Home Blog Page 255

73 ವೃದ್ಧರು, ಒಂಟಿ ಮಹಿಳೆಯರಿಗೆ ಪೊಲೀಸರ ನೆರವು: ವಿಜಯಪುರದಲ್ಲಿ ‘ಆಸರೆ’ ಕಾರ್ಯಕ್ರಮಕ್ಕೆ ಭಾರಿ ಮೆಚ್ಚುಗೆ

ವಿಜಯಪುರ: ಜಿಲ್ಲಾ ಪೊಲೀಸರು ಸಮಾಜಮುಖಿ ಕಾರ್ಯದ ಮೂಲಕ ಹೊಸ ಮಾದರಿ ನಿರ್ಮಿಸಿದ್ದಾರೆ. ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದ 73 ಮಂದಿ ವೃದ್ಧರು ಮತ್ತು ಒಂಟಿ ಮಹಿಳೆಯರಿಗೆ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಟ್ಟು ‘ಆಸರೆ’ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.

ಜಿಲ್ಲೆಯ ವಿವಿಧ ಗ್ರಾಮಗಳಿಗೆ ತೆರಳಿದ ಪೊಲೀಸರು, ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ಪಿಂಚಣಿ, ಸಂಧ್ಯಾ ಸುರಕ್ಷಾ, ಇಂದಿರಾ ಪಿಂಚಣಿ ಹಾಗೂ ಭಾಗ್ಯ ಜ್ಯೋತಿ ಯೋಜನೆಗಳಿಗೆ ಅರ್ಹರನ್ನು ಗುರುತಿಸಿ ನೆರವು ಒದಗಿಸಿದ್ದಾರೆ.

ಈ ಅಭಿಯಾನದ ಫಲವಾಗಿ 14 ಮಂದಿಗೆ ವೃದ್ಧಾಪ್ಯ ವೇತನ, 16 ಮಹಿಳೆಯರಿಗೆ ವಿಧವಾ ವೇತನ ಹಾಗೂ 8 ಮಂದಿಗೆ ವಿಕಲಚೇತನ ಪಿಂಚಣಿ ಮಂಜೂರಾಗಿದೆ. ಜೊತೆಗೆ 10 ವೃದ್ಧರಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ಮಾಡಿಕೊಡಲಾಗಿದೆ.

ಕೇವಲ ಸರ್ಕಾರಿ ಯೋಜನೆಗಳಷ್ಟೇ ಅಲ್ಲದೆ, 3 ವೃದ್ಧೆಯರಿಗೆ ಉಚಿತ ಕಣ್ಣಿನ ಚಿಕಿತ್ಸೆ ಕಲ್ಪಿಸಲಾಗಿದ್ದು, 4 ಮಂದಿಗೆ ಅಂಚೆ ಬ್ಯಾಂಕ್ ಖಾತೆ ತೆರೆಯುವ ವ್ಯವಸ್ಥೆ ಕೂಡ ಮಾಡಲಾಗಿದೆ.

ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪೊಲೀಸರ ಬಗ್ಗೆ ಇರುವ ಭಯವನ್ನು ಕಡಿಮೆ ಮಾಡಿ ಜನರಲ್ಲಿ ವಿಶ್ವಾಸ ಮೂಡಿಸುವಲ್ಲಿ ‘ಆಸರೆ’ ಕಾರ್ಯಕ್ರಮ ಯಶಸ್ವಿಯಾಗಿದೆ.

ಜಿಮ್‌ನಲ್ಲಿ ಭುಜ ತಾಗಿದ್ದಕ್ಕೆ ಯುವಕನ ಮೇಲೆ ಕ್ರೂರ ಹಲ್ಲೆ: ಕೋಮಾಗೆ ಜಾರಿದ ಕೀರ್ತನ್

0

ಹಾಸನ: ನಗರದ ಕುವೆಂಪುನಗರದಲ್ಲಿರುವ ಎಂ.ಜೆ ಫಿಟ್ನೆಸ್ ಸ್ಟುಡಿಯೋದಲ್ಲಿ ನಡೆದ ಕ್ಷುಲ್ಲಕ ಜಗಳ ಭೀಕರ ತಿರುವು ಪಡೆದಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಭುಜ ತಾಗಿದ ವಿಚಾರಕ್ಕೆ ಯುವಕನೊಬ್ಬನ ಮೇಲೆ ಕ್ರೂರ ಹಲ್ಲೆ ನಡೆಸಲಾಗಿದ್ದು, ಗಾಯಾಳು ಯುವಕ ಕೋಮಾ ಸ್ಥಿತಿಗೆ ಜಾರಿದ್ದಾನೆ.

