Home Blog Page 31

ಶಿಕ್ಷಣ-ಸಂಘಟನೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ: ಸಂಗಮೇಶ ಹಾದಿಮನಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕವಾಗಿ ಉನ್ನತ ಸ್ಥಾನಕ್ಕೇರಬೇಕಾದರೆ ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಂಬಿಗ ಗಂಗಾಮತ ಸಮುದಾಯದ ಯುವ ನಾಯಕ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಗಮೇಶ ಹಾದಿಮನಿ ಹೇಳಿದರು.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದ್ರಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಅಂಬಿಗ ಗಂಗಾಮತ ಸಮುದಾಯದ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಆರ್ಥಿಕ ಪ್ರಗತಿಗೆ ಹೊಸ ಯೋಜನೆಗಳನ್ನು ರೂಪಿಸುವಲ್ಲಿ ಸಮಾಜದ ಮುಖಂಡರು ಮುಂದಾಗಬೇಕು ಎಂದು ಕರೆ ನೀಡಿದರು.

ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಉತ್ತಮ ಶಿಕ್ಷಣ ನೀಡುವುದು ಮುಖ್ಯ. ಉತ್ತಮ ಶಿಕ್ಷಣ ಮತ್ತು ಸಂಸ್ಕಾರದಿಂದಲೇ ಸಮಾಜದ ಭವಿಷ್ಯ ಉಜ್ವಲವಾಗುತ್ತದೆ. ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರಿ ಸಂಘಟನೆಗಳು ಬಲ ತುಂಬಲಿದ್ದು, ಸಮುದಾಯ ಆರ್ಥಿಕವಾಗಿ ಸದೃಢಗೊಳ್ಳಲು ಸಂಘಟನೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಸಮುದಾಯದ ಜನರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ಸಾಧ್ಯವಾಗುತ್ತದೆ. ಯುವಜನತೆ ಶಿಕ್ಷಣದ ಜೊತೆಗೆ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸಭೆಯಲ್ಲಿ ಸಮುದಾಯದ ಅಧ್ಯಕ್ಷ ಶಂಕರಗೌಡ ರಾ. ಪಾಟೀಲ, ಮಹಾಂತಗೌಡ ಪಾಟೀಲ, ಗುಡದಯ್ಯ ಅಂಬಿಗೇರ, ಈರನಗೌಡ ರಾಹುತ, ಶಂಭುಗೌಡ ಪಾಟೀಲ, ಸುದೀಪ ಕಮತರ, ಮಹಾಂತೇಶ ಪಾಟೀಲ, ಸುಭಾಷಗೌಡ ಪಾಟೀಲ, ಶೋಭಕ್ಕ ಪಾಟೀಲ, ದೀಪಾ ಮಾಗಳ, ನೀಲವ್ವ ಪಾಟೀಲ, ಜಯಮ್ಮ ಪಾಟೀಲ, ನಿರ್ಮಲವ್ವ ಪಾಟೀಲ, ಸತ್ಯೆವ್ವ ತಳವಾರ, ಮಂಜಪ್ಪ ಸುಣಗಾರ, ಲಲಿತಾ ರಾಹುತ, ಯಮನೂರಗೌಡ ಪಾಟೀಲ, ಮಹಾದೇವಕ್ಕ ಪಾಟೀಲ, ಭೀಮವ್ವ ಪಾಟೀಲ ಸೇರಿದಂತೆ ಸಮಾಜದ ಮುಖಂಡರು ಹಾಗೂ ಬಾಂಧವರು ಉಪಸ್ಥಿತರಿದ್ದರು.

“ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಉತ್ತಮ ಶಿಕ್ಷಣ ನೀಡುವುದು ದೊಡ್ಡ ಸಂಪತ್ತು. ಶಿಕ್ಷಣ ಮತ್ತು ಸಂಘಟನೆಯಿಂದಲೇ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ.”

