Home Blog Page 3030

ಸತ್ತಾಗ ನೋಡಲು ಯಾರು ಬರುತ್ತಾರೆ? ಮನೆಯಲ್ಲಿ ಏನೇನು ನಡೆಯುತ್ತದೆ ಎಂದು ನೋಡಲು ಸತ್ತಂತೆ ನಟಿಸಿದ ಮಹಿಳೆ

ವಿಜಯಸಾಕ್ಷಿ ಸುದ್ದಿ, ಚಿಲಿ

ನಾವು ಸತ್ತ ಮೇಲೆ ನಮಗೆ ಹೆಗಲು ಯಾರು ನೀಡುತ್ತಾರೆಯೋ ಅಷ್ಟೇ ನಾವು ಗಳಿಸಿದ್ದು ಎಂಬ ಮಾತು ಪ್ರತೀತಿಯಲ್ಲಿದೆ. ಇದೇ ಯೋಚನೆ ಮಾಡಿದ್ದ ಮಹಿಳೆಯೊಬ್ಬರು, ತಾನು ಗಳಿಸಿದ್ದ ಜನರು ಯಾರು ಎಂದು ಗುರುತಿಸುವುದಕ್ಕಾಗಿ ಹಾಗೂ ತಾನು ಸತ್ತಾಗ ಯಾರು ಬರುತ್ತಾರೆ. ಪರಿಸ್ಥಿತಿ ಹೇಗಿರುತ್ತದೆ? ಎಂದು ತಿಳಿದುಕೊಳ್ಳಲು ಮಹಿಳೆ ತಾನು ಸತ್ತಂತೆ ನಟಿಸಿದ್ದಾರೆ.

