Home Blog Page 26

ಸಚಿವ ಎಂ.ಬಿ. ಪಾಟೀಲ್ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ: ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ

ಬೆಂಗಳೂರು: ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ” ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬಾಯಿ ಇದೆ ಎಂದು ಏನು ಬೇಕಾದರೂ ಮಾತನಾಡುವುದಲ್ಲ. ಎಂ.ಬಿ. ಪಾಟೀಲ್ ಅವರನ್ನು ವಿದ್ಯಾವಂತರು ಅಂದುಕೊಂಡಿದ್ದೆ. ಯಾವ ಆಧಾರದ ಮೇಲೆ ಮಾತನಾಡಿದ್ದರೋ ಗೊತ್ತಿಲ್ಲ” ಎಂದು ಕುಟುಕಿದರು.

“ಎಂ.ಬಿ. ಪಾಟೀಲ್ ಅವರು ನಮ್ಮ ಕುಟುಂಬದ 100 ಎಕರೆ ಭೂಮಿ ಇದೆ ಎಂದು ಸಾಬೀತು ಮಾಡಿದರೆ ಅವರಿಗೆ ನಾನು ತಲೆಬಾಗುತ್ತೇನೆ. ಇಲ್ಲದಿದ್ದರೆ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು” ಎಂದು ನಿಖಿಲ್ ಒತ್ತಾಯಿಸಿದರು.

ಪೋಸ್ಟರ್ ಅಭಿಯಾನದ ಕುರಿತು ಮಾತನಾಡಿ, “ಕೆಲವು ಪುಂಡಪೋಕರಿ ಚೇಲಾಗಳು ಈ ಕೆಲಸ ಮಾಡಿದ್ದಾರೆ. ಅವರಿಗೆಲ್ಲ ಉತ್ತರಿಸಲು ಆಗಲ್ಲ” ಎಂದು ನಿಖಿಲ್ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

“ಈಗಿನ ‘ಸ್ಟೇಟಸ್ ಮುಖ್ಯಮಂತ್ರಿ’ಗಳು ಕೆಲವು ಚೇಲಾಗಳನ್ನು ನಿಖಿಲ್ ಕುಮಾರಸ್ವಾಮಿ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಬೈಯಲು ಬಿಟ್ಟಿದ್ದಾರೆ. ಅತೀ ಹೆಚ್ಚು ಬೈದವರಿಗೆ ಮಂತ್ರಿಸ್ಥಾನ ನೀಡಲಾಗುವುದು ಎಂದು ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆದ್ರೆ ಇವರೆಲ್ಲ ಮನೆ ಸೇರಿಕೊಳ್ಳುತ್ತಾರೆ” ಎಂದು ಲೇವಡಿ ಮಾಡಿದರು.

ನಿಖಿಲ್ ಲೇಔಟ್ ಮಾಡ್ತೀನಿ” ಎಂಬ ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್, ರೈತರಿಗೆ ಬೇಕಿರುವುದು ನೆಮ್ಮದಿಯ ಜೀವನ, ಸ್ವಾಭಿಮಾನದ ಬದುಕು. ಶಾಸಕರಿಗೆ ಲೇಔಟ್ ಬೇಕಾಗಿದೆ ಎಂದು ತಿರುಗೇಟು ನೀಡಿದರು.

ವಿಧಾನಸೌಧದಲ್ಲಿ ಚರ್ಚೆಗೆ ಸಂಬಂಧಿಸಿದಂತೆ ಮಾತನಾಡಿ, ಮೊನ್ನೆ ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ, ‘ನಾನೂ ಟೌನ್‌ಶಿಪ್ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾಗಿ ಸುಳ್ಳು ವದಂತಿ ಹರಡಿಸಿದ್ದಾರೆ.

ಒಂದು ವೇಳೆ ‘ಅಲ್ಲಿ ಫಲವತ್ತಾದ ಭೂಮಿ ಇದೆ, ರೈತರಿಗೆ ಅನ್ಯಾಯ ಮಾಡಿ, 10 ಲಕ್ಷಕ್ಕೂ ಅಧಿಕ ಗಿಡಮರಗಳನ್ನು ಕಡಿದು ಟೌನ್‌ಶಿಪ್ ಮಾಡುತ್ತಿದ್ದೇವೆ’ ಎಂದು ಹೇಳಿದ್ದರೆ ಪ್ರಧಾನಮಂತ್ರಿಗಳು ಒಪ್ಪುತ್ತಿದ್ದರೇ?ಎಂದು ಪ್ರಶ್ನಿಸಿದರು.

ವಿಧಾನಸೌಧದ ಎಸಿ ರೂಮ್‌ನಲ್ಲಿ ಚರ್ಚೆ ಬೇಡ. ರೈತರಿಗೆ ಅನ್ಯಾಯವಾಗುತ್ತಿರುವ ಪ್ರದೇಶದಲ್ಲೇ, ರೈತರ ಮಧ್ಯೆ ಪರ-ವಿರೋಧ ಚರ್ಚೆಯಾಗಲಿ ಎಂದು ಆಗ್ರಹಿಸಿದರು. ಕುಮಾರಸ್ವಾಮಿ ಅವರಿಗೆ ಯಾವುದೇ ತಂಡ ಇಲ್ಲ. ತಂಡ ಇರುವುದು ಮುಖ್ಯಮಂತ್ರಿಗಳಿಗೆ.

ನಮ್ಮ ಕಾರ್ಯಕರ್ತರು ಯಾರೂ ಬರುವುದಿಲ್ಲ. ನೀವೇ ನಿಮ್ಮ ಕಾರ್ಯಕರ್ತರು, ನಿಮ್ಮ ಚೇಲಾಗಳನ್ನು ಕರೆದುಕೊಂಡು ಬಂದು ರೈತರ ಮಧ್ಯೆ ಚರ್ಚೆ ಮಾಡಿ. ಸತ್ಯಾಸತ್ಯತೆ ಹೊರಬರಲಿ” ಎಂದು ಸವಾಲು ಹಾಕಿದರು.