— ಸಂಗಮೇಶ ಹಾದಿಮನಿ

ವಿದ್ಯುತ್ ಖಾಸಗೀಕರಣಕ್ಕೆ ರೈತ ಸಂಘದ ತೀವ್ರ ವಿರೋಧ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದಲ್ಲಿ ವಿದ್ಯುತ್ ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಗದಗ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶಂಕರಗೌಡ ಜಾಯನಗೌಡ್ರ, ವಿದ್ಯುತ್ ಖಾಸಗೀಕರಣದಿಂದ ರೈತರು, ಗೃಹ ಬಳಕೆದಾರರು ಹಾಗೂ ಸಣ್ಣ ಕೈಗಾರಿಕೆಗಳಿಗೆ ಭಾರೀ ಹೊರೆ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದ 26 ಕೋಟಿ ವಿದ್ಯುತ್ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಹೆಸರಿನಲ್ಲಿ ಪ್ರತಿ ಮೀಟರ್‌ಗೆ ಸುಮಾರು ₹8 ಸಾವಿರ ವೆಚ್ಚವಾಗಲಿದ್ದು, ಇದರಿಂದ ಲಕ್ಷಾಂತರ ಕೋಟಿ ರೂಪಾಯಿ ಖಾಸಗಿ ಕಂಪನಿಗಳ ಪಾಲಾಗಲಿದೆ ಎಂದು ಆರೋಪಿಸಿದರು. ವಿದ್ಯುತ್ ದರ ಏರಿಕೆ, ಸಬ್ಸಿಡಿ ಕಡಿತ ಹಾಗೂ ರೈತರ ಉಚಿತ ವಿದ್ಯುತ್ ಯೋಜನೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಖಾಸಗೀಕರಣ ಜಾರಿಯಾದರೆ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ, ಗೃಹಜ್ಯೋತಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಜನಪರ ಯೋಜನೆಗಳಿಗೆ ಹಿನ್ನಡೆಯಾಗಲಿದೆ. ಕೈಮಗ್ಗ ನೇಕಾರರು, ತೋಟಗಾರಿಕೆ ಬೆಳೆಗಾರರು, ಸಣ್ಣ ಕೈಗಾರಿಕೆಗಳು ಹಾಗೂ ಹೆಸ್ಕಾಂ ಕಾರ್ಮಿಕರ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಟಾಟಾ ಪವರ್ ಕಂಪನಿಗೆ ಪರವಾನಗಿ ನೀಡಬಾರದು. ಒಂದು ವೇಳೆ ಖಾಸಗೀಕರಣಕ್ಕೆ ಮುಂದಾದರೆ ರಾಜ್ಯಾದ್ಯಂತ ಬಂದ್, ಬಾರ್‌ಕೋಲ್ ಚಳವಳಿ ಹಾಗೂ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬಸವರಾಜ ಮರಾಠ, ಎಂ.ಎಸ್. ಗುತ್ತೇದಾರ, ಮಹದೇವ ವೇರ್ಣೇಕರ, ಗೂಳಪ್ಪ ಗುಡದೂರ, ವಿರೇಶ ಮಾಳೊತ್ತರ, ಟಿ.ವಿ. ಕರವಿ, ಶಂಕರಗೌಡ ಪಾಟೀಲ, ಐ.ಬಿ. ಗದಗಿನ, ಫಕ್ಕೀರೇಶ ಬೆಳ್ಳಟ್ಟಿ, ವಿನಾಯಕ ಅಚಲಕರ, ವಿರೇಶ ಅಚಲಕರ, ಆದೇಶ ಹುಲಗೂರ, ಸಂಜಯ ಚಳಗೇರಿ, ಅನಿಲ ಕರಣೆ, ಹಸನಸಾಬ ದೊಡ್ಡಮನಿ, ಬಸನಗೌಡ ಮಲ್ಲನಗೌಡರ, ವಿರೇಶ ಕರವೀರಮಠ, ಜಗದೀಶ ಅಂಗಡಿ, ಅಂದಪ್ಪ ಅಂಗಡಿ ಸೇರಿದಂತೆ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

“ವಿದ್ಯುತ್ ಖಾಸಗೀಕರಣ ಜಾರಿಯಾದರೆ ರೈತರ ಉಚಿತ ವಿದ್ಯುತ್, ಜನಪರ ಯೋಜನೆಗಳು ಹಾಗೂ ಸಬ್ಸಿಡಿಗಳಿಗೆ ಕತ್ತರಿ ಬೀಳಲಿದೆ. ರೈತ ವಿರೋಧಿ ಈ ಕ್ರಮವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ.”

— ಶಂಕರಗೌಡ ಜಾಯನಗೌಡ್ರ, ಜಿಲ್ಲಾ ಅಧ್ಯಕ್ಷರು, ರೈತ ಸಂಘ ಮತ್ತು ಹಸಿರು ಸೇನೆ

ಮರೆಯದ ಮಾಣಿಕ್ಯರ ನೆನಪುಗಳ ಮಹಾಪ್ರದರ್ಶನ..!

0

ವಿಜಯಸಾಕ್ಷಿ ಸುದ್ದಿ, ಗದಗ: ನಾವು ಕಣ್ಣಾರೆ ನೋಡಲು ಹಾಗೂ ಮಾತು ಕೇಳಲು ಸಾಧ್ಯವಾಗದ ಹಿರಿಯ ರಂಗಕಲಾವಿದರ ನೆನಪುಗಳನ್ನು ಮರುಕಳಿಸುವ ಅಪರೂಪದ ಪ್ರಯತ್ನ ಈ ಛಾಯಾಚಿತ್ರ ಪ್ರದರ್ಶನವಾಗಿದೆ ಎಂದು ಚಲನಚಿತ್ರ ಹಾಗೂ ಕಿರುತೆರೆ ನಟ ಅನಿರುದ್ಧ ಜತಕರ ಹೇಳಿದರು.

ಗೋಕಾಕದಲ್ಲಿ ಆಶಾಕಿರಣ ಕಲಾ ಟ್ರಸ್ಟ್, ಬೆಂಗಳೂರು ವತಿಯಿಂದ ಆಯೋಜಿಸಿದ್ದ ‘ಮರೆಯದ ಮಾಣಿಕ್ಯ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗದುಗಿನ ಚಿತ್ರಕಲಾವಿದ ಶಂಕರಗೌಡ ಪಾಟೀಲ ಸಂಗ್ರಹಿಸಿ ಪ್ರದರ್ಶಿಸಿದ ನಾಡಿನ ಹಿರಿಯ ರಂಗಕಲಾವಿದರ ಛಾಯಾಚಿತ್ರಗಳು ಹಾಗೂ ಲೇಖನಗಳ 83ನೇ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಹಳೆಯ ಛಾಯಾಚಿತ್ರಗಳು ಮತ್ತು ಲೇಖನಗಳನ್ನು ಸಂಗ್ರಹಿಸಿ ಸಾರ್ವಜನಿಕರ ಮುಂದೆ ಪ್ರದರ್ಶಿಸುವ ಮೂಲಕ ನಾಡಿನ ಕಲೆ, ಸಂಸ್ಕೃತಿ ಹಾಗೂ ರಂಗಭೂಮಿ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯ ನಡೆಯುತ್ತಿದೆ. ಇಂತಹ ಪ್ರದರ್ಶನಗಳು ಯುವಕರಿಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಆಶಾಕಿರಣ ಕಲಾ ಟ್ರಸ್ಟ್ ಸಂಸ್ಥಾಪಕಿ, ಚಲನಚಿತ್ರ ಹಾಗೂ ಕಿರುತೆರೆ ನಟಿ ಮಾಲತಿಶ್ರೀ ಮೈಸೂರು, ರಾಜಕೀಯ ಧುರೀಣ ಅಶೋಕ ಪೂಜಾರ, ಪರಶುರಾಮ ಘಸ್ತೆ, ಪಾರಿಜಾತ ಕಲಾವಿದರಾದ ಟಿ. ಈಶ್ವರ, ಮಹಾಂತೇಶ ತವಂಶಿ, ಶ್ರೀಮತಿ ರಜನಿ ಜಿರಗಾಳ, ಶೈಲಜಾ ಕೊಕ್ಕರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