ಈ ಘಟನೆ ಚಿಲಿಯಲ್ಲಿ ನಡೆದಿದೆ. ಮಯಾರಾ ಅಲೋಂಜಾ ಎಂಬ ಮಹಿಳೆಯೇ ಸತ್ತಂತೆ ನಟಿಸಿದ ಮಹಿಳೆ. ತನ್ನ ಸಾವಿನ ಸುದ್ದಿಯನ್ನು ಹೇಗೋ ತನ್ನ ಎಲ್ಲಾ ಬಂಧುಗಳಿಗೆ ತಲುಪಿಸುತ್ತಾರೆ. ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರೂ ಅಲೋಂಜಾ ನಿವಾಸಕ್ಕೆ ಆಗಮಿಸಿಯೇ ಬಿಟ್ಟಿದ್ದಾರೆ.
ಸುಮಾರು 4 ಗಂಟೆಗಳ ಕಾಲ ಈ ಮಹಿಳೆ ಸತ್ತಂತೆ ಶವಪೆಟ್ಟಿಗೆಯಲ್ಲಿ ಮಲಗಿಕೊಂಡಿದ್ದಾಳೆ. ತನ್ನ ಇಚ್ಛೆಯಂತೆ ಬಹಳಷ್ಟು ಜನ ಸೇರಿದ್ದಾರೆ ಎಂದು ಖಾತ್ರಿಯಾಗುತ್ತಿದ್ದಂತೆ, ಶವಪೆಟ್ಟಿಗೆಯಿಂದ ಎದ್ದಿದ್ದಾರೆ. ಈ ಕೊರೊನಾ ಕಾಲದಲ್ಲಿ ಮೃತದೇಹಕ್ಕೆ ಹೆಗಲು ಕೊಡಲು 4 ಜನ ಸಿಗುತ್ತಿಲ್ಲ. ಹಾಗಾಗಿ ತಾನು ಸತ್ತರೆ ಯಾರೆಲ್ಲಾ ಬರುತ್ತಾರೆ ಎನ್ನುವುದನ್ನು ನೋಡಬೇಕಿತ್ತು. ಹಾಗಾಗಿ ಈ ರೀತಿಯಲ್ಲಿ ಸತ್ತಂತೆ ನಟಿಸಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ಈ ವೇಳೆ ಪ್ರೋಪೇಶನಲ್ ಫೋಟೋಗ್ರಾಫರ್ ನನ್ನು ಕರೆಸಿ, ಮನೆಗೆ ಬಂದಿದ್ದ ಎಲ್ಲಾ ನೆಂಟರಿಷ್ಟ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ನಾಟಕ ಮುಗಿದ ನಂತರ ಮಹಿಳೆ ಎಲ್ಲರ ಜೊತೆ ಸೇರಿ ಪಾರ್ಟಿ ಮಾಡಿದ್ದಾರೆ ಒಟ್ಟಾರೆ ಈ ಸಾವಿನ ನಾಟಕಕ್ಕೆ ಒಂದು ಲಕ್ಷಕ್ಕಿಂತ ಅಧಿಕ ಹಣ ಖರ್ಚು ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮಹಾಮಾರಿಯ ಅಟ್ಟಹಾಸದೊಂದಿಗೆ ವರುಣನ ಆರ್ಭಟವೂ ಹೆಚ್ಚಾಗುತ್ತಿದೆ. ತೌಕ್ತೆ ಚಂಡಮಾರುತದ ಹಿನ್ನಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಹೀಗಾಗಿ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಮಳೆ ಹೆಚ್ಚಾಗಿ ಸುರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗಗಳ ಜನರು ಎರಡು ದಿನಗಳ ಕಾಲ ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅರಬ್ಬಿ ಸಮುದ್ರದಲ್ಲಿ ಎದ್ದಿರುವ ತೌಕ್ತೆ ಚಂಡಮಾರುತ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಠಿಸಿದೆ. ಈಗಾಗಲೇ ಕೇರಳದಲ್ಲಿ ಭರ್ಜರಿ ಮಳೆಯಾಗುತ್ತಿದೆ. ತಿರುನಂತಪುರಂ, ವಯನಾಡು, ಕೊಯಿಕ್ಕೋಡ್, ಕಾಸರಗೋಡು ಸೇರಿದಂತೆ ಆ ರಾಜ್ಯದ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಹ ಕೂಡ ಉಂಟಾಗಿದೆ. ಸಮುದ್ರದಲ್ಲಿ ಅಲೆಗಳು ಜೋರಾಗಿ ಅಪ್ಪಳಿಸುತ್ತಿವೆ.

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‍ ರಾಜ್ಯಗಳಲ್ಲಿ ಮಳೆ ಭರ್ಜರಿಯಾಗಿ ಸುರಿಯುವ ಸಾಧ್ಯತೆ ದಟ್ಟವಾಗಿದೆ. ಈ ಚಂಡಮಾರುತದ ಎಫೆಕ್ಟ್ ಈಗಾಗಲೇ ಕರಾವಳಿ ಭಾಗದಲ್ಲಿಯೂ ತೋರಿಸುತ್ತಿದೆ. ಅಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ಮುಂದಿನ 3 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಯಲ್ಲಿಯೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದರೊಂದಿಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದು, ಚಿನ್ನು ಖ್ಯಾತಿಯ ಜೋಡಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಭಾಗ್ಯದಲಕ್ಷ್ಮೀ ಬಾರಮ್ಮ ಧಾರಾವಾಹಿಯ ಜೋಡಿ ಇಂದು ದಾಂಪತ್ಯ ಜೀವನಕ್ಕ ಕಾಲಿಟ್ಟಿದ್ದಾರೆ. ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಏ. 1ರಂದು ಈ ಜೋಡಿಯ ಎಂಗೇಜ್‍ ಮೆಂಟ್ ಕೂಡ ನಡೆದಿತ್ತು. ಕೊರೊನಾ ಹಿನ್ನೆಲೆಯಲ್ಲಿ ಚಂದನ್ ಮತ್ತು ಕವಿತಾ ಸಪ್ತಪದಿ ತುಳಿದು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಮಾಸ್ಕ್ ಧರಿಸಿಯೇ ಈ ಜೋಡಿ ಮದುವೆಯಲ್ಲಿ ಭಾಗಿಯಾಗಿದೆ. ಇಲ್ಲಿಯ ಸಹಕಾರ ನಗರದಲ್ಲಿರುವ ಚಂದನ್ ಮನೆಯಲ್ಲಿ ಈ ಮದುವೆ ನೆರವೇರಿದೆ. ಏ. 1ರಂದು ಖಾಸಗಿ ಹೊಟೇಲ್ ನಲ್ಲಿ ಚಂದನ್ ಹಾಗೂ ಕವಿತಾ ಅವರ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ಆ ನಂತರ ಸಪ್ತಪದಿ ತುಳಿಯುವ ಕುರಿತು ಈ ಜೋಡಿ ತಿಳಿಸಿತ್ತು.

