Home Blog Page 272

ಪ್ರೆಶರ್ ಕುಕ್ಕರ್ ಖರೀದಿಸುವಾಗ ಈ ತಪ್ಪು ಮಾಡಬೇಡಿ: ಅಲ್ಯೂಮಿನಿಯಂ ಮತ್ತು ಸ್ಟೀಲ್ ಕುಕ್ಕರ್ʼಗಳ ನಡುವಿನ ವ್ಯತ್ಯಾಸವೇನು?

0

ಭಾರತೀಯ ಮನೆಗಳಲ್ಲಿ ಬೆಳಗಿನ ಅಲಾರಮ್‌ಗಿಂತಲೂ ಹೆಚ್ಚು ಕೇಳಿಸುವ ಶಬ್ದವೆಂದರೆ ಪ್ರೆಶರ್ ಕುಕ್ಕರ್‌ನ ಸೀಟಿ. ಬೆಳಗ್ಗೆ ಮಕ್ಕಳಿಗೆ ಲಂಚ್ ಬಾಕ್ಸ್‌ಗಳನ್ನು ತಯಾರಿಸುವ ತಾಯಂದಿರಿಂದ ಹಿಡಿದು, ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳುವ ಬ್ಯಾಚುಲರ್‌ಗಳವರೆಗೆ ಬಹುತೇಕ ಎಲ್ಲರ ಅಡುಗೆಮನೆಯಲ್ಲಿ ಪ್ರೆಶರ್ ಕುಕ್ಕರ್ ಪ್ರಮುಖ ಪಾತ್ರ ವಹಿಸುತ್ತದೆ.

ಏರ್ ಫ್ರೈಯರ್, ಮೈಕ್ರೋವೇವ್ ಓವನ್ ಸೇರಿದಂತೆ ಹಲವು ಆಧುನಿಕ ಅಡುಗೆ ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಪ್ರೆಶರ್ ಕುಕ್ಕರ್‌ನ ಅನುಕೂಲತೆ ಮತ್ತು ಸಮಯ ಉಳಿತಾಯಕ್ಕೆ ಇಂದಿಗೂ ಹೆಚ್ಚಿನ ಬೇಡಿಕೆಯಿದೆ. ಬೇಳೆ, ಅನ್ನ, ತರಕಾರಿ ಸೇರಿದಂತೆ ಹಲವು ಆಹಾರಗಳನ್ನು ಸುಲಭವಾಗಿ ಬೇಯಿಸಲು ಇದು ಸಹಾಯ ಮಾಡುತ್ತದೆ.

ಆದರೆ ಹಳೆಯ ಕುಕ್ಕರ್ ಹಾಳಾದಾಗ ಅಥವಾ ಹೊಸ ಕುಕ್ಕರ್ ಖರೀದಿಸುವಾಗ ಬಹುತೇಕರು ಒಂದು ಸಾಮಾನ್ಯ ಗೊಂದಲಕ್ಕೆ ಸಿಲುಕುತ್ತಾರೆ. ಅಲ್ಯೂಮಿನಿಯಂ ಕುಕ್ಕರ್ ಖರೀದಿಸಬೇಕೇ? ಅಥವಾ ಹೆಚ್ಚು ದುಬಾರಿಯಾದ ಸ್ಟೇನ್‌ಲೆಸ್ ಸ್ಟೀಲ್ ಕುಕ್ಕರ್ ಆಯ್ಕೆ ಮಾಡಬೇಕೇ? ಈ ಎರಡರ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದು ಅಗತ್ಯ.

ಅಲ್ಯೂಮಿನಿಯಂ ಪ್ರೆಶರ್ ಕುಕ್ಕರ್‌ನ ಅನುಕೂಲಗಳು

ಅಲ್ಯೂಮಿನಿಯಂ ಪ್ರೆಶರ್ ಕುಕ್ಕರ್‌ಗಳು ಹಲವು ವರ್ಷಗಳಿಂದ ಭಾರತೀಯ ಮನೆಗಳಲ್ಲಿ ಜನಪ್ರಿಯವಾಗಿವೆ. ವಿಶೇಷವಾಗಿ ಕಡಿಮೆ ಬಜೆಟ್‌ನಲ್ಲಿ ಅಡುಗೆಮನೆ ಸಿದ್ಧಪಡಿಸುವವರಿಗೆ ಇದು ಕೈಗೆಟುಕುವ ಆಯ್ಕೆಯಾಗಿದೆ.

ಅಲ್ಯೂಮಿನಿಯಂ ಉತ್ತಮ ಶಾಖ ವಾಹಕವಾಗಿರುವುದರಿಂದ, ಒಲೆಯ ಮೇಲೆ ಇಟ್ಟ ನಂತರ ಇದು ವೇಗವಾಗಿ ಬಿಸಿಯಾಗುತ್ತದೆ. ಇದರಿಂದ ನೀರು ಬೇಗ ಕುದಿಯುವುದರ ಜೊತೆಗೆ, ಕುಕ್ಕರ್‌ನಲ್ಲಿ ಒತ್ತಡವೂ ತ್ವರಿತವಾಗಿ ನಿರ್ಮಾಣವಾಗುತ್ತದೆ. ಹೀಗಾಗಿ ಬೇಳೆ, ತರಕಾರಿ ಮತ್ತು ಇತರ ಆಹಾರಗಳನ್ನು ಕಡಿಮೆ ಸಮಯದಲ್ಲಿ ಬೇಯಿಸಲು ಸಾಧ್ಯವಾಗುತ್ತದೆ.

ಇದರ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಕಡಿಮೆ ಬೆಲೆ. ಹೀಗಾಗಿ ಕಡಿಮೆ ಬಜೆಟ್‌ನಲ್ಲಿ ಪ್ರೆಶರ್ ಕುಕ್ಕರ್ ಖರೀದಿಸಲು ಬಯಸುವವರಿಗೆ ಅಲ್ಯೂಮಿನಿಯಂ ಕುಕ್ಕರ್ ಜನಪ್ರಿಯ ಆಯ್ಕೆಯಾಗಿದೆ.