‘ಮರೆಯದ ಮಾಣಿಕ್ಯ ಪ್ರಶಸ್ತಿ-2026’ ಪುರಸ್ಕೃತರಾದ ಆನಂದ ಭೀಮಪ್ಪ ಕಮತ, ರುದ್ರಪ್ಪ ವೈ. ಕರಿಗಾರ, ಬಸವರಾಜ ಕರಜಗಿಮಠ, ಸುನೀಲ ಪರಮಾರ, ಜಿ.ಕೆ. ಕಾಡೇಶಕುಮಾರ, ಬಸವರಾಜ ಪಟ್ಟಣಶೆಟ್ಟಿ, ವೀರೇಂದ್ರ ಮಧುಸೂದನ ಪತಕಿ, ಹಾಜಿ ಅಕ್ಬರಖಾನ್ ಜಮಾದಾರ, ಅಶೋಕ ಶಿವಾಜಿ ವೈದ್ಯ ಹಾಗೂ ಡಾ. ಶಾಂತಲಾ ಎಸ್. ಭರಭರಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು.

“ಹಿರಿಯ ರಂಗಕಲಾವಿದರ ಜೀವನ ಸಾಧನೆಗಳನ್ನು ಇಂತಹ ಛಾಯಾಚಿತ್ರ ಪ್ರದರ್ಶನಗಳ ಮೂಲಕ ಯುವ ಪೀಳಿಗೆಗೆ ಪರಿಚಯಿಸುವುದು ನಮ್ಮ ಸಂಸ್ಕೃತಿ ಮತ್ತು ಕಲಾ ಪರಂಪರೆಯನ್ನು ಉಳಿಸುವ ಮಹತ್ವದ ಕಾರ್ಯವಾಗಿದೆ.”

— ಅನಿರುದ್ಧ ಜತಕರ, ಚಲನಚಿತ್ರ ಹಾಗೂ ಕಿರುತೆರೆ ನಟ

ಸಿದ್ದಲಿಂಗೇಶ್ವರ ನಗರಕ್ಕೆ ಹಕ್ಕುಪತ್ರ ನೀಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಬೆಟಗೇರಿಯ ಯಡಿಯೂರ ಶ್ರೀ ಸಿದ್ದಲಿಂಗೇಶ್ವರ ನಗರದ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು ಹಾಗೂ ಪ್ರದೇಶವನ್ನು ಸ್ಲಂ ಎಂದು ಘೋಷಿಸಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಶ್ರಮಿಕರ, ಕೂಲಿ ಕಾರ್ಮಿಕರ, ನೇಕಾರರ ಹಾಗೂ ರೈತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ಎಚ್. ಮುಳಗುಂದ ಅವರ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ದ್ವಾರಬಾಗಿಲ ಬಳಿ ಧರಣಿ ನಡೆಸಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.

ಈ ವೇಳೆ ಮಾತನಾಡಿದ ಮಂಜುನಾಥ ಮುಳಗುಂದ, ಗದಗ-ಬೆಟಗೇರಿ ಅವಳಿ ನಗರದ ವಾರ್ಡ್ ನಂ. 6ರ ವ್ಯಾಪ್ತಿಯ ಯಡಿಯೂರ ಸಿದ್ದಲಿಂಗೇಶ್ವರ ನಗರದಲ್ಲಿ ಕಳೆದ 25 ವರ್ಷಗಳಿಂದ 400ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಇದುವರೆಗೂ ಯಾವುದೇ ಮೂಲಭೂತ ಸೌಲಭ್ಯಗಳು ದೊರೆತಿಲ್ಲ ಎಂದು ಆರೋಪಿಸಿದರು.