ಕನ್ನಡ ಕಿರುತೆರೆಯ ಯಶಸ್ವಿ ಧಾರಾವಾಹಿಯಲ್ಲಿ ಚಂದು ಮತ್ತು ಚಿನ್ನು ಪಾತ್ರಗಳಲ್ಲಿ ಇಬ್ಬರೂ ಮಿಂಚಿ ಮನೆ ಮಾತಾಗಿದ್ದರು. ಈ ಜೋಡಿ ಸದ್ಯ ನಿಜ ಜೀವನದಲ್ಲಿಯೂ ಒಂದಾಗಿದೆ.

ರಾಜ್ಯದಲ್ಲಿ ಇಂದು ಮತ್ತೆ ಆತಂಕ ಮೂಡಿಸಿದ ಸೋಂಕಿತರ ಸಂಖ್ಯೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಚೈನ್ ಲಿಂಕ್ ಕಟ್ ಮಾಡಲು ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದರೂ ಅದರ ಹಾವಳಿ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಇಂದು ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

ಇಂದು ರಾಜ್ಯದಲ್ಲಿ 41,779 ಹೊಸ ಪ್ರಕರಣಗಳು ವರದಿಯಾಗಿದೆ. ಅಲ್ಲದೇ, ಇಂದು ಮಹಾಮಾರಿಗೆ 373 ಜನ ಬಲಿಯಾಗಿದ್ದಾರೆ. ಈ ಮೂಲಕ ಮಹಾಮಾರಿಗೆ ಬಲಿಯಾದವರ ಸಂಖ್ಯೆ 21,085ಕ್ಕೆ ಏರಿಕೆ ಕಂಡಿದೆ.

ಇಂದು ಬೆಂಗಳೂರು ನಗರದಲ್ಲಿ 14,316 ಹೊಸ ಪ್ರಕರಣಗಳು ವರದಿಯಾಗಿವೆ. ಅಲ್ಲದೇ, 121 ಜನ ಬಲಿಯಾಗಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ 3,60,862 ಸಕ್ರಿಯ ಪ್ರಕರಣಗಳಿವೆ. ಅಲ್ಲದೇ, ರಾಜ್ಯದ ಬಾಗಲಕೋಟೆ 773, ಬಳ್ಳಾರಿ 2,421, ಬೆಳಗಾವಿ 1,592, ಬೆಂಗಳೂರು ಗ್ರಾಮಾಂತರ 707, ಬೆಂಗಳೂರು ನಗರ 14,316, ಬೀದರ್ 223, ಚಾಮರಾಜನಗರ 713, ಚಿಕ್ಕಬಳ್ಳಾಪುರ 676, ಚಿಕ್ಕಮಗಳೂರು 435, ಚಿತ್ರದುರ್ಗ 314, ದಕ್ಷಿಣ ಕನ್ನಡ 1,215, ದಾವಣಗೆರೆ 581, ಧಾರವಾಡ 829, ಗದಗ 591, ಹಾಸನ 1,339, ಹಾವೇರಿ 292, ಕಲಬುರಗಿ 929, ಕೊಡಗು 539, ಕೋಲಾರ 306, ಕೊಪ್ಪಳ 495, ಮಂಡ್ಯ 1,385, ಮೈಸೂರು 2,340, ರಾಯಚೂರು 1,063, ರಾಮನಗರ 459,

