞತೆಯಿಂದ ಸ್ವೀಕರಿಸಲು ಯುಗಾದಿ ಪ್ರೇರಣೆ ನೀಡುತ್ತದೆ ಎಂದಿದ್ದಾರೆ.

ಇದಲ್ಲದೆ, ಪ್ರಧಾನಿಯವರು ಕರ್ನಾಟಕದ ಜನತೆಗೆ ವಿಶೇಷ ಸಂದೇಶ ನೀಡಿದ್ದಾರೆ. ಸಾಮಾಜಿಕ ಜಾಲತಾಣ X ಮಾಡಿರುವ ಅವರು, “ಕರ್ನಾಟಕದ ನನ್ನ ಎಲ್ಲಾ ಸಹೋದರ-ಸಹೋದರಿಯರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.” ಯುಗಾದಿಯು ಹೊಸ ಭರವಸೆ ಮತ್ತು ಚೈತನ್ಯದ ಹಬ್ಬವಾಗಿದ್ದು, ಇದು ಪ್ರತಿಯೊಬ್ಬರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲಿ ಎಂದು ಅವರು ಹಾರೈಸಿದ್ದಾರೆ.

ಮುಂಬರುವ ವರ್ಷವು ಎಲ್ಲರ ಮನೆಮನಗಳಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಐಶ್ವರ್ಯ ತುಂಬಲಿ ಎಂದು ಪ್ರಧಾನಿ ಮೋದಿ ಪ್ರಾರ್ಥಿಸಿದ್ದಾರೆ.

KMFಗೂ ಎದುರಾದ ಸಂಕಷ್ಟ! ಇನ್ನೆರಡು ದಿನ ಕಳೆದ್ರೆ ಸಿಗಲ್ಲ ನಂದಿನಿ ಉತ್ಪನ್ನಗಳು; ಕಾರಣ?

ಬೆಂಗಳೂರು: ಯುಗಾದಿ ಹಬ್ಬದ ವೇಳೆಯೇ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ KMF ಕ್ಕೂ ಸಂಕಷ್ಟ ಎದುರಾಗಿದೆ.

ಇತ್ತೀಚಿನ ಇರಾನ್-ಇಸ್ರೇಲ್ ಸೇನಾ ಸಂಘರ್ಷ ಹಾಗೂ ದೇಶಾದ್ಯಂತ ಉಂಟಾಗಿರುವ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆ ಪರಿಣಾಮ ನಂದಿನಿ ಉತ್ಪನ್ನಗಳ ಮೇಲೂ ತಟ್ಟತೊಡಗಿದೆ. ಕಳೆದ ಕೆಲ ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಸರಬರಾಜು ವ್ಯತ್ಯಯಗೊಂಡಿರುವುದರಿಂದ, ಕೆಎಂಎಫ್ ಉತ್ಪಾದನಾ ಘಟಕಗಳು ಒತ್ತಡಕ್ಕೆ ಸಿಲುಕಿವೆ. ಸಾಮಾನ್ಯವಾಗಿ ತಿಂಗಳಿಗೆ 450 ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುವ ಕೆಎಂಎಫ್, ಇತ್ತೀಚೆಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್‌ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ಅಧಿಕಾರಿಗಳ ಮಾಹಿತಿ ಪ್ರಕಾರ, ಸದ್ಯ ಲಭ್ಯವಿರುವ ಗ್ಯಾಸ್ ಸಂಗ್ರಹವು ಮತ್ತೆರಡು ದಿನಗಳಿಗೆ ಮಾತ್ರ ಸಾಕಾಗಲಿದೆ. ಮಾರ್ಚ್ 20ರೊಳಗೆ ಪೂರೈಕೆ ಆಗದಿದ್ದರೆ, ನಂದಿನಿ ಬ್ರ್ಯಾಂಡ್‌ನ ಹಾಲು, ಸಿಹಿ-ಖಾರದ ತಿಂಡಿಗಳ ತಯಾರಿಕೆ ಮೇಲೆ ನೇರ ಪರಿಣಾಮ ಬೀಳುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ದಕ್ಷಿಣ ಭಾರತದ ಪ್ರಮುಖ ಹಾಲು ಸಹಕಾರ ಒಕ್ಕೂಟವಾಗಿರುವ ಕೆಎಂಎಫ್, ವಾರ್ಷಿಕವಾಗಿ ₹25,000–30,000 ಕೋಟಿ ವಹಿವಾಟು ನಡೆಸುತ್ತದೆ. ದಿನಕ್ಕೆ ಸರಾಸರಿ 85–90 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, 40 ಲಕ್ಷ ಲೀಟರ್‌ಗಿಂತ ಹೆಚ್ಚು ಹಾಲು ಮಾರಾಟವಾಗುತ್ತದೆ. ಉಳಿದ ಹಾಲನ್ನು ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ ಮತ್ತು ನಂದಿನಿ ಸ್ವೀಟ್ಸ್‌ಗಳಂತೆ ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತದೆ.