ಈ ಪ್ರದೇಶದಲ್ಲಿ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ರಸ್ತೆ, ಗಟಾರ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಅಗತ್ಯ ಸೌಲಭ್ಯಗಳಿಂದ ವಂಚಿತರಾಗಿದ್ದು, ಜನರು ಸಂಕಷ್ಟದ ಬದುಕು ನಡೆಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿವಾಸಿಗಳಿಗೆ ಹಕ್ಕುಪತ್ರ ಹಾಗೂ ಮನೆಗಳ ಉತಾರಾ (ಫಾರ್ಮ್ ನಂ. 3) ಇಲ್ಲದ ಕಾರಣ ಅನೇಕ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಯಡಿಯೂರ ಸಿದ್ದಲಿಂಗೇಶ್ವರ ನಗರವನ್ನು ಸ್ಲಂ ಪ್ರದೇಶವೆಂದು ಘೋಷಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಶಂಕ್ರಪ್ಪ ಮಾಳಶೆಟ್ಟಿ, ಮುತ್ತು ರೊಟ್ಟಿ, ಬಸೀರ್ ಚಿನ್ನೂರ, ಪ್ರಶಾಂತ್ ಅಣ್ಣಿಗೇರಿ, ಮಲ್ಲಪ್ಪ ಕಾಯಕಟ್ಟಿ, ಮಂಜುನಾಥ ಬ್ಯಾಳಿ, ರಾಜು ಸಿಂಗಾಡೆ, ಅಭಿಷೇಕ್ ನವಲೆ, ಮಂಜುನಾಥ ಬಡಿಗೇರ, ಸಂತೋಷ ದಿವೂಟೆ, ರವಿ ದಿವೂಟೆ, ಮುತ್ತು ಛಲವಾದಿ, ನಾರಾಯಣ ಖಾಟವಾ, ಮಲ್ಲೇಶ ಜಂತ್ಲಿ ಸೇರಿದಂತೆ ಹಲವರು ಭಾಗವಹಿಸಿದ್ದರು.

“25 ವರ್ಷಗಳಿಂದ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಹಕ್ಕುಪತ್ರವೂ ಇಲ್ಲ, ಮೂಲಭೂತ ಸೌಲಭ್ಯಗಳೂ ಇಲ್ಲ. ಸಿದ್ದಲಿಂಗೇಶ್ವರ ನಗರವನ್ನು ಸ್ಲಂ ಎಂದು ಘೋಷಿಸಿ ಜನರ ಬದುಕಿಗೆ ಭದ್ರತೆ ಕಲ್ಪಿಸಬೇಕು.”

— ಮಂಜುನಾಥ ಎಚ್. ಮುಳಗುಂದ, ಹೋರಾಟ ಸಮಿತಿ ಅಧ್ಯಕ್ಷ

ಯೋಗದಿಂದಲೇ ಆರೋಗ್ಯದ ಸಮತೋಲನ ಸಾಧ್ಯ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಅತ್ಯಂತ ಪರಿಣಾಮಕಾರಿ ಸಾಧನವಾಗಿದ್ದು, ನಿತ್ಯ ಜೀವನದಲ್ಲಿ ನೈತಿಕ ಆಚರಣೆಗಳನ್ನು ಶುದ್ಧವಾಗಿಟ್ಟುಕೊಳ್ಳಲು ಯೋಗ ಸಹಕಾರಿಯಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ನಗರದ ತೋಂಟದಾರ್ಯ ಶ್ರೀಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2803ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮಾತನಾಡಿದ ಶ್ರೀಗಳು, ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸುವಲ್ಲಿ ಭಾರತದ ಕೊಡುಗೆ ಅಪಾರವಾಗಿದೆ. ಹಣಕ್ಕಿಂತ ಆರೋಗ್ಯವೇ ಶ್ರೇಷ್ಠ ಸಂಪತ್ತು. ಶುಚಿ ಆಹಾರ, ವಿಹಾರ, ನಡಿಗೆ, ವ್ಯಾಯಾಮ ಹಾಗೂ ಯೋಗವನ್ನು ಪ್ರತಿಯೊಬ್ಬರೂ ತಮ್ಮ ದಿನಚರಿಯ ಭಾಗವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇಂದಿನ ಜೀವನಶೈಲಿಯಿಂದ ದೈಹಿಕ ಮತ್ತು ಮಾನಸಿಕ ಅಸಮತೋಲನ ಹೆಚ್ಚಾಗಿದ್ದು, ಸಮತೋಲನಭರಿತ ಬದುಕಿಗೆ ಯೋಗವೇ ಪರಿಣಾಮಕಾರಿ ಮಾರ್ಗವಾಗಿದೆ. ಪತಂಜಲಿಯ ಯೋಗ ಪರಂಪರೆ ವಿಶ್ವಕ್ಕೆ ಮಾದರಿಯಾಗಿದ್ದು, ಅದು ಭಾರತೀಯ ಸಂಸ್ಕೃತಿಯ ಹೆಮ್ಮೆಯಾಗಿದೆ ಎಂದು ತಿಳಿಸಿದರು.

