Home Blog Page 3015

ರಾಜ್ಯದಲ್ಲಿ ಕನ್ನಡ ಕಡ್ಡಾಯ; ರಾಜ್ಯ ಸರ್ಕಾರ ಆದೇಶ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿರುವ ಜಿಲ್ಲೆಯ ಪ್ರಮುಖ ರಸ್ತೆ, ವೃತ್ತಗಳಿಗೆ ನಾಡಿಗೆ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ, ಸಾಹಿತಿಗಳ ಹೆಸರಿಡುವುದು ಸೇರಿದಂತೆ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಕನ್ನಡ ಕಾಯಕ ಹೆಸರಿನಲ್ಲಿ ರಾಜ್ಯ ಸರ್ಕಾರ 2020-21 ನೇ ವರ್ಷಾಚರಣೆ ಆಚರಿಸಿಲಿರುವ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.

ಅದರಲ್ಲಿ ತಂತ್ರಾಂಶದಲ್ಲಿ ಕನ್ನಡವನ್ನು ಯಶಸ್ವಿಯಾಗಿ ಬಳಸುವಂತೆ ಕಾರ್ಯಕ್ರಮ ರೂಪಿಸುವುದು

ಇಲಾಖೆಗಳು ರೂಪಿಸುವ ನೀತಿ, ಕರಡು ಪ್ರತಿಗಳನ್ನು ಕನ್ನಡದಲ್ಲಿಯೇ ತಯಾರಿಸಬೇಕು. ಅಲ್ಲದೇ, ಅನುಮೋದಿತ ಪ್ರತಿಯನ್ನು ಕನ್ನಡದಲ್ಲಿ ಸಿದ್ದಪಡಿಸಬೇಕು.

ತಂತ್ರಾಂಶ ವ್ಯವಸ್ಥೆಯ ಮೂಲಕ ಅರ್ಜಿದಾರರಿಗೆ ಕನ್ನಡದಲ್ಲಿ ಸಂದೇಶ (ಎಸ್ಎಂಎಸ್) ಹಾಗೂ ಇಮೇಲ್ ಕಳುಹಿಸುವುದು.

ರಾಜ್ಯದ ನಗರ ಪಟ್ಟಣಗಳ ಹೆಸರುಗಳನ್ನು ಕನ್ನಡದಲ್ಲಿಯೇ ಬರೆಯುವುದು. ಮೈಲುಗಲ್ಲುಗಳ ಮೇಲೆ ಕನ್ನಡ ಅಂಕಿ ಬಳಸುವುದು. ಎಲ್ಲ ಇಲಾಖೆಗಳ ಜಾಲತಾಣಗಳ ಪ್ರಧಾನ ಮತ್ತು ಒಳ ಪುಟಗಳು, ಸಾಮಾಜಿಕ ಜಾಲತಾಣದಲ್ಲೂ ಕನ್ನಡ ಕಡ್ಡಾಯ ಬಳಕೆ ಮಾಡುವುದು.

ಇಲಾಖೆ, ಸಚಿವ ಸಂಪುಟದ ಟಿಪ್ಪಣಿಗಳು, ಕಾಯ್ದೆ ಕಾನೂನುಗಳ ಆದೇಶಗಳನ್ನು ಕನ್ನಡದಲ್ಲಿ ಬಳಕೆ ಮಾಡುವುದು. ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಮೇಲೆ ಕನ್ನಡ ಬಳಸಲು ಒತ್ತಾಯಿಸಿಸುವುದು.

ನಿಗಮ ಮಂಡಳಿಗಳು, ಸರ್ಕಾರದಿಂದ ಅನುದಾನ ಪಡೆಯುವ ಸಂಘ ಸಂಸ್ಥೆಗಳು ವಾರ್ಷಿಕ ವರದಿ, ದಾಖಲೆಗಳನ್ನು ಕನ್ನಡದಲ್ಲಿ ಸಲ್ಲಿಸುವುದು.

ರಾಜ್ಯ ಸರ್ಕಾರ ‌ನೇಮಕ ಮಾಡಿಕೊಳ್ಳುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಕಡ್ಡಾಯವಾಗಿ ಕನ್ನಡಿಗರನ್ನೇ ಒದಗಿಸುವಂತೆ ಮಾನ ಸಂಪನ್ಮೂಲ ಸೇವೆ ಒದಗಿಸುವ ಸಂಸ್ಥೆಗಳಿಗೆ ಷರತ್ತು ವಿಧಿಸುವುದು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನರ್ಸಿಂಗ್ ಹೋಂಗಳು ನಾಗರಿಕರಿಗೆ ಕನ್ನಡದಲ್ಲಿಯೇ ಮಾಹಿತಿ ನೀಡಬೇಕು ಎಂದು ಸುತ್ತೋಲೆಯಲ್ಲಿ ಟಿ.ಎಂ.ಭಾಸ್ಕರ್ ತಿಳಿಸಿದ್ದಾರೆ.