RTI ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಅವಕಾಶವಿಲ್ಲ: BDA ಕಾರ್ಯದರ್ಶಿಗೆ ವಿಧಿಸಿದ್ದ ₹25 ಸಾವಿರ ದಂಡ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಮೊದಲ ಮೇಲ್ಮನವಿ ಪ್ರಾಧಿಕಾರದ ಹುದ್ದೆ ಕೇವಲ ಆಡಳಿತಾತ್ಮಕ ಹುದ್ದೆಯಲ್ಲ, ಅದು ಶಾಸನಬದ್ಧ ಅಧಿಕಾರ ಹೊಂದಿರುವ ಜವಾಬ್ದಾರಿಯುತ ಸ್ಥಾನವಾಗಿದೆ ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಹೊಸದಾಗಿ ಅಧಿಕಾರ ವಹಿಸಿಕೊಳ್ಳುವ ಅಧಿಕಾರಿಗಳಿಗೆ ಹಿಂದಿನಿಂದ ಬಾಕಿ ಉಳಿದಿರುವ ಕರ್ತವ್ಯಗಳ ಜವಾಬ್ದಾರಿಯೂ ಅನ್ವಯವಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಈ ಹಿಂದೆ ಆ ಹುದ್ದೆಯಲ್ಲಿದ್ದ ಅಧಿಕಾರಿಗಳ ನಿರ್ಲಕ್ಷ್ಯವನ್ನು ಕಾರಣವನ್ನಾಗಿ ಮಾಡಿ ಹಾಲಿ ಅಧಿಕಾರಿ ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ರಾಜ್ಯ ಮಾಹಿತಿ ಆಯೋಗವು ವಿಧಿಸಿದ್ದ ₹25 ಸಾವಿರ ದಂಡವನ್ನು ಪ್ರಶ್ನಿಸಿ ಬಿಡಿಎ ಕಾರ್ಯದರ್ಶಿ ಸಿ.ಎಲ್. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ಬಳಿಕ ಮಾಹಿತಿ ಆಯೋಗದ ದಂಡದ ಆದೇಶವನ್ನು ಎತ್ತಿಹಿಡಿದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ.

ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಅಧಿಕಾರಿಗಳು ವರ್ಗಾವಣೆಯ ನೆಪವೊಡ್ಡಿ ಶಾಸನಬದ್ಧ ಕರ್ತವ್ಯಗಳನ್ನು ಮುಂದೂಡುತ್ತಾ ಹೋದರೆ ಆಡಳಿತದಲ್ಲಿ ವಿಳಂಬ ಹಾಗೂ ಅಸ್ತವ್ಯಸ್ತತೆ ಉಂಟಾಗಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹಿಂದಿನ ಅಧಿಕಾರಿಗಳ ಅವಧಿಯಲ್ಲಿ ಆರಂಭವಾದ ಪ್ರಕರಣಗಳನ್ನು ಹೊಸದಾಗಿ ಅಧಿಕಾರ ವಹಿಸಿಕೊಂಡ ಸಾರ್ವಜನಿಕ ಅಧಿಕಾರಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಂತಹ ನಡೆ ಮಾಹಿತಿ ಹಕ್ಕು ಕಾಯ್ದೆಯ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುತ್ತದೆ ಎಂದು ಪೀಠ ತಿಳಿಸಿದೆ.

ಅಧಿಕಾರ ವಹಿಸಿಕೊಂಡ ಬಳಿಕ ಅರ್ಜಿದಾರರು ತಮ್ಮ ಕರ್ತವ್ಯಗಳ ಬಗ್ಗೆ ಜಾಗರೂಕರಾಗಿದ್ದರೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು. ಕನಿಷ್ಠ ಮಾಹಿತಿ ಆಯೋಗದಿಂದ ನೋಟಿಸ್ ಬಂದ ಬಳಿಕವಾದರೂ ಅಧೀನ ಅಧಿಕಾರಿಗಳಿಗೆ ಮಾಹಿತಿ ಒದಗಿಸುವಂತೆ ನಿರ್ದೇಶನ ನೀಡಬಹುದಾಗಿತ್ತು. ಆದರೆ ದಂಡ ವಿಧಿಸಿದ ಎರಡು ತಿಂಗಳ ಬಳಿಕ ಮಾತ್ರ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.

ಇದಲ್ಲದೆ, ಮಾಹಿತಿ ಆಯೋಗದ ಮುಂದೆ ಮೂರು ಬಾರಿ ವಿಚಾರಣೆ ನಡೆದರೂ ಬಿಡಿಎ ಪರವಾಗಿ ಯಾರೂ ಹಾಜರಾಗದಿರುವುದು ಗಂಭೀರ ಕರ್ತವ್ಯ ಲೋಪವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಇದು ಕೇವಲ ಹಿಂದಿನ ಅಧಿಕಾರಿಗಳ ತಪ್ಪು ಮಾತ್ರವಲ್ಲ, ಹಾಲಿ ಅಧಿಕಾರಿಯ ಅವಧಿಯಲ್ಲಿಯೂ ಮುಂದುವರಿದ ನಿರ್ಲಕ್ಷ್ಯದ ಪರಿಣಾಮವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ದಂಡ ವಿಧಿಸಿದ ಬಳಿಕ, 2026ರ ಮಾರ್ಚ್ ತಿಂಗಳಲ್ಲಿ ಮಾಹಿತಿ ಒದಗಿಸುವಂತೆ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನು ಉಲ್ಲೇಖಿಸಿದ ನ್ಯಾಯಪೀಠ, ಕಾನೂನು ಕ್ರಮ ಜರುಗಿದ ನಂತರ ಎಚ್ಚೆತ್ತುಕೊಳ್ಳುವ ಇಂತಹ ನಡೆಗಳನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಅಧಿಕಾರಿಗಳ ನಿಷ್ಕ್ರಿಯತೆಯಿಂದ ಮಾಹಿತಿ ಮರೆಮಾಚುವಂತಾಗಬಾರದು. ಹೀಗಾಗಿ ಮಾಹಿತಿ ಆಯೋಗದ ಆದೇಶದಲ್ಲಿ ಯಾವುದೇ ಕಾನೂನು ದೋಷ ಕಂಡುಬರುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.

