ಪಿಎಫ್‌ಐ ಬಾಲ ಬಿಚ್ಚಿದರೆ ಬಾಲನೂ ಕಟ್, ತಲೆನೂ ಕಟ್ ಮಾಡಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಕಚೇರಿ ಮೇಲೆ ಪಿಎಫ್‌ಐ ಕಾರ್ಯಕರ್ತರ ಮುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಜಾರಿ ನಿದೇಶನಾಲಯಕ್ಕೆ (ಇಡಿ) ತನಿಖೆ ಮಾಡಬೇಡವೆನ್ನಲೂ ಪಿಎಫ್‌ಐ ಯಾರು? ಎಂದು ಪ್ರಶ್ನಿಸಿದರು.
ಕುಂಬಳಕಾಯಿ ಕಳ್ಳ ಎಂದರೆ ಏಕೆ ಹೆಗಲು ಮುಟ್ಟಿಕೊಳ್ಳುವುದು. ಭಾರತವಿರುವುದು ಭಯೋತ್ಪಾದನೆ ಮಾಡಲು ಅಲ್ಲ ಎಂದು ಹೇಳಿದ ಅವರು, ಭಯೋತ್ಪಾದನೆಗೆ ವಿದೇಶದಿಂದ ಹಣ ಬರುವುದನ್ನು ತಡೆಯಲು ತನಿಖೆ ನೆಡೆಯಬೇಕಿದೆ ಎಂದು ಸಿ.ಟಿ.ರವಿ ಸ್ಪಷ್ಟಪಡಿಸಿದರು.
ನಂಜನಗೂಡು ತಾಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯತಿಗೆ ಅವಿರೋಧ ಆಯ್ಕೆಯಾಗುವ ಮೂಲಕ ಪೌರಕಾರ್ಮಿಕ ಪಿ.ನಂಜುಂಡ ಅವರ ಅದೃಷ್ಟದ ಬಾಗಿಲು ತೆರೆದಿದೆ.
ಸ್ವಂತ ನೆಲೆ ಇಲ್ಲದೇ ಗುಡಿಸಿಲಿನಲ್ಲಿ ವಾಸವಿರುವ ಪೌರಕಾರ್ಮಿಕ ನಂಜುಂಡನಿಗೆ ಭಾಗ್ಯದ ಬಾಗಿಲು ಒಲೆದು ಬಂದಿದೆ.
ಅವಿರೋಧ ಆಯ್ಕೆಯಾಗಿರುವ ನಂಜುಂಡ ಕೆಂಪಿಸಿದ್ದನಹುಂಡಿ ಗ್ರಾಮದ ಪೌರಕಾರ್ಮಿಕನಾಗಿದ್ದ ಪಿ.ನಂಜುಂಡ ಗ್ರಾಮದ ರಸ್ತೆಗಳನ್ನು ಸ್ವಚ್ಛ ಮಾಡುತ್ತಿದ್ದ. ಆದರೆ ಇದೀಗ ಅದೇ ಗ್ರಾ.ಪಂ.ಸದಸ್ಯನಾಗಿ ಆಯ್ಕೆಯಾಗಿದ್ದಾನೆ.
ಕೆಂಪಿಸಿದ್ದನಹುಂಡಿ ಗ್ರಾಮದ ಮೂರನೇ ವಾರ್ಡ್ ನಿಂದ ಸ್ಪರ್ಧೆಗಿಳಿದಿದ್ದ. ಇವನ ಪ್ರತಿಸ್ಪರ್ಧಿಗಾಗಿ ನಾಮಪತ್ರ ಸಲ್ಲಿಸಿದ್ದ ಬಸವರಾಜನ ಮನವೊಲಿಸಿ ನಾಮಪತ್ರ ಹಿಂಪಡೆಸಿ ನಂಜುಂಡನನ್ನು ಗ್ರಾಮದ ಮುಖಂಡರೇ ಸೇರಿ ಅವಿರೋಧ ಮಾಡಿದ್ದಾರೆ.