ಗದಗಿನ ಪತಂಜಲಿ ಯೋಗ ಕೇಂದ್ರದ ಮುಖ್ಯಸ್ಥ ಹಾಗೂ ಯೋಗ ಸಾಧಕ ರುದ್ರಣ್ಣ ಗುಳಗುಳಿ ಉಪನ್ಯಾಸ ನೀಡಿ, ದಿನಚರಿ ಯೋಗದಿಂದ ಆರಂಭವಾದರೆ ದಿನವಿಡೀ ಚೈತನ್ಯದಿಂದ ಬದುಕಲು ಸಾಧ್ಯವಾಗುತ್ತದೆ. ಎಲ್ಲ ಕಾರ್ಯಗಳಿಗೂ ಸಮಯ ಮೀಸಲಿಡುವ ನಾವು ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದೇವೆ. ಒತ್ತಡದ ಬದುಕಿನಿಂದ ಮುಕ್ತಿ ಪಡೆಯಲು ಯೋಗವೇ ಸೂಕ್ತ ಮಾರ್ಗ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡರ ದಂಪತಿಗಳನ್ನು ಪೂಜ್ಯರು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ ಕರಿಸೋಮನಗೌಡರ, ತೋಂಟದಾರ್ಯ ಮಠದಲ್ಲಿ ಪ್ರತೀ ಸೋಮವಾರ ನಡೆಯುವ ಶಿವಾನುಭವ ಕಾರ್ಯಕ್ರಮ ಅನೇಕ ಸಾಹಿತಿಗಳು, ಕಲಾವಿದರು ಹಾಗೂ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುತ್ತಿರುವ ವಿಶಿಷ್ಟ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಮಟ್ಟದ ಅಟ್ಯಾಪಟ್ಯಾ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದ ಸಿಂಗಟರಾಯನಕೆರೆ ತಾಂಡಾದ ರಾಹುಲ ಶೇಖರ ಕಾರಭಾರಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಶ್ರೀಮಠದಲ್ಲಿ ಒಂದು ವಾರ ಕಾಲ ಯೋಗ ತರಬೇತಿ ನೀಡಿದ ಬಸವ ಯೋಗ ಮಹಾವಿದ್ಯಾಲಯದ ಮುಖ್ಯಸ್ಥ ಕೆ.ಎಸ್. ಪಲ್ಲೇದ ಅವರನ್ನು ಗೌರವಿಸಲಾಯಿತು. ಕವಿವಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೂ ಸನ್ಮಾನ ನಡೆಯಿತು.

ಮೌನಯೋಗಿ ಡಾ. ವಿಶ್ವನಾಥ ಗುರುಗಳನ್ನು ಲಿಂಗಾಯತ ಪ್ರಗತಿಶೀಲ ಸಂಘದಿಂದ ಗೌರವಿಸಲಾಯಿತು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ, ಅಪೇಕ್ಷಾ ಪಂಪಣ್ಣವರ ಧರ್ಮಗ್ರಂಥ ಪಠಣ, ಕುಮಾರಿ ಸಾತ್ವಿಕ ಪಂಪಣ್ಣವರ ವಚನಚಿಂತನೆ ಕಾರ್ಯಕ್ರಮ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಕೊಟ್ರೇಶ ಸಂಗಮೇಶ ಮೇಲ್ಮುರಿ ಹಾಗೂ ಕುಟುಂಬದವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಶಿವಾನುಭವ ಸಮಿತಿ ಅಧ್ಯಕ್ಷ ರಮೇಶ ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

“ಹಣ ಕಳೆದುಕೊಂಡರೆ ಮತ್ತೆ ಸಂಪಾದಿಸಬಹುದು, ಆದರೆ ಆರೋಗ್ಯ ಕಳೆದುಕೊಂಡರೆ ಬದುಕಿನ ಸಮತೋಲನವೇ ಕಳೆದುಹೋಗುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗವನ್ನು ಪ್ರತಿಯೊಬ್ಬರೂ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು.”

— ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

ಮೊಹರಂ ಡೋಲಿಗೆ ಹಿಂದೂಗಳ ದೇಣಿಗೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹಿಂದೂ-ಮುಸ್ಲಿಂ ಸೌಹಾರ್ದ ಮತ್ತು ಭಾವೈಕ್ಯದ ಅಪರೂಪದ ಮಾದರಿಯೊಂದು ನರೇಗಲ್ಲ ಸಮೀಪದ ಕೋಚಲಾಪುರ ಗ್ರಾಮದಲ್ಲಿ ಮೊಹರಂ ಹಬ್ಬದ ಸಂದರ್ಭದಲ್ಲಿ ಮೂಡಿ ಬಂದಿದ್ದು, ಗ್ರಾಮದ ಜನರು ಸಮಾಜಕ್ಕೆ ಸೌಹಾರ್ದತೆಯ ಸಂದೇಶ ರವಾನಿಸಿದ್ದಾರೆ.

