Home Blog Page 254

ಬಿ ಖಾತೆದಾರರಿಗೆ ಸಿಹಿ ಸುದ್ದಿ; ಎ ಖಾತೆ ಪರಿವರ್ತನೆಗೆ 6ನೇ ಗ್ಯಾರಂಟಿ ಘೋಷಿಸಿದ ಡಿಕೆ ಶಿವಕುಮಾರ್

ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಜನತೆಗೆ ಮಹತ್ವದ ಘೋಷಣೆ ಮಾಡಿದ್ದು, ಬಿ ಖಾತೆ ಹೊಂದಿರುವ ಆಸ್ತಿ ಮಾಲೀಕರಿಗೆ ಎ ಖಾತೆ ಪಡೆಯಲು ಅವಕಾಶ ಕಲ್ಪಿಸುವ ‘ನನ್ನ ಖಾತಾ, ನನ್ನ ಹಕ್ಕು’ ಅಭಿಯಾನಕ್ಕೆ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ. ಇದನ್ನು ಬೆಂಗಳೂರಿಗರಿಗಾಗಿ ರಾಜ್ಯ ಸರ್ಕಾರದ 6ನೇ ಗ್ಯಾರಂಟಿ ಎಂದು ಅವರು ಘೋಷಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಇ-ಖಾತಾ, ನಂಬಿಕೆ ನಕ್ಷೆ ಸೇರಿದಂತೆ ಹಲವು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದ್ದೇವೆ. ಇದೀಗ ಬಿ ಖಾತೆ ಹೊಂದಿರುವ ನಾಗರಿಕರಿಗೆ ಎ ಖಾತೆ ಮಾಡಿಸಿಕೊಳ್ಳಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಮೇ 16, 2026ರಿಂದ ಈ ಅಭಿಯಾನ ಆರಂಭವಾಗಲಿದ್ದು, ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆಗೊಳ್ಳಲು ಅವಕಾಶ ನೀಡಲಾಗುತ್ತದೆ. ನಗರದಲ್ಲಿ ಸುಮಾರು 7 ಲಕ್ಷ ಬಿ ಖಾತೆಗಳಿದ್ದು, ಯೋಜನೆಯಿಂದ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಒಸಿ ಇಲ್ಲದೇ ವಿದ್ಯುತ್ ಹಾಗೂ ನೀರಿನ ಸಂಪರ್ಕ ಸಿಗದೇ ಪರದಾಡುತ್ತಿರುವ ನಾಗರಿಕರಿಗೆ ಈ ಯೋಜನೆ ನೆರವಾಗಲಿದೆ. ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ಆಸ್ತಿ ಪ್ರಮಾಣಪತ್ರವನ್ನು ಮನೆಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

ಬೆಂಗಳೂರು ನಗರದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಶಾಲಾ ಆವರಣಗಳಲ್ಲಿ 10 ಸ್ಥಳಗಳನ್ನು ಗುರುತಿಸಿ ಅಭಿಯಾನ ನಡೆಸಲಾಗುತ್ತದೆ. ಮೇ 16ರ ಬಳಿಕ ಪ್ರತಿ ಶನಿವಾರ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುವುದು. ಅಧಿಕಾರಿಗಳು ರಜೆ ದಿನಗಳಲ್ಲಿಯೂ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆಗೊಳ್ಳುವವರಿಗೆ ಗೈಡನ್ಸ್ ವ್ಯಾಲ್ಯೂ ಶೇಕಡಾ 5ರಿಂದ ಶೇಕಡಾ 2ಕ್ಕೆ ಇಳಿಕೆ ಮಾಡುವುದಾಗಿ ಘೋಷಿಸಿರುವ ಡಿಸಿಎಂ, ಮುಂದಿನ 100 ದಿನಗಳಲ್ಲಿ ಈ ಅವಕಾಶವನ್ನು ನಾಗರಿಕರು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ, ಕೆಂಪೇಗೌಡ ಜಯಂತಿ ಅಂಗವಾಗಿ ಬೆಂಗಳೂರನ್ನು ಹಸಿರುಮಯಗೊಳಿಸುವ ಉದ್ದೇಶದಿಂದ 15 ಲಕ್ಷ ಸಸಿಗಳನ್ನು ನೆಡುವ ಗ್ರೀನ್ ಬೆಂಗಳೂರು ಅಭಿಯಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬಿಡಿಎ 50ನೇ ವರ್ಷದ ಅಂಗವಾಗಿ ಜೂನ್ 27ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಇನ್ನೊಂದೆಡೆ, ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆವರೆಗೆ 33 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಿಸಿನೆಸ್ ಕಾರಿಡಾರ್ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಭೂಮಿ ನೀಡುವ ಮಾಲೀಕರಿಗೆ ಐದು ರೀತಿಯ ಪರಿಹಾರ ನೀಡಲಾಗುವುದು. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಡಿನೋಟಿಫೈ ಮಾಡುವುದಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಮಂಗಳೂರಿನಲ್ಲಿ ಉಚಿತ ನೇರ ಸಂದರ್ಶನ ಆಯೋಜನೆ