ಅಲ್ಯೂಮಿನಿಯಂ ಕುಕ್ಕರ್‌ನ ಅನಾನುಕೂಲಗಳು

ಅಲ್ಯೂಮಿನಿಯಂ ಕುಕ್ಕರ್ ವೇಗವಾಗಿ ಬಿಸಿಯಾಗುವುದಾದರೂ, ಇದರ ಬಳಕೆಯ ಬಗ್ಗೆ ಕೆಲವರು ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸುತ್ತಾರೆ. ಅಲ್ಯೂಮಿನಿಯಂ ಕೆಲವು ಆಮ್ಲೀಯ ಆಹಾರಗಳೊಂದಿಗೆ ಪ್ರತಿಕ್ರಿಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಟೊಮೆಟೊ, ಹುಣಸೆಹಣ್ಣು ಅಥವಾ ನಿಂಬೆ ಆಧಾರಿತ ಆಹಾರಗಳನ್ನು ಪದೇಪದೇ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿಸುವ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸುತ್ತಾರೆ. ಆದಾಗ್ಯೂ, ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಚಾರದಲ್ಲಿ ಬಳಕೆಯ ಪ್ರಮಾಣ, ಪಾತ್ರೆಯ ಸ್ಥಿತಿ ಮತ್ತು ಆಹಾರದ ಸ್ವರೂಪ ಸೇರಿದಂತೆ ಹಲವು ಅಂಶಗಳು ಮುಖ್ಯವಾಗುತ್ತವೆ.

ಇದರ ಜೊತೆಗೆ ಅಲ್ಯೂಮಿನಿಯಂ ಕುಕ್ಕರ್‌ಗಳಿಗೆ ಸುಲಭವಾಗಿ ಗೀರು ಬೀಳುವ ಸಾಧ್ಯತೆ ಇದೆ. ದೀರ್ಘಕಾಲ ಬಳಕೆಯ ನಂತರ ಒಳಭಾಗ ಕಪ್ಪಾಗಬಹುದು ಅಥವಾ ಅದರ ಮೂಲ ಹೊಳಪು ಕಡಿಮೆಯಾಗಬಹುದು.

ಸ್ಟೇನ್‌ಲೆಸ್ ಸ್ಟೀಲ್ ಕುಕ್ಕರ್‌ನ ವಿಶೇಷತೆ

ಇತ್ತೀಚಿನ ವರ್ಷಗಳಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಪ್ರೆಶರ್ ಕುಕ್ಕರ್‌ಗಳ ಬಳಕೆ ಹೆಚ್ಚಾಗಿದೆ. ದೀರ್ಘಕಾಲ ಬಾಳಿಕೆ, ಸುಲಭ ನಿರ್ವಹಣೆ ಮತ್ತು ಸ್ವಚ್ಛಗೊಳಿಸಲು ಅನುಕೂಲಕರವಾಗಿರುವುದು ಇದರ ಪ್ರಮುಖ ಕಾರಣಗಳಾಗಿವೆ.

ಸ್ಟೇನ್‌ಲೆಸ್ ಸ್ಟೀಲ್ ಕುಕ್ಕರ್‌ಗಳು ಸಾಮಾನ್ಯವಾಗಿ ಗೀರು, ಡೆಂಟ್ ಮತ್ತು ತುಕ್ಕಿಗೆ ಹೆಚ್ಚು ನಿರೋಧಕವಾಗಿರುತ್ತವೆ. ಸರಿಯಾಗಿ ನಿರ್ವಹಿಸಿದರೆ ಹಲವು ವರ್ಷಗಳ ಕಾಲ ಬಳಸಬಹುದು. ಆಹಾರ ಕೆಳಭಾಗಕ್ಕೆ ಅಂಟಿಕೊಂಡರೂ, ಸ್ವಲ್ಪ ಸಮಯ ನೆನೆಸಿಟ್ಟು ಸ್ವಚ್ಛಗೊಳಿಸಿದರೆ ಮತ್ತೆ ಹೊಳಪು ಪಡೆಯಬಹುದು.

ಇಂದಿನ ಆಧುನಿಕ ಸ್ಟೇನ್‌ಲೆಸ್ ಸ್ಟೀಲ್ ಕುಕ್ಕರ್‌ಗಳಲ್ಲಿ ಸಾಮಾನ್ಯವಾಗಿ ಬಹುಪದರದ ಅಥವಾ ಸ್ಯಾಂಡ್‌ವಿಚ್ ಬಾಟಮ್‌ಗಳನ್ನು ಬಳಸಲಾಗುತ್ತದೆ. ಇದರಿಂದ ಶಾಖವು ಕುಕ್ಕರ್‌ನ ಕೆಳಭಾಗದಲ್ಲಿ ಸಮವಾಗಿ ಹರಡಲು ಸಹಾಯವಾಗುತ್ತದೆ. ಹಳೆಯ ಸ್ಟೀಲ್ ಕುಕ್ಕರ್‌ಗಳಿಗೆ ಹೋಲಿಸಿದರೆ ಇವು ವೇಗವಾಗಿ ಬಿಸಿಯಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಆರೋಗ್ಯದ ದೃಷ್ಟಿಯಿಂದ ಯಾವುದು ಉತ್ತಮ?

ಸ್ಟೇನ್‌ಲೆಸ್ ಸ್ಟೀಲ್ ಅನ್ನು ಸಾಮಾನ್ಯವಾಗಿ ಆಹಾರದೊಂದಿಗೆ ಕಡಿಮೆ ಪ್ರತಿಕ್ರಿಯಿಸುವ ವಸ್ತುವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಟೊಮೆಟೊ, ಹುಣಸೆಹಣ್ಣು ಅಥವಾ ನಿಂಬೆ ಆಧಾರಿತ ಆಹಾರಗಳನ್ನು ಬೇಯಿಸುವಾಗ ಅಲ್ಯೂಮಿನಿಯಂ ಪಾತ್ರೆಗಳಿಗಿಂತ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳಿಗೆ ಹೆಚ್ಚಿನ ಆದ್ಯತೆ ನೀಡುವವರಿದ್ದಾರೆ.

ಆದರೆ ಯಾವುದೇ ಪ್ರೆಶರ್ ಕುಕ್ಕರ್ ಖರೀದಿಸುವಾಗ ಅದರ ಗುಣಮಟ್ಟ, ಸುರಕ್ಷತಾ ಮಾನದಂಡಗಳು, ಬಳಕೆಯ ಸೂಚನೆಗಳು ಮತ್ತು ತಯಾರಕರ ಮಾರ್ಗಸೂಚಿಗಳನ್ನು ಗಮನಿಸುವುದು ಅತ್ಯಂತ ಮುಖ್ಯ.

