Home Blog Page 27

ಸ್ನೇಹಮಯಿ ಕೃಷ್ಣ ಬಂಧನ: ದುರಾಡಳಿತದ ಪರಮಾವಧಿ – ಆರ್. ಅಶೋಕ್ ಆಕ್ರೋಶ

0

ಬೆಂಗಳೂರು: ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಸ್ನೇಹಮಯಿ ಕೃಷ್ಣ ಬಂಧನ ದುರಾಡಳಿತದ ಪರಮಾವಧಿ. ಕರ್ನಾಟಕದಲ್ಲಿ ಈ ಸರ್ಕಾರ ಎಮರ್ಜೆನ್ಸಿ ಸ್ಥಿತಿ ತಂದಂತಾಗಿದೆ” ಎಂದು ಕಿಡಿಕಾರಿದರು.

ಮುಡಾ ಪ್ರಕರಣದ ವಿರುದ್ಧ ಸ್ನೇಹಮಯಿ ಕೃಷ್ಣ ಹೋರಾಟ ನಡೆಸಿದ್ದರು. ಈ ವಿಚಾರದಲ್ಲಿ ನಾವು ಸಹ ಪಾದಯಾತ್ರೆ ಮಾಡಿದ್ದೇವೆ. ಇದನ್ನು ಸರ್ಕಾರ ಸಹಿಸಿಕೊಳ್ಳಲಾಗದೆ, ನ್ಯಾಯಕ್ಕಾಗಿ ಕೋರ್ಟ್ ಮೂಲಕ ಹೋರಾಟ ನಡೆಸುತ್ತಿರುವ ವ್ಯಕ್ತಿಯನ್ನು ಬಂಧಿಸಿದೆ ಎಂದು ಆರೋಪಿಸಿದರು.

“ಗಾಂಧೀ ಆದರ್ಶಗಳಿಗೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ನ್ಯಾಯದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ” ಎಂದು ಆರ್. ಅಶೋಕ್ ಆರೋಪಿಸಿದರು.

ಮುಡಾದ ಮಾಜಿ ಆಯುಕ್ತ ಡಿ.ಬಿ ನಟೇಶ್ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಸೈಬರ್ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿರುವುದು ತಿಳಿದುಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಲಕ್ಕುಂಡಿ “ಚಿನ್ನದ ನಿಧಿ” ನಾಟಕ ಬಯಲು: 20 ಲಕ್ಷ ಸುಲಿಗೆ ಪ್ರಕರಣದಲ್ಲಿ ಉತ್ತರಾಖಂಡ ಕಿಂಗ್‌ಪಿನ್ ಬಂಧನ

0

ಗದಗ: ಐತಿಹಾಸಿಕ ಖ್ಯಾತಿಯ ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯ ಮುಚ್ಚುವ ವೇಳೆ 455 ಗ್ರಾಂ ಚಿನ್ನ ಪತ್ತೆಯಾದ ಘಟನೆ ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ 2022ರಲ್ಲಿ ನಡೆದಿದ್ದ ನಿಧಿ ವಂಚನೆ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ.

ಧಾರವಾಡ ಮೂಲದ ಬಸೀರಾಬೇಗಂ ಅವರು 2022ರಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ಸಲ್ಲಿಸಿದ್ದ ದೂರಿನಲ್ಲಿ “ನಿಧಿ ಸಿಕ್ಕಿದೆ” ಎಂದು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಿದ್ದರು. ಆದರೆ ಪ್ರಕರಣ ಪ್ರಗತಿ ಕಾಣದೆ ಉಳಿದಿತ್ತು.

ಇದೀಗ 2026ರ ಫೆಬ್ರವರಿ 11ರಂದು ಸಮಾಜಸೇವಕ ಪೀರಸಾಬ್ ಕೌತಾಳ “ಸರ್ಕಾರಿಗೆ ಸೇರಬೇಕಾದ ನಿಧಿ ಕೆಲವರ ಪಾಲಾಗಿದೆ” ಎಂದು ಮರು ದೂರು ನೀಡಿದರು. ಹಂಡೆಯಲ್ಲಿ ಚಿನ್ನದ ನಾಣ್ಯಗಳಿರುವ ವಿಡಿಯೋ ದೃಶ್ಯಾವಳಿಯನ್ನೂ ಸಲ್ಲಿಸಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ರೋಹನ್ ಜಗದೀಶ್ ಮರು ತನಿಖೆಗೆ ಆದೇಶಿಸಿದರು.