0

ದಕ್ಷಿಣ ಕನ್ನಡ: ಜಿಲ್ಲೆಯ ಮಂಗಳೂರಿನಲ್ಲಿ ನಿರುದ್ಯೋಗಿಗಳಿಗೆ ಸುವರ್ಣಾವಕಾಶ ಒದಗಿದ್ದು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ನೇರ ಸಂದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.

ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಶ್ರಯದಲ್ಲಿ ನಡೆಯುವ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಎಕ್ಸ್‌ಪರ್ಟ್ ಕಾಲೇಜು ಹಾಗೂ ಮಾಂಡೋವಿ ಮೋಟಾರ್ಸ್ ಸಂಸ್ಥೆಗಳು ಭಾಗವಹಿಸುತ್ತಿವೆ.

ಎಕ್ಸ್‌ಪರ್ಟ್ ಕಾಲೇಜಿನಲ್ಲಿ ‘ಫಿಸಿಕ್ಸ್ ಲ್ಯಾಬ್ ಇನ್‌ಸ್ಟ್ರಕ್ಟರ್’ ಹುದ್ದೆಗೆ ಬಿ.ಎಸ್ಸಿ ಫಿಸಿಕ್ಸ್ ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಮಾಂಡೋವಿ ಮೋಟಾರ್ಸ್‌ನಲ್ಲಿ ‘ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್’ ಹುದ್ದೆಗೆ ಪಿಯುಸಿ, ಐಟಿಐ, ಡಿಪ್ಲೋಮಾ ಅಥವಾ ಯಾವುದೇ ಪದವಿ ಪಡೆದಿರುವ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ.

ಮೇ 16ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಪಡೀಲ್‌ನಲ್ಲಿರುವ ಜಿಲ್ಲಾಡಳಿತ ಭವನದ ‘ಪ್ರಜಾ ಸೌಧ’ದ ನೆಲಮಹಡಿಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.

ಉದ್ಯೋಗಾಕಾಂಕ್ಷಿಗಳು ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಹಾಜರಾಗುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ 0824-2457139 ಸಂಪರ್ಕಿಸಲು ಸೂಚಿಸಲಾಗಿದೆ.

ಶಾಲೆಯಿಂದ ನಾಪತ್ತೆಯಾಗಿದ್ದ ಬಾಲಕ ಬೆಂಗಳೂರಿನಲ್ಲಿ ಪತ್ತೆ: ಕಬಡ್ಡಿ ಪಂದ್ಯದಿಂದ ಬಯಲಾಯ್ತು ರಹಸ್ಯ

0

ಮಂಡ್ಯ: ಜಿಲ್ಲೆಯ ತಂಗಳಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ. ಕಬಡ್ಡಿ ಆಟದ ಮೇಲಿದ್ದ ಆಸಕ್ತಿಯೇ ಕೊನೆಗೂ ಬಾಲಕನ ಸುಳಿವು ನೀಡಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.