ಕೀರ್ತನ್ ಮತ್ತು ವರುಣ್ ಎಂಬ ಇಬ್ಬರು ಯುವಕರು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಈ ವೇಳೆ ಕೀರ್ತನ್ ಅವರ ಭುಜ ವರುಣ್‌ಗೆ ತಾಗಿದ್ದರಿಂದ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಆರೋಪದ ಪ್ರಕಾರ, ಕೋಪಗೊಂಡ ವರುಣ್ ಏಕಾಏಕಿ ಕೀರ್ತನ್ ತಲೆ ಭಾಗಕ್ಕೆ ಬಲವಾಗಿ ಕಿಕ್ ಹೊಡೆದಿದ್ದಾನೆ. ಹಲ್ಲೆಯ ತೀವ್ರತೆಗೆ ಕೀರ್ತನ್ ನೆಲಕ್ಕುರುಳಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ.

ವೈದ್ಯರು ನೀಡಿರುವ ಮಾಹಿತಿ ಪ್ರಕಾರ, ಕೀರ್ತನ್ ಅವರಿಗೆ ತಲೆಬುರುಡೆಗೆ ಗಂಭೀರ ಪೆಟ್ಟಾಗಿದ್ದು, ಸದ್ಯ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಆತಂಕಕಾರಿ ಎಂದು ತಿಳಿದುಬಂದಿದೆ.

ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಮ್‌ನ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬಾಲಕನಿಂದ ಮಸಾಜ್ ಆರೋಪ: ವಚನಾನಂದ ಸ್ವಾಮೀಜಿ ವಿರುದ್ಧ ಫೋಕ್ಸೋ ಕೇಸ್‌ ದಾಖಲು

ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಮಾಜಿ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಗುರುಪೀಠದಲ್ಲಿ ಶಿಕ್ಷಣ ಪಡೆಯುತ್ತಿದ್ದ ಬಾಲಕನ ಮೇಲೆ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಮೊದಲು ಜೀರೋ ಎಫ್‌ಐಆರ್ ದಾಖಲಾಗಿತ್ತು. ನಂತರ ಪ್ರಕರಣವನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಸಂತ್ರಸ್ತ ಬಾಲಕನ ತಾಯಿ ನೀಡಿದ ದೂರಿನ ಪ್ರಕಾರ, ಗುರುಪೀಠದಲ್ಲಿ ಇದ್ದ ವೇಳೆ ಬಾಲಕನಿಂದ ಸ್ವಾಮೀಜಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ದೂರಿನ ಆಧಾರದಲ್ಲಿ ಪೊಲೀಸರು ಫೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್ ಮಾಹಿತಿ ನೀಡಿದ್ದು, ದೂರುದಾರರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ. ಸಂತ್ರಸ್ತ ಬಾಲಕನ ಹೇಳಿಕೆಯನ್ನೂ ಪಡೆಯಲಾಗುವುದು. ಪ್ರಕರಣದ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಶ್ರೀ ವಚನಾನಂದ ಸ್ವಾಮೀಜಿಯನ್ನು ಇತ್ತೀಚೆಗೆ ಗುರುಪೀಠ ಟ್ರಸ್ಟ್ ಪದಚ್ಯುತಿಗೊಳಿಸಿತ್ತು. ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂಬ ಆರೋಪಗಳು ಹೊರಬಿದ್ದ ಬಳಿಕ ಟ್ರಸ್ಟ್ ಈ ನಿರ್ಧಾರ ಕೈಗೊಂಡಿತ್ತು.

ಈ ಬೆಳವಣಿಗೆಯ ಬೆನ್ನಲ್ಲೇ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಗುರುಪೀಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸ್ವಾಮೀಜಿ ಸೇರಿದಂತೆ ಹಲವು ಮಂದಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಅಧಿಕಾರಿಗಳು ಪ್ರಕರಣದ ಕುರಿತು ವರದಿ ಸಿದ್ಧಪಡಿಸಿದ್ದಾರೆ.

ನೀಟ್ ಪೇಪರ್ ಲೀಕ್ ಪ್ರಕರಣಕ್ಕೆ ಮೋದಿ ಉತ್ತರಿಸಲಿ: ಕೇಂದ್ರ ಸರ್ಕಾರದ ವಿರುದ್ಧ ಮಧು ಬಂಗಾರಪ್ಪ ಕಿಡಿ

ಬೆಂಗಳೂರು: ನೀಟ್ ಪರೀಕ್ಷೆಯ ಪೇಪರ್ ಲೀಕ್ ಪ್ರಕರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಎಂದು ರಾಜ್ಯ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಘಟನೆ ದೇಶದ ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಹೊಡೆತವಾಗಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಜವಾಬ್ದಾರಿ ವಹಿಸಬೇಕು ಎಂದು ಒತ್ತಾಯಿಸಿದರು.

ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ ಸಚಿವರು, “ವಿದ್ಯಾರ್ಥಿಗಳು ಕಷ್ಟಪಟ್ಟು ಓದುತ್ತಾರೆ. ಆದರೆ ಇಂತಹ ಘಟನೆಗಳು ಅವರ ಪರಿಶ್ರಮವನ್ನು ಹಾಳು ಮಾಡುತ್ತವೆ. ಇದು ಅತ್ಯಂತ ಗಂಭೀರ ವಿಚಾರ” ಎಂದು ಹೇಳಿದರು.

ಎನ್‌ಟಿಎ ಕಾರ್ಯವೈಖರಿಯನ್ನು ಟೀಕಿಸಿದ ಅವರು, ಹಲವು ಬಾರಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಲೋಪಗಳು ನಡೆದಿರುವುದನ್ನು ಉಲ್ಲೇಖಿಸಿ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯವಿದೆ ಎಂದರು. “ಪರೀಕ್ಷೆ ನಡೆಸುವುದಕ್ಕೆ ಸ್ಪಷ್ಟವಾದ ವ್ಯವಸ್ಥೆ ಇರಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರತಿಯೊಂದು ತೀರ್ಮಾನ ಕೈಗೊಳ್ಳಬೇಕು” ಎಂದು ತಿಳಿಸಿದರು.

ಪ್ರಧಾನಿ ಮೋದಿ ಅವರ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮವನ್ನು ಉಲ್ಲೇಖಿಸಿದ ಮಧು ಬಂಗಾರಪ್ಪ, ವಿದ್ಯಾರ್ಥಿಗಳ ಒತ್ತಡದ ಬಗ್ಗೆ ಮಾತನಾಡುವವರು, ಇಂತಹ ಗಂಭೀರ ಅಕ್ರಮಗಳ ಬಗ್ಗೆ ಮೌನವಾಗಿರುವುದು ಸರಿಯಲ್ಲ ಎಂದು ಟೀಕಿಸಿದರು.

“ಮಕ್ಕಳು ದೇಶದ ಭವಿಷ್ಯ. ಪರೀಕ್ಷಾ ವ್ಯವಸ್ಥೆಯನ್ನು ಪಾರದರ್ಶಕವಾಗಿ ನಡೆಸುವುದು ಅತ್ಯಗತ್ಯ. ರಾಜ್ಯ ಸರ್ಕಾರ ಪರೀಕ್ಷೆಗಳನ್ನು ನಡೆಸುವಾಗ ಹಲವು ಹಂತದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತದೆ. ಇದೇ ರೀತಿಯ ಜವಾಬ್ದಾರಿತನವನ್ನು ರಾಷ್ಟ್ರೀಯ ಮಟ್ಟದಲ್ಲೂ ತೋರಬೇಕು” ಎಂದು ಹೇಳಿದರು.

ಪ್ರೀತಿಯಿಂದ ಆರಂಭವಾಗಿ ‘ಹಿಟ್ಲರ್ ಕಲ್ಯಾಣ’ವರೆಗೂ: ದಿಲೀಪ್ ರಾಜ್-ಶ್ರೀವಿದ್ಯಾ ಜೋಡಿಯ ಯಶೋಗಾಥೆ

ನಟ ದಿಲೀಪ್ ರಾಜ್ ನಿಧನವು ಕನ್ನಡ ಕಿರುತೆರೆಗೆ ದೊಡ್ಡ ನಷ್ಟ ತಂದಿದೆ. ಆದರೆ ಅವರು ಪತ್ನಿ ಶ್ರೀವಿದ್ಯಾ ಜೊತೆ ಸೇರಿ ಕಟ್ಟಿದ ಯಶಸ್ವಿ ಜೀವನ ಮತ್ತು ನಿರ್ಮಾಣ ಸಂಸ್ಥೆಯ ಪಯಣ ಇಂದು ಮತ್ತೆ ಚರ್ಚೆಗೆ ಬಂದಿದೆ.

ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಕೇವಲ ದಂಪತಿಗಳಲ್ಲ, ವೃತ್ತಿಜೀವನದಲ್ಲೂ ಯಶಸ್ವಿ ಪಾಲುದಾರರಾಗಿದ್ದರು. ಕಾಲೇಜು ದಿನಗಳ ಪರಿಚಯ ಪ್ರೀತಿಗೆ ತಿರುಗಿ ನಂತರ ವಿವಾಹವಾಗಿ ಇಬ್ಬರೂ ಜೀವನ ಪಯಣ ಆರಂಭಿಸಿದ್ದರು. ನಟನಾಗಿ ಗುರುತಿಸಿಕೊಂಡಿದ್ದ ದಿಲೀಪ್ ರಾಜ್ ಅವರಿಗೆ ಪ್ರತಿಯೊಂದು ಹಂತದಲ್ಲೂ ಶ್ರೀವಿದ್ಯಾ ಬೆಂಬಲವಾಗಿ ನಿಂತಿದ್ದರು. ನಂತರ ಇಬ್ಬರೂ ಸೇರಿ ‘ಡಿ2ಆರ್ ಮೀಡಿಯಾ ಪ್ರೊಡಕ್ಷನ್ಸ್’ ಸಂಸ್ಥೆ ಆರಂಭಿಸಿ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟರು.

ಶ್ರೀವಿದ್ಯಾ ನಿರ್ಮಾಣದ ಹಣಕಾಸು ಮತ್ತು ಆಡಳಿತ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದರೆ, ದಿಲೀಪ್ ರಾಜ್ ಕಥೆ, ಕಲಾವಿದರು ಮತ್ತು ಕ್ರಿಯೇಟಿವ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಜೋಡಿಯ ಸಂಯುಕ್ತ ಪರಿಶ್ರಮದಿಂದ ‘ಹಿಟ್ಲರ್ ಕಲ್ಯಾಣ’, ‘ಪಾರು’, ‘ಕೃಷ್ಣ ರುಕ್ಕು’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳು ಮೂಡಿಬಂದವು.

ಜೀ ಕನ್ನಡದ ಸೂಪರ್ ಹಿಟ್ ಧಾರಾವಾಹಿ ‘ಹಿಟ್ಲರ್ ಕಲ್ಯಾಣ’ ಇವರಿಬ್ಬರ ಕನಸಿನ ಪ್ರಾಜೆಕ್ಟ್ ಆಗಿತ್ತು. ದಿಲೀಪ್ ರಾಜ್ ಅದರಲ್ಲಿ ನಾಯಕನಾಗಿ ಅಭಿನಯಿಸಿದ್ದರೆ, ನಿರ್ಮಾಣದ ಹೊಣೆಗಾರಿಕೆಯನ್ನು ಇಬ್ಬರೂ ಸಮರ್ಥವಾಗಿ ನಿಭಾಯಿಸಿದ್ದರು. ಕಿರುತೆರೆಯಲ್ಲಿ ಯಶಸ್ಸಿನ ಜೊತೆಗೆ ನೂರಾರು ತಂತ್ರಜ್ಞರು ಮತ್ತು ಕಲಾವಿದರಿಗೆ ಅವಕಾಶ ನೀಡಿದ ಈ ಜೋಡಿ ಸದಾ ನಗುಮುಖದಿಂದ ಕೆಲಸ ಮಾಡುತ್ತಿತ್ತು. ವೈಯಕ್ತಿಕ ಮತ್ತು ವೃತ್ತಿ ಜೀವನವನ್ನು ಸಮತೋಲನದಿಂದ ಮುನ್ನಡೆಸಿದ ಇವರ ಬಾಂಧವ್ಯ ಅನೇಕರಿಗೆ ಮಾದರಿಯಾಗಿತ್ತು.

ದಿಲೀಪ್ ರಾಜ್ ಇಂದು ನಮ್ಮೊಂದಿಗಿಲ್ಲ. ಆದರೆ ಅವರು ಮತ್ತು ಶ್ರೀವಿದ್ಯಾ ಸೇರಿ ಕಟ್ಟಿದ ಸೃಜನಶೀಲ ಪಯಣ ಹಾಗೂ ಕನ್ನಡ ಕಿರುತೆರೆಗೆ ನೀಡಿದ ಧಾರಾವಾಹಿಗಳು ಸದಾ ನೆನಪಿನಲ್ಲಿರಲಿವೆ.