ಖದೀಮರ ಕೈಚಳಕ: ಕೀಲಿ ಮುರಿದು ನಗದು, ಚಿನ್ನಾಭರಣ ಕಳ್ಳತನ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಶಹರದ ಹುಬ್ಬಳ್ಳಿ ರಸ್ತೆ ಗಣೇಶ ಕಾಲೋನಿಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಎಂಬುವವರ ಮನೆಯ ಬಾಗಿಲದ ಕೀಲಿ ಮುರಿದ ಕಳ್ಳರು, ಮನೆಯಲ್ಲಿದ್ದ ಬಂಗಾರ ಮತ್ತು ಬೆಳ್ಳಿ ಆಭರಣ, ನಗದು ದೋಚಿಕೊಂಡು ಹೋಗಿದ್ದಾರೆ.

ಯಾವುದೋ ವಸ್ತುವಿನಿಂದ ಕೀಲಿ ಮೀಟಿ ತೆಗೆದು ಮನೆಯೊಳಗೆ ನುಗ್ಗಿದ್ದಾರೆ. ಅಲ್ಲದೇ, ಮನೆಯ ಬೆಡ್ ರೂಮ್ ನ ಟ್ರೇಜುರಿಯಲ್ಲಿದ್ದ 1,77,000 ರೂ. ಮೌಲ್ಯದ 38 ಗ್ರಾಂ ಚಿನ್ನ ಮತ್ತು 600 ಗ್ರಾಂ ಬೆಳ್ಳಿ ಸಾಮಾನುಗಳು, 60 ಸಾವಿರ ನಗದು‌ ಸೇರಿ ಒಟ್ಟು 2,37,000 ರೂ.ದಷ್ಟು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಗಿರಿಜಾ ಜಕ್ಕಲಿ ತನಿಖೆ ಕೈಗೊಂಡಿದ್ದಾರೆ.

ನಾಳೆಯಿಂದ ಏಕತಾ ಕಪ್ ಕ್ರಿಕೆಟ್ ಟೂರ್ನಮೆಂಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಕೋವಿಡ್-19 ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಏಕತಾ ಕಪ್ ಕ್ರಿಕೆಟ್ ಟೂರ್ನಮೆಂಟ್ ನಾಳೆಯಿಂದ ಎರಡು ದಿನಗಳ ಕಾಲ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪ್ರತಿ ವರ್ಷದಂತೆ ಈ ಸಲವೂ ಸಹ ನಗರದ ಕರ್ನಾಟಕ ವಾರಿಯರ್ಸ್‌ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದ್ದು, ಕ್ಲಬ್‌ನ ಸದಸ್ಯರ ಆರು ತಂಡಗಳು ಇದರಲ್ಲಿ ಭಾಗವಹಿಸಲಿವೆ. ಎರಡು ದಿನಗಳ ಕಾಲ ಏಳು ಪಂದ್ಯಗಳು ನಡೆಯಲಿದ್ದು ನವೆಂಬರ್ 28ರ ಬೆಳಗ್ಗೆ 7-30ಕ್ಕೆ ಟೂರ್ನಮೆಂಟ್‌ನ ಮೊದಲ ಪಂದ್ಯ ನಡೆಯಲಿದೆ.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಉದ್ಘಾಟಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಟೂರ್ನಮೆಂಟ್‌ಗೆ ಚಾಲನೆ‌ ನೀಡುವರು. ಕೊಪ್ಪಳ ಗ್ರಾಮೀಣ ಸಿಪಿಐ ವಿಶ್ವನಾಥ್ ಹಿರೇಗೌಡರ್, ನಗರ ಸಿಪಿಐ ಮಾರುತಿ, ಡಿಸಿಐಬಿಯ ಪಿಐ ರವಿ ವಕ್ಕುಂದ, ಸಂಚಾರ ಠಾಣೆಯ ಪಿಎಸ್ಐ ಅಮರೇಶ್ ಹುಬ್ಬಳ್ಳಿ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸುವರು. ಹಿರಿಯ ಪತ್ರಕರ್ತ ಬಸವರಾಜ ಕರುಗಲ್ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಕ್ಲಬ್‌ನ ಅಧ್ಯಕ್ಷ ವಿನೋದ್ ಚಿನ್ನಿನಾಯ್ಕರ್ ಮತ್ತು ಹಿರಿಯ ಮುಖಂಡ ಗಿರೀಶ್ ಮುಂಡದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶುಗರ್ ಫ್ಯಾಕ್ಟರಿಯ ಸೆಕ್ಯೂರಿಟಿ ಗಾರ್ಡ್ ಕೊಲೆ ಪ್ರಕರಣ ಬೇದಿಸಿದ ಮುಂಡರಗಿ ಪೊಲೀಸರು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆಂದು ಶಂಕಿಸಿ ವ್ಯಕ್ತಿಯೋರ್ವನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿಯನ್ನು ಮುಂಡರಗಿ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ತಿಳಿಸಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿ ರಂಗಪ್ಪ ಅಲಿಯಾಸ ರಂಗಸ್ವಾಮಿ ಮುಂಡರಗಿ ತಾಲ್ಲೂಕಿನ ಶಿರನಹಳ್ಳಿ ಗ್ರಾಮದವನಾಗಿದ್ದು, ಗೌಂಡಿ ಕೆಲಸ ಮಾಡುತ್ತಾನೆ. ಆರೋಪಿ ರಂಗಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದಾಗಿ ಶಂಕಿಸಿ, ಫಕ್ಕೀರಪ್ಪನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ, ಕೊಲೆಯಾದ ವ್ಯಕ್ತಿ ಫಕ್ಕೀರಪ್ಪ ಆರೋಪಿ ರಂಗಸ್ವಾಮಿಗೆ ದೂರದ ಸಂಬಂಧಿಯಾಗಿದ್ದು, ಚಿಕ್ಕಪ್ಪನಾಗಬೇಕು ಎಂದು ತಿಳಿಸಿದರು.