ನಂದಿನಿ ಬ್ರ್ಯಾಂಡ್ ಅಡಿಯಲ್ಲಿ 140ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ಅರಬ್ ರಾಷ್ಟ್ರಗಳು, ಸಿಂಗಾಪುರ ಮತ್ತು ಅಮೆರಿಕದಂತಹ ದೇಶಗಳಿಗೂ ರಫ್ತಾಗುತ್ತದೆ. ಹಬ್ಬದ ಸಮಯದಲ್ಲಿ ಸಿಹಿ ತಿಂಡಿಗಳ ಮಾರಾಟ ಹೆಚ್ಚಾಗುವುದರಿಂದ, ಪ್ರಸ್ತುತ ಗ್ಯಾಸ್ ಕೊರತೆ ಈ ಬೃಹತ್ ವಹಿವಾಟಿನ ಮೇಲೆ ನೇರ ಪರಿಣಾಮ ಬೀರುವ ಆತಂಕವನ್ನು ಉಂಟುಮಾಡುತ್ತಿದೆ.

ಯುಗಾದಿ ಸಂಭ್ರಮ: ಬೆಂಗಳೂರಲ್ಲಿ ಖರೀದಿ ಭರಾಟೆ ಜೋರು!

ಬೆಂಗಳೂರು: ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದೆ.

ಬೆಂಗಳೂರಿನಲ್ಲಿ ಹಬ್ಬದ ಖರೀದಿ ಜೋರಾಗಿ ನಡೆಯುತ್ತಿದೆ. ಕೆಆರ್ ಮಾರುಕಟ್ಟೆಯಲ್ಲಿ ಕಿಕ್ಕಿರಿದು ಜನ ತುಂಬಿದ್ದಾರೆ. ಹೂವು,ಹಣ್ಣು, ಮಾವಿನ ಸೊಪ್ಪು, ಬೇವಿನಸೊಪ್ಪು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಮಧ್ಯರಾತ್ರಿಯಿಂದಲೇ ಕೆ.ಆರ್ ಮಾರ್ಕೆಟ್ ನಲ್ಲಿ ವ್ಯಾಪಾರ ಆರಂಭಗೊಂಡಿದೆ.

ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗರು ಆಗಮಿಸಿ ಹೂವು, ಹಣ್ಣು, ಮಾವಿನ ಸೊಪ್ಪು, ಬೇವಿನ ಸೊಪ್ಪು ಖರೀದಿಸಲು ಮುಗಿಬಿದ್ದಿದ್ದಾರೆ. ಹಬ್ಬದ ಪ್ರಯುಕ್ತ ಹೂವಿಗೆ ಬೇಡಿಕೆ ಹೆಚ್ಚಾಗಿದೆ. ಕನಕಾಂಬರ, ಮಲ್ಲಿಗೆ, ಗುಲಾಬಿ, ಸುಗಂಧರಾಜ, ಸೇವಂತಿಗೆ ಸೇರಿದಂತೆ ಹೂವಿನ ದರಗಳು ಏರಿಕೆಯಾಗಿವೆ.

ಹೂವು ದರಗಳು:

  • ಮಲ್ಲಿಗೆ: 1,500–1,800 ರೂ.
  • ಮಲ್ಲಿಗೆ ಹಾರ: 300–500 ರೂ.
  • ಸೇವಂತಿಗೆ: 200–250 ರೂ.
  • ಗುಲಾಬಿ: 250 ರೂ.
  • ಚೆಂಡು ಹೂ: 40–50 ರೂ.

ಸೊಪ್ಪು ದರಗಳು:

  • ಒಂದು ಕಟ್ಟು ಬೇವಿನ ಸೊಪ್ಪು: 20 ರೂ.
  • ಒಂದು ಕಟ್ಟು ಮಾವಿನ ಸೊಪ್ಪು: 25 ರೂ.

ಯುಗಾದಿ ಎರಡು ದಿನಗಳ ಹಬ್ಬ. ಮೊದಲ ದಿನ ಸಿಹಿ ಖಾದ್ಯಗಳನ್ನು ಸವಿಯುತ್ತಾರೆ. ಎರಡನೇ ದಿನ ಹೊಸ ತೊಡಕು ಅಂಗವಾಗಿ ಮಾಂಸದ ತರಹೇವಾರಿ ಖಾದ್ಯಗಳೊಂದಿಗೆ ಹಬ್ಬ ಸಂಪನ್ನಗೊಳಿಸುತ್ತಾರೆ. ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹೊಸ ತೊಡಕು ವಿಜೃಂಭಣೆಯಿಂದ ನಡೆಯುತ್ತದೆ.

ಭಾರೀ ಪ್ರಮಾಣದಲ್ಲಿ ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಬೃಹತ್ ಗಾತ್ರದ ಮೀನು ಕಂಡು ಅಚ್ಚರಿಗೊಂಡ ಜನ!

ಕೊಪ್ಪಳ: ನಾಲ್ಕೈದು ಜಿಲ್ಲೆಗಳ ಕೃಷಿ ಹಾಗೂ ಕುಡಿಯುವ ನೀರಿನ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದ ಎಡದಂಡೆ ಮುಖ್ಯ ಕಾಲುವೆ ಭಾರಿ ಪ್ರಮಾಣದಲ್ಲಿ ಒಡೆದು ಆತಂಕ ಸೃಷ್ಟಿಸಿದೆ.