ವಿನಾಕಾರಣ ಪತಿ ಮಹಾಶಯನೊಬ್ಬ ಹೆಂಡತಿ ಮೇಲೆ ಸಂಶಯ ಪಟ್ಟು ಕೊಲೆ ಮಾಡಿರುವ ಘಟನೆ ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪರಶುರಾಮ ಹುಚ್ಚೀರಪ್ಪ ಹಳ್ಳಿಕೇರಿ ಎಂಬ ವ್ಯಕ್ತಿ ಕೊಲೆಗೈದಿದ್ದು, ಪತ್ನಿ ರೇಖಾ ಪರಶುರಾಮ ಹಳ್ಳಿಕೇರಿ ಮೃತ ದುರ್ದೈವಿಯಾಗಿದ್ದಾಳೆ.
ನಿನ್ನೆ ಪರಶುರಾಮ ಹೆಂಡತಿ ರೇಖಾಳನ್ನು ಕರೆದುಕೊಂಡು ಕುರಿ ಮೇಯಿಸಲು ಹೋಗಿದ್ದಾನೆ. ಈ ವೇಳೆ ಹೆಂಡತಿ ಜೊತೆ ಮಾತಿಗೆ ಮಾತು ಬೆಳೆದು ಇಬ್ಬರು ಜಗಳವಾಡಿದ್ದಾರೆ.
ಜಗಳದಲ್ಲಿ ಹೆಂಡತಿಗೆ ಒಂದೇಟು ಹೊಡೆದಿದ್ದು, ಇಬ್ಬರ ನಡುವಿನ ಗಲಾಟೆ ವಿಕೋಪಕ್ಕೆ ಹೋಗಿದೆ. ಈ ವೇಳೆ ಪರಶುರಾಮ ಹೆಂಡತಿಗೆ ಬಲವಾಗಿ ಆಯಕಟ್ಟಿನ ಜಾಗಕ್ಕೆ ಕಾಲಿನಿಂದ ಒದ್ದಿದ್ದು, ಹೆಂಡತಿ ರೇಖಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಪರುಶುರಾಮನಿಗೆ ವಿನಾಕಾರಣ ಅನುಮಾನ ಪಡದಂತೆ ಅನೇಕ ಬಾರಿ ಬುದ್ದಿ ಮಾತು ಹೇಳಲಾಗಿತ್ತಂತೆ. ಆದರೂ, ಪರಶುರಾಮ ತನ್ನ ಹಳೆ ಚಾಳಿ ಬಿಟ್ಟಿರಲಿಲ್ಲವಂತೆ.
ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಪರಶುರಾಮ ನನ್ನು ಬಂಧಿಸಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ನಗರದ ಹೃದಯ ಭಾಗದಲ್ಲಿ ಸಾರ್ವಜನಿಕ ಸೇವೆಗೆ ಸಿದ್ಧಗೊಂಡು ಸುಮಾರು ಒಂಬತ್ತು ತಿಂಗಳು ಕಳೆದರೂ, ಜಿಲ್ಲೆಯ ಜನರಿಗೆ ನವೀಕೃತ ಬಸ್ ನಿಲ್ದಾಣ ಬಳಕೆಗೆ ಮುಕ್ತವಾಗಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಗಂಡ-ಹೆಂಡತಿ ಜಗಳದ ನಡುವೆ ಕೂಸು ಬಡವಾದಿತು ಎಂಬಂತೆ ಜನಪ್ರತಿನಿಧಿಗಳ ಮುಸುಕಿನ ಗುದ್ದಾಟದಿಂದ ಜಿಲ್ಲೆಯ ಜನರು ರೋಸಿ ಹೋಗಿದ್ದಾರೆ.
ಸ್ಥಳೀಯ ಶಾಸಕ ಎಚ್.ಕೆ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ನಡುವೆ ಪ್ರತಿಷ್ಠೆಯ ಟ್ರೋಫಿಗಾಗಿ ತ್ರಿಕೋನ ಸರಣಿ ಏರ್ಪಟ್ಟಿದೆ.
ಡಿ.24 ರಂದು ಬಸ್ ನಿಲ್ದಾಣ ಉದ್ಘಾಟನೆಗೆಂದೇ ನಗರಕ್ಕೆ ಆಗಮಿಸಿದ್ದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಉದ್ಘಾಟನೆ ಮಾಡದೇ, ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ಮಾಡಿ ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ವಾಪಸ್ ಹೋಗಿದ್ದಾರೆ.