ಶಿವಮೊಗ್ಗ 1,045, ತುಮಕೂರು 2,668, ಉಡುಪಿ 1,219, ಉತ್ತರ ಕನ್ನಡ 787, ವಿಜಯಪುರ 444 ಮತ್ತು ಯಾದಗಿರಿಯಲ್ಲಿ 683 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕಾಬೂಲ್ ನ ಮಸೀದಿಯಲ್ಲಿ ಬಾಂಬ್ ಸ್ಫೋಟ – 12 ಸಾವು

ವಿಜಯಸಾಕ್ಷಿ ಸುದ್ದಿ, ಕಾಬೂಲ್

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿನ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, 12 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿದ ಕಾಬೂಲ್ ಪೊಲೀಸರ ವಕ್ತಾರ ಫರ್ಡಾವ್ಸ್ ಫ್ರಮುರ್ಜ್, ಕಾಬೂಲ್ ಪ್ರಾಂತ್ಯದ ಶಕರ್ ದಾರಾ ಜಿಲ್ಲಿಯ ಮಸೀದಿಯೊಳಗೆ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಮಸೀದಿಯ ಇಮಾಮ್ ಸೇರಿದಂತೆ 12 ಜನ ಸಾವನ್ನಪ್ಪಿದ್ದು, 15 ಜನ ಗಾಯಗೊಂಡಿದ್ದಾರೆ.

ಗುರುವಾರ ತಾಲಿಬಾನ್ ಉಗ್ರರು ಮತ್ತು ಸರ್ಕಾರಿ ಮಿಲಿಟರಿ ಸೈನಿಕರ ನಡುವೆ ಈದ್ ಅಲ್-ಫಿತರ್ ಹಿನ್ನೆಲೆಯಲ್ಲಿ ಶಾಂತಿ ಮಾತುಕತೆ ನಡೆದಿತ್ತು. ಅಲ್ಲದೇ, ಈ ಸಂದರ್ಭದಲ್ಲಿ ತಾತ್ಕಾಲಿಕ ಒಪ್ಪಂದ ನಡೆದಿತ್ತು. ಆದರೆ ಮಾತುಕತೆಯ ಮರು ದಿನವೇ ಸ್ಫೋಟ ಸಂಭವಿಸಿದೆ.