ಪಾಂಡವಪುರ ತಾಲೂಕಿನ ಹಿರೇಮರಹಳ್ಳಿ ಗ್ರಾಮದ ಈರೇಗೌಡರ ಪುತ್ರ ಕಿಶೋರ್ 9ನೇ ತರಗತಿಯಲ್ಲಿ ಓದುತ್ತಿದ್ದ ವೇಳೆ 2022ರ ಆಗಸ್ಟ್ 10ರಂದು ಶಾಲೆಯಿಂದ ನಾಪತ್ತೆಯಾಗಿದ್ದ. ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಆತ ಶಾಲೆಯತ್ತ ಹೋಗುತ್ತಿರುವುದು ಮಾತ್ರ ದಾಖಲಾಗಿತ್ತು. ಬಳಿಕ ಆತ ಎಲ್ಲಿಗೆ ತೆರಳಿದ್ದಾನೆ ಎಂಬುದು ಪತ್ತೆಯಾಗಿರಲಿಲ್ಲ.

ತಂದೆ ಶಾಲೆಗೆ ಭೇಟಿ ನೀಡಿದಾಗ ಮಗ ಕಳೆದ ಹಲವು ದಿನಗಳಿಂದ ಶಾಲೆಗೆ ಬಂದಿಲ್ಲ ಎಂಬ ಮಾಹಿತಿ ತಿಳಿದುಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ಕು ವರ್ಷಗಳಿಂದ ನಿರಂತರ ಶೋಧ ನಡೆಸುತ್ತಿದ್ದರು.

ತನಿಖೆಯಲ್ಲಿ ಕಿಶೋರ್ ಸ್ವಯಂಪ್ರೇರಿತವಾಗಿ ಶಾಲೆ ಬಿಟ್ಟು ಬೆಂಗಳೂರಿಗೆ ತೆರಳಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಓದಿನಲ್ಲಿ ಆಸಕ್ತಿ ಇಲ್ಲದ ಕಾರಣ ಶಾಲೆಯ ಕಾಂಪೌಂಡ್ ಹಾರಿ ಹೊರಬಂದಿದ್ದ ಆತ, ಬೆಂಗಳೂರಿನಲ್ಲಿ ವಿವಿಧ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ.

ಕಬಡ್ಡಿ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಕಿಶೋರ್ ಸ್ಥಳೀಯ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸುತ್ತಿದ್ದ ವೇಳೆ ಪರಿಚಿತರು ಆತನನ್ನು ಗುರುತಿಸಿದ್ದಾರೆ. ಮಾಹಿತಿ ಆಧರಿಸಿ ಪೊಲೀಸರು ಆತನನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಗ್ರಾಮಕ್ಕೆ ಕರೆತಂದಿದ್ದಾರೆ.

ನಾಲ್ಕು ವರ್ಷಗಳಿಂದ ಮಗನಿಗಾಗಿ ಕಾದಿದ್ದ ಕುಟುಂಬಕ್ಕೆ ಈಗ ಸಂತಸದ ಕ್ಷಣ ಮರಳಿ ಬಂದಿದೆ.

ನೀಟ್ ಪೇಪರ್ ಲೀಕ್ ದೇಶದ ಅತಿದೊಡ್ಡ ಹಗರಣ: ಮೋದಿ ಸರ್ಕಾರದ ವಿರುದ್ಧ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು 2026ರ ಅತಿದೊಡ್ಡ ಹಗರಣವಾಗಿದ್ದು, ಭಾರತದ ಇತಿಹಾಸದಲ್ಲೇ ನಡೆದಿರುವ ಪ್ರಶ್ನೆಪತ್ರಿಕೆ ಸೋರಿಕೆಯ ಅತಿ ದೊಡ್ಡ ಪ್ರಕರಣ ಇದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಗರಣದಿಂದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೀಡಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಳೆದ ಹತ್ತು ವರ್ಷಗಳಲ್ಲಿ 40ಕ್ಕೂ ಹೆಚ್ಚು ಬಾರಿ ವಿವಿಧ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿದ ಅವರು, ಇದು ಕೇಂದ್ರ ಸರ್ಕಾರದ ವೈಫಲ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಕುಸಿದಿದೆ. ಈ ಘಟನೆ ಕೇಂದ್ರದ ಆಡಳಿತ ವೈಫಲ್ಯದ ಸ್ಪಷ್ಟ ಉದಾಹರಣೆ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಅವರು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವಂತಹ ಘಟನೆಗಳಿಗೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಜ್ಯೋತಿಷಿಯನ್ನು ಓಎಸ್‌ಡಿ ಆಗಿ ನೇಮಕ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಪ್ರತಿ ನಾಯಕರು ತಮ್ಮ ನಂಬಿಕೆ ಮತ್ತು ಅನುಕೂಲಕ್ಕೆ ತಕ್ಕಂತೆ ನೇಮಕಾತಿ ಮಾಡುತ್ತಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು

ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ: ಮಂತ್ರಾಲಯದಲ್ಲಿ ಕಾರ್ಮಿಕರ ಶೆಡ್ ಬೆಂಕಿಗಾಹುತಿ

0

ರಾಯಚೂರು: ಮಂತ್ರಾಲಯ ಶ್ರೀಮಠದ ಆವರಣದಲ್ಲಿದ್ದ ಕಾರ್ಮಿಕರ ಶೆಡ್‌ಗಳಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿದ್ದರೂ ಕಾರ್ಮಿಕರ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

ನರಹರಿ ತೀರ್ಥ ವಸತಿ ಗೃಹಗಳ ಸಮೀಪ ನಿರ್ಮಾಣ ಕಾಮಗಾರಿಗಾಗಿ ಬಂದಿದ್ದ ಕಾರ್ಮಿಕರು ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುತ್ತಿದ್ದರು. ಮಧ್ಯಾಹ್ನದ ವೇಳೆ ತೀವ್ರ ಬಿಸಿಲಿನ ಪರಿಣಾಮ ಶೆಡ್‌ನಲ್ಲಿದ್ದ ಎರಡು-ಮೂರು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡಿವೆ ಎಂದು ತಿಳಿದುಬಂದಿದೆ.

ಸಿಲಿಂಡರ್ ಸ್ಫೋಟದಿಂದ ಶೆಡ್‌ಗಳಿಗೆ ಬೆಂಕಿ ವ್ಯಾಪಿಸಿ ಕಾರ್ಮಿಕರ ಆಹಾರ ಸಾಮಗ್ರಿ, ದೈನಂದಿನ ಬಳಕೆಯ ವಸ್ತುಗಳು ಮತ್ತು ಇತರೆ ಸಾಮಾನುಗಳು ಸುಟ್ಟು ಹೋಗಿವೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಮಂತ್ರಾಲಯ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಮಿಕರು ಕೆಲಸಕ್ಕೆ ತೆರಳಿದ್ದ ಸಮಯದಲ್ಲೇ ಅವಘಡ ಸಂಭವಿಸಿದ್ದರಿಂದ ಭಾರಿ ದುರಂತ ತಪ್ಪಿದೆ ಎಂದು ಅವರು ತಿಳಿಸಿದ್ದಾರೆ.

ಅಗ್ನಿಶಾಮಕ ದಳ ಮತ್ತು ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ನಷ್ಟಕ್ಕೊಳಗಾದ ಕಾರ್ಮಿಕರಿಗೆ ಶ್ರೀಮಠದಿಂದ ನೆರವು ನೀಡಲಾಗುವುದು ಎಂದು ಶ್ರೀಗಳು ಭರವಸೆ ನೀಡಿದ್ದಾರೆ.

ಕುತಂತ್ರ, ಷಡ್ಯಂತ್ರ ಮೂಲಕ ದಲಿತರಿಗೆ ವಂಚನೆ; ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್‍ನವರು ಏಕಾಏಕಿ ಕುತಂತ್ರ, ಷಡ್ಯಂತ್ರ ಮಾಡಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಮೀಸಲಾತಿ ಪ್ರಮಾಣ ಇಳಿಸುವ ಮೂಲಕ ವಂಚನೆ, ದ್ರೋಹವೆಸಗಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆಕ್ಷೇಪಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರವು ಎಸ್‍ಸಿ ಮೀಸಲಾತಿಯನ್ನು ಶೇ 15ರಿಂದ 17ಕ್ಕೆ ಏರಿಸಿತ್ತು. ಎಸ್‍ಟಿ ಮೀಸಲಾತಿಯನ್ನು ಶೇ 3ರಿಂದ 7ಕ್ಕೆ ಹೆಚ್ಚಿಸಿತ್ತು. ಎಸ್‍ಟಿ ಸಮುದಾಯಕ್ಕೆ ನ್ಯಾಯಯುತ ಬೇಡಿಕೆಯನ್ನು ನಾವು ಈಡೇರಿಸಿದ್ದೆವು ಎಂದು ಗಮನ ಸೆಳೆದರು.