‘ನಾನು ಕೈಬೀಸಿದರೂ ಯಾರೂ ನೋಡಲಿಲ್ಲ’: ಆಶ್ರಮದ ಅನುಭವ ಹೇಳಿ ಭಾವುಕರಾದ ರಜನಿಕಾಂತ್

ಸೂಪರ್‌ಸ್ಟಾರ್ ರಜನಿಕಾಂತ್ ಭಾಗವಹಿಸಿದ್ದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವಿಶೇಷ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಶ್ರೀ ರವಿಶಂಕರ್ ಆಶ್ರಮದಲ್ಲಿ ನಡೆದ ಒಂದು ಘಟನೆ ತಮ್ಮ ಅಹಂಕಾರವನ್ನು ಹೇಗೆ ಮಣ್ಣುಪಾಲು ಮಾಡಿತು ಎಂಬುದನ್ನು ಹಂಚಿಕೊಂಡರು.

‘ನಾನು ಆಶ್ರಮಕ್ಕೆ ಎರಡು ದಿನ ಮಾತ್ರ ಹೋಗಿದ್ದೆ. ಆದರೆ ಅಲ್ಲಿನ ವಾತಾವರಣ ನೋಡಿ 15 ದಿನ ಉಳಿದುಬಿಟ್ಟೆ. ಸುತ್ತಲೂ ಹಸಿರು, ಕೆರೆ, ಪ್ರಾಣಿಗಳು, ಸಂತೋಷದಿಂದಿರುವ ಜನರನ್ನು ನೋಡಿ ಮನಸ್ಸಿಗೆ ತುಂಬಾ ಶಾಂತಿ ಸಿಕ್ಕಿತ್ತು. ಅಲ್ಲಿನ ಒಂದು ಕುದುರೆಯ ಹೆಸರು “ರಜಿನಿ” ಎಂದು ಕೇಳಿ ನನಗೆ ಆಶ್ಚರ್ಯವಾಯಿತು’ ಎಂದು ಅವರು ಹೇಳಿದರು.

ಮುಂದೆ ಮಾತನಾಡಿದ ರಜನಿಕಾಂತ್, ‘ಆ ಸಮಯದಲ್ಲಿ ನಾನು ವೃತ್ತಿಜೀವನದ ಪೀಕ್‌ನಲ್ಲಿದ್ದೆ. ಗುರೂಜಿ ಆಶ್ರಮದ ಸುತ್ತ ಒಂದು ಸುತ್ತು ಹಾಕೋಣ ಎಂದರು. ಜನರು ನನ್ನನ್ನು ಗುರುತಿಸಿ ಆಟೋಗ್ರಾಫ್ ಕೇಳಬಹುದು ಎಂದು ನಾನು ಭಾವಿಸಿದ್ದೆ. ಆದರೆ ಅಲ್ಲಿ ಯಾರೂ ನನ್ನತ್ತ ನೋಡಲೇ ಇಲ್ಲ’ ಎಂದು ನಗುತ್ತಲೇ ಹೇಳಿದರು.

‘ನಾನು ಕೈಬೀಸುತ್ತಿದ್ದರೂ ಯಾರೂ ಪ್ರತಿಕ್ರಿಯಿಸಲಿಲ್ಲ. ಆಗ ನನಗೆ ದೊಡ್ಡ ಪಾಠ ಸಿಕ್ಕಿತು. ಅಧ್ಯಾತ್ಮದ ಮುಂದೆ ಸಿನಿಮಾ ಸ್ಟಾರ್‌ಡಮ್ ತುಂಬಾ ಚಿಕ್ಕದು ಅನ್ನೋದು ಅರ್ಥವಾಯಿತು’ ಎಂದು ಅವರು ಹೇಳಿದರು.

ಸಿನಿಮಾ ಖ್ಯಾತಿ ಕ್ಷಣಿಕ, ಆದರೆ ಆಧ್ಯಾತ್ಮಿಕ ಶಕ್ತಿ ಶಾಶ್ವತ ಎಂದು ಹೇಳಿದ ರಜನಿಕಾಂತ್, ‘ಆಧ್ಯಾತ್ಮಿಕ ಸ್ಟಾರ್‌ಡಮ್ ಸಾವಿನ ನಂತರವೂ ಉಳಿಯುತ್ತದೆ’ ಎಂದು ಅಭಿಪ್ರಾಯಪಟ್ಟರು.

ಇಂದು ಸಂಜೆ ರಾಮನಗರದ ಫಾರ್ಮ್‌ಹೌಸ್‌ʼನಲ್ಲಿ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ!

ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 47 ವರ್ಷದ ದಿಲೀಪ್ ರಾಜ್ ಇಂದು ಮುಂಜಾನೆ ಹೃದಯಾಘಾತಕ್ಕೊಳಗಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಅಪೋಲೊ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಇಂದು ಸಂಜೆ ರಾಮನಗರ ತಾಲೂಕಿನ ಗುನ್ನೂರು ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದ್ದು, ಈ ಹಿನ್ನೆಲೆ ಗ್ರಾಮಸ್ಥರು ಹಾಗೂ ಸಿಬ್ಬಂದಿ ಅಂತ್ಯಕ್ರಿಯೆಗೆ ಅಗತ್ಯ ಸಿದ್ಧತೆಗಳನ್ನು ಆರಂಭಿಸಿದ್ದಾರೆ.

ಸುಮಾರು 10 ವರ್ಷಗಳ ಹಿಂದೆ ದಿಲೀಪ್ ರಾಜ್ ಗುನ್ನೂರು ಗ್ರಾಮದಲ್ಲಿ ಒಂದು ಎಕರೆ ಜಮೀನು ಖರೀದಿಸಿ, ಅಲ್ಲಿ ತೋಟ ಹಾಗೂ ಫಾರ್ಮ್‌ಹೌಸ್ ನಿರ್ಮಿಸಿದ್ದರು. ಅವರು ತಿಂಗಳಿಗೊಮ್ಮೆ ಅಲ್ಲಿಗೆ ಭೇಟಿ ನೀಡುತ್ತಿದ್ದರು ಎಂದು ತಿಳಿದುಬಂದಿದೆ.

‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಮೂಲಕ ದಿಲೀಪ್ ರಾಜ್ ಮತ್ತೆ ಕಿರುತೆರೆಗೆ ಮರಳಿದ್ದರು. ಆ ಧಾರಾವಾಹಿಯಲ್ಲಿನ ಅವರ ಪಾತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ನಟನಷ್ಟೇ ಅಲ್ಲದೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು.

2005ರಲ್ಲಿ ಬಿಡುಗಡೆಯಾದ ‘ಬಾಯ್‌ಫ್ರೆಂಡ್’ ಚಿತ್ರದ ಮೂಲಕ ನಾಯಕನಾಗಿ ಸಿನಿರಂಗ ಪ್ರವೇಶಿಸಿದ್ದ ದಿಲೀಪ್ ರಾಜ್, ‘ಮಿಲನ’ ಚಿತ್ರದಲ್ಲಿ ವಿಲನ್ ಪಾತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದರು. ‘ಸುಗ್ರೀವ’, ‘ಗೆಳೆಯ’, ‘ಯೂ ಟರ್ನ್’ ಸೇರಿದಂತೆ ಸುಮಾರು 28ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

ಇದೇ ವೇಳೆ ‘ಕೃಷ್ಣ ರುಕ್ಕು’ ಧಾರಾವಾಹಿಯನ್ನು ನಿರ್ಮಿಸುತ್ತಿದ್ದ ಅವರು, ‘ಮನೆಯೊಂದು ಮೂರು ಬಾಗಿಲು’, ‘ರಥಸಪ್ತಮಿ’, ‘ಪ್ರೀತಿಗಾಗಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು. ಕೊನೆಯದಾಗಿ ‘ಲವ್ ಮಾಕ್‌ಟೇಲ್ 3’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ದಿಲೀಪ್ ರಾಜ್ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದು, ಅವರ ಅಗಲಿಕೆಯಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.

ನಿಧಾನಗತಿಯ ಬೌಲಿಂಗ್: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ʼಗೆ 12 ಲಕ್ಷ ರೂ. ದಂಡ

ನವದೆಹಲಿ: ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ 55ನೇ ಪಂದ್ಯದಲ್ಲಿ ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ದಾಖಲಿಸಿದೆ. ಆದರೆ ತಂಡವನ್ನು ಗೆಲುವಿನ ದಡ ಸೇರಿಸಿದ ಅಕ್ಷರ್ ಪಟೇಲ್‌ಗೆ ಪಂದ್ಯದ ಬಳಿಕ ಭಾರೀ ದಂಡ ವಿಧಿಸಲಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 210 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಸವಾಲಿನ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದ್ದು, ಕೇವಲ 33 ರನ್‌ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು.

ಇದಾದ ಬಳಿಕ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಅಕ್ಷರ್ ಪಟೇಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 30 ಎಸೆತಗಳಲ್ಲಿ 56 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ ಅವರು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಡೆಲ್ಲಿ ತಂಡ ರೋಚಕವಾಗಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.

ಆದರೆ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಧಾನಗತಿಯ ಓವರ್ ದರ ಕಾಯ್ದುಕೊಂಡ ಕಾರಣ ನಾಯಕ ಅಕ್ಷರ್ ಪಟೇಲ್‌ಗೆ ₹12 ಲಕ್ಷ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22ರ ಪ್ರಕಾರ, ಕನಿಷ್ಠ ಓವರ್ ದರ ಉಲ್ಲಂಘನೆಗೆ ಈ ದಂಡ ವಿಧಿಸಲಾಗಿದೆ.