ಕಾರು ಕೊಳ್ಳಲು ಮಗುವನ್ನೇ ಮಾರಿದ ಪಾಪಿ ದಂಪತಿ

ವಿಜಯಸಾಕ್ಷಿ ಸುದ್ದಿ, ಲಕ್ನೋ

ಕಾರಿನ ಆಸೆಗೆ ಬಿದ್ದ ದಂಪತಿ ನವಜಾತ ಶಿಶುವನ್ನೇ ಮಾರಾಟ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ನಡೆದಿದೆ. ಈ ದಂಪತಿ ತಮ್ಮ ನವಜಾತ ಶಿಶುವನ್ನು ಉದ್ಯಮಿಗಳಿಗೆ ರೂ. 1.5 ಲಕ್ಷಕ್ಕೆ ಮಾರಾಟ ಮಾಡಿದೆ. ಅದೂ ಇವರು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ತಮ್ಮ ಮುದ್ದು ಮಗುವನ್ನು ಮಾರಾಟ ಮಾಡಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಮಗುವಿನ ಅಜ್ಜ, ಅಜ್ಜಿ ಗುರುವಾರ ಪೊಲೀಸರನ್ನು ಸಂಪರ್ಕಿಸಿ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ಆ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ತಿರ್ವಾ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪಾಪಿ ದಂಪತಿಗೆ ಮೂರು ತಿಂಗಳ ಹಿಂದೆ ಮಗು ಜನಿಸಿತ್ತು. ಮಗಳು ಮತ್ತು ಅಳಿಯ ಮಗುವನ್ನು, ಗುರ್ಸಹೈಗಂಜ್ ಮೂಲದ ಉದ್ಯಮಿಯೊಬ್ಬರಿಗೆ ರೂ. 1.5 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಸದ್ಯ ಮಗು ಉದ್ಯಮಿಯ ಬಳಿಯಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಈಗಾಗಲೇ ದಂಪತಿ ಕಾರು ಖರೀದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಲ್ಲುತ್ತಿಲ್ಲ ಸೋಂಕಿನ ಆರ್ಭಟ; 447 ಜನರಿಗೆ ಸೋಂಕು, ಮತ್ತೆ ನಾಲ್ವರು ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 14 ಶುಕ್ರವಾರವೂ ಸೋಂಕಿನ ಆರ್ಭಟ ಮುಂದುವರೆದಿದೆ. ಸತತವಾಗಿ ನಾಲ್ಕು ‌ನೂರರ ಗಡಿ ದಾಟಿ ‌ಮುನ್ನುಗ್ಗುತ್ತಿದೆ.

ಇವತ್ತಿನ ವರದಿಯಂತೆ ಮತ್ತೆ ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದಿನ 447 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 16900 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -203, ಮುಂಡರಗಿ-94, ನರಗುಂದ-26, ರೋಣ-81, ಶಿರಹಟ್ಟಿ-37 ಹೊರಜಿಲ್ಲೆಯ-06 ಸೇರಿದಂತೆ 447 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 175 ಕ್ಕೇರಿದೆ.

ಗದಗ ಶಹರದ ನಿವಾಸಿ 38 ವರ್ಷದ ಮಹಿಳೆ ಮೇ 09 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು, ಮೇ 10 ರಂದು ಮೃತಪಟ್ಟಿರುತ್ತಾರೆ.

ಗದಗನ 57 ವರ್ಷದ ಮಹಿಳೆ ಮೇ 11 ರಂದು ಜಿಮ್ಸ್ ಗೆ ದಾಖಲಾಗಿದ್ದು, ಕೋವಿಡ್ ದೃಢಪಟ್ಟಿತ್ತು, ಮೇ 12 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

68 ವರ್ಷದ ಮಹಿಳೆ ಮೇ 5 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಮೇ 12 ರಂದು ಮೃತಪಟ್ಟಿದ್ದಾರೆ.

ಗಜೇಂದ್ರಗಡ ಪಟ್ಟಣದ 68 ವರ್ಷದ ಮಹಿಳೆ ಮೇ,08 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 13 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 291 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 14496 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2229 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 193 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸರ್ಕಾರಕ್ಕೆ ಮತ್ತೆ ಎಚ್ಚರಿಕೆ ನೀಡಿದ ಹೈಕೋರ್ಟ್…ಒಂದೇ ದಿನದಲ್ಲಿ ವರದಿ ನೀಡುವಂತೆ ಲ್ಯಾಬ್ ಗಳಿಗೆ ಸೂಚಿಸಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ವಿಷಯದಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಕೊರೊನಾ ಪರೀಕ್ಷೆ ಮಾಡಿಸಿ ಒಂದು ದಿನದೊಳಗೆ ವರದಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. ರಾಜ್ಯ ಸರ್ಕಾರವು ಎಲ್ಲಾ ಲ್ಯಾಬ್‌ ಗಳಿಗೆ 24 ಗಂಟೆಗಳಲ್ಲಿ ವರದಿ ನೀಡುವಂತೆ ಆದೇಶ ಹೊರಡಿಸಬೇಕು. ವರದಿ ನೀಡಲು ವಿಳಂಬ ಮಾಡಿದ ಲ್ಯಾಬ್ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.