ಮಾಧುಸ್ವಾಮಿ ವರದಿ, ಸದಾಶಿವ ಆಯೋಗವನ್ನು ಗಮನದಲ್ಲಿ ಇಟ್ಟುಕೊಂಡು ನಾವು ಮೀಸಲಾತಿಯನ್ನು ಹೆಚ್ಚಿಸಿದ್ದೆವು. ಇದು ಸುಮಾರು 30 ವರ್ಷಗಳ ಹೋರಾಟದ ಪ್ರತಿಫಲ ಎಂದು ವಿವರಿಸಿದರು. ಕಾಂಗ್ರೆಸ್ ಸರಕಾರದ ಕ್ರಮದಿಂದ ಎಸ್‍ಟಿ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ. ಮೀಸಲಾತಿ ಕಡಿಮೆ ಮಾಡಲು ಮತ್ತು ಘನಂದಾರಿ ಕೆಲಸಕ್ಕೆ ಸಿದ್ದರಾಮಯ್ಯನವರ ಸರಕಾರವೇ ಬೇಕಿತ್ತೇ? ಇದೇನಾ ನಿಮ್ಮ ದಲಿತಪರ ನೀತಿ ಎಂದು ಪ್ರಶ್ನಿಸಿದರು.

ಹಿಂದೆ 10 ವರ್ಷ ಮನಮೋಹನ್ ಸಿಂಗ್ ಸರಕಾರ ಇದ್ದಾಗ ಮೀಸಲಾತಿ ಪ್ರಮಾಣ ಹೆಚ್ಚಿಸಿಲ್ಲವೇಕೆ ಎಂದು ಕೇಳಿದರು. ಎಸ್‍ಟಿ ಸಮುದಾಯ ನ್ಯಾಯ ಕೇಳುತ್ತಿದೆ. ಅದಕ್ಕೆ ನಿಮ್ಮ ಉತ್ತರವೇನು ಎಂದು ಪ್ರಶ್ನೆಯನ್ನು ಮುಂದಿಟ್ಟರು. 7ರಿಂದ ಶೇ 3ಕ್ಕೆ ಇಳಿಸಲಾಗಿದೆ. ಇನ್ನೆಷ್ಟು ವರ್ಷ ಹೋರಾಟ ಮಾಡಬೇಕಾದೀತು ಎಂದರು.

ಮೀಸಲಾತಿ ಪ್ರಮಾಣ ಕಡಿತ ಮಾಡಿ ಎಸ್‍ಟಿಗಳಿಗೆ ಅವಮಾನ ಮಾಡಿದ್ದಾರೆ. ದಲಿತರ ಬೆನ್ನಿಗೆ ಇವರು ಚೂರಿ ಹಾಕಿದ್ದಾರೆ. ಇದು ಇವರ ದ್ವಂದ್ವ ನೀತಿ ಎಂದು ಆಕ್ಷೇಪಿಸಿದರು. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಇದನ್ನು ಸರಿಪಡಿಸದೇ ಇದ್ದರೆ ಹೋರಾಟವು ದೊಡ್ಡ ಜ್ವಾಲೆಯಾಗಿ ರಾಜ್ಯ ಸರಕಾರವನ್ನು ಕಿತ್ತೆಸೆಯುವಂಥ ತೀರ್ಮಾನವನ್ನು ಆ ಸಮುದಾಯದವರು ಮಾಡಲಿದ್ದಾರೆ. ನಾವು ಕೂಡ ಅವರ ಹೋರಾಟಕ್ಕೆ ಬೆಂಬಲ ಕೊಡುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ದಲಿತರು, ಸಂವಿಧಾನ, ಡಾ.ಅಂಬೇಡ್ಕರ್ ಪರ ಇಲ್ಲ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ದಲಿತರ ಪರ, ಸಂವಿಧಾನದ ಪರ ಮತ್ತು ಡಾ. ಅಂಬೇಡ್ಕರರ ಪರ ಎನ್ನುವ ಕಾಂಗ್ರೆಸ್ಸಿನವರು ಈಗ ಮೀಸಲಾತಿ ವಿಚಾರದಲ್ಲಿ ಈ ಮೂರಕ್ಕೂ ಎಳ್ಳುನೀರು ಬಿಟ್ಟಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.