ಈ ಕುರಿತು ಐಪಿಎಲ್ ಪ್ರಕಟಣೆ ಹೊರಡಿಸಿದ್ದು, ಪ್ರಸ್ತುತ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊದಲ ನಿಧಾನಗತಿಯ ಓವರ್ ದರ ಉಲ್ಲಂಘನೆ ಇದಾಗಿರುವುದರಿಂದ ನಾಯಕ ಅಕ್ಷರ್ ಪಟೇಲ್ ಅವರಿಗೆ ₹12 ಲಕ್ಷ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.

ಇಂಧನ ಉಳಿತಾಯಕ್ಕೆ ಪ್ರಧಾನಿ ಮೋದಿ ಮಹತ್ವದ ಹೆಜ್ಜೆ; ಬೆಂಗಾವಲು ವಾಹನಗಳ ಸಂಖ್ಯೆ ಶೇ.50ರಷ್ಟು ಕಡಿತ

ನವದೆಹಲಿ: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ, ಇರಾನ್-ಅಮೆರಿಕ ನಡುವಿನ ಸಂಘರ್ಷ ಹಾಗೂ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯ ಹಿನ್ನೆಲೆ ದೇಶದಲ್ಲಿ ಇಂಧನ ಉಳಿತಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. ವಿಶೇಷ ಭದ್ರತಾ ಪಡೆ ಬಳಸುವ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಶೇ.50ರಷ್ಟು ಕಡಿತಗೊಳಿಸಲು ಸೂಚನೆ ನೀಡಲಾಗಿದೆ.

ಮಿತವ್ಯಯ ಕ್ರಮಗಳ ಭಾಗವಾಗಿ ಇತ್ತೀಚೆಗೆ ನಡೆದ ಗುಹಾವಾಟಿ ಮತ್ತು ವಡೋದರಾ ಭೇಟಿಗಳ ಸಂದರ್ಭದಲ್ಲೂ ಕಡಿಮೆ ವಾಹನಗಳೊಂದಿಗೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಈ ಮೂಲಕ ಸಾರ್ವಜನಿಕರಿಗೆ ಮಾತ್ರವಲ್ಲ, ಸರ್ಕಾರವೂ ಇಂಧನ ಉಳಿತಾಯ ಮತ್ತು ಮಿತವ್ಯಯ ಕ್ರಮಗಳನ್ನು ಅನುಸರಿಸುತ್ತಿದೆ ಎಂಬ ಸಂದೇಶ ರವಾನಿಸಲಾಗಿದೆ.

ಇದಲ್ಲದೆ, ಪ್ರಧಾನಿ ಭದ್ರತೆಗೆ ಬಳಸುವ ಕೆಲವು ವಿಶೇಷ ಬೆಂಗಾವಲು ವಾಹನಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಸಹ ಅನುಮತಿ ನೀಡಲಾಗಿದೆ. ಇಂಧನ ಬಳಕೆಯನ್ನು ತಗ್ಗಿಸುವುದರ ಜೊತೆಗೆ ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಗೆ ಸರ್ಕಾರ ಒತ್ತು ನೀಡುತ್ತಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರಧಾನ ಮಂತ್ರಿಗಳ ಕಚೇರಿ, ಪ್ರಧಾನಿ ಮೋದಿ ಭಾಷಣದ ಪ್ರತಿಗಳನ್ನು ಹಂಚಿಕೆ ಮಾಡಿದೆ ಎನ್ನಲಾಗಿದೆ. ಅದರಲ್ಲಿ ಜಾಗತಿಕ ಸಂಕಷ್ಟದ ಸಂದರ್ಭದಲ್ಲಿ ಅನುಸರಿಸಬೇಕಾದ ಮಿತವ್ಯಯ ಕ್ರಮಗಳು ಮತ್ತು ಕಾರ್ಯಯೋಜನೆಗಳ ಕುರಿತು ವಿವರಿಸಲಾಗಿದೆ ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರದ ಕಾರ್ಯಯೋಜನೆಯಡಿ ನಾಗರಿಕರಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು, ಅನಗತ್ಯ ಇಂಧನ ಬಳಕೆಯನ್ನು ಕಡಿಮೆ ಮಾಡಲು ಹಾಗೂ ಅಗತ್ಯವಿಲ್ಲದ ಪ್ರಯಾಣಗಳನ್ನು ತಪ್ಪಿಸಲು ಕರೆ ನೀಡಲಾಗಿದೆ. ಸಭೆಗಳು ಮತ್ತು ಅಧಿಕೃತ ಕಾರ್ಯಗಳನ್ನು ಸಾಧ್ಯವಾದಷ್ಟು ಆನ್‌ಲೈನ್ ಮೂಲಕ ನಡೆಸುವಂತೆ ಸೂಚಿಸಲಾಗಿದೆ.