ಸಾರಿಗೆ ಸಚಿವರು ಗದಗ ಜನತೆಯ ಬಹು ದಿನಗಳ ಬೇಡಿಕೆಯಾದ ನಿಲ್ದಾಣಕ್ಕೆ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಅವರ ಹೆಸರು ನಾಮಕರಣ ಮಾಡಬೇಕೆಂಬ ಬೇಡಿಕೆ ಈಡೇರಿಸಿದರೂ, ಬಸ್ ನಿಲ್ದಾಣ ಇಲ್ಲಿಯವರೆಗೂ ಲೋಕಾರ್ಪಣೆಗೊಂಡಿಲ್ಲ. ಉದ್ಘಾಟನೆಗಾಗಿ ಜಿಲ್ಲಾ ಕಾಂಗ್ರೆಸ್, ಬಿಜೆಪಿ ಹಾಗೂ ಸಾರಿಗೆ ಸಚಿವರ ನಡುವೆ ಜಿದ್ದಾಜಿದ್ದಿ ನಡೆದಂತಿದೆ.
ಸುಮಾರು 5 ಕೋಟಿ ರೂ. ವೆಚ್ಚದಲ್ಲಿ 2018 ರ ಜನವರಿಯಿಂದ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭವಾಗಿದೆ. ಅಂದು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಇಂದಿನ ಶಾಸಕ ಎಚ್.ಕೆ.ಪಾಟೀಲ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಹಾಗಾಗಿ ಉದ್ಘಾಟನೆಯನ್ನು ನಾವೇ ಮಾಡ್ತೀವಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಇತ್ತ ಬಿಜೆಪಿ, ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದು ನಾವೇ ಉದ್ಘಾಟನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರಂತೆ.
ಶಾಸಕ ಎಚ್.ಕೆ.ಪಾಟೀಲ್ ಅವರು ತರಾತುರಿಯಲ್ಲಿ ಜು.7 ತಾರೀಖಿಗೆ ಉದ್ಘಾಟನೆ ಮಾಡುತ್ತೇವೆ ಎಂದು ಸಿದ್ಧ ಮಾಡಿದ್ದರಂತೆ. ಇದಕ್ಕೆ ಜಿಲ್ಲಾ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಉದ್ಘಾಟನೆಯನ್ನು ಮುಂದೂಡಿದ್ದರಂತೆ. ಅಲ್ಲಿಂದ ಇಲ್ಲಿಯವರೆಗೂ ಲೋಕಾರ್ಪಣೆಗೊಳ್ಳದೇ ಉದ್ಘಾಟನಾ ಕಾರ್ಯ ನನೆಗುದಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಸ್ಥಳೀಯ ಶಾಸಕರಿಲ್ಲದ್ದಕ್ಕೆ ಉದ್ಘಾಟನೆ ರದ್ದು?
ನೂತನವಾಗಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣ ಡಿ.24 ರಂದು ಉದ್ಘಾಟನೆಯಾಗಲು ಸಿದ್ಧಗೊಂಡಿತ್ತಲ್ಲದೇ, ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಿತ್ತು. ಆದರೆ, ಸ್ಥಳೀಯ ಶಾಸಕ ಎಚ್.ಕೆ.ಪಾಟೀಲ್ ಅವರು ಜಿಲ್ಲೆಯಲ್ಲಿ ಇರದಿದ್ದಕ್ಕೆ ಲೋಕಾರ್ಪಣೆ ರದ್ದಾಗಿದೆ ಎನ್ನಲಾಗುತ್ತಿದೆ.
ನೂತನವಾಗಿರುವ ನಿರ್ಮಿಸಿರುವ ಬಸ್ ನಿಲ್ದಾಣವನ್ನು ಲೋಕಾರ್ಪಣೆ ಮಾಡುವ ಮೂಲಕ, ಸಾರ್ವಜನಿಕ ಸೇವೆಗೆ ಮುಕ್ತವಾಗಿಸಬೇಕು.
ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಲ್ಲಿರುವ ರೋಮನ್ ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟೆಂಟ್ ಚರ್ಚ್‌ಗಳಲ್ಲಿ ಕ್ರೈಸ್ತರು ಶುಕ್ರವಾರ ಕ್ರಿಸ್‌ಮಸ್ ಹಬ್ಬವನ್ನು ಅತ್ಯಂತ ಸರಳ ಹಾಗೂ ಸಾಂಪ್ರದಾಯಕವಾಗಿ ಆಚರಿಸಿದರು. ಕೇಕ್ ಕತ್ತರಿಸಿ, ಸಿಹಿ ತಿನ್ನಿಸಿ ಯೇಸುವಿನ ಜನ್ಮದಿನವನ್ನು ಆಚರಿಸಿದ ಕ್ರೈಸ್ತರು ಒಬ್ಬರಿಗೊಬ್ಬರು ಶುಭಾಶಯ ಕೋರಿದರು.
ಪ್ರತಿವರ್ಷ ಕ್ರಿಸ್‌ಮಸ್ ಹಬ್ಬವನ್ನು ಡಿ.24ರ ರಾತ್ರಿಯಿಂದ ಜ.1 ರವರೆಗೆ ಒಂದು ವಾರಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಈ ಅವಧಿಯಲ್ಲಿ ಚರ್ಚ್‌ಗಳಲ್ಲಿ ದಿನನಿತ್ಯ ಒಂದಿಲ್ಲೊಂದು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ನೃತ್ಯ, ಹಾಡಿನ ಸ್ಪರ್ಧೆಗಳು ಸೇರಿದಂತೆ ಹಲವು ಸಾರ್ವಜನಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಇಂತಹ ಸಂಭ್ರಮಾಚರಣೆಗೆ ಕೊರೊನಾ ಕಡಿವಾಣ ಹಾಕಿದ್ದು, ಕ್ರಿಸ್‌ಮಸ್ ಮೇಲೆ ಕೊರೊನಾ ಕರಿ ನೆರಳು ಆವರಿಸಿತ್ತು. ಸಂಭ್ರಮಿಸುವ ಕೈಗಳನ್ನು ಕೋವಿಡ್ ಕಟ್ಟಿ ಹಾಕಿತ್ತು. ಹಾಗಾಗಿ ನಗರದ ಬಹುತೇಕ ಚರ್ಚ್‌ಗಳಲ್ಲಿ ಯಾವುದೇ ಆಡಂಭರವಿರಲಿಲ್ಲ.
ಸರಳವಾಗಿ ಆಚರಿಸಲಾದ ಈ ಸಲದ ಕ್ರಿಸ್‌ಮಸ್ ಯೇಸುವಿನ ಪ್ರಾರ್ಥನೆಗಷ್ಟೇ ಸೀಮಿತವಾಗಿತ್ತು. ಅಲ್ಲದೇ, ಕೆಲವೇ ಕೆಲವು ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬೈಬಲ್‌ನ ಪ್ರಸಂಗಗಳನ್ನು ಓದಿರುವುದು ಈ ಬಾರಿಯ ಕ್ರಿಸ್‌ಮಸ್‌ಗೆ ಸಾಕ್ಷಿಯಾಯಿತು.
ಕ್ರಿಸ್‌ಮಸ್ ದಿನದ ಮುನ್ನಾ ದಿನ ಕ್ರಿಸ್‌ಮಸ್ ಈವ್ಸ್ ರಾತ್ರಿ ಹಬ್ಬದ ನಿಮಿತ್ತ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ, ಬಲಿಪೂಜೆ ಮಾಡುವ ಮೂಲಕ ಸಂತೋಷ ಹಂಚಿಕೊಳ್ಳಲಾಯಿತು. ಪ್ರತಿ ಚರ್ಚ್‌ಗಳಲ್ಲಿ ಮಹೋನ್ನತ ದೇವರಿಗೆ ಮಹಿಮೆ ಸಲ್ಲಿಸುವ ಗೋದಲಿ ನಿರ್ಮಿಸಿ ಕ್ರಿಸ್ತನ ಜನ್ಮ ವೃತ್ತಾಂತ ಸಾರುವ ದೃಶ್ಯಾವಳಿಗಳನ್ನು ಮರುಕಳಿಸಲಾಗಿತ್ತು. ಕೊರೊನಾ ನಿಯಮ ಪಾಲಿಸುವ ಸಲುವಾಗಿ ಈ ಬಾರಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸದೇ, ಕೇವಲ ಯೇಸುವಿನ ಪ್ರಾರ್ಥನೆ ಅಷ್ಟೇ ಮಾಡಲಾಯಿತು.