ಹೆಚ್ಚುವರಿ ಮೀಸಲಾತಿ ಪ್ರಮಾಣವನ್ನು ಕಾಂಗ್ರೆಸ್ ಸರಕಾರ ತಡೆಹಿಡಿದಿದೆ. ಇದಕ್ಕೆ 9ನೇ ಶೆಡ್ಯೂಲ್ ಕಾರಣವಲ್ಲ; ಸರಿಯಾಗಿ ವಾದ ಮಂಡಿಸದೇ ಇದ್ದುದೇ ಇದಕ್ಕೆ ಕಾರಣ ಎಂದು ಟೀಕಿಸಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,

ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರಕಾರ ಇದ್ದಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಬಹುದಿನಗಳ ಹೋರಾಟಕ್ಕೆ ತೆರೆ ಎಳೆಯಲು ಎಸ್‍ಸಿ, ಎಸ್‍ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ್ದರು ಎಂದು ತಿಳಿಸಿದರು. ಈ ಏರಿಕೆಯ ಬಳಿಕ ಸುಮಾರು ಮೂರೂವರೆ ವರ್ಷಗಳ ಕಾಲ ಯಾವ ತೊಂದರೆ, ತೊಡಕೂ ಇಲ್ಲದೇ ಎಲ್ಲ ರೀತಿಯ ಸವಲತ್ತುಗಳೂ ಈ ಜನಾಂಗಕ್ಕೆ ಲಭಿಸಿವೆ ಎಂದು ಹೇಳಿದರು.

ಮೀಸಲಾತಿ ಪ್ರಮಾಣವನ್ನು ಕೂಡಲೇ ಹೆಚ್ಚಿಸಬೇಕೆಂದು ಅವರು ಆಗ್ರಹಿಸಿದರು. ಇಲ್ಲವಾದರೆ ರಾಜ್ಯದಲ್ಲಿ ದೊಡ್ಡ ಆಂದೋಲನ ಮಾಡಲಿದ್ದೇವೆ; ಯಾವುದೇ ಸಂಘಟನೆ ಹೋರಾಟಕ್ಕೆ ಇಳಿದರೆ ಅವರನ್ನು ಬೆಂಬಲಿಸುತ್ತೇವೆ ಎಂದು ಪ್ರಕಟಿಸಿದರು.

ಬೊಮ್ಮಾಯಿಯವರು ಮೀಸಲಾತಿ ಹೆಚ್ಚಿಸಿದಾಗ ಕಾಂಗ್ರೆಸ್ಸಿಗರು ಶೆಡ್ಯೂಲ್ 9ಕ್ಕೆ ಸೇರಿಸಬೇಕಿತ್ತು ಎಂದು ಅಪಸ್ವರ ತೆಗೆದಿದ್ದರು. ವಕೀಲರಾದ ಸಿದ್ದರಾಮಯ್ಯನವರ ಪ್ರಾಕ್ಟೀಸ್ ಕೇವಲ ಭಾನುವಾರ ಇತ್ತೇ ಅಥವಾ ಬೇರೆ ದಿನಗಳಲ್ಲೇ ಇತ್ತೇ ಎಂದು ಕೇಳಿದರು. ನೀವೇನು ಭಾನುವಾರದ ವಕೀಲರೇ ಎಂದು ಪ್ರಶ್ನಿಸಿದರು.