ಜಲಾಶಯದ ಅಧಿಕಾರಿಗಳು ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾಲುವೆಗೆ ನೀರು ಬಿಡಲಾಗಿತ್ತು. ನಾಲ್ಕು ಜಿಲ್ಲೆಗಳಿಗೆ ನೀರು ಪೂರೈಸುವ ಈ ಕಾಲುವೆ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ಒಡೆದ ಪರಿಣಾಮ, ನೀರು ಪಕ್ಕದ ಜಮೀನುಗಳು ಹಾಗೂ ರೆಸಾರ್ಟ್ ಪ್ರದೇಶಗಳಿಗೆ ನುಗ್ಗಿ ಹಾನಿ ಉಂಟುಮಾಡಿದೆ.

ಘಟನೆ ತಿಳಿದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತುರ್ತು ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಕಾಲುವೆ ಒಡೆದ ಪರಿಣಾಮ ಸ್ಥಳೀಯರ ಬಲೆಗೆ ಬೃಹತ್ ಮೀನುಗಳು ಸಿಕ್ಕಿವೆ. ಅದರಲ್ಲಿ ವಿಶೇಷವಾಗಿ ಸುಮಾರು 15ರಿಂದ 20 ಕೆಜಿ ತೂಕದ ಮೀನು ಸಿಕ್ಕಿದ್ದು, ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಕಾಲುವೆ ಒಡೆತದಿಂದ ಒಂದು ಕಡೆ ಹಾನಿ ಉಂಟಾದರೆ, ಇನ್ನೊಂದು ಕಡೆ ಅಪರೂಪದ ಮೀನು ಸಿಕ್ಕಿದ್ದು ಗ್ರಾಮಸ್ಥರ ಗಮನ ಸೆಳೆದಿದೆ.

ಒಣ ಕೆಮ್ಮಿನ ಸಮಸ್ಯೆ ಹೆಚ್ಚಾಗಿದ್ಯಾ!? ನಿರ್ಲಕ್ಷ್ಯ ಬೇಡ, ಮುನ್ನೆಚ್ಚರಿಕೆ ವಹಿಸಿ!

0

ದೇಶದ ಹಲವು ರಾಜ್ಯಗಳಲ್ಲಿ ಇತ್ತೀಚೆಗೆ ಹವಾಮಾನದಲ್ಲಿ ತೀವ್ರ ಬದಲಾವಣೆ ಕಂಡುಬರುತ್ತಿದ್ದು, ಇದರಿಂದ ಒಣ ಕೆಮ್ಮಿನ ಸಮಸ್ಯೆ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ.

ಬೆಳಿಗ್ಗೆ ಬಿಸಿಲು ಮತ್ತು ಸಂಜೆ ತಂಪಾದ ವಾತಾವರಣದ ನಡುವಿನ ವ್ಯತ್ಯಾಸದಿಂದ ದೇಹ ಹೊಂದಿಕೊಳ್ಳಲು ಕಷ್ಟವಾಗುತ್ತಿದ್ದು, ಅನೇಕರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ವೈದ್ಯರ ಪ್ರಕಾರ, ಹವೆಯಲ್ಲಿ ಇರುವ ಧೂಳು, ಹೊಗೆ, ಸಣ್ಣ ಕಣಗಳು ಹಾಗೂ ಮಾಲಿನ್ಯ ಒಣ ಕೆಮ್ಮಿಗೆ ಪ್ರಮುಖ ಕಾರಣಗಳಾಗಿವೆ. ವಿಶೇಷವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತಿದೆ.

ಒಣ ಕೆಮ್ಮಿನ ಲಕ್ಷಣಗಳಾಗಿ ಗಂಟಲಿನಲ್ಲಿ ಉರಿ ಭಾವನೆ, ನಿರಂತರ ಕೆಮ್ಮು, ಗಂಟಲು ಒಣಗುವುದು ಹಾಗೂ ಮಾತನಾಡುವಾಗ ತೊಂದರೆ ಅನುಭವಿಸುವುದು ಕಾಣಿಸಬಹುದು. ಕೆಲವರಲ್ಲಿ ರಾತ್ರಿ ವೇಳೆ ಕೆಮ್ಮು ಹೆಚ್ಚಾಗಿ ನಿದ್ರೆ ವ್ಯತ್ಯಯ ಉಂಟಾಗುತ್ತದೆ. ಕೆಲ ಸಂದರ್ಭಗಳಲ್ಲಿ ಎದೆ ಭಾಗದಲ್ಲಿ ಒತ್ತಡ ಅಥವಾ ಜಡತ್ವವೂ ಕಾಣಿಸಬಹುದು.

ಸಾಮಾನ್ಯವಾಗಿ ಒಣ ಕೆಮ್ಮು ಒಂದರಿಂದ ಎರಡು ವಾರಗಳವರೆಗೆ ಮುಂದುವರಿಯಬಹುದು. ಆದರೆ ದೀರ್ಘಕಾಲ ಮುಂದುವರಿದರೆ ಅಥವಾ ಜ್ವರ, ಉಸಿರಾಟದ ತೊಂದರೆ ಹಾಗೂ ದುರ್ಬಲತೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಸೂಚಿಸಿದ್ದಾರೆ.

ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ. ಸಮತೋಲನ ಆಹಾರ ಸೇವನೆ, ವಿಟಮಿನ್ ಹಾಗೂ ಖನಿಜಾಂಶಗಳಿರುವ ಆಹಾರಗಳನ್ನು ತೆಗೆದುಕೊಳ್ಳುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಗಂಟಲು ಒಣಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.