ಅವಳಿ ನಗರದ ಚರ್ಚ್ ಆಫ್ ಬ್ಲೆಸ್ಸಿಂಗ್, ಸಂತ ಇಗ್ನೇಷಿಯಸ್ ಲೊಯೋಲಾ ಚರ್ಚ್, ಸಿಎಸ್‌ಐ ಬಾಶಲ್ ಮಿಷನ್, ಎಸ್‌ಪಿಜಿ, ಇಎಸ್‌ಐ, ಸಾಲೋಮಿನಿಸ್ಟ್ರಿ, ಚರ್ಚ್ ಆಫ್ ಗಾಡ್, ಹೆಬ್ರನ್ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಸಂಭ್ರಮಾಚರಣೆ ಕಳೆಗುಂದಿತ್ತು.
ಪ್ರತಿವರ್ಷ ಜನರಿಂದ ಗಿಜಗುಡುತ್ತಿದ್ದ ಚರ್ಚ್‌ಗಳಲ್ಲಿ ಈ ವರ್ಷ ಕೊರೊನಾ ಭೀತಿಯಿಂದಾಗಿ ಬೆರಳೆಣಕೆಯಷ್ಟು ಜನರು ಮಾತ್ರ ಕಾಣಿಸುತ್ತಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡು ಯೇಸುವಿನ ಪ್ರಾರ್ಥನೆಯಲ್ಲಿ ತಲ್ಲಿನರಾಗಿದ್ದರು. ಯೇಸುವಿನ ಶಿಲುಬೆಯ ಮುಂದೆ ಮೇಣದ ಬತ್ತಿ ಹಚ್ಚಿ ವೈಯಕ್ತಿಕ ಮತ್ತು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.
ರಾಜ್ಯ ಸರ್ಕಾರ ಕ್ರಿಸ್‌ಮಸ್ ಆಚರಣೆಗೆ ಅವಕಾಶ ಕಲ್ಪಿಸಿತ್ತು. ಆದರೆ, ಇಂತಹ ಸಂದಿಗ್ಧ ಪರಿಸ್ಥತಿಯಲ್ಲಿ ವಿಜೃಂಭಿಸುವುದು ಸೂಕ್ತವಲ್ಲ. ಕೊರೊನಾ ನಿಯಂತ್ರಿಸಲು ಸರ್ಕಾರದೊಂದಿಗೆ ಸಹಕರಿಸಬೇಕಿರುವುದು ನಮ್ಮ ಆದ್ಯ ಕರ್ತವ್ಯ. ಈ ಹಿನ್ನೆಲೆಯಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳದೇ ಸರಳ ಕ್ರಿಸ್‌ಮಸ್ ಆಚರಿಸುತ್ತಿದ್ದೇವೆ.
ಜಾಕೋಬ್ ಆಂಟೋನಿ, ಸಂತ ಇಗ್ನೇಷಿಯಸ್ ಲೊಯೋಲಾ, ಧರ್ಮ ಕೇಂದ್ರದ ಗುರುಗಳು
ಲಾರಿ ಚಾಲಕರ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿ, ಹಣ ವಸೂಲಿ ಮಾಡಿರುವ ಘಟನೆ ಜಿಲ್ಲೆಯ ಗದಗ ತಾಲ್ಲೂಕಿನ ಹುಲಕೋಟಿ, ಸಂಭಾಪುರ ಕ್ರಾಸ್ ಹಾಗೂ ಲಕ್ಕುಂಡಿ ಗ್ರಾಮಗಳಲ್ಲಿ ನಡೆದಿವೆ.
ಒಂದೇ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮೂರು ಕಡೆಗಳಲ್ಲಿ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ.
ಹುಲಕೋಟಿಯಲ್ಲಿ ಲಾರಿ ಸೈಡಿಗೆ ಹಾಕಿ ವಿಶ್ರಾಂತಿ ಪಡೆಯುತ್ತಿದ್ದ ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಗ್ರಾಮದ ವಿಜಯಕುಮಾರ್ ಎಂಬ ಮೈನ್ಸ್ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಲಕ ವಿಜಯಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ.