ಭಕ್ತರಿಗೆ ಗುಡ್‌ನ್ಯೂಸ್: ಕುಕ್ಕೆ ದೇವಸ್ಥಾನದಲ್ಲಿ ದರ್ಶನ ಸಮಯ ವಿಸ್ತರಣೆ

ದಕ್ಷಿಣ ಕನ್ನಡ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನ ಸಮಯವನ್ನು ವಿಸ್ತರಿಸಲಾಗಿದ್ದು, ಭಕ್ತರಿಗೆ ಇದೀಗ ಮಧ್ಯಾಹ್ನ ಹೆಚ್ಚುವರಿ ಒಂದು ಗಂಟೆ ದರ್ಶನದ ಅವಕಾಶ ಸಿಗಲಿದೆ. ದೇವಸ್ಥಾನದ ಆಡಳಿತ ಮಂಡಳಿ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಈವರೆಗೆ ಮಧ್ಯಾಹ್ನ 1.30ರಿಂದ 3.30ರವರೆಗೆ ದೇವರ ದರ್ಶನ ಸಂಪೂರ್ಣ ಬಂದ್ ಮಾಡಲಾಗುತ್ತಿತ್ತು. ಆದರೆ ಹೊಸ ವೇಳಾಪಟ್ಟಿಯ ಪ್ರಕಾರ ಇನ್ನು ಮುಂದೆ ಮಧ್ಯಾಹ್ನ 2.00ರಿಂದ 3.00ರವರೆಗೆ ಮಾತ್ರ ದರ್ಶನ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.

ಇದರಿಂದ ಪ್ರತಿದಿನ ಬೆಳಗ್ಗೆ 6.30ರಿಂದ ಮಧ್ಯಾಹ್ನ 2.00ರವರೆಗೆ ಮತ್ತು ಮಧ್ಯಾಹ್ನ 3.00ರಿಂದ ರಾತ್ರಿ 8.30ರವರೆಗೆ ಭಕ್ತರು ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಸೇವೆಗಳಿಗೆ ಹೆಚ್ಚುತ್ತಿರುವ ಭಕ್ತರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ ಮಾಹಿತಿ ನೀಡಿ, ಭಕ್ತರಿಗೆ ಅನುಕೂಲವಾಗುವ ಉದ್ದೇಶದಿಂದ ದರ್ಶನ ಸಮಯ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ. ಮಹಾಪೂಜೆ ಸಮಯದಲ್ಲಿ ಮಾತ್ರ ಹಿಂದಿನಂತೆ ಅಲ್ಪಾವಧಿಗೆ ದರ್ಶನ ಸ್ಥಗಿತಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

73 ವೃದ್ಧರು, ಒಂಟಿ ಮಹಿಳೆಯರಿಗೆ ಪೊಲೀಸರ ನೆರವು: ವಿಜಯಪುರದಲ್ಲಿ ‘ಆಸರೆ’ ಕಾರ್ಯಕ್ರಮಕ್ಕೆ ಭಾರಿ ಮೆಚ್ಚುಗೆ

ವಿಜಯಪುರ: ಜಿಲ್ಲಾ ಪೊಲೀಸರು ಸಮಾಜಮುಖಿ ಕಾರ್ಯದ ಮೂಲಕ ಹೊಸ ಮಾದರಿ ನಿರ್ಮಿಸಿದ್ದಾರೆ. ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದ 73 ಮಂದಿ ವೃದ್ಧರು ಮತ್ತು ಒಂಟಿ ಮಹಿಳೆಯರಿಗೆ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಟ್ಟು ‘ಆಸರೆ’ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.

ಜಿಲ್ಲೆಯ ವಿವಿಧ ಗ್ರಾಮಗಳಿಗೆ ತೆರಳಿದ ಪೊಲೀಸರು, ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ಪಿಂಚಣಿ, ಸಂಧ್ಯಾ ಸುರಕ್ಷಾ, ಇಂದಿರಾ ಪಿಂಚಣಿ ಹಾಗೂ ಭಾಗ್ಯ ಜ್ಯೋತಿ ಯೋಜನೆಗಳಿಗೆ ಅರ್ಹರನ್ನು ಗುರುತಿಸಿ ನೆರವು ಒದಗಿಸಿದ್ದಾರೆ.