ಇದಲ್ಲದೆ, ತಣ್ಣನೆಯ ಪದಾರ್ಥಗಳನ್ನು ತಗ್ಗಿಸುವುದು, ಧೂಳು ಮತ್ತು ಮಾಲಿನ್ಯದಿಂದ ದೂರವಿರುವುದು, ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಸಹಕಾರಿ. ಬಿಸಿ ನೀರಿನ ಆವಿ ತೆಗೆದುಕೊಳ್ಳುವುದು ಮತ್ತು ಉಪ್ಪು ನೀರಿನಿಂದ ಗಾರ್ಗ್ಲ್ ಮಾಡುವುದರಿಂದಲೂ ಒಣ ಕೆಮ್ಮು ನಿಯಂತ್ರಣಕ್ಕೆ ಸಹಾಯವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ಯಾನ್ ಕಾರ್ಡ್‌ಗೆ ಹೊಸ ರೂಲ್ಸ್: ಜನ್ಮ ದಿನಾಂಕಕ್ಕೆ ಹೆಚ್ಚುವರಿ ಪ್ರೂಫ್ ಅಗತ್ಯ!

0

ನವದೆಹಲಿ: ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಇದರಿಂದ ಪ್ಯಾನ್ ಪಡೆಯುವ ಪ್ರಕ್ರಿಯೆ ಮತ್ತಷ್ಟು ಕಠಿಣವಾಗಲಿದೆ.

ಈವರೆಗೆ ಪ್ಯಾನ್‌ಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಮಾತ್ರ ಸಾಕಾಗುತ್ತಿತ್ತು. ಆದರೆ ಹೊಸ ನಿಯಮಗಳ ಪ್ರಕಾರ, ಆಧಾರ್ ಜೊತೆಗೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಲಿದೆ. ವಿಶೇಷವಾಗಿ ಜನ್ಮ ದಿನಾಂಕದ ದೃಢೀಕರಣಕ್ಕೆ ಆಧಾರ್ ಸಾಕಾಗುವುದಿಲ್ಲ ಎಂದು ತಿಳಿಸಲಾಗಿದೆ.

ಹೊಸ ನಿಯಮಗಳಂತೆ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ ಅಥವಾ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಅಗತ್ಯವಿದ್ದಲ್ಲಿ ಅಫಿಡವಿಟ್ ಸೇರಿದಂತೆ ಇತರೆ ಸರ್ಕಾರಿ ದಾಖಲೆಗಳನ್ನೂ ಕೇಳಬಹುದಾಗಿದೆ.

ಇನ್ನೊಂದು ಪ್ರಮುಖ ಬದಲಾವಣೆ ಹೆಸರಿನ ಹೊಂದಿಕೆಗೆ ಸಂಬಂಧಿಸಿದೆ. ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಪ್ಯಾನ್ ಕಾರ್ಡ್‌ನಲ್ಲಿರುವ ಹೆಸರು ನಿಖರವಾಗಿ ಒಂದೇ ರೀತಿಯಲ್ಲಿ ಇರಬೇಕು. ಇನಿಷಿಯಲ್‌ಗಳು ಸೇರಿದಂತೆ ಯಾವುದೇ ವ್ಯತ್ಯಾಸ ಇದ್ದರೆ ಪ್ಯಾನ್ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ.

ಹೀಗಾಗಿ, ಪ್ಯಾನ್‌ಗೆ ಅರ್ಜಿ ಸಲ್ಲಿಸುವವರು ಹೊಸ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಮುಖ್ಯ ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ಕರ್ನಾಟಕದಲ್ಲಿ ಬೇಸಿಗೆ ಮಳೆ ಆರ್ಭಟ: ಆಲಿಕಲ್ಲು ಮಳೆಗೆ ಜನತೆ ಖುಷ್!

ಬೆಂಗಳೂರು: ಕರ್ನಾಟಕದಲ್ಲಿ ಬೇಸಿಗೆ ಮಳೆಯ ಆರ್ಭಟ ಮುಂದುವರಿದಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣದ ನಡುವೆಯೇ ಸಂಜೆ ವೇಳೆ ನಗರದ ಹಲವೆಡೆ ಮಳೆ ಸುರಿದು, ಬಿಸಿಲಿನ ತಾಪದಿಂದ ಬಳಲುತ್ತಿದ್ದ ಜನತೆಗೆ ತಂಪಿನ ಅನುಭವ ನೀಡಿದೆ.

ಮೆಜೆಸ್ಟಿಕ್, ಶಾಂತಿನಗರ, ಕಾಡುಗೋಡಿ, ಜಯನಗರ, ಬಸವೇಶ್ವರನಗರ, ವಿಲ್ಸನ್ ಗಾರ್ಡನ್ ಹಾಗೂ ರಿಚ್ಮಂಡ್ ಟೌನ್ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಅಪರೂಪದ ಈ ದೃಶ್ಯ ಕಂಡು ನಗರ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ದಾವಣಗೆರೆ ಜಿಲ್ಲೆಯ ಗುಮ್ಮನೂರು, ಗುಡಾಳ್, ಹೆಬ್ಬಾಳ್, ಆನಗೋಡು ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಆಲಿಕಲ್ಲುಗಳಿಂದ ರಸ್ತೆ ತುಂಬಿ ಜಮ್ಮು ಕಾಶ್ಮೀರದಂತೆ ಕಾಣಿಸಿಕೊಂಡಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಬಿರುಗಾಳಿ ಸಮೇತ ಭಾರೀ ಮಳೆ ಸುರಿದಿದ್ದು, ಮಳೆಯ ತೀವ್ರತೆಗೆ ರಸ್ತೆಗಳು ಕಾಣದಂತಾಗಿವೆ. ಗಾಳಿಯ ರಭಸಕ್ಕೆ ತೆಂಗಿನ ಗರಿಗಳು ಹಾನಿಗೊಳಗಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಅಕಾಲಿಕ ಮಳೆಯಿಂದ ರೈತರಿಗೆ ಸಂಕಷ್ಟ ಎದುರಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲೂ ಆಲಿಕಲ್ಲು ಮಳೆಯಾಗಿದ್ದು, ಬಿಸಿಲಿನ ತಾಪಕ್ಕೆ ಮಳೆರಾಯ ತಂಪು ತಂದಿದ್ದಾನೆ.