ಅಲ್ಯೂಮಿನಿಯಂ ಅಥವಾ ಸ್ಟೇನ್‌ಲೆಸ್ ಸ್ಟೀಲ್; ಯಾವುದು ಖರೀದಿಸಬೇಕು?

ನಿಮ್ಮ ಬಜೆಟ್ ಮತ್ತು ಬಳಕೆಯ ಅಗತ್ಯವನ್ನು ಆಧರಿಸಿ ಆಯ್ಕೆ ಮಾಡಬಹುದು. ಕಡಿಮೆ ಬೆಲೆಯಲ್ಲಿ ತಕ್ಷಣದ ಬಳಕೆಗಾಗಿ ಕುಕ್ಕರ್ ಬೇಕಿದ್ದರೆ ಅಲ್ಯೂಮಿನಿಯಂ ಕುಕ್ಕರ್ ಕೈಗೆಟುಕುವ ಆಯ್ಕೆಯಾಗಬಹುದು.

ಆದರೆ ದೀರ್ಘಕಾಲ ಬಾಳಿಕೆ, ಸುಲಭ ನಿರ್ವಹಣೆ ಮತ್ತು ಆಹಾರದೊಂದಿಗೆ ಕಡಿಮೆ ಪ್ರತಿಕ್ರಿಯಿಸುವ ಪಾತ್ರೆಯನ್ನು ಬಯಸುವವರು ಸ್ಟೇನ್‌ಲೆಸ್ ಸ್ಟೀಲ್ ಕುಕ್ಕರ್‌ನ್ನು ಪರಿಗಣಿಸಬಹುದು. ಆರಂಭದಲ್ಲಿ ಇದರ ಬೆಲೆ ಸ್ವಲ್ಪ ಹೆಚ್ಚಾಗಿದ್ದರೂ, ದೀರ್ಘಕಾಲ ಬಳಸುವ ದೃಷ್ಟಿಯಿಂದ ಇದು ಉತ್ತಮ ಹೂಡಿಕೆಯಾಗಬಹುದು.

ಒಟ್ಟಿನಲ್ಲಿ, ಪ್ರೆಶರ್ ಕುಕ್ಕರ್ ಆಯ್ಕೆ ಮಾಡುವಾಗ ಕೇವಲ ಬೆಲೆಯನ್ನು ಮಾತ್ರ ನೋಡದೆ, ಅದರ ಗುಣಮಟ್ಟ, ಸುರಕ್ಷತೆ, ಬಾಳಿಕೆ ಮತ್ತು ನಿಮ್ಮ ಕುಟುಂಬದ ಅಡುಗೆ ಅಗತ್ಯಗಳನ್ನು ಪರಿಗಣಿಸುವುದು ಉತ್ತಮ.

ಪ್ರಜಾಸೌಧಕ್ಕೆ ಅಡ್ಡಿಯಲ್ಲ, ಕ್ರೀಡಾಂಗಣ ಉಳಿಯಲಿ: ಲಕ್ಷ್ಮೇಶ್ವರದಲ್ಲಿ ಕ್ರೀಡಾಪಟುಗಳ ಪ್ರತಿಭಟನೆ

0

ಲಕ್ಷ್ಮೇಶ್ವರ: ಪ್ರಜಾಸೌಧ ನಿರ್ಮಾಣಕ್ಕೆ ವಿರೋಧವಿಲ್ಲ, ಆದರೆ ಕ್ರೀಡಾಂಗಣಕ್ಕೆ ಮೀಸಲಾದ ಜಾಗದ ಒಂದು ಇಂಚು ಕೂಡ ಕಡಿಮೆಯಾಗಬಾರದು ಎಂದು ಆಗ್ರಹಿಸಿ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಮಂಗಳವಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪುರಸಭೆ ಉಮಾ ವಿದ್ಯಾಲಯದ ಹಿಂಭಾಗದಲ್ಲಿರುವ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಮೀಸಲಾದ ಕ್ರೀಡಾಂಗಣದ ಜಾಗದ ಪಕ್ಕದಲ್ಲಿ ಪ್ರಜಾಸೌಧ ನಿರ್ಮಾಣ ಕಾಮಗಾರಿ ಆರಂಭಿಸಲು ಗುತ್ತಿಗೆದಾರರು ಮುಂದಾದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಸ್ಥಳಕ್ಕೆ ಆಗಮಿಸಿ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.

“ಆಟದ ಮೈದಾನ ನಮ್ಮ ಹಕ್ಕು”, “ಕ್ರೀಡಾಂಗಣ ಉಳಿಸಿ” ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಮೈದಾನದ ಜಾಗವನ್ನು ಒತ್ತುವರಿ ಮಾಡಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಶರಣು ಗೋಡಿ, ಸೋಮಣ್ಣ ಉಪನಾಳ ಹಾಗೂ ಬಸಣ್ಣ ಬೆಂಡಿಗೇರಿ, ತಾಲೂಕು ಕ್ರೀಡಾಂಗಣಕ್ಕೆ ಮೀಸಲಾದ 3.24 ಎಕರೆ ಜಾಗೆಯಲ್ಲಿ ಯಾವುದೇ ರೀತಿಯ ಕಡಿತ ಅಥವಾ ಒತ್ತುವರಿ ಆಗಬಾರದು. ಕ್ರೀಡಾ ಇಲಾಖೆಯ ಹೆಸರಿನಲ್ಲಿರುವ ಜಾಗೆಯನ್ನು ತಕ್ಷಣ ಸರ್ವೇ ಮಾಡಿ ಗಡಿ ಗುರುತಿಸಬೇಕು. ಇದೇ ಮೈದಾನದಿಂದ ನೂರಾರು ಕ್ರೀಡಾಪಟುಗಳು ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಕ್ರೀಡಾಂಗಣವನ್ನು ಉಳಿಸುವುದು ಅಗತ್ಯ ಎಂದು ಒತ್ತಾಯಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಧನಂಜಯ ಎಂ. ಅವರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಕ್ರೀಡಾಂಗಣಕ್ಕೆ ಮೀಸಲಾದ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

2025ರಲ್ಲಿ ಪುರಸಭೆಗೆ ಸೇರಿದ 2.34 ಎಕರೆ ಭೂಮಿಯನ್ನು ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರ ಮಂಜೂರು ಮಾಡಿದ್ದು, ₹8.60 ಕೋಟಿ ವೆಚ್ಚದ ಕಾಮಗಾರಿಗೆ ಕರ್ನಾಟಕ ಹೌಸಿಂಗ್ ಬೋರ್ಡ್‌ಗೆ ಆದೇಶ ನೀಡಲಾಗಿದೆ. ಪ್ರಸ್ತುತ ಗುತ್ತಿಗೆದಾರರು ಲೈನ್‌ಔಟ್ ಹಾಗೂ ತಾತ್ಕಾಲಿಕ ಶೆಡ್ ನಿರ್ಮಾಣದ ಕೆಲಸ ಮಾತ್ರ ಮಾಡುತ್ತಿದ್ದಾರೆ. ಕ್ರೀಡಾಂಗಣದ ಜಾಗ ಒತ್ತುವರಿಯಾಗುವುದಿಲ್ಲ ಎಂದು ಭರವಸೆ ನೀಡಿದರು.