ತನಿಖೆಯಲ್ಲಿ ಉತ್ತರಾಖಂಡ ಮೂಲದ ಹಜರತ್ ಮಾಲ್ವಿ ಬಂಧನವಾಗಿದ್ದು, 2022ರಲ್ಲಿ ಗದಗ ನಗರದಲ್ಲಿ ಹಂಡೆ ಖರೀದಿಸಿ ಅದರಲ್ಲಿ ಗೋಲ್ಡ್ ಬಣ್ಣದ ನಕಲಿ ಬಿಸ್ಕೆಟ್‌ಗಳನ್ನು ಇಟ್ಟು “ಐತಿಹಾಸಿಕ ನಿಧಿ ಪತ್ತೆ” ನಾಟಕವಾಡಿರುವುದು ಬಯಲಾಗಿದೆ. ಲಕ್ಕುಂಡಿ ಗ್ರಾಮದ ಸಣ್ಣ ಬಸಪ್ಪ ಹಾಗೂ ದೊಡ್ಡ ಬಸಪ್ಪರ ಜಮೀನಿನಲ್ಲಿ ನಿಧಿ ಶೋಧ ಮಾಡುವ ನೆಪದಲ್ಲಿ ಪರಿಚಯ ಬೆಳೆಸಿ, ವಿಧಿವಿಧಾನ ಮತ್ತು ಪ್ರಯಾಣ ಖರ್ಚು ಹೆಸರಿನಲ್ಲಿ ಸುಮಾರು 20 ಲಕ್ಷ ರೂ. ಸುಲಿಗೆ ಮಾಡಿದ್ದಾನೆ.

ಪೂರ್ವಯೋಜನೆಯಂತೆ ಹಂಡೆ ಹೂತು ನಂತರ ಪತ್ತೆ ಮಾಡಿದಂತೆ ತೋರಿಸಿ, ಹಣದ ವಿಚಾರದಲ್ಲಿ ಗಲಾಟೆ ಉಂಟಾದಾಗ “ಚಿನ್ನ ಮಣ್ಣಾಗಿದೆ” ಎಂದು ಹೇಳಿ ಪರಾರಿಯಾಗಿದ್ದಾನೆ. ಪ್ರಾಥಮಿಕ ತನಿಖೆ ಪ್ರಕಾರ ದೆಹಲಿ ಹಾಗೂ ಧಾರವಾಡ ಮೂಲದ ಮಹಿಳೆಯರು ಸೇರಿದಂತೆ 8ಕ್ಕೂ ಹೆಚ್ಚು ಮಂದಿ ಮೋಸಕ್ಕೆ ಬಲಿಯಾಗಿದ್ದಾರೆ. ಹಣ ವರ್ಗಾವಣೆ, ವಿಡಿಯೋ ಚಿತ್ರೀಕರಣ ಹಾಗೂ ಸಹಾಯಕರ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.

ಎಸ್ಪಿ ರೋಹನ್ ಜಗದೀಶ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, “ನಿಧಿ ಪತ್ತೆ, ಗುಪ್ತ ಸಂಪತ್ತು” ಹೆಸರಿನಲ್ಲಿ ಸಂಪರ್ಕಿಸಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.

ಭಕ್ತರ ಹಣ ದುರ್ಬಳಕೆ ಆರೋಪ: ಹಾಸನಾಂಬೆ ದೀಪಾಲಂಕಾರ ಟೆಂಡರ್ ಮೇಲೆ ಲೋಕಾಯುಕ್ತ ದಾಳಿ

0

ಹಾಸನ: ಇತಿಹಾಸ ನಿರ್ಮಿಸಿದ ಹಾಸನಾಂಬೆ ದೇವಸ್ಥಾನ ಉತ್ಸವ ಇದೀಗ ಅವ್ಯವಹಾರದ ನೆರಳಿಗೆ ಸಿಲುಕಿದೆ. ವಿದ್ಯುತ್ ದೀಪಾಲಂಕಾರ ಟೆಂಡರ್‌ನಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂದು ಆರ್‌ಟಿಐ ಕಾರ್ಯಕರ್ತ ಮನು ಆರೋಪಿಸಿದ್ದಾರೆ.