ಇದೇ ವೇಳೆ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಿರಂತರ ಮಳೆಯಾಗಿದ್ದು, ವರ್ಷದ ಮೊದಲ ಮಳೆಗೆ ಜನರು ಸಂತಸಗೊಂಡಿದ್ದಾರೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದವರಿಗೆ ವರುಣ ಸಿಂಚನ ನೀಡಿದಂತಾಗಿದೆ.

 

ಮದುವೆ ಮನೆಗಳಲ್ಲಿ ಸರಣಿ ಕಳ್ಳತನ: ಪ್ಯಾಲೇಸ್ ಗ್ರೌಂಡ್‌ನಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕ ಕಳ್ಳ!

ಬೆಂಗಳೂರು: ಮದುವೆ ಮನೆಗಳಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಕುಖ್ಯಾತ ಆರೋಪಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ಬಾಬು ಅಲಿಯಾಸ್ ಪಲ್ಸರ್ ಬಾಬು ಬಂಧಿತ ಆರೋಪಿಯಾಗಿದ್ದು, ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್ ಆಗಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮದುವೆ ಮನೆಗಳಲ್ಲಿ ಜನರ ಗಮನ ಬೇರೆಡೆ ಇರುವಾಗ, ವಿಶೇಷವಾಗಿ ಚಿಕ್ಕ ಮಕ್ಕಳನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ, ಮೊಬೈಲ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದನು. ಇದಲ್ಲದೆ, ಕ್ಯಾಮೆರಾ, ಲ್ಯಾಪ್‌ಟಾಪ್ ಹಾಗೂ ಬೈಕ್‌ಗಳನ್ನೂ ಕಳ್ಳತನ ಮಾಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿ ದೊಡ್ಡ ದೊಡ್ಡ ಮದುವೆ ಛತ್ರಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದು, ಇಂತಹ ರೀತಿಯಲ್ಲಿ ಬರೋಬ್ಬರಿ 19 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಐಷಾರಾಮಿ ಜೀವನ ಮತ್ತು ಮೋಜುಮಸ್ತಿಗಾಗಿ ಕಳ್ಳತನ ನಡೆಸುತ್ತಿದ್ದ ಆತ ಪದೇಪದೇ ಜೈಲಿಗೆ ಹೋಗಿ ಬರುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಕದ್ದ ಚಿನ್ನಾಭರಣಗಳನ್ನು ಕರಗಿಸಿ ತಿರುಪತಿ ಲಾಕೆಟ್ ಹಾಗೂ ಉಂಗುರಗಳ ರೂಪದಲ್ಲಿ ತಯಾರಿಸಿಕೊಂಡು ಬಳಸುತ್ತಿದ್ದನು. ಕಳ್ಳತನದಿಂದ ಬಂದ ಹಣದಲ್ಲಿ ಕಾರುಗಳನ್ನು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದನೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಸದ್ಯ ಆರೋಪಿಯಿಂದ ಒಟ್ಟು 42.38 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 2 ಕಾರುಗಳು, 132 ಗ್ರಾಂ ಚಿನ್ನಾಭರಣ, 7 ಮೊಬೈಲ್‌ಗಳು, 1 ಕ್ಯಾಮೆರಾ, 2 ಲೆನ್ಸ್‌ಗಳು, 2 ಲ್ಯಾಪ್‌ಟಾಪ್‌ಗಳು, 1.20 ಲಕ್ಷ ನಗದು ಹಾಗೂ 4 ಬೈಕ್‌ಗಳು ಸೇರಿವೆ.

ಪಲ್ಸರ್ ಬಾಬು ಬಂಧನದಿಂದ ಸದಾಶಿವನಗರ, ವರ್ತೂರು, ಜಾಲಹಳ್ಳಿ, ಹೆಣ್ಣೂರು ಮತ್ತು ಬಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ 8 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಣ್ಣ ಮಕ್ಕಳಲ್ಲಿ ಪ್ರೋಟೀನ್ ಕೊರತೆ ಕಂಡುಹಿಡಿಯುವುದು ಹೇಗೆ? ಯಾವ ರೀತಿಯ ಲಕ್ಷಣ ಕಂಡುಬರುತ್ತದೆ!?