ಕೋಚಲಾಪುರ ಪುಟ್ಟ ಗ್ರಾಮವಾದರೂ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಪರಸ್ಪರರ ಹಬ್ಬಗಳಲ್ಲಿ ಭಾಗವಹಿಸಿ ಅಣ್ಣ-ತಮ್ಮಂದಿರಂತೆ ಬೆರೆಯುವ ಸಂಪ್ರದಾಯವನ್ನು ಹಲವು ವರ್ಷಗಳಿಂದ ಉಳಿಸಿಕೊಂಡು ಬಂದಿದ್ದಾರೆ. ಈ ಬಾರಿ ಮೊಹರಂ ಹಬ್ಬದ ಮೆರವಣಿಗೆಗಾಗಿ ಅಗತ್ಯವಿದ್ದ ಡೋಲಿ ನಿರ್ಮಾಣಕ್ಕೆ ಗ್ರಾಮದ ಪ್ರಕಾಶ ಬಳಗೋಡಮಠ ಅವರು ಉದಾರ ದೇಣಿಗೆ ನೀಡಿ ಸಹಕರಿಸಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಗ್ರಾಮಕ್ಕೆ ಆಗಮಿಸಿದ ನೂತನ ಡೋಲಿಯನ್ನು ಹಿಂದೂ ಬಾಂಧವರು ಭಜನೆಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಸೌಹಾರ್ದತೆಯ ಅನನ್ಯ ಸಂದೇಶ ಸಾರಿದರು. ಈ ದೃಶ್ಯ ಗ್ರಾಮದಲ್ಲಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ಎಲ್ಲ ಧರ್ಮಗಳ ಮೂಲ ತತ್ವ ಮಾನವೀಯತೆ ಮತ್ತು ಶಾಂತಿಯೇ ಆಗಿದೆ. ಕೋಚಲಾಪುರ ಗ್ರಾಮದಲ್ಲಿ ಕಾಣುತ್ತಿರುವ ಭಾವೈಕ್ಯತೆ ಇತರರಿಗೆ ಮಾದರಿಯಾಗಿದ್ದು, ಈ ಸೌಹಾರ್ದತೆ ಎಂದೆಂದಿಗೂ ಉಳಿಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ದಾನಿ ಪ್ರಕಾಶ ಬಳಗೋಡಮಠ ಹಾಗೂ ಡೋಲಿ ನಿರ್ಮಿಸಿದ ಶಾಶ್ವತಾಚಾರಿ ಕಮ್ಮಾರ ಅವರನ್ನು ನರೇಗಲ್ಲ ದರ್ಗಾದ ಅಜ್ಜನವರಾದ ಹಜರತ್ ಮಂಜೂರ ಹುಸೇನಶಾವಲಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಡಾ. ಆರ್.ಕೆ. ಗಚ್ಚಿನಮಠ, ಅಂದಾನಯ್ಯ ಮಾಲಗಿತ್ತಿಮಠ, ಜಿನ್ನಾಸಾಬ ಚಾಕ್ರೆ, ಸಂಗಯ್ಯ ಮಾಲಗಿತ್ತಿಮಠ ಸೇರಿದಂತೆ ಹಿಂದೂ-ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅಬ್ಬಾಸಲಿ ರವಡೂರ ಕಾರ್ಯಕ್ರಮ ನಿರೂಪಿಸಿದರೆ, ಪೀರಸಾಬ ಗಡಾದ ಸ್ವಾಗತಿಸಿದರು.

“ಎಲ್ಲ ಧರ್ಮಗಳ ತಿರುಳು ಒಂದೇ. ಶಾಂತಿ, ಸಹಬಾಳ್ವೆ ಮತ್ತು ಮಾನವೀಯತೆಯೇ ಎಲ್ಲ ಧರ್ಮಗಳ ಸಂದೇಶ. ಕೋಚಲಾಪುರದ ಭಾವೈಕ್ಯತೆ ಇಡೀ ಸಮಾಜಕ್ಕೆ ಮಾದರಿ.”

ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ನರೇಗಲ್ಲ ಹಿರೇಮಠ

ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ; ನಿದ್ರಾಹೀನತೆ ಕಾಡಬಹುದು!

0

ಇಂದಿನ ವೇಗದ ಜೀವನಶೈಲಿ, ಹೆಚ್ಚುತ್ತಿರುವ ಮಾನಸಿಕ ಒತ್ತಡ, ಅಸಮರ್ಪಕ ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಯ ಕೊರತೆಯಿಂದ ನಿದ್ರಾಹೀನತೆ ಸಮಸ್ಯೆ ಸಾಮಾನ್ಯವಾಗುತ್ತಿದೆ.

ಉತ್ತಮ ಆರೋಗ್ಯಕ್ಕಾಗಿ ಗುಣಮಟ್ಟದ ನಿದ್ರೆ ಅತ್ಯಗತ್ಯವಾಗಿದ್ದು, ರಾತ್ರಿ ಮಲಗುವ ಮುನ್ನ ಮಾಡುವ ಕೆಲವು ಅಭ್ಯಾಸಗಳು ನಿದ್ರೆಯ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಭಾರವಾದ ಆಹಾರ ಸೇವನೆ ಬೇಡ:

ರಾತ್ರಿ ಮಲಗುವ ಮುನ್ನ ಹೆಚ್ಚಿನ ಪ್ರಮಾಣದಲ್ಲಿ ಅಥವಾ ಭಾರವಾದ ಆಹಾರ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬರ, ಆಮ್ಲೀಯತೆ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇವು ನಿದ್ರೆಗೆ ಅಡ್ಡಿಯಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಮಲಗುವ ಕನಿಷ್ಠ ಎರಡು ಅಥವಾ ಮೂರು ಗಂಟೆಗಳ ಮೊದಲು ರಾತ್ರಿ ಊಟ ಮುಗಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮಲಗುವ ಮುನ್ನ ಮೊಬೈಲ್ ಬಳಕೆ ತಪ್ಪಿಸಿ:

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಲಗುವ ಮುನ್ನ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸುತ್ತಾ ಸಮಯ ಕಳೆಯುತ್ತಾರೆ. ಆದರೆ ಈ ಸಾಧನಗಳಿಂದ ಹೊರಬರುವ ನೀಲಿ ಬೆಳಕು ನಿದ್ರೆಗೆ ಅಗತ್ಯವಾದ ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ನಿದ್ರೆ ತಡವಾಗುವ ಅಥವಾ ನಿದ್ರೆಯ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಡಿಜಿಟಲ್ ಸಾಧನಗಳಿಂದ ದೂರವಿರುವುದು ಉತ್ತಮ.