ಸಂಭಾಪುರ ಕ್ರಾಸ್ ಬಳಿಯೂ ಲಾರಿ ಮೇಲೆ ದಾಳಿ ನಡೆಸಿ ಲಾರಿಯ ಗಾಜು ಒಡೆದಿದ್ದಲ್ಲದೇ, ಚಾಲಕ ಜೀವನಸಾಬ್ ಬೂದಿಹಾಳ ಎಂಬುವವರ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ಕಿತ್ತುಕೊಂಡಿದ್ದಾರೆ.
ಇನ್ನು ಅದೇ ಮೂವರು ದುಷ್ಕರ್ಮಿಗಳ ಗ್ಯಾಂಗ್ ಲಕ್ಕುಂಡಿಯ ಬಸ್ ನಿಲ್ದಾಣದ ಹತ್ತಿರವೂ ಲಾರಿಯ ಚಾಲಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಚಾಲಕ ಕಿರುಚಿಕೊಂಡಿದ್ದಾನೆ. ಆಗ ಅಲ್ಲಿಂದ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ.
ಗಾಯಗೊಂಡಿರುವ ಚಾಲಕರಾದ ವಿಜಯಕುಮಾರ್ ಹಾಗೂ ಜೀವನಸಾಬ್ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ಒಂದೇ ರಾತ್ರಿ ನಡೆದ ಈ ದಾಳಿಯಿಂದಾಗಿ ಲಾರಿ ಚಾಲಕರನ್ನು ಭಯಬೀತರನ್ನಾಗಿಸಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಹಿನ್ನಲೆಯಲ್ಲಿ ನಗರದ ಶ್ರೀನಿವಾಸ್ ಭವನದಲ್ಲಿ ಗಣಿ ಮತ್ರು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸರಳವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಚಿವ ಸಿ.ಸಿ.ಪಾಟೀಲ್ ಅವರು, ಕರ್ಪ್ಯೂ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ ಯಾವುದೇ ಗೊಂದಲವಿರಲಿಲ್ಲ. ರೂಪಾಂತರಗೊಂಡಿರುವ ಕೊರೊನಾ ವೈರಸ್ ಹರಡುವಿಕೆಯ ವೇಗ ಜಾಸ್ತಿ ಇದೆ.ಕ್ರಿಸ್ ಮಸ್ ಹಬ್ಬ, ಹೊಸ ವರ್ಷದ ಆಚರಣೆಯಲ್ಲಿ ಲೇಟ್ ನಿಂದ ಲೈಟ್ ವರಿಗೆ ಹೊರಗಡೆ ಓಡಾಡುತ್ತಾರೆ. ರಾತ್ರಿ ವೇಳೆ ಮೇನ್ ಬತ್ತಿ ಹಚ್ಚಿಕೊಂಡು ಡ್ಯಾನ್ಸ್ ಮಾಡುತ್ತಾರೆ. ಜನರು ಗುಂಪು ಗುಂಪಾಗಿ ಸೇರಿ ಮೋಜು ಮಸ್ತಿ ಮಾಡುತ್ತಾರೆ. ಇದೆಲ್ಲವನ್ನು ತಪ್ಪಿಸುವ ಸಲುವಾಗಿ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿತ್ತು ಎಂದು ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಹಲವಾರು ಸಂಘಟನೆ, ಬೇರೆ ಬೇರೆ ಪಕ್ಷಗಳ ಒತ್ತಡದಿಂದ ನೈಟ್ ಕರ್ಫ್ಯೂ ವಾಪಾಸ್ ಪಡೆಯಲಾಗಿದೆ. ಹಾಗಾಗಿ ಜನರು ಗುಂಪು ಗುಂಪಾಗಿ ಸೇರಬೇಡಿ. ಮೋಜು ಮಸ್ತಿಯಿಂದ ದೂರವಿರುವಂತೆ ಸಚಿವ ಸಿ.ಸಿ.ಪಾಟೀಲ್ ಮನವಿ ಮಾಡಿಕೊಂಡರು.