0

ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪ್ರೋಟೀನ್ ಅತ್ಯಂತ ಅಗತ್ಯವಾದ ಪೋಷಕಾಂಶವಾಗಿದ್ದು, ಇದರ ಕೊರತೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಬೆಳೆಯುತ್ತಿರುವ ಮಕ್ಕಳಲ್ಲಿ ಹೊಸ ಸೆಲ್‌ಗಳ ನಿರ್ಮಾಣ, ಸ್ನಾಯುಗಳ ಬೆಳವಣಿಗೆ ಹಾಗೂ ರೋಗನಿರೋಧಕ ಶಕ್ತಿ ಬಲಪಡಿಸಲು ಪ್ರೋಟೀನ್ ಮುಖ್ಯ ಪಾತ್ರವಹಿಸುತ್ತದೆ. ಆದರೆ ಹಲವಾರು ಸಂದರ್ಭಗಳಲ್ಲಿ ಮಕ್ಕಳಲ್ಲಿ ಪ್ರೋಟೀನ್ ಕೊರತೆಯ ಲಕ್ಷಣಗಳನ್ನು ಪೋಷಕರು ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.

ಪ್ರೋಟೀನ್ ಕೊರತೆಯಾದರೆ ಮಕ್ಕಳಲ್ಲಿ ತೂಕ ಕಡಿಮೆಯಾಗುವುದು, ಎತ್ತರ ಸರಿಯಾಗಿ ಹೆಚ್ಚದಿರುವುದು, ಸ್ನಾಯುಗಳ ಬೆಳವಣಿಗೆ ನಿಧಾನಗೊಳ್ಳುವುದು ಸಾಮಾನ್ಯ ಲಕ್ಷಣಗಳಾಗಿವೆ. ಜೊತೆಗೆ ರೋಗನಿರೋಧಕ ಶಕ್ತಿ ಕುಗ್ಗುವುದರಿಂದ ಮಕ್ಕಳಿಗೆ ಆಗಾಗ ಕಾಯಿಲೆಗಳು ಬರುವುದು, ಚರ್ಮದ ಗುಣಮಟ್ಟ ಹದಗೆಡುವುದು ಮತ್ತು ಕೂದಲು ಉದುರುವ ಸಮಸ್ಯೆಗಳು ಕಾಣಿಸಬಹುದು. ದಣಿವು ಮತ್ತು ದುರ್ಬಲತೆ ಕೂಡ ಪ್ರಮುಖ ಲಕ್ಷಣಗಳಾಗಿ ಕಾಣಿಸಿಕೊಳ್ಳುತ್ತವೆ.

ಮಕ್ಕಳಲ್ಲಿ ಪ್ರೋಟೀನ್ ಕೊರತೆಗೆ ಪ್ರಮುಖ ಕಾರಣ ಸರಿಯಾದ ಆಹಾರ ಪದ್ಧತಿ ಅನುಸರಿಸದಿರುವುದಾಗಿದೆ. ಹಸಿರು ತರಕಾರಿ, ಧಾನ್ಯಗಳು ಮತ್ತು ಹಣ್ಣುಗಳನ್ನು ಆಹಾರದಲ್ಲಿ ಸೇರಿಸದಿರುವುದು ಈ ಸಮಸ್ಯೆಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ಹೀಗಾಗಿ ಮಕ್ಕಳ ಆಹಾರದಲ್ಲಿ ಹಾಲು, ಮೊಸರು, ಮೊಟ್ಟೆ ಸೇರಿದಂತೆ ಪ್ರೋಟೀನ್ ಸಮೃದ್ಧ ಆಹಾರಗಳನ್ನು ಸೇರಿಸುವುದು ಅವಶ್ಯಕ. ಜೊತೆಗೆ ಚಿಕನ್ ಮತ್ತು ಮೀನು ಕೂಡ ಉತ್ತಮ ಪ್ರೋಟೀನ್ ಮೂಲಗಳಾಗಿವೆ ಎಂದು ಸಲಹೆ ನೀಡಲಾಗಿದೆ.

ವಯಸ್ಸಿನ ಪ್ರಕಾರ ಮಕ್ಕಳಿಗೆ ಅಗತ್ಯವಿರುವ ಪ್ರೋಟೀನ್ ಪ್ರಮಾಣವೂ ವಿಭಿನ್ನವಾಗಿದ್ದು, 1ರಿಂದ 3 ವರ್ಷದ ಮಕ್ಕಳಿಗೆ ದಿನಕ್ಕೆ 13 ಗ್ರಾಂ, 4ರಿಂದ 8 ವರ್ಷದವರಿಗೆ 19-20 ಗ್ರಾಂ ಮತ್ತು 9ರಿಂದ 13 ವರ್ಷದ ಮಕ್ಕಳಿಗೆ ಸುಮಾರು 34 ಗ್ರಾಂ ಪ್ರೋಟೀನ್ ಅಗತ್ಯವಿದೆ ಎಂದು ಮಾಹಿತಿ ನೀಡಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣಗಳ ಸುತ್ತಮುತ್ತಲ ಕಟ್ಟಡಗಳ ಎತ್ತರದ ಮಿತಿ ಮರುಪರಿಶೀಲಿಸಲು ಕೇಂದ್ರ ಸಚಿವರಿಗೆ ಡಿ.ಕೆ. ಶಿವಕುಮಾರ್ ಮನವಿ

0

ನವದೆಹಲಿ: ಬೆಂಗಳೂರಿನಲ್ಲಿರುವ ಹೆಚ್ಎಎಲ್, ಜಕ್ಕೂರು, ವಾಯುನೆಲೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಕಟ್ಟಡ ಎತ್ತರದ ಮಿತಿಯಿಂದ ಅಭಿವೃದ್ಧಿ ಕಾಮಗಾರಿಗೆ ತೊಡಕಾಗಿದ್ದು, ಈ ಮಿತಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ನಾಗರೀಕ ವಿಮಾನಯಾನ ಸಚಿವರಿಗೆ ಮನವಿ ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಹಿತಿ ನೀಡಿದರು.