ಸಂಜೆ ಬಳಿಕ ಕೆಫೀನ್ ಸೇವನೆ ಕಡಿಮೆ ಮಾಡಿ:

ಕಾಫಿ, ಟೀ, ಚಾಕೊಲೇಟ್ ಹಾಗೂ ಕೆಲವು ತಂಪು ಪಾನೀಯಗಳಲ್ಲಿ ಕೆಫೀನ್ ಅಂಶವಿರುತ್ತದೆ. ಸಂಜೆ ಅಥವಾ ರಾತ್ರಿ ವೇಳೆ ಇವುಗಳನ್ನು ಸೇವಿಸುವುದರಿಂದ ನಿದ್ರೆಗೆ ತೊಂದರೆ ಉಂಟಾಗಬಹುದು. ಅದೇ ರೀತಿ ಮದ್ಯಪಾನ ಕೂಡ ನೈಸರ್ಗಿಕ ನಿದ್ರೆಯ ಚಕ್ರವನ್ನು ಅಸ್ತವ್ಯಸ್ತಗೊಳಿಸುವ ಕಾರಣ, ರಾತ್ರಿ ವೇಳೆ ಇದರ ಸೇವನೆಯನ್ನು ತಪ್ಪಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.

ಮಲಗುವ ಮುನ್ನ ಐಸ್‌ಕ್ರೀಮ್ ಸೇವನೆ ಒಳ್ಳೆಯದಲ್ಲ:

ಊಟದ ನಂತರ ಐಸ್‌ಕ್ರೀಮ್ ತಿನ್ನುವ ಅಭ್ಯಾಸ ಅನೇಕರಲ್ಲಿದೆ. ಆದರೆ ಐಸ್‌ಕ್ರೀಮ್‌ನಲ್ಲಿ ಅಧಿಕ ಪ್ರಮಾಣದ ಸಕ್ಕರೆ ಮತ್ತು ಕೊಬ್ಬು ಇರುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುವ ಜೊತೆಗೆ ನಿದ್ರೆಯ ಗುಣಮಟ್ಟವನ್ನೂ ಹಾಳುಮಾಡಬಹುದು. ಹೀಗಾಗಿ ರಾತ್ರಿ ಮಲಗುವ ಮುನ್ನ ಐಸ್‌ಕ್ರೀಮ್ ಸೇರಿದಂತೆ ಸಕ್ಕರೆ ಮತ್ತು ಕೊಬ್ಬಿನ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸದಿರುವುದು ಉತ್ತಮ.

ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ ಮತ್ತು ನಿಯಮಿತ ನಿದ್ರೆಯ ವೇಳಾಪಟ್ಟಿಯನ್ನು ಪಾಲಿಸುವುದರಿಂದ ನಿದ್ರಾಹೀನತೆ ಸಮಸ್ಯೆಯನ್ನು ದೂರವಿಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ: ಒಂದೇ ಕುಟುಂಬದ ಐವರು ಜಲಸಮಾಧಿ!

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುತ್ತತ್ತಿ ಸಮೀಪದ ಕಾವೇರಿ ನದಿಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಒಂದೇ ಕುಟುಂಬದ ಐವರು ನೀರುಪಾಲಾಗಿದ್ದಾರೆ.

ಈ ಘಟನೆ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಿಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೃತರನ್ನು ಚೈತ್ರಾ (20), ಶ್ವೇತಾ (38), ವಿಜಯಮ್ಮ (50), ಪ್ರಿಯಾಂಕಾ (28) ಮತ್ತು ಮಹೇಶ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಬುಧವಾರ ಸಂಜೆ ಸುಮಾರು 4.45ರ ವೇಳೆಗೆ ಕುಟುಂಬದ ಸದಸ್ಯರು ಮುತ್ತತ್ತಿಯ ಮುತ್ತೆತ್ತರಾಯ ದೇಗುಲಕ್ಕೆ ಭೇಟಿ ನೀಡಿದ್ದರು. ಬಳಿಕ ಕಾವೇರಿ ನದಿಯ ತೀರಕ್ಕೆ ತೆರಳಿದ ಅವರು ಫೋಟೋ ತೆಗೆಯುವ ಉದ್ದೇಶದಿಂದ ನದಿಗೆ ಇಳಿದಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಒಬ್ಬರ ಹಿಂದೆ ಒಬ್ಬರು ಮುಳುಗಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಐವರ ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ.

ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಲೋಕಲ್ ರೈಲಿನಲ್ಲಿ ಚಾಕು ಇರಿದು ಯುವಕನ ಹತ್ಯೆ; ಬಾಗಿಲು ಮುಚ್ಚುವ ವಿಚಾರಕ್ಕೆ ರಕ್ತಪಾತ!

0

ಮುಂಬೈ: ಮುಂಬೈನ ಉಪನಗರ ರೈಲು ಸೇವೆಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ರೈಲಿನ ಬಾಗಿಲು ಮುಚ್ಚುವ ವಿಚಾರಕ್ಕೆ ಆರಂಭವಾದ ವಾಗ್ವಾದ ಕೊಲೆಯಲ್ಲಿ ಅಂತ್ಯಗೊಂಡಿದೆ.