ಕೊರೊನಾ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಎ.ಎಸ್. ಓಕ ಮತ್ತು ನ್ಯಾ.ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಸಿಬ್ಬಂದಿ ಸಾವನ್ನಪ್ಪಿರುವ ಕುರಿತು ಪ್ರಸ್ತಾಪಿಸಿದ ಪೀಠ, ಸೋಂಕಿತ ಚಾಲಕ ಮೇ. 10ರಂದು ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ಆರ್‌ ಟಿಪಿಸಿಆರ್ ಪರೀಕ್ಷೆಗೆ ಸ್ವ್ಯಾಬ್ ಕೊಟ್ಟಿದ್ದರು. ಆದರೆ, ಮೇ 12ರ ವರೆಗೆ ಸೋಂಕಿತ ಸಾವನ್ನಪ್ಪುವವರೆಗೂ ವರದಿ ನೀಡಿಲ್ಲ ಎಂದು ಹೇಳಲಾಗಿದ್ದು, ಈ ಹಿಂದೆ ವಿಚಾರಣೆ ಸಂದರ್ಭದಲ್ಲಿ 24 ಗಂಟೆಗಳಲ್ಲಿ ಪರೀಕ್ಷಾ ವರದಿ ಲಭ್ಯವಾಗುವಂತೆ ಲ್ಯಾಬ್‌ ಗಳಿಗೆ ಸೂಕ್ತ ನಿರ್ದೇಶನ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದರೆ, ನ್ಯಾಯಾಲಯದ ಆದೇಶವೇ ಪಾಲನೆಯಾಗಿಲ್ಲ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.

ಕೊರೊನಾ ಟೈಂ ನಲ್ಲಿ ಪೊಲೀಸಪ್ಪನ ಟಫ್ ರೂಲ್ಸ್..!! ರೈತನಿಗೆ ನೀಡಿದ ಈ ಕಿರುಕುಳಕ್ಕೆ ರಾಜ್ಯವೇ ಆಕ್ರೋಶ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೊರೊನಾ ಸಂದರ್ಭದಲ್ಲಿ ರೈತರಿಗೆ ತಮ್ಮ ಕೆಲಸ ಮಾಡಕೊಳ್ಳಲು ಸರ್ಕಾರವೇ ಅನುಮತಿ ನೀಡಿದೆ. ಆದರೆ, ಹಲವೆಡೆ ಮಾತ್ರ ಪೊಲೀಸರ ಕಾಟ ರೈತರನ್ನೂ ಬಿಡುತ್ತಿಲ್ಲ. ರೈತರೊಬ್ಬರಿಗೆ ಇಲ್ಲೊಬ್ಬ ಪೊಲೀಸಪ್ಪ ಮಾಡಿರುವ ಕಿರುಕುಳ ಕಂಡು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಮೀನಿಗೆ ತೆರಳುತ್ತಿದ್ದ ರೈತನ ಬೈಕ್ ಗೆ ಸಬ್ ಇನ್ಸಪೆಕ್ಟರ್ ಒಬ್ಬರು ಎಮಿಷನ್ ಟೆಸ್ಟ್ ಕೇಸ್ ಹಾಕಿದ್ದಾರೆ. ಜಮೀನಿನ ಲೀಸ್ ಡಾಕ್ಯುಮೆಂಟ್ ತೋರಿಸಿದ್ದರೂ ಪೊಲೀಸರು ರೈತನ ಬೈಕ್ ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೇ, ಬೆಳಿಗ್ಗೆ 6 ರಿಂದ 10ರ ವರೆಗೆ ಮಾತ್ರ ಓಡಾಟ ನಡೆಸಬೇಕು ಎಂದು ರೈತರಿಗೆ ಈ ಪೋಲೀಸ್ ಧಮ್ಕಿ ಹಾಕಿದ್ದಾರೆ.