ಕೊಲೆಯಾದ ಫಕ್ಕೀರಪ್ಪ ತಳವಾರ ಶಿಂಗಟಾಲೂರು ಗ್ರಾಮದವನಾಗಿದ್ದು, ಗಂಗಾಪೂರ ಶುಗರ್ ಪ್ಯಾಕ್ಟರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ನ.೧೨ ರಂದು ರಾತ್ರಿ ಪ್ಯಾಕ್ಟರಿಯ ಗೊಬ್ಬರ ತಯಾರಿಸುವ ಬ್ಯಾಕರ್‌ನಲ್ಲಿ ಮಲಗಿಕೊಂಡಿದ್ದಾಗ ಆರೋಪಿ ರಂಗಪ್ಪ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಈ ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೊಲೆ ಆರೋಪಿ ರಂಗಪ್ಪ ಪೂಜಾರ

ಗಂಗಾಪೂರ ಶುಗರ್ ಫ್ಯಾಕ್ಟರಿಯ ಸೆಕ್ಯೂರಿಟಿ ಗಾರ್ಡ್‌ನ ಕೊಲೆ ಪ್ರಕರಣ ಬೇಧಿಸಲು ಎಸ್ಪಿ ಯತೀಶ್ ಎನ್., ಡಿಎಸ್‌ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುಧೀರಕುಮಾರ ಬೆಂಕಿ, ಸಿಬ್ಬಂದಿಗಳಾದ ಜೆ.ಐ.ಬಚ್ಚೇರಿ, ನೀಲಕಂಠ ಭಂಗಿ, ಕೊಟೇಶ ಒಡೆಯರ, ಜಿ.ಎನ್.ಮಜ್ಜಗಿ, ಮಂಜು ಮಾದರ, ಶರಣಪ್ಪ ನಾಗೇಂದ್ರಗಡ, ಗದಗ ಡಿಪಿಒದಲ್ಲಿರುವ ಗುರುರಾಜ ಬೂದಿಹಾಳ, ಆನಂದಸಿಂಗ್ ದೊಡ್ಡಮನಿ ಅವರನ್ನೊಳಗೊಂಡ ತಂಡವು ಶ್ರಮಿಸಿತ್ತು. ಈ ತಂಡಕ್ಕೆ ಎಸ್‌ಪಿ ಯತೀಶ್ ಎನ್. ಅವರು ಅಭಿನಂದಿಸಿ ಪ್ರಶಂಸನಾ ಪತ್ರ ನೀಡಿದರು.

ರಾಜ್ಯದಲ್ಲಿ ನಿವಾರ್ ಅಬ್ಬರ ; ಯೆಲ್ಲೋ ಅಲರ್ಟ್ ಘೋಷಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ನಿನ್ನೆ ತಡರಾತ್ರಿ ನಿವಾರ್ ಚಂಡಮಾರುತ ಅಪ್ಪಳಿಸಿದೆ. ಇದರ ಪರಿಣಾಮವಾಗಿ ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾದ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಾಗಾಗಿ ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರು ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಿವಾರ್ ಚಂಡಮಾರುತದ ಎಫೆಕ್ಟ್ ನಿಂದಾಗಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಹವಾಮಾನ ಇಲಾಖೆ ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ತುಮಕೂರು ಹಾಗೂ ರಾಮನಗರ ಸೇರಿದಂತೆ 7 ಜಿಲ್ಲೆಗಳಲ್ಲಿಂದು ಹಳದಿ ಅಲರ್ಟ್ ಘೋಷಿಸಿದೆ.