ಇದೇ ವೇಳೆ, 2025ರ ಮೇ ತಿಂಗಳಿಗೂ ಮುನ್ನ ಮಾಹಿತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸಿ, ಅಗತ್ಯವಿದ್ದರೆ ಕಾನೂನು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಯಾವುದೇ ಅಡ್ಡಿಯಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ

ಎ. ಸುರೇಶ್ ಚಂದ್ರ ಬಾಬು ಅವರು 2023ರ ಫೆಬ್ರವರಿ 6ರಂದು ಕೆಲವು ಮಾಹಿತಿಗಳನ್ನು ಕೋರಿ ಬಿಡಿಎಗೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ನಿಗದಿತ ಅವಧಿಯಲ್ಲಿ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಅವರು 2023ರ ಮಾರ್ಚ್‌ನಲ್ಲಿ ಮೊದಲ ಮೇಲ್ಮನವಿ ಸಲ್ಲಿಸಿದ್ದರು. ಇದಕ್ಕೂ ಸ್ಪಂದನೆ ದೊರೆಯದ ಕಾರಣ ರಾಜ್ಯ ಮಾಹಿತಿ ಆಯೋಗಕ್ಕೆ ಎರಡನೇ ಮೇಲ್ಮನವಿ ಸಲ್ಲಿಸಿದ್ದರು.

ಈ ನಡುವೆ 2025ರ ಮೇ 8ರಂದು ಸಿ.ಎಲ್. ಶಿವಕುಮಾರ್ ಅವರು ಬಿಡಿಎ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಮಾಹಿತಿ ಹಕ್ಕು ಕಾಯ್ದೆಯಡಿ ಮೊದಲ ಮೇಲ್ಮನವಿ ಪ್ರಾಧಿಕಾರವಾಗಿಯೂ ನೇಮಕಗೊಂಡಿದ್ದರು.

ಸುರೇಶ್ ಚಂದ್ರ ಬಾಬು ಸಲ್ಲಿಸಿದ್ದ ಎರಡನೇ ಮೇಲ್ಮನವಿಯ ವಿಚಾರಣೆಯನ್ನು ಮಾಹಿತಿ ಆಯೋಗವು 2025ರ ಜುಲೈ, ಆಗಸ್ಟ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಸಿದರೂ ಬಿಡಿಎ ಪರವಾಗಿ ಯಾರೂ ಹಾಜರಾಗಿರಲಿಲ್ಲ. ಇದರಿಂದಾಗಿ ಆಯೋಗವು 2026ರ ಜನವರಿ 1ರಂದು ಬಿಡಿಎ ಕಾರ್ಯದರ್ಶಿಗೆ ₹25 ಸಾವಿರ ದಂಡ ವಿಧಿಸಿ ಮಾಹಿತಿ ನೀಡುವಂತೆ ಆದೇಶಿಸಿತ್ತು. ಬಳಿಕ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹಿಂದಿನ ಅಧಿಕಾರಿಗಳ ಅವಧಿಯಲ್ಲಿ ನಡೆದ ಲೋಪಗಳಿಗೆ ತಾವು ಜವಾಬ್ದಾರರಲ್ಲ ಎಂಬ ವಾದವನ್ನು ನ್ಯಾಯಾಲಯ ತಿರಸ್ಕರಿಸಿ, ಮಾಹಿತಿ ಆಯೋಗದ ಕ್ರಮವನ್ನು ಎತ್ತಿಹಿಡಿದಿದೆ.

‘ಡಾಕ್ಟರ್ ಕುರ್ಚಿಯಲ್ಲಿ ವೈದ್ಯರ ಪತ್ನಿ!’: ಕಲಾದಗಿ ಸರ್ಕಾರಿ ಆಸ್ಪತ್ರೆಯಲ್ಲಿ ಅಕ್ರಮ ಚಿಕಿತ್ಸೆ ಆರೋಪ, ತನಿಖೆಗೆ ಆಗ್ರಹ

0

ಬಾಗಲಕೋಟೆ: ಜಿಲ್ಲೆಯ ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ವ್ಯವಸ್ಥೆಯನ್ನೇ ಪ್ರಶ್ನಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಹೆಚ್.ವಿ. ಲೇಬಗಿರಿ ಅವರ ಪತ್ನಿ, ಯಾವುದೇ ಅಧಿಕೃತ ಹುದ್ದೆ ಇಲ್ಲದಿದ್ದರೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.

ಸ್ಥಳೀಯರ ಪ್ರಕಾರ, ವೈದ್ಯಾಧಿಕಾರಿಯ ಪತ್ನಿ ಆಸ್ಪತ್ರೆಗೆ ಬಂದು ರೋಗಿಗಳನ್ನು ತಪಾಸಣೆ ಮಾಡುವುದು, ಔಷಧ ವಿತರಿಸುವುದು ಹಾಗೂ ವೈದ್ಯಕೀಯ ಸಲಹೆ ನೀಡುವುದು ಸಾಮಾನ್ಯ ಸಂಗತಿಯಾಗಿತ್ತು. ಗರ್ಭಿಣಿಯರಿಗೂ ಚಿಕಿತ್ಸೆ ನೀಡಿರುವ ಆರೋಪ ಕೇಳಿಬಂದಿದ್ದು, ಇದರಿಂದ ರೋಗಿಗಳ ಜೀವದ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.

ಘಟನೆಯ ಬಗ್ಗೆ ಆಕ್ರೋಶಗೊಂಡ ಸ್ಥಳೀಯರು ವೈದ್ಯಾಧಿಕಾರಿಯನ್ನು ಪ್ರಶ್ನಿಸಿದಾಗ ಆಸ್ಪತ್ರೆಯಲ್ಲಿ ವಾಗ್ವಾದವೂ ನಡೆದಿದೆ. ಈ ವೇಳೆ ಚಿಕಿತ್ಸೆ ದಾಖಲೆಗಳಲ್ಲಿ ಕಂಡುಬರುವ ಬರಹ ತಮ್ಮ ಪತ್ನಿಯದ್ದಲ್ಲ ಎಂದು ಡಾ. ಲೇಬಗಿರಿ ವಾದಿಸಿದ್ದಾರೆ. ಆದರೆ ಸಾರ್ವಜನಿಕರು ಇದನ್ನು ತಳ್ಳಿ ಹಾಕಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ವೈದ್ಯಕೀಯ ಅರ್ಹತೆ ಇಲ್ಲದ ವ್ಯಕ್ತಿಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುತ್ತಿದ್ದರೆ ಅದು ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ರೋಗಿಗಳ ಜೀವಕ್ಕೆ ಅಪಾಯಕಾರಿಯೂ ಹೌದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಇದೀಗ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಆರೋಗ್ಯ ಇಲಾಖೆ ಮಧ್ಯಪ್ರವೇಶಿಸಿ ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