ಕ್ರೀಡಾ ಇಲಾಖೆಯಿಂದ ಮನವಿ ಬಂದ ತಕ್ಷಣ ಜಾಗದ ಸರ್ವೇ ನಡೆಸಿ ಗಡಿ ಗುರುತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಇದೇ ವೇಳೆ ಲಕ್ಷ್ಮೇಶ್ವರ ತಾಲೂಕು ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಜೆ.ಆರ್. ಕೊಪ್ಪದ ಮಾತನಾಡಿ, ಪ್ರಜಾಸೌಧ ನಿರ್ಮಾಣಕ್ಕೆ ಕಾಂಗ್ರೆಸ್ ವಿರೋಧವಿಲ್ಲ. ಆದರೆ ಸಚಿವರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಭೂಮಿಪೂಜೆ ನಡೆಸದೆ ಕಾಮಗಾರಿ ಆರಂಭಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಕ್ರೀಡಾಂಗಣದ ಜಾಗ ಹಾಗೂ ಅಲ್ಲಿನ ಗುಡಿಸಲು ನಿವಾಸಿಗಳ ಸಮಸ್ಯೆ ಬಗೆಹರಿಸಿದ ಬಳಿಕವೇ ಕಾಮಗಾರಿ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.

ಫುಟ್‌ಪಾತ್‌ನಲ್ಲಿ ನಿಂತಿದ್ದವರಿಗೆ ಕಾರು ಡಿಕ್ಕಿ: ಯುವಕ ಸ್ಥಳದಲ್ಲೇ ಸಾವು, ಮಹಿಳೆಗೆ ಗಾಯ!

ಚಿತ್ರದುರ್ಗ: ಫುಟ್‌ಪಾತ್‌ನಲ್ಲಿ ನಿಂತಿದ್ದವರ ಮೇಲೆ ನಿಯಂತ್ರಣ ತಪ್ಪಿದ ಕಾರು ಹರಿದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಟಿ. ನುಲೇನೂರು ಬಳಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು ಏಕಾಏಕಿ ಫುಟ್‌ಪಾತ್‌ಗೆ ನುಗ್ಗಿದ್ದು, ಅಲ್ಲಿದ್ದವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಹೊಳಲ್ಕೆರೆ ತಾಲೂಕಿನ ದಗ್ಗೆ ಗ್ರಾಮದ ಪ್ರದೀಪ್ (30) ಎಂಬ ಯುವಕ ಮೃತಪಟ್ಟಿದ್ದಾರೆ.

ಇದೇ ವೇಳೆ ಮತ್ತೋರ್ವ ಮಹಿಳೆಯ ಕಾಲು ಮುರಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Bengaluru Traffic: ಯಶವಂತಪುರ-ಮತ್ತಿಕೆರೆ ಟ್ರಾಫಿಕ್‌ಗೆ ಸಿಗುತ್ತಾ ಮುಕ್ತಿ? ಹೊಸ ಡಬಲ್ ಡೆಕ್ಕರ್ ಯೋಜನೆ!

ಬೆಂಗಳೂರು: ನಗರದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಅಡಿಯಲ್ಲಿ ಮತ್ತೊಂದು ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರಾಗಿಗುಡ್ಡ-ಸಿಲ್ಕ್ ಬೋರ್ಡ್ ನಡುವೆ ನಿರ್ಮಾಣವಾಗಿರುವ ಡಬಲ್ ಡೆಕ್ಕರ್ ಮಾದರಿಯಲ್ಲೇ ಈ ಯೋಜನೆ ಜಾರಿಯಾಗಲಿದೆ.

ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಕೆ-ರೈಡ್ (K-RIDE) ಸಂಸ್ಥೆಯು ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ಸಂಪರ್ಕಿಸುವ ‘ಮಲ್ಲಿಗೆ’ (ಕಾರಿಡಾರ್-2) ಮಾರ್ಗದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಮತ್ತಿಕೆರೆಯ ಶ್ಯಾಮ್ ಪ್ರಸಾದ್ ಮುಖರ್ಜಿ ಮೇಲ್ಸೇತುವೆ ರಸ್ತೆಯಲ್ಲಿ ಸುಮಾರು 1.2 ಕಿಲೋಮೀಟರ್ ಉದ್ದದಲ್ಲಿ ₹199 ಕೋಟಿ ವೆಚ್ಚದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಲಾಗುತ್ತಿದೆ.

ಈ ಯೋಜನೆಯ ವಿಶೇಷವೆಂದರೆ ಮೂರು ಹಂತದ ಸಂಚಾರ ವ್ಯವಸ್ಥೆ. ಕೆಳಭಾಗದಲ್ಲಿ ಸಾಮಾನ್ಯ ರಸ್ತೆ ಸಂಚಾರ, ಮೊದಲ ಹಂತದಲ್ಲಿ ವಾಹನಗಳ ಸಂಚಾರಕ್ಕೆ ಮೇಲ್ಸೇತುವೆ ಹಾಗೂ ಎರಡನೇ ಹಂತದಲ್ಲಿ ಉಪನಗರ ರೈಲು ಸಂಚಾರಕ್ಕೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗಲಿದೆ.

ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ನಡುವಿನ 24.86 ಕಿಲೋಮೀಟರ್ ಉದ್ದದ ‘ಮಲ್ಲಿಗೆ’ ಕಾರಿಡಾರ್‌ನಲ್ಲಿ ಒಟ್ಟು 14 ನಿಲ್ದಾಣಗಳು ಇರಲಿವೆ. ಚಿಕ್ಕಬಾಣಾವರ, ಮ್ಯಾದರಹಳ್ಳಿ, ಶೆಟ್ಟಿಹಳ್ಳಿ, ಜಾಲಹಳ್ಳಿ, ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಹೆಬ್ಬಾಳ, ಕನಕನಗರ, ನಾಗವಾರ, ಕಾವೇರಿ ನಗರ, ಬಾಣಸವಾಡಿ, ಸೇವಾನಗರ, ಕಸ್ತೂರಿನಗರ ಹಾಗೂ ಬೈಯಪ್ಪನಹಳ್ಳಿ ಪ್ರಮುಖ ನಿಲ್ದಾಣಗಳಾಗಿವೆ.

ಪ್ರತಿದಿನ ಬೆಂಗಳೂರಿಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಹೊಸ ವಾಹನಗಳು ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ ಯಶವಂತಪುರ ಹಾಗೂ ಮತ್ತಿಕೆರೆ ಭಾಗದ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಈ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

KPSC ನೇಮಕಾತಿ ಅಕ್ರಮ ಆರೋಪ: ರಾಜ್ಯ ಸರ್ಕಾರ, ಸಿಬಿಐಗೆ ಹೈಕೋರ್ಟ್ ನೋಟಿಸ್!

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.

ಅಮಾನತುಗೊಂಡ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರ ಪುತ್ರಿಯರ ಆಯ್ಕೆ ಸೇರಿದಂತೆ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘ ಅರ್ಜಿ ಸಲ್ಲಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, ಜುಲೈ 29ರೊಳಗೆ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸುವಂತೆ ಸೂಚಿಸಿದರು. ಇದೇ ವೇಳೆ, ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಪ್ರಕರಣವನ್ನು ವರ್ಗಾಯಿಸಲು ಮುಂದಾದರೆ, ಅರ್ಜಿದಾರರು ಮತ್ತೆ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಅರ್ಜಿದಾರರ ಪರ ವಕೀಲರು, ಜುಲೈ 3ರಂದು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ವಿಧಾನದೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಅದು ಕೇವಲ ಮೇಲ್ನೋಟದ ಕ್ರಮವಾಗಿದ್ದು, ಮೂಲ ಆರೋಪಗಳ ಕುರಿತು ಸಮಗ್ರ ತನಿಖೆ ನಡೆದಿಲ್ಲ ಎಂದು ವಾದಿಸಿದರು. ಸಾರ್ವಜನಿಕರ ಆಕ್ರೋಶ ತಣಿಸಲು ಸರ್ಕಾರ ಎಸ್‌ಐಟಿ ರಚಿಸುವ ಸಾಧ್ಯತೆಯೂ ಇದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಅರ್ಜಿಯಲ್ಲಿ, ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರು ನೇಮಕಾತಿ ಪ್ರಕ್ರಿಯೆಯಲ್ಲಿ ಹಿತಾಸಕ್ತಿ ಸಂಘರ್ಷ ಉಂಟುಮಾಡುವ ರೀತಿಯಲ್ಲಿ ವರ್ತಿಸಿ, ತಮ್ಮ ಇಬ್ಬರು ಪುತ್ರಿಯರ ಆಯ್ಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, 3ಬಿ ಮೀಸಲಾತಿ ಪಡೆಯಲು ಅಗತ್ಯವಿರುವ ಆದಾಯ ಪ್ರಮಾಣಪತ್ರದಲ್ಲಿ ವಾರ್ಷಿಕ ಆದಾಯವನ್ನು ಕೇವಲ ₹40 ಸಾವಿರ ಎಂದು ತೋರಿಸಲಾಗಿದೆ ಎಂಬ ಗಂಭೀರ ಆರೋಪವನ್ನೂ ಉಲ್ಲೇಖಿಸಲಾಗಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 29ಕ್ಕೆ ಹೈಕೋರ್ಟ್ ನಿಗದಿಪಡಿಸಿದೆ.

ದಾವಣಗೆರೆ ಪೊಲೀಸರ ಭರ್ಜರಿ ಕಾರ್ಯಾಚರಣೆ: 87 ಪ್ರಕರಣ ಭೇದಿಸಿ ₹3.91 ಕೋಟಿ ಮೌಲ್ಯದ ವಸ್ತು ವಾರಸುದಾರರಿಗೆ ಹಸ್ತಾಂತರ

ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸರು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 87 ಕಳವು ಪ್ರಕರಣಗಳನ್ನು ಭೇದಿಸಿ, ₹3.91 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

2025ರ ಡಿಸೆಂಬರ್ 20ರಿಂದ 2026ರ ಜುಲೈ 20ರವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆ ನಡೆಸಿದ ಪೊಲೀಸರು, ಮೂವರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರು ವಶಪಡಿಸಿಕೊಂಡ ವಸ್ತುಗಳಲ್ಲಿ 1.66 ಕೆಜಿ ಚಿನ್ನಾಭರಣ, 18.56 ಕೆಜಿ ಬೆಳ್ಳಿ, ₹56.55 ಲಕ್ಷ ಮೌಲ್ಯದ 377 ಮೊಬೈಲ್‌ಗಳು, ₹22.94 ಲಕ್ಷ ಮೌಲ್ಯದ 31 ವಾಹನಗಳು ಹಾಗೂ ₹4 ಲಕ್ಷ ಮೌಲ್ಯದ ಕೃಷಿ ಉಪಕರಣಗಳು ಸೇರಿವೆ.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ‘ಪ್ರಾಪರ್ಟಿ ಪರೇಡ್’ ಕಾರ್ಯಕ್ರಮದಲ್ಲಿ ಜಪ್ತಿ ಮಾಡಿದ್ದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶೇಖರ್ ಹೆಚ್.ಟಿ., ಕಳವು ಪ್ರಕರಣಗಳಲ್ಲಿ ಪತ್ತೆಯಾದ ಒಟ್ಟು ₹3,91,69,136 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಸಂಬಂಧಪಟ್ಟವರಿಗೆ ಮರಳಿ ನೀಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಸಂಚಾರ ನಿಯಮ ಉಲ್ಲಂಘಿಸಿ ವಾಹನಗಳಿಗೆ ಅಳವಡಿಸಿದ್ದ ಐಎಸ್‌ಐ ಗುರುತು ಇಲ್ಲದ ಸುಮಾರು 2 ಸಾವಿರಕ್ಕೂ ಹೆಚ್ಚು ಹೆಲ್ಮೆಟ್‌ಗಳು, ಕರ್ಕಶ ಶಬ್ದ ಮಾಡುವ 85 ಸೈಲೆನ್ಸರ್‌ಗಳು, 25 ಹಾರ್ನ್‌ಗಳು ಹಾಗೂ 10 ಸ್ಪೀಕರ್ ಡಕ್‌ಗಳನ್ನು ಪೊಲೀಸರು ಬುಲ್ಡೋಜರ್ ಮೂಲಕ ನಾಶಪಡಿಸಿದರು.