ಕೇಂದ್ರ ವಿಮಾನಯಾನ ಸಚಿವರಾದ ರಾಮ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಬುಧವಾರ ಮಾತನಾಡಿದರು. ಸಚಿವರೊಂದಿಗೆ ನಾಗರೀಕ ವಿಮಾನಯಾನ ಸಚಿವಾಲಯ ಹಾಗೂ ಹೆಚ್ಎಎಲ್ ನಿಂದ ಎತ್ತರದ ಮಿತಿ ಬಗ್ಗೆ ಚರ್ಚೆ ಮಾಡಿದೆವು. ಹೈದರಾಬಾದ್, ಮುಂಬೈ ಸೇರಿದಂತೆ ಬೇರೆ ಕಡೆಗಳಲ್ಲಿ ಮಿತಿ ಕಡಿಮೆ ಇದೆ.

ಬೇರೆ ನಗರಗಳಲ್ಲಿ ಅರುವಂತೆ ಬೆಂಗಳೂರಿನಲ್ಲೂ ಎತ್ತರದ ಮಿತಿ ಇರಬೇಕು ಎಂದು ಮನವಿ ಮಾಡಿದ್ದೇವೆ. ಈ ಕಟ್ಟಡ ಎತ್ತರದ ಮಿತಿಯಿಂದಾಗಿ ಬೆಂಗಳೂರಿನಲ್ಲಿ ನಾಗರೀಕರು ಪ್ರೀಮಿಯಂ ಎಫ್ಎಆರ್ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದರಿಂದ ಸರ್ಕಾರಕ್ಕೂ ಹಣ ಬರುತ್ತಿಲ್ಲ.

ಕೇಂದ್ರ ಸರ್ಕಾರವೇ ಎಫ್ಎಆರ್ ಕಡಿಮೆ ಮಾಡಿ ಪ್ರೀಮಿಯಂ ಎಫ್ಐಆರ್ ಹೆಚ್ಚಿಸಿ ಎಂದು ಹೇಳುತ್ತದೆ. ಹೀಗಾಗಿ ನಾವು ಅನೇಕ ತೀರ್ಮಾನ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿರುವೆ. ಅವರು ರಕ್ಷಣಾ ಮಂತ್ರಿ ಜತೆಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ನಮ್ಮ ಅಧಿಕಾರಿಗಳು ಹೆಚ್ಎಎಲ್ ಜತೆ ಚರ್ಚೆ ಮಾಡಿದ್ದಾರೆ. ನಾನು ಕೂಡ ರಕ್ಷಣಾ ಸಚಿವರ ಭೇಟಿಗೆ ಸಮಯ ತೆಗೆದುಕೊಂಡು ನಮ್ಮ ಈ ಸಮಸ್ಯೆಗಳನ್ನು ಅವರಿಗೆ ವಿವರಿಸುತ್ತೇನೆ. ಬೆಂಗಳೂರಿನ ಅಭಿವೃದ್ಧಿಗಾಗಿ ನಾವು ಒಂದು ಪರಿಹಾರ ಕಂಡುಕೊಳ್ಳುತ್ತೇವೆ” ಎಂದು ತಿಳಿಸಿದರು.

“ನಾನು, ಸಚಿವರಾದ ಬೋಸರಾಜು, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಅವರು ಇಂದು ನಾಗರೀಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿದೆವು. ಬೆಂಗಳೂರು ಬೆಳವಣಿಗೆ ಹಾಗೂ ಸಂಚಾರ ದಟ್ಟಣೆ ನಿವಾರಣೆ ಮಾಡಬೇಕಿದೆ.

ಹೊರವಲಯದಲ್ಲಿ ಬಡಾವಣೆಗಳು ಹೆಚ್ಚುತ್ತಿವೆ. ಅಲ್ಲೆಲ್ಲಾ ವಾಹನಗಳ ಸಂಖ್ಯೆ ಹೆಚ್ಚಾಗಿವೆ. ಬೆಂಗಳೂರು ನಗರದಲ್ಲಿ ಹೆಚ್ಎಎಲ್, ಜಕ್ಕೂರು, ಯಲಹಂಕದ ವಾಯುನೆಲೆ ಹಾಗೂ ದೇವನಹಳ್ಳಿಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣವಿದೆ. ಈ ಸುತ್ತಮುತ್ತಲ ಪ್ರದೇಶದಲ್ಲಿ ಎತ್ತರದ ಕಟ್ಟಡ ನಿರ್ಮಾಣ ಸಾಧ್ಯವಾಗುವುದಿಲ್ಲ” ಎಂದರು.