 ‘ಹಣಕಾಸು ಅಕ್ರಮ ತನಿಖೆಗೆ ಅಡ್ಡಿ, ಸಂಘದಲ್ಲಿ ಪಾರದರ್ಶಕತೆ ಇಲ್ಲ’: AMMA ರಾಜೀನಾಮೆ ಬೆನ್ನಲ್ಲೇ ಸಿಡಿದೆದ್ದ ಶ್ವೇತಾ ಮೆನನ್

ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (AMMA) ಅಧ್ಯಕ್ಷೆ ಶ್ವೇತಾ ಮೆನನ್ ಮತ್ತು ಸಂಪೂರ್ಣ ಕಾರ್ಯಕಾರಿ ಸಮಿತಿಯ ರಾಜೀನಾಮೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ರಾಜೀನಾಮೆಯ ಬಳಿಕ ಮೊದಲ ಬಾರಿಗೆ ಮೌನ ಮುರಿದಿರುವ ಶ್ವೇತಾ ಮೆನನ್, ಸಂಘದೊಳಗಿನ ಹಣಕಾಸು ವ್ಯವಹಾರಗಳು ಹಾಗೂ ಆಡಳಿತ ವೈಫಲ್ಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

“ನನ್ನ ರಾಜೀನಾಮೆ ಯಾವುದೇ ಒತ್ತಡ ಅಥವಾ ಭಯದಿಂದ ಬಂದಿಲ್ಲ. ನನ್ನ ಸ್ವಾಭಿಮಾನ ಮತ್ತು ನಿಲುವುಗಳನ್ನು ಬಿಟ್ಟುಕೊಡಲು ನಾನು ಸಿದ್ಧಳಿರಲಿಲ್ಲ. ಅದಕ್ಕಾಗಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ಅವರು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಚುನಾವಣೆಗೆ ಮುನ್ನವೇ ತಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗಿತ್ತು ಎಂದು ಆರೋಪಿಸಿರುವ ಶ್ವೇತಾ, ಸದಸ್ಯರ ಬಹುಮತದ ಬೆಂಬಲದಿಂದ ಗೆದ್ದಿದ್ದರೂ ಸಂಘದೊಳಗಿನ ಕೆಲ ಪ್ರಭಾವಿ ಗುಂಪುಗಳು ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತಿದ್ದವು ಎಂದು ತಿಳಿಸಿದ್ದಾರೆ.

ಸಂಘದ ಹಿಂದಿನ ಆಡಳಿತ ಅವಧಿಯ ಹಣಕಾಸು ವ್ಯವಹಾರಗಳನ್ನು ತನಿಖೆಗೆ ಒಳಪಡಿಸಲು ಪ್ರಯತ್ನಿಸಿದಾಗ ಪ್ರತಿರೋಧ ಎದುರಿಸಬೇಕಾಯಿತು ಎಂದು ಆರೋಪಿಸಿರುವ ಅವರು, ಕಳೆದ ಎರಡು ಅವಧಿಗಳ ಸಂಪೂರ್ಣ ಲೆಕ್ಕಪತ್ರಗಳ ಫೋರೆನ್ಸಿಕ್ ಆಡಿಟ್ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಸಂಘದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಕೊರತೆ ಇರುವುದನ್ನು ಅವರು ಪರೋಕ್ಷವಾಗಿ ಸೂಚಿಸಿದ್ದಾರೆ.

ತಮ್ಮ ರಾಜೀನಾಮೆಗೆ ರಾಜಕೀಯ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿರುವ ಶ್ವೇತಾ, “ನಾನು ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿಯಲ್ಲ. ನನ್ನ ನಿರ್ಧಾರ ಸಂಪೂರ್ಣವಾಗಿ ಸ್ವತಂತ್ರವಾದದ್ದು” ಎಂದು ಹೇಳಿದ್ದಾರೆ.

ಇತ್ತೀಚಿನ ದೇವಸ್ಥಾನ ಟ್ರಸ್ಟ್ ಪ್ರಾಯೋಜಕತ್ವ ವಿವಾದ, ಹಳೆಯ ಕಾನೂನು ಪ್ರಕರಣಗಳು ಹಾಗೂ ಸಂಘದೊಳಗಿನ ಭಿನ್ನಾಭಿಪ್ರಾಯಗಳ ನಡುವೆ ಶ್ವೇತಾ ಮೆನನ್ ಅವರ ಈ ಬಹಿರಂಗ ಹೇಳಿಕೆ AMMA ಸಂಘಟನೆಯ ಒಳರಾಜಕೀಯದ ಮೇಲೆ ಮತ್ತಷ್ಟು ಬೆಳಕು ಚೆಲ್ಲುವಂತಾಗಿದೆ.

ಟ್ರೆಕ್ಕಿಂಗ್ ನೆಪದಲ್ಲಿ ಭಾವಿ ಪತಿಯನ್ನು ಕಂದಕಕ್ಕೆ ತಳ್ಳಿ ಕೊಲೆ: ಆರೋಪಿ ಧರಿಸಿದ್ದ ಹೂಡಿಯಿಂದ ಬಯಲಾಯ್ತು ಪ್ಲ್ಯಾನ್!

0

ಮುಂಬೈ: ಟ್ರೆಕ್ಕಿಂಗ್‌ಗೆ ಕರೆದುಕೊಂಡು ಹೋಗಿ ಭಾವಿ ಪತಿಯನ್ನು ಕಂದಕಕ್ಕೆ ತಳ್ಳಿ ಹತ್ಯೆಗೈದ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿದ್ದು, ಆರೋಪಿಯೊಬ್ಬ ಧರಿಸಿದ್ದ ಹೂಡಿಯೇ ತನಿಖೆಗೆ ಮಹತ್ವದ ಸುಳಿವಾಗಿ ಪರಿಣಮಿಸಿದೆ.