ಲೋಕಾಯುಕ್ತ ಅಧಿಕಾರಿ ಗಾಯಿತ್ರಿ ಮಹಾನಗರ ಪಾಲಿಕೆ ಕಚೇರಿಯಲ್ಲೇ ಅಧಿಕಾರಿಗಳ ವಿಚಾರಣೆ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ನಿಯಮ ಉಲ್ಲಂಘನೆ ಮಾಡಿ ಅನುಭವ ಹೊಂದಿದವರಿಗೆ ಮಾತ್ರ ಆದ್ಯತೆ ಎನ್ನುವ ಶರತ್ತು ಸೇರಿಸಿ, ಎಲ್ಲಾ ಗುತ್ತಿಗೆಗಳನ್ನು ಒಬ್ಬರಿಗೇ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಅರ್ಜಿದಾರರು ಹಲವರಿದ್ದರೂ ಒಬ್ಬನೇ ಗುತ್ತಿಗೆದಾರನಿಗೆ ಅವಕಾಶ ನೀಡಲಾಗಿದೆ. ಖರೀದಿಗಿಂತ ಹೆಚ್ಚಾಗಿ ದುಂದು ವೆಚ್ಚ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ. ದೀಪಾಲಂಕಾರದಲ್ಲೇ 15 ಲಕ್ಷಕ್ಕೂ ಅಧಿಕ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಸರಿಯಾದ ದಾಖಲೆ ಸಲ್ಲಿಸದಿದ್ದರೆ ವರದಿ ಮಾಡಲಾಗುತ್ತದೆ ಎಂದು ಲೋಕಾಯುಕ್ತ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಪ್ರಕರಣವು ರಾಜ್ಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.

ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಕಲ್ಲು ತೂರಾಟ: ತಪ್ಪಿತಸ್ಥರನ್ನು ಕಠಿಣವಾಗಿ ಶಿಕ್ಷಿಸಬೇಕು – ಬಿ.ವೈ. ವಿಜಯೇಂದ್ರ

0

ಬೆಂಗಳೂರು: ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿಯ ಸಂದರ್ಭದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಒದ್ದು ಒಳಗೆ ಹಾಕಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿಯ ಸಂದರ್ಭದಲ್ಲಿ ಕೆಲವು ದೇಶದ್ರೋಹಿಗಳು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇವರು ಯಾರೆಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇಂಥ ದೇಶದ್ರೋಹಿಗಳನ್ನು ಒದ್ದು ಒಳಗೆ ಹಾಕಬೇಕೆಂದು ಮುಖ್ಯಮಂತ್ರಿಗಳಲ್ಲಿ ಹಾಗೂ ಗೃಹ ಸಚಿವರಲ್ಲಿ ಆಗ್ರಹಿಸುತ್ತೇನೆ ಎಂದು ತಿಳಿಸಿದರು.

ಇಂಥ ಟಿಪ್ಪು, ಔರಂಗಬೇಬ್ ಮನಸ್ಥಿತಿ ಇರುವ ದೇಶದ್ರೋಹಿಗಳನ್ನು ಯಾವುದೇ ಕಾರಣಕ್ಕೆ ಕ್ಷಮಿಸಬಾರದು. ಇಂಥವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಅವರು ಒತ್ತಾಯಿಸಿದರು.