ಚಲಿಸುತ್ತಿದ್ದ ಲೋಕಲ್ ರೈಲಿನಲ್ಲೇ 21 ವರ್ಷದ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದ್ದು, ಘಟನೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಮೃತ ಯುವಕನನ್ನು ಮಯಾಂಕ್ ಲೋಹರ್ ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ಚರ್ಚ್‌ಗೇಟ್–ನಲಾಸೋಪಾರಾ ಫಾಸ್ಟ್ ಲೋಕಲ್ ರೈಲಿನ ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಗೋರೆಗಾಂವ್ ಮತ್ತು ಕಂಡಿವಲಿ ರೈಲು ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ರೈಲಿನ ಬಾಗಿಲು ಮುಚ್ಚುವ ವಿಚಾರಕ್ಕೆ ಕೆಲ ಪ್ರಯಾಣಿಕರ ನಡುವೆ ವಾಗ್ವಾದ ಆರಂಭವಾಗಿತ್ತು. ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದುಕೊಂಡು ಗಲಾಟೆಗೆ ತಿರುಗಿದೆ. ಈ ವೇಳೆ ಕೆಲ ಪ್ರಯಾಣಿಕರು ಆರೋಪಿ ರೋಷನ್ ಸುವರ್ಣ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಆರೋಪಿ ತನ್ನ ಬ್ಯಾಗ್‌ನಲ್ಲಿದ್ದ ಚಾಕುವನ್ನು ತೆಗೆದು ಮಯಾಂಕ್ ಲೋಹರ್ ಮೇಲೆ ಹಲ್ಲೆ ನಡೆಸಿದ್ದಾನೆ.

ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಮಯಾಂಕ್ ರೈಲಿನಲ್ಲೇ ಕುಸಿದು ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಆರೋಪಿ ರೈಲಿನಿಂದ ಪರಾರಿಯಾಗಿದ್ದಾನೆ.

ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಕು ಹಿಡಿದುಕೊಂಡು ಆರೋಪಿ ರೈಲಿನೊಳಗೆ ಓಡಾಡುತ್ತಿರುವ ದೃಶ್ಯಗಳು ಅದರಲ್ಲಿ ಸೆರೆಯಾಗಿವೆ. ಘಟನೆಯಿಂದ ಭಯಭೀತರಾದ ಪ್ರಯಾಣಿಕರು ಆತನಿಂದ ದೂರ ಸರಿಯುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ಮಾಹಿತಿ ತಿಳಿದ ತಕ್ಷಣ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಳಿಕ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಕುರ್ಲಾ ಪ್ರದೇಶದಲ್ಲಿ ಆರೋಪಿ ರೋಷನ್ ಸುವರ್ಣನನ್ನು ಬಂಧಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು ಕೊಲೆಯ ನಿಖರ ಕಾರಣ ಹಾಗೂ ಘಟನೆಯ ಹಿನ್ನೆಲೆ ಕುರಿತು ತನಿಖೆ ಮುಂದುವರಿಸಿದ್ದಾರೆ.

ಮಗನ ಸಾವಿನಿಂದ ಕುಟುಂಬಸ್ಥರು ಕಣ್ಣೀರಿನಲ್ಲಿ ಮುಳುಗಿದ್ದಾರೆ. “ನನ್ನ ಮಗ ಯಾರೊಂದಿಗೂ ಜಗಳ ಮಾಡುತ್ತಿರಲಿಲ್ಲ. ಅವನಿಗೆ ನ್ಯಾಯ ದೊರಕಬೇಕು” ಎಂದು ಮೃತನ ತಾಯಿ ಕಣ್ಣೀರಿಟ್ಟಿದ್ದಾರೆ. “ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಇಂದು ಶಿಕ್ಷೆಯಾಗದಿದ್ದರೆ ನಾಳೆ ಮತ್ತೊಬ್ಬರ ಜೀವ ಹೋಗಬಹುದು” ಎಂದು ಮೃತನ ಸಹೋದರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಲ್ಕತ್ತಾದಲ್ಲಿ ನಿರ್ಮಾಣ ಹಂತದ ಗೋದಾಮು ಕುಸಿತ: ಮೂವರು ಸಾವು, 21 ಮಂದಿ ರಕ್ಷಣೆ!

0

ಕೊಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ತಾರಾತಲಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಗೋದಾಮಿನ ಕಟ್ಟಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದು, 21 ಮಂದಿಯನ್ನು ರಕ್ಷಿಸಲಾಗಿದೆ.

ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಬುಧವಾರ ಮಧ್ಯಾಹ್ನ ಸಂಭವಿಸಿದ ಈ ದುರ್ಘಟನೆಯಲ್ಲಿ ಗೋದಾಮಿನ ಮೇಲ್ಛಾವಣಿ ಮತ್ತು ಕಟ್ಟಡದ ಪ್ರಮುಖ ಭಾಗ ಏಕಾಏಕಿ ಕುಸಿದ ಪರಿಣಾಮ, ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಕಬ್ಬಿಣ ಹಾಗೂ ಸಿಮೆಂಟ್ ಅವಶೇಷಗಳಡಿ ಸಿಲುಕಿಕೊಂಡರು. ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದು, ಬಳಿಕ ಪೊಲೀಸರು, ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡ ಹಾಗೂ ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.

ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆದಲು ಕ್ರೇನ್‌ಗಳು, ಗ್ಯಾಸ್ ಕಟರ್‌ಗಳು ಹಾಗೂ ವಿಶೇಷ ರಕ್ಷಣಾ ಉಪಕರಣಗಳನ್ನು ಬಳಸಲಾಗುತ್ತಿದೆ. ರಕ್ಷಣಾ ತಂಡಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಹಲವಾರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಅಧಿಕಾರಿಗಳ ಪ್ರಕಾರ, ಇದುವರೆಗೆ 21 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಇನ್ನೂ 12ರಿಂದ 18 ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಘಟನೆಯ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ. ಕಟ್ಟಡ ಕುಸಿತಕ್ಕೆ ಕಾರಣವೇನು ಎಂಬ ಕುರಿತು ತನಿಖೆ ಆರಂಭಿಸಲಾಗಿದ್ದು, ನಿರ್ಮಾಣ ಕಾಮಗಾರಿಯಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.