ಮಹಾರಾಷ್ಟ್ರದ ಲೋಹಗಡ್ ಕೋಟೆಯಲ್ಲಿ ಜೂನ್ 18ರಂದು ಈ ಘಟನೆ ನಡೆದಿತ್ತು. ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಅವರು ಭಾವಿ ಪತ್ನಿ ಸಿಯಾ ಗೋಯಲ್ ಜೊತೆ ಟ್ರೆಕ್ಕಿಂಗ್‌ಗೆ ತೆರಳಿದ್ದ ವೇಳೆ ಕಾಲು ಜಾರಿ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮೊದಲು ಅಪಘಾತ ಪ್ರಕರಣವೆಂದು ದಾಖಲಿಸಿಕೊಂಡಿದ್ದರು.

ಆದರೆ ತನಿಖೆ ಮುಂದುವರಿದಂತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಿಯಾ ಗೋಯಲ್ ತನ್ನ ಪ್ರಿಯಕರ ಚೇತನ್ ಚೌಧರಿ ಜೊತೆ ಸೇರಿ ಕೇತನ್ ಅಗರ್ವಾಲ್ ಅವರನ್ನು ಸುಮಾರು 400 ಅಡಿ ಆಳದ ಕಂದಕಕ್ಕೆ ತಳ್ಳಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣದ ತನಿಖೆ ವೇಳೆ ಕೋಟೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದರು. ಈ ವೇಳೆ ಕೇತನ್ ಮತ್ತು ಸಿಯಾ ಅವರನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯೊಬ್ಬ ಬಿಸಿಲಿನ ನಡುವೆಯೂ ಹೂಡಿ ಧರಿಸಿರುವುದು ಗಮನ ಸೆಳೆದಿತ್ತು. ಜೂನ್ ತಿಂಗಳಲ್ಲಿ ಸುಮಾರು 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದರೂ ದಪ್ಪ ಹಾಗೂ ಬೆಚ್ಚಗಿನ ಉಡುಪು ಧರಿಸಿದ್ದ ವ್ಯಕ್ತಿ ಪೊಲೀಸರಲ್ಲಿ ಅನುಮಾನ ಹುಟ್ಟಿಸಿದ್ದಾನೆ.

ಈ ಸುಳಿವಿನ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು, ಹೂಡಿ ಧರಿಸಿದ್ದ ವ್ಯಕ್ತಿಯ ಗುರುತು ಪತ್ತೆಹಚ್ಚಿದ್ದು, ಆತ ಚೇತನ್ ಚೌಧರಿ ಎಂಬುದು ತಿಳಿದುಬಂದಿದೆ. ತನ್ನ ಚಲನವಲನಗಳ ಬಗ್ಗೆ ಸುಳಿವು ಸಿಗದಂತೆ ಮಾಡಲು ಚೇತನ್ ತನ್ನ ಮೊಬೈಲ್ ಫೋನ್ ಅನ್ನು ಕೆಲಸದ ಸ್ಥಳದಲ್ಲೇ ಬಿಟ್ಟು ಹೋಗಿದ್ದ ಹಾಗೂ ಸ್ಥಳ ಮಾಹಿತಿ ಪತ್ತೆಯಾಗದಂತೆ ಸಿಬ್ಬಂದಿಯೊಬ್ಬರ ಮೊಬೈಲ್ ಬಳಸಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಇದರ ಜೊತೆಗೆ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ನಡುವೆ ಸಾವಿರಾರು ಬಾರಿ ಕರೆಗಳು ನಡೆದಿರುವುದು ಹಾಗೂ ಹಲವು ಗಂಟೆಗಳ ಕಾಲ ಇಬ್ಬರೂ ಸಂಭಾಷಣೆ ನಡೆಸಿರುವುದನ್ನು ಕಾಲ್ ಡೀಟೇಲ್ ದಾಖಲೆಗಳು ದೃಢಪಡಿಸಿವೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರೂ ಕುಟುಂಬದ ಗೌರವದ ಕಾರಣ ಸಿಯಾ ನಿಶ್ಚಿತಾರ್ಥವನ್ನು ರದ್ದುಪಡಿಸಲು ಮುಂದಾಗಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಕೇತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೇ ವರ್ಷದ ನವೆಂಬರ್‌ನಲ್ಲಿ ಉದಯಪುರದಲ್ಲಿ ಅದ್ದೂರಿ ವಿವಾಹ ನೆರವೇರಿಸಲು ಕುಟುಂಬಗಳು ಸಿದ್ಧತೆ ನಡೆಸಿದ್ದವು. ಆದರೆ ಮದುವೆಗೆ ಮುನ್ನವೇ ಕೇತನ್ ಅವರನ್ನು ಲೋಹಗಡ್ ಕೋಟೆಗೆ ಕರೆದುಕೊಂಡು ಹೋಗುವಂತೆ ಸಿಯಾ ಹಲವು ಬಾರಿ ಒತ್ತಾಯ ಮಾಡಿದ್ದಳು ಎನ್ನಲಾಗಿದೆ.

ಜೂನ್ 18ರಂದು ಕೋಟೆಯ ಕಣಿವೆ ಸಮೀಪ ಮೂವರು ಇದ್ದ ವೇಳೆ ಕೇತನ್ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದರು. ಘಟನೆಯ ಬಳಿಕ ಸಿಯಾ ಗೋಯಲ್ ಪೊಲೀಸರಿಗೆ ಕರೆ ಮಾಡಿ, ಫೋಟೋ ತೆಗೆಯುವ ವೇಳೆ ಕಾಲು ಜಾರಿ ಬಿದ್ದಿದ್ದಾರೆ ಎಂದು ಮಾಹಿತಿ ನೀಡಿದ್ದಳು. ಆದರೆ ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಕರೆಗಳ ವಿವರಗಳು ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳ ಪರಿಶೀಲನೆಯ ಬಳಿಕ ಇದು ಪೂರ್ವನಿಯೋಜಿತ ಹತ್ಯೆ ಎಂಬುದು ದೃಢಪಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಇಬ್ಬರೂ ಹತ್ಯೆ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನವಿಲು ಗರಿ ರೀಲ್ಸ್‌ಗೆ ಸಂಕಷ್ಟ: ನೋಟಿಸ್ ಬೆನ್ನಲ್ಲೇ ವಿಡಿಯೋ ಡಿಲೀಟ್, ಕ್ಷಮೆ ಕೇಳಿದ ನಿವೇದಿತಾ-ಕಿಶನ್

ಬೆಂಗಳೂರು: ನವಿಲು ಗರಿಗಳನ್ನು ಬಳಸಿಕೊಂಡು ಮಾಡಿದ್ದ ‘ಹೇ ನವಿಲೇ’ ಇನ್‌ಸ್ಟಾಗ್ರಾಮ್ ರೀಲ್ಸ್ ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ನಟಿ ನಿವೇದಿತಾ ಗೌಡ ಮತ್ತು ಇನ್‌ಫ್ಲುಯೆನ್ಸರ್ ಕಿಶನ್ ಬಿಳಗಲಿ ಕ್ಷಮೆಯಾಚನೆ ಮಾಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಇಬ್ಬರೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಿದ್ದಾರೆ.

ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ನಿವೇದಿತಾ ಗೌಡ, “ವನ್ಯಜೀವಿಗಳಿಗೆ ಸಂಬಂಧಿಸಿದ ಗರಿಗಳು ಅಥವಾ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು, ಬಳಸುವುದು ಮತ್ತು ಅದರಿಂದ ಕಂಟೆಂಟ್ ಸೃಷ್ಟಿಸುವುದು ಕಾನೂನುಬಾಹಿರ ಎಂಬ ಅರಿವು ನಮಗೆ ಇರಲಿಲ್ಲ. ಈ ತಪ್ಪಿನಿಂದ ಇತರರು ಪಾಠ ಕಲಿಯಬೇಕು” ಎಂದು ಹೇಳಿದ್ದಾರೆ.

ಇನ್ನೊಂದೆಡೆ ಕಿಶನ್ ಬಿಳಗಲಿ, “ವಿಡಿಯೋ ನಿರ್ಮಾಣದ ವೇಳೆ ಬಳಸಿದ ನವಿಲು ಗರಿಗಳನ್ನು ಬಾಡಿಗೆಗೆ ಪಡೆದಿದ್ದೆವು. ಆದರೆ ಕಾನೂನಿನ ಬಗ್ಗೆ ಮಾಹಿತಿ ಇರಲಿಲ್ಲ. ಸಾರ್ವಜನಿಕ ವ್ಯಕ್ತಿಗಳಾಗಿ ನಾವು ನೀಡುವ ಸಂದೇಶದ ಹೊಣೆಗಾರಿಕೆ ಅರಿತುಕೊಂಡಿದ್ದೇವೆ. ಆದ್ದರಿಂದಲೇ ವಿಡಿಯೋ ಅಳಿಸಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಅರಣ್ಯ ಇಲಾಖೆಯ ನೋಟಿಸ್ ಬಳಿಕ ಇಬ್ಬರೂ ತನಿಖೆಗೆ ಸಂಪೂರ್ಣ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ.

‘ಹೇ ನವಿಲೇ’ ಹಾಡಿಗೆ ಚಿತ್ರೀಕರಿಸಿದ್ದ ರೀಲ್ಸ್‌ನಲ್ಲಿ ನವಿಲು ಗರಿಗಳನ್ನು ಉಡುಪಿನ ಭಾಗವಾಗಿ ಬಳಸಲಾಗಿತ್ತು. ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆಯೇ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ ಕುರಿತು ಸಾಮಾಜಿಕ ಕಾರ್ಯಕರ್ತರು ಹಾಗೂ ಪರಿಸರ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಕರಣದ ಕುರಿತು ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.

ಕಂಗನಾಗೆ ಗುಡ್‌ಬೈ, ಫರಾ-ರಿತೇಶ್‌ಗೆ ಹಾಯ್! ಹೊಸ ಅವತಾರದಲ್ಲಿ ಬರುತ್ತಿದೆ ‘ಲಾಕ್ ಅಪ್’

ರಿಯಾಲಿಟಿ ಶೋ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದ ‘ಲಾಕ್ ಅಪ್’ ಇದೀಗ ಸಂಪೂರ್ಣ ಹೊಸ ರೂಪದಲ್ಲಿ ಮರಳುತ್ತಿದೆ. ‘ಲಾಕ್ ಅಪ್: ಸಚ್ ಯಾ ಸಜಾ’ ಹೆಸರಿನ ಎರಡನೇ ಸೀಸನ್‌ನಲ್ಲಿ ಮೊದಲ ಸೀಸನ್‌ನ ಮುಖವಾಗಿದ್ದ ಕಂಗನಾ ರಣಾವತ್ ಕಾಣಿಸಿಕೊಳ್ಳುವುದಿಲ್ಲ. ಅವರ ಬದಲಿಗೆ ಫರಾ ಖಾನ್ ಮತ್ತು ರಿತೇಶ್ ದೇಶ್‌ಮುಖ್ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಾಪಕಿ ಏಕ್ತಾ ಕಪೂರ್, “ಈ ಸೀಸನ್‌ಗಾಗಿ ನಾವು ಸಂಪೂರ್ಣ ಹೊಸ ಫಾರ್ಮ್ಯಾಟ್ ರೂಪಿಸಿದ್ದೇವೆ. ಹಳೆಯ ಶೋನ ಅಂಶಗಳನ್ನು ಮುಂದುವರಿಸುವ ಬದಲು, ಸಂಪೂರ್ಣ ಹೊಸ ಅನುಭವ ನೀಡುವ ಉದ್ದೇಶ ಹೊಂದಿದ್ದೇವೆ. ಹೀಗಾಗಿ ನಿರೂಪಕರಿಂದ ಹಿಡಿದು ಕಾನ್ಸೆಪ್ಟ್‌ವರೆಗೂ ಎಲ್ಲವೂ ಬದಲಾಗಿದೆ” ಎಂದು ಹೇಳಿದ್ದಾರೆ.

ಮೊದಲ ಸೀಸನ್‌ನಲ್ಲಿ ಕಂಗನಾ ಅವರ ಖಡಕ್ ನಿರೂಪಣೆ ಶೋಗೆ ವಿಶೇಷ ಗುರುತನ್ನು ತಂದುಕೊಟ್ಟಿತ್ತು. ಆದರೆ ಈ ಬಾರಿ ಶೋವನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಕಂಗನಾ ಅವರ ರಾಜಕೀಯ ಜವಾಬ್ದಾರಿಗಳೂ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ಇನ್ನು ಶೋನ ಮತ್ತೊಂದು ದೊಡ್ಡ ಬದಲಾವಣೆ ಎಂದರೆ, ಈ ಬಾರಿ ಪ್ರಸಾರ ವೇದಿಕೆ. ಮೊದಲ ಸೀಸನ್ ALTBalaji ಮತ್ತು MX Player ನಲ್ಲಿ ಪ್ರಸಾರವಾಗಿದ್ದರೆ, ಎರಡನೇ ಸೀಸನ್ ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ.