ನಿನ್ನೆಯಿಂದ ತಮಿಳುನಾಡು, ಪುದುಚೇರಿಯಲ್ಲಿ ನಿವಾರ್ ಚಂಡಮಾರುತ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಹಾಗಾಗಿ ನೆರೆಯ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ ರಾಜ್ಯಗಳ ಮೇಲೂ ನಿವಾರ್ ಪ್ರಭಾವ ಬೀರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ, ರಣಭೀಕರ ನಿವಾರ್ ಚಂಡಮಾರುತದಿಂದಾಗಿ ಚೆನ್ನೈಗೆ ತೆರಳುವ ಹಲವು ಬಸ್ , ವಿಮಾನಗಳ ಸಂಚಾರ ನಿಲ್ಲಿಸಲಾಗಿದೆ. ಸರ್ಕಾರಿ ರಜೆ ಘೋಷಿಸಲಾಗಿದ್ದು, ತಮಿಳುನಾಡು ಮತ್ತು ಪುದಿಚೇರಿಯಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಇಬ್ಬರು ಸರಗಳ್ಳರ ಬಂಧನ: ಸಂಜಯ್, ಮಹ್ಮದ್ ರಫೀಕ್ ಬಂಧಿತರು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಮಹಿಳೆಯೋರ್ವರ ಕತ್ತಿನಲ್ಲಿದ್ದ 98,000 ರೂ. ಬೆಲೆ ಬಾಳುವ ನಾಲ್ಕು ತೊಲಿ ಬಂಗಾರದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಖದೀಮರನ್ನು ಕೊನೆಗೂ ಗದಗ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಗದಗನ ಗಂಗಾಪೂರಪೇಟೆಯ ಸಂಜಯ್ ಕೊಪ್ಪದ, ನವಲಗುಂದದ ಮಹ್ಮದರಫೀಕ್ ಹುನಗುಂದ ಬಂಧಿತರಾಗಿದ್ದಾರೆ. ಬಂಧಿತ ಆರೋಪಿಗಳು ಬುಧವಾರ(ನ.25) ಗದಗ-ಕಳಸಾಪುರ ರಿಂಗ್ ರೋಡ್ ಹತ್ತಿರ ರಿಜಿಸ್ಟ್ರೇಶನ್ ನಂಬರ್ ಇಲ್ಲದ ಮೋಟಾರ್ ಸೈಕಲ್ ಮೇಲೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವೇಳೆ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾರೆ. ಇಬ್ಬರು ಜೊತೆಗೂಡಿ ಸರ ಕಿತ್ತುಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಎರಡು ತಿಂಗಳ ಹಿಂದೆ ನವಲಗುಂದದಲ್ಲಿ ಬೈಕ್ ಕಳ್ಳತನ ಮಾಡಿರುವುದಾಗಿ ಮಹ್ಮದರಫೀಕ ಒಪ್ಪಿಕೊಂಡಿದ್ದಾನೆ. ಆರೋಪಿತರಿಂದ 98,000 ಮೌಲ್ಯದ 40 ಗ್ರಾಂ. ತೂಕದ ಮಾಂಗಲ್ಯ ಸರ ಹಾಗೂ 20,000 ರೂ. ಕಿಮ್ಮತ್ತಿನ ಬೈಕ್ ಜಪ್ತಿ ಮಾಡಿದ್ದಾರೆ.

ಘಟನೆ ವಿವರ

ನಗರದ ಸರ್ವೋದಯ ಕಾಲೋನಿಯಲ್ಲಿ 2020 ಫೆಬ್ರುವರಿ 2 ರಂದು ಸಂಜೆ ಉಮಾದೇವಿ ನಲವಡಿ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸರಗಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಬೇಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹಾಗೂ ಪೊಲೀಸ್ ಉಪಾಧೀಕ್ಷಕ ಪ್ರಲ್ಹಾದ ಎಸ್.ಕೆ. ಅವರ ಮಾರ್ಗದರ್ಶನದಲ್ಲಿ ಸಿಪಿಐ ಪಿ.ವ್ಹಿ.ಸಾಲಿಮಠ, ಪಿಎಸ್ಐ ಜಿ.ಟಿ.ಜಕ್ಕಲಿ, ಸಿಬ್ಬಂದಿಗಳಾದ ಬಿ.ಜಿ.ಹೊರಕೇರಿ, ವ್ಹಿ.ಎಸ್.ಶಟ್ಟೆಣ್ಣವರ, ಎಸ್.ಎ.ಗುಡ್ಡಿಮಠ, ಎಚ್.ಐ.ಯಡಿಯಾಪುರ ಹಾಗೂ ಪಿ.ಎಸ್.ಕಲ್ಲೂರ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ಆರೋಪಿತರನ್ನು ಪತ್ತೆ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಎಸ್ಪಿ ಯತೀಶ್ ಎನ್. ಶ್ಲಾಘಿಸಿದ್ದಾರೆ.