ಶಾಲೆ ಆರಂಭದ ಕುರಿತು ಪ್ರತಿಕ್ರಿಯಿಸದ ಅವರು, ಡಿ.28 ರಂದು ರಾಜ್ಯ ಸಚಿವ ಸಂಪುಟ ಸಭೆ ಇದೆ. ಅಲ್ಲಿ ನಿರ್ಣಯ ಮಾಡಲಾಗುತ್ತದೆ. ನಾನು ನನ್ನ ಅಭಿಪ್ರಾಯವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುತ್ತೇನೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಮಕರ ಸಂಕ್ರಾಂತಿಗೆ ರಾಜ್ಯದಲ್ಲಿ ಐತಿಹಾಸಿಕ ಬದಲಾವಣೆಗಳಾಗಲಿದ್ದು, ಉತ್ತರ ಕರ್ನಾಟಕಕ್ಕೆ ಉತ್ತರಾಯಣ ಆಗಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಶಯ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗುತ್ತದೆಯೋ ಪುನರ್ ರಚನೆಯಾಗುತ್ತೋ ಖಚಿತ ಮಾಹಿತಿ ಇಲ್ಲಾ. ಎಲ್ಲವೂ ಗೋಡಾರ್ಥವಿದೆ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಎಂಬುದನ್ನು ನಾನು ಹೇಳುವುದಿಲ್ಲ, ನಾನದರಲ್ಲಿಲ್ಲ್ಲ. ನಾನು ಮಂತ್ರಿಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ನನಗೆ ಮಂತ್ರಿಯಾಗಲೂ ಮನಸ್ಸಿಲ್ಲ. ಹಣೆಬರಹ ಯಾರದ್ದೂ ಯಾರಿಗೂ ಗೊತ್ತಿಲ್ಲ, ಹಣೆಬರಹದಲ್ಲಿದ್ದರೆ ಸಿಎಂ ಆಗಬಹುದು. ಆಗಬಾರದು ಅಂತೆಲ್ಲಿದೆ? ಎಂದು ಹೇಳುವ ಮೂಲಕ ಸಿಎಂ ಆಗಬೇಕೆಂಬ ಕನಸನ್ನು ಯತ್ನಾಳ್ ಪರೋಕ್ಷವಾಗಿ ಬಿಚ್ಚಿಟ್ಟರು.
ಕೇಂದ್ರ ಹೈಕಮಾಂಡ್ ನೂರಕ್ಕೆ ನೂರರಷ್ಟು ಒಳ್ಳೆಯ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ. ವಿಜಯಪುರ ಜಿಲ್ಲೆಗೆ ಇಷ್ಟುದಿನ ಆದ ಅನ್ಯಾಯಕ್ಕೆ ನ್ಯಾಯ ಕೊಡುವ ಕೆಲಸ ಕೇಂದ್ರ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಲೆ ಆರಂಭದಲ್ಲಿ ಅವಸರ ಬೇಡ
ಮಕ್ಕಳ ಆರೋಗ್ಯ ಹಾಗೂ ಭವಿಷ್ಯ ಮುಖ್ಯ. ನಾನು ಶಿಕ್ಷಣ ಸಂಸ್ಥೆಯ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಒಂದು ವರ್ಷ ಶಿಕ್ಷಣ ಸಂಸ್ಥೆಗಳಿಗೆ ಹಾನಿಯಾದರೂ ನಾವು ಸಹಿಸಿಕೊಳ್ಳಬಹುದು. ಆದರೆ, ಮಕ್ಕಳ ಮೇಲೆ ಯಾವುದೇ ದುಷ್ಪರಿಣಾಮ ಆಗಬಾರದು. ಹಿಂದಿನಂತೆ ಈಗ ನಾಲ್ಕೈದು ಮಕ್ಕಳ ಬದಲು, ಒಂದೆರಡು ಮಕ್ಕಳಿದ್ದು, ಪಾಲಕರು ಜೋಪಾನದಿಂದ ಬೆಳೆಸಿರುತ್ತಾರೆ. ಹಾಗಾಗಿ ಶಾಲೆ ಆರಂಭದಲ್ಲಿ ಅವಸರ ಮಾಡುವ ಅವಶ್ಯಕತೆ ಇಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ
ಸಿಎಂ ಯಡಿಯೂರಪ್ಪ ಕರ್ಫ್ಯೂ ವಾಪಸ್ ತೆಗೆದುಕೊಂಡಿದ್ದು ಸ್ವಾಗತಾರ್ಹ. ಯಾರೋ ಒಬ್ಬರ ಮಾತು ಕೇಳಿ ತೀರ್ಮಾನ ತೆಗೆದುಕೊಳ್ಳುವ ಬದಲು, ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಯತ್ನಾಳ ಒತ್ತಾಯಿಸಿದರು.