14 ಜನ ಖ್ಯಾತ ಸೆಲೆಬ್ರಿಟಿಗಳನ್ನು ಜೈಲು ಮಾದರಿಯ ವಾತಾವರಣದಲ್ಲಿ ಆರು ವಾರಗಳ ಕಾಲ ಇರಿಸಲಾಗುತ್ತದೆ. ಯಾವುದೇ ಹೊರಗಿನ ಸಂಪರ್ಕವಿಲ್ಲದೆ ಅವರು ಟಾಸ್ಕ್‌ಗಳು, ಶಿಕ್ಷೆಗಳು ಮತ್ತು ಮಾನಸಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಬಾಲಾಜಿ ಟೆಲಿಫಿಲ್ಮ್ಸ್ ಮತ್ತು ಕೊಲೊಸಿಯಮ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿರುವ ಈ ಶೋ ಜೂನ್ 27ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಆರಂಭವಾಗಲಿದೆ.

ರಿಯಾಲಿಟಿ ಶೋ ಅಭಿಮಾನಿಗಳಲ್ಲಿ ಈಗಾಗಲೇ ಭಾರೀ ಕುತೂಹಲ ಮೂಡಿಸಿರುವ ‘ಲಾಕ್ ಅಪ್ 2’, ಹೊಸ ನಿರೂಪಕರು ಮತ್ತು ಹೊಸ ಫಾರ್ಮ್ಯಾಟ್‌ನೊಂದಿಗೆ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸುತ್ತದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಮುಂಬೈನಲ್ಲಿ ಧಾರಾಕಾರ ಮಳೆ ಅಬ್ಬರ: ಜಲಾವೃತಗೊಂಡ ರಸ್ತೆಗಳು, ರೈಲು ಸಂಚಾರದಲ್ಲಿ ವ್ಯತ್ಯಯ

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಹಲವೆಡೆ ಮರಗಳು ಉರುಳಿಬಿದ್ದಿರುವ ಘಟನೆಗಳು ವರದಿಯಾಗಿವೆ. ಕೆಲವು ಪ್ರದೇಶಗಳಲ್ಲಿ ಗೋಡೆ ಕುಸಿತದ ಘಟನೆಗಳೂ ಸಂಭವಿಸಿವೆ.

ನಗರದಲ್ಲಿ ಮುಂದುವರಿದ ಮಳೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಮುಂಬೈಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

ಮಂಗಳವಾರ ರಾತ್ರಿ 8.30ರಿಂದ ಬುಧವಾರ ಬೆಳಗ್ಗೆ 5.30ರ ಅವಧಿಯಲ್ಲಿ ಮುಂಬೈನ ಹಲವು ಭಾಗಗಳಲ್ಲಿ ದಾಖಲೆಯ ಮಳೆಯಾಗಿದೆ. ರಾಮ ಮಂದಿರ ಪ್ರದೇಶದಲ್ಲಿ 224 ಮಿ.ಮೀ., ಕೊಲಾಬಾದಲ್ಲಿ 218.5 ಮಿ.ಮೀ. ಹಾಗೂ ಸಾಂತಾಕ್ರೂಜ್‌ನಲ್ಲಿ 210.6 ಮಿ.ಮೀ. ಮಳೆ ದಾಖಲಾಗಿದೆ. ಈ ಮಳೆಯಿಂದಾಗಿ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಾರ್ವಜನಿಕರು ಸಂಕಷ್ಟ ಅನುಭವಿಸಿದರು.

ಭಾರೀ ಮಳೆಯ ಪರಿಣಾಮ ರೈಲು ಸಂಚಾರಕ್ಕೂ ಹೊಡೆತ ಬಿದ್ದಿದೆ. ತುರ್ಭೆ ಮತ್ತು ಕೋಪರ್ಖೈರನೆ ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಕುಸಿತ ಉಂಟಾದ ಕಾರಣ ಕೆಲಕಾಲ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಬಳಿಕ ರೈಲ್ವೆ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡು ಸಂಚಾರವನ್ನು ಪುನರಾರಂಭಿಸಿದರು.

ಆದಾಗ್ಯೂ, ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಜಲಾವೃತಗೊಂಡಿದ್ದ ಹಲವೆಡೆ ನೀರು ಇಳಿದಿದ್ದು, ರಸ್ತೆ ಸಂಚಾರವೂ ಕ್ರಮೇಣ ಸಾಮಾನ್ಯಗೊಂಡಿದೆ.

ಮೆಟ್ರೋ ತಾಂತ್ರಿಕ ದೋಷಕ್ಕೆ ತತ್ತರಿಸಿದ ಬೆಂಗಳೂರು: ಮನೆ ಸೇರಲು ಲಾರಿ-ಟ್ರಕ್ʼಗಳ ಮೊರೆ ಹೋದ ಐಟಿ ಉದ್ಯೋಗಿಗಳು

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಐಟಿ ಹಬ್ ಎಂದು ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಮತ್ತೊಮ್ಮೆ ಸಾರಿಗೆ ವ್ಯವಸ್ಥೆಯ ದುರ್ಬಲತೆ ಬಯಲಿಗೆ ಬಂದಿದ್ದು, ಮೆಟ್ರೋ ರೈಲು ಸೇವೆಯಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ.

ಜೂನ್ 23ರ ಸಂಜೆ ನಮ್ಮ ಮೆಟ್ರೋ ಸೇವೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ನಗರದ ಪ್ರಮುಖ ಭಾಗಗಳಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ವಿಶೇಷವಾಗಿ ಕಚೇರಿ ಸಮಯದಲ್ಲಿ ಸೇವೆ ಸ್ಥಗಿತಗೊಂಡ ಪರಿಣಾಮ ಸಾವಿರಾರು ಐಟಿ ಉದ್ಯೋಗಿಗಳು ಹಾಗೂ ಸಾರ್ವಜನಿಕರು ಮನೆ ತಲುಪಲು ಹರಸಾಹಸ ಪಟ್ಟರು.