ಜಿಲ್ಲಾ ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ ಎಸ್‌ಪಿ ಶೇಖರ್ ಹೆಚ್.ಟಿ., ಪ್ರಕರಣಗಳ ಪತ್ತೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಎಲ್ಲ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.

ತೆರಿಗೆ ವಸೂಲಿ ಚುರುಕು; ನಿರ್ಲಕ್ಷ್ಯಕ್ಕೆ ಕ್ರಮದ ಎಚ್ಚರಿಕೆ

0

ವಿಜಯಸಾಕ್ಷಿ ಸುದ್ದಿ, ನರಗುಂದ: ಗ್ರಾಮ ಪಂಚಾಯಿತಿಗಳ ಆರ್ಥಿಕ ಸ್ವಾವಲಂಬನೆಗೆ ತೆರಿಗೆ ವಸೂಲಾತಿ ಹೆಚ್ಚಳ ಅತ್ಯಗತ್ಯ. ಕಡಿಮೆ ತೆರಿಗೆ ಸಂಗ್ರಹಿಸುವ ಕರವಸೂಲಿಗಾರರ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ವಸೂಲಾತಿಯಲ್ಲಿ ಹಿನ್ನಡೆ ಮುಂದುವರಿದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಕರವಸೂಲಿಗಾರರು ಹಾಗೂ ವಾಟರ್‌ಮನ್‌ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ತೆರಿಗೆ ಬಾಕಿದಾರರ ಪಟ್ಟಿಯನ್ನು ಸಿದ್ಧಪಡಿಸಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಮೂಲಕ ಮುಂಚಿತವಾಗಿ ಮಾಹಿತಿ ನೀಡಿ ವಸೂಲಾತಿ ಕಾರ್ಯ ಚುರುಕುಗೊಳಿಸಬೇಕು. ಸಾರ್ವಜನಿಕರು ತಮ್ಮ ದೈನಂದಿನ ಕೆಲಸಗಳಿಗೆ ತೆರಳುವ ಮುನ್ನವೇ ಮನೆಗಳಿಗೆ ಭೇಟಿ ನೀಡಿ ತೆರಿಗೆ ವಸೂಲಿ ಮಾಡುವಂತೆ ಸೂಚಿಸಿದರು.

ವಸೂಲಾದ ತೆರಿಗೆ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಗ್ರಾಮ ಪಂಚಾಯಿತಿಗಳು ಉತ್ತಮ ಮೂಲಸೌಕರ್ಯ ಹಾಗೂ ಸೇವೆಗಳನ್ನು ಒದಗಿಸಿದಾಗ ಜನರು ಸ್ವಯಂಪ್ರೇರಿತವಾಗಿ ತೆರಿಗೆ ಪಾವತಿಸುತ್ತಾರೆ. ಆದರೆ ಕಡಿಮೆ ತೆರಿಗೆ ವಸೂಲಾತಿಗೆ ಕರವಸೂಲಿಗಾರರನ್ನೇ ಹೊಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಡಿಮೆ ತೆರಿಗೆ ವಸೂಲಾತಿ ಮಾಡಿರುವ ಗ್ರಾಮ ಪಂಚಾಯಿತಿಗಳ ಕರವಸೂಲಿಗಾರರನ್ನು ಪ್ರಶ್ನಿಸಿದ ಅವರು, ವಸೂಲಾತಿ ಕುಂಠಿತವಾಗಲು ಕಾರಣವೇನು, ಈ ಕುರಿತು ಪಿಡಿಒಗಳ ಗಮನಕ್ಕೆ ತಂದಿದ್ದೀರಾ ಎಂದು ವಿಚಾರಿಸಿದರು. ಮುಂದೆಯೂ ಇದೇ ಪರಿಸ್ಥಿತಿ ಮುಂದುವರಿದರೆ ಶಿಸ್ತುಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.

ವಾಟರ್‌ಮನ್‌ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಳೆ ಕೊರತೆಯಿರುವ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನೀರಿನ ಮೂಲಗಳ ಸಂರಕ್ಷಣೆ ಹಾಗೂ ನೀರಿನ ಮಿತ ಬಳಕೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ಕೂಡಲೇ ಸಂಬಂಧಿತ ಪಿಡಿಒ ಹಾಗೂ ತಾಲೂಕು ಪಂಚಾಯಿತಿ ಕಚೇರಿಯ ಗಮನಕ್ಕೆ ತಂದು ತ್ವರಿತವಾಗಿ ಪರಿಹಾರ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಉತ್ತಮ ಸಾಧಕರಿಗೆ ಗೌರವ

ಸಭೆಯಲ್ಲಿ ಜೂನ್ ತಿಂಗಳಲ್ಲಿ ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಿದ ಕೊಣ್ಣೂರು, ಹುಣಶಿಕಟ್ಟಿ, ಶಿರೋಳ ಹಾಗೂ ವಾಸನ ಗ್ರಾಮ ಪಂಚಾಯಿತಿಗಳ ಕರವಸೂಲಿಗಾರರನ್ನು ತಾಲೂಕು ಪಂಚಾಯಿತಿ ವತಿಯಿಂದ ‘ಜನಾಭಿಪ್ರಾಯ ಚಪ್ಪಾಳೆ’ ಕಾರ್ಯಕ್ರಮದಡಿ ಶಾಲು ಹೊದಿಸಿ, ಮಾಲೆ ಹಾಕಿ ಸಭೆಯಲ್ಲಿ ಉಪಸ್ಥಿತರಿದ್ದವರಿಂದ ಚಪ್ಪಾಳೆ ತಟ್ಟಿಸುವ ಮೂಲಕ ಸನ್ಮಾನಿಸಲಾಯಿತು.