ನಗರ ನಿವಾಸಿಯಾಗಿರುವ ಪ್ರಶಾಂತ್ ಎಂಬುವವರಿಗೆ ಪೊಲೀಸಪ್ಪ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಜಮೀನಿನಲ್ಲಿ ಬಾಳೆ ಗಿಡ ಹಾಳಾಗುತ್ತಿದೆ ಬಿಡಿ ಸ್ವಾಮಿ ಎಂದರೂ ಪಿಎಸ್ ಐ ಮಾತ್ರ ತನ್ನ ಮೊಂಡಾಟ ಮೆರೆದಿದ್ದಾರೆ. ಹುಲ್ಲಳ್ಳಿ ಸಮೀಪದ ಹರದನಹಳ್ಳಿ, ಕಣ್ಣೇನೂರಿನಲ್ಲಿ ಜಮೀನನ್ನು ರೈತ ಪ್ರಶಾಂತ್ ಲೀಸ್ ಪಡೆದಿದ್ದರು. ಹೀಗಾಗಿ ಅವರು ಜಯಪುರ ಮಾರ್ಗವಾಗಿ ಜಮೀನಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಬೈಕ್ ವಶಕ್ಕೆ ಪಡೆದಿದ್ದರು.

ಜಯಪುರ ಸಬ್ ಇನ್ಸ್ಪೆಕ್ಟರ್ ರೈತನಿಗೆ ಕಿರುಕುಳ ನೀಡಿದ ಅಧಿಕಾರಿ. ಬೈಕ್ ವಶಕ್ಕೆ ಪಡೆದ ಒಂದು ದಿನದ ಬಳಿಕ ಎಮಿಷನ್ ಟೆಸ್ಟ್ ಇಲ್ಲ ಎಂದು ರೂ. 1 ಸಾವಿರ ದಂಡ ವಿಧಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ರೈತರಿಗೆ ಈ ರೀತಿ ಕಿರುಕುಳ ನೀಡಿದ್ದಕ್ಕೆ ಸದ್ಯ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಕೇವಲ ಒಂದೇ ನಗರದಲ್ಲಿ ಎಷ್ಟು ಜನ ಪೊಲೀಸರು ಸೋಂಕಿಗೆ ಒಳಗಾಗಿದ್ದಾರೆ ಗೊತ್ತಾ?

ವಿಜಯಸಾಕ್ಷಿ ಸುದ್ದಿ ಬೆಂಗಳೂರು

ಕೊರೊನಾ ವೈರಸ್ ನ ಎರಡನೆ ಅಲೆ ಪೊಲೀಸರನ್ನು ಮತ್ತಷ್ಟು ಹೈರಾಣಾಗಿಸಿದೆ.
ನಗರದಲ್ಲಿನ ಬರೋಬ್ಬರಿ 1,369 ಪೊಲೀಸ್ ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 12 ಜನ ಪೊಲೀಸರು ಈಗಾಗಲೇ ಮಹಾಮಾರಿಗೆ ಬಲಿಯಾಗಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಾರ್ಯಾಲಯದಿಂದ ಬಿಡುಗಡೆಯಾದ ದಾಖಲೆಗಳ ಪ್ರಕಾರ, ಬೆಂಗಳೂರಿನಲ್ಲಿ ಇಲ್ಲಿಯವರೆಗೆ 1,369 ಜನ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.
ಅದರಲ್ಲಿ 693 ಜನ ಮನೆಗಳಲ್ಲಿ ಕ್ವಾರೆಂಟೈನ್ ಗೆ ಒಳಗಾಗಿದ್ದಾರೆ. 16 ಜನ ಸಿಬ್ಬಂದಿ ಕೋವಿಡ್ ಕೇರ್ ಸೆಂಟರ್‌ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಗಾಗಲೇ ಸಾಮಾನ್ಯ ವಾರ್ಡ್ ನಲ್ಲಿ 15 ಜನ ಪೊಲೀಸರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ 726 ಸಕ್ರೀಯ ಕೋವಿಡ್ ಪ್ರಕರಣಗಳಿವೆ ಎಂದು ಇಲಾಖೆ ತಿಳಿಸಿದೆ.

error: Content is protected !!