ಮೆಟ್ರೋ ಸೇವೆ ದಿಢೀರ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ನಿಲ್ದಾಣಗಳ ಹೊರಗೆ ಮತ್ತು ರಸ್ತೆಗಳಲ್ಲಿ ಜನಸಂದಣಿ ಹೆಚ್ಚಾಯಿತು. ಈ ವೇಳೆ ಆನ್‌ಲೈನ್ ಕ್ಯಾಬ್ ಸೇವೆಗಳು ಸಮರ್ಪಕವಾಗಿ ಲಭ್ಯವಾಗದಿದ್ದರೆ, ಹಲವು ಆಟೋ ಚಾಲಕರು ಪ್ರಯಾಣಿಕರನ್ನು ಕರೆದೊಯ್ಯಲು ನಿರಾಕರಿಸಿದ ಆರೋಪಗಳು ಕೇಳಿಬಂದವು.

ಪರಿಣಾಮವಾಗಿ, ಕೆಲ ಪ್ರಯಾಣಿಕರು ಮನೆ ತಲುಪುವ ಅನಿವಾರ್ಯತೆಯಿಂದ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಗಳು ಹಾಗೂ ಟ್ರಕ್‌ಗಳಿಗೆ ಕೈ ತೋರಿಸಿ, ಅವುಗಳ ಮೂಲಕ ಪ್ರಯಾಣಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ವಿಡಿಯೊವನ್ನು Karnataka Portfolio ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಹಲವರು, ಕೃತಕ ಬುದ್ಧಿಮತ್ತೆ (AI), ಸ್ಮಾರ್ಟ್ ಮೊಬಿಲಿಟಿ, ಎಲೆಕ್ಟ್ರಿಕ್ ವಾಹನಗಳು ಹಾಗೂ ಭವಿಷ್ಯದ ಸಾರಿಗೆ ವ್ಯವಸ್ಥೆಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುವ ನಗರದಲ್ಲಿ, ಮೂಲಭೂತ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆಯನ್ನೇ ಖಚಿತಪಡಿಸಲು ಸಾಧ್ಯವಾಗದಿರುವುದು ವಿಪರ್ಯಾಸ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಮೆಟ್ರೋ ಕೈಕೊಡುತ್ತದೆ, ಕ್ಯಾಬ್‌ಗಳು ಸಿಗುವುದಿಲ್ಲ, ಆಟೋಗಳು ಬರುವುದಿಲ್ಲ, ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಾರೆ. ನಂತರ ಅಧಿಕಾರಿಗಳಿಂದ ಸ್ಪಷ್ಟೀಕರಣ ಬರುತ್ತದೆ. ಮರುದಿನ ಮತ್ತೆ ಇದೇ ಸಮಸ್ಯೆ ಮರುಕಳಿಸುತ್ತದೆ” ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಡಿ, ಐಟಿ, ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಗಳು: ಪ್ರಿಯಾಂಕ್ ಖರ್ಗೆ ಆರೋಪ

ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ದಾಳಿಗಳ ಸ್ವರೂಪ ಹಾಗೂ ಅವುಗಳ ಹಿಂದಿರುವ ರಾಜಕೀಯ ಉದ್ದೇಶಗಳ ಕುರಿತು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳಾದ ಐಟಿ, ಇಡಿ ಮತ್ತು ಸಿಬಿಐ ಸ್ವಾಯತ್ತ ಸಂಸ್ಥೆಗಳಂತೆ ಕಾರ್ಯನಿರ್ವಹಿಸುವ ಬದಲು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 12 ವರ್ಷಗಳಲ್ಲಿ ದೇಶದಾದ್ಯಂತ ಸಾವಿರಾರು ಇಡಿ ದಾಳಿಗಳು ನಡೆದಿವೆ. ಆದರೆ, ಆ ದಾಳಿಗಳ ಆಧಾರದ ಮೇಲೆ ಅಪರಾಧ ಸಾಬೀತಾದ ಪ್ರಕರಣಗಳ ಪ್ರಮಾಣ ಶೇಕಡಾ 2ಕ್ಕೂ ಕಡಿಮೆ ಇದ್ದು, ಅದು ಶೇಕಡಾ 1.5ಕ್ಕಿಂತಲೂ ಕಡಿಮೆ ಮಟ್ಟದಲ್ಲಿದೆ ಎಂದು ಹೇಳಿದರು.

ಈ ಅಂಕಿಅಂಶಗಳೇ ಇಡಿ ದಾಳಿಗಳ ಹಿಂದೆ ರಾಜಕೀಯ ಉದ್ದೇಶ ಅಡಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ ಎಂದು ಖರ್ಗೆ ಅಭಿಪ್ರಾಯಪಟ್ಟರು.

ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು ಟೀಕಿಸಿದ ಪ್ರಿಯಾಂಕ್ ಖರ್ಗೆ, “ಯಾವಾಗ ಬೇಕೋ ಆಗ ದಾಳಿ ನಡೆಸುವ ರೀತಿಯಲ್ಲಿ ಈ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇದು ಕಾನೂನು ಜಾರಿಯ ಕ್ರಮಕ್ಕಿಂತ ರಾಜಕೀಯ ಉದ್ದೇಶದ ಭಾಗವಾಗಿ ಕಾಣುತ್ತಿದೆ” ಎಂದು ಆರೋಪಿಸಿದರು. ತಮ್ಮ ಮೇಲೆಯೂ ಇಡಿ ದಾಳಿ ನಡೆಯುವ ಸಾಧ್ಯತೆಯನ್ನು ಉಲ್ಲೇಖಿಸಿದ ಸಚಿವರು, ಇವತ್ತಲ್ಲ ನಾಳೆ ನನ್ನ ಮೇಲೂ ಇಡಿ ದಾಳಿ ಆಗಬಹುದು. ಅಂತಹ ಪರಿಸ್ಥಿತಿಯನ್ನು ನಾನು ನಿರೀಕ್ಷಿಸುತ್ತಿದ್ದೇನೆ ಎಂದು ಹೇಳಿದರು.