ಮುಂದಿನ ತಿಂಗಳುಗಳಲ್ಲಿಯೂ ಉತ್ತಮ ತೆರಿಗೆ ವಸೂಲಾತಿ ಸಾಧಿಸುವ ಕರವಸೂಲಿಗಾರರನ್ನು ಇದೇ ರೀತಿಯಲ್ಲಿ ಗೌರವಿಸಿ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಲಾಯಿತು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಮಹಾಂತೇಶ್ ನಿಟ್ಟಾಲಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕಿ ಕೃಷ್ಣಮ್ಮ ಹಾದಿಮನಿ ಹಾಗೂ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಕರವಸೂಲಿಗಾರರು ಮತ್ತು ವಾಟರ್‌ಮನ್‌ಗಳು ಉಪಸ್ಥಿತರಿದ್ದರು.

“ಗ್ರಾಮ ಪಂಚಾಯಿತಿಗಳ ಆರ್ಥಿಕ ಸ್ವಾವಲಂಬನೆಗೆ ತೆರಿಗೆ ವಸೂಲಾತಿ ಹೆಚ್ಚಳ ಅತ್ಯಗತ್ಯ. ಕಡಿಮೆ ತೆರಿಗೆ ಸಂಗ್ರಹಿಸುವ ಕರವಸೂಲಿಗಾರರ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ವಸೂಲಾತಿಯಲ್ಲಿ ಹಿನ್ನಡೆ ಮುಂದುವರಿದರೆ ಕ್ರಮ ಕೈಗೊಳ್ಳುವುದು ಅನಿವಾರ್ಯ.”

– ಶ್ರೀಧರ್ ಚಿನಗುಂಡಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ನರಗುಂದ

ಜುಲೈ 23ರಂದು ಡಾ. ಬಸವರಾಜ್ ಬಳ್ಳಾರಿ ಜನ್ಮದಿನ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಅಮ್ಮ ಫೌಂಡೇಶನ್‌ನ ಮಾರ್ಗದರ್ಶಕರೂ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಅಧ್ಯಕ್ಷರೂ ಆಗಿರುವ ಡಾ. ಬಸವರಾಜ್ ಬಳ್ಳಾರಿ ಅವರ 49ನೇ ಜನ್ಮದಿನದ ಅಂಗವಾಗಿ ಅಮ್ಮ ಫೌಂಡೇಶನ್ ವತಿಯಿಂದ ಜುಲೈ 23ರಂದು ಗದಗ ಜಿಲ್ಲೆಯಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ಆಯ್ದ ಸರ್ಕಾರಿ ಶಾಲೆಗಳ ಸುಮಾರು 1,000 ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ನೋಟ್‌ಬುಕ್ ಹಾಗೂ ಪೆನ್‌ಗಳನ್ನು ವಿತರಿಸಲಾಗುತ್ತದೆ. ಅಲ್ಲದೆ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳ ಕಿಟ್ ವಿತರಣೆ ಹಾಗೂ ‘ಹಸಿರೇ ಉಸಿರು’ ಧ್ಯೇಯದಡಿ 500 ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ.

ಅದೇ ದಿನ ಗದಗದ ನೌಕರರ ಭವನದಲ್ಲಿ ರಕ್ತದಾನ ಶಿಬಿರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಈ ಕುರಿತು ಅಮ್ಮ ಫೌಂಡೇಶನ್ ಅಧ್ಯಕ್ಷ ಹಾಗೂ ವಕೀಲ ಮೈಲಾರಪ್ಪ ಡಿ.ಎಚ್. ಮಾತನಾಡಿ, ಅಮ್ಮ ಫೌಂಡೇಶನ್ ಸಮಾಜಮುಖಿ ಕಾರ್ಯಗಳಿಗೆ ನಿರಂತರ ಆದ್ಯತೆ ನೀಡುತ್ತಿದ್ದು, ಈ ಬಾರಿ ಸರ್ಕಾರಿ ಶಾಲೆಗಳ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆ ವಿಶೇಷ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳ ಆರ್ಥಿಕ ಹೊರೆ ಕಡಿಮೆ ಮಾಡಿ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಡಾ. ಬಸವರಾಜ್ ಬಳ್ಳಾರಿ ಅವರ ಜನ್ಮದಿನವನ್ನು ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಮುಂದೆಯೂ ಸಮಾಜಮುಖಿ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸಲು ಮಾರ್ಗದರ್ಶಕರ ಮಾರ್ಗದರ್ಶನ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಅಮ್ಮ ಫೌಂಡೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ.