ಚಾಮರಾಜನಗರದಲ್ಲಿ ಹುಲಿ ಸಾವು ಪ್ರಕರಣ: ಉರುಳು ಪ್ರಕರಣದಲ್ಲಿ ಓರ್ವನ ಬಂಧನ

0

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ವಲಯದಲ್ಲಿ ಉರುಳಿಗೆ ಸಿಲುಕಿ ಸಾವನ್ನಪ್ಪಿದ್ದ ಆರು ವರ್ಷದ ಗಂಡು ಹುಲಿ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಕೊಂಗರಹಳ್ಳಿ ಗ್ರಾಮದ ಕುಮಾರ್ ಎಂಬಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಬೈಕ್ ಕ್ಲಚ್ ವೈರ್ ಬಳಸಿ ವನ್ಯಜೀವಿ ಬೇಟೆಗೆ ಉರುಳು ಹಾಕಲಾಗಿದ್ದು, ಅದರಲ್ಲಿ ಸಿಲುಕಿದ ಹುಲಿ ಪರದಾಡಿ ಬಳಿಕ ಗುಂಡಾಲ್ ಜಲಾಶಯದಲ್ಲಿ ಬಿದ್ದು ಸಾವನ್ನಪ್ಪಿದೆ. ಹುಲಿಯ ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಿರುವುದು ಪತ್ತೆಯಾಗಿದೆ.

ಇನ್ನು ಗುಂಡಾಲ್ ಜಲಾಶಯದ ಸುತ್ತಮುತ್ತ ಜಮೀನುಗಳಿವೆ. ಜಮೀನಿನಲ್ಲಿ ಬೆಳೆದ ಬೆಳೆಗಳನ್ನ ಕಾಡು ಹಂದಿಗಳು ಬಂದು ನಾಶ ಮಾಡುತ್ತಿರುತ್ತವೆ. ಹಾಗಾಗಿ ಕಾಡು ಹಂದಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಕೆಲವರು ಬೈಕ್​ ಕ್ಲಚ್ ಕೇಬಲ್​ನ ಮೂಲಕ ಉರಳನ್ನ ಸಿದ್ಧಪಡಿಸಿ ಬೇಲಿ ಬಳಿ ಹಾಕಿರುತ್ತಾರೆ.

ಈ ಕುರಿತು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನಿತರರ ಪಾತ್ರವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

BREAKING: ಮುಡಾ ಪ್ರಕರಣದಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಅರೆಸ್ಟ್.!

0

ಬೆಂಗಳೂರು/ಮೈಸೂರು: ಮುಡಾ ಪ್ರಕರಣದ ಪ್ರಮುಖ ವ್ಯಕ್ತಿಯಾಗಿರುವ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸೈಬರ್ ಪೊಲೀಸರು ಬಂಧಿಸಿದ್ದಾರೆ. ಮುಡಾದ ಮಾಜಿ ಆಯುಕ್ತ ಡಿ.ಬಿ. ನಟೇಶ್ ನೀಡಿದ ದೂರಿನ ಮೇರೆಗೆ ಬಂಧನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಸ್ನೇಹಮಯಿ ಕೃಷ್ಣ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಒಂದೂವರೆ ಕೋಟಿ ರೂಪಾಯಿ ಹಣ ನೀಡಿ ಡಿ.ಬಿ. ನಟೇಶ್ ಮುಂಬಡ್ತಿ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಈ ಆರೋಪಗಳ ಹಿನ್ನೆಲೆಯಲ್ಲಿ ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌ಅವರಿಗೆ ದೂರು ಸಲ್ಲಿಸಿದ್ದರು.

ದೂರಿನ ಅನ್ವಯ ಪರಿಶೀಲನೆ ನಡೆಸುವಂತೆ ಪೊಲೀಸ್ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರು ಸೈಬರ್ ಪೊಲೀಸರು ಇಂದು ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

ಚನ್ನರಾಯಪಟ್ಟಣ: ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕರಿಮಾರನಹಳ್ಳಿ ಗ್ರಾಮದಲ್ಲಿ ಹಗಲಲ್ಲೇ ಜಮೀನಿನಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಬೋನಿನಲ್ಲಿ ಸೆರೆಯಾಗಿದೆ.

ನಾಯಿ ಹಾಗೂ ಕರುಗಳನ್ನು ಹೊತ್ತೊಯ್ದು ತಿಂದು ಹಾಕುತ್ತಿದ್ದ ಚಿರತೆ ವಿರುದ್ಧ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಪ್ರಭು ಅವರ ತೋಟದಲ್ಲಿ ಬೋನು ಅಳವಡಿಸಿದ್ದರು.