ಕಾರ್ಮಿಕರ ಕಿಟ್ ಕೆವಿಕೆಗೆ ಶಿಪ್ಟ್: ಕಾರ್ಮಿಕ ಇಲಾಖೆಯ ಅಧಿಕಾರಿಗಳ ಎಡವಟ್ಟು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ಬಡ ಕಾರ್ಮಿಕರಿಗೆ ವಿತರಿಸಲು ರಾಜ್ಯ ಸರ್ಕಾರ ಪೂರೈಸಿರುವ ಸುಮಾರು ಮೂರು ಸಾವಿರ ಆಹಾರದ ಕಿಟ್‌ಗಳನ್ನು ಜಿಲ್ಲಾಕೇಂದ್ರದ ಸರ್ಕಾರಿ ಕಟ್ಟಡಗಳನ್ನು ಬಿಟ್ಟು, ಶಾಸಕರ ಪ್ರಭಾವಕ್ಕೊಳಗಾಗಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹುಲಕೋಟಿಯ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರಕ್ಕೆ (ಕೆವಿಕೆ) ಸಾಗಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಗಂಭೀರವಾಗಿ ಆರೋಪಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಅವರಿಗೆ ಮನವಿ ಸಲ್ಲಿಸಿರುವ ಅವರು, ಕೋವಿಡ್-೧೯ ಹಿನ್ನೆಲೆಯಲ್ಲಿ ಬಡ ಕಾರ್ಮಿಕರ ಅನುಕೂಲಕ್ಕಾಗಿ ಸರ್ಕಾರ ಆಹಾರದ ಕಿಟ್‌ಗಳನ್ನು ಪೂರೈಸಿದೆ. ಅರ್ಹರನ್ನು ಗುರುತಿಸಿ ಕಿಟ್‌ಗಳನ್ನು ವಿತರಿಸಬೇಕಿದ್ದ ಕಾರ್ಮಿಕ ಇಲಾಖೆ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಷಡ್ಯಂತ್ರಕ್ಕೆ ಒಳಗಾಗಿ ಕಾನೂನು ಬಾಹಿರವಾಗಿ  ಕೆವಿಕೆಗೆ ಸಾಗಿಸಿದ್ದಾರೆ.