ಶಿಷ್ಟಾಚಾರ ಪಾಲನೆಯಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: “ರಾಜ್ಯಪಾಲರ ಪ್ರವಾಸದ ವೇಳೆ ಶಿಷ್ಟಾಚಾರ ಪಾಲನೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ನಡೆಯಬಾರದು. ಅಧಿಕಾರಿಗಳಿಗೆ ವಹಿಸಲಾದ ಜವಾಬ್ದಾರಿಗಳನ್ನು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಬೇಕು. ಯಾವುದೇ ಅವ್ಯವಸ್ಥೆ ಅಥವಾ ಲೋಪ ಕಂಡುಬಂದರೆ ಸಹಿಸಲಾಗುವುದಿಲ್ಲ” ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜುಲೈ 23ರಂದು ನಡೆಯಲಿರುವ ಕರ್ನಾಟಕ ರಾಜ್ಯಪಾಲರ ಗಜೇಂದ್ರಗಡ ಪ್ರವಾಸದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಪೂರ್ವಸಿದ್ಧತಾ ಹಾಗೂ ಶಿಷ್ಟಾಚಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯಪಾಲರ ಪ್ರವಾಸಕ್ಕೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳು ಶಿಷ್ಟಾಚಾರದಂತೆ ಹಾಗೂ ಯಾವುದೇ ಲೋಪವಿಲ್ಲದಂತೆ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ರಾಜ್ಯಪಾಲರು ಸಂಚರಿಸುವ ಮಾರ್ಗದ ರಸ್ತೆಗಳು ಸಂಪೂರ್ಣ ಸುಸ್ಥಿತಿಯಲ್ಲಿರುವಂತೆ ಸಂಬಂಧಿಸಿದ ಇಲಾಖೆಗಳು ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ರಸ್ತೆ ಮಾರ್ಗದಲ್ಲಿ ಯಾವುದೇ ಅಡಚಣೆ ಅಥವಾ ಸಂಚಾರ ದಟ್ಟಣೆ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಗಜೇಂದ್ರಗಡ ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಸಾಧ್ಯತೆ ಇರುವುದರಿಂದ ಜನಸಂದಣಿ ನಿಯಂತ್ರಣ, ವಾಹನ ನಿಲುಗಡೆ, ಕುಡಿಯುವ ನೀರು, ಆರೋಗ್ಯ ಸೇವೆ, ಭದ್ರತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು ಎಂದು ತಿಳಿಸಿದರು. ಅಗತ್ಯವಿದ್ದಲ್ಲಿ ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ವೇದಿಕೆ ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಹೆಸ್ಕಾಂ ಅಧಿಕಾರಿಗಳು ನಿರಂತರ ವಿದ್ಯುತ್ ಪೂರೈಕೆ ಖಚಿತಪಡಿಸಬೇಕು. ಬ್ಯಾಕಪ್ ವ್ಯವಸ್ಥೆಯನ್ನೂ ಸಿದ್ಧವಾಗಿಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಅದೇ ರೀತಿ, ರಾಜ್ಯಪಾಲರ ಭದ್ರತೆ, ಶಿಷ್ಟಾಚಾರ, ವೈದ್ಯಕೀಯ ನೆರವು, ಸ್ವಚ್ಛತೆ, ಕುಡಿಯುವ ನೀರು, ಅಗ್ನಿಶಾಮಕ, ಸಂಚಾರ ನಿಯಂತ್ರಣ ಸೇರಿದಂತೆ ಪ್ರತಿಯೊಂದು ವಿಭಾಗವೂ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ರಾಜ್ಯಪಾಲರ ಪ್ರವಾಸದ ವೇಳಾಪಟ್ಟಿಯ ವಿವರಗಳನ್ನೂ ನೀಡಲಾಯಿತು. ಜುಲೈ 23ರಂದು ಬೆಳಿಗ್ಗೆ 9.15ಕ್ಕೆ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸುವ ರಾಜ್ಯಪಾಲರು, ರಸ್ತೆ ಮಾರ್ಗವಾಗಿ ಬೆಳಿಗ್ಗೆ 10.50ಕ್ಕೆ ಗಜೇಂದ್ರಗಡ ಪ್ರವಾಸಿ ಮಂದಿರಕ್ಕೆ ತಲುಪಲಿದ್ದಾರೆ. ಬಳಿಕ ಬೆಳಿಗ್ಗೆ 11.15ಕ್ಕೆ ಟಿಟಿಡಿ ಕಲ್ಯಾಣ ಮಂಟಪದ ಆವರಣದಲ್ಲಿ ನಡೆಯಲಿರುವ ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಮಧ್ಯಾಹ್ನ 2 ಗಂಟೆಗೆ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿ, ಅಲ್ಲಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಡಿವೈಎಸ್‌ಪಿಗಳಾದ ಮಹಾಂತೇಶ್ ಸಜ್ಜನರ ಹಾಗೂ ಮುರ್ತುಜಾ ಖಾದ್ರಿ, ಸಹಾಯಕ ಆಯುಕ್ತ ಗಂಗಪ್ಪ, ತಹಶೀಲ್ದಾರರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

“ಶಿಷ್ಟಾಚಾರ ಪಾಲನೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ. ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಿ ರಾಜ್ಯಪಾಲರ ಪ್ರವಾಸವನ್ನು ಯಶಸ್ವಿಗೊಳಿಸಬೇಕು.”

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ

ಕರ್ನಾಟಕದಲ್ಲಿ ಮಳೆ ಕೊರತೆ: 25 ಜಿಲ್ಲೆಗಳಲ್ಲಿ ಬರದ ಆತಂಕ, ರೈತರಿಗೆ ಸಂಕಷ್ಟ!

ಬೆಂಗಳೂರು: ಎಲ್‌ನಿನೋ ಪರಿಣಾಮದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ ಉಂಟಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ದಕ್ಷಿಣ ಕನ್ನಡ, ಮೈಸೂರು, ಕೊಡಗು, ಉತ್ತರ ಕನ್ನಡ, ಉಡುಪಿ, ಮಂಡ್ಯ ಸೇರಿದಂತೆ ಒಟ್ಟು 25 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ವಿಜಯನಗರ ಜಿಲ್ಲೆಯಲ್ಲಿ ಮಳೆ ಕೊರತೆ ತೀವ್ರವಾಗಿದ್ದು, ಬರದ ಆತಂಕ ಎದುರಾಗಿದೆ. ರಾಜ್ಯದ ಕೇವಲ ಐದು ಜಿಲ್ಲೆಗಳಲ್ಲಿ ಮಾತ್ರ ವಾಡಿಕೆಯಷ್ಟು ಮಳೆಯಾಗಿದೆ ಎನ್ನಲಾಗಿದೆ. ಬೆಳಗಾವಿಯಲ್ಲೂ ಕಡಿಮೆ ಮಳೆಯ ಪರಿಣಾಮ ರೈತರು ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಅಲ್ಪ ಪ್ರಮಾಣದ ಮಳೆಯಿಂದ ಕುಡಿಯುವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಕಡಿಮೆಯಾಗಿದ್ದರೂ, ಕೃಷಿಗೆ ಅಗತ್ಯವಾದ ನೀರಿನ ಕೊರತೆ ಮುಂದುವರಿದಿದೆ. ಜಲಾಶಯಗಳ ನೀರನ್ನು ಕೃಷಿಗೆ ಬಳಸಲು ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಇದರ ನಡುವೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೊಡಗು ಜಿಲ್ಲೆಯ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಕಳೆದ 15 ದಿನಗಳಲ್ಲಿ ಸುರಿದ ಮಳೆಯಿಂದ ಜಲಾಶಯದ ನೀರಿನ ಮಟ್ಟದಲ್ಲಿ 17 ಅಡಿ ಏರಿಕೆಯಾಗಿದೆ.

2,859 ಅಡಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಹಾರಂಗಿ ಜಲಾಶಯ ಭರ್ತಿಯಾಗಲು ಇನ್ನೂ 8 ಅಡಿ ಬಾಕಿ ಉಳಿದಿದೆ. ಸದ್ಯ ಜಲಾಶಯಕ್ಕೆ 3 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದೇ ರೀತಿ ಮಳೆ ಮುಂದುವರಿದರೆ ಶೀಘ್ರದಲ್ಲೇ ಜಲಾಶಯ ತುಂಬುವ ಸಾಧ್ಯತೆ ಇದೆ.