ಸುಮಾರು ಮೂರುವರೆ ವರ್ಷದ ಹೆಣ್ಣು ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಕಡಿಮೆಯಾಗಿದೆ. ಆದರೆ ಈ ಭಾಗದಲ್ಲಿ ಚಿರತೆಗಳ ಸಂತತಿ ಹೆಚ್ಚಿರುವ ಕಾರಣ ಉಳಿದ ಚಿರತೆಗಳನ್ನೂ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಶಾಸಕ ಸಿ.ಎನ್. ಬಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.

ಬಾಗಲಕೋಟೆ ಕಲ್ಲು ತೂರಾಟ: ಕೃತ್ಯ ಎಸಗಿದ ಆರೋಪಿಗಳಿಗೆ ತಕ್ಕ ಉತ್ತರ ನೀಡುವಂತೆ ಸಿಎಂ ಸೂಚನೆ

0

ಬೆಂಗಳೂರು: ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲುತೂರಾಟ ಘಟನೆಗೆ ಸಂಬಂಧಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ, ದುಷ್ಕೃತ್ಯ ಎಸಗಿದ ಆರೋಪಿಗಳಿಗೆ ಕಾನೂನಿನ ಮೂಲಕ ತಕ್ಕ ಶಿಕ್ಷೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಸಿಎಂ, ಘಟನೆ ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಮಾರಕವಾಗಿದ್ದು, ಸರ್ಕಾರ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವುದಾಗಿ ಹೇಳಿದ ಅವರು, “ನಿಷ್ಪಕ್ಷಪಾತ ತನಿಖೆ ನಡೆಸಿ, ದುಷ್ಕೃತ್ಯ ಎಸಗಿದ ಪುಂಡರಿಗೆ ಕಾನೂನಿನ ಮೂಲಕ ತಕ್ಕ ಉತ್ತರ ನೀಡಬೇಕು” ಎಂದು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕೆಲ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಘಟನೆಗೆ ಕಾರಣರಾದ ಪ್ರತಿಯೊಬ್ಬರಿಗೂ ಶಿಕ್ಷೆ ನಿಶ್ಚಿತ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ನಾಡಿನ ಜನರಿಗೆ ಭಯಮುಕ್ತ ಹಾಗೂ ನೆಮ್ಮದಿಯ ಬದುಕು ನೀಡುವುದು ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದ ಅವರು, ಜನರ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಯಾವುದೇ ವ್ಯಕ್ತಿ ಅಥವಾ ಶಕ್ತಿಯನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ಯಾವುದೇ ಪ್ರಚೋದನೆಗಳಿಗೆ ಕಿವಿಗೊಡದೇ, ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿದ ಸಿಎಂ, ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲಿದೆ ಎಂಬ ಭರವಸೆ ನೀಡಿದ್ದಾರೆ.

ಈಶ್ವರ್ ಖಂಡ್ರೆ ವಿರುದ್ಧ ಅವಾಚ್ಯ ನಿಂದನೆ ಆರೋಪ: ಭಗವಂತ ಖೂಬಾಗೆ ನೋಟಿಸ್

0

ಬೀದರ್: ಸಚಿವ ಈಶ್ವರ್ ಖಂಡ್ರೆಗೆ ಅವಾಚ್ಯವಾಗಿ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾಗೆ ಭಾಲ್ಕಿ ನಗರ ಠಾಣಾ ಪೊಲೀಸರು ಎರಡು ನೋಟಿಸ್ ಜಾರಿ ಮಾಡಿದ್ದಾರೆ. ಪೊಲೀಸರು ಮೊದಲಿಗೆ ಫೆಬ್ರವರಿ 25ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.

ನಂತರ ಮತ್ತೊಮ್ಮೆ ಹೊಸ ನೋಟಿಸ್ ಜಾರಿ ಮಾಡಿ ಫೆಬ್ರವರಿ 21ರಂದು ಠಾಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಿದ್ದಾರೆ.