ಆಹಾರದ ಕಿಟ್‌ಗಳನ್ನು ತಕ್ಷಣವೇ ಗದಗನ ಯಾವುದಾದರೂ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಕೂಡಲೇ ಜಿಲ್ಲಾ ಕಾರ್ಮಿಕ ಕಲ್ಯಾಣಾಧಿಕಾರಿ ಸುಧಾ ಗರಗ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸುಮಾರು ಮೂರು ದಿನಗಳ ಹಿಂದೆ ಕಾರ್ಮಿಕರಿಗೆ ವಿತರಿಸಲು ರಾಜ್ಯ ಸರ್ಕಾರ ಮೂರು ಸಾವಿರ ಆಹಾರದ ಕಿಟ್‌ಗಳನ್ನು ಬೆಂಗಳೂರಿನಿಂದ ಕಳುಹಿಸಿ ಕೊಟ್ಟಿತ್ತು. ಆದರೆ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಗದಗ ನಗರದಲ್ಲಿರುವ ಬೃಹತ್ ಸರ್ಕಾರಿ ಕಟ್ಟಡಗಳನ್ನು ಬಿಟ್ಟು, ಹುಲಕೋಟಿಯ ಕೆವಿಕೆಯಲ್ಲಿಯೇ ಇಳಿಸಿದ್ದು ಯಾಕೆ? ಅಲ್ಲದೇ, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿಲ್ಲ. ಸದ್ಯ ಹುಲಕೋಟಿಯಲ್ಲಿರುವ ಆಹಾರದ ಕಿಟ್‌ಗಳನ್ನು ಮತ್ತೊಮ್ಮೆ ಜಿಲ್ಲಾಕೇಂದ್ರಕ್ಕೆ ಹೊತ್ತು ತರುತ್ತಾರೆಯೇ? ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾದ ಕಾಂತಿಲಾಲ್ ಬನ್ಸಾಲಿ, ನಗರಸಭೆ ಮಾಜಿ ಸದಸ್ಯರಾದ ರಾಘವೇಂದ್ರ ಯಳವತ್ತಿ, ಅನಿಲ್ ಅಬ್ಬಿಗೇರಿ, ಶಿವಲಿಂಗ ಶಾಸ್ತ್ರಿ, ಗಂಗಾಧರ ಮೇಲಗಿರಿ, ಬಾಬು ಯಲಿಗಾರ, ವಿಲ್ಸನ್ ಕಂಬಳಿ, ಕೆ.ಪಿ.ಕೋಟಿಗೌಡ್ರ, ರಮೇಶ್ ಸಜ್ಜಗಾರ, ಮಂಜುನಾಥ ತಳವಾರ, ಚಂದ್ರಕಾಂತ ವರ್ಣೇಕರ, ಸಾದಿಕ್ ಮನಿಯಾರ್, ದ್ಯಾಮಣ್ಣ ನೀಲಗುಂದ, ರಾಚಯ್ಯ ಹೊಸಮಠ, ಬಸವರಾಜ ಮೆಣಸಿನಕಾಯಿ, ಆನಂದ ಗುರುಸ್ವಾಮಿ, ಶರಣಪ್ಪ ಕಮಡೊಳ್ಳಿ, ಮೋಹನ ಮಾಳಗಿಮನಿ, ವಿಜಯಲಕ್ಷ್ಮಿ ಮಾನ್ವಿ, ಪುಷ್ಪಾ ಪೂಜಾರ, ಅಶ್ವಿನಿ ಜಾಗತಾಪ, ವಂದನಾ ವರ್ಣೇಕರ, ರತ್ನಾ ಕುರಗೋಡು, ಗೀತಾ ಮಾಳಗಿಮನಿ ಸೇರಿದಂತೆ ಅನೇಕರು ಇದ್ದರು.

ಮತದಾರರ ಪಟ್ಟಿ ಪಾರದರ್ಶಕವಾಗಿರಲಿ

ಕಾಂಗ್ರೆಸ್ ಪಕ್ಷದ ಷಡ್ಯಂತ್ರದಿಂದ ಗದಗ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿಗೆ ಬರುವ ಮತದಾರರನ್ನು ಕಿತ್ತು ಹಾಕಲಾಗುತ್ತಿದೆ. ಅಧಿಕಾರಿಗಳು ಮತದಾರರ ಮನೆಗಳಿಗೆ ಹೋಗದೇ, ಮತದಾರರು ವಿಳಾಸದಲ್ಲಿಲ್ಲ ಎಂಬ ಸುಳ್ಳು ಮಾಹಿತಿ ದಾಖಲಿಸಿ, ಮತದಾರರ ಪಟ್ಟಿಯಿಂದ ಕೈಬಿಡುತ್ತಿದ್ದು ಈ ಮೂಲಕ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಈ ಬಾರಿಯೂ ಮತದಾರರ ಪಟ್ಟಿ ತಯಾರಿಕೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ಮತದಾರರನ್ನು ಕೈಬಿಡುವ ಹುನ್ನಾರ ನಡೆಯುತ್ತಿದ್ದು,  ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಜಿಲ್ಲಾಡಳಿತ ಸಿದ್ಧಗೊಳಿಸಬೇಕು

ಅನಿಲ ಮೆಣಸಿನಕಾಯಿ, ಬಿಜೆಪಿ ಮುಖಂಡ

ಶಾರ್ಟ್ ಸರ್ಕ್ಯೂಟ್‌, ಕೋಟ್ಯಂತರ ರೂ, ಹಾನಿ: ಮಗಳ ಮದುವಗೆಂದು ಕೂಡಿಟ್ಟಿದ್ದ ಹಣ ಭಸ್ಮ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ

‘ಬುಧವಾರ ಮಧ್ಯಾಹ್ನ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಒಂದೇ ಕುಟುಂಬದ ಮೂವರು ಸಹೋದರರ ಮನೆಗಳು, ಕೋಟ್ಯಂತರ ರೂ, ಮೌಲ್ಯದ ಚಿನ್ನಾಭರಣ, ನಗದು ಸೇರಿದಂತೆ ಅಪಾರ ಪ್ರಮಾಣದ ದವಸ ಧಾನ್ಯಗಳು ಭಸ್ಮವಾದ ಘಟನೆ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪಕ್ಕೀರಗೌಡ್ರ ಮನೆತನದ ಶಿವನಗೌಡ, ಚನ್ನಪ್ಪಗೌಡ, ಫಕ್ಕೀರಗೌಡ ಎಂಬುವವರಿಗೆ ಸೇರಿದ ತೇಗಿನ ಮನೆಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಶಿವನಗೌಡ ಅವರು, ತಮ್ಮ ಮಗಳ ಮದುವೆಗೆಂದು ಕೂಡಿಟ್ಟಿದ್ದ ೨ ಲಕ್ಷ ೪೦ ಸಾವಿರ ರೂ. ನಗದು, ಮೂರುವರೆ ತೊಲಿ ಬಂಗಾರ, ೫ ತೊಲಿ ಬೆಳ್ಳಿ ಹಾಗೂ ಹೆಸರು, ಜೋಳ, ಗೋಧಿ ಸೇರಿದಂತೆ ದಿನ ಬಳಕೆಯ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಅಲ್ಲದೇ, ಇದೇ ಕಾರ್ತಿಕ ಮಾಸದಲ್ಲಿ ಮಗಳ ಮದುವೆ ಮಾಡುವ ಬಗ್ಗೆ ಯೋಚಿಸಿದ್ದರು. ಬರುವ ಭಾನುವಾರವಷ್ಟೇ ಬೆಳಗಾವಿ ಜಿಲ್ಲೆಯ ಉಗರಖೋಡದ ಸಂಬಂಧಿಕರು ವಿವಾಹದ ದಿನ ನಿಶ್ಚಯಿಸಲು ಬರುವವರಿದ್ದರು, ಅಷ್ಟರಲ್ಲೇ ಇಂತಹ ದುರ್ಘಟನೆ ಸಂಭವಿಸಿದೆ.

ಮಗಳ ಮದುವೆ ತಯಾರಿ ಕುರಿತು ಮನೆಯ ಹಿತ್ತಲಿನಲ್ಲಿ ಫಕೀರಗೌಡ ಅವರೊಂದಿಗೆ ಶಿವನಗೌಡ ಚರ್ಚಿಸುತ್ತಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡು ಅಂದಾಜು ೩೦ ಲಕ್ಷ ರೂಪಾಯಿ ಮೌಲ್ಯದ ಮೂರು ಮನೆಗಳು ಸೇರಿದಂತೆ ಒಟ್ಟು ಒಂದು ಕೋಟಿ ರೂ,ಗಳಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು, ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಲ್ಲಿರುವ ದೇವರ ಹುಂಡಿಗೆ ಪ್ರತಿನಿತ್ಯ ಪೂಜೆ, ಪುನಸ್ಕಾರ ಮುಗಿದ ಮೇಲೆ ಹುಂಡಿಗೆ ಹಾಕಿದ್ದ ಹಣ, ಹುಂಡಿ ಸೇರಿದಂತೆ ಅಂದಾಜು ೧೧ ಲಕ್ಷ ರೂ.ಗೂ ಹೆಚ್ಚು ಮೊತ್ತದ ಪಾಲಿಸಿ ದಾಖಲೆಗಳು, ಬೆಲೆಬಾಳುವ ಪೀಠೋಪಕರಣಗಳು ಸುಟ್ಟಿದ್ದು, ದಿಕ್ಕು ತೋಚದಂತಾಗಿದೆ.

ಶಿವನಗೌಡ, ಮನೆ ಮಾಲೀಕ

ಅಧಿಕಾರತೇರ ನಿರ್ದೇಶಕರಾಗಿ ಶರಣ್ ಪಾಟೀಲ ನೇಮಕ

0

ವಿಜಯಸಾಕ್ಷಿ ಸುದ್ದಿ, ನರಗುಂದ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಅಧಿಕಾರೇತರ ನಿರ್ದೇಶಕರಾಗಿ ತಾಲೂಕಿನ ಬೆನಕನಕೊಪ್ಪದ ಶರಣ್ ಪಾಟೀಲ ನೇಮಕವಾಗಿದ್ದಾರೆ.

ಸರಕಾರದ ಆದೀ‌ನ ಕಾರ್ಯದರ್ಶಿ ಸಾರಿಗೆ ಇಲಾಖೆ, ಶರಣ್ ಪಾಟೀಲ ಅವರನ್ನು ನೇಮಿಸಿ‌ ಆದೇಶ ಹೊರಡಿಸಿದೆ.

ಅಭಿನಂದನೆ: ಶರಣ್ ಪಾಟೀಲ ಅವರ ನೇಮಕಕ್ಕೆ ಯುವ ಮುಖಂಡ, ಕರ್ನಾಟಕ ‌ನವನಿರ್ಮಾಣಸೇನೆಯ ತಾಲೂಕು ಅಧ್ಯಕ್ಷ ಮುತ್ತು ರಾಯರೆಡ್ಡಿ ಅಭಿನಂದಿಸಿದ್ದಾರೆ.