ಈ ಅಭಿಯಾನದ ಫಲವಾಗಿ 14 ಮಂದಿಗೆ ವೃದ್ಧಾಪ್ಯ ವೇತನ, 16 ಮಹಿಳೆಯರಿಗೆ ವಿಧವಾ ವೇತನ ಹಾಗೂ 8 ಮಂದಿಗೆ ವಿಕಲಚೇತನ ಪಿಂಚಣಿ ಮಂಜೂರಾಗಿದೆ. ಜೊತೆಗೆ 10 ವೃದ್ಧರಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ಮಾಡಿಕೊಡಲಾಗಿದೆ.

ಕೇವಲ ಸರ್ಕಾರಿ ಯೋಜನೆಗಳಷ್ಟೇ ಅಲ್ಲದೆ, 3 ವೃದ್ಧೆಯರಿಗೆ ಉಚಿತ ಕಣ್ಣಿನ ಚಿಕಿತ್ಸೆ ಕಲ್ಪಿಸಲಾಗಿದ್ದು, 4 ಮಂದಿಗೆ ಅಂಚೆ ಬ್ಯಾಂಕ್ ಖಾತೆ ತೆರೆಯುವ ವ್ಯವಸ್ಥೆ ಕೂಡ ಮಾಡಲಾಗಿದೆ.

ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪೊಲೀಸರ ಬಗ್ಗೆ ಇರುವ ಭಯವನ್ನು ಕಡಿಮೆ ಮಾಡಿ ಜನರಲ್ಲಿ ವಿಶ್ವಾಸ ಮೂಡಿಸುವಲ್ಲಿ ‘ಆಸರೆ’ ಕಾರ್ಯಕ್ರಮ ಯಶಸ್ವಿಯಾಗಿದೆ.

ಜಿಮ್‌ನಲ್ಲಿ ಭುಜ ತಾಗಿದ್ದಕ್ಕೆ ಯುವಕನ ಮೇಲೆ ಕ್ರೂರ ಹಲ್ಲೆ: ಕೋಮಾಗೆ ಜಾರಿದ ಕೀರ್ತನ್

0

ಹಾಸನ: ನಗರದ ಕುವೆಂಪುನಗರದಲ್ಲಿರುವ ಎಂ.ಜೆ ಫಿಟ್ನೆಸ್ ಸ್ಟುಡಿಯೋದಲ್ಲಿ ನಡೆದ ಕ್ಷುಲ್ಲಕ ಜಗಳ ಭೀಕರ ತಿರುವು ಪಡೆದಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಭುಜ ತಾಗಿದ ವಿಚಾರಕ್ಕೆ ಯುವಕನೊಬ್ಬನ ಮೇಲೆ ಕ್ರೂರ ಹಲ್ಲೆ ನಡೆಸಲಾಗಿದ್ದು, ಗಾಯಾಳು ಯುವಕ ಕೋಮಾ ಸ್ಥಿತಿಗೆ ಜಾರಿದ್ದಾನೆ.

ಕೀರ್ತನ್ ಮತ್ತು ವರುಣ್ ಎಂಬ ಇಬ್ಬರು ಯುವಕರು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಈ ವೇಳೆ ಕೀರ್ತನ್ ಅವರ ಭುಜ ವರುಣ್‌ಗೆ ತಾಗಿದ್ದರಿಂದ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಆರೋಪದ ಪ್ರಕಾರ, ಕೋಪಗೊಂಡ ವರುಣ್ ಏಕಾಏಕಿ ಕೀರ್ತನ್ ತಲೆ ಭಾಗಕ್ಕೆ ಬಲವಾಗಿ ಕಿಕ್ ಹೊಡೆದಿದ್ದಾನೆ. ಹಲ್ಲೆಯ ತೀವ್ರತೆಗೆ ಕೀರ್ತನ್ ನೆಲಕ್ಕುರುಳಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ.

ವೈದ್ಯರು ನೀಡಿರುವ ಮಾಹಿತಿ ಪ್ರಕಾರ, ಕೀರ್ತನ್ ಅವರಿಗೆ ತಲೆಬುರುಡೆಗೆ ಗಂಭೀರ ಪೆಟ್ಟಾಗಿದ್ದು, ಸದ್ಯ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಆತಂಕಕಾರಿ ಎಂದು ತಿಳಿದುಬಂದಿದೆ.

ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಮ್‌ನ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.