ಪಶ್ಚಿಮ ಏಷ್ಯಾದ ಅಸ್ಥಿರತೆಯಿಂದ ಉಂಟಾಗಿರುವ ಜಾಗತಿಕ ಆರ್ಥಿಕ ಒತ್ತಡಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಡಳಿತದ ಕಾರ್ಯಕ್ಷಮತೆ ಮತ್ತು ಭದ್ರತಾ ಮಾನದಂಡಗಳನ್ನು ಕಾಪಾಡಿಕೊಂಡೇ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಪ್ರಾಯೋಗಿಕ ಮಿತವ್ಯಯ ಕ್ರಮಗಳನ್ನು ಅನುಸರಿಸಬೇಕು ಎಂಬುದು ಪ್ರಧಾನಿ ಮೋದಿ ಆಶಯವಾಗಿದೆ ಎಂದು ಹೇಳಲಾಗಿದೆ.

ಈ ಕ್ರಮಗಳ ಪರಿಣಾಮ ಈಗಾಗಲೇ ಬಿಜೆಪಿ ಆಡಳಿತದ ಹಲವು ರಾಜ್ಯಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದು, ಹಲವಾರು ನಾಯಕರು ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲು ಮುಂದಾಗಿದ್ದಾರೆ.

ಮಂಗಳೂರಿನಲ್ಲಿ 35 ಲಕ್ಷ ರೂ. ಮೌಲ್ಯದ ಹೈಡ್ರೋವಿಡ್ ಗಾಂಜಾ ಜಪ್ತಿ: ಕಾಲೇಜು ವಿದ್ಯಾರ್ಥಿನಿ ಅರೆಸ್ಟ್

ಮಂಗಳೂರು: ಕರಾವಳಿ ಭಾಗದಲ್ಲಿ ಮಾದಕ ದ್ರವ್ಯ ಜಾಲ ಎಷ್ಟು ಆಳವಾಗಿ ವ್ಯಾಪಿಸಿದೆ ಎಂಬುದಕ್ಕೆ ಸಾಕ್ಷಿಯಾಗುವಂತೆ ಮುಲ್ಕಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದುಬಾರಿ ಮಾದಕ ವಸ್ತುವಿನೊಂದಿಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಿವಾಸಿ ಸುಹಾನ (21) ಎಂದು ಗುರುತಿಸಲಾಗಿದೆ. ಈಕೆ ಕುಂದಾಪುರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಮಾದಕ ದ್ರವ್ಯ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 42 ಗ್ರಾಂ ಹೈಡ್ರೋವಿಡ್ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಹಾಗೂ ಇತರ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ, ಸುಹಾನ ಚೆನ್ನೈನಿಂದ ಈ ಮಾದಕ ವಸ್ತುವನ್ನು ಮಂಗಳೂರಿಗೆ ಸಾಗಾಟ ಮಾಡಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಕರಾವಳಿ ಭಾಗದ ಕಾಲೇಜು ವಿದ್ಯಾರ್ಥಿಗಳು ಮತ್ತು ಶ್ರೀಮಂತ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುವ ಉದ್ದೇಶ ಹೊಂದಿದ್ದಳು ಎನ್ನಲಾಗಿದೆ.

ಇನ್ನೂ ಆತಂಕಕಾರಿ ಸಂಗತಿ ಎಂದರೆ, ಕೇವಲ 21 ವರ್ಷದ ಈ ವಿದ್ಯಾರ್ಥಿನಿ ಈಗಾಗಲೇ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಹಿಂದೆ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು,

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆಯಲ್ಲೂ ಈಕೆಯ ವಿರುದ್ಧ ಮಾದಕ ದ್ರವ್ಯ ಸಾಗಾಟ ಸಂಬಂಧ ಪ್ರಕರಣ ದಾಖಲಾಗಿರುವುದು ಪತ್ತೆಯಾಗಿದೆ. ಪ್ರಸ್ತುತ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಜಾಲದ ಹಿಂದೆ ಇರುವ ಪ್ರಮುಖ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.