ರಸ್ತೆ ಬದಿ ವ್ಯಾಪಾರಿಗಳಿಂದ ಹಣ ವಸೂಲಿ ಆರೋಪದ ಹಿನ್ನೆಲೆಯಲ್ಲಿ ಪೊಲೀಸರಿಬ್ಬರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತಾ ಆದೇಶ ಹೊರಡಿಸಿದ್ದಾರೆ.
ಎಎಸ್ಐ ಕುಮಾರಸ್ವಾಮಿ ಹಾಗೂ ಪಿಸಿಆರ್ ವಾಹನ ಚಾಲಕ ಪೇದೆ ಮಣಿಕಂಠ ಅಮಾನತು ಆಗಿದ್ದಾರೆ.
ನಗರದ ಗಾಂಧಿ ಚೌಕ ವ್ಯಾಪ್ತಿಯಲ್ಲಿ ವ್ಯಾಪಾರಸ್ಥರಿಂದ ಇಬ್ಬರು ಪೊಲೀಸರು ಹಣ ವಸೂಲಿ ಮಾಡುತ್ತಿದ್ದುದ್ದನ್ನು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವೀಡಿಯೋ ವೈರಲ್ ಮಾಡಿದ್ದರು. ಹಣ ಪೀಕುತ್ತಿದ್ದ ವಿಡಿಯೋ ವೈರಲ್ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತ ಚಂದ್ರಗುಪ್ತಾ ಅವರು ಸಸ್ಪೆಂಡ್ ಮಾಡಿ ಆದೇಶಿಸಿದ್ದಾರೆ.
ದಕ್ಷಿಣ ಕಾಶಿ ನಂಜನಗೂಡು ದೇವಾಲಯದ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆದಿದ್ದು, ಎರಡು ತಿಂಗಳ ಅವಧಿಯಲ್ಲಿ ಕೊರೊನಾ ಭೀತಿಯ ನಡುವೆಯೂ ಒಟ್ಟು 1,98,47,290 ರೂ. ನಗದು, 77 ಗ್ರಾಂ. ಚಿನ್ನ ಹಾಗೂ 5 ಕೆಜಿ 700 ಗ್ರಾಂ. ಬೆಳ್ಳಿ ಸಂಗ್ರಹವಾಗಿದೆ.
ಬ್ಯಾಂಕ್ ಆಫ್ ಬರೋಡ ದ ಹಿರಿಯ ಅಧಿಕಾರಿ ಹರ್ಷ ಹಾಗೂ ನಂಜುಂಡೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಿತು.
ಹುಂಡಿ ಎಣಿಕೆ ಕಾರ್ಯ ವೇಳೆ 79,700 ರೂ. ನಿಷೇಧಿತ ನೋಟುಗಳು ಪತ್ತೆಯಾಗಿದ್ದು, 1000 ರೂ.ಮುಖಬೆಲೆಯ ಹನ್ನೆರಡು, 500 ರೂ.ಮೌಲ್ಯದ 170 ನೋಟುಗಳು ಹುಂಡಿಯಲ್ಲಿ ಸಂಗ್ರಹವಾಗಿವೆ.
1000 ಮತ್ತು 500 ರೂ. ಮೌಲ್ಯದ ನೋಟು ನೀಷೇಧವಾಗಿ ನಾಲ್ಕು ವರ್ಷ ಕಳೆದರೂ ನಂಜನಗೂಡು ಭಕ್ತರ ಬಳಿ ಚಲಾವಣೆ ಆಗದ ನೋಟುಗಳು ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ದೇವಾಲಯದ 37 ಹುಂಡಿಗಳ ಪೈಕಿ 31 ಹುಂಡಿಗಳ ಎಣಿಕೆ ಮಾಡಲಾಗಿದ್ದು, 200 ಸ್ವಸಹಾಯ ಸಂಘದ ಮಹಿಳೆಯರು ಹಾಗೂ 50 ಜನ ದೇವಾಲಯದ ಸಿಬ್ಬಂದಿ ಸೇರಿದಂತೆ 250 ಸಿಬ್ಬಂದಿಗಳಿಂದ ಎಣಿಕೆ ಕಾರ್ಯ ನಡೆಸಿದ್ದರು.