ಮೊದಲು ನಾವು, ನಂತರ ಅವರು; ರೇಣುಕಾಚಾರ್ಯ, ಎಂಪಿಆರ್ ಹೇಳಿಕೆಗೆ ಎಂಟಿಬಿ ತಿರುಗೇಟು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,
ಬೆಂಗಳೂರು: ಬಿಜೆಪಿ 17 ಜನರಿಂದಲಷ್ಟೇ ಅಧಿಕಾರಕ್ಕೆ ಬಂದಿದೆಂಬುವುದು ಸುಳ್ಳು. ನಾವು 105 ಜನ ಶಾಸಕರು ಇರದಿದ್ದರೆ ಸರ್ಕಾರ ಹೇಗೆ ರಚನೆಯಾಗುತ್ತಿತ್ತು? ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ನಾವು ಗೆದ್ದಿದ್ದೇವೆ. ಹೀಗಾಗಿ ಮೊದಲಿಗೆ 105 ಶಾಸಕರು, ನಂತರ ಉಳಿದವರು.

ಪಕ್ಷದವರಿಗೆ ಆದ್ಯತೆ ನೀಡಬೇಕು ಎಂದು ಹೇಳುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪಿಸಲು ಕಾರಣಿಕರ್ತರು ಯಾರು ಎಂಬ ಚರ್ಚೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿಧಾನಸೌಧದಲ್ಲಿಂದು ನಾಂದಿ ಹಾಡಿದ್ದಾರೆ.

ಇದಕ್ಕೆ ಪ್ರತ್ತ್ಯುತ್ತರವಾಗಿ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ 105 ಜನ ಶಾಸಕರಿದ್ದಾಗ ಸರ್ಕಾರ ರಚಿಸಲಿಲ್ಲ ಯಾಕೆ ಎಂದು ತಿರುಗೇಟು ನೀಡಿದ್ದಾರೆ.

ರೇಣುಕಾಚಾರ್ಯ ಹೇಳಿದ್ದಿಷ್ಟು;

ಯಾರೋ ಒಬ್ಬರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ. 17 ಜನರೊಂದಿಗೆ 105 ಜನರು ಇದ್ದಿದ್ದರಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿದ್ದು. 17 ಜನರ ಬಗ್ಗೆ ಗೌರವವಿದ್ದು, ಅವರಿಗೆ ಯೋಗ್ಯವಾದ ಸ್ಥಾನಮಾನ ನೀಡಿದೆ. ಅವರು ಕಾಂಗ್ರೆಸ್ ಜೆಡಿಎಸ್ ಪಕ್ಷದಿಂದ ಬೇಸತ್ತು ಬಿಜೆಪಿಗೆ ಬಂದಿದ್ದಾರೆ. ನನ್ನಿಂದಲೇ ಸರ್ಕಾರ ರಚನೆಯಾಗಿದೆ ಎಂದು ಹೇಳುವವರು ಅರ್ಥ ಮಾಡಿಕೊಳ್ಳಬೇಕು ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಎಂಟಿಬಿ ನಾಗರಾಜ್ ಹೇಳಿದ್ದಿಷ್ಟು

ಪಕ್ಷದಲ್ಲಿ 105 ಶಾಸಕರಿದ್ದಾಗ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲವ್ಯಾಕೆ. 17 ಜನರು ಬಂದಿರುವುದರಿಂದಲೇ ಸರ್ಕಾರ ಸ್ಥಾಪಿತವಾಗಿರುವುದನ್ನು ಮರೆಯಬಾರದು. ನಮ್ಮ ಹಿಂದಿನ ಪಕ್ಷಗಳಿಗೆ ರಾಜೀನಾಮೆ ನೀಡಿ, ಬಿಜಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿದ್ದೇವೆ. ಹಾಗಾಗಿ ಈಗ ನಾವೆಲ್ಲರೂ ಬಿಜೆಪಿಯವರೇ ಎಂದಿದ್ದಾರೆ.

ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಮೂಲ ಹಾಗೂ ವಲಸಿಗ ಬಿಜೆಪಿಗರ ಮಧ್ಯೆ ಬೂದಿ ಮುಚ್ಚಿದ ಕೆಂಡದಂತಿರುವ ಮುನಿಸು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಹೇಳಿಕೆಯಿಂದಾಗಿ ಮತ್ತೊಮ್ಮೆ ಸ್ಪೋಟಗೊಂಡಂತಾಗಿದೆ.

error: Content is protected !!