ವಿಚಾರಣೆಗೆ ಹಾಜರಾಗದಿದ್ದರೆ ಬಂಧನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಭಾರತೀಯ ನಾಗರಿಕ ಸಂಹಿತೆ 2023ರ ಸಂಬಂಧಿತ ಕಲಂ ಅಡಿಯಲ್ಲಿ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?
ಪೊಲೀಸ್ ಇಲಾಖೆ, ಜಿಲ್ಲಾಡಳಿತ ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕ್ರಮ ಮಾಡ್ಕೊಳ್ತಿದ್ದಿ, ನೀನು ಹಿಜಡಾ ಇದ್ದೀಯಾ ಎಂದೆಲ್ಲಾ ಏಕವಚನದಲ್ಲೇ ಈಶ್ವರ್ ಖಂಡ್ರೆರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದೇ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಬಿರಾದರ್ ಎಂಬುವವರು ಭಾಲ್ಕಿ ನಗರ ಠಾಣೆಯಲ್ಲಿ ಎಫ್‌ಆರ್ ದಾಖಲಾಗಿತ್ತು.

Umpire Dies: ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ದಾಳಿಗೆ ಅಂಪೈರ್ ಸಾವು!

0

ಲಕ್ನೋ: ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಸಪ್ರು ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಜೇನು ದಾಳಿಯಿಂದ ಅನುಭವಿ ಅಂಪೈರ್ ಮಾಣಿಕ್ ಗುಪ್ತಾ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಪಂದ್ಯ ಮುಗಿದ ಬಳಿಕ ಪಾನೀಯ ವಿರಾಮದ ಸಮಯದಲ್ಲಿ ಸಹ ಅಂಪೈರ್ ಅವರನ್ನು ಭೇಟಿ ಮಾಡಲು ತೆರಳಿದ್ದ ಮಾಣಿಕ್ ಗುಪ್ತಾ ಮೇಲೆ ಜೇನುಹುಳುಗಳ ಹಿಂಡು ಏಕಾಏಕಿ ದಾಳಿ ನಡೆಸಿತು. ಅಲ್ಲಿದ್ದವರ ಮೇಲೆ ಹಾರಿಬಂದ ಜೇನುಹುಳುಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಮಾಣಿಕ್ ಆಯತಪ್ಪಿ ಬಿದ್ದಿದ್ದು, ಜೇನುಹುಳುಗಳು ಅವರನ್ನು ಮುತ್ತಿಕೊಂಡು ಕಚ್ಚಿವೆ ಎಂದು ತಿಳಿದುಬಂದಿದೆ.

ಮಾಣಿಕ್ ಗುಪ್ತಾ ಸುಮಾರು 30 ವರ್ಷಗಳಿಂದ ಅಂಪೈರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ರಾಜ್ಯ ಸಮಿತಿಯ ಅಂಪೈರ್ ಆಗಿದ್ದಲ್ಲದೆ ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್ ಜೊತೆಗೂ ಸಂಬಂಧ ಹೊಂದಿದ್ದರು. ಕಾನ್ಪುರ ಕ್ರಿಕೆಟ್ ವಲಯದಲ್ಲಿ ವಿಶಿಷ್ಟ ಹಾಗೂ ಗೌರವಾನ್ವಿತ ಅಂಪೈರ್ ಎಂದು ಹೆಸರು ಗಳಿಸಿದ್ದರು.

ಮಾಣಿಕ್ ಅವರ ನೆರೆಯ ಭರತೇಂದು ಪುರಿ ಮಾತನಾಡಿ, ಮಾಣಿಕ್ ಗುಪ್ತಾ ತಮ್ಮ ಇಡೀ ಜೀವನವನ್ನು ಅಂಪೈರಿಂಗ್ ಹಾಗೂ ಕುಟುಂಬಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರು ಕ್ರಿಕೆಟ್‌ಗೆ ಸಂಪೂರ್ಣವಾಗಿ ಸಮರ್ಪಿತರಾಗಿದ್ದರು. ಈ ಘಟನೆ ಅತ್ಯಂತ ದುರದೃಷ್ಟಕರ ಎಂದು ಸಂತಾಪ ವ್ಯಕ್ತಪಡಿಸಿದರು.

error: Content is protected !!