ಸರ್ಕಾರಕ್ಕೆ ಸಹಕಾರ ನೀಡದ ನೈಸ್ ಸಂಸ್ಥೆಗೆ ತಕ್ಕ ಉತ್ತರ:

“ನಾನು ಸ್ಕೈಡೆಕ್ ಮಾಡಲು ಎರಡೂವರೆ ವರ್ಷಗಳಿಂದ ಪ್ರಯತ್ನಪಟ್ಟ ಬಳಿಕ ಈಗ ಕೆಂಪೇಗೌಡ ಲೇಔಟ್ ನಲ್ಲಿ ನಿರ್ಮಿಸಲು ಮುಂದಾಗಿದ್ದೇವೆ. ವಿಮಾನ ನಿಲ್ದಾಣ ಸುತ್ತಮುತ್ತ 20 ಕಿ.ಮೀ ದೂರದಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ. ಎನ್ ಜಿಎಫ್ ಬಳಿ ಸ್ಕೈಡೆಕ್ ಮಾಡಲು ಜಾಗ ಉತ್ತಮವಾಗಿತ್ತು.

ಮೆಟ್ರೋ ಸೌಲಭ್ಯವಿತ್ತು. ಜತೆಗೆ ನೈಸ್ ರಸ್ತೆ ಬಳಿ ಸೋಂಪುರ ವೃತ್ತದ ಬಳಿ ನಿರ್ಮಾಣಕ್ಕೆ ಸಲಹೆ ನೀಡಿದ್ದರು. ಆದರೆ ನೈಸ್ ಸಂಸ್ಥೆಯವರು ಸಹಕಾರ ನೀಡಲಿಲ್ಲ. ನೈಸ್ ಸಂಸ್ಥೆ ವಿಚಾರವಾಗಿ ಏನು ಮಾಡಬೇಕು ಎಂದು ಮುಂದೆ ತೀರ್ಮಾನ ಮಾಡುತ್ತೇವೆ. ಅವರು ನಿರಾಕ್ಷೇಪಣ ಪತ್ರವನ್ನು ನೀಡಲಿಲ್ಲ. ಸರ್ಕಾರಕ್ಕೆ ಸಹಕಾರ ನೀಡದವರಿಗೆ ತಕ್ಕ ಉತ್ತರ ನೀಡಬೇಕಾಗುತ್ತದೆ” ಎಂದು ಹೇಳಿದರು.

“ಅಂತರರಾಷ್ಟ್ರೀಯ ಮಟ್ಟದಲ್ಲಿರುವ ಮಾರ್ಗಸೂಚಿ ಹಾಗೂ ದೇಶದ ಇತರೆ ನಗರಗಳಲ್ಲಿ ಇರುವ ಮಾರ್ಗಸೂಚಿ ಬಗ್ಗೆ ಅಧ್ಯಯನ ಮಾಡುತ್ತಿರುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ. ಮುಂದಿನ ಒಂದು ವಾರದಲ್ಲಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ನಮ್ಮ ಅಧಿಕಾರಿಗಳಿಗೂ ಭಾಗವಹಿಸಲು ಹೇಳಿದ್ದಾರೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ ಬರುತ್ತಿದ್ದು, ಭೂ ಸಂತ್ರಸ್ತರು ತಮ್ಮ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಮುಂದಾಗುತ್ತಾರೆ. ಅವರಿಗೆ ಎತ್ತರದ ಮಿತಿ ಇದ್ದರೆ ಕಷ್ಟವಾಗುತ್ತದೆ” ಎಂದು ತಿಳಿಸಿದರು.

ಎರಡನೇ ವಿಮಾನ ನಿಲ್ದಾಣದ ಬಗ್ಗೆ ರಾಜ್ಯ ಸರ್ಕಾರ ಚರ್ಚಿಸಿ ತೀರ್ಮಾನ

“ಇನ್ನು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವಿಚಾರವಾಗಿ ಕೇಂದ್ರ ಸರ್ಕಾರ ತಮ್ಮ ಅಭಿಪ್ರಾಯ ಕಳುಸಿದ್ದು, ನೀವೇ ಜಾಗ ನಿಗದಿ ಮಾಡಿ ಎಂದು ಹೇಳಿದೆ. ನಮ್ಮ ಬಳಿ ಎರಡು ಮೂರು ಆಯ್ಕೆಗಳಿದ್ದು, ನಮ್ಮ ಸರ್ಕಾರ ಇದರ ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ತೀರ್ಮಾನ ಮಾಡಲಿದೆ. ನಾನು ಬೆಂಗಳೂರಿಗೆ ವಾಪಸ್ಸಾದ ಬಳಿಕ ಕೇಂದ್ರ ಸರ್ಕಾರ ಕಳುಹಿಸಿರುವ ಅಭಿಪ್ರಾಯ ಪರಿಶೀಲನೆ ಮಾಡುತ್ತೇನೆ. ನಾನು ಬೆಂಗಳೂರು ದೃಷ್ಟಿಯಿಂದ ಈ ವಿಚಾರವನ್ನು ಕೇಂದ್ರ ಸಚಿವರ ಜತೆ ಪ್ರಸ್ತಾಪಿಸಿದೆ. ಈ ವಿಮಾನ ನಿಲ್ದಾಣ ನಿರ್ಮಾಣದ ಜವಾಬ್ದಾರಿ ಸಚಿವರಾದ ಎಂ.ಬಿ. ಪಾಟೀಲ್ ಅವರು ನೋಡಿಕೊಳ್ಳುತ್ತಾರೆ” ಎಂದರು.

error: Content is protected !!